ತ್ಯಾಗರಾಜ ಆರಾಧನೆ ಪ್ರತಿವರ್ಷ ಪುಷ್ಯ ಬಹುಳ ಪಂಚಮಿಯಂದು ತಿರುವಯ್ಯಾರ್ನಲ್ಲಿ ಬೆಂಗಳೂರು ನಾಗರತ್ನಮ್ಮನವರು ಕಟ್ಟಿಸಿದ ಮಂದಿರದಲ್ಲಿ ನಡೆದುಬರುತ್ತಿದೆ.
ಆರಾಧನೆ ಎಂಬ ಸಂಸ್ಕೃತಭಾಷೆಯ ಪದದ ವ್ಯಾಪ್ತಿಯಲ್ಲಿ ಪೂಜೆ, ಸಾಧನೆ, ಆಚರಣೆ, ಆದರಣೆ, ಉಪಾಸನೆ, ಸಂತೋಷಪಡಿಸುವುದು, ತೃಪ್ತಿಪಡಿಸುವುದು, ಪ್ರೀತಿ, ಪ್ರೇಮ, ವಿಶ್ವಾಸ, ಸೇವೆ ಮಾಡುವುದು ಎಂಬೆಲ್ಲಾ ಅರ್ಥಗಳನ್ನು ಕಂಡುಕೊಳ್ಳಬಹುದು. ಭಕ್ತ ಮತ್ತು ದೇವನ ಅಲೌಕಿಕ ಸಂಬಂಧ; ಗುರುಶಿಷ್ಯರ ಗೌರವಾದರಗಳ ಅನುಬಂಧ; ಸೇವ್ಯ-ಸೇವಕರ ಸುಂದರ ಸ್ನೇಹಾನುಬಂಧ; ಆರಾಧ್ಯ-ಆರಾಧಕರ ಅನೂಹ್ಯ ಅನುಬಂಧಗಳು ಪೂಜೆಯ ಪರಾಕಾ?ಯಾದ ಆರಾಧನೆಯಲ್ಲಿ ಗೋಚರಿಸುತ್ತವೆ.
ಜೈನಸಿದ್ಧಾಂತದಲ್ಲಿ ಆರಾಧನೆ
ಜೈನಸಿದ್ಧಾಂತದಲ್ಲಿ ಚತುರ್ವಿಧ ಆರಾಧನೆ ಅಥವಾ ಆರಾಧನಾ ಚತುಷ್ಟಯವನ್ನು ಕಾಣುತ್ತೇವೆ. ಅವೆಂದರೆ ಸಮ್ಯಕ್ ದರ್ಶನ; ಸಮ್ಯಗ್ ಜ್ಞಾನ, ಸಮ್ಯಗ್ ಚಾರಿತ್ರ್ಯ; ಸಮ್ಯಕ್ ತಪಸ್ಸು. ಸಮ್ಯಕ್ ಎಂದರೆ ಶ್ರೇ?ವಾದುದು. ದರ್ಶನವೆಂದರೆ ತತ್ತ್ವಸಿದ್ಧಾಂತಗಳಲ್ಲಿ ದೃಢವಾದ ನಂಬಿಕೆ; ಜ್ಞಾನವೆಂದರೆ ಅವುಗಳನ್ನು ಅರಿಯಲು ಮಾಡುವ ಸಾಧನೆ; ಚಾರಿತ್ರ್ಯವೆಂದರೆ ತತ್ತ್ವಸಿದ್ಧಾಂತಗಳನ್ನು ಭಾವಶುದ್ಧಿಯಿಂದ ಸ್ವೀಕರಿಸಿ ಅನುಷ್ಠಾನದಲ್ಲಿ ಇಟ್ಟುಕೊಳ್ಳುವುದು; ತಪಸ್ಸು ಎಂದರೆ, ಹಸಿವು ಬಾಯಾರಿಕೆಗಳನ್ನು ಸಹಿಸಿ, ಪಂಚೇಂದ್ರಿಯಗಳ ಮೇಲೆ ಹತೋಟಿ ಸಾಧಿಸುವುದು. ಈ ಚತುರ್ವಿಧ ಆರಾಧನೆಯ ಮೂಲಕ ಅಂತಿಮ ಗುರಿ ಎಂದರೆ ಮೋಕ್ಷ ಸಾಧನೆ. ಶ್ರವಣಬೆಳಗೊಳದ ಎಂಟನೇ ಶತಮಾನದ ಶಾಸನದಲ್ಲಿ ಹಲವಾರು ಜೈನ ಸಂನ್ಯಾಸಿನಿಯರು ಚತು?ಯ ಆರಾಧನೆಯ ಮೂಲಕ “ಸ್ವರ್ಗಾಲಯಕ್ಕೇರಿದಾರ್…” ಎಂಬ ಉಲ್ಲೇಖವಿದೆ.
ಅನಾದಿಕಾಲದಿಂದಲೂ ಆಚಾರದಲ್ಲಿ ಬಂದಿರುವ ಹಿಂದೂಧರ್ಮದಲ್ಲಿ, ನಮ್ಮ ಸುತ್ತಣ ಪ್ರಾಣಿ ಪಕ್ಷಿ ಸಂಕುಲವನ್ನೂ (ಈಚಿuಟಿಚಿ), ಗಿಡ ಮರ ಬಳ್ಳಿಗಳನ್ನೂ (ಈಟoಡಿಚಿ) ಕಾಪಾಡುವ, ತನ್ಮೂಲಕ ಮಾನವಜೀವನವನ್ನು ಮಧುರಗೊಳಿಸುವ ಉದ್ದೇಶದಿಂದ ಇವುಗಳನ್ನು ಆರಾಧಿಸಲಾಗುತ್ತಿದ್ದಿತು. ದೇವರ ಪೂಜೆಗಾಗಿ ಬಿಲ್ವಪತ್ರೆ, ತುಳಸಿ, ಎಕ್ಕ ಮುಂತಾದವುಗಳನ್ನು ಮನೆಯಲ್ಲಿ ಬೆಳೆಯಲಾಗುತ್ತಿತ್ತು.
ಮೂಲತೋ ಬ್ರಹ್ಮರೂಪಾಯ
ಮಧ್ಯತೋ ವಿಷ್ಣುರೂಪಿಣೇ|
ಅಗ್ರತಃ ಶಿವರೂಪಾಯ
ವೃಕ್ಷರಾಜಾಯ ತೇ ನಮಃ||
– ಎಂದು ಅಶ್ವತ್ಥವೃಕ್ಷವನ್ನು ಬ್ರಹ್ಮ, ವಿಷ್ಣು, ಮಹೇಶ್ವರರ ಆವಾಸಸ್ಥಾನವನ್ನಾಗಿಸಿ, ಅದಕ್ಕೆ ಪೂಜೆ ಸಲ್ಲಿಸುತ್ತಿದ್ದರು. ಅಶ್ವತ್ಥವೃಕ್ಷದ ಪಕ್ಕ ಬೇವಿನ ಮರವನ್ನು ಬೆಳೆಸಿ, ಆ ಎರಡೂ ವೃಕ್ಷಗಳಿಗೆ ಗಂಡ-ಹೆಂಡಿರೆಂಬಂತೆ ಪ್ರಾಣಪ್ರತಿಷ್ಠಾಪನೆ ಮಾಡಿ, ಅವಕ್ಕೆ ಮದುವೆ ಮಾಡಿ, ಒಂದು ದೊಡ್ಡ ಕಟ್ಟೆ ಕಟ್ಟಿಸಿ, ನಾಗರಕಲ್ಲನ್ನೂ ಪ್ರತಿಷ್ಠಾಪನೆ ಮಾಡುತ್ತಿದ್ದರು. ಈ ಕಟ್ಟೆಯು ಹಲವಾರು ಜನರಿಗೆ ನೆರಳನ್ನು ನೀಡುತ್ತಿದ್ದದ್ದಲ್ಲದೇ ನೂರಾರು ಪ್ರಾಣಿ, ಪಕ್ಷಿ ಸಂಕುಲಕ್ಕೆ ಆಹಾರವನ್ನೂ ನೀಡುತ್ತಿದ್ದಿತು. ವಿವಿಧ ಗಿಡ ಮರಗಳು ಅನೇಕ ಮನೆಗಳ ಜನಾಂಗಗಳ ಹಾಗೂ ಕುಲಗಳ ಮನೆದೇವರಾಗಿ, ಕುಲದೇವರಾಗಿ, ಶುಭ ಸಮಾರಂಭಗಳಲ್ಲಿ ಅಗ್ರಪೂಜೆ ಪಡೆಯುತ್ತಿದ್ದವು. ಈ ರೀತಿ ಪ್ರಕೃತಿಯ ಆರಾಧನೆ ಭಾರತದೆಲ್ಲೆಡೆ ಅನಾದಿ ಕಾಲದಿಂದಲೂ ನಡೆಯುತ್ತಿದೆ.
ಇದರಂತೆಯೇ, ಪ್ರಾಣಿಕುಲ ಸಂರಕ್ಷಣೆಗಾಗಿ ಗೋವಿನಿಂದ ಮೊದಲುಗೊಂಡು ಹಾವು, ಕೋತಿ, ಹುಲಿ, ಕರಡಿ, ಇಲಿ ಮುಂತಾದ ಪ್ರಾಣಿಗಳನ್ನೂ ಗರುಡ, ನವಿಲು, ಕಾಗೆ ಮುಂತಾದ ಪಕ್ಷಿಗಳನ್ನೂ ವಿವಿಧ ಕಾರಣಗಳಿಗೆ ಪೂಜಿಸಲಾಗುತ್ತದೆ. ಇಂತಹ ಹಲವು ಪಕ್ಷಿಗಳನ್ನು ದೇವಾನುದೇವತೆಗಳ ವಾಹನಗಳಾಗಿಯೂ ಪೂಜಿಸಲಾಗುತ್ತದೆ. ಈ ಎಲ್ಲದರ ಮುಖ್ಯ ಉದ್ದೇಶ ನಮ್ಮ ಪರಿಸರದ ಬಗ್ಗೆ ಒಂದು ಧಾರ್ಮಿಕ ಭಾವನೆಯನ್ನು ಹೊಂದಿ, ಅದನ್ನು ಸಂರಕ್ಷಿಸಿ ಕಾಪಾಡುವುದೇ ಆಗಿದೆ.
ಜ್ಞಾನದ ಸಂರಕ್ಷಣೆ
ಯತಿಗಳ, ಯುಗಪುರುಷರ, ಸಾಧಕರ, ಧರ್ಮಗುರುಗಳ ಜಯಂತಿಗಳು ಮತ್ತು ಆರಾಧನೆಗಳು ನಮ್ಮ ಸಂಪ್ರದಾಯದಲ್ಲಿ ಹಾಸುಹೊಕ್ಕಾಗಿವೆ. ಇವರು ಹುಟ್ಟಿದ ದಿನವನ್ನು ಜಯಂತಿಯಾಗಿಯೂ, ಇಹಲೋಕ ತ್ಯಜಿಸಿದ ದಿನವನ್ನು ಆರಾಧನೆಯಾಗಿಯೂ ಆಚರಿಸುತ್ತೇವೆ. ಇಂತಹ ಆರಾಧನೆಯ ಪ್ರಾಚೀನತೆಯನ್ನು ಪುರಾಣಗಳಲ್ಲಿ, ಕಾವ್ಯಗಳಲ್ಲಿ, ಶಾಸನಗಳಲ್ಲಿ, ಹಾಗೂ ಇತಿಹಾಸದ ಪುಟಗಳಲ್ಲಿ ಕಾಣುತ್ತೇವೆ. ಈ ಪಟ್ಟಿಗೆ ಶಂಕರ, ಮಧ್ವ, ರಾಮಾನುಜ, ರಾಘವೇಂದ್ರರೇ ಮುಂತಾದ ಧಾರ್ಮಿಕ ಯತಿಗಳಿಂದ ಮೊದಲುಗೊಂಡು, ಸ್ವಾತಂತ್ರ್ಯ ಸಾಧಕರಾದ ಗಾಂಧಿಯವರವರೆಗೂ ಐತಿಹಾಸಿಕ, ಪೌರಾಣಿಕ ಯುಗಪುರುಷರು ಸೇರುತ್ತಾರೆ. ಇಂತಹವರ ಆರಾಧನೆಯ ಮೂಲ ಉದ್ದೇಶ ಅವರ ಜೀವನ, ಸಾಧನೆ ಕಾರ್ಯಗಳನ್ನು, ಅವರು ಬರೆದ ಗ್ರಂಥಗಳ ಮಹಾಜ್ಞಾನವನ್ನು ಸಂರಕ್ಷಿಸಿ ಮುಂದಿನ ಪೀಳಿಗೆಗೆ ನೀಡುವುದೇ ಆಗಿದೆ. ಇದು ಜ್ಞಾನಾರಾಧನೆ. ಶ್ರಾದ್ಧ ಎಂಬ ಪದವು ಲೌಕಿಕರಿಗೆ ಅನ್ವಯಿಸಲ್ಪಟ್ಟರೆ, ಆರಾಧನೆ ಎಂಬ ಪದ ಇಂತಹ ಮಹಾಮಹಿಮರಿಗೆ, ಇಹದಲ್ಲೇ ಪರವನ್ನು ಕಂಡವರಿಗೆ ತಮ್ಮ ಜೀವನಕ್ರಮ, ನಿಷ್ಠೆ, ನೇಮ, ಕೃತಿಗಳ ಮೂಲಕ ಮಾದರಿಯಾಗಿ ಬದುಕಿದವರಿಗೆ ಅನ್ವಯವಾಗುತ್ತದೆ. ಇಂತಹವರು ಅಲೌಕಿಕ ಸಾಧಕರಾದ್ದರಿಂದ ದೇವರಿಗೆ ಸಲ್ಲುವ ಎಲ್ಲ ಪೂಜಾಕ್ರಮಗಳಿಗೆ ಇವರು ಅರ್ಹರಾಗುತ್ತಾರೆ. ಇವರ ಆರಾಧನೆಗಳಲ್ಲಿ ದಶದಾನಗಳು, ತತ್ರಾಪಿ ಮುಖ್ಯವಾಗಿ ಅನ್ನದಾನ ನಡೆಯುತ್ತದೆ. ಧಾರ್ಮಿಕ ದಾರ್ಶನಿಕರಾದ ಶಂಕರ, ರಾಮಾನುಜ, ಮಧ್ವರಾದಿಯಾಗಿ ಯುಗಪುರುಷರು ತಮ್ಮ ಜ್ಞಾನಾಮೃತವನ್ನು ತಮ್ಮ ಕೃತಿಗಳ ಮೂಲಕ ಉಣಬಡಿಸಿ, ದೇಶಾತೀತರಾಗಿ, ಕಾಲಾತೀತರಾಗಿ, ಸರ್ವಜನ ಸರ್ವಕಾಲಮಾನ್ಯರಾಗಿ ಇಂದಿಗೂ ನಮ್ಮೊಂದಿಗಿದ್ದಾರೆ. ಪುರಂದರ, ಕನಕ, ತ್ಯಾಗರಾಜರಾದಿಯಾಗಿ ಸಂಗೀತಕ್ಷೇತ್ರದಲ್ಲಿ ಸಾಧನೆಮಾಡಿದವರು ತಮ್ಮ ಜೀವಿತಾವಧಿಯಲ್ಲಿಯೇ ದಂತಕಥೆಯಾಗಿ, ಮಾನವರಾಗಿದ್ದುಕೊಂಡೇ ದೈವಸ್ಥಾನಕ್ಕೇರಿದವರು. ಕುವೆಂಪುರವರು ಹೇಳುವಂತೆ “ಮಾನವನ ಅಭ್ಯುದಯಕ್ಕಾಗಿ ನೊಂದವರ್, ಬೆಂದವರ್, ಮನುಜರಂತೆಯೆ ಬಾಳಿ, ಹೋರಾಡಿ, ಸಂದವರ್…” ಇವರು ಸಂಸಾರದಲ್ಲಿದ್ದುಕೊಂಡೇ ಪರಮಪದವನ್ನೇರಿದರು. ಅವರು ಮಾನವಜನ್ಮ ದೊಡ್ಡದೆಂದು ಮಾರ್ಗದರ್ಶನ ಮಾಡಿದವರು, ಇಹಲೋಕದಲ್ಲಿ ಭಗವತ್ಭಕ್ತಿಯ ಪ್ರತಿಪಾದನೆ ಮಾಡಿದವರು.
ಇಂತಹವರ ಪಟ್ಟಿಯಲ್ಲಿ ಅಗ್ರಸ್ಥಾನ ಪಡೆಯುವವರು ತ್ಯಾಗರಾಜರು.
ಸಂತ ತ್ಯಾಗರಾಜರು ಸಂಗೀತವನ್ನು ತಮ್ಮ ಜೀವನಮಾರ್ಗವಾಗಿ ಸ್ವೀಕರಿಸಿ, ಅದನ್ನು ಮುಕ್ತಿಮಾರ್ಗವಾಗಿ ಅಭ್ಯಾಸ ಮಾಡಿದವರು. ಮೊದಲಿಗೆ ದೇವರನಾಮಗಳನ್ನು ಬರೆಯಲು ಪ್ರಾರಂಭಿಸಿ ಅದರಲ್ಲಿ ಪರಿಣತಿ ಸಾಧಿಸಿದರು. ಇವರು ರಚಿಸಿದ ಸಾವಿರಾರು ಕೀರ್ತನೆಗಳಲ್ಲಿ ನಮಗೆ ಲಭ್ಯವಿರುವುದು ೭೦೦ ಮಾತ್ರ. ಇವರ ಸಮಕಾಲೀನರಾದ ಶಾಮಶಾಸ್ತ್ರಿಗಳು (೧೭೬೨-೧೮೨೭) ಹಾಗೂ ಮುತ್ತುಸ್ವಾಮಿ ದೀಕ್ಷಿತ(೧೭೭೬-೧೮೩೫)ರಿಂದ ಇವರು ಪ್ರಭಾವಿತರಾದರು.
ಬೆಂಗಳೂರು ನಾಗರತ್ನಮ್ಮ (೧೮೭೮-೧೯೫೮)
ನಂಜನಗೂಡು ದೇವಾಲಯದಲ್ಲಿ ದೇವದಾಸಿ ನೃತ್ಯಗಾರ್ತಿಯಾದ ಬೆಂಗಳೂರು ನಾಗರತ್ನಮ್ಮ, ಪುಟ್ಟಲಕ್ಷ್ಮಿ ಹಾಗೂ ಸುಬ್ಬರಾಯರ ಮಗಳಾಗಿ ೧೮೭೮ರಲ್ಲಿ ಜನಿಸಿದರು. ಇವರ ಪೂರ್ವಜರು ಮೈಸೂರು ಆಸ್ಥಾನದ ವಿಶಿಷ್ಟ ಹಾಡುಗಾರರೂ ಸಂಗೀತ ವಿದ್ವಾಂಸರೂ ಆಗಿದ್ದರು.
ತಮ್ಮ ಐದನೇ ವಯಸ್ಸಿಗೇ ದೇವದಾಸಿಪದ್ಧತಿಗೆ ದೂಡಲ್ಪಟ್ಟರು. ಮೈಸೂರು ಮಹಾರಾಜರ ಆಸ್ಥಾನದ ಸಂಸ್ಕೃತ ಪಂಡಿತರು ಈಕೆಗೆ ಸಂಸ್ಕೃತಾಭ್ಯಾಸ ಮಾಡಿಸಿದರು. ಇದರೊಡನೆ ಇಂಗ್ಲಿಷ್, ಕನ್ನಡ ಭಾಷೆಗಳಲ್ಲಿಯೂ ಪ್ರೌಢಿಮೆ ಸಾಧಿಸಿದರು. ಮೈಸೂರು ಆಸ್ಥಾನದಲ್ಲಿ ಬಿಡಾರಂ ಕೃಷ್ಣಪ್ಪ, ವೀಣೆ ಶೇಷಣ್ಣ, ಮೈಸೂರು ವಾಸುದೇವಾಚಾರ್ಯ ಮುಂತಾದ ಮಹಾಮಹಿಮರ ಪ್ರಭಾವಕ್ಕೊಳಗಾದರು. ಅನಂತರ ಬೆಂಗಳೂರಿಗೆ ಆಗಮಿಸಿ ವಿದ್ವಾನ್ ಮುನಿಸ್ವಾಮಪ್ಪನವರಲ್ಲಿ ಕರ್ನಾಟಕ ಸಂಗೀತವನ್ನು ಅಭ್ಯಾಸ ಮಾಡಿದರು. ೧೯೦೩ರಲ್ಲಿ ಸಂಗೀತದ ಮೆಕ್ಕಾ ಎಂದು ಪ್ರಸಿದ್ಧಿಯಾದ ಮದರಾಸಿಗೆ ಪ್ರಯಾಣ ಮಾಡಿ ಉನ್ನತ ಶಾಸ್ತ್ರೀಯಸಂಗೀತ ಅಭ್ಯಾಸ ಮಾಡಿದರು. ೧೯೦೫ರಿಂದ ೧೯೩೧ರವರೆಗೆ ಇವರು ನೀಡಿದ ೧೨೩೫ ಕಛೇರಿಗಳಲ್ಲಿ ೮೪೯ ಕಛೇರಿಗಳು ಮದರಾಸಿನಲ್ಲಿ ನಡೆದವು. ಇದರಿಂದ ಅಪಾರ ಹಣಗಳಿಸಿ, ಆದಾಯ ತೆರಿಗೆ ನೀಡಿದ ಪ್ರಥಮ ಸಂಗೀತಗಾರ್ತಿ ಎನಿಸಿಕೊಂಡರು. ತ್ಯಾಗರಾಜರ ಸ್ಮಾರಕವೊಂದನ್ನು ನಿರ್ಮಾಣ ಮಾಡಬೇಕೆಂದು ಕನಸಿನಲ್ಲಿ ಪ್ರೇರೇಪಣೆಗೊಂಡು ಬಿಡಾರಂ ಕೃ?ಪ್ಪನವರ ಸಲಹೆಯಮೇರೆಗೆ ತಿರುವಯ್ಯಾರ್ಗೆ ಹೋಗಿ, ತ್ಯಾಗರಾಜರ ಸಮಾಧಿ ಇದ್ದ ಸ್ಥಳವನ್ನು ಖರೀದಿಮಾಡಿ, ೧೯೨೧ರಲ್ಲಿ ಅಲ್ಲಿ ತ್ಯಾಗರಾಜರ ದೇವಾಲಯವನ್ನು ಪ್ರಾರಂಭಿಸಿ, ೧೯೨೬ರಲ್ಲಿ ಪೂರ್ಣಗೊಳಿಸಿದರು. ಈ ಕಾರ್ಯದಲ್ಲಿ ಅವರಿಗೆ ಸಂಪೂರ್ಣ ಮಾರ್ಗದರ್ಶನ ನೀಡಿದವರು, ಅವರನ್ನು ಚೆನ್ನಾಗಿ ಬಲ್ಲವರಾಗಿದ್ದ ಚಕ್ರವರ್ತಿ ಸಿ. ರಾಜಗೋಪಾಲಾಚಾರಿ ಮೊದಲಾದವರು.
ವಾರ್ಷಿಕ ತ್ಯಾಗರಾಜ ಆರಾಧನೆಯನ್ನು ’ಪೆರಿಯ ಕಚ್ಚಿ’, ’ಚಿನ್ನ ಕಚ್ಚಿ’ ಎಂಬ ಎರಡು ತಂಡಗಳು ನಡೆಸುತ್ತಿದ್ದವು. ಮಹಿಳೆ ಎಂಬ ಏಕೈಕ ಕಾರಣದಿಂದ ಇವರು ನಾಗರತ್ನಮ್ಮನವರಿಗೇ ಆರಾಧನೆಯಲ್ಲಿ ಭಾಗವಹಿಸಲು ಪ್ರವೇಶ ನೀಡಲಿಲ್ಲ. ಇದನ್ನು ಸವಾಲಾಗಿ ಸ್ವೀಕರಿಸಿದ ನಾಗರತ್ನಮ್ಮ, ತ್ಯಾಗರಾಜರ ದೇವಸ್ಥಾನದ ಹಿಂದೆ ವಿಶೇಷ ಚಪ್ಪರ ನಿರ್ಮಿಸಿ ಆರಾಧನೆ ನಡೆಸಿದರು. ಈ ಎಲ್ಲಾ ವೈರುಧ್ಯಗಳನ್ನು ಗಮನಿಸಿದ ಐಸಿಎಸ್ ಅಧಿಕಾರಿಯಾಗಿದ್ದ ಎಸ್.ವೈ. ಕೃಷ್ಣಸ್ವಾಮಿ ಮತ್ತು ಚಕ್ರವರ್ತಿ ರಾಜಗೋಪಾಲಾಚಾರಿಯವರು ೧೯೪೧ರಲ್ಲಿ ಎಲ್ಲಾ ಗುಂಪುಗಳನ್ನು ಒಂದುಗೂಡಿಸಿ,
ಎಲ್ಲರೂ ಒಟ್ಟಿಗೇ ಏಕಕಾಲಕ್ಕೆ ಆರಾಧನೆ ಸಲ್ಲಿಸುವ ಏರ್ಪಾಡು ಮಾಡಿದರು. ಈ ಆರಾಧನೆಯಲ್ಲಿ ಏಕರೂಪದಲ್ಲಿ ಹಾಡಲು ತ್ಯಾಗರಾಜರ ಪಂಚರತ್ನಕೃತಿಗಳನ್ನು ಆಯ್ಕೆ ಮಾಡಿದವರು ವಿ. ಹರಿಕೇಸನಲ್ಲೂರು ಮುತ್ತಯ್ಯ ಭಾಗವತರ್. ಅಂದಿನಿಂದ ಇಂದಿನವರೆಗೆ ಜಗತ್ತಿನಾದ್ಯಂತ ನಡೆಯುವ ತ್ಯಾಗರಾಜರ ಆರಾಧನೆಯ ದಿನ ತಪ್ಪದೇ ಈ ಪಂಚರತ್ನ ಕೀರ್ತನೆಗಳನ್ನು ಹಾಡಲಾಗುವುದು. (ಪಂಚರತ್ನ ಕೀರ್ತನೆಗಳು: ೧. ಜಗದಾನಂದಕಾರಕ – ನಾಟ ರಾಗ; ೨. ದುಡುಕುಗಲ – ಗೌಳ ರಾಗ; ೩. ಸಾಧಿಂಚೆನೆ – ಆರಭಿ ರಾಗ; ೪. ಕನಕನ ರುಚಿರಾ – ವರಾಳಿ ಮತ್ತು ೫. ಎಂದುರೊ ಮಹಾನುಭಾವುಲು – ಶ್ರೀ ರಾಗ)
ಬೆಂಗಳೂರು ನಾಗರತ್ನಮ್ಮನವರು ತಮ್ಮ ಜೀವನದ ಸಂಧ್ಯಾಕಾಲವನ್ನು ತಿರುವಯ್ಯಾರಿನಲ್ಲೇ ಕಳೆದರು, ತಾವು ಸಂಪಾದಿಸಿದ ಸಕಲ ಐಶ್ವರ್ಯವನ್ನು ತ್ಯಾಗರಾಜರ ಸ್ಮಾರಕಕ್ಕೆ ಒಂದು ಶರತ್ತಿನೊಡನೆ ಅರ್ಪಿಸಿದರು. ಅದೆಂದರೆ, ಪ್ರತಿ ಆರಾಧನೆಯಲ್ಲಿ ಮಹಿಳೆಯರೂ ಸಹ ಯಾವುದೇ ವಿರೋಧವಿಲ್ಲದೆ ಗೋಷ್ಠಿಗಾಯನದಲ್ಲಿ ಭಾಗವಹಿಸಲು ಅವಕಾಶ ನೀಡಬೇಕು – ಎಂಬುದು ಆಗಿದ್ದಿತು.
ನಾಗರತ್ನಮ್ಮನವರು ೧೯೫೨ರಲ್ಲಿ ಇಹಲೋಕ ತ್ಯಜಿಸಿದರು. ಅವರನ್ನು ತ್ಯಾಗರಾಜರ ಸಮಾಧಿಯ ಬಳಿಯಲ್ಲಿ ಸಮಾಧಿ ಮಾಡಲಾಯಿತು. ಅಂತಿಮ ದರ್ಶನಕ್ಕೆ ಆಗಮಿಸಿದ್ದ ರಾಜಗೋಪಾಲಾಚಾರಿಯವರು ಅಲ್ಲಿಯೇ ಎಂಟು ದಿನ ತಂಗಿದ್ದು, ಸಮಾಧಿಯ ಮೇಲೆ ಆಕೆಯ ಪುತ್ಥಳಿ ನಿರ್ಮಾಣವಾದ ಬಳಿಕ ವಾಪಸ್ಸಾದರು.
ಬೆಂಗಳೂರು ನಾಗರತ್ನಮ್ಮನವರ ಶಿಷ್ಯ ಖ್ಯಾತ ತೆಲಗು ನಟ, ನಿರ್ದೇಶಕ ಚಿತ್ತೂರು ವಿ. ನಾಗಯ್ಯ ತ್ಯಾಗರಾಜರ ಬಗ್ಗೆ ’ತ್ಯಾಗಯ್ಯ’ ಎಂಬು ತೆಲಗು ಚಲನಚಿತ್ರ ನಿರ್ಮಿಸಿ, ಅದರಲ್ಲಿ ಅಪಾರ ಹಣ ಗಳಿಸಿ, ಇದರ ಒಂದು ಭಾಗದಲ್ಲಿ ತಿರುವಯ್ಯಾರಿನಲ್ಲಿ ಒಂದು ಮನೆಯನ್ನು ಖರೀದಿಸಿ ಅದನ್ನು ಗುರುದಕ್ಷಣೆಯಾಗಿ ನಾಗರತ್ನಮ್ಮನವರಿಗೆ ನೀಡಿದರು. ನಾಗರತ್ನಮ್ಮನವರು ಅದನ್ನು ತ್ಯಾಗರಾಜರ ಸ್ಮಾರಕವಾಗಿರಿಸಿದರು. ಇಂದು ತಿರುವಯ್ಯಾರಿನಲ್ಲಿ ಇದೇ ಮನೆ ಒಂದು ಪ್ರೇಕ್ಷಣೀಯ ಸ್ಥಳವಾಗಿದೆ.
ಹೀಗೆ ತ್ಯಾಗರಾಜರ ಆರಾಧನೆಗೆ ಒಬ್ಬ ಕನ್ನಡತಿ ನೀಡಿದ ಕಾಣಿಕೆ ಅಪಾರವಾಗಿದ್ದು, ಕನ್ನಡಿಗರೆಲ್ಲಾ ಹೆಮ್ಮೆಪಡುವ ವಿಷಯವಾಗಿದೆ. ಕರ್ನಾಟಕದಲ್ಲಿ ಮಾತ್ರವಲ್ಲದೆ ದೇಶದಾದ್ಯಂತ ಹಾಗೂ ಹೊರದೇಶಗಳಲ್ಲಿ ತ್ಯಾಗರಾಜರ ಆರಾಧನೆ ಅವರ ಶಿಷ್ಯಕೋಟಿಯಿಂದ ಪ್ರತಿವರ್ಷ ನಡೆಸಲಾಗುತ್ತದೆ. (ನೆರವು: ಡಾ. ಎ.ಪಿ.ರಾವ್, ಶ್ರೀ ಹೆಚ್.ಎನ್. ನರಹರಿ ರಾವ್)