‘ನಾವೆಲ್ಲರೂ ಅಜ(ಬ್ರಹ್ಮ)ನ ದೃಷ್ಟಿಯಲ್ಲಿ ಸಮ ಎನ್ನುವುದರ ಕಲ್ಪನೆಯೇ ಸಮಾಜ. ನೀನು ಉಲ್ಲೇಖಿಸಿದ ಅಶಾಂತಿ ಮೈನಸ್; ಅದಕ್ಕೆ ಮೈನಸ್ ಆದುದು ನಾನು ಉಲ್ಲೇಖಿಸಿದ ವಿಷಯಗಳು. ಆ ಮೈನಸ್ಸನ್ನು ಈ ಮೈನಸ್ಸಿನಿಂದ ಹೋಗಲಾಡಿಸಿದರೆ ಸಮಾಜಕ್ಕೆ ಪ್ಲಸ್ ಆಗುತ್ತದೆ. ಒಂದು ವಿಧದಲ್ಲಿ ರಕ್ಕಸರ ಭಯೋತ್ಪಾದನೆಯೇ ಸುರನ ವಿವಿಧ ಅವತಾರಗಳಿಗೆ ಪ್ರೇರಣೆ. ‘ಹೊರಗೂ, ಒಳಗೂ; ಹಗಲೂ, ಇರುಳೂ; ನರನಿಂದಲೂ, ಮೃಗದಿಂದಲೂ ಸಾವಿರದಿರಲಿ’ ಎಂದುದರಿಂದಲೇ ಹೊಸ್ತಿಲಿನ ಕಾನ್ಸೆಪ್ಟು, ಪುರುಷಾಮೃಗದ ಆವಿಷ್ಕಾರವಾದುದು. ಉಗ್ರತೆ ಕಸ; ಅದನ್ನಡಗಿಸುವ ಕ್ರಿಯೆಯೇ ರಸ.’
ನ್ಯೂಟನ್ ಮರದ ಕೆಳಗೆ ಮಲಗಿದ್ದ. ಸೇಬೊಂದು ಉದುರಿತು. ಹಣ್ಣು ಉದುರಿದ್ದರಿಂದ ನ್ಯೂಟನ್ನನಿಗೆ ಏನಾಯಿತು?’
‘ಮರ ಹತ್ತುವುದು ತಪ್ಪಿತು’ ಎಂದೆ.
‘ಸರಿ. ಇನ್ನೇನಾಯಿತು?’
‘ಮಾಲಿ ಇಲ್ಲದ ಜಾಗದಲ್ಲಿ ಮಲಗಿದ್ದರೆ ಒಂದು ಹಣ್ಣಿನ ಲಾಭವಾಯಿತು.’
‘ಕೊಂಚ ಯೋಚಿಸಿ ಹೇಳು. ಇನ್ನೇನಾಯಿತು?’
‘ಬಿದ್ದ ಹಣ್ಣು ಕುಂಬಳದಷ್ಟೇನಾದರೂ ದೊಡ್ಡದಿದ್ದಿದ್ದರೆ ನನ್ನ ತಿಥಿಯಾಗುತ್ತಿತ್ತು. ದೇವನು ಕುಂಬಳವನ್ನು ಬಳ್ಳಿಯಲ್ಲೂ, ಸೇಬನ್ನು ಮರದಲ್ಲೂ ಇಟ್ಟದ್ದು ಒಳಿತಾಯಿತು ಎಂಬ ಯೋಚನೆ ಮೂಡಿರಬಹುದು.’
‘ಅವಿವೇಕಿ! ಕೊಂಚ ಸೈಂಟಿಫಿಕ್ಕಾಗಿ ಯೋಚಿಸಿ ಹೇಳೋ.’
‘ಅವನ ನಿತ್ಯಭವಿಷ್ಯದಲ್ಲಿ ಊರ್ಧ್ವದಿಕ್ಕಿನಿಂದ ಫಲಲಾಭ ಎಂದು ಬರೆದಿದ್ದು, ಅದು ನಿಜವಾಯಿತೆಂದು ಅವನಿಗೆ ಸಂತೋಷವಾಗಿರಬಹುದು.’
‘ಛೆ! ಇನ್ನೊಂದು ರೀತಿಯಲ್ಲಿ ಯತ್ನಿಸುತ್ತೇನೆ. ನ್ಯೂಟನ್ ಏನನ್ನು ಕಂಡುಹಿಡಿದ?’
‘ಮರದ ಕೆಳಗೆ ಬಿದ್ದು ಉರುಳಿಕೊಂಡು ಹೋಗಿದ್ದ ಸೇಬನ್ನು!’
‘ಸೇಬಿನ ವಿಷಯ ಬಿಡು. ನ್ಯೂಟನ್ ಒಂದು ನಿಯಮವನ್ನು ಕಂಡುಹಿಡಿದ. ಅದು ಯಾವುದು?’
‘ಸೇಬು ತಿನ್ನುವುದು ಆರೋಗ್ಯಕ್ಕೆ ಒಳ್ಳೆಯದು ಎಂದಿರಬಹುದೆ?’
‘ಅದಲ್ಲವೋ. ಭೂಮಿಯ ಆಕರ್ಷಣಾ ಸಾಮರ್ಥ್ಯಕ್ಕೆ ಸಂಬAಧಿಸಿದ್ದು…’
‘ಓಹ್! ಅದಾ? ಗುರುತ್ವಾಕರ್ಷಣ ನಿಯಮ.’
‘ಗುಡ್. ಅದನ್ನು ಕಂಡುಹಿಡಿದದ್ದು ಯಾವಾಗ?’
‘ಸೇಬು ಬಿದ್ದ ಮೇಲೆ.’
‘ಇದು ಏನನ್ನು ಸೂಚಿಸುತ್ತದೆ?’
‘ಮರದ ಕೆಳಗೆ ಮಲಗಿದಾಗ ಹೆಲ್ಮೆಟ್ ಹಾಕಿಕೊಳ್ಳುವುದು ಕ್ಷೇಮಕರ ಎಂದು.’
‘ಎಲೈ ತಿಳಿಗೇಡಿಯೆ. ನಾನೇ ವಿವರಿಸುತ್ತೇನೆ, ಕೇಳುವಂಥವನಾಗು. ನ್ಯೂಟನ್ ಮರದ ಕೆಳಗೆ ನೆಮ್ಮದಿಯಿಂದ ಮಲಗಿದ್ದ. ಹೌದೋ ಅಲ್ಲವೋ?’
‘ನಿಜ. ಸರ್ಕಾರೀ ಕೆಲಸದಲ್ಲಿ ಇಲ್ಲದಿದ್ದರೂ ಹಗಲಲ್ಲಿ ನಿದ್ರಿಸುವ ಚಾಳಿಯಿತ್ತೆನಿಸುತ್ತದೆ ಅವನಿಗೆ.’
‘ಅಡ್ಡಮಾತನ್ನು ನಿಲ್ಲಿಸು. ನೆಮ್ಮದಿಯಿಂದಿದ್ದ ನ್ಯೂಟನ್ ಸೇಬು ಬಿದ್ದ ಮೇಲೆ ಅದರ ಬಗ್ಗೆಯೇ ಚಿಂತಿಸುತ್ತಿದ್ದ. ಹಾಗೆ ಚಿಂತಿಸಿದ ಕಾರಣ ಅವನಿಗೆ law of gravity ಹೊಳೆಯಿತು. ಇದು ಏನನ್ನು ಸೂಚಿಸುತ್ತದೆ?’
‘Falling of apple was a grave error ಎಂದೇ?’
‘ಮೂಢ! ಇದು ನೆಮ್ಮದಿ ಇಲ್ಲದಿದ್ದಾಗಲೇ ಆವಿಷ್ಕಾರಗಳು ಸಂಭವಿಸುತ್ತವೆ ಎಂದು ಸೂಚಿಸುತ್ತದೆ. ಶಾಂತವಾಗಿದ್ದ ನ್ಯೂಟನ್ ಫಲಪತನದಿಂದ ನೆಮ್ಮದಿಗೆಟ್ಟು, ಚಡಪಡಿಸಿದುದರ ಫಲವೇ ಗುರುತ್ವಾಕರ್ಷಣ ನಿಯಮ. ‘ಶಾಂತಿರ್ಯತ್ರ ನಶ್ಯತಿ ತತ್ರೈವ ಭವಂತ್ಯಾವಿಷ್ಕಾರಾನಿ’ ಹೊಸ ವಿಷಯವನ್ನು ಮುಂದಿರಿಸಿದ ಸೀನು.
‘ಜಗವೆಲ್ಲ ಶಾಂತಿಯೇ ಶ್ರೇಷ್ಠ ಎನ್ನುವಾಗ ನೀನು ಅಶಾಂತಿಯ ವಂದಿಮಾಗಧನಾಗಿರುವೆಯಲ್ಲ?’ ಎಂದೆ.
‘ಅಶಾಂತಿ ಇಲ್ಲದಿದ್ದರೆ ಪುರಾಣವೇ ಇಲ್ಲವಯ್ಯ!’ ಸೀನು ಉವಾಚ.
‘ಹೇಗೆ ಹೇಳುವೆ?’
‘ಪ್ರಪಂಚ ನೆಮ್ಮದಿಯಿಂದಿತ್ತು. ಸುರರಿಗೆ ಸುಮ್ಮನಿರಲಾಗಲಿಲ್ಲ. ‘ಮಂದರನೆ, ನೀನು ಮಂತಾಗು; ವಾಸುಕಿಯೆ, ನೀನು ಹಗ್ಗವಾಗು; ಬನ್ನಿ ರಕ್ಕಸರೆ. ಟಗ್ ಆಫ್ ವಾರ್ ಆಡಬಹುದು’ ಎನ್ನುತ್ತಾ ಕಾರ್ಯಪ್ರವೃತ್ತರಾದರು. ಮಥನ ಆರಂಭವಾಯಿತು. ಆಗೇನಾಯಿತು?’
‘ವೈದ್ಯರು ಮತ್ತು ಹಣ ಎಂದಿಗೂ ಒಟ್ಟಿಗೇ ಇರುತ್ತವೆಂಬುದು ಸಾಬೀತಾಯಿತು.’
‘ಹೇಗೆ?’
‘ಧನ್ವಂತರಿ ಮತ್ತು ಲಕ್ಷ್ಮಿ ಇಬ್ಬರೂ ಒಟ್ಟೊಟ್ಟಿಗೇ ಉದಯಿಸಿದರು.’
‘ಇನ್ನೇನಾಯಿತು?’
‘ಪ್ರಪಂಚದಲ್ಲಿ ಫಳಫಳ ಡ್ರೆಸ್ ಮಾಡಿಕೊಂಡವರಿಗೆ ಆದ್ಯತೆ ನೀಡಲಾಗುತ್ತದೆ ಎಂದು ತಿಳಿದುಬಂತು.’
‘ಯಾವಾಗಲೋ?’ ಆಚ್ಚರಿಯಿಂದ ಕೇಳಿದ ಸೀನು.
‘ಸಮುದ್ರ ಮಥನ ಕಾಲದಲ್ಲೇ. ಮಥನಸಮಯದಲ್ಲಿ ಹೊರಬಂದ ಲಕ್ಷ್ಮಿಯನ್ನು ಸಮುದ್ರರಾಜನು ಪೀತಾಂಬರಧಾರಿಯಾದ ವಿಷ್ಣುವಿಗೆ ಕೊಟ್ಟ. ದಿಗಂಬರನಾದ ಶಿವನಿಗೆ ಹಾಲಾಹಲವನ್ನು ಕೊಡಲಾಯಿತು.’
‘ಆಹಾ! ಶಿವನು ಹಾಲಾಹಲದ ಬಟ್ಟಲನ್ನು ಕುಡಿಯತೊಡಗಿದಾಗ ಪಾರ್ವತಿಯಲ್ಲಿ ತಳಮಳ ಉಂಟಾಗಿ ಶಿವನು ನೀಲಕಂಠನಾದ. ನೀಲಕಂಠತ್ವದ ಉದಯಕ್ಕೆ ಅಶಾಂತಿಯೇ ಕಾರಣ ಅಲ್ಲವೇ?’ ನಾನು ಕೊಂಕಾಡಿದೆ. ಸೀನು ಸುಪ್ರಸನ್ನನಾದ.
‘ಆ ಕೆಲವು ಪ್ರಸಂಗಗಳು ನೀನು ಹೇಳಿದಂತಿದ್ದಾವು. ಮಿಕ್ಕಂತೆ ಶಾಂತಿಯಿಂದಲೇ ಜಗತ್ತು’ ಎಂದಿನಂತೆ ಅವನ ವಿರೋಧಪಕ್ಷಿಯಾದೆ.
‘ಮಾ ನಿಷಾದ ಪ್ರತಿಷ್ಠಾಂ ತ್ವಮಗಮಃ ಶಾಶ್ವತೀಸ್ಸಮಾ| ಯತ್ ಕ್ರೌಂಚ ಮಿಥುನಾದೇಕಮ್ ಅವಧೀ ಕಾಮಮೋಹಿತಮ್||’ ಎಂಬ ಶ್ಲೋಕ ಉದ್ಭವಿಸಿದ್ದು ವಾಲ್ಮೀಕಿಯು ತಪಸ್ಸನ್ನು ಆಚರಿಸಿ ಶಾಂತಿಯ ಎವರೆಸ್ಟನ್ನು ತಲಪಿದ್ದಾಗಲ್ಲ. ದುಃಖದ ಮಡುವಿನಲ್ಲಿ ಕ್ರೋಧದ ದೋಣಿಯಲ್ಲಿ ಸಂಚರಿಸುತ್ತಿದ್ದಾಗ. ಮುನಿಯು ಶಾಂತಚಿತ್ತದಿಂದ ‘ಹೋದರೆ ಹೋಗಲಿ. ಜಗದಲ್ಲಿ ಎನಿತೋ ಪಕ್ಷಿಗಳನ್ನೆನಿತೋ ಬೇಟೆಗಾರರು ದಿನವೂ ಕೊಲ್ಲುತ್ತಿರುತ್ತಾರೆ. ವಿಶ್ವದಲ್ಲಿ ಪಕ್ಷಿಗಳಿಗೇನೂ ಬರವಿಲ್ಲ. ಪಕ್ಷಿಗಳು ವಿವಾಹವನ್ನೂ ಮಾಡಿಕೊಳ್ಳುವವಲ್ಲ. ಆ ಪಕ್ಷಿ ಇನ್ನೊಂದರೊಡನೆ ಲಿವಿಂಗ್ ಟುಗೆದರ್ ಮುಂದುವರಿಸಿ ನೆಮ್ಮದಿಯಿಂದಿರುತ್ತದೆ’ ಎಂದು ಆಲೋಚಿಸಿ ತೆಪ್ಪಗಿದ್ದುಬಿಟ್ಟಿದ್ದರೆ ರಾಮಾಯಣವೇ ಹುಟ್ಟುತ್ತಿರಲಿಲ್ಲ. ಅಶಾಂತಿಯೇ ಶಾಂತಿತತ್ತ÷್ವಬೋಧನೆಯ ಮೂಲ ಕಾಣಾ. ತನ್ನ ಕಾಲರ್ ಮೇಲೇರಿಸಿಕೊಂಡ ಸೀನು.
‘ಸತ್ತ ಪಕ್ಷಿಗಾದರೂ ಶಾಂತಿ ದೊರಕಿತ್ತೇನು?’
‘ಇಂದಿನ ಸೋಷಿಯಲ್ ಮೀಡಿಯಾ ಅಂದು ಇರಲಿಲ್ಲವಾದ್ದರಿಂದ ನೆಮ್ಮದಿ ಸಿಕ್ಕಿದ್ದೀತು. ಈಗಾದರೆ ‘ಆತ್ಮಕ್ಕೆ ಶಾಂತಿ ಸಿಗಲಿ’, ‘ಸದ್ಗತಿ ಸಿಗಲಿ’, ‘ರಿಪ್’ ಎಂದು ಕಾಮೆಂಟ್ ಮಾಡುವುದನ್ನು ನೋಡಿಯೇ ಪಕ್ಷಿಯ ಆತ್ಮ ಅಶಾಂತಿಯಿಂದ ತೊಳಲುತ್ತಿತ್ತೋ ಏನೋ. ನನಗೆ ಈ ಕಾಮೆಂಟುಗಳೇ ಅರ್ಥವಾಗುವುದಿಲ್ಲ.’
‘ಅರ್ಥವಾಗದಿರುವಂಹವೇನಿವೆ ಅವುಗಳಲ್ಲಿ?’
‘ಆತ್ಮಕ್ಕೆ ಶಾಂತಿ ಸಿಗಲಿ ಎನ್ನುತ್ತಾರಲ್ಲ, ಯಾರಯ್ಯ ಅವಳು? ಸತ್ತವರಿಗೆಲ್ಲ ಅವಳು ಸಿಗಬೇಕೆಂದು ಜನರು ಹಂಬಲಿಸುವ ಆ ಶಾಂತಿಯ ರೂಪವೇನು? ಸ್ವರೂಪವೇನು? ಸಾವಿಗೂ ಆ ಶಾಂತಿಗೂ ಲಿಂಕ್ ಏನು? ಸತ್ತವರ ಸಂಗದಲ್ಲೇ ಅವಳಿರಬೇಕೆಂದರೆ ಯಾವ ಪುರಾಣಕಾಲದಲ್ಲಿ ಏನು ಪಾಪಗೈದಿದ್ದಳವಳು?’ ಸೀನು ವಾಕ್ಸರಣಿ ಆರಂಭಿಸಿದ.
‘ಎಲೈ ಎಡಬಿಡಂಗಿ, ಶಾಂತಿ ಎನ್ನುವುದು ಮನಸ್ಸಿನ ಸ್ಥಿತಿ, ಹೆಣ್ಣಲ್ಲ’ ಅವನ ಆಲೋಚನಾಸರಣಿಯನ್ನು ತಿದ್ದಿದೆ.
‘ಆತ್ಮಕ್ಕೆ ಅಂಗವಿಲ್ಲವೆಂದಾಗ ಮನಸ್ಸಿದೆಯೇನು?’ ಸವಾಲೆಸೆದ ಸೀನು.
‘ಆ ಪ್ರಶ್ನೆಯನ್ನು ಯಾವುದಾದರೂ ಆಧ್ಯಾತ್-ಮಿಕವನ್ನು ಕೇಳೋಣ…’ ತಿಪ್ಪೆ ಸಾರಿಸಿದೆ.
‘ಒಂದು ಸಂದೇಹ: ಶಾಂತಿ ಎನ್ನುವ ಹೆಣ್ಣು ಸತ್ತರೆ ಅವಳ ಆತ್ಮಕ್ಕೂ ಶಾಂತಿ ಸಿಗಲಿ ಎನ್ನಬೇಕೋ ಶಾಂತಕುಮಾರ ಸಿಗಲಿ ಎನ್ನಬೇಕೋ?’
‘ಸೀನೂ… ಶಾಂತಿ ಎನ್ನುವುದೊಂದು ರಸ, ಅರಸನೋ ಅರಸಿಯೋ ಅಲ್ಲವೆಂದು ಮೊದಲೇ ಹೇಳಿದೆನಲ್ಲ.’
‘ಎಕ್ಸಾಕ್ಟ್ಲಿ. ಶಾಂತಿ ಎನ್ನುವವಳು ತನ್ನ ತಾಯಿಯ ಗರ್ಭದಲ್ಲಿರುವಾಗಲೇ ಅವಳ ಆತ್ಮ ಅಲ್ಲಿ ಸೇರುತ್ತದೆ. ಆದ್ದರಿಂದ ಶಾಂತಿಯೆಂಬ ಹೆಣ್ಣು ಹುಟ್ಟುವಾಗಲೇ ಆತ್ಮಕ್ಕೆ ಶಾಂತಿ ಸಿಕ್ಕಂತಾಯಿತು. ಶಾಂತಿ ದೊರೆತು, ಶಾಂತಿಯೊಡನೆಯೇ ಇದ್ದ ಆತ್ಮಕ್ಕೆ ಶಾಂತಿಯು ತೀರಿಕೊಂಡ ನಂತರ ಶಾಂತಿಯನ್ನು ಕೋರಬೇಕೋ ಬೇಡವೋ?’
ಶಾಂತಿಯೊಂದು ಭಾವ ಎಂದರೆ ಆ ಭಾವನ ಹೆಸರು ಶಾಂತಿಲಾಲ್ ಎಂದೇ ಎಂದು ಕೇಳುತ್ತಾನೆ. ಶಾಂತಿ ಎನ್ನುವುದು ನಾಮಪದವೆಂದರೆ ಅವನು ಹೇಳಿದ್ದಷ್ಟೂ ಸರಿಯಾಗೇ ಇದೆ. Speak only if you can improve upon silence ಎಂಬ ನುಡಿಯನ್ನಾಂತು ಮೌನವಹಿಸಿದೆ.
‘ರಿಪ್ ಎನ್ನುವುದು ಮಾತ್ರ ಆ ಪಕ್ಷಿಯ ವಿಷಯದಲ್ಲಿ ಸರಿಯಾಗುತ್ತಿತ್ತು’ ಮುಂದುವರಿಸಿದ ಸೀನು.
‘ಹೇಗೆ?’
‘ಆಂಗ್ಲದಲ್ಲಿ ರಿಪ್ ಎಂದರೆ ಹರಿ, ಚಿಂದಿ ಮಾಡು ಎಂದರ್ಥ. ಸತ್ತ ಪಕ್ಷಿಯನ್ನು ಹರಿದು, ಕೊರೆದು ಯಾರೋ ಪಲ್ಯ ಮಾಡಿಕೊಂಡಿರುತ್ತಾರೆ. ಆದ್ದರಿಂದ ಪಕ್ಷಿಗಳ, ಪ್ರಾಣಿಗಳ ಸಾವಿಗೆ ರಿಪ್ ಎಂದು ಆದೇಶಿಸಿ ಬಾಣಸಿಗನತ್ತ ಅವನ್ನು ತಳ್ಳುವುದು ಅಡಗಿನಡಿಗೆಗೆ ರಹದಾರಿ.’
‘ಅಂದರೆ… ಯಾವ ಮನುಷ್ಯ ಸತ್ತರೂ ರಿಪ್ ಎನ್ನುವುದು ತಪ್ಪು ಅನ್ನು!’
‘ಹಾಗೇನಿಲ್ಲ. ಕೊಲೆಯಾದಾಗ, ಸಂಶಯಾಸ್ಪದ ರೀತಿಯಲ್ಲಿ ಸಾವನ್ನಪ್ಪಿದಾಗ ಪೊಲೀಸರೇ ದೇಹವನ್ನು ಆಸ್ಪತ್ರೆಗೆ ನೀಡಿ Rip ಎನ್ನುತ್ತಾರೆ. ಪೋಸ್ಟ್ ಮಾರ್ಟಂ ಮಾಡುವ ಸಲುವಾಗಿ ಅಲ್ಲಿನ ಪರಿಣತರು ಬಾಡಿಯನ್ನು ರಿಪ್ ಮಾಡಿ ಡೆತ್ತು ನ್ಯಾಚುರಲ್ಲೋ ಅಲ್ಲವೋ ಎಂದು ತೀರ್ಮಾನಿಸುತ್ತಾರೆ.’
‘ಸದ್ಗತಿಯ ವಿಷಯವೊಂದನ್ನು ಬಿಟ್ಟೆ ನೀನು’ ಅವನ ಜಾಡಿಗೆ ಹಿಂತಿರುಗಿದೆ.
‘ಸತ್ತವನ ಮುಂದೆ ಪಟಾಕಿ ಹೊಡೆಯುವುದು, ವಾದ್ಯ ಬಾರಿಸುವುದು ಯಾಕೆ ಹೇಳು?’
‘ಇಂತಹ ಪ್ರಶ್ನೆಗಳಿಂದ ನನ್ನನ್ನು ಕೊಲ್ಲಬೇಡ.’
‘ಆ ಸದ್ದಿಗೂ ಅವನ ಹೃದಯ ದಡಬಡಿಸಿ ಅವನು ಏಳದಿದ್ದರೆ ಅವನು ಸತ್ತಿದ್ದಾನೆಂದು ದೃಢಪಡುತ್ತದೆ. It is a very sount test ಸೀನುವಿನ ಕೈ ಮತ್ತೆ ಕಾರ್ನತ್ತ ಧಾವಿಸಿತು, ‘ಸದ್ದಿನಿಂದ ಸತ್ತವನ ಗತಿಯನ್ನು ನಿರ್ಧರಿಸುವುದೇ ಸದ್-ಗತಿ ಎಂಬುದರ ನಿಜವಾದ ಅರ್ಥ.’
‘ರಾಮಾಯಣದ ಉದಯಕ್ಕೇನೋ ನಿನ್ನ ಅಶಾಂತಿಕಾಂಡ ಸಮ್ಮತವೆನಿಸಿತು. ಆದರೆ ಮಹಾಭಾರತ ಹಾಗಲ್ಲ. ಮನೋಹರ ನದೀತಟದಲ್ಲಿ ಶಂತನು ವಿಹರಿಸುವುದರ ಚಿತ್ರಣದ ಮೂಲಕ ಮಹಾಭಾರತದ ಆರಂಭ’ ಮತ್ತೆ ಅವನನ್ನು ಟ್ರ್ಯಾಕ್ಗೆ ಎಳೆದೆ.
‘ಆಹಾ! ಶಂತನುವಿನ ಮತ್ತೊಂದು ಹೆಸರೇ ಚಡಪಡಿಕೆ. ಹೇಗಾದರೂ ಗಂಗೆಯನ್ನು ಹೊಂದಬೇಕೆಂದು ಚಡಪಡಿಸಿದ. ಗಂಗೆ ಮಕ್ಕಳನ್ನು ನದಿಗೆಸೆದಾಗಲೆಲ್ಲ ಚಡಪಡಿಸಿದ. ಗಂಗೆ ಕೈಕೊಟ್ಟು ಹೋದಾಗ ಚಡಪಡಿಸಿದ. ಮತ್ಸ್ಯ ಗಂಧಿಯ ಅಪ್ಪ ‘ನನ್ನ ಮೊಮ್ಮಕ್ಕಳಿಗೆ ರಾಜ್ಯ ದಕ್ಕದಾದ್ದರಿಂದ ಮಗಳನ್ನು ಕೊಡೆ’ ಎಂದಾಗ ಚಡಪಡಿಸಿದ. ದೇವವ್ರತನು ಭೀಷ್ಮಪ್ರತಿಜ್ಞೆ ಕೈಗೊಂಡ ನಂತರ ಬದುಕಿದ್ದಷ್ಟು ದಿನವೂ ಚಡಪಡಿಸಿದ. ಶಂತನುವಿನ ಮನಸ್ಸನ್ನು ಮೈಕೆಲ್ ಏಂಜೆಲೋಗೆ ಚಿತ್ರಿಸೆಂದು ಹೇಳಿದ್ದಿದ್ದರೆ ಪಟಪಟನೆ ರೆಕ್ಕೆಬಡಿಯುತ್ತಿರುವ ಪಕ್ಷಿಯ ಚಿತ್ರವನ್ನೇ ಬಿಡಿಸುತ್ತಿದ್ದನೇನೋ! ಅವನು ಶಂತನು ಅಲ್ಲ, ಅಶಾಂತ ತನು!’
‘ಶಂತನುವೊಬ್ಬ ಹಾಗಿದ್ದನೆಂದೇ ಇಟ್ಟುಕೊಳ್ಳೋಣ. ಧರ್ಮರಾಯನನ್ನು ನೋಡು? ಶಾಂತಿಯೇ ಮೂರ್ತಿವೆತ್ತಂತಹವನಲ್ಲವೇ? ದ್ರೌಪದಿಯ ವಸ್ತ್ರಾಪಹಾರವಾದಾಗಲೂ ರೇಗಲಿಲ್ಲ; ಕೀಚಕನು ಅಗ್ನಿಜೆಯ ಸೆರಗೆಳೆದಾಗಲೂ ಧರ್ಮಬೋಧೆಯತ್ತಲೇ ಸಾಗಿದ. ಇಂದಿನ ಫ್ರೀಜರ್, ಫ್ರಿಡ್ಜ್ಗಳಿಗೆ ಅವನು ಮಾಡೆಲ್ ಆಗಬಹುದಿತ್ತೆನ್ನುವಷ್ಟರಮಟ್ಟಿಗೆ ಕೂಲ್ ಆಗಿದ್ದ. ಇದು ಶಾಂತಿಯೇ ಶ್ರೇಷ್ಠವೆನ್ನುವುದನ್ನು ಸೂಚಿಸುತ್ತದೆ’ ನನ್ನ ಮಾರ್ಕ್ಸ್ ಕಾಲಮ್ಮಿಗೂ ಒಂದನ್ನು ಸೇರ್ಪಡೆಗೊಳಿಸಿದೆ.
‘ಅವನ ಶಾಂತಿಯೇ ದ್ರೌಪದಿಯ ಅಶಾಂತಿಗೆ ಕಾರಣವಾಯಿತಲ್ಲ! ಸೈರಂಧ್ರಿಯಿಂದ ಸೈ ಎನ್ನಿಸಿಕೊಳ್ಳಲು ಹೆಣಗಿದವನ ಮೈ ರಂಧ್ರವಾಗಲು ಕಾರಣ ದ್ರೌಪದಿ, ಭೀಮರ ಮನದಲ್ಲಿ ಭುಗಿಲೆದ್ದ ಕ್ರೋಧ, ಚಡಪಡಿಕೆ, ಅಶಾಂತಿ, ತಳಮಳಗಳೇ ಎನ್ನುವುದನ್ನು ತಿಳಿ. ಅಶಾಂತಿಯೇ ಧರ್ಮರಕ್ಷಣೆಗೆ ಅವಶ್ಯವಾದ ಆಯುಧ’’ ಮತ್ತೊಂದು ಘೋಷವಾಕ್ಯವನ್ನುಸುರಿದ ಸೀನು.
‘ಸರಿ. ಆಗಿನ ಕಾಲ ಹಾಗಿದ್ದೀತು. ಆದರೆ ಕಲಿಯುಗದಲ್ಲಿ ಶಾಂತಿಯೇ ಮುಖ್ಯ.’
‘ಬೌದ್ಧಧರ್ಮ ಹುಟ್ಟಿದ್ದು ಯಾವಾಗ?’
‘ಬುದ್ಧನಂತೂ ಸುಮಾರು ಎರಡೂವರೆ ಸಾವಿರ ವರ್ಷಗಳ ಹಿಂದೆ ಹುಟ್ಟಿದ್ದು’ ನನ್ನ ಇತಿಹಾಸಜ್ಞಾನವನ್ನು ಪ್ರಚುರಪಡಿಸಿದೆ.
‘ಹುಟ್ಟಿದ್ದು ಬುದ್ಧನಲ್ಲ, ಸಿದ್ಧಾರ್ಥ. ಆದದ್ದು ಬುದ್ಧ. ಸಿದ್ಧಾರ್ಥನು ಯಶೋಧರೆಯ ಪಕ್ಕದಲ್ಲೇ ರಾಜಭೋಗ್ ಮೆಲ್ಲುತ್ತಾ ಕುಳಿತಿದ್ದಿದ್ದರೆ ಬುದ್ಧನಾಗುತ್ತಿರಲಿಲ್ಲ. ಹೊರಗಿನ ರೋಗ, ರುಜಿನ, ಸಾವುಗಳು ಉಂಟುಮಾಡಿದ ತಲ್ಲಣ, ತಳಮಳಗಳೇ ಬುದ್ಧನಾಗಲು ಬೇಕಾದ ಸಿಲಬಸ್ ಆಯಿತು. ಅಶಾಂತಿಯೇ ಶಾಂತಮೂರ್ತಿಗೆ ಸ್ಫೂರ್ತಿ.’’
‘ಅದೂ ಬಹಳ ಹಳೆಯ ಮಾತಾಯಿತು. ಈಗಿನ ವಿಜ್ಞಾನಯುಗದಲ್ಲಿ…’
‘ಅಶಾಂತಿಯೇ ಪ್ರಮುಖವಾದುದು. ‘ಈಗಿರುವಷ್ಟು ಸಾಕು. ಹೊಸದೇನೂ ಕಂಡುಹಿಡಿಯಬೇಕಾಗಿಲ್ಲ’ ಎನ್ನುತ್ತಾ ಸುಮ್ಮನೆ ಕೂತಿದ್ದಿದ್ದರೆ ಲೂಯಿ ಪಾಶ್ಚರ್ ಹುಚ್ಚುನಾಯಿಯ ಕಡಿತಕ್ಕೆ ಲಸಿಕೆಯನ್ನು ಕಂಡುಹಿಡಿಯುತ್ತಿರಲಿಲ್ಲ; ಜೋಸೆಫ್ ಲಿಸ್ಟರ್ ಸ್ಟೆರಿಲೈಸ್ ಮಾಡುವುದರ ಮಹಾತ್ಮೆಯನ್ನು ಕಂಡುಹಿಡಿಯುತ್ತಿರಲಿಲ್ಲ. ‘ಜನ ಸತ್ರೆ ಸಾಯ್ಲಿ; ನಮಗೇನು’ ಎಂಬ ಧೋರಣೆಯಿಂದ ತಾವಾಯಿತು, ತಮ್ಮ ನೆಮ್ಮದಿಯ ಜೀವನವಾಯಿತು ಎಂದು ಮೆಡಿಕಲ್ ಕಂಪನಿಗಳು, ಸರ್ಕಾರ ಸುಮ್ಮನೆ ಕುಳಿತಿದ್ದರೆ ಕೋವ್ಯಾಕ್ಸಿನ್ ದೊರಕುತ್ತಿರಲಿಲ್ಲ. ಸುತ್ತಲಿನ ಅಶಾಂತತೆಯೇ ನೂತನ ಆವಿಷ್ಕಾರಗಳ ಮಾತೃಗರ್ಭ.’
‘ಮೆಡಿಕಲ್ ಫೀಲ್ಡಲ್ಲಿ ನೀನು ಹೇಳಿದ್ದು ಪ್ರಸ್ತುತವೆನಿಸೀತು. ಆದರೆ ದೈನಂದಿನ ಚಟುವಟಿಕೆಗಳಲ್ಲಿ ಈ ಮಾತು ಸಲ್ಲದು.’
‘ಫೇಸ್ಬುಕ್, ಟ್ವಿಟರ್ ಅಕೌಂಟ್ ಇಟ್ಟುಕೊಂಡಿರುವ ಮಂದಿಯನ್ನು ಕೇಳಿನೋಡು; ಅವರು ನನ್ನ ಮಾತನ್ನೇ ಪುಷ್ಟೀಕರಿಸುತ್ತಾರೆ.’
‘ಅದು ಹೇಗೆ?’
‘ಯಾವುದೋ ವಿಷಯವನ್ನೋ, ಚಿತ್ರವನ್ನೋ ಪೋಸ್ಟ್ ಮಾಡಿಬಿಡುತ್ತಾರೆ. ಮಾಡಿದಾಗಷ್ಟೇ ನೆಮ್ಮದಿ. ನಂತರ ಕ್ಷಣಕ್ಷಣಕ್ಕೂ ತಳಮಳವೇ; ‘ಯಾಕೋ ಲೈಕ್ ಬಂದಿಲ್ಲವಲ್ಲ!’ ಇಂದ ಆರಂಭವಾಗಿ ‘ನನ್ನ ಪೋಸ್ಟಿಗೆ ಇಷ್ಟೇ ಲೈಕು. ಅವರದ್ದಕ್ಕೆ ಅಷ್ಟೊಂದು!’ ಎಂಬ ಮತ್ಸರದ ವರೆಗೆ ತಳಮಳಪರ್ವ. ಅಶಾಂತಿಕಾಂಡ, ಅಸಮಾಧಾನಾಧ್ಯಾಯಗಳು ಮುಂದುವರಿಯುತ್ತವೆ. ಮತ್ತೊಂದು ಪೋಸ್ಟ್ ಹಾಕಿ, ಪೈಪೋಟಿದಾರರ ಪೋಸ್ಟಿಗಿಂತ ಹೆಚ್ಚು ಲೈಕು, ಕಾಮೆಂಟುಗಳನ್ನು ಗಿಟ್ಟಿಸಿಕೊಂಡರೆ ಜನ್ಮ ಸಾರ್ಥಕ!’
ಇದಂತೂ ಸ್ವಾನುಭವವೇ ಆದ್ದರಿಂದ ಸಮ್ಮತಿಸಿದೆ. ಆದರೂ ಒಂದು ಸಂದೇಹ ತಲೆಯೆತ್ತಿತ್ತು.
‘ಸೀನು, ಉಗ್ರರೂ ಅಶಾಂತರೇ; ಭಯೋತ್ಪಾದಕರೂ ಅಶಾಂತರೇ. ಅವರ ಅಶಾಂತತೆಯೂ ಸರಿಯೆನ್ನುವೆಯೇನು?’
‘ನಾವೆಲ್ಲರೂ ಅಜ(ಬ್ರಹ್ಮ)ನ ದೃಷ್ಟಿಯಲ್ಲಿ ಸಮ ಎನ್ನುವುದರ ಕಲ್ಪನೆಯೇ ಸಮಾಜ. ನೀನು ಉಲ್ಲೇಖಿಸಿದ ಅಶಾಂತಿ ಮೈನಸ್; ಅದಕ್ಕೆ ಮೈನಸ್ ಆದುದು ನಾನು ಉಲ್ಲೇಖಿಸಿದ ವಿಷಯಗಳು. ಆ ಮೈನಸ್ಸನ್ನು ಈ ಮೈನಸ್ಸಿನಿಂದ ಹೋಗಲಾಡಿಸಿದರೆ ಸಮಾಜಕ್ಕೆ ಪ್ಲಸ್ ಆಗುತ್ತದೆ. ಒಂದು ವಿಧದಲ್ಲಿ ರಕ್ಕಸರ ಭಯೋತ್ಪಾದನೆಯೇ ಸುರನ ವಿವಿಧ ಅವತಾರಗಳಿಗೆ ಪ್ರೇರಣೆ. ‘ಹೊರಗೂ, ಒಳಗೂ; ಹಗಲೂ, ಇರುಳೂ; ನರನಿಂದಲೂ, ಮೃಗದಿಂದಲೂ ಸಾವಿರದಿರಲಿ’ ಎಂದುದರಿAದಲೇ ಹೊಸ್ತಿಲಿನ ಕಾನ್ಸೆಪ್ಟು, ಪುರುಷಾಮೃಗದ ಆವಿಷ್ಕಾರವಾದುದು. ಉಗ್ರತೆ ಕಸ; ಅದನ್ನಡಗಿಸುವ ಕ್ರಿಯೆಯೇ ರಸ.’
‘ನಿನ್ನಲ್ಲಿ ಎಂದೆಂದೂ ಅಶಾಂತಿ ಇದ್ದಿತೇನು?’
‘ಊಹೂಂ. ಸುಮಾರು ಇಪ್ಪತ್ತೈದು ವರ್ಷಗಳ ಕಾಲ ಶಾಂತವಾಗಿದ್ದೆ. ಏನೇನೂ ಸಾಧಿಸಲಾಗಿರಲಿಲ್ಲ.’
‘ಆಮೇಲೆ?’
‘ಮದುವೆಯಾದೆ’ ಎನ್ನುತ್ತಾ ಹೊರಹೊರಟ ಸೀನು.