ನರಸಿಂಹಯ್ಯನವರ ‘ರಾಮಾಯಣಕೊಕ್ಕೆ’ ಬುದ್ಧಿಯನ್ನು ಕಂಡು ಬೇಸತ್ತ ಜನರು ಹೇಗಾದರೂ ಮಾಡಿ ಅವರ ಈ ಹುಚ್ಚನ್ನು ಬಿಡಿಸಬೇಕೆಂದು ನಿರ್ಧರಿಸಿದರು. ಪಂಡಿತರೂ ಪಾಮರರೂ ಒಗ್ಗೂಡಿದರು. ‘ದೇವನು ರುಜು ಮಾಡಿದನು’ ಎಂಬ ಕುವೆಂಪುರವರ ಕವನವನ್ನು ಕೊಟ್ಟು ಲಿಂಕ್ ಮಾಡಲು ಹೇಳಿದರೆ ಹೇಗೆ?’ – ಎಂದರೊಬ್ಬ ಪಂಡಿತರು.
ಅರಮನೆಯ ಸುಖವನ್ನೇ ಬಿಟ್ಟ ಸೀತೆ ಚಿನ್ನದ ಜಿಂಕೆಗಾಗಿ ಆಸೆ ಪಟ್ಟಿದ್ದೇಕೆ?’
‘ಅಂದು ಅಕ್ಷಯ ತದಿಗೆಯಂತೆ.’
‘ಭರತನು ಪಾದರಕ್ಷೆಯನ್ನು ಕೊಂಡೊಯ್ದs ಮೇಲೆ ರಾಮನಿಗೆ ಕಲ್ಲುಮುಳ್ಳಿನ ಹಾದಿಯಲ್ಲಿ ಓಡಾಡಲು ಕಷ್ಟ ಆಗಲಿಲ್ಲವೆ?’
‘ರಾಮನ ಪಾದ ತಗುಲಿದರೆ ಬಂಡೆಯೇ ಸುಂದರ ಹೆಣ್ಣಾಗುವಾಗ ಮುಳ್ಳು, ಕಲ್ಲುಗಳು ಅವನನ್ನು ಬಾಧಿಸಲು ಸಾಧ್ಯವೇ ಇಲ್ಲ.’
‘ಜಗತ್ತಿನ ಮೊಟ್ಟಮೊದಲ ಲಗೇಜ್ ಕ್ಯಾರಿಯಿಂಗ್ ಸರ್ವೀಸ್ ಯಾವುದು?’
‘ಹನುಮಾನ್ ಅರ್ತ್ ಮೂವರ್ಸ್.’
‘ಜಗದ ಮೊದಲ shallow borewell ಕೊರೆದವರು ಯಾರು?’
‘ಲಕ್ಷ್ಮಣ. ರಾಮನು ನಾಮ ಧರಿಸಲು ನೀರಿಲ್ಲವೆಂದಾಗ ಬಾಣ ಹೊಡೆದು ಚಿಮ್ಮಿಸಿದ ‘ನಾಮದ ಚಿಲುಮೆ’ಯೇ ಮೊದಲ ಕಿರಿಯಾಳದ ಬರ್ವೆಲ್.’
‘ಒಂದು ತೊಗೊಂಡ್ರೆ ಇನ್ನೊಂದು ಉಚಿತ ಎಂಬ ಯೋಜನೆ ಶುರುವಾದುದೆಂದು?’
‘ತ್ರೇತದಲ್ಲೇ; ಬಿಲ್ಲನ್ನು ಮುರಿದು ರಾಮನು ಸೀತೆಯನ್ನು ಗೆದ್ದ; ಒಂದನ್ನು ಉಚಿತ ರೀತಿಯಲ್ಲಿ ಪಡೆದುದಕ್ಕೆ ಅತ್ತಲಿಂದ ಊರ್ಮಿಳೆ, ಮಾಂಡವಿ, ಶ್ರುತಕೀರ್ತಿಯರು ಉಚಿತವಾಗಿ ದೊರೆತರು; ರಿಟರ್ನ್ ಗಿಫ್ಟ್ ರೀತಿಯಲ್ಲಿ ಜನಕ ಮತ್ತು ಜನಕಸಹೋದರರಿಗೆ ಲಕ್ಷ್ಮಣ, ಭರತ, ಶತ್ರುಘ್ನರು ದೊರೆತರು.’
ರಾಮಾಯಣದ ಪ್ರಸಂಗಗಳಿಗೆ ಆಧುನಿಕ ವಿಷಯಗಳನ್ನು ಹೊಂದಿಸುವುದೊಂದು ಆಸಕ್ತಿಕರ ಕಾಲಯಾಪನೆ. ಕೌತುಕದ ಅಂಶವೆಂದರೆ ರಾಮಾಯಣವನ್ನು ಜೀವನದ ಪ್ರತಿ ವಿಷಯಕ್ಕೂ ಹೋಲಿಸಬಹುದು. ಮೂಲಕಥೆಗೆ ಭಂಗ ತಾರದಂತೆ, ಯಾವುದೇ ಪಾತ್ರದ ಗಾಂಭೀರ್ಯಕ್ಕೆ ಧಕ್ಕೆ ಬಾರದಂತೆ, ಅಂದಿನ ನೋಟವನ್ನು ಇಂದಿನ ಕಣ್ಣಿನಲ್ಲಿ ನೋಡುವುದೇ ಒಂದು ಸೊಗಸು.
ರಾಮ-ಸೀತೆಯರ ಮದುವೆ ಆಯಿತು. ಇಬ್ಬರೂ ಅಂದೊಮ್ಮೆ ಏಕಾಂತದಲ್ಲಿ ಕುಳಿತು ಹರಟುತ್ತಿದ್ದರು. ಸೀತೆಗೆ ರಾಮನನ್ನು ಚುಡಾಯಿಸುವ ಮನಸ್ಸಾಯಿತು. ‘ಆಹಾ! ನಿಮ್ಮ ಊರಲ್ಲಿ ಅದೆಂತಹ ವಿಚಿತ್ರವೋ! ಪಾಯಸ ಕುಡಿದರೆ ಮಕ್ಕಳಾಗುತ್ತಾರೆ!’ ಎಂದಳು ಜನಕಜೆ.
ರಾಮನೇನು ಕಡಮೆ! ‘ಸೀತೆ, ನಮ್ಮಲ್ಲಿ ಪಾಯಸವನ್ನಾದರೂ ಕುಡಿಯಬೇಕು. ನಿಮ್ಮ ಊರಿನಲ್ಲಿ ಹೊಲದಲ್ಲಿ ನೇಗಿಲು ಹೂಡಿದರೆ ಸಾಕು, ಮಕ್ಕಳು ದೊರೆಯುತ್ತವೆ’ – ನಸುನಗುತ್ತ್ತ ನುಡಿದ, ರಾಮ. ತೆಲುಗು ರಾಮಾಯಣದಲ್ಲಿ ಇಂತಹ ರಾಮ-ಸೀತೆಯರ ನವಿರು ಹಾಸ್ಯ ಪ್ರಸಂಗಗಳು ದೊರಕುತ್ತವೆ.
ಹಾಸ್ಯಭಾಷಣ ಕ್ಷೇತ್ರದಲ್ಲಿ ಹೆಸರುವಾಸಿಯಾಗಿದ್ದ ಡಾ. ಎಂ.ಎಚ್. ಶ್ರೀಕಂಠಯ್ಯನವರು ‘ಲಿಂಕ್ ನರಸಿಂಹಯ್ಯ’ನವರ ಬಗ್ಗೆ ಹೇಳುತ್ತಿದ್ದರು. ಯಾವುದೇ ವಿಷಯವನ್ನು ರಾಮಾಯಣಕ್ಕೆ ಲಿಂಕ್ ಮಾಡುವುದೇ ಅವರ ಸ್ಪೆಷಾಲಿಟಿ. ಒಮ್ಮೆ ನರಸಿಂಹಯ್ಯ ಗೆಳೆಯರೊಂದಿಗೆ ಕ್ರೀಡಾಂಗಣವೊಂದರ ಬಳಿ ನಡೆಯುತ್ತಿದ್ದಾಗ ಹುಡುಗರು ಅವರಿಗೆ ತಿಳಿಯದ ಆಟವೊಂದನ್ನು ಆಡುತ್ತಿದ್ದುದನ್ನು ಗಮನಿಸಿ, ‘ಅದು ಯಾವ ಆಟ?’ ಎಂದು ಕೇಳಿದರು.
‘ವಾಲಿಬಾಲ್’ – ನುಡಿದರು, ಗೆಳೆಯರು.
‘ವಾಲಿಬಾಲ್? ವಾಲಿ ಎಂದಿರೆ ನೀವು? ವಾಲಿಯಿಂದಲೇ ಅಲ್ಲವೆ ಸುಗ್ರೀವನು ಹೊರಬಂದದ್ದು; ಋಷ್ಯಮೂಕದಲ್ಲಿ ಅಲೆದದ್ದು; ತತ್ಕಾರಣವೇ ರಾಮನು ಹನುಮಂತನ ಕಣ್ಣಿಗೆ ಬಿದ್ದದ್ದು! ವಾಲಿಯಿಲ್ಲದೆ ಸುಗ್ರೀವ ಹೊರಬರುತ್ತಿರಲಿಲ್ಲ; ಅವನು ಹೊರಬರದೆ ರಾಮನು ಹನುಮನಿಗೆ ಕಾಣುತ್ತಿರಲಿಲ್ಲ; ಕಾಣದಿದ್ದರೆ ಸಮುದ್ರಲಂಘನ, ರಾವಣವಧೆ ಯಾವುದೂ ಆಗುತ್ತಿರಲಿಲ್ಲ. ವಾಲೀ… ರಾಮಾ…’ ಎನ್ನುತ್ತ ಭಾವಪರವಶರಾದರು ನರಸಿಂಹಯ್ಯನವರು.
ಮುಂದೆ ಸಾಗುತ್ತಿದ್ದಂತೆ ನಾಯಿಯೊಂದು ಕಾಲಿಗೆ ತೊಡರಿಕೊಂಡೇ ಮುಂದೋಡಿತು. ‘ಛಿ! ನಾಯಿ!’ ಎಂದು ಗೆಳೆಯರು ಮೂಗುಮುರಿದರು. ‘ನಾಯಿ ಎಂದಿರೆ? ಹಿಂದಿ ಬೆಲ್ಟಿನಿಂದ ಬಂದ ಕೌಸಲ್ಯೆಯು ಬಹೂ ಸೀತೆಯನ್ನು ನೆನೆಯುತ್ತ ‘ಚೌದಹ್ ಬರಸ್ ಬೀತಾ; ತುಮ್ ನಾ… ಆಯೀ’ ಎಂದು ಹಲುಬುತ್ತಿದ್ದುದು ನೀವು ನಾಯಿ ಎಂದಾಗ ನೆನಪಾಯಿತು. ನ+ಆಯೀ= ನಾಯೀ= ಸವರ್ಣದೀರ್ಘ ಸಂಧಿ ಅಲ್ಲವೇ! ನಾಯಿಯ ನಿಷ್ಠೆಯನ್ನು ವಾನರರಲ್ಲಲ್ಲದೆ ಇಂದಿನ ಕೋತಿಬುದ್ಧಿಯ ಜನರಲ್ಲಿ ಕಾಣಲಾದೀತೇ?’ ಎಂದು ಭಾವಪರವಶರಾದರು.
ನರಸಿಂಹಯ್ಯನವರ ‘ರಾಮಾಯಣಕೊಕ್ಕೆ’ ಬುದ್ಧಿಯನ್ನು ಕಂಡು ಬೇಸತ್ತ ಹಲವರು ಹೇಗಾದರೂ ಮಾಡಿ ಅವರ ಈ ಹುಚ್ಚನ್ನು ಬಿಡಿಸಬೇಕೆಂದು ನಿರ್ಧರಿಸಿದರು. ಪಂಡಿತರೂ ಪಾಮರರೂ ಒಗ್ಗೂಡಿದರು. ‘ದೇವನು ರುಜು ಮಾಡಿದನು’ ಎಂಬ ಕುವೆಂಪುರವರ ಕವನವನ್ನು ಕೊಟ್ಟು ಲಿಂಕ್ ಮಾಡಲು ಹೇಳಿದರೆ ಹೇಗೆ?’ ಎಂದರೊಬ್ಬ ಪಂಡಿತರು.
‘ಉಂಟೇ? ದಶರಥನು ರಾಮನಿಗೆ ಅಕ್ಷರಾಭ್ಯಾಸ ಕಲಿಸಿದುದನ್ನು ನೆನಪಿಸಿದಿರಿ ಅಯ್ಯಾ! ದಶರಥಾ… ರಾಮಾ…’ ಎಂದೋ, ‘ಕುವೆಂಪುವಿನ ಕಾವ್ಯವಲ್ಲವೇ? ಕು ಎಂದರೆ ಭೂಮಿ; ವೆಂಪು ಎನ್ನುವ ಪದ ಪೆಂಪು ಎನ್ನುವುದಕ್ಕೆ ಹತ್ತಿರವಾದುದೇ. ಭೂಮಂಡಲದಲ್ಲಿ ಪೆಂಪನ್ನು ಪಡೆದವನು ರಾಮನೇ ಎನ್ನುವುದಕ್ಕೆ ಋಜುಮಾತಾಯಿತು ನಿಮ್ಮೀ ರುಜುವಿನ ಕವನ’ ಎಂದುಬಿಡುತ್ತಾರೆ. ಕುವೆಂಪುವಿನದು ‘ಬೇಡ’ ಎಂಬ ತೀರ್ಮಾನವಾಯಿತು.
‘ಬೇಂದ್ರೆಯ ಕವನವನ್ನು ನೀಡಿದರೆ?’
‘ಬೆಂದರೆ ಬೇಂದ್ರೆಯಾದಾನ ಎಂದೇ ನಾಣ್ಣುಡಿ ಇದೆಯಲ್ಲ! ಹದಿನಾಲ್ಕು ವರ್ಷಗಳ ಕಾಲ ಕಾಡಿನಲ್ಲಿ ನಿಂದು, ನೆನೆದು, ಬೆಂದುದು ರಾಮನೇ ಅಲ್ಲವೇ ಎಂದುಬಿಟ್ಟಾರು. ಬೇಂದ್ರೆ ಬೇಡ.’
ಹೀಗೆಯೇ ಎಲ್ಲ ಕವಿಗಳ, ಕವನಗಳ ಉಲ್ಲೇಖವೂ, ಆಕ್ಷೇಪವೂ, ಪಾರ್ಶ್ವಕ್ಕೆ ಕ್ಷೇಪವೂ ಆಯಿತು. ‘ನರ್ಸರಿ ರೈಮ್ಸ್ ಕೊಟ್ಟರೆ ಹೇಗೆ?’ ಎಂಬ ಹೊಸ ಆಲೋಚನೆ ಮೂಡಿತು.
ಮಕ್ಕಳ ಪದ್ಯವೇ ಸರಿಯೆಂದು ಸಭೆಯು ಸರ್ವಾನುಮತದಿಂದ ತೀರ್ಮಾನಿಸಿ, ನರಸಿಂಹಯ್ಯನವರನ್ನು ಕರೆದು, ‘ನರಸಿಂಹಯ್ಯನವರೇ, ಈಗೊಂದು ಪದ್ಯವನ್ನು ಕೊಡುತ್ತೇವೆ. ಅದನ್ನೇನಾದರೂ ನೀವು ರಾಮಾಯಣಕ್ಕೆ ಲಿಂಕ್ ಮಾಡಿದರೆ ನಾಳೆಯಿಂದ ನಾವೂ ನಿಮ್ಮೊಡನೆ ರಾಮಾ ಎನ್ನುತ್ತೇವೆ. ಲಿಂಕ್ ಮಾಡಲು ನೀವು ವಿಫಲರಾದರೆ ರಾಮಾ ಎನ್ನುವುದನ್ನೂ, ಎಲ್ಲವನ್ನೂ ರಾಮಾಯಣಕ್ಕೆ ಲಿಂಕ್ ಮಾಡುವುದನ್ನೂ ನಿಲ್ಲಿಸಬೇಕು. ಸಮ್ಮತವೇ?’ ಎಂದರು.
‘ರಾಮನ ಇಚ್ಛೆ’ – ಎಂದರು, ನರಸಿಂಹಯ್ಯ.
‘ಕಣ್ಣಾಮುಚ್ಚೆ ಕಾಡೇ ಗೂಡೆ; ಉದ್ದಿನ ಮೂಟೆ ಉರುಳೇಹೋಯ್ತು. ಇದನ್ನು ಲಿಂಕ್ ಮಾಡಿ, ನೋಡೋಣ.’
ನರಸಿಂಹಯ್ಯನವರ ಮುಖ ಎಲ್ಇಡಿ ಬಲ್ಬಿನಂತೆ ಪ್ರಕಾಶಮಾನವಾಯಿತು. ಕಂಗಳಲ್ಲಿ ಗಂಗಾವತರಣದ ಪೂರ್ವಚಿಹ್ನೆಗಳು ಕಾಣಿಸಿಕೊಂಡವು. ತುಟಿಗಳು ವೈಬ್ರೇಟರ್ ಮೋಡ್ ತಲಪಿದವು. ‘ಅಯ್ಯಾ! ಇಪ್ಪತ್ನಾಲ್ಕು ಸಾವಿರ ಶ್ಲೋಕಗಳಲ್ಲಿ ಹೇಳಿರುವ ರಾಮಾಯಣವನ್ನು ನೀವು ನಾಲ್ಕೇ ಸಾಲುಗಳಲ್ಲಿ ಹೇಳಿಬಿಟ್ಟಿರಿ. ನಿಮಗೆ ದೀರ್ಘದಂಡ ನಮಸ್ಕಾರ’ ಎಂದು ಹೈ ಆಲ್ಟೋ ಧ್ವನಿಯಲ್ಲಿ ನುಡಿದ ನರಸಿಂಹಯ್ಯನವರು ಸಭೆಗೆ ನಮಸ್ಕಾರ ಹಾಕಿಯೇಬಿಟ್ಟರು.
ಪಂಡಿತರು ಬೆಕ್ಕಸಬೆರಗಾದರು. ಪಾಮರರ ಮುಖಗಳು ಕ್ವೆಶ್ಚನ್ ಮಾರ್ಕಿನ ಆಕಾರವನ್ನು ತಳೆದವು. ‘ನಾವು ಹೇಳಿದ್ದು ರಾಮಾಯಣವೇ?’ ಎಂಬ ಒಕ್ಕೊರಲಿನ ಕಡುಗಡಸು ಪಿಸುಧ್ವನಿಯು ಸಭೆಯನ್ನಾವರಿಸಿತು.
‘ಮತ್ತೇನು! ಕಣ್ಣಾ ಮುಚ್ಚೆ? ದಶರಥನು ಕಣ್ಣು ಮುಚ್ಚಲು; ಕಾಡೇ ಗೂಡೆ? ರಾಮನಿಗೆ ಕಾಡೇ ಗೂಡಾಯಿತಲ್ಲ! ಆಮೇಲೇನಾಯಿತು? ಉದ್ದಿನ ಮೂಟೆಯಂತೆ ಮೆರೆಯುತ್ತಿದ್ದ ರಾವಣ ಉರುಳೇಹೋದ! ಇದೇ ರಾಮಾಯಣಮಲ್ತೇ!’ -ಮೋದಗದ್ಗದ ಸ್ವರದಲ್ಲಿ ನುಡಿದರು ನರಸಿಂಹಯ್ಯ.
ಸಭೆ ನರಸಿಂಹಯ್ಯನವರಿಗೆ ಮಣಿದು, ಬಹುವಿಧಗಳಿಂದ ಸನ್ಮಾನಿಸಿ ‘ಲಿಂಕ್ ನರಸಿಂಹಯ್ಯ’ ಎಂಬ ಬಿರುದನ್ನು ನೀಡಿ ಗೌರವಯುತವಾಗಿ ಕಳುಹಿಸಿಕೊಟ್ಟಿತು.
ಇವಿಷ್ಟು ಲಿಂಕ್ ನರಸಿಂಹಯ್ಯನವರ ಬಾಬತ್ತನ್ನು ಡಾ. ಶ್ರೀಕಂಠಯ್ಯನವರು ಸೊಗಸಾಗಿ ಮಂಡಿಸುತ್ತಿದ್ದರು. ಇದೋ ನಿಮಗಾಗಿ ಮದ್ರಚಿತ ಉತ್ತರಲಿಂಕಾಯಣ.
ನರಸಿಂಹಯ್ಯನವರು ಇತ್ತೀಚೆಗೆ ಸಿಕ್ಕಿದರು. ‘ಮೂರೇ ಮೂರು ಹಾಡು ಕೊಡ್ತೀನಿ. ರಾಮಾಯಣಕ್ಕೆ ಲಿಂಕ್ ಮಾಡ್ತೀರಾ?’ ಎಂದು ಕೇಳಿದೆ.
‘ರಾಮನ ಇಚ್ಛೆ’ ಎಂದರವರು.
‘ಜಿಂಕೆ ಮರೀನಾ; ನೀ ಜಿಂಕೆ ಮರೀನಾ; ನೀ ಜಿಂಕೆಜಿಂಕೆ ಮರೀನಾ. ಈ ಹಾಡನ್ನು ಲಿಂಕ್ ಮಾಡಿ ನೋಡೋಣ’ ಸವಾಲೆಸೆದೆ. ನರಸಿಂಹಯ್ಯನವರು ಒಂದೇ ಒಂದು ಕ್ಷಣವನ್ನೂ ವ್ಯಯಿಸದೆ, ‘ಇದನ್ನು ಲಕ್ಷ್ಮಣನೇ ಹಾಡಿದ್ದಲ್ಲವೆ?’ ಎಂದರು.
‘ಲಕ್ಷ್ಮಣನೇ? ಯಾವಾಗ?’
‘ರಾಮನು ಚಿನ್ನದ ಜಿಂಕೆಯನ್ನು ಅಟ್ಟಿಸಿಕೊಂಡು ಹೋಗುತ್ತಿದ್ದ. ಮುಂದೆ ಮುಂದೆ ಜಿಂಕೆ; ಹಿಂದೆ ಹಿಂದೆ ರಾಮ. ಸಾಕಷ್ಟು ದೂರ ಕ್ರಮಿಸಿದ ಮೇಲೆ ರಾಮನಿಗೆ ‘ಓಹೋ! ಇದು ಮಾಯಾಜಿಂಕೆಯೇ ಇರಬೇಕು. ಇದು ನನ್ನಳವಿಗೆ ದೊರಕದು. ಶರಸಂಧಾನ ಆಗಲೇಬೇಕು ಎಂದು ತೀರ್ಮಾನಿಸಿದ. ಸೊಯ್ಯನೆ ಹೊರಟ ಬಾಣವು ಜಿಂಕೆಗೆ ತಗುಲುತ್ತಲೇ ಜಿಂಕೆಯು ರಾಕ್ಷಸನಾಗಿ ಪರಿವರ್ತನೆಗೊಂಡು ‘ಹಾ ಲಕ್ಷ್ಮಣಾ, ಹಾ ಸೀತೆ!’ ಎನ್ನುತ್ತ ಕೆಳಗುರುಳಿತು. ಲಕ್ಷ್ಮಣ ಓಡಿಬಂದ. ಕೆಳಗುರುಳಿದ್ದುದು ಜಿಂಕೆಯಲ್ಲ, ರಾಕ್ಷಸ ಎಂದು ನೋಡಿದ. ಸೀತೆಗೆ ಜಿಂಕೆಯಾಗಿ ಕಂಡ ರಾಕ್ಷಸನ ಶವದ ಸುತ್ತ ಸುಳಿದಾಡುತ್ತ ‘ಜಿಂಕೆ ಮರೀನಾ, ನೀ ಜಿಂಕೆ ಮರೀನಾ?’ ಎಂದು ಹಾಡಿದ’ ಎಂದರು ನರಸಿಂಹಯ್ಯನವರು.
‘ಎರಡನೆಯ ಹಾಡು: ಕತ್ಲಲ್ಲಿ ಕರಡೀಗೆ ಜಾಮೂನು ತಿನ್ಸೋಕೆ ಯಾವತ್ತೂ ಹೋಗ್ಬಾರ್ದು ರೀ.’
‘ಇದನ್ನು ಲಂಕೆಯಲ್ಲಿದ್ದ ರಾಕ್ಷಸರೇ ಹಾಡಿದ್ದು!’
‘ಯಾವಾಗ?’
‘ರಾಮನು ತನ್ನ ಕಪಿಸೇನೆ ಮತ್ತು ಕರಡಿ ಸೇನೆಯನ್ನು ಸೇತುವೆಯ ಮೂಲಕ ಕರೆದೊಯ್ಯುತ್ತಿದ್ದ. ಇದನ್ನು ಲಂಕೆಯ ಗುಡ್ಡದ ಮೇಲೆ ನಿಂತಿದ್ದ ರಾಕ್ಷಸರು ನೋಡಿದರು. ‘ಓಹೋ! ಸಮುದ್ರದೋಪಾದಿಯಲ್ಲಿ ಬರುತ್ತಿರುವ ಈ ಇಡೀ ಸೇನೆಯನ್ನು ಒಟ್ಟಿಗೆ ಸೋಲಿಸಲು ಸಾಧ್ಯವೇ ಇಲ್ಲ. ಕಪಿಸೇನೆಯನ್ನೇ ಬೇರೆ, ಕರಡಿಸೇನೆಯನ್ನೇ ಬೇರಾಗಿಸಿದರೆ ಗೆಲ್ಲಲಾದೀತು. ಆದರೆ ಹನುಮನ ಬಾಲಕ್ಕೆ ಬೆಂಕಿ ಹಚ್ಚಿ ನಾವು ಕಪಿಸೇನೆಯ ವೈರವನ್ನು ಸಂಪಾದಿಸಿದ್ದೇವೆ. ಕರಡಿಸೇನೆಯನ್ನೇ ನಮ್ಮತ್ತ ಬರಮಾಡಿಕೊಳ್ಳಲು ಯತ್ನಿಸೋಣ – ಎಂದು ನಿರ್ಧರಿಸಿದರು.
ರಾತ್ರಿ. ನಿಶಾಚರರು ಲವಲವಿಕೆಯಿಂದ ಇರುವ ಸಮಯ. ರಕ್ಕಸಭಟರು ಕರಡಿಸೇನೆಯ ಮುಖಂಡನಾದ ಜಾಂಬವಂತನ ಬಳಿಗೆ ಬಂದು, ಸಿಹಿಯ ಕೊಳದಪ್ಪಲೆಯೊಂದನ್ನು ಮುಂದಿರಿಸುತ್ತ, ‘ಜಾಂಬವಂತ, ಇದೊಂದು ವಿಶಿಷ್ಟ ಸಿಹಿ. ನಾವು ಇದನ್ನು ಜಾಮೂನು ಎಂದು ಕರೆಯುತ್ತೇವೆ. ಈ ಸಿಹಿಯನ್ನು ಸ್ವೀಕರಿಸು. ನೀನು ಏನೇನು ಬಯಸುವೆಯೆಂದು ಪಟ್ಟಿ ನೀಡು. ನಾವು ಎಲ್ಲವನ್ನೂ ಒದಗಿಸುತ್ತೇವೆ. ಕಾಡಾಡಿ ರಾಮನಿಗಿಂತ ಐಶ್ವರ್ಯವಂತ ರಾವಣನ ಕಡೆಗೆ ಬಂದರೆ ನಿನಗೆ ಹೆಚ್ಚು ಲಾಭವೆಂಬುದನ್ನು ಅರಿ’ ಎಂದರು.
ಜಾಂಬವ ಕೋಪಾವಿಷ್ಟನಾದ. ‘ನನ್ನ ರಾಮಭಕ್ತಿಯನ್ನು ಪರೀಕ್ಷಿಸಲು ಬಂದಿರುವಿರೇನು? ನಮ್ಮಲ್ಲಿನ ಜಂಬುನೇರಳೆಗೆ ನಿಮ್ಮ ಜಾಮೂನು ಸಮವೇನು? ರಾಮವಿರೋಧಿ ಹೇಳಿಕೆ ನೀಡುವುದಲ್ಲದೆ ನನಗೆ ಋಷುವತ್ತು ನೀಡಲು ಯತ್ನಿಸಿದ ನಿಮಗೆ ತಕ್ಕ ಶಾಸ್ತಿಯೇ ಆಗಬೇಕು’ ಎನ್ನುತ್ತ್ತ ರಪರಪರಪನೆ ರಕ್ಕಸರ ಕೆನ್ನೆಗಳಿಗೆ ಬಾರಿಸಿದ. ಊದಿದ ಕೆನ್ನೆಯ ಮೇಲೆ ಕೈಯಿಟ್ಟುಕೊಂಡು ರಕ್ಕಸರು ಹೇಳಿದರು, ‘ಕತ್ಲಲ್ಲಿ ಕರಡೀಗೆ ಜಾಮೂನು ತಿನ್ಸೋಕೆ ಯಾವತ್ತೂ ಹೋಗ್ಬಾರ್ದೂರೀ.’
‘ಮೂರನೆಯ ಹಾಡು: ಡಿಸ್ಟೆನ್ಸೂ ಲೋ ಮೂಣೂ ಮೂಣೂ; ಮೂಣು ಕಲರು ವೈಟೂ…’
‘ಇದನ್ನು ದಶರಥನೇ ಹಾಡಿದ್ದಲ್ಲವೇ! ಲಿರಿಕ್ಸ್ ಕೊಂಚ ಬೇರೆ ಇತ್ತು ಅಷ್ಟೇ’ ಎಂದರು ನರಸಿಂಹಯ್ಯ.
‘ಏನಿತ್ತು ಲಿರಿಕ್ಸು?’
‘ಪೊಂಡಾಟಿಂಗಳ್ ಮೂಣು ಮೂಣು; ಮೂಣಾವದ್ ಪೆಣ್ಣ ಸ್ಟ್ರಾಂಗೂ… ಪಸಂಗಳೆನಕು ನಾಲು ನಾಲು; ರಾಮ ಭರತ ಬ್ಲ್ಯಾಕೂ…’
‘ಕನ್ನಡದಲ್ಲಿ ಹೇಳುವಿರೆ?’
‘ಆಗಲಿ. ಹೆಂಡತಿಯರು ಮೂರು ಮೂರು; ಮೂರನೆಯವಳೇ ಸ್ಟ್ರಾಂಗೂ… ಮಕ್ಕಳೆನಗೆ ನಾಲ್ಕು ನಾಲ್ಕು; ರಾಮ ಭರತ ಬ್ಲ್ಯಾಕೂ… ವೈ ದಿಸ್ ಕೊಲೆವರಿ ಕೊಲೆವರಿ ಕೊಲೆವರಿ ಡೀ.’
‘ಹಾಗೆ ಹೇಳಿದನೆ ದಶರಥ? ಹಾಗಾದರೆ ಕೊನೆಯ ಸ್ಟಾಂಝಾ ಏನಿತ್ತು?’
‘ಓ ಗಾಡ್ ಐ ಆಮ್ ಡೈಯಿಂಗ್ ನೌವು; ಕೈಕೇಯಿ ಹ್ಯಾಪಿ ಹೌವೂ! ದಿಸ್ ಸಾಂಗ್ ಫಾರ್ ಆಲ್ ಹಸ್ಬೆಂಡ್ಸು ಹೂ ಹ್ಯಾವ್ ತ್ರೀ ವೈಫ್ಸೂ…’
‘ದಶರಥ ಇಂಗ್ಲಿಷ್ ಮಾತನಾಡಿದನೆ?’
‘ನಿಮ್ಮ ಪ್ರಶ್ನೆಯ ಜಾಡಿಗೆ ನನ್ನ ಲಿಂಕ್ ಇರುತ್ತದಷ್ಟೆ. ಅಷ್ಟಕ್ಕೂ ದೈವಾಂಶಸಂಭೂತರಿಗೆ ಇಂತಹದ್ದು ಬರುತ್ತೆ, ಇಂತಹದ್ದು ಬರುತ್ತಿರಲಿಲ್ಲವೆಂದು ತೀರ್ಮಾನಿಸಲು ಹುಲುಮಾನವನಾದ ನಾನು ಯಾರು!’ ಎಂದರು ನರಸಿಂಹಯ್ಯ.
ಮೊಬೈಲ್ ರಿಂಗ್ ಆಯಿತು. ಅದರತ್ತಲೇ ನೋಟಬೀರುತ್ತ, ‘ಮೊಬೈಲನ್ನು ರಾಮಾಯಣಕ್ಕೆ ಲಿಂಕ್ ಮಾಡಬಹುದೆ?’ ಎಂದು ಕಡೆಯ ಪ್ರಶ್ನೆ ಕೇಳಿದೆ.
‘ಮೊಬೈಲ್ ಎಂದರೆ ಅದರಲ್ಲೊಂದು ಸಿಮ್ ಇರುತ್ತದೆ. SIM ಸಿಮ್ನಲ್ಲಿ S stands for simplicity; I stands for individuality; M stands for Mortality. ಸಿಂಪ್ಲಿಸಿಟಿಗೆ ರಾಮನಿಗಿಂತ ಪರರಿಲ್ಲ. ಇಂಡಿವಿಜುಯಾಲಿಟಿಗೆ ಹನುಮಂತನಿಗಿAತ ಉತ್ತಮ ಉದಾಹರಣೆಯಿಲ್ಲ. ಮಾರ್ಟಾಲಿಟಿಗೆ ಲಂಕೆಗಿಂತ ಮಾರಣಹೋಮದ ಸ್ಥಳ ಅಂದು ಇರಲಿಲ್ಲ. ಇಂತಹ SIM ಹೊಂದಿದ ಮೊಬೈಲೇ ರಾಮಾಯಣ. ‘ಯತ್ ಸುಕಥಾ ಚರತಿ ಭುವನೇ ಸರ್ವದಾ ತದೈವ ರಾಮಾಯಣಂ’ ಎಂದರು ಲಿಂಕ್ ನರಸಿಂಹಯ್ಯನವರು.
‘ಜೈ ಶ್ರೀರಾಮ್’ ಎಂದೆ. ಸಂತುಷ್ಟರಾದ ನರಸಿಂಹಯ್ಯನವರು ನನ್ನಿಂದ ಬೀಳ್ಕೊಂಡರು.