ಶಿಫಾರಸ್ ಪತ್ರಗಳ ಅಗತ್ಯ ಎಲ್ಲಿಗೇ ಆದರೂ ಬೇಕಾಗಬಹುದು!
ನಮ್ಮ ದೇಶದಲ್ಲಿ ಜೀವನದ ಪ್ರತಿಯೊಂದು ಕ್ಷೇತ್ರದಲ್ಲಿ ಶಿಫಾರಸ್ ಪತ್ರಗಳು ಓಡಾಡುತ್ತಿರುತ್ತವೆ. ಪರೀಕ್ಷೆಗಳು, ನೌಕರಿಗಳು, ಪೊಲೀಸ್ ಇಲಾಖೆ, ಕಚೇರಿಗಳು – ಹೀಗೆ ಎಲ್ಲ ಸ್ಥಳಗಳಲ್ಲೂ ಶಿಫಾರಸ್ ಪತ್ರಗಳಿಗೆ ಅವುಗಳದೇ ಆದ ಮಹತ್ತ್ವವಿದೆ. ಇಲ್ಲಿ ಕೆಲವು ಅಂತಹ ಪತ್ರಗಳಿವೆ. ಓದಿಕೊಳ್ಳಿ.
ಸನ್ಮಾನ್ಯ ಠಾಕೂರ್ ಸಾಹೇಬರೇ,
ಈ ಪತ್ರ ತರುತ್ತಿರುವ ರಾಮನರೇಶ್ರವರಲ್ಲಿ ದಯವಿಟ್ಟು ನಿಮ್ಮ ಬಂದೂಕು ಕಳುಹಿಸಿಕೊಡಿ. ನಮ್ಮ ಬಂದೂಕು ಕೆಟ್ಟುಹೋಗಿದೆ. ನಾವು ಅರ್ಜೆಂಟಾಗಿ ನಮ್ಮ ಮಗಳ ಪ್ರೇಮಿಯನ್ನು ಸ್ವಲ್ಪ ಮರ್ಡರ್ ಮಾಡಬೇಕಿತ್ತು. ಕೆಲಸ ಮುಗಿಯುತ್ತಲೇ ಇದೇ ಸಜ್ಜನರು ನಿಮಗೆ ಬಂದೂಕನ್ನು ಮರಳಿಸುತ್ತಾರೆ. ಒಂದು ವೇಳೆ ಯಾವುದೇ ಕಾರಣದಿಂದಾಗಿ ನಿಮಗೆ ತಕ್ಷಣ ಬಂದೂಕು ಸಿಗದಿದ್ದರೆ, ನೀವು ಯಾವಾಗ ಬಂದೂಕನ್ನು ನಮಗೆ ತಲಪಿಸಲು ಸಾಧ್ಯವೆಂಬುದನ್ನು ತಿಳಿಸಿ. ಅಲ್ಲಿಯವರೆಗೆ ನಾವು ಆ ಹುಡುಗನಿಗೆ ಲತ್ತೆಯ ಸೇವೆ ಮಾಡುತ್ತೇವೆ. ಖಾನ್ಪುರದ ಕೊಲೆ ಕೇಸ್ನಲ್ಲಿ ನೀವು ಯಾವುದೇ ಆಪಾದನೆಯಿಲ್ಲದೆ ಬಿಡುಗಡೆಯಾದಿರಿ ಅಂತ ಕೇಳಿದೆ. ನಮ್ಮ ದೇಶದಲ್ಲಿ ನ್ಯಾಯಕ್ಕೆ ಸದಾ ಗೆಲವು ಸಿಗುತ್ತದೆ.
ನಿಮ್ಮ,
ರಾಮಸಿಂಹ ಬುಂದೇಲಾ
ಪತ್ರ : ೨
ಬಂಧು ಅರಿಸೂರ್ ಅವರೇ,
ಈ ಪತ್ರ ತರುತ್ತಿರುವವರು ನನ್ನ ಪರಮಮಿತ್ರರು. ಇವರು ಪ್ರೇಮಪಾಶದಲ್ಲಿ ಸಿಲುಕಿರುವುದರಿಂದ ಈಚೆಗೆ ಇವರಿಗೆ ನಿತ್ಯ ಹೊಸಹೊಸ ಕವನಗಳು ಮತ್ತು ಶಾಯರಿಗಳು ಬೇಕಾಗುತ್ತವೆ. ಇದನ್ನು ಇವರು ಪ್ರೇಮಪತ್ರಗಳಲ್ಲಿ ಅಥವಾ ಮುಖಾಮುಖಿ ಉಪಯೋಗಿಸಿಕೊಳ್ಳಬಲ್ಲರು. ನಿಮ್ಮ ಕವನಗಳು ಪ್ರೇಮದ ಸಾಗರದಿಂದ ತುಂಬಿತುಳುಕುತ್ತಿರುತ್ತವೆ ಎಂಬ ವಿಷಯ ಜಗಜ್ಜಾಹೀರಾಗಿರುವುದು ಸರಿಯಷ್ಟೆ. ಗಾಲಿಬ್ ಮೀರ್, ನೀರಜ್ ಮುಂತಾದವರು ಕಬ್ಬಿಣದಂಥ ಪದ್ಯಗಳನ್ನು ಬರೆದಿದ್ದಾರೆ. ಅವುಗಳನ್ನು ಯಥಾವತ್ ಕೊಟ್ಟರೂ ಎದುರು ಪಾರ್ಟಿಯವರಿಗೆ ಅರ್ಥವಾಗುವುದಿಲ್ಲ. ನಿಮ್ಮ ಕವನಗಳು ಮತ್ತು ಶಾಯರಿಗಳಲ್ಲಿ ಸರಳತೆ ಇದೆ, ಪ್ರಾಸ ಇದೆ, ಖುಲ್ಲಂಖುಲ್ಲಾ ವಿಷಯಗಳಿವೆ. ಹೀಗಾಗಿ ನಾಯಕಿಗೆ, ಪ್ರೇಮಪತ್ರ ಬರೆಯುವವನ ಪಾಪಿ ಮನದಲ್ಲಿ ಏನಿದೆ ಎಂಬುದು ತಿಳಿಯುವುದೇ ಇಲ್ಲ. ಈ ಪತ್ರ ತರುತ್ತಿರುವ ನನ್ನ ಮಿತ್ರರು ಇಂಥ ಪ್ರಾಮಾಣಿಕ ಅನಿಸಿಕೆಯ ಕವನಗಳನ್ನು ಇಷ್ಟಪಡುತ್ತಾರೆ. ಇವರು ಅಶ್ಲೀಲತೆಯನ್ನು ಆರೋಪವೆಂದು ತಿಳಿಯದೆ, ಅದನ್ನು ಅದರ ವಿಶೇಷತೆಯೆಂದು ಭಾವಿಸುತ್ತಾರೆ. ದಯವಿಟ್ಟು ಇವರಿಗೆ ಕೆಲವು ಬಿಸಿಬಿಸಿ ಕವನಗಳನ್ನು ಕೊಟ್ಟರೆ ಇವರ ಪ್ರೇಮ ಯಶಸ್ಸು ಪಡೆಯುವುದು.
ಛತರ್ಪುರದ ಕವಿ ಸಮ್ಮೇಳನದಲ್ಲಿ ಯಾರೋ ನಿಮ್ಮ ಮೇಲೆ ಚಪ್ಪಲಿ ಎಸೆದರೆಂದು ಕೇಳಿದೆ. ಕೇಳಿ ತುಂಬಾ ಬೇಸರವಾಯಿತು. ಕವಿ ಸಮ್ಮೇಳನದ ಕ್ವಾಲಿಟಿ ಎಷ್ಟು ಇಳಿಯುತ್ತಿದೆಯಲ್ಲ….
ನಿಮ್ಮ,
ಜಿ.ಡಿ. ಚಂದಾನಿ
ಪತ್ರ : ೩
ಪರಮ ಆದರಣೀಯ ಇನ್ಸ್ಪೆಕ್ಟರ್ ಸಾಹೇಬ್ರೆ,
ಈ ಪತ್ರ ತರುತ್ತಿರುವವರು ಐದುಸಾವಿರ ರೂಪಾಯಿಗಳೊಂದಿಗೆ ಬರುತ್ತಿದ್ದಾರೆ. ಇದು ನಿಮ್ಮ ಈಗಿನ ರೇಟಿಗೆ ತುಂಬಾ ಕಡಮೆ ಅಂತ ನಮಗೆ ತಿಳಿದಿದೆ. ಆದರೆ ಈ ಪತ್ರ ತರುತ್ತಿರುವವರು ಪ್ರೇಮಪಾಶದಲ್ಲಿ ಸಿಲುಕಿ ಈ ಮೊದಲೇ ತಮ್ಮಲ್ಲಿದ್ದದ್ದನ್ನೆಲ್ಲಾ ಕಳೆದುಕೊಂಡಿದ್ದಾರೆ. ಹೀಗಾಗಿ ಇಷ್ಟು ಹಣ ಸ್ವೀಕರಿಸಿ. ಪ್ರೀತಿಯಲ್ಲಿ ಕೊಳ್ಳೆ ಹೊಡೆದರೆ ಅದಕ್ಕೆ ಯಾವುದೇ ಎಫ್.ಐ.ಆರ್. ಇರುವುದಿಲ್ಲ. ಆದರೆ ಹುಡುಗಿಯ ತಂದೆ ನಿಮ್ಮ ಸ್ಟೇಷನ್ನಲ್ಲಿ ಸುಳ್ಳು ರಿಪೋರ್ಟ್ ಬರೆಸಿದ್ದಾನೆ – ಇವನು ಏನೂ ತಿಳಿಯದ ಹುಡುಗಿಗೆ ಚುಡಾಯಿಸುತ್ತಾನೆ ಅಂತ. ಆದರೆ ಹುಡುಗಿಗೆ ಎಲ್ಲಾ ತಿಳಿದಿದೆ. ಈ ಪತ್ರ ತರುವವರು ಪರಸ್ಪರ ಒಪ್ಪಿಗೆಯಿಲ್ಲದೆ ಅಂಥ ಯಾವ ಕೆಲಸವನ್ನೂ ಮಾಡಿರುವುದಿಲ್ಲ. ಕಾನೂನಿಗೆ ಸಂಬಂಧಿಸಿದಂತೆ ಈ ಬಗ್ಗೆ ಅವರಲ್ಲಿ ಯಾವುದೇ ಪತ್ರ-ಗಿತ್ರ ಇಲ್ಲ. ಯಾಕೆಂದರೆ ಪ್ರೀತಿಯ ವಿಷಯದಲ್ಲಿ ಇಂಥ ಒಪ್ಪಿಗೆಯನ್ನು ಸ್ಟಾಂಪ್ ಪೇಪರ್ನಲ್ಲಿ ಬರೆಸುವ ಪದ್ಧತಿ ಇನ್ನೂ ಸೃಷ್ಟಿಯಾಗಿಲ್ಲ. ಹುಡುಗಿಯ ಅಪ್ಪನ ಸುಳ್ಳು ದೂರಿನ ಮೇಲೆ ನಿಮ್ಮ ಸ್ಟೇಷನ್ನ ಪೇದೆಗಳು ಇವರನ್ನು ಯಾವಾಗ ಬೇಕಾದರೂ ಸ್ಟೇಷನ್ಗೆ ಕರೆದೊಯ್ದು ಥಳಿಸಬಹುದು? ದಯವಿಟ್ಟು ಲಂಚ ಸ್ವೀಕರಿಸಿ, ಈ ಬಡಪಾಯಿಯ ಕೇಸನ್ನು ಕ್ಲೋಸ್ ಮಾಡಿಬಿಡಿ.
ನಿಮ್ಮ ಮುರೈನಾ ಬಲಾತ್ಕಾರದ ಕಾಂಡ ಬಹಿರಂಗಗೊಳಿಸುವ ಪ್ರಯತ್ನಗಳು ನಡೆಯುತ್ತಿವೆಯೆಂದು ಕೇಳಿದೆ. ಗೃಹಮಂತ್ರಿಗಳ ಪಿ.ಎ. ನಮ್ಮ ಹಳ್ಳಿಯವರು. ನಿಮಗೆ ಸಹಾಯ ಬೇಕಿದ್ದರೆ ಆಜ್ಞಾಪಿಸಿ.
ನಿಮ್ಮ
ಮುನ್ನಾಲಾಲ್, ಭಾಂಡೇರ್ವಾಲೆ
ಪತ್ರ : ೪
ಪರಮಪೂಜ್ಯ ಚಾಟೆಯವರೇ,
ಈ ಪತ್ರ ತರುತ್ತಿರುವವರು ನನ್ನ ತಮ್ಮನ ಮಗನಾಗಿದ್ದು ಪ್ರೇಮದ ಸುಳಿಯಲ್ಲಿ ಸಿಲುಕಿದ್ದಾನೆ. ನೀವು ಮಂತ್ರಿಗಳಿಗೆ ತುಂಬಾ ಆಪ್ತರು. ದಯವಿಟ್ಟು ನೀವು ಮಿನಿಸ್ಟ್ರಿಯಿಂದ ಇಂಪೋರ್ಟ್ ಲೈಸೆನ್ಸ್ ಕ್ಲಿಯರ್ ಮಾಡಿಸಿಕೊಡಿ. ಇದರಿಂದ ನನ್ನ ತಮ್ಮನ ಮಗ ಆಗಸದಿಂದ ಚಂದ್ರ-ನಕ್ಷತ್ರಗಳನ್ನು ಆಮದು ಮಾಡಿಕೊಂಡು ಹುಡುಗಿಯ ಕಾಲುಗಳ ಬಳಿ ಹಾಸಲು ಸಾಧ್ಯವಾಗುತ್ತದೆ. ಹುಡುಗ ಪ್ರಥಮ ಬಾರಿಗೆ `ಲವ್’ನಲ್ಲಿ ಬಿದ್ದಿದ್ದಾನೆ. ಚಂದ್ರ-ನಕ್ಷತ್ರಗಳನ್ನು ಹಾಸುವೆ ಎಂಬ ಅವನ ಪ್ರತಿಜ್ಞೆಗಳನ್ನು ಇಷ್ಟು ಸೀರಿಯಸ್ ಆಗಿ ತೆಗೆದುಕೊಳ್ಳಬಾರದೆಂಬ ವಿವೇಕ ಅವನಿಗಿಲ್ಲ. ಅವನು ಒಪ್ಪುತ್ತಲೇ ಇಲ್ಲ.ಮಂತ್ರಿಗಳ ಆ `ಡೀಲ್’ ಮತ್ತೆ ಸಾಧ್ಯವಾಗಲಿಲ್ಲ ಅಂತ ಕೇಳಿದೆ? ನಾಳೆ ಸಿಕ್ಕಿಬಿದ್ದರೆ ಜೈಲಿಗೆ ಹೋಗಬೇಕಾದ ಪರಿಸ್ಥಿತಿ ಉಂಟಾಗಬಹುದು, ಒಂದುವೇಳೆ ಇಂಥ ಡೀಲ್ಗಳನ್ನು ಪರಿಹರಿಸಿದರೆ ಜನರಿಗೆ ಸರ್ಕಾರದ ಬಗ್ಗೆ ನಂಬಿಕೆಯೇ ಹೊರಟುಹೋಗುತ್ತದೆ.
ನಿಮ್ಮ
ಜಗನ್ನಾಥ, ಗ್ರಾಮಫೋನ್ ಮಾಲೀಕ
ಪತ್ರ : ೫
ಸನ್ಮಾನ್ಯ ಡಾಕ್ಟರ್ ಸಾಹೇಬರಿಗೆ,
ಈ ಪತ್ರ ತರುವವನನ್ನು ನಾನು ಹಳ್ಳಿಯಿಂದ ಸ್ಪೆಶಲ್ ಆಗಿ ನಿಮ್ಮಿಂದ ಚಿಕಿತ್ಸೆ ಮಾಡಿಸಿಕೊಳ್ಳಲು ಕರೆಸಿದ್ದೇನೆ. ಇವನು ಪ್ರೇಮದ ಅಮಲಿನಲ್ಲಿದ್ದಾನೆ, ಅಲ್ಲಿಯೇ ಇರುವ ಪ್ರಾಣಿಯೂ ಹೌದು. ಮೊದಲ ಪ್ರೇಯಸಿಯ ಅಣ್ಣ ದೊಣ್ಣೆಯಿಂದ ಇವನ ಕೈಯನ್ನು ಮುರಿದ. ಎರಡನೆಯ ಪ್ರೇಯಸಿಯ ತಂದೆ ಅಟ್ಟದಿಂದ ದೂಡಿದಾಗ ಇವನ ಮೊಣಕಾಲಿನ ಮೂಳೆ ಮುರಿದಿದೆ. ಈಚೆಗೆ ಇವನಿಗೆ ಮೂರನೇ ಪ್ರೇಯಸಿಯ ಮಾವನ ಭಯ ಕಾಡುತ್ತಿದೆ. ಆ ಮಾವ ಒಂದಲ್ಲ ಒಂದು ದಿನ ಇವನನ್ನು ಚೆನ್ನಾಗಿ ಥಳಿಸಬಹುದು. ನೀವು ಒಂದು ಚಮತ್ಕಾರದ ಔಷಧ ಕೊಡಬೇಕು. ಅದರ ಸೇವನೆಯಿಂದ ಇವನ ಹಳೆಯ ಗಾಯಗಳೆಲ್ಲಾ ವಾಸಿಯಾಗಬೇಕು. ಅದರಿಂದ ಭವಿಷ್ಯದ ಹೊಡೆತಗಳನ್ನು ತಾಳಿಕೊಳ್ಳಲು ಶಕ್ತಿ ದೊರಕಬೇಕು ಎಂಬುದು ಇವನ ಆಸೆಯಾಗಿದೆ. ಆದರೆ ಇವನು ಮಾತ್ರ ಪ್ರೇಮಿಸುವುದನ್ನು ಕೈಬಿಡಲಾರ.ನೀವು ತಪ್ಪು ಇಂಜೆಕ್ಷನ್ ಕೊಟ್ಟಿದ್ದರಿಂದ ಒಬ್ಬ ರೋಗಿ ಸತ್ತು ಜನ ಗಲಾಟೆ ಮಾಡಿದರು ಅಂತ ಕೇಳಿದೆ…. ಹೇಳಿ, ಮನುಷ್ಯ ಎಷ್ಟು ಕೃತಘ್ನನಾಗಿಬಿಟ್ಟಿದ್ದಾನಲ್ಲ….?
ನಿಮ್ಮ
ಜಿ.ಪಿ. ಸಿಂಗ್
(ಹಿಂದೀ ಮೂಲ : ಜ್ಞಾನ್ ಚತುರ್ವೇದಿ)
ಡಿ.ಎನ್. ಶ್ರೀನಾಥ್
ಶಿವಮೊಗ್ಗ