ಮಾನವನ ಮಾನಸಿಕ, ದೈಹಿಕ, ತಾಂತ್ರಿಕ ಮತ್ತು ವೈಜ್ಞಾನಿಕ ಪರಿಣತಿಗಳ ಉತ್ಕೃಷ್ಟ ಮಟ್ಟಗಳನ್ನು ಪರೀಕ್ಷಿಸಲು ಈಗ ನಮ್ಮಲ್ಲಿ ಸಾವಿರಾರು ರೀತಿಯ ಸ್ಪರ್ಧೆಗಳು ಚಾಲನೆಯಲ್ಲಿವೆ. ಒಲಿಂಪಿಕ್ಸ್ ಕ್ರೀಡಾಕೂಟ, ಫಾರ್ಮುಲಾ-ಒನ್ ಕಾರ್ರೇಸ್, ಲಿಮ್ಕಾ ದಾಖಲೆಗಳಲ್ಲಿ ಕಾಣುವ ಸಾವಿರಾರು ಪಂದ್ಯಗಳು, ಚೆಸ್ ಆಟ ಮತ್ತು ಸಾಹಸಗಳು (ಇವುಗಳಲ್ಲಿ ನಿರ್ದಿಷ್ಟ ಸಮಯದಲ್ಲಿ ಎಷ್ಟು ಇಡ್ಲಿಗಳನ್ನು ತಿನ್ನಬಹುದು ಎಂಬ ಸ್ಪರ್ಧೆಯೂ ಸೇರಿದೆ!) ಇವೇ ಕೆಲವು ಉದಾಹರಣೆಗಳು. ಮೊದಲ ಘಟ್ಟದಲ್ಲಿ, ಈ ಸ್ಫರ್ಧೆಗಳು ಮಾನವನ ದೈಹಿಕ ಮತ್ತು ಮಾನಸಿಕ ಸಾಹಸಗಳಿಗೆ ಮೀಸಲಾಗಿದ್ದು ಅನಂತರ ತಾಂತ್ರಿಕ ಮತ್ತು ವೈಜ್ಞಾನಿಕ ರೂಪಗಳನ್ನೂ ಪಡೆದವು. ’ಆರ್ಟೀಗ್’ ಎಂಬ ನಾಮಧೇಯದ ಬಹುಮಾನ ೧೯೨೭ನೇ ಇಸವಿಯಲ್ಲಿ ಘೋಷಿತವಾದಾಗ, ಸ್ಪರ್ಧೆಗಳಿಗೊಂದು ಹೊಸ ಆಯಾಮ ಮೂಡಿಬಂತು. ಅಮೆರಿಕದಿಂದ ಫ್ರಾನ್ಸ್ ದೇಶಕ್ಕೆ, ಮಧ್ಯ ಎಲ್ಲಿಯೂ ನಿಲ್ಲದೆಯೆ, ಚಾರ್ಲ್ಸ್ ಲಿಂಡ್ಬರ್ಗ್ ಎಂಬಾತ ’ಸ್ಪಿರಿಟ್ ಆಫ್ ಸೈಂಟ್ ಲೂಯಿಸ್’ ಎಂಬ ವಿಮಾನದಲ್ಲಿ ಅಟ್ಲಾಂಟಿಕ್ ಸಾಗರವನ್ನು ದಾಟಿ, ಪ್ಯಾರಿಸ್ ನಗರದಲ್ಲಿ ಇಳಿದು ಈ ಬಹುಮಾನವನ್ನು ಗೆದ್ದ.
ನವೀನ ರೋಚಕ ಸ್ಪರ್ಧೆ
ಈ ಹಿನ್ನೆಲೆಯಲ್ಲಿ ಹಾಗೂ ಅಂದಿನಿಂದ ಇಲ್ಲಿಯವರೆಗೆ ಬಾಹ್ಯಾಕಾಶತಂತ್ರಜ್ಞಾನ ಕ್ಷೇತ್ರದಲ್ಲಿ ಆಗಿರುವ ಮಹತ್ತರ ಪ್ರಗತಿಯಿಂದಾಗಿ, ನಾವು ಒಂದು ನವೀನ ಹಾಗೂ ರೋಚಕ ಸ್ಪರ್ಧೆಯನ್ನು ಈಗ ನೋಡುತ್ತಿದ್ದೇವೆ. ಅದೇ ಜಾಗತಿಕ ಮಟ್ಟದಲ್ಲಿ ನಡೆಯುತ್ತಿರುವ ಚಂದ್ರಗ್ರಹವನ್ನು ತಲಪುವ ಸ್ಪರ್ಧೆ! ಇದರಲ್ಲಿ ಗೆದ್ದವರಿಗೆ ದೊರಕುವ ಬಹುಮಾನದ ಹೆಸರು: ’ಗೂಗಲ್ ಲೂನಾರ್ ಎಕ್ಸ್ಪ್ರೈಜ಼್’ ಅಥವಾ ’ಎಕ್ಸ್ಪ್ರೈಜ಼್.’ ಬಹುಮಾನದ ಮೊತ್ತ: ೨೦ ಮಿಲಿಯ ಡಾಲರ್ಗಳು (ಮೊದಲನೆಯ ಬಹುಮಾನಕ್ಕೆ) ಮತ್ತು ೫ ಮಿಲಿಯ ಡಾಲರ್ಗಳು (ಎರಡನೆಯ ಬಹುಮಾನಕ್ಕೆ). ಇ?ಲ್ಲದೆ ಗೆದ್ದವರಿಗೆ ೪ ಮತ್ತು ೧ ಮಿಲಿಯ ಡಾಲರ್ಗಳ ಮೊತ್ತದ ಇನ್ನೂ ಎರಡು ಬಹುಮಾನಗಳು ಬೋನಸ್ ಆಗಿ ದಕ್ಕಲಿವೆ. ಈ ಸ್ಪರ್ಧೆಯ ಪ್ರಾಯೋಜಕರು ಅಮೆರಿಕದ ಪ್ರಖ್ಯಾತ ಗೂಗಲ್ ಕಂಪೆನಿ ಮತ್ತು ಇದರ ನಿರ್ವಾಹಕರು ’ಎಕ್ಸ್ಪ್ರೈಜ಼್ ಫೌಂಡೇಶನ್’ ಎಂಬ ಅಮೆರಿಕದ ಮತ್ತೊಂದು ಸಂಸ್ಥೆ.
ಈ ಸ್ಪರ್ಧೆಯು ಎಸೆದಿರುವ ಸವಾಲೆಂದರೆ:
ಚಂದ್ರನ ಮೇಲ್ಮೈ ಮೇಲೆ ಒಂದು ರೋಬೋಟ್ ನೌಕೆಯನ್ನು ಇಳಿಸುವುದು, ಅದು ೫೦೦ ಮೀಟರ್ಗಳ? ನೆಲದ ಮೇಲೆ ಚಲಿಸುವುದು ಹಾಗೂ ಭೂಮಿಗೆ ಅಲ್ಲಿಂದ ಮಾಹಿತಿ ಹಾಗೂ ಚಿತ್ರಗಳನ್ನು ರವಾನಿಸುವುದು.
ಚಂದ್ರನಮೇಲೆ ಇಳಿಯಲು ಕೊನೆಯ ದಿನ: ೩೧ನೇ ಡಿಸೆಂಬರ್ ೨೦೧೭.
ಏನು ವೈಶಿಷ್ಟ್ಯ?
ಕಳೆದ ದಶಕಗಳಲ್ಲಿ (ಭಾರತವೂ ಸೇರಿ) ಅನೇಕ ದೇಶಗಳು ಅವರೇ ವಿನ್ಯಾಸ ಮಾಡಿರುವ ರಾಕೆಟ್ಗಳ ಮೂಲಕ ಸಾವಿರಾರು ಉಪಗ್ರಹಗಳನ್ನೂ, ತಂಗುನಿಲ್ದಾಣವನ್ನೂ ಭೂಮಿಯ ಕಕ್ಷೆಗೆ ಸೇರಿಸಿದ್ದಾರೆ. ಅವಲ್ಲದೇ ಮಾನವರು ಮತ್ತು ರೋಬೋಟ್ಗಳು ಚಂದ್ರನ ಮೇಲೆ ಇಳಿದು ಓಡಾಡಿದ್ದಾಗಿದೆ. ರೋಬೋಟ್ಗಳು, ಬಾಹ್ಯಾಕಾಶನೌಕೆಗಳು ಚಂದ್ರನ ಮತ್ತು ಮಂಗಳಗ್ರಹದ ಕಕ್ಷೆಗಳಲ್ಲಿ ಸುತ್ತುತ್ತಾ, ನಾನಾ ಬಗೆಯ ವೈಜ್ಞಾನಿಕ, ತಾಂತ್ರಿಕ ಮಾಹಿತಿಯಲ್ಲದೆ, ಇದುವರೆಗೂ ನೋಡಿರದಂತಹ ಛಾಯಾಚಿತ್ರಗಳನ್ನೂ ರವಾನಿಸಿವೆ. ಅನೇಕ ಅನ್ವೇಷಣನೌಕೆಗಳು ಸೂರ್ಯನ ಇತರ ಗ್ರಹಗಳೆಡೆಗೆ ಮತ್ತು ಸೂರ್ಯಮಂಡಲದಿಂದಲೂ ಆಚೆಗೆ ಹೋಗುವ ಪಯಣದಲ್ಲಿ ತೊಡಗಿವೆ. ಹಾಗಿದ್ದಲ್ಲಿ ಈ ಎಕ್ಸ್ಪ್ರೈಜ಼್ನ ವಿಶಿಷ್ಟ್ಯತೆಯೇನು?
ಅದು ಪ್ರಾಯೋಜಕರು ಹಾಕಿರುವ ಒಂದು ಷರತ್ತು: ಈ ಸ್ಪರ್ಧೆಯಲ್ಲಿ ಭಾಗಿಯಾಗಿರಬೇಕಾದರೆ ಅದು ಖಾಸಗಿ ಸಂಸ್ಥೆಯಾಗಿರಬೇಕು ಮತ್ತು ಅದು ಸರ್ಕಾರದ ಸಂಸ್ಥೆಯಾಗಿರಬಾರದು; ಆದರೆ ಸರಕಾರದ ಉಡಾವಣ ರಾಕೆಟ್ಗಳ ಸೌಲಭ್ಯವನ್ನು ಮಾತ್ರ ಪಡೆಯಬಹುದು.
ಸರತಿ ಸಾಲು!
ಇಂತಹ ಷರತ್ತಿನ ಹಿನ್ನೆಲೆ ಹೀಗಿದೆ: ಬಾಹ್ಯಾಕಾಶ ತಂತ್ರಜ್ಞಾನದ ಬೆಳವಣಿಗೆಯ ಪಥದಲ್ಲಿ ಮೊದಲ ಕೆಲವು ದಶಕಗಳಲ್ಲಿ ತಂತ್ರಜ್ಞಾನದ ಅಭಿವೃದ್ಧಿ ಮತ್ತು ಅದನ್ನು ಗೋಪ್ಯವಾಗಿಡಬೇಕಿದ್ದ ಅನಿವಾರ್ಯತೆಯಿಂದಾಗಿ ಮುಂದುವರಿದ ಮತ್ತು ಆರ್ಥಿಕ ಬಲವಿದ್ದ ದೇಶಗಳೇ ಬಾಹ್ಯಾಕಾಶ ಯೋಜನೆಗಳನ್ನು ಕೈಗೆತ್ತಿಕೊಂಡವು. ಜೊತೆಗೆ, ದೇಶರಕ್ಷಣೆ ಹಾಗೂ ರಾಜಕೀಯ ನಾಯಕತ್ವ – ಈ ಎರಡು ಕಾರಣಗಳೂ ಸೇರಿದ್ದವು. ಆನಂತರದ ವರು?ಗಳಲ್ಲಿ ಇನ್ನೂ ಕೆಲವು ದೇಶಗಳು ಈ ಗುಂಪಿಗೆ ಸೇರಿದರೂ ಅವುಗಳ ಸಂಖ್ಯೆ ಬಹಳ ಕಡಮೆಯೇ. ಇಂದು ಈ ಪರಿಣತಿಕ್ಷೇತ್ರದಲ್ಲಿ ಮುಂದಿರುವ ರಾಷ್ಟ್ರಗಳೆಂದರೆ ಅಮೆರಿಕ, ರಷ್ಯಾ, ಯೂರೋಪ್ ಒಕ್ಕೂಟ, ಜಪಾನ್, ಚೀಣ ಮತ್ತು ಭಾರತ. ಹೀಗಿದ್ದರೂ ಅನೇಕ ಉದ್ಯಮಿಗಳು, ಖಾಸಗಿ ಸಂಸ್ಥೆಗಳು ತಮ್ಮದೇ ಆದ ಆರ್ಥಿಕ ಬಲದಿಂದ ಮತ್ತು ತಾಂತ್ರಿಕ ಕೌಶಲದಿಂದಾಗಿ ಬಾಹ್ಯಾಕಾಶತಂತ್ರಜ್ಞಾನದ ನಾನಾ ವಿಭಾಗಗಳಲ್ಲಿ ಪರಿಣತಿಗಳನ್ನು ಅಭಿವೃದ್ಧಿಗೊಳಿಸಿಕೊಂಡು ಕಾಲಕ್ರಮೇಣ (ಅದರಲ್ಲೂ ಅಮೆರಿಕ ಮತ್ತು ಯೂರೋಪಿನಲ್ಲಿ) ತಮ್ಮ ದೇಶದ ಯೋಜನೆಗಳಿಗೆ ಉಪವ್ಯವಸ್ಥೆ ಮತ್ತು ಇತರ ವ್ಯವಸ್ಥೆಗಳನ್ನು ವಿನ್ಯಾಸಮಾಡಿ ಯೋಜನೆಗಳಲ್ಲಿ ಪಾಲುದಾರರಾದರು. ಸಾವಿರಾರು ಉದ್ಯಮಗಳು ದೇಶದ ಯೋಜನೆಗಳಿಗೆ ಬೇಕಾಗುವ ಪದಾರ್ಥಗಳನ್ನೂ, ಸಲಕರಣೆಗಳನ್ನೂ, ತಂತ್ರಾಂಶ-ಯಂತ್ರಾಂಶಗಳನ್ನೂ ತಯಾರಿಸಲು ತೊಡಗಿಕೊಂಡರು. ಇಂತಹ ಕೆಲಸಗಳಿಗೆ ಪೂರಕವಾಗಿ ಅನೇಕ ವಿಶ್ವವಿದ್ಯಾನಿಲಯಗಳು, ಸಂಶೋಧನಸಂಸ್ಥೆಗಳು ತಾಂತ್ರಿಕಶಿಕ್ಷಣದ ರೀತಿಯನ್ನೂ ಬದಲಾಯಿಸಿ ಪದವಿ, ಸ್ನಾತಕೋತ್ತರ ಪದವಿ ಮತ್ತು ಡಾಕ್ಟರೇಟ್ ಘಟ್ಟಗಳಲ್ಲಿ ಬಾಹ್ಯಾಕಾಶತಂತ್ರಜ್ಞಾನದ ವಿ?ಯವನ್ನು ವಿಸ್ತರಿಸಿದರು. ಇಂತಹ ಸಮಾನಾಂತರ ಅಭಿವೃದ್ಧಿಯಿಂದಾಗಿ ಈಗ ಖಾಸಗಿ ಕ್ಷೇತ್ರದಲ್ಲಿ ಆಗಿರುವ ಪ್ರಗತಿ ಬಹು ಗಮನಾರ್ಹ. ಉದಾಹರಣೆಗೆ – ಅಮೆರಿಕ, ಯೂರೋಪ್ ಮತ್ತು ಇಂಗ್ಲೆಂಡ್ನಲ್ಲಿ ಆಗಲೇ ಉದ್ಯಮಿಗಳು ತಮ್ಮದೇ ಆದ ಯೋಜನೆಗಳಲ್ಲಿ ತೊಡಗಿಕೊಂಡು, ಬರುವ ದಶಕಗಳಲ್ಲಿ ಖಾಸಗಿಕ್ಷೇತ್ರದಲ್ಲಿ ಪ್ರಯಾಣಿಕರನ್ನೂ ಮತ್ತು ಭವಿಷ್ಯದಲ್ಲಿನ ಮಾನವ ವಲಸೆಗಾರರನ್ನೂ ಚಂದ್ರನೆಡೆಗೆ ಮತ್ತು ಮಂಗಳಗ್ರಹದೆಡೆಗೆ ಹಣ ಪಡೆದು ಸಾಗಿಸುವ ಪ್ರಯತ್ನದಲ್ಲಿದ್ದಾರೆ. ಇಂತಹ ಖಾಸಗಿ ಯತ್ನಗಳಿಗೆ ಆಗಲೇ ಅನೇಕ ಜನರು ಪ್ರಯಾಣಕ್ಕೆ ಮುಂಗಡವಾಗಿ ಹಣ ಕೊಟ್ಟು ತಮ್ಮ ಸರತಿಗಾಗಿ ಕಾಯುತ್ತಿದ್ದಾರೆ!
ನಿಗೂಢ ಕಾರಣ
ಖಾಸಗಿ ಉದ್ಯಮಿಗಳ ಕಣ್ಣು ಬಾಹ್ಯಾಕಾಶತಂತ್ರಜ್ಞಾನದ ಮೇಲೆ ಬಿದ್ದಿರುವುದಕ್ಕೆ ಮತ್ತೊಂದು ನಿಗೂಢ ಕಾರಣವಿದೆ. ಅದು: ಭವಿಷ್ಯದಲ್ಲಿ ಚಂದ್ರನಿಂದ ಮತ್ತು ಕ್ಷುದ್ರಗ್ರಹಗಳಿಂದ ದೊರಕಬಹುದಾದ ಅಮೂಲ್ಯ ಲೋಹಗಳು ಮತ್ತು ಇತರ ನಿರ್ಮಾಣವಸ್ತುಗಳು. ಇವುಗಳನ್ನು ಭೂಮಿಗೆ ಸಾಗಿಸಿದರೆ, ಪ್ರಸ್ತುತ ಕೈಗಾರಿಕಾಕ್ಷೇತ್ರಕ್ಕೆ ಅನೇಕ ಬಗೆಯ ನವೀನತೆಗಳು ದೊರಕುವುದಲ್ಲದೆ ಅಪಾರ ಲಾಭದಾಯಕ ಯೋಜನೆಗಳಾಗಿಯೂ ಪರಿಣಮಿಸುತ್ತದೆ. ಆದರೆ ಸದ್ಯಕ್ಕಂತೂ ಯಾವ ದೇಶಗಳಾಗಲಿ ಖಾಸಗಿ ಉದ್ಯಮಗಳಾಗಲಿ ಚಂದ್ರನ ಅಥವಾ ಮಂಗಳನ ಮೈಮೇಲೆ ಯಾವ ಜಾಗಕ್ಕಾಗಲೀಹಕ್ಕುದಾರರಾಗಲು ಅಥವಾ ಮಾಲೀಕರಾಗಲು ಸಾಧ್ಯವಿಲ್ಲ. ಇದಕ್ಕೆ ಕಾರಣ: ಚಾಲನೆಯಲ್ಲಿರುವ ಒಂದು ಅಂತಾರಾಷ್ಟ್ರೀಯ ಒಪ್ಪಂದ. ಬರುವ ದಶಕಗಳಲ್ಲಿ ರಾಜಕೀಯ ಪೈಪೋಟಿಯಿಂದಾಗಿ ಯಾವ ಯಾವ ಗ್ರಹಗಳ ಯಾವ ಯಾವ ಸ್ಥಳಗಳು ಯಾವ ದೇಶಗಳ ಆಧೀನಕ್ಕೆ ಸೇರುತ್ತವೋ ಎಂದು ಹೇಳಲು ಈಗಂತೂ ಅಸಾಧ್ಯ. ಇಂತಹ ಸ್ಪರ್ಧೆ ಖಾಸಗಿ ಉದ್ಯಮಿಗಳಿಗೆ ಮೀಸಲಾಗಿಟ್ಟಿರುವುದಕ್ಕೆ ಇನ್ನೂ ಕೆಲವು ಪ್ರಮುಖ ಕಾರಣಗಳಿವೆ. ಮೊದಲನೆಯದಾಗಿ, ಇಂದು ನಾವು ಕಾಣುವ ಒಂದು ಉಪಗ್ರಹದ ಅಥವಾ ಒಂದು ಬಾಹ್ಯಾಕಾಶನೌಕೆಯ ಅತಿ ಹೆಚ್ಚಿನ ಉಡಾವಣೆಯ ವೆಚ್ಚ. ಇಂತಹ ವೆಚ್ಚದಿಂದಾಗಿಯೇ ಈಗ ಬಾಹ್ಯಾಕಾಶ ಯೋಜನೆಗಳು ಸರಕಾರದ ಹಣವನ್ನು ಅವಲಂಬಿಸಿವೆ. ಖಾಸಗಿಯವರ ಯೋಜನೆಗಳಲ್ಲಿ ಇಂತಹ ವೆಚ್ಚದ ಪ್ರಮಾಣ ಬಹುಮಟ್ಟಿಗೆ ಕಡಮೆಯಾಗುವುದು ಮಾತ್ರವೇ ಅಲ್ಲ, ಅವು ಉದ್ಯಮಗಳಿಗೆ ಲಾಭವನ್ನು ತಂದುಕೊಡುವ ನಿರೀಕ್ಷೆಯೂ ಇದೆ. ಅಲ್ಲದೆ, ಬಾಹ್ಯಾಕಾಶ ಯೋಜನೆಗಳನ್ನು ಒಂದು ವ್ಯಾಪಾರವೆಂದು ಪರಿಗಣಿಸಿದಾಗ, ತಂತ್ರಜ್ಞಾನವೂ ಬಹು ದಕ್ಷ ರೀತಿಯಲ್ಲಿ ವೃದ್ಧಿಯಾಗುತ್ತದೆ. ಪಾಲ್ಗೊಳ್ಳುವ ತಾಂತ್ರಿಕ ತಜ್ಞರ ಸಂಖ್ಯೆ ಬಹುಪಟ್ಟು ಹೆಚ್ಚಾಗುತ್ತದೆ. ಈ ಧ್ಯೇಯದಿಂದಲೇ ಪ್ರಾಯೋಜಕರು ಷರತ್ತಿನಲ್ಲಿ ಕೊಟ್ಟಿರುವ ಚಾಲನೆಯ ದೂರವನ್ನು ಇನ್ನೂ ಹತ್ತರಷ್ಟು ಹೆಚ್ಚಾಗಿ ಸಾಧಿಸಿದರೆ ಅಥವಾ ಈಗಾಗಲೇ ಚಂದ್ರನ ಮೇಲೆ ಬಿದ್ದಿರುವ ಮತ್ತು ಮಾನವನು ಬಿಟ್ಟು ಬಂದಿರುವ ಅಮೆರಿಕದ ಅಪೋಲೋ ಯೋಜನೆಯ ಕೆಲವು ತುಣುಕುಗಳ ಅಥವಾ ಇತರ ಮಾನವನಿರ್ಮಿತ ವಸ್ತುಗಳ ಛಾಯಾ ಚಿತ್ರಗಳನ್ನು ಸೆರೆಹಿಡಿದು ಭೂಮಿಗೆ ರವಾನಿಸಿದಲ್ಲಿ, ಸ್ಪರ್ಧಿಗೆ ಬೋನಸ್ ಬಹುಮಾನವನ್ನು ಘೋಷಿಸಿರುವುದು. ಒಂದು ವೇಳೆ ಸ್ಪರ್ಧಿಯ ರೋಬೋಟ್ ಚಂದ್ರನ ಅಡಿಯಲ್ಲಿ ಅಡಗಿರುವ ನೀರನ್ನು (ಹಿಮಗೆಡ್ಡೆ ರೂಪದಲ್ಲಿ) ಕಂಡುಹಿಡಿದಲ್ಲಿ ಅಥವಾ ಒಂದು ರಾತ್ರಿಯೆಲ್ಲ ನಿಷ್ಕ್ರಿಯವಾಗದೇ ಕಳೆದಲ್ಲಿ, ಇದಕ್ಕೆಂದೇ ಇನ್ನೂ ಒಂದು ಬಹುಮಾನವನ್ನು ಪ್ರತ್ಯೇಕವಾಗಿ ಕಾದಿರಿಸಲಾಗಿದೆ!
ಸ್ಪರ್ಧಿ ತಂಡಗಳು
’ಎಕ್ಸ್ಪ್ರೈಜ಼್’ನ ಘೋ?ಣೆಯಾಗಿದ್ದು ೧೩ನೇ ಸೆಪ್ಟೆಂಬರ್ ೨೦೦೭ರಂದು. ಬಹುಮಾನಗಳ ಮೊತ್ತವನ್ನೂ ಮತ್ತು ಯೋಜನೆಯ ಕೊನೆಯ ದಿನವನ್ನೂ ನಾನಾ ಕಾರಣಗಳಿಗೆ ಬದಲಾಯಿಸುತ್ತಾ ಕೊನೆಗೆ ಮೇಲೆ ತಿಳಿಸಿರುವ ಮೊತ್ತಗಳನ್ನೂ, ಚಂದ್ರನನ್ನು ತಲಪಲು ಕೊನೆಯ ದಿನವನ್ನು ೩೧ ಡಿಸೆಂಬರ್, ೨೦೧೭ ಎಂದೂ ತೀರ್ಮಾನಿಸಲಾಯಿತು. ಆರಂಭದಲ್ಲಿ ೩೨ ತಂಡಗಳು ನೋಂದಾಯಿಸಿಕೊಂಡವು. ಆದರೆ ಕೊನೆಯಲ್ಲಿ ನಿಯಮಗಳ ಚೌಕಟ್ಟಿನಲ್ಲಿ ಕೇವಲ ೫ ತಂಡಗಳು ಆಯ್ಕೆಯಾದವು. ಈ ತಂಡಗಳಲ್ಲಿ ಭಾರತದ್ದೂ ಒಂದಾಯಿತು! ಈಗ ಭಾರತವಲ್ಲದೆ (ಟೀಮ್ ಇಂಡಸ್), ಜಪಾನ್ (ಟೀಮ್ ಹಕುಟೋ), ಅಂತಾರಾಷ್ಟ್ರೀಯ (ಟೀಮ್ ಸಿನರ್ಜಿ ಮೂನ್-ಟೆಸ್ಲಾ), ಅಮೆರಿಕ (ಟೀಂ ಮೂನ್ ಎಕ್ಸ್ಪ್ರೆಸ್ಸ್) ಮತ್ತು ಇಸ್ರೇಲ್ (ಟೀಮ್ ಸ್ಪೇಸ್ ಐ.ಎಲ್.) ಅಂತಿಮ ಸ್ಪರ್ಧಿಗಳಾಗಿ ಅಖಾಡಕ್ಕೆ ಇಳಿದಿವೆ. ’ಟೀಮ್ ಇಂಡಸ್’ ನಮ್ಮ ಬೆಂಗಳೂರಿನ ಒಂದು ಪ್ರತಿಭಾವಂತ ಇಂಜಿನಿಯರುಗಳ ತಂಡವಾಗಿದ್ದು, ಅವರು ವಿನ್ಯಾಸ ಮಾಡಿ ನಿರ್ಮಿಸಿರುವ ರೋವರ್ (ಅದಕ್ಕೆ ಈ.ಸಿ.ಏ. ಎಂದು ನಾಮಧೇಯವಾಗಿದೆ) ಕೊನೆಯ ಹಂತದ ಪರೀಕ್ಷೆಗೆ ಒಳಗಾಗುತ್ತಿದೆ. ಕೇವಲ ೮ ಕೆಜಿ ತೂಕಕ್ಕೂ ಕಡಮೆ ಇರುವ ಈ ರೋವರ್ ೩ ಕ್ಯಾಮೆರಾಗಳನ್ನು ಹೊಂದಿದ್ದು, ನಾಲ್ಕು ಚಕ್ರಗಳ ತಿರುವಿನ ಸೌಲಭ್ಯದಿಂದ, ೫೦೦ ಮೀಟರುಗಳ ದೂರವನ್ನು ಚಲಿಸಲು ನಿರ್ಮಾಣವಾಗಿದೆ.
ಮೊದಲ ಹೆಜ್ಜೆ
ಒಂದು ಮಾಹಿತಿಯ ಪ್ರಕಾರ ಇದರ ವೆಚ್ಚ ೪೨ ಕೋಟಿ ರೂಪಾಯಿಗಳೆಂದು ಹೇಳಲಾಗಿದೆ. ವರು?ದ ಕೊನೆಯಲ್ಲಿ ಇಸ್ರೋ ಸಂಸ್ಥೆ ಉಡಾವಣೆ ಮಾಡಲಿರುವ ಪಿ.ಎಸ್. ಎಲ್.ವಿ. ರಾಕೆಟ್ನಲ್ಲಿ ಈ.ಸಿ.ಏ. ಚಂದ್ರನೆಡೆಗೆ ಹಾರಲಿದೆ. ಜಪಾನ್ ದೇಶದ ಹಕುಟೋ ರೋವರ್ ಕೂಡ ನಾಲ್ಕು ಚಕ್ರಗಳ ತಿರುವಿನ ಚಾಲನೆ ಹೊಂದಿದ್ದು ಕ್ಯಾಮೆರಾಗಳಲ್ಲದೆ ೩ ಅಕ್ಷಗಳಲ್ಲೂ ನೆಲದ ಅಡಚಣೆಗಳನ್ನು ಸಮೀಕ್ಷೆ ಮಾಡಲಿದೆ (ಇದಕ್ಕೆ ಅದರಲ್ಲಿ ಆವುಕೆಂಪು ಸಂವೇದಿಕೆಯನ್ನು ಅಳವಡಿಸಲಾಗಿದೆ) ಮತ್ತು ಭವಿ?ದಲ್ಲಿ ಮಾನವನು ಚಂದ್ರನ ಮೇಲೆ ಎಲ್ಲಿ ವಸಾಹತುಗಳನ್ನು ನಿರ್ಮಿಸಬಹುದು ಎಂಬ ಚಿಂತನೆಗೆ ಮಾಹಿತಿ ಪಡೆಯಲಿದೆ. ಇದರ ಯೋಜನೆಯ ವೆಚ್ಚ: ೧೦ ಮಿಲಿಯ ಡಾಲರ್ಗಳು. ಇಸ್ರೋ ಸಂಸ್ಥೆಯೊಡನೆ ಆಗಿರುವ ಒಪ್ಪಂದದಿಂದಾಗಿ, ಹಕುಟೋ ರೋವರ್ ಕೂಡ ಟೀಮ್ ಇಂಡಸ್ ಅವರ ರೋವರ್ ಜೊತೆಗೇ ಅದೇ ಪಿ.ಎಸ್. ಎಲ್.ವಿ. ರಾಕೆಟ್ನಲ್ಲಿ ಸಹಪ್ರಯಾಣಿಕನಾಗಿ ಹಾರಲಿದೆ! ಸಿನರ್ಜಿ ಮೂನ್-ಟೆಸ್ಲಾ ಅಮೆರಿಕದ ರೋವರ್ ಕೇವಲ ೭೦೦ ಗ್ರಾಮ್ಗಳ? ಭಾರವಿದ್ದು, ೪ ಚಕ್ರಗಳಿಂದ ಚಲನೆಯನ್ನು ಪಡೆಯುತ್ತದೆ. ಒಂದೇ ಕ್ಯಾಮೆರಾವನ್ನು ಹೊಂದಿರುವ ಈ ರೋವರ್ನ ವೆಚ್ಚ ೧೫ ಮಿಲಿಯ ಡಾಲರ್ಗಳೆಂದು ಹೇಳಲಾಗಿದೆ. ಇದು ನೆಪ್ಟ್ಯೂನ್ ೮ ಎಂಬ ರಾಕೆಟ್ನಿಂದ ಉಡಾವಣೆಯಾಗಲಿದೆ. ಮತ್ತೊಂದು ಅಮೆರಿಕದ ರೋವರ್- ಮೂನ್ ಎಕ್ಸ್ಪ್ರೆಸ್ಸ್ – ೧೨ ಕ್ಯಾಮೆರಾಗಳನ್ನು ಹೊಂದಿದ್ದು, ಸುಮಾರು ೨೨.೫ ಕೆ.ಜಿ. ತೂಕವಿದೆ. ಇದರ ವೆಚ್ಚ ೧೦ ಮಿಲಿಯ ಡಾಲರ್ಗಳು. ಎಲೆಕ್ಟ್ರಾನ್ ಎಂಬ ರಾಕೆಟ್ನಿಂದ ಇದರ ಉಡಾವಣೆಯಾಗಲಿದೆ. ಈ ರೋವರ್ನ ಒಂದು ಪ್ರತ್ಯೇಕತೆ ಎಂದರೆ, ಚಂದ್ರನ ನೆಲದ ಮೇಲೆ ಇದು ಚಕ್ರಗಳ ತಿರುವಿನಿಂದ ಚಲಿಸುವುದಿಲ್ಲ. ಬದಲಾಗಿ ಕಪ್ಪೆಯ ಹಾಗೆ ಕುಪ್ಪಳಿಸುತ್ತಾ ಚಲಿಸುತ್ತದೆ! ಇಸ್ರೇಲ್ನ ರೋವರ್ ಕೂಡ ಚಲನೆಗೆ ಕುಪ್ಪಳಿಸುವ ವಿನ್ಯಾಸವನ್ನೇ ಹೊಂದಿದೆ. ೬ ಕ್ಯಾಮೆರಾಗಳನ್ನು ಇದರಲ್ಲಿ ಅಳವಡಿಸಲಾಗಿವೆ. ಸ್ಪರ್ಧೆಗೆ ಬೇಕಾದ ಮಾಹಿತಿಯಲ್ಲದೆ, ಚಂದ್ರನ ಕಾಂತೀಯಕ್ಷೇತ್ರದ ಬಗ್ಗೆ ಮಾಹಿತಿ ಪಡೆಯಲು ’ಮ್ಯಾಗ್ನೆಟೋಮೀಟರ್’ ಎಂಬ ವೈಜ್ಞಾನಿಕ ಸಲಕರಣೆಯನ್ನು ಹೊಂದಿದೆ. ಇದರ ತೂಕ ೬೦೦ ಕೆ.ಜಿ. ಅಮೆರಿಕದ ’ಫಾಲ್ಕನ್ ೯’ ಈ ರೋವರನ್ನು ಉಡಾವಣೆ ಮಾಡಲಿದೆ. ಈ ರೋವರ್ನ ವೆಚ್ಚ ೧೦ ಮಿಲಿಯ ಡಾಲರ್ಗಳು. ಪೀಟರ್ ಡಯಮಂಡ್ಸ್ ಎಕ್ಸ್ಪ್ರೈಜ಼್ ಪ್ರತಿಷ್ಠಾನದ ಸಂಸ್ಥಾಪಕರು ಮತ್ತು ಒಬ್ಬ ತಾಂತ್ರಿಕ ಪರಿಣತರು. ಅವರ ಪ್ರಕಾರ ಇಂತಹ ಸ್ಪರ್ಧೆಗಳು ಚಂದ್ರ ಮತ್ತು ಹೊರಗ್ರಹಗಳ ಅನ್ವೇಷಣೆಗೆ ಕೇವಲ ಮೊದಲ ಹೆಜ್ಜೆಯ?! ಅವರ ಅಂದಾಜಿನಲ್ಲಿ ಭವಿಷ್ಯದಲ್ಲಿ ಮೂಡಿಬರುವ ಬೃಹತ್ ಯೋಜನೆಗಳಿಂದ ೨೦ ಟ್ರಿಲಿಯ ಡಾಲರ್ಗಳ ವಹಿವಾಟು ಕಾದಿದೆ!
೩೧ನೇ ಡಿಸೆಂಬರ್ ೨೦೧೭, ಬಹಳ ದೂರವೇನೂ ಇಲ್ಲ. ಬಹುಶಃ ಹೊಸ ವರು?ದ ಮೊದಲನೆಯ ದಿನದ ಬೆಳಗ್ಗೆ, ಈ ಸ್ಪರ್ಧೆಯಲ್ಲಿ ಯಾರು ಗೆಲ್ಲುವರೆಂಬ ಮಾಹಿತಿ ಬಿಸಿಬಿಸಿ ಸುದ್ದಿಯಾಗಿ ಬರಲಿದೆ. ಬಾಹ್ಯಾಕಾಶ ಸಾಧನೆಗಳಲ್ಲಿ ನಮ್ಮ ಇಸ್ರೋ ಸಂಸ್ಥೆ ಆಗಲೇ ವಿಶ್ವದ ೫ ಪ್ರಗತಿಪರ ದೇಶಗಳಲ್ಲಿ ತಾನೂ ಒಂದೆಂಬ ಪ್ರೌಢಸ್ಥಾನ ಪಡೆದುಕೊಂಡಿದೆ. ಈ ನಿಟ್ಟಿನಲ್ಲಿ ನಮ್ಮ ಭಾರತದ ಖಾಸಗಿ ತಂಡ ’ಟೀಮ್ ಇಂಡಸ್’ ಈ ಪ್ರತಿಷ್ಠಿತ ಸ್ಪರ್ಧೆಯಲ್ಲಿ ಜಯಗಳಿಸಿ, ಬಾಹ್ಯಾಕಾಶ ಕ್ಷೇತ್ರದಲ್ಲಿ ಇನ್ನೊಂದು ಕೀರ್ತಿಪಟ್ಟವನ್ನು ಪಡೆಯಲೆಂದು ಹಾರೈಸೋಣ