ನಾನು ಭಾರತದಿಂದ ಹೊರಟಾಗಿನ ಮಹತ್ತ್ವಾಕಾಂಕ್ಷೆಯ ಬದುಕು ನನ್ನದಾಗಿದೆ. ಮಹಿಳಾ ಉದ್ಯಮಿಗಳಲ್ಲಿ ಜಗತ್ತಿನಲ್ಲಿಯೇ ನಂಬರ್ಒನ್ ಎಂದು ಫೋರ್ಬ್ಸ್ ಪಟ್ಟಿಯಲ್ಲಿ ಹೆಸರು ಕಾಣಿಸಿದೆ. ನನ್ನೆಲ್ಲಾ ಕನಸುಗಳು ಸಾಕಾರಗೊಂಡಿವೆ. ಆದರೆ….
ಆಫೀಸಿನಿಂದ ವಸುಮತಿ ಮನೆಗೆ ಬಂದಾಗ ಗಡಿಯಾರದ ಮುಳ್ಳು ರಾತ್ರಿ ಒಂದು ಘಂಟೆ ತೋರಿಸುತ್ತಿತ್ತು. ಮಗಳು ಸುರೇಖಾಳೊಡನೆ ಮಾತಾಡಬೇಕಾಗಿತ್ತು ಎಂಬುದು ನೆನಪಾಯಿತು. ಆದರೆ ಅಲ್ಲಿ ಈಗ ರಾತ್ರಿ ಮೂರು ಘಂಟೆ. ಸಕ್ಕರೆಯ ನಿದ್ದೆಯಲ್ಲಿರಬಹುದು. ನಿದ್ದೆಗೆ ಭಂಗವಾಗುವುದು ಬೇಡ ಎಂದು ಸುಮ್ಮನಾದಳು. ಒಂದು ವರ್ಷದ ನಂತರ ಇದೀಗ ಕರೆಮಾಡಿದ್ದಳು.
ಒಂದು ವರ್ಷದ ಹಿಂದೆ ಹೀಗೆ ಮಧ್ಯಾಹ್ನವೇ ಫೋನ್ ಮಾಡಿದ್ದಳು. ಮಾತಿನಲ್ಲಿ ಹ?ದ ಹೊನಲು ಹರಿದಿತ್ತು. ಕನಸಿನ ರಾಜಕುಮಾರನನ್ನೇ ವರಿಸಿದ್ದಳು. ಸಂದೇಶ ಒಳ್ಳೆಯ ಹುಡುಗ. ಉನ್ನತ ವಿದ್ಯಾಭ್ಯಾಸ ಮಾಡಿ ಪ್ರತಿಷ್ಠಿತ ಕಂಪೆನಿಯ ಸಿ.ಇ.ಓ. ಆಗಿದ್ದ. ಅವಳ ಆಯ್ಕೆಯನ್ನು ತಳ್ಳಿಹಾಕುವ ಸಂಭವವೇ ಇದ್ದಿಲ್ಲ. ಸಂಪೂರ್ಣ ಸಮ್ಮತಿಯ ಮುದ್ರೆಯೊತ್ತಿದ್ದೆ. ಅವಳ ತಂದೆ ಇದ್ದಿದ್ದರೆ ಅದೆಷ್ಟು ಖುಶಿ ಪಡುತ್ತಿದ್ದರೋ.
“ಅಮ್ಮಾ ನಾನೀಗ ಆಸ್ಪತ್ರೆಯಿಂದ ಬರುತ್ತಾ ಇದ್ದೇನೆ. ನಾನು ತಾಯಿಯಾಗುತ್ತಾ ಇದ್ದೇನೆ’ ಎಂದು ಡಾಕ್ಟರ್ ಹೇಳಿದರು. ’ಮೊಟ್ಟ ಮೊದಲು ನಿನಗೆ ಫೋನ್ ಮಾಡುತ್ತಾ ಇದ್ದೇನೆ” ಹೆಣ್ಣಿನ ಜೀವನದ ಅತ್ಯಂತ ಸಂಭ್ರಮದ ವಿ?ಯ ಹೇಳಿದ್ದಳು. ಅವಳ ಫೋನಿಗೆ ಕಿವಿಯಾಗಿದ್ದೆನಾದರೂ, ಸರಿಯಾಗಿ ಮಾತಾಡಲು ಆಗಿರಲಿಲ್ಲ. ’ಮಗಳೇ ನಂತರ ಮಾತಾಡುತ್ತೇನೆ’ ಎಂದು ಡಿಸ್ಕನೆಕ್ಟ್ ಮಾಡಿದ್ದೆ.
ನನ್ನ ಸಂಸ್ಥೆಯು ಉತ್ಪಾದಿಸಿದ ಸರಕನ್ನು ಪರಿಶೀಲಿಸಲು ವಿದೇಶದಿಂದ ಪ್ರತಿನಿಧಿಗಳ ತಂಡ ಒಂದು ಬರುವುದಿತ್ತು. ಅವರಿಗೆ ಸರಕನ್ನು ತೋರಿಸಬೇಕು. ಅವರು ಕೇಳುವ ಮಾಹಿತಿಯನ್ನು ವಿವರಿಸಲು ಸಿದ್ಧತೆ ಮಾಡಿಕೊಳ್ಳಬೇಕಿತ್ತು. ಒಂದಿಷ್ಟು ವ್ಯತ್ಯಯವಾದರೂ ದೊಡ್ಡ ಪ್ರಮಾಣದ ನಷ್ಟ ಉಂಟಾಗುತ್ತಿತ್ತು. ಇಂತಹ ಗಡಿಬಿಡಿಯಲ್ಲಿ ಅವಳ ಫೋನಿಗೆ ಸ್ಪಂದಿಸಲು ಅವಕಾಶವಾಗಿರಲಿಲ್ಲ. ಸ್ವಂತ ಉದ್ದಿಮೆಯವರಿಗೆ ಇದೊಂದು ತಲೆ ಭಾರ. ಸರಕಾರಿ ಕೆಲಸವಾದರೆ ಸಮಯವಾಗುತ್ತಲೇ ಆಫೀಸಿಗೆ ಬೀಗ. ನಂತರ ತಮ್ಮ ಮನೆ ಮಕ್ಕಳೊಂದಿಗೆ ಬೆರೆಯಲು ಸಮಯ ಸಿಗುತ್ತಿತ್ತು.
ಅವಳ ಯೋಚನೆ ಹಿಂದಕ್ಕೆ ಹೋಯಿತು. ತಾನುಕೂಡಾ ಚೊಚ್ಚಲ ಬಸುರಿಯಾದಾಗ ಅಮ್ಮನಿಗೆ ಫೋನು ಮಾಡಿದ್ದೆ. ಮಾತಿನಲ್ಲಿ ಗಂಟೆಗಳು ಕಳೆದದ್ದೇ ಅರಿವಿಗೆ ಬಂದಿರಲಿಲ್ಲ. ಅದೆಂತಹ ಸಂಭ್ರಮ. ಹೆಣ್ಣಿನ ಜೀವನದ ಸಾರ್ಥಕತೆಯ ಭಾವ. ಮರುದಿನವೇ ಅಪ್ಪ ಸಿಹಿತಿಂಡಿಗಳೊಂದಿಗೆ ಅಳಿಯನ ಮನೆಗೆ ಬಂದಿದ್ದರು. ಹೃದಯದ ಕಾಯಿಲೆಯಿಂದ ಬಳಲುತ್ತಿದ್ದ ಅವರನ್ನು ಕಂಡು ನನಗೆ ಆಶ್ಚರ್ಯವಾಗಿತ್ತು. ’ಅಪ್ಪಾ ನೀವ್ಯಾಕೆ ಬರುವ ತೊಂದರೆ ತೆಗೆದುಕೊಂಡಿರಿ? ಡಾಕ್ಟರರ ಸಲಹೆಯನ್ನು ಮೀರಿ ನೀವು ಪ್ರಯಾಣಿಸಿದ್ದೀರಿ’ ಎಂದು ಆತಂಕ ವ್ಯಕ್ತಪಡಿಸಿದ್ದೆ. ಮಗಳೇ ಇಂತಹ ಸಂತಸದ ಸಮಯದಲ್ಲೂ ನಾನು ಬಾರದಿದ್ದರೆ, ನನಗೆ ಅಥವಾ ನನ್ನ ಈ ಹೃದಯಕ್ಕೆ ಏನು ಅರ್ಥವಿದೆ ಎಂದಿದ್ದರು.
ಚಿಕ್ಕಂದಿನಲ್ಲಿ ನಾವು ಅವರನ್ನು ಸರ್ವಾಧಿಕಾರಿ ಹಿಟ್ಲರನಿಗೆ ಹೋಲಿಸುತ್ತಿದ್ದೆವು. ಮನೆಯಲ್ಲಿ ಅವರು ಹೇಳಿದ್ದೇ ನಡೆಯಬೇಕು. ಅಮ್ಮ ಕೂಡಾ ಅವರೆದುರು ಉಸಿರೆತ್ತುತ್ತಿರಲಿಲ್ಲ. ’ಹಿಟ್ಲರ್ ಅಪ್ಪ’ ಎಂದೇ ಆಡಿಕೊಳ್ಳುತ್ತಿದ್ದೆವು. ’ಅಪ್ಪಾ, ಬಹುಶಃ ನಾನು ಎಂಟನೇ ತರಗತಿಯಲ್ಲಿದ್ದೆ. ಒಂದು ಪೆನ್ಸಿಲ್ ತೆಗೆದುಕೊಳ್ಳಲು ಮನೆಯ ಎದುರಿಗಿರುವ ಸ್ಟೇ?ನರಿ ಅಂಗಡಿಗೆ ಹೊರಟಿದ್ದೆ. ಆಗ ನೀವು ಬೈದು ತಡೆದಿದ್ದೀರಿ’ ಎಂದು ನೆನಪಿಸಿದೆ. ’ಹೌದು ಮಗಳೆ, ಅದು ಹೆಣ್ಣಾದ ನಿನಗೋಸ್ಕರ ಅವಶ್ಯವಾಗಿತ್ತು.’ ಅದರ ಅರ್ಥ ನನಗೆ ಈಗ ಆಗುತ್ತಿದೆ.
ಆಗ ಅಪ್ಪ ಬೈದಿದ್ದರೂ ಸಂಜೆ ಮನೆಗೆ ಬರುವಾಗ ಒಂದಲ್ಲ ಎರಡು ಪೆನ್ಸಿಲ್ ತಂದುಕೊಟ್ಟಿದ್ದರು. ಅವರ ಹೃದಯ ಅಷ್ಟು ಮೃದು ಎಂಬುದನ್ನು ನಾವು ಅರ್ಥಮಾಡಿಕೊಳ್ಳುವಷ್ಟು ಪ್ರಬುದ್ಧರಾಗಿರಲಿಲ್ಲ. ಮುಂದೆಯೂ ಅಂತಹ ಎಷ್ಟು ಪ್ರಸಂಗಗಳು ನಡೆದಿದ್ದವು.
ಅಮ್ಮ ಬಿಕ್ಕಿಬಿಕ್ಕಿ ಅಳುತ್ತಲೇ ಫೋನ್ ಮಾಡಿದ್ದಳು. ’ವಸೂ, ನಿನ್ನಪ್ಪನಿಗೆ ಹೃದಯಾಘಾತವಾಗಿದೆ. ಆಸ್ಪತ್ರೆಗೆ ಸೇರಿಸಿದ್ದೇವೆ. ನಿನ್ನ ದೊಡ್ಡಪ್ಪ ದೊಡ್ಡಮ್ಮ, ಅವರ ಗೆಳೆಯರು ಎಲ್ಲ ಬಂದಿದ್ದಾರೆ. ಡಾಕ್ಟರ್ ಆಪರೇ?ನ್ ಮಾಡಬೇಕು ಎನ್ನುತ್ತಾರೆ. ಅವರು ಯಾರು ಹೇಳಿದರೂ ಒಪ್ಪುವುದಿಲ್ಲ. ಕೆಲಸದಿಂದ ನಿವೃತ್ತನಾಗಿದ್ದೇನೆ. ಮೊಮ್ಮಕ್ಕಳನ್ನೂ, ಮರಿಮಕ್ಕಳನ್ನೂ ಎತ್ತಿ ಆಡಿಸಿದ್ದೇನೆ. ಇನ್ನು ಆಪರೇ?ನ್ನಿಂದ ಏನಾಗಬೇಕು? ಹೀಗೆ ಒಂದೆರಡು ವರ್ಷ ಬದುಕಲೂಬಹುದು. ಇಲ್ಲದಿದ್ದರೂ ನನ್ನ ಮಟ್ಟಿಗೆ ಏನೂ ವ್ಯತ್ಯಾಸವಾಗುವುದಿಲ್ಲ. ಆಪರೇಷನ್ ನಂತರ ಎಷ್ಟು ದಿನ ಬದುಕಿಯೇನು? ನಿಮ್ಮನ್ನೇಕೆ ಆರ್ಥಿಕಸಂಕಷ್ಟಕ್ಕೆ ದೂಡಲಿ? ಎನ್ನುತ್ತಾರೆ. ನನಗೇನೂ ತೋಚುತ್ತಿಲ್ಲ.’
ಚಿಕ್ಕಂದಿನಿಂದಲೂ ಅಪ್ಪನ ಹಟ ಕಂಡವಳು ನಾನು. ಎಷ್ಟು ಮುಖ್ಯವಾದ ಕೆಲಸವಿದ್ದರೂ ನಾನೀಗ ಅಪ್ಪನ ಬಳಿ ಇರಬೇಕು ಎಂದು ಆಸ್ಪತ್ರೆಗೆ ಧಾವಿಸಿದ್ದೆ. ದೊಡ್ಡಪ್ಪ ನನಗಾಗಿ ಕಾದಿದ್ದರು. ’ವಸೂ ಚಿಕ್ಕಂದಿನಿಂದಲೂ ಅವನು ತುಂಬಾ ಹಟಮಾರಿ. ನಿನಗೆ ಗೊತ್ತೇ ಇದೆ. ಯಾರ ಮಾತೂ ಕೇಳುವವನಲ್ಲ. ನಾವೆಲ್ಲ ಅವನಿಗೆ ಹೇಳಿಹೇಳಿ ಸುಸ್ತಾಗಿದ್ದೇವೆ. ಇನ್ನು ನೀನುಂಟು, ಅವನುಂಟು’ ಎಂದು ಎಲ್ಲರೂ ಕೋಣೆಯಿಂದ ಹೊರಗೆ ಹೋದರು. ಅಲ್ಲಿ ಮೌನ ಆವರಿಸಿತು. ಕೋಣೆಯಲ್ಲಿ ನಾನು ಮತ್ತು ಅಪ್ಪ ಮಾತ್ರ.
ಅಪ್ಪನ ಸ್ಥಿತಿ ಕಂಡು ಕಣ್ಣು ತುಂಬಿಬಂದಿತ್ತು. ಎಂತಹ ಕಠಿಣ ಪರಿಸ್ಥಿತಿಗೂ ಜಗ್ಗದ ಅಪ್ಪ, ಹೃದಯಾಘಾತದಿಂದ ತೀರ ಕಂಗೆಟ್ಟಿದ್ದ. ಕಂಪಿಸುವ ಸ್ವರದಿಂದಲೇ ಅಪ್ಪನಿಗೆ ತಿಳಿಸಿಹೇಳುವ ಯತ್ನ ಮಾಡಿದ್ದೆ. ’ಡಾಕ್ಟರ್ ನಿಮಗೆ ಆಪರೇಷನ್ ಮಾಡಲೇಬೇಕೆಂದು ಹೇಳಿದ್ದಾರಪ್ಪಾ’ ಎಂದು ಅವರ ಕೈ ಹಿಡಿದಿದ್ದೆ.
ಅವರ ಕಣ್ಣಂಚಿನಿಂದ ನೀರು ಜಿನುಗಿತು. ’ಮಗಳೇ ನೀವೆಲ್ಲಾ ಚೆನ್ನಾಗಿ ಯೋಚಿಸಿ ಹೇಳಿ.’ ಅಪ್ಪ ನನ್ನ ಮಾತು ಕೇಳುತ್ತಾನೆಂಬ ಭರವಸೆಯಾಯಿತು. ಅಂದಿನಿಂದ ಅಪ್ಪನಿಗೆ ಆದೇಶ ಕೊಡಲು ಪ್ರಾರಂಭಿಸಿದೆ. ನಗುನಗುತ್ತಲೇ ಸಮ್ಮತಿಸುತ್ತಿದ್ದರು. ಸರ್ವಾಧಿಕಾರಿ ಹಿಟ್ಲರ ಅಪ್ಪನಿಗೆ ಆದೇಶ ಕೊಡುತ್ತಾ ನನಗರಿವಿಲ್ಲದಂತೆ ನಾನೇ ಹಿಟ್ಲರ್ ಆಗಿದ್ದೆ. ಅಪ್ಪನ ಮೇಲೆ ನನ್ನ ನಿರ್ಣಯ ಹೇರುತ್ತಿದ್ದೆ.
ವಸುಮತಿಯ ಯೋಚನಾಲಹರಿ ಹಿಂದಕ್ಕೋಡಿತು. ನಾನು ಅಪ್ಪನಿಗೆ ಆದೇಶ ಕೊಡುತ್ತಿದ್ದುದೇನೋ ನಿಜ. ಆದರೆ, ಮದುವೆಯಾಗಿ ಪತಿಗೃಹ ಸೇರಿದ ಮೇಲೆ, ಪತಿದೇವರ ಆದೇಶ ಪಾಲಿಸುವುದು ಅನಿವಾರ್ಯವಾಗಿತ್ತು. ಚಹಾ ಮಾಡಿ ತಂದು ಅವರ ಮುಂದಿಟ್ಟು ಕುಡಿಯಿರಿ ಎಂದು ಹೇಳಿಹೋದರೆ ಅವರು ತಮ್ಮ ಆಫೀಸಿನ ಕೆಲಸದಲ್ಲಿ ಅದನ್ನು ಮರೆತುಬಿಡುತ್ತಿದ್ದರು. ಅರ್ಧ ಘಂಟೆಯ ನಂತರ ’ವಸೂ, ಚಹಾ ಆರಿದೆ, ಬಿಸಿ ಮಾಡಿ ತಾ’ ಎಂಬ ಅದೇಶ ಹೊರಡಿಸುತ್ತಿದ್ದರು. ಮೊದಮೊದಲು ನನ್ನನ್ನು ಸತಾಯಿಸಲು ಹಾಗೆ ಮಾಡುತ್ತಾರೆಂದು ಸಿಟ್ಟು ಮಾಡುತ್ತಿದ್ದೆ. ಪುನಃ ಬಿಸಿಮಾಡಿ ತಂದು ಅವರ ಎದುರು ಕುಳಿತು ’ಬಿಸಿಮಾಡಿ ತಂದಿದ್ದೇನೆ, ಈಗ ಕುಡಿಯಿರಿ’ ಎಂದರೆ ನನ್ನನ್ನು ತೋಳುಗಳಿಗೆ ಎಳೆದುಕೊಂಡು ’ಚಂದನದ ಗೊಂಬೆಯಂತಹ ಹೆಂಡತಿ ಹತ್ತಿರವಿರುವಾಗ ಚಹಾ ಬಿಸಿ ಇದ್ದರೇನು? ತಣ್ಣಗಿದ್ದರೇನು?’ ಎಂದು ರಮಿಸುತ್ತಿದ್ದರು. ಆಗ ಚಹಾದ ಬದಲು ನನ್ನ ಸಿಟ್ಟು ತಣ್ಣಗಾಗುತ್ತಿತ್ತು.
ಸಂಸಾರದಲ್ಲಿ ಸಣ್ಣಪುಟ್ಟ ಜಗಳಗಳು, ಸಿಟ್ಟು ಸೆಡವು, ಆಗಾಗ ನಡೆಯುತ್ತಾ ಸಂಸಾರದ ರಥ ಸುಗಮವಾಗಿ ಸಾಗಿತ್ತು. ಸರ್ವಾಧಿಕಾರಿಗಳೆಂದು ಕರೆಸಿಕೊಂಡಿದ್ದ ಅಪ್ಪ, ಮತ್ತು ಪತಿ ಎ?ಂದು ಹೃದಯವಂತರು ಎಂದು ಅರ್ಥವಾಗಿತ್ತು. ಕಣ್ಣಾರೆ ಕಂಡರೂ ಪರಾಂಬರಿಸಿ ನೋಡು ಎಂಬ ಹಿರಿಯರ ಮಾತು ನೆನಪಾಗುತ್ತಿತ್ತು.
ನಾವಿಬ್ಬರೂ ಬೇರೆಬೇರೆ ಕಂಪೆನಿಗಳಲ್ಲಿ ಕೆಲಸಮಾಡುತ್ತಿದ್ದೆವು. ಆರ್ಥಿಕವಾಗಿ ಯಾವುದೇ ಸಂಕಷ್ಟವಿರಲಿಲ್ಲ. ಆದರೆ, ನನಗೆ ಕಂಪೆನಿಯಲ್ಲಿ ಪ್ರಮೋ?ನ್ ಸಿಗದ ಬೇಸರವಿತ್ತು. ನನಗೆ ಒಳ್ಳೆಯ ಕೆಲಸದೊಂದಿಗೆ ಒಳ್ಳೆಯ ಸಂಬಳ ಸಿಗುವುದೂ ಮುಖ್ಯವಾಗಿತ್ತು. ಆ ಸಮಯದಲ್ಲಿ ಬೇರೊಂದು ಕಂಪೆನಿಯಿಂದ ಕರೆ ಬಂದಿತ್ತು. ಒಳ್ಳೆಯ ಸಂಬಳದ ಜೊತೆಗೆ ಕಂಪೆನಿಯ ಮೆನೇಜರ್ ಹುದ್ದೆ. ನನಗೆ ಸಿಗುತ್ತಿದ್ದ ಸಂಬಳಕ್ಕಿಂತ ಹತ್ತುಪಾಲು ಹೆಚ್ಚು, ಜೊತೆಗೆ ದೊಡ್ಡ ಹುದ್ದೆ. ಕೈಕೆಳಗೆ ಐವತ್ತುಮಂದಿ ಗುಮಾಸ್ತರು, ಓಡಾಡಲು ಕಾರು. ಆದರೆ ಅದು ವಿದೇಶದಲ್ಲಿ. ಭಾರತಕ್ಕೆ ಬಂದು ಹೋಗಲು ಅವಕಾಶಕೊಡುತ್ತೇವೆ ಎಂಬ ಆಶ್ವಾಸನೆಯನ್ನು ಕೊಟ್ಟಿದ್ದರು. ಇದೊಂದು ಒಳ್ಳೆಯ ಸಂದರ್ಭವೆಂದು ಮನಸ್ಸಿಗೆ ಬಂತು. ಇಂತಹ ಸಂದರ್ಭ ಮುಂದೆ ಸಿಗುತ್ತದೋ ಇಲ್ಲವೋ ಯಾರಿಗೆ ಗೊತ್ತು? ಪತಿದೇವರು ಅದನ್ನು ಮೊದಲು ನಿರಾಕರಿಸಿದರು. ನಾನು ಇಂತಹ ಒಳ್ಳೆಯ ಸಂದರ್ಭ ಬಿಡಲೊಪ್ಪದೇ ಹಟಮಾಡಿದ್ದರಿಂದ ಕೊನೆಗೂ ಹೋಗಲು ಒಪ್ಪಿಕೊಂಡರು. ನನ್ನಲ್ಲಿಯ ’ಸರ್ವಾಧಿಕಾರಿ’ ಪ್ರವೃತ್ತಿ ಗೆದ್ದಿತು.
ಅಮೆರಿಕದ ನನ್ನ ವಾಸ್ತವ್ಯದ ಅನುಭವ ಸ್ವಲ್ಪ ತಿರುಗುಮುರುಗಾಯಿತು. ಅಲ್ಲಿಗೆ ಹೋದನಂತರ ಪರಿಸ್ಥಿತಿ ಅಧ್ಯಯನ ಮಾಡಿದೆ. ನಾನು ಸೇರಿದ ಕಂಪೆನಿಗಿಂತಲೂ ಹೆಚ್ಚಿನ ಸಂಬಳ ಕೊಡುವ ಕಂಪೆನಿಗಳು ಇದ್ದವು. ಒಂದೇ ವ?ದಲ್ಲಿ ನಾಲ್ಕೈದು ಕಂಪೆನಿಗಳನ್ನು ಬದಲಾಯಿಸಿದೆ. ವ್ಯವಹಾರದ ಸೂಕ್ಷ್ಮತೆ ಕರಗತವಾಯಿತು. ಕೊನೆಗೆ ನನ್ನದೇ ಆದ ಸ್ವಂತ ಸಂಸ್ಥೆಯೊಂದನ್ನು ಸ್ಥಾಪಿಸಿದೆ. ನನ್ನಲ್ಲಿಯ ಎಲ್ಲಾ ಕುಶಲತೆಗಳನ್ನು ಧಾರೆಯೆರೆದೆ. ಉದ್ಯಮ ದಿನದಿನವೂ ವೃದ್ಧಿಸಿತು.
ರಕ್ತದ ರುಚಿಕಂಡ ಹುಲಿಯಂತಾದೆ. ಇನ್ನೂ ಹೆಚ್ಚಿನ ಹಣಗಳಿಸಬೇಕು. ವಿದೇಶದಲ್ಲಿಯೂ ನನ್ನ ಛಾಪು ಮೂಡಿಸಬೇಕೆಂದು ಹಗಲಿರುಳು ಶ್ರಮಿಸಿದೆ. ದಿನಗಳು ಕಳೆದದ್ದೇ ಗೊತ್ತಾಗಲಿಲ್ಲ. ಹದಿನೈದು ವ?ಗಳೇ ಕಳೆದುಹೋಗಿದ್ದವು. ಬಹುಶಃ ಒಂದೆರೆಡು ಬಾರಿ ಕೆಲವು ದಿನಗಳ ಮಟ್ಟಿಗೆ ಭಾರತಕ್ಕೆ ಬಂದುಹೋಗಿದ್ದೆ ಇತ್ತೀಚೆಗಂತೂ ಭಾರತ ಮತ್ತು ಸಂಸಾರ ಎರಡೂ ಮರೆತುಹೋಗಿತ್ತು.
ಹಿಂದಿನ ದಿನಗಳನ್ನು ನೆನೆದು ವಸುಮತಿಗೆ ತಾನು ಏನನ್ನೊ ಕಳಕೊಂಡಂತಾಗಿತ್ತು. ನೆನಪುಗಳು ಧಾಂಗುಡಿಯಿಟ್ಟವು. ಮಗಳನ್ನು ಪ್ರತಿಷ್ಠಿತ ಶಾಲೆಗೆ ಸೇರಿಸಿದ್ದರು ಪತಿ. ಆದರೆ ಅವರು ಟೂರಿಗೆ ಹೋಗಬೇಕಾಗುತ್ತಿತ್ತು. ಆಗ ಚಿಕ್ಕ ಹುಡುಗಿ ಒಬ್ಬಂಟಿಯಾಗುತ್ತಿದ್ದಳು. ಮನೆಗೆಲಸದವರ ಆರೈಕೆಯಿದ್ದರೂ, ಆ ಸಮಯದಲ್ಲಿ ಅಗತ್ಯವಾದ ತಾಯಿ-ತಂದೆಯರ ಸಹಯೋಗದಿಂದ ವಂಚಿತಳಾಗುತ್ತಿದ್ದಳು. ಅಪ್ಪ ಟೂರಿಗೆ ಹೋದಾಗ ಇಡೀ ದಿನ ಅಳುತ್ತಾ ಕೂರುತ್ತಿದ್ದಳಂತೆ. ಸಂದೇಶ ಮಗಳಿಂದ ಒಂದೆರಡುದಿನ ದೂರವಾಗುತ್ತಿದ್ದವರು, ಕೊನೆಗೆ ತಿಂಗಳಾನುಗಟ್ಟಲೆ ಹೊರದೇಶಗಳಿಗೆ ಟೂರ್ ಹೋಗಬೇಕಾಗುತ್ತಿತ್ತು. ’ಮಗಳು ಏಕಾಂಗಿಯಾಗುತ್ತಾಳೆ ನೀನು ಊರಿಗೆ ಬಾ’ ಎಂದು ಹಲವು ಸಾರಿ ಒತ್ತಾಯಿಸಿದ್ದರು. ಈಗ ಹಿಡಿದ ಕೆಲಸ ಪೂರ್ತಿಯಾಗುತ್ತಲೇ ಬರುತ್ತೇನೆಂದು ಆಶ್ವಾಸನೆ ಕೊಡುತ್ತಿದ್ದೆ. ಅದು ಕೇವಲ ಆಶ್ವಾಸನೆಯಾಗಿಯೇ ಉಳಿಯಿತು. ನಾನು ಊರಿಗೆ ಹಿಂದಿರುಗುವ ಯತ್ನವನ್ನೇ ಮಾಡಲಿಲ್ಲ.
ಅಂದಿನ ನನ್ನ ಪರಿಸ್ಥಿತಿ ಹಾಗಿತ್ತು. ವಿಷಯ ತಿಳಿದ ನನ್ನ ಆಫೀಸಿನವರು ’ಮೇಡಂ, ಇಷ್ಟು ಒಳ್ಳೆಯ ಲಾಭದಾಯಕ ಉದ್ಯಮ ಬಿಟ್ಟು ಊರಿಗೆ ಹೋಗುವುದು ಮೂರ್ಖತನದ ಪರಮಾವಧಿ. ಮುಂದೊಂದು ದಿನ ನಿಮ್ಮ ಪ್ರತಿ? ಇನ್ನೂ ಹೆಚ್ಚಲಿದೆ. ಉದ್ಯಮರಂಗದ ದೃಷ್ಟಿ ನಿಮ್ಮ ಮೇಲಿದೆ. ನೀವು ನಂಬರ್ ಒನ್ ಆಗಲಿದ್ದೀರಿ’ ಎಂದು ಪ್ರಶಂಸಿಸುತ್ತಿದ್ದರು. ಆಗ ಆಸರೆಯಿಂದ ವಂಚಿತಳಾದ ಮಗಳ ಭವಿಷ್ಯವಾಗಲೀ, ಪತಿಯನ್ನು ಏಕಾಂಗಿಯನ್ನಾಗಿ ಮಾಡಿ ಬಂದುದಾಗಲೀ ನನಗೆ ಮುಖ್ಯವೆನ್ನಿಸುತ್ತಿರಲಿಲ್ಲ. ನನ್ನ ಕಣ್ಣೆದುರು ನರ್ತಿಸುತ್ತಿದ್ದದ್ದು ಡಾಲರುಗಳ ಕಂತೆ ಮತ್ತು ಪ್ರತಿಷ್ಠೆ.
ಏಕಾಂಗಿತನ ಯಾರಿಗೆ ಹೇಗೆ ಪ್ರಾಪ್ತವಾಗುತ್ತದೆಂದು ಹೇಳಲು ಯಾರಿಂದಲೂ ಸಾಧ್ಯವಿಲ್ಲ. ಸಪ್ತಪದಿ ತುಳಿದು ಒಂದೆರಡು ವರು? ಸಂಸಾರ ಮಾಡಿದ ನಂತರ ಪತಿಯನ್ನು ಏಕಾಂಗಿ ಮಾಡಿ ವಿದೇಶಕ್ಕೆ ಬಂದಿದ್ದೆ. ಈಗ ನನ್ನ ಪತಿ ನನ್ನನ್ನು ಏಕಾಂಗಿಯನ್ನಾಗಿ ಮಾಡಿದ್ದು ಬಹುಶಃ ನನ್ನ ಮೂರ್ಖತನದ ಫಲವಿರಬೇಕು. ಬಹಳ ದಿನಗಳ ನಂತರ ಅವರ ಫೋನ್ ಬಂದಿತ್ತು. ನಾನು ಆಫೀಸಿನ ಕೆಲಸದಲ್ಲಿ ವ್ಯಸ್ತಳಾಗಿದ್ದೆ. ’ವಸೂ ನನಗೆ ಹಾರ್ಟ್ ಅಟ್ಯಾಕ್ ಆಗಿದೆ. ಆಫೀಸಿನವರು ಆಸ್ಪತ್ರೆಗೆ ಕರೆದೊಯ್ಯುತ್ತಿದ್ದಾರೆ.’ ನನ್ನ ಜಂಘಾಬಲವೇ ಉಡುಗಿಹೋಯಿತು. ’ಮೊದಲನೇ ವಿಮಾನದಲ್ಲೇ ಹೊರಟುಬರುತ್ತೇನೆ’ ಎಂದೆ. ನಿಧಾನವಾಗಿ ಹೇಳಿದರು ’ನೀನು ನನಗೋಸ್ಕರ ಚಿಂತಿಸುವುದು ಬೇಡ.’
ಆಸ್ಪತ್ರೆಗೆ ತಲಪಿದ ನಂತರ ಅವರ ಮೊಬೈಲ್ ಸ್ತಬ್ಧವಾಗಿತ್ತು. ಆರೋಗ್ಯದ ಬಗ್ಗೆ ವಿಚಾರಿಸಲು ಬೇರೆ ಯಾರ ನಂಬರೂ ನನಗೆ ಗೊತ್ತಿರಲಿಲ್ಲ. ನನ್ನ ಕಂಪೆನಿಯವರು ಪ್ರಯಾಣ ನಿಲ್ಲಿಸುವಂತೆ ಒತ್ತಾಯಿಸಿದರು. ’ಮೇಡಂ ನಾಳೆ ಮಹತ್ತ್ವದ ಮೀಟಿಂಗ್ ಇದೆ. ನೀವು ಹಾಜರಿರಲೇ ಬೇಕು.’ ’ಗಂಡ ಆಸ್ಪತ್ರೆಗೆ ಸೇರಿದ್ದಾರೆ. ಅವರ ಬಳಿ ಈಗ ನಾನಿರಬೇಕು’ ಎಂದರೂ ಅವರು ಒತ್ತಾಯಿಸತೊಡಗಿದರು. ಅವರ ವರಸೆ ನೋಡಿದರೆ ’ನಿಮಗೆ ಬೇರೆ ಗಂಡ ಸಿಗಬಹುದು, ಆದರೆ ಇಂತಹ ದೊಡ್ಡ ಮೊತ್ತದ ವ?ವಧಿ ಬೇಡಿಕೆಯ ಆರ್ಡರ್ ಸಿಗಲಿಕ್ಕಿಲಂಬಂತಿತ್ತು. ಅವರ ದೃಷ್ಟಿಯಲ್ಲಿ ಅವರು ಹೇಳಿದ್ದು ಸರಿ. ಅಲ್ಲಿಯ ಸಂಸ್ಕೃತಿ ಹಾಗೆ ಇತ್ತು. ಆದರೆ ಭಾರತದಲ್ಲಿ ಹುಟ್ಟಿ ಬೆಳೆದ ಸ್ತ್ರೀಯರ ಮನಃಸ್ಥಿತಿ ಅವರು ಹೇಗೆ ತಿಳಿದಾರು? ಮೀಟಿಂಗನ್ನು ಎರಡು ದಿನಗಳ ಮಟ್ಟಿಗೆ ಮುಂದೂಡುವಂತೆ ಏರ್ಪಾಡು ಮಾಡಿ ವಿಮಾನ ಹತ್ತಿದ್ದೆ.
ನಾನು ಆಸ್ಪತ್ರೆಗೆ ತಲಪಿದಾಗ ಅವರು ಈ ಜಗತ್ತಿಗೇ ವಿದಾಯ ಹೇಳಿಯಾಗಿತ್ತು. ಬಹುಶಃ ಅವರಿಗೆ ತಾನು ಬದುಕುವುದಿಲ್ಲವೆಂದು ಖಾತ್ರಿಯಿತ್ತು. ಅದಕ್ಕಾಗಿಯೇ ನೀನು ಇಲ್ಲಿಗೆ ಬರುವುದು ಅನವಶ್ಯವೆಂದು ಹೇಳಿದ್ದರು. ಅದೇ ನನ್ನ ಅವರ ಕೊನೆಯ ಮಾತಾಗಿತ್ತು. ಅಂದಿನಿಂದ ನಾನು ಏಕಾಂಗಿಯಾದೆ. ಮಗಳು ಆಸ್ಪತ್ರೆಗೆ ಬಂದಿದ್ದಳು. ಅವರ ಗೆಳೆಯರು ಅಂತ್ಯಸಂಸ್ಕಾರದ ಏರ್ಪಾಡು ಮಾಡಿದ್ದರು. ಅವರೇ ಇಲ್ಲದ ಮೇಲೆ ಇನ್ನು ಇಲ್ಲಿದ್ದು ಏನು ಉಪಯೋಗವೆಂದು ಅಂದೇ ರಾತ್ರಿ ವಿಮಾನವೇರಿದ್ದೆ. ಮಗಳು ಡಿಗ್ರಿಯ ಅಂತಿಮ ವ?ದಲ್ಲಿದ್ದಳು. ’ಪರೀಕ್ಷೆ ಮುಗಿದ ನಂತರ ಬಂದು ನಿನ್ನನ್ನು ಕರೆದೊಯ್ಯುತ್ತೇನೆ’ ಎಂದು ಅವಳಿಗೆ ಹೇಳಿ ಬಂದಿದ್ದೆ.
ನಾನು ಅಲ್ಲಿಂದ ನಿರ್ಗಮಿಸಿದ ನಂತರ ಪ್ರಥಮಬಾರಿಗೆ ಅವಳು ತಂದೆ, ತಾಯಿ ಇಲ್ಲದೇ ತನ್ನ ಹುಟ್ಟುಹಬ್ಬ ಆಚರಿಸಿಕೊಂಡಿದ್ದಳು. ನಾನು ಇಂಟರ್ನೆಟ್ನಲ್ಲಿ ಆರ್ಡರ್ ಮಾಡಿ ಕೇಕ್ ಕಳಿಸಿದೆನಾದರೂ ಅದು ಸ್ವಾದಿಷ್ಟವಾಗಿರುವುದಿಲ್ಲ.
ವಸುಮತಿಗೆ ಬಾಯಾರಿದಂತಾಯಿತು. ಫ್ರಿಜ್ನಲ್ಲಿದ್ದ ತಣ್ಣನೆಯ ನೀರು ಕುಡಿದಳು. ಫ್ರಿಜ್ನ ಬಾಗಿಲು ತೆಗೆದಾಗ ನೆನಪಾದದ್ದು ಏಳನೆಯ ತರಗತಿಯಲ್ಲಿದ್ದಾಗ ತನ್ನ ಬರ್ತಡೇಗೆ ಮಗಳೇ ಮನೆಯಲ್ಲಿ ತಯಾರಿಸಿದ ಕೇಕ್. ಅದು ಸ್ವಲ್ಪ ಕರಟಿಹೋಗಿತ್ತು. ಮರದ ತುಂಡಿನಂತೆ ಗಟ್ಟಿಯಾಗಿತ್ತು. ಅದನ್ನು ಜಗಿಯುವುದೂ ಕ?ವಾಗಿತ್ತು. ಸೋಡಾ ಬೆರೆಸುವುದನ್ನು ಮರೆತಿದ್ದಳು. ಆದರೂ ನಾನು ಅವಳ ಅಪ್ಪ ಸಂತಸದಿಂದಲೇ ಅದರ ಗುಣಗಾನ ಮಾಡುತ್ತಾ ಚಪ್ಪರಿಸಿದ್ದೆವು. ನಕ್ಕು ನಕ್ಕು ನಮಗೆ ಹೊಟ್ಟೆನೋವು ಬಂದಿತ್ತು. ಇತ್ತೀಚೆಗಿನ ಇಪ್ಪತ್ತು ವ?ಗಳ ನಗುವನ್ನು ಒಟ್ಟುಗೂಡಿಸಿದರೂ ಅಂದು ನಕ್ಕ? ನಗುವಿಗೆ ಅದು ಸಾಟಿಯಾಗುವುದಿಲ್ಲ. ಅದೆಂತಹ ಸಂಭ್ರಮ ಸಂತಸ.
ಸುರೇಖಳ ಡಿಗ್ರಿ ಮುಗಿಯುವುದನ್ನೇ ಕಾಯುತ್ತಿದ್ದೆ. ಆನಂತರ ಅವಳು ನನ್ನೊಟ್ಟಿಗೆ ಇರುತ್ತಾಳೆ. ಬಹಳ ವ?ಗಳ ಅಗಲಿಕೆಗೊಂದು ವಿರಾಮ ಬೀಳುತ್ತದೆ ಎಂದುಕೊಂಡಿದ್ದೆ. ನನ್ನ ಯೋಚನೆ ಮರಳಿನಲ್ಲಿ ನಿರ್ಮಿಸಿದ ಮನೆಯಂತೆ ಕ್ಷಣಾರ್ಧದಲ್ಲಿ ಬಿದ್ದುಹೋಗುವಂತಾಗಿತ್ತು. ಅವಳು ನಾನು ಒಟ್ಟಿಗಿರುವ ಕನಸು ಕೊನೆಗೂ ಈಡೇರಲಿಲ್ಲ. ಪರೀಕ್ಷೆ ಮುಗಿದ ಒಂದು ತಿಂಗಳಿನಲ್ಲಿ ಎರಡು ಶುಭ ಸಮಾಚಾರ ತಿಳಿಸಿದ್ದಳು. ಒಂದು ಅವಳು ಡಿಗ್ರಿಯಲ್ಲಿ ಪ್ರಥಮ ಶ್ರೇಣಿಯಲ್ಲಿ ತೇರ್ಗಡೆಯಾದದ್ದು, ಇನ್ನೊಂದು ಒಬ್ಬ ಹುಡುಗನನ್ನು ಮೆಚ್ಚಿದ್ದು. ’ನಾನು ಅವನನ್ನೇ ವಿವಾಹ ಮಾಡಿಕೊಳ್ಳಲು ನಿಶ್ಚಯಿಸಿದ್ದೇನೆ. ಅವನ ಕುಟುಂಬದಿಂದಲೂ ಹಸಿರುನಿಶಾನೆ ಸಿಕ್ಕಿದೆ. ಮದುವೆಯ ದಿನಾಂಕ ನಿಶ್ಚಯಿಸಲಿಕ್ಕಿದೆ. ನಿನಗೆ ಯಾವಾಗ ಬಿಡುವಾಗುತ್ತದೆಂದು ತಿಳಿಸು’ ಎಂದಿದ್ದಳು.
ನನಗೆ ಏನು ಹೇಳಬೇಕೆಂದೇ ತಿಳಿಯಲಿಲ್ಲ. ನನ್ನ ಮಗಳು ದೊಡ್ಡವಳಾಗಿದ್ದಾಳೆ. ಅವಳಿಗೊಂದು ಯೋಗ್ಯ ಗಂಡನ್ನು ಹುಡುಕಿ ಮದುವೆ ಮಾಡಬೇಕೆಂಬುದನ್ನೇ ಮರೆತಿದ್ದೆ. ಅದನ್ನೆಲ್ಲಾ ಯೋಚಿಸಲು ಸಮಯವೇ ಇರುತ್ತಿರಲಿಲ್ಲ. ವಿವಾಹವೆಂಬುದು ಹೆಣ್ಣಿನ ಜೀವನದಲ್ಲಿ ಅತ್ಯಂತ ಮಹತ್ತ್ವದ ಘಟ್ಟ. ಹುಟ್ಟಿದಮನೆ ತೊರೆದು ಪತಿಗೃಹಕ್ಕೆ ಹೋಗಿ ಆ ಕುಟುಂಬವನ್ನು ತನ್ನದನ್ನಾಗಿ ಮಾಡಿಕೊಳ್ಳುವ ಅತ್ಯಂತ ಜವಾಬ್ದಾರಿಯ ಘಟ್ಟ. ಅಂತಹ ಮಹತ್ತ್ವದ ದಿನದಲ್ಲಿ ಆ ಸಂತಸದ ಸಂಭ್ರಮದ ಸಮಯದಲ್ಲಿ ನನ್ನನ್ನು ತೊಡಗಿಸಿಕೊಳ್ಳಲು ಅವಳು ಯೋಚಿಸಿದ್ದು ಅವಳ ದೊಡ್ಡತನ. ಬಹುಶಃ ಅಪ್ಪನ ಗುಣ ಅವಳಿಗೆ ಬಂದಿರಬೇಕು.
ಚಿತ್ತಭಿತ್ತಿಯಲ್ಲಿ ಒಂದೊಂದೇ ಘಟನೆಗಳು ಹಾದುಹೋಗುತ್ತಿದ್ದವು. ಯಾವಾಗ ನಿದ್ದೆಗೆ ಜಾರಿದ್ದೆನೋ ಗೊತ್ತಿಲ್ಲ. ಅಲಾರಾಂ ಸದ್ದಾಗಿ ಎಚ್ಚರವಾದಾಗಲೇ ನಾನು ಹಾಲಿನಲ್ಲಿ ಸೋಫಾದ ಮೇಲೆಯೆ ಮಲಗಿದ್ದೆನೆಂದು ಅರಿವಿಗೆ ಬಂದದ್ದು.
ಏಳು ತಿಂಗಳುಗಳೇ ಕಳೆದುಹೋದವು. ಅಪ್ಪ ನನ್ನನ್ನು ಏಳನೆಯ ತಿಂಗಳಿಗೇ ಮನೆಗೆ ಕರೆದುಕೊಂಡು ಹೋಗಿದ್ದರು. ಅಂದು ಅಪ್ಪ, ಅಮ್ಮ ಪಟ್ಟಿದ್ದ ಸಂಭ್ರಮ ಯಾಕಾಗಿ ನೆನಪಾಗುತ್ತೋ ಅನ್ನಿಸಿತ್ತು. ನಾನೀಗ ಅವಳನ್ನು ಇಲ್ಲಿಗೆ ಕರೆತಂದರೂ ಯಾರ ಜವಾಬ್ದಾರಿಯ ಮೇಲೆ ಅವಳನ್ನು ಬಿಟ್ಟು ನನ್ನ ಕೆಲಸಕ್ಕೆ ಹೋಗಲಿ ಎಂಬುದೂ ಒಂದು ಪ್ರಶ್ನೆಯಾಗಿತ್ತು. ಮತ್ತೂ ಕೆಲವು ದಿನಗಳು ಉರುಳಿದವು. ನಾನು ಅನಾರೋಗ್ಯದಿಂದ ಹಾಸಿಗೆ ಹಿಡಿದೆ. ಅವಳ ಚೊಚ್ಚಲ ಹೆರಿಗೆಯ ಸಮಯ ಬಂದಿತ್ತು. ಫೋನ್ ಮಾಡಿದ್ದಳು. ಯಾವ ಸಮಯ ಮಗಳಿಗೆ ತಾಯಿಯು ಹತ್ತಿರವಿರುವ ಅಗತ್ಯವಿರುತ್ತದೋ ಆ ಸಮಯಕ್ಕೆ ಕೂಡಾ ಅವಳಿದ್ದಲ್ಲಿಗೆ ಹೋಗಲಾಗಲಿಲ್ಲ. ಅವಳ ಮಗುವಿನ ಜನನಕ್ಕೆ ಸಾಕ್ಷಿಯಾಗಲಿಲ್ಲ. ಆ ಸಂತಸದಲ್ಲಿ ಭಾಗಿಯಾಗದ ನತದೃಷ್ಟೆಯಾದೆ.
ಈ ದಿನ ಜೀವನದಲ್ಲಿ ಮೊದಲಬಾರಿಗೆ ಪಶ್ಚಾತ್ತಾಪಪಡುತ್ತಿದ್ದೇನೆ. ನನ್ನ ಸುತ್ತ ಇರುವವರು ’ಎಸ್ ಮೇಡಮ್’ ಎಂದು ನನ್ನ ಆದೇಶಕ್ಕೆ ಕಾಯುತ್ತಾರೆ. ದೇಶ, ವಿದೇಶಗಳಿಗೆ ವಿಮಾನದಲ್ಲಿ ಪ್ರಯಾಣ, ಪ್ರತಿಷ್ಠಿತ ಉದ್ಯಮಿಗಳೊಂದಿಗೆ ಮಾತುಕತೆ, ಕೋಟಿ ಕೋಟಿ ಡಾಲರುಗಳ ವಹಿವಾಟು ಇವೆಲ್ಲಾ ಎ?ಂದು ಸಲೀಸು. ॒ನನ್ನ ಆರೋಗ್ಯ ಏರುಪೇರಾದರೆ ಪ್ರತಿಷ್ಠಿತ ನರ್ಸಿಂಗ್ಹೋಂಗಳಲ್ಲಿ ದೊಡ್ಡದೊಡ್ಡ ಡಾಕ್ಟರರು ಚಿಕಿತ್ಸೆ ಮಾಡುತ್ತಾರೆ. ನನ್ನನ್ನು ನೋಡಿಕೊಳ್ಳಲು ಕೈಗೊಬ್ಬ ಕಾಲಿಗೊಬ್ಬನಂತೆ ಸೇವಕರಿದ್ದಾರೆ. ಟ್ರಜರಿಯಲ್ಲಿ, ಬ್ಯಾಂಕುಗಳಲ್ಲಿ ಡಾಲರುಗಳ ಕಂತೆಕಂತೆಗಳೇ ಇವೆ. ನಾನು ಭಾರತದಿಂದ ಹೊರಟಾಗಿನ ಮಹತ್ತ್ವಾಕಾಂಕ್ಷೆಯ ಬದುಕು ನನ್ನದಾಗಿದೆ. ಮಹಿಳಾ ಉದ್ಯಮಿಗಳಲ್ಲಿ ಜಗತ್ತಿನಲ್ಲಿಯೇ ನಂಬರ್ಒನ್ ಎಂದು ಫೋರ್ಬ್ಸ್ ಪಟ್ಟಿಯಲ್ಲಿ ಹೆಸರು ಕಾಣಿಸಿದೆ. ನನ್ನೆಲ್ಲಾ ಕನಸುಗಳು ಸಾಕಾರಗೊಂಡಿವೆ. ಆದರೆ….
ಹೌದು, ಆದರೆ ಎಂದು ಹೇಳಬೇಕಾದ ಸಮಯ ಬಂದಿದೆ. ಓರ್ವ ಮಹತ್ತ್ವಾಕಾಂಕ್ಷಿ ಮಹಿಳೆ ಸಾಧಿಸಿದ್ದೇನೂ ಕಡಮೆಯಲ್ಲ. ನನ್ನದು ತೀರದ ದಾಹವಾಗಿತ್ತು. ಶರೀರಕ್ಕೆ ಬಾಯಾರಿಕೆಯಾದಾಗ ನೀರು ಕುಡಿದು ದಾಹ ಶಮನಮಾಡಿಕೊಳ್ಳುತ್ತೇವೆ. ನನ್ನದು ನೀರಿನ ದಾಹವಾಗಿರಲಿಲ್ಲ. ’ಹಣದ ದಾಹ, ಪ್ರತಿ?ಯ ದಾಹ’, ಅದು ತೀರದ ದಾಹ, ಸಿಕ್ಕಿದ? ಇನ್ನೂ ಬೇಕು ಎನ್ನುವ ದಾಹ, ಅಂತ್ಯವಿಲ್ಲದ ದಾಹ.
ನಾನು ಕಾಯಿಲೆ ಬಿದ್ದಾಗ ಮಡಿಲಲ್ಲಿ ಮಲಗಿಸಿಕೊಂಡು ಪ್ರೀತಿಯಿಂದ ತಲೆಸವರಿದ ಕೈಗಳಿಲ್ಲ. ನಾನು ಜ್ವರವೆಂದು ಮಲಗಿದಾಗ ಇಡೀ ರಾತ್ರಿ ಜಾಗರಣೆ ಮಾಡಿ ನನ್ನನ್ನು ಸಂತೈಸಿದವರಿಲ್ಲ. ಮಾನಸಿಕವಾಗಿ ಚಿಂತಿತಳಾದಾಗ ತೋಳುಗಳಿಂದ ಬಿಗಿದಪ್ಪಿ, ನೀನೇನೂ ಚಿಂತಿಸಬೇಡ, ನಾನಿದ್ದೇನೆ ಎಂದು ಭರವಸೆ ಕೊಡುವವರಿಲ್ಲ. ಆಗಿನ ಸುರಕ್ಷಾ ಭಾವನೆ ಈಗೆಲ್ಲಿ?
ನನ್ನ ಸೇವಕರು ನನಗೆ ಬೇಗ ಗುಣವಾಗಲೆಂದು ಆಶಿಸುತ್ತಾರೆ. ಅದು ಅವರ ಕೆಲಸಕ್ಕೆ ಧಕ್ಕೆ ಬಾರದಿರಲಿ, ತಮಗೆ ಸಿಗುವ ಸೌಲಭ್ಯಗಳಿಗೆ ಕಂಟಕವಾಗದಿರಲಿ ಎಂಬ ಕಾರಣಕ್ಕೆ ಮಾತ್ರ. ಚಿಕ್ಕ ಜ್ವರ ಬಂದಾಗಲೂ ಪತಿದೇವರು, ಆಫೀಸಿಗೆ ರಜೆಹಾಕು ಎಂದು ಒತ್ತಾಯಿಸುತ್ತಿದ್ದರು. ನಾನು ವಿದ್ಯಾವಂತಳಾಗಿದ್ದರೂ ಈಗ ಹಸಿರುಮಾತ್ರೆ ತೆಗೆದುಕೊಳ್ಳಲೇ, ಕೆಂಪುಮಾತ್ರೆ ತೆಗೆದುಕೊಳ್ಳಲೇ ಎಂದು ಅವರನ್ನು ಕೇಳುತ್ತಿದ್ದೆ. ಆಗ ಸ್ವಲ್ಪ ಸಿಟ್ಟುಮಾಡಿದರೂ, ತನ್ನ ಕೈಯಿಂದಲೇ ಮಾತ್ರೆ ತೆಗೆದುಕೊಳ್ಳಬೇಕೆಂದು ಹಾಗೆ ಹೇಳಿದ್ದಾಳೆಂದು ಅವರಿಗೆ ಗೊತ್ತಿತ್ತು. ಅದರಿಂದ ಮನಸ್ಸು ಪ್ರಫುಲ್ಲಿತವಾಗುತ್ತಿತ್ತು. ಆ ಸಂತಸದ ಮುಂದೆ ಜ್ವರದ ತಾಪ ತನ್ನಿಂದ ತಾನೇ ಕಡಮೆಯಾಗುತ್ತಿತ್ತು.
ಯಾರ ದುಡಿಮೆಯೇ ಇರಲಿ, ಅದು ಪರಿವಾರಕ್ಕೋಸ್ಕರ. ಸಂಸಾರ ಸಾಗಿಸುವುದಕ್ಕೋಸ್ಕರ ಎಂಬುದು ಸತ್ಯ. ಈಗ ನನ್ನವರು ಎಂಬವರು ಯಾರಿದ್ದಾರೆ? ಅಪ್ಪ, ಅಮ್ಮ ಎಂದೋ ಗತಿಸಿದ್ದಾರೆ. ಪತಿದೇವರು ನನ್ನನ್ನು ಬಿಟ್ಟು ಪರಲೋಕಕ್ಕೆ ಸೇರಿದ್ದಾರೆ. ಮಗಳು ತಾನು ಮೆಚ್ಚಿದವನನ್ನು ಮದುವೆಯಾಗಿ ಸಂಸಾರ ಹೂಡಿದ್ದಾಳೆ. ವಸುಮತಿಯ ತಲೆ ಧಿಂಮ್ಮೆನ್ನಲು ಪ್ರಾರಂಭವಾಗಿತ್ತು. ಪರಿವಾರವೇ ಇಲ್ಲದಿದ್ದಾಗ ನನ್ನ ದುಡಿಮೆ ಯಾರಿಗೆ? ಯಾರಿಗಾಗಿ ನಾನು ಇಷ್ಟು ಶ್ರಮಪಟ್ಟು ಕೆಲಸ ಮಾಡಬೇಕು? ಎಲ್ಲದಕ್ಕೂ ಒಂದು ಅಂತ್ಯವಿದೆ. ಅದೀಗ ನನಗೆ ಅನ್ವಯಿಸುತ್ತಿದೆ.
’ತಾನಿನ್ನು ಭಾರತಕ್ಕೆ ಮರಳಬೇಕು, ನನ್ನ ನೆಲದ ಮಣ್ಣನ್ನು ಆಘ್ರಾಣಿಸಬೇಕು’ ಎಂದು ನಿಶ್ಚಯಿಸಿದಳು. ಆ ತನಕ ತನ್ನ ಸಂಸ್ಥೆಗಾಗಿ ದುಡಿದವರಿಗೆ ಎಲ್ಲವನ್ನೂ ಹಂಚಿದಳು. ಕೆಲವೇ ನೂರು ಡಾಲರುಗಳನ್ನು ತೆಗೆದುಕೊಂಡು ವಿಮಾನವೇರಿದಳು. ಅವಳ ಧನದಾಹ ಅಂತ್ಯ ಕಂಡಿತ್ತು.