ಚದುರಂಗದಾಟದಲ್ಲಿ ಯಾವ ದಾಳಗಳದು ಮೇಲುಗೈಯಾದೀತೆಂಬುದು ಅಲ್ಪಕಾಲದಲ್ಲಿ ವಿದಿತವಾಗಲಿದೆ. ನಿರೀಕ್ಷೆಯೇ ಇರದಿದ್ದ ಅಭ್ಯರ್ಥಿಯೊಬ್ಬರು ಈಗಿನ ಅತಂತ್ರಸ್ಥಿತಿಯ ಕಾರಣದಿಂದ ಮುನ್ನಲೆಗೆ ಬರುವ ಸಂಭವವೂ ಇಲ್ಲದಿಲ್ಲ.
ನಮ್ಮ ದೇಶದ ಅತ್ಯುನ್ನತ ಪದವಿಯೆಂದರೆ ರಾಷ್ಟ್ರಾಧ್ಯಕ್ಷರದು. ಸರ್ಕಾರದ ಎಲ್ಲ ವ್ಯವಹಾರಗಳೂ ನಡೆಯುವುದು ರಾಷ್ಟ್ರಾಧ್ಯಕ್ಷರ ಹೆಸರಿನಲ್ಲಿಯೆ. ಸಚಿವಸಂಪುಟದ ಎಲ್ಲ ನಿರ್ಣಯಗಳೂ ರಾಷ್ಟ್ರಾಧ್ಯಕ್ಷರ ಅನುಮೋದನೆ ಪಡೆದುಕೊಳ್ಳುವುದು ಕಡ್ಡಾಯ. ಇದು ಸಾಂವಿಧಾನಿಕ ವಿನ್ಯಾಸವಾಗಿದ್ದರೂ ವ್ಯಾವಹಾರಿಕ ಸ್ತರದಲ್ಲಿ ಸಚಿವಸಂಪುಟದ ಯಾವುದೇ ನಿರ್ಣಯವನ್ನು ರಾಷ್ಟ್ರಾಧ್ಯಕ್ಷರು ತಿರಸ್ಕರಿಸಬಹುದಾದ ಸ್ಥಿತಿ ಇಲ್ಲ. ಹೀಗೆ ರಾಷ್ಟ್ರಾಧ್ಯಕ್ಷ ಸ್ಥಾನದ ಅಧಿಕಾರಪರಿಧಿ ಕುರಿತಂತೆ ಭಾರತ ರಾಜ್ಯಾಂಗದಲ್ಲಿನದು ಒಂದು ವಿಚಿತ್ರ ಸನ್ನಿವೇಶವಾಗಿದೆ. ಹೀಗಿದ್ದರೂ ರಾಷ್ಟ್ರಾಧ್ಯಕ್ಷರು ಎಷ್ಟುಮಟ್ಟಿಗೆ ತಮ್ಮ ಸ್ಥಾನೌನ್ನತ್ಯವನ್ನು ಎತ್ತಿಹಿಡಿಯುತ್ತಾರೆಂಬುದು ಆ ಪದವಿಯಲ್ಲಿ ಅಧಿಷ್ಠಿತರಾಗಿರುವವರ ವ್ಯಕ್ತಿತ್ವದ ಮೇಲೂ ಒಂದಷ್ಟು ಅವಲಂಬಿತವಾಗಿರುತ್ತದೆಂಬುದನ್ನು ಅಲ್ಲಗಳೆಯಲಾಗದು. ರಾಜ್ಯಗಳಲ್ಲಿ ಅನಿಶ್ಚಿತ ಪರಿಸ್ಥಿತಿ ಏರ್ಪಟ್ಟಾಗಲಂತೂ ರಾಷ್ಟ್ರಾಧ್ಯಕ್ಷರ ಪಾತ್ರ ಮಹತ್ತ್ವದ್ದಾಗುತ್ತದೆ. ಯಾವುದೇ ರಾಜ್ಯದಲ್ಲಿ ಅಸ್ಥಿರತೆಯುಂಟಾದಾಗ ರಾಷ್ಟ್ರಪತಿಗಳ ಆಡಳಿತ ಏಕೈಕ ಪರಿಹಾರವಾಗುತ್ತದೆ.
ಈ ಹಲವು ಕಾರಣಗಳಿಂದ ರಾಷ್ಟ್ರಾಧ್ಯಕ್ಷರ ಚುನಾವಣೆ ಸಮೀಪಿಸಿದಾಗ ಅದು ಇಡೀ ದೇಶದಲ್ಲಿ ಕುತೂಹಲವನ್ನು ಮೂಡಿಸುತ್ತದೆ.
ಇದೀಗ ರಾಷ್ಟ್ರಾಕ್ಷಸ್ಥಾನದಲ್ಲಿರುವ ಪ್ರಣವ ಮಖರ್ಜಿಯವರ ಐದುವರ್ಷದ ಅಧಿಕಾರಾವಧಿ ೨೦೧೭ ಜುಲೈ ೨೬ಕ್ಕೆ ಮುಕ್ತಾಯಗೊಳ್ಳಲಿದ್ದು ಅಷ್ಟರೊಳಗೆ ಹೊಸ ರಾಷ್ಟ್ರಾಧ್ಯಕ್ಷರ ಆಯ್ಕೆ ನಡೆಯಬೇಕಾಗಿದೆ.
ರಾಷ್ಟ್ರಾಧ್ಯಕ್ಷರ ಆಯ್ಕೆಯಾಗುವುದು ಪರೋಕ್ಷ ಚುನಾವಣೆಯ ಮೂಲಕ. ಈ ಚುನಾವಣೆಯಲ್ಲಿ ಮತದಾನದ ಹಕ್ಕನ್ನು ಪಡೆದಿರುವವರು ಲೋಕಸಭೆ-ರಾಜ್ಯಸಭೆಗಳ ಸದಸ್ಯರು ಮತ್ತು ಎಲ್ಲ ರಾಜ್ಯಗಳ ಮತ್ತು ಕೇಂದ್ರಾಡಳಿತ ಪ್ರದೇಶಗಳ ಶಾಸನಸಭೆಗಳ ಸದಸ್ಯರು (ಇವರನ್ನು ಸಾಮೂಹಿಕವಾಗಿ ’ಎಲೆಕ್ಟೊರಲ್ ಕಾಲೇಜ್’ ಎಂದು ಕರೆಯಲಾಗುತ್ತದೆ). ಒಬ್ಬೊಬ್ಬ ಸಂಸತ್ಸದಸ್ಯನ ಅಥವಾ ಶಾಸಕನ ಮತಕ್ಕೆ ಅವನು ಪ್ರತಿನಿಧಿಸುವ ಜನಸಂಖ್ಯೆಗೆ ಅನುಗುಣವಾಗಿ ಮೌಲ್ಯಾಂಕನ ನಿಗದಿಯಾಗಿರುತ್ತದೆ. ಈಗಿನ ಸದಸ್ಯಸಂಖ್ಯೆಯ ಪ್ರಮಾಣದಲ್ಲಿ ಸಂಸತ್ಸದಸ್ಯರ ಮತಗಳ ಮೌಲ್ಯ ೫,೪೯,೪೦೮ ಮತ್ತು ಶಾಸನಸಭಾ ಸದಸ್ಯರ ಮತಗಳ ಮೌಲ್ಯ ೫,೪೯,೪೭೪; ಎಂದರೆ ಒಟ್ಟು ೧೦,೯೮,೮೮೨ ಆಗುತ್ತದೆ. ಇದರಲ್ಲಿ ಅತ್ಯಧಿಕ ಮತಗಳನ್ನು ಪಡೆದವರು ಆಯ್ಕೆಯಾದಂತೆ.
ಸಾಮಾನ್ಯವಾಗಿ ಅಧಿಕಾರಾರೂಢ ಪಕ್ಷದ್ದು ಬಹುಮತವಿರುವ ಕಾರಣ ಆಳುವ ಪಕ್ಷವು ನಿಲ್ಲಿಸುವ ಅಭ್ಯರ್ಥಿಯು ಗೆಲ್ಲುವ ಸಂಭವ ಹೆಚ್ಚಿರುತ್ತದೆ. ಇದೀಗ ಅಧಿಕಾರದಲ್ಲಿರುವ ಎನ್.ಡಿ.ಎ. ವಶದಲ್ಲಿರುವ ಮತಗಳು ಶೇ. ೪೮.೧೦ರಷ್ಟು ಮತ್ತು ಯು.ಪಿ.ಎ ವಶದಲ್ಲಿರುವ ಮತಗಳು ಶೇ. ೧೫.೯೦ ಮಾತ್ರ. ಆದರೂ ಪರಿಸ್ಥಿತಿ ಸರಳವೆನ್ನುವಂತಿಲ್ಲ. ಕಾರಣವೆಂದರೆ ಯು.ಪಿ.ಎ. ಬಿಟ್ಟು ಉಳಿದ ಪಕ್ಷಗಳ ಮತಗಳು ಶೇ. ೨೩.೮೦ ಮತ್ತು ಪಕ್ಷೇತರ ಸ್ವತಂತ್ರರ ಮತಗಳು ಶೇ. ೧೨.೨೦ರಷ್ಟಿವೆ. ಈ ಅಂಶಗಳನ್ನು ಲೆಕ್ಕ ಮಾಡಿದರೆ ಎನ್.ಡಿ.ಎ ಅಭ್ಯರ್ಥಿಯು ಗೆಲ್ಲುವುದು ದುಷ್ಕರ. ಅಧಿಕಾರೇತರ ಸದಸ್ಯಮತಗಳ ಒಟ್ಟು ಪ್ರಮಾಣ ಆರೂಢ ಪಕ್ಷದಕ್ಕಿಂತ ಸ್ವಲ್ಪ (ಶೇ.೩.೮೦) ಹೆಚ್ಚಾಗಿದೆ. ಇದು ಗಣಿತೀಯ ಸ್ಥಿತಿಯಷ್ಟೆ. ಚುನಾವಣೆಗಳಲ್ಲಿ ಹಲವು ಅನ್ಯ ಅಂಶಗಳೂ ಕೆಲಸಮಾಡುತ್ತವಷ್ಟೆ. ವಿವಿಧ ಪಕ್ಷಗಳ ನಡುವೆ ಅಭ್ಯರ್ಥಿಯ ಬಗೆಗೆ ಸಂಧಾನಗಳೂ ಒಪ್ಪಂದಗಳೂ ಆಗುವುದೂ ಉಂಟು. ಆಯ್ಕೆಯು ಸರ್ವಾನುಮತದಿಂದ ಆಗುವುದು ಅಪೇಕ್ಷಣೀಯವಾದರೂ ಅದಕ್ಕೆ ಈಗಿನ ಪರಿಸರ ಅನುಕೂಲಕರವಾಗಿಲ್ಲ. ರಾಷ್ಟ್ರಪತಿ ಮತ್ತು ಉಪರಾಷ್ಟ್ರಪತಿ – ಇಬ್ಬರೂ ತನ್ನಲ್ಲಿ ಸೌಹಾರ್ದವಿರುವವರು ಆಗಬೇಕೆಂದು ಆರೂಢ ಪಕ್ಷ ಬಯಸುವುದು ಸಹಜ. ಆಳುವ ಪಕ್ಷಕ್ಕೆ ವ್ಯತಿರಿಕ್ತ ಮನೋಧರ್ಮವುಳ್ಳ ಅಭ್ಯರ್ಥಿಯನ್ನು ನಿಲ್ಲಿಸಬೇಕೆಂದು ಸೋನಿಯಾಗಾಂಧಿ ನೇತೃತ್ವದ ಯು.ಪಿ.ಎ. ಬಣ ಪ್ರಯತ್ನಶೀಲವಾಗಿದೆ.
ಅಭ್ಯರ್ಥಿ ಯಾರಾಗಬೇಕೆಂಬ ಬಗೆಗೆ ಈಗಾಗಲೆ ಊಹಾಪೋಹಗಳು ಪಸರಿಸಿವೆ. ವಿರೋಧಪಕ್ಷಬಣದಲ್ಲಿ ಚಲಾವಣೆಗೆ ಬಂದಿರುವ ಕೆಲವು ಹೆಸರುಗಳು – ಶರದ್ ಪವಾರ್, ಪರಿಶಿಷ್ಟ ಜಾತಿಗಳನ್ನು ಪ್ರತಿನಿಧಿಸುವ ಮಲ್ಲಿಕಾರ್ಜುನ ಖರ್ಗೆ, ಹೆಚ್ಚು ವಿರೋಧವಿರದ ಮಾಜಿ ರಾಜ್ಯಪಾಲ ಗೋಪಾಲಕೃಷ್ಣ ಗಾಂಧಿ, ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಇತ್ಯಾದಿ. ಆದರೆ ನಿತೀಶ್ ಕುಮಾರ್ ಮುಂದಿನ ಚುನಾವಣೆ ಎಂದರೆ ೨೦೧೯ರ ಸಾರ್ವತ್ರಿಕ ಚುನಾವಣೆಯಲ್ಲಿ ಮೋದಿಯವರಿಗೆ ಪ್ರತಿಕಕ್ಷಿಯಾಗುವ ಕಲ್ಪನೆಯಲ್ಲಿರುವುದರಿಂದ ಅವರು ಉತ್ಸಾಹ ತೋರುತ್ತಿಲ್ಲ. ಶರದ್ ಪವಾರ್ ಗೆಲ್ಲುವ ಸಾಧ್ಯತೆ ಇರುವ ಅಭ್ಯರ್ಥಿ ಎಂದು ಯಾರೂ ಭಾವಿಸಿಲ್ಲ. ಸ್ವಲ್ಪ ಸಮಯ ಹಿಂದೆ ಎಲ್.ಕೆ. ಆಡ್ವಾನಿ, ಮುರಲೀಮನೋಹರ ಜೋಶಿ ಹೆಸರುಗಳು ಕೇಳಬರುತ್ತಿದ್ದವು. ಆದರೆ ಇದೀಗ ಅಯೋಧ್ಯೆಯ ಭಾನಗಡಿ ತಲೆಯೆತ್ತಿರುವುದರಿಂದ ಅವರ ಹೆಸರುಗಳು ಹಿಂದಕ್ಕೆ ಸರಿದಿವೆ.
ಹಿಂದೆ ಯೋಗ್ಯ ಅಭ್ಯರ್ಥಿಯಾಗಿರುವುದಲ್ಲದೆ ಮುಸ್ಲಿಮರೂ ಆಗಿದ್ದುದು ಅಬ್ದುಲ್ ಕಲಾಂ ಅವರ ಆಯ್ಕೆಗೆ ಅನುಕೂಲಕರ ಅಂಶವಾಗಿತ್ತು. ಅನಂತರ ಅವಕಾಶ ದೊರೆತೊಡನೆ ಈ ಉಚ್ಚಪದವಿಗೆ ಮೊದಲಬಾರಿಗೆ ಮಹಿಳಾ ಅಭ್ಯರ್ಥಿ ಆಯ್ಕೆಯಾಗಲೆಂಬ ವಾದವನ್ನು ಮುಂದೊತ್ತಿ ಯು.ಪಿ.ಎ. ಪಕ್ಷ ಪ್ರತಿಭಾ ಪಾಟೀಲ್ ಅವರನ್ನು ಗಾದಿಗೇರಿಸಿತು. ಮಹಿಳಾ ರಾಷ್ಟ್ರಪತಿ, ಮುಸ್ಲಿಂ ಉಪರಾಷ್ಟ್ರಪತಿ, ಸಿಖ್ ಪ್ರಧಾನಮಂತ್ರಿ – ಈ ಸೆಕ್ಯುಲರ್ ಗಣಿತದಿಂದ ಎಷ್ಟು ಪ್ರಯೋಜನವಾಯಿತೆಂಬುದು ಬೇರೆ ವಿಷಯ. ಹಿಂದೆಯೂ ಇಂತಹ ಗಣಿತ ಬಳಸಿ ಕಾಂಗ್ರೆಸ್ ರಾಷ್ಟ್ರಾಧ್ಯಕ್ಷ ಪದವಿಗೆ ತಂದಿದ್ದ ಗ್ಯಾನಿ ಜೈಲ್ಸಿಂಗ್, ಫಕ್ರುದ್ದೀನ್ ಅಲಿ ಅಹ್ಮದ್, ಕೆ.ಆರ್. ನಾರಾಯಣನ್ ಮೊದಲಾದವರಾರೂ ’ಅಡಿಟಿಪ್ಪಣಿ’ಗಳಾಗಿಯೂ ಉಳಿಯದೆ ವಿಸ್ಮೃತರಾಗಿದ್ದಾರೆ.
ಇದುವರೆಗೆ ಪರಿಶಿಷ್ಟ ವರ್ಗದವರಾರೂ ರಾಷ್ಟ್ರಾಧ್ಯಕ್ಷರಾಗಿಲ್ಲದಿರುವುದರಿಂದ ಈ ಬಾರಿ ಅವರನ್ನು ಪ್ರತಿನಿಧಿಸುವವರು ಅಭ್ಯರ್ಥಿಯಾಗಲಿ ಎಂದು ಆಳುವ ಪಕ್ಷದ ಸದ್ಯದ ಚಿಂತನೆ ಇರುವಂತಿದೆ. ಈ ಹಿನ್ನೆಲೆಯಲ್ಲಿ ಜಾರ್ಖಂಡ್ ರಾಜ್ಯದ ರಾಜ್ಯಪಾಲರಾಗಿದ್ದ ದ್ರೌಪದಿ ಮುರ್ಮು ಅವರ ಹೆಸರು ಪರಿಶೀಲನೆಯಲ್ಲಿದೆ ಎಂದು ವರದಿಗಳಿವೆ. ಇದೇ ಲೆಕ್ಕಾಚಾರದ ಆಧಾರದಲ್ಲಿ ಮಧ್ಯಪ್ರದೇಶಕ್ಕೆ ಸೇರಿದವರಾದ, ಶಾಸಕರಾಗಿಯೂ ಸಚಿವರಾಗಿಯೂ ಒಳ್ಳೆಯ ಹೆಸರು ಮಾಡಿರುವ ಟಿ.ಸಿ. ಗೆಹ್ಲೋಟ್ ಅವರ ಹೆಸರು ಪ್ರಮುಖವಾಗಿ ಕೇಳಬಂದಿದೆ.
ಮಹಿಳಾವರ್ಗಕ್ಕೆ ಪ್ರಾತಿನಿಧ್ಯ ನೀಡುವ ಯೋಚನೆ ತೋರಿದಲ್ಲಿ ಸುಮಿತ್ರಾ ಮಹಾಜನ್ ಅರ್ಹತೆಯನ್ನೂ ಕಡೆಗಣಿಸುವಂತಿಲ್ಲ. ಈ ಚದುರಂಗದಾಟದಲ್ಲಿ ಯಾವ ದಾಳಗಳದು ಮೇಲುಗೈಯಾದೀತೆಂಬುದು ಅಲ್ಪಕಾಲದಲ್ಲಿ ವಿದಿತವಾಗಲಿದೆ. ನಿರೀಕ್ಷೆಯೇ ಇರದಿದ್ದ ಅಭ್ಯರ್ಥಿಯೊಬ್ಬರು ಈಗಿನ ಅತಂತ್ರಸ್ಥಿತಿಯ ಕಾರಣದಿಂದ ಮುನ್ನೆಲೆಗೆ ಬರುವ ಸಂಭವವೂ ಇಲ್ಲದಿಲ್ಲ.