ಕೆಲವು ವೃತ್ತಿಗಳಲ್ಲಿರುವವರು ಪರಿಶುದ್ಧರಾಗಿ ಇರಬೇಕೆಂದು ಸಮಾಜ ನಿರೀಕ್ಷಿಸುತ್ತದೆ; ಮುಖ್ಯವಾಗಿ ಸಮಾಜಕ್ಕೆ ಬೋಧಿಸುವ ಅಥವಾ ತಿಳಿವಳಿಕೆ ಹೇಳುವಂತಹ ಸ್ಥಾನಗಳಲ್ಲಿ ಇರುವವರು. ಒಂದು ನೆಲೆಯಲ್ಲಿ ಅರ್ಚಕರು, ಪುರೋಹಿತರು ಅಂತಹ ಸ್ಥಾನದಲ್ಲಿದ್ದರೆ, ಮಕ್ಕಳಿಗೆ ಪಾಠ ಹೇಳುವ ಅಧ್ಯಾಪಕರು, ಪ್ರಾಚಾರ್ಯರು ಖಂಡಿತವಾಗಿಯೂ ಅಂತಹ ಸ್ಥಾನದಲ್ಲಿರುತ್ತಾರೆ. ಮಕ್ಕಳು ಮುಖ್ಯವಾಗಿ ನೋಡಿ ಕಲಿಯುವುದರಿಂದ ಶಿಕ್ಷಕರಾದವರ ನಡೆನುಡಿಗಳು ಮಾದರಿಯಾಗಿರಬೇಕಾಗುತ್ತದೆ. ಇನ್ನು ಆಧುನಿಕ ಜೀವನದ ಸಂದರ್ಭವನ್ನು ಗಮನದಲ್ಲಿಟ್ಟುಕೊಂಡು ಹೇಳುವುದಾದರೆ ಪತ್ರಿಕೆ, ಪತ್ರಕರ್ತರು ಅಥವಾ ಮಾಧ್ಯಮದ ಮಂದಿ ಅಂಥದ್ದೇ ಸ್ಥಾನದಲ್ಲಿರುತ್ತಾರೆ ಎನ್ನಬಹುದು. ಇದು ಮಾತು ಅಥವಾ ಬರವಣಿಗೆಯ ಸಹಜ ಗುಣ. ಅದರ ಮುಂದೆ ಅಥವಾ ಅದಕ್ಕೆ ಗುರಿಯಾಗಿ ಒಂದು ಆದರ್ಶವಿರುತ್ತದೆ. ಸಮಾಜ ಆ ದಿಕ್ಕಿನಲ್ಲಿ ಹೋಗಬೇಕು ಎನ್ನುವ ಗುರಿಯನ್ನು ಇರಿಸಿಕೊಂಡ ಮಾಧ್ಯಮ ಸರಿದಾರಿಯಲ್ಲಿ ಇರುವವರನ್ನು ಬೆನ್ನುತಟ್ಟಿ ಪ್ರೋತ್ಸಾಹಿಸುತ್ತದೆ; ಮತ್ತು ದಾರಿತಪ್ಪಿದವರನ್ನು ಸರಿದಾರಿಗೆ ತರಲು ಶ್ರಮಿಸುತ್ತದೆ. ಅಂತಹ ಮಾಧ್ಯಮವೇ ದಾರಿತಪ್ಪಿದರೆ ಅದಕ್ಕೆ ಏನೆನ್ನೋಣ? ಅದೊಂದು ಆಭಾಸಕರ ಸನ್ನಿವೇಶವಲ್ಲವೆ? ಬೇಲಿಯೇ ಎದ್ದು ಹೊಲವನ್ನು ಮೇಯ್ದಂತೆ ಎನ್ನುವ ಮಾತೇ ಇದೆ. ರಾಷ್ಟ್ರಮಟ್ಟದ ಇಂಗ್ಲಿಷ್ ಸುದ್ದಿವಾಹಿನಿ ಎನ್ಡಿಟಿವಿಗೆ ಸಂಬಂಧಿಸಿ ಈಗ ಅಂತಹದ್ದೊಂದು ಸನ್ನಿವೇಶ ಎದುರಾಗಿದೆ. ಸುದ್ದಿವಾಹಿನಿಯ ಆರ್ಥಿಕ ವ್ಯವಹಾರಗಳಲ್ಲಿ ಅಶಿಸ್ತು ಮತ್ತು ಅಕ್ರಮಗಳು ಸಾಕಷ್ಟು ಹಿಂದೆಯೇ ತಲೆಹಾಕಿವೆ. ಆದರೆ ದೊಡ್ಡರೀತಿಯಲ್ಲಿ ಬೆಳಕಿಗೆ ಬಂದಿರಲಿಲ್ಲ. ಕಳೆದ ಜೂನ್ ೫ರಂದು ತನಿಖಾ ಸಂಸ್ಥೆ ಸಿಬಿಐಯ ಅಧಿಕಾರಿಗಳು ಎನ್ಡಿಟಿವಿ ಸ್ಥಾಪಕ ಪ್ರಣಯ್ರಾಯ್ ಅವರ ಮನೆ, ಕಛೇರಿಗಳ ಮೇಲೆ ದಾಳಿ ಮಾಡುವುದರೊಂದಿಗೆ ಮುಸುಕಿನೊಳಗೆ ಇದ್ದುದೆಲ್ಲ ಬಯಲಿಗೆ ಬರುವಂತಾಗಿದೆ.
ವಿಶ್ವಾಸದ ಮಾತು
೨೪ ತಾಸು ಪ್ರಸಾರ ಮಾಡುವ ದೇಶದ ಮೊದಲ ಸುದ್ದಿಚಾನೆಲ್ ಎಂಬ ಹೆಸರೂ ಎನ್ಡಿಟಿವಿಗಿತ್ತು. ಸುದ್ದಿ ಚಾನೆಲ್ನ ಉದ್ಘಾಟನೆ ೧೯೯೮ರಲ್ಲಿ ಅಂದಿನ ಪ್ರಧಾನಿ ಐ.ಕೆ. ಗುಜ್ರಾಲ್ ಅವರ ಅಧಿಕೃತ ನಿವಾಸದಲ್ಲೇ ಜರಗಿತ್ತು. ಹದಿನೈದು ವರುಷಗಳ ನಂತರ ೨೦೧೨ರಲ್ಲಿ ಪ್ರಣಯ್ ರಾಯ್ ಮತ್ತವರ ಪತ್ನಿ ರಾಧಿಕಾ ರಾಯ್ ರಾಷ್ಟ್ರಪತಿ ಭವನದಲ್ಲೊಂದು ಸಮಾರಂಭ ಏರ್ಪಡಿಸಿದರು. ಅದು ಅವರ ಮಾತೃಸಂಸ್ಥೆ ’ನ್ಯೂಡೆಲ್ಲಿ ಟೆಲಿವಿಶನ್ ಪ್ರೈವೇಟ್ ಲಿಮಿಟೆಡ್’ ೨೫ ವರ್ಷಗಳನ್ನು ಪೂರೈಸಿದ ಬಗೆಗಿನ ಕಾರ್ಯಕ್ರಮ ಕೂಡಾ ಆಗಿತ್ತು. ದೇಶದ ವಿವಿಧ ರಂಗಗಳ ಮಹಾನ್ ವ್ಯಕ್ತಿಗಳು ಅಲ್ಲಿ ಸೇರಿದ್ದರು. ಅಲ್ಲಿ ಮಾತನಾಡಿದ ಪ್ರಣಯ್ ರಾಯ್ ಜನರ ವಿಶ್ವಾಸವೇ ನಮ್ಮ ಆಸ್ತಿ ಎಂಬುದು ನನ್ನ ಹಾಗೂ ನಿಜವಾದ ಸ್ಥಾಪಕಿಯಾದ (ತಾನು ಮತ್ತೆ ಸೇರಿದ್ದು) ಪತ್ನಿ ರಾಧಿಕಾ ಅಭಿಪ್ರಾಯ ಎಂದು ವಿಶ್ವಾಸ (trust)ಕ್ಕೆ ಒತ್ತು ನೀಡಿ ಮಾತನಾಡಿದರು. ಅವರು ಆಗಾಗ ಆ ಮಾತನ್ನು ಹೇಳುತ್ತಾ ಬಂದಿದ್ದಾರೆ. ಇಂದು ಆ ಮಾತೇ ಒಂದು ವಿಡಂಬನೆಯಂತೆ ತೋರುವ ಪರಿಸ್ಥಿತಿ ನಿರ್ಮಾಣವಾಗಿರುವುದು ದೊಡ್ಡ ವಿಪರ್ಯಾಸವೇ ಸರಿ.
ಪ್ರಣಯ್ ರಾಯ್ ಬಾಲಕನಿದ್ದಾಗ ಅವರ ಅಜ್ಜ ಅವರಿಗೆ ’ಬಿರುಗಾಳಿ’ (tempest) ಎಂಬ ಅಡ್ಡಹೆಸರನ್ನು ಇಟ್ಟಿದ್ದರಂತೆ. ಚಾನೆಲ್ನಲ್ಲಿ ಸುದ್ದಿನಿರೂಪಣೆ(ಆಂಕರಿಂಗ್)ಗೆ ಬಂದಾಗ ಅವರ ಶೈಲಿ ಅದೇ ರೀತಿ ಇತ್ತು. ೧೯೮೮ರಲ್ಲಿ ಆತ ಭಾರತೀಯ ಟೆಲಿವಿಶನ್ ಪರದೆಗೆ ಬಂದರು. ಆಗ ಸರ್ಕಾರೀಸಂಸ್ಥೆ ದೂರದರ್ಶನದ ಏಕಸ್ವಾಮ್ಯವಿತ್ತು. ದೂರದರ್ಶನದ ಅಂದಿನ ಮಹಾನಿರ್ದೇಶಕ ಭಾಸ್ಕರ್ ಘೋ? ಅವರು ’ದಿ ವರ್ಲ್ಡ್ ದಿಸ್ ವೀಕ್’ ಎನ್ನುವ ಕಾರ್ಯಕ್ರಮವನ್ನು ಆರಂಭಿಸಿದರು. ಅಂದಿನ ಪ್ರಧಾನಿ ರಾಜೀವ್ ಗಾಂಧಿ ಅವರು ಘೋಷ್ ಅವರಿಗೆ ಭಾರತೀಯ ಟಿವಿ ಗ್ಲ್ಯಾಸ್ನಾಸ್ಟ್(ಪುನರ್ವ್ಯವಸ್ಥೆ) ಗೆ ರಂಗವನ್ನು ಸಜ್ಜುಗೊಳಿಸಿ ಎನ್ನುವ ಸೂಚನೆ ನೀಡಿದ್ದರು. ಪ್ರಸ್ತುತ ಕಾರ್ಯಕ್ರಮವನ್ನು ಘೋಷ್ ಅವರು ರಾಯ್ ದಂಪತಿಗೆ ವಹಿಸಿದರು. ಒಂದು ಕಂತಿಗೆ (ಎಪಿಸೋಡ್) ೨ ಲಕ್ಷ ರೂ. ಸಂಭಾವನೆ.
ಎನ್ಡಿಟಿವಿ ದೇಶದ ಮೊದಲ ಸ್ವತಂತ್ರ ಸುದ್ದಿಜಾಲ (ನ್ಯೂಸ್ ನೆಟ್ವರ್ಕ್) ಎನಿಸಿತು. ಮೊದಲಿಗೆ ಒಂದು ಶೋ ಆರಂಭಿಸಿದ ಸಂಸ್ಥೆ ಕ್ರಮೇಣ ಭಾರತೀಯ ಟೆಲಿವಿಶನ್ ಸುದ್ದಿ ವ್ಯಾಪ್ತಿಯನ್ನು ವಿಸ್ತರಿಸಿತು. ವರದಿಗಾರಿಕೆಯಲ್ಲಿ ಮತ್ತು ಪ್ರಸ್ತುತಿಯಲ್ಲಿ ಅಂತಾರಾಷ್ಟ್ರೀಯ ಗುಣಮಟ್ಟವನ್ನು ತಂದಿತು. ಅದರಿಂದ ಅದಕ್ಕೆ ಮುನ್ನಡೆ (ಲೀಡ್) ಸಿಕ್ಕಿತು; ಜಾಹೀರಾತಿನಲ್ಲೂ ಯಶಸ್ಸು ದೊರೆಯಿತು. ೨೦೦೪ರಲ್ಲಿ ಸಂಸ್ಥೆ ಪಬ್ಲಿಕ್ ಆಗಿ ತನ್ನ ಯಶಸ್ಸಿನಲ್ಲಿ ಶೇರುದಾರರನ್ನು ಸೇರಿಸಿಕೊಂಡಿತು. ಕಂಪೆನಿ ಒಂದು ಶೋದಿಂದ ಬಹುವಾಹಿನಿವರೆಗೆ ಬೆಳೆಯಿತು. ರಾಯ್ ಹಲವು ವರದಿಗಾರರನ್ನು, ಆಂಕರ್ಗಳನ್ನು ಬೆಳೆಸಿ ಉನ್ನತಮಟ್ಟಕ್ಕೆ ತಂದರು.
ಪ್ರಣಯ್ ರಾಯ್ ಮತ್ತು ರಾಧಿಕಾ ಇಬ್ಬರೂ ಕೋಲ್ಕತಾದವರು. ೧೯೬೦ರ ದಶಕದಲ್ಲಿ ಡೆಹರಾಡೂನ್ನಲ್ಲಿ ಕಲಿತವರು. ಇಬ್ಬರೂ ಉನ್ನತಶಿಕ್ಷಣವನ್ನು ಲಂಡನ್ನಲ್ಲಿ ಪೂರೈಸಿದರು. ಮುಂದೆ ಮದುವೆಯಾಗಿ ದೆಹಲಿಯಲ್ಲಿ ನೆಲಸಿದರು. ರಾಧಿಕಾ ಇಂಡಿಯನ್ ಎಕ್ಸ್ಪ್ರೆಸ್ ಮತ್ತು ಇಂಡಿಯಾ ಟುಡೇಗಳಲ್ಲಿ ಕೆಲಸ ಮಾಡಿದರೆ, ಪ್ರಣಯ್ ಅರ್ಥಶಾಸ್ತ್ರದಲ್ಲಿ ಡಾಕ್ಟರೇಟ್ (ಪಿಎಚ್.ಡಿ.) ಮುಗಿಸಿ ದೆಹಲಿಯ ಸ್ಕೂಲ್ ಆಫ್ ಇಕನಾಮಿಕ್ಸ್ನಲ್ಲಿ ಅಧ್ಯಾಪಕರಾದರು. ಬಹುಬೇಗ ಚುನಾವಣಾ ವಿಶ್ಲೇ?ಕರಾಗಿ ರೂಪಗೊಂಡು ಟೆಲಿವಿಶನ್ ಸಂಪರ್ಕಕ್ಕೆ ಬಂದರು. ಭಾಸ್ಕರ್ ಘೋಷ್ ಕೆಲಸ ವಹಿಸಿಕೊಂಡು ದಂಪತಿಯಿಬ್ಬರೂ ಮಾಧ್ಯಮದ ವ್ಯವಹಾರಕ್ಕೆ ಪ್ರವೇಶಿಸಿದರು.
‘ದಿ ವರ್ಲ್ಡ್ ದಿಸ್ ವೀಕ್’
ದೂರದರ್ಶನದ ಕಾರ್ಯಕ್ರಮ ’ದಿ ವರ್ಲ್ಡ್ ದಿಸ್ ವೀಕ್’ ಭಾರೀ ಯಶಸ್ವಿ ಎನಿಸಿತು. ಅಲ್ಲಿಯವರೆಗೆ ಜನ ದೂರದರ್ಶನದ ನ್ಯೂಸ್ ಬುಲೆಟಿನ್ ಮಾತ್ರ ನೋಡುತ್ತಿದ್ದರು. ವಾರ್ತಾವಾಚಕರು ಮುಖಬಿಗಿದುಕೊಂಡು ಸರ್ಕಾರೀ (ನೌಕರಶಾಹಿ) ಇಂಗ್ಲಿ? ಅಥವಾ ಹಿಂದಿಯಲ್ಲಿ ಸುದ್ದಿ ಓದುತ್ತಿದ್ದರು. ಚಿತ್ರಗಳು (ಫೋಟೋಗಳು) ಕೆಲವು ಸೆಕೆಂಡ್ ಮಾತ್ರ; ಅದು ಕೂಡ ಸ್ಟಿಲ್ ಚಿತ್ರ. ರಾಯ್ ದಂಪತಿ ಮೊದಲಬಾರಿಗೆ ದೇಶದ ಜನತೆಗೆ ಅಂತಾರಾಷ್ಟ್ರೀಯ ಸುದ್ದಿಟಿವಿಯ ಕಾರ್ಯವಿಧಾನವನ್ನು ಪರಿಚಯಿಸಿದರು. ಪ್ರಣಯ್ ಎಲ್ಲ ವರದಿಗಳನ್ನು ಸರಳ ಸಂಭಾಷಣೆಯ ರೀತಿಯಲ್ಲಿ ನೀಡಿದರು. ಧ್ವನಿ(ಮಾತು)ಗೆ ಹೊಂದುವ ಉತ್ತಮ ಚಿತ್ರ, ದೃಶ್ಯಗಳನ್ನು ಜೋಡಿಸಿದರು. ಕಂಪೆನಿ ಸ್ಥಾಪಿಸಿ ಒಂದು ವರ್ಷ ಆಗುವಾಗ ೧೯೮೯ರ ಕೊನೆಯಲ್ಲಿ ಮಹಾಚುನಾವಣೆಯ ಫಲಿತಾಂಶವನ್ನು ತೋರಿಸಿದರು. ಅಂದಿನತನಕ ದೇಶದಲ್ಲಿ ಚುನಾವಣಾ ಫಲಿತಾಂಶವೆಂದರೆ ಅಧಿಕೃತ ಫಲಿತಾಂಶ ಮಾತ್ರ ಇರುತ್ತಿತ್ತು; ಪ್ರಣಯ್ ಫಲಿತಾಂಶವಾಗಿ ದೇಶದ ಮೂಡನ್ನೇ ತೋರಿಸಿದರು. ಭಾರೀ ಪ್ರಮಾಣದ ತಂತ್ರಜ್ಞಾನವನ್ನು ಬಳಸಿಕೊಂಡರು. ೯೭ ಹಾಟ್ಲೈನ್ ಸ್ಥಾಪಿಸಿದ್ದರು. ರಾಜ್ಯ ರಾಜಧಾನಿಗಳು, ಮುಖ್ಯ ಚುನಾವಣಾಧಿಕಾರಿಗಳು ಮತ್ತು ಪ್ರಮುಖ ಕ್ಷೇತ್ರಗಳಿಗೆ ಲಿಂಕ್ ಇತ್ತು. ೧೫ ಹೊರಾಂಗಣ ಬ್ರಾಡ್ಕಾಸ್ಟಿಂಗ್ ವ್ಯಾನ್ಗಳಿಗೆ (ವರದಿಗಾರರಿಗೆ) ಹಾಟ್ ಸ್ವಿಚ್ಚಿಂಗ್ ಇತ್ತು. ಅದರಿಂದ ದೂರದರ್ಶನಕ್ಕೆ ಎರಡೂವರೆ ಕೋಟಿ ರೂ. ಖರ್ಚಾಗಿದ್ದು, ಇದರಲ್ಲಿ ೧೬ ಲಕ್ಷ ರೂ.ಗಳನ್ನು ಎನ್ಡಿಟಿವಿಯೇ ಪಾವತಿಸಿತು.
ಅದೇ ವರ್ಷ ದೂರದರ್ಶನ ಮತ್ತು ಪ್ರಣಯ್ ರಾಯ್ ನಡುವಣ ಒಪ್ಪಂದದ ಸ್ವರೂಪವೂ ಬದಲಾಯಿತು. ಪ್ರತಿ ಕಾರ್ಯಕ್ರಮಕ್ಕೆ ದೂರದರ್ಶನ ಎನ್ಡಿಟಿವಿಗೆ ಹಣ ನೀಡುವ ಬದಲು ಕಂಪೆನಿಯೇ ನಿರ್ಮಾಪಕ (ಪ್ರೊಡ್ಯೂಸರ್) ಆಯಿತು. ಆ ಬಗ್ಗೆ ದೂರದರ್ಶನಕ್ಕೆ ಶುಲ್ಕ ನೀಡುವುದು ಮತ್ತು ಜಾಹೀರಾತನ್ನು ಕಂಪೆನಿ ನೇರವಾಗಿ ಮಾರುವುದು. ಇದರಿಂದ ರಾಯ್ ದಂಪತಿಯ ಪ್ರತಿಷ್ಠೆ ಏರಿತು. ಸಂಭಾವನೆ ಪಡೆದು ಕೆಲಸ ಮಾಡುತ್ತಿದ್ದ ಅವರು ಮಾಧ್ಯಮ ಉದ್ಯಮಿಗಳಾದರು.
ಕಾನೂನಿನ ತೊಡಕು
ಆದರೆ ರಾಯ್ ದಂಪತಿಗೆ ಕ್ರಮೇಣ ಕಾನೂನಿನ ತೊಡಕುಗಳು ಎದುರಾದವು. ೧೯೯೭ರಲ್ಲಿ ದೂರದರ್ಶನದ ಹಣಕಾಸು ವಿವರಗಳ ಪರಿಶೀಲನೆ ನಡೆಸಿದ ಸಂಸದೀಯ ಸಮಿತಿ ಎನ್ಡಿಟಿವಿ ಜೊತೆಗಿನ ವಹಿವಾಟಿನಲ್ಲಿ ಅವ್ಯವಹಾರ ನಡೆದಿರುವುದನ್ನು ಗುರುತಿಸಿತು. ದೂರದರ್ಶನದ ತಂತ್ರಜ್ಞಾನಕ್ಕೆ ಎನ್ಡಿಟಿವಿಗೆ ನೇರಪ್ರವೇಶ ಇತ್ತು; ಮತ್ತು ಜಾಹೀರಾತುದರ ನಿಗದಿಗೆ ಅದಕ್ಕೆ ಸ್ವಾತಂತ್ರ್ಯ ನೀಡಲಾಗಿತ್ತು. ೧೯೯೮ರಲ್ಲಿ ಪ್ರಣಯ್ ರಾಯ್ ಮತ್ತು ೧೯೯೩-೯೬ರ ಅವಧಿಯ ದೂರದರ್ಶನ ಮಹಾನಿರ್ದೇಶಕ ರತಿಕಾಂತ್ ಬಸು ಸಹಿತ ಕೆಲವು ಅಧಿಕಾರಿಗಳ ವಿರುದ್ಧ ಸಿಬಿಐ ಎಫ್ಐಆರ್ ದಾಖಲಿಸಿತು.
ಎನ್ಡಿಟಿವಿ ೧೯೯೫ರವರೆಗೆ ’ದಿ ವರ್ಲ್ಡ್ ದಿಸ್ ವೀಕ್’ ನಡೆಸಿಕೊಟ್ಟಿತು. ಆಗ ಅದಕ್ಕೆ ಮತ್ತೊಂದು ಅವಕಾಶ ಸಿಕ್ಕಿತು. ಸರ್ಕಾರ ಸಿನೆಮಾ, ಸಾಕ್ಷ್ಯಚಿತ್ರ ಇತ್ಯಾದಿ ಇದ್ದ ಒಂದು ಹೊಸ ಚಾನೆಲ್ ಶುರು ಮಾಡಿತು. ಅದರಲ್ಲಿ ’ನ್ಯೂಸ್ ಟುನೈಟ್’ ಎಂಬ ಬುಲೆಟಿನ್ ಮಾಡುವುದನ್ನು ಎನ್ಡಿಟಿವಿಗೆ ವಹಿಸಲಾಯಿತು. ಅದರ ಮೊದಲ ಶೋವನ್ನು ನೇರಪ್ರಸಾರ ಮಾಡಿದರು. ಪ್ರಧಾನಿ ಕಛೇರಿಯ ಒಬ್ಬರು ‘ಲೈವ್’ ಎಂಬ ಪದಕ್ಕೇ ಗಾಬರಿ ಬಿದ್ದರಂತೆ.
ವಿವಿಧ ಕಛೇರಿಗಳ ನಡುವೆ ಬಿಸಿಬಿಸಿ ಚರ್ಚೆ ನಡೆದು ಅಂತೂ ಖಾಸಗಿ ಚಾನೆಲ್ನ ನೇರಪ್ರಸಾರ ಬೇಡ ಎಂಬ ತೀರ್ಮಾನವಾಗಿ, ಹತ್ತು ನಿಮಿಷಗಳಿಗೆ ಮುನ್ನ ರೆಕಾರ್ಡ್ ಮಾಡಿಕೊಳ್ಳುತ್ತಿದ್ದರು. ೧೯೯೦ರ ದಶಕದಲ್ಲಿ ಜಾಗತೀಕರಣ ಇತ್ಯಾದಿ ಆಗಿ ದೇಶದ ಮಾಧ್ಯಮ ಮಾರುಕಟ್ಟೆ ತೆರೆದುಕೊಂಡಾಗ ಎನ್ಡಿಟಿವಿಗೆ ಓರ್ವ ವಿದೇಶೀ ಹೂಡಿಕೆದಾರ ಸಿಕ್ಕಿದರು. ಸ್ಟಾರ್ ಪ್ಲಸ್ ಚಾನೆಲ್ಗೆ ಕಾರ್ಯಕ್ರಮ ಮಾಡುವ ಬಗ್ಗೆ ರೂಪರ್ಟ್ ಮುರ್ಡೋಕ್ರ ಸ್ಟಾರ್ ನೆಟ್ವರ್ಕ್ ಜೊತೆಗೆ ಒಪ್ಪಂದವಾಯಿತು. ಎರಡು ವರ್ಷಗಳ ಬಳಿಕ ೨೪ ತಾಸಿನ ಸ್ಟಾರ್ ನ್ಯೂಸ್ ಚಾನೆಲ್ ಮಾಡುವ ಬಗ್ಗೆ ಐದು ವರ್ಷಗಳ ವ್ಯವಹಾರಕ್ಕೆ ಎನ್ಡಿಟಿವಿ ಮತ್ತು ಸ್ಟಾರ್ ನಡುವೆ ಒಪ್ಪಂದವಾಯಿತು. ಮಹಾಚುನಾವಣೆಗೆ ಸ್ವಲ್ಪ ಮುನ್ನ ೧೯೯೮ರ ಫೆಬ್ರುವರಿಯಲ್ಲಿ ಅದರ ಉದ್ಘಾಟನೆ. ಪ್ರಧಾನಿ ಗುಜ್ರಾಲ್ ತಮ್ಮ ನಿವಾಸದಲ್ಲೇ ಅದರ ಉದ್ಘಾಟನೆ ನೆರವೇರಿಸಿದರು.
ಭಾರತದ ನಿಯಮಗಳ ಪ್ರಕಾರ ಈಗ ಕೂಡ ಸುದ್ದಿಸಂಸ್ಥೆಯಲ್ಲಿ ಒಂದು ವಿದೇಶೀ ಸಂಸ್ಥೆ ಮೈನಾರಿಟಿ ಪಾರ್ಟ್ನರ್ (ಸಣ್ಣ ಪಾಲುದಾರ) ಮಾತ್ರ ಆಗಬಹುದು. ಅದರಿಂದಾಗಿ ಎನ್ಡಿಟಿವಿಗೆ ಸ್ಟಾರ್ ಜೊತೆ ಮೇಲುಗೈ ಸಾಧಿಸಲು ಸುಲಭವಾಯಿತು. ವರ್ಷಕ್ಕೆ ಸಂಸ್ಥೆಗೆ ಎರಡುಕೋಟಿ ಡಾಲರ್ ಬರುವುದರ ಜೊತೆಗೆ ಸಂಪಾದಕೀಯದ ಮೇಲೆ ಸಂಪೂರ್ಣ ನಿಯಂತ್ರಣವಿತ್ತು; ವೆಚ್ಚದ ದೊಡ್ಡಭಾಗವನ್ನು ಸ್ಟಾರ್ ನೀಡಿದರೂ ಕಾರ್ಯಕ್ರಮದ ಕಾಪಿರೈಟ್ ಇವರಿಗೆ. ಅದು ಎನ್ಡಿಟಿವಿಯ ಉತ್ತುಂಗದ ಕಾಲ. ಉತ್ತಮ ಉಪಕರಣದ ಖರೀದಿ, ಉತ್ತಮ ಗ್ರಾಫಿಕ್ ರಚನೆ, ಪ್ರತಿಭಾವಂತ ಸಿಬ್ಬಂದಿಯ ನೇಮಕಾತಿ ಎಲ್ಲ ಸಾಧ್ಯವಾಯಿತು. ಆಗ ಎನ್ಡಿಟಿವಿ ತಂಡದಲ್ಲಿ ಸೋನಿಯಾ ಸಿಂಗ್, ವಿಕ್ರಂ ಚಂದ್ರ, ಬರ್ಖಾದತ್, ರಾಜದೀಪ್ ಸರ್ದೇಸಾಯ್, ಶ್ರೀನಿವಾಸನ್ ಜೈನ್, ವಿ. ಸೋಮ್, ಮಾಯಾ ಮೀರಚಂದಾನಿ, ಅರ್ಣಬ್ ಗೋಸ್ವಾಮಿ ಅಂಥವರೆಲ್ಲ ಸೇರಿಕೊಂಡರು.
ರಾಜಕೀಯ ಪ್ರಭಾವ
ಎನ್ಡಿಟಿವಿ ಅಂದಿನ ರಾಜಕೀಯವನ್ನು ಪ್ರಭಾವಿಸುವಷ್ಟು ಪರಿಣಾಮಕಾರಿಯಾಗಿತ್ತು. ಇವರು ತಮ್ಮನ್ನು ಆಹ್ವಾನಿಸಿರಲಿಲ್ಲವೆಂದು ರಾಜಕಾರಣಿಗಳು ದೂರುತ್ತಿದ್ದರು. ಬಹುತೇಕ ಎಲ್ಲರೂ ಅಲ್ಲಿ ಕಾಣಿಸಿಕೊಳ್ಳಲು ಬಯಸುತ್ತಿದ್ದರು. ಅವರೊಳಗೆ ಸ್ಪರ್ಧೆಯೇ ನಡೆಯುತ್ತಿತ್ತು. ಟಿವಿಗೆ ಬಂದರೆ ರಾಜಕೀಯ ಜೀವನಕ್ಕೆ ಅನುಕೂಲ. ಕಾರ್ಯಕರ್ತರು, ನಾಯಕರು ಗಮನಿಸುತ್ತಾರೆ. ತಿಂಗಳಿಗೆ ಒಮ್ಮೆಯಾದರೂ ಎನ್ಡಿಟಿವಿಯಲ್ಲಿ ಬರಬೇಕು – ಎಂಬ ಅಭಿಪ್ರಾಯ ರಾಜಕಾರಣಿಗಳಲ್ಲಿ ಪ್ರಚಲಿತವಿತ್ತು. ಮಾಧ್ಯಮದ ಶಕ್ತಿ ಅರಿತ ಈ ಹೊಸಬಗೆಯ ರಾಜಕಾರಣಿಗಳಲ್ಲಿ ಒಬ್ಬರು ಅರುಣ್ ಜೇಟ್ಲಿ. ೧೯೯೮ರ ಚುನಾವಣೆಯ ವೇಳೆ ಆತ ಇನ್ನೂ ಲೈಟ್ವೈಟ್ ನಾಯಕರಾಗಿದ್ದರು ಎಂದು ನೆನಪಿಸಲಾಗಿದೆ. ೧೯೯೯ರ ಫೆಬ್ರುವರಿಯಲ್ಲಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರು ಕೈಗೊಂಡ ಲಾಹೋರ್ ಬಸ್ ಪ್ರಯಾಣದ ವೇಳೆ ಪಕ್ಷ(ಬಿಜೆಪಿ)ದ ಪರವಾಗಿ ಬಂದ ನರೇಂದ್ರ ಮೋದಿ ಪ್ರಧಾನಿ ಕಾರ್ಯಕ್ರಮಕ್ಕೆ ಅಸಮಾಧಾನ ಸೂಚಿಸಿದ್ದರಂತೆ.
೨೦೦೨ರ ಹೊತ್ತಿಗೆ ಸ್ಟಾರ್ ಜೊತೆಗಿನ ಎನ್ಡಿಟಿವಿ ಒಪ್ಪಂದ ಮುಗಿಯಿತು. ಮುಂದಿನ ಎರಡು ವರ್ಷಗಳಲ್ಲಿ ಹಿಂದಿಯಲ್ಲಿ ಎನ್ಡಿಟಿವಿ ಇಂಡಿಯಾ ಚಾನೆಲ್ ಮಾಡಿದರು; ಅಲ್ಲೂ ಖ್ಯಾತನಾಮ ಸಿಬ್ಬಂದಿ ಇದ್ದರು. ಈ ಯೋಜನೆಗಳಿಗೆ ಎನ್ಡಿಟಿವಿ ಬಹುತೇಕ ತಾನು ಗಳಿಸಿದ ಹಣವನ್ನೇ ಬಳಸಿತು. ಜೊತೆಗೆ ಮೋರ್ಗನ್ ಸ್ಟ್ಯಾನ್ಲಿಯಂತಹ ಹೂಡಿಕೆದಾರರು ಕೂಡ ಹಣ ಹಾಕಿದರು. ಪ್ರಸಾರ ಮಾಧ್ಯಮವು ಉದ್ಯಮವಾದಾಗ ಎನ್ಡಿಟಿವಿ ದೊಡ್ಡ ಬ್ರಾಂಡ್ ಆಯಿತು. ಹೂಡಿಕೆದಾರರು ಈ ಚಾನೆಲ್ ಬಗ್ಗೆ ಆಸಕ್ತಿ ತಳೆದರು.
ಸಂಸ್ಥೆಯಲ್ಲಿ ಚೆನ್ನಾಗಿ ಹಣವಿದ್ದು ಸಿಬ್ಬಂದಿಗೆ ಉತ್ತಮ ಸಂಬಳ ನೀಡಿದರು. ಮನೆಯಿಂದ ಹೋಗಿಬರಲು ವಾಹನ ವ್ಯವಸ್ಥೆ, ಕಛೇರಿಯಲ್ಲಿ ಉತ್ತಮ ಊಟ-ಉಪಾಹಾರ, ಆರೋಗ್ಯ ವಿಮೆ, ಮೇಲಿನ ಹಂತದವರಿಗೆ ವಿದೇಶ ಪ್ರವಾಸ, ಮಹಿಳಾ ಪತ್ರಕರ್ತರಿಗೆ ಹೆಚ್ಚಿನ ಪ್ರೋತ್ಸಾಹ ಇವೆಲ್ಲ ಇತ್ತು. ಸುದ್ದಿಸಂಗ್ರಹಕ್ಕೂ ಚೆನ್ನಾಗಿ ಖರ್ಚು ಮಾಡುತ್ತಿದ್ದರು. ೨೦೦೪ರ ಹೊತ್ತಿಗೆ ದೇಶಾದ್ಯಂತ ಸಂಸ್ಥೆಗೆ ೨೦ ಬ್ಯೂರೋಗಳಿದ್ದವು; ಬೇರೆ ಯಾರಿಗೂ ಅಷ್ಟಿರಲಿಲ್ಲ. ಸಂಸ್ಥೆ ಹೆಲಿಕಾಪ್ಟರ್ ಹೊಂದಿದ್ದು, ವರದಿಗಾರರು ಸುದ್ದಿಸಂಗ್ರಹಕ್ಕೆ ಅದರಲ್ಲಿ ಸಂಚರಿಸುತ್ತಿದ್ದರು. ಸ್ಟಾರ್ ಹೊಟೇಲ್ಗಳಲ್ಲಿ ಉಳಿದುಕೊಳ್ಳುತ್ತಿದ್ದರು. ಇವೆಲ್ಲ ಒಂದು ಮುಖವಾದರೆ, ೨೦೦೪ರಲ್ಲಿ ಯುಪಿಎ ಸರ್ಕಾರ ಅಧಿಕಾರಕ್ಕೆ ಬರುವಾಗ ಎನ್ಡಿಟಿವಿ ೨೪೮ ಕೋಟಿ ರೂ.ಗಳ ಭಾರೀ ನ?ದಲ್ಲಿತ್ತು, ಸಂಬಳ ಕೊಡುವುದೂ ಕ?ವಾಗಿತ್ತು – ಎಂದು ಆರ್ಥಿಕತಜ್ಞ ಲೇಖಕ ಎಸ್. ಗುರುಮೂರ್ತಿ ಉಲ್ಲೇಖಿಸುತ್ತಾರೆ; ಅದರ ಶೇರುಗಳ ಬೆಲೆ ನಿಜಬೆಲೆಗಿಂತ ತೀರಾ ಕೆಳಗಿತ್ತು. ಆದರೆ ಯುಪಿಎ ಅಧಿಕಾರಕ್ಕೆ ಬಂದ ಮೇಲೆ ಎನ್ಡಿಟಿವಿ ಸ್ಥಿತಿ ಉತ್ತಮವಾಯಿತು. ಅದು ರಚಿಸಿದ ಶೆಲ್ (ನಕಲಿ) ಕಂಪೆನಿಗಳಿಗೆ ತುಂಬ ಹಣ ಬಂತೆಂದು ಗುರುತಿಸಲಾಗಿದೆ.
ವಿಲಕ್ಷಣ ವ್ಯವಹಾರ
೨೦೦೭ರಲ್ಲಿ ರಾಯ್ ದಂಪತಿ ಜಿಎ ಗ್ಲೋಬಲ್ ಇನ್ವೆಸ್ಟ್ಮೆಂಟ್ ಬಳಿ ಇದ್ದ ಶೇ. ೭.೭೩ರಷ್ಟು ಶೇರುಗಳನ್ನು ಖರೀದಿಸಲು ನಿರ್ಧರಿಸಿದರು. ಶೇರಿನ ದರ ಏರುತ್ತದೆನ್ನುವ ನಿರೀಕ್ಷೆ ಅಥವಾ ತಮ್ಮ ಕಂಪೆನಿಯಲ್ಲಿ ತಮ್ಮ ಹಿಡಿತವನ್ನು ಬಲಪಡಿಸುವುದು ಅದಕ್ಕೆ ಕಾರಣವಾಗಿರಬಹುದು. ಆದರೆ ಮಾರುಕಟ್ಟೆ ದರಕ್ಕಿಂತ ಹೆಚ್ಚಿನ ದರಕ್ಕೆ ಖರೀದಿಸಬೇಕಾಯಿತು. ಮಾರುಕಟ್ಟೆಯಲ್ಲಿ ಎನ್ಡಿಟಿವಿ ಶೇರಿಗೆ ೪೦೦ ರೂ. ಇದ್ದರೆ ಇವರು ೪೩೯ ರೂ.ಗೆ ಖರೀದಿಸಿದರು. ಮಾರ್ಚ್ ೨೦೦೮ರಲ್ಲಿ ದಂಪತಿ ಇನ್ನೊಂದು ವ್ಯವಹಾರ ಮಾಡಿದರು. ಅದು ಗೋಲ್ಡ್ಮನ್ ಸಾಚ್ಸ್ಗೆ ಶೇ. ೧೪.೯೯ವರೆಗಿನ ಹೂಡಿಕೆಯನ್ನು ಮಾರುವ ಬಗೆಗಿನ ಒಪ್ಪಂದ. ಅದರಲ್ಲಿ ಆ ಕಂಪೆನಿಗೆ ವಿಶೇಷ ಹಕ್ಕು ನೀಡುವುದು ಕೂಡ ಸೇರಿದ್ದು, ಈ ವ್ಯವಹಾರ ಬಂಡವಾಳ ಮಾರುಕಟ್ಟೆ ನಿಯಮದ ಉಲ್ಲಂಘನೆಯಾಗಿತ್ತು. ಅದರಿಂದ ಗೋಲ್ಡ್ಮನ್ ಆಡಳಿತ ಮಂಡಳಿಗೆ ಒಬ್ಬ ನಿರ್ದೇಶಕನನ್ನು ನೇಮಿಸುವ ಅಧಿಕಾರ ದೊರೆಯಿತು. ಈ ವ್ಯವಹಾರವನ್ನು ಸಂಸ್ಥೆ ಯಾವುದೇ ಅಧಿಕಾರಿ ಅಥವಾ ಶೇರುದಾರರ ಮುಂದೆ ಹೇಳಲಿಲ್ಲ; ಅದನ್ನು ಮುಕ್ತಮಾರುಕಟ್ಟೆಯ ಮಾರಾಟ ಎಂಬಂತೆ ಬಿಂಬಿಸಲಾಯಿತು. ಬ್ಯಾಂಕ್ ಮೂಲಕ ಬಂದ ಹಣ ಯಾರದ್ದೆಂಬುದು ಅಸ್ಪ?ವಾಗಿ ಉಳಿಯಿತು.
‘ಮಾಧ್ಯಮ ಸ್ವಾತಂತ್ರ್ಯದ ನೆಪ ಬೇಡ’
ಸಂಸ್ಥೆಯ ಮೇಲೆ ಸಿಬಿಐ ದಾಳಿ ನಡೆದಾಗ ಅದನ್ನು ಪತ್ರಿಕಾ ಸ್ವಾತಂತ್ರ್ಯದ ಮೇಲೆ ನಡೆದ ದಾಳಿ ಎಂದು ಒಂದೆಡೆ ಚಿತ್ರಿಸಬಯಸಿದ ಪ್ರಣಯ್ ರಾಯ್ ಇನ್ನೊಂದೆಡೆ ಎಡ ಒಲವಿನ ಒಂದು ಚಾನೆಲ್ ಮೇಲೆ ಬಿಜೆಪಿ ನೇತೃತ್ವದ ಸರ್ಕಾರದಿಂದ ನಡೆದ ದಾಳಿ ಎಂದು ಕೂಡ ಚಿತ್ರಿಸಲು ಯತ್ನಿಸಿದರು. ಅದನ್ನು ನಿರಾಕರಿಸಿದ ಒಬ್ಬರು ಅದೇ ರೀತಿ ಎಡ ಒಲವಿನ ಇಂಗ್ಲಿ? ದಿನಪತ್ರಿಕೆ ’ದಿ ಹಿಂದೂ’ ಪ್ರಕಾಶನ ಸಂಸ್ಥೆಯ ಓರ್ವ ನಿರ್ದೇಶಕಿ ಹಾಗೂ ಪತ್ರಿಕೆಯ ಮಾಜಿ ಸಂಪಾದಕಿ ಮಾಲಿನಿ ಪಾರ್ಥಸಾರಥಿ ಅವರು.
ಎಸ್. ಗುರುಮೂರ್ತಿಯವರ ಲೇಖನಕ್ಕೆ ಪ್ರತಿಕ್ರಿಯಿಸಿದ ಆಕೆ ಎನ್ಡಿಟಿವಿ ವಿರುದ್ಧದ ಪ್ರಕರಣವನ್ನು ತಾನು ಪತ್ರಿಕಾ ಸ್ವಾತಂತ್ರ್ಯದ ಮೇಲಿನ ದಾಳಿ ಎಂದು ಪರಿಗಣಿಸುವುದಿಲ್ಲ ಎಂದರು. “ಮಾಧ್ಯಮ ಸಂಸ್ಥೆಗಳು ಇತರ ಯಾವುದೇ ಉದ್ಯಮಗಳಂತೆ ಪಾರದರ್ಶಕತೆಯನ್ನು ಕಾಯ್ದುಕೊಳ್ಳಬೇಕು; ವಿಶ್ವಾಸಾರ್ಹತೆ ಮತ್ತು ಜನರ ನಂಬಿಕೆ ಉಳಿಸಿಕೊಳ್ಳಲು ಇದು ಅಗತ್ಯ” ಎಂದವರು ಸ್ಪಷ್ಟಪಡಿಸಿದ್ದಾರೆ.
ಶೇರನ್ನು ವಾಪಸು ಪಡೆಯಲು ಹೊರಟಾಗ ದಂಪತಿಗೆ ಹಣ ಕಡಮೆ ಆಯಿತು. ಕೊರತೆ ತುಂಬಲು ಜುಲೈ ೨೦೦೮ರಲ್ಲಿ ಇಂಡಿಯಾ ಬುಲ್ಸ್ ಫೈನಾನ್ಸಿಯಲ್ ಸರ್ವೀಸಸ್ನಿಂದ ೫೦೧ ಕೋಟಿ ರೂ. ಸಾಲ ಪಡೆದರು. ಮುಂದೆ ಈ ಸಾಲ ಎತ್ತುವುದೊಂದು ಪರಂಪರೆಯೇ ಆಯಿತು. ೨೦೦೮ರಲ್ಲಿ ಜಾಗತಿಕ ಮಾರುಕಟ್ಟೆಯಲ್ಲಿ ಕುಸಿತ ಆಗುತ್ತಿತ್ತು. ಅದರಿಂದಾಗಿ ಎನ್ಡಿಟಿವಿ ಶೇರಿಗೆ ಕೂಡ ಪೆಟ್ಟುಬಿತ್ತು. ಅದೇ ಜನವರಿಯಲ್ಲಿ ಸುಮಾರು ೪೦೦ ರೂ. ಇದ್ದ ಇವರ ಶೇರಿನ ಬೆಲೆ ಅಕ್ಟೋಬರ್ ಕೊನೆಯ ಹೊತ್ತಿಗೆ ೧೦೦ ರೂ.ಗಿಂತ ಕೆಳಗೆ ಬಂದಿತ್ತು. ಇಂಡಿಯಾ ಬುಲ್ಸ್ ಸಾಲ ತೀರಿಸಲು ಕಂಪೆನಿ ಐಸಿಐಸಿಐ ಬ್ಯಾಂಕಿನಿಂದ ೩೭೫ ಕೋಟಿ ರೂ. ಸಾಲ ಪಡೆಯಿತು; ಆ ಸಾಲದ ಬಡ್ಡಿದರ ಶೇ. ೧೯. ’ಸಂಡೇ ಗಾರ್ಡಿಯನ್’ ಎನ್ನುವ ವಾರಪತ್ರಿಕೆ ತನ್ನ ಡಿಸೆಂಬರ್ ೨೦೧೦ರ ಸಂಚಿಕೆಯಲ್ಲಿ ಎನ್ಡಿಟಿವಿ ಮಾಡಿದ ಐಸಿಐಸಿಐ ಸಾಲವನ್ನು ’ಹಣಕಾಸಿನ ಕುಯುಕ್ತಿ’ (financial chicanery) ಎಂದು ಬಣ್ಣಿಸಿ, ಸಂಸ್ಥೆ ಐಸಿಐಸಿಐ ಶಾಮೀಲಾತಿಯೊಂದಿಗೆ ಹಣಕಾಸು ಅವ್ಯವಹಾರ ಮತ್ತು ವಂಚನೆ ಮಾಡುತ್ತಿದೆ ಎಂದು ಬಣ್ಣಿಸಿತು. ವರದಿ ಮಾಡಿದವರು ಪತ್ರಕರ್ತ-ರಾಜಕಾರಣಿ ಎಂ.ಜೆ. ಅಕ್ಬರ್ ಅವರ ಪುತ್ರ ಪ್ರಯಾಗ್ ಅಕ್ಬರ್. ಆ ಪತ್ರಿಕೆಯ ಮಾಲೀಕರು ಆತ ಮತ್ತು ಖ್ಯಾತ ನ್ಯಾಯವಾದಿ ರಾಂ ಜೇಠ್ಮಲಾನಿ. ಸಾಲ ಪಡೆಯುವಾಗ ಸಂಸ್ಥೆಯ ಶೇ. ೬೧.೪೫ರ? ಶೇರುಗಳನ್ನು ಪ್ಲೆಜ್ ಮಾಡಲಾಗಿತ್ತು. ಆಗ ಇದ್ದ ಶೇರಿನ ಬೆಲೆ ೯೯ ರೂ.; ಆದರೆ ೪೩೯ ರೂ. ಎಂದು ಉಲ್ಲೇಖಿಸಿ ಪ್ಲೆಜ್ ಮಾಡಲಾಗಿತ್ತು.
ಮಾನನಷ್ಟ ಮೊಕದ್ದಮೆ
ಸಂಸ್ಥೆ ಅಕ್ಬರ್ ಮತ್ತಿತರರ ವಿರುದ್ಧ ದೆಹಲಿ ಹೈಕೋರ್ಟ್ನಲ್ಲಿ ಮಾನನಷ್ಟ ದಾವೆ ಹೂಡಿ ೨೫ ಕೋಟಿ ರೂ. ಪರಿಹಾರ ಕೇಳಿತು; ರಾಯ್ ದಂಪತಿ ಪ್ಲೆಜ್ ಮಾಡಿದ ಶೇರುಗಳ ಪರೋಕ್ಷ (collateral) ಮೌಲ್ಯ ಸಾಲದ ಮೊತ್ತಕ್ಕಿಂತ ಜಾಸ್ತಿ ಎಂದು ವಾದಿಸಿದರು. ೨೦೧೧ರ ಕೊನೆಯಲ್ಲಿ ನ್ಯಾಯಾಲಯ ಮುದ್ರಣ ಅಥವಾ ಆನ್ಲೈನ್ನಲ್ಲಿ ಲೇಖನದ ಮರುಮುದ್ರಣ ಅಥವಾ ಪ್ರಸಾರ ಮಾಡಬಾರದೆಂದು ಆದೇಶಿಸಿತು. ಪ್ರಕರಣ ನ್ಯಾಯಾಲಯದಲ್ಲಿ ಇನ್ನೂ ಇತ್ಯರ್ಥಗೊಂಡಿಲ್ಲ. ವರದಿ ಮಾನಹಾನಿಕರವೆಂದು ವಾದಿಸಿದರೂ ಕೂಡ ಈ ವ್ಯವಹಾರ ಅಧಿಕಾರಿಗಳ ಗಮನಕ್ಕೆ ಬಂತು. ಶೇರುದಲಾಲಿ ಮತ್ತು ಕ್ವಾಂಟಂ ಸೆಕ್ಯುರಿಟೀಸ್ ಎಂಬ ಹಣಕಾಸು ಸಂಸ್ಥೆಯ ನಿರ್ದೇಶಕ ಸಂಜಯ್ ದತ್ ಎಂಬವರು ೨೦೧೩ರ ಏಪ್ರಿಲ್ನಲ್ಲಿ ರಿಸರ್ವ್ ಬ್ಯಾಂಕಿಗೆ ಒಂದು ಪತ್ರ ಬರೆದು ಈ ವಿ?ಯವನ್ನು ತಿಳಿಸಿದರು. ಬ್ಯಾಂಕ್ ಅದಕ್ಕೆ ಉತ್ತರಿಸಿ ಈ ಸಾಲ ಈಗಾಗಲೇ ನಮ್ಮ ಗಮನ ಸೆಳೆದಿದೆ ಎಂದು ತಿಳಿಸಿತು. ಅದಲ್ಲದೆ ಆತ ಕೆಲವು ಸರ್ಕಾರೀ ಸಂಸ್ಥೆಗಳಿಗೂ ದೂರು ನೀಡಿ, ಎನ್ಡಿಟಿವಿ ಮತ್ತದರ ಪ್ರವರ್ತಕರು ಹಲವು ಕಾನೂನುಗಳನ್ನು ಉಲ್ಲಂಘಿಸಿದ್ದಾರೆಂದು ಆರೋಪಿಸಿದರು.
ಮುಕೇಶ್ ಅಂಬಾನಿ ಸಾಲ
ಪ್ಲಾಸ್ಟಿಕ್ ಸರ್ಜರಿಯಲ್ಲಿ ಒಂದು ಗಾಯವನ್ನು ಮುಚ್ಚಲು ಇನ್ನೊಂದು ಕಡೆಯ ಚರ್ಮವನ್ನು ತೆಗೆದು ಕಸಿ ಮಾಡುತ್ತಾರೆ. ಎನ್ಡಿಟಿವಿ ಸಂಸ್ಥೆಯ ಸಾಲಗಳ ಕಥೆಯೂ ಹಾಗೆ ಎಂದರೆ ತಪ್ಪಲ್ಲ. ಐಸಿಐಸಿಐ ಸಾಲದ ಮರುಪಾವತಿಗಾಗಿ ರಾಯ್ ದಂಪತಿ ಜುಲೈ ೨೧, ೨೦೦೯ರಂದು ವಿಶ್ವಪ್ರಧಾನ್ ಕಮರ್ಶಿಯಲ್ ಪ್ರೈವೇಟ್ ಲಿ. (ವಿಸಿಪಿಎಲ್) ಎಂಬ ಸಂಸ್ಥೆಯಿಂದ ೩೫೦ ಕೋಟಿ ರೂ. ಸಾಲ ಪಡೆದರು. ಈ ಸಾಲದ ಮೂಲ ಮುಕೇಶ್ ಅಂಬಾನಿ ಅವರ ರಿಲಯನ್ಸ್ ಇಂಡಸ್ಟ್ರೀಸ್. ಅದು ತನ್ನ ಒಂದು ಉಪಸಂಸ್ಥೆ (subsidiary)ಯ ಮೂಲಕ ವಿಸಿಪಿಎಲ್ಗೆ ಹಣ ಒದಗಿಸಿತ್ತು. ದಂಪತಿ ತಮ್ಮ – ರಾಧಿಕಾ ರಾಯ್ ಪ್ರಣಯ್ ರಾಯ್ (ಆರ್ಆರ್ಪಿಆರ್) ಸಂಸ್ಥೆ ಪರವಾಗಿ ಒಪ್ಪಂದಕ್ಕೆ ಸಹಿ ಹಾಕಿದರೆ ವಿಸಿಪಿಎಲ್ ಪರವಾಗಿ ರಿಲಯನ್ಸ್ ನೌಕರ ಕೆ.ಆರ್. ರಾಜಾ ಸಹಿ ಹಾಕಿದ್ದರು.
ಈ ಸಾಲದ ಷರತ್ತುಗಳು ವಿಲಕ್ಷಣವಾಗಿವೆ. ಒಂದನೆಯದಾಗಿ, ರಾಯ್ ದಂಪತಿ ತಮ್ಮ ಸ್ವಂತದ ಶೇರುಗಳ ದೊಡ್ಡ ಪಾಲನ್ನು ಆರ್ಆರ್ಪಿಆರ್ಗೆ ವರ್ಗಾಯಿಸಬೇಕು; ಶೇ. ೧೫ರಷ್ಟಿದ್ದ ಪಾಲನ್ನು ಶೇ. ೨೬ಕ್ಕೆ ಏರಿಸಬೇಕು. ಬಳಿಕ ಆರ್ಆರ್ಪಿಆರ್ ದನ್ನು ವಿಸಿಪಿಎಲ್ಗೆ ಹಸ್ತಾಂತರಿಸಬೇಕು. (ಸಾಲ ನೀಡಿಕೆಗೆ ಮುನ್ನ ನಡೆದ ಈ ವ್ಯವಹಾರಗಳ ಸಿಂಧುತ್ವದ ಬಗ್ಗೆ ಗಂಭೀರ ಪ್ರಶ್ನೆಗಳು ಏಳುತ್ತವೆ.) ಆಗ ಶೇರಿನ ಮಾರುಕಟ್ಟೆ ದರ ೧೩೦ ರೂ. ಗೂ ಅಧಿಕವಿತ್ತು. ಆದರೆ ರಾಯ್ ದಂಪತಿ ತಮ್ಮ ಸ್ವಂತ ಶೇರುಗಳನ್ನು ೪ ರೂ.ಗೆ ಆರ್ಆರ್ಪಿಆರ್ಗೆ ಮಾರಿದರು. ಅದನ್ನವರು ಮಾರುಕಟ್ಟೆ ದರದಲ್ಲಿ ಮಾರಿದ್ದರೆ ಭಾರೀ ಲಾಭ ಆಗಬಹುದಿತ್ತು. ಆದರೆ ತುಂಬ ತೆರಿಗೆ ಬೀಳುತ್ತಿತ್ತು. ಅಂದರೆ ತೆರಿಗೆಯಲ್ಲಿ ಕೋಟ್ಯಂತರ ರೂ. ಲಾಭ ಆಯಿತು. ಅದನ್ನು ಪ್ರಣಯ್ ರಾಯ್ ಇದು ಪ್ರವರ್ತಕರ (promoters) ನಡುವಣ ವ್ಯವಹಾರ; ಅವರು ಶೇರನ್ನು ತಮಗೆ ಇಷ್ಟ ಬಂದ ದರದಲ್ಲಿ ಮಾರಬಹುದು ಎಂದು ಸಮರ್ಥಿಸಿಕೊಂಡರು. ಶೇರುಗಳು ಆರ್ಆರ್ಪಿಆರ್ಗೆ ಹಸ್ತಾಂತರ ಆಗುತ್ತಲೇ ಎನ್ಡಿಟಿವಿ ಸಂಸ್ಥೆಗೆ ವಿಸಿಪಿಎಲ್ನಿಂದ ೩೫೦ ಕೋಟಿ ರೂ. ಸಾಲ ಬಿಡುಗಡೆ ಆಯಿತು.
ಮಾರ್ಚ್ ೯, ೨೦೧೦ರಂದು ರಾಯ್ ದಂಪತಿ ಮತ್ತೆ ಶೇ. ೩.೧೮ರಷ್ಟು ಶೇರುಗಳನ್ನು ಆರ್ಆರ್ಪಿಆರ್ಗೆ ವರ್ಗಾಯಿಸಿದಾಗ ಅಂಬಾನಿ ಅವರ ವಿಸಿಪಿಎಲ್ ಮತ್ತೆ ೫೩.೮೫ ಕೋಟಿ ರೂ. ಸಾಲ ನೀಡಿತು; ಅಲ್ಲಿಗೆ ಅದು ನೀಡಿದ ಸಾಲದ ಮೊತ್ತ ೪೦೩.೮೫ ಕೋಟಿ ರೂ. ಆಯಿತು. ಒಪ್ಪಂದದಂತೆ ವಿಸಿಪಿಎಲ್ ಸಾಲದ ಶೇ. ೯೯.೯೯ ಭಾಗವನ್ನು ಆರ್ಆರ್ಪಿಆರ್ನ ಈಕ್ವಿಟಿಯಾಗಿ ಬಳಸುವ ಹಕ್ಕನ್ನು ಪಡೆದುಕೊಂಡಿತು. ಅಂದರೆ ಸಾಲದ ಅವಧಿಯಲ್ಲಿ ಮಾತ್ರವಲ್ಲ; ಅನಂತರ ಕೂಡ ವಿಸಿಪಿಎಲ್ಗೆ ಪೂರ್ಣ ಮಾಲೀಕತ್ವ. ಅದಕ್ಕೆ ಬೇರೆ ಯಾವುದೇ ಒಪ್ಪಂದ ಬೇಕಿಲ್ಲ. ಹಾಗೆಂದರೆ ಸಾಲದ ಮರುಪಾವತಿ ಮಾಡಲಿ, ಮಾಡದಿರಲಿ; ತನಗೆ ಇ? ಬಂದಾಗ ವಿಸಿಪಿಎಲ್ ಆರ್ಆರ್ಪಿಆರ್ ಅನ್ನು ಸ್ವಾಧೀನಪಡಿಸಿಕೊಳ್ಳಬಹುದಿತ್ತು.
ಒಪ್ಪಂದದ ಪ್ರಕಾರ ಆರ್ಆರ್ಪಿಆರ್ನಲ್ಲಿ ಮೂವರು ನಿರ್ದೇಶಕರಿರಬೇಕು. ಅದರಲ್ಲಿ ಒಬ್ಬರು ವಿಸಿಪಿಎಲ್ ನೇಮಿಸಿದವರು. ಎನ್ಡಿಟಿವಿಯನ್ನು ಮಾರುವುದಾಗಲಿ, ಈಕ್ವಿಟಿ ಏರಿಸುವುದಾಗಲಿ, ದಿವಾಳಿ ಅರ್ಜಿ ಸಲ್ಲಿಸುವುದಾಗಲಿ, ಆರ್ಆರ್ಪಿಆರ್ ಶೇರ್ಹೋಲ್ಡಿಂಗ್ ಹಿತಕ್ಕೆ ಧಕ್ಕೆ ಉಂಟುಮಾಡಬಹುದಾದ ಏನೇ ಇದ್ದರೂ ವಿಸಿಪಿಎಲ್ನ ಒಪ್ಪಿಗೆಯಿಲ್ಲದೆ ಮಾಡುವಂತಿಲ್ಲ. ದಂಪತಿಗೆ ಸ್ವಂತ ಶೇರನ್ನು ಕೂಡ ಮಾರಲು, ವರ್ಗಾಯಿಸಲು ತಡೆ ಇತ್ತು. ಒಟ್ಟಿನಲ್ಲಿ ಎನ್ಡಿಟಿವಿ ಮೇಲೆಯೇ ರಾಯ್ ದಂಪತಿಯ ನಿಯಂತ್ರಣ ದುರ್ಬಲವಾಯಿತು. ಈ ಸಾಲ ಒಪ್ಪಂದದಲ್ಲಿದ್ದ ಒಂದು ರಿಯಾಯತಿ ಎಂದರೆ ವಿಸಿಪಿಎಲ್ ಚಾನೆಲ್ನ ಸಂಪಾದಕೀಯ ನೀತಿಯಲ್ಲಿ ಹಸ್ತಕ್ಷೇಪ ಮಾಡುವಂತಿರಲಿಲ್ಲ. ಆದರೆ ಕಂಪೆನಿ ಮೇಲಿನ ಹಿಡಿತ ಇಷ್ಟೊಂದು ಕೈತಪ್ಪಿರುವಾಗ ಅಂತಹ ಅಧಿಕಾರ ಬಹುತೇಕ ಅರ್ಥಹೀನ ಎಂಬುದಾಗಿ ’ಕಾರವಾನ್’ ಪತ್ರಿಕೆ (ಡಿಸೆಂಬರ್ ೨೦೧೫ರ ಸಂಚಿಕೆ) ತನ್ನ ಸುದೀರ್ಘ ಲೇಖನದಲ್ಲಿ ವಿವರಿಸಿದೆ.
ಸಾಲದ ಹಸ್ತಾಂತರ
ವಿಸಿಪಿಎಲ್ ವ್ಯವಹಾರದ ಅನಂತರ ಸಂಸ್ಥೆಯ ಸಾಲದ ವ್ಯವಹಾರಕ್ಕೆ ಮಂಕುಕವಿದಂತಾಗುತ್ತದೆ. ಸಾಲಕ್ಕೆ ಎದುರಾಗಿ ಕಂಪೆನಿಗೆ ಯಾವುದೇ ಆಸ್ತಿ ಅಥವಾ ವ್ಯವಹಾರ ಇಲ್ಲ. ರಿಲಯನ್ಸ್ನ ಪೂರ್ಣಸ್ವಾಮ್ಯದ ಉಪಸಂಸ್ಥೆ ಶಿನಾನೋ ರಿಟೈಲ್ನಿಂದ ಪಡೆದ ಹಣವನ್ನು ವಿಸಿಪಿಎಲ್ ಸಾಲವಾಗಿ ನೀಡಿತ್ತು. ಹೇಳುವುದಕ್ಕೆ ಅದು ಸೆಕ್ಯುರಿಟಿ ಇಲ್ಲದ ಬಡ್ಡಿ ಇಲ್ಲದ ಸಾಲ. ಒಟ್ಟಿನಲ್ಲಿ ಹಾವು-ಏಣಿ ಆಟದಂತೆ; ಎಲ್ಲಿಂದ ಆರಂಭಿಸಿದರೂ ನೀವು ರಿಲಯನ್ಸ್ಗೇ ಬಂದು ಮುಟ್ಟುತ್ತೀರಿ; ವಿಸಿಪಿಎಲ್ ಮತ್ತು ಶಿನಾನೋಗಳ ವಿಳಾಸ ಒಂದೇ. ವಿಸಿಪಿಎಲ್ನ ಒಂದು ಭಾಗ ಶಿನಾನೋ ಮಾಲೀಕತ್ವಕ್ಕೆ ಸೇರಿದ್ದು. ದೆಹಲಿ ಹೈಕೋರ್ಟ್ಗೆ ಸಲ್ಲಿಸಿದ ಅಫಿದವಿತ್ನಲ್ಲಿ ಆದಾಯ ತೆರಿಗೆ ಇಲಾಖೆಯು ವಿಸಿಪಿಎಲ್ ಬಗೆಗಿನ ತನ್ನ ಅಭಿಪ್ರಾಯವನ್ನು ಸ್ಪಷ್ಟವಾಗಿಯೇ ಹೇಳಿದೆ. ತನ್ನದೇ ಹಿಂದಿನ ವರದಿಯನ್ನು ಉಲ್ಲೇಖಿಸಿದ ಅದು ವಿಸಿಪಿಎಲ್ಗೆ ಬಿಸಿನೆಸ್ ಚಟುವಟಿಕೆ ಇಲ್ಲ ಮತ್ತು ಅದೊಂದು ಸಾಚಾ ಸಂಸ್ಥೆ ಅಲ್ಲ. ಈ ಬೇನಾಮಿ ವ್ಯವಹಾರಕ್ಕೆ ಸಂಬಂಧಿಸಿ ನಾವು ಮಾಡಿದ ತನಿಖೆಯ ವಿವರಗಳನ್ನು ಸಂಬಂಧಪಟ್ಟ ಅಧಿಕಾರಿಗಳಿಗೆ ನೀಡಲಾಗಿದೆ ಎಂದು ತಿಳಿಸಿದೆ.
ರಾಡಿಯಾ ಟೇಪ್ನಲ್ಲಿ
ರಿಲಯನ್ಸ್ ಗುಂಪು ಎನ್ಡಿಟಿವಿಯಲ್ಲಿ ಕಾಲಿರಿಸಿದ ವಿ?ಯ ಪತ್ರಕರ್ತ ಎಂ.ಕೆ. ವೇಣು ಮತು ರಿಲಯನ್ಸ್ ಲಾಬಿಗಾರ್ತಿ ನೀರಾ ರಾಡಿಯಾ ನಡುವಣ ಫೋನ್ ಕರೆಯಲ್ಲಿ ದಾಖಲಾಗಿದೆ. ಮುಂದೆ ಸೋರಿಕೆಯಾದ ಅದು ’ರಾಡಿಯಾ ಟೇಪ್’ ಎಂದು ಕುಖ್ಯಾತವಾಯಿತು. ಅದರಂತೆ ಜುಲೈ ೯, ೨೦೦೯ರಂದು ವೇಣು ಅವರಿಗೆ ರಾಡಿಯಾ ನಾನು ಮತ್ತು ಮುಕೇಶ್ ಅಂಬಾನಿಯ ನಿಕಟವರ್ತಿ ಮನೋಜ್ ಮೋದಿ ಪ್ರಣಯ್ ರಾಯ್ ಭೇಟಿಗಾಗಿ ದೆಹಲಿಗೆ ಹೋಗುತ್ತಿದ್ದೇವೆ; ನಾವು ಪ್ರಣಯ್ ಅವರನ್ನು ಬೆಂಬಲಿಸಬೇಕಿದೆ ಎಂದಿದ್ದಾರೆ. ಆ ಹಂತದಲ್ಲಿ ಎನ್ಡಿಟಿವಿ ಯಾರ ನಿಯಂತ್ರಣದಲ್ಲಿತ್ತು ಎಂಬುದನ್ನು ವಿಸಿಪಿಎಲ್ ವ್ಯವಹಾರ ಸ್ಪಷ್ಟವಾಗಿ ಹೇಳುತ್ತದೆ. ಸಾಲ ನೀಡುವ ಮೂಲಕ ಈ ಕಂಪೆನಿಯ ಶೇ. ೨೯.೧೮ ಭಾಗವನ್ನು ರಿಲಯನ್ಸ್ ನಿಯಂತ್ರಿಸಿತು.
ಆದಾಯ ತೆರಿಗೆ ಇಲಾಖೆಯ ತನಿಖೆ ಮತ್ತು ಕಾರ್ಪೊರೇಟ್ ವ್ಯವಹಾರ ಸಚಿವಾಲಯಗಳಲ್ಲಿರುವ ಮಾಹಿತಿಯ ಪ್ರಕಾರ ಸಾಲದ ವಿಷಯ ಆ ಹಂತದಲ್ಲಿ ರಹಸ್ಯಾತ್ಮಕ ತಿರುವು ಪಡೆಯಿತು. ಆ ಹಂತದಲ್ಲಿ ರಿಲಯನ್ಸ್ ಇನ್ನೇನೋ ಆಟ ಆಡಿದಂತಿದೆ. ೨೦೧೨ರಲ್ಲಿ ಶಿನಾನೋ ರಿಟೈಲ್ ತನ್ನ ವಾರ್ಷಿಕ ವರದಿಯಲ್ಲಿ ವಿಸಿಪಿಎಲ್ಗೆ ನೀಡಲಾಗಿದ್ದ ೪೦೩.೮೫ ಕೋಟಿ ರೂ.ಗಳನ್ನು ವಾಪಸು ಮಾಡಿತು ಎಂದು ಹೇಳಿದೆ. ಆದರೆ ಎನ್ಡಿಟಿವಿ ಮತ್ತು ಆರ್ಆರ್ಪಿಆರ್ (ರಾಧಿಕಾ ರಾಯ್ ಪ್ರಣಯ್ ರಾಯ್) ಸಂಸ್ಥೆಯ ದಾಖಲೆಯಲ್ಲಿ ಅದಿಲ್ಲ; ವಿಸಿಪಿಎಲ್ಗೆ ಕೊಡಬೇಕಾಗಿದೆ ಎಂದೇ ಇತ್ತು (ಇನ್ನೂ ಕೊಟ್ಟಿಲ್ಲ ಎಂಬುದು ಬೇರೆ ವಿಚಾರ). ಇದು ಹೇಗಾಯಿತು ಎಂದು ಪ್ರಶ್ನಿಸುವ ಕಾರವಾನ್ ವರದಿ, ದಾಖಲೆಗಳು ಸ್ವಲ್ಪ ಬೆಳಕು ಚೆಲ್ಲುತ್ತವೆ ಎನ್ನುತ್ತದೆ. ಮಹೇಂದ್ರ ನಹತಾ ಅವರ ಎಮಿನೆಂಟ್ ನೆಟ್ವರ್ಕ್ನಿಂದ ೨೦೧೨ರಲ್ಲಿ ವಿಸಿಪಿಎಲ್ಗೆ ೫೦ ಕೋಟಿ ರೂ. ಬಂದಿತ್ತು. (ಆತ ರಿಲಯನ್ಸ್ ಬೋರ್ಡ್ನಲ್ಲೂ ಇದ್ದಾರೆ). ಈ ವ್ಯವಹಾರದ ಮೂಲಕ ಆರ್ಆರ್ಪಿಆರ್ ಪಡೆದ ಸಾಲದ ಮೇಲೆ ಎಮಿನೆಂಟ್ ನೆಟ್ವರ್ಕ್ಗೆ ಅಧಿಕಾರ ನೀಡಲಾಯಿತು. ಇಲ್ಲಿದೆ ವಿಚಿತ್ರ. ಕೇವಲ ೫೦ ಕೋಟಿ ರೂ. ತೆಗೆದುಕೊಂಡು ವಿಸಿಪಿಎಲ್ ೪೦೩.೮೫ ಕೋಟಿ ರೂ.ಗಳ ಸಾಲದ ಅಧಿಕಾರವನ್ನು ಎಮಿನೆಂಟ್ಗೆ ಹಸ್ತಾಂತರಿಸಿದ್ದು ಹೇಗೆ ಎಂಬ ಪ್ರಶ್ನೆಗೆ ಎಸ್. ಗುರುಮೂರ್ತಿ ಉತ್ತರ ಕಂಡುಕೊಂಡಿದ್ದಾರೆ.
ಎನ್ಡಿಟಿವಿಯ ಆರ್ಥಿಕ ಸ್ಥಿತಿ ಚೆನ್ನಾಗಿಲ್ಲದಿದ್ದರೂ ಮುಕೇಶ್ ಅಂಬಾನಿ ತಮ್ಮ ಯಾವುದೋ ಕಂಪೆನಿಯ ಮೂಲಕ ೪೦೩ ಕೋಟಿ ರೂ. ಬಡ್ಡಿರಹಿತ ಸಾಲ ನೀಡಿ ಎನ್ಡಿಟಿವಿಯ ದೊಡ್ಡ ಪಾಲನ್ನು (ಶೇ. ೨೯.೧೮ ಗೆ) ಗಿಟ್ಟಿಸಿಕೊಂಡರು. ಬಡ್ಡಿರಹಿತ ಸಾಲದ ಬ್ರಾಂಡನ್ನು ೫೦ ಕೋಟಿ ರೂ.ಗೆ ಹಿಮಾಚಲ್ ಫ್ಯೂಚರಿಸ್ಟಿಕ್ ಗ್ರೂಪಿನ ಒಂದು ಕಂಪೆನಿ(ಎಮಿನೆಂಟ್ ನೆಟ್ವರ್ಕ್)ಗೆ ಹಸ್ತಾಂತರಿಸಿದರು. ಆ ಮೂಲಕ ಅಂಬಾನಿ ಕಂಪೆನಿ ೩೫೦ ಕೋಟಿ ರೂ. ನ? ಮಾಡಿಕೊಂಡು ಅದನ್ನು ತೆರಿಗೆಗೆ ವಜಾ ಮಾಡಲಾಯಿತು ಎಂದವರು ಹೇಳುತ್ತಾರೆ. ಮುಂದುವರಿದು, ಎನ್ಡಿಟಿವಿಗಾಗಿ ಮುಕೇಶ್ ಅಂಬಾನಿ ಈ ನ?ವನ್ನು ಮಾಡಿಕೊಂಡಿದ್ದೇಕೆ? ಅದು ಪ್ರಣಯ್ ರಾಯ್ ಹೇಳುವ ಮಾಧ್ಯಮ ಸ್ವಾತಂತ್ರ್ಯಕ್ಕಾಗಿಯೆ, ಅಥವಾ ಅದನ್ನು ಖರೀದಿಸುವುದಕ್ಕಾಗಿಯೆ? – ಎಂದು ಪ್ರಶ್ನಿಸುತ್ತಾರೆ.
ಕಂಪೆನಿ ಮೌಲ್ಯ
ವಿವಿಧ ಸಂದರ್ಭಗಳಲ್ಲಿ ಹೇಳಿದ ಸಂಸ್ಥೆಯ ಮೌಲ್ಯದಲ್ಲಿನ ಭಾರೀ ವ್ಯತ್ಯಾಸ ಎನ್ಡಿಟಿವಿಯ ಇನ್ನೊಂದು ವಿಲಕ್ಷಣ ವಿದ್ಯಮಾನವಾಗಿದೆ. ೪೦೩.೮೫ ಕೋಟಿ ಸಾಲ ನೀಡುವಾಗ ಮುಕೇಶ್ ಅಂಬಾನಿ ಸಂಸ್ಥೆಗೆ ೧,೪೪೦ ಕೋಟಿ ರೂ. ಬೆಲೆ ಕಟ್ಟಿದ್ದರು. ಅದನ್ನು ಹಿಮಾಚಲ್ ಫ್ಯೂಚರಿಸ್ಟಿಕ್ ನಹತಾ ಅವರಿಗೆ ೫೦ ಕೋಟಿ ರೂ.ಗೆ ಮಾರಿದಾಗ ಕಂಪೆನಿಯ ಮೌಲ್ಯ ೧೯೩ ಕೋಟಿ ರೂ. ಎಂದಾಯಿತು. ತೆರಿಗೆ ಅಧಿಕಾರಿಗಳ ಮುಂದೆ ಕಂಪೆನಿ ಮೌಲ್ಯ ೧೦ ಸಾವಿರ ಕೋಟಿ ರೂ. ಎಂದು ರಾಯ್ ದಂಪತಿ ಒಮ್ಮೆ ಹೇಳಿದರೆ, ಅಮೆರಿಕದ ಜೆಇ ಕಾರ್ಪೊರೇಶನ್ ಹೂಡಿಕೆ ವೇಳೆ ೩೦೦ ಕೋಟಿ ಡಾಲರ್ ಎಂದು ಹೇಳಲಾಗಿತ್ತು; ಇನ್ನೊಂದು ಹೂಡಿಕೆಯ ಹೊತ್ತಿಗೆ ಕಂಪೆನಿ ಮೌಲ್ಯ ಕೇವಲ ೩೦ ಕೋಟಿ ಡಾಲರ್ ಎಂದು ಹೇಳಿದ್ದೂ ಇದೆ. ನವೀನ್ ಜಿಂದಾಲ್ ಗ್ರೂಪ್ ಮತ್ತು ಅಗರ್ವಾಲ್ ಅಗ್ರೋಟೆಕ್ ಗುಂಪುಗಳು ಎನ್ಡಿಟಿವಿಯ ಶೇ. ೧೫ರ? ಶೇರುಗಳನ್ನು ೩೬ ಕೋಟಿ ರೂ. ಗೆ ಖರೀದಿಸಿದವು; ಅಂದರೆ ಕಂಪೆನಿಯ ಮೌಲ್ಯ ೧೭೩ ಕೋಟಿ ರೂ. ಎಂದಾಯಿತು. ಸೆಬಿ (SEBI) ಮುಂದೆ ಕಂಪೆನಿ ತನ್ನ ಮೌಲ್ಯ ೩೬೭ ಕೋಟಿ ರೂ. ಎಂದು ತಿಳಿಸಿತ್ತು. ಇದೆಲ್ಲ ಬೆಲೆ ನಿಗದಿಯಲ್ಲಿನ ಭಾರೀ ದೋ಼ಷವಲ್ಲವೆ? ಅದು ತೆರಿಗೆ ಸಂಬಂಧಿ ವಿಷಯವಲ್ಲವೆ? – ಎನ್ನುವ ಪ್ರಶ್ನೆಗಳು ಮುಂದೆ ಬಂದಿವೆ.
ವಿಸಿಪಿಎಲ್ ಜೊತೆಗೆ ನಡೆಸಿದ ವ್ಯವಹಾರದಲ್ಲಿ ಆರ್ಆರ್ಪಿಆರ್ನ ಮಾಲೀಕತ್ವವೇ ಬದಲಾಗಿದೆ; ಈ ವ್ಯವಹಾರದ ಬಗ್ಗೆ ಎನ್ಡಿಟಿವಿ ಸೆಬಿಗೆ ತಿಳಿಸಬೇಕಿತ್ತು; ಆದರೆ ತಿಳಿಸಿದಂತಿಲ್ಲ. ಶೇರು ದಲ್ಲಾಳಿ ಸಂಜಯ್ ದತ್ ದೂರಿಗೆ ಉತ್ತರವಾಗಿ ಸೆಬಿ ೨೦೧೫ರ ಏಪ್ರಿಲ್ನಲ್ಲಿ ವಿಸಿಪಿಎಲ್ ಮತ್ತು ಆರ್ಆರ್ಪಿಆರ್ ನಡುವಣ ಒಪ್ಪಂದದ ಬಗ್ಗೆ ತನಗೇನೂ ಗೊತ್ತಿಲ್ಲ ಎಂದಿತ್ತು. ಸಂಜಯ್ ದತ್ ಅದೇ ವ? ಜನವರಿಯಲ್ಲಿ ದೆಹಲಿ ಹೈಕೋರ್ಟಿನಲ್ಲಿ ಜಾರಿ ನಿರ್ದೇಶನಾಲಯ (ಇ.ಡಿ.) ಮತ್ತು ಆದಾಯ ತೆರಿಗೆ ತನಿಖೆ ಮಹಾನಿರ್ದೇಶಕರ ವಿರುದ್ಧ ದಾವೆ ಹೂಡಿದ್ದರು. ೨೦೧೩ರಲ್ಲಿ ತಾನು ದೂರು ಸಲ್ಲಿಸಿದ್ದರೂ ಈ ಸಂಸ್ಥೆಗಳು ಕ್ರಮ ಕೈಗೊಂಡಿಲ್ಲವಾದ ಕಾರಣ ನ್ಯಾಯಾಲಯ ಮಧ್ಯ ಪ್ರವೇಶಿಸಬೇಕೆಂದು ಅವರು ತಮ್ಮ ರಿಟ್ ಅರ್ಜಿಯಲ್ಲಿ ಆಗ್ರಹಿಸಿದ್ದರು; ದಾವೆಯಲ್ಲಿ ಪ್ರಣಯ್ ರಾಯ್ ದಂಪತಿಯನ್ನು ಪ್ರತಿವಾದಿಗಳಾಗಿ ಹೆಸರಿಸಿದ್ದರು. ಅದಲ್ಲದೆ ಸುದ್ದಿಸಂಸ್ಥೆಗಳು ತಮ್ಮ ಸಾಲ ಹಾಗೂ ಇತರ ಒಪ್ಪಂದಗಳನ್ನು ವಾರ್ತಾಪ್ರಸಾರ ಇಲಾಖೆಗೆ ತಿಳಿಸುವುದು ಕಡ್ಡಾಯ. ಆದರೆ ವಿಸಿಪಿಎಲ್ ಜೊತೆಗಿನ ದೊಡ್ಡ ಸಾಲದ ವ್ಯವಹಾರವನ್ನು ಇಲಾಖೆಗೆ ತಿಳಿಸಿರಲಿಲ್ಲ.
ನ್ಯೂಸ್ ರೂಮಿನಲ್ಲೂ ಸಮಸ್ಯೆ
ರಾಯ್ ದಂಪತಿ ಆರ್ಥಿಕ ವ್ಯವಹಾರಗಳಲ್ಲಿ ಸಿಕ್ಕಿ ಒದ್ದಾಡುತ್ತಿದ್ದಾಗ ನ್ಯೂಸ್ ರೂಮಿನಲ್ಲೂ ಸಮಸ್ಯೆಗಳಿದ್ದವು. ೨೦೦೪ರ ಏಪ್ರಿಲ್ನಲ್ಲಿ ೨೪ ತಾಸಿನ ಸುದ್ದಿ ಚಾನೆಲ್ ಆರಂಭಿಸಿದ್ದು, ವರ್ಷ ಆಗುವಾಗ ರಾಷ್ಟ್ರೀಯ ಸುದ್ದಿ ಸಂಪಾದಕ ಅರ್ಣಬ್ ಗೋಸ್ವಾಮಿ ’ಟೈಮ್ಸ್ ನೌ’ ನ್ಯೂಸ್ ಚಾನೆಲ್ ಮಾಡುವುದಕ್ಕಾಗಿ ಬಿಟ್ಟುಹೋದರು. ಮತ್ತೊಂದು ವರ್ಷ ಆಗುವಾಗ ವ್ಯವಸ್ಥಾಪಕ ಸಂಪಾದಕ ರಾಜದೀಪ್ ಸರ್ದೇಸಾಯ್ ಸಂಸ್ಥೆಯಿಂದ ನಿರ್ಗಮಿಸಿದರು. ರಾಘವ್ ಬಹ್ಲಾ ಜೊತೆ ಸಿಎನ್ಎನ್-ಐಬಿಎನ್ ಮಾಡುವುದು ಅವರ ಉದ್ದೇಶವಾಗಿತ್ತು. ಅವರೊಂದಿಗೆ ಮುಖ್ಯ ಹಣಕಾಸು ಅಧಿಕಾರಿ ಸಮೀರ್ ಮಂಚಂದಾ ಕೂಡ ಹೋದರು; ಆತ ಸಂಸ್ಥೆಯ ಆರಂಭದಿಂದ ಇದ್ದವರು. ಅರ್ಣಬ್ ಮತ್ತು ರಾಜದೀಪ್ ಅವರಿಗೆ ಸಂಬಳ ಇತ್ಯಾದಿಯಲ್ಲಿ ತಮ್ಮನ್ನು ಸರಿಯಾಗಿ ನೋಡಿಕೊಳ್ಳುತ್ತಿಲ್ಲ ಎನ್ನುವ ಅಸಮಾಧಾನ ಇತ್ತೆನ್ನಲಾಗಿದೆ.
ಅರ್ಣಬ್ ಟೈಮ್ಸ್ ನೌನಲ್ಲಿ ತಮ್ಮ ನ್ಯೂಸ್ ಅವರ್ ಮೂಲಕ ದೇಶದ ಟಿವಿ ನ್ಯೂಸ್ ಕಾರ್ಯಕ್ರಮದ ಸ್ವರೂಪವನ್ನೇ ಬದಲಿಸಿದರು; ಆ ಚಾನೆಲ್ ಒಂದನೇ ಸ್ಥಾನಕ್ಕೇರಿದರೆ ಎನ್ಡಿಟಿವಿ ಹಿಂದೆ ಬಿತ್ತು. ರಾಜದೀಪ್ ಬಿಟ್ಟ ಕಾರಣ ನ್ಯೂಸ್ ರೂಮಿಗೆ ಸರಿಯಾದ ನಾಯಕತ್ವ ಇಲ್ಲದಂತಾಯಿತು. ಅವರು ವರದಿಗಾರರೊಂದಿಗೆ ನಿಕಟ ಸಂಪರ್ಕದಿಂದ ಕೆಲಸ ಮಾಡಿದರೆ ಬರ್ಖಾದತ್, ಶ್ರೀನಿವಾಸ್ ಜೈನ್ರಂತಹ ಉನ್ನತ ಹುದ್ದೆಯಲ್ಲಿದ್ದವರು ಸತ್ರಪರಂತೆ ಕೆಲಸ ಮಾಡುತ್ತಿದ್ದರು. ತಮ್ಮ ಶೋಗಳನ್ನು ಸ್ವಂತ ಜಹಗೀರಿನಂತೆ ನಡೆಸುತ್ತಿದ್ದುದು ಬಿಟ್ಟರೆ ರಾಜದೀಪ್ರಂತೆ ಸದಾ ಲಭ್ಯ ಸಂಪಾದಕರಾಗಿ ಕೆಲಸ ಮಾಡಲಿಲ್ಲ. ರಾಜದೀಪ್ ಸರ್ದೇಸಾಯ್ ನ್ಯೂಸ್ ರೂಮಿನ ಅವಿಭಾಜ್ಯ ಅಂಗವಾಗಿದ್ದು, ಎಲ್ಲರ ಕೆಲಸದ ಯಶಸ್ಸಿನಲ್ಲಿ ಅವರ ಪಾಲು ಇರುತ್ತಿತ್ತು ಎಂದೊಬ್ಬ ವರದಿಗಾರ ಹೇಳಿದ್ದರು. ಮಂಚಂದಾ ಸಂಸ್ಥೆಯನ್ನು ತ್ಯಜಿಸಿದ್ದರಿಂದ ಕೂಡ ತುಂಬ ಕಷ್ಟವಾಯಿತು. ಅವರ ಬಳಿ ಸಂಸ್ಥೆಯ ಕಾರ್ಪೊರೇಟ್ ಗುಟ್ಟುಗಳಿದ್ದವು; ಹೂಡಿಕೆದಾರರು ಜಾಹೀರಾತುದಾರರೊಂದಿಗೆ ಅವರು ಚೆನ್ನಾಗಿ ವ್ಯವಹರಿಸುತ್ತಿದ್ದರು. ಹಣ ಚೆನ್ನಾಗಿ ಬಂದು ವ್ಯವಹಾರ ವಿಸ್ತರಿಸುತ್ತಿತ್ತು.
ಟಿವಿ ಉದ್ಯಮದಲ್ಲಿ ಕ್ರಮೇಣ ಬದಲಾವಣೆಗಳು ಬರುತ್ತಿದ್ದವು. ಡಿಜಿಟಲ್ ಬರುವ ಮುನ್ನ ಕೇಬಲ್ ನೆಟ್ವರ್ಕ್ಗಳಿದ್ದವು. ಕೇಬಲ್ ಆಪರೇಟರ್ಗಳು ಜನರಿಂದ ಹಣ ವಸೂಲಿಮಾಡಿ ಅದರ ಒಂದು ಪಾಲನ್ನು ಚಾನೆಲ್ಗಳಿಗೆ ನೀಡುತ್ತಿದ್ದವು. ಮುಂದೆ ಕೇಬಲ್ ಆಪರೇಟರ್ಗಳು ಚಾನೆಲ್ರವರಿಂದಲೇ ಹಣ ಪಡೆಯುವ ಕ್ರಮ ಬಂತು. ಅದರಿಂದಾಗಿ ಜಾಹೀರಾತು ಆದಾಯ ಮುಖ್ಯವಾಯಿತು.
ಜಾಹೀರಾತುದಾರರು ಟೆಲಿವಿಶನ್ ರೇಟಿಂಗ್ ಪಾಯಿಂಟ್ (ಟಿಆರ್ಪಿ) ನೋಡಿ ಜಾಹೀರಾತು ನೀಡುವರು. ಆ ಸ್ಪರ್ಧೆಯಲ್ಲಿ ಎನ್ಡಿಟಿವಿ ಹಿಂದೆ ಬಿತ್ತು. ವ್ಯಂಗ್ಯವೆಂದರೆ, ಮೊದಲಿನ ಯಶಸ್ಸೇ ಎನ್ಡಿಟಿವಿಗೆ ಹೊರೆಯಾಯಿತು. ಬದಲಾವಣೆಗೆ ಹೊಂದಿಕೊಳ್ಳಲಾಗಲಿಲ್ಲ. ಹೊಸ ಚಾನೆಲ್ಗಳು ಏನೇನೋ ಪ್ರಯೋಗ ಮಾಡಿ ವೀಕ್ಷಕರನ್ನು ಸೆಳೆದವು. ಹಲವು ಚಾನೆಲ್ಗಳು ಮನೋರಂಜನೆ ಚಾನೆಲ್ನಿಂದ ಆದಾಯ ಗಳಿಸಿ ಸುದ್ದಿ ಚಾನೆಲ್ಗಳಿಗೆ ಬಳಸುತ್ತಿದ್ದವು. ಅದರಂತೆ ಎನ್ಡಿಟಿವಿ ೨೦೦೮ರಲ್ಲಿ ’ಇಮ್ಯಾಜಿನ್’ ಎಂಬ ಮನೋರಂಜನೆ ಚಾನೆಲ್ ಮತ್ತು ನಿರ್ದಿಷ್ಟ ನಗರಗಳಿಗಾಗಿ ’ಮೆಟ್ರೋನೇಷನ್’ ಎಂಬ ಚಾನೆಲ್ ಆರಂಭಿಸಿತು. ಅ?ರಲ್ಲಿ ೨೦೦೮ರ ಜಾಗತಿಕ ಕುಸಿತ ಬಂತು. ಇಮ್ಯಾಜಿನ್ಗೆ ಆರ್ಥಿಕ ಹೊಡೆತ ಬಿತ್ತು. ಅಂತಾರಾಷ್ಟ್ರೀಯ ವ್ಯವಹಾರ ಮತ್ತು ಬಾಂಡ್ಗಳಿಂದ ಸಂಗ್ರಹಿಸಿದ್ದ ಹಣ ಕರಗಿಹೋಯಿತು. ಹೆಚ್ಚುವರಿ ಬಂಡವಾಳ ಸಂಗ್ರಹಿಸಲು ಆಗಲಿಲ್ಲ. ಎರಡು ವರ್ಷಗಳಲ್ಲಿ ಎರಡೂ ಹೊಸ ಚಾನೆಲ್ಗಳನ್ನು ಮುಚ್ಚಿದರು.
ಅವರೋಹಣ
ಆರ್ಥಿಕ ಒತ್ತಡದ ಕಾರಣದಿಂದ ರಾಯ್ ದಂಪತಿ ಲೇ- ಆಫ್ ಮಾಡಿ, ೨೦೦೮-೦೯ರಲ್ಲಿ ಸುಮಾರು ೨೫೦ ಮಂದಿ(ಶೇ. ೨೦)ಯನ್ನು ಕೆಲಸದಿಂದ ತೆಗೆದುಹಾಕಿದರು. ಅಲ್ಲಿಂದ ಸಂಸ್ಥೆಯ ಅವರೋಹಣ ಆರಂಭವಾಯಿತು. ೨೦೦೮ರ ಆರಂಭದಲ್ಲಿ ೫೧೧ ರೂ. ಇದ್ದ ಎನ್ಡಿಟಿವಿ ಶೇರಿನ ಬೆಲೆ ೨೦೧೨ರಲ್ಲಿ ೨೫ ರೂ.ಗೆ ಕುಸಿಯಿತು. ೨೦೧೫ರ ಹೊತ್ತಿಗೆ ರೂ. ೮೦- ೧೦೦ ಆಗಿತ್ತು. ೨೦೧೫ ಮಾರ್ಚ್ ವೇಳೆ ೨೧.೯ ಕೋಟಿ ರೂ. ವಾರ್ಷಿಕ ಲಾಭ ಕಂಡುಬಂದರೆ ೨೦೧೪ರಲ್ಲಿ ೮೪ ಕೋಟಿ ರೂ. ವಾರ್ಷಿಕ ನಷ್ಟ ಕಾಣಿಸಿತು.
ಬರ್ಖಾದತ್-ಕಾಂಗ್ರೆಸ್
ಸಂಸ್ಥೆಯ ಸಂಪಾದಕೀಯ ವಿಶ್ವಾಸಾರ್ಹತೆ ಕೂಡ ಕುಸಿಯಿತು. ೨೦೧೦ರ ನವೆಂಬರ್ನಲ್ಲಿ ರಾಡಿಯಾ ಟೇಪ್ನ ಮೊದಲ ಕಂತು ಪ್ರಕಟವಾಯಿತು. ಅದರಲ್ಲಿ ಎನ್ಡಿಟಿವಿ ಗ್ರೂಪ್ ಎಡಿಟರ್ ಬರ್ಖಾದತ್ ಹೆಸರಿತ್ತು. ಬಹಿರಂಗಗೊಂಡ ಸಂಭಾ?ಣೆಯಲ್ಲಿ ಬರ್ಖಾದತ್ ನಡತೆ ಸಂಪಾದಕೀಯ ನಿಯಮವನ್ನು ಮೀರಿದಂತಿತ್ತು. ಅದರಲ್ಲಿ ಆಕೆ ಡಿಎಂಕೆ ಪರವಾಗಿ ರಾಡಿಯಾ ಅವರ ಮಾಹಿತಿಯನ್ನು ಕಾಂಗ್ರೆಸಿಗೆ ತಿಳಿಸಲು ಒಪ್ಪಿಕೊಂಡಿದ್ದರು. ಮೇ ೨೨, ೨೦೦೯ರಂದು ನಡೆದ ಒಂದು ಸಂಭಾಷಣೆಯಲ್ಲಿ ಬರ್ಖಾ ರಾಡಿಯಾರಲ್ಲಿ ಕೇಳುತ್ತಾರೆ: ಹೇಳಿ, ನಾನು ಅವರಿಗೆ ಏನು ಹೇಳಬೇಕು? ಮತ್ತೆ ಅದೇ ದಿನ ಬರ್ಖಾ ನಾನು ಅವರಲ್ಲಿ ತುಂಬಾ ಮಾತಾಡಿದೆ. (ಗುಲಾಂ ನಬಿ) ಆಜಾದ್ ಆತನೊಂದಿಗೆ ಮಾತನಾಡುತ್ತೇನೆಂದು ನನಗೆ ಭರವಸೆ ನೀಡಿದರು (ಆಜಾದ್ ಕರುಣಾನಿಧಿ ಜೊತೆ ಮಾತನಾಡುವ ಬಗ್ಗೆ) ಎಂದಿದ್ದರು. ಈ ಸಂಭಾಷಣೆ ನಡೆದದ್ದು ಎನ್ಡಿಟಿವಿಯನ್ನು ಬೆಂಬಲಿಸುವ ಸಲುವಾಗಿ ದೆಹಲಿಯಲ್ಲಿ ಪ್ರಣಯ್ರನ್ನು ಭೇಟಿ ಮಾಡುತ್ತೇನೆಂದು ನೀರಾ ರಾಡಿಯಾ ಹೇಳಿದ ಒಂದು ತಿಂಗಳ ಮೊದಲು ಮತ್ತು ರಾಯ್ ದಂಪತಿ ರಿಲಯನ್ಸ್ ಜೊತೆ ವಿಸಿಪಿಎಲ್ ಸಾಲ ಒಪ್ಪಂದಕ್ಕೆ ಸಹಿ ಹಾಕುವ ಎರಡು ತಿಂಗಳ ಮೊದಲು. ತಾನು ಕಾಂಗ್ರೆಸ್ ನಾಯಕರಿಗೆ ಯಾವುದೇ ಮಾಹಿತಿಯನ್ನು ಹಸ್ತಾಂತರಿಸಿಲ್ಲವೆಂದು ಬರ್ಖಾದತ್ ಹೇಳಿಕೊಂಡರೂ ಟೇಪಿನಿಂದಾಗಿ ಆಕೆಯ ವಿಶ್ವಾಸಾರ್ಹತೆ ಜೊತೆಗೆ ಎನ್ಡಿಟಿವಿಯದ್ದೂ ಕುಸಿಯಿತು. ಆಗ ಸಂಸ್ಥೆಯಲ್ಲಿ ಒಂದು ನೈತಿಕ (ಎಥಿಕ್ಸ್) ಸಮಿತಿ ರಚಿಸಿದರಂತೆ. ಅದರಿಂದ ಏನಾಯಿತೆಂದು ಗೊತ್ತಿಲ್ಲ. ಆದರೆ ಚಾನೆಲ್, ಅದರ ಮಾಲೀಕರು ಬರ್ಖಾರನ್ನು ಬೆಂಬಲಿಸಿದ್ದಂತೂ ನಿಜ. ಆಗ ಬರ್ಖಾ ವಿರುದ್ಧ ಕ್ರಮ ಆಗಬೇಕಿತ್ತೆಂದು ಓರ್ವ ಸಿಬ್ಬಂದಿ ಹೇಳಿದರೂ ಉನ್ನತ ಸ್ಥಾನದಲ್ಲಿದ್ದ ಆಕೆ ರಾಯ್ ದಂಪತಿಯ ಆತ್ಮೀಯ ಬಳಗದಲ್ಲಿದ್ದದ್ದು ಎಲ್ಲರಿಗೂ ತಿಳಿದಿತ್ತು.
ಪಿ. ಚಿದಂಬರಂ ಕೈವಾಡ
ಎನ್ಡಿಟಿವಿಯ ವ್ಯವಹಾರಗಳ ಬಗ್ಗೆ ಏನೇ ತನಿಖೆ ನಡೆದರೂ ಅದು ಕಂಪೆನಿಯಲ್ಲಿ ಏನೋ ಸರಿಯಿಲ್ಲ ಎಂಬ ಬಗ್ಗೆ ಬೊಟ್ಟುಮಾಡುತ್ತಾ ಬಂದಿದೆ. ಪ್ರಣಯ್ ರಾಯ್ ದಂಪತಿಗೆ ಅಪಾಯದ ಲಕ್ಷಣಗಳು ಆಗಾಗ ಗೋಚರಿಸಿವೆ. ಇ.ಡಿ. ಮತ್ತು ಆದಾಯ ತೆರಿಗೆ ಇಲಾಖೆಗಳು ತನಿಖೆ ನಡೆಸಿ ನ್ಯಾಯಾಲಯಕ್ಕೆ ಅಫಿದವಿತ್ ಸಲ್ಲಿಸಿವೆ. ಸಿ.ಬಿ.ಐ. ಹಾಗೂ ರಿಸರ್ವ್ ಬ್ಯಾಂಕ್ಗಳು ಕೂಡ ತನಿಖೆ ನಡೆಸಿವೆ. ನಷ್ಟದಲ್ಲಿದ್ದ ಕಂಪೆನಿಗೆ ೨೦೦೪ರಲ್ಲಿ ಯುಪಿಎ ಸರ್ಕಾರ ಅಧಿಕಾರಕ್ಕೆ ಬಂದದ್ದು ಅನುಕೂಲಕರವೆನಿಸಿತು; ಯುಪಿಎ ಅದಕ್ಕೆ ಮೇಲೇರಲು ಏಣಿಯಾಯಿತು. ಈ ನಡುವೆ ಸಂಜಯ್ ಕೆ. ಶ್ರೀವಾಸ್ತವ ಎನ್ನುವ ಪ್ರಾಮಾಣಿಕ ಮತ್ತು ಧೈರ್ಯಶಾಲಿ ಆದಾಯ ತೆರಿಗೆ ಇಲಾಖೆ ಅಧಿಕಾರಿಗೆ ಎನ್ಡಿಟಿವಿ ಮತ್ತು ಹಣಕಾಸು ಮಂತ್ರಿ ಪಿ. ಚಿದಂಬರಂ ಅವರಿಗೆ ಏನೋ ಸಂಬಂಧವಿದೆ ಎನ್ನುವ ವಾಸನೆ ಹೊಡೆಯಿತು. ಆತನಿಗೆ ಬಂದ ಒಂದು ಗುಪ್ತ ವಾರ್ತಾ ಮಾಹಿತಿ ಪ್ರಕಾರ ಚಿದಂಬರಂ ಅವರೇ ಇದ್ದ ಒಂದು ವ್ಯವಹಾರದಲ್ಲಿ ೫೦೦೦ ಕೋಟಿ ರೂ. ಪೇ ಆಫ್ ಮಾಡಲಾಗಿತ್ತು ಎಂದು ಎಸ್. ಗುರುಮೂರ್ತಿ ವಿವರಿಸುತ್ತಾರೆ.
ಎಲೆಮರೆಯ ಹೀರೋ
ಯಾವನೋ ಪೆದ್ದ ಅಧಿಕಾರಿಯು ಎಸ್.ಕೆ. ಶ್ರೀವಾಸ್ತವ ವಿರುದ್ಧ ಕ್ರಮ ಕೈಗೊಳ್ಳಬೇಕೆಂಬ ಶಿಫಾರಸ್ಸನ್ನು ದಾಖಲಿಸಿದ. ಅದನ್ನು ದಾಖಲೆ ಮಾಡಿದರೆ ಕ್ರಮ ಕೈಗೊಳ್ಳಲು ಸಾಧ್ಯವಾಗುವುದಿಲ್ಲ ಎಂಬುದು ಆತನಿಗೆ ಕೂಡಲೆ ತಿಳಿಯಿತು. ಆದ್ದರಿಂದ ಆ ಕಡತವನ್ನು ಬಚ್ಚಿಟ್ಟು ಅಥವಾ ನಾಶಮಾಡಿ, ಹೊಸ ಕಡತವನ್ನು ಸೃಷ್ಟಿಸಿ, ಶ್ರೀವಾಸ್ತವ ವಿರುದ್ಧ ಕ್ರಮಕ್ಕೆ ಶಿಫಾರಸು ಮಾಡಿದರು. ಆದರೆ ಶ್ರೀವಾಸ್ತವ ಗಟ್ಟಿಪಿಂಡ; ಯಾವುದಕ್ಕೂ ಜಗ್ಗದ ಆತ ಸೇಡು ತೀರಿಸುವುದಕ್ಕೆ ಹೆಸರಾದ ಸಚಿವ ಚಿದಂಬರಂ ವಿರುದ್ಧವೇ ಜಗಳಕ್ಕೆ ನಿಂತರು. ಎನ್ಡಿಟಿವಿ ತೆರಿಗೆಯ ಲೆಕ್ಕಾಚಾರ ಮಾಡಿದ್ದ ಅಧಿಕಾರಿ (ಸುಮನಾ ಸೇನ್) ಚಾನೆಲ್ ಜೊತೆ ಶಾಮೀಲಾಗಿದ್ದಾರೆ; ಆಕೆಯ ಪತಿ (ಅಭಿಸಾರ್ ಶರ್ಮ) ೨೦೦೩-೦೭ರ ಅವಧಿಯಲ್ಲಿ ಎನ್ಡಿಟಿವಿಯಲ್ಲಿ ಪತ್ರಕರ್ತ ಆಗಿದ್ದರು. ದಂಪತಿಯನ್ನು ಕಂಪೆನಿ ಚೆನ್ನಾಗಿ ನೋಡಿಕೊಂಡಿದೆ; ಅದ್ದೂರಿಯ ಪ್ರವಾಸ ಎಲ್ಲ ಮಾಡಿಸಿತ್ತು – ಎಂಬ ವಾಸ್ತವ ಶ್ರೀವಾಸ್ತವರಿಗೆ ತಿಳಿಯಿತು. ಆಕೆ ಮಾಡಿದ ಸಮೀಕ್ಷೆಯನ್ನೇ ಆತ ಸಮೀಕ್ಷೆಗೆ ಗುರಿಪಡಿಸಿ ಕ್ರಮಕ್ಕಾಗಿ ಸಿಬಿಐಗೆ ಒಪ್ಪಿಸಿದರು. ಕಂಪೆನಿಯಿಂದ ಭಾರೀ ಪ್ರಮಾಣದ ತೆರಿಗೆ ವಂಚನೆ ನಡೆದಿದ್ದನ್ನು ಪತ್ತೆ ಮಾಡಿದರು.
ಆರು ವರ್ಷಗಳಲ್ಲಿ ಸುಮಾರು ೩೦೦ ಕೋಟಿ ರೂ. ತೆರಿಗೆ ವಂಚನೆ ನಡೆದಿದ್ದು ಬೆಳಕಿಗೆ ಬಂತು. ಮಾರ್ಚ್ ೭, ೨೦೦೭ರಂದು ಶ್ರೀವಾಸ್ತವ ತೆರಿಗೆ ವಂಚನೆ ಮುಂದಿಟ್ಟು ಸಿಸಿಐಟಿಗೆ ಕಳುಹಿಸಿದರು; ಸಿಸಿಐಟಿ ಅದನ್ನು ಸಿಐಟಿಗೆ ಕಳುಹಿಸಿದ್ದು ಸಿಐಟಿ ಕಡೆಯಿಂದ ಮಾರ್ಚ್ ೧೩ರಂದು ನೋಟೀಸು ನೀಡಲಾಯಿತು; ತಪ್ಪು ಸಮೀಕ್ಷೆ ಮೂಲಕ ಕಂಪೆನಿಗೆ ಕಾನೂನುಬಾಹಿರ ಲಾಭ ಮಾಡಿದ್ದನ್ನು ವಜಾ ಮಾಡಲಾಯಿತು; ಮರುದಿನ ಮಾರ್ಚ್ ೩೦ರಂದು ಹಣಕಾಸು ಸಚಿವ ಚಿದಂಬರಂ ಸ್ವತಃ ಕಾರ್ಯಾಚರಣೆಗಿಳಿದು, ಶ್ರೀವಾಸ್ತವ ಅವರನ್ನು ಅಮಾನತುಗೊಳಿಸಿದರು. ದೊಡ್ಡ ತೆರಿಗೆ ವಂಚನೆಯನ್ನು ಪತ್ತೆಮಾಡಿ ಸರಿಮಾಡಿದ್ದಕ್ಕೆ ಬಹುಮಾನ ನೀಡಿ ಪುರಸ್ಕರಿಸುವ ಬದಲು ಅಮಾನತಿನ ಶಿಕ್ಷೆ! ಅಷ್ಟೇ ಅಲ್ಲ; ಮುಂದಿನ ಕೆಲವು ವರ್ಷ ಎಸ್.ಕೆ. ಶ್ರೀವಾಸ್ತವ ತುಂಬ ಕಿರುಕುಳಗಳನ್ನು ಅನುಭವಿಸಬೇಕಾಯಿತು. ಹಲವು ದೋಷಾರೋಪ ಪಟ್ಟಿಗಳು, ಅಮಾನತುಗಳು, ವರ್ಗಾವಣೆಗಳು, ಅದು ಸಾಲದೆಂಬಂತೆ ಲೈಂಗಿಕ ಕಿರುಕುಳದ ಸುಳ್ಳು ಆರೋಪ. ಅಂತಹ ಆರೋಪ ಮಾಡಿದವರು ಚಿದಂಬರಂ ಕೃಪಾಶ್ರಯದಲ್ಲಿದ್ದ ಮಹಿಳಾ ತೆರಿಗೆ ಅಧಿಕಾರಿಗಳೆಂದು ಗುರುತಿಸಲಾಗಿದೆ. ಶ್ರೀವಾಸ್ತವ ಅವರು ಮಾನಸಿಕವಾಗಿ ಸರಿಯಿಲ್ಲ ಎಂದು ಘೋಷಿಸುವ ಪ್ರಯತ್ನವೂ ನಡೆಯಿತು. ಶ್ರೀವಾಸ್ತವ ತನ್ನನ್ನು ಆರ್ಎಸ್ಎಸ್ ಕಾರ್ಯಕರ್ತನೆಂದು ಹೇಳಿಕೊಂಡಿದ್ದಾರೆ.
ಇವೆಲ್ಲದರ ವಿರುದ್ಧ ಏಕಾಂಗಿ ಹೋರಾಟ ನಡೆಸುವುದಲ್ಲದೆ ಶ್ರೀವಾಸ್ತವ ಅವರಿಗೆ ಅನ್ಯಮಾರ್ಗವಿರಲಿಲ್ಲ. ೨೦೧೩ರಲ್ಲಿ ಶ್ರೀಶ್ರೀ ರವಿಶಂಕರ್ ಅವರ ಮೂಲಕ ಗುರುಮೂರ್ತಿ ಅವರಿಗೆ ಶ್ರೀವಾಸ್ತವರ ಭೇಟಿಯಾಯಿತು. ಸುಮಾರು ಆರು ವ? ಕಿರುಕುಳ, ಶಿಕ್ಷೆಗಳನ್ನು ಅನುಭವಿಸುತ್ತಲೇ ಶ್ರೀವಾಸ್ತವ ಎನ್ಡಿಟಿವಿ ವಿದೇಶದಲ್ಲಿ ಮಾಡಿದ ನೂರಾರು ಮಿಲಿಯ ಡಾಲರ್ ತೆರಿಗೆ ವಂಚನೆ ಪತ್ತೆಗೆ ನೆರವಾಗಿದ್ದರು. ಮೋದಿ ಸರ್ಕಾರ ಬರುವ ಮುನ್ನವೇ ತೆರಿಗೆ ಇಲಾಖೆ ಅದರಂತೆ ಕಂಪೆನಿಗೆ ತೆರಿಗೆ ವಿಧಿಸಲು ಆರಂಭಿಸಿತ್ತು. ಅಧಿಕಾರಿಗಳು ಎನ್ಡಿಟಿವಿಗೆ ೬೪೩.೫೪ ಕೋಟಿ ರೂ. ತೆರಿಗೆ ವಿಧಿಸಲು ಉದ್ದೇಶಿಸಿದ್ದರು; ಅದಕ್ಕೆ ಕಂಪೆನಿ ಪ್ರತಿಭಟಿಸಿದ ಕಾರಣ ಅದನ್ನು ೧೪೦೬.೨೫ ಕೋಟಿಗೆ ಏರಿಸಲಾಯಿತು.
ಜೇಠ್ಮಲಾನಿ ತರಾಟೆ
ಎಸ್. ಗುರುಮೂರ್ತಿ ಅವರು ನ್ಯಾಯವಾದಿ ರಾಂ ಜೇಠ್ಮಲಾನಿ ಅವರಿಗೆ ಪತ್ರ ಬರೆದು, ಎನ್ಡಿಟಿವಿಯ ಇಡೀ ಕೇಸನ್ನು ವಿವರಿಸಿದರು. ಅದರಂತೆ ಡಿಸೆಂಬರ್, ೨೦೧೩ರಲ್ಲಿ ಜೇಠ್ಮಲಾನಿ ಚಿದಂಬರಂ ಅವರಿಗೆ ಕಂಪೆನಿಯ ವಂಚನೆಗಳನ್ನು ವಿವರಿಸಿ ಎನ್ಡಿಟಿವಿಗೆ ರಕ್ಷಣೆ ಮತ್ತು ಶ್ರೀವಾಸ್ತವ ಅವರಿಗೆ ಶಿಕ್ಷೆ ನೀಡಿದ್ದರಲ್ಲಿ ನೀವು ದಂಡಸಂಹಿತೆ ಮತ್ತು ಭ್ರಷ್ಟಾಚಾರವಿರೋಧಿ ಶಾಸನಗಳ ಸೆಕ್ಷನ್ಗಳಿಗೆ ಒಳಪಡುವ ತಪ್ಪೆಸಗಿದ್ದೀರಿ ಎಂದು ಆರೋಪಿಸಿದರು. ಜೇಠ್ಮಲಾನಿ ಅವರಿಗೆ ಬರೆದ ಪತ್ರದ ಪ್ರತಿಯನ್ನು ಪ್ರಣಯ್ ರಾಯ್ ಅವರಿಗೂ ಕಳುಹಿಸಿದೆ. ಅವರು ನನ್ನನ್ನು ತನ್ನ ಓರ್ವ ಸಂಪಾದಕ ಸ್ನೇಹಿತನ ಮೂಲಕ ಸಂಪರ್ಕಿಸಿ ದಾಖಲೆ ಸಹಿತ ಉತ್ತರಿಸುವೆ ಎಂದು ತಿಳಿಸಿದರು. ಹೂಡಿಕೆಗೆ ಸಂಬಂಧಿಸಿ ಅವರು ನೀಡಿದ ’ದಾಖಲೆಗಳು’ ವಿಶ್ವಾಸಾರ್ಹ ಇರಲಿಲ್ಲ. ಅದನ್ನು ಸಕಾರಣವಾಗಿ ತಿರಸ್ಕರಿಸಿ ಜೇಠ್ಮಲಾನಿ ಅವರಿಗೆ ಬರೆದ ಪತ್ರಕ್ಕೆ ತಾನು ಬದ್ಧ ಎಂದು ತಿಳಿಸಿದೆ. ಅನಂತರ ಪ್ರಣಯ್ ರಾಯ್ ಅವರ ಸುದ್ದಿಯಿಲ್ಲ. ನನಗೆ ಸವಾಲು ಹಾಕಲಿಲ್ಲ; ನನ್ನ ವಿರುದ್ಧ ದಾವೆ ಹೂಡಲೂ ಇಲ್ಲ ಎಂದು ಗುರುಮೂರ್ತಿ ಚುಚ್ಚಿದ್ದಾರೆ.
ವಿದೇಶೀ ಹೂಡಿಕೆ
ಯುಪಿಎ ಸರ್ಕಾರದ ಉದ್ದಕ್ಕೂ ಎನ್ಡಿಟಿವಿ ತನ್ನ ಶೆಲ್ ಕಂಪೆನಿಗಳ (ವಿದೇಶೀ ಉಪಸಂಸ್ಥೆಗಳ) ಹೂಡಿಕೆದಾರರು ಯಾರೆಂಬುದನ್ನು ತಿಳಿಸಲೇ ಇಲ್ಲ. ಕಾನೂನಿನ ಪ್ರಕಾರ ವಿದೇಶೀ ಉಪಸಂಸ್ಥೆಗಳ ಬ್ಯಾಲೆನ್ಸ್ ಶೀಟನ್ನು ಲಗತ್ತಿಸಬೇಕು; ಅದನ್ನು ಮಾಡಲಿಲ್ಲ. ಬದಲಾಗಿ ಯುಪಿಎ ಸರ್ಕಾರದ ಕಂಪೆನಿ ಲಾ ಇಲಾಖೆಯಿಂದ ಬ್ಯಾಲೆನ್ಸ್ ಶೀಟ್ ಲಗತ್ತಿಸದಿರುವ ಬಗ್ಗೆ ಅನುಮತಿಯನ್ನು ಪಡೆಯಿತು. ಆ ಮೂಲಕ ಲಂಡನ್ ಉಪಸಂಸ್ಥೆ(Subsidiary)ಯಲ್ಲಿ ಮಾಡಿದ ೩೧ ಕೋಟಿ ಡಾಲರ್ ಹೂಡಿಕೆಯನ್ನು ಬ್ಯಾಲೆನ್ಸ್ ಶೀಟಿಗೆ ತರಲೇ ಇಲ್ಲ. ಲಂಡನ್ ಸಂಸ್ಥೆಯ ಕಛೇರಿ ವಿಳಾಸದಲ್ಲಿ ಸುಮಾರು ೩,೦೦೦ ಕಂಪೆನಿಗಳಿದ್ದವು. ಲಂಡನ್ ಉಪಸಂಸ್ಥೆಗೆ ಯಾವುದೇ ಋಣಭಾರ (liability) ಇಲ್ಲವೆಂದು ಅದನ್ನು ತಾವಾಗಿಯೇ ಮುಚ್ಚಿದರು. ಅದರ ೧೦ ಕೋಟಿ ಡಾಲರ್ ಬಾಂಡ್ ಋಣಭಾರ ಮತ್ತು ೨ ಕೋಟಿ ಡಾಲರ್ ಬಡ್ಡಿ ಹಣವನ್ನು ೭.೨೦ ಕೋಟಿ ಡಾಲರ್ ನೀಡಿ ಇತ್ಯರ್ಥಗೊಳಿಸಿದರು. ಹೂಡಿಕೆದಾರರು ಮತ್ತು ರೀಫೈನ್ಯಾನ್ಶಿಯರ್ಗಳ ಬಗ್ಗೆ ತೆರಿಗೆ ಇಲಾಖೆಗೆ ಎನ್ಡಿಟಿವಿ ಹೇಳಲೇ ಇಲ್ಲ. ಪರಿಣಾಮವಾಗಿ ವಿದೇಶೀ ಶೆಲ್ ಕಂಪೆನಿಗಳ ಮೂಲಕ ಎನ್ಡಿಟಿವಿಗೆ ಹಣ ಬಂದದ್ದರಿಂದ ೪೧.೭೦ ಕೋಟಿ ಡಾಲರ್ನ? ತೆರಿಗೆಯನ್ನು ವಂಚಿಸಲಾಯಿತು. ಕಪ್ಪುಹಣದ ವ್ಯವಹಾರ ಕೂಡ ನಡೆದಿರಬೇಕು ಎಂದು ಆರೋಪಿಸಲಾಗಿದೆ.
೨೦೦೬-೧೦ರ ಅವಧಿಯಲ್ಲಿ ಎನ್ಡಿಟಿವಿ ತನ್ನ ಪೂರ್ತಿ ಸ್ವಾಮ್ಯದ ಉಪಸಂಸ್ಥೆಗಳನ್ನು ಜಗತ್ತಿನ ಬೇರೆಬೇರೆ ಕಡೆ ಸ್ಥಾಪಿಸಿತ್ತು. ಭಾರತದಲ್ಲಿ ಎಂಟು, ಮಾರಿಷಸ್ನಲ್ಲಿ ಏಳು, ನೆದರ್ಲೆಂಡ್ಸ್ನಲ್ಲಿ ಎರಡು, ಲಂಡನ್, ಯುಎಇ ಮತ್ತು ಸ್ವೀಡನ್ಗಳಲ್ಲಿ ತಲಾ ಒಂದು ಉಪಸಂಸ್ಥೆಗಳನ್ನು ಸ್ಥಾಪಿಸಲಾಗಿತ್ತು. ಅವೆಲ್ಲ ’ಲೆಟರ್ಬಾಕ್ಸ್’ ಕಂಪೆನಿಗಳು; ಎನ್ಡಿಟಿವಿ ಲಿಮಿಟೆಡ್ನ ಹೆಸರಿನಿಂದಷ್ಟೇ ಅವಕ್ಕೆ ಬೆಲೆ. ನೇರವಾಗಿ ಅಥವಾ ಪರೋಕ್ಷವಾಗಿ ಅಲ್ಲಿ ಹೂಡಿಕೆ ನಡೆದಿದ್ದು, ತೆರಿಗೆ ತಪ್ಪಿಸುವುದೇ ಮುಖ್ಯ ಗುರಿ. ಮಂತ್ರಿ ಚಿದಂಬರಂ ಅವರಿಗೆ ಬರೆದ ಪತ್ರದಲ್ಲಿ ಜೇಠ್ಮಲಾನಿ ಬಹುದೊಡ್ಡ ಮೊತ್ತದ ಕಪ್ಪುಹಣವನ್ನು ನೀವು ಬಚ್ಚಿಡುತ್ತಿದ್ದೀರಿ. ಆ ಹಣ ನಿಮಗೆ ಮತ್ತು ನಿಮ್ಮ ಮಗ(ಕಾರ್ತಿ ಚಿದಂಬರಂ)ನಿಗೆ ಸೇರಿದ್ದು ಎಂದು ಕೂಡ ಆಪಾದಿಸಿದ್ದರು.
೨೦೧೧ರ ಸಿಬಿಐ ತನಿಖೆಯನ್ನು ಉಲ್ಲೇಖಿಸುವ ಅಫಿದವಿತ್ ಈ ಸಂಬಂಧ ಹಲವು ವ್ಯವಹಾರಗಳ ಬಗ್ಗೆ ಹೇಳುತ್ತದೆಂದು ’ಕಾರವಾನ್’ ಲೇಖನ ಗಮನ ಸೆಳೆದಿದೆ. ಅದರಲ್ಲಿ ಎನ್ಡಿಟಿವಿ (ಮೀಡಿಯಾ) ಮಾರಿ?ಸ್ ಲಿಮಿಟೆಡ್, ಎನ್ಡಿಟಿವಿ ಸ್ಟುಡಿಯೋ ಲಿಮಿಟೆಡ್ಗೆ ೩೮೭.೬೩ ಕೋಟಿ ರೂ.ಗಳನ್ನು ಕಳುಹಿಸಿದ್ದು ಒಂದು ವ್ಯವಹಾರ. ಅದರ ಒಂದು ಭಾಗವನ್ನು ೨೦೦೯ರಲ್ಲಿ ಭಾರತದ ಆರು ಹೊಸ ಉಪಸಂಸ್ಥೆಗಳಲ್ಲಿ ಹೂಡಲು ಬಳಸಲಾಯಿತು. ಆ ಹಣದ ದೊಡ್ಡ ಭಾಗ ಬೇರೆ ಹತ್ತಾರು ಕಂಪೆನಿಗಳಿಗೆ ಹೋಯಿತು. ಅದರಲ್ಲಿ ಕೆಲವನ್ನು ಎನ್ಡಿಟಿವಿ ಉಪಸಂಸ್ಥೆಗಳೆಂದು ಕರೆಯಲಾಗಿದೆ. ಎನ್ಡಿಟಿವಿ ಸ್ಟುಡಿಯೋಸ್ ಮತ್ತಿತರ ಆರು ಉಪಸಂಸ್ಥೆಗಳನ್ನು ಮುಂದೆ ಎನ್ಡಿಟಿವಿಯಲ್ಲಿ ವಿಲೀನಗೊಳಿಸಿದರು. ಹಾಗಿದ್ದರೆ ಆ ಕಂಪೆನಿಗಳನ್ನು ಸ್ಥಾಪಿಸಿದ್ದೇಕೆ? ಎನ್ಡಿಟಿವಿ ಮಾರಿಷಸ್ ಲಿ.ಗೆ ಹಣ ಬಂದದ್ದು ಎಲ್ಲಿಂದ? ಮಾರಿಷಸ್ನಲ್ಲಿ ಕಂಪೆನಿಗಳನ್ನು ಸ್ಥಾಪಿಸಿದ್ದೇಕೆ? – ಮುಂತಾದ ಪ್ರಶ್ನೆಗಳು ಮುಂದೆ ಬಂದಿವೆ.
ಲಂಡನ್ ಉಪಸಂಸ್ಥೆ ಎನ್ಡಿಟಿವಿ ನೆಟ್ವರ್ಕ್ಪಿಎಲ್ಸಿ ಹಣ ಸಂಗ್ರಹಿಸಿದ ಬಗ್ಗೆ ಇ.ಡಿ. ಅಫಿದವಿತ್ ಬಹಳಷ್ಟು ವಿವರವನ್ನು ನೀಡಿದೆ. ಅದು ಜನವರಿ ೪, ೨೦೦೭ರಂದು ವಿದೇಶೀ ಹೂಡಿಕೆ ಉತ್ತೇಜನ ಮಂಡಳಿ (ಎಫ್ಐಪಿಬಿ)ಗೆ ಒಂದು ಅರ್ಜಿ ಸಲ್ಲಿಸಿ ಭಾರತದಲ್ಲಿ ಸುದ್ದಿಯೇತರ ಕ್ಷೇತ್ರದಲ್ಲಿ ಹೂಡಿಕೆ ಮಾಡುವ ಬಗ್ಗೆ ಅನುಮತಿ ಕೇಳಿದೆ. ಅನುಮತಿ ಸಿಕ್ಕಿದ ಬಳಿಕ ವಿದೇಶೀ ಮೂಲದಿಂದ ನೂರಾರು ಮಿಲಿಯ ಡಾಲರ್ ಸಂಗ್ರಹಿಸಲಾಗಿದೆ; ಅದರಲ್ಲಿ ಅಮೆರಿಕದ ದೊಡ್ಡ ಮಾಧ್ಯಮ ಸಂಸ್ಥೆ ಎನ್ಬಿಸಿ ಯೂನಿವರ್ಸಲ್ (ಎನ್ ಬಿಸಿಯು)ನಿಂದ ಪಡೆದ ೧೫ ಕೋಟಿ ಡಾಲರ್ ಕೂಡ ಸೇರಿದೆ.
ಶೋಕಾಸ್ ನೋಟೀಸ್
ನವೆಂಬರ್ ೧೯, ೨೦೧೫ರಂದು ಜಾರಿ ನಿರ್ದೇಶನಾಲಯ (ಇ.ಡಿ.) ಎನ್ಡಿಟಿವಿ ಮೇಲಿನ ದಾಳಿಯನ್ನು ತೀವ್ರಗೊಳಿಸಿತು; ಮತ್ತು ಕಂಪೆನಿಗೆ ಶೋಕಾಸ್ ನೋಟೀಸು ನೀಡಿ ನೀವು ವಿದೇಶೀ ವಿನಿಮಯ ನಿರ್ವಹಣಾ ಕಾಯ್ದೆ(ಫೆಮಾ)ಯಲ್ಲಿ ತಪ್ಪುಗಳನ್ನು ಮಾಡಿದ್ದೀರಿ. ರಿಸರ್ವ್ಬ್ಯಾಂಕ್ ದೋ?ಪೂರಿತ ಎಂದು ಬಣ್ಣಿಸಿದ ವ್ಯವಹಾರಗಳನ್ನು ನೀವು ಎಸಗಿರುವುದನ್ನು ಗುರುತಿಸಲಾಗಿದೆ ಎಂದು ತಿಳಿಸಿತು. ೨೦೩೦ ಕೊಟಿ ರೂ.ಗೆ ಸಂಬಂಧಿಸಿ ಈ ತನಿಖೆ ಎಂದು ಕೂಡ ಹೇಳಿದ ನೋಟೀಸ್ ಫೇಮಾದ ಅಡಿಯಲ್ಲಿ ಇನ್ನಷ್ಟು ತನಿಖೆ ನಡೆಯಲಿದೆ ಎಂಬ ವಾಕ್ಯದಿಂದ ಕೊನೆಗೊಂಡಿದೆ.
ನವೆಂಬರ್ ೨೦೧೫ರಲ್ಲಿ ’ಕಾರವಾನ್’ ವರದಿಗಾರ ಪ್ರಣಯ್ ರಾಯ್ ದಂಪತಿಗೆ ೪೪ ಪ್ರಶ್ನೆಗಳಿದ್ದ ಇಮೈಲ್ ಕಳುಹಿಸಿ ಉತ್ತರವನ್ನು ಬಯಸಿದರು. ಅದಕ್ಕೆ ಉತ್ತರಿಸಿದ ಪ್ರಣಯ್ ದಕ್ಷಿಣದೆಹಲಿಯ ಎನ್ಡಿಟಿವಿ ಕಛೇರಿಗೆ ಬಂದು ಭೇಟಿ ಆಗುವಂತೆ ಕೋರಿದರು. ಭೇಟಿಯೇನೋ ನಡೆಯಿತು. ಆದರೆ ರಾಯ್ ಇಲ್ಲಿ ಮಾತನಾಡಿದ್ದು ಬರೆಯಬೇಡಿ ಎನ್ನುವ ಮನವಿಯನ್ನು ಮುಂದಿಟ್ಟರು; ಮತ್ತು ಪ್ರಶ್ನೆಗಳಿಗೆ ಇಮೈಲ್ನಲ್ಲಿ ಅಧಿಕೃತ ಉತ್ತರ ನೀಡುವುದಾಗಿ ತಿಳಿಸಿದರು. ಆದರೆ ಅಂತಹ ಇಮೈಲ್ ಬರಲೇ ಇಲ್ಲವಂತೆ!
ಒಟ್ಟಿನಲ್ಲಿ ಎನ್ಡಿಟಿವಿ ಬಗ್ಗೆ ನಡೆದ ತನಿಖೆಗಳ ಸಂಖ್ಯೆ ಮತ್ತು ಆಳ ಗಾಬರಿ ಹುಟ್ಟಿಸುವಂಥದ್ದು. ತನಿಖೆಗೆ ಒಳಗಾದ ಮೊತ್ತವೂ ಅಗಾಧ. ಇ.ಡಿ. ಶೋಕಾಸ್ ನೋಟೀಸ್ ಒಂದೇ ೨,೦೩೦ ಕೋಟಿ ರೂ.ಗಳನ್ನು ಒಳಗೊಂಡಿದೆ. ಇದು ಸಂಸ್ಥೆಯ ಅಂದಿನ ಮೌಲ್ಯದ ಮೂರು ಪಾಲಿಗೂ ಅಧಿಕ. ಇದೀಗ ಸಿಬಿಐ ನೇರ ದಾಳಿಯನ್ನೇ ಮಾಡಿದೆ. ಇದರಿಂದ ಹೊರಬರುವ ಸತ್ಯಾಂಶಗಳೇನು? ಅದರ ಪರಿಣಾಮ ಏನಾಗಬಹುದು? ಯಾರೆಲ್ಲ ಜೈಲು ಸೇರಬೇಕಾಗಬಹುದು? – ಹೀಗೆ ಅದೆಷ್ಟೋ ಪ್ರಶ್ನೆಗಳು ಉತ್ತರಕ್ಕಾಗಿ ಕಾದಿವೆ. ಈಗಾಗಲೇ ಸಾಕಷ್ಟು ತಡವಾಗಿದೆ; ಇನ್ನಾದರೂ ತಡವಾಗದಿರಲಿ.