ಮಡಿಟೂರ್ ಮುಗಿದ ಹದಿನೈದು ದಿನಗಳಾದರೂ ಒಬ್ಬ ದೂರುದಾರನೂ ಪತ್ತೆ ಇರಲಿಲ್ಲ! ಏತನ್ಮಧ್ಯೆ ಕಿಟ್ಟಂಭಟ್ಟ ತನ್ನ ಗೈಡಾವತಾರವನ್ನು cacophonic ಕಂಠದಲ್ಲಿ ಬಿತ್ತರಿಸಿದ್ದೇ ಬಿತ್ತರಿಸಿದ್ದು. ‘Innocent till proved guilty’ ಆಧಾರದ ಮೇಲೆ ನಾವೂ ಕಿಟ್ಟಂಭಟ್ಟನಿಗೆ ‘Benefit of doubt’ ನೀಡಿ ಸುಮ್ಮನಾದೆವು. ಬೀಸುವ ಕತ್ತಿ ತಲೆಯ ಮೇಲೆಯೇ ಇತ್ತೆಂದು ತಿಳಿದದ್ದು ನಮಗೆ ಟೂರ್ ಮುಗಿದ ನಂತರದ ಹದಿನೆಂಟನೆಯ ದಿನ.
ಮರಳುಗಾಡಿನಲ್ಲಿ ಭಾರ ಹೊತ್ತು ಸಾಗಿ, ಡುಬ್ಬದಲ್ಲಿರುವ ನೀರೂ ಖಾಲಿಯಾಗುವ ಮಟ್ಟಕ್ಕೆ ಬಸವಳಿದ ಒಂಟೆಯ ನಡೆಯನ್ನು ಹೋಲುವಂತೆ ತಟ್ಟಾಡುತ್ತಾ ಹದಿನೆಂಟರ ಪೈಕಿಯವರೊಬ್ಬರು ಟ್ರಾವೆಲ್ಸ್ ಮೆಟ್ಟಿಲಿನ ಬಳಿ ನಿಂತು ‘ಎನ್ನ ಕೈಪಿಡಿದು ಮೇಲ್ಸೆಳೆದುಕೊಳ್ಳಯ್ಯಾ ಪ್ರಭುವೇ’ ಎಂದು ಭಕ್ತನು ದೇವನನ್ನು ಕಣ್ಣಲ್ಲೇ ಬೇಡಿಕೊಳ್ಳುವ ಪರಿಯಲ್ಲಿ ನನ್ನತ್ತ ದೃಷ್ಟಿಯನ್ನೇರಿಸಿದರು.
ಹೊಸ ಬೀಸುವಕಲ್ಲನ್ನು ಬಳಸುವುದಕ್ಕೆ ಮುಂಚೆ ಮರಳನ್ನು ಸುರಿದು ಬೀಸುತ್ತಿದ್ದರು. ಇದರಿಂದ ಎರಡೂ ಕಲ್ಲುಗಳ ನುರಿಯುವ ಕ್ಷಮತೆ ಉತ್ತಮಗೊಳ್ಳುತ್ತಿತ್ತು, ನಿಜ. ಆದರೆ ಅದು ಹೊರಡಿಸುತ್ತಿದ್ದ ಗರಗರರ್ರರ್ರರ್ರರರ ಸದ್ದು ಸುತ್ತಲಿನ ಮಂದಿಯ ನಿದ್ರೆಯನ್ನು ಕೆಡಿಸುತ್ತಿದ್ದುದೂ ಅಷ್ಟೇ ನಿಜ. ಆ ಸದ್ದಿಗೆ ಆಗಷ್ಟೇ ರಿಪೇರಿಯಾದ ಸ್ಕೂಟರಿಗೆ ಸ್ಟ್ಯಾಂಡ್ ಹಾಕಿ ರೊಯ್ಯರೊಯ್ಯೆನಿಸುವ ಸದ್ದನ್ನಿಷ್ಟು ಸೇರಿಸಿ, ಆಗಷ್ಟೇ ಹಾಲು ಕೊಡುವುದನ್ನು ನಿಲ್ಲಿಸಿದ ಕಾರಣ ಮಾತೃಕ್ಷೀರವಂಚಿತ ಮಗು ಅಳುವ ರಂಪದ ಸದ್ದನ್ನು ಆ ಎರಡೂ ಸದ್ದುಗಳಿಗೆ ಸೇರಿಸಿದರೆ ಬರುವ ಮಿಶ್ರಫಲವೇ ನಮ್ಮ ಕಿಟ್ಟಂಭಟ್ಟನ ಮಾಮೂಲಿ ವಾಯ್ಸು.

ದಾರ ಕಳೆದುಕೊಂಡ ಗಾಳಿಪಟದಂತೆ ಜೀವನ ಸಾಗಿಸುತ್ತಿದ್ದ ಕಿಟ್ಟಂಭಟ್ಟ ನಮ್ಮ ಟ್ರಾವೆಲ್ ಏಜೆನ್ಸಿಯ ‘ಆಡ್ ಜಾಬ್ಸ್ ಮ್ಯಾನ್’ ಆಗಿದ್ದ. ‘ಆಡು ಮುಟ್ಟದ ಸೊಪ್ಪಿಲ್ಲ’ ಎಂಬಂತೆ ಈ ಆಡ್ ಜಾಬ್ಸ್ ಮ್ಯಾನ್ ಮಾಡದ ಕೆಲಸವಿರಲಿಲ್ಲ. ತಾನು ಮಾಡುವ ಪ್ರತಿಯೊಂದು ಕೆಲಸದಲ್ಲಿಯೂ ತನ್ನದೇ ಆದ ಛಾಪನ್ನೂ ಮೂಡಿಸುತ್ತಿದ್ದ. ‘ಕಾಫಿ ತಾರೋ ಕಿಟ್ಟ’ ಎಂದರೆ ನಮ್ಮ ಬಳಿ ಬರುವವರೆಗೆ ಬುದ್ಧನ ಏಕಾಗ್ರತೆಯಿಂದ ಕಾಫಿಯ ಲೋಟಗಳನ್ನಿರಿಸಿ ತಟ್ಟೆಯನ್ನು ತರುತ್ತಿದ್ದ ಕಿಟ್ಟ ಥಟ್ಟನೆ ಹುಚ್ಚುತ್ಸಾಹದಿಂದ ‘ತೊಗೊಳ್ಳಿ ಸಾರ್’ ಎಂದು ಕೊಡುವ ರಭಸಕ್ಕೆ ಮುಂದಿನವರ ಬಿಳಿಯ ಶರ್ಟ್ ಕಲಾನೈಪುಣ್ಯವನ್ನು ಪಡೆಯುತ್ತಿತ್ತು. ಕಲೆಕಲೆಯಾದ ಶರ್ಟ್ ಕಳೆಕಳೆಯಾಗಬೇಕಾದರೆ ಕಲಾವಿದ ಉರುಫ್ ಕಲೆಗಳನ್ನು ಬಲ್ಲ ಹಾಗೂ ತನ್ಮೂಲಕ ಕಲೆಗಳನ್ನು ನಿವಾರಿಸಬಲ್ಲ ಮಡಿವಾಳನ ದ್ವಾರವನ್ನು ಕಟಕಟಾಯಿಸುವುದು ಅನಿವಾರ್ಯವಾಗುತ್ತಿತ್ತು.
ಅಂದು ನಮ್ಮ ಟ್ರಾವೆಲ್ ಏಜೆನ್ಸಿಗೆ ಲಿಟ್ಮಸ್ ಟೆಸ್ಟು. ಉತ್ತರಭಾರತದತ್ತ ಪಯಣಿಸಬೇಕಾಗಿದ್ದ ಹದಿನೆಂಟು ಜನರನ್ನೊಳಗೊಂಡ ಗುಂಪು ಅಂದು ಸಂಜೆ ರೈಲ್ವೇ ಸ್ಟೇಷನ್ನಿನಲ್ಲಿ ಸೇರುವುದಿತ್ತು. ಈರುಳ್ಳಿಯನ್ನು ತೋರಿಸಿದರೆ ಹಾರಿಬೀಳುವ, ಬೆಳ್ಳುಳ್ಳಿಯನ್ನು ಮೂಸಿಸಿದರೆ ಕೋಮಾ ಹಂತವನ್ನೇ ತಲಪಿಬಿಡುವ ಮಟ್ಟದ ಮಡಿವಂತರಿಗಾಗಿ ಹಮ್ಮಿಕೊಂಡಿದ್ದ ವಿಶೇಷ ಟ್ರಿಪ್ ಅದು. ಅಂತಹ ಟ್ರಿಪ್ಗೆ ಚಂಡೀಗಢದ ಚಳಿಯಲ್ಲಿಯೂ ನಲ್ಲಿಯ ಕೆಳಗೆ ನಿಂತು ಸ್ನಾನ ಮಾಡಬಲ್ಲ, ಒರಿಜಿನಲ್ ಜನಿವಾರದ, ಪ್ರವರ ಬಲ್ಲ ಮಡಿವಂತನನ್ನೇ ಟೂರಿಸ್ಟ್ ಗೈಡ್ ಆಗಿ ನೇಮಿಸಲಾಗಿತ್ತು. ಆದರೆ ಆಗ, ಕೆಲವೇ ನಿಮಿಷಗಳ ಹಿಂದೆ, ಆ ಮಡಿಗೈಡಿನಿಂದ ಯಾರೋ ಮಡಿದ ಕಾರಣ ತನಗೆ ಸೂತಕವಿರುವುದರ ಕಾರಣ ಬರಲಾರೆನೆಂಬ ಸಿಡಿಲುಸುದ್ದಿ!
“ಹತ್ತಿರದವರೇನು?” – ಕೇಳಿದರು ಟ್ರಾವಲ್ ಏಜೆನ್ಸಿಯ ಮಾಲಿಕರು.
“ನಮ್ಮ ಷಡ್ಡಕನ ಮೂರನೆ ಹೆಂಡತಿಯ ನಾಲ್ಕನೆ ಓರಗಿತ್ತಿಯ ಏಳನೇ ಚಿಕ್ಕಪ್ಪ ತೀರಿಕೊಂಡದ್ದು. ನಮಗೆ ಬಹಳ ಖಾಸಾಖಾಸಾ.”
“ಅಷ್ಟು ದೂರದವರಾದರೆ ಸೂತಕ ಹೇಗೆ?” ಹೇಗಾದರೂ ಮಾಡಿ ಸೂತಕವನ್ನು ಮಾಯ ಮಾಡುವ ಆಶಾಭಾವ ಇವರದು.
“ದಾಯಾದಿಗಳ ಲೆಕ್ಕಕ್ಕೆ ಬರತ್ತೆ. ಮಿನಿಮಮ್ ಮೂರು ದಿವಸ” ಅಂತ ಭಟ್ಟರು ಹೇಳಿದರು.
“ಹೋಗಿದ್ದು ಯಾವಾಗ?”
“ನೆನ್ನೆ ರಾತ್ರಿ.”
“ಅಲ್ಲಿಗೆ ಎರಡು ದಿನ ಲೆಕ್ಕಕ್ಕೆ ಬಂತು. ನಾಳೆ ಒಂದು ದಿನವಾದರೆ ಸೂತಕ ಕಳೆದಂತೆ. ಒಂದು ದಿನ ಅವರಿಗೆ ಸಿಗದಂತೆ ರೈಲಿನಲ್ಲಿ ಬೇರೆ ಕಡೆ ಬರ್ತ್ ಮಾಡಿಸುತ್ತೇನೆ” ನಿರಾಶೆಯ ಕತ್ತಲಲ್ಲೊಂದು ಆಶೆಯ ಬೆಳಕಿನ ಬಾಣವನ್ನು ತೂರಿದರು.
“ಉಂಟೇ! ನಾಳಿದ್ದಿನವರೆಗೆ ಪುಣ್ಯವಂತರ ಮುಖವನ್ನೂ ನೋಡಲಾರೆ” ಖಡಾಖಂಡಿತವಾಗಿ ನುಡಿದುಬಿಟ್ಟರು ಆ ಮಡಿಗೈಡ್.
ಮುಂದೆ ಸಾಗುವುದಕ್ಕೆ ಮುಂಚೆ ಒಂದು ಕ್ಲಾರಿಫಿಕೇಷನ್ ನೀಡಬೇಕಲ್ಲ. ‘ಒರಿಜಿನಲ್ ಜನಿವಾರ’ ಎಂದು ಹೇಳಿದ್ದೇನಲ್ಲ, ಅದರ ಹಿಂದೊಂದು ಇತಿಹಾಸವಿದೆ. ಶುದ್ಧ ಬ್ರಾಹ್ಮಣ್ಯವನ್ನು ಪಾಲಿಸುವವರಿಗೆ ಅಪಶೌಚ, ಮೈಲಿಗೆ, ಸೂತಕ, ಪುರುಡುಗಳು ವಕ್ಕರಿಸಿದಾಗಲೆಲ್ಲ ಜನಿವಾರವನ್ನು ಬದಲಾಯಿಸುವುದು ಅನಿವಾರ್ಯ. ಅವರದು ಎಂದೆಂದೂ ಮಡಿಗೆ, ಪೂಜಾವಿಧಿಗೆ ಸಲ್ಲತಕ್ಕ ಒರಿಜಿನಲ್ ಜನಿವಾರವೇ. ಆದರೆ ಟೂರಿಸ್ಟ್ ಗೈಡು, ಅಡುಗೆಯವರು, ಹೊಟೇಲ್ ಮಾಣಿಗಳು ಇವರೆಲ್ಲ ಒರಿಜಿನಲ್ಲನ್ನೇ ಧರಿಸುವರೆಂಬ ಖಾತ್ರಿಯಿಲ್ಲ. ಒಬ್ಬ ಒಳ್ಳೆಯ (ಎಂದರೆ ಸಕ್ಸಸ್ಫುಲ್) ಅಡುಗೆಭಟ್ಟನ ಬಳಿ ಟೂ ಟೈಪ್ಸ್ ಆಫ್ ಜನಿವಾರಾಸ್ ಇರುತ್ತದೆ. ಒಂದು ‘ನಿರ್ಮಾದ ಶುದ್ಧ ಬಿಳುಪಿನ’ ದಾರಕ್ಕೆ ಆಗಷ್ಟೇ ನುರಿದ ಟರ್ಮರಿಕ್ ಬಳೆದಿರುವ, ಅಪರೂಪಕ್ಕೆ ಬಳಸುವ ಜನಿವಾರ. ಇನ್ನೊಂದು ಕೊಂಚ ಕಂದುಬಣ್ಣಕ್ಕೆ ತಿರುಗಿರುವ, ಗೋಡೆಗೋ ಕ್ಯಾಲೆಂಡರಿಗೋ ನೇತಾಡಿಸಿರುವ ಯೂಸ್ಡ್ ಜನಿವಾರ. ಮರುದಿನವೇ ನಾಲ್ಕು ಅಡುಗೆಯವರು ಬೇಕಾಗಿದ್ದು, ಮೂವರೇ ಬ್ರಾಹ್ಮಣರು ಸಿಕ್ಕಾಗ, ಅಬ್ರಾಹ್ಮಣನೊಬ್ಬನಿಗೆ ಮೊಳೆಯಿಂದ ತೆಗೆದ ಕಂದುಜನಿವಾರವನ್ನು ತೊಡಿಸಿದರೆ ಅವನು ಇನ್ಸ್ಟೆಂಟ್ ಟೆಂಪೊರರಿ ಬ್ರಾಹ್ಮಿನ್! ಇಂತಹ ಸಂದರ್ಭಗಳಲ್ಲಿ ಬಳಸುವ ಜನಿವಾರ ಡೂಪ್ಲಿಕೇಟ್ ಜನಿವಾರ.
ಮಡಿಗೈಡ್ ಬರಲು ನಿರಾಕರಿಸಿದುದರಿಂದ ಆಕಾಶಕ್ಕೆ ಪಿಲ್ಲರ್ ಆಗಿರುವಂತಹ (ಆಕಾಶ ತಲೆಯ ಮೇಲೆ ಬಿದ್ದಿತೆಂದರೆ ಇವರೇ ಪಿಲ್ಲರ್, ಅದೇ ರೂಫ್ ಅಲ್ಲವೇ!) ಮಾಲಿಕರೆಡೆಗೆ ಮರಳೋಣ. ಸಂಜೆಯೊಳಗೆ ಗೈಡೊಬ್ಬನನ್ನು ಹಿಡಿಯಲೇಬೇಕು; ಅಬ್ರಾಹ್ಮಣನಾದರೆ ‘ಟಂಗ್ ಟೆಸ್ಟ್’ ಮಾಡಿ, ಉಚ್ಚಾರ ಸರಿಯಿರುವವನನ್ನು ಆರಿಸಿಕೊಂಡು, ಡೂಪ್ಲಿಕೇಟ್ ಜನಿವಾರ ತೊಡಿಸಿ, ಪಂಚಪಾತ್ರೆ-ಉದ್ಧರಣೆಗಳನ್ನು ಇತರ ಪ್ರಯಾಣಿಕರಿಗೆ ಢಾಳಾಗಿ ಕಾಣುವಂತೆ ಇರಿಸಿಕೊಳ್ಳಲು ಆದೇಶ ನೀಡಿ, ಅವನನ್ನು ಸಂಜೆ ಮಡಿಪಡೆಯೊಡನೆ ರೈಲಿಗೇರಿಸುವ ತುರ್ತು ಕ್ರಮ ಜರುಗಬೇಕಿತ್ತು. ಮಧ್ಯಾಹ್ನವೂ ಕಳೆದು ಸೂರ್ಯನು ತನ್ನ ‘ಫೈನಲ್ ರನ್ ಡೌನ್ ದ ಸ್ಲೋಪ್’ ಆರಂಭಿಸುವವನಿದ್ದ. ಮಾಲಿಕರಿಗೆ ನಿಗಿನಿಗಿ ಬೆಳಕಲ್ಲಿಯೂ ಗಾಢಾಂಧಕಾರದ ಅನುಭವವ ಆಗುತ್ತಿತ್ತು. ಅಂತಹ ಸಮಯದಲ್ಲಿ ಕಿಟ್ಟಂಭಟ್ಟ ಕಣ್ಣಿಗೆ ಬಿದ್ದ!
“ನಾನು ಉತ್ತರಾದಿಮಠದ ಕಾಂಪೌಂಡ್ಗಿಂತ ಮುಂದೆ ಹೋಗಿಲ್ಲವಲ್ಲ ಸಾರ್. ದಿಲ್ಲಿ! ನಾನೇನ್ಮಾಡ್ಲಿ ಅಲ್ಲಿ?” ಕಿಟ್ಟಂಭಟ್ಟ ಬಿಲ್ಕುಲ್ ಆಗುವುದಿಲ್ಲವೆಂದುಬಿಟ್ಟ.
ಮುಂದಿನ ಅರ್ಧ ಗಂಟೆ ಕಾಲ ವಿದುರನೀತಿ, ಚಾಣಕ್ಯನೀತಿ, ಹದಿಬದೆಯ ಧರ್ಮ, ಆಪ್ತಸಮಾಲೋಚನೆ, ಪ್ರಲೋಭನವಿಧಾನ ಇವೆಲ್ಲವೂ ಪ್ರತ್ಯೇಕವಾಗಿಯೂ ಒಟ್ಟೊಟ್ಟಾಗಿಯೂ ಅವತರಿಸಿ ಕಿಟ್ಟಂಭಟ್ಟನ ಮಿದುಳನ್ನು ಮೊಸರಿನ ಗಡಿಗೆಯನ್ನಾಗಿಸಿದವು. ಬೃಹನ್ನಳೆಯ ಹೋರಾಟದಿಂದ ಸ್ಫೂರ್ತಿಗೊಂಡು ಕುರುಕ್ಷೇತ್ರ ಯುದ್ಧದಲ್ಲಿ ಪಾಲ್ಗೊಳ್ಳಲು ಸಿದ್ಧನಾದ ಉತ್ತರಕುಮಾರನಂತೆ ಕಿಟ್ಟಂಭಟ್ಟ ಅಂದು ಸಂಜೆಯ ರೈಲಿಗೆ ಹೊರಡಲು ಸಜ್ಜಾದ.
ಮಡಿಪಡೆಗೆ ಕಿಟ್ಟಂಭಟ್ಟನನ್ನು ಪರಿಚಯಿಸಲಾಯಿತು. “ಪಾರ್ಲಿಮೆಂಟ್ ನೋಡಿದ್ದೀರೇನ್ರೀ?” ಸುಬ್ಬಾಭಟ್ಟರು ಕೇಳಿದರು. “ಓ! ಏಳು ವರ್ಷಗಳ ಕೆಳಗೇ ನೋಡಿದ್ದೇನೆ.”
“ರೆಡ್ಫೋರ್ಟ್?”
“ಹೂಂ. ಅದರಲ್ಲಿ ಚಾಂದ್ ಕೊ ಕ್ಯಾ ಮಾಲೂಮ್ ಅನ್ನೋ ಹಾಡು…”
ಮಾಲಿಕರಿಗೆ ಕಿಟ್ಟ ಹೇಳುತ್ತಿರುವುದು ‘ಲಾಲ್ ಬಂಗ್ಲಾ’ ಚಿತ್ರದ ಹಾಡು ಎಂದು ತಿಳಿಯಿತು. ರೆಡ್ಫೋರ್ಟ್ನ ಪ್ರಶ್ನೆ ಕೇಳಿದ್ದವರ ಲಗೇಜಿನ ಮೇಲೆ ಮೀಸೆ ಹೊತ್ತ ಜಿರಳೆಯೊಂದು ಸರಿದಾಡಿದುದರ ಪರಿಣಾಮವಾಗಿ ಅವರ ಗಮನ ಅತ್ತ ಹೋಗಿದ್ದುದರಿಂದ ಕಿಟ್ಟನ ಮಾತು ಅವರ ಕಿವಿಗೆ ಬಿದ್ದಿರಲಿಲ್ಲ. ಪರಿಸ್ಥಿತಿ ಹದಗೆಡುವ ಮುನ್ನ ಮಾಲಿಕರು ‘ಅಡುಗೆಯವರ ಲಗೇಜ್ ಇರಿಸಿ ನಡೆಯಿರಿ’ ಎಂದು ಕಿಟ್ಟಂಭಟ್ಟನನ್ನು ಅತ್ತ ಕಳುಹಿಸಿ, ರೂಲು ಶಿಳ್ಳೆ ಹಾಕುವವರೆಗೆ ಕಿಟ್ಟನ, ಗುಂಪಿನ ಸಮಾಗಮವಾಗದಂತೆ ಎಚ್ಚರ ವಹಿಸಿ, ಬೈಕನ್ನೇರಿ ಶಿಳ್ಳೆ ಹಾಕುತ್ತ ಮನೆ ಸೇರಿದರು.
ಕಿಟ್ಟಂಭಟ್ಟ ಜಾಣ. ಅವನು ಪಾರ್ಲಿಮೆಂಟನ್ನು ಏಳು ವರ್ಷಗಳ ಕೆಳಗೆ ನೋಡಿದ್ದಿದ್ದೂ ನಿಜ – ಅವನ ‘ಸೋಶಲ್ ಸ್ಟಡೀಸ್’ ಪುಸ್ತಕದಲ್ಲಿ! ಈಗ ದಿನಕ್ಕೆ ಎರಡು ಸಾವಿರ ಬಾಟಾ ಎಂದು ಮಾತನಾಡಿದ್ದರಿಂದ ಕೊಂಚ ಹೋಂವರ್ಕ್ (ಅಥವಾ ರೈಲ್ವರ್ಕ್?) ಮಾಡಲು ತೀರ್ಮಾನಿಸಿ, ಅದುವರೆಗೆ ಹತ್ತಾರು ಬಾರಿ ಉತ್ತರಭಾರತದ ಪ್ರಯಾಣ ಮಾಡಿದ್ದ ಅಡುಗೆಯವರೊಡನೆ ಮಾತಿಗಿಳಿದು ಮುಂದಿನ ಪ್ರಯಾಣದಲ್ಲಿ ಕಾಣುವ ಸ್ಥಳಗಳ ಬಗ್ಗೆ ಇಡೀ ದಿನದ ರೈಲುಪ್ರಯಾಣದ ಅವಧಿಯಲ್ಲಿ ಸಾಕಷ್ಟು ಮಾಹಿತಿ ಸಂಗ್ರಹಿಸಿದ್ದಲ್ಲದೆ ತನ್ನ ನೋಟ್ಬುಕ್ಕಿನಲ್ಲಿ ಬರೆದಿಟ್ಟುಕೊಂಡ.
ಹದಿನೈದು ದಿನಗಳ ಪ್ರಯಾಣ ಮುಗಿಯಿತು. ಹದಿನಾರನೆಯ ದಿನ ಕಿಟ್ಟಂಭಟ್ಟ ಟ್ರಾವೆಲ್ ಏಜೆನ್ಸಿಯ ಬಾಗಿಲಲ್ಲಿ ಹಾಜರ್! ಮುಖದಲ್ಲಿ ಎವರೆಸ್ಟ್ ಏರಿದ ಹಿಲೇರಿಯ ಕಳೆ.
“ಹೇಗಾಯಿತೋ ಕಿಟ್ಟಾ?” ಕೇಳಿದರು ಟ್ರಾವೆಲ್ ಏಜೆನ್ಸಿಯ ಮಾಲಿಕರು.
“ಫಸ್ಟ್ ಕ್ಲಾಸ್!”
“ಊಟ?”
“ಬೊಂಬಾಟ್!”
“ಜಾಗಗಳು? ಪಾರ್ಲಿಮೆಂಟ್ ನೋಡಿದೆಯಾ?”
“ನೋಡಿದ್ದಷ್ಟೇ ಅಲ್ಲ, ಎರಡೂ ಕೈಗಳಿಂದ ತಬ್ಬಿಕೊಳ್ಳಲೂ ಟ್ರೈ ಮಾಡಿದೆ. ತುಂಬ ದಪ್ಪ ಇದೆ.”
ಮಾಲಿಕರ ಎದೆಯಲ್ಲಿ ಅವಲಕ್ಕಿ ಕುಟ್ಟಲಾರಂಭಿಸಿತು. ಪಾರ್ಲಿಮೆಂಟಿಗೂ, ಕುತುಬ್ ಮಿನಾರಿನ ಬಳಿಯ ಕಂಬಕ್ಕೂ ವ್ಯತ್ಯಾಸವನ್ನರಿಯದ ಕಿಟ್ಟ ಇನ್ನೇನೇನು ಮಾಡಿರಬಹುದು! ಕುಳಿತಲ್ಲೇ ಕುಸಿದ ಅವರಿಗೆ ಶೈತ್ಯೋಪಚಾರ ಮಾಡಿ ಮನೆಗೆ ಕಳುಹಿಸಿದೆ.
ಪ್ರತಿ ಟೂರ್ ಮುಗಿದ ಎರಡು-ಮೂರು ದಿನಗಳಲ್ಲಿ ಪ್ರಯಾಣಿಕರ ದೂರಿನ ಬೋಗಿಗಳು ನಮ್ಮ ಮುಂದೆ ಬರಲೇಬೇಕು. ಅದು ನಿಯಮ. ದೂರುಗಳು ಗುರುತರವಾದುದರಿಂದ ಹಿಡಿದು ಅತಿ ಕ್ಷುಲ್ಲಕವೂ ಆಗಿರುತ್ತವೆ. ಒಮ್ಮೆ ನಡೆದ ‘ಮೈಸೂರುಪಾಕ್’ ಪ್ರಕರಣವೇ ಇದಕ್ಕೆ ಸಾಕ್ಷಿ.
ಪ್ರಯಾಣಿಕರು ಒಂದೆಡೆ ರಾತ್ರಿ ಕಳೆಯಲು ಅವಕಾಶವಿರುವಾಗ ಅಡುಗೆಯವರು ಯಾವುದಾದರೂ ಸಿಹಿಯನ್ನು ತಯಾರಿಸಿ ಬಡಿಸುವುದು ವಾಡಿಕೆ. ಅಂದು ವೃತ್ತಾಕಾರದ ತಟ್ಟೆಯಲ್ಲಿ ಮೈಸೂರುಪಾಕನ್ನು ತಯಾರಿಸಿ ಇಡಲಾಗಿತ್ತು. ಬಡಿಸುವಾಗ ಮಧ್ಯದಲ್ಲಿದ್ದ ಚಚ್ಚೌಕದ ತುಣುಕನ್ನು ಒಬ್ಬರಿಗೆ, ಕಡೆಯಲ್ಲಿನ ಸೆಮಿಸರ್ಕಲ್ ರೀತಿಯ ತುಣುಕನ್ನು ಅವರ ಪಕ್ಕದವರಿಗೆ ಬಡಿಸಲಾಯಿತು. ಶುರುವಾಯಿತು ಜಗಳ! “ಅವನ ಮೈಸೂರುಪಾಕಿಗಿಂತ ನನ್ನದು ಟೂ ಸ್ಕ್ವೇರ್ ಇಂಚಸ್ ಆಫ್ ಏರಿಯಾ ಕಡಮೆ ಇದೆ. ಇಬ್ಬರೂ ಒಂದೇ ಅಮೌಂಟೇ ಕೊಟ್ಟಿರೋದು. ವೈ ಚಿಕ್ ಪೀಸ್ ಟು ಮಿ? ಅಡಿಕ್ಕಿರೆ ಪಾರು!” ಎನ್ನುತ್ತಾ ಎಂಜಲುಕೈಯಲ್ಲೇ ಭಟ್ಟನನ್ನು ಅಟ್ಟಿಸಿಕೊಂಡು ಬರಲು ತಯಾರಾದ ಆ ತಮಿಳಿಗ. ಈ ಪ್ರಕರಣ ನಮ್ಮ ಆಫೀಸಿನವರೆಗೂ ಬಂದು, ಖಾಜಿನ್ಯಾಯದ ಪ್ರಕಾರ ಅವನಿಗೆ ವೆಂಕಟೇಶ್ವರ ಸ್ಟೀಟ್ ಸ್ಟಾಲ್ನ ಮೈಸೂರುಪಾಕಿನ ಪ್ಯಾಕೆಟ್ ಕೊಟ್ಟಾಗಲೇ ಪ್ರತಿಭಟನೆ ಶಮನವಾದದ್ದು.
ವಿಷಯಕ್ಕೆ ಬರೋಣ. ಈ ಮಡಿಟೂರ್ ಮುಗಿದ ಹದಿನೈದು ದಿನಗಳಾದರೂ ಒಬ್ಬ ದೂರುದಾರನೂ ಪತ್ತೆ ಇರಲಿಲ್ಲ! ಏತನ್ಮಧ್ಯೆ ಕಿಟ್ಟಂಭಟ್ಟ ತನ್ನ ಗೈಡಾವತಾರವನ್ನು Cacophonic ಕಂಠದಲ್ಲಿ ಬಿತ್ತರಿಸಿದ್ದೇ ಬಿತ್ತರಿಸಿದ್ದು. ‘Innocent till proved guilty’ ಆಧಾರದ ಮೇಲೆ ನಾವೂ ಕಿಟ್ಟಂಭಟ್ಟನಿಗೆ ‘Benefit of doubt’ ನೀಡಿ ಸುಮ್ಮನಾದೆವು. ಬೀಸುವ ಕತ್ತಿ ತಲೆಯ ಮೇಲೆಯೇ ಇತ್ತೆಂದು ತಿಳಿದದ್ದು ನಮಗೆ ಟೂರ್ ಮುಗಿದ ನಂತರದ ಹದಿನೆಂಟನೆಯ ದಿನ.
ಮರಳುಗಾಡಿನಲ್ಲಿ ಭಾರ ಹೊತ್ತು ಸಾಗಿ, ಡುಬ್ಬದಲ್ಲಿರುವ ನೀರೂ ಖಾಲಿಯಾಗುವ ಮಟ್ಟಕ್ಕೆ ಬಸವಳಿದ ಒಂಟೆಯ ನಡೆಯನ್ನು ಹೋಲುವಂತೆ ತಟ್ಟಾಡುತ್ತಾ ಹದಿನೆಂಟರ ಪೈಕಿಯವರೊಬ್ಬರು ಟ್ರಾವೆಲ್ಸ್ ಮೆಟ್ಟಿಲಿನ ಬಳಿ ನಿಂತು ‘ಎನ್ನ ಕೈಪಿಡಿದು ಮೇಲ್ಸೆಳೆದುಕೊಳ್ಳಯ್ಯಾ ಪ್ರಭುವೇ’ ಎಂದು ಭಕ್ತನು ದೇವನನ್ನು ಕಣ್ಣಲ್ಲೇ ಬೇಡಿಕೊಳ್ಳುವ ಪರಿಯಲ್ಲಿ ನನ್ನತ್ತ ದೃಷ್ಟಿಯನ್ನೇರಿಸಿದರು. ‘ಬಳಲಿರ್ಪೆ ಬಾ ಒಳಗೆ; ಕುಳಿತುಕೋ ಕುರ್ಚಿಯಲಿ; ನಾ ಕೊಡುವ ಕೂಲ್ ಡ್ರಿಂಕ್ಸನು’ ಎನ್ನುತ್ತಾ ಕುರ್ಚಿಗೇರಿಸಿ, ಕೈಗೆ ಕೋಲಾ ಇರಿಸಿ, “ಏನಾಯಿತು?” ಎಂದೆ.
ಕೇಳಬಾರದಾಗಿತ್ತು.
ಮುಂದಿನ ಹದಿನೈದು ನಿಮಿಷಗಳ ಕಾಲ ಗೋಳುಸೀರಿಯಲ್ ಕಥೆಗಾರರೂ ಮೆಚ್ಚುವಂತಹ ಮಟ್ಟಕ್ಕೆ ಆತನ ರೋದನಕಾರ್ಯಕ್ರಮ ನಡೆಯಿತು. ಆರು ಕರ್ಚೀಫ್ಗಳು, ಒಂದು ಪ್ಯಾಕೆಟ್ ಪೇಪರ್ ನ್ಯಾಪ್ಕಿನ್ಗಳ ಸಹಾಯದಿಂದ ಸ್ವಚ್ಛ್ ನೇತ್ರ್ ಅಭಿಯಾನ್ ಕೈಗೊಂಡನಂತರ ದುರ್ಯೋಧನನನ್ನು ಕಳೆದುಕೊಂಡ ಧೃತರಾಷ್ಟ್ರನ ಗದ್ಗದ ಸ್ವರದಲ್ಲಿ ಆತ “ಕಿಟ್ಟಂಭಟ್ಟ…” ಎಂದು ಒಂದೇ ಪದ ನುಡಿದರು. ಮತ್ತಾರು ಕರ್ಚೀಫ್ಗಳು ಒದ್ದೆಯಾದವು.
“ತುಂಬ ದೂರುಗಳಿವೆ…” ಆರಂಭಿಸಿದರವರು.
“ಇಂದಿನವರೆಗೆ ಯಾರೂ ದೂರು ನೀಡಿಲ್ಲ. ನಿಮ್ಮದೆಂತಹ ಒರಾತ? ನೀವೇ ಸರಿಯಿಲ್ಲವೆನಿಸುತ್ತದೆ” ಡಿಫೆಂಡಿಂಗ್ ಚಾಂಪಿಯನ್ ಆಗುವ ಕಾತರವೆನಗೆ.
“ಯಾರೂ ಬರದಿರಲು ಕಾರಣ ಯಾರೂ ಇನ್ನೂ ಹಾಸಿಗೆಯನ್ನೇ ಬಿಟ್ಟಿಲ್ಲದಿರುವುದೇ ಆಗಿದೆ ಸರ್. ಮೊದಲು ಸುಧಾರಿಸಿಕೊಂಡು ಎದ್ದವನೇ ನಾನು.”
ಧ್ವನಿಯಲ್ಲಿದ್ದ ಪ್ರಾಮಾಣಿಕತೆಗೆ ಹರಿಶ್ಚಂದ್ರನೂ ಮೆಚ್ಚಿ ಅಹುದಹುದೆನ್ನಬೇಕು.
“ಒಂದೊಂದಾಗಿ ಹೇಳಿ. ಊಟ ಹೇಗಿತ್ತು?”
“ಎಲ್ಲಿತ್ತು? ‘ದೇವಸ್ಥಾನದ ಪ್ರಸಾದ ಇರೋವಾಗ ಇವೆಲ್ಲ ತಿನ್ನಬೇಡಿ’ ಅಂತ ಬೆಳಗ್ಗೆ ಊಟ ಕ್ಯಾನ್ಸಲ್ ಮಾಡಿಸಿದ ಆ ಕಿಟ್ಟ. ತಿಂಡಿ ಕೊಡೋ ಎಂದರೆ ‘ಪೂಜೆಗೆ ಮುಂಚೆ ತಿಂಡಿ ತಿಂದರೆ ಪುಣ್ಯ ಸಿಗೋಲ್ಲ’ ಅಂತ ಕೊಳೆಹಾಕಿದ. ರಾತ್ರಿಯಾದರೂ ಬಡಿಸಯ್ಯ ಎಂದರೆ ‘ನಿಮ್ಮ ವಯಸ್ಸಲ್ಲಿ ಎರಡೆರಡು ಹೊತ್ತು ಊಟ ವರ್ಜ್ಯ’ ಅಂದ್ಬಿಟ್ಟ. ದೇವಸ್ಥಾನದ ಪ್ರಸಾದ, ಹಣ್ಣುಹಂಪಲುಗಳೇ ಗಟ್ಟಿ ಸಾರ್. ತುಟಿಗೆ ಕಾಫಿ ಸೋಕದೆ ಹದಿನೈದು ದಿವಸ ಕಳೆಯೋ ನರಕಯಾತನೆ…. ಛಿ! ನಮ್ಮ ಶತ್ರುಗಳಿಗೂ ಬೇಡ” ಕರ್ಚೀಫ್ ಒದ್ದೆಯಾಗಿಸುವತ್ತ ಕಂಠ ಸರಿಯಿತು. ಕಣ್ಣುಗಳಲ್ಲಿ ತೆಳ್ಳನೆಯ ಪಸೆ ಕಂಡಿತು.
“ವಸತಿ?”
“ಚಿನ್ನಸ್ವಾಮಿ ಸ್ಟೇಡಿಯಂ ಇದ್ದಹಾಗಿತ್ತು. ‘ಸೆಪರೇಟ್ ರೂಂ ಕೊಡಪ್ಪ’ ಅಂದರೆ ‘ನೀವೇನು ಹನಿಮೂನ್ಗೆ ಬಂದಿದ್ದೀರೋ ತೀರ್ಥಯಾತ್ರೆಗೋ?’ ಅಂತ ಗದರೋವ್ನು ಸಾರ್.”
“ಓಹ್! ಐ ಆಮ್ ಸಾರಿ. ಸ್ನಾನಕ್ಕೆ ಬಾತ್ರೂಮೂ…?”
“ಇತ್ತು. ಚೆನ್ನಾಗಿಯೂ ಇತ್ತು. ಆದರೆ ಕಿಟ್ಟ ‘ನೆತ್ತಿ ನೆನೆದರೆ ಸಾಕು. ಸ್ನಾನಾಂತ ಆನೆಗಳ ತರಹ ನಿಂತ್ಬಿಟ್ರೆ ಕ್ಯೂ ಬೆಳೆಯತ್ತೆ ನಡೀರಿ’ ಅಂತ ಓಡಿಸ್ಕೊಂಡು ಹೋಗ್ತಿದ್ದ. ಪೂರ್ವಜನ್ಮದಲ್ಲಿ ಅವನು ಬೇಟೆನಾಯಿ ಆಗಿದ್ದನೋ ಏನೋ ಸಾರ್…. ಅಟ್ಟಿಸ್ಕೊಂಡಟ್ಟಿಸ್ಕೊಂಡ್ ಓಡಿಸ್ತಿದ್ದ” ಸ್ಮರಣಮಾತ್ರದಿಂದಲೇ ಮತ್ತಷ್ಟು ಸುಸ್ತಾದರಾತ.
ಇಷ್ಟೆಲ್ಲ ಆದಮೇಲೆ ಲಗೇಜ್ ಬಗ್ಗೆ ಕೇಳಬಾರದೆನಿಸಿತು. ಆದರೂ “ಲಗೇಜೂ…?” ಎಂಬ ಪದ ಹೊರಜಾರಿಬಿಟ್ಟಿತು.
“ಎಲ್ಲಕ್ಕಿಂತ ಭಾರವಾದುದು ಪಾಪ. ಅದನ್ನೇ ಹೊತ್ತ ನಿಮಗೆ ಈ ಲಗೇಜೇನು ಲೆಕ್ಕ ಅಂದ್ಬಿಟ್ಟ ಸಾರ್!” ಕುಳಿತಲ್ಲೇ ಕುಸಿದರಾತ.
ಅವರನ್ನೇನೋ ಹತ್ತಿರದ ನರ್ಸಿಂಗ್ ಹೋಂಗೆ ಸೇರಿಸಿ ಡ್ರಿಪ್ಸ್ ಕೊಡಿಸುತ್ತಿದ್ದೇನೆ.
ಇನ್ನೂ ಹದಿನೇಳು ಜನರು ದೂರುಬೆಟ್ಟಗಳನ್ನು ಹೊತ್ತು ಬರುವವರಿದ್ದಾರೆ. ಇನ್ನೂ ಏನೇನು ಕಾದಿದೆಯೋ…!