ಕರ್ನಾಟಕ ಶಾಸ್ತ್ರೀಯಸಂಗೀತದ ಧ್ರುವತಾರೆ ಶ್ರೀ ತ್ಯಾಗರಾಜರ ೨೫೦ನೇ ಜನ್ಮವರ್ಷದ ನೆನಪು
ಶತಶತಮಾನಗಳಿಂದ ನಮ್ಮ ಪುಣ್ಯಭೂಮಿ ಭಾರತದೇಶದಲ್ಲಿ ಅನೇಕ ಸಾಧು-ಸಂತರು, ವಚನಕಾರರು, ದಾಸವರೇಣ್ಯರು ಜನಸಾಮಾನ್ಯರ ಜೀವನ ಸುಖಮಯವಾಗಲೆಂದೇ ಪ್ರಾದೇಶಿಕ ಭಾಷೆಗಳಲ್ಲಿ ಸರಳ, ಸುಂದರ ಸಾಹಿತ್ಯಗಳನ್ನು ರಚಿಸಿ ಭಕ್ತಿಯ ಪ್ರತಿಪಾದನೆ ಮಾಡುತ್ತ ಭವ್ಯ ಪರಂಪರೆಯನ್ನು ಬೆಳೆಸಿದ್ದಾರೆ. ಭಾವಾಭಿವ್ಯಕ್ತತೆಗೆ ಸಂಗೀತವು ಹುಟ್ಟಿನಿಂದ ಅಂತ್ಯದವರೆಗೂ ಬಳಸಲ್ಪಡುವ ಪರಿಣಾಮಕಾರಿಯಾದ ಮಾಧ್ಯಮವಾಗಿದೆ ಎಂಬುದು ಅನುಭವವೇದ್ಯವಾದದ್ದು. ವೇದೋಪನಿಷತ್ತುಗಳ ಸಾರವನ್ನು ಸರಳವಾಗಿ ತಮ್ಮ ಭಕ್ತಿಸಾಹಿತ್ಯದಲ್ಲಿ ಅಳವಡಿಸಿ ಜನಸಾಮಾನ್ಯರಿಗೆ ತಲಪಿಸುವುದರಲ್ಲಿ ಯಶಸ್ವಿಯಾದವರು, ಸಾಹಿತ್ಯ- ಸಂಗೀತಶಾಸ್ತ್ರಗಳೆರಡರಲ್ಲಿಯೂ ಪಾಂಡಿತ್ಯವಿರುವ ನಮ್ಮ ವಾಗ್ಗೇಯಕಾರರು. ಈ ನಿಟ್ಟಿನಲ್ಲಿ ಕರ್ನಾಟಕ ಶಾಸ್ತ್ರೀಯಸಂಗೀತ ಪಿತಾಮಹರೆನಿಸಿರುವ ಶ್ರೀ ಪುರಂದರದಾಸರಾದಿಯಾಗಿ ಅನೇಕ ದಾಸವರೇಣ್ಯರ, ಅಣ್ಣಮಾಚಾರ್ಯರ, ಭದ್ರಾಚಲ ರಾಮದಾಸರ ಕೊಡುಗೆ ಅಪಾರ ಮತ್ತು ಅಮೂಲ್ಯ.
ಕ್ರಿ.ಶ. ೧೮ನೇ ಶತಮಾನದ ಉತ್ತರಾರ್ಧದಲ್ಲಿ ದಕ್ಷಿಣಭಾರತದಲ್ಲಿ ಕರ್ನಾಟಕ ಶಾಸ್ತ್ರೀಯಸಂಗೀತ ಕ್ಷೇತ್ರದಲ್ಲಿ ಮೂರು ಧ್ರುವತಾರೆಗಳ ಅವತಾರವಾಯಿತು. ಈ ತ್ರಿಮೂರ್ತಿಗಳಾದ ಶ್ಯಾಮಶಾಸ್ತ್ರೀ, ತ್ಯಾಗರಾಜ ಮತ್ತು ಮುತ್ತುಸ್ವಾಮಿ ದೀಕ್ಷಿತರ ರಚನೆಗಳು ಹಳೆಯ ಬೇರಿನೊಂದಿಗೆ ಹೊಸ ಚಿಗುರಿನಂತೆ ಹೊರಹೊಮ್ಮಿದವು. ಶೈಲಿಗಳು ಭಿನ್ನವಾದರೂ ಪ್ರತಿಯೊಬ್ಬರ ರಚನೆಗಳು ರಾಗಗಳ ವಿರಾಟ್ ಸ್ವರೂಪದ ದರ್ಶನಕ್ಕೆ ಆದ್ಯತೆ ನೀಡಿ ಈಗಿನ ಪ್ರದರ್ಶನಕಲೆಯಾಗಿ ಪ್ರಬಲವಾಗಿ ಬೆಳೆಯುತ್ತಿರುವ ಕರ್ನಾಟಕಸಂಗೀತದ ಕೃತಿರತ್ನಗಳ ಭಂಡಾರವನ್ನು ಶ್ರೀಮಂತಗೊಳಿಸಿದವು.
ತ್ಯಾಗರಾಜರ (ಕ್ರಿ.ಶ. ೧೭೬೭-೧೮೪೭) ೨೫೦ನೇ ಜನ್ಮವರ್ಷದ ನೆನಪಿನಡಿ ಅವರ ಜೀವನ, ಸಾಧನೆ ಮತ್ತು ಕೊಡುಗೆಗಳ ಒಂದು ಪಕ್ಷಿನೋಟವಾಗಿದೆ ಈ ಲೇಖನ. ಅವರ ಜೀವನ ವಿವರಣೆಗಳು ನಿಖರವಾಗಿ ಲಭ್ಯವಿಲ್ಲದಿದ್ದರೂ ಅವರ ಶಿಷ್ಯರ ವತಿಯಿಂದ, ಅವರದೇ ರಚನೆಗಳ ಮೂಲಕ ಮತ್ತು ಹಲವು ಊಹಾಪೋಹಗಳಿಂದ ಸಂಗೀತಜ್ಞರು ಅವನ್ನು ದಾಖಲಿಸಿದ್ದಾರೆ.
ತಿರುವಾರೂರ್ ಎಂಬ ಶೈವಕ್ಷೇತ್ರದಲ್ಲಿ ಜನನವಾದವನಿಗೆ ಮೋಕ್ಷವು ಕಟ್ಟಿಟ್ಟದ್ದು ಎಂಬುದು ತಮಿಳಿನ ಒಂದು ನಾಣ್ಣುಡಿ. ಕಾಕತಾಳೀಯವಾಗಿ ಈ ಮೂವರೂ ಮಹಾ ನಾದೋಪಾಸಕರ ಜನನವು ಇಲ್ಲಿಯೇ ಆಗಿದ್ದುದೂ ಮೂವರೂ ವೈಣಿಕರಾಗಿದ್ದರೆಂಬುದೂ ಗಮನಾರ್ಹ. ನಮ್ಮ ಸಂಗೀತಶಾಸ್ತ್ರವು ಬೆಳೆದುನಿಂತಿರುವುದೇ ವೀಣಾವಾದ್ಯದ ಆಧಾರದ ಮೇಲೆ; ಹಾಗೂ ನಮ್ಮ ಸಂಗೀತದ ಅಂಶಗಳಲ್ಲಿ ಒಂದಾದ ಗಮಕದ (ಸ್ವರಕಂಪನ) ಪರಿಣಾಮಕಾರಿಯಾದ ಪ್ರತಿಪಾದನೆ ಈ ವಾದ್ಯದಿಂದ ಮಾತ್ರ ಸಾಧ್ಯವೆಂಬುದು ಪಂಡಿತರ ಮತ.
ವಿಳಂಬಗತಿಯಲ್ಲೇ ಹೆಚ್ಚಿರುವ ಮುತ್ತುಸ್ವಾಮಿ ದೀಕ್ಷಿತರ (ಕ್ರಿ.ಶ. ೧೭೭೬-೧೮೩೫) ರಚನೆಗಳು ಸಂಸ್ಕೃತ ಭಾಷೆಯಲ್ಲಿದ್ದು ರಾಗಗಳ ಸ್ವರೂಪವು ಒಮ್ಮೆಲೇ ಗೋಚರವಾಗುತ್ತದೆ. ಈ ಕೃತಿಗಳು ನಾನಾ ದೈವಗಳ ರೂಪ, ನಾಮ ಮತ್ತು ಅವುಗಳು ನೆಸಿರುವ ಸ್ಥಳದ ವಿವರಗಳನ್ನು ಒಳಗೊಂಡಿವೆ.
ಶ್ಯಾಮಶಾಸ್ತ್ರಿಗಳ (ಕ್ರಿ.ಶ. ೧೭೬೨-೧೮೨೭) ರಚನೆಗಳು ತಾಳಪ್ರಧಾನವಾಗಿ ದೇವಿಯ ಪರವಾಗಿದ್ದು ಅವಳ ಕರುಣಾಕಟಾಕ್ಷವನ್ನು ಕೋರುವಂತಹವಾಗಿವೆ.
ಇವರಿಬ್ಬರಿಗಿಂತ ಭಿನ್ನವಾದ ತ್ಯಾಗಯ್ಯನವರ ರಚನೆಗಳಲ್ಲಿ ರಾಮನ ಗುಣಗಾನಕ್ಕೇ ಸಿಂಹಪಾಲು. ಅವನನ್ನು ಪರಬ್ರಹ್ಮವಸ್ತುವಾಗಿ, ತಂದೆ, ತಾಯಿ, ಗುರು, ಬಂಧು, ಸಖನಾಗಿ ಕಂಡು ಅವನ ರೂಪ-ಲಾವಣ್ಯಗಳ ವರ್ಣನೆ, ಶೌರ್ಯ-ಪ್ರತಾಪಗಳ ಲೀಲಾವಿಲಾಸಗಳೇ ಅವರ ರಚನೆಗಳಿಗೆ ವಸ್ತುಗಳಾಗಿವೆ. ರಾಮನೊಂದಿಗೆ ಸಂವಾದಗಳನ್ನು ನಡೆಸಿ ಕೆಲವೊಮ್ಮೆ ಹೊಗಳುತ್ತ ಮಗದೊಮ್ಮೆ ಮೂದಲಿಸುತ್ತಾ ನವವಿಧ ಭಕ್ತಿಯ ಮೂಲಕ ಅವನನ್ನು ಕೊಂಡಾಡಿ ಅದರಿಂದ ಉಂಟಾದ ಸ್ವಾನುಭವದ ಆನಂದವನ್ನು ನಮಗೂ ಅನುಭವವಾಗುವಂತೆ ಉಪಕರಿಸಿದ್ದಾರೆ.
ಭದ್ರ ಅಡಿಪಾಯ
ತ್ಯಾಗರಾಜರ ಪಟ್ಟಶಿಷ್ಯರಾಗಿದ್ದ ವಾಲಾಜಾಪೇಟೆ ವೇಂಕಟರಮಣ ಭಾಗವತರ ಶಿಷ್ಯರಾಗಿದ್ದ ಕವಿ ವೇಂಕಟಸೂರಿಯವರು ಬರೆದಿಟ್ಟಿರುವ ಜಾತಕದ ಪ್ರಕಾರ ತ್ಯಾಗರಾಜರು ಸರ್ವಜಿತ್ ಸಂವತ್ಸರದ ಚೈತ್ರಮಾಸದ ಇಪ್ಪತ್ತೈದನೇ ದಿನ, ಅಂದರೆ ೪-೫- ೧೭೬೭ರಲ್ಲಿ ಜನಿಸಿದರೆಂದು ತಿಳಿದುಬರುತ್ತದೆ. ಕಟಕ ಲಗ್ನ, ಪುಷ್ಯನಕ್ಷತ್ರದಲ್ಲಿ ವೇದವಿದರೂ, ಪರಮ ದೈವಭಕ್ತರೂ ಮಹಾವಿದ್ವಾಂಸರೂ ಆಗಿದ್ದ ರಾಮಬ್ರಹ್ಮ ಮತ್ತು ಸ್ವಯಂ ಗಾಯಕಿಯೂ ಸಾಧ್ವೀಮಣಿಯೂ ಆದ ಸೀತಮ್ಮನವರ ಮೂರನೆಯ ಪುತ್ರರಾಗಿ ಜನಿಸಿದವರು ತ್ಯಾಗಬ್ರಹ್ಮರು. ಭಾರದ್ವಾಜ ಗೋತ್ರ ಮತ್ತು ಆಪಸ್ತಂಬ ಸೂತ್ರದವರಾಗಿದ್ದು ಮುಲಕುನಾಡು ಎಂಬ ಸ್ಮಾರ್ತ ಸಂಪ್ರದಾಯದ ಕಾಕರ್ಲ ಎಂಬ ವಂಶಕ್ಕೆ ಸೇರಿದವರಿವರು. ಇವರ ಪೂರ್ವಜರು ಆಂಧ್ರದಿಂದ ತಿರುವಾರೂರಿಗೆ ವಲಸೆ ಬಂದು ತಂಜಾವೂರಿನ ದೊರೆಯ ಅನುಗ್ರಹಕ್ಕೆ ಪಾತ್ರರಾದವರು. ತ್ಯಾಗಯ್ಯನವರ ತಾಯಿಯವರ ತಂದೆ ವೀಣಾ ಕಾಳಹಸ್ತಯ್ಯನವರು. ಹೀಗೆ ಸಂಗೀತ, ದೈವಭಕ್ತಿ, ಸಾತ್ತ್ವಿಕತೆ ಎಲ್ಲವೂ ತ್ಯಾಗರಾಜರಿಗೆ ವಂಶಪಾರಂಪರ್ಯವಾಗಿ ಬಂದು ಸೇರಿ ಅವರು ಭಾಗವತೋತ್ತಮರಾಗಲು ಒಂದು ಭದ್ರವಾದ ಅಡಿಪಾಯ ಸಿದ್ಧವಾಗಿತ್ತೆನ್ನಬಹುದು.
ಈ ಇಡೀ ಕುಟುಂಬವು ತಿರುವಾರೂರಿನಿಂದ ’ಪಂಚನದ’ ಕ್ಷೇತ್ರವೆಂದು ಹೆಸರಾದ ತಿರುವಯ್ಯಾರಿಗೆ ವಲಸೆ ಬಂದ ನಂತರ ಅಲ್ಲಿ ತ್ಯಾಗಯ್ಯನವರಿಗೆ ಸಂಸ್ಕೃತ, ವೇದವೇದಾಂತಗಳಲ್ಲಿ ಉನ್ನತ ಶಿಕ್ಷಣ ದೊರಕಿತು. ದಿನನಿತ್ಯ ರಾಮಾಯಣ, ಪೋತನ ಭಾಗವತಾದಿಗಳ ಪಾರಾಯಣ ಮಾಡುತ್ತಾ, ಪೂಜಾದಿ ವಿಧಾನಗಳಲ್ಲಿ ತಂದೆಯೊಂದಿಗೆ ಇವರು ತಮ್ಮನ್ನು ತಾವೇ ತೊಡಗಿಸಿಕೊಂಡದ್ದರಿಂದ ಶ್ರೀ ರಾಮನ ಸಗುಣೋಪಾಸನೆಯ ಮಾರ್ಗಗಳನ್ನು ಮೈಗೂಡಿಸಿಕೊಳ್ಳುವಂತಾಯಿತು. ಅತಿ ಚಿಕ್ಕ ವಯಸ್ಸಿನಲ್ಲೇ ತಾಯಿಯಿಂದ ಪುರಂದರರ ಮತ್ತು ಭದ್ರಾಚಲ ರಾಮದಾಸರ ರಚನೆಗಳನ್ನು ಕಲಿತು, ಪ್ರಭಾವಿತರಾಗಿ ತಾವೂ ರಚನಾಕ್ಷೇತ್ರಕ್ಕೆ ಪಾದಾರ್ಪಣ ಮಾಡಿ ಎಲ್ಲರ ಮೆಚ್ಚುಗೆಯನ್ನು ಪಡೆದರು.
ತಂಜಾವೂರಿನ ಆಸ್ಥಾನ ವಿದ್ವಾಂಸರಾಗಿದ್ದ ಸೋಂಟಿ ವೇಂಕಟರಮಣಯ್ಯನವರಲ್ಲಿ ಸಂಗೀತಶಿಕ್ಷಣವನ್ನು ಆರಂಭಿಸಿ ಅತಿ ಶೀಘ್ರವಾಗಿ ನಾದವಿದ್ಯೆಯನ್ನು ಸಿದ್ಧಿಸಿಕೊಂಡರು. ’ದಾಸರೆಂದರೆ ಪುರಂದರದಾಸರಯ್ಯ’ ಎಂದು ಶಿ? ಪುರಂದರರನ್ನು ಗುರು ವ್ಯಾಸರಾಯರು ಕೊಂಡಾಡಿದ ರೀತಿಯಲ್ಲೇ ವೇಂಕಟರಮಣಯ್ಯನವರು ’ದೊರಕುನಾ ಇಟುವಂಟಿ ಶಿಷ್ಯುಡು’ ಎಂದು ತ್ಯಾಗರಾಜರನ್ನು ಕೊಂಡಾಡುತ್ತಾರೆ.
ಕೃತಿರಚನೆ – ಕಾರಣ
ರಾಮಕೃಷ್ಣಯತೀಂದ್ರರೆಂಬ ಸಂನ್ಯಾಸಿಗಳಿಂದ ರಾಮತಾರಕಮಂತ್ರದ ಉಪದೇಶ ಪಡೆದು ಅವರ ಆದೇಶದಂತೆ ತೊಂಭತ್ತಾರುಕೋಟಿಬಾರಿ ರಾಮನಾಮ ಜಪದ ವ್ರತವನ್ನು ಕೈಗೊಂಡರು. ಈ ಪವಿತ್ರ ವ್ರತದ ಆಚರಣೆಯ ವಿವಿಧ ಹಂತಗಳಲ್ಲಿ ಅವರಿಗೆ ರಾಮನ ದರ್ಶನವಾಗುತ್ತದೆ. ಈ ಸಂದರ್ಭಗಳಲ್ಲಿ ’ಅಲಕಲಲ್ಲಲಾಡಗ’ (ಮಧ್ಯಮಾವತಿ), ’ಬಾಲಕನಕಮಯ’ (ಅಠಾಣ), ’ಸೀತಮ್ಮ ಮಾಯಮ್ಮ’ (ವಸಂತ), ’ಗಿರಿಪೈ ನೆಲಕೊನ್ನ’ (ಶಹಾನ) ಕೃತಿಗಳು ರಚಿತವಾದವು.
ಒಮ್ಮೆ ನಾರದಮಹರ್ಷಿಗಳು ಸಂನ್ಯಾಸಿವೇ?ದಲ್ಲಿ ತ್ಯಾಗರಾಜರ ಮನೆಗೆ ಬಂದು, ಕಾವೇರಿಯಲ್ಲಿ ಮಿಂದು ಮರಳಿ ಬಂದು ಆತಿಥ್ಯ ಸ್ವೀಕರಿಸುವೆನೆಂದು ಹೇಳಿ ತೆರಳಿದರಂತೆ. ತಿರುಗಿ ಬಾರದ ಅತಿಥಿಯ ಬಗ್ಗೆ ಚಿಂತಾಕ್ರಾಂತರಾದ ತ್ಯಾಗರಾಜರ ಕನಸಿನಲ್ಲಿ ನಾರದರು ಕಾಣಿಸಿಕೊಂಡು “ಬಂದವ ನಾನೇ ನಾರದ: ಸಂಗೀತಶಾಸ್ತ್ರಗ್ರಂಥ ’ಸ್ವರಾರ್ಣವ’ವನ್ನು ಕೊಡಲು ಬಂದಿದ್ದೆ. ಅದು ನಿನ್ನಲ್ಲಿಯೇ ಬಿಟ್ಟಿದ್ದೇನೆ” ಎಂದರಂತೆ. ಅದಲ್ಲದೆ ಮಾತಾಮಹ ವೀಣಾ ಕಾಳಹಸ್ತಯ್ಯನವರ ಬಳಿಯಿದ್ದ ’ನಾರದೀಯಂ’ ಎಂಬ ಸಂಗೀತಗ್ರಂಥವು ಇವರಿಗೆ ಲಭಿಸಿ ಅಮೂಲ್ಯವಾದ ನಾದಲಹರಿಯು ಹರಿದು ಕೃತಿರತ್ನಗಳನ್ನು ರಚಿಸಲು ಸುಲಭಸಾಧ್ಯವಾಯಿತು.
ತಮ್ಮ ಮೊದಲನೆಯ ಪತ್ನಿಯ ವಿಯೋಗದ ನಂತರ ಆಕೆಯ ತಂಗಿಯನ್ನೇ ವರಿಸಿ ಆಕೆಯ ಪೂರ್ಣಸಹಕಾರದಿಂದ ರಾಮನ ಸಗುಣಾರಾಧನೆಯನ್ನು ನಾದೋಪಾಸನೆಯ ಮೂಲಕ ಮುಂದುವರಿಸಿ ಅನೇಕ ಶಿಷ್ಯರಿಗೆ ನಾದವಿದ್ಯೆಯನ್ನು ಧಾರೆಯೆರೆದು ಸಾರ್ಥಕ ಬದುಕನ್ನು ಕಟ್ಟಿಕೊಳ್ಳುತ್ತಾರೆ. ತಂದೆಯ ಕಾಲಾನಂತರ ಮನೆಯು ಭಾಗವಾಗಿ ವಂಶಪಾರಂಪರ್ಯವಾಗಿ ಪೂಜಿಸುತ್ತಿದ್ದ ರಾಮನ ವಿಗ್ರಹವು ಇವರಿಂದ ಸ್ವೀಕೃತವಾಗುತ್ತದೆ. ಪ್ರತಿನಿತ್ಯ ಉಂಛವೃತ್ತಿಯಲ್ಲಿ ತೊಡಗುತ್ತಾರೆ. ಭಾಗವತ ಸಂಪ್ರದಾಯದಂತೆ ಪ್ರತಿನಿತ್ಯ ಕಾಲಿಗೆ ಗೆಜ್ಜೆ ಕಟ್ಟಿ, ತಂಬೂರಿ ಮೀಟುತ್ತಾ, ನಾಮ ಸಂಕೀರ್ತನೆ ಮಾಡುತ್ತಾ, ನಗರಸಂಚಾರ ಮಾಡುವಾಗ ಅಯಾಚಿತವಾಗಿ ನೀಡಲ್ಪಟ್ಟ ಸಾಮಗ್ರಿಗಳಿಂದ ಅಡುಗೆಯನ್ನು ತಯಾರಿಸಿ ರಾಮನಿಗೆ ಸಮರ್ಪಿಸಿ, ಆ ಪ್ರಸಾದವನ್ನು ತಾವೂ ಸ್ವೀಕರಿಸಿ ತಮ್ಮ ಶಿಷ್ಯರಿಗೂ ನೀಡಿ ಜೀವಿಸಿದವರು, ತ್ಯಾಗರಾಜರು.
ನವಕೋಟಿನಾರಾಯಣರಾಗಿದ್ದ ಪುರಂದರದಾಸರು ತಮ್ಮ ಸಮಸ್ತ ಲೌಕಿಕ ಸಂಪತ್ತನ್ನು ಕೃಷ್ಣಾರ್ಪಣವಾಗಿಸಿ ಅವನ ಕೃಪೆಯನ್ನು ಬೇಡಿ ಅವನ ಪಾರಮ್ಯವನ್ನು ಕೊಂಡಾಡಿದರಷ್ಟೆ. ತ್ಯಾಗರಾಜರಾದರೋ ಮನೆಬಾಗಿಲಿಗೆ ಬಂದ ರಾಜಾಶ್ರಯವನ್ನು ನಿರಾಕರಿಸಿ ರಾಮನೆಂಬ ಅಮೂಲ್ಯ ನಿಧಿಯನ್ನೇ ಬಯಸುತ್ತಾರೆ. ಇದರಿಂದ ಕುಪಿತನಾದ ಅಣ್ಣನು ರಾಮನ ವಿಗ್ರಹವನ್ನು ಕದ್ದು ಕಾವೇರಿಯ ಪಾಲಾಗಿಸಿದಾಗ ’ನೇನೆಂದು ವೆತುಕುದುರಾ’ (ಹರಿಕಾಂಭೋಜಿ) ರಚನೆಯ ಮುಖೇನ ಪ್ರಲಾಪಿಸುತ್ತಾರೆ. ಕನಸಿನಲ್ಲಿ ರಾಮನು ತಾನಿರುವ ಜಾಗವನ್ನು ತಿಳಿಸಿದಾಗ ವಿಗ್ರಹವನ್ನು ಹುಡುಕಿ, ಪಡೆದು ’ಕನುಕೊಂಟಿನಿ’ (ಬಿಲಹರಿ) ರಚನೆಯನ್ನು ಹಾಡುತ್ತಾ ಆನಂದಸಾಗರದಲ್ಲಿ ಮುಳುಗುತ್ತಾರೆ.
ತಮ್ಮ ಶಿ?ರೊಂದಿಗೆ ತಿರುಮಲ, ಶ್ರೀರಂಗ, ತಿರುವೆಟ್ರಿಯೂರ್, ಲಾಲ್ಗುಡಿ ಮುಂತಾದ ಕ್ಷೇತ್ರಗಳಿಗೆ ಭೇಟಿಯಿತ್ತು ಆಯಾ ದೇವತೆಗಳ ಪರವಾದ ಕೃತಿಗಳನ್ನು ರಚಿಸಿರುತ್ತಾರೆ.
ಗುರುಗಳಿಂದ ಕೃತಿಗಳು ರಚನೆಯಾದೊಡನೆ ಅವರ ಶಿಷ್ಯರೊಬ್ಬೊಬ್ಬರು ಒಂದೊಂದು ಭಾಗವನ್ನು ಗ್ರಹಿಸಿ ಬರೆದಿಟ್ಟ ನಂತರ ಎಲ್ಲವನ್ನೂ ಒಟ್ಟುಗೂಡಿಸಿ ಗುರುಗಳ ಮುಂದೆ ಹಾಡಿ ಅವರ ಒಪ್ಪಿಗೆಯಮೇಲೆ ದಾಖಲಿಸುತ್ತಿದ್ದರು. ಹಾಗಾಗಿ ಅವರ ಶಿ?ರೆಲ್ಲರೂ ನಮ್ಮೆಲ್ಲರ ಕೋಟಿ ಕೋಟಿ ವಂದನೆಗಳಿಗೆ ಪಾತ್ರರು.
ಅನನ್ಯ ವಾಗ್ಗೇಯಕಾರ
ಸಂಗೀತಶಾಸ್ತ್ರದ ಬಗ್ಗೆ ತ್ಯಾಗರಾಜರಂತೆ ವಿಸ್ತಾರವಾಗಿ ಹೇಳಿದ ಮತ್ತೊಬ್ಬ ವಾಗ್ಗೇಯಕಾರರು ಇಲ್ಲವೆನ್ನಬಹುದು. ನಿದರ್ಶನಕ್ಕೆ: ಚಿತ್ತರಂಜನಿ ರಾಗದ ’ನಾದತನುಮನಿಶಂ’ ರಚನೆಯಲ್ಲಿ ಪರಮೇಶ್ವರನ ಐದು ಮುಖಗಳಿಂದ ಜನಿತವಾದ ಸಪ್ತಸ್ವರಗಳ ಮೂಲವು ಸಾಮವೇದ – ಎಂದಿದ್ದಾರೆ.
ಸಾರಮತಿ ರಾಗದ ’ಮೋಕ್ಷಮು ಗಲದಾ’ ರಚನೆಯಲ್ಲಿ ’ಪ್ರಾಣಾನಲ ಸಂಯೋಗಮು ವಲ್ಲ, ಪ್ರಣವನಾದಮು ಸಪ್ತಸ್ವರಮುಲೈ ಬರಗ…’ ಅಂದರೆ ಪ್ರಣವನಾದವು ಪ್ರಾಣವೆಂಬ ಶಕ್ತಿಯ ಹಾಗೂ ಅಗ್ನಿಯ ಸಂಯೋಗದಿಂದ ಉಂಟಾಗಿ ಸಪ್ತಸ್ವರಗಳು ಗೋಚರವಾಗುವವು – ಎಂದು ವಿವರಿಸಿದ್ದಾರೆ.
’ಶೋಭಿಲ್ಲು ಸಪ್ತಸ್ವರ’ ಜಗನ್ಮೋಹಿನಿ ರಾಗದ ರಚನೆಯಲ್ಲಿ ’ನಾಭಿಹೃತ್ಕಂಠರಸನಾದುಲಯಂದು, ಶೋಭಿಲ್ಲು-ಸಪ್ತಸ್ವರ ಸುಂದರುಲು ಭಜಿಂಪವೇ’ – ಎಂದರೆ ಸಪ್ತಸ್ವರಗಳು ನಾಭಿ- ಹೃದಯ-ಕಂಠ ನಾಲಗೆಯ ಮೂಲಕ ಹೊರಹೊಮ್ಮಿ ’ನಾದ’ವಾಗಿ ವ್ಯಕ್ತವಾಗುತ್ತವೆ – ಎಂದು ವರ್ಣನೆಯಿದೆ.
ಯಾಗ ಯೋಗ, ತ್ಯಾಗ ಭೋಗಗಳಿಂದ ಆಗುವ ಫಲಗಳು ಸಂಗೀತದ ಮುಖೇನ ರಾಮನ ಸ್ಮರಣೆಯಿಂದ ಲಭ್ಯವಾಗುವುದೆಂದು ತಮ್ಮ ಆಂದೋಳಿಕಾ ರಾಗದ ’ರಾಗಸುಧಾರಸ ಪಾನಮು ಜೇಸಿ’ ರಚನೆಯಲ್ಲಿ ತಿಳಿಸಿದ್ದಾರೆ.
’ನಾದಲೋಲುಡೈ’ ಕಲ್ಯಾಣವಸಂತ ಕೃತಿಯಲ್ಲಿ ರಾಮನಾಮದ ಗಾಯನದಿಂದ ಅವನ ಕೃಪೆ ಸುಲಭಸಾಧ್ಯವೆಂದಿದ್ದರೆ ಭಕ್ತಿಯೆಂಬ ಅಂಶವಿಲ್ಲದ ಗಾಯನವು ಅಪ್ರಯೋಜಕವೆಂಬುದು ಧನ್ಯಾಸಿ ರಾಗ
’ಸಂಗೀತ ಜ್ಞಾನಮು’ ಕೃತಿಯ ಧ್ವನಿ.
ಸಂಗೀತಾಭ್ಯಾಸ ಕ್ರಮವನ್ನೇ ತೋಡಿ ರಾಗದ ’ಕದ್ದನುವಾರಿಕಿ’ ಕೃತಿಯಲ್ಲಿ ವಿವರವಾಗಿ ತಿಳಿಸಿದ್ದಾರೆ. ನಿದ್ದೆ ಎಂಬುದನ್ನು ಬದಿಗೊತ್ತಿ ಶುದ್ಧಮನಸ್ಸಿನಿಂದ ತಂಬೂರಿಯ ಶ್ರುತಿಗೆ ಧ್ವನಿಗೂಡಿಸಿ ನಿರಂತರ ಅಭ್ಯಾಸ ಮಾಡಬೇಕು ಎಂದಿದೆ.
ಈ ರೀತಿ ನಾದವಿದ್ಯೆಯ ಮರ್ಮಗಳನ್ನು ತಮ್ಮ ಅನೇಕ ರಚನೆಗಳ ಮೂಲಕ ತ್ಯಾಗರಾಜರು ಮನದಟ್ಟು ಮಾಡಿಸಿದ್ದಾರೆ.
ಫಲಸ್ತುತಿಯಾಗಿ ಮುಖಾರಿ ರಾಗದ ’ಸಂಗೀತಶಾಸ್ತ್ರಜ್ಞಾನಮು’ ರಚನೆಯಲ್ಲಿ ಸಂಗೀತೋಪಾಸನೆಯಿಂದ ಲೋಕಸಂಪರ್ಕ, ವಾತ್ಸಲ್ಯ, ಸೌಜನ್ಯ ಮತ್ತು ಮಾನವೀಯ ಗುಣಗಳು, ಕೀರ್ತಿ ಗೌರವಗಳು, ಧನಪ್ರಾಪ್ತಿ, ಭಗವಂತನ ಸಾನ್ನಿಧ್ಯವೂ ಲಭ್ಯವಾಗುತ್ತದೆ ಎಂದಿದ್ದಾರೆ.
ಸ್ವರಾರ್ಣವ ಗ್ರಂಥವನ್ನು ಅನುಗ್ರಹಿಸಿದ ಭಾಗವತಾಗ್ರೇಸರರಾದ ನಾರದರನ್ನು ತ್ಯಾಗರಾಜರು ’ಶ್ರೀ ನಾರದ’, ’ನಾರದಮುನಿವೆಡಲಿನ’, ’ಶ್ರೀ ನಾರದಮುನಿ’ ಮುಂತಾದ ರಚನೆಗಳ ಮೂಲಕ ಕೊಂಡಾಡಿದ್ದಾರೆ.
ಗುಣಗ್ರಾಹಿ
ಗೋವಿಂದ ಮಾರಾರ್ ಎಂಬ ಪರಸ್ಥಳದ ವಿದ್ವಾಂಸರ ಗಾಯನವನ್ನು ಕೇಳಿ ಆನಂದಬಾ?ವೆಸಗಿ ’ಎಂದರೋ ಮಹಾನುಭಾವುಲು’ (ಶ್ರೀ ರಾಗ) ರಚನೆಯ ಮೂಲಕ ಅನೇಕ ಭಾಗವತೋತ್ತಮರ ಗುಣಗಳನ್ನು, ಸಾಧನೆಗಳನ್ನು ಸ್ಮರಿಸಿ ನಮಿಸಿದ್ದಾರೆ. ಇದರೊಂದಿಗೆ ಜಗದಾನಂದಕಾರಕ (ನಾಟ) ಎಂಬ ಸಂಸ್ಕೃತ ರಚನೆಯೂ, ಗೌಳ, ಆರಭಿ, ವರಾಳಿ ರಾಗಗಳಲ್ಲಿ ತೆಲುಗಿನಲ್ಲಿ ಮೂರು ಕೃತಿಗಳೂ ರಚಿತವಾಗಿ, ಪಂಚರತ್ನ ಕೀರ್ತನೆಗಳೆಂದು ಪ್ರಸಿದ್ಧವಾಗಿವೆ. ಇವು ಅವರ ಪ್ರತಿ ಆರಾಧನೆಯ ದಿನದಂದು ಪ್ರಪಂಚಾದ್ಯಂತ ಹಾಡಲ್ಪಡುತ್ತವೆ.
ತ್ಯಾಗರಾಜರ ಏಕೈಕ ಪುತ್ರಿಯ ವಿವಾಹಮಹೋತ್ಸವದಲ್ಲಿ ಶಿ?ರಾದ ವೇಂಕಟರಮಣ ಭಾಗವತರು ಸೀತಾರಾಮಲಕ್ಷ್ಮಣರಿರುವ ಸುಂದರವಾದ ತೈಲವರ್ಣದ ಪಟವನ್ನು ಉಡುಗೊರೆಯಾಗಿ ನೀಡಿದಾಗ ರಚಿತವಾದದ್ದು ಮೋಹನ ರಾಗದ ’ನನ್ನು ಪಾಲಿಂಪ’ ಎಂಬ ಕೃತಿ.
ರಚನಾ ವ್ಯಾಪ್ತಿ
ಭಾರತೀಯ ಶಾಸ್ತ್ರೀಯಸಂಗೀತವು ರಾಗದರ್ಶನಯುಕ್ತವಾದದ್ದು. ಇದರೊಂದಿಗೆ ಸಾಹಿತ್ಯವನ್ನು ಸಮೀಕರಿಸಿ ಸಂಗೀತದ ಹಿರಿಮೆಯನ್ನು ಕರ್ನಾಟಕ ಶಾಸ್ತ್ರೀಯ ಸಂಗೀತದ ಶಾಖೆಯು ಹೆಚ್ಚಿಸಿದೆ. ತ್ಯಾಗರಾಜರ ಪ್ರೌಢರಚನೆಗಳು ಭವ್ಯವಾದ ಅರಮನೆಗಳಂತೆ, ಗಗನಚುಂಬಿ ಸೌಧಗಳಂತೆ ಇವೆ. ಸಂಗೀತವನ್ನು ಚೆನ್ನಾಗಿ ಅಭ್ಯಸಿಸಿದವರು ಮಾತ್ರ ಹಾಡಿ ನಿರ್ವಹಿಸಲು ಸಾಧ್ಯ. ಮೋಹನದಲ್ಲಿ ’ನನ್ನು ಪಾಲಿಂಪ’, ’ಮೋಹನರಾಮ’, ತೋಡಿರಾಗದ ’ಕದ್ದನುವಾರಿಕಿ’, ಶಂಕರಾಭರಣದ ’ಎಂದುಕು ಪೆದ್ದಲ’, ’ಎದುಟ ನಿಲಚಿತೆ’, ಖರಹರಪ್ರಿಯ ರಾಗದ ’ಚಕ್ಕನಿ ರಾಜಮಾರ್ಗಮುಲುಂಡುಗ’ ಮತ್ತು ’ನಡಚಿ ನಡಚಿ’ ಮುಂತಾದ ಕೀರ್ತನೆಗಳು ಭೋರ್ಗರೆಯುವ ಜಲಪಾತದಂತಿದ್ದರೆ ಸೌಮ್ಯವಾಗಿ ಹರಿಯುವ ನದಿತೀರದಲ್ಲಿರುವ ಕುಟೀರಗಳಂತಿರುವ, ಸಾಮಾನ್ಯ ಸಂಗೀತಜ್ಞರೂ ಹಾಡಲು ಸಾಧ್ಯವಾಗುವ ದಿವ್ಯನಾಮಸಂಕೀರ್ತನೆಗಳನ್ನೂ ತ್ಯಾಗರಾಜರು ರಚಿಸಿದ್ದಾರೆ. ಇವಲ್ಲದೆ ದಿನನಿತ್ಯ ಪೂಜಾವಿಧಾನಗಳನ್ನು ನಾದದ ಮೂಲಕ ನಡೆಸಲು ಉತ್ಸವಸಂಪ್ರದಾಯ ಕೀರ್ತನೆಗಳು ರಚಿತವಾಗಿವೆ. ಇವು ಸುಪ್ರಭಾತ, ಉಪಚಾರ, ಉಯ್ಯಾಲೆಸೇವೆ, ಆರತಿ, ಲಾಲಿ, ಮಂಗಳಗಳನ್ನು ಒಳಗೊಂಡವು. ಒಂದು ಚೂರ್ಣಿಕೆ ಮತ್ತು ‘ಪ್ರಹ್ಲಾದಭಕ್ತಿವಿಜಯ’, ‘ನೌಕಾಚರಿತ್ರೆ’ ಎಂಬ ಗೇಯ ನಾಟಕಗಳನ್ನು ತ್ಯಾಗರಾಜರು ರಚಿಸಿದ್ದಾರೆ. ಹೇಗೆ ಬ್ರಹ್ಮವಸ್ತುವು ಅಣುವಾಗಿಯೂ ಮಹತ್ತಾಗಿಯೂ ಗೋಚರಿಸುವುದೋ ಅದೇರೀತಿ ತ್ಯಾಗರಾಜರ ರಚನಾವ್ಯಾಪ್ತಿಯಿದೆ ಎನ್ನಬಹುದು. ರಚನೆಗಳ ಮೊದಲನೇ ಸಾಲಿನಲ್ಲಿಯೇ ರಾಗದ ಸ್ಪ?ರೂಪ ಗೋಚರವಾಗುವುದು ನಿಜವಾದ ವಾಗ್ಗೇಯಕಾರನ ಲಕ್ಷಣ. ತ್ಯಾಗರಾಜರು ಈ ನಿಟ್ಟಿನಲ್ಲಿ ಅಗ್ರಗಣ್ಯರು.
ಚಮತ್ಕಾರ ಚತುರ
ತೆಲುಗು-ಸಂಸ್ಕೃತದಲ್ಲಿ ಸುಂದರವಾದ ಆಲಂಕಾರಿಕ ಪದಬಂಧಗಳೊಂದಿಗೆ ಚಮತ್ಕಾರಯುತವಾಗಿ ರಚನೆಗಳನ್ನು ರಚಿಸಿದ ಖ್ಯಾತಿ ತ್ಯಾಗರಾಜರದು. ಪ್ರಥಮಾಕ್ಷರಪ್ರಾಸಕ್ಕೆ ಎಂತಮುದ್ದೊ-ಎಂತಸೊಗಸೋ, ದ್ವಿತೀಯಾಕ್ಷರಪ್ರಾಸಕ್ಕೆ ಸಾಧಿಂಚೆನೇನೆ-ಬೋಧಿಂಚಿನ, ಅಂತ್ಯಾಕ್ಷರಪ್ರಾಸಕ್ಕೆ ನಾರದಗಾನ ಲೋಲ-ನತಜನ ಪರಿಪಾಲ ಇವು ಉತ್ತಮ ಉದಾಹರಣೆಗಳು.
ಒಂದೇ ರೀತಿ ಕೇಳಿಸುವ ಆದರೆ ವಿವಿಧಾರ್ಥ ಬರುವ ಪದಗಳ ಜೋಡಣೆಗಳು (ಸಭಂಗ ಶ್ಲೇಷ ಪ್ರಯೋಗ) ಅನೇಕ ಕೃತಿಗಳಲ್ಲಿ ಕಾಣಬಹುದು, ಉದಾಹರಣೆಗೆ ಅಠಾಣ ರಾಗದ ‘ಅನುಪಮ ಗುಣಾಂಬುಧಿ’ ಕೃತಿಯಲ್ಲಿ ’ಜನಕಜಾಮಾತವೈ’ ಎಂಬ ಪದವನ್ನು ’ಜನಕನ ಅಳಿಯ’ ಎಂದು ಅರ್ಥೈಸಿದರೆ ’ಜನಕಜಾ ಮಾತವೈ’ ಎಂಬುದು ಸೀತೆಯ ತಾಯಿ- ಭೂಮಾತೆಯೆಂಬ ಅರ್ಥ ಮೂಡುತ್ತದೆ. ಜನಕನ ಅಳಿಯನಾದ ನೀನು ಜನಕನ ಮಗಳ ತಾಯಿಯಾದ ಭೂಮಾತೆಯಂತೆ ಸಹನೆ ಉಳ್ಳವನಾಗಿರುವೆ ಎಂಬುದೇ ಇದರ ಅರ್ಥ.
ಇದೇ ರಚನೆಯ ಮತ್ತೊಂದು ಚರಣದಲ್ಲಿ ’ಕನಕಪಟಧರ ನನ್ನು ಕನ ಕಪಟ ಮೇಲ?’ ಎಂಬ ಸಾಹಿತ್ಯವಿದೆ. ’ಕನಕ, ಪಟಧರ’ ಎಂದರೆ ಪೀತಾಂಬರವನ್ನು ಧರಿಸಿದವ, ’ಕನ ಕಪಟಮೇಲ’ ಎಂದರೆ ನಿನ್ನ ನೋಟದಲ್ಲಿ ಕಪಟವೇಕೆ? ಎಂಬ ಅರ್ಥ.
’ಸಮಾನಮೆವರು-ನೀ ಸಮಾನಮೆವರು-ರಾಮ ನೀ ಸಮಾನಮೆವರು’ ಎಂಬಲ್ಲಿ ಯತಿಪ್ರಾಸದ ಪ್ರಯೋಗವು ಕರ್ಣಾನಂದವನ್ನುಂಟುಮಾಡುತ್ತದೆ.
ಇನ್ನು ಸ್ವರಾಕ್ಷರ ಪ್ರಯೋಗದಲ್ಲಿ ’ನೀ ದಯ ರಾದ’ ಎಂಬಲ್ಲಿ, ‘ನೀ’ ಸಾಹಿತ್ಯಾಕ್ಷರ ನಿ?ದ ಸ್ವರದಲ್ಲಿ ಇರುವಂತೆ ರಚಿಸಿ, ‘ಮಾಕೇಲರಾ’, ‘ಮಾರುಬಲ್ಕ’ ಎಂಬ ಕೃತಿಗಳಲ್ಲಿ ಮಕಾರವನ್ನು ಮಧ್ಯಮಸ್ವರದಲ್ಲಿರಿಸಿದ್ದಾರೆ.
ಬಿಂದುಮಾಲಿನಿ, ಶುದ್ಧಸೀಮಂತಿನೀ, ಉಮಾಭರಣ, ಕಿರಣಾವಲಿ ಮುಂತಾದ ಅಪರೂಪ ರಾಗಗಳಲ್ಲೂ ರಚನೆಗಳಿವೆ.
ಇವರ ರಚನೆಗಳು ಆದಿ, ದೇಶಾದಿ, ಮಧ್ಯಾದಿ, ಛಾಪು, ಝಂಪೆ ಮತ್ತು ರೂಪಕತಾಳಗಳಲ್ಲಿ ನಿಬದ್ಧವಾಗಿವೆ.
ಭಾರತೀಯ ಸಂಗೀತ, ಅದರಲ್ಲೂ ಕರ್ನಾಟಕ ಸಂಗೀತದಲ್ಲಿ ರಾಗಾಲಾಪನೆ, ನೆರವಲ್-ಕಲ್ಪನಾ ಸ್ವರಗಳೆಂಬ ಮನೋಧರ್ಮಸಂಗೀತಕ್ಕೆ ಬೇಕಾದ ಅಡಿಪಾಯವನ್ನು ತ್ಯಾಗರಾಜರ ರಚನೆಗಳಲ್ಲಿ ಹೇರಳವಾಗಿ ಕಾಣಬಹುದು.
ಉದಾಹರಣೆಗೆ ಖರಹರಪ್ರಿಯ ರಾಗದ ’ಚಕ್ಕನಿ ರಾಜ’ ಎಂಬ ರಚನೆಯ ಪಲ್ಲವಿಯ ಸಂಗತಿಗಳು ರಾಗಾಲಾಪನೆಗೆ ಉತ್ತಮ ಮಾರ್ಗದರ್ಶನ ನೀಡುತ್ತವೆ.
ಕಾಂಬೋಜಿ ರಾಗದ ’ಓ ರಂಗಶಾಯಿ’ ಕೃತಿಯ ಚರಣ, ’ಭೂಲೋಕವೈಕುಂಠಮಿದಿಯನಿ’, ಎಂಬುದು ದೀರ್ಘಾಕ್ಷರಗಳನ್ನು, ಕೆಲವೇ ಪದಗಳನ್ನು ಹೊಂದಿದ್ದು, ನೆರವಲ್ ಮಾಡಲು ಬಹು ಸೂಕ್ತವಾಗಿದೆ.
ಹಾಗೆಯೇ ಪಂಚರತ್ನ ಕೀರ್ತನೆಗಳಲ್ಲಿನ ಸ್ವರಗಳು ಕಲ್ಪನಾಸ್ವರಗಳಿಗೆ ಮಾರ್ಗಸೂಚಿಯಾಗಿವೆ.
ರಚನಾ ಕೌಶಲ
ತ್ಯಾಗರಾಜರು ಹಲವಾರು ಪ್ರಕಾರಗಳ ರಾಮಾಯಣದ ಅನೇಕ ರಸನಿಮಿ?ಗಳನ್ನು ತಮ್ಮ ರಚನೆಗಳಲ್ಲಿ ಜಾಣ್ಮೆಯಿಂದ ಬಳಸಿದ್ದಾರೆ. ಅವುಗಳಲ್ಲಿ ಕೆಲವೆಂದರೆ:
ಚಾರುಕೇಶಿರಾಗದ ’ಆಡಮೋಡಿಗಲದಾ’ ಎಂಬ ರಚನೆಯ ಚರಣದಲ್ಲಿ ’ಚೆದುವುಲನ್ನಿ ತೆಲಿಸಿ ಶಂಕರಾಂಶುಡೈ..’ ಎಂದು ಹೇಳಿದ್ದು, ಇಲ್ಲಿ ಮಹಾಪಂಡಿತನು ಸಂಗೀತಗಾರನೂ ಆಗಿದ್ದ ಆಂಜನೇಯನ ಮೊದಲ ಭೇಟಿಯಲ್ಲಿ, ಅವನೊಡನೆ ನೇರ ಮಾತನಾಡದೆ, ಲಕ್ಷ್ಮಣನನ್ನು ’ಆತನು ಯಾರೆಂದು ಕೇಳು’ ಎಂದವನು ನೀನಲ್ಲವೇ? ಆಂಜನೇಯನಿಗೇ ಆ ಗತಿಯಾದರೆ, ಸಾಮಾನ್ಯನಾದ ತ್ಯಾಗರಾಜನನ್ನು ನೀನು ಮಾತನಾಡಿಸುವೆಯಾ? – ಎಂದು ಪ್ರಶ್ನಿಸಿದ್ದಾರೆ.
ರಾಮಾಯಣದ ಇನ್ನೊಂದು ಸಂದರ್ಭವಾದ, ರಾಮನಿಂದಲೇ ಮುಕ್ತಿಹೊಂದಿದ ಶಬರಿಯ ಭಾಗ್ಯವನ್ನು ಮುಖಾರಿ ರಾಗದ ’ಎಂತನಿ ನೇ ವರ್ಣಿಂತುನು ಶಬರೀಭಾಗ್ಯಮು’ ಎಂಬ ರಚನೆಯಲ್ಲಿ ಪ್ರಶಂಸಿಸಿದ್ದಾರೆ.
ಅರ್ಥವನ್ನರಿತು ಹಾಡುವುದರ ಆವಶ್ಯಕತೆಯನ್ನು ತಮ್ಮ ಪೂರ್ಣಚಂದ್ರಿಕೆ ರಾಗದ ’ತೆಲಿಸಿ ರಾಮಚಿಂತನತೋ’ ಎಂಬ ಕೀರ್ತನೆಯಲ್ಲಿ ಸವಿವರವಾಗಿ ತಿಳಿಸಿದ್ದಾರೆ. ‘ರಾಮಾ’ ಎಂದರೆ ಸ್ತ್ರೀ, ‘ರಾಮ’ ಎಂದರೆ ಪರಬ್ರಹ್ಮ ವಸ್ತು. ಅದೇರೀತಿ ಅಜ ಎಂದರೆ ಬ್ರಹ್ಮ; ಮತ್ತೊಂದು ಅರ್ಥ ಮೇಕೆ. ಹಾಗಾಗಿ ಅರ್ಥವನ್ನರಿತು ಮನನ ಮಾಡಿ ಧ್ಯಾನಿಸಿದರೆ ಯಥಾರ್ಥ ಫಲ ಪ್ರಾಪ್ತವೆನ್ನುತ್ತಾರೆ.
’ತೆಲಿಯಲೇರು ರಾಮ’ ಎಂಬ ರಚನೆಯಲ್ಲಿ ಮನು?ರು ಬ್ರಾಹ್ಮೀ ಮುಹೂರ್ತದಲ್ಲೆದ್ದು ನೀರಿನಲ್ಲಿ ಮುಳುಗಿ, ಶರೀರದ ತುಂಬ ವಿಭೂತಿ ಧರಿಸಿ, ಯಾಂತ್ರಿಕವಾಗಿ ಜಪಮಣಿ ತಿರುಗಿಸುತ್ತಾ, ದೈವಭಕ್ತನೆಂಬ ವೇ?ಧರಿಸಿ ಲೋಕವನ್ನು ಮೋಸಮಾಡುತ್ತಿರುವ ಪರಿಯನ್ನು ಎತ್ತಿತೋರಿಸಿದ್ದಾರೆ.
ಇದೇರೀತಿ ಗೌಳ ರಾಗದ ‘ದುಡುಕುಗಲ’ ಎಂಬ ಪಂಚರತ್ನ ಕೀರ್ತನೆಯಲ್ಲಿ ವನಿತೆಯರಾದಿಯಾಗಿ ಅಮಾಯಕರನ್ನು ವಶಮಾಡಿಕೊಂಡು ಉಪದೇಶ ಮಾಡುತ್ತಾ ಅವರಿಂದ ನಮಸ್ಕರಿಸಿಕೊಂಡು ಸತ್ಪುರು?ರಂತೆ ತೋರಿಕೆಯ ಮಹದುಪಕಾರ ಎಸಗಿದವರನ್ನು ನಿಂದಿಸಿದ್ದಾರೆ.
’ಸೊಗಸುಗಾ ಮೃದಂಗತಾಳಮು’ – ಶ್ರೀರಂಜನಿ ರಾಗ – ರೂಪಕ ತಾಳದ ರಚನೆಯಲ್ಲಿ ತಿಳಿಸಿರುವಂತೆ, ಕೃತಿಯು ನವರಸಭರಿತವಾಗಿ, ವೈರಾಗ್ಯ ಹೊಮ್ಮಿಸುವ, ವೇದಾಂತತತ್ತ್ವಗಳನ್ನೊಳಗೊಂಡು, ವ್ಯಾಕರಣದ ಪ್ರಾಸ- ಯತಿ-ವಿಶ್ರಮ ಇತ್ಯಾದಿಗಳನ್ನು ಹೊಂದಿರಬೇಕು ಎಂದು ಮುಂದಿನ ಪೀಳಿಗೆಯ ವಾಗ್ಗೇಯಕಾರರಿಗೆ ಮಾರ್ಗದರ್ಶನ ನೀಡಿದ್ದಾರೆ.
ಆತ್ಮಾವಲೋಕನೆ ಮಾಡಿಕೊಳ್ಳಬೇಕಾದ ಆವಶ್ಯಕತೆಯನ್ನು ಹಲವು ಕೃತಿಗಳಲ್ಲಿ ವಿವರಿಸಿದ್ದಾರೆ. ಮನುಷ್ಯನ ಜೀವನವ್ಯಾಪಾರವು ಮನಸ್ಸಿನಿಂದ ಆರಂಭ. ಮನಃಸ್ವಾಧೀನದ ಸಿದ್ಧಿಯಿದ್ದಲ್ಲಿ ಯಾಗ-ತಪ-ಜಪ ಯಾವುದೂ ಅನವಶ್ಯವೆಂದು ಶಂಕರಾಭರಣ ರಾಗದ ’ಮನಸು ಸ್ವಾಧೀನಮೈನ’ ರಚನೆ ತಿಳಿಸುತ್ತದೆ.
ತತ್ತ್ವಸಾರಗ್ರಾಹಿ
ಶಾಂತಿ ದೊರಕುವುದು ಮನೋನಿಗ್ರಹದಿಂದ ಎಂದು ಸಾಮ ರಾಗದ ’ಶಾಂತಮು ಲೇಕ ಸೌಖ್ಯಮು ಲೇದು’ ಎಂಬ ಕೃತಿಯಲ್ಲಿ ಉಲ್ಲೇಖಿಸಿದ್ದಾರೆ.
ದೇಶೀಯತೋಡಿರಾಗದ ’ರೂಕಲು ಪದಿವೇಲುನ್ನ’ ಎಂಬ ರಚನೆಯಲ್ಲಿ, ಕೋಟ್ಯಧೀಶ್ವರನಾದರೂ ಸರಿ, ಒಂದು ಹಿಡಿಯ? ಅಕ್ಕಿಯ? ಅವನ ಹಸಿವನ್ನು ನೀಗಿಸಬಲ್ಲದು. ನದಿಯ ಮುಂದೆ ನಿಂತರೂ ಬೊಗಸೆಯಷ್ಟು ನೀರನ್ನು ಹಿಡಿದಿಟ್ಟುಕೊಳ್ಳಬಹುದು. ಎ? ದೊಡ್ಡ ಜಮೀನಿನ ಒಡೆಯನಾಗಿದ್ದರೂ ಅಂತ್ಯದಲ್ಲಿ ಮೂರಡಿ ಆರಡಿ ಮಾತ್ರವೇ ಸ್ಥಳ ಬೇಕಾಗುವುದು. ಹಾಗಾಗಿ ನಮ್ಮ ಆವಶ್ಯಕತೆಗೆ ತಕ್ಕಂತೆ, ಇತಿಮಿತಿಯಿಂದ ಜೀವನ ಸಾಗಿಸಬೇಕೆಂದು ಸುಂದರ ದೃ?ಂತಗಳಿಂದ ತಿಳಿಸಿದ್ದಾರೆ. ಕಾಪಿ ರಾಗದ ’ಮೀವಲ್ಲ’ ರಚನೆಯಲ್ಲಿ: ನಾವು ಕೊಟ್ಟ ಚಿನ್ನದ ಗುಣ ಅಧಮವಾಗಿದ್ದರೆ ಚಿನಿವಾರದವನನ್ನು ದೂಷಿಸುವುದು ಸರಿಯೇ? ಹಾಗೆಯೇ ಪೂರ್ವಜನ್ಮದ ಪಾಪಗಳ ರಾಶಿಗಳನ್ನು ಮುಂದಿಟ್ಟುಕೊಂಡು ನನ್ನನ್ನು ಕಾಪಾಡು ಎಂದರಾದೀತೆ? ಇದೇ ರೀತಿಯಲ್ಲಿ ಕೆಳಕಂಡಂತಹ ಅನೇಕ ಲೋಕೋಕ್ತಿಗಳನ್ನು ಚಮತ್ಕಾರವಾಗಿ ನಾನಾ ಕೃತಿಗಳಲ್ಲಿ ಅಳವಡಿಸಿದ್ದಾರೆ:
- ಕಾಗೆ, ಮೀನುಗಳು ನೀರಿನಲ್ಲಿ ಮುಳುಗಿದಾಕ್ಷಣ ಅದು ಪವಿತ್ರಸ್ನಾನವಾದೀತೇ?
- ನಿಂತೇ ಇರುವ ಬಕಪಕ್ಷಿಯು ಕಣ್ಣುಮುಚ್ಚಿ ಉಸಿರಾಡಿದರೆ ಅದು ಧ್ಯಾನವೇ?
- ಮಿಂಚುಹುಳುಗಳು ಚಂದ್ರಸೂರ್ಯರಂತಾಗಲು ಸಾಧ್ಯವೇ?
- ಕಾವಿ ತೊಟ್ಟವನು ಮೌನಿಯಾಗಿ ಗುಹೆಯೊಳಗೆ ವಾಸವಾಗಿದ್ದರೆ ಮುನಿಯಾಗಲು ಸಾಧ್ಯವೇ? – ಇತ್ಯಾದಿ.
ಒಟ್ಟಿನಲ್ಲಿ ರಾಮನ ಆಜ್ಞೆಯನ್ನು ಪಾಲಿಸುತ್ತಾ ರಾಮಭಕ್ತಿಯನ್ನು ರೂಢಿಸಿಕೊಂಡು ಅವನ ಕರುಣೆಯನ್ನು ಹೊಂದಿದವರೇ ಧನ್ಯರು ಮತ್ತು ಅವರ ದರ್ಶನವೇ ಸೌಭಾಗ್ಯ. ಅಂತಹವರಿಗೆ ಯಮನ ಬಾಧೆಯು ತಟ್ಟದೆನ್ನುತ್ತಾರೆ ತ್ಯಾಗಯ್ಯನವರು.
ಹಾಗೆಯೇ ಭಕ್ತನು ಹೇಗಿರಬೇಕು ಎನ್ನುವುದನ್ನೂ ತಿಳಿಸಿದ್ದಾರೆ. ಅವನು ಸನ್ನಡತೆಯಿಂದ ಅರಿ?ಡ್ವರ್ಗಗಳನ್ನು ಜಯಿಸಿ ಅನೃತವನ್ನಾಡದೆ, ಪರಾವಲಂಬಿಯಾಗದೆ, ನರರ ಸ್ತುತಿ ಮಾಡದೆ, ಮದ್ಯಪಾನಾದಿಗಳನ್ನು ವರ್ಜಿಸಿ, ಇತರರನ್ನು ನಿಂದಿಸದೆ, ಜ್ಞಾನಾರ್ಜನೆಯಲ್ಲೇ ಮನಸ್ಸನ್ನು ತೊಡಗಿಸಿಕೊಂಡು ರಾಮಾನುಗ್ರಹವನ್ನು ಹೊಂದಿ ಬ್ರಹ್ಮಾನಂದವನ್ನು ಅನುಭವಿಸಬೇಕು.
ಸುರಟಿ ರಾಗದ ’ರಾಮಚಂದ್ರ ನೀ ದಯ’ ಕೃತಿಯಲ್ಲಿ “ರಾಮ! ಏಕೆ ನನ್ನ ಮೇಲೆ ದಯೆಬಾರದು ನಿನಗೆ? ವನವಾಸದ ತಾಪವೇ? ಕೈಕೇಯಿಯ ಮೇಲೆ ಇರುವ ಕೋಪವೇ? ನಾನು ಮಾಡಿದ ಪಾಪವೇ? ಅಥವಾ ದಯೆತೋರಲು ನಿನಗೇ ಶಕ್ತಿ ಇಲ್ಲವೇ?” ಎನ್ನುವಲ್ಲಿ ಹಾಸ್ಯರಸವನ್ನೂ ಕಾಣಿಸಿದ್ದಾರೆ.
ರಾಮನ ರಾಜಪಾರಮ್ಯವನ್ನು ಸೂಚಿಸಲು ಶಿವನೇ ಮೊದಲಾದ ದೇವತೆಗಳು ನರ, ವಾನರ, ಪಕ್ಷಿಗಳಾಗಿ ಅವನನ್ನು ಸೇವಿಸಲೆಂದೇ ಅವನೊಡನೆಯೇ ಅವತರಿಸಿದರೆಂದು ಮೋಹನ ರಾಗದ ’ಮೋಹನ ರಾಮ’ ರಚನೆಯ ಚರಣಭಾಗದಲ್ಲಿ ಹೇಳಿರುವುದು ತ್ಯಾಗಯ್ಯನವರ ರಮ್ಯವಾದ ಕವಿತಾ ಗುಣವನ್ನು ತಿಳಿಸುತ್ತದೆ.
ತ್ಯಾಗರಾಜರ ರಚನಾಕೌಶಲ ದೂರದೇಶದಲ್ಲಿದ್ದವರಿಗೆಲ್ಲ ಪ್ರಸಾರಗೊಂಡು ಪ್ರಸಿದ್ಧವಾಯಿತು. ಹಾಗೆಯೇ ಕೇರಳದ ಸಮಕಾಲೀನರಾಗಿದ್ದ ಸ್ವಾತಿ ತಿರುನಾಳ್ ಮಹಾರಾಜರು ತಮ್ಮ ಆಸ್ಥಾನ ವಿದ್ವಾಂಸರೊಬ್ಬರ ಮೂಲಕ ತ್ಯಾಗಯ್ಯನವರನ್ನು ತಮ್ಮಲ್ಲಿಗೆ ಆಹ್ವಾನಿಸುತ್ತಾರೆ. ಆದರೆ ಜ್ಯೌತಿಷ್ಯವನ್ನು ಬಲ್ಲವರಾಗಿದ್ದ ತ್ಯಾಗರಾಜರು “ಖಂಡಿತ ಭೇಟಿ ಆಗುವೆ, ಆದರೆ ಈಗಲ್ಲ – ಊರ್ಧ್ವಲೋಕದಲ್ಲಿ” ಎನ್ನುತ್ತಾರೆ. ಹಾಗೆಯೇ ಸ್ವಾತಿ ತಿರುನಾಳರು ತ್ಯಾಗಯ್ಯನವರ ಅಂತ್ಯಕ್ಕಿಂತ ಮುಂಚೆ ಪದ್ಮನಾಭನ ಪಾದವನ್ನು ಸೇರುತ್ತಾರೆ.
ತ್ಯಾಗರಾಜರು ತಮ್ಮ ತೋಡಿರಾಗದ ’ದಾಶರಥೇ ನೀ ಋಣಮು ದೀರ್ಪ ನಾ ತರಮಾ’ ಎಂದು ರಾಮನನ್ನು ಉದ್ದೇಶಿಸಿ “ರಾಮ, ನನ್ನ ಯಶಸ್ಸನ್ನು ದೂರದೇಶಗಳಲ್ಲಿ ಹರಡುವಂತೆ ಮಾಡಿದ ನಿನ್ನ ಋಣವನ್ನು ನಾನು ತೀರಿಸಲಾದೀತೇ?” ಎಂದಿದ್ದಾರೆ.
೧೮೪೭ರಲ್ಲಿ ಒಂದು ದಿನ ತ್ಯಾಗರಾಜರ ಕನಸಿನಲ್ಲಿ ರಾಮಚಂದ್ರಮೂರ್ತಿಯು ದರ್ಶನವಿತ್ತು ಇನ್ನು ಹತ್ತು ದಿವಸಗಳಲ್ಲಿ ನಾನು ನಿನಗೆ ಮುಕ್ತಿ ಪ್ರಸಾದಿಸುತ್ತೇನೆ ಎಂದು ವರವಿತ್ತನು. ತಕ್ಷಣವೇ ’ನಾದಬ್ರಹ್ಮಾನಂದ’ ಎಂಬ ನಾಮಧೇಯದೊಂದಿಗೆ ಸಂನ್ಯಾಸ ಸ್ವೀಕರಿಸಿದರು. ಪು? ಬಹುಳ ಪಂಚಮಿಯಂದು (೬-೧-೧೮೪೭) ಬೆಳಗ್ಗೆ ೧೧ ಘಂಟೆಗೆ ಶಿ?ಪ್ತರ ಸಮ್ಮುಖದಲ್ಲಿ ಶ್ರೀರಾಮನಲ್ಲಿ ಐಕ್ಯರಾದನಂತರ, ಯತಿಧರ್ಮದಂತೆ ಬೃಂದಾವನದಲ್ಲಿ ಅವರ ಪಾರ್ಥಿವಶರೀರವನ್ನು ಇರಿಸಿ ವಿಧಿವಿಧಾನಗಳು ಅನುಸರಿಸಲ್ಪಟ್ಟವು.
ಮಂದಿರ ನಿರ್ಮಾಣ
೧೯೨೫ರಲ್ಲಿ ಅನೇಕ ಕ?ಗಳನ್ನು ಎದುರಿಸಿ ಈ ನಾದಯೋಗಿಯ ಸಮಾಧಿಯನ್ನು ಗುರುತಿಸಿ, ಅದಕ್ಕೆ ಮಂದಿರವನ್ನು ಕಲ್ಪಿಸಿದ ಖ್ಯಾತಿ ಬೆಂಗಳೂರಿನ ಖ್ಯಾತಿವೆತ್ತ ಸಂಗೀತವಿದುಷಿ ವಿದ್ಯಾಸುಂದರಿ ನಾಗರತ್ನಮ್ಮನವರಿಗೇ (ಕ್ರಿ.ಶ. ೧೮೭೮-೧೯೫೨) ಸಲ್ಲಬೇಕು. ತಮ್ಮ ಜೀವಿತದ ಸಮಸ್ತ ಗಳಿಕೆಯೊಂದಿಗೆ ಸಜ್ಜನರ ಸಹಕಾರದಿಂದ ಈ ಕಾರ್ಯವನ್ನು ಅವರು ನೆರವೇರಿಸಿದರು. ಅವರ ಕೊನೆಯಕಾಲವನ್ನು ತಿರುವಯ್ಯಾರಿನಲ್ಲೇ ಕಳೆದು, ಅವರ ಆರಾಧ್ಯದೈವವಾದ ತ್ಯಾಗರಾಜಸ್ವಾಮಿಗಳ ಪಾದಾರವಿಂದವನ್ನು ಸೇರಿದರು. ಗುರುಗಳ ಸಮಾಧಿಯ ಅನತಿ ದೂರದಲ್ಲೇ ಆಕೆಯ ಸಮಾಧಿಯಿದ್ದು ಅಂಜಲೀಬದ್ಧರಾಗಿ ಕುಳಿತಿರುವ ಅವರ ಶಿಲ್ಪವು ನಿರ್ಮಿತವಾಗಿದೆ. ಇವರು ನಮ್ಮ ಕನ್ನಡನಾಡಿಗೆ ಸೇರಿದವರೆಂಬುದು ನಾವೆಲ್ಲರೂ ಹೆಮ್ಮೆಪಡಬೇಕಾದ ಸಂಗತಿ. ಕರ್ನಾಟಕದಲ್ಲಿ ಶ್ರೀರಂಗಪಟ್ಟಣ ಹಾಗು ಬೆಂಗಳೂರಿನ ವಸಂತಪುರದಲ್ಲಿ ತ್ಯಾಗರಾಜರ ಮಂದಿರಗಳು ನಿರ್ಮಾಣಗೊಂಡಿವೆ.
ನಾದಾಂಜಲಿ
ವಾಲಾಜಾಪೇಟೆ ವೇಂಕಟರಮಣ ಭಾಗವತರು, ಮೈಸೂರು ವಾಸುದೇವಾಚಾರ್ಯರು, ಮುತ್ತಯ್ಯ ಭಾಗವತರು, ಮಯೂರಂ ವಿಶ್ವನಾಥ ಶಾಸ್ತ್ರೀ, ಎಂ.ಡಿ. ರಾಮನಾಥನ್ ಮತ್ತು ಅನೇಕರು ತ್ಯಾಗರಾಜರಿಗೆ ತಮ್ಮ ರಚನೆಗಳ ಮೂಲಕ ನಾದಾಂಜಲಿ ಸಲ್ಲಿಸಿದ್ದಾರೆ. ತ್ಯಾಗರಾಜರ ರಚನೆಗಳನ್ನಾಧರಿಸಿ ರಾಮಾಯಣವನ್ನು, ತ್ಯಾಗರಾಜ ಚರಿತೆಯನ್ನು ಹೆಣೆದು, ಹರಿಕಥೆಗಳನ್ನು, ಸಂಗೀತರೂಪಕಗಳನ್ನು ರಚಿಸಿ ಈ ನಾದಯೋಗಿಗೆ ಅನೇಕ ವಿದ್ವಾಂಸರು ಗೌರವ ಸಲ್ಲಿಸಿದ್ದಾರೆ. ಅವರ ಕೃತಿಗಳ ಅಧ್ಯಯನ, ಅಭ್ಯಾಸ, ಸಂದೇಶಗಳ ಅನು?ನಕ್ಕೆ ನಿರಂತರ ಶ್ರದ್ಧೆ ಅನಿವಾರ್ಯ. ಇದಕ್ಕೆ ಕೆಲವಾರು ಜನ್ಮಗಳೇ ಬೇಕಾದೀತು.
ತ್ಯಾಗಯ್ಯನವರ ಭಕ್ತಿಯುತವಾದ ಸರಳವಾದ ಸುಲಲಿತ ಸಾಹಿತ್ಯವುಳ್ಳ ದ್ರಾಕ್ಷಾಪಾಕದಂತಿರುವ ರಚನೆಗಳು ಇಂದಿಗೂ ಪಂಡಿತ ಪಾಮರರಿಗೆ ಸಮಾನವಾದ ಆನಂದ ನೀಡುತ್ತಿವೆ.
ಅವರ ಬಹುಮುಖ ವ್ಯಕ್ತಿತ್ವವನ್ನು ಕೊಂಡಾಡಿರುವ ಈ ಕೆಳಗಿನ ವೇಂಕಟರಮಣ ಭಾಗವತರ ಶ್ಲೋಕಕ್ಕಿಂತ ಮಿಗಿಲಾದ ರಚನೆಯೇ ಇಲ್ಲವೆನ್ನಬಹುದೇನೋ!
ವ್ಯಾಸೋ ನೈಗಮಚರ್ಚಯಾ ಮೃದುಗಿರಾ ವಲ್ಮೀಕಜನ್ಮಾಮುನಿಃ|
ವೈರಾಗ್ಯೇ ಶುಕ ಏವ ಭಕ್ತಿವಿಷಯೇ ಪ್ರಹ್ಲಾದ ಏವ ಸ್ವಯಂ||
ಬ್ರಹ್ಮಾನಾರದ ಏವ ಚಾಪ್ರತಿಮಯೋಃ ಸಾಹಿತ್ಯಸಂಗೀತಯೋಃ|
ಯೋ ರಾಮಾಮೃತಪಾನನಿರ್ಜಿತಶಿವಃ ತಂ ತ್ಯಾಗರಾಜಂ ಭಜೇ||
ವೇದಗಳನ್ನಿತ್ತ ವ್ಯಾಸರಂತೆ ಅವುಗಳ ಸಾರವನ್ನು ರಚನೆಗಳ ಮೂಲಕ ತಿಳಿಸಿದ, ಆದಿಕವಿ ವಾಲ್ಮೀಕಿಯ ಕವಿತ್ವಕ್ಕೆ ಸಮಾನವಾದ ರಚನೆಗಳನ್ನಿತ್ತ, ಶುಕ ಭಗವಾನರಂತೆ ವಿರಾಗಿಗಳಾಗಿರುವ, ಪ್ರಹ್ಲಾದನಂತೆ ಭಾಗವತೋತ್ತಮರಾಗಿರುವ, ಸಂಗೀತ ಸಾಹಿತ್ಯಗಳಲ್ಲಿ ನಾರದ-ವಾಕ್ಪತಿಗಳಿಗೆ ಸಮಾನರಾಗಿರುವ, ಪರಶಿವನಂತೆ ರಾಮನಾಮದ ರಸವನ್ನುಂಡ ತ್ಯಾಗರಾಜರಿಗೆ ನಮೋ ನಮಃ.
Very good informative n thank you so much