ಡಿ.ವಿ.ಜಿ.ಯವರ ೧೨೮ನೇ ಜನ್ಮದಿನ (೧೭-೩-೨೦೧೫) ನಿಮಿತ್ತ ವಿಶೇಷ ಲೇಖನ
ಪಾರಂಪರಿಕವಾಙ್ಮಯಕ್ಕೆ ಸಮಕಾಲೀನವ್ಯಾಖ್ಯಾನ ನೀಡಿರುವ `ಪುರುಷಸೂಕ್ತ’, `ಈಶೋಪನಿಷತ್ತು’, `ಶ್ರೀಮದ್ಭಗವದ್ಗೀತಾತಾತ್ಪರ್ಯ’ ಮೊದಲಾದ ದಾರ್ಶನಿಕಗ್ರಂಥಗಳು; `ಶ್ರೀರಾಮಪರೀಕ್ಷಣಂ’, `ಶ್ರೀಕೃಷ್ಣಪರೀಕ್ಷಣಂ’ ಮೊದಲಾದ ಮಥನಕಾವ್ಯಗಳು; `ಮಂಕುತಿಮ್ಮನ ಕಗ್ಗ’, `ಮರುಳಮುನಿಯನ ಕಗ್ಗ’ ಮನನಕಾವ್ಯಗಳು; `ಜ್ಞಾಪಕಚಿತ್ರಶಾಲೆ’ಯಂತಹ ಅನನ್ಯ ಸಾಮಾಜಿಕ ಸ್ಮೃತಿಸಾಹಿತ್ಯ; `ನಿವೇದನ’, `ಕೇತಕೀವನ’, `ಅಂತಃಪುರಗೀತ’ಗಳಂತಹ ಭಾವಗೀತ-ಗೇಯಗೀತಗುಚ್ಛಗಳು; ನಾಟಕಗಳು; `ರಾಜ್ಯಶಾಸ್ತ್ರ’ ಮೊದಲಾದ ವಿಪುಲ ಬೋಧಕ-ವೈಚಾರಿಕ ಬರಹಗಳು; ಜೀವನಚರಿತ್ರೆಗಳು; – ಹೀಗೆ ಕನ್ನಡದ ಎಲ್ಲ ಸಾಹಿತ್ಯಪ್ರಕಾರಗಳನ್ನೂ ಶ್ರೀಮಂತಗೊಳಿಸಿರುವ ಧೀಮಂತ, ಡಿ.ವಿ.ಜಿ. (೧೭.೩.೧೮೮೭ – ೭.೧೦.೧೯೭೫). ಅಭಿವ್ಯಕ್ತಿಮಾಧ್ಯಮಗಳು ಹೀಗೆ ವಿಭಿನ್ನವಾಗಿದ್ದರೂ ಈ ಸಾಹಿತ್ಯರಾಶಿಯಷ್ಟನ್ನೂ ನಿರ್ದೇಶಿಸಿರುವ ಸೂತ್ರಬದ್ಧತೆ-ತಾತ್ತ್ವಿಕಾಧಿಷ್ಠಾನಗಳೂ ಉಂಟು. ಆ ಅಧಿಷ್ಠಾನದ ಶೋಧನೆ, ಪ್ರಕಟೀಕರಣ ಈ ಪ್ರೌಢಪ್ರಬಂಧದ ಆಶಯ. ಡಿ.ವಿ.ಜಿ. ವಾಙ್ಮಯದ ಅಧಿಕಾರಯುತ ವ್ಯಾಖ್ಯಾತರೆಂದು ಗಣ್ಯತೆ ಪಡೆದಿರುವ ವಿಖ್ಯಾತವಿದ್ವಾಂಸ ಶತಾವಧಾನಿ ಡಾ|| ರಾ. ಗಣೇಶ್ ಅವರ ಈ `ಡಿ.ವಿ.ಜಿ. ಅವರ ತಾತ್ತ್ವಿಕನೇಪಥ್ಯ’ ಬಹುಕಾಲದ ಒಂದು ಕೊರತೆಯನ್ನು ನೀಗಿಸಿದೆ. ಡಿ.ವಿ.ಜಿ. ಬರಹಗಳಲ್ಲಿ ಆಸಕ್ತರಾದವರಿಗೆ ಪಥದರ್ಶಕವಾಗಿರುವ ಈ ಶೋಧಲೇಖ ಒಂದು intellectual tour-de-force.
-ಸಂಪಾದಕ
ಜಗತ್ತಿನಲ್ಲಿ ವಿಜೃಂಭಿಸುತ್ತಿರುವ ಅಶಾಂತಿ, ಅಲ್ಲೋಲಕಲ್ಲೋಲಗಳ ಕಾರಣವಿರುವುದು ಜಗತ್ತನ್ನಾಗಿಸಿರುವ ಸತ್ತ್ವರಜಸ್ತಮೋಗುಣಗಳ ಅಸಮಮಿಶ್ರಣದಲ್ಲಿ ಎಂಬ ಸಂಗತಿಯನ್ನು ಲೋಕಶಾಂತಿ, ಸರ್ವೋದಯ ಎಂದು ಹಂಬಲಿಸುವ, ಅದಕ್ಕಾಗಿ ಸಮ್ಮೇಳನಗಳನ್ನು ನಡಸುವ ರಾಜಕೀಯಸ್ಥರು ಗಮನಕ್ಕೆ ತಂದುಕೊಳ್ಳಬೇಕು. ಸತ್ತ್ವೋತ್ಕರ್ಷಕ್ಕೆ ಗಮನವನ್ನು ತಿರುಗಿಸಿದರೆ ಶಾಂತಿ ತಾನಾಗಿ ಲಭಿಸೀತು. ಕಜ್ಜಿಯಿಂದ ನರಳುತ್ತಿರುವವನಿಗೆ ಪುನುಗಿನಿಂದ ಗುಣವಾಗದು.
– ‘ಜೀವನಧರ್ಮಯೋಗ‘
ಉಜ್ಜ್ವಲವಾದ ದೇಶಭಕ್ತಿಯೂ ಡಿ.ವಿ.ಜಿ.ಯವರ ತಾತ್ತ್ವಿಕನೇಪಥ್ಯವನ್ನು ದೃಢಗೊಳಿಸಿದ ಮೌಲ್ಯಗಳಲ್ಲೊಂದಾಗಿದೆ. ಈಚಿನ ದಿನಗಳಲ್ಲಿ ರಾಷ್ಟ್ರಭಕ್ತಿಯೊಂದು ಶಂಕಾಸ್ಪದವೂ ಹೇಯವೂ ಆದ ಸಂಗತಿಯಾಗಿ ನಮ್ಮ ಚಿಂತಕಬ್ರುವರನೇಕರಿಗೆ ತೋರುತ್ತಿರುವಾಗ, ಅದಕ್ಕೆ ತಕ್ಕಂತೆ ದೇಶಭಕ್ತಿಯ ‘ಫ್ಯಾಷನ್’ ಹೆಚ್ಚಿರುವಾಗ ಡಿ.ವಿ.ಜಿ.ಯಂಥವರ ನಿಲವು ನಮಗೆ ತುಂಬ ಉಪಾದೇಯವಾಗದಿರದು.
ಮೊತ್ತಮೊದಲಿಗೆ ಪೂರ್ವಪೀಠಿಕೆಯಾಗಿ ಹೇಳುವುದಾದರೆ ನಮ್ಮ ಆಧುನಿಕವಿಮರ್ಶನಪದ್ಧತಿಗೊಲಿದ ಇತ್ತೀಚಿನ ತಲೆಮಾರಿನವರು ಯಾರೂ ಸಹ ನವೋದಯಕನ್ನಡಸಾಹಿತ್ಯದ ಅಗ್ರಣಿಗಳು ಅರ್ಥಮಾಡಿಕೊಂಡಷ್ಟು ಆಳವಾಗಿ, ಅಧಿಕೃತವಾಗಿ ಭಾರತೀಯಸಂಸ್ಕೃತಿಯನ್ನು ಅರಿತಿಲ್ಲ. ಇದು ದಿಟವಾಗಿ ವಿಷಾದದ ಸಂಗತಿ. ಇತ್ತೀಚೆಗೆ ಹೊಸಹೊಸ ಅಧ್ಯಯನದ ಶಿಸ್ತುಗಳು ಸೇರಿವೆ; ಮಾನವಶಾಸ್ತ್ರ, ಸಮಾಜಶಾಸ್ತ್ರ, ಅರ್ಥಶಾಸ್ತ್ರ ಹಾಗೂ ರಾಜ್ಯಶಾಸ್ತ್ರಗಳ ಸಂಕೀರ್ಣನೇಪಥ್ಯದಲ್ಲಿ ಜುಮುಗುಟ್ಟಿಸುವಂಥ ವಿಚಾರಗಳ ಹೊಮ್ಮಿಕೆಯಾಗಿದೆ, ನಿಜ. ಆದರೆ ಸಮಗ್ರದೃಷ್ಟಿಯ ದರ್ಶನಶಾಸ್ತ್ರದ ಹಿನ್ನೆಲೆಯಲ್ಲಿ ನವೋದಯದ ನೇತಾರರು ಅನುಭವಕ್ಕೆ ತಂದುಕೊಂಡಿದ್ದ ಭಾರತೀಯಸಂಸ್ಕೃತಿ ಮತ್ತು ತಮ್ಮತಮ್ಮ ಸಂವೇದನೆಗಳು ಮತ್ತೂ ವ್ಯಾಪಕ, ಮಹನೀಯ – ಎಂಬುದನ್ನು ಮರೆಯುವಂತಿಲ್ಲ. ಹೀಗಾಗಿ ಈಚೆಗೆ ಡಿ.ವಿ.ಜಿ., ಪು.ತಿ.ನ., ದೇವುಡು, ಗೋವಿಂದ ಪೈ, ಸೇಡಿಯಾಪು ಮುಂತಾದವರನ್ನು ಅವರ ನೆಲೆ-ಹಿನ್ನೆಲೆಯಲ್ಲಿ ಅವರ ಬೇರಿನ ಬಾಳಿಕೆಯಲ್ಲಿ ಸಮಗ್ರವಾಗಿ, ಸಾವಯವವಾಗಿ ಅಧ್ಯಯನ ಮಾಡುವ ಶ್ರದ್ಧೆ ಮೊಳೆಯಲಿಲ್ಲ. ಆದುದರಿಂದ ಸದ್ಯದಲ್ಲಿ ಡಿ.ವಿ.ಜಿ.ಯಂಥವರ ಅನುಭವ, ನಂಬಿಕೆ, ಅಧ್ಯಯನ, ಅನ್ವೇಷಣಗಳ ಸತ್ಯವನ್ನು ಅವರದೇ ಜಾಡಿನಲ್ಲಿ ಕೂಡಿದಮಟ್ಟಿಗೂ ನಿರಾಗ್ರಹದಿಂದ ಸ್ವಸಂವೇದನೆಯೊಡನೆ ಕಂಡುಕೊಳ್ಳಬೇಕು.
ಈ ನಿಟ್ಟಿನಲ್ಲಿ ಮೊದಲಿಗೆ ‘ತತ್ತ್ವ’ ಎಂದರೆ ಏನೆಂಬುದನ್ನು ನೋಡೋಣ. ತತ್ತ್ವಕ್ಕೆ ಸಂಬಂಧಿಸಿದ್ದೇ ತಾತ್ತ್ವಿಕ ತಾನೆ! ಡಿ.ವಿ.ಜಿ.ಯವರದೇ ಮಾತಿನಲ್ಲಿ ಹೇಳುವುದಾದರೆ: ತತ್ತ್ವ ಎಂದರೆ ‘ಅದು ಅದಾಗಿರುವುದು’ (ತತ್+ತ್ವ). ನಮ್ಮ ದೃಷ್ಟಿಯಲ್ಲಿರುವ ಪದಾರ್ಥದಿಂದ ಅದರ ವೇಷ-ಬಣ್ಣಗಳನ್ನು ಕಳೆದು ಅದರ ಗುಣಚೇಷ್ಟೆಗಳನ್ನು ಮರೆತು ಅದು ತಾನೇ ತಾನಾಗಿ – ತಾನು ತಾನೇ ಆಗಿ – ತನ್ನಿಂದ ಬೇರೆ ಯಾವುದರ ಸಂಬಂಧವೂ ಇಲ್ಲದೆ – ಹೇಗಿದೆಯೋ ಹಾಗೆ – ನಿರುಪಾಧಿಕವಾಗಿ ಸ್ವಸ್ವಭಾವದಲ್ಲಿ ಇರುವ ಸ್ಥಿತಿಯೇ ತತ್+ತ್ವ (ತನ್ನತನ) (‘ಜೀವನಧರ್ಮಯೋಗ,’ ಪು.೧೨೫). ಈ ನಿಲವು ಭಾರತೀಯದರ್ಶನಶಾಸ್ತ್ರಗಳಿಗೆ, ವಿಶೇಷತಃ ಅದ್ವೈತವೇದಾಂತಕ್ಕೆ ತುಂಬ ಹೊಂದಿಕೊಳ್ಳುತ್ತದೆ. ಇಂಥ ತತ್ತ್ವದ ಅಂದರೆ ತನ್ನತನದ ದರ್ಶನವನ್ನೇ ಪೂರ್ಣಾನುಭವ ಅಥವಾ ಸಾಕ್ಷ್ಯನುಭವ ಇಲ್ಲವೇ ಸಾರ್ವತ್ರಿಕಾನುಭವವೆಂದೂ ಬ್ರಹ್ಮಾನುಭವವೆಂದೂ ಹೇಳುವುದುಂಟು. ಇಂಥ ಅನುಭವದ ವ್ಯಾಪ್ತಿಗೆ ಬಾರದ ಬದುಕಿನ ಮುಖವೇ ಇಲ್ಲ. ಹೀಗಾಗಿ ತಾತ್ತ್ವಿಕನೇಪಥ್ಯವೆಂದರೆ ಸಮಗ್ರಜೀವನಮುಖದರ್ಶನವೆಂದೇ ಅರ್ಥ.
ನಿರ್ವಿಶೇಷತೆ ಮತ್ತು ಸಾಪೇಕ್ಷತೆ
ಸಾಮಾನ್ಯವಾಗಿ ನಮ್ಮ ವಿಮರ್ಶಕರನೇಕರು ಅನುಭವವೆಂದೊಡನೆಯೇ ಅದರ ವೈಯಕ್ತಿಕತೆ ಮತ್ತು ಸಾಪೇಕ್ಷತೆಗಳನ್ನೇ ಗಮನಿಸುತ್ತಾರೆ. ಸಾಮಾನ್ಯಜನರೂ ಇದಕ್ಕೆ ಹೊರತಲ್ಲ. ಆದರೆ ಭಾರತೀಯವಿದ್ಯೆಗಳಲ್ಲಿ (ಶಾಂಕರಾದ್ವೈತ, ಅವಧೂತಪರಂಪರೆ, ಬೌದ್ಧದರ್ಶನ, ವ್ಯಾಕರಣದರ್ಶನ, ಸಾಹಿತ್ಯಶಾಸ್ತ್ರದ ರಸ-ಧ್ವನಿಸಿದ್ಧಾಂತ ಇತ್ಯಾದಿ) ನಿರಪೇಕ್ಷವೂ ಸಾರ್ವಜನೀನವೂ ಆದ ಅನುಭವದತ್ತ ಅವಧಾರಣೆಯಿದೆ. ಇದು ನಿರ್ವಿಶೇಷಾನುಭವವೆಂದೂ ಸುವಿಶ್ರುತ. ಇನ್ನುಳಿದ ಯಾವುದೇ ಆನುಭಾವಿಕ ಅಥವಾ ಅಲೌಕಿಕಾನುಭವಗಳಾಗಲಿ ವ್ಯಾವಹಾರಿಕ-ಲೌಕಿಕಾನುಭವಗಳಾಗಲಿ ಯೋಗಿಪ್ರತ್ಯಕ್ಷ ಹಾಗೂ ಸವಿಕಲ್ಪ (ಸವಿಶೇಷ)ಗಳ ಸ್ತರದ ಅನುಭವಗಳೆಂದು ವರ್ಗೀಕೃತವಾಗಿವೆ. ನಿರ್ವಿಶೇಷಾನುಭವವು ಅವಸ್ಥಾತ್ರಯಮೀಮಾಂಸೆಯ ನಿದಿಧ್ಯಾಸನದ ಫಲಿತ. ಇಲ್ಲಿ ಎಚ್ಚರ-ಕನಸು-ನಿದ್ದೆಗಳೆಂಬ ಸಕಲಜೀವಿಗಳಿಗೂ ಸಮಾನವಾದ ಅನುಭವದ ಚಿಂತನೆಯುಂಟು, ಅಭಿಜ್ಞಾನವುಂಟು. ಈ ಅವಸ್ಥಾತ್ರಯಮೀಮಾಂಸೆಯಾದರೋ ವೇದಾಂತದ ಏಕಮೇವಾದ್ವಿತೀಯ ಮಹಾಪ್ರಕ್ರಿಯೆಯೆನಿಸಿದ ಅಧ್ಯಾರೋಪ-ಅಪವಾದವಿವೇಕದಲ್ಲಿ ಅಡಗುವಂಥದ್ದು. ಈ ಪ್ರಕ್ರಿಯೆಯ ಪ್ರಕಾರ ಸಕಲಕರ್ಮ(ಚಟುವಟಿಕೆ)ಗಳೂ ಕಾಮ ಅಥವಾ ಬಯಕೆಯ ಮೂಲಕ ಬಂದಂಥವು ಹಾಗೂ ಎಲ್ಲ ಬಯಕೆಗಳೂ ಕೊರತೆಯ ಕಾರಣವೇ ತಲೆದೋರಿದಂಥವು. ಇಂಥ ಕೊರತೆಯು ಮೂಲತಃ ಅರಿವು, ಇರವು ಹಾಗೂ ನಲವುಗಳ (ಸತ್-ಚಿತ್-ಆನಂದಗಳ) ಅನಭಿಜ್ಞಾನದ ಕಾರಣ ಉಂಟಾದದ್ದು. ಹೀಗಾಗಿಯೇ ಇದಕ್ಕೆ ‘ಅವಿದ್ಯೆ’ ಎಂದು ಪಾರಿಭಾಷಿಕಸಂಜ್ಞೆಯಿದೆ. ದೇಶ-ಕಾಲಗಳೆರಡೂ (Space and Time) ಅವಿದ್ಯೆಯ ಕಾರ್ಯಗಳೇ. ಆದುದರಿಂದಲೇ ದೇಶ-ಕಾಲಗಳು ಸಾಪೇಕ್ಷವೆಂದು ವೇದಾಂತ ಮತ್ತು ವಿಜ್ಞಾನವಿದ್ಯೆಗಳೆರಡೂ ಸಾರಿವೆ. ಇಂಥ ಸಾಪೇಕ್ಷತೆಯನ್ನೇ ‘ಮಿಥ್ಯಾ’ ಎಂದು ವೇದಾಂತವು ಸಂಕೇತಿಸಿದೆ. ಮಿಥ್ಯೆಯೆಂದರೆ ಸುಳ್ಳು ಅಥವಾ ಅಸತ್ಯ ಇಲ್ಲವೇ false ಎಂದು ಅನುವಾದಿಸುವುದು ಸರ್ವಥಾ ದೋಷಪೂರ್ಣ. ವಸ್ತುತಃ ಸಂಸ್ಕೃತದ ಈ ಶಬ್ದವು (‘ಮಿಥ್ಯಾ’) ಮಿಥಃ ಅಥವಾ ಮಿಥ್ ಎಂಬ ಪದದ ವೃದ್ಧಿರೂಪ. ಮಿಥಃ (ಮಿಥ್) ಎಂದರೆ ಅನ್ಯೋನ್ಯ ಅಥವಾ ಸಾಪೇಕ್ಷವೆಂದೇ ವಾಸ್ತವಾರ್ಥ. ಹೀಗಾಗಿ ಇದರ ಭಾವವೇ ಅನ್ಯೋನ್ಯತೆ ಇಲ್ಲವೇ ಸಾಪೇಕ್ಷತೆ ಎಂದೆನಿಸಿದೆ.
ವಿಶ್ವದ ಸಕಲವಸ್ತುಗಳೂ ದೇಶಾಶ್ರಿತ ಮತ್ತು ಸಕಲಕ್ರಿಯೆಗಳೂ ಕಾಲಾಶ್ರಿತ. ಅಷ್ಟೇಕೆ, ನಮ್ಮ ಮನಸ್ಸು, ಆಲೋಚನೆ, ಭಾಷೆ ಮುಂತಾದುವೆಲ್ಲ ದೇಶ-ಕಾಲಾಶ್ರಿತ. ಇವೆಲ್ಲವೂ ಸಾಪೇಕ್ಷ. ಹೀಗಾಗಿಯೇ ಇವುಗಳಲ್ಲಿ ಅಂದಾಜಿನ, ಅಜಮಾಯಿಷಿಯ ಅಂಗೀಕಾರವು ಸಾಧ್ಯವಲ್ಲದೆ ಶಾಶ್ವತವೂ ನಿರ್ವಿಕಾರವೂ ಆದ ವ್ಯವಸ್ಥೆ ಅಸಾಧ್ಯ. ಅಂತೆಯೇ ಎಲ್ಲ ಬಗೆಯ ಭೇದಗಳೂ ತಾರತಮ್ಯಗಳೂ ಸಾಪೇಕ್ಷ, ತತ್ಫಲಿತವಾಗಿ ಅವಿದ್ಯಕ. ಆದರೆ ಸಕಲವೂ ಒಂದೇ ಪ್ರಜ್ಞಾನಘನವೆನಿಸುವ ನಿರ್ವಿಶೇಷಾನುಭವದ ಸಚ್ಚಿದಾನಂದ ಮಾತ್ರ ನಿರಪೇಕ್ಷ. ಹೀಗಾಗಿಯೇ ಜಗತ್ತು-ಜೀವ-ಈಶ್ವರ ಎಂಬ ತತ್ತ್ವತ್ರಯವಾಗಲಿ, ದೃಕ್ಕು-ದೃಶ್ಯ-ದರ್ಶನ ಎಂಬ ತ್ರಿಪುಟಿಯಾಗಲಿ ಒಂದೇ ಎಂದಾಗದೆ, ಆತ್ಮೈಕವೆಂದಾಗದೆ ಗತ್ಯಂತರವಿಲ್ಲ. ಇಂಥ ಅದ್ವಿತೀಯಸ್ಥಿತಿಯನ್ನಷ್ಟೇ ‘ತತ್ತ್ವ’ ಎಂದು ಡಿ.ವಿ.ಜಿ.ಯವರು ಒಪ್ಪುತ್ತಾರೆ. ಇನ್ನುಳಿದ ಎಲ್ಲವೂ ಅತತ್ತ್ವ.
ವೇದಾಂತಯೋಗ
ಅಂತೂ ಡಿ.ವಿ.ಜಿ.ಯವರು ಪ್ರಮಾತೃಮೀಮಾಂಸೆಯ ಮೌಲ್ಯದಲ್ಲಿ ನೆಲೆನಿಂತು ಪ್ರಮಾಣಮೀಮಾಂಸೆಯನ್ನು ಮಾಡುವರಲ್ಲದೆ ತದ್ವಿಪರೀತವಾಗಿ ಅಲ್ಲ. ಆದರೆ ಈಚಿನ ವ್ಯಧಿಕರಣಬುದ್ಧಿಗಳೂ ‘ವಾಸ್ತವತಾವಾದಿ’ಗಳೂ ಆದ ವಿಮರ್ಶಕರು ವೇದಾಂತ-ವಿಜ್ಞಾನ-ಸಾರ್ವತ್ರಿಕಾನುಭವಗಳಿಗೆಲ್ಲ ವಿರುದ್ಧವಾಗಿ ದೇಶ- ಕಾಲಗಳನ್ನು ನಿರಪೇಕ್ಷವೆಂದು ಭ್ರಮಿಸಿ ವಾದಿಸುವ ಕಾರಣ ನಮ್ಮ ಪರಂಪರೆಯಾಗಲಿ, ಅದರಲ್ಲಿಯೇ ಬೆಳೆದುಬಂದ ಡಿ.ವಿ.ಜಿ.ಯಂಥವರಾಗಲಿ ಅಪಾರ್ಥಗೊಂಡಿದ್ದಾರೆ. ವಸ್ತುತಃ ಭೇದವಾದಿಗಳಾದ ನಮ್ಮ ನವವಿಮರ್ಶಕರೂ ವಾಸ್ತವವಾದಿಗಳೂ ಅಭೇದದ ಆದರ್ಶವು ಡಿ.ವಿ.ಜಿ.ಯಂಥವರಲ್ಲಿಲ್ಲವೆಂದೂ ಅವರು ಪ್ರತಿಗಾಮಿಗಳೂ ಜಾತಿವಾದಿಗಳೂ ಆದ ಸಾಂಸ್ಕೃತಿಕಭದ್ರಲೋಕ (cultural elite)ದವರೆಂದೂ ದೂಷಿಸುವುದು ದಿಟಕ್ಕೂ ಒಂದು ವಿಡಂಬನೆ. ಆದರೆ ವ್ಯಾವಹಾರಿಕಸ್ತರಕ್ಕೆ ಮಾತ್ರ – ಅದೂ ಯಾವುದೇ ವ್ಯವಸ್ಥೆಯ ಆನುಕೂಲ್ಯಕ್ಕೆ ಅನಿವಾರ್ಯವಾಗುವಮಟ್ಟಿಗೆ ಮಾತ್ರ – ಔಪಾಧಿಕಭೇದವನ್ನೊಪ್ಪುವ, ಉಳಿದಂತೆಲ್ಲ ಅಭೇದವನ್ನೇ ಅನುಸಂಧಾನಿಸುವ ಡಿ.ವಿ.ಜಿ.ಯವರ ತತ್ತ್ವದೃಷ್ಟಿ ಅನವದ್ಯವಾದದ್ದು. ಈ ಜಗತ್ತು ಜಗತ್ತಾಗಿ ಉಳಿದಿರುವುದು ದೇಶ-ಕಾಲಗಳಿಂದ, ತನ್ಮೂಲಕವಾಗಿ ರೂಪುಗೊಂಡ ತ್ರಿಗುಣಗಳ ಏರುಪೇರಿನಿಂದ. ಹೀಗಾಗಿ ಏಕತೆಯನ್ನು ಹೊರಗೆ ಸಾಧಿಸುವ ಮುನ್ನ ನಿಮ್ಮೊಳಗೆ ಅದರ ಸಾಕ್ಷಾತ್ಕಾರವಾಗಿದೆಯೇ ಎಂಬುದನ್ನು ನೋಡಿ – ಎಂದು ಡಿ.ವಿ.ಜಿ.ಯವರ ಸೂಚನೆ.
ಜಗತ್ತಿನಲ್ಲಿ ವಿಜೃಂಭಿಸುತ್ತಿರುವ ಅಶಾಂತಿ, ಅಲ್ಲೋಲಕಲ್ಲೋಲಗಳ ಕಾರಣವಿರುವುದು ಜಗತ್ತನ್ನಾಗಿಸಿರುವ ಸತ್ತ್ವರಜಸ್ತಮೋಗುಣಗಳ ಅಸಮಮಿಶ್ರಣದಲ್ಲಿ ಎಂಬ ಸಂಗತಿಯನ್ನು ಲೋಕಶಾಂತಿ, ಸರ್ವೋದಯ ಎಂದು ಹಂಬಲಿಸುವ, ಅದಕ್ಕಾಗಿ ಸಮ್ಮೇಳನಗಳನ್ನು ನಡಸುವ ರಾಜಕೀಯಸ್ಥರು ಗಮನಕ್ಕೆ ತಂದುಕೊಳ್ಳಬೇಕು. ಸತ್ತ್ವೋತ್ಕರ್ಷಕ್ಕೆ ಗಮನವನ್ನು ತಿರುಗಿಸಿದರೆ ಶಾಂತಿ ತಾನಾಗಿ ಲಭಿಸೀತು. ಕಜ್ಜಿಯಿಂದ ನರಳುತ್ತಿರುವವನಿಗೆ ಪುನುಗಿನಿಂದ ಗುಣವಾಗದು (‘ಜೀವನಧರ್ಮಯೋಗ’, ಪು.೩೮೦). ತ್ರಿಗುಣಗಳು ಸಮವಾಗುವುದು ಪ್ರಳಯದಲ್ಲಿ ಮಾತ್ರ ಎಂದು ಸಾಂಖ್ಯದರ್ಶನದ ಒಕ್ಕಣೆ. ಸುಷುಪ್ತಿ(ಗಾಢನಿದ್ರೆ)ಯೆಂಬುದು ನಿತ್ಯಪ್ರಳಯ (ಅನುದಿನದ ಪ್ರಳಯ) ಎಂದು ವೇದಾಂತದ ತೀರ್ಮಾನ. ಇದು ನಮ್ಮೆಲ್ಲರ ಅನುಭವವೂ ಹೌದು.
ಹೀಗಾಗಿ ಔಪಾಧಿಕವಾದ ಈ ಭೇದಮಯಜಗತ್ತಿನಲ್ಲಿ, ನಾನಾತ್ಮಕವಾದ ಜೀವನದಲ್ಲಿ ಏಕತೆಯನ್ನು ಶ್ರವಣ-ಮನನ-ನಿದಿಧ್ಯಾಸನಗಳೆಂಬ ವೇದಾಂತಯೋಗದ ಮೂಲಕ ಹೇಗೆ ಕಾಣಬಹುದು ಹಾಗೂ ಈ ಸಾಪೇಕ್ಷವ್ಯವಸ್ಥೆಯನ್ನು ಅದೆಷ್ಟರಮಟ್ಟಿಗೆ ಆರೋಗ್ಯಕರವಾಗಿ ಬಳಸಿಕೊಳ್ಳಬಹುದು ಮತ್ತು ಎಲ್ಲಕ್ಕಿಂತ ಮಿಗಿಲಾಗಿ ಈ ಭೇದಪ್ರಪಂಚದ ಮೇಲು-ಕೀಳುಗಳ ಶೋಷಣೆಯನ್ನು ಇನ್ನೆಷ್ಟರಮಟ್ಟಿಗೆ ಲೋಕಸಂಗ್ರಹದೃಷ್ಟಿಯುಳ್ಳ ಯೋಗಿಯ ವರ್ತನೆಯ ಮೂಲಕ ತಡೆಗಟ್ಟಬಹುದೆಂಬುದನ್ನು ಡಿ.ವಿ.ಜಿ. ಅವರು ವ್ಯಾಪಕವಾಗಿ ಚಿಂತಿಸಿದ್ದಾರೆ, ಆಚರಿಸಿದ್ದಾರೆ ಮತ್ತು ಬರೆದೂ ಇದ್ದಾರೆ. ಆದುದರಿಂದಲೇ ಅವರು ಅನಾದ್ಯನಂತವಾದ ಈ ದೇಶಕಾಲಾತ್ಮಕಜಗತ್ತಿನಲ್ಲಿ ಭೇದನಾಶವು ಸಾಧ್ಯವಿಲ್ಲವೆಂದೂ ಅದು ಉದ್ದಿಷ್ಟವೂ ಅಲ್ಲವೆಂದೂ ಅರಿತು ‘ನಮಗೀಗ ಬೇಕಾಗಿರುವುದು ತಾರತಮ್ಯವಿನಾಶವಲ್ಲ, ತಾರತಮ್ಯವಿವೇಕ’ ಎಂಬ ಮಾತನ್ನಾಡುತ್ತಾರೆ.
ಮೌಲ್ಯಗಳ ಶ್ರೇಣೀಕರಣ
ಇಂಥ ವಿವೇಕದ ಪ್ರಶ್ನೆ ಬಂದೊಡನೆಯೇ ಮೌಲ್ಯಪ್ರಜ್ಞೆಯೂ ಜಾಗೃತವಾಗುತ್ತದೆ, ವಿವಿಧಮೌಲ್ಯಗಳ ಶ್ರೇಣೀಕರಣವೂ ಅವಿವಾರ್ಯವೆನಿಸುತ್ತದೆ. ಮುಖ್ಯವಾಗಿ ಸಾಧನಮೌಲ್ಯಗಳೆಂದೂ ಆತ್ಯಂತಿಕಮೌಲ್ಯಗಳೆಂದೂ ವಿಭಾಗವುಂಟು. ಅರ್ಥ ಮತ್ತು ಧರ್ಮಗಳು ಸಾಧನಮೌಲ್ಯಗಳೆಂದೂ ಕಾಮ ಮತ್ತು ಮೋಕ್ಷಗಳು ಆತ್ಯಂತಿಕಮೌಲ್ಯಗಳೆಂದೂ ಅನುಕ್ರಮವಾಗಿ ಪುರುಷಾರ್ಥಗಳಲ್ಲಿ ಪ್ರತಿಷ್ಠಿತವಾಗಿವೆ. ಕಾಮವು ಮನೋಬುದ್ಧಿಶರೀರಾದಿಗಳ ಸಮಗ್ರಸಂಘಾತಕ್ಕೆ ಆತ್ಯಂತಿಕಮೌಲ್ಯವೆನಿಸಿದರೆ ಮೋಕ್ಷವು ಈ ಉಪಾಧಿಗಳಿಗೆ ಅತೀತವಾದ ಅಖಂಡಾದ್ವೈತಸ್ಥಿತಿಯ ಆತ್ಯಂತಿಕಮೌಲ್ಯ. (ಆಸಕ್ತರು ಈ ಬಗೆಗೆ ಡಿ.ವಿ.ಜಿ. ಅವರ ಪರಮಾತ್ಮೀಯವಿದ್ವನ್ಮಿತ್ರರಾದ ಆಚಾರ್ಯ ಎಂ. ಹಿರಿಯಣ್ಣನವರ ‘The Indian Conception of Values’ ಹಾಗೂ ‘The Quest After Perfection’ ಎಂಬ ಗ್ರಂಥಗಳನ್ನು ಪರಿಶೀಲಿಸಬಹುದು). ಮೌಲ್ಯಗಳ ಶ್ರೇಣೀಕರಣವು ನಮ್ಮದಲ್ಲದ, ಇತರರ ಮೌಲ್ಯಗಳ ಬಗೆಗೂ – ಅವುಗಳು ವಸ್ತುತಃ ಮೌಲ್ಯಗಳೇ ಆಗಿರುವ ಕಾರಣ – ಸಹಾನುಭೂತಿ ಮತ್ತು ಪ್ರೀತಿಗೌರವಗಳಿಂದ ಕಾಣುವ ಹದವನ್ನು ನೀಡುತ್ತದೆ. ಇದೇ ಮೌಲ್ಯಪ್ರಜ್ಞೆಯ ಒಂದು ಸಂಸ್ಕಾರಸಾಧ್ಯತೆ. ‘ಧರ್ಮ’ ಎಂಬ ಒಂದು ಮಹೋನ್ನತ ಸಾಧನಮೌಲ್ಯಕ್ಕೆ ಇಂಥ ಸಂಸ್ಕಾರಪ್ರದಾನಶಕ್ತಿಯುಂಟು. ಧರ್ಮ ಎಂದರೆ ಮತ (Religion) ಎಂಬರ್ಥದಲ್ಲಿ ಈ ಒಂದೂವರೆ ಶತಮಾನಾವಧಿಯಲ್ಲಿ ವ್ಯಾಪಕವಾಗಿ ಅಪಕಲ್ಪನೆ ಹಬ್ಬಿರುವ ಕಾರಣ ಭಾರತೀಯಮೌಲ್ಯಸಂವೇದನೆಗೆ ತೀವ್ರವಾದ ಆಘಾತ ಒದಗಿದೆ. ಆದರೆ ಡಿ.ವಿ.ಜಿ.ಯಂಥವರು ಇದನ್ನು ತುಂಬ ಯುಕ್ತಾರ್ಥದಲ್ಲಿಯೇ ನಮ್ಮ ಸಂಸ್ಕೃತಿಗೆ ಶ್ರುತಿಗೂಡುವಂತೆ ಶಾಸ್ತ್ರಾನುರೋಧವಾಗಿ ವಿಪುಲಾಂತರ್ದೃಷ್ಟಿಯೊಡನೆ ಬಳಸಿದ್ದಾರೆ. ಇದಕ್ಕೆ ಕಗ್ಗದ ಎರಡು ಸೂಕ್ತಿಗಳೇ ಸುಂದರಸಾಕ್ಷಿ:
ವಕ್ರಋಜುಮಿಶ್ರ ಜಗವದರ ಶೋಧನೆ ಧರ್ಮ
ಪ್ರಾಕೃತಧ್ವನಿಮಿಶ್ರವದರಡುಗೆ ರಾಗ |
ವ್ಯಾಕೃತದಿನವ್ಯಾಕೃತಾದಿಸತ್ತ್ವಕೆ ನಿನ್ನ
ಜಾಗೃತಿಪ ಮತಿ ಧರ್ಮ – ಮಂಕುತಿಮ್ಮ ||
(ಪದ್ಯ ೯೮)
ಬುದ್ಧಿಪ್ರಕಾಶದಿಂದಂತರನುಭವ ಶೋಧೆ
ಸಿದ್ಧವಾ ಶೋಧೆಯಿಂ ಸತ್ಯಸಂವೀಕ್ಷೆ |
ಶುದ್ಧಸತ್ಯವ ಜೀವಿತಪ್ರಶ್ನೆಗನ್ವಯಿಪ
ಪದ್ಧತಿಯೆ ಧರ್ಮವೆಲೊ – ಮಂಕುತಿಮ್ಮ || (ಪದ್ಯ ೫೪೫)
ಈ ಬಗೆಗೆ ಅವರ ‘ಜೀವನಧರ್ಮಯೋಗ’ದಲ್ಲಿ ಮತ್ತೂ ವಿಸ್ತರದಿಂದ ನೋಡಬಹುದು (ಪು.೮೬-೮೮; ಪು.೯೬-೯೭). ಧರ್ಮವನ್ನು ವೈಶ್ವಿಕಸಾಮರಸ್ಯಸೂತ್ರ (global ethic of synthesis and compromise) ಎಂದು ಕರೆಯಬಹುದು. ಆದುದರಿಂದಲೇ ರಾಜಕೀಯ ಮತ್ತು ಸಾಮಾಜಿಕ ಸ್ತರಗಳಲ್ಲಿ ಡಿ.ವಿ.ಜಿ.ಯವರಿಗೆ ಗ್ಲ್ಯಾಡ್ಸ್ಟನ್, ಮಾರ್ಲೇ, ಗೋಪಾಲಕೃಷ್ಣ ಗೋಖಲೆ, ವಿ.ಎಸ್. ಶ್ರೀನಿವಾಸಶಾಸ್ತ್ರೀ, ಶಿವಸ್ವಾಮಿ ಅಯ್ಯರ್ ಮುಂತಾದವರು ತುಂಬ ಹತ್ತಿರವೆನಿಸಿದರು. ಅಂತೂ ಡಿ.ವಿ.ಜಿ.ಯವರು ಪ್ರತಿಪಾದಿಸುವ ತಾರತಮ್ಯವಿವೇಕವು ವಿಶ್ವೈಕ್ಯದ ಅನುಭವಾತ್ಮಕಸಂವೇದನೆಗಾಗಿಯೇ. ಅಂದರೆ ಭೇದಮಯಪ್ರಪಂಚವಿರುವುದು ಅಭೇದಸ್ವರೂಪದ ಸಾಕ್ಷಾತ್ಕಾರಕ್ಕಾಗಿ. ಈ ನೆಲೆಯಲ್ಲಿಯೇ ಪ್ರಸ್ತುತದ ಬಹುಮುಖಿಸಂಸ್ಕೃತಿರಕ್ಷಣೆ, ಬಹುತ್ವದ ಸಂವೇದನೆಗಳನ್ನೆಲ್ಲ ಸಮನ್ವಯಿಸಿಕೊಳ್ಳಬೇಕಿದೆ. ಇಲ್ಲವಾದಲ್ಲಿ ಬಹುತ್ವವೆಂಬುದೊಂದು ಆತ್ಯಂತಿಕವಿಭಾಜಕ-ವಿದ್ವೇಷಕ ಪ್ರತಿಮೌಲ್ಯ(Anti-value)ವಾಗದಿರದು. ಡಿ.ವಿ.ಜಿ.ಯವರ ಸಮನ್ವಯತತ್ತ್ವದ ಫಲವಾಗಿಯೇ ಅವರಿಗೆ ದ್ವೈತ ಮತ್ತು ವಿಶಿಷ್ಟಾದ್ವೈತಗಳಾಗಲಿ, ಪೂರ್ವ-ಪಶ್ಚಿಮಗಳಾಗಲಿ, ಇಂಗ್ಲಿಷ್-ಸಂಸ್ಕೃತಗಳಾಗಲಿ, ರಾಜಕೀಯ – ತಂತ್ರಜ್ಞಾನಗಳಾಗಲಿ ಕನ್ನಡಸಂಸ್ಕೃತಿಯ ಅದ್ವೈತಕ್ಕೆ, ಅಧ್ಯಾತ್ಮಕ್ಕೆ ಹದದೊಳಗಿರಿಸಿಕೊಂಡಾಗ ಪೂರಕವಾಗಬಲ್ಲ ಜೀವದ್ರವ್ಯಗಳಾದುವು. ಒಟ್ಟಿನಲ್ಲಿ ತಾತ್ಪರ್ಯದಿಂದ ಹೇಳುವುದಾದರೆ ಇಂಥ ಸಮನ್ವಯಪ್ರಜ್ಞೆಯನ್ನು ‘ಅಧಿಧರ್ಮ’ ಎಂದೋ ‘ಜೀವನಧರ್ಮ’ ಎಂದೋ ಹೇಳಬಹುದು (ಈ ಎರಡೂ ಶಬ್ದಗಳು ಡಿ.ವಿ.ಜಿ.ಯವರಿಂದಲೇ ಟಂಕಿತವಾಗಿವೆ). ಹೀಗಾಗಿಯೇ ಅವರು ಮತ ಮತ್ತು ನೀತಿಗಳಿಗಿಂತ ಅಧ್ಯಾತ್ಮ (ದರ್ಶನ) ಮತ್ತು ಧರ್ಮಗಳು ಹಿರಿದೆಂದು ಅನುಭವಾತ್ಮಕವಾಗಿ ಕಂಡುಕೊಂಡಿದ್ದರು. ‘ಸ್ವಧರ್ಮ’ ಎಂಬುದನ್ನವರು ತನ್ನಿಂದ ಲೋಕವೂ ಲೋಕದಿಂದ ತಾನೂ ಅತ್ಯುತ್ತಮರೀತಿಯಲ್ಲಿ ವಿಕಸಿತವಾಗುವ ಜೀವನಪದ್ಧತಿಯೆಂದೇ ಗ್ರಹಿಸಿದ್ದಾರೆ.
ಪುರುಷಾರ್ಥಾನುಸಂಧಾನ
ಡಿ.ವಿ.ಜಿ.ಯವರು ಕೇವಲ ಆದರ್ಶಗಳ ಆಕಾಶದಲ್ಲಿ ತೇಲುತ್ತ ವಾಸ್ತವದ ವಸುಂಧರೆಯನ್ನೇನೂ ಮರೆತಿಲ್ಲ. ಧರ್ಮ-ಮೋಕ್ಷಗಳ ಮಹತ್ತ್ವವನ್ನು ಮನಗಂಡಂತೆಯೇ ಅವರು ಅರ್ಥ-ಕಾಮಗಳ ಅನಿವಾರ್ಯತೆಯನ್ನೂ ಅರಿತಿದ್ದಾರೆ. ಯಾವುದು ಅನಿವಾರ್ಯವೋ ಅದು ಅಂಗೀಕಾರ್ಯ, ಸುಖವೂ ದುಃಖದಂತೆ ಜೀವಸಂಸ್ಕಾರಕ, ಧರ್ಮಸಮ್ಮತವಾದ ಕಾಮವು ಜೀವಪ್ರಗತಿಗೆ ಸಾಧಕ, ಜೀವನವಾಹನಕ್ಕೆ ಕಾಮವು ವೇಗವರ್ಧಕವಾದರೆ ಮೃತ್ಯುವು ಸ್ತಂಭಕ – ಎಂಬಿವೇ ಮುಂತಾದ ಅಸಂಖ್ಯ ಸಾರೋಕ್ತಿಗಳನ್ನು ಅವರ ಕೃತಿಗಳಿಂದ ಉದ್ಧರಿಸಬಹುದು. ಅಷ್ಟೇ ಅಲ್ಲ, ‘ಉಮರನ ಒಸಗೆ’, ‘ಅಂತಃಪುರಗೀತಗಳು’, ‘ಶ್ರೀಕೃಷ್ಣಪರೀಕ್ಷಣಂ’, ‘ಶೃಂಗಾರಮಂಗಳಂ’ ಮುಂತಾದ ಕಾವ್ಯಗಳಲ್ಲಿ ಅವರು ಆದ್ಯಂತ ನಡಸಿರುವ ಕಾಮಮೀಮಾಂಸೆಯು ಬರಿಯ ಕನ್ನಡಸಾಹಿತ್ಯಕ್ಕೆ ಮಾತ್ರವಲ್ಲ, ಭಾರತೀಯಸಾಹಿತ್ಯಕ್ಕೇ ವಿಶಿಷ್ಟವಾದದ್ದು. ಅರ್ಥದ ಕರಾಳಮುಖವಾದ ಲೋಭ-ಪ್ರಲೋಭನೆಗಳನ್ನು ಕುರಿತಂತೆ ಅವರು ನಡಸಿದ ಚಿಂತನೆ ಹಾಗೂ ಅದನ್ನು ಬದುಕಿನಲ್ಲಿ ಅನುಷ್ಠಾನಕ್ಕೆ ತಂದ ಬಗೆ ಅತ್ಯಂತಮೌಲಿಕವಾಗಿದೆ. ಷೇಕ್ಸ್ಪಿಯರನ ‘ಮ್ಯಾಕ್ಬೆತ್’ ನಾಟಕಾನುವಾದ, ‘ರಾಜ್ಯಶಾಸ್ತ್ರ’, ‘ರಾಜ್ಯಾಂಗತತ್ತ್ವಗಳು’, ‘ರಾಜ್ಯಕುಟುಂಬ’ ಮುಂತಾದ ಕೃತಿಗಳು ಅವರ ‘ಅರ್ಥ’ ಮೌಲ್ಯದ ಮೀಮಾಂಸೆಗೆ ದೃಷ್ಟಾಂತಗಳು. ‘ಕರ್ಣಾಟಕ ಜನಜೀವನ ಮತ್ತು ಅರ್ಥಸಾಧಕ ಪತ್ರಿಕೆ’ಯನ್ನೇ ಸ್ವಾತಂತ್ರ್ಯಪೂರ್ವದಂಥ ಹಿಂದಿನ ಕಾಲದಲ್ಲಿ ನಡಸಿದ ಡಿ.ವಿ.ಜಿ. ಅವರಿಗೆ ಅರ್ಥವೆಂಬ ಮೌಲ್ಯದ ಎಲ್ಲ ಮಗ್ಗುಲುಗಳ ಅನುಭವವಿದ್ದುದರಲ್ಲಿ ಆಶ್ಚರ್ಯವೇನಿಲ್ಲ.
ಜೀವನದ ಬಗೆಗಂತೂ ಡಿ.ವಿ.ಜಿ.ಯವರಿಗಿದ್ದಷ್ಟು ವಸ್ತುನಿಷ್ಠವೂ ಮೌಲ್ಯಮಯವೂ ಆದ ಕಾಣ್ಕೆ-ಬಾಳ್ತೆಗಳು ಮತ್ತಾವ ಕನ್ನಡಲೇಖಕರಲ್ಲಿಯೂ ಆ ಪ್ರಮಾಣದಲ್ಲಿ ನಿಸ್ಸಂದಿಗ್ಧವಾಗಿ ವ್ಯಕ್ತವಾಗಿಲ್ಲ, ಅನುಷ್ಠಿತವೂ ಆಗಿಲ್ಲವೆಂದರೆ ಉತ್ಪ್ರೇಕ್ಷೆಯೆನಿಸದು. ಅವರ ಎಲ್ಲ ಕೃತಿಗಳೂ ಜೀವನಸ್ಫೂರ್ತಿಕರವೇ. ಅವರ ಬಾಳೇ ಅಂಥದ್ದು. ‘ಜ್ಞಾಪಕಚಿತ್ರಶಾಲೆ’ಯ ಎಂಟು ಸಂಪುಟಗಳ ಜೀವನೋತ್ಸಾಹ ಹಾಗೂ ಜೀವನಶ್ರದ್ಧೆ ಭಾರತೀಯಸಾಹಿತ್ಯದಲ್ಲಿ ಅನಿತರಲಭ್ಯ. ‘ಬಾಳಿಗೊಂದು ನಂಬಿಕೆ’, ‘ಈಶೋಪನಿಷತ್ತು’, ‘ಪುರುಷಸೂಕ್ತ’, ‘ಜೀವನಸೌಂದರ್ಯ ಮತ್ತು ಸಾಹಿತ್ಯ’, ‘ಮಂಕುತಿಮ್ಮನ ಕಗ್ಗ’, ‘ಮರುಳಮುನಿಯನ ಕಗ್ಗ’ ಮುಂತಾದುವೆಲ್ಲ ಆದ್ಯಂತವಾಗಿ ಜೀವನದರ್ಶನತವನಿಧಿಗಳು. ಸಮ್ಯಗ್ಜೀವನವೇ ಭಗವದಾರಾಧನೆ, ಶ್ರದ್ಧೆಯಿಂದ ಪ್ರೇರಿತವಾದ ಜೀವನಪ್ರಯತ್ನವೇ ಪೌರುಷದ ಪರಮೋನ್ನತಿ, ಕಲೆಗಳಲ್ಲಿ ಪರಮಕಲೆ ಜೀವನರಹಸ್ಯಕಲೆ, ಜೀವನವದೊಂದು ಕಲೆ; ಕಲೆಯ ಕಲಿಸುವುದೆಂತು? ಬಾಳು ಬಾಳದೆ ಬಿಡದು – ಮುಂತಾದ ನೂರಾರು ಸಾರೋಕ್ತಿಗಳು ಡಿ.ವಿ.ಜಿ.ಯವರ ಜೀವನಶ್ರದ್ಧೆ-ಉಲ್ಲಾಸಗಳಿಗೆ ವಾಗ್ರೂಪದ ಸೂರ್ಯಸಾಕ್ಷಿಗಳು. ಜೀವನವು ದೇವರು ಕೊಟ್ಟ ವರ, ಜೀವನವನ್ನು ಅಂದಗೊಳಿಸುವುದೇ ನಾವು ದೇವರಿಗೆ ಸಲ್ಲಿಸುವ ಕೃತಜ್ಞತೆ. ಜೀವನಸಮೃದ್ಧಿ, ಜೀವನಸಂಸ್ಕಾರ, ಜೀವನಸೌಂದರ್ಯ – ಇದು ಬರಿಯ ಐಹಿಕಾಸಕ್ತಿಯಲ್ಲ, ಚಾರ್ವಾಕತನವಲ್ಲ, ಭೋಗನಿಷ್ಠೆಯಲ್ಲ; ಅದು ವೇದ-ವೇದಾಂತಗಳ ಸಾರಾಂಶ ಎಂದು ತಮ್ಮ ‘ಬಾಳಿಗೊಂದು ನಂಬಿಕೆ’ ಕೃತಿಯಲ್ಲಿ ಸಾರಿರುವುದೊಂದೇ ಸಾಕು, ಅವರ ವ್ಯಕ್ತಿತ್ವವನ್ನು ಸ್ಫುಟೀಕರಿಸುತ್ತದೆ; ನಮಗೆ ಎಂದೂ ಅನಿವಾರ್ಯವಾಗುವಂತೆ ಮಾಡುತ್ತದೆ.
ಜೀವನದ ಉದಾತ್ತೀಕರಣ
ಡಿ.ವಿ.ಜಿ.ಯವರು ಬಯಕೆಗಳ ನಿರ್ಮೂಲನವನ್ನೆಂದೂ ಪ್ರತಿಪಾದಿಸಿಲ್ಲ. ಅವುಗಳ ಉದಾತ್ತೀಕರಣವನ್ನಷ್ಟೇ ಅವಧಾರಣೆಯಿಂದ ವಿಧಿಸಿದ್ದಾರೆ. ಇಂಥ ಸಾಧನೆಗೆ ಸಾಮಾನ್ಯಧರ್ಮಗಳೆಂದು ನಮ್ಮ ಮನು-ಯಾಜ್ಞವಲ್ಕ್ಯ-ಪರಾಶರಾದಿಸ್ಮೃತಿಕಾರರು ಹೇಳಿರುವ ಸತ್ಯ, ಅಹಿಂಸೆ, ಅಸ್ತೇಯ, ಶುಚಿತ್ವ ಮತ್ತು ಇಂದ್ರಿಯನಿಗ್ರಹಗಳಂಥವನ್ನು (ಇಂದಿನವರು ಹೇಳುವ ಮಾನವಧರ್ಮ ಅಥವಾ Human Values) ವಿಶೇಷವಾಗಿ ಎತ್ತಿಹಿಡಿದಿದ್ದಾರೆ – ‘ಲಕ್ಷ್ಯತಪ್ಪದೆ ಚರಿಸು ಸಾಮಾನ್ಯಧರ್ಮಗಳ; ಮೋಕ್ಷ ಸ್ವತಸ್ಸಿದ್ಧ – ಮಂಕುತಿಮ್ಮ’ ಎಂಬುದು ಅವರ ಪಲ್ಲವಿ. ಹೀಗೆ ಜಗತ್ತಿನ ಒಳಿತನ್ನು ಸಾಧಿಸುವ ಮೂಲಕವೇ ಜಗದತೀತರಾಗುವ ಬಗೆ ಡಿ,ವಿ.ಜಿ. ಅವರದು. ಅವರ ಪರಮಪ್ರಿಯಕವಿ ಕಾಲಿದಾಸನ ದರ್ಶನವಾದರೂ ಇದೇ.
ಡಿ.ವಿ.ಜಿ.ಯವರ ‘ದೇವರು’ ಪುಸ್ತಿಕೆಯನ್ನಷ್ಟೇ ಗಮನಿಸಿಯೋ ಅಥವಾ ಅವರ ಈ ಸಂಬಂಧದ ವಿಚಾರಗಳನ್ನು ಏಕದೇಶೀಯವಾಗಿ ಗ್ರಹಿಸಿಯೋ ಎ.ಎನ್.ಮೂರ್ತಿರಾಯರೂ ಸೇರಿದಂತೆ ಹಲವರು ಪ್ರತಿರೋಧಿಸಿದ್ದಾರೆ. ಆದರೆ ಡಿ.ವಿ.ಜಿ.ಯವರು ತಮ್ಮ ‘ಜೀವನಧರ್ಮಯೋಗ’ದಲ್ಲಿ ಯಾವುದು ಒಳಿತೋ ಅದು ದೇವರೆಂದು ಹೇಳಿದ್ದಾರಲ್ಲದೆ ಒಳ್<ಉಳ್ ಎಂಬ ನಿಷ್ಪತ್ತಿಯಿಂದ ಒಳಿತೇ (ಶಿವವೇ) ಇರವೆಂದೂ (ಸತ್ಯ) ಅದುವೇ ಸೊಗಸೆಂದೂ (ಸುಂದರ) ಪ್ರತಿಪಾದಿಸಿದ್ದಾರೆ. ಮಾತ್ರವಲ್ಲ, ದೇವರೆಂಬ ಮೌಲ್ಯದ ಅನಿವಾರ್ಯತೆಯು ಸಾಮಾನ್ಯರಿಗಿರುವುದನ್ನರಿತು ಆ ಶ್ರದ್ಧಾವಿಶ್ವಾಸಗಳಿಗೆ ಆರೋಗ್ಯಕರವಾಗಿ ಸ್ಪಂದಿಸಿದ್ದಾರೆ. ಆವುದನು ಕಾಣದೊಡಮಳ್ತಿಯಿಂ ನಂಬಿಹುದೊ ಆ ವಿಚಿತ್ರಕೆ ನಮಿಸೊ ಮಂಕುತಿಮ್ಮ || (ಪದ್ಯ ೧) ಎಂದಿರುವುದಲ್ಲದೆ ಇಹುದೊ ಇಲ್ಲವೊ ತಿಳಿಯಗೊಡದೊಂದು ವಸ್ತು ನಿಜಮಹಿಮೆಯಿಂ ಜಗವಾಗಿ ಜೀವವೇಷದಲಿ | ವಿಹರಿಪುದದೊಳ್ಳಿತೆಂಬುದು ನಿಸದವಾದೊಡಾ ಗಹನತತ್ತ್ವಕೆ ಶರಣೊ – ಮಂಕುತಿಮ್ಮ || (ಪದ್ಯ ೩) ಎಂದೂ ತಿಳಿಸಿ ಮುಂದೆ ಮರುಳಮುನಿಯನ ಕಗ್ಗದಲ್ಲಿ ಶ್ರೀಮಜ್ಜಗನ್ಮುಕುರವಿಸ್ತರದೊಳಾರ್ ತನ್ನ ಮೈಮೆಯ ಪ್ರತಿಬಿಂಬಚಿತ್ರಗಳ ನೋಡುತ್ತಾಮೋದಬಡುತಿಹನೊ ಆತನಡಿದಾವರೆಯ ನಾಮರಸುವಂ ಬಾರೊ – ಮರುಳಮುನಿಯ || (ಪದ್ಯ ೧) ಎಂದು ನೂರಕ್ಕೆ ನೂರರಷ್ಟು ವೇದಾಂತದರ್ಶನದ ವಿವರ್ತವಾದಾನುಸಾರ ದೇವರನ್ನು ರೂಪಿಸಿಕೊಂಡು ಅಂತರನ್ವೇಷಣೆಯ ಬಗೆಯನ್ನೂ ಹೇಳಿದ್ದಾರೆ. ಅದ್ವೈತಿಗಳಿಗೆ ಆತ್ಮೇತರವಾದದ್ದೇನೂ ಇಲ್ಲ. ಅದುವೇ ಜೀವ, ದೇವ ಎಲ್ಲ ! ಮಾತ್ರವಲ್ಲ, ಶಿವರಾಮ ಕಾರಂತರೆನ್ನುವಂತೆ ಇವರು ತಮ್ಮ ನಂಬಿಕೆಯ ಮೂಲಕ ನಡಸಿದ ಜೀವನದ ಮೌಲ್ಯವನ್ನು ನೋಡಿದರೂ ಸಾಕು, ಅವರ ಕಲ್ಪನೆಯ ದೇವರಿನ ಬಗೆಗೆ ಗೌರವ ಬರುತ್ತದೆ; ಮಿಗಿಲಾಗಿ ಅವರಲ್ಲಿ ಆದರ ಮೂಡುತ್ತದೆ. ಸಗುಣ-ಸಾಕಾರಸ್ತರದ ದೇವರನ್ನು ಒಪ್ಪುವುದಾದರೂ ಅವರ ಜಿಜ್ಞಾಸೆಯೆಲ್ಲ ಜಗತ್ತಿನ ಹಿನ್ನೆಲೆಯಲ್ಲಿಯೇ, ಜೀವನದ ಸೌಂದರ್ಯದ ಹಿನ್ನೆಲೆಯಲ್ಲಿಯೇ. ಇಂಥ ದೇವರ ಸಾಂಸ್ಕೃತಿಕಾವಶ್ಯಕತೆ, ನೈತಿಕಾವಶ್ಯಕತೆಗಳನ್ನು ವಿವೇಕಿಗಳಾರೂ ಅಲ್ಲಗಳೆಯಲಾರರು. ‘ಸಂದೇಹಸೂಕ್ತ’ವನ್ನು ಬರೆದ ಡಿ.ವಿ.ಜಿ. ಶ್ರದ್ಧಾಸೂಕ್ತವನ್ನೂ ಮರೆತಿಲ್ಲ.
ಡಿ.ವಿ.ಜಿ.ಯವರು ವೇದಗಳಲ್ಲಿ ಮತ್ತೆ ಮತ್ತೆ ಪ್ರಸ್ತುತವಾಗುವ ‘ಋತ’ದ ಕಲ್ಪನೆಯನ್ನು ತುಂಬ ಗಾಢವಾಗಿ ಮನದುಂಬಿಸಿಕೊಂಡವರು. ಋತವೆಂಬುದು ಭೂಮವಾದ ವೈಶ್ವಿಕನಿಯಮ (The Cosmic Order of the Universe). ಇದನ್ನು ಮನಸಾಯಥಾರ್ಥಾಚರಣವೆಂದೂ ಅವರು ಹೇಳುತ್ತಾರೆ. ಇದರ ವಾಗ್ರೂಪವೇ ಸತ್ಯ. ಸತ್ಯದ ಕ್ರಿಯಾರೂಪ ಧರ್ಮ. ಇದು ಸಾಯಣಾಚಾರ್ಯರ ವೇದಭಾಷ್ಯಗಳ ಬೆಳಕಿನಲ್ಲಿ ನಿಯಮ, ಅಸ್ತಿತ್ವ ಮತ್ತು ಆಚರಣೆಗಳನ್ನು*
(ಋತ-ಸತ್ಯ-ಧರ್ಮ) ಕುರಿತಾದ ಡಿ.ವಿ.ಜಿ.ಯವರು ರೂಪಿಸಿಕೊಂಡ ಕಾಣ್ಕೆ. ಈ ಬಗೆಗೆ ಅವರು ಒಂದು ಪುಸ್ತಿಕೆಯನ್ನೇ ರಚಿಸಿದ್ದಾರೆ. ಇಲ್ಲಿ ಋತವೆಂದರೆ ಅಂತರನುಭೂತತತ್ತ್ವ, ಸತ್ಯವೆಂದರೆ ಬಹಿಸ್ಸಾಧಿತಯಥಾರ್ಥವೆಂದೂ ವಿವರಿಸಿದ್ದಾರೆ.
ಅವಧೂತಪ್ರಜ್ಞೆ
ಯಾವುದನ್ನು ಕುವೆಂಪು ಅವರು ಅನಿಕೇತನಪ್ರಜ್ಞೆಯೆನ್ನುವರೋ ಅದನ್ನೇ ನಮ್ಮ ಪರಂಪರೆ ಅವಧೂತಪ್ರಜ್ಞೆಯೆಂದಿದೆ. ಇದು ಡಿ.ವಿ.ಜಿ.ಯವರಲ್ಲಿ ಆಳವಾಗಿ ಮಡುಗಟ್ಟಿತ್ತು. ಮೇಲ್ನೋಟಕ್ಕವರು ರಾಜ್ಯಶಾಸ್ತ್ರ, ಲೋಕಸಂಗ್ರಹ, ಹಾಸ್ಯ-ವಿನೋದ, ಸಾಹಿತ್ಯಗಳ ನಡುವೆ ವ್ಯಾಪೃತರಾಗಿದ್ದರೂ, ಅಂತರಂಗದಲ್ಲಿ ಇವುಗಳನ್ನೆಲ್ಲ ಮೀರಿದ್ದರು. ಅವರ ‘ಮಂಕುತಿಮ್ಮನ ಕಗ್ಗ’ ಹಾಗೂ ‘ಮರುಳಮುನಿಯನ ಕಗ್ಗ’ಗಳ ಬಹುಭಾಗ ಇಂಥ ಅವಧೂತಗೀತೆಯೇ. ‘ಜ್ಞಾಪಕಚಿತ್ರಶಾಲೆ’ಯ ‘ಹಕ್ಕಿಯ ಪಯಣ’ (ಸಂಪುಟ VII) ಎಂಬ ಲೇಖನ ಇದಕ್ಕೊಂದು ಸೊಗಸಾದ ನಿದರ್ಶನ. ‘ಜ್ಞಾಪಕಚಿತ್ರಶಾಲೆ’ಯ ಮೊದಲ ಸಂಪುಟದ ಶಿವಪಿಚ್ಚೈ ಮೊದಲಿಯಾರರ ಬಗೆಗಿನ ಬರೆಹವಾಗಲಿ ಸಂಕೀರ್ಣಸ್ಮೃತಿಸಂಪುಟದ (‘ಜ್ಞಾಪಕಚಿತ್ರಶಾಲೆ’ – VIII) ಹಾಗೂ ‘ಸಾಹಿತಿ-ಸಾರ್ವಜನಿಕ – ಸಜ್ಜನರು’ ಸಂಪುಟದ (‘ಜ್ಞಾಪಕಚಿತ್ರಶಾಲೆ’-I) ಅನೇಕ ಲೇಖನಗಳಾಗಲಿ ಇವಕ್ಕೆ ತುಂಬ ಪೂರಕ. ಹೊರಗೆ ಲೋಕಾಸಕ್ತಿ, ಒಳಗೆ ಸಕಲವಿರಕ್ತಿ; ಸ್ವಸ್ಥತೆಯನಲುಗಿಸದ ಜಗದಾಸ್ಥೆಯೊಂದು ಗುಣ, ಆಸ್ಥೆಯನು ಕುಂದಿಸದ ತಾಟಸ್ಥ್ಯವೊಂದು ಮುಂತಾದ ಸೂಕ್ತಿಗಳೆಲ್ಲ ಇಲ್ಲಿ ಸ್ಮರಣೀಯ. ಅಷ್ಟೇಕೆ, ಅವರ ‘ನಿವೇದನ’ ಕವನಸಂಕಲನದ ‘ಬೇಲೂರಿನ ಶಿಲಾಬಾಲಿಕೆಯರು’ ಹಾಗೂ ಇಡಿಯ ‘ಅಂತಃಪುರಗೀತಗಳು’ ಮತ್ತು ‘ಶೃಂಗಾರಮಂಗಳಂ’ ಕಾವ್ಯಗಳು ಇಂಥ ಹೊರಗೆ ಭೋಗ, ಒಳಗೆ ಯೋಗದ ವ್ಯಾಖ್ಯಾನಗಳು. ಕೀಟ್ಸ್ ಕವಿಯ ‘ಓಡ್ ಆನ್ ದಿ ಗ್ರೀಸಿಯನ್ ಅರ್ನ್’ ಎಂಬ ಪ್ರಗಾಥದ ಅತ್ಯುತ್ತಮವಿಕಸಿತರೂಪವಿಲ್ಲಿದೆ. ಈ ಮುನ್ನ ನಾವು ಗಮನಿಸಿದ ಕಾಮ-ಯಮರ ಸಾಹಚರ್ಯ ಹಾಗೂ ಸೌಂದರ್ಯ-ಸತ್ಯಗಳ ಸಂವಾದ ಡಿ.ವಿ.ಜಿ.ಯವರ ಜೀವನದೃಷ್ಟಿಯನ್ನು ಗಾಢವಾಗಿ ಪರಿಣಮಿಸಿದೆ. ಇದನ್ನು ಅವರೇ ನಮ್ಮ ವೇದಗಳ ಕಾಮ-ಮನ್ಯುಗಳೆಂಬ ಮಿಥುನದಲ್ಲಿ ಆವಿಷ್ಕರಿಸಿದ್ದಾರೆ. ಇದರ ವಿಶ್ಲೇಷಣೆಯನ್ನು ಅವರ ‘ಗೀತಶಾಕುಂತಲ’ದಲ್ಲಿಯೂ ಚೆನ್ನಾಗಿ ಮನಗಾಣಬಹುದು. ‘ಶೃಂಗಾರಮಂಗಳ’ದಲ್ಲಂತೂ ಈ ತತ್ತ್ವ ಅತ್ಯಂತ ಪ್ರಸ್ಫುಟವಾಗಿದೆ. ಡಿ.ವಿ.ಜಿ.ಯವರ ಮೊದಮೊದಲಿನ ಕೃತಿಗಳಲ್ಲೊಂದಾದ ‘ನಿವೇದನ’ದ ‘ದಾರಿಗರ ಹಾಡು’ ದಿಟವಾಗಿ ಅವರ ಅವಧೂತಪ್ರಜ್ಞೆಯ ಆನಂದಗೇಯ. ಇಲ್ಲಿಯ ಒಂದು ಸೊಲ್ಲು ತುಂಬ ಗಮನಾರ್ಹ:
ಇಂತೆಸಗಬೇಕೆಂಬ ಹಟದ ಬಂಧನವಿಲ್ಲ |
ಪಂಥವಿದು ಕಡಿದೆಂಬ ಭೀತಿಯಿಲ್ಲ |
ಅಂತರಂಗದೊಳು ನಾವಾಂತು ಗುರುಗಳ ಪದವ |
ಸಂತಸಿಪೆವವರ ನುಡಿಯಿಂ-ಸಖರೇ ||
(ಪುಟ ೫೫)
ಡಿ.ವಿ.ಜಿ.ಯವರು ಇಡಿಯ ಜಗತ್ತನ್ನು ಬ್ರಹ್ಮಪತ್ತನವೆಂದೂ ತಾನಲ್ಲಿಯ ಭಿಕ್ಷುವೆಂದೂ ಭಾವಿಸಿದ್ದರು. ಡೀವೀಜೀಸಂಜ್ಞಿತಃ ಕೋsಪಿ ಬ್ರಹ್ಮಪತ್ತನಭಿಕ್ಷುಕಃ ಎಂಬುದು ಅವರದೇ ಶ್ಲೋಕವೊಂದರ ಭಾಗ. ಅವರ ಸುಪ್ರಸಿದ್ಧಗೀತ ‘ವನಸುಮ’ ಇದೇ ಆದರ್ಶದ ಧ್ಯೇಯಗಾನ.
ರಕ್ತಿ-ವಿರಕ್ತಿ ಸಮನ್ವಯ
ಶ್ರೀರಾಮ, ಶ್ರೀಕೃಷ್ಣ ಮತ್ತು ಶ್ರೀಮಹಾದೇವರನ್ನವರು ನಮ್ಮ ಸಂಸ್ಕ್ಕೃತಿಗೆ ಮೂರು ರೂಪದಲ್ಲಿ, ಏಕಸ್ವರೂಪದಲ್ಲಿ ವಾಲ್ಮೀಕಿ, ವ್ಯಾಸ ಮತ್ತು ಕಾಲಿದಾಸರು ಕೊಟ್ಟ ಆದರ್ಶಗಳೆಂದು ಭಾವಿಸಿ ಈ ಮೂರು ಮೂರ್ತಿಗಳ ಆಂತರ್ಯವನ್ನು ಅನುಸಂಧಾನಿಸಿದ್ದರು. ಅವರ ಮಾತಿನಲ್ಲಿಯೇ ಹೇಳುವುದಾದರೆ ರಾಮ-ಕೃಷ್ಣ-ಶಿವರು ಅವರಿಗೆ ಹೀಗೆ ಕಂಡಿದ್ದಾರೆ:
ಕಾಷಾಯವನುಡದಿಹ ಯತಿ
ಸಂಸಾರದ ಪಾಶಕೆಟುಕದಾ ಗೃಹಿ ರಾಮಂ |
ದೋಷಿಯ ದೋಷವ ಕೊಂದವ-
ಶೇಷಕೆ ಮಂಗಳವನೆಸಗುವಾ ಕಾರುಣಿಕಂ || (‘ಶ್ರೀರಾಮಪರೀಕ್ಷಣಂ’, ಪು. ೧೯)
ವೇಣುಸ್ವಾನಮೊ ಪಾಂಚಜನ್ಯರವಮೋ ಗೀತೋಕ್ತಗಾಂಭೀರ್ಯಮೋ
ಮೌನಿಸ್ನೇಹಮೊ ಗೋಪಿಕಾಪ್ರಣಯಮೋ ಕೌಂತೇಯವಾತ್ಸಲ್ಯಮೋ |
ಸೇನಾನಿತ್ವಮೊ ರಾಜ್ಯತಂತ್ರನಯಮೋ ಚಕ್ರಾಸ್ತ್ರಸಂಧಾನಮೋ
ನಾನಾಜೀವನಧರ್ಮರಂಗಗಳೊಳಾದರ್ಶಂ
ಯಶೋದಾಸುತಂ ||
(‘ಶ್ರೀಕೃಷ್ಣಪರೀಕ್ಷಣಂ’ ಅವತರಣಿಕೆ, ಪದ್ಯ ೬೭)
ಭಯಮಿಲ್ಲಂ ಸರ್ಪದ ವಿಷದಿಂದಂ ಪ್ರಿಯಮೇನಲ್ಲಂ ಚಂದ್ರಾಮೃತಮುಂ
ರುಂಡದ ಸರದಿಂ ಮೈಲಿಗೆಯಲ್ಲಂ ಮಡಿತನ ಗಂಗಾಜಲದಿಂದಲ್ಲಂ |
ಭಸ್ಮದ ಲೇಪದೆ ತಪನೆಯುಮಿಲ್ಲಂ ಗೌರಿಯ ಸೋಂಕಿಂ ಸೊಗವೆಂದಲ್ಲಂ
ಆತ್ಮಾರಾಮಂ ಸುಖದುಃಖಸಮಂ ಸ್ವಸ್ಥಂ ಸೋಮಂ ಸಲಹುಗೆ ನಮ್ಮಂ ||
ಸುಂದರವಿದು ಜೀವಿತದವಸರದೊಳ್ | ದ್ವಂದ್ವದೊಳವಿಕಾರಿಕಮದ್ವಂದ್ವಂ ||
(‘ಜೀವನಸೌಂದರ್ಯ ಮತ್ತು ಸಾಹಿತ್ಯ’)
ಹೀಗೆಯೇ ಅವರು ಷೇಕ್ಸ್ಪಿಯರನನ್ನೂ ಗ್ರೀಕ್ಕವಿಗಳನ್ನೂ ಆರಾಧಿಸಿದ್ದರು. ‘ಉಮರನ ಒಸಗೆ’ಯ ಪೀಠಿಕೆಯಲ್ಲಿ ಲ್ಯುಕ್ರೀಷಿಯಸ್, ಉಮರ್ ಖಯ್ಯಾಮ್ ಮತ್ತು ಬ್ರೌನಿಂಗ್ ಕವಿಗಳ ನಿರಾಶಾವಾದ, ಆಶಾವಾದ ಹಾಗೂ ದೈವವಾದಗಳನ್ನು ಕ್ರಮವಾಗಿ ಸಮನ್ವಯಗೊಳಿಸಿರುವುದು ಉಲ್ಲೇಖನೀಯ. ಇಲ್ಲಿ ಅವರು ರಕ್ತಿ-ವಿರಕ್ತಿ-ಭಕ್ತಿಗಳು ಮೂರೂ ಜೀವನಸಂಸ್ಕಾರದ ಅವಶ್ಯಸಾಧನಗಳೆಂದೇ ಬಗೆದಿದ್ದಾರೆ.
ಸಮಗ್ರ ‘ರಾಷ್ಟ್ರ’ಕಲ್ಪನೆ’
ಡಿ.ವಿ.ಜಿ. ಫೋಟೊಗಳನ್ನು ಒದಗಿಸಿದವರು – ಖ್ಯಾತ ಛಾಯಾಗ್ರಾಹಕ ಕೆ.ಜಿ. ಸೋಮಶೇಖರ್
ಉಜ್ಜ್ವಲವಾದ ದೇಶಭಕ್ತಿಯೂ ಡಿ.ವಿ.ಜಿ.ಯವರ ತಾತ್ತ್ವಿಕನೇಪಥ್ಯವನ್ನು ದೃಢಗೊಳಿಸಿದ ಮೌಲ್ಯಗಳಲ್ಲೊಂದಾಗಿದೆ. ಈಚಿನ ದಿನಗಳಲ್ಲಿ ರಾಷ್ಟ್ರಭಕ್ತಿಯೊಂದು ಶಂಕಾಸ್ಪದವೂ ಹೇಯವೂ ಆದ ಸಂಗತಿಯಾಗಿ ನಮ್ಮ ಚಿಂತಕಬ್ರುವರನೇಕರಿಗೆ ತೋರುತ್ತಿರುವಾಗ, ಅದಕ್ಕೆ ತಕ್ಕಂತೆ ದೇಶಭಕ್ತಿಯ ‘ಫ್ಯಾಷನ್’ ಹೆಚ್ಚಿರುವಾಗ ಡಿ.ವಿ.ಜಿ.ಯಂಥವರ ನಿಲವು ನಮಗೆ ತುಂಬ ಉಪಾದೇಯವಾಗದಿರದು. ಅವರು ಮೊತ್ತಮೊದಲು ಕನ್ನಡಿಗರಿಗೆ ರಾಜ್ಯ, ರಾಷ್ಟ್ರ, ದೇಶ, ಪ್ರಭುತ್ವ, ಸ್ವಾತಂತ್ರ್ಯಾದಿಗಳ ಬಗೆಗೆ ಸಲ್ಲಕ್ಷಣವಾಗಿ ತಿಳಿಸಿದವರು. ಪಾಶ್ಚಾತ್ಯರಾಜ್ಯಶಾಸ್ತ್ರದ ಗುಣಗಳನ್ನೂ ಭಾರತೀಯ ರಾಜನೀತಿಯ ಮೌಲ್ಯಗಳನ್ನೂ ಹದವರಿತು ಬೆಸೆದವರು. ಅವರ ಮೊತ್ತಮೊದಲ ಕವನಸಂಗ್ರಹ ‘ವಸಂತಕುಸುಮಾಂಜಲಿ’ಯಲ್ಲಿಯೇ ಜೀವಗೀತೆ, ಆತ್ಮಗೀತೆ ಮುಂತಾದ ಅನುವಾದಗಳೊಟ್ಟಿಗೆ ‘ವಂದೇ ಮಾತರಂ’ ಹಾಡಿನ ಸಂಸ್ಕೃತಾನುವಾದವನ್ನೂ ನೀಡಿದ್ದಾರೆ. ಅಷ್ಟೇ ಅಲ್ಲ, ರಾಷ್ಟ್ರವೊಂದರ ಮಹತ್ತ್ವವು ಅದರ ಭೌಗೋಲಿಕ (ಪ್ರಾಕೃತಿಕ) ಸಂಪದ ಹಾಗೂ ಮಾನವಸಂಪನ್ಮೂಲ ಗಳೆರಡರಲ್ಲಿಯೂ ಇದೆಯೆಂದು ಕಂಡುಕೊಂಡು ಸಂಸ್ಕೃತಿಯ ಬಹುಮುಖಾಭಿವ್ಯಕ್ತಿಯನ್ನು ಗುರುತಿಸಿ ಆರಾಧಿಸಿದ್ದಾರೆ.** ಹೀಗಾಗಿಯೇ ಈ ಕವನಸಂಗ್ರಹದಲ್ಲಿ ಶ್ರೀರಾಮಕೃಷ್ಣ, ವಿವೇಕಾನಂದರಂಥ ಸಂತರು, ರಾಜಾ ರಾಮಮೋಹನರಾಯ್, ದಾದಾಭಾಯಿ ನವರೋಜಿಯವರಂಥ ಸಮಾಜಸುಧಾರಕರು, ಗೋಖಲೆ, ತಿಲಕ್, ಗಾಂಧಿಯವರಂಥ ಸ್ವಾತಂತ್ರ್ಯವೀರರು, ಜಗದೀಶಚಂದ್ರ ಬೋಸ್, ವಿಶ್ವೇಶ್ವರಯ್ಯನವರಂಥ ವಿಜ್ಞಾನಿ-ತಂತ್ರಜ್ಞರು, ರವೀಂದ್ರನಾಥ ಠಾಕೂರರಂಥ ಬಹುಮುಖಪ್ರತಿಭಾಶಾಲಿ ಕವಿಗಳು ಹಾಗೂ ಕೃಷ್ಣರಾಜ ಒಡೆಯರಂಥ ಆದರ್ಶಪ್ರಭುಗಳು ಕೀರ್ತಿತರಾಗಿದ್ದಾರೆ. ಅಷ್ಟೇ ಅಲ್ಲ, ಕಡೆಯಲ್ಲಿ ಗೋಖಲೆಯವರ ‘ದೇಶಭಕ್ತ ಪ್ರತಿಜ್ಞೆ’ಯನ್ನೂ ಪದ್ಯರೂಪಾಂತರದಲ್ಲಿ ಮುದ್ರಿಸಿದ್ದಾರೆ. ‘ನಿವೇದನ’ದಲ್ಲಿ ಕೊಡಗು, ಶಿವನಸಮುದ್ರ, ಜೋಗ, ಬಾಬಾಬುಡನ್ಗಿರಿಗಳ ಪ್ರಕೃತಿಯನ್ನು ವರ್ಣಿಸಿದಂತೆಯೇ ಕೃಷ್ಣರಾಜಸಾಗರ, ಚಾಮುಂಡಿಬೆಟ್ಟದ ದೀಪಗಳ ವರ್ಣನೆಯಲ್ಲಿ ಪ್ರಕೃತಿಯನ್ನು ಪಳಗಿಸಿದ ಮಾನವಮತಿಯನ್ನೂ ಇಂಥ ಭೌತಿಕಶ್ರೀಯ ಜೊತೆಗೆ ಆತ್ಮಶ್ರೀಯ ಸಂಸ್ಕೃತಿಯನ್ನು ಗಳಿಸಿದ ಬಲಿಚಕ್ರವರ್ತಿ ಹಾಗೂ ಗೊಮ್ಮಟರಂಥ ಚೇತನಗಳ ಪರಿಪಾಕವನ್ನೂ ಕೀರ್ತಿಸಿದ್ದಾರೆ. ಹೀಗಾಗಿ ಅವರ ರಾಷ್ಟ್ರಕಲ್ಪನೆ ಪರಿಪೂರ್ಣವಾದುದು. ಇದರ ಸಾರವತ್ತಾದ ರೂಪವನ್ನು ಅವರು ೧೯೪೭ರ ಆಗಸ್ಟ್ ಹದಿನಾಲ್ಕರ ಇರುಳೇ ಬರೆದು ಮುದ್ರಿಸಿ ಹಂಚಿದ ಸ್ವತಂತ್ರಭಾರತಾಭಿನಂದನಸ್ತವ (ಭಾರತಭೂವಂದನಂ)ದಲ್ಲಿ ನೋಡಬಹುದು. ಇಲ್ಲಿ ಅವರು ಪಾಶ್ಚಾತ್ಯರ ‘ರಾಷ್ಟ್ರ’ ಕಲ್ಪನೆಗಿಂತ ನಮ್ಮದೆಂತು ಭಿನ್ನವೆಂದೂ ಭಾರತೀಯತೆ ಹಾಗೂ ದೇಶಭಕ್ತಿಯೆಂದರೆ ಏನೆಂಬುದನ್ನೂ ಅಕುಂಠಿತವಾಗಿ ಹೇಳಿದ್ದಾರೆ: ಭಾರತಮೆಂಬುದೇಂ ಬರಿಯ ಮೃತ್ಸ್ನೆಯೆ ಭೌತಮೆ ಭಾವಸೃಷ್ಟಿಯೇನ್? ಆರಯಲೊಂದು ತೇಜಮದು (ಪದ್ಯ ೩), ಜನತಾವಯವೋಲ್ಲಸದಾತ್ಮತತ್ತ್ವಂ (ಪದ್ಯ ೩),ಶ್ರೀರಾಮಾಂಘ್ರಿಸರೋಜಸಂಸ್ಪರುಶದಿಂದೊಂದಾದುದೀ ಭಾರತಂ ಕಾರುಣ್ಯಾಪಗೆಯಿಂದಶೋಕಜನಪಂ ಕೆತ್ತಿದ್ದ ನೂರ್ಕಾಲ್ವೆಯಿಂ, ಆರುಂ ದಾರಿಯುಂ ಒಂದೆ ದೈವದೆಡೆಗೆಂದಾಚಾರ್ಯನಾ ಯಾತ್ರೆಯಿಂ ಓರಂತಿರ್ದುದು (ಪದ್ಯ ೫), ಸ್ವಾತಂತ್ರ್ಯಂ ಜನತಾತ್ಮಶಿಕ್ಷೆ, ಗಣಧರ್ಮಾವೇಕ್ಷೆ, ರಾಷ್ಟ್ರಪ್ರಜಾನೀತಿಪ್ರೀತಿಪರೀಕ್ಷೆ, ಜೀವಮುಕುಲೋನ್ಮೀಲಾರ್ಕಸಂವೀಕ್ಷೆ (ಪದ್ಯ ೭). ನಾನಾ ಜಾನಪದಂಗಳಾ ಪ್ರಗತಿಯಿಂದನ್ಯೋನ್ಯಸಂಸರ್ಗದಿಂ ಮಾನುಷ್ಯಂ ಬಳೆಗುಂ ದಿಟಂ, ಬೆಳಸಿನೊಳ್ ಧರ್ಮಾಶಯಂ ಕುಂದಿರಲ್ ಮ್ಲಾನಂಗೊಳ್ಳದೆ ರಾಷ್ಟ್ರ ಜೀವನಸುಮಂ? (ಪದ್ಯ ೮), ಪೌರುಷ್ಯಂ ಪರಿವರ್ಧಿಕೆಂದುಂ ಅಮಲಂ ತಾಯೇ! ಭವದ್ವಂಶ್ಯರೊಳ್, ಸ್ವಾರಸ್ಯಾರ್ಥನೆಯಿಂ ಜನಂ ಚರಿಕೆ ಬಲ್ಪಿಂ, ಜೀವಿತಾಧ್ವಂಗಳೊಳ್. ವೀರಾರ್ಹೋಚಿತನಲ್ಲದಂ ಜನಿಸದಿರ್ಕೆಂದುಂ ಭವದ್ರಾಜ್ಯದೊಳ್ (ಪದ್ಯ ೧೯). ಡಿ.ವಿ.ಜಿ.ಯವರ ದೇಶಾದರ್ಶವು ಪಾಶ್ಚಾತ್ಯರ ಪ್ಲೇಟೋ, ಬಿಸ್ಮಾರ್ಕ್, ಗರಿಬಾಲ್ಡಿ, ಮಾರ್ಲೆ, ಗ್ಲ್ಯಾಡ್ಸ್ಟನ್ಗಳಿಂದಲೂ ಪರಾಮೃಷ್ಟವಾದುದಲ್ಲದೆ ಶ್ರೀರಾಮರಾಜ್ಯ, ಶ್ರೀಕೃಷ್ಣಗೀತೆ, ವಿದ್ಯಾರಣ್ಯಸ್ವಾಮಿಗಳ ಮಂತ್ರಿತ್ವ, ಗೋಖಲೆಯವರ ರಾಜನೀತಿ ಮುಂತಾದವುಗಳ ರಸಪಾಕವೆನಿಸಿದೆ. ಅವರ ಪಾಲಿಗೆ ರಾಜಕೀಯವು ಲೋಕಸಂಗ್ರಹ. ‘ರಾಷ್ಟ್ರಕ’ ಎಂದು ಅವರೇ ಟಂಕಿಸಿರುವ Citizen ಸಂವಾದಿಪದವು ಒಬ್ಬ ಯೋಗಿಯ, ತಪಸ್ವಿಯ ಮಹತ್ತ್ವವನ್ನೇ ಒಳಗೊಂಡದ್ದು. ಜ್ಞಾನಿನಾ ಚರಿತುಂ ಶಕ್ಯಂ ಸಮ್ಯಗ್ರಾಜ್ಯಾದಿಲೌಕಿಕಂ (ಜ್ಞಾನಿಯಿನಕ್ಕುಂ ಹಿತಸಂಧಾನಂ ರಾಜ್ಯಾದಿಲೌಕಿಕವ್ಯವಹೃತಿಯೊಳ್) ಎಂಬ ವಿದ್ಯಾರಣ್ಯರ ಮಾತೂ Public life must be spiritualized ಎಂಬ ಗೋಪಾಲಕೃಷ್ಣ ಗೋಖಲೆಯವರ ಮಾತೂ (ಮಾನವಸಂಸ್ಕಾರಕಧರ್ಮಾನುವ್ರತಮಕ್ಕೆ ಸಾರ್ವಜನಿಕವಿಚಾರಂ) ಡಿ.ವಿ.ಜಿ.ಯವರ ಪಾಲಿಗೆ ಶ್ವಾಸೋಚ್ಛ್ವಾಸಗಳಾಗಿದ್ದುವು. ಅವರೇ ಸ್ಥಾಪಿಸಿದ ಗೋಖಲೆ ಸಾರ್ವಜನಿಕ ವಿಚಾರ ಸಂಸ್ಥೆಯ ಧ್ಯೇಯಶ್ಲೋಕಗಳನ್ನು ಕಂಡರೂ ಈ ಸಂಗತಿ ಮತ್ತಷ್ಟು ಸ್ಪಷ್ಟವಾಗುತ್ತದೆ. ಇಂದು ಎಲ್ಲ ರೀತಿಯಲ್ಲಿಯೂ ಅನುಕರಣಶೀಲವಾಗಿರುವ ಭಾರತೀಯಬೌದ್ಧಿಕರಿಗೆ ಎಚ್ಚರಿಕೆಯ ಗಂಟೆಯೆಂಬಂತೆ ೧೯೧೧ರಲ್ಲಿಯೇ ಡಿ.ವಿ.ಜಿ.ಯವರು ಮಾಡಿದ್ದ ಆವಾಹನೆ ಇದು: “God save us from servile and apish imitation of the Westerns. God help us to assimilate the practical and rationalistic spirit of the West and avoid the extreme socialism and the other ugly offsprings of its rank materialism” (ಉದ್ಧೃತ: ‘ದೀವಟಿಗೆಗಳು’, ಪು. ೯೪).
(ಮುಂದುವರಿಯುವುದು)