ಬೆವರಿನ ಬಗ್ಗೆ ಇರುವ ಒಂದು ಸುಂದರ ಹಾಡು ‘‘ಬೆಳವಲದ ಮಡಿಲಲ್ಲಿ ಬೆವರ ಹನಿ ಬಿದ್ದಾಗ.’’ ನೆಲದ ಮೇಲೆ ಬಿದ್ದ ಬೆವರ ಹನಿಯು ವಿಜ್ಞಾನಿಯ ಪ್ರಕಾರ ಆವಿಯಾಗುತ್ತದಷ್ಟೆ. ಆದರೆ ಕವಿಯ ಪ್ರಕಾರ ಅದು ರಾಗಿಯ, ಜ್ವಾಳದ ತೆನೆಯಾಯ್ತದೆ! ಬೆವರು ಹೊರಬಂದರಷ್ಟೇ ಸುಂದರ ಜೀವನ. ಬೆವರದೆಯೇ ಇದ್ದರೆ? ಜೇಮ್ಸ್ ಬಾಂಡ್ನ ‘ಮ್ಯಾನ್ ವಿತ್ ದ ಗೋಲ್ಡನ್ ಗನ್’ ಚಿತ್ರದಲ್ಲಿ ಜಿಲ್ ಮಾಸ್ಟರ್ಸನ್ ಎಂಬ ಸುಂದರಿಯ ಇಡೀ ಮೈಗೆ ಚಿನ್ನದ ಬಣ್ಣವನ್ನು ಹೊಡೆದ ಕಾರಣ. ಚಿನ್ನದ ಕಣಗಳು ಸ್ವೇದಗ್ರಂಥಿಗಳನ್ನು ಮುಚ್ಚಿಹಾಕಿ, ಬೆವರು ಹೊರಬರದೆ, ಜಿಲ್ ‘Skin suffocation’ನಿಂದ ಸಾಯುತ್ತಾಳೆ!
ಸಾಲ್ಟೆಡ್ ಪಿಸ್ತಾ ಗೊತ್ತು, ಸಾಲ್ಟೆಡ್ ಆಲ್ಮಂಡ್ಸೂ ಗೊತ್ತು. ಸಾಲ್ಟೆಡ್ ಪರ್ಸನ್ನು?
ಬಿಸುಪಿನ ಬೆವರಿನ ಸಾಲೇ ನಿನ್ನಯ ಕೊರಳಿನ ಮ್ಯಾಲೆ |
ಬಿಸಿಯುಸಿರೊಂದಿಗೆ ಬಾಯಾರಿಕೆಯಿರಲದೆ ಬೇಸಿಗೆ ವ್ಯಾಳೆ ||
ಎಂದು ಕವಿಗಡಣದ ವರ್ಣನೆಗೆ ತುತ್ತಾಗಬಲ್ಲ ವ್ಯಕ್ತಿಯೇ ಸಾಲ್ಟೆಡ್ ಪರ್ಸನ್ನು. ತ್ವಚೆಯ ಸಪ್ತಪದರಗಳನ್ನು ತೂರಿ ಬಂದು ಮುತ್ತಿನ ಮಣಿಗಳಂತೆ ವ್ಯಕ್ತಿಯ ಕೊರಳನ್ನು ಅಲಂಕರಿಸುವ ಬೆವರು ಬೇಸಿಗೆಯಲ್ಲದ ದಿನಗಳಲ್ಲಿ ವ್ಯಕ್ತಿಯ ಪರಿಶ್ರಮವೆಂಬ ಪೇಮೆಂಟಿಗೆ ದೇಹವು ಕೊಡುವ ರಸೀದಿ!
ಜಗದ ಬಹುತೇಕ ಕವಿಗಳಿಗೆ ಚಳಿಗಾಲವು ವಿರಹೋನ್ಮಾದದ ಕಾಲ. ‘ಚಳಿಚಳಿ ತಾಳೆನು ಈ ಚಳಿಯ’ ಎನ್ನುತ್ತಲೋ ‘ಜಬ್ ಚಲೀ ಠಂಡೀ ಹವಾ’ ಎನ್ನುತ್ತಲೋ ಶೈತ್ಯಕ್ಕೆ ಪದೋಪಚಾರವನ್ನು ಒದಗಿಸುತ್ತಾರೆ. ಮಳೆಗಾಲವಂತೂ ಸರೇಸರೆ. ಗಾಳಿಯಲ್ಲಿನ ತೇವಾಂಶದಿಂದಲೇ ಹೀರೋಯಿನ್ನಳ ವಸ್ತ್ರವನ್ನು ‘ಭೀಗೀ ಭೀಗೀ see’ ಮಾಡಿಬಿಡುವ ರಾಜ್ ಕಪೂರ್ರಂತಹವರಿಗೆ ಮಳೆಗಾಲವು ಬಂತೆಂದರೆ – ಬೀಚಿ ಹೇಳುವಂತೆ ‘ದಿನಾ ಬಾಯ್ಬಡ್ಕೊಳೋವ್ನಿಗೆ ಹೋಳಿಹಬ್ಬ ಬಂದಂತೆ! ಹೀರೋ ಒಬ್ಬನೇ ಓಡಾಡುವಾಗ ಮೋಡಗಳೂ ಕಾಣದಂತಿದ್ದು, ಹೀರೋಯಿನ್ ಮುಂಬಾಗಿಲಿನಿಂದ ಗೇಟಿನವರೆಗೆ ಬರುವಷ್ಟರಲ್ಲಿ ಕುಂಭದ್ರೋಣ ಮಳೆಯನ್ನು ಸುರಿಸಿಬಿಡಬಲ್ಲ ಸಮರ್ಥರು ಚಲನಚಿತ್ರ ನಿರ್ದೇಶಕರು!
ಹಿಂದಿ ಚಲನಚಿತ್ರದವರ ಆಲೋಚನೆಯೂ ಒಂದು ನಮೂನೆಯದೇ – ಶೀತಲ, ತುಂತುರುಭರಿತ ರಾತ್ರಿಯಲ್ಲಿ ವಿರಹಿಗಳ ತನು ಕಬಾಬಿನ ಒಲೆಯಲ್ಲಿ ಬೇಯುವ ಕುಕ್ಕುಟಾವಶೇಷದಂತೆ ಉರಿಯುತ್ತದೆನ್ನಲು ‘‘ಜಲ್ತಾ ಹೈ ಜೀಯ ಮೇರಾ ಭೀಗೀ ಭೀಗೀ ರಾತೋಂಮೇ” ಎಂಬ ಹಾಡೇ ಸಾಕ್ಷಿ. ಕೆಲವೊಮ್ಮೆ ಬಿಗಿ ಉಡುಪು ಧರಿಸುವುದರಿಂದಲೂ ಸೆಕೆ ಆಗುತ್ತದೆ; ಹೆಚ್ಚಿನ ಸೆಕೆಯಿಂದ ಮೈ ಉರಿದಂತಾಗುತ್ತದೆ. ಚಲನಚಿತ್ರಗಳಲ್ಲಿ ಬಿಗಿಯುಡುಪು ಸಾಮಾನ್ಯವಾದ್ದರಿಂದ ಆ ಹಾಡು ಕನ್ನಡದ ರೀಮಿಕ್ಸ್ ಆಗಿರುವ ‘‘ಬಿಗಿ ಬಿಗಿ ಕಪಡೋಂಮೇ” ಇರಬಹುದೆಂಬ ಒರಿಜಿನಲ್ ಅನುಮಾನವೂ ನನಗಿದೆ.

ಚಳಿ-ಮಳೆಗಳನ್ನು ಹಿಡಿದು, ಜಗ್ಗಿ, ಅವುಗಳಿಂದ ಹೊರಹೊಮ್ಮಬಹುದಾದ ಪ್ರತಿ ಪದಪುಂಜವನ್ನೂ ಹೆಕ್ಕೀ ಹೆಕ್ಕೀ ಅನೇಕ ಭಾಷಾ ಚಲನಚಿತ್ರಗೀತೆಗಳಿಗಾಗಿ ಅನೇಕ ಕವಿಪುಂಜಗಳು ಹಾಡುಗಳನ್ನು ಬರೆದುಬಿಟ್ಟಿವೆ. ಆದರೆ ಬೇಸಿಗೆಯ ಬಗ್ಗೆ? ಕೈಗೆ ಮಾವಿನ ಹಣ್ಣನ್ನಿತ್ತು, ಕಿವಿಗೆ ಕೋಗಿಲೆಯ ಹಾಡುಗಳನ್ನು ಇಂಪಿಸಿ,
ತೃಷೆಗೆ ಕಲ್ಲಂಗಡಿ, ಕರಬೂಜ, ತಾಟಿನಿಂಗುಗಳನ್ನು ಒದಗಿಸಿ, ದಂಡೆಜೀವಿಗಳಿಗೆ ವಸ್ತ್ರಗಳಿಂದ ಗರಿಷ್ಠ ಸ್ವಾತಂತ್ರ್ಯ ಪಡೆಯಲು ಅನುಕೂಲಕರ ವಾತಾವರಣವನ್ನು ಒದಗಿಸುವ ಬೇಸಿಗೆಯ ಬಗ್ಗೆ ಬರೆದ ಕವಿಗಳು ಅತಿ ವಿರಳ.
ಬೆವರಿನ ಬಗ್ಗೆ ನನಗೆ ಪ್ರಿಯವಾದ ಹಾಡುಗಳ ಪೈಕಿ ‘‘ಖೂನ್ ಪಸೀನಾ ಕೀ ಜೋ ಮಿಲೇಗಾ ತೋ ಖಾಯೇಂಗೇ; ನಹೀ ತೋ ಯಾರೋ ಹಮ್ ಭೂಖೇ ಹೀ ಸೋ ಜಾಯೇಂಗೇ” ಎಂಬ ಕಿಶೋರ್ಕುಮಾರನ ಹಾಡು. “ನಮ್ಮ ಬೆವರಿನಿಂದ ಬಂದ ದುಡಿಮೆಯಷ್ಟೇ ಸಾಕೆಮಗೆ. ಇಲ್ಲವಾದರೆ ಉಪವಾಸವಿದ್ದೇವು” ಎಂಬುದು ನಮ್ಮ ಹಳ್ಳಿಗರು ಶತಮಾನಗಳಿಂದ ಬೆಳೆಸಿಕೊಂಡು ಬಂದಿರುವ ಗುಣ. ಇತ್ತೀಚೆಗೆ ರಾಜಕಾರಣದಲ್ಲಿ ‘ಬಿಟ್ಟಿದೇವ’ರು ಹೆಚ್ಚಾಗಿ ಆತ್ಮಾಭಿಮಾನವು ಹಿಂದಾಗಿ ಭಿಕ್ಷಾಪಾತ್ರೆಯು ಮುಂದಾಗಿದೆಯಷ್ಟೆ.
ಬೆವರಿನ ಬಗ್ಗೆ ಇರುವ ಮತ್ತೊಂದು ಸುಂದರ ಹಾಡು ‘‘ಬೆಳವಲದ ಮಡಿಲಲ್ಲಿ ಬೆವರ ಹನಿ ಬಿದ್ದಾಗ.’’ ನೆಲದ ಮೇಲೆ ಬಿದ್ದ ಬೆವರ ಹನಿಯು ವಿಜ್ಞಾನಿಯ ಪ್ರಕಾರ ಆವಿಯಾಗುತ್ತದಷ್ಟೆ. ಆದರೆ ಕವಿಯ ಪ್ರಕಾರ ಅದು ರಾಗಿಯ, ಜ್ವಾಳದ ತೆನೆಯಾಯ್ತದೆ! ಬೆವರು ಹೊರಬಂದರಷ್ಟೇ ಸುಂದರ ಜೀವನ. ಬೆವರದೆಯೇ ಇದ್ದರೆ? ಜೇಮ್ಸ್ ಬಾಂಡ್ನ ‘ಮ್ಯಾನ್ ವಿತ್ ದ ಗೋಲ್ಡನ್ ಗನ್’ ಚಿತ್ರದಲ್ಲಿ ಜಿಲ್ ಮಾಸ್ಟರ್ಸನ್ ಎಂಬ ಸುಂದರಿಯ ಇಡೀ ಮೈಗೆ ಚಿನ್ನದ ಬಣ್ಣವನ್ನು ಹೊಡೆದ ಕಾರಣ. ಚಿನ್ನದ ಕಣಗಳು ಸ್ವೇದಗ್ರಂಥಿಗಳನ್ನು ಮುಚ್ಚಿಹಾಕಿ, ಬೆವರು ಹೊರಬರದೆ, ಜಿಲ್ ‘Skin suffocation’ನಿಂದ ಸಾಯುತ್ತಾಳೆ!
ಬೆವರು ಒಂದು ವಿಧದಲ್ಲಿ ಸಂಬಳವನ್ನು ಹೋಲುವುದೆಂಬುದೂ ಸತ್ಯವೇ. ಇಡೀ ತಿಂಗಳು ದುಡಿದು, ಒಂದನೆಯ ತಾರೀಕಿನಂದು ಸಂಬಳ ಪಡೆದರೆ, ಎರಡನೆಯ ತಾರೀಕಿಗೆ ಅದು ಖಾಲಿ. ಅಂತೆಯೇ ಬೆವರೂ ಸಹ. ಹೆಜ್ಜೆಯ ಮೇಲೆ ಹೆಜ್ಜೆಯನಿಕ್ಕುತ ಬೆಟ್ಟವನ್ನೇರಿದಾಗಷ್ಟೇ ಹೊರಹೊಮ್ಮುವ ಬೆವರು, ಶಿಖರದಲ್ಲಿ ರ್ರೋ ಎಂದು ಬೀಸುವ ಗಾಳಿಗೆ ಕೆಲವೇ ಕ್ಷಣಗಳಲ್ಲಿ ಮಾಯವಾಗುತ್ತದೆ. ಜಿಮ್ಗಳಲ್ಲಿ ಪುಷಪ್, ಬೆಂಚ್ ಪ್ರೆಸ್, ಝಂಬಾ ಇತ್ಯಾದಿಗಳ ಮೂಲಕ ದೇಹವನ್ನು ದಂಡಿಸಿದರೆ ಇಣುಕುವ ಬೆವರು ಕೆಲವೇ ಕ್ಷಣಗಳಲ್ಲಿ ಮಾಯ. ಜಿಮ್ಗೂ, ಗದ್ದೆಗೂ ಎಂತಹ ವ್ಯತ್ಯಾಸ! ಗದ್ದೆಯಲ್ಲಿ ಸುರಿದ ಬೆವರಿನಿಂದ ಹಣ ಗಳಿಕೆ; ಜಿಮ್ನಲ್ಲಿ ಸುರಿದ ಬೆವರಿನಿಂದ ಹಣ ಹೊರಕ್ಕೆ!
ತಾಪತ್ರಯಗಳು ಎಲ್ಲೆಲ್ಲಿರುತ್ತವೆಯೋ ಅಲ್ಲೆಲ್ಲ ಬೆವರು ಇರುತ್ತದೆ. ಆ ಮೂರು ತಾಪಗಳೆಂದರೆ – ವಿರಹತಾಪ, ಶ್ರಮತಾಪ, ಭಯತಾಪ. ವಿರಹತಾಪದ ಬಗ್ಗೆ ಎಲ್ಲೋ ಓದಿ ಕೆಲವು ಸಾಲುಗಳು ನೆನಪಾಗುತ್ತಿವೆ. ವೈದ್ಯನೊಬ್ಬನು ತನ್ನ ಮನೆಗೆ ಬಂದಾಗ ತಡರಾತ್ರಿಯಾಗಿತ್ತು. ಆ ಹೊತ್ತಿನಲ್ಲಿ ರಿಂಗಣಿಸಿದ ಫೋನನ್ನು ಕೈಗೆತ್ತಿಕೊಂಡರೆ ಅತ್ತಣ ಧ್ವನಿಯು ‘‘ನನಗೆ ಉಸಿರಾಡುವುದೇ ಕಷ್ಟವಾಗುತ್ತಿದೆ. ಮೈಯೆಲ್ಲ ಬಿಸಿಯೇರಿದೆ. ತುಟಿಗಳು ಒಣಗಿವೆ. ಕಂಠದಲ್ಲಿ ತ್ರಾಣವೇ ಇಲ್ಲವೆನಿಸುತ್ತಿದೆ. ಓಹ್…’’ ಎಂದೆಲ್ಲ ನುಡಿಯುತ್ತಿತ್ತು. ವೈದ್ಯನು ‘‘ಮಿಸ್ಟರ್, ಟೇಕ್ ಒನ್ ಪ್ಯಾರಾಸಿಟಮಾಲ್, ಡ್ರಿಂಕ್ ಹಾಟ್ ವಾಟರ್…’’ ಎಂದು ಮುಂದುವರಿಸುತ್ತಿದ್ದಂತೆಯೆ ಅವನ ಮಾತನ್ನು ಮಧ್ಯದಲ್ಲಿಯೇ ತುಂಡರಿಸಿದ ವೈದ್ಯನ ಮಗಳು ‘‘ಅಪ್ಪಾ, ಎಕ್ಸ್ಟೆನ್ಷನ್ನಿನಲ್ಲಿ ನಾನಿದ್ದೇನೆ. ಅವನು ನನ್ನ ಪ್ರೇಮಿ. ಅವನದು ಜ್ವರದ ತಾಪವಲ್ಲ, ಲವ್ ಸಿಕ್ನೆಸ್” ಎಂದಳು. ಸರಿಸುಮಾರು ಇದೇ ವಿಧದ ಘಟನೆಯು ರಾಶಿ ಎಂದೇ ಹೆಸರಾದ ಎಂ. ಶಿವರಾಂರ ಕ್ಲಿನಿಕ್ಕಿನಲ್ಲಿಯೂ ನಡೆಯಿತು. ಯುವಕನೊಬ್ಬನು ‘‘ಡಾಕ್ಟ್ರೇ, ನನ್ನ ಹಾರ್ಟ್ ವೀಕ್ ಅನ್ನಿಸುತ್ತಿದೆ. ಡವಡವ ಹೊಡೆದುಕೊಳ್ಳುತ್ತೆ” ಎಂದ. ಕೂಲಂಕಷವಾಗಿ ಪರಿಶೀಲಿಸಿದ ರಾಶಿಯವರು “Young Man, yours is not heart trouble, it is ‘sweet-heart’ trouble” ಎಂದು ನಗುತ್ತ ಸಾಗಹಾಕಿದರು.
ವಿರಹದ ನಿಟ್ಟುಸಿರು, ಬೆವರುಗಳಿಗೆ ಗೋಪಿಕಾಸ್ತ್ರೀಯರ ಪ್ರಸಂಗಗಳೇ ತವರು. ಭೋಜರಾಜನ ಸಮಕಾಲೀನ ಅರಸನಾದ ಹರಿಹರರಾಜನ ಆಸ್ಥಾನದಲ್ಲಿ ಲೋಲಂಬರಾಜನೆಂಬ ಕವಿಯಿದ್ದನು. ಆತನು ಬರೆದ ಹರಿವಿಲಾಸ ಎಂಬ ಕಾವ್ಯದಲ್ಲಿ ಕೃಷ್ಣವಿರಹಿಗಳ ನುಡಿಗಳು ಹೀಗಿವೆ:
ಅಮೃತಂ ಗರಲಂ ವದಂತಿ ಯತ್ ಭಿಷಜಃ
ತನ್ಮತಂ ಉತ್ತಮಂ ಸಖಿ |
ವಿತನುಃ ಅತ್ಯಮೃತದ್ಯುತಿರ್ಯುತಃ ಪರಿತಾಪಾನ್
ಇತಿ ಕಾಚಿತ್ ಅಬ್ರವೀತ್ ||
[ಎಲೆ ಗೆಳತಿ, ಅಮೃತ ಕಿರಣನಾದ ಈ ಚಂದ್ರನು ಈಗ ನಮಗೆಲ್ಲ ಬಹಳ ತಾಪವನ್ನು ಉಂಟುಮಾಡುತ್ತಿರುವನು. ಆದ್ದರಿಂದ ಅಮೃತವೂ ವಿಷವೆಂದು ಹೇಳುವ ವೈದ್ಯರ ಮಾತು ನಿಜವಾದುದು.] ಅದಕ್ಕುತ್ತರವಾಗಿ ಮತ್ತೊಬ್ಬಳು,
ಪ್ರಥಮಾಕ್ಷರವರ್ಜಿತಾನಿ ತಾಸಾಂ ಭವನಾನಿ
ವ್ರಜಸುಭ್ರುವಾಮಭೂವನ್ |
ವಿಷಯಪ್ರಖರೋ ಯಕಾರಶೂನ್ಯೋ ಕದಾಚಿತ್ ಚ
ರತಿರ್ವಿನಾ ವಿನಾ ಆಸೀತ್ ||
ಎಂದಳು. [ಕೃಷ್ಣನು ಗೋಕುಲವನ್ನು ಬಿಟ್ಟು ಹೊರಟಮೇಲೆ ಗೋಪಿಕೆಯರ ಭವನಗಳು ಮೊದಲ ಅಕ್ಷರವಿಲ್ಲವಾದವು (ವನಗಳಂತೆ ಆದವು). ವಿಷಯಗಳೆಲ್ಲವೂ ಯಕಾರವನ್ನು ಕಳೆದುಕೊಂಡವು (ವಿಷವೇ ಆದವು). ರತಿಯು ಸಹ ‘ವಿ’ಕಾರವನ್ನು ಹೊಂದಿ ವಿರತಿಯೇ ಉಂಟಾಯಿತು.]
‘ವಿರಹ ನೂರು ನೂರು ತರಹ; ವಿರಹ ಪ್ರೇಮಕಾವ್ಯದ ಕಹಿಬರಹ’ ಎಂದು ಎಡಕಲ್ಲುಗುಡ್ಡದ ಮೇಲೆ ನಿಂತ ತಾರೆ ಜಯಂತಿ ಹಾಡಿದ್ದನ್ನು ಪುಟ್ಟಣ್ಣ ಕಣಗಾಲರ ಚಿತ್ರಗಳನ್ನು ಮೆಚ್ಚಿದವರಾರೂ ಮರೆತಿರಲಾರರು. ‘‘ಭಾವಾಂತರಂಗದಲ್ಲಿ ಅಲ್ಲೋಲಕಲ್ಲೋಲ! ಪ್ರೇಮಾಂತರಂಗದಲ್ಲಿ ರಸಹೀನ ಕೋಲಾಹಲ’ ಎಂದು ವಿರಹದ ಉತ್ಕಂಠತೆಯಲ್ಲಿ ಇಂದಿನ ನಟೀಮಣಿ ಹಾಡಿದರೆ, ಅಂದಿನ ಗೋಪಿಕಾಸ್ತ್ರೀಯರ ವಿರಹದ ದಳ್ಳುರಿ ಇದ್ದ ಪರಿಯನ್ನು ಕಾಣಿರಿ:
ನ ಶೈವಲಂ ಶೈವಲಿನೀ ಕಿಂಚಿತ್ ನ
ಪುಷ್ಕರಂ ಪುಷ್ಕರಿಣೀಷು ತದ್ವತ್ |
ನ ವಾ ಮೃಣಾಲಾನಿ ಮೃಣಾಲಿನೀಷು
ಸ್ಮರ ಪ್ರತಪ್ತ ಪ್ರಮದೋಪಚಾರಾತ್ ||
[ವಿರಹದಿಂದ ಬೇಯುತ್ತಿರುವ ಈ ಸುಂದರಿಯರ ಶೈತ್ಯೋಪಚಾರಕ್ಕಾಗಿ ತಂದು ತಂದು ನದಿಗಳಲ್ಲಿದ್ದ ಶೈವಲಗಳೆಲ್ಲ ಮುಗಿದವು. ಸರೋವರದಲ್ಲಿದ್ದ ಕಮಲಗಳೆಲ್ಲವನ್ನು ತಂದರೂ ಸಾಲದಾಯಿತು. ಕಮಲದ ಸಸ್ಯಗಳು ಸಹ ಬೇರುರಹಿತವಾದವು.]
ವಿರಹದ ತಾಪದ ವಿಷಯವು ಗಗನಸದೃಶವೇ ಆದ್ದರಿಂದ ಅದನ್ನು ಇಲ್ಲಿಗೇ ತುಂಡರಿಸಿ ಶ್ರಮತಾಪದತ್ತ ಗಮನ ಹರಿಸೋಣ. ಇದರಲ್ಲಿಯೂ ಎರಡು ವಿಧಗಳಿವೆ – ಅತಿಪರಿಶ್ರಮತಾಪ ಮತ್ತು ಪ್ರತಿಫಲರಿಕ್ತತಾ ತಾಪ. ಅತಿಪರಿಶ್ರಮತಾಪಕ್ಕೆ ಇಂದಿನ ಸಾಫ್ಟ್ವೇರ್ ಮಂದಿಯೇ ಒಳ್ಳೆಯ ಉದಾಹರಣೆ. ಗಡಿಯಾರವನ್ನು ಬಿಸುಟು, ಕ್ಯಾಲೆಂಡರನ್ನೇ ಸಮಯಸೂಚಕವಾಗಿ ಬಳಸುವ ಇವರನ್ನು ‘how is life?’ ಎಂದು ಕೇಳಿದರೆ,
ಟೀಮ್ ಲೀಡು ಲೀಡಿಸುವ ಲೋಡ್ ಲೋಡು ಜಾಬುಗಳ
ಫ್ರಂ ಡಾನ್ ಟು ಡಸ್ಕ್ ಡಸ್ಕ್ ಟು ಡಾನ್ ನಮ್ಮ ವರ್ಕು
ಫ್ರೇಂ ವರ್ಕು ಇಲ್ಲದೆಯೆ ಡಾಂಕಿ ವರ್ಕ್ ಮಾಡುವೆವು
ಫ್ಯಾಮಿಲಿಯ ಲೈಫೆಲ್ಲ ಮೀರಾಜಾಯ್ತೆಮಗಿನ್ನು ||
ಎಂದುಲಿದಾರು. ಹಿಂದೆ ಒಂದಾನೊಂದು ಕಾಲದಲ್ಲಿ ‘ಜೀತ’ ಎನ್ನುತ್ತಿದ್ದುದನ್ನು ಈಗ ‘ಕಾರ್ಪೊರೇಟ್ ಕಲ್ಚರ್’ ಎಂದು ಕರೆಯುತ್ತಿದ್ದಾರೆಂಬ ಹಲವರ ಹಲುಬುವಿಕೆಯಲ್ಲಿ ತಥ್ಯವಿದ್ದೀತು.
ಪ್ರತಿಫಲರಿಕ್ತತಾ ತಾಪಕ್ಕೆ ಮೊದಲಿನಿಂದಲೂ ಒಳಗಾಗಿರುವುದು ಹೌಸ್ ವೈಫೇ. ‘ಹೌ ಈಸ್ ವೈಫ್’ ಎಂದು ಕೇಳುವುದೂ ವಿರಳವಾದ ಕಾಲದಿಂದ ಇಂದಿನವರೆಗೆ housewife is the most neglected and underpaid person in the universe and there cannot be anything worse. ಆದರೂ, ರನ್ನಿಂಗ್ ರೇಸ್ನಲ್ಲಿ close second ಎಂದು ಹೇಳುವಂತೆ, ‘ಫ್ರೆಷರ್ಸ್’ ಎಂಬ ಹಣೆಪಟ್ಟಿಯುಳ್ಳ ಪದವೀಧರರೂ, ‘ಆರ್ಟಿಕಲ್ಸ್’ ಎಂಬ ಹಣೆಪಟ್ಟಿ ಹೊತ್ತ ಮರಿಸಿ.ಎ.ಗಳೂ ತಮ್ಮ ವೇತನಗಳ ಪರ್ಸನ್ನು ನೋಡುತ್ತ ‘ಪೂರ್ಣಾಗತಃ ಪೂರ್ಣಮಿದಂ’ ಎಂದು ಹೇಳುವ ಅವಕಾಶವೇ ಮೂಡುವುದಿಲ್ಲ. ಈ ತಾಪವನ್ನು ತಿಳಿದವರು internal combustion ಎಂದು ಕರೆಯುತ್ತಾರೆ.
ಶ್ರಮತಾಪವನ್ನು ಇಲ್ಲಿಗೆ ಮೊಟಕುಗೊಳಿಸಿ ಭಯತಾಪದತ್ತ ಸಾಗಿದರೆ ನಮ್ಮ ಕಣ್ಣಿಗೆ ಮೊದಲು ಬೀಳುವುದು ವೃತ್ರಾಸುರನ ಹತ್ಯೆಯ ಬಳಿಕ ಸಾಗರದಲ್ಲಿ ಅಡಗಿ ಕುಳಿತ ದಾನವರು. ಅಸುರರು ಸುರರಿಗೆ ಹೆದರಿ ಓಡಿದ ಕೆಲವೇ ಪ್ರಸಂಗಗಳಲ್ಲಿ ಇದೂ ಒಂದು. ಅಡಗಿದವರು ಬೆವೆತೇ ಸಮುದ್ರದ ನೀರು ಉಪ್ಪಾಯಿತೋ ಏನೋ. ಅನಂತರ ಬೆವರಿದವರ ಪೈಕಿ ಪ್ರಮುಖನಾದವನು ಸುಗ್ರೀವ. ವಾಲಿಯನ್ನು ರಕ್ಕಸನು ಸಾಯಿಸಿರಬಹುದೆಂದೂ, ರಕ್ಕಸನು ಹೊರಬಂದರೆ ತನಗೆ ಕುತ್ತೆಂದೂ ಮೊದಲು ಹೆದರಿದ. ಅನಂತರ ವಾಲಿ ಹೊರಬಂದಾಗ ನಡುಗಿದ. ಬೀದಿಯಲ್ಲಿ ರಾಮಲಕ್ಷ್ಮಣರು ಬಂದಾಗ ಶತ್ರುವಿನ ಕಡೆಯವರೇ ಇರಬಹುದೆಂದು ಹೆದರಿದ. ವಾಲಿಯ ವಧೆಯ ನಂತರ ಸತಿಯರೊಡನೆ ಚಕ್ಕಂದದಲ್ಲಿ ತೊಡಗಿ ರಾಮನಿಗಿತ್ತ ವಚನವನ್ನು ಮರೆತು, ಲಕ್ಷ್ಮಣನು ಗರ್ಜಿಸಿದಾಗ ಬೆವರಿದ. ಪ್ರಾಯಶಃ ರಾಮಾಯಣದಲ್ಲಿ ಅತಿ ಬೆವರಿದ ವ್ಯಕ್ತಿಯೆಂದರೆ ಸುಗ್ರೀವನೇ ಎನಿಸುತ್ತದೆ. ದೇವತೆಗಳು ಬೆವರುವುದಿಲ್ಲವೆಂಬ ಮಾತಿದೆ. ಅಷ್ಟಾಗಿಯೂ ಬೆವರುವುದೇನಾದರೂ ಇದ್ದರೆ, ದೇವತೆಗಳಲ್ಲಿ ಅತಿ ಬೆವರಿದವನು ಇಂದ್ರನೇ ಇದ್ದಾನು. ವರ ಕೊಟ್ಟು, ಹೆಣ್ಣಿನ ಹಿಂದೆ ಬಿದ್ದು, ರಕ್ಕಸರು ಬಂದರೆಂದು, ಮುನಿಯ ಶಾಪ ನೀಡುವನೆಂದು, ಮುಂತಾದ ಕಾರಣಗಳಿಗೆ ಇಂದ್ರನು ಓಡಿದ್ದೂ ಓಡಿದ್ದೇ.
ಈಗಿನ ಕಾಲದಲ್ಲಿ ಭಯತಾಪಕ್ಕೆ ಪರೀಕ್ಷೆಗಳು, ಸಂದರ್ಶನಗಳು, ಮಾರ್ನಿಂಗ್ ವಾಕಿಗೆ ಹೋದಾಗ ಅಟ್ಟಿಸಿಕೊಂಡು ಬರುವ ನಾಯಿಗಳು, ಹುಚ್ಚುನಾಯಿಗೆ ಚೇಳು ಕಚ್ಚಿಸಿ ಹೆಂಡ ಕುಡಿಸಿದಾಗಿನ ಸ್ಥಿತಿಯನ್ನು ಹೋಲುವ ಕ್ಯಾಬ್ ಅಂಡ್ ಬೈಕ್ ಡ್ರೈವರ್ಗಳು ಮುಂತಾದ ಕಾರಣಗಳಿವೆ. ಇವೆಲ್ಲವೂ ಬೆವರುಸಾಲೆಗಳೇ. ಇವೆಲ್ಲದರ ಬಗ್ಗೆ ಇನ್ನು ಮುಂದಾದರೂ ಕವಿಗಳು ಕವನಗಳನ್ನು ಬರೆದರೆ ಸರ್ವಋತು ಸಮಾನತೆಯನ್ನು ಸಾಧಿಸಿದಂತಾಗುತ್ತದೆ.
ಬೆವರಿನ ಬಗ್ಗೆ ಕವನಗಳನ್ನು ಬರೆಯಲು ಸ್ಪಾನ್ಸರ್ ಕೂಡ ಸಿಗುವ ಸಾಧ್ಯತೆಗಳಿವೆ. ಸ್ವೆಟ್ಪ್ಯಾಡ್, ಡಿಯೋಡೊರೆಂಟ್, ಸೆಂಟ್, ಸೋಪ್ ಮುಂತಾದ ಉತ್ಪನ್ನಗಳನ್ನು ತಯಾರಿಸುವ ‘ಸ್ವೇದರಿಪು’ಗಳು ಇಂತಹ ಕವನಗಳನ್ನು ಪ್ರಕಟಿಸಲು ಮುಂದೆ ಬಂದಾರು. ಬೆವರನ್ನು ಇದ್ದಂತೆಯೇ ಬಳಸಲು ಅನಸ್ತೇಶಿಯಾದ ಬದಲು ಯೂಸ್ಡ್ ಸಾಕ್ಸನ್ನು ಬಳಸುವ ನರ್ಸಿಂಗ್ ಹೋಮುಗಳೂ ಮೈದಾಳಿಯಾವು. ಬೆವರುತ್ಪಾದನೆಗೆ ನೈಸರ್ಗಿಕ ಕಾರಣನಾದ ಸೂರ್ಯನ ಬಗ್ಗೆ ಅನೇಕ ‘ಸ್ವೆಟ್ ಥಿಯರಿ’ಗಳು ಬೆಳಕನ್ನು ಕಂಡಾವು. ಬೇಸಿಗೆಯನ್ನು ವರ್ಣಿಸುವ
ರಾರಾಜಿಸುತ್ತಿಹುದು ಬೇಸಿಗೆ ||
ಹುದು ಬೇಸಿಗೆ |
ತ್ತಿಹುದು ಬೇಸಿಗೆ |
ಜಿಸುತ್ತಿಹುದು ಬೇಸಿಗೆ |
………………………
ರಾರಾಜಿ… ಸುತ್ತಿಹುದು ಬೇಸಿಗೆ ||
ಎಂಬ ಕೈಲಾಸಂ ವಿರಚಿತ ಪದ್ಯವೇ ‘summer anthem’ ಆದೀತು, ಶ್ರೀಕೃಷ್ಣನನ್ನು ಕೀರ್ತಿಸಲು ‘ರಾಧಾ ಸಮೇತ ಕೃಷ್ಣ’ ಇರುವಂತೆಯೇ ಬೇಸಿಗೆಯನ್ನು ವರ್ಣಿಸಲು ‘ಸ್ವೇದ ಸಮೇತ ತೃಷ್ಣಾ’ ಎಂಬ ಕೀರ್ತನೆಯನ್ನು ಯಾರಾದರೂ ರಚಿಸಿಯಾರು. ಇವೆಲ್ಲವೂ ಶೀಘ್ರವಾಗಲಿ. ಸೂರ್ಯನಾರಾಯಣಂ ಗೆಲ್ಗೆ; ಉಷ್ಣಕಾಲಂ ಬಾಳ್ಗೆ; ಸ್ವೇದೋತ್ಪಾದನಂ ಏಳ್ಗೆ!