ರಾಗಮಾಲಾ ಚಿತ್ರಸರಣಿಯೂ ಸಂಗೀತಪ್ರಧಾನವಾಗಿ ಅದರಲ್ಲೂ ಸಾಹಿತ್ಯವನ್ನು ಪ್ರಧಾನವಾಗಿರಿಸಿಕೊಂಡು ಅಭಿವ್ಯಕ್ತಗೊಳ್ಳುತ್ತದೆ. ಅಂದಿನ ಜನರ ಗುಡ್ಡಗಾಡು ಪರಿಸರ, ಋತುಮಾನಗಳ ಪ್ರಕೃತಿ ಹಾಗೂ ಜೀವನವನ್ನು ತಮ್ಮೊಳಗೆ ತುಂಬಿಸಿಟ್ಟುಕೊಂಡು ಅನುಭೂತಿಗಳನ್ನು, ವಿಸ್ಮಯ ಹಾಗೂ ಕಲಾತ್ಮಕ ಮನಸ್ಸುಗಳ ಚಿಂತನೆಗಳ ಭಾವವನ್ನು ದೃಶ್ಯರೂಪದಲ್ಲಿ ತೆರೆದಿಟ್ಟ ಸಾಕ್ಷಿಗಳು ಇವು.
ಭಾರತೀಯ ಇತಿಹಾಸದಲ್ಲಿ ರಾಗಮಾಲಾ ಚಿತ್ರಕಲೆಗೊಂದು ವಿಶೇಷ ಸ್ಥಾನವಿದೆ. ಹಿಂದೂಸ್ತಾನಿ ರಾಗಗಳನ್ನು ಅಸ್ವಾದಿಸುವ, ಅದರಲ್ಲೂ ’ಶೃಂಗಾರರಸ’ದ ದೃಶ್ಯನಿರೂಪಕ ಚಿತ್ರಗಳು ಭಾರತೀಯ ಕಲಾಪ್ರಕಾರದಲ್ಲಿ ಮಹತ್ತ್ವದ ಸ್ಥಾನ ಪಡೆದುಕೊಂಡಿವೆ. ಕಾಗದದ ಮೇಲೆ ಜಲವರ್ಣದಲ್ಲಿ ರೇಖಾ ಪ್ರಧಾನವಾಗಿ ಚಿತ್ರಿಸಲ್ಪಟ್ಟಿರುವ ಇವು ಆರಂಭವಾದ ಕಾಲವನ್ನು ಗುರುತಿಸುವುದು ಕಷ್ಟವಾದರೂ ೧೬ನೇ ಶತಮಾನದಿಂದ ೧೯ನೇ ಶತಮಾನದ ಮಧ್ಯಭಾಗದವರೆಗೂ ಅಭ್ಯಾಸದಲ್ಲಿದ್ದ ಭಾರತದ ’ಚಿಕ್ಕಣಿ ಚಿತ್ರಕಲೆ’ ಎಂಬ ಕಲಾಪ್ರಕಾರವಿದು.
ಮಾರ್ಗ ಮತ್ತು ದೇಸಿ ನೆಲೆಯಲ್ಲಿನ ಸಂಗೀತಪ್ರಕಾರಗಳು ವ್ಯಾಪಕವಾಗಿದ್ದಂತೆ, ರಾಗಮಾಲದ ಚಿತ್ರರಚನೆಗಳು ಶಾಸ್ತ್ರೀಯ ಸಂಗೀತಕಾವ್ಯವನ್ನು, ರಾಗವನ್ನು ಆಧರಿಸಿ ಅದರಲ್ಲೂ ಶೃಂಗಾರ, ಪ್ರಣಯ, ವಿರಹ, ಪ್ರೇಮನಿವೇದನೆ, ಮಿಲನ ಮತ್ತು ಕೆಲವೊಮ್ಮೆ ಪುರಾಣ ಕಥಾನಕವನ್ನು ದೇಸಿ ನೆಲೆಗಟ್ಟಿನಲ್ಲಿ ದೃಶ್ಯರೂಪದಲ್ಲಿ ಚಿತ್ರಿಸುತ್ತಿದ್ದ ಪರಿ ಅಪ್ಪಟ ಭಾರತೀಯ ಕಲಾಪ್ರಕಾರ, ಚಿಂತನೆಗಳಿಗೆ ಅತ್ಯತ್ತಮ ಉದಾಹರಣೆ.
ರಾಜಸ್ಥಾನ, ಹಿಮಾಚಲ ಪ್ರದೇಶ, ಮಧ್ಯಭಾರತ, ಗಂಗಾ-ಯಮುನಾ ನದೀತಟಗಳಲ್ಲಿ ಹಾಗೂ ಪಹಾರಿ, ಕಾಂಗ್ರಾ, ಬಸೋಲಿ ಮುಂತಾದ ಕಣಿವೆಗಳಲ್ಲಿ ಕಲಾವಿದರು ನೆಲೆನಿಂತದ್ದು ಇತಿಹಾಸದಲ್ಲಿ ಗೋಚರಿಸುತ್ತದೆ. ಸಂಗೀತವು ಶ್ರೋತೃವಿನಲ್ಲಿ ಉಂಟುಮಾಡುವ ಆಹ್ಲಾದಕರ ಮನೋಭಾವ, ಶಾಂತಿ, ಚಿತ್ತಶುದ್ಧಿ, ಆನಂದದ ಅನುಭವ ನಾವು ಬಲ್ಲೆವು. ಶಾಸ್ತ್ರೀಯ ಸಂಗೀತದಲ್ಲಿ ರಾಗವು ಸುಮಧುರವಾಗಿ ಧ್ವನಿಸಿದಂತೆ ಕಲಾಕೃತಿಯಲ್ಲಿ ಬಣ್ಣವು ಅದನ್ನು ಕಲಾತ್ಮಕವಾಗಿ ಅಭಿವ್ಯಕ್ತಿಸುತ್ತದೆ. ರಾಗಬದ್ಧ ಏರಿಳಿತ, ಮಂಜುಳ ನಿನಾದ, ಸ್ವರ-ನಾದಗಳ ಸಮ್ಮಿಲನ; – ಹೀಗೆ ಸಂಗೀತ ವಿಸ್ತೃತಗೊಳುತ್ತ ಸಾಗುತ್ತಿದ್ದಂತೆ ಕೃತಿಯಲ್ಲಿನ ಆಶಯಗಳು ತನ್ನ ಅಂತರಂಗದ ಭಾವಪೂರ್ಣತೆಯನ್ನು ದೃಶ್ಯಕಾವ್ಯವಾಗಿ ಅನಾವರಣಗೊಳಿಸುತ್ತ ಸಾಗುತ್ತವೆ. ರೇಖೆಯು ಒಂದು ಕಾವ್ಯಾತ್ಮಕ ಜೋಡಣೆಯ ಭಾವರೂಪಕವಾಗಿ ಚಿತ್ರಿತಗೊಂಡರೆ ಆ ಮೂಲಕ ಆಕೃತಿ, ಸುತ್ತಲಿನ ಪರಿಸರ ರಚನೆ, ಸಂಕೇತಗಳು ಮತ್ತು ರೂಪಕಗಳು ಒಟ್ಟಾರೆಯಾಗಿ ಸಂಯೋಜನೆಗೊಂಡ ಕಲಾಕೃತಿಯಾಗಿ ಮೇಳೈಸುತ್ತವೆ.
ರಾಗಗಳು ಮತ್ತು ವರ್ಗೀಕರಣ
ಶಾಸ್ತ್ರೀಯ ಸಂಗೀತದ ಆರು ಪ್ರಧಾನ ರಾಗಗಳಾದ ಭೈರವ, ದೀಪಿಕಾ, ಶ್ರೀ, ಮಾಲ್ಕೌನ್ಸ್, ಮೇಘಾ ಮತ್ತು ಹಿಂದೋಳವು ಋತುಮಾನಗಳಾದ ವಸಂತ, ಗ್ರೀಷ್ಮ, ವರ್ಷ, ಶರದ್, ಹೇಮಂತ ಹಾಗೂ ಶಿಶಿರವನ್ನು ಪ್ರತಿನಿಧಿಸುತ್ತವೆ. ಅದರಂತೆ ರಾಗಮಾಲಾ ಚಿತ್ರಸರಣಿಯೂ ಸಂಗೀತ ಪ್ರಧಾನವಾಗಿ ಅದರಲ್ಲೂ ಸಾಹಿತ್ಯವನ್ನು ಪ್ರಧಾನವಾಗಿರಿಸಿಕೊಂಡು ಅಭಿವ್ಯಕ್ತಗೊಳ್ಳುತ್ತದೆ. ಅಂದಿನ ಜನರ ಗುಡ್ಡಗಾಡು ಪರಿಸರ, ಋತುಮಾನಗಳ ಪ್ರಕೃತಿ ಹಾಗೂ ಜೀವನವನ್ನು ತಮ್ಮೊಳಗೆ ತುಂಬಿಸಿಟ್ಟುಕೊಂಡು ಅನುಭೂತಿಗಳನ್ನು ವಿಸ್ಮಯ ಹಾಗೂ ಕಲಾತ್ಮಕ ಮನಸ್ಸುಗಳ ಚಿಂತನೆಗಳ ಭಾವವನ್ನು ದೃಶ್ಯರೂಪದಲ್ಲಿ ತೆರೆದಿಟ್ಟ ಸಾಕ್ಷಿಗಳು ಇವು.
ಸಂಗೀತ ರಾಗಗಳ ವಿವರವನ್ನು ನೀಡಿದ ೧೩ನೇ ಶತಮಾನದ ಸಾರಂಗದೇವನ ಅನಂತರ ಕನ್ನಡದವನೇ ಆದ ಪುಂಡರೀಕ ವಿಠಲ ರಾಗಮಾಲಾದಲ್ಲಿ ಸಂಗೀತದ ಶುದ್ಧರಾಗಗಳನ್ನು ಮೂಲರಾಗ (ಪುರು?) ಹಾಗೂ ಸಲಗ ಅಥವಾ ಚಾಯಾಲಗವನ್ನು ರಾಗಿಣಿ (ಸ್ತ್ರೀ) ಎಂದು ವರ್ಗೀಕರಿಸಿ ಈ ಪ್ರತಿಯೊಂದು ರಾಗಕ್ಕೂ ತಲಾ ಐದರಂತೆ ರಾಗಪುತ್ರ, ರಾಗಪುತ್ರಿ ಎಂಬ ಉಪವರ್ಗವನ್ನು ನೀಡಿದ್ದಾನೆ. ರಾಗಮಾಲಾದ ಚಿತ್ರಸಂಪುಟಗಳಲ್ಲಿ ಪ್ರಸಂಗಗಳು ಒಳಗೊಂಡಿವೆ.
ರಾಗಮಾಲಾ ಚಿತ್ರಗಳು ಸಂಗೀತ ರಾಗ ರಚನೆಗಳನ್ನು ದೃಶ್ಯರೂಪದಲ್ಲಿ ಸೆರೆ ಹಿಡಿದದ್ದಲ್ಲದೆ ಭಕ್ತಿಪಂಥದ ಆಧ್ಯಾತ್ಮಿಕ ಹಾಗೂ ಗೀತಗೋವಿಂದ, ಚೋರ ಪಂಚಶಿಖಾ ಕಾವ್ಯಗಳ ನಾಯಕ-ನಾಯಕಿಯರ ಶೃಂಗಾರ ಪ್ರಸಂಗಗಳನ್ನು ನಾಟಕೀಯವಾಗಿ ಪ್ರಸ್ತುತಗೊಳಿಸಿವೆ. ತೋಡಿರಾಗದ ಕರುಣರಸ, ಮೋಹನರಾಗದ ವೀರರಸ, ಶೋಕ ಸಾರುವ ನೀಲಾಂಬರಿರಾಗ ಇತ್ಯಾದಿ ಕಾಣಬಹುದು.
ಕೆಲವು ರಾಗಮಾಲಾ ಕೃತಿಗಳನ್ನು ನೋಡೋಣ:
ರಾಗ ಕೇದಾರ
ಶಿವನ ನಾಮಾಂಕಿತವಾದ ಕೇದಾರ ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತದ ರಾಗ. ಸಂಗೀತದ ಉನ್ನತ ಸ್ಥಾನದಲ್ಲಿರುವ ರಾಗವೆಂದೇ ಹೇಳಲಾಗುತ್ತದೆ. ಭಾವಪೂರ್ಣ ಸುಸ್ವರದ ಈ ರಾಗವು ಬಹು ಅಮೂರ್ತವಾಗಿದ್ದು ಅದನ್ನು ಪದಗಳಲ್ಲಿ ಬಣ್ಣಿಸಲು ಅಸಾಧ್ಯ. ಈ ರಾಗ ಸಂಧ್ಯಾಕಾಲದ ಅನಂತರದ ಅವಧಿಯದ್ದಾಗಿದೆ. ಶುದ್ಧಕಲ್ಯಾಣಿ ತಾಳ ಶುದ್ಧ ಮಧ್ಯಮ್ ಹಾಗೂ ತೀವ್ರ ಮಧ್ಯಮ್ ರಚನೆಯ ಆಧಾರಿತ ಈ ಕಲಾಕೃತಿಯಲ್ಲಿ ಶಿವನ ಆರಾಧನೆ ಬಣ್ಣಿತವಾಗಿದೆ.
ಈ ಮೊದಲ ಕೃತಿಯಲ್ಲಿ ಶೈವಪಂಥದ ಓರ್ವ ಆರಾಧಕ ಶಿವಲಿಂಗದ ಪೂಜೆಯಲ್ಲಿ ನಿರತನಾಗಿದ್ದಾನೆ. ಸಂಧ್ಯಾ ಕಾಲ ಸರಿದು ಇರುಳು ದಟ್ಟವಾಗುತ್ತಿರುವುದನ್ನು ಸೂಚಿಸಲು ಆಕಾಶದಲ್ಲಿ ಕಪ್ಪು ಹಾಗು ದಟ್ಟ ನೀಲ ವರ್ಣವನ್ನು ಕಲಾವಿದ ಬಳಸಿದ್ದಾನೆ. ರಾಗವೇ ಅಮೂರ್ತ ಪ್ರಧಾನವಾಗಿದ್ದಾಗ ರಚನೆಯೂ ಆ ಧಾಟಿಯಲ್ಲೇ ಸಾಗಿರುವುದು ಸೋಜಿಗವೇ ಸರಿ. ಶಿವಲಿಂಗದ ಮೇಲೆ ಅಭಿಷೇಕದ ಹನಿ ಸುರಿಸುತ್ತಿದೆ ಮತ್ತು ತುತ್ತೂರಿ ಹೂವಿನಿಂದ ಪೂಜಿಸಿದೆ. ತುತ್ತೂರಿ ಹೂವನ್ನು ಬದಿಯಲ್ಲಿಯೇ ಬೆಳೆದ ಬಳ್ಳಿಯಿಂದಲೇ ಬಿಡಿಸಿ ತಂದದ್ದು ಎಂದು ಪ್ರಜ್ಞಾಪೂರ್ವಕವಾಗಿ ಚಿತ್ರಿಸುವ ಮೂಲಕ ಕಲಾವಿದ ಶಿವನ ಪೂಜೆಗೆ ಇನ್ನೆಲ್ಲಿಂದಲೋ ಆರಾಧನೆ ಸಿದ್ಧಗೊಳಿಸುವ ಬದಲಿಗೆ ಸ್ಥಾನೀಯ ಅವಕಾಶವನ್ನು ಪ್ರತಿಪಾದಿಸಿದ್ದಾನೆ. ವರ್ಷ ಋತುವಿನಲ್ಲಿ ತುತ್ತೂರಿ ಹೂ ಅರಳುವುದು ಸಾಮಾನ್ಯ. ಹೀಗಾಗಿ ಈ ಮೊದಲೇ ಹೇಳಿದಂತೆ ಕೇದಾರರಾಗ ವರ್ಷ ಋತುವಿನ ಸೂಚಕವಾಗಿದೆ.
ತೀರ ಸರಳವಾದ ರಚನೆಗಳಿಂದ ಕೂಡಿದ, ಬಣ್ಣಗಳ ಬಳಕೆಯಿಂದ ಮತ್ತು ವ್ಯಕ್ತಿಯ ಮುಖಭಾವವು ಚಿತ್ತಶಾಂತಿ ಹಾಗೂ ಮೈತುಂಬ ಸುತ್ತಿಕೊಂಡ ವಸ್ತ್ರದಿಂದ ಆ ಸಮಯದಲ್ಲಿನ ಮೈಚಳಿ ಮುದಗೊಳಿಸುವ ಸ್ಥಿತಿಯನ್ನು ನಮ್ಮ ಅನುಭವಕ್ಕೆ ಕಟ್ಟಿಕೊಡುತ್ತದೆ.
ಇನ್ನು ಎರಡನೇ ಚಿತ್ರ ಕೇದಾರ ರಾಗಿಣಿಗೆ ಸಂಬಂಧಿಸಿದ್ದು, “ಕಂಗನ್ವ ಮೋರಾ ಅತ್ವೀ ಅಮೋಲ್” ಎಂಬ ಹಾಡಿನಲ್ಲಿ ವ್ಯಕ್ತವಾಗುವ ಪ್ರಣಯ ವಿದಾಯದ ಭಾವಪೂರ್ಣ ಸಂದರ್ಭದ್ದಾಗಿದೆ. ಇಲ್ಲಿ ಪ್ರಿಯಕರ ಉಪ್ಪರಿಗೆಯಿಂದ ತನ್ನ ಪ್ರಿಯತಮೆಯ ಮನೆಗೆ ಹೋಗಲಾಗದೆ, ಇರಲಾಗದೆ ಚಡಪಡಿಸುವ ಸ್ಥಿತಿಯಲ್ಲಿ ನೋಡುತ್ತಿದ್ದಾನೆ. ಕೆಳಗೆ ಆತನ ಸಖಿ ಸಂಜೆಯಾಗಿದ್ದು ಮನೆಗೆ ಹೊರಟಾಕೆ ಮಳೆ ಗುಡುಗು ಶಬ್ದದಿಂದ ಭಯಭೀತಳಾಗಿ ಮತ್ತೆ ಹಿಂತಿರುಗುವ ಆತುರದಲ್ಲಿದ್ದಾಳೆ. ಮನೆಗೆ ಹೊಗದಿರುವ ಬಯಕೆ ಒಂದೆಡೆಯಾದರೆ, ಹೋಗಲೇಬೇಕಾದ ಅನಿವಾರ್ಯತೆಯ ಮನಃಸ್ಥಿತಿ ಆಕೆಯದ್ದು. “ನೀನು ಹೀಗೆ ನೋಡುತ್ತಿರುವಾಗ ನಾ ಎಲ್ಲವ ಮರೆತೇ ಹೋಗುವೆ, ಮನೆಗೆ ಹಿಂತಿರುಗಿ ಹೇಗೆ ಹೋಗಲಿ” ಎಂದು ಪ್ರಲಾಪಿಸುತ್ತಿರುವ ಆಂತರ್ಯದ ಭಾವವನ್ನು ಕಲಾವಿದ ರೂಪಕವಾಗಿ ಇಲ್ಲಿ ಚಿತ್ರಿಸಿದ್ದಾನೆ.
ವರ್ಷಋತುವಿನ ಇರುಳು ವೇಳೆಯಾಗಿದೆ. ಮಳೆ-ಬಿರುಗಾಳಿಗೆ ಗಿಡಮರಗಳು ತೊಯ್ದಾಡುತ್ತಿವೆ. ಬಳ್ಳಿಗಳು ಗಾಳಿ ಬೀಸುವ ದಿಕ್ಕಿನತ್ತ ಚಾಚಿವೆ. ದಟ್ಟಮೋಡಗಳ ನಡುವೆ ಸಿಡಿವ ಸಿಡಿಲು ಬೆದರಿ ಬಿಲ ಸೇರಲು ಧಾವಿಸುತ್ತಿರುವ ಸರ್ಪದಂತೆ ಎಂಬುದರ ವಿವರಣೆಗಳನ್ನು ಇಲ್ಲಿ ಕಾಣಬಹುದು. ಆಕೃತಿಗಳಲ್ಲಿ ಮಹಿಳೆ ಧರಿಸಿರುವ ವಸ್ತ್ರಕ್ಕೆ ತೀವ್ರ ಕೇಸರಿ ಬಣ್ಣವನ್ನು ಬಳಸುವ ಮೂಲಕ ಕಲಾವಿದ ಕೇದಾರರಾಗದ ತೀವ್ರ ಮಧ್ಯಮ್ದ ಏರಿಳಿತವನ್ನು ಇಲ್ಲಿ ಸಂಕೇತಿಸಿದ್ದಾನೆ.
ಈ ರಾಗಗಳ ಮೊದಲ ಚಿತ್ರದ ಪೂರ್ಣ ಅನುಭವ ಪಡೆಯಲು ಈ ರಾಗದಲ್ಲಿ ವಾಣಿ ಜಯರಾಂ ಹಾಡಿರುವ ಹಿಂದಿ ಚಲನಚಿತ್ರ ’ಗುಡ್ಡಿ’ಯಲ್ಲಿನ ’ಹಮ್ ಕೋ ಮನ್ ಕೀ ಶಕ್ತಿ ದೇನಾ’ ಹಾಡನ್ನು, ಹಾಗೆಯೆ ರಾಗಿಣಿ ಚಿತ್ರಕ್ಕೆ ಮುನಿಮ್ಜೀ (೧೯೫೫) ಚಿತ್ರದಲ್ಲಿ ಲತಾ ಮಂಗೇಶ್ಕರ್ ಹಾಡಿದ ’ಜೀವನ್ ಕೀ ಸಫರ್ ಮೇ ರಾಹಿ” ಮತ್ತು ರಾಗ ಚಾಂದನಿ ಕೇದಾರ್ನಲ್ಲಿ ಲತಾ ಮಂಗೇಶ್ಕರ್ ಹಾಡಿರುವ “ಸಾಜನ್ ಬಿನ್ ನೀಂದ್ ನ ಆವೇ” ಗೀತೆಗಳನ್ನು ಉದಾಹರಿಸಬಹುದು.
(ಮುಂದಿನ ತಿಂಗಳು ರಾಗ ಭೈರವ್)