ಶಿವಮೊಗ್ಗ ಜಿಲ್ಲೆಯ ಹೊಳೆಹೊನ್ನೂರಿನ ರಾಷ್ಟ್ರೋತ್ಥಾನ ವಿದ್ಯಾಲಯ ಬೆಂಗಳೂರು ಕೇಂದ್ರಿತ ಸೇವಾಸಂಸ್ಥೆ ‘ರಾಷ್ಟ್ರೋತ್ಥಾನ ಪರಿಷತ್’ ನಡೆಸುತ್ತಿರುವ ಒಂದು ಶೈಕ್ಷಣಿಕ ಪ್ರಕಲ್ಪ. ಗ್ರಾಮಸಮುದಾಯದ ಸಮಗ್ರ ಬೆಳವಣಿಗೆಯನ್ನು ಕಣ್ಮುಂದೆ ಇರಿಸಿಕೊಂಡು 1988ರಲ್ಲಿ ಇಲ್ಲಿ ಪ್ರಾಥಮಿಕ ಶಾಲೆಯನ್ನು ಆರಂಭಿಸಲಾಗಿದೆ. ಈ ವಿದ್ಯಾಲಯ ತನ್ನ ಸಂಸ್ಕಾರಪ್ರದ ಮತ್ತು ಸಂಘಟನಾ ಚಟುವಟಿಕೆಗಳಿಂದಾಗಿ ಸಾರ್ವಜನಿಕರ ಮೆಚ್ಚುಗೆ ಪಡೆದಿದೆ.
ಸ್ಥಳ ಮತ್ತು ಸಂದರ್ಭ: ಶಿವಮೊಗ್ಗ ಜಿಲ್ಲೆಯ ಭದ್ರಾವತಿ ತಾಲ್ಲೂಕಿನ ಒಂದು ಎಸ್ಸೆಸ್ಸೆಲ್ಸಿ ಪರೀಕ್ಷಾ ಕೇಂದ್ರ. ವಿದ್ಯಾರ್ಥಿಗಳು ಪರೀಕ್ಷಾ ಹಾಲ್ನಲ್ಲಿ ಕುಳಿತು ಬರೆಯಲು ಸಜ್ಜಾಗಿದ್ದಾರೆ. ಅಲ್ಲಿ ಕೆಲವು ಶಿಕ್ಷಕರು ವಿದ್ಯಾರ್ಥಿಗಳಿಗೆ ಉತ್ತರ ಹೇಳಿಕೊಡಲು ಬಂದರು. ಇದರಲ್ಲಿ ಹೊಸತೇನೂ ಇಲ್ಲ; ರಾಜ್ಯದ ಕೆಲವು ಭಾಗಗಳಲ್ಲಿ ಇದು ತೀರಾ ಸಾಮಾನ್ಯ. ಅವರು ನಕಲುಮಾಡಿಸುವ ತಮ್ಮ ಕೆಲಸವನ್ನು ಆರಂಭಿಸಬೇಕು ಎನ್ನುವಷ್ಟರಲ್ಲಿ ವಿದ್ಯಾರ್ಥಿನಿಯೊಬ್ಬಳು ಎದ್ದು ನಿಂತು, “ನೀವು ಯಾರೂ ಏನೂ ಹೇಳಿಕೊಡುವುದು ಬೇಡ. ನಮಗೆ ಗೊತ್ತಿದ್ದರೆ ನಾವು ಬರೆಯುತ್ತೇವೆ” ಎಂದಳು. “ಇಲ್ಲಮ್ಮಾ, ನಿನಗೆ ಬೇಡದಿದ್ದರೆ ಬಿಡು; ಬೇರೆಯವರಿಗೆ ಹೇಳಿಕೊಡುತ್ತೇವೆ” ಎಂದು ಆ ಶಿಕ್ಷಕರು ತಮ್ಮ ವರಸೆಯನ್ನು ಮುಂದುವರಿಸಿದರು. ಈಕೆ ಪಟ್ಟು ಬಿಡದೆ “ಇಲ್ಲ ಇಲ್ಲ, ನೀವು ಅವರಿಗೆ ಹೇಳುವಾಗ ನಮಗೆ ಕನ್ಫ್ಯೂಸ್ ಆಗುತ್ತದೆ; ತೊಂದರೆಯಾಗುತ್ತದೆ. ನೀವು ಹೋಗಿ; ಇಲ್ಲವಾದರೆ ಕಂಪ್ಲೇಂಟ್ ಕೊಡಬೇಕಾಗುತ್ತದೆ” ಎಂದು ಎಚ್ಚರಿಸಿದಳು. ಉತ್ತರ ಹೇಳಿಕೊಡಲು ಬಂದವರು ಸುಮ್ಮನೆ ಬಾಯಿಮುಚ್ಚಿಕೊಂಡು ಹೋದರು.
ಅನ್ಯಾಯದ ವಿರುದ್ಧ ಈ ರೀತಿಯಲ್ಲಿ ದಿಟ್ಟತನವನ್ನು ತೋರಿ ಪರೀಕ್ಷೆಯ ಪಾವಿತ್ರ್ಯವನ್ನು ಉಳಿಸಲು ತನ್ನದಾದ ಕೊಡುಗೆ ನೀಡಿದವಳು ಅದೇ ತಾಲ್ಲೂಕಿನ ಹೊಳೆಹೊನ್ನೂರು ರಾಷ್ಟ್ರೋತ್ಥಾನ ವಿದ್ಯಾಲಯದ ವಿದ್ಯಾರ್ಥಿನಿ. ನಕಲುಹೊಡೆಯುವುದು ನಮ್ಮ ಭಾವೀ ಜನಾಂಗವನ್ನು ಅಡ್ಡದಾರಿಗೆ ಎಳೆಯುವ ಒಂದು ಸನ್ನಿವೇಶ ಎಂದು ನಾವು ಭಾವಿಸುವುದಾದರೆ ಹೊಳೆಹೊನ್ನೂರಿನ ಈ ರಾ?ತ್ಥಾನ ವಿದ್ಯಾಲಯ ಎಂತಹ ಘನಕಾರ್ಯವನ್ನು ಮಾಡುತ್ತಿದೆ ಎಂಬುದರ ಅರಿವಾಗುತ್ತದೆ. ದು?ರು ಎಲ್ಲ ಕಾಲದಲ್ಲೂ ಇದ್ದರು; ಸಜ್ಜನರ ಮೌನವೇ ಸಮಾಜ ಕೆಡಲು ಕಾರಣವಾದ ಇಂದಿನ ಬಹುದೊಡ್ಡ ಸಮಸ್ಯೆ ಎಂಬುದನ್ನು ನೆನಪಿಸಿಕೊಂಡರೆ ಆ ಶಾಲಾಮಕ್ಕಳ ಈ ಗಟ್ಟಿತನದ ಮಹತ್ತು ತಿಳಿಯುತ್ತದೆ.
‘ಉತ್ಥಾನ’ದ ಪರವಾಗಿ ಹೊಳೆಹೊನ್ನೂರು ಶಾಲೆ ಮತ್ತು ಇದರ ನೇತೃತ್ವದಲ್ಲಿ ಸುತ್ತಲಿನ ಊರುಗಳಲ್ಲಿ ನಡೆಯುತ್ತಿರುವ ಶಿಶುಮಂದಿರಗಳ ಮಕ್ಕಳ ಪೋಷಕರನ್ನು ಭೇಟಿಮಾಡಿದಾಗ ಈ ಸಂಸ್ಥೆಗಳಿಗೆ ಸೇರಿದ ಬಳಿಕ ತಮ್ಮ ಮಕ್ಕಳಲ್ಲಾದ ಪರಿವರ್ತನೆಗಳನ್ನು ಬಣ್ಣಿಸುವುದಕ್ಕೆ ಅವರಿಗೆ ಶಬ್ದಗಳೇ ಸಾಕಾಗುತ್ತಿಲ್ಲವೇನೋ ಅನ್ನಿಸಿತು. “ಬೆಳಗ್ಗೆ ಯಾರ ಒತ್ತಾಯವೂ ಇಲ್ಲದೆ ಬೇಗನೆ ಏಳುತ್ತಾರೆ. ಮುಖ ತೊಳೆದು ಸ್ನಾನ ಮಾಡಿ ಪ್ರಾರ್ಥನೆಗಳನ್ನು, ಶ್ಲೋಕಗಳನ್ನು ಹೇಳುತ್ತಾರೆ. ದೇವರಿಗೆ, ಮನೆಯ ಹಿರಿಯರಿಗೆ ನಮಸ್ಕರಿಸುತ್ತಾರೆ. ಹಿರಿಯರ ಆಶೀರ್ವಾದ ಪಡೆದು ಶಾಲೆಗೆ ಹೊರಡುತ್ತಾರೆ. ಮನೆಗೆ ಯಾರಾದರೂ ಅತಿಥಿಗಳು ಬಂದರೆ ಅವರನ್ನು ಸ್ವಾಗತಿಸಿ ಮಾತನಾಡಿಸುತ್ತಾರೆ. ಮನೆಯನ್ನು ಶುಚಿಯಾಗಿಡುವುದು, ಮನೆಯ ಚಿಕ್ಕ ಮಕ್ಕಳನ್ನು ನೋಡಿಕೊಳ್ಳುವುದು ಮುಂತಾದ ಜವಾಬ್ದಾರಿಗಳನ್ನು ನಿರ್ವಹಿಸುತ್ತಾರೆ. ಸಂಜೆ ಶಾಲೆಯಿಂದ ಮರಳಿದ ಬಳಿಕ ಮತ್ತೆ ತಮ್ಮ ಚಟುವಟಿಕೆಗಳನ್ನೆಲ್ಲ ನಿರ್ವಹಿಸುತ್ತಾರೆ” ಮುಂತಾಗಿ ಪೋಷಕರು ಸಂತೋಷದ ಬುಗ್ಗೆಗಳಾಗಿ ತಮ್ಮ ಮಕ್ಕಳ ಬಗ್ಗೆ ಹೇಳಿಕೊಂಡರು. ಶಾಲೆಯ ಬಗ್ಗೆ, ಅಲ್ಲಿನ ಶಿಕ್ಷಕರ ಬಗ್ಗೆ ಅಪೂರ್ವವಾದ ಮೆಚ್ಚುಗೆ ಕೃತಜ್ಞತೆಗಳನ್ನು ವ್ಯಕ್ತಪಡಿಸಿದರು.
ಇಂಗ್ಲಿಷ್ ಮಾಧ್ಯಮ ವ್ಯಾಮೋಹ ಅಷ್ಟೇ
ಮಕ್ಕಳ ಹೆತ್ತವರಾದ, ಬೇರೆ ಶಾಲೆಯ ಇಬ್ಬರು ಶಿಕ್ಷಕರ ಮೆಚ್ಚುಗೆ ಮಾತುಗಳು ಇಲ್ಲಿ ಉಲ್ಲೇಖಾರ್ಹ ಎನಿಸುವುದರ ಜೊತೆಗೆ ಅವು ಶಾಲೆಗೆ ಸಂಬಂಧಿಸಿದ ಕೆಲವು ಸಂಕೀರ್ಣ ಅಂಶಗಳನ್ನು ಕೂಡ ತೆರೆದಿಡುತ್ತವೆ; ಹತ್ತನೇ ತರಗತಿಯವರೆಗೂ ಇಲ್ಲಿ ಅನುಸರಿಸಲಾಗುವ ಕನ್ನಡ ಮಾಧ್ಯಮ ಕೂಡ ಜೊತೆಗೇ ಪ್ರಸ್ತಾವಗೊಂಡಿತು: “ಇಂಗ್ಲಿಷ್ ಮಾಧ್ಯಮ ಎಂದರೆ ಸುಮ್ಮನೆ ನಮ್ಮಗಳಿಗೆ ಒಂದು ವ್ಯಾಮೋಹ ಅಷ್ಟೇ. ಅದೊಂದು ಭಾ? ಮಾತ್ರ. ನಾವದನ್ನು ಮತ್ತೆಯೂ ಕಲಿತುಕೊಳ್ಳಬಹುದು. ಮಕ್ಕಳಿಗೆ ಮನೋವಿಕಾಸ ಆಗಬೇಕೆಂದರೆ ಮಾತೃಭಾಷಾ ಶಿಕ್ಷಣವೇ ಬೇಕು. ಇತರ ಪೋಷಕರಲ್ಲಿ ಆ ಬಗ್ಗೆ ಯಾವ ರೀತಿಯ ಮನೋಭಾವನೆ ಇದೆಯೊ ಗೊತ್ತಿಲ್ಲ. ಆದರೆ ಮಕ್ಕಳಿಗೆ ಮಾತ್ರ ಮಾತೃಭಾಷಾ ಶಿಕ್ಷಣವೇ ತುಂಬ ಒಳ್ಳೆಯದು. ಓರ್ವ ಸರ್ಕಾರೀ ಶಾಲಾಶಿಕ್ಷಕಿಯಾಗಿ ನಾನು ಹೇಳುವುದಾದರೆ ಅದು ನಮ್ಮ ಶಾಲೆಯಲ್ಲೂ ಇದೆ. ಅದಕ್ಕೆ ಪೂರಕವಾಗಿ ಶಿಕ್ಷಕರಿಗೆ ಇರಬೇಕಾದ ಸ್ವಾತಂತ್ರ್ಯ ಇರಬಹುದು; ಇನ್ನೊಂದು ಇರಬಹುದು. ಅದಕ್ಕೆ ಸಂಬಂಧಿಸಿ ಅಲ್ಲಿ ಅಂತಹ ಅನೇಕ ಸಮಸ್ಯೆಗಳಿವೆ. ಇಲ್ಲಿ ಮಾತ್ರ ಆ ಸಮಸ್ಯೆ ನಾವು ಕಾಣುತ್ತಿಲ್ಲ. ಶಿಕ್ಷಕರ ಪರಿಶ್ರಮ ಇರಬಹುದು, ಹೊಂದಾಣಿಕೆ ಇರಬಹುದು. ಎಲ್ಲ ರೀತಿಯಲ್ಲೂ ಇಲ್ಲಿ ತುಂಬ ಚೆನ್ನಾಗಿದೆ.
“ಮುಖ್ಯವಾಗಿ ಹೇಳುವುದಾದರೆ ಇಲ್ಲಿ ಬೇರೆಬೇರೆ ಕಾರ್ಯಕ್ರಮಗಳನ್ನು ಹಾಕಿಕೊಳ್ಳುತ್ತಾರೆ. ರಾಷ್ಟ್ರೀಯ ಹಬ್ಬಗಳು, ಅಲ್ಲಿ ಮಾಡುವ ಉಪನ್ಯಾಸಗಳು, ಮಕ್ಕಳನ್ನು ತಯಾರು ಮಾಡುವಂಥದ್ದು. ಇಲ್ಲಿ ನಡೆಸುವ ಸಾಮೂಹಿಕ ಸತ್ಯನಾರಾಯಣಪೂಜೆ, ಅಲ್ಲಿನ ಸೇವಾಮನೋಭಾವ: ಇಡೀ ಊರು ಮತ್ತು ಅಕ್ಕಪಕ್ಕದ ಊರಿನವರೆಲ್ಲ ಅದಕ್ಕೆ ಸೇರುತ್ತಾರೆ. ಇನ್ನೊಂದು ಇಲ್ಲಿನ ’ಕೈತುತ್ತು’ ಕಾರ್ಯಕ್ರಮ. ಆ ದಿನ ಪೋಷಕ ತಾಯಂದಿರು ಬಂದು ಇಷ್ಟಿಷ್ಟು ಮಕ್ಕಳಿಗೆ ತಿನ್ನಿಸುತ್ತಾರೆ. ಅಂದರೆ ನಮ್ಮ ಮಕ್ಕಳಿಗೆ ಮಾತ್ರ ನಾವು ತಿನ್ನಿಸುವುದಲ್ಲ. ಇದು ನಮ್ಮ ಮಕ್ಕಳು ಜಾತಿ-ಪಂಗಡ ಎಂಬ ಭೇದಭಾವವಿಲ್ಲದೆ ಬೇರೆಯವರ ಮಕ್ಕಳ ಜೊತೆ ಮತ್ತು ಆ ಮಕ್ಕಳು ನಮ್ಮ ಮಕ್ಕಳ ಜೊತೆ ಬೆರೆಯುವ ಒಂದು ಅಪೂರ್ವ ಕಾರ್ಯಕ್ರಮ; ಅದರಿಂದ ಉತ್ತಮ ಒಡನಾಟ ಬರುತ್ತದೆ. ಒಟ್ಟಿನಲ್ಲಿ ಒಂದು ಸಮಾಜದಲ್ಲಿ ಹೇಗೆ ಇರಬೇಕೆಂಬುದನ್ನು ಇಲ್ಲಿ ಕಲಿಸುತ್ತಾರೆ.”
ಶಿಕ್ಷಕರಿಗೆ ಇರಬೇಕಾದ ಸ್ವಾತಂತ್ರ್ಯ ಸರ್ಕಾರೀ ಶಾಲೆಗಳಲ್ಲಿ ಇಲ್ಲದಿರುವುದು ಒಂದು ಪ್ರಮುಖ ಸಮಸ್ಯೆ ಎಂಬಂತೆ ಈ ಶಿಕ್ಷಕಿ ಹೇಳಿರುವುದು ಗಮನಾರ್ಹ. ಮುಖ್ಯವಾಗಿ ಸ್ವಾತಂತ್ರ್ಯದ ಕಾರಣದಿಂದ ರಾ?ತ್ಥಾನ ಶಾಲೆಯ ಶಿಕ್ಷಕರು ಏನೇನು ಸಾಧಿಸುತ್ತಾರೆಂದು ಉದ್ದಕ್ಕೂ ನೋಡುತ್ತಾ ಹೋಗಬಹುದು. ಇನ್ನು ಇಂಗ್ಲಿಷ್ ಮಾಧ್ಯಮದ ಆಕ?ಣೆಯ ಬಗ್ಗೆ ಅವರ ಅಭಿಪ್ರಾಯ ಕೇಳಿದರೆ ಪೋಷಕರು ಸರ್ವಾನುಮತದಿಂದ ನಕ್ಕುಬಿಟ್ಟರು!
ಪೋಷಕರು ಕೂಡ ಆದ ಸರ್ಕಾರೀ ಶಾಲೆಯ ಇನ್ನೋರ್ವ ಶಿಕ್ಷಕ ಚಂದ್ರಶೇಖರ್ ಅವರು ರಾಷ್ಟ್ರೋತ್ಥಾನ ವಿದ್ಯಾಲಯ ಮತ್ತು ಸರ್ಕಾರೀ ಶಾಲೆಗಳನ್ನು ಹೋಲಿಸುತ್ತಾ ಹೀಗೆ ವಿಶ್ಲೇಷಿಸುತ್ತಾರೆ: “ರಾಷ್ಟ್ರೋತ್ಥಾನ ಶಾಲೆಯು ಇತರ ಶಾಲೆಗಳಿಗಿಂತ ವಿಭಿನ್ನವಾಗಿದೆ. ಸರ್ಕಾರೀ ಶಾಲೆಗಳಲ್ಲಿ ಏನಾಗುತ್ತದೆಂದರೆ ಸೆಕ್ಯುಲರ್ ಎಂದರೆ ವ್ಯವಹಾರಪ್ರಧಾ ಕಾನ್ಸೆಪ್ಟ್ ಇಟ್ಟುಕೊಂಡು ನಾವು ಬರೇ ಪಾಠ್ಯಪುಸ್ತಕದಲ್ಲಿ ಏನಿರುತ್ತದೋ ಅದಕ್ಕೆ ಮಾತ್ರ ಅಂಟಿಕೊಂಡು (ಓರಿಯೆಂಟೆಡ್ ಆಗಿ) ಪಾಠ ಹೇಳಬೇಕಾಗುತ್ತದೆ. ಇಲ್ಲಿ ಹಾಗಿಲ್ಲ. ಪಾಠ್ಯಪುಸ್ತಕ ಅಥವಾ ಪಾಠಪಟ್ಟಿ (ಕರಿಕ್ಯುಲಮ್) ಏನಿದೆಯೋ ಅದರ ಜೊತೆಗೆ ಜೀವನಕೌಶಲಗಳನ್ನೂ ಹೇಳಿಕೊಡುತ್ತಾರೆ. ಇಲ್ಲಿ ಕಲಿಯುವ ಮಗುವಿಗೆ ಮನೆ ಬೇರೆ, ಶಾಲೆ ಬೇರೆ ಎಂದು ಯಾವತ್ತೂ ಅನ್ನಿಸುವುದಿಲ್ಲ. ಸರ್ಕಾರೀ ಶಾಲೆಗಳಲ್ಲಿ ಈಗ ಏನಾಗುತ್ತಿದೆ ಎಂದರೆ ಶಾಲೆಯೇ ಬೇರೆ ಮನೆಯೇ ಬೇರೆ ಎಂಬ ಪರಿಸ್ಥಿತಿ ಉಂಟಾಗಿದೆ. ಅದರಿಂದಾಗಿ ಶಾಲೆಯಲ್ಲಿ ಕಲಿತದ್ದು ಮನೆಯಲ್ಲಿ ಮತ್ತು ಮನೆಯಲ್ಲಿ ಕಲಿತದ್ದು ಶಾಲೆಯಲ್ಲಿ ಪರಸ್ಪರ ಪೂರಕವಾಗಿ ಮುಂದುವರಿದುಕೊಂಡು ಅನುವರ್ತನೆಯಾಗಿ ಹೋಗುವುದಿಲ್ಲ. ಅದು ಅಲ್ಲಿ ಆಗುತ್ತಿರುವ ಕೊರತೆ (ಜಡಿಚಿತಿbಚಿಛಿಞ). ನಮ್ಮ ಜೀವನಶೈಲಿ ಈ ಥರ ಇರಬೇಕು; ನಮ್ಮ ಹಿಂದಿನವರು ಇದ್ದ ಕ್ರಮಗಳನ್ನು ಅನುಸರಿಸಬೇಕು ಎಂಬುದನ್ನು ಸರ್ಕಾರೀ ಶಾಲೆಯಲ್ಲಿ ಹೇಳಲು ಸಾಧ್ಯವಾಗುತ್ತಿಲ್ಲ. ಏಕೆಂದರೆ ಅಲ್ಲಿ ಹಾಗೆ ಹೇಳಿದರೆ ’ಮುಖ್ಯಧಾರೆ’ಯ ಕಾನ್ಸೆಪ್ಟ್ನಿಂದ ಹೊರಗೆ ಬಂದು ತನ್ನದೇ ಆದ ಚಿಂತನೆಯನ್ನು ತುಂಬುತ್ತಿದ್ದಾನೆ ಎಂಬಂತಹ ಆರೋಪಗಳು ಬರುತ್ತವೆ. ಇಲ್ಲಿ ಆ ಸಮಸ್ಯೆ ಇಲ್ಲ” ಎಂದರು.
ಶಾಲೆ-ಮನೆ ಸಂಬಂಧ
“ಇಲ್ಲಿ ಶಾಲೆಯಲ್ಲಿ ಕಲಿತದ್ದನ್ನು ಮನೆಯಲ್ಲೂ ಅನುಸರಿಸಬಹುದು. ಮನೆಯಲ್ಲಿ ಕಲಿತದ್ದನ್ನು ಶಾಲೆಯಲ್ಲಿಯೂ ಮಾಡಬಹುದು. ಮನೆ ಮತ್ತು ಶಾಲೆ ಎರಡೂ ಜೊತೆಜೊತೆಗೇ ಹೋಗುತ್ತವೆ. ಇಲ್ಲಿ ಕಲಿಯುವ ಮಕ್ಕಳಲ್ಲಿ ನಾವು ಸಾಕಷ್ಟು ಬದಲಾವಣೆಗಳನ್ನು ಕಾಣಬಹುದು; ಶಿಶುಮಂದಿರದಲ್ಲಿ ಓದುವ ನನ್ನ ಪುಟ್ಟ ಮಗನಲ್ಲೂ ಬದಲಾವಣೆಗಳನ್ನು ಕಾಣುತ್ತಿದ್ದೇನೆ. ಪರಿಸರ, ಮನೆ ಮತ್ತು ಶಾಲೆಗಳ ನಡುವೆ ಆಂತರಿಕವಾದ ಜೋಡಣೆ (ಲಿಂಕ್) ಇದ್ದಾಗ ಮಾತ್ರ ಒಂದು ಸಮಾಜದಲ್ಲಿ ಅಭಿವೃದ್ಧಿಯನ್ನು ನೋಡಲು ಸಾಧ್ಯ.”
ಶುಲ್ಕದಿಂದ ನಿಃಶುಲ್ಕದೆಡೆಗೆ
ಈ ವರ್ಷದಿಂದ ಹೊಳೆಹೊನ್ನೂರು ರಾಷ್ಟ್ರೋತ್ಥಾನ ವಿದ್ಯಾಲಯದಲ್ಲಿ ಶಾಲಾಶಿಕ್ಷಣ ಪೂರ್ತಿಯಾಗಿ ಉಚಿತವಾಗಿರುತ್ತದೆ. ಇದುವರೆಗೆ ವಾರ್ಷಿಕವಾಗಿ 2,000; 3,500; 4,000 ರೂಪಾಯಿಗಳು – ಹೀಗೆ ಶುಲ್ಕವನ್ನು ವಿದ್ಯಾರ್ಥಿಗಳಿಂದ ಪಡೆಯುತ್ತಿದ್ದರು. ಇದನ್ನು ಉಚಿತ ಮಾಡಬೇಕೆಂಬುದು ಕಾರ್ಯದರ್ಶಿಯವರ ಕನಸಾಗಿತ್ತು. ಅದೀಗ ಮಾತೃಸಂಸ್ಥೆಯ ಅನುಮೋದನೆಯೊಂದಿಗೆ ಸಾಕಾರವಾಗಿದೆ. ದಿನದ ವೆಚ್ಚ ಸುಮಾರು 15 ಸಾವಿರ ರೂಪಾಯಿಗಳಾಗಿದ್ದು ಅದನ್ನು ವಹಿಸಿಕೊಳ್ಳಲು ಹಲವು ದಾನಿಗಳು ಮುಂದೆ ಬರುತ್ತಿದ್ದಾರೆ. ಸಮಾಜದಲ್ಲಿ ಒಂದೆಡೆ ಶಿಕ್ಷಣ ಕೈಗೆಟುಕದೆ ದುಬಾರಿ ಆಗುತ್ತಿರುವಾಗ ಇವರದು ಇನ್ನೊಂದು ದಿಕ್ಕಿನ ನಡಿಗೆ. ಹೀಗೆ ಇವರು ಅಭಿನಂದನಾರ್ಹರು.
ಭದ್ರಾನದೀದಂಡೆಯ ಮೇಲಿರುವ ಹೊಳೆಹೊನ್ನೂರಿನಲ್ಲಿ ರಾಷ್ಟ್ರೋತ್ಥಾನ ಪರಿಷತ್ತಿನ ಶೈಕ್ಷಣಿಕ ಉಪಕ್ರಮಗಳು ಶಿಶುಮಂದಿರದ ಸ್ಥಾಪನೆಯಿಂದ ಆರಂಭಗೊಂಡವು. ಅದಕ್ಕೆ ಸ್ವಲ್ಪವೇ ಮುನ್ನ ಇದೇ ಊರಿನವರಾದ ಹೊ.ರಾ. ರಾಜಾರಾಮ್ ಅವರ ನೇತೃತ್ವದಲ್ಲಿ ಇಲ್ಲಿ ’ರಾಷ್ಟ್ರೋತ್ಥಾನ ಬಳಗ’ ಆರಂಭವಾಗಿತ್ತು. ಅದು 1987ರ ಶ್ರೀಕೃಷ್ಣ ಜನ್ಮಾ?ಮಿಯಂದು. ಆ ಸಂದರ್ಭವನ್ನು ರಾಜಾರಾಮ್ (ಎಲ್ಲರ ಬಾಯಲ್ಲಿ ರಾಜಣ್ಣ) ಹೀಗೆ ವಿವರಿಸುತ್ತಾರೆ:
“ಶಿವಮೊಗ್ಗದಲ್ಲಿ ನನ್ನ ಬಿ.ಎಸ್ಸಿ. ಮುಗಿಸಿದೆ. ಉನ್ನತ ಶಿಕ್ಷಣಕ್ಕೆ ಹೋಗಬೇಕು ಎನ್ನುವ ಆಸೆ ಇತ್ತು. ಆದರೆ ಮನೆಯಲ್ಲಿ ಅನೇಕ ಕ?ಗಳಿದ್ದವು. ತಂದೆಯವರ ಆರೋಗ್ಯ ಸರಿ ಇರಲಿಲ್ಲ. ಬೆಂಗಳೂರಿನಲ್ಲಿ ರಾಷ್ಟ್ರೋತ್ಥಾನ ಪರಿಷತ್ತಿನ ಮೈ.ಚ. ಜಯದೇವ ಅವರ ಭೇಟಿಯಾಯಿತು. ಅವರು ರಾಷ್ಟ್ರೋತ್ಥಾನ ಬಳಗದ (ಶಿವಮೊಗ್ಗ) ಜಿಲ್ಲಾ ಸಂಚಾಲಕನನ್ನಾಗಿ ನೇಮಿಸಿದರು; ಇಡೀ ಜಿಲ್ಲೆಯಲ್ಲಿ ಪ್ರವಾಸ ಮಾಡಿ ರಾಷ್ಟ್ರೋತ್ಥಾನ ಬಳಗಗಳನ್ನು ಆರಂಭಿಸಬೇಕಿತ್ತು; ನನಗೆ ಹೊಳೆಹೊನ್ನೂರೇ ಕೇಂದ್ರ. ನನ್ನ ಕೇಂದ್ರವಾದ ಇಲ್ಲಿ ಬಳಗ ಇಲ್ಲದಿದ್ದರೆ ಚೆನ್ನಾಗಿರುವುದಿಲ್ಲವೆಂದು ಅದನ್ನು ಆರಂಭಿಸಿದ್ದಾಯ್ತು. ಅನಂತರ ನಿರಂತರವಾಗಿ ನಡೆಯುವಂಥಾದ್ದು ಏನಾದರೂ ಮಾಡಬೇಕು ಎನಿಸಿತು. ಶಿಶುಮಂದಿರವೋ ಶಾಲೆಯೋ ವ್ಯಾಯಾಮಶಾಲೆಯೋ ಏನೋ ಒಂದನ್ನು ಆರಂಭಿಸಿದರೆ ಬಳಗದಲ್ಲಿ ಚಟುವಟಿಕೆ ನಿರಂತರವಾಗಿರುತ್ತದೆ ಎಂಬ ಅಭಿಪ್ರಾಯ ವ್ಯಕ್ತವಾಯಿತು. ನನಗೆ ತಿಳಿದ ಮತ್ತು ಆಸಕ್ತಿಯ ಕ್ಷೇತ್ರ ಶಿಕ್ಷಣಕ್ಷೇತ್ರ. ಆದ್ದರಿಂದ ಶಿಶುಮಂದಿರವನ್ನು ಸ್ಥಾಪಿಸಲು ನಿರ್ಧರಿಸಿದೆವು.
ಹಿರಿಯರ ಪ್ರೇರಣೆ
“ಇದರ ಹಿಂದೆ ಕೆಲವು ಹಿರಿಯರ ಪ್ರೇರಣೆಯೂ ಇತ್ತು. ಹಿರಿಯರಾದ ನ. ಕೃಷ್ಣಪ್ಪನವರು ಒಮ್ಮೆ ’ಅನ್ನ, ಔಷಧಿ ಮತ್ತು ವಿದ್ಯೆಗಳನ್ನು ಮಾರಾಟ ಮಾಡಬಾರದೆಂಬುದು ನಮ್ಮ ಭಾರತೀಯ ಸಂಸ್ಕೃತಿ. ಮಕ್ಕಳಿಗೆ ಸಂಸ್ಕಾರ ಕೊಡಬೇಕು; ಮನೆ, ದೇವಸ್ಥಾನ, ಶಾಲೆ ಮತ್ತು ಆಟದ ಮೈದಾನಗಳು ಸಂಸ್ಕಾರ ಕೊಡಬಲ್ಲ ನಾಲ್ಕು ಕೇಂದ್ರಗಳು. ಅದಕ್ಕೆ ಗಮನ ಕೊಡು’ ಎಂದು ಹೇಳಿದ್ದರು.
ಇನ್ನೋರ್ವ ಹಿರಿಯ ಚಿಂತಕರಾದ ಹೊ. ವೆ. ಶೇಷಾದ್ರಿ ಅವರು ’ಶಾಲೆ ಒಂದು ಸಾಮಾಜಿಕ ಪರಿವರ್ತನೆಯ ಕೇಂದ್ರ ಆಗಬೇಕು. ಸಮಾಜದಲ್ಲಿ ಏನೇನು ಕೊರತೆಗಳಿವೆಯೋ ಅವು ಶಾಲೆಯಿಂದ ನೀಗುವ ಹಾಗಾಗಬೇಕು’ ಎಂದಿದ್ದರು; ಮತ್ತು ಆ ನಿಟ್ಟಿನಲ್ಲಿ ನಾನು ಕೆಲಸ ಮಾಡಬಲ್ಲೆ ಎಂಬ ವಿಶ್ವಾಸವನ್ನು ಅವರು ಪ್ರಕಟಿಸಿದ್ದರು. ಮತ್ತೊರ್ವ ಹಿರಿಯರಾದ
ಅಜಿತ್ ಕುಮಾರ್ ಆರಂಭದಲ್ಲಿ ನನಗೆ ವ್ಯಕ್ತಿತ್ವವನ್ನು ಹೇಗೆ ಇಟ್ಟುಕೊಳ್ಳಬೇಕೆಂದು ಒಂದು ದೃಷ್ಟಿಯನ್ನು ಕೊಟ್ಟವರು. ಹೊಳೆಹೊನ್ನೂರಿಗೂ ಬಂದು ಸಾಮಾಜಿಕ ಕಾರ್ಯಕರ್ತ ಡಾ| ಉಪೇಂದ್ರ ಶೆಣೈ ಅವರೊಂದಿಗೆ ಸಮಗ್ರ ಶಿಶುಶಿಕ್ಷಣದ ಬಗ್ಗೆ ಪ್ರೇರಣೆಯನ್ನು ನೀಡಿದರು. ನಿಧನ ಹೊಂದುವುದಕ್ಕೆ ಒಂದು ವಾರದ ಮುನ್ನ ನಾನವರನ್ನು ಕಂಡಾಗ ಕೃಷ್ಣಪ್ಪನವರು, ಶಾಲೆ ಹೇಗೆ ನಡೆಯುತ್ತಿದೆ ಎಂದು ವಿಚಾರಿಸಿಕೊಂಡರು. ‘ಚೆನ್ನಾಗಿದೆ’ ಎಂದು ಸಂತೋಷ ವ್ಯಕ್ತಪಡಿಸಿ, ’ಆದರೆ ಒಂದು, ಸಮಾಜ ಮತ್ತು ಬೇರೆಯವರು ಬೇರೆಬೇರೆ ರೀತಿಯ ಒತ್ತಡಗಳನ್ನು ಹಾಕುತ್ತಾರೆ. ಯಾವ ಕಾರಣಕ್ಕೂ ನೀನು ಮಣಿಯಬೇಡ. ನೀನು ಮಾಡುತ್ತಿರುವುದು ತುಂಬಾ ಸರಿ ಇದೆ. ಪರಮಾತ್ಮ ನಿನ್ನ ಜೊತೆ ಇರುತ್ತಾನೆ; ಮುಂದುವರಿಸು’ ಎಂದು ಹೇಳಿದರು. ಅಂತಹ ಮಾತುಗಳೇ ನನಗೆ ಪ್ರೇರಣೆ. ಕನ್ನಡ ಮಾಧ್ಯಮಕ್ಕೆ ಗಟ್ಟಿಯಾಗಿ ಅಂಟಿಕೊಂಡಿರುವುದಕ್ಕೆ ಮತ್ತು ಈ ವ?ದಿಂದ ಶಾಲೆಯಲ್ಲಿ ಪೂರ್ತಿ ಉಚಿತ ಶಿಕ್ಷಣವನ್ನು ಅಳವಡಿಸುವುದಕ್ಕೆ ಅದೇ ಕಾರಣ ಎಂದರೆ ತಪ್ಪಲ್ಲ” ಎಂದರು ರಾಜಾರಾಮ್.
ಪಟ್ಟು ಹಿಡಿದ ಅನುಷ್ಠಾನ : ಶಾಂತಾ ಮಾತಾಜಿ
ರಾಜಾರಾಮ್ ಹಾಗೂ ಆಡಳಿತ ಸಮಿತಿಯವರು ಕೈಗೊಂಡ ನಿರ್ಧಾರ ಮತ್ತು ಯೋಜನೆಗಳ ಕಟ್ಟುನಿಟ್ಟಿನ ಅನುಷ್ಠಾನ ಶಾಲೆಯ ದೊಡ್ಡ ಪ್ಲಸ್ ಪಾಯಿಂಟ್. ಮುಖ್ಯೋಪಾಧ್ಯಾಯರು, ಗುರೂಜಿ, ಮತ್ತು ಮಾತಾಜಿಯವರು ಆ ಕೀರ್ತಿಗೆ ಭಾಜನರು. ಆ ಸಂಬಂಧ ಶಾಂತಾ ಮಾತಾಜಿಯವರು ಹೀಗೆ ಹೇಳುತ್ತಾರೆ:
“ನಾನು ಇಲ್ಲಿಗೆ ಬಂದಾಗ (26 ವರ್ಷಗಳ ಹಿಂದೆ) ನನಗೆ ಏನೂ ಗೊತ್ತಿರಲಿಲ್ಲ; ನನ್ನ ಜ್ಞಾನ ಸೊನ್ನೆ ಎನ್ನಬಹುದು. ಇವರು ಏನೇನೋ ಕೇಳುತ್ತಿದ್ದರು. ಅದಕ್ಕೆ ಉತ್ತರ ಕೊಡುವ ಸಾಮರ್ಥ್ಯ ನನ್ನಲ್ಲಿ ಇರಲಿಲ್ಲ. ಯಾಕಾದರೂ ಇಲ್ಲಿಗೆ ಬಂದೆನೋ ಅನ್ನಿಸುತ್ತಿತ್ತು. ಅವರು ಹೇಳುವುದು ಒಂದನ್ನೂ ಮಾಡುವುದಕ್ಕೆ ಆಗುವುದಿಲ್ಲವಲ್ಲಾ ಎಂದು ಬೇಸರವಾಗುತ್ತಿತ್ತು. ಆಗ ನಾನು ಸಮಾಜದಲ್ಲಿ ಇನ್ನೂ ಬೆರೆತಿರಲಿಲ್ಲ. ಒಂದು ಪುಟ್ಟ ದೇವಸ್ಥಾನದೊಳಗೆ ಶಾಲೆ ಎಲ್ಲ ಮಾಡುತ್ತಿದ್ದೆವು. ಒಂದು ಕಾರ್ಯಕ್ರಮ ಮಾಡೋಣವೆಂದರೆ ಅಲ್ಲಿ ಕುರ್ಚಿ, ಸ್ಟೂಲು, ದೀಪ ಏನೂ ಇರಲಿಲ್ಲ. ಯಾರಾದರೂ ಬಂದರೆ ಕುಡಿಯಲು ನೀರು ಕೊಡಲು ಲೋಟ ಇರಲಿಲ್ಲ. ಎಲ್ಲ ಬೇರೆಯವರ ಮನೆಗೆ ಹೋಗಿ ತರಬೇಕಿತ್ತು. ಗುಡುಗುಡು ಓಡಿಹೋಗಿ ತರುತ್ತಿದ್ದೆ. ತಾಯಂದಿರು ನಮಗೆ ಸಹಕಾರ ಕೊಡುವುದು ಆವಾಗಿಂದ ಶುರುವಾಗಿದ್ದು. ಏನೇ ಕೇಳಿದರೂ ಯಾವೊಬ್ಬ ತಾಯಿಯೂ ಇಲ್ಲವೆನ್ನುತ್ತಿರಲಿಲ್ಲ. ನಮಗೆ ಗೊತ್ತಾಗದಾಗ ಅವರೇ ಬಂದು ’ಹೀಗೆ ಮಾಡೋಣ ಬನ್ನಿ’ ಎನ್ನುತ್ತಿದ್ದರು. ಪ್ರಸಾದ ತರುವುದೆಲ್ಲ ಅವರೇ ಮಾಡುತ್ತಿದ್ದರು.
“ಕ್ರಮೇಣ ಸುತ್ತಲಿನ ಎಲ್ಲ ಮನೆಗಳ ಸಂಪರ್ಕ ಮಾಡಿದೆವು. ಎಲ್ಲ ಕಾರ್ಯಕರ್ತರನ್ನು ಕೂಡಿಸಿದೆವು. 10-15 ಜನರ ಹತ್ತು ದಿನಗಳ ಶಿಬಿರ ಮಾಡುವುದು, ಅವರನ್ನು ಇಲ್ಲೇ ಉಳಿಸಿಕೊಳ್ಳುವುದು, ಹಳ್ಳಿಗಳಿಗೆ ಹೋಗಿ ಜನರನ್ನು ಸೇರಿಸುವುದು ಎಲ್ಲ ಮಾಡಿದೆವು. ಒಮ್ಮೆ ಒಂದು ಕೈತುತ್ತಿನ ಕಾರ್ಯಕ್ರಮ ನಿಂತೇಹೋಗುವ ಸಂದರ್ಭ ಬಂದಿತ್ತು. “ರಾಜಣ್ಣ, ಅರ್ಧಗಂಟೆ ಸಮಯ ಕೊಡಿ. ತಯಾರು ಮಾಡಿಕೊಂಡು ಬರುತ್ತೇನೆ” ಎಂದೆ. ನನಗೆ ಹೇಳಿದ್ದು ಆಗಬೇಕು. ಈಗ ಊರು ಚೆನ್ನಾಗಿದೆ. ಆಗ ಊರ ತುಂಬ ಗಲೀಜಿತ್ತು, ಹೊಸಾಗಿ ಇರುತ್ತಿತ್ತು. ಯಾರ ಮನೆಗೂ ಹೋಗಲು ಆಗುತ್ತಿರಲಿಲ್ಲ. ’೮೫ ಜನರಿಗೆ ಹೇಗೆ ಮಾಡುತ್ತೀರಾ?’ ಎಂದು ಕೇಳಿದರು. ಅರ್ಧ, ಮುಕ್ಕಾಲು ಗಂಟೆ ಸಮಯ ಕೊಡಿ ಎಂದೆ; ಎಲ್ಲ ಮನೆಗೂ ಹೋದೆ. ಆಗ ಊರವರ ಪರಿಚಯ ಅ? ಇರಲಿಲ್ಲ. ಆಗ ಊಟದ ಸಮಯ. ಒಬ್ಬರೇ ಒಬ್ಬ ತಾಯಿಯೂ ನಮಗೆ ಊಟ ಕೊಡುವುದಿಲ್ಲವೆಂದು ಹೇಳಲಿಲ್ಲ. ಅರ್ಧಗಂಟೆಯೊಳಗೆ ೫೦ ಜನರಿಗಾಗುವ? ಸಿಕ್ಕಿತು. ಅದೇ ನನಗೆ ಪ್ರೇರಣೆ ಎನ್ನಬಹುದು.
“ಆವತ್ತಿನಿಂದ ಇವತ್ತಿನವರೆಗೂ ಏನೇ ಕೇಳಲಿ, ಊರಿನ ತಾಯಂದಿರೆಲ್ಲ ಬರುತ್ತಾರೆ. ಮಾತೃಮಂದಿರ ಮುಂತಾಗಿ ಎಲ್ಲದರಲ್ಲಿ ಭಾಗವಹಿಸುತ್ತಾರೆ. ಮತ್ತೆ ಮಕ್ಕಳಲ್ಲಿ ಏನಾದರೂ ದೋಷ ಬಂದರೆ ತಕ್ಷಣ ಹೋಗಿ ಶಿಕ್ಷಕರಲ್ಲಿ ಕೇಳುವುದಿಲ್ಲ. ನನಗೆ ಗೊತ್ತಾದರೆ ನಾನು ಹೇಳುತ್ತೇನೆ. ಇಲ್ಲವಾದರೆ ಅವರಲ್ಲಿ ತಿಳಿದುಕೊಂಡು ಹೇಳುತ್ತೇನೆ. ನಾವು ಇಲ್ಲಿ ಮೊದಲಿಗೆ ಯಾರಾರಲ್ಲಿ ಏನೇನು ಸಾಮರ್ಥ್ಯ ಇದೆಯೆಂದು ನೋಡುತ್ತೇವೆ. ಸಂಗೀತವಾದರೆ ಸಂಗೀತ, ಗಣಿತವಾದರೆ ಗಣಿತ, ಭಾಷೆಯಾದರೆ ಭಾಷೆ. ಮತ್ತೆ ಆ ಸಾಮರ್ಥ್ಯಕ್ಕೆ ಒತ್ತು ಕೊಡುತ್ತೇವೆ. ಶಿಶುಮಂದಿರ ಮತ್ತು ಶಾಲೆಯಲ್ಲಿ ನಾವು ಏನು ಕೊಟ್ಟಿದ್ದೇವೋ ಅದೆಲ್ಲ ಈಗ ಕಾಣಿಸುತ್ತಿದೆ. ಅವರವರ ಸಾಮರ್ಥ್ಯದಲ್ಲಿ ಪರಿಣತಿ ಪಡೆದು ಮುಂದುವರಿಯುತ್ತಿದ್ದಾರೆ” ಎನ್ನುತ್ತಾರೆ ಶಾಂತಕ್ಕ.
ಮುಂದುವರಿದು “ಪ್ರತಿಯೊಂದು ಹಂತದಲ್ಲಿ ಕಲಿಯುವುದು ತುಂಬ ಇದೆ. ನನಗೆ ನಿಂತುಕೊಂಡು ಮಾತನಾಡುವುದಕ್ಕೂ ಬರುತ್ತಿರಲಿಲ್ಲ. ಶಿಬಿರಕ್ಕೆ ನಾವೆಲ್ಲ ಹೋಗುತ್ತಿದ್ದೆವು. ಅಲ್ಲಿ ಡಾ|| ಉಪೇಂದ್ರ ಶೆಣೈ ಅವರು ತುಂಬ ಹೇಳುತ್ತಿದ್ದರು; “ಇಲ್ಲ, ನಿನಗೆ ಬರುತ್ತದೆ, ಮಾಡಬೇಕು” ಎನ್ನುತ್ತಿದ್ದರು. ಅದನ್ನು ನಾವು ಕಲಿತೆವು. ಅವರು ಬೇರೆಬೇರೆ ಸಮಯದಲ್ಲಿ ಬಂದು ನೋಡಿ ಹೇಳಿದ್ದಾರೆ; ಕಲಿಸಿದ್ದಾರೆ. ನಾವು ಕಲಿತಿದ್ದೇವೆ. ಇದು ಕಲಿಕಾ ಕೇಂದ್ರಿತ ಶಿಕ್ಷಣಕ್ಕೊಂದು ಉದಾಹರಣೆ. ರಾಜಣ್ಣ ನಮ್ಮನ್ನು ಬೆಳೆಸಿದ್ದಾರೆ. ಯಾವುದು ಎಷ್ಟು ಕಷ್ಟ ಆಗಲಿ; ಅದನ್ನು ಮಾಡಬೇಕು ಅಂದರೆ ಮಾಡಬೇಕು; ಅವರು ಕೂಡ ಅದೇ ರೀತಿ ಇದ್ದಾರೆ. ಇಂಥದ್ದು ಆಗಬೇಕು ಅಂದರೆ ಆಗಬೇಕು. ಈಗ ಅದು ರಕ್ತಗತವಾಗಿ ಬಂದುಬಿಟ್ಟಿದೆ; ಎಲ್ಲ ಶಿಕ್ಷಕರಿಗೂ ಕೂಡ. ಸಹಕಾರ ಏನು ಬೇಕು ಕೊಡುವುದು ಇದ್ದೇ ಇದೆ. ಕೆಲವು ಸಲ ಅವರಿಗೆ ಮಾಡಲು ಆಗದಿದ್ದರೆ ನಿಂತು ಮಾಡಿಸಬೇಕಾಗುತ್ತದೆ. ಒಟ್ಟಿನಲ್ಲಿ ಆಗಬೇಕು ಎಂದರೆ ಪಟ್ಟುಹಿಡಿದು ಮಾಡಲೇಬೇಕು” ಇದು ಶಾಂತಾ ಮಾತಾಜಿ ಅವರ ಕ್ರಮ. ಉತ್ತರಕನ್ನಡ ಜಿಲ್ಲೆಯ ಸಿದ್ದಾಪುರ ಮೂಲದವರಾದ ಶಾಂತಾಮಾತಾಜಿ ತಮ್ಮ ಆಯುಸ್ಸಿನ ಅರ್ಧಭಾಗ, ಅಂದರೆ 26 ವರ್ಷಗಳನ್ನು ಹೊಳೆಹೊನ್ನೂರಿನಲ್ಲಿ ಮಕ್ಕಳು ಮತ್ತು ತಾಯಂದಿರ ಮಧ್ಯೆ ಕಳೆದಿದ್ದಾರೆ.
ಡಾ|| ಉಪೇಂದ್ರ ಶೆಣೈ ಸಂಶೋಧನೆ
“ನಮ್ಮ ಶಿಶುಮಂದಿರಗಳು ರಾಜ್ಯದಲ್ಲೇ ಉತ್ತಮ ಎನಿಸಿವೆ. ಇದು ಮಕ್ಕಳ ವಯೋಮಾನಕ್ಕೆ ಅನುಗುಣವಾದ ಅದದೇ ಶಿಕ್ಷಣ. ಇದರಲ್ಲಿ ರಾಜಿ ಇಲ್ಲ. ಮಕ್ಕಳಿಗೆ ಇಂಗ್ಲಿಷ್ ಕಲಿಸಿ, ಬೇಗ ಬರವಣಿಗೆ ಕಲಿಸಿ ಎಂಬಂತಹ ಹೆತ್ತವರ ಒತ್ತಡಗಳಿಗೆ ನಾವು ಮಣಿದಿಲ್ಲ. ಇಲ್ಲಿ ತಜ್ಞರ ಅಭಿಪ್ರಾಯಕ್ಕೆ ಮಾತ್ರ ಬೆಲೆ, ಪೋಷಕರ ಒತ್ತಡಗಳಿಗಲ್ಲ.ಇದಕ್ಕಾಗಿ ಡಾ|| ಉಪೇಂದ್ರ ಶೆಣೈ ಅವರನ್ನು ಮರೆಯಲು ಸಾಧ್ಯವೇ ಇಲ್ಲ. ಇದು ಅವರ ಕಲ್ಪನೆ. ಅವರು ವಿಶ್ವದ ಎಲ್ಲ ದೇಶಗಳ ಶಿಕ್ಷಣಪದ್ಧತಿಗಳನ್ನು ಓದಿಕೊಂಡಿದ್ದರು. ನನ್ನಲ್ಲಿ ಆ ಕುರಿತು ಚರ್ಚಿಸುತ್ತಿದ್ದರು. ಜಾಗತಿಕಮಟ್ಟದಲ್ಲಿ ಶಿಶುಶಿಕ್ಷಣಕ್ಕೆ ಮುಖ್ಯವಾದ ನಾಲ್ಕು ಪದ್ಧತಿಗಳಿವೆ: ಮಾಂಟೆಸ್ಸೋರಿ ಶಿಕ್ಷಣ ಕ್ರಮ, ಕಿಂಡರ್ಗಾರ್ಟನ್ ಕ್ರಮ, ಶಿಶುವಾಟಿಕಾ ಮತ್ತು ಕರ್ನಾಟಕದ ಅಂಗನವಾಡಿ, ಇವುಗಳ ಒಳ್ಳೆಯ ಅಂಶಗಳನ್ನು ತೆಗೆದುಕೊಂಡು ಅದಕ್ಕೆ ಭಾರತೀಯ ಪದ್ಧತಿಯ ಅಂಶಗಳನ್ನು ಸೇರಿಸಿ ಡಾ|| ಶೆಣೈ ಅವರು ಐದನೆಯದಾದ ನಮ್ಮ ಸಮಗ್ರ ಶಿಶುಶಿಕ್ಷಣವನ್ನು ರೂಪಿಸಿದರು. 1988ರ ಜೂನ್ನಲ್ಲಿ ಶಿಶುಮಂದಿರ ಆರಂಭವಾಯಿತು. ಈ ಸಂಶೋಧನೆಯನ್ನು ಮಾಡಿ ಸುಮಾರು 20 ವರ್ಷ ದಾಟಿದೆ. ನಮ್ಮದು ಸಂಶೋಧನ ಕೇಂದ್ರ. ಕೇವಲ ಶಿಶುಮಂದಿರವಲ್ಲ. ಸಂಶೋಧನೆ, ಪ್ರಾಕ್ಟಿಕಲ್ ನಡೆಸಿ ದಾಖಲೆ ಮಾಡಿ, ವರದಿಯನ್ನು ಸಿದ್ಧಪಡಿಸುತ್ತೇವೆ. ಶಿಕ್ಷಕಿ(ಮಾತಾಜಿ)ಯರಿಗೆ ಪ್ರತಿ ವರ್ಷ 15 ದಿನಗಳ ತರಬೇತಿ ಇರುತ್ತದೆ; ಅದರಲ್ಲಿ ಕಡ್ಡಾಯವಾಗಿ ಭಾಗವಹಿಸಲೇಬೇಕು. ಶಾಂತಾ ಮಾತಾಜಿ ಕೂಡ ಅದಕ್ಕೆ ಹೋಗುತ್ತಾರೆ. ತರಬೇತಿ ಪಡೆಯುತ್ತಾ ಅವರೀಗ ಶಿಬಿರವನ್ನು ನಡೆಸಬಲ್ಲವರಾಗಿದ್ದಾರೆ. ಇಲ್ಲಿ ರಾಜ್ಯಮಟ್ಟದ ಒಂದು ’ಶಿಶುಮಂದಿರ ತರಬೇತಿ ಕೇಂದ್ರ’ವನ್ನು ಸ್ಥಾಪಿಸಬೇಕು. ನಮ್ಮ ರಾಷ್ಟ್ರೋತ್ಥಾನದ ಎಲ್ಲ ಶಾಲೆಗಳಿಗೆ ಇಲ್ಲಿಂದ ಶಿಕ್ಷಕರನ್ನು ಕೊಡಬೇಕು ಎಂಬ ಉದ್ದೇಶವಿದೆ” ಎಂದು ರಾಜಾರಾಮ್ ವಿವರಿಸಿದರು.
ಹೊಳೆಹೊನ್ನೂರಿನ ಶಿಶುಮಂದಿರಕ್ಕೆ ಎರಡು ವರ್ಷ ಆಗುವಾಗ ಪೋಷಕರಿಗೆಲ್ಲ ಇದನ್ನು ಮುಂದುವರಿಸಬೇಕು, ಒಂದನೇ ತರಗತಿಯನ್ನು ಆರಂಭಿಸಬೇಕು ಎನಿಸಿತು; ಅವರಿಂದ ಒತ್ತಡವೂ ಬಂತು. ಹೀಗೆ ಶಾಲೆ ಆರಂಭವಾಯಿತು. ಆಡಳಿತ ಸಮಿತಿಗೆ ಹಿರಿಯೂರು ಕೃಷ್ಣಮೂರ್ತಿಗಳು ಅಧ್ಯಕ್ಷರು ಹಾಗೂ ರಾಜಾರಾಮ್ ಕಾರ್ಯದರ್ಶಿಯಾದರು. ಕೃಷ್ಣಮೂರ್ತಿಗಳು ತೀರಿಕೊಂಡ ಮೇಲೆ ಅಧ್ಯಕ್ಷರ ಹುದ್ದೆ ಖಾಲಿ ಇದೆ. ಹನುಮಂತರಾಯಪ್ಪ, ಸಿದ್ದಪ್ಪ ಹಾಗೂ ಗೋಪಾಲಸ್ವಾಮಿಯವರು ಈಗ ಆಡಳಿತಸಮಿತಿಯ ಸದಸ್ಯರಾಗಿದ್ದಾರೆ. ತರಗತಿಗಳು ಮುಂದುವರಿದು ಪ್ರೌಢಶಾಲೆಯೂ ಆಯಿತು. ಹತ್ತು ವರ್ಷಗಳಿಂದ ರಾಷ್ಟ್ರೋತ್ಥಾನ ವಿದ್ಯಾಲಯ ಎಸ್ಸೆಸ್ಸೆಲ್ಸಿ ಪರೀಕ್ಷೆಗೆ ವಿದ್ಯಾರ್ಥಿಗಳನ್ನು ಕಳುಹಿಸುತ್ತಿದೆ. ಸಮೀಪದ ಗ್ರಾಮೀಣ ಕೇಂದ್ರಗಳಾದ ಸಂನ್ಯಾಸಿ ಕೋಡಮಗ್ಗಿ, ಆನವೇರಿ, ಮಲ್ಲಾಪುರ, ಆರಹತೋಡು ಮತ್ತು ಕೆರೆಬೀರನಹಳ್ಳಿಗಳಲ್ಲಿ ಇದೇ ಮಾದರಿಯ ಶಿಶುಮಂದಿರಗಳು ನಡೆಯುತ್ತಿವೆ. ಎಲ್ಲ ಕಡೆ ಮಾತೃಮಂದಿರಗಳು, ಭಜನಾಕೇಂದ್ರಗಳನ್ನು ನಡೆಸಲಾಗುತ್ತಿದೆ. ಒಟ್ಟಿನಲ್ಲಿ ಹಿರಿಯರು ಹೇಳಿದಂತೆ ಸಾಮಾಜಿಕ ಪರಿವರ್ತನೆಯ ದಿಕ್ಕಿನಲ್ಲಿ ಹೊಳೆಹೊನ್ನೂರು ವಿದ್ಯಾಕೇಂದ್ರ ಅಡಿ ಇಡುತ್ತಿದೆ.
‘ನಲಿ-ಕಲಿ’ಗೆ ಸ್ಫೂರ್ತಿ
ಆಟದ ಜೊತೆಗೆ ಪಾಠ ಹೇಳಿಕೊಡುವುದು ಶಿಶುಮಂದಿರದ ಕ್ರಮ. ಎರಡೂವರೆ ವ?ದಿಂದ ಐದೂವರೆ ವರ್ಷದವರೆಗಿನ ಮಕ್ಕಳು ಇಲ್ಲಿ ಕಲಿಯುತ್ತಾರೆ. ಉಷಾವರ್ಗ, ಅರುಣವರ್ಗ ಹಾಗೂ ಉದಯವರ್ಗ ಎಂದು ಆ ಮಕ್ಕಳ ಸುಮಾರಾದ ವಿಭಜನೆ. ಎರಡು ವರ್ಷ ಆ ಮಕ್ಕಳಿಂದ ಏನನ್ನೂ ಬರೆಸುವುದಿಲ್ಲ. ಭಾಷೆ ಬೆಳವಣಿಗೆಯ ಹಂತ ಪರಿಪೂರ್ಣ (ಪರ್ಫೆಕ್ಟ್) ಆದ ಅನಂತರವೇ ಬರವಣಿಗೆ. ಇಂಗ್ಲಿಷ್ ಮಾಧ್ಯಮದವರು ’ನೀವು ಮೊದಲು ಏನೂ ಬರೆಸುವುದಿಲ್ಲವೇ?’ ಎಂದು ಕೇಳುತ್ತಾರಂತೆ. ಆದರೆ ಇವರ ಕ್ರಮದಲ್ಲಿ ಕಲಿಯುವ ಮಕ್ಕಳು ಒಂದನೇ ತರಗತಿಗೆ ಹೋಗುವಾಗ ಇವರಿಗೆ ಸ್ಪಷ್ಟವಾದ ಉಚ್ಚಾರಣೆ, ಬರವಣಿಗೆ, ಕೂಡಿಸುವುದು, ಕಳೆಯುವುದು, ಗುಣಾಕಾರ, ಭಾಗಾಕಾರ, ಮಗ್ಗಿ ಎಲ್ಲವೂ ಬರುತ್ತದೆ. ಅದೆಲ್ಲ ಹೇಗೆ ಸಾಧ್ಯವೆಂದು ಅಚ್ಚರಿಪಡುವವರು ಬಂದು ನೋಡಿಕೊಂಡು ಹೋಗುವುದು ಕೂಡ ಇದೆ; ತಮ್ಮಲ್ಲಿ ಇದನ್ನು ಮಾಡಲು ಪ್ರಯತ್ನಿಸಿ ಆಗದೆ ಕೈಚೆಲ್ಲಿದವರೂ ಇದ್ದಾರಂತೆ.
ಇದು ’ಹಿಂದೂ ಸೇವಾ ಪ್ರತಿಷ್ಠಾನ’ದ ಶಿಶುಶಿಕ್ಷಣ ಸಂಶೋಧನ ವಿಭಾಗದಿಂದ ಡಾ|| ಉಪೇಂದ್ರ ಶೆಣೈ ಅವರ ಮಾರ್ಗದರ್ಶನದಲ್ಲಿ ಆದದ್ದು. “ಡಾ|| ಶೆಣೈ ಅವರು ಹೇಳಿದಂತೆ ಮಾಡುತ್ತಾ ಬಂದಾಗ ಅವರು ಹೇಳಿದ್ದು ನೂರಕ್ಕೆ ನೂರು ಸತ್ಯ ಎಂಬುದು ನಮ್ಮ ಅನುಭವಕ್ಕೆ ಬಂತು. ಎಲ್ಲ ಪ್ರಗತಿಗಳು ಕಂಡುಬಂದವು. ನಿಜಕ್ಕೂ ಇದರಿಂದ ಮಕ್ಕಳ ಸಮಗ್ರ ವಿಕಾಸ ಆಗುವುದು ಖಚಿತ. ದೈಹಿಕ, ಮಾನಸಿಕ. ಬೌದ್ಧಿಕ, ಆಧ್ಯಾತ್ಮಿಕ ಮುಂತಾಗಿ ಮಕ್ಕಳಿಗೆ ಏನೇನು ಆಗಬೇಕು – ಇದು ಒಂದೊಂದಕ್ಕೂ ಇದರಲ್ಲಿ ಪ್ರತ್ಯೇಕ ಚಟುವಟಿಕೆಗಳಿವೆ. ಒಟ್ಟು ವಿಕಾಸಕ್ಕೆ ೯೩ ಕೌಶಲಗಳ ಪ್ರತ್ಯೇಕ ಚಟುವಟಿಕೆಗಳಿವೆ. ಆ ಚಟುವಟಿಕೆಗಳನ್ನು ಇಲ್ಲಿ ಅಳವಡಿಸಿಕೊಂಡಿದ್ದರಿಂದ ಹೆಚ್ಚಿನ ಲಾಭವಾಗಿದೆ. ತುಂಬ ಜನ ಮತ್ತು ಬಹಳಷ್ಟು ಶಾಲೆಯವರು ಇಲ್ಲಿಗೆ ಬಂದು ಇದನ್ನು ನೋಡಿಕೊಂಡು ಹೋಗಿದ್ದಾರೆ. ಶಿಕ್ಷಣ ಇಲಾಖೆಯ ಅಧಿಕಾರಿಗಳು, ಬಿಇಓ, ಡಿಡಿಪಿಐ, ಬಿ.ಎಡ್. ಕಾಲೇಜಿನವರು ಎಲ್ಲರೂ ಬಂದು ನೋಡಿಕೊಂಡು ಹೋಗಿದ್ದಾರೆ. ಕೆಲವು ಶಾಲೆಗಳಲ್ಲಿ ಮತ್ತು ಇಲಾಖೆಯಲ್ಲಿ ಕೂಡ ಅದನ್ನು ಅಳವಡಿಸಿದ್ದಾರೆ. ಶಿಕ್ಷಣ ಇಲಾಖೆಯ ’ನಲಿ- ಕಲಿ’ ವಿಧಾನವನ್ನು ಆರಂಭಿಸುವ ಮುನ್ನ ಸಂಬಂಧಪಟ್ಟ ಅಧಿಕಾರಿಗಳು ನಮ್ಮ ಶಾಲೆಗೆ ಬಂದು ನೋಡಿ ವರದಿ ಸಲ್ಲಿಸಿದ್ದರು; ಅದಾದ ಬಳಿಕವೇ ಚಟುವಟಿಕೆ ಆಧಾರಿತ ನಲಿ-ಕಲಿ ಆರಂಭವಾದದ್ದು” ಎಂದು ರಾಜಾರಾಮ್ ತಿಳಿಸುತ್ತಾರೆ. ಸರ್ಕಾರ ಮತ್ತು ಶಿಕ್ಷಣ ಇಲಾಖೆಯ ಕೈಯಲ್ಲಿ ಅದು ಏನೇನೋ ಆಗಿದ್ದರೆ, ತನ್ನ ಉದ್ದೇಶ ಸಾಧನೆಯಲ್ಲಿ ವಿಫಲವಾಗಿದ್ದರೆ ಅದಕ್ಕೆ ಇವರು ಹೊಣೆ ಆಗುವುದಿಲ್ಲ.
ಶಿಶುಮಂದಿರವಂತೂ ಮಕ್ಕಳ ವಯೋಮಾನದ ಆಧಾರದಲ್ಲಿ ಇರಬೇಕೆಂದು ಇವರು ತಮ್ಮ ಅನುಭವದ ಆಧಾರದಲ್ಲಿ ಹೇಳುತ್ತಾರೆ. ಶಿಶುಮಂದಿರ ಮತ್ತು ಮೂರನೇ ತರಗತಿವರೆಗೆ ಅಂದರೆ ಎಂಟನೇ ವಯಸ್ಸಿನ ವರೆಗೆ ಮಕ್ಕಳು ಒಟ್ಟಿಗೆ ಇರಬೇಕು. ಇದು ಒಂದು ಗುಂಪು. ನಾಲ್ಕರಿಂದ ಎಂಟನೇ ತರಗತಿವರೆಗೆ ಇನ್ನೊಂದು ಗುಂಪು. 9 ರಿಂದ 12ನೇ ತರಗತಿವರೆಗೆ ಮತ್ತೊಂದು ಗುಂಪು. ಈ ಪ್ರಕಾರ ಒಳ್ಳೆಯ ಪ್ರಗತಿ ಇರುತ್ತದೆ ಎಂಬುದು ತಮ್ಮ ಅನುಭವವೆಂದು ಅವರು ಹೇಳುತ್ತಾರೆ.
ಪ್ರವೇಶಕ್ಕೆ ಷರತ್ತು
ಮಕ್ಕಳ ಶಾಲಾಪ್ರವೇಶಕ್ಕೆ ರಾಷ್ಟ್ರೋತ್ಥಾನ ವಿದ್ಯಾಲಯದವರು ಅವರದ್ದೇ ಆದ ಒಂದು ಮಾನದಂಡವನ್ನು ಅನುಸರಿಸುತ್ತಾರೆ. ಆ ಕುರಿತು ಸಂಸ್ಥೆಯ ಕಾರ್ಯದರ್ಶಿಯವರು “ಬೇರೆ ಕಡೆ ಪ್ರವೇಶಕ್ಕೆ ಹಣ, ಮೆರಿಟ್ (ವಿದ್ಯಾರ್ಹತೆ), ಜಾತಿ (ಮೀಸಲಾತಿ) ಮುಂತಾಗಿ ಏನೇನೋ ಆಧಾರಗಳಿರಬಹುದು. ನಮ್ಮಲ್ಲಿ ಅದು ಯಾವುದೂ ಇಲ್ಲ. ನಾವು ಒಂದು ಅಂಶವನ್ನು ಕೇಳುತ್ತೇವೆ. ಪ್ರತಿದಿನ ಮನೆಯಲ್ಲಿ ಮಾಡಬಹುದಾದ ೨೫ಕ್ಕೂ ಹೆಚ್ಚು ಚಟುವಟಿಕೆ, ನಡತೆಗಳ ಪಟ್ಟಿ ಮಾಡಿದ್ದೇವೆ. ಬೆಳಗ್ಗೆ ಸೂರ್ಯೋದಯಕ್ಕೆ ಮುನ್ನ ಏಳಬೇಕು, ನಿತ್ಯ ಸ್ನಾನ ಮಾಡಬೇಕು, ನಿತ್ಯ ಶಾರೀರಿಕ ಸಂಸ್ಕಾರ (ವ್ಯಾಯಾಮ) ಇರಬೇಕು, ದೇವರಿಗೆ ನಮಸ್ಕರಿಸಬೇಕು, ಕನಿಷ್ಠ ಕೆಲವು ಶ್ಲೋಕಗಳನ್ನು ಹೇಳಬೇಕು, ತಂದೆ-ತಾಯಿಗಳಿಗೆ ನಮಸ್ಕರಿಸಬೇಕು, ಮನೆಯಲ್ಲಿ ಓದಲು ನಿರ್ದಿಷ್ಟ ಜಾಗವನ್ನು ಆಯ್ಕೆ ಮಾಡಿಕೊಳ್ಳಬೇಕು, ಓದಲು ಕುಳಿತುಕೊಳ್ಳುವಲ್ಲಿ ಎದುರಿಗೆ ಮಹಾಪುರು?ರ ಅಥವಾ ದೇವರ ಫೋಟೊ ಇರಬೇಕು – ಮುಂತಾಗಿ ಪಟ್ಟಿ ಮಾಡಿಕೊಂಡಿದ್ದೇವೆ. ಅದರಲ್ಲಿ ಕನಿಷ್ಟ ಐದನ್ನು ಯಾರು ಮಾಡುತ್ತಾರೋ ಅಂತಹ ಮಕ್ಕಳಿಗೆ ಇಲ್ಲಿ ಪ್ರವೇಶ. ಆಮೇಲೆ ಅದನ್ನು ಆರು, ಏಳು ಹೀಗೆ ಜಾಸ್ತಿ ಮಾಡಲು ಹೇಳುತ್ತೇವೆ. ಮನೆ ಸಂಪರ್ಕದಲ್ಲಿ ಅದನ್ನು ಮಾಡುತ್ತೇವೆ. ಈವರೆಗೆ ರೂಢಿ ಇಲ್ಲದಿದ್ದವರು ಮುಂದೆ ಅದನ್ನು ರೂಢಿಸಿಕೊಳ್ಳಬೇಕು. ಪೋ?ಕರು ಮಗುವಿನ ಜೊತೆ ಬರಬೇಕೆಂದಾಗ ಸಂತೋಷದಿಂದ ಬರುತ್ತಾರೆ” ಎಂದು ತಿಳಿಸುತ್ತಾರೆ.
ಹೆತ್ತವರು ಶಾಲೆಯೊಂದಿಗೆ ಪೂರ್ತಿ ಸ್ಪಂದಿಸುವುದು ಇಲ್ಲಿನ ಇನ್ನೊಂದು ವಿಶೇಷ. ಶಾಲೆಗೆ ಯಾರಾದರೂ ಅತಿಥಿಗಳು ಬಂದರೆ, ಅವರಿಗೆ ಊಟ ಆಗಬೇಕು ಎಂದರೆ, ಯಾವುದಾದರೂ ಮನೆಯವರಿಗೆ ತಿಳಿಸಿದರೆ ಸಾಕು. ಮಾಡಿಕೊಂಡು ತರುತ್ತಾರೆ. “ಮಾತಾಜಿ, ನೀವು ಬರುವುದು ಬೇಡ. ನೀವು ಹೇಳಿದರೆ ಸಾಕು ಮಾಡಿ ತರುತ್ತೇವೆ” ಎನ್ನುತ್ತಾರೆ. ಶಾಂತಾ ಮಾತಾಜಿ ಮತ್ತಿತರರದ್ದು ಆ ಬಗೆಯ ಆತ್ಮೀಯ ಸಂಪರ್ಕ. ಮಾತಾಜಿ ಅಂದರೆ ಅಷ್ಟೊಂದು ಗೌರವ. ಇಲ್ಲಿ ರಾಜಕೀಯದ ಪ್ರವೇಶ ಇಲ್ಲ. ಹಿಂದುಳಿದ ಸಮುದಾಯದವರೊಬ್ಬರು ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದಿಂದ ನಿಲ್ಲುವ ಸಂದರ್ಭ ಬಂದಾಗ ರಾಜಾರಾಮ್ “ನೀವು ನಿಲ್ಲಿ. ಯಾವ ಪಕ್ಷವಾದರೇನು? ಊರಿಗೆ ಒಳ್ಳೆಯದು ಮಾಡಬೇಕು ಅಷ್ಟೆ” ಎಂದು ಸಲಹೆ ನೀಡಿದರು. ಅವರು ನಿಂತರು, ಗೆದ್ದರು. ಅವರ ಮಕ್ಕಳು ಇದೇ ಶಾಲೆಯಲ್ಲಿ ಓದಿ ಮೇಲ್ಮಟ್ಟಕ್ಕೆ ಬಂದವರಾದ ಕಾರಣ ರಾಜಾರಾಮ್ ಬಗ್ಗೆ ಅವರಲ್ಲಿ ವಿಶೇಷ ಗೌರವ. ’ಏನು ಮಾಡುತ್ತೀರಿ?’ ಎಂದು ಕೇಳಿದಾಗ, “ಲಂಚ ತೆಗೆದುಕೊಳ್ಳುವುದಿಲ್ಲ. ಪ್ರಾಮಾಣಿಕವಾಗಿ ಕೆಲಸ ಮಾಡುತ್ತೇನೆಂದು ಪ್ರಮಾಣ ಮಾಡಿದ್ದೇನೆ” ಎಂದು ಉತ್ತರಿಸಿದರು. ಅವರಿಂದ ಶಾಲೆಗೆ ಒಂದು ಪ್ರಯೋಜನವಾಯಿತು. ಉಚಿತವಾಗಿ ವಿದ್ಯಾದಾನ ಮಾಡುವ ಸಂಸ್ಥೆ ಎಂಬ ನೆಲೆಯಲ್ಲಿ ಜಿಲ್ಲಾ ಪಂಚಾಯತ್ ಮುಖ್ಯಕಾರ್ಯದರ್ಶಿಯವರು ಶಿಫಾರಸು ಮಾಡಿದರೆ ಕಂದಾಯ ವಿನಾಯತಿ ಸಾಧ್ಯ ಎಂಬ ನೆಲೆಯಲ್ಲಿ ಅರ್ಜಿ ಸಲ್ಲಿಸಿದಾಗ ಪಂಜಾಯತ್ ಅಧ್ಯಕ್ಷರು ತಮ್ಮ ಕಡೆಯಿಂದಲೂ ಹೇಳಿದರು; ಅಂತೂ ಶಾಲೆಗೆ ಶಾಶ್ವತವಾಗಿ ಯಾವುದೇ ಕಂದಾಯ ಇಲ್ಲ ಎಂಬ ಸೌಲಭ್ಯ ದೊರೆತಿದೆ. ಶಿಕ್ಷಣವೇ ಪರಮಧ್ಯೇಯವಾಗಿರುವ ರಾಜಾರಾಮ್ ಅವರಿಗೆ ರಾಜಕೀಯದ ಬಗ್ಗೆ ಮಾತನಾಡಲು ಸಮಯವಿಲ್ಲ; ಮತ್ತು ಅವರು ಪಕ್ಷರಾಜಕೀಯದಿಂದ ಬಹಳ ಮೇಲಿದ್ದಾರೆ ಎನಿಸುತ್ತದೆ.
ಪಾಠ್ಯಪುಸ್ತಕ ಮುಖ್ಯವಲ್ಲ
ಪಾಠ್ಯಪುಸ್ತಕ ಇದ್ದರೂ ಕೂಡ ಕಲಿಕೆ ಇಲ್ಲ. ಸಾಧ್ಯವಾದಷ್ಟು ಚಟುವಟಿಕೆ ಆಧಾರಿತವಾಗಿರುತ್ತದೆ. ಶಾಲಾಮುಖ್ಯೋಪಾಧ್ಯಾಯ ವೀರೆಂದ್ರ ಪಾಟೀಲ್ ಅವರು ವಿಜ್ಞಾನ ಕಲಿಕೆಯ ಬಗ್ಗೆ ತಿಳಿಸುತ್ತಾ, “ಮಕ್ಕಳಲ್ಲಿ ವಿಜ್ಞಾನದ ಬಗೆಗಿನ ಜ್ಞಾನವನ್ನು ಹೆಚ್ಚುಸುವ ಉದ್ದೇಶದಿಂದ ನಮ್ಮ ಶಾಲೆಯವರು ’ವಿದ್ಯಾಭಾರತಿ’(ಅಖಿಲಭಾರತ ಮಟ್ಟದ ಸಂಸ್ಥೆ)ಯ ಜ್ಞಾನವಿಜ್ಞಾನ ಮೇಳದಲ್ಲಿ ಭಾಗವಹಿಸುತ್ತಾರೆ. ಎಲ್ಲರೂ ಭಾಗವಹಿಸುವ ಅವಕಾಶ ಇರುವುದಿಲ್ಲ. ಒಂದಿಷ್ಟು ಮಕ್ಕಳಿಗೆ ಮಾತ್ರ ಅವಕಾಶ ಇರುತ್ತದೆ. ಆದರೆ ಅದನ್ನು ಗಮನದಲ್ಲಿಟ್ಟುಕೊಂಡು ಇಲ್ಲಿರುವ ಎಲ್ಲರಲ್ಲೂ ವೈಜ್ಞಾನಿಕ ಜ್ಞಾನ ಹೆಚ್ಚಾಗಬೇಕೆಂದು ಶಾಲಾಮಟ್ಟದ ವಿಜ್ಞಾನಮೇಳವನ್ನು ಮಾಡುತ್ತೇವೆ. ಎಲ್ಲ ಮಕ್ಕಳಿಗೂ ವಿಜ್ಞಾನದಲ್ಲಿ ಆಸಕ್ತಿ ಬರಬೇಕೆಂಬುದು ನಮ್ಮ ಉದ್ದೇಶ. ಆಯಾ ವಿದ್ಯಾರ್ಥಿ ತನಗೆ ಆಸಕ್ತಿ ಇರುವ ವಿಷಕ್ಕೆ ಸಂಬಂಧಪಟ್ಟ ಒಂದು ಪ್ರಯೋಗದ ಮಾಡೆಲ್ ತಯಾರಿಸಬೇಕು. ಅದರಂತೆ ನಾಲ್ಕರಿಂದ ಹತ್ತನೇ ತರಗತಿವರೆಗಿನ ಮಕ್ಕಳು ವಿಜ್ಞಾನಮೇಳದಲ್ಲಿ ಭಾಗವಹಿಸುತ್ತಾರೆ. ಭಾಗವಹಿಸಿದಾಗ ಯಾವ ಮಗುವಿಗೆ ಮಾತನಾಡುವ ಕೌಶಲವಿದೆ, ಯಾರಿಗೆ ಪ್ರಯೋಗ ಮಾಡುವ ಕೌಶಲವಿದೆ, ಯಾರು ಹೊಸದಾಗಿ ಏನು ಆಲೋಚನೆ ಮಾಡುತ್ತಾರೆ, ಯಾರಾರಿಗೆ ಯಾವಾವುದರಲ್ಲಿ ಸಾಮರ್ಥ್ಯ ಇದೆ ಎಂಬುದನ್ನು ಶಿಕ್ಷಕರು ತೀರ್ಪುಗಾರರಾಗಿ ಗಮನಿಸುತ್ತಾರೆ. ಅದರಂತೆ ಯಾರು ಯಾವ ಪ್ರಯೋಗವನ್ನು ಮಾಡಿದರೆ ಸೂಕ್ತ ಎಂಬುದನ್ನು ನೋಡಿ ಪ್ರೋತ್ಸಾಹ ಕೊಡುತ್ತೇವೆ; ಆ ರೀತಿ ಅವರನ್ನು ಬೆಳೆಸುತ್ತೇವೆ” ಎಂದು ತಿಳಿಸಿದರು. ಶಾಲಾಮಟ್ಟದಿಂದ ಜಿಲ್ಲಾಮಟ್ಟಕ್ಕೆ, ಅಲ್ಲಿಂದ ರಾಜ್ಯಮಟ್ಟಕ್ಕೆ, ಮುಂದೆ ಅಖಿಲಭಾರತ ಮಟ್ಟದವರೆಗೂ ಈ ಶಾಲೆಯ ವಿದ್ಯಾರ್ಥಿಗಳು ಹೋಗುತ್ತಾರೆ. ಇದು ಪ್ರತಿವ? ನಡೆಯುತ್ತದೆ; ಅ.ಭಾ. ಮಟ್ಟದ ಬಹುಮಾನಗಳನ್ನೂ ಗಳಿಸಿದ್ದಾರೆ.
ರಾಜಾರಾಮ್ ಅವರು ಮುಂದುವರಿದು, “ವಿಜ್ಞಾನದಲ್ಲಿ ಎರಡು ಅಂಗಗಳಿವೆ. ಒಂದು – ಪ್ರತಿಯೊಬ್ಬ ವಿದ್ಯಾರ್ಥಿಯೂ ವಿಜ್ಞಾನದ ವಿದ್ಯಾರ್ಥಿ ಆಗಬೇಕು. ಅದಕ್ಕಾಗಿ ಇಲ್ಲಿ ಪ್ರತಿಯೊಬ್ಬನೂ ತನ್ನ ಆಸಕ್ತಿಯಂತೆ ಒಂದು ಮಾಡೆಲನ್ನಾದರೂ ಮಾಡಬೇಕು. ಅದಕ್ಕಾಗಿ ಭೌತಶಾಸ್ತ್ರ ಎಂದರೇನು, ಅದರಲ್ಲಿ ಏನೇನು ವಿಷಯಗಳಿವೆ ಎಂಬುದನ್ನು ವಿವರವಾಗಿ ತಿಳಿಸುತ್ತೇವೆ. ಅದೇ ರೀತಿ ರಸಾಯನಶಾಸ್ತ್ರ, ಜೀವಶಾಸ್ತ್ರಗಳ ಎಲ್ಲ ವಿಷಯಗಳನ್ನು ವಿವರಿಸಿ ’ನೀವು ಯಾವ ವಿಷಯವನ್ನು ಬೇಕಾದರೂ ಆಯ್ಕೆ ಮಾಡಿಕೊಳ್ಳಬಹುದು’ ಎಂದು ತಿಳಿಸುತ್ತೇವೆ. ಅವರ ಆಯ್ಕೆಯನ್ನು ತಿಳಿಸಿದಾಗ ಆ ವಿಷಯಕ್ಕೆ ಸಂಬಂಧಪಟ್ಟು ಏನೇನು ಮಾಡಬಹುದು; ಭೌತಶಾಸ್ತ್ರದಲ್ಲಿ ಎಷ್ಟು ಪ್ರಯೋಗ ಮಾಡಬಹುದು; ರಸಾಯನ ಶಾಸ್ತ್ರ, ಜೀವಶಾಸ್ತ್ರಗಳಲ್ಲಿ ಎಷ್ಟು ಮಾಡಬಹುದು; ಅದಕ್ಕೆ ಏನೇನು ಉಪಕರಣಗಳು ಬೇಕು ಎಂಬುದನ್ನು ಆ ವಿಷಯದ ಶಿಕ್ಷಕರು ತಿಳಿಸುತ್ತಾರೆ. ತಾನು ಆಯ್ಕೆ ಮಾಡಿಕೊಂಡ ಪ್ರಯೋಗವನ್ನು ಆ ವಿದ್ಯಾರ್ಥಿ ಮಾಡಿ ತೋರಿಸಬೇಕು. ಈ ರೀತಿ ನಾಲ್ಕರಿಂದ ಹತ್ತನೇ ತರಗತಿವರೆಗಿನವರು ತಾವು ಆರಿಸಿಕೊಂಡುದನ್ನು ಮಾಡುತ್ತಾರೆ; ಇದು ಒಂದು ಭಾಗ” ಎಂದರು.
ಎರಡನೆಯದಾಗಿ ಇಲ್ಲಿನ ಶಿಕ್ಷಕರು ಬೇರೆ ಶಾಲೆಗಿಂತ ಹೇಗೆ ಭಿನ್ನ ಎಂದರೆ ಇಲ್ಲಿ ವಿದ್ಯಾರ್ಥಿಗಳು ಏನು ಪ್ರಯೋಗ ಮಾಡುತ್ತಾರೆ; ವಿಜ್ಞಾನದ ಆ ಎಲ್ಲ ಪ್ರಯೋಗಗಳನ್ನು ಪ್ರತಿಯೊಬ್ಬ ಶಿಕ್ಷಕರೂ ಮಾಡಬೇಕು. ಅವರಿಗೆ ಒಂದೊಂದು ವಿಷಯ ಕೊಟ್ಟಿರುತ್ತಾರೆ. ಆ ವಿ?ಯವನ್ನು ಅವರು ಪೂರ್ಣ ಅಧ್ಯಯನ ಮಾಡಿ, ಅದರಲ್ಲಿ ತೊಡಗಿಕೊಂಡು ಮಕ್ಕಳಿಗೆ ಹೇಳಿಕೊಡಬೇಕು. ವಿಜ್ಞಾನಶಿಕ್ಷಕರು ಮಾತ್ರವಲ್ಲ; ಕನ್ನಡಶಿಕ್ಷಕರು ಕೂಡ ಸಂಬಂಧಪಟ್ಟ ವಿಜ್ಞಾನ ಪ್ರಯೋಗವನ್ನು ಮಾಡಲೇಬೇಕು.
ಆಟ ಕಡ್ಡಾಯ
ಅದೇ ರೀತಿ ಇಲ್ಲಿ ಎಲ್ಲ ಶಿಕ್ಷಕರೂ ದೈಹಿಕ ಶಿಕ್ಷಕರಾಗಬೇಕಾಗುತ್ತದೆ. ಪ್ರತ್ಯೇಕ ದೈಹಿಕ ಶಿಕ್ಷಕರಿಲ್ಲ. ಇರುವ ಎಲ್ಲರೂ ಆ ಸಾಮರ್ಥ್ಯವನ್ನು ಹೊಂದಿರಬೇಕು ಎಂಬುದು ಇದರ ಉದ್ದೇಶ. ಆಟವನ್ನು ಕಲಿಸುವುದಕ್ಕೂ ಇಲ್ಲಿ ವಿಭಿನ್ನ ಕ್ರಮವನ್ನು ಅನುಸರಿಸುತ್ತಾರೆ. ಮಕ್ಕಳ ಶಾರೀರಿಕ ಸಾಮರ್ಥ್ಯವನ್ನು ಆಧಾರವಾಗಿ ಇಟ್ಟುಕೊಂಡು ಗುಂಪುಗಳನ್ನು ರಚಿಸುತ್ತಾರೆ. ಉದಾಹರಣೆಗೆ, ನಾಲ್ಕನೇ ತರಗತಿಯ ಒಂದು ಮಗು ಏಳನೇ ತರಗತಿಯವರಷ್ಟು ದಷ್ಟಪುಷ್ಟವಾಗಿದ್ದರೆ ಆ ತರಗತಿಯ ಮಕ್ಕಳ ಜೊತೆ ಆಟವಾಡಬಹುದು. ಒಟ್ಟು ಮಕ್ಕಳ ಸಂಖ್ಯೆ ನೋಡಿ, ಎಷ್ಟು ಜನ ಶಿಕ್ಷಕರಿದ್ದಾರೆ ಎಂಬುದನ್ನು ನೋಡಿಕೊಂಡು ಶಾರೀರಿಕ ಸಾಮರ್ಥ್ಯಕ್ಕೆ ಅನುಗುಣವಾಗಿ ಗುಂಪುಗಳನ್ನು ರಚಿಸುತ್ತಾರೆ. ನಿರ್ದಿಷ್ಟ ಜಾಗದಲ್ಲಿ ಶಿಕ್ಷಕರು ಒಂದೊಂದು ಗುಂಪಿನ ಜವಾಬ್ದಾರಿಯನ್ನು ನೋಡಿಕೊಳ್ಳುತ್ತಾರೆ; ಆಟ ಆಡಿಸುತ್ತಾರೆ. ಪ್ರತಿದಿನ ಕೊನೆಯ ಅವಧಿ (ಪೀರಿಯಡ್) ಆಟ ಇರುತ್ತದೆ; ಒಂದು ಮತ್ತು ಎರಡನೇ ತರಗತಿಗೆ ಮಧ್ಯಾಹ್ನದ ಮೂರನೇ ಅವಧಿಗೆ ಆಟ. “ಎಲ್ಲ ಮಕ್ಕಳು ಆಟದಲ್ಲಿ ತೊಡಗಬೇಕೆಂಬುದು ನಮ್ಮ ಉದ್ದೇಶವಾಗಿದ್ದು ಅದು ಚೆನ್ನಾಗಿ ನಡೆಯುತ್ತಿದೆ. ಮಕ್ಕಳು ಶಾರೀರಿಕ ವಿಕಾಸವನ್ನು ಸಾಧಿಸುತ್ತಿದ್ದಾರೆ. ಕಬಡ್ಡಿ ಆಟದಲ್ಲಿ ವಿದ್ಯಾರ್ಥಿಗಳು ಚೆನ್ನಾಗಿ ಬೆಳೆಯುತ್ತಿದ್ದಾರೆ. ಅನೇಕ ಸ್ಪರ್ಧೆಗಳಲ್ಲಿ ಭಾಗವಹಿಸಿ ಶಾಲೆಗೆ ಬಹುಮಾನ ತಂದಿದ್ದಾರೆ” ಎಂದು ಮುಖ್ಯೋಪಾಧ್ಯಾಯರು ತಿಳಿಸುತ್ತಾರೆ.
ಸಮಗ್ರ ಶಿಶುಶಿಕ್ಷಣಕ್ಕೆ ಅನುಗುಣವಾಗಿ ಇಲ್ಲಿನ ಶಿಶುಮಂದಿರದಲ್ಲಿ ಮಗುವಿಗೆ ನಾಲ್ಕು ವರ್ಷ ನಾಲ್ಕು ತಿಂಗಳು ತುಂಬುವವರೆಗೆ ಅಕ್ಷರಾಭ್ಯಾಸವನ್ನು ಮಾಡಿಸುವುದಿಲ್ಲ. ಬಳಿಕ ಸರಸ್ವತೀ ದಿನ, ಅಂದರೆ ಮಾಘಶುದ್ಧ ಪಂಚಮಿಯ ದಿನ ವಿದ್ಯಾರಂಭ; ಆ ಕಾರ್ಯಕ್ರಮ ದೇಶಾದ್ಯಂತ ವಿದ್ಯಾಭಾರತಿ ಶಾಲೆಗಳಲ್ಲಿ ಇರುತ್ತದೆ. ನಾಲ್ಕು ವರ್ಷ ನಾಲ್ಕು ತಿಂಗಳು ದಾಟಿದ ಮಕ್ಕಳು ಬೆಳಗ್ಗೆ ಸೂರ್ಯೋದಯಕ್ಕೆ ಮುನ್ನ ಎದ್ದು ಸ್ನಾನ ಮಾಡಿ ಹೊಸಬಟ್ಟೆ ಹಾಕಿಕೊಂಡು ಹಿರಿಯರಿಗೆ ನಮಸ್ಕರಿಸಿ ದೇವಸ್ಥಾನಕ್ಕೆ ಹೋಗಿ ಶಾಲೆಗೆ ಬರುತ್ತಾರೆ. ಜೊತೆಗೆ ಹೆತ್ತವರು ಪೂಜಾಸಾಮಗ್ರಿಗಳನ್ನು ತೆಗೆದುಕೊಂಡು ಬರಬೇಕು. ಇಲ್ಲಿ ಗಣಪತಿ ಹೋಮ, ಸರಸ್ವತೀ ಹೋಮಗಳನ್ನು ಪ್ರತಿಯೊಬ್ಬರೂ ವೈಯಕ್ತಿಕವಾಗಿ ಮಾಡಬೇಕು. ಬಳಿಕ ಮಗುವನ್ನು ವಿಧ್ಯುಕ್ತವಾಗಿ ತೊಡೆಯ ಮೇಲೆ ಕೂರಿಸಿಕೊಂಡು ತಂದೆ-ತಾಯಿ ಇಬ್ಬರೂ ಬರೆಸುತ್ತಾರೆ. ಅದನ್ನು ಅವರೇ ಮಾಡಬೇಕು; ಯಾವುದೇ ಸ್ವಾಮೀಜಿ ಅಲ್ಲ. ಸ್ವಾಮಿಗಳನ್ನು ಕರೆಸುತ್ತಾರೆ; ಅವರು ಬೀಜಮಂತ್ರ ಹೇಳುತ್ತಾರೆ. ಹೆತ್ತವರು ಅದನ್ನು ಬರೆಯಬೇಕು. ಅದಾದ ಮೇಲೆ ಮಗುವಿನ ಬರವಣಿಗೆ ಪ್ರಾರಂಭವಾಗುತ್ತದೆ; ಆದರೂ ಬರವಣಿಗೆಗೆ ಇಲ್ಲಿ ಒತ್ತಾಯ ಮಾಡುವುದಿಲ್ಲ.
ಶಿಶುಮಂದಿರದಿಂದ ಒಂದನೇ ತರಗತಿಗೆ ಹೋಗುವುದಕ್ಕೆ ಯಾವುದೇ ಓದು ಅಥವಾ ಬರವಣಿಗೆ ಆಧಾರವಲ್ಲ. ಆದರೆ ಚಟುವಟಿಕೆ ಇದೆ. ಅದಕ್ಕೆ ಮಾರ್ಚ್ ತಿಂಗಳಿನಲ್ಲಿ ಮಾತಾಜಿಯವರು ಒಂದನೇ ತರಗತಿಗೆ ಹೋಗುವ ಮಕ್ಕಳನ್ನು ಒಂದನೇ ತರಗತಿಯ ಶಿಕ್ಷಕಿಯರ ಎದುರು ನಿಲ್ಲಿಸಿಕೊಂಡು ಅವರು ಏನೇನು ಕಲಿತಿದ್ದಾರೆ ಎಲ್ಲವನ್ನೂ ಹೇಳಿಸುತ್ತಾರೆ; ಅಮೃತ ವಚನ, ಶ್ಲೋಕಗಳು, ಹಾಡು, ಕಥೆ, ಗಾದೆ, ಗಣಿತ, ಮಗ್ಗಿ, ಕೂಡುವುದು, ಎಣಿಕೆ ಎಲ್ಲವನ್ನೂ ತೋರಿಸುತ್ತಾರೆ; ಆ ರೀತಿ ಮಕ್ಕಳನ್ನು ಒಂದನೇ ತರಗತಿಯವರಿಗೆ ಒಪ್ಪಿಸುತ್ತಾರೆ. ಇದು ಪ್ರತಿವರ್ಷ ನಡೆಯುತ್ತದೆ.
ರಜೆಯಲ್ಲಿ ವಾರ್ಷಿಕೋತ್ಸವ
ಶಾಲಾ ವಾರ್ಷಿಕೋತ್ಸವದ ಆಚರಣೆಯಲ್ಲೂ ಹೊಳೆಹೊನ್ನೂರಿನ ರಾ?ತ್ಥಾನ ಶಾಲೆ ವೈಶಿಷ್ಟ್ಯವನ್ನು ಹೊಂದಿದೆ. ಎಲ್ಲ ಪರೀಕ್ಷೆಗಳು ಮುಗಿದ ಮೇಲೆ ಸಾಮಾನ್ಯವಾಗಿ ಏಪ್ರಿಲ್ ಎರಡನೇ ವಾರ ಇಲ್ಲಿ ವಾರ್ಷಿಕೋತ್ಸವವನ್ನು ಆಚರಿಸಲಾಗುತ್ತದೆ. “ಮೊದಲು ಏಕೆ ಮಾಡುವುದಿಲ್ಲ ಎಂದರೆ ಅದರ ತರಬೇತಿಗೆ ಸುಮಾರು 15-20 ದಿನಗಳು ಬೇಕಾಗುತ್ತವೆ. ಒಳ್ಳೆಯ ಪಾಠದ ಅವಧಿಗಳು ಅದಕ್ಕಾಗಿ ಹೊರಟುಹೋಗುತ್ತವೆ. ಮತ್ತು ನಾವು ವಾರ್ಷಿಕೋತ್ಸವದಲ್ಲಿ ಏನು ಮಾಡಬೇಕೋ ಅದನ್ನು ವರ್ಷಪೂರ್ತಿ ಕಲಿಸುತ್ತಾ ಇರುತ್ತೇವೆ. ಅದಕ್ಕೋಸ್ಕರ ವಿಶೇಷವಾಗಿ ಕಲಿಸಬೇಕು ಅನ್ನುವಂಥದ್ದೇನೂ ಇಲ್ಲ; ವಾರ್ಷಿಕೋತ್ಸವವನ್ನು ನಾವು ಯಾವರೀತಿ ಮಾಡುತ್ತೇವೆಂದರೆ, ಇಡೀ ವರ್ಷದ ಚಟುವಟಿಕೆಗಳಲ್ಲಿ ಮಕ್ಕಳ ಪ್ರತಿಭೆಗೆ ಅನುಗುಣವಾಗಿ ಐದಾರು ವಿಭಾಗಗಳನ್ನು ಮಾಡಿಕೊಳ್ಳುತ್ತೇವೆ. ಒಬ್ಬನಿಗೆ ತುಂಬ ಚೆನ್ನಾಗಿ ಮಾತನಾಡಲು ಬರುತ್ತದೆ; ಯಾವ ಪಾತ್ರ ಕೊಟ್ಟರೂ ಚೆನ್ನಾಗಿ ಅಭಿನಯಿಸುತ್ತಾನೆ ಎಂದಿದ್ದರೆ ಅಂಥವರ ಒಂದು ವಿಭಾಗ ಮಾಡುತ್ತೇವೆ. ಉತ್ತಮ ಮಾತಿದೆ; ಆದರೆ ಅಭಿನಯ ಬರುವುದಿಲ್ಲ ಎಂಬವರದ್ದು ಎರಡನೇ ಗುಂಪು. ಕೆಲವರು ಒಳ್ಳೆಯ ಭಾಷಣ ಮಾಡುತ್ತಾರೆ; ಆದರೆ ನೃತ್ಯ ಬರುವುದಿಲ್ಲ. ಏಕಪಾತ್ರಾಭಿನಯ ಮಾಡುವವರು, ಮೂಕಾಭಿನಯ ಮಾಡುವವರು, ಯಾವುದೇ ಪಾತ್ರಕ್ಕೆ ಹೊಂದಬಲ್ಲವರು ಮುಂತಾಗಿ ಗುಂಪುಗಳನ್ನು ಮಾಡಿ ನಾಟಕ, ನೃತ್ಯಗಳಿಗೆಲ್ಲ ಅವರನ್ನು ಹೊಂದಿಸಲಾಗುತ್ತದೆ. ಶಿಕ್ಷಕರಿಗೂ ಅಷ್ಟೆ; ಯಾರಿಗೆ ಯಾವುದರಲ್ಲಿ ಪ್ರತಿಭೆ, ಸಾಮರ್ಥ್ಯ ಇದೆ ಅದರಂತೆ ಅವರು ಕಲಿಸಿಕೊಡುತ್ತಾರೆ. ತರಬೇತಿ ಕೊಡುವುದಕ್ಕಾಗಿ ಹೊರಗಿನವರನ್ನು ಕರೆಸುವ ಕ್ರಮ ಇಲ್ಲ. ಶಿಕ್ಷಕರೇ ಎಲ್ಲವನ್ನೂ ನಿಭಾಯಿಸುತ್ತಾರೆ.
ಸಮಾಜದಲ್ಲಿ ಸಾಮರಸ್ಯ ತರುವುದು ಸಂಸ್ಥೆಯ ಧ್ಯೇಯಗಳಲ್ಲೊಂದು. ಆ ನಿಟ್ಟಿನಲ್ಲಿ ಕೈತುತ್ತಿನ ಕಾರ್ಯಕ್ರಮದಂತೆ ನಾವು ಹಮ್ಮಿಕೊಂಡಿರುವ ಇನ್ನೊಂದು ಕಾರ್ಯಕ್ರಮ – ಬೆಳದಿಂಗಳಿನ ಕಾರ್ಯಕ್ರಮ. ಬೆಳದಿಂಗಳಿನ ಕಾರ್ಯಕ್ರಮದಲ್ಲಿ ಹತ್ತಾರು ಜನ ತಾಯಂದಿರು ಬಂದು ಅವರೇ ಅಡುಗೆ ಮಾಡುತ್ತಾರೆ. ವಿವಿಧ ಸಮುದಾಯದವರು ಒಟ್ಟಾಗಿ ಅಡುಗೆ ಮಾಡುತ್ತಾರೆ. ಅದು ಸುಮಾರು ೫೦೦ ಜನರ ಕುಟುಂಬ ಮಿಲನ. ಎಲ್ಲರೂ ಒಟ್ಟಿಗೆ ಊಟ ಮಾಡುತ್ತಾರೆ.
ಶಾಲೆಯಲ್ಲಿ ನಡೆಸುವ ಸಾಮೂಹಿಕ ಸತ್ಯನಾರಾಯಣ ಪೂಜೆಯಂತೂ ಪೋಷಕರ ವ್ಯಾಪಕ ಮೆಚ್ಚುಗೆಗೆ ಪಾತ್ರವಾಗಿದೆ. ಅದಕ್ಕೆ ಸುಮಾರು 1500-2000 ಜನ ಸೇರುತ್ತಾರೆ; ಕುಟುಂಬ ಸಮೇತ ಬರುತ್ತಾರೆ. ಪುರೋಹಿತರು ಎಲ್ಲ ದಂಪತಿಗಳಿಂದ ಸಂಕಲ್ಪ ಮಾಡಿಸುತ್ತಾರೆ. ಊಟ ಕೂಡ ಅಷ್ಟೆ. ಸಾಮೂಹಿಕವಾಗಿ ಎಲ್ಲರಿಗೂ ಒಟ್ಟಿಗೆ ಪ್ರಸಾದ ವಿತರಣೆ.
ಶಾಲೆಯ ಎಸ್ಸೆಸ್ಸೆಲ್ಸಿ ಮಕ್ಕಳನ್ನು ಪರೀಕ್ಷೆಗೆ ಮೊದಲು ಮೂರುತಿಂಗಳು ಶಾಲೆಯಲ್ಲೇ ಇರಿಸಿಕೊಂಡು ಓದಿಸುವುದು ಇಲ್ಲಿನ ಇನ್ನೊಂದು ವಿಶೇಷ. ಈ ಬಾರಿ ಹಳ್ಳಿಯಿಂದ ಬಂದ 20 ಮಕ್ಕಳಿದ್ದಾರೆ. ಅವರಿಗೆ ಊಟ, ತಿಂಡಿ ಹೊಳೆಹೊನ್ನೂರಿನ ಮನೆಗಳಿಂದ ಬರುತ್ತದೆ; ತಾಯಂದಿರು ತಂದು ಬಡಿಸಿ ಹೋಗುತ್ತಾರೆ. ಗಂಡುಮಕ್ಕಳಿಗೆ ಶಾಲೆಯಲ್ಲೆ ವಸತಿ; ವಿದ್ಯಾರ್ಥಿನಿಯರು ಶಾಂತಾ ಮಾತಾಜಿ ಜೊತೆ ಅವರ ಮನೆಯಲ್ಲಿರುತ್ತಾರೆ; ಹತ್ತು ವರ್ಷಗಳಿಂದ ಇದು ನಡೆದುಬಂದಿದೆ.
ಈ ವರ್ಷ ರಾಷ್ಟ್ರೋತ್ಥಾನ ಶಾಲೆಗೆ ಮಹತ್ತ್ವದ ವ?. ಸಂಸ್ಥೆಯ ಸುಂದರ ಅಷ್ಟಭುಜಾಕೃತಿ ಕಟ್ಟಡದ ಮೇಲೆ ಒಂದು ಮಹಡಿ ನಿರ್ಮಾಣವಾಗಿ ಸ್ಥಳಾವಕಾಶ ಇಮ್ಮಡಿ ಆಗುತ್ತಿದೆ. ಇದರಿಂದ ಸ್ಥಾಪಕರ ಹಲವು ಕನಸುಗಳು ಸಾಕಾರವಾಗಲು ಅನುಕೂಲವಾಗುತ್ತದೆ.