ಪ್ರಶ್ನೆ: ಹಾಸ್ಯ ಗಂಭೀರವಾಗಿರಬೇಕಾ? ಗಂಭೀರವಾಗಿರದಿದ್ದರೆ ಹಾಸ್ಯಾಸ್ಪದವಾಗುತ್ತಾ?
ಉತ್ತರ: ಇಂಗ್ಲಿಷಿನಲ್ಲಿ ಒಂದು ಮಾತು ಇದೆ. – ‘ಹ್ಯೂಮರ್ ಈಸ್ ನಾಟ್ ಎ ಜೋಕ್.’ ಹ್ಯೂಮರ್ ಅಂದರೆ ಕೇವಲ ನಗೆಚಟಾಕಿಗಳನ್ನು ಸಿಡಿಸಿ ಸ್ವಲ್ಪ ಹೊತ್ತು ಜನರನ್ನು ನಗಿಸುವುದಷ್ಟೇ ಅಲ್ಲ, ಅನ್ನೋದು ಒಂದರ್ಥ. ಇನ್ನೊಂದು ಅರ್ಥ, ನಗಿಸುವುದು ಅಷ್ಟು ಸುಲಭ ಅಲ್ಲ ಅನ್ನೋದು. ‘ನಗು ಗುರಿ ಆಗಬಾರದು, ಅದು ದಾರಿಯಾಗಬೇಕು’ – ಎಂಬುದು ನನ್ನ ಅಭಿಪ್ರಾಯ. ನಗು ಒಂದು ವಾಹನ. ನಗುವಿನ ಮೂಲಕ ಏನೋ ಹೇಳೋದಕ್ಕೆ ಪ್ರಯತ್ನಿಸುತ್ತಾ ಇರುತ್ತಾನೆ ಹ್ಯೂಮರಿಸ್ಟ್. ಅಂದ ಹಾಗೆ, ‘ಹ್ಯೂಮರಿಸ್ಟ್’ ಅನ್ನೋದಕ್ಕೆ ಕನ್ನಡದಲ್ಲಿ ಏನಂತಾರೆ ಅಂತ ಒಬ್ಬರು ಕೇಳಿದರು. ‘ಹಾಸ್ಯಪ್ರಾಜ್ಞ.’ ಅನ್ನಬಹುದೇನೋ! ಪ್ರಜ್ಞಾವಂತ ಹಾಸ್ಯಕ್ಕೆ ಎಲ್ಲೆಲ್ಲೂ ಮಣೆ. ನಗಿಸೋದೇ ಉದ್ದೇಶವಾಗಿದ್ದರೆ ಆ ಕ್ಷಣ ನಗು ಬರಬಹುದು. ಆದರೆ ಅದರಿಂದ ಏನೂ ಪ್ರಯೋಜನವಾಗುವುದಿಲ್ಲ. ‘ಹ್ಯೂಮರ್ ಈಸ್ ಎ ಸೀರಿಯಸ್ ಬಿಸಿನೆಸ್’ ಅನ್ನುತ್ತಾನೆ ಒಬ್ಬ ಸಾಹಿತಿ. ಹಾಸ್ಯವು ಗಂಭೀರವಾಗಿಯೂ ಇರದಿದ್ದರೆ ಹಾಸ್ಯಾಸ್ಪದವಾಗುತ್ತದೆ.
ಪ್ರಶ್ನೆ: ಇಂದಿನ ಒತ್ತಡದ ಜೀವನದಲ್ಲಿ ನಗುವಿನ ಪಾತ್ರ ಏನು? ನಗದೆ ಇರುವುದು ಮಾನಸಿಕ ಅಸ್ವಸ್ಥತೆಯೆ?
ಉತ್ತರ: ನಗುವೇ ಅತ್ಯುತ್ತಮ ಔಷಧಿ ಎಂದು ಎಲ್ಲ ವೈದ್ಯರೂ ಹೇಳುತ್ತಾರೆ. ಒತ್ತಡದ ಜೀವನಕ್ಕಂತೂ ಅದು ಅತ್ಯಂತ ಆವಶ್ಯಕ. ಆದರೆ ಒತ್ತಡವಿದ್ದಾಗ ನಗುವುದಕ್ಕೆ ಹೇಗೆ ಆಗುತ್ತೆ, ಸಮಯ ಎಲ್ಲಿರುತ್ತೆ – ಎಂದು ಕೆಲವರು ಕೇಳುತ್ತಾರೆ. ಎಷ್ಟೇ ಒತ್ತಡವಿದ್ದರೂ ನಮಗಾಗಿ, ನಮ್ಮ ಮನಃಶಾಂತಿಗಾಗಿ, ನಮ್ಮ ಆರೋಗ್ಯಕ್ಕಾಗಿ ನಾವೇ ಸಮಯ ಮಾಡಿಕೊಳ್ಳದಿದ್ದರೆ, ಮತ್ತೆ ಯಾರು ನಮಗಾಗಿ, ನಮ್ಮ ಮನಃಶಾಂತಿಗಾಗಿ, ನಮ್ಮ ಆರೋಗ್ಯಕ್ಕಾಗಿ ಸಮಯ ಮಾಡಿಕೊಳ್ಳುತ್ತಾರೆ, ಹೇಳಿ. ನಮ್ಮ ನಮ್ಮ ಜೀವನವನ್ನು, ನಮ್ಮ ನಮ್ಮ ಒತ್ತಡವನ್ನು ನಾವು ನಾವೇ ಮ್ಯಾನೇಜ್ ಮಾಡಿಕೊಳ್ಳಬೇಕು; ಅಣ್ಣ ಬಾ, ತಮ್ಮ ಬಾ, ಅಪ್ಪ ಬಾ, ಅಮ್ಮ ಬಾ ಅಂದರೆ ಯಾರೂ ಬಾರರು.
ಇನ್ನು, ನಗದೇ ಇರುವುದು ಮಾನಸಿಕ ಅಸ್ವಸ್ಥತೆಯೇ ಎಂದರೆ, ಒಂದು ರೀತಿಯಲ್ಲಿ ಹೌದು ಎನ್ನಬೇಕಾಗುತ್ತದೆ. ಮುಖ ಗಂಟುಹಾಕಿಕೊಂಡವರ ಜೊತೆಗೆ ಯಾರೂ ನಂಟು ಬೆಳೆಸುವುದಕ್ಕೆ ಇಷ್ಟಪಡುವುದಿಲ್ಲ, ಅವರು ಒಂಟಿಯಾಗೇ ಇರಬೇಕಾಗುತ್ತದೆ, ಅಲ್ಲವೇ?
ಪ್ರಶ್ನೆ: ಕೈಲಾಸಂ ಗೊತ್ತಲ್ಲವಾ ನಿಮಗೆ? ಕನ್ನಡಕ್ಕೊಬ್ಬನೇ ಕೈಲಾಸಂ, ಕರ್ನಾಟಕ ಪ್ರಹಸನ ಪ್ರಪಿತಾಮಹ – ಎಂದೆಲ್ಲ ಬಿರುದಾಂಕಿತರು. ಅವರ ನಾಟಕಗಳು ಈಗಿನ ಸಮಾಜಕ್ಕೆ ಎಷ್ಟು ಪ್ರಸ್ತುತ ಮತ್ತು ಹೇಗೆ ಪರಿಣಾಮಕಾರಿ?
ಉತ್ತರ: ಕೈಲಾಸಂ ಎಂದಿಗೂ ಪ್ರಸ್ತುತ. ಅವರ ನಾಟಕಗಳಲ್ಲಿ ಬರುವ ಪಾತ್ರಗಳ ವೇಷಭೂಷಣಗಳು, ಕೆಲವು ಆಚರಣೆಗಳ ಕುರಿತ ಪ್ರಸ್ತಾವ – ಕೆಲವು ಈಗ ಪ್ರಸ್ತುತ ಅಲ್ಲ ಅನಿಸಬಹುದು. ಆದರೆ ಮೂಲಭೂತವಾಗಿ ಅವರು ಮನುಷ್ಯನ ಸ್ವಭಾವಗಳ ಬಗ್ಗೆ ಚರ್ಚಿಸುತ್ತಾರೆ. ಮೂರು ‘ಸ’ಕಾರಗಳಲ್ಲಿ ಮಾನವನ ಸಂಬಂಧಗಳ ಕುರಿತು ಚರ್ಚಿಸುತ್ತಾರೆ – ಸಂಸಾರ, ಸಂಸ್ಥೆ (ಉದ್ಯೋಗಸ್ಥಳ) ಮತ್ತು ಸಮಾಜ – ಈ ಮೂರು ಕ್ಷೇತ್ರಗಳಲ್ಲಿ ಮನುಷ್ಯ ನಡೆದುಕೊಳ್ಳುವ ರೀತಿಯ ಚಿತ್ರಣ ಅವರ ನಾಟಕಗಳಲ್ಲಿ ಇದೆ. ಈ ಸಂದರ್ಭದಲ್ಲಿ ಡಿ.ವಿ.ಜಿ. ಅವರ ಒಂದು ಮಾತನ್ನು ನೆನಪಿಸಿಕೊಳ್ಳಬೇಕು. ಅವರು ಹೇಳುತ್ತಾರೆ – ನಮ್ಮ ಜನ ಎಲ್ಲಿಯವರೆಗೆ ಕೈಲಾಸಂ ನಾಟಕಗಳ ಸಂಪರ್ಕದಲ್ಲಿ ಇರುತ್ತಾರೋ, ಅಲ್ಲಿಯವರೆಗೆ ಅವರು ಮಾನಸಿಕವಾಗಿ ಆರೋಗ್ಯವಾಗಿದ್ದಾರೆ ಎಂದು ಅರ್ಥ. ಕೈಲಾಸಂ ಸ್ವತಃ ಹೇಳುತ್ತಾರೆ – ‘ನಾನು ನಾಟಕ ಬರೆಯುವ ಉದ್ದೇಶ ಬುದ್ಧಿ ಇರುವವರನ್ನು ನಗಿಸುವುದು, ಹೃದಯ ಇರುವವರನ್ನು ಅಳಿಸುವುದು.’ ಉದಾಹರಣೆಗೆ ಈ ಮಾತು ನೋಡಿ – “ನಮ್ಮ ಹಾಗಿಲ್ಲದೇ ಇರೋರೆಲ್ಲ ಹುಚ್ಚರು ಅಂತ ನಮಗೆ ಅನ್ನಿಸೋ ಹಾಗೆ, ಆ ಹುಚ್ಚರಿಗೂ ಅನ್ನಿಸುತ್ತೆ ಅನ್ನೋದು ಹೊಳೆಯೋದಿಲ್ಲ, ನಮ್ಮ ಮಿದುಳಿಗೆ!” ಮನುಷ್ಯ-ಮನುಷ್ಯ ಸಂಬಂಧಗಳಲ್ಲಿ ಇರುವ ಎಲ್ಲ ಬಿರುಕುಗಳಿಗೂ ಇದೇ ಮೂಲವ್ಯಾಧಿ. ಇದೊಂದು ಮಾತನ್ನು ಚಿಂತನೆಮಾಡಿದರೆ ಸಾಕು ಕೈಲಾಸಂ ಪ್ರಸ್ತುತ ಅನ್ನೋದಕ್ಕೆ. ಇಂಥ ಅನೇಕ ಮಾತುಗಳು, ವಿಚಾರಗಳು ಕೈಲಾಸಂ ಕೃತಿಗಳಲ್ಲಿ ನಮಗೆ ಸಿಗುತ್ತವೆ.
ಪ್ರಶ್ನೆ: ಸಾಹಿತ್ಯದಲ್ಲಿ ಹಾಸ್ಯಕ್ಕೆ ಎರಡನೇ ಸ್ಥಾನ ಎನ್ನುವ ಅಭಿಪ್ರಾಯಕ್ಕೆ ಏನು ಉತ್ತರ ಹೇಳಬಹುದು?
ಉತ್ತರ: ಸಾಹಿತ್ಯ ಇರಲಿ, ಜೀವನದಲ್ಲೇ ಹಾಸ್ಯಕ್ಕೆ ಮತ್ತು ಹಾಸ್ಯಗಾರನಿಗೆ ಎರಡನೇ ಸ್ಥಾನ. ಅವನನ್ನು ಯಾರೂ ಗಂಭೀರವಾಗಿ ಪರಿಗಣಿಸುವುದಿಲ್ಲ. ಹೆಸರಾಂತ ಹಾಸ್ಯಸಾಹಿತಿ ಬೀಚಿ ಒಂದು ಕಡೆ ಹೇಳುತ್ತಾರೆ – “ನಾನು ಹಾಸ್ಯ ಸಾಹಿತಿ ಅಂತ ಬ್ರ್ಯಾಂಡ್ ಮಾಡಿ ಜನ, ನಾನು ಏನು ಹೇಳಿದರೂ ಗಂಭೀರವಾಗಿ ತೆಗೆದುಕೊಳ್ಳುವುದಿಲ್ಲ.” ಆದರೆ ಅದರಿಂದ ಹಾಗೆ ಎರಡನೇ ಸ್ಥಾನದಲ್ಲಿ ಇಟ್ಟೋರಿಗೇ ನಷ್ಟ ಅನ್ನೋದು ಅವರಿಗೆ ಹೊಳೆಯದೆ ಇರುವುದು ದುರಂತ. ಸಂಸ್ಕøತದ ಈ ಮಾತು ಕೇಳಿ – ನ ಪ್ರಾಪ್ನುವಂತಿ ಮುನಯೋ ರುದಿತೇನ ಸ್ವರ್ಗಂ, ಸ್ವರ್ಗಾಯತಿಂ ನ ಪರಿಹಸಕಥಾ ರುಣದ್ಧಿ. ನಾವು ಮುಖ ಗಂಟುಹಾಕಿಕೊಂಡು ಗೋಳಾಡುತ್ತಾ ಇದ್ದರೆ ನಮಗೆ ಸ್ವರ್ಗ ಸಿಗುತ್ತದೆ ಎಂದು ಏನೂ ಖಾತ್ರಿ ಇಲ್ಲ. ನಗುನಗುತ್ತಾ ಇದ್ದಮಾತ್ರಕ್ಕೆ ನಮಗೆ ಸಿಗಬೇಕಾದ ಸ್ವರ್ಗ ತಪ್ಪಿಹೋಗುತ್ತದೆ ಎಂದೂ ಏನಿಲ್ಲ, ಅನ್ನೋದು ಅದರ ಭಾವಾರ್ಥ.
ಈ ಮಾತು ಸಾಹಿತ್ಯದ ವಿಚಾರಕ್ಕೂ ಅನ್ವಯಿಸುತ್ತದೆ. ಗಂಭೀರಸಾಹಿತ್ಯವೇ ಸಾಹಿತ್ಯ, ಅದರಿಂದ ಏನೋ ಸಮಾಜ ಉದ್ಧಾರವಾಗಿಬಿಡುತ್ತದೆ ಎನ್ನುವ ನಂಬಿಕೆ(!) ಸಾಮಾನ್ಯವಾಗಿ ಎಲ್ಲರಲ್ಲೂ ಇದೆ. ಗಂಭೀರಸಾಹಿತ್ಯದಿಂದ ಏನು ಪರಿಣಾಮವಾಗಬಹುದೋ(!) ಅದು ಹಾಸ್ಯಸಾಹಿತ್ಯದಿಂದಲೂ ಆಗಬಹುದು, ಪ್ರೊವೈಡೆಡ್, ಹಾಸ್ಯ ಸಾಹಿತ್ಯವನ್ನೂ ಗಂಭೀರವಾಗಿ ತೆಗೆದುಕೊಂಡರೆ.
ಇನ್ನು ನಮ್ಮ ಸಾಹಿತ್ಯಸಮ್ಮೇಳನಗಳಲ್ಲಿ ಹಾಸ್ಯಸಾಹಿತ್ಯದ ಗೋಷ್ಠಿಗಳು ನಡೆಯುವುದೇ ಇಲ್ಲವಲ್ಲ. ಎಲ್ಲೋ ಸಂಜೆ ಮನರಂಜನೆಯ ಕಾರ್ಯಕ್ರಮಗಳ ಪಟ್ಟಿಯಲ್ಲಿ ಅದು ಬರಬಹುದು, ಅಷ್ಟೆ! “ಹಾಸ್ಯವು ಮುಖ್ಯವಾಹಿನಿಗೆ ಬರಬೇಕು” ಅಂತ ಹೇಳುತ್ತಾ ಇದ್ದರು ಮಹಾ ಹಾಸ್ಯಪ್ರಜ್ಞಾವಂತ ವೈಎನ್ಕೆ. ಅವರು ಸಂಪಾದಕರಾಗಿದ್ದ ಪತ್ರಿಕೆಗಳಲ್ಲಿ ಈ ಕೆಲಸವನ್ನು ಮಾಡಿದ್ದರು. ಅದರ ಮುಂದುವರಿದ ಭಾಗವಾಗಿ ಈಗ ಆಲ್ಮೋಸ್ಟ್ ಎಲ್ಲ ಪತ್ರಿಕೆಗಳಲ್ಲೂ ಹಾಸ್ಯ ಮುಖ್ಯವಾಹಿನಿಗೆ ಬರುತ್ತಾ ಇರುವುದನ್ನು ಗಮನಿಸಬಹುದು.
ಪ್ರಶ್ನೆ: ಬೀಚಿ ಮತ್ತು ಕೈಲಾಸಂ ನಡುವಿನ ವ್ಯತ್ಯಾಸವೇನು.?
ಉತ್ತರ: ವ್ಯತ್ಯಾಸ ಎನ್ನುವುದಕ್ಕಿಂತ ಸಮಾನತೆ ಎಂದು ಬದಲಾಯಿಸಿಕೊಳ್ಳಬಹುದು. ತಿ.ತಾ. ಶರ್ಮರು ಒಂದು ಮಾತು ಬರೆಯುತ್ತಾರೆ – ಕನ್ನಡದಲ್ಲಿ ‘ನಗೆಗಾರ-ದಾರ್ಶನಿಕ’ರಿಬ್ಬರೇ. ಒಬ್ಬರು ಕೈಲಾಸಂ, ಇನ್ನೊಬ್ಬರು ಬೀಚಿ. ಇವರಿಬ್ಬರೂ ದಾರ್ಶನಿಕರು. ಸಮಾಜ ಚಿಂತಕರು. ಆದರೆ ‘ವ್ಯತ್ಯಾಸ’ ಎನ್ನುವ ಪದ ಬಳಕೆಯಾಗಿರುವುದರಿಂದ ಒಂದು ಮಾತು. ಬೀಚಿಯವರಲ್ಲಿ ಸಮಾಜವು ಪ್ರಧಾನ. ಕೈಲಾಸಂ ಅವರಲ್ಲಿ ಕುಟುಂಬವು ಪ್ರಧಾನ.
ಕೈಲಾಸಂ ನಾಟಕಗಳಲ್ಲಿ ಹೃದಯಕ್ಕೆ ಪ್ರಾಧಾನ್ಯ, ಭಾವನೆಗಳಿಗೆ ಪ್ರಾಧಾನ್ಯ, ಸಂಬಂಧಗಳಿಗೆ ಪ್ರಾಧಾನ್ಯ. ಅವರ ನಾಟಕಗಳನ್ನು ಜಿ.ಪಿ. ರಾಜರತ್ನಂ ‘ಪ್ರಹಸನಮುಖ ವಿಷಾದರೂಪಕ’ ಅಂತ ಕರೆದಿದ್ದಾರೆ. ಆದರೆ ಬೀಚಿ ಸಾಹಿತ್ಯದಲ್ಲಿ ವ್ಯಂಗ್ಯ, ವಿಡಂಬನೆ ಜಾಸ್ತಿ. ಸಮಾಜದ ಅಂಕುಡೊಂಕುಗಳನ್ನು ತಮ್ಮ ಮೊನಚು ಹಾಸ್ಯದಿಂದ ಚುಚ್ಚುತ್ತಾರೆ. ಜಿ.ಪಿ. ರಾಜರತ್ನಂ ಅವರದ್ದೇ ಇನ್ನೊಂದು ಮಾತು – ಮೃದು ನುಡಿಯಬೇಕೇ ಈ ಮೃಗಗಣಕ್ಕೆ? ಬಳಸುವರೇ ರೇಷ್ಮೆ ನೂಲ, ಹೊಲಿಯಲಿಕೆ ಗೋಣಿಚೀಲ…. ಇದು ಬೀಚಿ ಧೋರಣೆ. ಆದರೆ ಇವರಿಬ್ಬರೂ ನಮ್ಮ ಸಮಾಜಕ್ಕೆ ಅತಿ ಆವಶ್ಯಕ.
ಪ್ರಶ್ನೆ: ಹಳೆಪೀಳಿಗೆಯ ಹಾಸ್ಯಕ್ಕೂ ಹೊಸಪೀಳಿಗೆಯ ಹಾಸ್ಯಕ್ಕೂ ಸಾಹಿತ್ಯಕ ವ್ಯತ್ಯಾಸ?
ಉತ್ತರ: ನಗುವ, ನಗಿಸುವ, ನಗಿಸಿ ನಗುತ ಬಾಳುವ ವರವನ್ನೇನೋ ಕೆಲವರು ಪಡೆದುಕೊಂಡು ಬಂದಿರಬಹುದು. ಈಗೀಗ ಎಲ್ಲ ಕಡೆ ಹಾಸ್ಯ ಕಾರ್ಯಕ್ರಮಗಳಿಗೆ ಜನ ಮುಗಿಬೀಳುತ್ತಾ ಇರುವುದು ಒಳ್ಳೆಯ ಬೆಳವಣಿಗೆ, ನಿಜ. ಜನ ಸೇರುತ್ತಿದ್ದಾರೆ ಎಂದ ಮಾತ್ರಕ್ಕೆ ಅದು ಯಶಸ್ವಿ ಎಂದು ತೀರ್ಮಾನಕ್ಕೆ ಬರುವುದಕ್ಕಾಗುವುದಿಲ್ಲ. ಗುಣಮಟ್ಟ? ಸದಭಿರುಚಿ? ಸಮಾಜದ ಮೇಲೆ ಧನಾತ್ಮಕ ಪರಿಣಾಮ?… ಉತ್ತರ ಕಷ್ಟ.
‘ಸಾಹಿತ್ಯಕ ವ್ಯತ್ಯಾಸ’ ಎಂದು ಬಳಸಿರೋದರಿಂದ ಹೇಳಬೇಕಾದರೆ, ಈಗೀಗ ಹಾಸ್ಯ ಯಥೇಚ್ಛವಾಗೇನೋ ಇದೆ. ಆದರೆ ಹಾಸ್ಯಸಾಹಿತ್ಯ ಅಂತ ಪ್ರತ್ಯೇಕವಾಗಿ ಎದ್ದುಕಾಣಿಸುವಹಾಗೆ ಬರುತ್ತಿಲ್ಲ. ಹಾಸ್ಯವು ಮುಖ್ಯವಾಹಿನಿಗೆ ಇನ್ನೂ ಬಂದಿಲ್ಲ. ಹಿಂದೆ ಜಿ.ಪಿ. ರಾಜರತ್ನಂ, ಬಿ.ಜಿ.ಎಲ್. ಸ್ವಾಮಿ, ದ.ರಾ. ಬೇಂದ್ರೆ, ವೈಎನ್ಕೆ, ಎ.ಎನ್. ಮೂರ್ತಿರಾವ್ ಮುಂತಾದವರಿಗೆಲ್ಲ ಅದ್ಭುತÀ ಹಾಸ್ಯಪ್ರಜ್ಞೆ ಇದ್ದರೂ ಅವರನ್ನು ಯಾರೂ ‘ಹಾಸ್ಯಸಾಹಿತಿ’ ಎಂದು ಬ್ರ್ಯಾಂಡ್ ಮಾಡಿರಲಿಲ್ಲ. ಅವರು ತಮ್ಮ ರೆಗ್ಯುಲರ್ ಸಾಹಿತ್ಯದಲ್ಲೇ ಹಾಸ್ಯಪ್ರಜ್ಞೆಯನ್ನು ಬಳಸಿದ್ದರು, ಬೆಳೆಸಿದ್ದರು. ಅದು ಈಗ ಕಡಮೆಯೇನೋ ಅನ್ನಿಸುತ್ತಿದೆ…… ಇದಲ್ಲದೆ ಪ್ರತ್ಯೇಕವಾಗಿಯೂ ಆಗ ಹಾಸ್ಯಸಾಹಿತ್ಯ ರಚಿಸುವವರು ಇದ್ದರು. ಕೈಲಾಸಂ, ಬೀಚಿ, ನಾ. ಕಸ್ತೂರಿ, ಪಾ.ವೆಂ. ಆಚಾರ್ಯ, ನಾಡಿಗೇರ ಕೃಷ್ಣರಾವ್, ದಾಶರಥಿ ದೀಕ್ಷಿತ್, ಟಿ. ಸುನಂದಮ್ಮ….. ಇನ್ನೂ ಅನೇಕರು. … ಈ ಗ್ಯಾಪ್ನ ಭರ್ತಿಮಾಡುವವರು ಈಗ ಬೇಕಾಗಿದ್ದಾರೆ.
ಪ್ರಶ್ನೆ: ಈಗೀಗ ಹೆಚ್ಚಾಗಿ ಹಾಸ್ಯಭಾಷಣಕಾರರು ಏಕತಾನತೆಯಿಂದ ಸೊರಗುತ್ತಿದ್ದಾರೆ ಅನ್ನಿಸುತ್ತೆÉ; ಆದರೆ ಕೆಲವೇ ಕೆಲವರನ್ನು ಹೊರತುಪಡಿಸಿ. ಅಂಥವರ ಪ್ರತಿ ಭಾಷಣವೂ, ಪ್ರತಿ ಕಾರ್ಯಕ್ರಮವೂ ವಿಭಿನ್ನವಾಗಿರುವುದಕ್ಕೆ ಹೇಗೆ ಸಾಧ್ಯವಾಗುತ್ತದೆ?
ಉತ್ತರ: ಅದೇ. ನಾನಾಗಲೇ ಹೇಳಿದ ಹಾಗೆ ಹ್ಯೂಮರ್ ಈಸ್ ನಾಟ್ ಎ ಜೋಕ್. ಜೋಕ್
ಅಂದುಕೊಂಡಾಗ ಎಷ್ಟೂ ಅಂತ ಹೊಸದು ಹೇಳೋದಕ್ಕಾಗುತ್ತೆ ಹೇಳಿ… ಅದರಿಂದ ಏಕತಾನತೆ ಅನ್ನಿಸಬಹುದು. ಅದಕ್ಕೆ ಕೆಲವರು ಏನು ಮಾಡುತ್ತಾರೆ? – ವಿಷಯದ ಅಥವಾ ಒಂದು ವಸ್ತುವಿನ ಚೌಕಟ್ಟಿನಲ್ಲಿ ಬಂದುಬಿಡುತ್ತಾರೆ, ಸಂದರ್ಭದ ಚೌಕಟ್ಟಿನಲ್ಲಿ ಬಂದುಬಿಡುತ್ತಾರೆ… ವಿಷಯ, ಸಂದರ್ಭ, ವಸ್ತು ಸಾಮಾನ್ಯವಾಗಿ ಬೇರೆ ಬೇರೆ ಇರುತ್ತವೆ ತಾನೇ? ಆಗ ವಿಭಿನ್ನತೆ ತರುವುದಕ್ಕೆ ಸಾಧ್ಯವಾಗುತ್ತದೆ. ಇದೇ ಅಂಥವರ ವಿಶೇಷತೆ. ಆದರೆ ಕೆಲವು ಸಮಯಗಳಲ್ಲಿ ವಿಷಯ, ಸಂದರ್ಭ ರಿಪೀಟ್ ಆಗುವುದೂ ಉಂಟು. ಆಗ ಆದಷ್ಟೂ “ಏಕತಾನತೆ” ಎನ್ನಿಸದಿರುವಂತೆ ಎಚ್ಚರದಿಂದ ರಿಪೀಟ್ ಮಾಡುತ್ತಾರೆ ಕೆಲವರು, ತಮ್ಮ ಚಾಕಚಕ್ಯತೆಯಿಂದ. ಆದರೆ ಇದು ದಕ್ಕಬೇಕಾದರೆ, ಸಾಹಿತ್ಯದ ಓದುಗನಾಗಿರಬೇಕು ಮತ್ತು ಅನೇಕ ಕ್ಷೇತ್ರಗಳ ಜೀವನಾನುಭವವಿದ್ದರೆ ಮಾತ್ರ ಈ ಅಸ್ತ್ರ ಒಲಿಯುತ್ತದೆ.
ಪ್ರಶ್ನೆ: ಕನ್ನಡ ಸಾಹಿತ್ಯದ, ಪತ್ರಿಕೋದ್ಯಮದ ‘ವೈಎನ್ಕೆ’ ಒಬ್ಬ ವಿಶಿಷ್ಟ ವ್ಯಕ್ತಿ, ಅದ್ಭುತ ಹಾಸ್ಯಪ್ರಜ್ಞಾವಂತರು, ಮಹಾ ಬುದ್ಧಿವಂತರು. ಅವರ ವಿಶೇಷತೆಗಳೇನು?
ಉತ್ತರ: ವೈಎನ್ಕೆ ಅವರದ್ದು ತಕ್ಷಣದ ಸಾಹಿತ್ಯ. ಇಂಗ್ಲಿಷಿನಲ್ಲಿ ಸ್ಪಾಂಟೇನಿಯಸ್ ಅಂತಾರಲ್ಲಾ, ಆ ಜಾತಿ. ಅವರ ಕುರಿತು ಒಂದು ಮಾತು ಹೇಳಬಹುದು – ಇಡೀ ಪ್ರಪಂಚದ ಸಾಹಿತ್ಯ ಓದಿಕೊಂಡಿದ್ದರೇನೇ ನಮಗೆ ವೈಎನ್ಕೆ ಅರ್ಥವಾಗೋದು. ಹಾಗೆಯೆ ವೈಎನ್ಕೆನ ಓದಿದರೆ ಇಡೀ ಪ್ರಪಂಚದ ಸಾಹಿತ್ಯ ನಮಗೆ ಅರ್ಥವಾಗುತ್ತದೆ. ಇಂಗ್ಲಿಷ್ ಮತ್ತು ಕನ್ನಡ ಭಾಷೆಯನ್ನು ಅವರು ತಮ್ಮ ಇಷ್ಟದಂತೆ ಕುಣಿಸಬಲ್ಲವರಾಗಿದ್ದರು, ಮಣಿಸಬಲ್ಲವರಾಗಿದ್ದರು. ಅವರಿಗೆ ಇನ್ನೂ ಅನೇಕ ಮುಖಗಳಿವೆ. ‘ವೈ’ ಎಂದರೆ ವೈವಿಧ್ಯ ಎನ್ನಬಹುದು.
ಆದರೆ ಇಂದಿನ ಮತ್ತು ಎಂದೆಂದಿನ ಆವಶ್ಯಕತೆ ಸಾಹಿತ್ಯಾಧಾರಿತ ಸದಭಿರುಚಿಯ ಹಾಸ್ಯ. ಅದು ಮಾತ್ರ ಚಿರಂಜೀವಿ. ಮಿಕ್ಕೆಲ್ಲ ಹಾಸ್ಯವೂ ಅಲ್ಪಾಯು.