ಭಗವಂತನು ಜೀವರನ್ನು ಉದ್ಧಾರಮಾಡುವುದಿರಲಿ; ಭಗವಂತನನ್ನೇ ಆಚಾರ್ಯರು ಉದ್ಧಾರಮಾಡಿದರಂತೆ! ಕೆಟ್ಟದೃಷ್ಟಿಗಳೆಂಬ ಹಳ್ಳದಲ್ಲಿ ಬಿದ್ದು ಅಸಹಾಯನಾಗಿ ಒದ್ದಾಡುತ್ತಿದ್ದ ಪರಬ್ರಹ್ಮನನ್ನು ರಾಮಾನುಜರು ಕೈಹಿಡಿದು ಮೇಲೆತ್ತಿ ಬದುಕಿಸಿದರಂತೆ!
ಲೇ: ಶಾಸ್ತ್ರಚೂಡಾಮಣಿ ವಿದ್ಯಾಲಂಕಾರ ಪ್ರೊ|| ಸಾ.ಕೃ. ರಾಮಚಂದ್ರರಾವ್
ಪ್ರಚಲಿತ ಶ್ರೀವೈ಼ಷ್ಣವಸಂಪ್ರದಾಯಕ್ಕೆ ರಾಮಾನುಜಾಚಾರ್ಯರೇ ಪ್ರವರ್ತಕರು; ಆ ಜನಾಂಗವನ್ನು ರೂಢಿಸಿದವರು ಅವರೇ. ಮತತ್ರಯಗಳಲ್ಲಿ ಒಂದಾದ ವಿಶಿ?ದ್ವೈತದರ್ಶನವನ್ನು ದೃಢಪಡಿಸಿದವರು ಅವರು. ಹನ್ನೊಂದನೇ ಶತಮಾನದಲ್ಲಿ ಆರಂಭವಾದ ಆ ದಿವ್ಯಾಜ್ಞೆ ಇಡೀ ದಕ್ಷಿಣಭಾರತದಲ್ಲೆಲ್ಲ ಧ್ವನಿಸಿತು, ಉತ್ತರ ದಿಗ್ಭಾಗಕ್ಕೂ ಅದರ ಪ್ರಭಾವ ವ್ಯಾಪಿಸಿತು.
ಪರಂಪರೆ
ರಾಮಾನುಜಾಚಾರ್ಯರಿಗೆ ತುಂಬ ಪೂರ್ವದಲ್ಲೆ ಭಾಗವತಧರ್ಮ ಈ ಪ್ರದೇಶದಲ್ಲಿ ಹರಡಿದ್ದಿತು. ಎಂಟು- ಒಂಬತ್ತನೆಯ ಶತಮಾನದ ಸುಮಾರಿಗೇ ತಮಿಳುನಾಡಿನ ಆಳ್ವಾರರೆಂಬ ವೈಷ್ಣವಸಂತರು ತಮ್ಮ ದಿವ್ಯಪ್ರಬಂಧಗಳನ್ನು ತಮಿಳುಭಾಷೆಯಲ್ಲಿ ರಚಿಸಿ ವಿಷ್ಣುಭಕ್ತಿಯನ್ನು ಊರ್ಜಿತಗೊಳಿಸಿದ್ದರು. ಇವರ ನಾಲ್ಕುಸಾವಿರ ಪದ್ಯ(ಪಾಶುರ) ಗಳನ್ನು ದ್ರಾವಿಡವೇದವೆಂದು ಪರಿಗಣಿಸುತ್ತಾರೆ. ಈ ಆಳ್ವಾರರಲ್ಲಿ ಪ್ರಮುಖರಾದ ನಮ್ಮಾಳ್ವಾರರು (ಶಠಕೋಪ, ಶಠಾರಿ, ಪರಾಂಕುಶಮುನಿ) ರಚಿಸಿದ ’ತಿರುವಾಯ್ಮೊಳಿ’ಗೆ ತಮಿಳವೇದವೆಂದೇ ಹೆಸರು.
ಕ್ರಿಸ್ತಾಬ್ದ ೮೨೩ರಲ್ಲಿ ಹುಟ್ಟಿದ ನಾಥಮುನಿಗಳು (ರಂಗನಾಥ ಮುನಿಗಳು) ಕುಂಭಕೋಣದಲ್ಲಿದ್ದಾಗ ಅಲ್ಲಿನ ದೇವಾಲಯದಲ್ಲಿ ಹಾಡುತ್ತಿದ್ದ (’ಆರಾವಮುದೇ’ ಎಂದು ಆರಂಭವಾಗುವ) ನಮ್ಮಾಳ್ವಾರರ ಪಾಶುರಗಳನ್ನು ಕೇಳಿ ಮುಗ್ಧರಾದರೆಂದೂ, ಅನಂತರ ಆಳ್ವಾರರುಗಳ ನಾಲ್ಕುಸಾವಿರ ಪ್ರಬಂಧಗಳನ್ನು ಸಂಗ್ರಹಿಸಿ ದಿವ್ಯಗಾನಕ್ಕೆ ಅಳವಡಿಸಿದರೆಂದೂ ಪ್ರತೀತಿಯಿದೆ. ಶ್ರೀವೈಷ್ಣವ ಸಿದ್ಧಾಂತವನ್ನು ನಿರೂಪಿಸಿದವರೂ ನಾಥಮುನಿಗಳೇ.
ಶ್ರೀವೈಷ್ಣವರ ಗುರುಪರಂಪರೆ ಲಕ್ಷ್ಮೀನಾಥ ಸಮಾರಂಭವಾದುದು, ನಾಥಯಾಮುನಮಧ್ಯಮವಾದುದು, ರಾಮಾನುಜಾಚಾರ್ಯಪರ್ಯಂತವಾದುದು. ಹೀಗೆ ನಾಥಮುನಿಗಳೂ ಯಾಮುನಾಚಾರ್ಯರೂ ಈ ಸಿದ್ಧಾಂತದ ವಿಕಾಸದಲ್ಲಿ ಪಟ್ಟಭದ್ರರಾದವರು; ಇವರ ದಾರಿಯನ್ನೇ ರಾಮಾನುಜಾಚಾರ್ಯರು ಹಿಡಿದರು ಎಂದರೆ ತಪ್ಪಾಗದು. ಆದರೆ ಅವರಿಗೆ ಯಾಮುನಾಚಾರ್ಯರ ಸಿದ್ಧಾಂತದ ಪರಿಚಯವಾಗುವ ಮೊದಲೇ ಶಾಸ್ತ್ರಪಾಂಡಿತ್ಯವಿದ್ದಿತು.
ದ್ರವಿಡವೈಷ್ಣವವಾಙ್ಮಯ, ಪಾಂಚರಾತ್ರ ಸಂಪ್ರದಾಯ, ಶ್ರುತಿಸ್ಮೃತೀತಿಹಾಸಪುರಾಣಗಳು – ಮೂರೂ ಮಾರ್ಗಗಳ ಸಮಾಹಾರವಾಗಿ ಶ್ರೀವೈಷ್ಣವಸಿದ್ಧಾಂತವು ಮೈದಳೆಯಿತು. ಇದನ್ನು ಶಾಸ್ತ್ರಗಳಿಂದ, ಯುಕ್ತಿಯಿಂದ, ವಿವರಣೆಗಳಿಂದ ನಿಲ್ಲಿಸಿದವರು ರಾಮಾನುಜಾಚಾರ್ಯರು. ಭಾಷ್ಯಕಾರರೆಂದು ಇವರ ಪ್ರಖ್ಯಾತಿ.
ಜನನ, ಬಾಲ್ಯ, ಶಿಕ್ಷಣ
ರಾಮಾನುಜಾಚಾರ್ಯರ ಜನ್ಮಸ್ಥಳ ಕಂಚಿಯ ಬಳಿ ಇರುವ ಶ್ರೀಪೆರುಂಬುದೂರ್ ಎಂಬ ಹಳ್ಳಿ. ಜನ್ಮಸಂವತ್ಸರ ಕ್ರಿಸ್ತಾಬ್ದ ೧೦೧೭. ಆಸೂರಿವಂಶದ ಕೇಶವಭಟ್ಟರು ಇವರ ತಂದೆ; ಆಚಾರ್ಯರ ಚಿಕ್ಕಂದಿನಲ್ಲೇ ತೀರಿಕೊಂಡರು. ರಾಮಾನುಜರ ಪೂರ್ವಾಶ್ರಮದ ಹೆಸರು ಲಕ್ಷ್ಮಣ ಅಥವಾ ಇಳೆಯಪೆರುಮಾಳ್. ಮಗುವಿನ ನಾಮಕರಣವನ್ನು ಯಾಮುನಾಚಾರ್ಯರೇ ಮಾಡಿದರಂತೆ. ಸೋದರಮಾವ ತಿರುಮಲೆ-ನಂಬಿ (ಶ್ರೀಶೈಲಪೂರ್ಣ) ಎಂಬವರ ಬಳಿ ಇವರ ಬಾಲ್ಯವಿದ್ಯಾಭ್ಯಾಸ ನಡೆಯಿತು. ತಾರುಣ್ಯದಲ್ಲಿ ವೇದಾಂತಪಾಠಕ್ಕೆಂದು ಕಂಚಿಗೆ ಬಂದು ಅಲ್ಲಿ ಯಾದವಪ್ರಕಾಶರೆಂಬ ಅದ್ವೈತಾಚಾರ್ಯರಲ್ಲಿ ಕೆಲವುಕಾಲ ಶಾಸ್ತ್ರಾಧ್ಯಯನ ಮಾಡಿದರು. ಯಾದವಪ್ರಕಾಶರದ್ದು ಬ್ರಹ್ಮವೊಂದೇ ಸತ್ಯ, ಉಳಿದುದೆಲ್ಲ ಅದರ ಕಾರ್ಯ ಎಂಬ ನಿಲವು. ಅವರ ಅದ್ವೈತವಾದದಲ್ಲಿ ಚಿತ್, ಅಚಿತ್, ಈಶ್ವರ ಎಂಬ ಮೂರು ತತ್ತ್ವಗಳ ನಡುವೆ ಅತ್ಯಂತ ಭೇದವಿರುವುದೇ ಸಂಸಾರವೆನಿಸಿಕೊಳ್ಳುತ್ತದೆ; ಈ ಭ್ರಾಂತಿಯು ಮರೆಯಾಗುವುದೇ ಮುಕ್ತಿ. ಯಾದವಪ್ರಕಾಶರ ನಿಲವು ರಾಮಾನುಜರಿಗೆ ಪರ್ಯಾಪ್ತವೆಂದು ತೋರಲಿಲ್ಲ. ಗುರು- ಶಿಷ್ಯರ ನಡುವೆ ವಿವಾದ ಒದಗಿದ ವಿವರವೂ ಇದೆ. ಅಂತೂ ಅನಂತರ ರಾಮಾನುಜರು ಕಂಚಿಯಲ್ಲೇ ಇರುತ್ತ ಸ್ವತಂತ್ರರಾಗಿದ್ದರು.
ಅವರ ಸೋದರಮಾವ ತಿರುಮಲೆ-ನಂಬಿಗೆ ಯಾಮುನಾಚಾರ್ಯರು ಗುರುಗಳು. ಮುದುಕರಾಗಿದ್ದ ಯಾಮುನರು ಶ್ರೀರಂಗದಲ್ಲಿರುತ್ತಿದ್ದಾಗ ನಂಬಿಯು ಅವರ ಆದೇಶದಂತೆ ತಿರುಮಲೆಯನ್ನು ಸೇರಿ ಅಲ್ಲಿ ವೆಂಕಟೇಶ್ವರನ ನಿತ್ಯಕೈಂಕರ್ಯ ನಡೆಸುತ್ತಿದ್ದರು. ತರುಣರಾದ ರಾಮಾನುಜರು ಅಲ್ಲಿಯೇ ಹೋಗಿ ಅವರಿಂದ ರಾಮಾಯಣದ ಅಂತರಾರ್ಥವನ್ನು ಅರಿತರು.
ಈ ವೇಳೆಗೇ ರಾಮಾನುಜರ ಪ್ರತಿಭೆ, ಶೀಲ, ಭಕ್ತಿಗಳ ಯಶಸ್ಸು ದೇಶದಲ್ಲೆಲ್ಲ ಹರಡಿದ್ದಿತು, ಯಾಮುನಾಚಾರ್ಯರನ್ನೂ ಮುಟ್ಟಿದ್ದಿತು. ತಮ್ಮನಂತರ ಶ್ರೀರಂಗದ ಶ್ರೀವೈಷ್ಣವ ಸಮುದಾಯವನ್ನು ನಿರ್ವಹಿಸಲು ಇವರೇ ಶಕ್ತರೆಂದು ಯಾಮುನರು ನಿಶ್ಚಯಿಸಿ, ಅವರನ್ನು ಕಂಚಿಯಿಂದ ಶ್ರೀರಂಗಕ್ಕೆ ಕರೆತರಲು ತಮ್ಮ ಶಿಷ್ಯ ಪೆರಿಯನಂಬಿಯನ್ನು ಕಳುಹಿಸಿದರು. ರಾಮಾನುಜರು ಒಪ್ಪಿ ಹೊರಟರು. ಆದರೆ ಶ್ರೀರಂಗದ ಗಡಿಯನ್ನು ಅವರು ಮುಟ್ಟಿದ ದಿನವೇ ಯಾಮುನರು ತೀರಿಕೊಂಡರೆಂಬ ಸುದ್ದಿ ಬಂದಿತು. ರಾಮಾನುಜರು ಹತಾಶರಾಗಿ ಕಂಚಿಗೆ ಹಿಂತಿರುಗಿದರು. ಆದರೆ ಪೆರಿಯನಂಬಿಯ ಪರಿಚಯವಾಗಿ ಅವರ ಬಳಿ ವೈ?ವಸಿದ್ಧಾಂತವನ್ನು ಕಲಿಯಲು ರಾಮಾನುಜರು ಮತ್ತೆ ಶ್ರೀರಂಗಕ್ಕೆ ಹೊರಟರು. ನಾಥಮುನಿಗಳೂ ಯಾಮುನರೂ ನಿರೂಪಿಸಿದ್ದ ವಿಶಿಷ್ಟಾದ್ವೈತವೇದಾಂತದ ಪ್ರಕ್ರಿಯೆಗಳು ರಾಮಾನುಜರಿಗೆ ಬಂದದ್ದು ಪೆರಿಯನಂಬಿಯಿಂದ.
ಸಂನ್ಯಾಸಸ್ವೀಕಾರ
ಪಾಠಮುಗಿಸಿ ನಂಬಿಯು ಶ್ರೀರಂಗಕ್ಕೆ ಹಿಂತಿರುಗಿದ ಮೇಲೆ ನಾಲ್ಕಾರು ತಿಂಗಳುಗಳನಂತರ ರಾಮಾನುಜರು ಸಂನ್ಯಾಸಾಶ್ರಮವನ್ನು ಸ್ವೀಕರಿಸಿ ಯತಿರಾಜರೆಂದು ಪ್ರಸಿದ್ಧರಾದರು. ಕಂಚಿಯಲ್ಲಿ ವರದರಾಜಸ್ವಾಮಿಯ ನಿತ್ಯಕೈಂಕರ್ಯವನ್ನು ಮಾಡಿಕೊಂಡಿದ್ದ ಕಾಂಚೀಪೂರ್ಣರೆಂಬ ಯಾಮುನರ ಇನ್ನೊಬ್ಬ ಶಿ?ರೇ ಇವರಿಗೆ ಪಂಚಸಂಸ್ಕಾರಗಳನ್ನು ನಡೆಸಿದರೆಂದು ಹೇಳುತ್ತಾರೆ. ರಾಮಾನುಜರಿಗೆ ಮದುವೆಯಾಗಿ ಗೃಹಸ್ಥರಾಗಿದ್ದರು. ಆದರೆ ಗೃಹಿಣಿಯ ಪ್ರತಿಕೂಲ ಸ್ವಭಾವದಿಂದ ಜುಗುಪ್ಸೆಗೊಂಡು ಒಮ್ಮೆ ಆಕೆ ತೌರುಮನೆಗೆ ಹೋಗಿದ್ದಾಗ ಇವರು ಸಂನ್ಯಾಸಿಯಾಗಿಬಿಟ್ಟರೆಂದು ಒಂದು ವಿವರವಿದೆ.
ಶ್ರೀರಂಗದಲ್ಲಿ ಯಾಮುನರನಂತರ ಶ್ರೀವೈ?ವರಿಗೆ ಸಮರ್ಥರಾದ ಆಚಾರ್ಯರಿಲ್ಲದೆ ತೊಂದರೆಯಾಗಲು ಹಿರಿಯರೆಲ್ಲ ಸೇರಿ ಯಾಮುನರ ಮಗ ತಿರುವರಂಗಪ್ಪೆರುಮಾಳಯ್ಯನನ್ನು ಕಂಚಿಗೆ ಕಳುಹಿಸಿ ರಾಮಾನುಜರನ್ನು ಶ್ರೀರಂಗಕ್ಕೆ ಕರೆಯಿಸಿಕೊಂಡರು. ಆಚಾರ್ಯರು ವೈಕಾಸಿ ಮಾಸದ (ಜ್ಯೇ?ಶುಕ್ಲ) ಪೌರ್ಣಮಿಯಂದು ಶ್ರೀರಂಗಕ್ಕೆ ಬರಲು ಅಲ್ಲಿನ ಶ್ರೀವೈಷ್ಣವರೆಲ್ಲ ಪೆರಿಯನಂಬಿಯನ್ನು ಮುಂದೆಮಾಡಿಕೊಂಡು ಬಂದು ಅವರನ್ನು ಮರ್ಯಾದೆಯಿಂದ ಎದುರುಗೊಂಡು ತಮ್ಮ ಸಮುದಾಯದ ನಾಯಕರಾಗುವಂತೆ ಬೇಡಿಕೊಂಡರು. ರಾಮಾನುಜರಿಗೂ ಭಗವಂತನಿಂದಲೇ ’ಅತ್ರೈವ ಶ್ರೀರಂಗೇ ಸುಖಮಾಸ್ವ’ ಎಂದು ಆಜ್ಞೆಯಾಯಿತಂತೆ. ಅಲ್ಲಿಂದ ಮುಂದೆ ಅರವತ್ತು ವರ್ಷಗಳು ಅವರು ಶ್ರೀರಂಗದಲ್ಲಿಯೇ ಇದ್ದರು.
ಬಹುವರ್ಷಗಳು ಇವರು ತಾವೇ ಶ್ರೀರಂಗನಾಥದೇವಾಲಯದ ನಿರ್ವಾಹಕರಾಗಿದ್ದುಕೊಂಡು ಅಲ್ಲಿನ ಪೂಜಾವ್ಯವಸ್ಥೆಗಳನ್ನು ಸರಿಪಡಿಸಿದರು.
ಕ್ರಿಸ್ತಾಬ್ಧ ೧೦೭೪ರ ಸುಮಾರಿಗೆ ಆ ಪ್ರದೇಶದ ಪ್ರಭುವಾಗಿದ್ದ ರಾಜರಾಜೇಂದ್ರಕುಲೋತ್ತುಂಗ (ಕ್ರಿಮಿಕಂಠ) ಚೋಳನು ಶೈವಪಕ್ಷಪಾತಿಯಾಗಿ ವೈ?ವರನ್ನು ನಿರ್ಮೂಲಮಾಡಲು ಹವಣಿಸಿದನಂತೆ. ಈ ಜನರ ಕೇಂದ್ರವಾಗಿದ್ದ ಶ್ರೀರಂಗವನ್ನು ಸದೆಬಡೆದು ಶ್ರೀರಂಗನಾಥನ ವಿಗ್ರಹವನ್ನು ಒಡೆದು, ಆಚಾರ್ಯರಾದ ರಾಮಾನುಜರನ್ನು ಸೆರೆಹಿಡಿದು ತರಲು ಈತನು ಬಲವಾದ ಸೇನೆಯೊಂದನ್ನು ಕಳುಹಿಸಿದ್ದನಂತೆ. ಆಗ ರಾಮಾನುಜರು ಗೃಹಸ್ಥನಂತೆ ವೇ?ಮರೆಸಿಕೊಂಡು ತಮ್ಮ ಶಿಷ್ಯ ಮುದಲಿಯಾಂಡಾನ್ನೊಂದಿಗೆ ಚೋಳಮಂಡಲದಿಂದ ಮೇಲುನಾಡಿಗೆ, ಎಂದರೆ ಮೈಸೂರಿಗೆ, ಓಡಿಬಂದರೆಂದು ಕಥೆಯಿದೆ. ಶ್ರೀರಂಗದೇವಾಲಯವನ್ನು ರಕ್ಷಿಸಲು ನಿಂತ ಪೆರಿಯನಂಬಿ ಮತ್ತು ಕೂರತ್ತಾಳ್ವಾನ್ ಇಬ್ಬರನ್ನೂ ಚೋಳರಾಜನು ಹಿಡಿದು ಹಿಂಸಿಸಿ ಕೊಂದನಂತೆ.
ಮೈಸೂರುಸೀಮೆಗೆ ವಲಸೆ
ಮೈಸೂರುಸೀಮೆಯಲ್ಲಿ ಆಚಾರ್ಯರು ಸಾಲಿಗ್ರಾಮ, ತೊಂಡನೂರು ಮಾರ್ಗವಾಗಿ ಮೇಲುಕೋಟೆ (ತಿರುನಾರಾಯಣಪುರ, ಯದುಗಿರಿ)ಗೆ ಬಂದು ಇಲ್ಲಿ ಚೆಲುವರಾಯಸ್ವಾಮಿಯ ಪ್ರತಿಷ್ಠೆ, ದೇವಾಲಯದ ಜೀರ್ಣೋದ್ಧಾರಗಳನ್ನು ಮಾಡಿದರೆಂದು ಪ್ರತೀತಿ. ಈ ನಾಡಿನ ದೊರೆಯಾಗಿದ್ದ ಹೊಯ್ಸಳ ಬಿಟ್ಟಿದೇವನು ಮೊದಲಿಗೆ ಜೈನಧರ್ಮದವನೆಂದೂ, ರಾಮಾನುಜಾಚಾರ್ಯರ ಪ್ರಭಾವದಿಂದ ಶ್ರೀವೈಷ್ಣವದೀಕ್ಷೆ ತಳೆದು ವಿಷ್ಣುವರ್ಧನನೆಂಬ ಹೆಸರಿನಿಂದ ಬೇಲೂರು ಮುಂತಾದೆಡೆ ವಿಷ್ಣುಮಂದಿರಗಳನ್ನು ಕಟ್ಟಿಸಿದನೆಂದೂ ಕಥೆಯಿದೆ. ಆದರೆ ಮೈಸೂರು ಸೀಮೆಯಲ್ಲಿ ರಾಮಾನುಜರು ಪ್ರವಾಸಮಾಡಿದರೆಂಬುದಕ್ಕಾಗಲಿ ಬಿಟ್ಟಿದೇವನ ಮತಪರಿವರ್ತನೆಗೆ ಅವರು ಕಾರಣರೆಂಬುದಕ್ಕಾಗಲಿ ಸ್ಪಷ್ಟವಾದ, ಸಮರ್ಪಕವಾದ ಐತಿಹಾಸಿಕ ಆಧಾರಗಳಿಲ್ಲ. ದೃಢವಾದ ಪ್ರತೀತಿಯೇನೋ ಹನ್ನೆರಡು ವರ್ಷಕಾಲ ಇವರು ಮೇಲುಕೋಟೆಯ ಪರಿಸರದಲ್ಲೆಲ್ಲ ಶ್ರೀವೈಷ್ಣವಧರ್ಮದ ಪ್ರಚಾರ ಮಾಡಿದರೆಂದು ಹೇಳುತ್ತದೆ. ಮೇಲುಕೋಟೆಯ ದೇವಾಲಯದ ಪೂಜಾವ್ಯವಸ್ಥೆಯನ್ನೂ ಮಾಡಿದರಂತೆ.
ಚೋಳಮಂಡಲದಿಂದ ಮೈಸೂರು ಸೀಮೆಗೆ ರಾಮಾನುಜರು ಬಂದ ವರ್ಷ ಕ್ರಿಸ್ತಾಬ್ದ ೧೦೯೬ ಎಂದೂ, ಆಗ ಅವರಿಗೆ ಎಪ್ಪತೊಂಬತ್ತು ವರ್ಷಗಳೆಂದೂ, ಮೇಲುಕೋಟೆಯ ದೇವಾಲಯದ ಜೀರ್ಣೊದ್ಧಾರ ಮಾಡಿದುದು ೧೧೦೦ರಲ್ಲೆಂದೂ, ಚೋಳರಾಜನು ತೀರಿಕೊಂಡು ಆಚಾರ್ಯರು ಇಲ್ಲಿಂದ ಶ್ರೀರಂಗಕ್ಕೆ ಮರಳಿದುದು ೧೧೧೮ರಲ್ಲೆಂದೂ ಅಳ್ಕೊಂಡವಿಲ್ಲಿ ಗೋವಿಂದಾಚಾರ್ಯಸ್ವಾಮಿಗಳ ಎಣಿಕೆ. ಎಂದರೆ ಅವರು ಮೈಸೂರು ಸೀಮೆಯಲ್ಲಿದ್ದುದು ಒಟ್ಟು ಇಪ್ಪತ್ತೆರಡು ವ?ಗಳು; ಅವರು ಈ ದೇಶವನ್ನು ಬಿಟ್ಟಾಗ ಅವರ ವಯಸ್ಸು ನೂರೊಂದು ವರ್ಷಗಳು.
ತಿರುಮಲೆ ದೇವಾಲಯದ ಜೀರ್ಣೋದ್ಧಾರ
ಮೈಸೂರು ಸೀಮೆಯಿಂದ ಶ್ರೀರಂಗಕ್ಕೆ ಬರುವ ದಾರಿಯಲ್ಲಿ ತಿರುಮಲೆ ಬೆಟ್ಟದ ಮೇಲೆ ವೆಂಕಟೇಶ್ವರನ ಸನ್ನಿಧಿಯಲ್ಲಿ ಕೆಲವು ಕಾಲವಿದ್ದರು. ಜೀರ್ಣವಾಗಿದ್ದ ಆನಂದನಿಲಯ ವಿಮಾನವನ್ನು ಮತ್ತೆ ಕಟ್ಟಿಸಿದವರೂ ಇವರೇ ಎಂದು ವಿವರವಿದೆ.
ತಿರುಮಲೆಯ ದೇವಾಲಯಕ್ಕೆ ಇವರು ಸಲ್ಲಿಸಿದ ಸೇವೆಯ ಸ್ಮಾರಕವಾಗಿ ದೇವಾಲಯದ ವಿಮಾನಪ್ರದಕ್ಷಿಣೆಯ ಪಥದಲ್ಲಿ ದೇವರ ಎಡಭಾಗಕ್ಕೆ ರಾಮಾನುಜಸನ್ನಿಧಿಯೊಂದು ನಿಂತಿದೆ. ಆಚಾರ್ಯರು ತೀರಿಕೊಂಡ ತರುಣದಲ್ಲೇ ಇದನ್ನು ಪಿಳ್ಳೈ-ತಿರುಮಲೆ-ನಂಬಿ ಎಂಬವರು ಕಟ್ಟಿಸಿದರಂತೆ. ಈ ದೇವಾಲಯದ ಆವರಣದಲ್ಲಿ ಉಳಿದ ಯಾವ ಆಚಾರ್ಯರಿಗೂ ಆಳ್ವಾರರಿಗೂ ಎಡೆಯಿಲ್ಲ. ಇದು ರಾಮಾನುಜರ ಅದ್ಭುತವಾದ ಪ್ರಭಾವವನ್ನು ತೋರಿಸುತ್ತದೆ.
ತಿರುಮಲೆಯಿಂದ ಹೊರಟು ಆಚಾರ್ಯರು ಆಗ ನಿರಾತಂಕವಾಗಿದ್ದ ಶ್ರೀರಂಗಕ್ಕೆ ಬಂದು ಅಲ್ಲಿ ತಮ್ಮ ಉಳಿದ ಬಾಳನ್ನು ಶಿ?ಸಂಗ್ರಹ, ದರ್ಶನಪ್ರಸಾರ, ಮತೋದ್ಧರಣ ಕಾರ್ಯಗಳಲ್ಲಿ ಕಳೆದು ಕ್ರಿಸ್ತಾಬ್ದ ೧೧೩೭ರಲ್ಲಿ ತೀರಿಕೊಂಡರು. ಆಗ ಅವರ ವಯಸ್ಸು ನೂರಿಪ್ಪತ್ತು ವರ್ಷಗಳು.
* * *
ವಿಶಿಷ್ಟಾದ್ವೈತದರ್ಶನ
ರಾಮಾನುಜರ ವಿದ್ಯಾಗುರುಗಳಾದ ಯಾದವಪ್ರಕಾಶರು ಬ್ರಹ್ಮ, ಚಿತ್, ಅಚಿತ್ ಎಂಬ ಮೂರು ತತ್ತ್ವಗಳನ್ನೂ, ಪರಿಣಾಮವಾದವನ್ನೂ ಒಪ್ಪಿಕೊಂಡಿದ್ದರು. ಇದು ಬೋಧಾಯನರಂಥ ಪ್ರಾಚೀನದಾರ್ಶನಿಕರು ನಿರೂಪಿಸಿದ್ದ ನಿಲವೆಂದು ತಿಳಿದುಬರುತ್ತದೆ. ನಾಥಮುನಿಗಳೂ, ಯಾಮುನಮುನಿಗಳೂ, ರಾಮಾನುಜ ಮುನಿಗಳೂ ಈ ದೃಷ್ಟಿಯನ್ನೇ ಹಿಡಿದು ’ವಿಶಿಷ್ಟಾದ್ವೈತ’ ಸಿದ್ಧಾಂತವನ್ನು ಪ್ರತಿಪಾದಿಸಿದರು. ’ವಿಶಿಷ್ಟಾದ್ವೈತ’ವೆಂಬ ಮಾತಿನಲ್ಲಿ ಬ್ರಹ್ಮನು ಅದ್ವೈತ(ಅದ್ವಿತೀಯ)ವಾದರೂ ಚಿದಚಿದ್ವಿಶಿಷ್ಯನೆಂದು ವಿವರವಿದೆ.
ಈ ಸಿದ್ಧಾಂತದ ಪ್ರಕಾರ ತತ್ತ್ವಗಳು ಮೂರು: ಈಶ್ವರ (ಬ್ರಹ್ಮ), ಚಿತ್ (ಜೀವ) ಮತ್ತು ಅಚಿತ್ (ಪ್ರಕೃತಿ). ಇವು ಮೂರೂ ಸತ್ಪದಾರ್ಥಗಳೇ ಆದರೂ ಅವುಗಳ ನಡುವೆ ಅಪೃಥಕ್ಸಿದ್ಧಸಂಬಂಧವಿದೆ. ಮೂರನ್ನೂ ಸೇರಿಸಿ ತತ್ತ್ವಸಮಾಹಾರವನ್ನು ಹೇಳಿ ಅವಿಕಾರವಾದ ತತ್ತ್ವವು ಬ್ರಹ್ಮವೊಂದೇ ಎಂದು ಹೇಳುವುದರಲ್ಲಿ ಅದ್ವೈತವಾದದ ಭಾಸವಿದೆ. ಈಶ್ವರನನ್ನು ಬಿಟ್ಟು ಚಿತ್ತಾಗಲಿ ಅಚಿತ್ತಾಗಲಿ ನಿಲ್ಲುವುದು ಸಾಧ್ಯವಿಲ್ಲ. ನಮ್ಮ ಆತ್ಮಕ್ಕೆ ಶರೀರವು ಹೇಗೋ ಹಾಗೆ ಈಶ್ವರನಿಗೆ ಚಿದಚಿತ್ತುಗಳು ಶರೀರ; ಅವನು ಶರೀರಿ. ಆದರೆ ಚಿದಚಿತ್ತುಗಳನ್ನು ಬಿಟ್ಟು ಈಶ್ವರನೂ ಇರುವಹಾಗಿಲ್ಲ. ಅವನು ಯಾವಾಗಲೂ ಚಿದಚಿದ್ವಿಶಿಷ್ಯನೇ. ಇದೇ ವಿಶೇಷ. ಈಶ್ವರನ ಅದ್ವೈತವು ಹೀಗೆ ವಿಶಿಷ್ಟವಾದ ಅದ್ವೈತ, ಚೇತನಾಚೇತನಗಳಿಂದ ವಿಶಿಷ್ಯನಾದ ಬ್ರಹ್ಮನನ್ನು ಹೇಳುವ ಸಿದ್ಧಾಂತವೇ ವಿಶಿಷ್ಟಾದ್ವೈತ.
ಬ್ರಹ್ಮನು ಏಕಮೇವಾದ್ವಿತೀಯನೆಂದು ಶ್ರುತಿಗಳು ಹೇಳುತ್ತವೆ. ವ್ಯವಹಾರದಲ್ಲಿ ನಾವು ’ಒಬ್ಬ ರಾಜನಿದ್ದಾನೆ’ ಎಂದು ಹೇಳುವುದಿಲ್ಲವೆ? ರಾಜನೊಬ್ಬನೇ ನಿಜ. ಆದರೆ ರಾಜನೆಂದೊಡನೆ ಅವನ ರಾಣಿ, ಸೇನಾಧಿಪತಿ, ಆಳುಕಾಳು, ಅಧಿಕಾರಿಗಳು, ಅರಮನೆ ಎಲ್ಲವೂ ಸೇರುತ್ತವೆ. ಒಂದು ದೃಷ್ಟಿಯಿಂದ ಏಕತ್ವವಾದರೆ ಮತ್ತೊಂದು ದೃಷ್ಟಿಯಿಂದ ನಾನಾತ್ವ. ಪರಿವಾರಗಳಿಂದ ವಿಶಿಷ್ಟನಾದ ರಾಜನಿರುವಂತೆಯೇ ಚಿದಚಿದ್ವಿಶಿ?ನಾದ ಬ್ರಹ್ಮ. ’ನಾನಾಭೂತಚಿದಚಿದ್ವಸ್ತು- ಪ್ರಕಾಶದಿಂದ ನಾನಾತ್ವ’ ಎಂದು ವಿಶಿಷ್ಟಾದ್ವೈತದ ಪ್ರಕ್ರಿಯೆ.
ಈಶ್ವರನು ಜಗತ್ತಿಗೆ ಉಪಾದಾನಕಾರಣನೂ ಹೌದು, ನಿಮಿತ್ತಕಾರಣನೂ ಹೌದು. ಮಡಕೆಗೆ ಮಣ್ಣು ಉಪಾದಾನ- ಕಾರಣ, ಕುಂಬಾರ ನಿಮಿತ್ತ-ಕಾರಣ. ಬ್ರಹ್ಮನೇ ಜಗತ್ತಾಗಿ ಪರಿಣಮಿಸುವುದರಿಂದ ಬ್ರಹ್ಮನು ಉಪಾದಾನ-ಕಾರಣ; ಅವನ ಇಚ್ಛೆಯು ಜಗತ್ತನ್ನು ಉಂಟುಮಾಡುವುದರಿಂದ ನಿಮಿತ್ತ-ಕಾರಣ. ಚಿದಚಿತ್ತುಗಳು ಸ್ಥೂಲವಾಗಿ ಪರಿಣಮಿಸಿದರೆ ಅದು ಕಾರ್ಯಾವಸ್ಥೆ ಎನಿಸಿಕೊಳ್ಳುತ್ತದೆ; ಅದೇ ಸೃಷ್ಟಿ. ಅವು ಸೂಕ್ಷ್ಮವಾಗಿ ಪರಿಣಮಿಸಿದರೆ ಅದು ಕಾರಣಾವಸ್ಥೆ; ಲಯ. ಸೃಷ್ಟಿಸ್ಥಿತಿಲಯಾತ್ಮಕವಾದ ಜಗತ್ತು ಅನಿತ್ಯವಾದರೂ ಮಿಥ್ಯೆಯೆನ್ನಲಾಗದು. ಅನವರತವೂ ಪರಿಣಾಮಶೀಲವಾದುದರಿಂದ ಅದನ್ನು ’ಪ್ರವಾಹತಃ ನಿತ್ಯ’ವೆಂದು ವ್ಯವಹರಿಸುತ್ತಾರೆ. ಕರ್ಮದಿಂದ ಉಂಟಾದ ಸಂಸಾರದ ವಶದಲ್ಲಿಯೇ ಬ್ರಹ್ಮನಿಂದ ಕೀಟದವರೆಗೂ ಇರುವ ಎಲ್ಲ ಪ್ರಾಣಿಗಳೂ ಇರುತ್ತವೆ. (ಆಬ್ರಹ್ಮಸ್ತಂಬಪರ್ಯಂತಾ ಜಗದಂತರ್ವ್ಯವಸ್ಥಿತಾಃ, ಪ್ರಾಣಿನಃ ಸರ್ವೇ ಕರ್ಮಜನಿತಸಂಸಾರವಶವರ್ತಿನಃ). ತ್ರಿಗುಣಾತ್ಮಕವಾದ, ಪರಿಣಾಮಶೀಲವಾದ ಜಗತ್ತು ಈಶ್ವರನ ’ಲೀಲಾವಿಭೂತಿ’ಯೆನಿಸಿಕೊಳ್ಳುತ್ತದೆ.
ಈಶ್ವರನಲ್ಲಿ ಈ ತತ್ತ್ವವು ಅವಿನಾಭಾವಸಂಬಂಧದಿಂದ ಸೇರಿರುತ್ತದೆ; ಲಕ್ಷ್ಮಿಯು ಈಶ್ವರತತ್ತ್ವದಲ್ಲಿ ಅಂತರ್ಗತಳು. ಈ ಲೋಕದಂಪತಿಗಳಿಗೆ ಚಿದಚಿತ್ತುಗಳು ದೇಹ (ಲಕ್ಷ್ಮ್ಯಾ ಸಹ ಹೃಷೀಕೇಶೋ ದೇವ್ಯಾ ಕಾರುಣ್ಯರೂಪಯಾ| ರಕ್ಷಕಃ ಸರ್ವ ಸಿದ್ಧಾಂತೇ ವೇದಾಂತೇ? ಚ ಗೀಯತೇ).
ಈಶ್ವರನ ಕಾರುಣಿಕತ್ವ
ಈಶ್ವರನಿಗೆ ಲಕ್ಷ್ಮೀಪತಿತ್ವ, ಜಗತ್ಕಾರಣತ್ವ, ಸತ್ತಾಸ್ಥಿತಿ ನಿಯಮನತ್ವ, ಸತ್ಯತ್ವ, ಕಲ್ಯಾಣಗುಣಾಕರತ್ವ, ಸಹಜ ಕಾರುಣಿಕತ್ವ, ವಾತ್ಸಲ್ಯ, ಸೌಶೀಲ್ಯ, ಸೌಲಭ್ಯ, ಜ್ಞಾನ, ಆನಂದ, ಅಮಲ ಈ ಮುಂತಾದ ಗುಣಗಳುಂಟು.
ಚಿದಚಿತ್ತುಗಳಿಗೆ ಅವನೇ ಆತ್ಮ(ಶರೀರಿ)ನಾಗಿರುವುದರಿಂದ ಈ ಕರ್ತವ್ಯನಿರ್ವಹಣಕ್ಕಾಗಿ ಧಾರ್ಯತ್ವ, ನಿಯಾಮಕತ್ವ, ಶೇಷಿತ್ವ ಈ ಗುಣಗಳೂ ಅವನಿಗುಂಟು. ಈಶ್ವರನಿಗೂ ಜೀವನಿಗೂ ಇರುವ ಸಂಬಂಧವನ್ನು ಒಂಬತ್ತು ಬಗೆಗಳಲ್ಲಿ ನಿರೂಪಿಸುತ್ತಾರೆ:
- ಈಶ್ವರನು ಶರೀರಿ, ಜೀವನು ಶರೀರ;
- ಈಶ್ವರನು ಶೇಷಿ, ಜೀವನು ಶೇಷ;
- ಈಶ್ವರನು ಆಧಾರ, ಜೀವನು ಆಧೇಯ;
- ಈಶ್ವರನು ರಕ್ಷಕ, ಜೀವನು ರಕ್ಷ್ಯ (ರಕ್ಷಿಸಲ್ಪಡುವವನು);
- ಈಶ್ವರನು ತಂದೆ, ಜೀವನು ಮಗ;
- ಈಶ್ವರನು ಗಂಡ, ಜೀವನು ಹೆಂಡತಿ;
- ಈಶ್ವರನು ಸ್ವಾಮಿ, ಜೀವನು ಭೃತ್ಯ;
- ಈಶ್ವರನು ಭೋಕ್ತೃ (ಭೋಗಿಸುವವನು), ಜೀವನು ಭೋಗ್ಯ (ಭೋಗಿಸಲ್ಪಡುವವನು);
- ಈಶ್ವರನು ಜ್ಞೇಯ (ತಿಳಿಯಲ್ಪಡಬೇಕಾದವನು), ಜೀವನು ಜ್ಞಾತೃ (ತಿಳಿಯುವವನು).
ಪಿತಾ ಚ ರಕ್ಷಕಃ ಶೇಷೀ ಭರ್ತಾ ಜ್ಞೇಯೋ ರಮಾಪತಿಃ |
ಸ್ವಾಮ್ಯಾಧಾರೋ ಮಹಾತ್ಮಾ ಚ
ಭೋಕ್ತಾ ಚಾಚಾರ್ಯಮತೋಚಿತಃ ||
ಮೇಲೆ ಹೇಳಿದ ಗುಣಗಳಲ್ಲದೆ ಈಶ್ವರನಿಗೆ ಪರ, ವ್ಯೂಹ, ವಿಭವ, ಹಾರ್ದ, ಅರ್ಚ ಎಂಬ ಪಂಚಮೂರ್ತಿತ್ವವೂ ಉಂಟು. ಪರವೆನ್ನುವುದು ಮೂಲವಿರಾಟಮೂರ್ತಿ (ವಿ?). ವ್ಯೂಹವೆಂದರೆ ಸೃಷ್ಟಿ-ಸ್ಥಿತಿ-ಲಯಗಳ ಹೊಣೆಯನ್ನು ಹೊತ್ತ ಮೂರ್ತಿ (ಪ್ರದ್ಯುಮ್ನ). ವಿಭವವೆನ್ನುವುದು ಜಗನ್ನಿಯಾಮಕಮೂರ್ತಿ (ಸಂಕ?ಣ). ಹಾರ್ದವೆಂದರೆ ಅಂತರ್ಯಾಮಿ (ಅನಿರುದ್ಧ). ಅರ್ಚಾಮೂರ್ತಿಯು ಉಪಾಸನೆಗೆ, ನಿದಿಧ್ಯಾಸನಕ್ಕೆ ಒದಗುವ ಮೂರ್ತಿ (ವಾಸುದೇವ). ಶ್ರೀವೈ?ವ ದೇವಾಲಯಗಳಲ್ಲಿ ಐದು ಮೂರ್ತಿಗಳನ್ನು ವ್ಯವಸ್ಥೆ ಪಡಿಸಿರುವುದನ್ನು ಕಾಣಬಹುದು. ಇದು ಪಂಚಮೂರ್ತಿತ್ವದ ಆಧಾರದ ಮೇಲೆಯೇ. ಮೂಲಬೇರ (ಧ್ರುವಮೂರ್ತಿ), ಸ್ನಪನಬೇರ, ಉತ್ಸವಬೇರ, ಕೌತುಕಬೇರ (ಭೋಗಮೂರ್ತಿ), ಬಲಿಬೇರಗಳು ಕ್ರಮವಾಗಿ ಪರ, ವ್ಯೂಹ, ವಿಭವ, ಅರ್ಚಾ, ಹಾರ್ದಗಳನ್ನು ಸಂಕೇತಿಸುತ್ತವೆ. ನಾವು ಪೂಜೆಮಾಡುವ ಶ್ರೀನಿವಾಸ (ವೆಂಕಟೇಶ್ವರ), ರಂಗನಾಥ ಮುಂತಾದುವೆಲ್ಲ ಅರ್ಚಾವತಾರಗಳು.
ಶೇಷ-ಶೇಷಿ
ಜೀವರು ಅನಂತ ಸಂಖ್ಯೆಯಲ್ಲಿದ್ದಾರೆ. ಭೇದರಹಿತವಾದ ಜ್ಞಾನದಿಂದ ಎಲ್ಲ ಜೀವರೂ ಏಕಾಕಾರವಾಗಿದ್ದರೂ ಅವರಲ್ಲಿ ಸಾಮ್ಯವಿಲ್ಲ. ಆದರೆ ಎಲ್ಲ ಜೀವರೂ ಭಗವಚ್ಛೇಷಿಗಳು, ಎಂದರೆ ಭಗವಂತನೇ ತಮ್ಮ ಶೇಷಿಯಾಗಿ ಉಳ್ಳವರು.
ಶೇಷಿಯೆಂದರೆ ಸ್ವಾಮಿಯಾದ ಭೋಕ್ತೃ. ಶೇಷವೆಂದರೆ ದಾಸಭೂತನಾಗಿರುವ ’ಭೋಗ್ಯವಸ್ತು’, ಜೀವರೆಲ್ಲರೂ ಶೇಷರು. ಅವರು ಭಗವದಾತ್ಮರು, ಎಂದರೆ ಭಗವಂತನೇ ತಮ್ಮ ಆತ್ಮವಾಗಿ ಉಳ್ಳವರು. ಈಶ್ವರನು ಶರೀರಿ, ಜೀವನು ಶರೀರ ಅಥವಾ ಪ್ರಕಾರ. ಶರೀರವೆಂದರೆ –
“ಯಸ್ಯ ಚೇತನಸ್ಯ ಯತ್ ದ್ರವ್ಯಂ ಸರ್ವಾತ್ಮನಾ ಸ್ವಾರ್ಥೇ ನಿಯಂತುಂ ಧಾರಯಿತುಂ ಚ ಶಕ್ಯಂ, ಯತ್ ಶೇಷತಾ-ಏಕಸ್ವರೂಪಂ ಚ, ತತ್ತಸ್ಯ ಶರೀರಂ”
– ಎಂದು ರಾಮಾನುಜರ ವಿವರಣೆ. ಚೇತನವು ತನ್ನ ಪ್ರಯೋಜನಕ್ಕಾಗಿ ಯಾವುದನ್ನು ಧರಿಸಿ, ನಿಯಮನ ಮಾಡಲು ಸಾಧ್ಯವೋ ಆ ದ್ರವ್ಯವೇ ಶರೀರ; ಯಾವುದು ಧರಿಸಿ ನಿಯಮನ ಮಾಡುವುದೋ ಅದು ಶರೀರಿ ಅಥವಾ ಆತ್ಮ. ಈಶ್ವರನು ತನ್ನ ಲೀಲಾಸಂಕಲ್ಪದಿಂದ ಎಲ್ಲ ಜೀವರನ್ನೂ ಧರಿಸಿ ನಿಯಮನ ಮಾಡುತ್ತಾನೆ. ಎಲ್ಲ ಜೀವರೂ ಈಶ್ವರನಿಗೆ ಪರತಂತ್ರರು; ಈಶ್ವರನೊಬ್ಬನೇ ಸ್ವತಂತ್ರ. ಹೀಗೆ ಭಗವಚ್ಛೇಷಿತ್ವ, ಭಗವದಾತ್ಮತ್ವ, ಪಾರತಂತ್ರ್ಯ ಇವು ಎಲ್ಲ ಜೀವರಿಗೂ ಸಮಾನವಾದ ಲಕ್ಷಣಗಳು.
* * *
ಪ್ರಪತ್ತಿ
ಕರ್ಮ, ಜ್ಞಾನ, ಭಕ್ತಿಗಳು ಮೇಲಿನ ಮೂರು ವರ್ಣದ ಜನರಿಗೆ ಮಾತ್ರ ವಿಹಿತವೆಂದು ನಂಬಿಕೆಯಿದೆ. ಇವುಗಳ ಅನು?ನಕ್ಕೆ ಸಂಸ್ಕೃತಿಯ ಸಹಕಾರ, ಶಾಸ್ತ್ರಗ್ರಂಥಗಳ ನೆರವು, ಕುಲ-ಶೀಲಗಳ ಹಿನ್ನೆಲೆ ಅಗತ್ಯವೆಂದು ಈ ನಂಬಿಕೆಯ ವಿವರ. ಆದರೆ ವಿಶಿಷ್ಟಾದ್ವೈತದಲ್ಲಿ ಈ ಮೂರನ್ನೂ ಮೀರಿ ’ಸರ್ವಾಧಿಕಾರವುಳ್ಳ’, ಎಂದರೆ ಎಲ್ಲರೂ ಅನುಸರಿಸಬಹುದಾದ, ಪ್ರಪತ್ತಿಯು ಮುಖ್ಯವಾದ ಉಪಾಯವೆಂದು ಹೇಳುತ್ತಾರೆ. ಪ್ರಪತ್ತಿ ಅಥವಾ ಪ್ರಪದನ ಎಂಬುದು ಭಕ್ತಿಗಿಂತಲೂ ಹೆಚ್ಚಿನದು. ಇದನ್ನೇ ಶರಣಾಗತಿಯೆಂದು ವ್ಯವಹರಿಸುತ್ತಾರೆ.
ಪ್ರಪತ್ತಿ, ಪ್ರಪದನ, ಭರನ್ಯಾಸ, ಶರಣಾಗತಿ, ಆತ್ಮನಿಕ್ಷೇಪ, ಆತ್ಮಸಮರ್ಪಣ – ಇವೆಲ್ಲ ಸುಮಾರಾಗಿ ಒಂದೇ ಅರ್ಥವನ್ನು ಹೇಳುವ ಮಾತುಗಳು. ಒಂದೊಂದು ಮಾತಿಗೂ ವಿಶೇ?ವಾದ ಅರ್ಥವೇನೋ ಉಂಟು; ಆದರೆ ಎಲ್ಲ ಮಾತುಗಳ ತಾತ್ಪರ್ಯ ಒಂದೇ. ಯಾವುದೂ ತನ್ನದಲ್ಲ, ಎಲ್ಲವೂ ಈಶ್ವರನಿಗೇ ಸೇರಿದ್ದು; ತನ್ನನ್ನು ಸಲಹುವ ಹೊಣೆ ಕೂಡ ತನ್ನದಲ್ಲ, ಈಶ್ವರನದು ಎನ್ನುವ ಕಲ್ಪನೆಯೇ ತಾತ್ಪರ್ಯ. ತನ್ನ ಮತ್ತು ತನ್ನವರ ಹೊರೆಯನ್ನೆಲ್ಲ (ಭಾರವನ್ನೆಲ್ಲ) ಈಶ್ವರನಲ್ಲಿ ಇಡುವುದು (ನ್ಯಾಸ) ಆತ್ಮನಿಕ್ಷೇಪವೆನಿಸಿಕೊಳ್ಳುತ್ತದೆ. (ಆತ್ಮ-ಆತ್ಮೀಯ-ಭರನ್ಯಾಸಃ ಹಿ ಆತ್ಮನಿಕ್ಷೇಪ ಉಚ್ಯತೇ). ಬೇರೆಯವರ ಮಾತಿರಲಿ, ತನ್ನ ರಕ್ಷಣೆಯ ವಿಷಯದಲ್ಲಿ ಕೂಡ ನಿರುತ್ಸುಕನಾಗಿರುವುದು ಇಲ್ಲಿನ ವಿಶೇಷ; ಲೋಕರಕ್ಷಕನಾದ ಈಶ್ವರನೇ ಈ ಸ್ವರೂಪ-ರಕ್ಷಾ-ಫಲ-ಭರಗಳನ್ನು ಹೊತ್ತಿದ್ದಾನೆ ಎಂಬ ಭಾವನೆ ಇದಕ್ಕೆ ಅಡಿಪಾಯ (ಸ್ವನಿರ್ಭರತ್ವ ಪರ್ಯಂತ ರಕ್ಷಕೈಕಾರ್ಥ ಭಾವನಮ್).
ರಹಸ್ಯತ್ರಯ
ಪ್ರಪತ್ತಿಯನ್ನು ಪೂರೈಸಲು ಮುಮುಕ್ಷುಗಳಿಗೆ ಆಚಾರ್ಯರು ರಹಸ್ಯತ್ರಯಗಳನ್ನು ನಿರ್ದೇಶಿಸಿದ್ದಾರೆ; ಮೂಲಮಂತ್ರ (ತಿರುಮಂತ್ರ), ದ್ವಯ ಮತ್ತು ಚರಮಶ್ಲೋಕ. ’ಓಂ ನಮೋ ನಾರಾಯಣಾಯ’ ಎನ್ನುವ ಅಷ್ಟಾಕ್ಷರೀಮಂತ್ರವು ಮೂಲಮಂತ್ರ. ಇದು ನಾರಾಯಣೋಪನಿಷತ್ತಿನಲ್ಲಿ ಬರುತ್ತದೆ. ’ಓಮಿತ್ಯೇಕಾಕ್ಷರಂ ಬ್ರಹ್ಮ; ನಮ ಇತಿ ದ್ವೇ; ನಾರಾಯಣಾಯೇತಿ ಪಂಚಾಕ್ಷರಾಣಿ; ಏತದ್ವೈ ನಾರಾಯಣಾಷ್ಟಾಕ್ಷರಪದಂ” ಎಲ್ಲವೂ ಈ ಅಷ್ಟಾಕ್ಷರದಲ್ಲಿ ಅಡಗಿದೆ ಎಂದು ಶ್ರದ್ಧೆ (ಸರ್ವಂ ಅಷ್ಟಾರಾಂತಃಸ್ಥಮ್).
ರಾಮಾನುಜರು ಈ ಮಂತ್ರದ ಉಪದೇಶವನ್ನು ಪಡೆಯಲು ತಿರುಕ್ಕೊಟ್ಟಿಯೂರ್-ನಂಬಿಯ ಮನೆಬಾಗಿಲಿಗೆ ಹದಿನೆಂಟು ಬಾರಿ ಅಲೆದರಂತೆ. ರಹಸ್ಯವೆಂದು ನಂಬಿಯು ಇದನ್ನು ಅವರಿಗೆ ಉಪದೇಶ ಮಾಡಿದಾಗ ರಾಮಾನುಜರು “ಇದನ್ನು ಯಾರಿಗಾದರೂ ಹೇಳಿದರೆ, ಹೇಳಿದವರಿಗೆ ಏನಾಗುತ್ತದೆ?” ಎಂದು ಕೇಳಿದರಂತೆ. ನಂಬಿಯು “ಒಡನೆಯೇ ಸಾಯುತ್ತಾರೆ” ಎನ್ನಲು ರಾಮಾನುಜರು “ಕೇಳಿದವರಿಗೆ ಏನಾಗುತ್ತದೆ?” ಎಂದು ಕೇಳಿದರಂತೆ. ನಂಬಿಯು “ಅವರಿಗೆ ಮುಕ್ತಿಯು ದೊರೆಯುತ್ತದೆ” ಎನ್ನಲು ಒಡನೆಯೇ ರಾಮಾನುಜರು ಊರಿನ ಗುಡಿಯ ಗೋಪುರವನ್ನೇರಿ ಗಟ್ಟಿಯಾಗಿ ಈ ಮಂತ್ರವನ್ನು ಕೂಗಿಕೊಂಡರಂತೆ. ಅ? ಅನುಕಂಪ ಅವರದ್ದು.
’ಶ್ರಿಮನ್ನಾರಾಯಣಚರಣೌ ಶರಣಂ ಪ್ರಪದ್ಯೇ’ ಎನ್ನುವುದು ದ್ವಯಾನುಸಂಧಾನ. ಚರಮಶ್ಲೋಕವೆಂಬುದು ಭಗವದ್ಗೀತೆಯಲ್ಲಿ ಅದರ ಸಾರಸರ್ವಸ್ವದಂತೆ ಬರುವ –
“ಸರ್ವಧರ್ಮಾನ್ ಪರಿತ್ಯಜ್ಯ ಮಾಂ ಏಕಂ ಶರಣಂ ವ್ರಜ |
ಅಹಂ ತ್ವಾ ಸರ್ವಪಾಪೇಭ್ಯಃ ಮೋಕ್ಷಯಿ?ಮಿ ಮಾ ಶುಚಃ||”
– ಎಂದು ಭಗವದಾಶ್ವಾಸನೆ. ಎಲ್ಲ ಧರ್ಮಗಳನ್ನೂ ಬಿಟ್ಟು ತನ್ನನ್ನೇ ಮೊರೆಹೊಕ್ಕರೆ ಅಂಥ ಜೀವಿಯನ್ನು ತಾನು ಪಾಪಗಳಿಂದ ಬಿಡಿಸುತ್ತೇನೆ ಎಂದು ಕೃಷ್ಣ ಹೇಳಿದ ಮಾತು ಇದು.
ಈ ರಹಸ್ಯತ್ರಯಗಳ ಅನುಷ್ಠನದಿಂದ ಜೀವನಿಗೆ ತ್ರಿಗುಣಾತ್ಮಕವಾದ ಮಾಯೆ ಹರಿದು, ಆತ ತನ್ನ ಜ್ಞಾನಾನಂದಗಳಿಗೆ ಈಶ್ವರನ ಲೀಲೆಯಿಂದ ಒದಗಿದ ತಿರೋಧಾನವನ್ನು ತೆಗೆದು, ತಾನು ಈಶ್ವರನ ಶೇ?ವೆಂಬ ಜ್ಞಾನವನ್ನು ಪಡೆದು, ಲಬ್ಧಾತ್ಮಕನಾಗಿ ಅವಿದ್ಯಾನಿವೃತ್ತಿಪೂರ್ವಕವಾದ ಬ್ರಹ್ಮಾನುಭವವನ್ನು ಹೊಂದುತ್ತಾನೆ.
“ಸರ್ವಧರ್ಮಾನ್ ಪರಿತ್ಯಜ್ಯ ಮಾಮೇಕಂ ಶರಣಂ ವ್ರಜ | ಅಹಂ ತ್ವಾ ಸರ್ವಪಾಪೇಭ್ಯೋ ಮೋಕ್ಷಯಿ?ಮಿ ಮಾ ಶುಚಃ||” – ಈ ಶ್ಲೋಕದಲ್ಲಿ ಭಗವಂತನನ್ನು ಹೇಳುವ ’ಮಾಮೇಕಂ’, ’ಅಹಂ’ ಎಂಬ ಮಾತುಗಳು ಪ್ರಾಪ್ಯವನ್ನು ಸೂಚಿಸುತ್ತವೆ; ’ವ್ರಜ’, ’ತ್ವಾಂ’, ’ಮಾ ಶುಚಃ’ ಎಂಬ ಮಾತುಗಳಲ್ಲಿ ಬರುವ ಮಧ್ಯಮಪುರುಷನಿರ್ವಚನವು ಪ್ರಾಪ್ತೃವನ್ನು ಹೇಳುತ್ತದೆ; ’ನನ್ನನ್ನೇ ಶರಣು ಹೋಗು’ ಎನ್ನುವಲ್ಲಿ ಪ್ರಾಪ್ತಿಯ ಉಪಾಯವು ವ್ಯಕ್ತವಾಗಿದೆ. ’ನನ್ನನ್ನೇ’ ಎಂದರೆ ಸಿದ್ಧೋಪಾಯ, ’ಶರಣುಹೋಗು’ ಎನ್ನುವುದು ಸಾಧ್ಯೋಪಾಯ. ’ಎಲ್ಲ ಪಾಪಗಳಿಂದಲೂ ಬಿಡಿಸುತ್ತೇನೆ’ (ಮೋಕ್ಷಯಿ?ಮಿ) ಎನ್ನುವಲ್ಲಿ ಫಲಪ್ರಾಪ್ತಿ ಕಾಣುತ್ತದೆ. ಪಾಪಗಳು ಇದನ್ನು ಅಡಗಿಸುತ್ತವೆಯೆನ್ನುವ ಸೂಚನೆ ’ಸರ್ವಪಾಪೇಭ್ಯಃ’ ಎನ್ನುವ ಮಾತಿನಲ್ಲಿ ಅಡಗಿದೆ; ಇದು ಪ್ರಾಪ್ತಿವಿರೋಧಿ.
* * *
ಶಾಸ್ತ್ರ ವಾಙ್ಮಯ
ರಾಮಾನುಜಾಚಾರ್ಯರ ದರ್ಶನದ ಪರಿಚಯವನ್ನು ಸಮಗ್ರವಾಗಿ ಪಡೆಯಬೇಕೆಂದರೆ ಅವರ ಬ್ರಹ್ಮಸೂತ್ರಭಾ? (’ಶ್ರೀಭಾ?’), ’ವೇದಾಂತಸಾರ,’ ’ವೇದಾಂತದೀಪ’ಗಳನ್ನು ನೋಡಬೇಕು. ಇವರ ಬ್ರಹ್ಮಸೂತ್ರಭಾ?ಕ್ಕೆ ಹದಿಮೂರನೆಯ ಶತಮಾನದಲ್ಲಿದ್ದ ಸುದರ್ಶನಸೂರಿ ಎನ್ನುವವರು ’ಶ್ರುತ ಪ್ರಕಾಶಿಕೆ’ಯೆಂಬ ವ್ಯಾಖ್ಯಾನವನ್ನು ಬರೆದಿದ್ದಾರೆ.
ಶ್ರೀಭಾಷ್ಯಕ್ಕೆ ’ತತ್ತ್ವಟೀಕೆ’ಯೆನ್ನುವ ವ್ಯಾಖ್ಯಾನ ಪ್ರಸಿದ್ಧವಾದುದು. ಇದನ್ನು ಬರೆದ ವೇಂಕಟನಾಥರು (ಜನನ ೧೨೬೧) ಅಥವಾ ವೇದಾಂತದೇಶಿಕರು ಶ್ರೀವೈ?ವಸಿದ್ಧಾಂತದಲ್ಲಿ ಎತ್ತಿದ ಹೆಸರು; ಆ ಸಂಪ್ರದಾಯದವರು ಇವರನ್ನು ನಿಗಮಾಂತಮಹಾದೇಶಿಕರೆಂದು ಗೌರವದಿಂದ ವ್ಯವಹರಿಸುತ್ತಾರೆ. ಇವರ ’ತತ್ತ್ವಮುಕ್ತಾಕಲಾಪ’, ’ನ್ಯಾಯಸಿದ್ಧಾಂಜನ’ ಮತ್ತು ’ಸೇಶ್ವರ ಮೀಮಾಂಸಾ’ – ಸಂಸ್ಕೃತಗ್ರಂಥಗಳೂ ರಹಸ್ಯತ್ರಯಸಾರವೆಂಬ ತಮಿಳುಗ್ರಂಥವೂ ರಾಮಾನುಜದರ್ಶನದ ಪ್ರಮೇಯಗಳನ್ನು ಸ್ಪಷ್ಟಪಡಿಸುತ್ತವೆ. ರಾಮಾನುಜಾಚಾರ್ಯರ ಭಗವದ್ಗೀತಾ- ಭಾಷ್ಯಕ್ಕೆ ಇವರು ’ತಾತ್ಪರ್ಯಚಂದ್ರಿಕಾ’ ಎಂಬ ವ್ಯಾಖ್ಯಾನವನ್ನು ಸಿದ್ಧಪಡಿಸಿದ್ದಾರೆ.
ದೇಶಿಕರು ವಡಗಲೆ (ಉತ್ತರಾದಿ) ಸಂಪ್ರದಾಯದವರಿಗೆ ಮಾರ್ಗದರ್ಶಿಗಳಾದರೆ ಲೋಕಾಚಾರ್ಯರು (೧೩೦೦ರ ಸುಮಾರು) ತೆಂಗೆಲೆ ಅಥವಾ ದಕ್ಷಿಣಾದಿ ಸಂಪ್ರದಾಯದಲ್ಲಿ ಮಾನ್ಯರು. ಇವರು ಬರೆದಿರುವ ’ತತ್ತ್ವತ್ರಯ’ ಪ್ರಸಿದ್ಧವಾದ ಗ್ರಂಥ.
ರಾಮಾನುಜಾಚಾರ್ಯರು ಪ್ರಸ್ಥಾನತ್ರಯದಲ್ಲಿ ಬ್ರಹ್ಮಸೂತ್ರ ಮತ್ತು ಭಗವದ್ಗೀತೆಗಳಿಗೆ ಭಾಷೆ?ಗಳನ್ನು ಬರೆದರು; ಉಪನಿಷತ್ತುಗಳಿಗೆ ಏನು ಕಾರಣದಿಂದಲೋ ಬರೆಯಲಿಲ್ಲ. ಹದಿನಾರನೆಯ ಶತಮಾನದಲ್ಲಿ ಜೀವಿಸಿದ್ದ ರಂಗರಾಮಾನುಜಮುನಿಗಳು ದಶೋಪನಿ?ತ್ತುಗಳ ಮೇಲೆ ವಿಶಿಷ್ಟಾದ್ವೈತಪರವಾದ ಭಾಷೆವನ್ನು ಸಿದ್ಧಪಡಿಸಿದ್ದಾರೆ. ಶ್ರೀಭಾಷ್ಯಕ್ಕೆ ವೇದಾಂತದೇಶಿಕರ ವ್ಯಾಖ್ಯೆಯಾದ ಶ್ರುತಪ್ರಕಾಶಿಕೆಗೆ ಇವರು ಭಾವಪ್ರಕಾಶಿಕೆಯೆನ್ನುವ ಹೆಸರಿನಿಂದ ವಿಸ್ತಾರವಾದ ವ್ಯಾಖ್ಯಾನವೊಂದನ್ನು ಬರೆದಿದ್ದಾರೆ.
ಶ್ರೀನಿವಾಸಸೂರಿಗಳ ’ಯತೀಂದ್ರಮತದೀಪಿಕಾ’ ಎಂಬ ಗ್ರಂಥವು ಈ ದರ್ಶನದ ಸಿಂಹಾವಲೋಕನವನ್ನು ಸರಳವಾದ ಶೈಲಿಯಲ್ಲಿ ಒದಗಿಸುತ್ತದೆ. ಇದು ಹದಿನಾರನೆಯ ಶತಮಾನಕ್ಕೆ ಮೊದಲೇ ಸಿದ್ಧವಾದ ಗ್ರಂಥವೆಂದು ಹೇಳುತ್ತಾರೆ.
* * *
ತಮ್ಮ ಕಾರ್ಯದಿಂದಲೂ ಗ್ರಂಥಗಳಿಂದಲೂ ಶ್ರೀವೈಷ್ಣವಪಂಥವನ್ನೂ ರಾಮಾನುಜದರ್ಶನವನ್ನೂ ಉದ್ಧಾರಮಾಡಿದ ವೇಂಕಟನಾಥಾಚಾರ್ಯರು (ವೇದಾಂತದೇಶಿಕರು) ರಾಮಾನುಜರ ವಿಚಾರವಾಗಿ ಸ್ವಾರಸ್ಯವಾದ ಒಂದು ರೂಪಕವನ್ನು ಕಟ್ಟಿದ್ದಾರೆ. ಭಗವಂತನು ಜೀವರನ್ನು ಉದ್ಧಾರಮಾಡುವುದಿರಲಿ; ಭಗವಂತನನ್ನೇ ಆಚಾರ್ಯರು ಉದ್ಧಾರಮಾಡಿದರಂತೆ! ಕೆಟ್ಟದೃಷ್ಟಿಗಳೆಂಬ ಹಳ್ಳದಲ್ಲಿ ಬಿದ್ದು ಅಸಹಾಯನಾಗಿ ಒದ್ದಾಡುತ್ತಿದ್ದ ಪರಬ್ರಹ್ಮನನ್ನು ರಾಮಾನುಜರು ಕೈಹಿಡಿದು ಮೇಲೆತ್ತಿ ಬದುಕಿಸಿದರಂತೆ:
ಕುದೃಷ್ಟಿಕುಹನಾಮುಖೇ ವಿನಿಪತತೋ ಪರಬ್ರಹ್ಮಣಃ |
ಕರಗ್ರಹವಿಚಕ್ಷಣೋ ಜಯತಿ ಲಕ್ಷ್ಮಣೋಯಂ ಮುನಿಃ ||
[ಪ್ರೊ|| ಸಾ.ಕೃ. ರಾಮಚಂದ್ರರಾವ್ ಅವರ ’ಶ್ರೀರಾಮಾನುಜ-ದರ್ಶನ’ ಗ್ರಂಥದಿಂದ ಕೃತಜ್ಞತಾಪೂರ್ವಕ ಉದ್ಧೃತ.
ಸೌಜನ್ಯ : Prof. S.K. Ramachandra Rao Memorial Trust, Bengaluru.]