ಇ.ವಿ.ಎಂ. ಯಂತ್ರಗಳನ್ನು ನಿರ್ಮಿಸುವುದರಲ್ಲಿ ಸರ್ಕಾರಿ ಸ್ವಾಮ್ಯದ ಭಾರತ್ ಎಲೆಕ್ಟ್ರಾನಿಕ್ಸ್ ಮತ್ತು ಎಲೆಕ್ಟ್ರಾನಿಕ್ ಕಾರ್ಪೊರೇಷನ್ ಸಂಸ್ಥೆಗಳು ಎಷ್ಟು ಮಟ್ಟದ ಮುಂಜಾಗ್ರತೆ ಕ್ರಮಗಳನ್ನು ಅಳವಡಿಸಿವೆಯೆಂದರೆ ಸ್ವಯಂ ಆ ಸಂಸ್ಥೆಗಳೂ ನಿರ್ಮಾಣಾನಂತರ ಅಂತರ್ಗತ ಕೋಡ್ ಸಿಗ್ನಲ್ ಮೊದಲಾದವನ್ನು ಬದಲಾಯಿಸುವ ಶಕ್ಯತೆಯಿಲ್ಲ. ಜಟಿಲ ಯಂತ್ರವಿನ್ಯಾಸವನ್ನು ಭೇದಿಸಿ ಗೂಂಡಾಗಳನ್ನೇರ್ಪಡಿಸಿ ರಾಶಿಮತಗಳನ್ನು ಹಾಕಿಸುವುದಂತೂ ಸಾಧ್ಯವೇ ಇಲ್ಲ.
ಉಪಕರಣಗಳು ಸರಿಯಿಲ್ಲವೆಂದು ದೂರುವವನು ಕೆಟ್ಟ ಬಡಗಿ ಎಂಬ ಗಾದೆಮಾತಿದೆ. ಅದನ್ನು ನೆನಪಿಗೆ ತರುತ್ತಿರುವುದು ಕೆಲವು ವಿಪಕ್ಷಗಳ ಈಚಿನ ನಡವಳಿ. ವಿಧಾನಸಭೆಗಳ ಚುನಾವಣೆಗಳಲ್ಲಿ ಹೀನಾಯ ಪರಾಭವ ಹೊಂದಿದ ಹಲವು ವಿಪಕ್ಷಗಳು ಈಗ ಚುನಾವಣೆಗಳಲ್ಲಿ ಬಳಕೆಯಾದ ಎಲೆಕ್ಟ್ರಾನಿಕ್ ವೋಟಿಂಗ್ ಮೆಶೀನ್ಗಳು (ಇ.ವಿ.ಎಂ.) ದೋಷಯುಕ್ತವೆಂದು ಆರೋಪ ಮಾಡತೊಡಗಿವೆ. ಈ ವಿ-ದೂಷಕ ಪಡೆಯಲ್ಲಿರುವವರು ಮಾಯಾವತಿ, ದಿಗ್ವಿಜಯ್ಸಿಂಗ್, ಗುಲಾಂ ನಬಿ ಆಜಾದ್, ಅರವಿಂದ್ ಕೇಜ್ರಿವಾಲ್. ಚುನಾವಣೆಗಳಲ್ಲಿ ಆದ ಸೋಲಿನಿಂದ ಈ ಪಡೆಗಳವರು ಎಷ್ಟು ಹತಾಶೆಗೊಂಡಿದ್ದಾರೆಂಬುದನ್ನು ಈ ಹಾಸ್ಯಾಸ್ಪದ ಆರೋಪಗಳು ಎತ್ತಿತೋರಿಸಿವೆ. ಹೀಗೆ ಏನೇನೋ ಗುಲ್ಲೆಬ್ಬಿಸಿ ತಮ್ಮ ಕ್ಷೀಣಿಸಿರುವ ಬೆಂಬಲಿಗ ಸಮೂಹವನ್ನು ಉಳಿಸಿಕೊಳ್ಳಲಾದೀತೆಂದು ಇವರ ಅಂದಾಜು ಇರುವಂತಿದೆ. ಆದರೆ ಹಾಗೆ ನಡೆಯಲಾರದು. ಈಗಿನ ಚುನಾವಣಾ ನಿರ್ವಹಣ ವ್ಯವಸ್ಥೆಯು ಸಮರ್ಪಕವಾಗಿ ನಡೆಯುತ್ತಿದೆಯೆಂಬ ಬಗೆಗೆ ಸಾರ್ವಜನಿಕರಲ್ಲಿ ನಿಶ್ಚಯವಿದೆ. ಇಂದಿರಾಗಾಂಧಿಯವರ ಕಾಲದಲ್ಲಿ ಚುನಾವಣಾ ಆಯೋಗದ ಮೇಲೆ ಆಳುವ ಪಕ್ಷದ ದಟ್ಟ ಪ್ರಭಾವ ಇರುತ್ತಿತ್ತೆಂಬ ಅನಿಸಿಕೆಗೆ ಅವಕಾಶವಿತ್ತು. ಈಗ ಆ ಸ್ಥಿತಿಯಿಲ್ಲ. ಟಿ.ಎನ್. ಶೇಷನ್ ಮತ್ತು ಅವರಿಂದೀಚಿನ ಆಯುಕ್ತರುಗಳು ಚುನಾವಣಾ ಆಯೋಗದ ಸ್ವಾಯತ್ತತೆಯನ್ನೂ ಘನತೆಯನ್ನೂ ದೃಢವಾಗಿ ಸ್ಥಾಪಿಸಿದ್ದಾರೆ. ರಾಜಕಾರಣಿಗಳು ಚುನಾವಣಾ ಪ್ರಕ್ರಿಯೆಯ ಮೇಲೆ ಪ್ರಭಾವ ಬೀರಬಹುದಾದ ಸನ್ನಿವೇಶ ಈಗ ಇಲ್ಲ. ಈ ವ್ಯವಸ್ಥಾದೃಢೀಕರಣಕ್ಕೆ ಪೋ?ಕವಾಗಿ ಒದಗಿಬಂದಿರುವ ಒಂದು ಅಂಗ ಎಲೆಕ್ಟ್ರಾನಿಕ್ ವೋಟಿಂಗ್ ಮೆಶೀನಿನ ಬಳಕೆ. ಇದರಿಂದಾಗಿ ಹಿಂದೆ ಸಾಧ್ಯವಿದ್ದ ಸ್ವಚ್ಛಂದತೆಗಳೂ ದುರ್ವರ್ತನೆಗಳೂ ನಿವಾರಣೆಗೊಂಡಿವೆ. ಮತದಾನದಲ್ಲಾಗಲಿ ಮತಗಳ ಗಣನೆಯಲ್ಲಾಗಲಿ ಅಲ್ಪ ಶೈಥಿಲ್ಯವೂ ನುಸುಳದಂತಹ ತಾಂತ್ರಿಕ ಆಧಾರವನ್ನು ಇ.ವಿ.ಎಂ.ಗಳು ನಿರ್ಮಿಸಿವೆ. ಇ.ವಿ.ಎಂ. ಯಂತ್ರಗಳ ದುರ್ವಿನಿಯೋಗವು ಸಾಧ್ಯವೆಂದು ಇದುವರೆಗೆ ಯಾರೂ ಸಿದ್ಧಪಡಿಸಿಲ್ಲ. ತಮ್ಮಲ್ಲಿರುವ ನಿಸ್ಸತ್ತ್ವತೆಗೂ ಅಸ್ತವ್ಯಸ್ತತೆಗೂ ಇ.ವಿ.ಎಂ. ಯಂತ್ರಗಳನ್ನು ಹೊಣೆಯಾಗಿಸಲು ಯತ್ನಿಸಿರುವ ವಿಪಕ್ಷಗಳ ವರ್ತನೆ ಹಾಸ್ಯಾಸ್ಪದವಾಗಿದೆ.
ಇ.ವಿ.ಎಂ. ಯಂತ್ರಗಳನ್ನು ಹಸ್ತಕ್ಷೇಪ ಮಾಡಿ ತಿರುಚಲಾಗಿತ್ತೆಂಬ ಒಂದು ಸಾರ್ವಜನಿಕ ಹಿತಾಸಕ್ತಿ ಮನವಿಯನ್ನು ಸರ್ವೋಚ್ಚ ನ್ಯಾಯಾಲಯ ೨೦೦೯ರ ನಡುಭಾಗದಲ್ಲಿ ನಿರಾಧಾರವೆಂದು ತಿರಸ್ಕರಿಸಿತ್ತು. ಐದು ರಾಜ್ಯಗಳ ಉಚ್ಚನ್ಯಾಯಾಲಯಗಳೂ ಆ ಆರೋಪದಲ್ಲಿ ಹುರುಳಿಲ್ಲವೆಂದು ಘೋಷಿಸಿದ್ದವು.
ಇ.ವಿ.ಎಂ.ನಲ್ಲಿ ತಾಂತ್ರಿಕ ದೋಷಗಳಿವೆಯೆಂಬುದನ್ನು ಆಧಾರಸಹಿತ ಸಿದ್ಧಪಡಿಸುವಂತೆ ಆರೋಪಣಕಾರರನ್ನು ಹಲವು ಬಾರಿ ಈ ಹಿಂದೆ ಚುನಾವಣಾ ಆಯೋಗವು ಆಹ್ವಾನಿಸಿದ್ದಿದೆ. ಆದರೆ ಆ ಉತ್ಥಾಪಕರು ಇದುವರೆಗೆ ಗಾಳಿಮಾತುಗಳಲ್ಲಿಯೇ ತೃಪ್ತರಾಗಿದ್ದಾರೆ; ದೋಷಯುಕ್ತತೆಯನ್ನು ಸಮರ್ಥಿಸುವ ಯಾವ ವೈಜ್ಞಾನಿಕಾಂಶಗಳೂ ಗೋಚರಿಸಿಲ್ಲ.
ಗಟ್ಟಿ ಪುರಾವೆಗಳನ್ನು ನೀಡಲಾಗದ ವಿಪಕ್ಷಿಗರು ಯಾವುದೇ ಕಂಪ್ಯೂಟರ್ ತಂತ್ರಾಂಶಗಳೂ ಹಸ್ತಕ್ಷೇಪಕ್ಕೆ ಗುರಿಯಾಗುವ ಸಂಭವನೀಯತೆ ಇದೆಯೆಂಬ ಜಾಡಿನ ಹಾರಿಕೆಯ ವಾದಗಳ ಮೊರೆಹೊಕ್ಕಿದ್ದಾರೆ. ತಾಂತ್ರಿಕ ಕೌಶಲದಿಂದ ಮತದಾನವಿನ್ಯಾಸವನ್ನು ಬದಲಾಯಿಸಬಹುದು, ಯಾವುದೇ ಮತದಾನಗಳನ್ನು ಅಳಿಸಿಹಾಕಬಹುದು, ವಿದ್ಯುಚ್ಛಕ್ತಿಯ ಒದಗಣೆಯ ಅನಿಯಮಿತತೆಯಿಂದ ವ್ಯತ್ಯಾಸಗಳಾಗಬಹುದು – ಇಂತಹ ಹೇಳಿಕೆಗಳಿಗೆ ವ್ಯಾವಹಾರಿಕ ಆಧಾರಗಳು ಲಭಿಸಿಲ್ಲ. ಇ.ವಿ.ಎಂ. ಯಂತ್ರಗಳನ್ನು ನಿರ್ಮಿಸುವುದರಲ್ಲಿ ಸರ್ಕಾರಿ ಸ್ವಾಮ್ಯದ ಭಾರತ್ ಎಲೆಕ್ಟ್ರಾನಿಕ್ಸ್ ಮತ್ತು ಎಲೆಕ್ಟ್ರಾನಿಕ್ ಕಾರ್ಪೊರೇಷನ್ ಸಂಸ್ಥೆಗಳು ಎಷ್ಟು ಮಟ್ಟದ ಮುಂಜಾಗ್ರತೆ ಕ್ರಮಗಳನ್ನು ಅಳವಡಿಸಿವೆಯೆಂದರೆ ಸ್ವಯಂ ಆ ಸಂಸ್ಥೆಗಳೂ ನಿರ್ಮಾಣಾನಂತರ ಅಂತರ್ಗತ ಕೋಡ್ ಸಿಗ್ನಲ್ ಮೊದಲಾದವನ್ನು ಬದಲಾಯಿಸುವ ಶಕ್ಯತೆಯಿಲ್ಲ. ಜಟಿಲ ಯಂತ್ರವಿನ್ಯಾಸವನ್ನು ಭೇದಿಸಿ ಗೂಂಡಾಗಳನ್ನೇರ್ಪಡಿಸಿ ರಾಶಿಮತಗಳನ್ನು ಹಾಕಿಸುವುದಂತೂ ಸಾಧ್ಯವೇ ಇಲ್ಲ. ಬ್ಯಾಲಟ್ ಪೇಪರ್ ಬಳಕೆಯ ಕಾಲವಿದ್ದಾಗ ಇವೆಲ್ಲ ನಡೆಯುತ್ತಿದ್ದವು.
ಇನ್ನು ಇ.ವಿ.ಎಂ. ಯಂತ್ರಗಳಿಂದ ಸಾಧ್ಯವಾಗಿರುವ ಸುಲಭತೆ, ಮಿತವ್ಯಯ, ಬೇಹುಷಾರಿ ಮತದಾನಗಳ ನಿವಾರಣೆ ಮೊದಲಾದ ಆನುಕೂಲ್ಯಗಳಂತೂ ಸ್ಪಷ್ಟವೇ ಆಗಿವೆ. ಕಳೆದ ಹದಿನೇಳು ವರ್ಷಗಳಿಂದ ಸುಸೂತ್ರವಾಗಿ ನಡೆದಿರುವ ಯಂತ್ರೀಕೃತ ಮತದಾನವನ್ನು ಸಾರ್ವಜನಿಕರು ಒಂದು ವರದಾನವೆಂದೇ ಭಾವಿಸಿದ್ದಾರೆ. ಅಣ್ಣಾ ಹಜಾರೆಯವರಂತಹ ಸ್ವತಂತ್ರ ಪರಾಮರ್ಶಕರಿಗೂ ಈಗಿನ ಯಂತ್ರೀಕೃತ ವ್ಯವಸ್ಥೆಯಲ್ಲಿ ಯಾವ ದೋಷಗಳೂ ಕಂಡಿಲ್ಲ.