ಅತ್ತೆ: ಸಂಜೂ, ನೀನು ನಿನ್ನ ಗಂಡ ಇಬ್ರೂ ಕೆಲಸಕ್ಕೆ ಹೋಗ್ತೀನಿ ಅಂತಿದೀರ; ಮಗೂನ ನನ್ನ ಹತ್ರ ಬಿಟ್ಹೋಗಿ.
ಸೊಸೆ: ಸ್ಸೋ ಸಾರಿ ಅತ್ತೆ. ಆ ತಪ್ಪನ್ನ ಮಾತ್ರ ನಾನು ಯಾವತ್ತೂ ಮಾಡಲ್ಲ.
ಅತ್ತೆ: ಯಾಕೆ?
ಸೊಸೆ: ನಿಮ್ಮ ಮಗನ್ನ ನೀವು ಸಾಕಿರೋ ಮುದ್ದು ನೋಡಿಯೂ ಯಾವ ಧೈರ್ಯದ ಮೇಲೆ ಬಿಟ್ಹೋಗ್ಲಿ ಅತ್ತೇ…
ಅತ್ತೆ: ಏನೇ, ಏನಾಗಿದಾನೆ ನನ್ಮಗಾ… ರಾಜ, ರಾಜ ಇದ್ಹಾಗಿದಾನೆ.
ಸೊಸೆ: ಹೌದ್ಹೌದು. ನಾಟಕದ ಕಂಪ್ನೀ ರಾಜನ ಪಾರ್ಟು ಇದ್ಹಾಗಿದಾರೆ. ಹೇಳ್ಕೊಟ್ಟ ಡೈಲಾಗ್ ಒಪ್ಪಿಸೋದೊಂದೇ ಗೊತ್ತೇ ವಿನಾ ಇನ್ನೇನೂ ಕೇಳ್ಬೇಡಿ.
ಅತ್ತೆ: ಹೇಳ್ಕೊಟ್ಟಿದ್ದೀಯಲ್ಲಾ ಡೈಲಾಗ್ಗಳನ್ನ…. ನಿನ್ನ ಮಗನೇ ನನ್ನ ಮಗನಿಗೆ ನಿಮ್ಮಮ್ಮ ಅಂದ್ರೆ ಗುಮ್ಮ ಅಂತ ಹೇಳಿದ್ದನ್ನ ನಾನು ಕೇಳಿಸ್ಕೊಂಡಿಲ್ಲ ಅಂದ್ಕೊಂಡೆಯೇನು?
ಸೊಸೆ: ಅಯ್ಯೋ, ಮಕ್ಕಳಿಗೆ ಏನು ಗೊತ್ತಾಗತ್ತೆ ಬಿಡಿ. ಅವರಿವರು ಹೇಳಿದ್ದನ್ನೇ ಅವೂ ಹೇಳತ್ವೆ ಅಷ್ಟೆ.
ಅತ್ತೆ: ಅವರಿವರು ಹೇಳೋದೇ? ಯಾರಿದ್ದಾರೆ ಇಲ್ಲಿ ಆ ತರಹ ಹೇಳೋವ್ರು?
ಸೊಸೆ: ನಿಮ್ಮ ಎದುರಿಗೆ ನಿಂತು ಹೇಳೋವ್ರು ಇಲ್ಲ ಬಿಡಿ… ಆದರೆ ಹಿಂದೆ…
ಅತ್ತೆ: ಹಿಂದೆ ಯಾರು ಆಡ್ಕೊಂಡಾರು?
ಸೊಸೆ: ನಾನಂತೂ ನಿಮ್ಮ ಯಜಮಾನರೇ ಆ ತರಹ ಹೇಳಿದರು ಅನ್ನೋ ಸೀಕ್ರೆಟ್ಟನ್ನ ಯಾವತ್ತೂ, ಯಾರಿಗೂ ಹೇಳೋದಿಲ್ಲಪ್ಪ; ನಿಮಗೂ ಹೇಳಲ್ಲ ಅಂತ ಮಾವಯ್ಯನಿಗೆ ಮಾತು ಕೊಟ್ಟಿದೀನಿ.
ಅತ್ತೆ: ಅಹಹಹಹ: ಅದೇನೂಂತ ಕಟ್ಕೊಂಡ್ನೋ ಸುಧೀರ ನಿನ್ನನ್ನ. ನಾನು ಇವತ್ತಿನಿಂದ ಸೀರಿಯಲ್ಗಳನ್ನು ಗಮನವಿಟ್ಟು ನೋಡಿ, ಅಲ್ಲಿನ ಅತ್ತೆಯರಿಂದ ಉಪಾಯ ತಿಳ್ಕೊಂಡು, ಸ್ಕೆಚ್ ಹಾಕಿ, ನಿನ್ನ, ಸುಧೀರನ ಮದುವೆ ಕ್ಯಾನ್ಸಲ್ ಮಾಡಿಸಲಿಲ್ಲ, ನನ್ನ ಹೆಸರು ಸುಭಾಷಿಣೀನೇ ಅಲ್ಲ.
ಸೊಸೆ: (ಪರ್ಸಿನಿಂದ ಇನ್ನೂರು ರೂಪಾಯಿ ತೆಗೆದು) ತೊಗೊಳಿ ಅತ್ತೆ ಇನ್ನೂರು ರೂಪಾಯಿ.
ಅತ್ತೆ: ಇನ್ನೂರು? ನನಗೆ ಯಾಕೆ?
ಸೊಸೆ: ಹೆಸರು ಚೇಂಜ್ ಮಾಡಿಸ್ಕೋತೀನಿ ಅಂದ್ರಲ್ಲಾ, ಅದಕ್ಕೆ ಅಫಿಡವಿಟ್ ಮಾಡ್ಸಕ್ಕೆ. ಅತ್ತೆ, ಸಾಮಾನ್ಯವಾಗಿ ಎಂತಹ ಜನರು ಹೆಸರು ಚೇಂಜ್ ಮಾಡಿಕೊಳ್ಳೋದು ಗೊತ್ತಾ?
ಅತ್ತೆ: ನೀನಿದ್ದೀಯಲ್ಲ ಊರು ಸುದ್ದೀಯೆಲ್ಲಾ ತಿಳಿದಿರೋವ್ಳು, ನೀನೇ ಹೇಳು.
ಸೊಸೆ: ಯಾರು ಅವರಪ್ಪ ಅಮ್ಮ ಇಟ್ಟ ಹೆಸರನ್ನ ಹಾಳು ಮಾಡ್ಕೊಂಡಿರ್ತಾರೋ ಅವರೇ ಹೆಸರು ಚೇಂಜ್ ಮಾಡ್ಕೊಳೋದು. ಹಹ್ಹಹ್ಹಹ್ಹ
ಅತ್ತೆ: ನಿನ್ನಾ… ನಿನ್ನಾ… ನಿನ್ನ ಮದುವೆ ಮುರಿಸಿ, ಮಗನಿಗೆ ಒಂದು ಒಳ್ಳೇ ಹುಡುಗೀನ ತಂದು ಮದುವೆ ಮಾಡಿಸ್ತೀನಿ ನೋಡ್ತಿರು.
ಸೊಸೆ: ಆಹಾ! ನಿಮ್ಮಂತಹ ಅತ್ತೇನ ಪಡೀಬೇಕಾದ್ರೆ ಪಡ್ಕೊಂಡು ಬಂದಿರಬೇಕು. ಮದುವೆಗೆ ಮುಂಚೆ ನಿಮ್ಮ ಅಮೃತದಂತಹ ಮಾತುಗಳಿಗೆ ಮರುಳಾಗಿಬಿಟ್ಟಿದ್ದೆ. ಆಮೇಲೇ ಗೊತ್ತಾಗಿದ್ದು…
ಅತ್ತೆ: ಏನು ಗೊತ್ತಾಯ್ತು?
ಸೊಸೆ: ನಿಮ್ಮ ಮಾತು ಅಮೃತ; ಫುಲ್ ತಲೆನೋವು ಬರ್ಸೋ ಅಮೃತಾಂಜನ ಅಂತ.
ಅತ್ತೆ: ಛೆ! ಈ ಮಾತನ್ನೂ ಕೇಳಿಯೂ ನಾನು ಈ ಮನೇಲಿ ಇರಬೇಕಾ? ಈಗಲೇ ಹೊರಟೆ ಕಾಶಿಗೆ.
ಸೊಸೆ: ಇರಿ ಅತ್ತೆ. ಮಾವನಿಗೆ ಹೇಳಿ ಬರ್ತೀನಿ.
ಅತ್ತೆ: ಮಾವನಿಗೆ? ಯಾಕೆ?
ಸೊಸೆ: ನಿಮ್ಮತ್ತೆ ಏನಾದ್ರೂ ಕಾಶೀಗೆ ಹೋದ್ರೆ ನಾನು ಶಿವಕಾಶೀಗೆ ಹೋಗ್ತೀನಿ ಅಂದಿದ್ರು ಅವರು.
ಅತ್ತೆ: ಶಿವಕಾಶಿಗೆ? ಯಾಕೆ?
ಸೊಸೆ: ನೀವು ಕಾಶಿಗೆ ಹೋದ ಸಂತೋಷಾನ ಪಟಾಕಿ ಹೊಡೆದು, ಫ್ಲವರ್ ಪಾಟ್ ಹಚ್ಚಿ, ಭೂಚಕ್ರದಂತೆ ಗಿರ್ರ್ರ್ ಅಂತ ತಿರುಗಿ ಆಚರಿಸಕ್ಕೇಂತ…
ಅತ್ತೆ: ಹೊಡೀದೇ ಏನು ಮಾಡ್ತಾರೆ. ನೀನೇ ಇದ್ದೀಯಲ್ಲ ಪಟಾಕಿಗೆ ಕಿಡಿ ಮುಟ್ಟಿಸೋಕ್ಕೆ. ನೀನಿರೋ ಮನೇಲಿ ಕಡ್ಡಿಪೆಟ್ಟಿಗೆ, ಲೈಟರ್, ಏನೂ ಬೇಕಾಗಿಲ್ಲ.
ಸೊಸೆ: ಅದಕ್ಕೆ ನೀವೇ ಕಾರಣ ಅತ್ತೆ; (ತಲೆಬಾಗಿ ನಾಟಕೀಯವಾಗಿ ನಮಸ್ಕರಿಸುತ್ತಾ) ಎಲ್ಲಾ ನಿಮ್ಮ ಆಶೀರ್ವಾದ
ಅತ್ತೆ: ನನ್ನ ಆಶೀರ್ವಾದವೆ? ಅದ್ಹೇಗೆ?
ಸೊಸೆ: ನಮ್ಮ ಮನೆ ಬೆಳಗೋ ಸೊಸೆ ಬೇಕು ಅಂತ ತಾನೇ ನೀವು ಹೇಳಿದ್ದಿದ್ದು… ಕಿಡೀನೇ ಇಲ್ಲದೆ ಬೆಳಗಕ್ಕೆ ಎಲ್ಲಾಗತ್ತೆ ಅತ್ತೇ…
ಅತ್ತೆ: ಕಿಡಿ ಬೇಕು ನಿಜ. ಆದರೆ ನಿನ್ನ ತರಹ ಕಿಡಿಗೇಡಿ ಅಲ್ಲ. (ನಿಟ್ಟುಸಿರು ಬಿಡುತ್ತಾ) ಹೋಗಲಿ ಬಿಡು. ಸುಮ್ಮನೆ ನಿನ್ನ ಜೊತೆ ಜಗಳ ಯಾಕೆ! ದೊಡ್ಡವರೇ ಹೇಳಿದ ಹಾಗೆ ಇದ್ಬಿಡ್ತೀನಿ.
ಸೊಸೆ: (ಅಚ್ಚರಿಯಿಂದ, ಸ್ವಗತ) ಇದೇನಪ್ಪಾ ಪ್ಲೇಟ್ ಚೇಂಜೂ…. (ಪ್ರಕಾಶ) ದೊಡ್ಡವರು ಏನು ಹೇಳಿದಾರೆ ಅತ್ತೆ?
ಅತ್ತೆ: ದುಷ್ಟರನ್ನು ಕಂಡರೆ ದೂರ ಇರು ಅಂತ. ನನಗ್ಯಾಕೆ ಇನ್ನೊಬ್ಬರ ಉಸಾಬರಿ
ಸೊಸೆ: (ಅತ್ತೆಯನ್ನು ಮೇಲಿನಿಂದ ಕೆಳಗಿನವರೆಗೆ ನೋಡುತ್ತಾ) ನಿಮ್ಮನ್ನು ನೋಡಿಯೇ ಆ ಕವಿಗಳು ಹಾಗೆ ಬರೆದಿರೋದು ಅತ್ತೆ
ಅತ್ತೆ: ಏನಂತ? ಹೆಂಡತಿಯೊಬ್ಬಳು ಮನೆಯೊಳಗಿದ್ದರೆ ನನಗದು ಕೋಟಿ ರುಪಾಯಿ ಅಂತಾನಾ?
ಸೊಸೆ: ಊಹೂಂ; ಇವಳೇನು ನಾರಿಯೋ, ಆಭರಣಗಳ ಲಾರಿಯೋ ಅಂತ. ನೀವೇನಾದ್ರೂ ಹೇಗೇ ಹೊರಗೆ ಹೋದ್ರೆ…
ಅತ್ತೆ: ಹೋದ್ರೆ ಏನಾಗ್ಬಿಡತ್ತೆ?
ಸೊಸೆ: ಅಖಿಲ ಕರ್ನಾಟಕ ಸರಗಳ್ಳರ ಸಂಘ ಹಾಡು ಹೇಳ್ತಾರಂತೆ
ಅತ್ತೆ: ಹಾಡೂ…?
ಸೊಸೆ: ಹೂಂ. ಬದನ್ ಪೆ ಸಿತಾರೆ ಲಪೇಟೆ ಹುಯೇ; ಓ ಜಾನೆ ತಮನ್ನಾ ಕಿಧರ್ ಜಾ ರಹೀ ಹೋ; ಜರಾ ಪಾಸ್ ಆವೋ; ತೋ ಚೈನ್ ಆಜಾಯೇ ಅಂತ.
ಅತ್ತೆ: ಓ! ಹಳೇಕಾಲದ ಮಹಮದ್ ರಫಿ ಹಾಡು. ನಾನು ಇನ್ನೂ ಅಷ್ಟು ಅಟ್ರಾಕ್ಟಿವ್ ಆಗಿದೀನಿ… ಅಂತಹ ಸೂಪರ್ ಫಿಗರ್ ಅಂತಾನಾ?
ಸೊಸೆ: ಹಹ್ಹಹ್ಹ; ಕುಂಬಳಕಾಯ್ನೂ ಫಿಗರ್ ಅನ್ನೋದಾದ್ರೆ ನಿಮ್ಮನ್ನ ಫಿಗರ್ ಅನ್ನಬಹುದು. ಆ ಹಾಡಿನ ಇವತ್ತಿನ ಅರ್ಥಾನೇ ಬೇರೆ ಅತ್ತೇ…
ಅತ್ತೆ: ಏನು ಇವತ್ತಿನ ಅರ್ಥ?
ಸೊಸೆ: ಮೈಮೇಲೆ ಬಂಗಾರ ಹೇರ್ಕೊಂಡು ಹೀಗೆ ಓ ನಾರಿ ನೀನೆಲ್ಲೀಗ್ ಹೋಗ್ತಿದ್ದೀಯಾ ಈಗ ಕೊಂಚ ಹತ್ರ ಬಾರೆ, ಚೈನ್ ಹಾರಿಸ್ತೀವೀ… ಅಂತ ಈಗಿನ ಅರ್ಥ…
ಅತ್ತೆ: ನನ್ನನ್ನೇ ಆಡ್ಕೋತೀಯಾ… ಇರು, ನಿನ್ನ ಮಾವನ್ನೂ ಕರೆದು ನಿನಗೆ ಸರಿಯಾದ ಗ್ರಹಚಾರ ಬಿಡಿಸ್ತೀನಿ
ಸೊಸೆ: ಕರೀರೀ ಅತ್ತೇ… ನಡೆದೇಬಿಡಲಿ ತ್ರಿವೇಣಿ ಸಂಗಮ…
ಅತ್ತೆ: ತ್ರಿವೇಣಿ? ನನ್ನದೊಂದು ಜಡೆ, ನಿನ್ನದೊಂದು ಜಡೆ; ಇನ್ನೊಂದು ಯಾವುದೇ?
ಸೊಸೆ: ಇದೆಯಲ್ಲ ಮಾವನವರ ಪಿಳ್ಳುಜುಟ್ಟು… ಪಾಪ! ಮಾವನ್ನ ಕಂಡ್ರೆ ಅಯ್ಯೋ ಅನ್ಸತ್ತೆ ಅತ್ತೆ
ಅತ್ತೆ: ಯಾಕೋ?
ಸೊಸೆ: ಅವರ ಮದುವೆಗೆ ಮುಂಚಿನ ಫೋಟೋಗಳನ್ನ ನೋಡಿದೆ. ಚಂದಮಾಮಾಲಿ ಬರ್ತಿದ್ದ ರಾಜ ತ್ರಿವಿಕ್ರಮನ ತರಹ ಇದ್ರಲ್ಲಾ ಅತ್ತೇ… ಬಾಹುಬಲಿ ಒನ್ಗೆ ಅವರೇ ಹೀರೋ ಆಗಬಹುದಾಗಿತ್ತು. ಹಾಗಿದ್ದರು ಆಗ…
ಅತ್ತೆ: ಈಗಲೂ ಹಾಗೇ ಇದಾರಲ್ಲಾ…
ಸೊಸೆ: ಇದ್ದಾರೆ… ಆದರೆ ಮದುವೆ ಆದ ತಕ್ಷಣ ರಾಜ ತ್ರಿವಿಕ್ರಮನ ಹೆಗಲಿಗೆ ಬೇತಾಳ ಏರಿತಲ್ಲಾ…
ಅತ್ತೆ: ನಾನೂ…. ಬೇತಾಳಾನಾ…?
ಸೊಸೆ: ಹ್ಞೂಂ ಮತ್ತೆ… ನೀವು ಹಾಡೋದನ್ನ ಕೇಳಿದ್ದೀನಲ್ಲಾ… ರಾಗ ಸರಾಗ, ತಾಳ ಬೇತಾಳ…
ಅತ್ತೆ: ಹಹ್ಹ! ನೀನೂ ಒಂದು ವಿಧದಲ್ಲಿ ಬೇತಾಳವೇ ಅಲ್ವೇನೇ ಸಂಜೂ…
ಸೊಸೆ: ನಾನು? ಅದ್ಹೇಗೆ?
ಅತ್ತೆ: ನಿನ್ನ ಗಂಡ ಮನೆಗೆ ಬಂದ ತಕ್ಷಣ ನೂರಾರು ಪ್ರಶ್ನೆ ಕೇಳ್ತೀಯ. ಅವನು ಉತ್ತರ ಕೊಡಕ್ಕೆ ತಡ ಮಾಡಿದರೆ ಎಲೈ ಗಂಡನೆ, ನನ್ನ ಪ್ರಶ್ನೆಗಳಿಗೆ ಸರಿಯಾದ ಉತ್ತರ ತಿಳಿದಿದ್ದೂ ಹೇಳದೆಹೋದರೆ ನಿನ್ನ ತಲೆ ಸಾವಿರ ಹೋಳಾಗುವುದು ಅಂತ ಹೆದರಿಸ್ತೀಯಲ್ಲ, ನೀನು ಬೇತಾಳ ಅಲ್ಲದೆ ಇನ್ನೇನೂ…
ಸೊಸೆ: (ಟಿವಿ ರಿಮೋಟ್ ಕೈಯಲ್ಲಿ ಹಿಡಿದು) ಛೆ! ನಾಯಿಯನ್ನು ಪಳಗಿಸುವುದು ಹೇಗೆ ಅಂತ ಪ್ರೋಗ್ರಾಂ ನಡೆಸ್ತಾರೆ. ಅತ್ತೆಯನ್ನು ಪಳಗಿಸುವುದು ಹೇಗೆ ಅಂತಾದ್ರೂ ಒಂದು ಸೀರಿಯಲ್ಲೋ, ಡಾಕ್ಯುಮೆಂಟರೀನೋ ತೆಗೀಬಾರ್ದಾ…
ಅತ್ತೆ: ನಾನೂ ಅದೇ ಹೇಳೋದೂ… ಗಿಣಿ ಸಾಕುವುದು ಹೇಗೆ ಅಂತ ನನ್ನ ಮಗ ತಿಳ್ಕೊಂಡಿದ್ದಿದ್ದರೆ ಈ ಅರಗಿಣೀನ ಕಂಟ್ರೋಲ್ ಮಾಡಬಹುದಾಗಿತ್ತು. ಅದನ್ನ ಕಲೀಲಿಲ್ಲ ಆ ಮೊದ್ದುಮಗ; ಗಿಣಿ ಈಗ ಹದ್ದು ಆಗಿದೆ… ಛೆ!
ಸೊಸೆ: ಅತ್ತೇ… ನಾನು ಕೇವಲ ಹದ್ದು… ನೀವು ಹದ್ದು ಮೀರಿದವರು… (ತಕ್ಷಣ ಏನೋ ನೆನಪಿಸಿಕೊಂಡು) ಸುಮ್ಮನೆ ನಾವ್ಯಾಕೆ ಜಗಳ ಆಡೋದು ಅತ್ತೆ… ಸುಮ್ಮನೆ ಕಿತ್ತಾಡೋದ್ರ ಬದಲು ನಗ್ನಗ್ತಾ ಇರೋದು ವಾಸಿ ಅಲ್ವಾ?
ಅತ್ತೆ: ಏನೇ ಈಗ ನಿನ್ನದು ಚೇಂಜ್ ಆಫ್ ಸೀನರಿ? ಏನು ನಿನ್ನ ಪ್ಲ್ಯಾನೂ?
ಸೊಸೆ: ಹೆಹ್ಹೆ! ಏನೇನೂ ಇಲ್ಲ ಅತ್ತೆ. ಅತ್ತೆ, ಇವತ್ತು ಟೌನ್ಹಾಲ್ನಲ್ಲಿ ಅಮೋಘ ನಗೆಹಬ್ಬ ಇದೆಯಂತೆ. ಅದಕ್ಕೆ ಒಂದು ಟಿಕೆಟ್ ತಂದಿದೀನಿ ನಿಮಗೇಂತ. ಹೋಗಿಬರ್ತೀರಾ ಅತ್ತೆ?
ಅತ್ತೆ: ವಾವ್! ಹ್ಯೂಮರ್ರೂಂದ್ರೆ ನನಗೆ ಪಂಚಪ್ರಾಣ. ಕೊಡು, ಹೋಗ್ಬರ್ತೀನಿ… ಆದರೂ…. ನೀನೇ ಹೋಗಬಹುದಲ್ಲ, ನಾನ್ಯಾಕೆ?
ಸೊಸೆ: ಮೊನ್ನೆ ಆ ಷೋ ನೋಡಿದವರು ಆ ಕಾಮೆಡಿ ಎಷ್ಟು ಚೆನ್ನಾಗಿದೇಂದ್ರೆ ನೋಡಿದವರು ನಕ್ಕೂ ನಕ್ಕೂ ಸಾಯ್ತಾರೆ ಅಂದ್ರೂ… ಅದಕ್ಕೇ….
ಅತ್ತೆ: ಮುದ್ದು ಸೊಸೆ ನೀನು. ಈ ಮಾತನಾಡಿದ ನಿನಗೆ ಇಂದಿನಿಂದ ಹೊಸದಾದ ಬಿರುದನ್ನು ನೀಡುತ್ತಿದ್ದೇನೆ. ಸ್ವೀಕರಿಸು.
ಸೊಸೆ: (ಸ್ವಗತ) ಬಿದುರು ಏರೋ ಸಮಯದಲ್ಲಾದ್ರೂ ಬಿರುದು ಕೊಡೋ ಬುದ್ಧಿ ಬಂತಲ್ಲ (ಪ್ರಕಾಶ) ಏನು ಬಿರುದು ಅತ್ತೆ?
ಅತ್ತೆ: ಕ್ವಿನೈನ್ ಮಾತ್ರೆ ಅಂತ… (ಹಲ್ಲು ಕಚ್ಚಿಕೊಂಡು) ಹೊರಗೆ ಏನಾದ್ರೂ ಸಿಹಿ ಕಂಡರೆ ಒಳಗೆ ಕಪ್ಪಟ್ಟ ಕಹಿ ಗ್ಯಾರಂಟಿ ನಿನ್ನಲ್ಲಿ!
ಸೊಸೆ: ಅತ್ತೇ… (ಕೋಪದಿಂದ ಬುಸುಗುಟ್ಟುವಳು)
ಅತ್ತೆ: (ದನಿಯಲ್ಲಿ ಮೆಚ್ಚುಗೆ ತೋರಿಸುತ್ತಾ) ವಾಟ್ ಎ ಬ್ಯೂಟಿಫುಲ್ ಪೋಸ್. ಸಂಜೂ; ತಾಳು, ಈಗಲೇ ಆ ಡೈರೆಕ್ಟರ್ಗೆ ಫೋನ್ ಮಾಡಿ ಕರೆಸ್ತೀನಿ. ಈ ಪೋಸ್ನಲ್ಲಿ ನಿನ್ನನ್ನ ನೋಡಿದ್ರೆ ಆ ಸಾಯಂಕಾಲದ ಸೀರಿಯಲ್ಗೆ ನಿನ್ನನ್ನೇ ಹೀರೋಯಿನ್ ಮಾಡ್ಕೊಳ್ತಿದ್ರು ಕಣೆ ಖಂಡಿತ!
ಸೊಸೆ: (ತಬ್ಬಿಬ್ಬಾಗಿ, ಸಂತೋಷದಿಂದ) ಹೀರೋಯಿನ್ನಾ? ಸೀರಿಯಲ್ಗಾ? ಯಾವ ಸೀರಿಯಲ್ಗೆ ಅತ್ತೆ?
ಅತ್ತೆ: ನಾಗಮಂಡಲದ ನಾಗಕನ್ನಿಕೆ ಸೀರಿಯಲ್ಗೆ; ಹಾವುರಾಣಿ, ಐ ಮೀನ್, ಹಾವುಗಳ ರಾಣಿ ಆಗಕ್ಕೆ ತಕ್ಕಂತೆ ಬುಸುಗುಟ್ತೀಯಾ ಕಣೇ… ಸೂಪರ್.
ಸೊಸೆ: (ಒಂದು ಕ್ಷಣ ಆಲೋಚಿಸಿ) ಥ್ಯಾಂಕ್ಸ್ ಅತ್ತೆ. ಹಾಗೆ ಬುಸುಗುಡಕ್ಕೆ ಸಾಕಷ್ಟು ಅವಕಾಶ ಮಾಡಿಕೊಡುವ ನೀವು, ನಿಮ್ಮ ಮಗರಾಯನಿಗೆ ಈ ಶ್ರೇಯಸ್ಸು ಸಲ್ಲಬೇಕು! ಹಾಗೆ ನೋಡಿದರೆ ಈ ವಯಸ್ಸಿನಲ್ಲೂ ನೀವು ಪ್ರಮುಖ ಪಾತ್ರ ವಹಿಸೋಕ್ಕೆ ಲಾಯಕ್ಕಾಗಿದ್ದೀರ ಅತ್ತೆ…
ಅತ್ತೆ: ಯಾವ ಸೀರಿಯಲ್ಗೋ? ನಿನ್ನ ಕೊಂಕುಮಾತಿನ ರೀತಿ ನೋಡಿದರೆ, ಕ್ರೈಮ್ ನ್ಯೂಸಲ್ಲಿ ಡೆಡ್ ಬಾಡಿ ಪಾತ್ರ ಅಂತೀಯೇನೋ?
ಸೊಸೆ: ಛೆ! ಅದಲ್ಲ ಅತ್ತೆ… ಬಹಳ ಲೈವ್ಲಿ ಆಗಿರೋ ಪಾತ್ರ…
ಅತ್ತೆ: ಯಾವ್ದಪ್ಪಾ ಅಂತಾದ್ದೂ…?
ಸೊಸೆ: ಅತೃಪ್ತ ಭೂತ ಸೀರಿಯಲ್ಗೆ, ಲೀಡ್ ರೋಲೂ ಅತ್ತೇ….
ಅತ್ತೆ: (ಪ್ರತಿಜ್ಞೆ ಮಾಡುವ ದನಿಯಲ್ಲಿ) ಎಲೈ ಸಂಜೂ ಎಂಬ ಸೊಸೆಯೇ… ಇವತ್ತೇ ಲಾಸ್ಟ್. ನಾಳೆಯಿಂದ ಮಲೆಯಾಳಿ ಮಾಂತ್ರಿಕರಿಂದ ಮಾಟ ಮಾಡ್ಸಿ, ಸೀರಿಯಲ್ ಅತ್ತೆಯರಿಂದ ವಿಷ ಪಡೆದು, ಹೊಸಹೊಸ ಸ್ಕ್ರಿಪ್ಟ್ ರೈಟರ್ಸಿಂದ ಸೊಸೆಗೆ ಬುದ್ಧಿ ಕಲಿಸುವುದು ಹೇಗೆ ಅಂತ ವಿಷಯ ತಿಳ್ಕೊಂಡು, ನಿನ್ನನ್ನು ಬುಗುರಿ, ಬುಗುರಿ ಆಡಿಸಿದಂತೆ ಆಡಿಸದಿದ್ದರೆ ನಾನು ಅತ್ತೆಯೇ ಅಲ್ಲ….
ಸೊಸೆ: (ಶಪಥದ ಧಾಟಿಯಲ್ಲೇ) ಯೂ ಆಲ್ಸೋ ಲಿಸನ್ ಮೈ ಡಿಯರ್ ಅತ್ತೇ… ನಿಮ್ಮ ಮಗನನ್ನೇ ನಿಮ್ಮ ಮೇಲೆ ಛೂ ಬಿಟ್ಟು, ನಿಮ್ಮ ಮಲೆಯಾಳಿ ಮಾಂತ್ರಿಕನಿಂದ ನಿಮ್ಮ ಮೇಲೆಯೇ ನಿಂಬೆಹಣ್ಣು ಹಾರಿಸಿ, ನಿಮ್ಮ ಜೀವನದಲ್ಲಿ ಹುಳಿ ಹಿಂಡದಿದ್ದರೆ ನಾನು ಆಧುನಿಕ ಸೊಸೆಯೇ ಅಲ್ಲಾ…
(ಅಷ್ಟರಲ್ಲಿ ವಾಯ್ಸ್-ಓವರ್ನಲ್ಲಿ ಇದೇ ಭಾನುವಾರ ವರೀದ್ರ ಕಲಾಕ್ಷೇತ್ರದಲ್ಲಿ ಆದರ್ಶ ಅತ್ತೆ-ಸೊಸೆ ಕಾರ್ಯಕ್ರಮ. ಮೊದಲ ಬಹುಮಾನ ೫ ಲಕ್ಷ; ಎರಡನೆಯ ಬಹುಮಾನ ೩ ಲಕ್ಷ ಎಂದು ಕೇಳಿಬರುತ್ತದೆ. ಅತ್ತೆ ಸೊಸೆ ಇಬ್ಬರೂ ಅದನ್ನು ಕಿವಿಗೊಟ್ಟು ಆಲಿಸಿ, ಒಬ್ಬರನ್ನೊಬ್ಬರು ಬರಸೆಳೆದಪ್ಪಿ)
ಸೊಸೆ: ನಿಮ್ಮಂತ ಅತ್ತೇ ಇಲ್ಲ….
ಅತ್ತೆ: ನಿನ್ನಂಥ ಕತ್ತೇ ಇಲ್ಲಾ….
ಸೊಸೆ: (ಪಿಸುದನಿಯಲ್ಲಿ) ಪ್ರೈಸ್ ಅತ್ತೇ…. ಫೈವ್ ಲ್ಯಾಕ್… ಫಿಫ್ಟೀ ಫಿಫ್ಟೀ…
ಅತ್ತೆ: ಓಕೆ. ಮತ್ತೆ ಶುರು ಮಾಡು
ಸೊಸೆ: ನಿಮ್ಮಂತ ಅತ್ತೇ ಇಲ್ಲಾ…
ಅತ್ತೆ: ನಿನ್ನಂತ ಸೊಸೆಯೂ ಇಲ್ಲಾ….
(ಇಬ್ಬರೂ ಹಾಡಿಕೊಂಡೇ ಸೆಟ್ನಿಂದ ನಿರ್ಗಮನ).
ಬಹಳ ಚೆನ್ನಾಗಿದೆ.