ಚಕ್ಕುಲಿಗೂ ಕೃಷ್ಣನಿಗೂ ಅದೆಂತಹ ಸಂಬಂಧವೋ! ‘ಆಣೋರಣೀಯನಾ ಮಹತೋಮಹೀಯನಾ; ಅಪ್ರಮೇಯ ಅನಂತನ ಆಡಿಸಿದಳೆಶೋದೆ’ ಎಂದಾಗಲೆಲ್ಲ ನನಗೆ ಚಕ್ಕುಲಿಯದೇ ನೆನಪು. ಅಣುವಿನಲ್ಲಿ ಅಣುವಾಗುವಷ್ಟು ಪುಡಿ ಮಾಡಿ ತಿನ್ನುವ ‘ವಸಡೈವ ದಂತಪಂಕ್ತಿಃ’ ಆಗಿರುವ ಬೊಚ್ಚುಬಾಯಿಗರಿಗೂ ಅಷ್ಟೇ ರುಚಿಕರವಾಗಿ ವೇದ್ಯವಾಗುವುದರಿಂದ ಆಣೋರಣೀಯ; ಇಡಿಯಿಡಿಯಾಗಿ ಕಬಳಿಸಲು ಮೊಸಳೆಬಾಯನ್ನು ತೆರೆದು ಕೂರುವ ಕಿಟ್ಟಂಭಟ್ಟರಿಗೂ ಅಷ್ಟೇ ರುಚಿಕರವೆನಿಸುವುದರಿಂದ ಮಹತೋಮಹೀಯ. ಹಬ್ಬ ಹರಿದಿನ ಇತ್ಯಾದಿಗಳ ಪ್ರಮೇಯ (ಸಂದರ್ಭ)ವಿಲ್ಲದೆಯೂ ಕೇವಲ ಕುರುಕಲಿಗೂ ತಯಾರಿಸುವುದರಿಂದ ಇದು ಅಪ್ರಮೇಯ. ಇದರ ರುಚಿಯ ಬಯಕೆ ಅನಂತ. ಇಂತಹ ತಿಂಡಿಯನ್ನು ಯಶೋದೆಯು ಕರಿದು, ಕೃಷ್ಣನನ್ನು ಕರೆದು, ಅವನ ಅಳವಿಗೆ ಸಿಗದಂತೆ ತೂಗಾಡಿಸುತ್ತಿದ್ದಳು ಎನ್ನುವುದೇ ನಾನು ಕಂಡುಕೊಂಡಿರುವ ಅರ್ಥ.

ಚೂರ್ಣಮದಃ ಚೂರ್ಣಮಿದಂ
ಚೂರ್ಣಾತ್ ಚೂರ್ಣಮುದಚ್ಯತೇ |
ಚೂರ್ಣಸ್ಯ ಚೂರ್ಣಮಾದಾಯ
ಚೂರ್ಣಮೇವಾವಶಿಷ್ಯತೇ ||
ಕೃಷ್ಣಾಷ್ಟಮಿಯ ಮುಸ್ಸಂಜೆಯಲ್ಲಿ ಚಕ್ಕುಲಿ, ಕೋಡುಬಳೆ, ಮುಚ್ಚೋರೆಗಳ ಹಿಟ್ಟುಗಳನ್ನು ಕಲೆಸುತ್ತ ಇಂತೆಂದರು ಕಿಟ್ಟಂಭಟ್ಟರು.
‘ವಾಟ್ ಈಸ್ ದ ಮೀನಿಂಗ್?’ ಎಂದೆ. ಎಷ್ಟಾದರೂ ನಾನು ಕಾನ್ವೆಂಟಿಗೆ ವೆಂಟ್ ಆದ ಆಂಗ್ಲಾಲೋಚಕ.
‘ ಕಡಲೆಹಿಟ್ಟೂ ಚೂರ್ಣವೇ; ಆ ಖಾರದ ಪುಡಿಯೂ ಚೂರ್ಣವೇ. ಎರಡೂ ಚೂರ್ಣಗಳಿಂದ ಚಕ್ಕುಲಿಯ ಚೂರ್ಣವು ಉದಯವಾಗುತ್ತದೆ. ಈ ಚೂರ್ಣದಿಂದ ಕೊಂಚ ಚೂರ್ಣವನ್ನು (ಚೂರ್ಣಸ್ಯ ಚೂರ್ಣಮಾದಾಯ) ಶಿಷ್ಯನೇ, ನಿನಗಿತ್ತರೆ (ಶಿಷ್ಯ ತೇ) ನೀನು ‘ಚೂರ್ಣಮೇ, ವಾವ್’ ಎಂದು ಉದ್ಗಾರ ಹೊರಡಿಸುವೆ’ ಎನ್ನುತ್ತ ಗುಡ್ ಓಲ್ಡ್ ಕಾಲದಲ್ಲಿ ನಶ್ಯಪ್ರೇಮಿಗಳು ಪರಸ್ಪರರಿಗೆ ನಶ್ಯವನ್ನು ಕೊಡುತ್ತಿದ್ದ ಪ್ರಮಾಣದಲ್ಲಿ ನನ್ನ ಕೈಗೆ ಚೂರ್ಣವನ್ನು ಉದುರಿಸಿದರು.
ನನಗೆ ಕೃಷ್ಣನ ಹಬ್ಬವು ಸಂಭ್ರಮಾಶ್ಚರ್ಯಗಳ ಗೂಡು. ಕೃಷ್ಣಕಥೆಯೇ ವಿಶಿಷ್ಟ. ಸೆರೆಮನೆಯಲ್ಲಿ ಜನಿಸಿ ಸರಿದಾರಿಯನ್ನು ಜಗಕ್ಕೆ ತೋರಿದವನು ಅವನು. ಸರಿಮನೆಯಲ್ಲಿ ಜನಿಸಿ ಸರಿದಾರಿಯಿಂದ ಸರಿಯುವವರು ಇಂದಿನವರು. ಡುಂಡಿರಾಜರ ಕವನವೊಂದರಲ್ಲಿ ‘ಈ ಜಗವೇ ಒಂದು ಬಂದೀಖಾನೆ; ನಿಮ್ಮಪ್ಪ ಬಂಧಿ; ನಿಮ್ಮಮ್ಮ ಬಂಧಿ; ಆದ್ದರಿಂದಲೇ ನೀನು ಬಂದಿ’ ಎಂದು ಬರೆದಿರುವುದು ಕೃಷ್ಣನನ್ನು ಕುರಿತೇ ಅಲ್ಲವೆ! ಕಂಸನೆಂಬ ಮುಟ್ಠಾಳನು ವಸುದೇವ ದೇವಕಿಯರನ್ನು ಬೇರೆಬೇರೆ ಕಡೆಗಳಲ್ಲಿ ಇರಿಸಿದ್ದಿದ್ದರೆ ಕೃಷ್ಣನು ಬರುತ್ತಿರಲಿಲ್ಲ. ಅವರಿಬ್ಬರೂ ಬಂಧಿಗಳಾಗಿ, ಬಾಹುಬಂದಿಗಳಾಗಿ, ರಾಗಬಂಧಿಗಳಾಗಿ ಕೃಷ್ಣನು ಜನಿಸಿದ್ದಾಯಿತು. ಕೃಷ್ಣನಿಗಿಂತಲೂ ಮುಂಚೆ ಏಳು ಮಕ್ಕಳಾದರೂ ಸತಿಪತಿಯರನ್ನು ಬೇರಾಗಿಸದಷ್ಟು ‘ಕೋಮಲಹೃದಯಿ’ ಆದ ಕಂಸನ ದಡ್ಡತನಕ್ಕೆ ‘ಸಾಟಿಯಿಲ್ಲವೀ ಜಗದೊಳ್’ ಎಂದು ಯೋಚಿಸುತ್ತ ಅಂದೊಮ್ಮೆ ಮಂಪರಿಸಿದ್ದೆ. ಮಂಪರಿನ ಇನ್ನರ್ ಸ್ಕ್ರೀನಿನ ಮೇಲೆ ಕಂಸನು ವಿಡಿಯೋ ಕಾಲಲ್ಲಿ ಪ್ರತ್ಯಕ್ಷನಾಗಿ ‘ಎಲವೋ ಟೀಕಾಚಾರಿ, ನಮ್ಮ ಹಿಂದಿನದನ್ನು ಗಮನಿಸಿ ನಾವು ಅಂದಿನದನ್ನು ತೀರ್ಮಾನಿಸುವುದು ಲೋಕರೂಢಿ. ತ್ರೇತದಲ್ಲಿ ಒಂದಲ್ಲ ಮೂವರು ಹೆಂಡತಿಯರು ದಶರಥನೊಡನೆ ವರ್ಷಗಟ್ಟಲೆ ಇದ್ದರು. ಮಕ್ಕಳಾದವೆ? ಊಹೂಂ. ಅತ್ತ ಜನಕನು ನಿತ್ಯವೂ ಸತಿಯೊಡನೆಯೇ ಇದ್ದ. ಮಕ್ಕಳಾದವೆ? ಸುತಾರಾಂ ಸುತನೂ ಇಲ್ಲ, ಸುತೆಯೂ ಇಲ್ಲ. ಇತ್ತ ಪಾಯಸದಿಂದ, ಅತ್ತ ಕೃಷಿಯಿಂದ ಮಕ್ಕಳಾಗಿಬಿಟ್ಟವು. ಇದನ್ನೇ ಬೇಸಿಸ್ ಆಗಿ ಹೊಂದಿ, ಕೃಷಿ ಕೆಲಸಕ್ಕೆ ಭೂಮಿಯಿಲ್ಲದ, ಪಾಯಸವನ್ನು ಅಪ್ಪಿತಪ್ಪಿಯೂ ಮೆನುವಿನಲ್ಲಿಯೂ ಒದಗಿಸದ ಸೆರೆಮನೆಗೆ ಅವರನ್ನಟ್ಟಿ ಮುನ್ನೆಚ್ಚರಿಕೆ ಕ್ರಮವನ್ನು ಕೈಗೊಂಡಿದ್ದೆ. ಲಾಜಿಕಲ್ಲಾಗಿ ಕ್ರಮಕೈಗೊಂಡಿದ್ದ ನನಗೆ ಬಯಲಾಜಿಕಲ್ಲಾಗಿ ಸೋಲಾಯಿತು’ ಎಂದು ಅಲವತ್ತುಕೊಂಡ. ‘ಮೊದಲನೆಯ ಮಗುವಾದಾಗಲೇ ಎಚ್ಚತ್ತುಕೊಳ್ಳಲಿಲ್ಲವೇಕೆ? ಎಂದೆ. ಕಾಲಧರ್ಮವಯ್ಯಾ!’ ಅಷ್ಟೊಂದು ಮಂತ್ರಿಗಳ ಪೈಕಿ ಒಬ್ಬನೂ ಈ ಸಲಹೆ ನೀಡದಿದ್ದುದು ಕಾಲಧರ್ಮವಷ್ಟೆ ಎನ್ನುತ್ತ ಲಾಗಾಫ್ ಆಗಿಬಿಟ್ಟ, ಕಂಸ.
ಕಿಟ್ಟಂಭಟ್ಟರ ಬಳಿಗೆ ಸಾಗೋಣ ಬನ್ನಿ. ‘ಚಕ್ಕುಲಿಯೆಂದರೆ ಬರಿ ಕುರುಕಲ್ಲ ಹಿರಿದಿದೆ ಇದರರ್ಥ; ದಕ್ಕುವುದಿದರಲಿ ಬಲುವಿಧದರ್ಥ ಇದು ಬಾಳಿನ ಚಕ್ರ’ ಎಂದರು, ಭಟ್ಟರು.
‘ಹೌ?’ ಎಂದ, ಕಂದ.
ಹಳದಿಯ ಕಡಲೆಗೆ ಕೆಂಪನೆ ಖಾರವು
ಕಲೆವುದೆ ವರ್ಣಗಳಂದದ ಬಂಧಂ
ಇಳೆಯೊಳು ಮನುಜರು ಕಲೆತು ಜೀವಿಪುದಕೆ
ಕಲೆಸಿದ ಚಕ್ಕುಲಿ ಚೂರ್ಣವೆ ಸದೃಶಂ
– ಎಂದರು, ಭಟ್ಟರು. ‘ಬಟ್… ಭಟ್ಟರೆ… ಬ್ಲ್ಯಾಕ್ ಲೈವ್ಸ್ ಮ್ಯಾಟರ್ ಎನ್ನುವುದು ಇಲ್ಲಿ ಕವರ್ ಆಗಿಲ್ಲವಲ್ಲ?’ ಎಂದೆ.
‘ಎಲ್ಲವೂ ಮನುಜಪ್ರಯತ್ನದಿಂದಲೇ ಸಾಧ್ಯ ಕಣಯ್ಯ; ಚಕ್ಕುಲಿಯನ್ನು ಹೆಚ್ಚು ಹೊತ್ತು ಎಣ್ಣೆಯಲ್ಲಿ ಬಿಟ್ಟರೆ ಆ ವಿಚಾರಕ್ಕೂ ಬದ್ಧವಾದ ಪ್ರಾಡಕ್ಟ್ ತಯಾರಾಗುತ್ತದೆ. ಬೈ ದ ವೇ, ಹಿಟ್ಟಿಗೂ ಜೀವನಕ್ಕೂ ಎಷ್ಟು ಸಾಮ್ಯವಿದೆ ಗೊತ್ತಾ?’
‘ನೀವು ಹೇಳುವಂಥಾತ್ತರಾಗಿ, ನಾನ್ ಕೇಳುವಂಥಾತ್ತನಾಗುವೆನ್.’
‘ಚಕ್ಕುಲಿಗಿಂತಲೂ ಕೋಡುಬಳೆಯ ಹಿಟ್ಟು ಸೂಪರ್ ಹಿಟ್ಟು. ಕೋಡುಬಳೆಯ ಹಿಟ್ಟು ಒಂದು ಹದಕ್ಕೆ ಬರಬೇಕಾದರೆ ಅದನ್ನು ನಾದಬೇಕು. ಬದುಕಿಗೂ ಜಗತ್ತಿಗೂ ಒಂದು ನಾದ ಬೇಕು. ದೇರ್ಫೋರ್, ಕೋಡುಬಳೆಯ ಹಿಟ್ಟು ಈಸ್ ದ ಎಂಬಾಡಿಮೆಂಟ್ ಆಫ್ ಬದುಕು ಮತ್ತು ವಿಶ್ವ’ ಎಂದವರೇ ‘ನಾದಿರಿ ದಿರಿ ತೋಂ ತದಿರನಾ’ ಎಂದು ಗುನುಗುತ್ತ ಕೋಡುಬಳೆಯ ಹಿಟ್ಟನ್ನು ನಾದತೊಡಗಿದರು.

ಚಕ್ಕುಲಿಗೂ ಕೃಷ್ಣನಿಗೂ ಅದೆಂತಹ ಸಂಬಂಧವೋ! ‘ಆಣೋರಣೀಯನಾ ಮಹತೋಮಹೀಯನಾ; ಅಪ್ರಮೇಯ ಅನಂತನ ಆಡಿಸಿದಳೆಶೋದೆ’ ಎಂದಾಗಲೆಲ್ಲ ನನಗೆ ಚಕ್ಕುಲಿಯದೇ ನೆನಪು. ಅಣುವಿನಲ್ಲಿ ಅಣುವಾಗುವಷ್ಟು ಪುಡಿ ಮಾಡಿ ತಿನ್ನುವ ‘ವಸಡೈವ ದಂತಪಂಕ್ತಿಃ’ ಆಗಿರುವ ಬೊಚ್ಚುಬಾಯಿಗರಿಗೂ ಅಷ್ಟೇ ರುಚಿಕರವಾಗಿ ವೇದ್ಯವಾಗುವುದರಿಂದ ಆಣೋರಣೀಯ; ಇಡಿಯಿಡಿಯಾಗಿ ಕಬಳಿಸಲು ಮೊಸಳೆಬಾಯನ್ನು ತೆರೆದು ಕೂರುವ ಕಿಟ್ಟಂಭಟ್ಟರಿಗೂ ಅಷ್ಟೇ ರುಚಿಕರವೆನಿಸುವುದರಿಂದ ಮಹತೋಮಹೀಯ. ಹಬ್ಬ, ಹರಿದಿನ ಇತ್ಯಾದಿಗಳ ಪ್ರಮೇಯ (ಸಂದರ್ಭ)ವಿಲ್ಲದೆಯೂ ಕೇವಲ ಕುರುಕಲಿಗೂ ತಯಾರಿಸುವುದರಿಂದ ಇದು ಅಪ್ರಮೇಯ. ಇದರ ರುಚಿಯ ಬಯಕೆ ಅನಂತ. ಇಂತಹ ತಿಂಡಿಯನ್ನು ಯಶೋದೆಯು ಕರಿದು, ಕೃಷ್ಣನನ್ನು ಕರೆದು, ಅವನ ಅಳವಿಗೆ ಸಿಗದಂತೆ ತೂಗಾಡಿಸುತ್ತಿದ್ದಳು ಎನ್ನುವುದೇ ನಾನು ಕಂಡುಕೊಂಡಿರುವ ಅರ್ಥ.
‘ಮುಚ್ಚೋರೆಗೂ ರಾಧೆಗೂ ಬಹಳ ಸಾಮ್ಯವಲ್ಲವೆ?’ ಎಂದರು ಭಟ್ಟರು. ನಾನು ಪ್ರಶ್ನಾರ್ಥಕವಾಗಿ ಹುಬ್ಬೇರಿಸಿದೆ.
‘ಬೆಣ್ಣೆಯ ಗಡಿಗೆಯಿಂದ ಕೊಂಚವೇ ಬೆಣ್ಣೆಯು ಕಾಣುವ ರೀತಿಯಲ್ಲಿ ಗಡಿಗೆಯ ಮುಚ್ಚಳವನ್ನು ಓರೆಯಾಗಿರಿಸಿ ತರುತ್ತಿದ್ದಳಂತೆ ರಾಧೆ. ಓರೆಯಾಗಿ ಮುಚ್ಚಲ್ಪಟ್ಟ ನವನೀತದ ಗಡಿಗೆಯೇ ಒರಿಜಿನಲ್ ಮುಚ್ಚೋರೆಯೋ, ಬೆಣ್ಣೆಮಾತುಗಳು ಹಾಗೂ ಓರೆನೋಟಗಳಿಂದ ತನ್ನ ಪ್ರೇಮವನ್ನು ಕದ್ದುಮುಚ್ಚಿ ವ್ಯಕ್ತಪಡಿಸುತ್ತಿದ್ದ ರಾಧೆಯೇ ಒರಿಜಿನಲ್ ಮುಚ್ಚೋರೆಯೋ ತಿಳಿಯದು. ಅವುಗಳ ಸಂಕೇತವೇ ಈ ಮುಚ್ಚೋರೆ ಇದ್ದೀತು’ – ಬೇಸಿನ್ನಿನಲ್ಲಿ ಪೇರಿಸಿದ್ದ ಮುಚ್ಚೋರೆಗಳತ್ತ ದೃಷ್ಟಿ ಬೀರುತ್ತ ನುಡಿದರು ಭಟ್ಟರು.
ನವನೀತದ ವಿಷಯ ಬಂದಾಗಲೆಲ್ಲ ನನಗೆ ಕೃಷ್ಣನ ಬಗ್ಗೆ ಇರುವ ಅಸೂಯೆ ಹಿಮಾಲಯದಷ್ಟಾಗುತ್ತದೆ. ದಾವಣಗೆರೆಯ ಬೆಣ್ಣೆದೋಸೆಯನ್ನೋ, ಉಡುಪಿ ಕೃಷ್ಣಭವನದ ಬೆಣ್ಣೆಮಸಾಲೆಯನ್ನೋ ಲಿಮಿಟ್ಟಾಗಿ ತಿಂದರೂ ‘ಟೈರು ಟೈರು ಟೈರು ರಂಗ ಟೈರುನಾಡೈ’ ಎಂದು ಗೆಳೆಯರು ಗೇಲಿಮಾಡುವ ಮಟ್ಟಕ್ಕೆ ಕೊಬ್ಬು ಸೇರಿಬಿಡುತ್ತದೆ. ಆದರೆ ಅನಡಲ್ಟ್ರೇಟೆಡ್ ಅನ್ಸಾಲ್ಟೆಡ್ ಪ್ಯೂರ್ ಬೆಣ್ಣೆಯನ್ನು ಗಡಿಗೆಗಟ್ಟಲೆ ಸೇವಿಸಿದರೂ ‘ಸುಂದರಾಂಗದ ಸುಂದರೀಯರ ಹಿಂದುಮುಂದಿನಲಿ’ ಸ್ಟೆಪ್ಸ್ ಹಾಕುತ್ತ, ಬಳುಕುವ ಮಟ್ಟಕ್ಕೆ ಸೊಂಟವನ್ನಿರಿಸಿಕೊಂಡಿದ್ದಾನಲ್ಲಾ… ಜಿಮ್ಮಿಲ್ಲದ, ಗರಡಿಯಿಲ್ಲದ, ಜಾಗಿಂಗ್ ಟ್ರ್ಯಾಕ್ ಇಲ್ಲದ ಆ ದಿನಗಳಲ್ಲಿಯೂ ಹಾಗೆ ಫಿಗರ್ ಮೇಂಟೇಯ್ನ್ ಮಾಡಿದ್ದನ್ನು ಕಂಡರೆ ನನ್ನ ಮಧ್ಯಪ್ರದೇಶದಲ್ಲಿ ಅಸ್ಸಾಮಿನ ಭೂತ್ ಜೊಲೋಕಿಯಾ (ವಿಶ್ವದ ಅತಿ ತಿರುಚು ಮೆಣಸಿನಕಾಯಿ)ವನ್ನು ಕಿವುಚಿದಂತಾಗಿ ನನ್ನ ಉತ್ತರಪ್ರದೇಶವೆಲ್ಲ ಗೊಂದಲಮಯವಾಗುತ್ತದೆ. ಶ್ರೀಸಾಮಾನ್ಯನಿಗೇ ಒಂದು ನೀತಿ, ದೊಡ್ಡವರಿಗೇ ಒಂದು ನೀತಿಯನ್ನು ನವನೀತವೂ ತೋರುತ್ತಿದೆ ಎಂಬ ದೃಢ ಭ್ರಮೆ ನನ್ನದು.
ಭಟ್ಟರು ಚಕ್ಕುಲಿಯ ಒರಳನ್ನು ಕೈಗೆತ್ತಿಕೊಂಡರು. ಪಕ್ಕದಲ್ಲಿದ್ದ ಟ್ರೇಗಳಲ್ಲಿ ಇತ್ತ ಚಕ್ಕುಲಿ, ಅತ್ತ ಮುಚ್ಚೋರೆ, ಮಗದೊಂದೆಡೆ ತೇಂಗೋಳುಗಳನ್ನು ಬಿಡುತ್ತಹೋದರು. ಈ ಸಂದರ್ಭವನ್ನೇನಾದರೂ ನಮ್ಮ ಕವಿಗಡಣವು ಕಂಡಿದ್ದಿದ್ದರೆ,
ಹಿಟ್ಟು ಜಾರುತಿದೆ ನೋಡಿದಿರಾ!
ಚಕ್ಕುಲಿಯೊರಳಿನ ಹಾಳೆಯ ರಂಧ್ರದಿ
ಸೊಗದಿ ಜಾರುತಿದೆ ನೋಡಿದಿರಾ
ಸಿರಿಸಿರಿ ವರ್ಣದ ನೋಟವದುಂಟು
ಘಮಘಮ ಗಂಧದ ಪಸರಣವುಂಟು
ತೈಲದಿ ಮೀಯುತ ಗರಿಗರಿಯಾಗುತ
ಬ್ರಹ್ಮಾನಂದವನೀಯುವ ಗುರಿಯಲಿ
ಹಿಟ್ಟು ಜಾರುತಿದೆ ನೋಡಿದಿರಾ!
– ಎಂದು ಬರೆಯುತ್ತಿದ್ದರೇನೋ. ಕುವೆಂಪುರವರು ಚಕ್ಕುಲಿಯ ಹಿಟ್ಟು ಬಾಂಡಲೆಯಲ್ಲಿ ಬೀಳುವುದನ್ನೇ ತನ್ಮಯರಾಗಿ ನೋಡುತ್ತಲಿದ್ದು, ಚಕ್ರಾಕಾರವು ತೈಲಭಾಂಡವನ್ನು ತಲಪಿದಾಕ್ಷಣ,
ಚಕ್ಲಿ ಸಾಗಲಿ ಮುಂದೆ ಹೋಗಲಿ ವರ್ತುಲಗಳಲಿ ಚಲಿಸಲಿ
ಬೆಳ್ಳಿಬಣ್ಣವು ಅರುಣರಂಗನು ಪಡೆದು ಕುರ್ಕುರುಂ ಆಗಲಿ
ಆಹಾಹಾಹಾ ಆಹಾಹಾ; ಓಹೋಹೋ ಓಹೋಹೋ
– ಎಂದು ನಾಲಗೆಯನ್ನು ಚಪ್ಪರಿಸುವ ಮಟ್ಟಕ್ಕೆ ಬರೆದಾರು. ರಾಜರತ್ನಂ ಅಂತೂ ಎಂಡ್ಕುಡ್ಕ ರತ್ನನಿಗೆ ಎಂಡದ ಸಾಲಿಡ್ ಕಸಿನ್ನೇ ಚಕ್ಕುಲಿ ಎಂದು ಸಾರುತ್ತ,
ಮೂಗ ಆದಂಗಾಗ್ತೀನ್ ನಾನು ಕೆಂಪ್ಕೆಂಪ್ ಚಕ್ಲಿ ಕಂಡ್ರೆ
ಆಡ್ಬೇಕಂದ್ರೆ ಮಾತೇ ಬರ್ದೂ ನಾಲ್ಗೇಲ್ ಜೊಲ್ಲಿನ್ ತೊಂದ್ರೆ
– ಎಂದು ಹಾಡುತ್ತಿದ್ದರೆನಿಸುತ್ತದೆ. ನನಗೆ ಚಕ್ಕುಲಿ ಇಷ್ಟವಾಗುವ ಕಾರಣಗಳಲ್ಲಿ ಇದೂ ಒಂದು. ತೇಂಗೋಳು ಹೆಚ್ಚಾಗಿ ಹಬ್ಬ ಸಮಾರಂಭಗಳಿಗೆ ಸೀಮಿತ. ಆದರೆ ಚಕ್ಕುಲಿ ಹಾಗಲ್ಲ.
ಕುಳಿರುಕುಳಿರು ಸಂಜೆಯಲ್ಲಿ ರಸ್ತೆಪಾರ್ಶ್ವ ಬಾಂಡಲೆಯಲಿ
ಕುಣಿದುಕುಣಿದು ಕುರುಕಲಾಗಿ ಮೂಡುತಿರ್ಪುದು;
ಪುರದ ರಾಜ ಬಂದರವಗು ಜಿಹ್ವೆಚಪಲ ತೀರಿಸುವಲಿ
ಕೊರೆಯೆ ಕಾಣದಂತೆ ಸೇವೆ ಮಾಡುತಿರ್ಪುದು;
ದೊರೆಯೆ ಬರಲಿ ತಿರುಕನಿರಲಿ ಸಮದಿ ಕಾಂಬ ಡೆಮಾಕ್ರಸಿಯ ರೀತಿ ಇದರದು
– ಎಂದು ಉಪ್ಪಿನ ಷಡಕ್ಷರಿ (ಮುಪ್ಪಿನ ಷಡಕ್ಷರಿ ಅಲ್ಲ; ಇವರು ಸಾಲ್ಟ್ ಫ್ಯಾಕ್ಟರಿಯ ಓನರ್) ಇತ್ತೀಚೆಗೆ ತಮ್ಮ ಫೇಸ್ಬುಕ್ ವಾಲಲ್ಲಿ ಬರೆದಿರುವರಂತೆ.
ಚಕ್ಕುಲಿ ಒಂದು ವಿಧದಲ್ಲಿ ವೇದಾಂತಿ.
Shattered to smithereens at birth
Clubbed with like brethren moving forth
Chilli-ed and pounded,
Toiled in oil; scalded all over –
Lo! behold my taste forever and ever
– ಎನ್ನುವ ಚಕ್ಕುಲಿ ಜೀವನ ನಿನ್ನನ್ನು ಪುಡಿಗೈದರೂ, ಬೇಯಿಸಿದರೂ, ಸುಟ್ಟರೂ ನಿನ್ನ ಅಂತರಂಗದ ಗುಣವನ್ನು ಬಿಡಬೇಡ ಎಂದು ಬೋಧಿಸುವ ಗುರು; ಆದ್ದರಿಂದಲೇ ಅದು ಎಲ್ಲರಿಗೂ ರುಚಿಸುವುದು!
ಕುರ್ರುಂ ಚಕ್ಕುಲಿಗೆ ಕೃಷ್ಣನ ಬೆಣ್ಣೆಯ ಸಂಗ ದೊರೆತರೆ ಮೂಡುವ ಸ್ವಾದಿಷ್ಟತೆಯೇ ಬೆಣ್ಣೆಮುರುಕು. ‘ಬೆಣ್ಣೆ ತಿಂದರೆ ಬೊಜ್ಜು ಬರುತ್ತದೆ’ ಎಂಬ ನಂಬಿಕೆಗೆ ಈ ತಿಂಡಿಯೇ ಆಧಾರವೆನಿಸುತ್ತದೆ. ಅನೆಮಿಕ್ ಆಗಿ ಒಣಗಿಕೊಂಡಿರುವಂತಹ ಬಸುರಿಯನ್ನು ಹೋಲುವ ಚಕ್ಕುಲಿ ಆರೈಕೆಗೊಂಡ ಬಾಣಂತಿಯಂತೆ ಕಂಗೊಳಿಸುವ ಮಟ್ಟವನ್ನು ತಲಪಲು ಬೆಣ್ಣೆಯೇ ಕಾರಣವಂತೆ. ಬಿಸಿಬಿಸಿ ಸಾರಿಗೆ ಮೂರ್ನಾಲ್ಕು ಮಿಳ್ಳೆ ತುಪ್ಪವನ್ನು ಸುರಿದುಕೊಂಡು ಜೊತೆಗೆ ಬೆಣ್ಣೆಮುರುಕನ್ನು ಕುರ್ರುಂಮಿಸಿದರೆ ಸ್ವರ್ಗಕ್ಕೆ ಕಿಚ್ಚು ಹಚ್ಚೆಂದ ಊಟಜ್ಞ!
ಜಗದ ಸಂಬಂಧಗಳಲ್ಲಿ ಮೊದಲ ಮಣೆ ಅಮ್ಮನಿಗೆ; ಎರಡನೆಯದು ಅಮ್ಮನ ಸಹೋದರನಿಗೆ. ಮಾಮನಿಂದ ದೊರೆಯುವ ಅಚ್ಛೆ ಮಿಕ್ಕೆಲ್ಲ ಬಾಂಧವ್ಯಗಳಲ್ಲಿ ವಿರಳ. ಅಂತಹ ಮಾಮತ್ವವನ್ನು ಪಡೆದಿರುವ ಏಕೈಕ ಖಾದ್ಯವೇ ಚಕ್ಕುಲಿ. ಚಂದಮಾಮ ಚಕ್ಕುಲಿಮಾಮ ನನ್ನನು ನೋಡಿ ನಗುತಿರುವ ಎನ್ನುವ ಹಾಡಿನ ಸಾಲೇ ಇದಕ್ಕೆ ಸಾಕ್ಷಿ.
ಚಕ್ಕುಲಿಯೊರಳಿನಿಂದ ಬಾಂಡಲಿಯ ಎಣ್ಣೆಗೆ ಎಕ್ಸ್ಫರ್ಟ್ ಈಜುಗಾರರು ದುಮುಕುವಂತೆ ದುಮುಕಿ ಲೀಲಾಜಾಲವಾಗಿ ಈಜಾಡುವ ಚಕ್ಕುಲಿಗಳು ಮುಕೇಶನ ಹಾಡಿನ ಸಾಲುಗಳಾದ ‘ಧಾರಾ ಜೋ ಬಹತೀ ಹೈ, ಬಹತೀ ರಹತೀ ಹೈ; ಬಹತೀ ಧಾರಾ ಬನ್ಜಾ; ಫಿರ್ ದುನಿಯಾ ಸೇ ಡೋಲ್; ಏಕ್ ದಿನ್ ಬಿಕ್ ಜಾಯೇಗಾ ಮಾಟೀ ಕೇ ಮೋಲ್; ಜಗ ಮೇ ರೆಹ ಜಾಯೇಂಗೇ ಪ್ಯಾರೇ ತೇರೇ ಬೋಲ್’ ಎನ್ನುವುದನ್ನು ನೆನಪಿಗೆ ತರುತ್ತವೆ. ಮಡಿವಂತರಿಂದ ಮೈಲಿಗೆವಂತರವರೆಗೆ ಸರ್ವರಿಂದಲೂ ಜೈ ಎನಿಸಿಕೊಂಡಿರುವ ಪ್ಯಾರೇ ಚಕ್ಕುಲಿಮಾಮನಿಗೆ ಇದೋ ಒಂದು ಸರ್ಕ್ಯುಲರ್ ನಮನ.