ಎಂದ್ನಂತೆ ಈ ವರ್ಷ್ವೂ ಆಗಸ್ಟು ಬರ್ತೀನೀಂತ ತುತ್ತೂರಿ ಊದಕ್ಮೂರ್ದಿನ ಮುಂಚೆ, ಅಂದ್ರೆ ಜುಲೈ ತನ್ವ್ಯಾಪಾರ ಮುಗಿಸ್ಕೊಂಡು ಷಟರ್ ಎಳ್ಯೋಕ್ ರೆಡಿಯಾಗ್ತಿದ್ ೨೯ನೇ ತಾರೀಖು ಕೈಲಾಸಮ್ಮು, in all his spiritsG ‘What doingಊ ತಮ್ಮೂ…’’ ಅಂತ ಹಾಜರಾದ್ರು.
‘ಸೇಮ್ ಓಲ್ಡ್ choreಊ ಇನ್ ದಿಸ್ ಚೋರ್ ಬಜಾರೂ ಸಾರೂ. ಖಿಚಡಿ ಸರ್ಕಾರದ ಮತ್ತೊಂದು ಆವೃತ್ತಿಗೆ ನಿಮಗೆ ಸ್ವಾಗತ” ಎಂದೆ.
‘ನೆತ್ತಿಮೇಲಕ್ಹೋದ್ಕಣ್ಣನ್ನ ತನ್ಕವಾಟಕ್ಕೇ ವಾಪಸ್ತರ್ಬೇಕಾದ್ರೆ ಖಿಚಡೀನೇ ಬೆಸ್ಟ್ ಸಲ್ಯೂಷನ್ನು ತಮ್ಮೂ. ಐರಾವತಾನೂ ಕೆಲವೊಮ್ಮೆ ಅಡಿ ತಪ್ಪತ್ತೆ ಅಂತ ಅಂದೇ ಹೇಳಿರ್ಲಿಲ್ವೇ! To err is aristocracy; to tether is democracy ಅಂತ ಕೇಳಿಲ್ವೇ?’’
‘ಮಿಸ್ಟರ್ ಕೈಲಾಸಂ…’’ ಆರಂಭಿಸಿದೆ.
‘ಮಿಸ್ರ್ಗೂ ಮಿನಿಸ್ಟರ್ಗೂ‘ನಿ’ ಒಂದೇ ವ್ಯತ್ಯಾಸ. ಆ ‘ನಿ’ ಯಾವ್ದ್ ಗೊತ್ತಾ ತಮ್ಮೂ?’’ ಹುಬ್ಬೇರಿಸಿದರು ಕೈ.
‘ನಿಜ, ನಿಜಾಮ, ನಿಯಮ, ನಿಯಾಮಕ…’’ ಹೇಳುತ್ತಾ ಹೋದೆ.
‘ನಿಯತ್ತು ಮೈ ಬಾಯ್. ಮಿಸ್ಟರ್ ಅನ್ನಿಸ್ಕೊಳೋವ್ನಿಗಿರೋ ನಿಯತ್ತು ಮಿನಿಸ್ಟರ್ ಆದವನಿಗೆ ಇರಲ್ಲ.’’
‘ಆದರೆ ನಿಮ್ಕಾಲ್ದಲ್ಲಿದ್ದ ಮಂತ್ರಿಗಳೂ…’’ ಮೂಗೆಳೆದೆ.
‘ಆಗಿನ ಮಿನಿಸ್ರ್ಗಳು ಅಡ್ಮಿನಿಸ್ರ್ಗಳು; ಈಗಿನ ಮಿನಿಸ್ರ್ಗಳು mini stir ಗಳು. ಅವಕಾಶ ಸಿಕ್ಕರೆ mega stir, ಅಂದ್ರೆ ಸಂಪು, ಹರತಾಳಗಳನ್ನ ಬೇಕಾದ್ಹಾಗೆ ಮಾಡಿಸ್ತಾರೆ.’’
‘ಕೈಲಾಸಂ, ಈಗಿನ ಕೆಲವು ಬೆಳವಣಿಗೆಗಳ ಬಗ್ಗೆ ನಿಮ್ಮ ಅಭಿಪ್ರಾಯವನ್ನ ತಿಳಿಯುವ ಆಸೆ ನನಗೆ.’’
‘ಗೋ ಅಹೆಡ್. ಹೂಡು ನಿನ್ನ ಬುದ್ಧಿಗಾಂಡೀವವನ್ನು; ತೂರಿಬಿಡು ಪ್ರಶ್ನಾಂಬುಗಳನ್ನು.’’
‘ರಾಜ್ಕಾರ್ಣದಲ್ಲಿ ಎಲ್ಲೆಲ್ಲೂ ಬಿಟ್ಟಿ ಭಾಗ್ಯ ಏರ್ಪಾಡಾಗ್ತಿದೆಯಲ್ಲಾ…’’
‘ಹ್ಯೂಮನ್ ನೇರ್ರೂ ತಮ್ಮೂ. ತಾ ಅನ್ನೋದು ತಲ್ತಲಾಂತರ್ದಿಂದ್ಲೂ ಇರತ್ತೆ, ಕೋ ಅನ್ನೋ ಕುಲಕ್ಕೇ ಬಂದಿರಲ್ಲ. ನಮ್ಕಂಪ್ನಿ ನಾಟಕದಲ್ಲಿ ರಾಜಪುತ್ರನಿಗೂ ರೋಗಿಗೂ ನಡುವೆ ನಡೆದ ಸಂಭಾಷಣೆ ಮರೆತ್ಯೇನು?’’
ಮನಸ್ಸು ಅಂದಿಗೆ ಓಡಿತು. ಶೂರ್ಪನಖಿಯ ಪಾತ್ರಧಾರಿಯ ಪ್ರವೇಶವಾಗುತ್ತಿದ್ದಂತೆಯೇ ಸಭಿಕರಲ್ಲೊಬ್ಬನು ಮೂರ್ಛೆ ಹೋಗಿರುತ್ತಾನೆ. ಸಭೆಯಲ್ಲಿದ್ದ ವೈದ್ಯನೊಬ್ಬನು “I am a doctor ನಾನು ಡಾಕ್ಟ್ರು; I shall come ನಾನು ಬರ್ತೇನೆ; If you like ಬೇಕಾದ್ರೆ” ಎನ್ನುತ್ತ ಮೂರ್ಛಾವತಾರಿಯ ಟ್ರೀಟ್ಮೆಂಟ್ಗೆ ಧಾವಿಸಿ, ‘ಇವನ ಚಿಕಿತ್ಸೆಗೆ ಬ್ರಾಂದಿ ಬೇಕಾಗುತ್ತದೆ” ಎನ್ನುತ್ತಾನೆ.
ರಾಜಪುತ್ರನು ಮೂರ್ಛಿತನ ಜೇಬಿನಿಂದ ಟಿಕೆಟ್ಟನ್ನು ತೆಗೆದು ಪರಿಶೀಲಿಸಿ, ಅಚ್ಚರಿಗೊಂಡು, ‘ಒಳ್ಳೇ ಬ್ರಾಂದೀರಿ! ಹೋದ್ವರ್ಷದ್ ಕಾಂಪ್ಲಿಮೆಂಟ್ರೀನ ತೋರ್ಸಿ ಗೇಟ್ಕೀಪರ್ನ ಗೋಲನ್ ಮಾಡಿ, ಡೋರ್ ಕೀಪರ್ಗೆ ಡೋಖಾ ಖಾಯ್ಸಿ, ಪ್ರೊಪ್ರೈಟರ್ನ ಗುಗ್ಗೂ ಬನಾಯ್ಸಿ, ಸೋಫಾ ಕ್ಲಾಸಲ್ಲಿ ಪವಡಿಸಿರೋ ಈ ಪಾಪೀಗೆ… ಬ್ರಾಂದಿ ಬೇರೇನೋ ಈ ಬಾಯ್ಗೆ…? ತಣ್ಣೀರೆರಚ್ರೀ’’ ಎನ್ನುತ್ತಾನೆ.
ಮೂರ್ಛಿತನು ಥಟ್ಟನೆದ್ದು ರಾಜಪುತ್ರನನ್ನು ರೌದ್ರದಿಂದ ಅವಲೋಕಿಸಿ “What is this I say, ಈಗ ಮೂರ್ಛೆ ಬಿದ್ದಿರೋದ್ ನೀನೋ ನಾನೋ? ನೀನ್ಬಿದ್ರೆ ಬೇಕಾದ್ರೆ ತಣ್ಣೀರೆರಚಿಸ್ಕೋ… ನನ್ವಿಷ್ಯದಲ್ಲೇನೂ interfere ಮಾಡ್ಬೇಡ… mind your own business. ನಿನ್ನ ನಾಟ್ಕ ನೀನಾಡ್ಕೋ; ನನ್ನನ್ನ ಮೂರ್ಛೆಯಿಂದ ಎಬ್ಸೋದು ಡಾಕ್ಟರಿಗೆ ಬಿಟ್ಬಿಡು… ಎನ್ನುತ್ತ ಶೂರ್ಪನಖಿಯತ್ತ ನೋಡಿ, ‘ಅಯ್ಯೋ… ರಾಕ್ಷಸೀ… she demon… she demon… ಬರ್ತಿದೇ… ಮೂರ್ಛೆ ಬರ್ತಿದೇ…’’ ಎನ್ನುತ್ತ ಮತ್ತೆ ಮೂರ್ಛೆ ಬೀಳುತ್ತಾನೆ.
‘ನೆನಪಾಯ್ತು ಸರ್’ ಎಂದೆ.
‘ಬಾಟಲ್ ಬ್ರಾಂದೀಗೋಸ್ಕç ಮೂರ್ಛೆ ಬಿದ್ದ ಆ ಸಭಿಕನಿಗೂ, ಬಿಟ್ಟಿ ಭಾಗ್ಯಕ್ಕೋಸ್ಕ್ರ ಸುಳ್ಸರ್ಟಿಫಿಕೇಟ್ ಮಾಡಿಸ್ಕೊಳೋ ಉಳ್ಳವರಿಗೂ ಏನೇನೂ ವ್ಯತ್ಯಾಸ್ವಿಲ್ಲ ನನ್ರಾಜಾ. ಪ್ರಜೆಗಳು noteworthy ಆಗೋಹಾಗೆ ಆಡಳಿತ ಮಾಡ್ರೋ ಅಂದ್ರೆ worth a few notes ಮಟ್ಟಕ್ಕಿಳ್ಸೋದು is a discordant noteಉ ಫಾರ್ ಸೊಸೈಟಿ ಮೈ ಬಾಯ್!’’
“Note ಮಾಡ್ಕೋಬೇಕಾದ್ದೇ ಸರ್. ಸಮಾಜದ ಬಗ್ಗೆ ಸಾಕಷ್ಟು ಕಳಕಳಿಯಿದ್ದೋವ್ರು ನೀವು. ಪೋಸ್ಟ್ ಪ್ಯುಬರ್ಟಿ ಮ್ಯಾರೇಜು, ವಿಡೋ ಮ್ಯಾರೇಜು…’’
‘ಮ್ಯಾರೇಜಿನ ವಿಂಡೋನೇ ಕ್ಲೋಸ್ ಮಾಡಕ್ಹೊರ್ಟಿದಾರಲ್ಲ ತಮ್ಮೂ… Marriage ಅನ್ನೋ ಪದದಲ್ಲೇ Mar ಹಾಗೂ rage ಇವೆ ಅನ್ನೋದನ್ನ ಹೆಜ್ಜೆಹೆಜ್ಜೆಗೂ ನೆನೆಸ್ಕೊಂಡ್ಕೂತ್ರೆ ಸಂಸಾರದಲ್ಲಿರೋ some ಸಾರ ಕಾಣಕ್ಸಾಧ್ಯವೇ? ಈಗಿನದೆಲ್ಲ Sumಗೋಸ್ಕರ ಸಂಸಾರ ಆಗ್ಬಿಟ್ಟಿದೆ ರಾಜಾ.’’
‘ಈ ವರ್ಷ ಯಾವಾಗ್ಲೂ ಕಾಣದಿದ್ದಂತಹ ಬೇಸಿಗೆಯನ್ನ ಕಂಡ್ವಿ. ಬಿಸಿಲಿನ ಝಳದ ಬಗ್ಗೆ ಏನಾದ್ರೂ ಹೇಳ್ತೀರಾ?’’
‘ಆಗ್ಹೇಳಿದ್ದೇ ಈಗ್ಲೂ ನಡೆಯತ್ತೆ. ಕಮಾಚು ರಾಗ, ರೂಪಕ ತಾಳದಲ್ಲಿ ಕೀರ್ಲಬೇಕಿದನ್ನ:
ರಾರಾಜಿಸುತ್ತಿಹುದು ಬೇಸಿಗೆ ||
ಹುದು ಬೇಸಿಗೆ ||
ತ್ತಿಹುದು ಬೇಸಿಗೆ ||
ಸುತ್ತಿಹುದು ಬೇಸಿಗೆ ||
ಜಿಸುತ್ತಿಹುದು ಬೇಸಿಗೆ ||
ರಾಜಿಸುತ್ತಿಹುದು ಬೇಸಿಗೆ ||
ರಾರಾಜಿಸುತ್ತಿಹುದು ಬೇಸಿಗೆ ||
ಸುಮಬಾಣನ ಸುವ ಸೌರಭ ಭರದಿಂದಲಿ ವಿರಾಜಿಸುತ… || ಆ ||
ಕೀರಂಗಳು ಕಿರಲೂತಲಿ
ಭ್ರಮರಂಗಳು ಭ್ರಮಿಸುತ್ತಲಿ
ಪುಷ್ಪಂಗಳು ಪುಷ್ಪೂತಲಿ
ವೃಕ್ಷಂಗಳು ವೃಕ್ಷೀಸುತ || ಚ || – ರಾರಾಜಿಸುತ್ತಿಹುದು ||
‘ಆಗೇನೋ ಪುಷ್ಪಂಗಳು ಪುಷ್ಪೂತಲಿ ಎನ್ನುವುದಕ್ಕೆ ಅರ್ಥ ಕೊಟ್ಟಿದ್ದೀರಿ. ‘ಹುದು’, ‘ತ್ತಿಹುದು’, ‘ಜಿಸುತ್ತಿಹುದು’ ಎನ್ನುವುದಕ್ಕೂ ಅರ್ಥ ನೀಡಬಲ್ಲಿರಾ?’’
‘ಬರ್ಕೋ ನನ್ರಾಜಾ… ಹುದು ಎಂದರೆ ಹುರಿದಂತಾಗಿದೆ; ದುರಿತವಿದು ಎಂದರ್ಥ. ತ್ತಿಹುದು ಎಂದರೆ ತಾಪಮಾನದ ತಿದಿ ಒತ್ತಿ ಒತ್ತಿ? ಆದ್ದರಿಂದಲೇ ತಿ ಗೆ ತ ವತ್ತು? ‘ಹುದು’ ಎಂದರ್ಥ. ಜಿಸುತ್ತಿಹುದು ಎಂದರೆ ಜಿಸ್ಮ್ ಅನ್ನು ಬೇಸಿಗೆಯು ಸುತ್ತಿಹುದು ಎಂಬುದರ ಶಾರ್ಟ್ ಫಾರ್ಮ್” ನುಡಿದರು ಕೈ.
‘ಬೇಸಿಗೆಯ ಬರಕ್ಕೆ ಪಾತಾಳಗಂಗೆ ಮತ್ತಷ್ಟು ಮೆಟ್ಟಿಲುಗಳನ್ನು ಇಳಿದು ಹೋಗಿ ಗ್ರೌಂಡ್ ವಾಟರ್ ಟೇಬಲ್ ಕುಸಿಯಿತು. ಎಲ್ಲೆಲ್ಲೂ ನೀರಿಗಾಗಿ ಹಾಹಾಕಾರ. ಹೀಗಿರುವಾಗ ಉದ್ಯಾನವನಗಳ ಗತಿಯನ್ನು ಬಣ್ಣಿಸುವಿರಾ?’’
‘ಅದೇ ನಾಟಕದ ಅಧ್ವಾನವನದ ಸೀನೇ ಇಂದು ಮರುಕಳಿಸಿದ್ದು. ಅಪ್ಟುಡೇಟ್ ಸಖಿ ಹೇಳಿರುವಳಲ್ಲ:
ಏನೀ gardenಉ ಬಹಳ silly
ನೋಡಲೂ not a rose or Lilly ||
Waste of time ಊ walking ಇಲ್ಲೀ
Rotten garden surely ||
Follow me maiden ಗಳೆಲ್ಲಾ flowery ವಿಲಾಯ್ತಿಗೇ |
Frost and snow and cold ಅ ತಡೆಯದೆ fog ಇನಲ್ಲಿ Shiveಡಿ ಉವಾ ||
ಇದೇ ತರಹದ ಬೇಸಿಗೆ ಮುಂದಿನ ವರ್ಷವೂ ಬಂದರೆ ಎಕ್ಕಡೆಕ್ಕಡ ಪೀಪಲ್ಸ್ ರಂಗನತಿಟ್ಟು; ಅಕ್ಕಡಕ್ಕಡ ಮನವಾಳ ಟೆಂಟು!’’
‘ಪೀಪಲ್ಸ್ ರಂಗನತಿಟ್ಟು?’’
‘ವಿದೇಶ್ದಲ್ಲಿ ಬೇಸಿಗೆ ಆದಾಗ ಪಕ್ಷಿಗಳು ಹಾರ್ಬರೋ ಜಾಗ ರಂಗನತಿಟ್ಟು. ಇಲ್ಲಿ ಬೇಸಿಗೆ ಆದಾಗ ಜನಗಳು ಹಾರ್ಹೋಗೋ ಜಾಗ ಪೀಪಲ್ಸ್ ರಂಗನತಿಟ್ಟು – ಸ್ವಿಟ್ಝರ್ಲ್ಯಾಂಡ್, ಆಸ್ಟ್ರೇಲಿಯಾ…’’
‘ಆಹಾ! ನಮ್ಜನಕ್ಕೆ extreme ಬೆವರ್ allergy. ಹೇಗಾದ್ರೂ ಅದನ್ನ ತಪ್ಪಿಸ್ಕೋಬೇಕು. ಆದ್ರಿಂದ ಇಲ್ಲಿರಕ್ಕೂ ಸರಿ, ಅಲ್ಹೋಗಕ್ಕೂ ಸರಿ.’’
‘ಸರಿ ಸರಿ ಅಂದಾಗೊಂದ್ಮಾತು ನೆನಪಾಯ್ತು ನೋಡು ನನ್ರಾಜಾ. ಕೆಲವರನ್ನ ಸಂಗೀತ ಕೇಸರಿ ಅಂತಾರೆ. ಆ ಗಾಯಕ ಹಾಡಲ್ದೆ ಇನ್ನೇನೂ ಕಲೀದೇಯಿದ್ರೆ ಏನಂತಾರೆ?’’
‘ಏನು?’’
‘ಸಂಗೀತಕೇ ಸರಿ!’’
‘ಕೇಸರಿ ಅನ್ನೋದ್ರ ಬಗ್ಗೆಯೇ ನೀವೊಂದು ವಿಶೇಷ ಅರ್ಥ ಕೊಟ್ಟಿದ್ದಿರಿ ಅಲ್ವಾ ಸಾರ್?’’
‘ಎಸ್ ಮೈ ಬಾಯ್. ಕೇಸರಿ ಅಂದರೆ ಮೀನು, fish.’’
‘ಕೇಸರಿ ಅಂದ್ರೆ ಸಿಂಹ, ಕುದುರೆ, ಹಾಲಿಗೆ ಬೆರೆಸಿಕೊಳ್ಳುವ ವಸ್ತು ಅಂತೆಲ್ಲ ಗೊತ್ತು. ಮೀನು ಅಂತ…’’
‘ನಮ್ ಬ್ರಾಹಣ್ಕೇ ನಾಟಕದಲ್ಲಿ ಮಿಸ್ ವೈಢೂರ್ಯಂಗೆ ಮಿಸ್ ಸರೋಜ ಹೇಳೋದನ್ನ ಯಥಾವತ್ತು ಹೇಳ್ತೀನಿ ಕೇಳು:
ಸಂಸ್ಕöÈತದಲ್ಲಿ ‘ಕ’ ಅಂದರೆ ನೀರು. ಕೇ ಅಂದರೆ ನೀರಿನಲ್ಲಿ; ಸೃ ಅಥವಾ ಸರ್ ಅಂದ್ರೆ to move! Therefore, ಕೇ ಸರತಿ ಇತಿ ಕೇಸರಿ? moves in the waterಊ? ನೀರಿನಲ್ಲಿ ಓಡಾಡುವ ಜಲಚರ? therefore a fish!’’
‘ಆ ಸನ್ನಿವೇಶ ಉಂಟಾಗೋದು ಅವರೆಲ್ಲ ಪಾಯಸ ಕುಡೀತಿದ್ದಾಗ. ಅಲ್ಲಿಂದ ಮುಂದಿನ ಕೊಂಚ ಸ್ವಾರಸ್ಯವನ್ನೂ ಹೇಳಿಬಿಡಿ ಸರ್.’’
‘ಕೇಸರಿಯನ್ನ ಪಾಯಸದಲ್ಲಿ ಬೆರೆಸ್ತಾರಲ್ವಾ… ಫ್ರೆಂಚ್ ಭಾಷೆಯಲ್ಲಿ ಪಾಯಸಂ ಅಂದರೆ ಫಿಷ್? ಮೀನು. ಇದನ್ನು ಕೇಳಿಸ್ಕೊಂಡ ಕಿಟ್ಟು ‘ದೇವ್ರೇ ಗತಿ ಹಾಗಾದರೆ! Though I am a vegetarian in Sanskrit, I am an ‘animalian’… ಅಲ್ಲ… ‘fisherian’ in Frenchoo? In short,, ಸಂಸ್ಕೃತದಲ್ಲಿ ಪಾಯಸ ಕುಡಿದರೆ ಫ್ರೆಂಚ್ನಲ್ಲಿ ಮೀನು ತಿಂದಹಾಗೆ.’’
‘ಅಂತೂ you go on fishing for something new ನಿಮ್ಮ ನಾಟಕಗಳಲ್ಲಿ. ನೀವು ಈಗಿನ ಕಾಲದಲ್ಲಿದ್ದಿದ್ರೆ ಯಾವ ರೀತಿಯ ನಾಟಕ ರಚಿಸ್ತಿದ್ರಿ ಸಾರ್?’’
“Perish such thoughts ಮೈ ಬಾಯ್. ಲೈಟು, ಸ್ಕ್ರೀನು, ಮೈಕು, ಡ್ರೆಸ್ಸು, ಸ್ಟೇಜು ಏನೂ ಇಲ್ದೆ ನಾಟ್ಕ ಆಡೋ ನಾಯ್ಕರ್ ಮುಂದೆ ಸ್ಟೇಜ್ಗೇಂತ ನಾಟ್ಕ ಆಡಿ ಗೆಲ್ಲೋ ಹೊತ್ಗೆ ನಾಟಕಕಾರ ಫೈನಲ್ ಸ್ಟೇಜ್ ತಲ್ಪಿರ್ತಾನೆ. ಗುಡ್ ಬೈ ತಮ್ಮೂ. ನೆಕ್ಸ್ಟ್ ಇಯರ್, ಸೇಮ್ ಪ್ಲೇಸ್… but, maybe with some new ideas for new dramas. ಬೈ ಬೈ ಬಚ್ಚೂ” ಎನ್ನುತ್ತಾ ಕೈಲಾಸಂ ಮರೆಯಾದರು.