ಕ್ರಿಕೆಟ್‌ನ ಬಗ್ಗೆ ಅದು `ಗೌರವಾನ್ವಿತರ ಆಟ’ ಎನ್ನುವ ಒಂದು ಮೆಚ್ಚುಗೆಯ ಮಾತಿದೆ. ಹಿಂದೆ ಅದು ಗೌರವಾನ್ವಿತರ ಆಟ ಆಗಿತ್ತೊ ಏನೋ; ಈಗ ಅಂತೂ ಹಾಗೆ ಉಳಿದಿಲ್ಲ. ಭಾರತೀಯ ಕ್ರಿಕೆಟ್, ಮುಖ್ಯವಾಗಿ ಅದರ ಪರಮೋಚ್ಚ ಸಂಸ್ಥೆ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಹಾಗೂ ಅದರ ಮುದ್ದಿನ ಕೂಸಾದ ಇಂಡಿಯನ್ ಪ್ರೀಮಿಯರ್ ಲೀಗ್(ಐಪಿಎಲ್)ನ ಈಚಿನ ವಿದ್ಯಮಾನಗಳನ್ನು ಗಮನಿಸಿದರೆ ಆರಂಭದಲ್ಲಿ ಉಲ್ಲೇಖಿಸಿದ ಮಾತು ಎಂದೋ ಇತಿಹಾಸಕ್ಕೆ ಸೇರಿಹೋಗಿದೆ ಎನಿಸಿದರೆ ಆಶ್ಚರ್ಯವಿಲ್ಲ. ಇದರಲ್ಲಿ ಪ್ರಧಾನವಾಗಿ ಕಂಡುಬರುವವರು ಬಿಸಿಸಿಐ ಅಧ್ಯಕ್ಷತೆಯಂತಹ ಉನ್ನತ ಸ್ಥಾನದಲ್ಲಿದ್ದ ಎನ್. ಶ್ರೀನಿವಾಸನ್.
ದುಡ್ಡಿನ ಕೊಯ್ಲಿಗಾಗಿ ರೂಪಿಸಿ ೨೦೦೮ರಲ್ಲಿ ಅಸ್ತಿತ್ವಕ್ಕೆ ಬಂದ ಐಪಿಎಲ್ ಆಟಗಾರರ ಹರಾಜಿನಿಂದ ತೊಡಗಿ ಆರಂಭದಿಂದಲೇ ವಿವಾದಗಳನ್ನು ಹೊತ್ತುಕೊಂಡು ಬಂದಿತು. ಆ ಸಾಲಿನಲ್ಲಿ ದೊಡ್ಡ ವಿವಾದ ಬೆಟ್ಟಿಂಗ್ ಮತ್ತು ಮ್ಯಾಚ್ ಫಿಕ್ಸಿಂಗ್‌ಗೆ ಸಂಬಂಧಿಸಿದ್ದು. ಅಂತಹ ಒಂದು ಪ್ರಕರಣದಲ್ಲಿ ರಾಜಸ್ಥಾನ್ ರಾಯಲ್ಸ್ ತಂಡದ ಶ್ರೀಶಾಂತ್, ಅಜಿತ್ ಚಂಡಿಲ ಮತ್ತು ಅಂಕಿತ್ ಚವ್ಹಾಣ್ ಎನ್ನುವ ಮೂವರು ಆಟಗಾರರನ್ನು ಸ್ಪಾಟ್ ಫಿಕ್ಸಿಂಗ್‌ಗಾಗಿ ದೆಹಲಿ ಪೊಲೀಸರು ಮೇ ೧೬, ೨೦೧೩ರಂದು ಬಂಧಿಸಿದಾಗ ಬಿಸಿಸಿಐ ಅಧ್ಯಕ್ಷ ಎನ್. ಶ್ರೀನಿವಾಸನ್ ಅವರನ್ನು `ಕೊಳೆತ ಮೊಟ್ಟೆಗಳು’ ಎಂದು ನಿಂದಿಸಿದರು. ಅವರ ಬಗ್ಗೆ ತನಿಖೆ ನಡೆಸಿ ಬಿಸಿಸಿಐ ಅವರಿಗೆ ಜೀವಾವಧಿ ನಿಷೇಧ ಹೇರಿತು. ಆರೋಪಿಗಳ ಶೋಧಕಾರ್ಯ ಮುಂದುವರಿದು, ಅದೇ ಮೇ ೨೪ರಂದು ಪೊಲೀಸರು ‘ಚೆನ್ನೈ ಸೂಪರ್ ಕಿಂಗ್ಸ್’ (ಸಿಎಸ್‌ಕೆ) ತಂಡದ ಆಡಳಿತಾಧಿಕಾರಿ ಗುರುನಾಥ್ ಮೇಯಪ್ಪನ್ ಎಂಬಾತನನ್ನು ಬಂಧಿಸಿದರು. ಆಗ ಬಿಸಿಸಿಐ ಅಧ್ಯಕ್ಷರು ಏನೂ ಮಾತನಾಡಲಿಲ್ಲ. ಮೇಯಪ್ಪನ್ ವಿರುದ್ಧ ಅಮಾನತಿನಂತಹ ಕನಿಷ್ಠ ಕಾರ್ಯಕ್ರಮ ಕೂಡ ಜರುಗಲಿಲ್ಲ. ಏಕೆ? ಆತ ಶ್ರೀನಿವಾಸನ್ ಅವರ ಅಳಿಯ (ಮಗಳ ಗಂಡ); ಮಾತ್ರವಲ್ಲ, ಸಿಎಸ್‌ಕೆ ಶ್ರೀನಿವಾಸನ್ ಅವರ ಸ್ವಂತ ತಂಡವೂ ಹೌದು. ಇದು ವಿಪರ್ಯಾಸವೆಂಬಂತೆ ಕಾಣುತ್ತದಲ್ಲವೆ? ನಿಜ; ಭಾರತೀಯ ಕ್ರಿಕೆಟ್ ಈಗ ಈ ಹಂತಕ್ಕೆ ಬಂದು ನಿಂತಿದೆ.
ವಿಷಯ ಈಗ ಸುಪ್ರೀಂಕೋರ್ಟಿನ ಮೆಟ್ಟಿಲೇರಿದೆ; ನ್ಯಾಯಾಲಯ ನೇಮಿಸಿದ ನ್ಯಾಯಮೂರ್ತಿ ಮುಕುಲ್ ಮುದ್ಗಲ್ ನೇತೃತ್ವದ ಸಮಿತಿ ವರದಿಯನ್ನು ಕೂಡ ಸಲ್ಲಿಸಿದೆ. ವಿಚಾರಣೆಯ ಒಂದು ಹಂತದಲ್ಲಿ ಸುಪ್ರೀಂಕೋರ್ಟ್ ರಾಜಕಾರಣಿಗಳು ಹಾಕಿಯನ್ನು ಪಾತಾಳದಂಚಿಗೆ ಒಯ್ದಿದ್ದಾರೆ. ಹಿಂದೆ ಹಾಕಿಯಲ್ಲಿ ಭಾರತ ಚಿನ್ನದ ಪದಕವನ್ನು ಗೆಲ್ಲುತ್ತಿತ್ತು. ಈಗ ಪಂದ್ಯಕ್ಕೆ ಅರ್ಹವಾಗಲು ಕೂಡ ಒದ್ದಾಡುತ್ತಿದೆ. ಕ್ರೀಡಾಸಂಸ್ಥೆಗಳಿಗೆ ಆ ಕ್ಷೇತ್ರದವರೇ ಮುಖ್ಯಸ್ಥರಾಗಿರಬೇಕೇ ಹೊರತು ರಾಜಕಾರಣಿಗಳು ಅಥವಾ ಉದ್ದಿಮೆದಾರರಲ್ಲ ಎಂದು ಎಚ್ಚರಿಸಿದೆ. ಸೂಕ್ಷ್ಮವಾಗಿ ಗಮನಿಸಿದಾಗ ಸಮಸ್ಯೆಯ ಮೂಲ ಇಲ್ಲೇ ಇರುವುದು ಸ್ಪಷ್ಟವಾಗುತ್ತದೆ. ಇದರಲ್ಲಿ ಶ್ರೀನಿವಾಸನ್ ಒಬ್ಬರೇ ಅಲ್ಲ, ಮಾಜಿ ಕೇಂದ್ರಸಚಿವ ಶರದ್ ಪವಾರ್ ಕೂಡ ಈ ಸಾಲಿನಲ್ಲಿದ್ದಾರೆ. ಶ್ರೀನಿವಾಸನ್ ಮುಖ್ಯವಾಗಿ ಉದ್ದಿಮೆದಾರರು; ರಾಜಕಾರಣಿಗಳ ಸಂಪರ್ಕದಲ್ಲಿರುವವರು.
ನಿಜವೆಂದರೆ, ೧೯೯೩ಕ್ಕೆ ಮುನ್ನ ಅವರಿಗೆ ಕ್ರಿಕೆಟ್‌ನ ಹೆಚ್ಚಿನ ಸಂಬಂಧವೇನೂ ಇರಲಿಲ್ಲ. ಅದೇನಿದ್ದರೂ ಎರಡು ದಶಕಗಳ ಗಳಿಕೆ. ಹಂತಹಂತವಾಗಿ ಮೇಲೇರಿದ ಅವರು ಈಗ ಮಾತ್ರ ಮಾನ ಉಳಿಸಿಕೊಳ್ಳಲು ಹರಸಾಹಸ ಪಡಬೇಕಾದ ಪರಿಸ್ಥಿತಿಯೊದಗಿದೆ.
ಇಂಡಿಯಾ ಸಿಮೆಂಟ್ಸ್
ಈಗ ಶ್ರೀನಿವಾಸನ್ ಆಡಳಿತ ನಿರ್ದೇಶಕರಾಗಿರುವ ಇಂಡಿಯಾ ಸಿಮೆಂಟ್ಸ್ ಸಂಸ್ಥಾಪಕರಾದ ಇಬ್ಬರಲ್ಲಿ ಅವರ ತಂದೆ ಟಿ.ಎಸ್. ನಾರಾಯಣಸ್ವಾಮಿ ಒಬ್ಬರು. ಎರಡನೇ ಮಹಾಯುದ್ಧ ಮುಗಿದ ವೇಳೆ ಸಿಮೆಂಟ್ ಉತ್ಪಾದನೆಗೆ ಗೌರವ ಪ್ರಾಪ್ತವಾಯಿತು. ತಮಿಳುನಾಡಿನ ಅತಿ ದಕ್ಷಿಣದ ತಿರುನೆಲ್ವೇಲಿ ಜಿಲ್ಲೆಯಲ್ಲಿ ಶಂಕರಲಿಂಗ ಅಯ್ಯರ್ ಎಂಬವರು ಉದ್ದಿಮೆ ಸ್ಥಾಪನೆಗೆ ಮುಂದಾಗಿ ನಾರಾಯಣಸ್ವಾಮಿ ಅವರನ್ನು ತಮ್ಮೊಂದಿಗೆ ಸೇರಿಸಿಕೊಂಡರು. ೧೯೫೦ರ ಹೊತ್ತಿಗೆ ನಾರಾಯಣ ಸ್ವಾಮಿ ಅವರು ಇಂಡಿಯಾ ಸಿಮೆಂಟ್ಸ್ ಬಿಟ್ಟು ಒರಿಸ್ಸಾದ ಬಿಜೂ ಪಟ್ನಾಯಕ್ (ಮುಂದೆ ಮುಖ್ಯಮಂತ್ರಿ ಆದವರು) ಅವರ ಒಂದು ಉದ್ದಿಮೆಗೆ ಹೋದರು. ಆದರೆ ಅಲ್ಲಿ ಸರಿಬರದೆ ಬಹುಬೇಗ ವಾಪಸು ಬರಲು ಯತ್ನಿಸಿದಾಗ ಶಂಕರಲಿಂಗ ಅಯ್ಯರ್ ಒಪ್ಪಲಿಲ್ಲ. ಸಾಕಷ್ಟು ಸತಾಯಿಸಿ ವಾಪಸು ಕರೆದುಕೊಂಡರು. ೧೯೫೯ರಲ್ಲಿ ಆಡಳಿತ ಮಂಡಳಿಗೂ ಸೇರಿಸಿಕೊಂಡರು; ಕಾರ್ಖಾನೆ ಬೆಳೆಯಿತು. ತಂದೆ ಇರುವಲ್ಲಿಗೆ ಮಗ ಶ್ರೀನಿವಾಸನ್ ಕೂಡ ಸೇರಿದರು. ೧೯೬೮ರಲ್ಲಿ ೨೪ರ ಹರೆಯದಲ್ಲಿ ಶ್ರೀನಿವಾಸನ್ ಕಂಪೆನಿಯ ಉಪ ಆಡಳಿತ ನಿರ್ದೇಶಕ (ಡಿಎಂಡಿ) ಆದರು.
ಅಯ್ಯರ್ ಮಗ ಕೆ.ಎಸ್. ನಾರಾಯಣ್ ಅವರ ಜೊತೆ ಶ್ರೀನಿವಾಸನ್ ಸಂಬಂಧ ಹಾಳಾಗಿ ೧೯೭೯ರ ಹೊತ್ತಿಗೆ ಜಗಳ ಬಯಲಿಗೂ ಬಂತು. ಒಂದು ವ್ಯವಹಾರ(ಡೀಲ್)ಕ್ಕೆ ಸಂಬಂಧಿಸಿ ಆಡಳಿತ ಮಂಡಳಿ ಶ್ರೀನಿವಾಸನ್‌ರನ್ನು ಆಕ್ಷೇಪಿಸಿತು; ಶೇರುದಾರರ ಸಭೆ ಕರೆದು ವಜಾ ಮಾಡುವ ಬಗ್ಗೆ ನಿರ್ಧರಿಸಿತು. ಆದರೆ ನಿಯಮವನ್ನೇ ಬದಲಿಸುವುದು, ಒತ್ತಡ ಹಾಗೂ ರಾಜಕೀಯ ಪ್ರಭಾವವನ್ನು ತರುವ ಶ್ರೀನಿವಾಸನ್ ಕಾರ್ಯಶೈಲಿ ಅಲ್ಲೇ ಆರಂಭವಾಯಿತು ಎಂದು ಲೇಖಕ ರಾಹುಲ್ ಭಾಟಿಯಾ ಗುರುತಿಸಿದ್ದಾರೆ (`ದಿ ಕಾರವಾನ್’, ಆಗಸ್ಟ್ ೨೦೧೪). ಸಭೆಯಲ್ಲಿ ಹಲವು ಜನ ಶೇರುದಾರರು ಎದ್ದುನಿಂತು ಬೇಕಾದ್ದು ಬೇಡದ್ದು ಎಲ್ಲ ಮಾತನಾಡಿದರು. ಸಮಯ ಹಾಳುಮಾಡುವುದೇ ಅವರ ಗುರಿ; ಅಧ್ಯಕ್ಷರಿಗೆ ಅವರನ್ನು ನಿಲ್ಲಿಸುವುದಕ್ಕೂ ಆಗಲಿಲ್ಲ. ಸಭೆ ನಡೆದ ಹೊಟೇಲಿನವರು `ನಿಮ್ಮ ಸಮಯ ಮುಗಿಯಿತು’ ಎಂದರು; ಅಲ್ಲಿಗೆ ಶ್ರೀನಿವಾಸನ್ ವಜಾದ ಬಗ್ಗೆ ಮತ ಹಾಕದೆ ಸಭೆ ಬರಖಾಸ್ತುಗೊಂಡಿತು. ಆ ಶೇರುದಾರರಲ್ಲಿ ಡಿಎಂಕೆ ಜನ ಇದ್ದರಂತೆ.
ಡಿಎಂಕೆ ಸಂಪರ್ಕ
ಡಿಎಂಕೆ ಸರ್ಕಾರದೊಂದಿಗೆ ಶ್ರೀನಿವಾಸನ್ ರಾಜಕೀಯ ಪ್ರಭಾವ ಬೀರುತ್ತಾರೆ ಎನ್ನುವ ಟೀಕೆ ಇದೆ. ೨೦೦೨ರಲ್ಲಿ ಆತ ಡಿಎಂಕೆ ನಾಯಕರಿಗೆ ದೊಡ್ಡ ಮೊತ್ತ ನೀಡಿದರು. `ಒಬ್ಬ ವ್ಯಕ್ತಿಗೆ’ ಅನುಕೂಲಕರವಾದ ಒಪ್ಪಂದಗಳಿಗೆ ಕರುಣಾನಿಧಿ ಸಹಿ ಮಾಡಿದ್ದಾರೆಂದು ಜಯಲಲಿತಾ ಆರೋಪಿಸಿದರು. ಶ್ರೀನಿವಾಸನ್ ಕರುಣಾನಿಧಿ ಅಳಿಯ ದಿ| ಮುರಸೋಳಿ ಮಾರನ್ ಅವರ ಬೇನಾಮಿ ವ್ಯವಹಾರಗಾರ. ಮಾರನ್‌ರ ಅಕ್ರಮ ಹಣ ಶ್ರೀನಿ (ಶ್ರೀನಿ ಅಥವಾ ಶ್ರೀನಿ ಸರ್ ಎಂಬುದು ಪ್ರಚಲಿತ) ಮೂಲಕ ಚಲಾವಣೆಯಾಗುತ್ತಿದೆ ಎನ್ನುವ ದೂರಿತ್ತು. ವಜಾ ಮಾಡದಿದ್ದರೂ ಕೂಡ ಶ್ರೀನಿ ೧೯೭೯ರಲ್ಲಿ ಇಂಡಿಯಾ ಸಿಮೆಂಟ್ಸ್ ಬಿಟ್ಟರು. ಹತ್ತು ವರ್ಷದ ಬಳಿಕ ಮರಳಿದರು; ಅದಕ್ಕೆ ಮುರಸೋಳಿ ಮಾರನ್ ಸಂಪರ್ಕ ಕಾರಣ ಎನ್ನಲಾಗಿದೆ. ಮಾರನ್ ಶ್ರೀನಿಯ ಗಾಡ್-ಫಾದರ್. ರಾಜಕೀಯ ಸಂಪರ್ಕವನ್ನು ಶ್ರೀನಿ ಬಹಳ ಸೂಕ್ಷ್ಮವಾಗಿ ಬಳಸಿಕೊಳ್ಳುತ್ತಾರೆ. ಮೇಲ್ನೋಟಕ್ಕೆ ಕಾಕತಾಳೀಯದಂತೆ ಕಂಡರೂ, ಅದರ ಒಳಗಿನ ಸಂಬಂಧ ಕೆಲವರಿಗೆ ಮಾತ್ರ ಗೊತ್ತಿರುತ್ತದೆ ಎನ್ನುತ್ತಾರೆ ಭಾಟಿಯಾ.
ಶ್ರೀನಿವಾಸನ್ ಅವರ ಕಂಪೆನಿ ಇಂಡಿಯಾ ಸಿಮೆಂಟ್ಸ್ ಹಲವು ಸ್ಥಳೀಯ ಕ್ರಿಕೆಟ್ ಕ್ಲಬ್‌ಗಳನ್ನು ಪೋಷಿಸುತ್ತಿತ್ತು; ಅವುಗಳ ಆಟಗಾರರಿಗೆ ಸಹಾಯ ನೀಡುತ್ತಿತ್ತು. ಹೀಗಿರುವಾಗ ೧೯೯೩ರಲ್ಲಿ ಒಮ್ಮೆ ಸುನೀಲ್ ಗಾವಸ್ಕರ್ ಮತ್ತು ಜಯಸಿಂಹ ಅವರ ಪರಿಚಯವಾಗುವ ಒಂದು ಸಂದರ್ಭ ಒದಗಿತು; ತಮಿಳುನಾಡಿನ ಓರ್ವ ಆಟಗಾರನ ಸಹಾಯಾರ್ಥ ನಡೆದ ಪಂದ್ಯಕ್ಕೆ ಅವರು ಪ್ರಾಯೋಜಕರಾಗಿದ್ದರು. ಗಾವಸ್ಕರ್ ಮತ್ತಿತರರ ಪರಿಚಯದೊಂದಿಗೆ ಕ್ರಿಕೆಟ್‌ನ ಸಂಬಂಧ ದೊಡ್ಡರೀತಿಯಲ್ಲಿ ಆರಂಭವಾಯಿತು. ಮುಂದಿನ ವರ್ಷಗಳ `ಕಾಕತಾಳೀಯ ಸರಣಿ’ ಕೂಡ ಶುರುವಾಯಿತೆಂದು ವ್ಯಾಖ್ಯಾನಿಸಲಾಗಿದೆ. ಓರ್ವ ಚಾಣಾಕ್ಷ ಚೆಸ್ ಆಟಗಾರನಂತೆ ಶ್ರೀನಿವಾಸನ್ ಇತರರಿಗಿಂತ ಮುಂದಾಗಿ ಮುಂದಿನ ಆಟದ ಲೆಕ್ಕಾಚಾರವನ್ನು ಮಾಡಿರುತ್ತಾರೆ.
೨೦೧೦ರಲ್ಲಿ ಓರ್ವ ಕ್ರೀಡಾ ಪತ್ರಕರ್ತ ಹೀಗೆ ಬರೆದಿದ್ದ: “ಶ್ರೀನಿವಾಸನ್ ಅವರ ಏರುಗತಿಯ ಬಗ್ಗೆ ಯಾರಾದರೂ ಸಿನೆಮಾ ಮಾಡುವುದಾದರೆ ಆತನ ಮಹತ್ತ್ವಾಕಾಂಕ್ಷೆಯನ್ನು ಬಿಂಬಿಸುವ ದೃಶ್ಯ ಇರಲೇಬೇಕು. ಆ ಪಾತ್ರವನ್ನು ಮಾಡುವ ವ್ಯಕ್ತಿ ನಿಂತಿರುವಾಗ ಸುತ್ತ ತಮಿಳುನಾಡು ಕ್ರಿಕೆಟ್ ಎಸೋಸಿಯೇಷನ್ (ಟಿಎನ್‌ಸಿಎ) ಜನ ಆತನ ಮುಂದಿನ ದಾರಿಯ ಬಗ್ಗೆ ಫಲಕಗಳನ್ನು ಹಿಡಿದಿರುತ್ತಾರೆ. “ನೀವೆಲ್ಲ ಹುಚ್ಚರು; ಹೇಗಿರಬೇಕು ಗೊತ್ತಾ? ಮೊದಲಿಗೆ ಕೋಶಾಧಿಕಾರಿ, ಮತ್ತೆ ಕಾರ್ಯದರ್ಶಿ, ಬಳಿಕ ಉಪಾಧ್ಯಕ್ಷ, ನಂತರ ಅಧ್ಯಕ್ಷ”. ಸ್ವಲ್ಪ ಹೊತ್ತು ಸುಮ್ಮನಿದ್ದು ಆತ ಹೇಳುತ್ತಾನೆ: “ಹಾಗಾದರೆ ನಾನು ಐಸಿಸಿ(ಜಾಗತಿಕ ಸಂಸ್ಥೆ)ಗೆ ಪ್ರಯತ್ನಿಸುತ್ತೇನೆ “.ಎಂಬುದಾಗಿ.
ಎರಡು ದಶಕಗಳಲ್ಲಿ ಶ್ರೀನಿವಾಸನ್‌ಗೆ ಹಿಂದೆ ಯಾರಿಗೂ ಇಲ್ಲದಷ್ಟು ಕ್ರಿಕೆಟ್ ಜೊತೆ ಸಂಬಂಧ ಬೆಸೆದಿತ್ತು. ಅವರನ್ನು ಎ.ಸಿ. ಮುತ್ತಯ್ಯ ಟಿಎನ್‌ಸಿಎಗೆ ತಂದಿದ್ದರು; ಅವರನ್ನು ಶ್ರೀನಿ ಹಿಂದೆಹಾಕಿದರು. ಒಂದು ಹಂತದಲ್ಲಿ ಜಗಮೋಹನ್ ದಾಲ್ಮಿಯ ಬಿಸಿಸಿಐಯಲ್ಲಿ ಶ್ರೀನಿವಾಸನ್‌ಗೆ ಬಾಸ್ ಆಗಿದ್ದರು. ಅಲ್ಲಿ ಮುಖ್ಯ ಹುದ್ದೆಗೆ ಬರುತ್ತಲೇ ಶ್ರೀನಿ ದಾಲ್ಮಿಯರ ಸುದ್ದಿ ಇಲ್ಲದಂತೆ ಮಾಡಿದರು. ಶರದ್ ಪವಾರ್ ಬಿಸಿಸಿಐ ಅಧ್ಯಕ್ಷ ಹಾಗೂ ೨೦೧೦ರಲ್ಲಿ ಐಸಿಸಿ ಮುಖ್ಯಸ್ಥರೂ ಆಗಿದ್ದರು. ಶ್ರೀನಿವಾಸನ್ ಅವರನ್ನು ಹಿಂದಿಕ್ಕದೆ ಬಿಡಲಿಲ್ಲ. ದುಡ್ಡಿನ ಕೊಯ್ಲಿನ ಜಾತ್ರೆಯಾದ ಐಪಿಎಲ್ ರೂಪಿಸಿದ್ದು ಲಲಿತ್ ಮೋದಿ. ಆದರೆ ಶ್ರೀನಿಯವರ ವಿರೋಧ ಕಟ್ಟಿಕೊಳ್ಳುತ್ತಲೇ ಆತ ದೇಶ ತೊರೆದು ಲಂಡನ್ನಿನಲ್ಲಿ ಅಜ್ಞಾತವಾಸ ಅನುಭವಿಸುವಂತಾಗಿದೆ.
ಟಿವಿ ಮತ್ತು ಹಣ
ಭಾರತೀಯ ಕ್ರಿಕೆಟ್ ಆಡಳಿತದ ಮೇಲೆ ಆಗಾಗ ಯಾವುದೋ ದಾಳಿ ನಡೆದು, ಹಳೆಯ ಅಭ್ಯಾಸಗಳು ಹೋಗಿ ಹೊಸತು ಬರುತ್ತವೆ. ದಾಲ್ಮಿಯ ಅದರಲ್ಲಿ ಮೊದಲಿಗರೆನ್ನಬಹುದು. ಆತ ಭಾರತೀಯ ಕ್ರಿಕೆಟ್‌ನ ಸಂವಿಧಾನವನ್ನು ಚೆನ್ನಾಗಿ ಬಲ್ಲವರು. ದೇಶದಲ್ಲಿ ಉಪಗ್ರಹ- ಆಧಾರಿತ ಟಿವಿ ಬಂದಾಗ ಆತ ಜನಪ್ರಿಯರಾದರು. ಮಾರುಕಟ್ಟೆಯವರು, ಏಜೆಂಟರೆಲ್ಲ ಆ ಕಡೆಗೆ ಧಾವಿಸಿದರು. ಕ್ರಿಕೆಟ್ ತರಬಹುದಾದ ಹಣ ದಾಲ್ಮಿಯ ಅವರ ಕಲ್ಪನೆಯನ್ನೂ ಮೀರಿತ್ತು. ಲಲಿತ್ ಮೋದಿಯಂಥವರು ಅದರಿಂದ ಇನ್ನಷ್ಟು ಹಣ ಸೂರೆಮಾಡುವ ಹೊಸ ಮಾರ್ಗಗಳನ್ನು ಶೋಧಿಸಿದರು. ಲೋಗೋಗಳು, ಶರ್ಟ್‌ಗಳ ಪ್ರಾಯೋಜಕರು, ಹೊಟೇಲ್ ಪ್ರಾಯೋಜಕರು, ಇಮೇಜ್ ಹಕ್ಕುಗಳು, ಕ್ರಿಕೆಟ್‌ನ ಪಾರಂಪರಿಕ ಭಕ್ತರು ಭಯಬೀಳುವಂತಹ ಉಸಿರುಕಟ್ಟಿಸುವ ೨೦:೨೦ ಆಟ – ಹೀಗೆ ರಾಶಿರಾಶಿ ಹಣ. ಅದನ್ನು ನಿಯಂತ್ರಿಸಬಲ್ಲ ಒಬ್ಬ ಸಮರ್ಥ ಮ್ಯಾನೇಜರ್ ಬೇಕಿತ್ತು. ಆ ಜಾಗವನ್ನು ಶ್ರೀನಿ ತುಂಬಿದರೆನ್ನಬಹುದು. ಅವರಷ್ಟು ಬೇಗ ಜನಪ್ರಿಯರಾದ ಕ್ರಿಕೆಟ್ ಆಡಳಿತಗಾರರು ಬೇರೆ ಇಲ್ಲ ಎಂದು ಅಭಿಪ್ರಾಯಪಡಲಾಗಿದೆ.
ಮೊದಲು ಟಿಎನ್‌ಸಿಎಯನ್ನು ವಶಪಡಿಸಿಕೊಂಡ ಅವರು, ಬಳಿಕ ರಾಷ್ಟ್ರಮಟ್ಟದಲ್ಲಿ ಬಿಸಿಸಿಐ, ಐಪಿಎಲ್ ಎರಡೂ ಸಂಸ್ಥೆಗಳಲ್ಲಿ ಕೈಗೊಳ್ಳುವ ಮುಖ್ಯ ನಿರ್ಧಾರಗಳ ಮೇಲೆ ಬಿಗಿಹಿಡಿತವನ್ನು ಸಾಧಿಸಿದರು. ೨೦೦೮ರಲ್ಲಿ ಅವರು ಬಿಸಿಸಿಐ ಕಾರ್ಯದರ್ಶಿಯಾಗಿದ್ದಾಗ ಸಿಎಸ್‌ಕೆ ಮಾಲೀಕತ್ವ ಅವರದಾಯಿತು; ಅದು ಸಾಧ್ಯವಾಗಲು ಕಾರಣ ಬಿಸಿಸಿಐ ತನ್ನ ನಿಯಮವನ್ನು ಬದಲಿಸಿದ್ದು. ಹಿಂದೆ ಆಡಳಿತಾಧಿಕಾರಿಗಳು ಯಾವುದೇ ವಾಣಿಜ್ಯ ಹಿತಾಸಕ್ತಿಯನ್ನು ಹೊಂದಿರಬಾರದು ಎಂದು ನಿಯಮವಿತ್ತು. ಅದರಿಂದ ಹಿತಾಸಕ್ತಿಗಳ ನಡುವೆ ಘರ್ಷಣೆ ಉಂಟಾಗುತ್ತದೆ ಎಂಬ ಕಾರಣವನ್ನು ನೀಡಲಾಗಿತ್ತು. ಆದರೆ ಶ್ರೀನಿವಾಸನ್ ನಿಯಮವನ್ನೇ ಬದಲಿಸಿ, ಐಪಿಎಲ್‌ಅನ್ನು ಅದರಿಂದ ಹೊರಗಿಟ್ಟರು; ಆದರೆ ಹೊರಗಿಟ್ಟ ನಿರ್ಧಾರ ಎಷ್ಟು ತಪ್ಪೆಂಬುದು ಬಹುಬೇಗ ಸಾಧಿತವಾಯಿತು.
ಕ್ರಿಕೆಟ್‌ಗೆ ಸಂಬಂಧಿಸಿ ದೇಶದ ವಾತಾವರಣವನ್ನು ಶ್ರೀನಿವಾಸನ್ ಬಹುಚೆನ್ನಾಗಿ ಬಳಸಿಕೊಂಡರು. ರಾಜ್ಯಗಳ ಕ್ರಿಕೆಟ್ ಬೋರ್ಡ್‌ಗಳು ಅಸಮರ್ಥವಾಗಿವೆ. ಅವುಗಳ ನಡುವೆ ಶ್ರೀನಿವಾಸನ್ ಬಲಶಾಲಿಗಳು, ಪ್ರಭಾವಲಯ (ಚೆರಿಷ್ಮಾ) ಉಳ್ಳವರೂ ಆಗಿ ಕಾಣುತ್ತಾರೆ. ರಾಜ್ಯ ಬೋರ್ಡ್‌ಗಳನ್ನು ಉದ್ದೇಶಿಸಿ ಆತ “ನಾನಿಲ್ಲದಿದ್ದರೆ ನಿಮಗೆ ಹಣ ಸಿಗುವುದಿಲ್ಲ” ಎಂದು ಬೆದರಿಸುತ್ತಾರೆಂಬ ಮಾಹಿತಿಯೂ ಇದೆ.
ಗುರುನಾಥ ಮೇಯಪ್ಪನ್ ಐಪಿಎಲ್ ಆಟಗಳಲ್ಲಿ ಕಾನೂನುಬಾಹಿರವಾಗಿ ಬೆಟ್‌ಕಟ್ಟಿದ್ದಾರೆ; ತನ್ನ ತಂಡದ ರಹಸ್ಯ ಮಾಹಿತಿಗಳನ್ನು ಫಿಕ್ಸರ್‌ಗಳಿಗೆ ನೀಡಿದ್ದಾರೆಂಬುದು ಪೊಲೀಸರ ಸಂಶಯ. ಆದರೆ ಶ್ರೀನಿವಾಸನ್ ಅಥವಾ ಸಿಎಸ್‌ಕೆ ತಂಡದ ನಾಯಕ ಮಹೇಂದ್ರಸಿಂಗ್ ಧೋನಿ ಸಿಎಸ್‌ಕೆಯಲ್ಲಿ ಮೇಯಪ್ಪನ್‌ಗಿದ್ದ ಹುದ್ದೆಯನ್ನು ಮರೆಮಾಚುತ್ತಾ ಬಂದಿದ್ದಾರೆ. ಆತ ಓರ್ವ `ಕ್ರಿಕೆಟ್ ಕುತೂಹಲಿಗ’ (ಅಡಿiಛಿಞeಣ eಟಿಣhusiಚಿsಣ); ಅದಕ್ಕಾಗಿ ಈ ತಂಡದೊಂದಿಗೆ ಇರುತ್ತಾನೆಂಬುದು ಅವರು ನೀಡಿರುವ ವಿವರಣೆ; ಮುದ್ಗಲ್ ಸಮಿತಿಯ ಮುಂದೆ ಕೂಡ ಜವಾಬ್ದಾರಿ ಸ್ಥಾನದಲ್ಲಿರುವ ಈ ಇಬ್ಬರು ಹಾಗೆಯೇ ಹೇಳಿದರು. ಆದರೆ ಗದ್ದಲ ನಿಲ್ಲಲಿಲ್ಲ; ಮಾಧ್ಯಮದಲ್ಲೂ ಅದೇ ಚರ್ಚೆ. ಕೊನೆಗೆ ಜೂನ್‌ನಲ್ಲಿ (೨೦೧೩) ಶ್ರೀನಿವಾಸನ್ ಹುದ್ದೆ ಬಿಡುವುದಾಗಿ ಹೇಳಿದರು; ಅದು ರಾಜೀನಾಮೆ ಅಲ್ಲ.
ತನಿಖೆ ಎಂದರೆ…
ಬಿಸಿಸಿಐ ಆರಿಸಿದ ತನಿಖಾಧಿಕಾರಿಗಳು ಈ ಹಗರಣದಲ್ಲಿ ಶ್ರೀನಿವಾಸನ್ ಮತ್ತು ಮೇಯಪ್ಪನ್ ತಪ್ಪಿಲ್ಲ ಎಂದರು. ಶ್ರೀನಿ ಸೆಪ್ಟೆಂಬರ್‌ನಲ್ಲಿ ಮತ್ತೆ ಬಿಸಿಸಿಐ ಅಧ್ಯಕ್ಷಪೀಠದಲ್ಲಿ ಕುಳಿತರು. ಅಕ್ಟೋಬರ್‌ನಲ್ಲಿ ಬಿಹಾರ ಕ್ರಿಕೆಟ್ ಎಸೋಸಿಯೇಶನ್ ಸುಪ್ರೀಂಕೋರ್ಟ್‌ಗೆ ದೂರು ನೀಡಿ, ಶ್ರೀನಿ ಬಿಸಿಸಿಐಯಲ್ಲಿ ಇರುವ ತನಕ ಅರ್ಥಪೂರ್ಣವಾದ ತನಿಖೆ ಅಸಾಧ್ಯ ಎಂದು ಹೇಳಿತು. ಆಗ ನ್ಯಾಯಾಲಯ ನಿವೃತ್ತ ಹೈಕೋರ್ಟ್ ನ್ಯಾಯಾಧೀಶ ಮುಕುಲ್ ಮುದ್ಗಲ್ ಅವರ ನೇತೃತ್ವದ ತನಿಖಾ ಸಮಿತಿಯನ್ನು ನೇಮಿಸಿತು.
ಇದೆಲ್ಲ ನಡೆಯುವಾಗಲೇ ಶ್ರೀನಿವಾಸನ್ ಐಸಿಸಿಗೆ ಲಗ್ಗೆ ಇಟ್ಟರು. ಅಲ್ಲಿ ಸ್ಪರ್ಧೆ ಇತ್ತಾದರೂ ಇವರಿಗೆ ಸಾಟಿ ಎನಿಸುವವರು ಇರಲಿಲ್ಲ. “ಯಾವುದೇ ಸಭೆಗೆ ಮುನ್ನ ಶ್ರೀನಿ ಸರ್ ಚೆನ್ನಾಗಿ ಸಿದ್ಧರಾಗಿರುತ್ತಾರೆ; ಸಲಹೆಗಾರರನ್ನು ಹತ್ತಿರ ಇರಿಸಿಕೊಳ್ಳುತ್ತಾರೆ. ಯಾರ ಬೆಂಬಲ ಬೇಕಾಗಿದೆಯೋ ಅವರನ್ನು ಖುಷಿಯಾಗಿ ಇಟ್ಟುಕೊಳ್ಳುತ್ತಾರೆ. ಮೀಟಿಂಗ್ ಪೇಪರುಗಳನ್ನು ಅವರಷ್ಟು ಸರಿಯಾಗಿ ಓದುವವರು ಬೇರೆ ಇಲ್ಲ” ಎಂದು ಬಲ್ಲವರು ಹೇಳುತ್ತಾರೆ.
ಐಸಿಸಿಯಲ್ಲಿ ಕೂಡ ಶ್ರೀನಿವಾಸನ್ ವ್ಯತ್ಯಾಸ ಮಾಡದೆ ಬಿಡಲಿಲ್ಲ. ಅಧ್ಯಕ್ಷರಲ್ಲದೆ ನಾಲ್ಕು ಸಮಿತಿಗಳಲ್ಲಿ ಒಂದಾದ ಹಣಕಾಸು ಮತ್ತು ವಾಣಿಜ್ಯ ಸಮಿತಿ ಮುಖ್ಯಸ್ಥನ ಹುದ್ದೆ ಅವರಿಗಿತ್ತು. ಆ ಸಮಿತಿಯ ನೆಲೆಯಲ್ಲಿ ಐಸಿಸಿಯನ್ನು ಪುನರ್ವ್ಯವಸ್ಥೆಗೊಳಿಸಬೇಕು – ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅಧಿಕಾರದ ಸಮತೋಲನವನ್ನು ತರಬೇಕೆನ್ನುವ ಪ್ರಸ್ತಾವವನ್ನು ಮಂಡಿಸಿ, ಭಾರತ, ಇಂಗ್ಲೆಂಡ್ ಮತ್ತು ಆಸ್ಟ್ರೇಲಿಯಗಳಿಗೆ ಐಸಿಸಿಯಲ್ಲಿ ಹೆಚ್ಚಿನ ನಾಯಕತ್ವ ನೀಡಲು ತನ್ನ ಸಮ್ಮತಿ ಇದೆ ಎಂದರು; ಸುಮಾರು ೧೦೦ ಸದಸ್ಯರಾಷ್ಟ್ರಗಳಿರುವ ಸಂದರ್ಭದಲ್ಲಿ ಕ್ರಿಕೆಟ್‌ನ ಮೂರು ಪ್ರಮುಖ ಮಾರುಕಟ್ಟೆ ರಾಷ್ಟ್ರಗಳು ಕ್ರಿಕೆಟ್‌ನ ವ್ಯವಹಾರವನ್ನು ಹೆಚ್ಚು ನೋಡಿಕೊಳ್ಳುತ್ತಾರೆ ಎಂಬುದು ಪ್ರಸ್ತಾವ.
ಮೂವರ ಕೂಟ
ಆರ್ಥಿಕವಾಗಿ ನೋಡಿದರೆ ಐಸಿಸಿ ಆದಾಯದಲ್ಲಿ ಶೇ. ೮೦ರಷ್ಟು ಭಾರತದ ಕೊಡುಗೆ. ಎರಡನೇ ಅತಿದೊಡ್ಡ ಮಾರುಕಟ್ಟೆಯಾದ ಇಂಗ್ಲೆಂಡಿನ ಪಾಲು ಶೇ. ೧೦ರೊಳಗಿದೆ. “ಈಗಿನ ಆದಾಯದ ಸ್ವರೂಪದಲ್ಲಿ ಸಮತೂಕ ಇಲ್ಲ. ಭಾರತಕ್ಕೆ ಬಂಗ್ಲಾದೇಶ್ ಅಥವಾ ಜಿಂಬಾಬ್ವೆಗಳಷ್ಟೇ ಪಾಲು ಸಿಗುತ್ತಿದೆ” ಎಂದು ಹೇಳಿ, ಲಾಭದ ಹಂಚಿಕೆಯ ಬಗ್ಗೆ ಸಲಹೆ ನೀಡುತ್ತಾ, ಐಸಿಸಿಯ ಜಾಗತಿಕ ಆದಾಯದಲ್ಲಿ ಶೇ. ೨೫ರಷ್ಟು ಭಾರತಕ್ಕೆ ಸೇರಬೇಕೆನ್ನುವ ಬೇಡಿಕೆಯನ್ನು ಮುಂದಿಟ್ಟರು. `ಭಾರತವನ್ನು ಅಂತಾರಾಷ್ಟ್ರೀಯ ಕ್ರಿಕೆಟ್‌ನ ಟೆಂಟ್‌ನೊಳಗೆ ಉಳಿಸಿಕೊಳ್ಳಲು ಈ ಪ್ರಸ್ತಾವ ಏಕೈಕ ದಾರಿಯೇ?’ ಎಂದು ಪಾಕಿಸ್ತಾನದ ಅಧಿಕಾರಿ ಪ್ರಶ್ನಿಸಿದರು. ಇತರ ದೇಶಗಳು ಕೂಡ ವಿರೋಧಿಸಬಹುದೆಂದು ಮೂರು ದೇಶಗಳ ಕೂಟ ಆದಾಯ ಹೆಚ್ಚಿಸುವ ಬಗೆಗಿನ ಮುನ್ನೋಟವನ್ನು ಪ್ರಕಟಿಸಿದವು. ಆ ಲಾಭವನ್ನು ಸದಸ್ಯರು ಹಂಚಿಕೊಳ್ಳುವುದು ಎಂದಾಗ “ಶ್ರೀಮಂತ ಬೋರ್ಡ್‌ಗಳು ಇನ್ನಷ್ಟು ಶ್ರೀಮಂತವಾಗುತ್ತವೆ. ಎಲ್ಲ ಪ್ರಮುಖ ನಿರ್ಧಾರಗಳನ್ನು ಈ ಮೂರು ದೇಶಗಳು ತೆಗೆದುಕೊಳ್ಳುತ್ತವೆ; ಅಂದರೆ ನಾವು ಇದನ್ನು ಒಪ್ಪಿಕೊಳ್ಳಬೇಕು ಅಥವಾ ಹೊರಹೋಗಬೇಕು” ಎಂದು ಪಾಕಿಸ್ತಾನ ಆಕ್ಷೇಪಿಸಿತು. ಶ್ರೀನಿವಾಸನ್ ಅವರ ಕಾರ್ಯವಿಧಾನ ಹೇಗೆ ಎಂಬುದನ್ನು ತಿಳಿಯಲು ಈ ವಿವರವನ್ನು ಗಮನಿಸಬೇಕು. ಅವರು ಕಾಲಿಟ್ಟ ಹುದ್ದೆಗಳಲ್ಲಿ ಅವರು ತರಬಯಸುವ ಬದಲಾವಣೆಗಳು, ಅಧಿಕಾರ ಹಂಚಿಕೆಯ ವಿಧಾನ ಬಹುತೇಕ ಇದೇ ರೀತಿ ಇರುತ್ತವೆ. ತಮಿಳುನಾಡು ಕ್ರಿಕೆಟ್ ಸಂಘದಲ್ಲಿ ಅವರು ಬಹುಮತದ ಅಸ್ತ್ರಪ್ರಯೋಗದ ಮೂಲಕ ಅಧ್ಯಕ್ಷರ ಅವಧಿಯನ್ನೇ ತೆಗೆಸಿಬಿಟ್ಟರು. ಈಗ ಅವರು ಅಲ್ಲಿ ಅಧ್ಯಕ್ಷಸ್ಥಾನದ ೧೪ನೇ ವರ್ಷದಲ್ಲಿದ್ದಾರೆ. ಬಿಸಿಸಿಐಯಲ್ಲಿ ಅಧ್ಯಕ್ಷರಾಗಿ ಚುನಾಯಿತರಾದವರು ಮತ್ತೆ ಸ್ಪರ್ಧಿಸಬಾರದೆನ್ನುವ ನಿಯಮವನ್ನು ಅವರು ವಜಾಗೊಳಿಸಿದ್ದಾರೆ; ಜನಾಭಿಪ್ರಾಯಕ್ಕೆ ಸ್ವಲ್ಪವೂ ಗೌರವ ಕೊಡದೆ ಬೌಂಡರಿಯನ್ನು ಆಚೆಗೆ ತಳ್ಳುತ್ತಾ ಬಂದಿದ್ದಾರೆ.ಐಸಿಸಿಯಲ್ಲಿ ಮೂರು ದೇಶಗಳ ಕೂಟ ರಚಿಸಿ, ದಕ್ಷಿಣ ಆಫ್ರಿಕದಂತಹ ದೇಶಗಳನ್ನು ಹೊರಗಿಟ್ಟುದನ್ನು ಸಂದರ್ಶನವೊಂದರಲ್ಲಿ (`ಔಟ್‌ಲುಕ್’, ಫೆ. ೨೪, ೨೦೧೪) ಲಲಿತ್ ಮೋದಿ, “ಇದು ಆಟಕ್ಕೆ ಆಘಾತಕಾರಿ. ಇವರು ದೊಡ್ಡವರೆನ್ನಲು ಹಣದ ಸ್ನಾಯುಬಲ ಮಾತ್ರ ಆಧಾರ. ಇವು ಇತರ ದೇಶಗಳ ಮೇಲೆ ಸವಾರಿ ಮಾಡುತ್ತವೆ; ಇತರ ದೇಶಗಳ ಕ್ರಿಕೆಟ್ ಮಂಡಳಿಗಳು ಇನ್ನಷ್ಟು ಬಡವಾಗುತ್ತವೆ. ಇದೊಂದು ಹಗರಣ. ಇದನ್ನು ತಡೆಯಬೇಕು. ಇದರಿಂದ ಆಟ ಸಾಯುತ್ತದೆ; ಈ ಮೂರು ದೇಶಗಳು ಮಾತ್ರ ಆಡುತ್ತಿರುತ್ತವೆ. ಎಲ್ಲ ದೇಶಗಳಿಗೆ `ಸಮತಟ್ಟಾದ ಆಟದ ಬಯಲನ್ನು’ ಒದಗಿಸಬೇಕೆಂಬುದು ಕ್ರೀಡೆಯ ಮೂಲಭೂತ ಅಂಶ. ಕೆಳಗಿನವರಿಗೂ ಅವಕಾಶ ನೀಡಬೇಕು. ಇಲ್ಲವಾದರೆ ಅಂತಹ ಕ್ರೀಡೆ ಘನತೆಯನ್ನು ಕಳೆದುಕೊಳ್ಳುತ್ತದೆ; ಕೇವಲ ಹಣದ ದುರಾಶೆ ಆಗುತ್ತದೆ” ಎಂದರಲ್ಲದೆ “ಬಿಸಿಸಿಐ ಈಗಾಗಲೆ ಆತನ ಸ್ವಂತ ವ್ಯಾಪಾರ ಆಗಿದೆ; ಈಗ ಜಾಗತಿಕ ಕ್ರಿಕೆಟನ್ನು ಕೂಡ ತನ್ನ ಹಿತಾಸಕ್ತಿಯ ಪ್ರಕಾರ ನಡೆಸಲು ಆರಂಭಿಸಿದ್ದಾರೆ” ಎಂದು ಟೀಕಿಸಿದ್ದರು.
ಜಗಮೋಹನ್ ದಾಲ್ಮಿಯ ಬೆಂಬಲದಿಂದ ಶ್ರೀನಿವಾಸನ್ ೧೯೯೯ರಲ್ಲಿ ಬಿಸಿಸಿಐಗೆ ಪ್ರವೇಶಿಸಿದರು. ದಾಲ್ಮಿಯ ಅವರನ್ನು ೧೯೯೭ರಲ್ಲಿ ಐಸಿಸಿ ಅಧ್ಯಕ್ಷತೆಗೆ ಹೆಸರಿಸಲಾಗಿತ್ತು. ಆಗಲೇ ಕ್ರಿಕೆಟ್ ಇತಿಹಾಸದ ಒಂದು ಅತಿದೊಡ್ಡ ಬೆಳವಣಿಗೆ ಪ್ರತ್ಯಕ್ಷವಾಯಿತು. ಹೊಸ ಮುಕ್ತ ಭಾರತೀಯ ಆರ್ಥಿಕತೆಯಲ್ಲಿ ಕ್ರಿಕೆಟ್ ಬ್ರಾಡ್‌ಕಾಸ್ಟಿಂಗ್ ಮಾರ್ಕೆಟ್‌ನ ಮಾರಾಟ ಪ್ರಸ್ತಾವವದು. ೧೯೯೬ರಲ್ಲಿ ವಿಶ್ವಕಪ್ ಭಾರತಕ್ಕೆ ಬರಲು ದಾಲ್ಮಿಯ ಕಾರಣ. ಮುಂದಿನ ದಶಕದಲ್ಲಿ ಮುತ್ತಯ್ಯ ಮತ್ತು ದಾಲ್ಮಿಯ ಜೊತೆ ಶ್ರೀನಿವಾಸ್ ಸಂಬಂಧ ವಿರೋಧ ಮತ್ತು ಅನುಕೂಲಕರ ಎರಡೂ ಆಗಿತ್ತು. ಅದರಿಂದಾಗಿ ಶ್ರೀನಿ ಟಿಎನ್‌ಸಿಎ ಮತ್ತು ಬಿಸಿಸಿಐ ಎರಡೂ ಕಡೆ ಗಟ್ಟಿಯಾದರು. ತಾನು ಅಧ್ಯಕ್ಷತೆಗೆ ತಂದ ಕಾರಣ ಎ.ಸಿ. ಮುತ್ತಯ್ಯ ಎಲ್ಲವನ್ನೂ ತನ್ನಲ್ಲಿ ಕೇಳುತ್ತಾರೆಂದು ದಾಲ್ಮಿಯ ನಿರೀಕ್ಷಿಸಿದ್ದರು; ಮುತ್ತಯ್ಯ ಹಾಗೆ ನಡೆದುಕೊಳ್ಳಲಿಲ್ಲ; ಅವರ ಕ್ರಿಕೆಟ್‌ಜ್ಞಾನ ಸೀಮಿತವಾದ ಕಾರಣ ತಪ್ಪು ನಿರ್ಧಾರಗಳನ್ನು ಕೈಗೊಳ್ಳಲು ಆರಂಭಿಸಿದರು; ಮುತ್ತಯ್ಯ ವಿರೋಧಿಗಳು ತಪ್ಪು ನಿರ್ಧಾರಗಳ ಬಗ್ಗೆ ಸಿಟ್ಟಾದರು. ಅದೇ ಊರಿನ (ತಮಿಳುನಾಡು) ಪ್ರತಿಸ್ಪರ್ಧಿಯನ್ನು ಬೆಳೆಸುವ ಉದ್ದೇಶದಿಂದ ಬಿಸಿಸಿಐಯ ಕೆಲವರು ಶ್ರೀನಿವಾಸನ್ ಕಡೆ ತಿರುಗಿದರು. ೨೦೦೨ರಲ್ಲಿ ಮುತ್ತಯ್ಯ ಹುದ್ದೆ ತ್ಯಜಿಸಬೇಕಾಯಿತು. ಅದಕ್ಕೆ ಮುನ್ನ ನಡೆದ ಚುನಾವಣೆಯಲ್ಲಿ ದಾಲ್ಮಿಯ ಜಯ ಗಳಿಸಿದರು.
ಈ ನಡುವೆ ಶ್ರೀನಿವಾಸನ್ ಟಿಎನ್‌ಸಿಎಯಲ್ಲಿ ಎಲ್ಲ ಬಗೆಯ ಮೈತ್ರಿ, ಹೊಂದಾಣಿಕೆ, ಡಿನ್ನರ್ ಪಾರ್ಟಿ ನಡೆಸಿ ಬೆಳೆಯುತ್ತಾ ಬಂದರು; ೨೦೦೨ರ ಟಿಎನ್‌ಸಿಎ ಚುನಾವಣೆಯ ಬೆನ್ನಿಗೇ ಬಿಸಿಸಿಐ ಉಪಾಧ್ಯಕ್ಷನಾಗಿ ಹೋಗುವೆ ಎಂದರು; ಅಲ್ಲಿ ತೊಡಕು ಕಾಣಿಸಿ ಕಾರ್ಯದರ್ಶಿ ಹುದ್ದೆ ಸುಗಮ ಎನಿಸಿ ಅಲ್ಲಿಗೆ ಕಣ್ಣಿಟ್ಟು ಜಯಶೀಲರಾದರು. ಏನಿದ್ದರೂ ಬಿಸಿಸಿಐಗೆ ಅವರು `ಸಕಾಲ’ದಲ್ಲಿ ಬಂದರೆನ್ನಬಹುದು. ಕೇಳಿದಷ್ಟು ಹಣ ಸಿಗಬಹುದಾದ ಒಂದು ವಿಷಯದ ಬಗ್ಗೆ ನಿರ್ಧಾರ ಆಗಬೇಕಿತ್ತು; ಭಾರತದಲ್ಲಿ ಆಡುವ ಪಂದ್ಯಗಳ ಟಿವಿ ಪ್ರಸಾರ ಹಕ್ಕಿನ ಮಾರಾಟ ಆಗಬೇಕಿತ್ತು. ನೋಡುಗರು, ಪರದೆಗಳು, ವಿವೇಚನಾ ಆದಾಯ – ಈ ಅಂಶಗಳಲ್ಲದೆ ಜಾಹೀರಾತುದಾರರು ಚಾನೆಲ್‌ಗಳಿಗೆ ದೊಡ್ಡ ಮೊತ್ತಗಳನ್ನು ನೀಡಬೇಕಿತ್ತು. ಅದರಿಂದಾಗಿ ಬಿಸಿಸಿಐಗೆ ಭಾರೀ ಆದಾಯದ ನಿರೀಕ್ಷೆ ಕಂಡುಬಂತು.
೨೦೦೪ರ ಹೊತ್ತಿಗೆ ಶ್ರೀನಿವಾಸನ್ ಸಂಬಂಧಪಟ್ಟ ಮಾರ್ಕೆಟಿಂಗ್ ಸಮಿತಿಯಲ್ಲಿದ್ದಾಗ ಬಿಸಿಸಿಐ ಪ್ರಸಾರ ಹಕ್ಕಿಗೆ ಬಿಡ್ ಕರೆಯಿತು. ಮುಂದೆ ನಡೆದ ಕಾರ್ಯತಂತ್ರ, ಅನುಷ್ಠಾನಗಳಲ್ಲಿ ಶ್ರೀನಿವಾಸನ್‌ಗೂ ದಾಲ್ಮಿಯಾಗೂ ಭಾರೀ ಅಂತರವಿತ್ತು. ಬಿಡ್ ಪಡೆಯುವಲ್ಲಿ ಇಎಸ್‌ಪಿಎನ್ ಸ್ಟಾರ್ ಸ್ಪೋರ್ಟ್ಸ್ ಮತ್ತು ಝೀ-ವಾಹಿನಿ ನಡುವೆ ಸ್ಪರ್ಧೆ ಉಂಟಾಯಿತು. ಶ್ರೀನಿವಾಸನ್ ಮತ್ತು ಸಮಿತಿ ಸದಸ್ಯ ರುಂಗ್ಟಾ ಝೀ-ವಾಹಿನಿಗೆ ನೀಡಲು ಬಯಸಿದರೆ ದಾಲ್ಮಿಯ ಇಎಸ್‌ಪಿಎನ್ ಸ್ಟಾರ್ ಪರ ನಿಂತರು. ಝೀಯದ್ದು ಮೇಲಿನ ಬಿಡ್ ಆದ ಕಾರಣ ಅವರಿಗೆ ನೀಡಬೇಕೆಂದು ಶ್ರೀನಿ ಹೇಳಿದರು; ಮತ್ತು ದಾಲ್ಮಿಯ ನಿವೃತ್ತಿ ಸಮೀಪವಿದ್ದು, ಅವರಿಗೆ ಬೋರ್ಡ್‌ನ `ಮಹಾಪೋಷಕ’ ಎಂಬ ಆಲಂಕಾರಿಕ ಹುದ್ದೆಯನ್ನು ಸಿದ್ಧಪಡಿಸುತ್ತಿದ್ದ ಕಾರಣ ಬೋರ್ಡ್‌ನ ಕಿರಿಯ ಸದಸ್ಯರು ಕೂಡ ಅವರಿಗೆ ಸುಮ್ಮನಿರುವಂತೆ ಹೇಳಿದರು; ಹೀಗೆ ಶ್ರೀನಿವಾಸನ್ ಹಾದಿ ಸುಗಮವಾಯಿತು.
ಪವಾರ್ ಬಂದರು
ಈ ನಡುವೆ ೨೦೦೫ರಲ್ಲಿ ಎನ್‌ಸಿಪಿ ಮುಖಂಡ ಶರದ್ ಪವಾರ್ ಬಿಸಿಸಿಐ ಅಧ್ಯಕ್ಷರಾಗಿ ಬಂದರು. ಅವರು ಬರಲು ಝೀ- ವಾಹಿನಿ ಮುಖ್ಯಕಾರಣ. ಅವರು ಕ್ರಿಕೆಟ್‌ನಲ್ಲಿ ಆಸಕ್ತಿ ಇದ್ದವರಲ್ಲ; ಬಿಸಿಸಿಐ ಏನೆಂದು ಗೊತ್ತಿರಲಿಲ್ಲ. ಮಾಧ್ಯಮಗಳಲ್ಲಿ ಪ್ರಸಾರದ ಹಕ್ಕಿನ ಬಿಡ್‌ನ ಭಾರೀ ಮೊತ್ತ ಕಂಡು ಅವರು ಆಕರ್ಷಿತರಾಗಿರಬೇಕು; ಆದರೆ ೨೦೦೪ರಲ್ಲಿ ಸ್ಪರ್ಧಿಸಿದಾಗ ಅವರು ಸೋತು ದಾಲ್ಮಿಯ ಪರ ವ್ಯಕ್ತಿ ಗೆದ್ದರು; ಮರುವರ್ಷ ಪವಾರ್‌ಗೆ ಭಾರೀ ಜಯ ಲಭಿಸಿತು. ಶ್ರೀನಿವಾಸನ್ ಕೋಶಾಧಿಕಾರಿಯಾಗಿ ಸಂಸ್ಥೆಯ ಖಾತೆಗಳನ್ನು ನೋಡಲಿ ಎಂದು ಪವಾರ್ ಸೂಚಿಸಿದರೆ ಅವರ ಆಪ್ತರು ಶ್ರೀನಿ ಮೇಲೆ ಬಂದಿರುವ ರೀತಿ ಕಂಡು ಅವರ ವಿಧೇಯತೆ ಮತ್ತು ಉದ್ದೇಶಗಳಲ್ಲಿ ಸಂಶಯ ಹೊಂದಿದ್ದರು. “ನೀವು ಜೀವಮಾನದ ಅತಿದೊಡ್ಡ ತಪ್ಪು ಮಾಡುತ್ತಿದ್ದೀರಿ. ಈ ಹಾವನ್ನು ಈಗಲೇ ಮುಗಿಸಬೇಕು” ಎಂದು ಮಾಧ್ಯಮದ ದೊರೆ ಹರೀಶ್ ತವಾನಿ ಎಚ್ಚರಿಸಿ ಹೇಳಿದಾಗ ಪವಾರ್, “ಆತನಲ್ಲಿ ದೋಷ ಇದ್ದೀತು; ಆದರೂ ಉತ್ತಮ ಆಡಳಿತಗಾರ” ಎಂದರಂತೆ.
೨೦೧೦ರಲ್ಲಿ ಪವಾರ್ ಬಿಸಿಸಿಐ ಬಿಟ್ಟು ಐಸಿಸಿ ಅಧ್ಯಕ್ಷರಾದಾಗ ಶಶಾಂಕ್ ಮನೋಹರ್ ಬಿಸಿಸಿಐ ಅಧ್ಯಕ್ಷರಾದರು; ಅವರು ಶ್ರೀನಿವಾಸ್ ಜೊತೆ ಉತ್ತಮ ಸಂಬಂಧ ಹೊಂದಿದ್ದರು. ಕಾರ್ಯದರ್ಶಿ ಆಗಿದ್ದರೂ ಶ್ರೀನಿವಾಸನ್ ಪ್ರಭಾವ ಸರ್ವವ್ಯಾಪಿಯಾಗಿತ್ತು. ಅವರ ಅಭಿಪ್ರಾಯವನ್ನು ಎಲ್ಲೆಡೆ ಗಂಭೀರವಾಗಿ ಸ್ವೀಕರಿಸಲಾಗುತ್ತಿತ್ತು. ತಂತ್ರಜ್ಞಾನ ನೆರವಿನ ಅಂಪೈರಿನ ಬಗ್ಗೆ ಶ್ರೀನಿವಾಸನ್ ಸಲಹೆ ನೀಡಿದಾಗ ಅಧ್ಯಕ್ಷ ಶಶಾಂಕ್ ಸಮ್ಮತಿಸಿದರು. ತವಾನಿ ಅವರ ನಿಂಬಸ್ ಸಂಸ್ಥೆ ಕ್ರಿಕೆಟ್ ಪ್ರಸಾರದ ಹಕ್ಕಿಗೆ ಬಿಡ್ ಸಲ್ಲಿಸಿತ್ತು; ಮೊತ್ತ ೨,೭೦೦ ಕೋಟಿ ರೂ. ನಿಂಬಸ್‌ನ ನಿಧಾನ ಪಾವತಿ ಶ್ರೀನಿ ಅವರಿಗೆ ಇಷ್ಟವಾಗಿರಲಿಲ್ಲ. ಅಂತೆಯೇ ಸಭೆಯಲ್ಲಿ ಅವರು, ಪಾವತಿ ಸರಿಯಾಗಿ ಬಾರದಿದ್ದರೆ ಬಿಸಿಸಿಐ ಕಂಪೆನಿಯ ಬ್ಯಾಂಕ್ ಗ್ಯಾರಂಟಿಯನ್ನು ತೆಗೆದುಕೊಳ್ಳಬೇಕಾಗುತ್ತದೆ ಎಂದರು. ಆಗ ತವಾನಿ “ನೀನು ಕೋಣೆಯಿಂದ ಹೊರಗೆ ಹೋಗುವಾಗ ನಾನು ಕಾದಿರುತ್ತೇನೆ; ಎರಡು ಕಾಲು ಮುರಿಯುತ್ತೇನೆ. ಆಗ ನೀನು ಮನೆಗೆ ಹೋಗಲಾರೆ. ನನಗೆ ಫ್ಯಾಕ್ಸನ್ನೂ ನೀಡಲಾರೆ” ಎಂದರಂತೆ. ಹಾಗಿದ್ದರೂ ಟೆಸ್ಟ್ ಮತ್ತು ಏಕದಿನ ಪಂದ್ಯ ಪ್ರಸಾರದ ಹಕ್ಕು ನಾಲ್ಕು ವರ್ಷದ್ದು ನಿಂಬಸ್‌ಗೇ ಸಿಕ್ಕಿತು; ಬಿಡ್‌ನ ಮೊತ್ತ ೨,೦೦೦ ಕೋಟಿ ರೂ.ಗೆ ೨೦೧೧ರ ಹೊತ್ತಿಗೆ ತವಾನಿಯ ಕಂಪೆನಿ ಸುಸ್ತಿದಾರನಾಗಿತ್ತು.
ಸಿಎಸ್‌ಕೆ ಆರಂಭ
ಶ್ರೀನಿವಾಸನ್ ಬಿಸಿಸಿಐಯಲ್ಲಿದ್ದಾಗ ೨೦೦೮ರಲ್ಲಿ ಐಪಿಎಲ್‌ನ ಫ್ರಾಂಚೈಸ್ ಪಡೆದುಕೊಂಡು ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಕಟ್ಟಿದರು. ಇದರಲ್ಲಿ ಹಿತಾಸಕ್ತಿಯ ಘರ್ಷಣೆ ಆಗುತ್ತದೆಂದು ಮುತ್ತಯ್ಯ ಆಗಲೇ ಸುಪ್ರೀಂಕೋರ್ಟ್‌ನಲ್ಲಿ ದಾವೆ ಹೂಡಿದರು. ಆದರೂ ಶ್ರೀನಿಗೆ ಬಿಸಿಸಿಐನಲ್ಲಿ ಉತ್ತಮ ಬೆಂಬಲವಿತ್ತು; ಆರು ಪ್ರಾದೇಶಿಕ ಕ್ರಿಕೆಟ್ ಸಂಘಗಳು ಅವರನ್ನು ಬೆಂಬಲಿಸಿದವು; ಶಶಾಂಕ್ ಮನೋಹರ್ ಕೂಡ ಬೆಂಬಲಿಸಿದರು. ನ್ಯಾಯಾಲಯದ ತೀರ್ಪು ವಿಭಜಿತವಾಗಿ ಬಂದಿತು. ಮುತ್ತಯ್ಯ ೨೦೧೧ರ ಆಗಸ್ಟ್‌ನಲ್ಲಿ ಸುಪ್ರೀಂಕೋರ್ಟಿಗೆ ಇನ್ನೊಂದು ಅರ್ಜಿ ಸಲ್ಲಿಸಿ, ಶ್ರೀನಿವಾಸನ್ ಬಿಸಿಸಿಐನ ಅಧಿಕಾರ ವಹಿಸಿಕೊಳ್ಳದಂತೆ ತಡೆಯಬೇಕೆಂದು ಕೋರಿದರು; ಕೋರ್ಟ್ ತಡೆಯಲಿಲ್ಲ – ಸೆಪ್ಟೆಂಬರ್‌ನಲ್ಲಿ ಶ್ರೀನಿ ಅಧ್ಯಕ್ಷರಾದರು; ಎರಡೇ ತಿಂಗಳಲ್ಲಿ ತವಾನಿಯ ಗುತ್ತಿಗೆಯನ್ನು ವಜಾಮಾಡಿದರು. ಆ ಹೊತ್ತಿಗೆ ಅವರು ಬಿಸಿಸಿಐ ಕಾರ್ಯನಿರ್ವಹಣೆಯಲ್ಲಿ ಅನಿವಾರ್ಯ ಎನಿಸಿದ್ದರು; ಕಾರ್ಯದರ್ಶಿ, ಕೋಶಾಧಿಕಾರಿ, ಉಪಾಧ್ಯಕ್ಷ ಮುಂತಾಗಿ ಹುದ್ದೆ ಯಾವುದೇ ಇರಲಿ, ಎಲ್ಲವೂ ಅವರ ಹಿಡಿತದಲ್ಲಿರುತ್ತಿತ್ತು. ಅಧ್ಯಕ್ಷರಾದಾಗ ಅವರು ಬೇರೆಯವರಿಗೆ ವರದಿ ಮಾಡುವುದು ತಪ್ಪಿತು. ಗುಂಪುಗಳ ನಡುವೆ ಜಗಳ ಆಗುತ್ತಿದ್ದಾಗ ಆತ ತನ್ನ ಕೆಲಸವನ್ನು ಲೀಲಾಜಾಲವಾಗಿ ಮಾಡಿಕೊಂಡು ಹೋಗುತ್ತಿದ್ದರು.
ಝೀ-ವಾಹಿನಿಗೆ ಗುತ್ತಿಗೆಯನ್ನು ನೀಡಿದ ಒಪ್ಪಂದದ ಕಾನೂನುಬದ್ಧತೆಯನ್ನು ಪ್ರಶ್ನಿಸಿ ಇಎಸ್‌ಪಿಎನ್-ಸ್ಟಾರ್ ನ್ಯಾಯಾಲಯದಲ್ಲಿ ದಾವೆ ಹೂಡಿತು; ಮುಂದೆ ಕಾನೂನು ಸಮರವೇ ನಡೆಯಿತು. ಗುತ್ತಿಗೆಯನ್ನು ನಿರ್ವಹಿಸಿದ ರೀತಿಯಿಂದ ಬೇಸರಗೊಂಡ ಓರ್ವ ಝೀ-ವಾಹಿನಿ ಅಧಿಕಾರಿ “ಇಂತಹ (ಬಿಸಿಸಿಐ) ಸಂಸ್ಥೆಗಳು ನೇರವಾಗಿ ಕ್ರೀಡಾಸಚಿವಾಲಯದ ಅಧೀನದಲ್ಲಿದ್ದರೆ ಉತ್ತಮ” ಎಂದು ಉದ್ಗರಿಸಿದರು. ಸ್ಟಾರ್ ಇಂಡಿಯಾ (ಹಿಂದೆ ಅದು ಇಎಸ್‌ಪಿಎನ್‌ನ ಭಾಗವಾಗಿತ್ತು) ಶ್ರೀನಿವಾಸನ್‌ಗೆ ಇಷ್ಟವಾದ ಸಂಸ್ಥೆ. ವಜಾ ಮಾಡಿದ ನಿಂಬಸ್ ಗುತ್ತಿಗೆಯನ್ನು ಅವರು ನೆಟ್ವರ್ಕ್‌ಗೆ ೩,೮೫೧ ಕೋಟಿ ರೂ.ಗೆ ನೀಡಿದರು. ಕಳೆದುಕೊಂಡ ಬಿಡ್ ೩,೭೦೦ ಕೋಟಿ ರೂ.ಗಳದ್ದು. ಇದು ಸಿಕ್ಕಿದ ವಾರದೊಳಗೆ ಸ್ಟಾರ್ ಇಂಡಿಯಾಗೆ ಸೇರಿದ `ಲೈಫ಼್‌ಓಕೆ’ ಸಿಎಸ್‌ಕೆ ತಂಡದ ಪ್ರಾಯೋಜಕ ಆಯಿತು. ಡೀಲ್‌ನ ಪ್ರಕಾರ ಪ್ರತಿ ಆಟಗಾರ ಬ್ಯಾಟ್ ಮಾಡುವಾಗ ಚಾನೆಲ್‌ನ ಲೋಗೋವನ್ನು ತನ್ನ ಆಡದಿರುವ ಕೈ (ಸ್ಲೀವ್) ಮೇಲೆ ಇರಿಸಿಕೊಳ್ಳಬೇಕು; ಇದೊಂದು ವಿಲಕ್ಷಣ ಒಪ್ಪಂದ ಎನಿಸಿತು.
ಸಚಿನ್ ತೆಂಡೂಲ್ಕರ್ ೨೦೧೩ರ ಕೊನೆಯಲ್ಲಿ ನಿವೃತ್ತಿ ಹೊಂದುವುದಾಗಿ ಘೋಷಿಸಿದರು. ಅವರ ೨೦೦ನೇ ಟೆಸ್ಟ್ ಆಟ ಕೊನೆಯದಾಗಿದ್ದು, ಅದು ದಕ್ಷಿಣ ಆಫ್ರಿಕದಲ್ಲಿ ನಡೆಯಲಿತ್ತು. ಉತ್ತಮ ಆಟ, ಆದಾಯಗಳ ನಿರೀಕ್ಷೆ ಇದ್ದ ಕಾರಣ ಬಿಸಿಸಿಐ ಸಚಿನ್‌ರ ವಿದಾಯ ಆಟಗಳನ್ನು ಭಾರತದಲ್ಲಿ ಆಡಿಸುವುದಾಗಿ ಪ್ರಕಟಿಸಿತು. ಅಂತಾರಾಷ್ಟ್ರೀಯ ಕ್ರಿಕೆಟ್‌ನ ಕ್ಯಾಲೆಂಡರ್ ವರ್ಷದ ಮೊದಲೇ ನಿಗದಿಯಾಗಿರುತ್ತದೆ. ಆದರೆ ಸಚಿನ್ ದೇಶದಲ್ಲಿ ಆಡಬಯಸಿದ್ದಾರೆ ಎಂದು ಸಬೂಬು ನೀಡಿದರು. ಇದರಿಂದ ಸ್ಟಾರ್ ಇಂಡಿಯಾಗೆ ಲಾಭ ಮತ್ತು ಝೀ-ವಾಹಿನಿಗೆ ೩೫ ಕೋಟಿ ರೂ.ಗಳಿಗೂ ಅಧಿಕ ನಷ್ಟವಾಯಿತು; ಸ್ಟಾರ್ ಇಂಡಿಯಾ ತನ್ನ ಜಾಹೀರಾತು ದರವನ್ನೂ ಐದಾರು ಪಟ್ಟು ಹೆಚ್ಚಿಸಿತು; ಕೊನೆಗೆ ಸಚಿನ್‌ಗೆ ಟ್ರೋಫಿ ನೀಡಿದ್ದು ಸ್ಟಾರ್‌ನ ಸಿಇಓ ಉದಯಶಂಕರ್.
ಕುರ್ಚಿಗೇಕೆ ಅಂಟಿಕೊಂಡಿದ್ದೀರಿ?
ಕಳೆದ ಮಾರ್ಚ್‌ನಲ್ಲಿ ಮುದ್ಗಲ್ ವರದಿ ಆಧರಿಸಿ ವಿಚಾರಣೆ ನಡೆಯುವಾಗ ನ್ಯಾಯಾಧೀಶರು, `ಶ್ರೀನಿವಾಸನ್ ಕುರ್ಚಿಗೇಕೆ ಅಂಟಿ ಕುಳಿತಿದ್ದಾರೆ? ಅವರೇ ಇಳಿಯದಿದ್ದರೆ ನಾವು ಆದೇಶ ನೀಡಬೇಕಾಗುತ್ತದೆ’ ಎಂದರು. ಮುದ್ಗಲ್ ಸಮಿತಿ ತನಿಖೆ ಅಕ್ಟೋಬರ್‌ನಲ್ಲಿ ಆರಂಭವಾಗಿ ಕಳೆದ ಫೆಬ್ರುವರಿಯಲ್ಲಿ ಅದರ ವರದಿಯನ್ನು ಸುಪ್ರೀಂಕೋರ್ಟ್‌ಗೆ ಸಲ್ಲಿಸಲಾಯಿತು; ಅದು ಪ್ರತಿಕೂಲವಾಗಿತ್ತು. ಶ್ರೀನಿಗೆ ವಾಗ್ದಂಡನೆ ವಿಧಿಸಿದ ಸುಪ್ರೀಂಕೋರ್ಟ್ ಅವರು ಐಸಿಸಿಗೆ ಸ್ಪರ್ಧೆ ಮಾಡಬಾರದೆಂದು ಹೇಳಲಿಲ್ಲ. ಜೂನ್‌ನಲ್ಲಿ ಐಸಿಸಿ ಕಡೆಯಿಂದ ಕೇಳಿದಾಗ ಬಿಸಿಸಿಐ ಬೆಂಬಲ ನೀಡಿತು. ಅದು ನ್ಯಾಯಾಂಗ ನಿಂದನೆ ಆಗುವುದಿಲ್ಲವೆಂದು ಬಿಸಿಸಿಐ ಮೂಲಗಳು ಹೇಳಿದರೆ ಕೆಲವರು ತಾತ್ತ್ವಿಕವಾಗಿ ತಪ್ಪು ಎಂದರು; ಬಿಸಿಸಿಐಯನ್ನು ನಡೆಸಲು ಅನರ್ಹರು ಎಂದಾದರೆ ಅವರಿಗೆ ಐಸಿಸಿ ಹುದ್ದೆ ನೀಡಬಾರದು; ಏಕೆಂದರೆ ಅದು ಮೇಲಿನ ಸಂಸ್ಥೆ ಎಂದರು. ಆದರೆ ವೋಟುಗಳು ಶ್ರೀನಿ ಪರವಾಗಿದ್ದು ಆತ ಅವಿರೋಧವಾಗಿ ಆಯ್ಕೆಯಾದರು.
ವಿಷಯದ ಸಮಗ್ರ ಅಧ್ಯಯನ ನಡೆಸಿರುವ ರಾಹುಲ್ ಭಾಟಿಯಾ, ಶ್ರೀನಿವಾಸನ್ ಅವರ ಭೇಟಿಗೆ ಬಹಳಷ್ಟು ಯತ್ನಿಸಿದರೂ ಅವರು ಸಿಗಲಿಲ್ಲ. ಈ ವರ್ಷ ಆರಂಭದಲ್ಲಿ ಅವರು ಕೆಳಗಿಳಿಯಲಿ ಎಂದು ಕೋರ್ಟ್ ಸೂಚಿಸಿದ ಕೆಲವೇ ದಿನ ಮೊದಲು ಟಿಎನ್‌ಸಿಎ ಉಪಾಧ್ಯಕ್ಷ ಪ್ರಭಾಕರರಾವ್ ಶ್ರೀನಿ ಪರವಾಗಿ ತನ್ನಲ್ಲಿ ಮಾತನಾಡಿದರು ಎಂದು ತಿಳಿಸಿದ್ದಾರೆ. “ನಾವು ಅವರಿಗೆ ಪೇಚು ತರುವುದು ಬೇಡ. ಅವರು ಯಾರನ್ನು ಕೂಡ ಕೆಳಗೆ ಎಳೆದವರಲ್ಲ; ಕ್ರಿಕೆಟಿಗೆ ನೆರವಾಗುವವರು. ಹಲವು ಯುವಕರಿಗೆ ನೆರವಾಗಿದ್ದಾರೆ. ಬೋರ್ಡ್ ಪ್ರತಿ ತಿಂಗಳು ಪಿಂಚಣಿಗೆ ೯ ಕೋಟಿ ರೂ. ವ್ಯಯಿಸುತ್ತದೆ. ತನ್ನನ್ನು ಮೊದಲಿಗೆ ಆರಿಸಿದ ಜಿಲ್ಲಾ ಕ್ಲಬ್‌ಗಳನ್ನು ಅವರು ಈಗಲೂ ನೋಡಿಕೊಳ್ಳುತ್ತಾರೆ. ಟಿಎನ್‌ಸಿಎ ಪ್ರತಿ ಜಿಲ್ಲೆಗೆ ಕ್ರಿಕೆಟ್ ಪಂದ್ಯ ನಡೆಸಲು ೫೦ ಸಾವಿರ ರೂ. ನೀಡುತ್ತದೆ. ಟಿಎನ್‌ಸಿಎ ಪ್ರತಿ ಜಿಲ್ಲೆಗೆ ೨ ಲಕ್ಷ ರೂ. ನೀಡುತ್ತದೆ. ಕಷ್ಟದಲ್ಲಿರುವ ಖಾಸಗಿ ಕ್ಲಬ್‌ಗಳಿಗಾಗಿ ಎರಡು ವರ್ಷಕ್ಕೆ ೨೬ ಲಕ್ಷ ರೂ. ಖರ್ಚು ಮಾಡುತ್ತೇವೆ. ಆತ ಎಷ್ಟು ಪಂದ್ಯಗಳನ್ನು ಪ್ರಾಯೋಜಿಸುತ್ತಾರೆ! ಅವರ ಹೃದಯ ತುಂಬ ದೊಡ್ಡದು” ಎಂದು ಪ್ರಭಾಕರರಾವ್ ಸಮರ್ಥಿಸಿಕೊಂಡರಂತೆ.
ಈ ಮಾತುಗಳಲ್ಲಿ ಸಾಕಷ್ಟು ನಿಜವಿರಬಹುದು; ಆ ಕೆಲಸಗಳು ಅವರ ಕರ್ತವ್ಯ ಕೂಡ ಆಗಿರಬಹುದು. ಅಷ್ಟು ಹಣದ ವಹಿವಾಟಿರುವಾಗ ಇದು ಚಿಕ್ಕದು ಎನಿಸಲೂಬಹುದು. ಅದೇ ವೇಳೆ “ಒಬ್ಬ ವ್ಯಕ್ತಿಯ ದೀರ್ಘಾವಧಿ ಹಿತಾಸಕ್ತಿಗಾಗಿ ಬಿಸಿಸಿಐ ಸಂವಿಧಾನದಲ್ಲೇ (ಶ್ರೀನಿವಾಸನ್) ಬದಲಾವಣೆ ತಂದರು” ಎನ್ನುವ ಆರೋಪಕ್ಕೆ ಅವರು ಉತ್ತರಿಸಬೇಕಾಗುತ್ತದೆ. ಜೊತೆಗೆ ಅವರ ಸುತ್ತ ಒಂದು ಭಯದ ವಾತಾವರಣ ನಿರ್ಮಾಣವಾಗುತ್ತದಲ್ಲಾ ಏಕೆ? – ಎನ್ನುವ ಪ್ರಶ್ನೆಯೂ ಉತ್ತರವನ್ನು ಬಯಸುತ್ತದೆ. `ಬಿಸಿಸಿಐನ ಎಲ್ಲರೂ ಆತನ ಪದತಳದಲ್ಲಿದ್ದಾರೆ’ ಎನ್ನುವ ಮಾತು ಸತ್ಯಕ್ಕೆ ಸಮೀಪವೇ ಇದೆ.
ಜೊತೆಗೆ ನಾವು ಈ ತನಿಖೆ, ನ್ಯಾಯಾಲಯ ಅಥವಾ ಅಂತಹ ಸ್ಥಾನಗಳು ನೀಡುವ ಶಿಕ್ಷೆ ಇವುಗಳಿಗೆಲ್ಲ ಎಷ್ಟು ಅರ್ಹರು ಎಂಬ ಪ್ರಶ್ನೆ ಕೂಡ ಬರುತ್ತದೆ. ಮುದ್ಗಲ್ ಸಮಿತಿ ವರದಿ ಬಂದಾಗ ಬಿಸಿಸಿಐ ಅಧ್ಯಕ್ಷ, ರಾಜಕೀಯ ಮುಂದಾಳು ರಾಜೀವ್ ಶುಕ್ಲ ಅವರು ಆರಾಮವಾಗಿ ಹೀಗೆ ಹೇಳಿದರಂತೆ: “ಸುಪ್ರೀಂಕೋರ್ಟ್ ಮಾಡಿದ ಒಳ್ಳೆಯ ಕೆಲಸವೆಂದರೆ ಐಪಿಎಲ್ ಹರಾಜನ್ನು ನಿಲ್ಲಿಸದೆ ಇದ್ದುದು”. ಅಂದರೆ ಕ್ರಿಕೆಟಿಗೆ ಈಚೆಗೆ ಅಂಟಿದ ಕೊಳೆ ತೊಳೆಯುವುದು ಅವರಿಗೆ ಬೇಕಿಲ್ಲ ಎಂದಾಯಿತು. ವಂಚನೆ, ಸುಳ್ಳು, ಬೆಟ್ಟಿಂಗ್, ಆಟಕ್ಕೆ ಅಗೌರವ ತಂದದ್ದು ಎಲ್ಲ ಆಗಿದೆ. ಐಪಿಎಲ್‌ನ ಅತ್ಯಂತ ಯಶಸ್ವಿ ತಂಡವನ್ನು ವಜಾಗೊಳಿಸಲು ನ್ಯಾಯಾಲಯ ಆದೇಶ ನೀಡಲೂಬಹುದು; ಹೀಗಿರುವಾಗ ಹರಾಜಿಗೆ ತೊಂದರೆ ಆಗಲಿಲ್ಲವೆಂದು ಅವರು ಖುಷಿಪಡುತ್ತಾರೆ. ಭಾರತೀಯ ಕ್ರಿಕೆಟ್‌ನ ಕ್ಯಾಪ್ಟನ್ ಮತ್ತು ಬಿಸಿಸಿಐ ಅಧ್ಯಕ್ಷರು ತನಿಖಾ ಸಮಿತಿಗೆ ಸುಳ್ಳು ಹೇಳಿದ್ದಾರೆ. ಶಿಕ್ಷೆಗೆ ಅಷ್ಟೇ ಸಾಕು. ಇಲ್ಲಿ ಎದ್ದುಕಾಣುವ ಅಂಶವೆಂದರೆ ಬಿಸಿಸಿಐಯನ್ನು ಶುದ್ಧಗೊಳಿಸುವ ಆಸೆ ಇರುವ ನೈಜ ವ್ಯಕ್ತಿ ಅಲ್ಲಿ ಇಲ್ಲವಲ್ಲಾ ಎಂಬುದು. ಯಾವುದೇ ನಿಯಮಗಳನ್ನು ಗಂಭೀರವಾಗಿ ತೆಗೆದುಕೊಳ್ಳದೆ ಇರುವಷ್ಟು ಅಲ್ಲಿ ಹಣ, ಅಧಿಕಾರ ಮತ್ತು ಪ್ರಭಾವಗಳು ತುಂಬಿಕೊಂಡಿವೆ.
`ಸುಳ್ಳು ಹೇಳಿದ್ದಾರೆ’
ಮೇಯಪ್ಪನ್ ಬಗ್ಗೆ ಶ್ರೀನಿವಾಸನ್ ಮತ್ತು ಧೋನಿ ಹೇಳಿದ್ದು ಸುಳ್ಳೆನ್ನುವ ತೀರ್ಮಾನಕ್ಕೆ ಮುದ್ಗಲ್ ಸಮಿತಿ ಬಂದಿದೆ. ಐಪಿಎಲ್ ತನ್ನ ನಿಯಮಗಳನ್ನು ಅನುಸರಿಸುವುದಾದರೆ ಸಿಎಸ್‌ಕೆ ವಜಾ ಆಗಲೇಬೇಕು. ನಿಯಮ ೧೧.೩ರ ಪ್ರಕಾರ ಯಾವುದೇ ಅಧಿಕಾರಿ, ತಂಡದ ಮಾಲೀಕ ಅಥವಾ ತಂಡಕ್ಕೆ ಸಂಬಂಧಿಸಿದ ಯಾರಾದರೂ ಲೀಗಿಗೆ ಕಳಂಕ ಬರುವಂತೆ ನಡೆದುಕೊಂಡರೆ ಫ್ರಾಂಚೈಸೀ ಕೂಡಲೇ ವಜಾ ಆಗಬೇಕು. ಇತರ ತಂಡಗಳಿಗೆ ಇಷ್ಟು ತಪ್ಪು ಮಾಡದಿದ್ದರೂ ಶಿಕ್ಷೆ ಆಗಿದೆ. ಆದ್ದರಿಂದ ಕ್ರಿಕೆಟ್ ಮತ್ತು ಐಪಿಎಲ್‌ಗಳ ಶುದ್ಧೀಕರಣ ಆಗಲೇಬೇಕು; ಮುದ್ಗಲ್ ವರದಿಯಲ್ಲಿ ಹೇಳಿದ ಆರು ಆಟಗಾರರನ್ನು ಗುರುತಿಸಬೇಕು; ಅವರಿಗೆ ಶಿಕ್ಷೆ ಆಗಬೇಕು; ಫಿಕ್ಸಿಂಗ್‌ನಲ್ಲಿ ಶಾಮೀಲಾದ ಆಡಳಿತಗಾರರು, ಆಟಗಾರರು, ಏಜೆಂಟರು ಹಾಗೂ ಸಂಬಂಧಪಟ್ಟ ಎಲ್ಲರನ್ನೂ ವಜಾಗೊಳಿಸಬೇಕು; ಐಪಿಎಲ್ ಆಡಳಿತ ಮಂಡಳಿಯನ್ನು ವಜಾಗೊಳಿಸಿ ಹೊಸ ಮೇಲ್ತನಿಖೆ ನಡೆಯಬೇಕು – ಮುಂತಾದ ಬೇಡಿಕೆಗಳು ಮುಂದೆ ಬಂದಿವೆ.
ರಾಜಸ್ಥಾನ್ ರಾಯಲ್ಸ್‌ನ ಮಾಲೀಕ ರಾಜ್‌ಕುಂದ್ರಾ ಹಾಗೂ ಆತನ ನಟಿ ಪತ್ನಿ ಕೂಡ ಬೆಟ್ ಕಟ್ಟಿರಬಹುದು. ಬೆಟ್ ಕಟ್ಟಿದವರು ತಂಡದ ಮಾಲೀಕ ಅಥವಾ ಓರ್ವ ಅಧಿಕಾರಿ ಆಗಿರಲು ಅನರ್ಹರು. ಯಾರು ತಪ್ಪು ಮಾಡಿದ್ದಾರೆಂದು ಹೇಳಿರುವುದು ಮುದ್ಗಲ್ ವರದಿಯ ಶಕ್ತಿ ಎಂದು ಭಾವಿಸಲಾಗಿದೆ.
ಆರೋಪವನ್ನು ನೇರವಾಗಿ ಸಾಬೀತು ಮಾಡಲಾಗದ ಕಡೆ ಸಮಿತಿ ಹೆಚ್ಚಿನ ತನಿಖೆ ಆಗಬೇಕು ಎಂದಿದೆ. “ಬೆಟ್ಟಿಂಗ್‌ಗೆ ದಾವೂದ್ ಇಬ್ರಾಹಿಂ ಸಂಪರ್ಕ ಇದೆ ಎಂಬ ಬಗ್ಗೆ ದೆಹಲಿ ಪೊಲೀಸ್ ಮತ್ತು ಮುಂಬಯಿ ಪೊಲೀಸರು ವಿಭಿನ್ನವಾಗಿ ಮಾತನಾಡುತ್ತಿದ್ದಾರೆ. ಕ್ರಿಕೆಟ್‌ನ ಭಾರೀ ಹಣದ ಹವಾಲಾ ದಂಧೆಯಲ್ಲಿ ಭಯೋತ್ಪಾದಕ ಗ್ಯಾಂಗ್‌ಗಳು ಭಾಗಿಯಾಗುವುದು ಗಂಭೀರ ವಿಷಯ. ಎರಡೂ ಪ್ರಕರಣದ ಆರೋಪಿಗಳು ಜಾಮೀನು ಪಡೆದು ಹೊರಗಿದ್ದಾರೆ; ಇನ್ನು ಬರುವ ಐಪಿಎಲ್‌ಗೆ ಬೆಟ್ ಕಟ್ಟುತ್ತಾರೇನೋ” ಎಂದಿದೆ ಸಮಿತಿ.
ಅಸ್ಪಷ್ಟ ಮಾಲೀಕತ್ವ
ಐಪಿಎಲ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ (ಸಿಇಓ) ಸುಂದರರಾಮನ್ ಅವರ ಒಂದು ಗಾಬರಿ ಹುಟ್ಟಿಸುವ ಹೇಳಿಕೆಯನ್ನು ಮುದ್ಗಲ್ ಸಮಿತಿ ಉಲ್ಲೇಖಿಸಿದೆ. “ಐಪಿಎಲ್‌ನ ತಂಡಗಳ ಮಾಲೀಕತ್ವ ವ್ಯವಸ್ಥೆ ಸಾಮಾನ್ಯವಾಗಿ ಅಸ್ಪಷ್ಟ” ಎಂಬುದೇ ಆ ಹೇಳಿಕೆ. ಇಲ್ಲಿ ಭ್ರಷ್ಟಾಚಾರ ಮತ್ತು ದುಡ್ಡಿನರಾಶಿ ಪರಸ್ಪರ ಕೈಹಿಡಿದು ಸಾಗುತ್ತಿವೆ. ಮುದ್ಗಲ್ ಸಮಿತಿ ಈ ಒಂದು ಶಿಫಾರಸನ್ನು ಮಾಡಿದೆ: “ಐಪಿಎಲ್‌ಗೆ ಒಂದು ಅಥವಾ ಎರಡು ವರ್ಷ ರಜೆ ಸಾರಲಿ. ಹಿತಾಸಕ್ತಿಯಲ್ಲಿ ಘರ್ಷಣೆ ಕಂಡುಬಂದಿದೆ. ಟಿವಿ ಪ್ರಸಾರದ ಗುತ್ತಿಗೆ ಹರಾಜು, ತಂಡದ ಜವಾಬ್ದಾರಿಗಳಲ್ಲಿ ಶಿಸ್ತು ಕಾಣಿಸುತ್ತಿಲ್ಲ. ನಿಯಮ ತಪ್ಪುತ್ತಿದ್ದಾರೆ. ತಂಡದ ಮಾಲೀಕತ್ವ, ಉಸ್ತುವಾರಿಗಳ ಬಗ್ಗೆ ಸರಿಯಾದ ಮಾಹಿತಿ ಬೇಕು; ಐಪಿಎಲ್‌ನಲ್ಲಿ ಸೇರಿರುವ ಕಂಪೆನಿಗಳ ಹಿನ್ನೆಲೆ ಸ್ಪಷ್ಟವಾಗಬೇಕು.”
ತನಿಖಾ ಸಂಸ್ಥೆಗೆ ಸ್ವಾತಂತ್ರ್ಯ, ಐಪಿಎಲ್‌ಗೆ ಪ್ರತ್ಯೇಕ ಸಂಸ್ಥೆ, ಆಟಗಾರರು ಮತ್ತು ಅವರ ಏಜೆಂಟರಿಗೆ ವಿಧಿ-ನಿಷೇಧಗಳು – ಇವೆಲ್ಲ ವರದಿಯ ಸೂಚನೆಗಳು; ಮುಂದಿನದು ಸುಪ್ರೀಂಕೋರ್ಟ್‌ನ ಕೈಯಲ್ಲಿದೆ. ಮುದ್ಗಲ್ ಸಮಿತಿ ತನಗೆ ತಿಳಿದಿದ್ದರೂ ಕೂಡ ಆರು ಆಟಗಾರರ ಹೆಸರನ್ನು ಬಹಿರಂಗಪಡಿಸಿಲ್ಲ. ಸುಪ್ರೀಂಕೋರ್ಟ್ ಅದನ್ನು ಬಹಿರಂಗಪಡಿಸಿದರೆ ೨೦೧೫ರ ವಿಶ್ವಕಪ್ ಕಷ್ಟವಾಗಬಹುದು. ಸುಮಾರು ೧೨ ಜನ ಮಾಜಿ ಮತ್ತು ಹಾಲಿ ಆಟಗಾರರ ಹೆಸರು ಅದರಲ್ಲಿದೆ; ಒಂದಿಬ್ಬರು ವಿದೇಶದವರೂ ಇದ್ದಾರೆ. ಐವರು ೨೦೧೧ರ ವಿಶ್ವಕಪ್ ಗೆದ್ದ ತಂಡದಲ್ಲಿದ್ದವರು. ಶತಕೋಟಿ ಡಾಲರ್‌ಗಳ ಈ ಹಗರಣದಲ್ಲಿ ಆಟಗಾರರು, ಆಡಳಿತಗಾರರು, ರಾಜಕಾರಣಿಗಳು, ಚಿತ್ರನಟರು, ಕಾರ್ಪೊರೇಟ್ ದೊರೆಗಳು ಎಲ್ಲರೂ ಇದ್ದಾರೆ. ಕೆಲವು ಆಟಗಾರರು ಕ್ರಿಕೆಟ್ ಅಕಾಡೆಮಿ, ಹೊಟೇಲ್ ಉದ್ಯಮ ನಡೆಸುತ್ತಾರೆ; ಸಮಾರಂಭ ಏರ್ಪಡಿಸುವುದು, ಜಾಹೀರಾತು ಸಂಸ್ಥೆ ಕೂಡ ನಡೆಸುತ್ತಾರೆ. ಅದರಲ್ಲಿ ಅವರ ಪಾಲುದಾರರು ಹಾಗೂ ಬುಕ್ಕಿಗಳ ನಡುವೆ ಲಿಂಕ್ ಆಗಿರುವವರು ಎಲ್ಲ ಇರುತ್ತಾರೆ; ಕೆಲವರು ಸ್ವತಃ ಬುಕ್ಕಿಗಳಾಗಿರುತ್ತಾರೆ.
ಹಣದ ಹೊಳೆ
ಮುಖ್ಯವಾಗಿ ದೋಷ ಐಪಿಎಲ್‌ನಲ್ಲೇ ಇದೆ ಎಂದು ಮುದ್ಗಲ್ ಸಮಿತಿ ಗಮನ ಸೆಳೆದಿದೆ. ಆಟಗಾರರು, ಆಡಳಿತಗಾರರು, ಅಂಪೈರ್‌ಗಳು, ವೀಕ್ಷಕ ವಿವರಣೆಗಾರರು – ಹೀಗೆ ಎಲ್ಲರಿಗೂ ಅದು ಧಾರಾಳ ಹಣ ಕೊಡುತ್ತದೆ. ಜಗಮಗ ಆಟ, ಸಂಜೆ ಭರ್ಜರಿ ಪಾರ್ಟಿ, ಹೊಟೇಲ್‌ಗಳಲ್ಲಿ ಆಟಗಾರರ ಆಚೀಚೆ ಬುಕ್ಕಿಗಳು ತಂಗುವುದು, ಭೇಟಿಗೆ ಅವಕಾಶ – ಇದೆಲ್ಲ ಮಾಮೂಲೆಂಬಂತೆ ನಡೆಯುತ್ತಿದೆ. `ಯಾವುದೇ ಆಟಗಾರ ಬುಕ್ಕಿಗಳಿಂದ ತಪ್ಪಿಸಿಕೊಳ್ಳಲು ಅಸಾಧ್ಯ’ ಎಂದು ಆಟಗಾರರೊಬ್ಬರ ಸಂಬಂಧಿ ಹೇಳಿದ್ದಾರೆ.
ಬಿಸಿಸಿಐ ಮತ್ತು ಐಪಿಎಲ್ ತಂಡ ಎರಡೂ ಶ್ರೀನಿವಾಸನ್‌ರ ಬಳಿ ಇದ್ದುದು ಅಂಪೈರ್ – ಆಟಗಾರ ಒಬ್ಬನೇ ಆದಂತಾಗಿದೆ ಎಂದ ಸಮಿತಿ, `ಅವರಿಗೆ ಬೆಟ್ಟಿಂಗ್ ಗೊತ್ತಿತ್ತು; ಆದರೆ ಮೂಕಸಾಕ್ಷಿಯಾಗಿ ಉಳಿದರು’ ಎಂದು ಗುರುತಿಸಿದೆ. ಬುಕ್ಕಿ ವಿಂದೂ ದಾರಾಸಿಂಗ್ ಮೊಬೈಲ್‌ನಿಂದ ಮೇಯಪ್ಪನ್‌ಗೆ ಭಾರೀ ಸಂಖ್ಯೆಯ ಕರೆಗಳು ಹೋಗಿರುವುದು ತನಿಖೆಯಲ್ಲಿ ಬಯಲಾಗಿದೆ. ಸ್ವಂತ ತಂಡದ ಆಟದ ಮೇಲೆಯೇ ಬೆಟ್‌ಕಟ್ಟಿದ ಆರೋಪ ಕುಂದ್ರಾ, ಮೇಯಪ್ಪನ್ ಮೇಲೆ ಬಂದಿದೆ; ಇದು ಮ್ಯಾಚ್ ಫಿಕ್ಸಿಂಗ್ ಅಲ್ಲದೆ ಬೇರೇನೂ ಅಲ್ಲ. “ಎಲ್ಲ ತಂಡಗಳು ಮತ್ತು ಮಾಲೀಕರ ಬಗ್ಗೆ ತನಿಖೆ ನಡೆಯಬೇಕು. ಇದು ಕಾಣುವುದಕ್ಕಿಂತ ಭೀಕರ ಇದೆ” ಎನ್ನುತ್ತಾರೆ ವಿಷಯವನ್ನು ಸುಪ್ರೀಂಕೋರ್ಟಿಗೆ ಒಯ್ದ ಬಿಹಾರ ಕ್ರಿಕೆಟ್ ಸಂಘದ ವರ್ಮ.
ಮುದ್ಗಲ್ ಸಮಿತಿ ವರದಿ ಸರಿ ಇಲ್ಲ ಎಂದ ಬಿಸಿಸಿಐ ಮೂವರು ಸದಸ್ಯರ ಸಮಿತಿ ರಚಿಸಿ ಬೆಟ್ಟಿಂಗ್, ಸ್ಪಾಟ್ ಫಿಕ್ಸಿಂಗ್ ತನಿಖೆ ನಡೆಸುವುದಾಗಿ ಹೇಳಿತು. ಸುಪ್ರೀಂಕೋರ್ಟ್ ಅದಕ್ಕೆ ನಿರಾಕರಿಸಿದ ಕಾರಣ ದೇಶ ಅಂತಹ ಒಂದು ಹಾಸ್ಯಪ್ರಸಂಗದಿಂದ ವಂಚಿತವಾಯಿತು. ಸಮಿತಿಯಲ್ಲಿದ್ದವರು ಯಾರು ಗೊತ್ತೆ? ಒಬ್ಬರು ತಮಿಳುನಾಡು ಕ್ರಿಕೆಟ್ ಸಂಘದ ರಾಘವನ್, ಇನ್ನೊಬ್ಬರು ರವಿಶಾಸ್ತ್ರಿ, ಮತ್ತೊಬ್ಬರು ಮಾಜಿ ನ್ಯಾಯಾಧೀಶ ಜೈನಾರಾಯಣ್ ಪಟೇಲ್. ತಮಿಳುನಾಡು ಸಂಘ ಶ್ರೀನಿವಾಸನ್ ಕೈಯಲ್ಲಿದೆ; ರವಿಶಾಸ್ತ್ರಿ ಬಿಸಿಸಿಐ ಸಂಬಳ ಪಡೆಯುವವರು; ಇನ್ನು ಪಟೇಲ್ ಶ್ರೀನಿವಾಸನ್‌ರ ಗೆಳೆಯ ಶಿವಲಾಲ್ ಯಾದವ್‌ರ ಭಾವ.
ಐಪಿಎಲ್ ಹಗರಣದ ಚೆಂಡು ಸುಪ್ರೀಂಕೋರ್ಟಿನ ಅಂಗಳಕ್ಕೆ ಬಂದ ಕಾರಣ ಎಲ್ಲರಲ್ಲೂ ಆಸಕ್ತಿ ಮೂಡಿತು. ತನಿಖೆಯ ಫಲವಾಗಿ ಲೀಗ್ ಚಟುವಟಿಕೆಗಳು ಹೆಚ್ಚು ಪಾರದರ್ಶಕ ಆಗಬಹುದು; ಐಪಿಎಲ್ ಕಾರ್ಯವಿಧಾನ, ವಿಶೇಷವಾಗಿ ಮ್ಯಾಚ್‌ಫಿಕ್ಸಿಂಗ್ ಬಗ್ಗೆ ತನಿಖೆ ನಡೆದು ಎಲ್ಲ ಶುದ್ಧೀಕರಣ ಆಗಬಹುದು; ಮುದ್ಗಲ್ ವರದಿಯಲ್ಲಿ ಮೇಯಪ್ಪನ್, ರಾಜ್‌ಕುಂದ್ರಾ ಮತ್ತಿತರರ ಹೆಸರು ಬಂದ ಕಾರಣ ಕ್ರಿಮಿನಲ್ ತನಿಖೆ ನಡೆಯಬಹುದು – ಎಂಬ ನಿರೀಕ್ಷೆ ಇದ್ದವು. ಆದರೆ ಆರು ಪ್ರಮುಖ ಆಟಗಾರರ ಹೆಸರು ಹೇಳದ ಕಾರಣ ಇದು ಉದ್ದೇಶಪೂರ್ವಕವಾಗಿ ಹೇಳದಿರುವುದೆಂದು ನಿರಾಶೆಯಾಗಿದೆ.
ಡೋಲಾಯಮಾನ ಸ್ಥಿತಿ
ಆದರೆ ಸಮಸ್ಯೆ ಏನೆಂದರೆ, ವರದಿ ತನ್ನ ಮುಂದೆ ಬಂದಾಗ ಸುಪ್ರೀಂಕೋರ್ಟ್‌ಗೆ ಡೋಲಾಯಮಾನ ಸ್ಥಿತಿ ಉಂಟಾದಂತಿದೆ. ಏಕೆಂದರೆ ತನಿಖೆ ನಡೆಸಿದರೆ ಶಿಕ್ಷೆಗೆ ಗುರಿಯಾಗುವವರು ನ್ಯಾಯಾಲಯದ ಮುಂದೆ ಬಂದವರಲ್ಲ; ಆದ್ದರಿಂದ ಕೋರ್ಟ್ ಕುಂದ್ರಾ, ಮೇಯಪ್ಪನ್ ಮತ್ತು ಸುಂದರರಾಮನ್‌ರಿಗೆ ಔಪಚಾರಿಕ ನೋಟೀಸು ನೀಡಬೇಕೆಂದು ಸೂಚಿಸಿತು ಎನ್ನುವುದು ಲೇಖಕ ವಿಕ್ರಮಜಿತ್ ಬ್ಯಾನರ್ಜಿ ಅವರ ಅಭಿಪ್ರಾಯ. (`ಆರ್ಗನೈಸರ್’ ೨೦೧೪, ಡಿಸೆಂಬರ್ ೨೧ರ ಸಂಚಿಕೆ). ಎನ್. ಶ್ರೀನಿವಾಸನ್ ಹೊರತುಪಡಿಸಿದರೆ (ವರದಿಯಲ್ಲಿ) ಪಾರ್ಟಿಗಳಿಲ್ಲ. ವರದಿಗೆ ಆಕ್ಷೇಪ ಸಲ್ಲಿಸಲು ಎಲ್ಲ ಪಾರ್ಟಿಗಳಿಗೆ ಸುಪ್ರೀಂಕೋರ್ಟ್ ಅವಕಾಶ ಕಲ್ಪಿಸಿದೆ.
ಅಂದರೆ ಒಂದು ರೀತಿಯಲ್ಲಿ ನೋಡಿದರೆ, ಈಗ ವಿಷಯ ಅತಂತ್ರವಾಗಿದೆ. ಸುಪ್ರೀಂಕೋರ್ಟ್ ಒಂದೋ ಮುದ್ಗಲ್ ವರದಿಯ ರೀತಿಯಲ್ಲೇ ಐಪಿಎಲ್‌ನ ವಿವಾದದಲ್ಲಿ ಕೈಹಾಕದೆ ಬೆಟ್ಟಿಂಗ್-ಫಿಕ್ಸಿಂಗ್‌ನವರನ್ನು ಲಘುವಾಗಿ ಕಾಣಬಹುದು; ಇಂದು ಐಪಿಎಲ್ ಉದ್ದಿಮೆದಾರರು ಹಾಗೂ ರಾಜಕಾರಣಿಗಳನ್ನು ಆಕರ್ಷಿಸುತ್ತಿರುವ ಕಾರಣ ಕೋರ್ಟ್ ಸುಮ್ಮನೆ ಇದ್ದುಬಿಡಬಹುದೆಂದು ಭಾವಿಸುವವರೂ ಇದ್ದಾರೆ; ಆದರೆ ಅದರಿಂದ ಅಕ್ರಮಗಳನ್ನು ಮುಚ್ಚಿಹಾಕಿದಂತಾಗುತ್ತದೆ.
ಆದರೆ ಕ್ರಿಕೆಟ್ ಪಂದ್ಯದ ಫಲಿತಾಂಶದಂತೆಯೇ ಕೋರ್ಟ್‌ಗಳ ದಾರಿ ಕೂಡ ಊಹಿಸಲು ಕಷ್ಟ. ಸುಪ್ರೀಂಕೋರ್ಟ್ ಹಲವು ಸಂದರ್ಭಗಳಲ್ಲಿ ಮೈಕೊಡವಿ ನಿಂತು ಸಂಬಂಧಪಟ್ಟವರ ಚಳಿ ಬಿಡಿಸಿದ ಎಷ್ಟೋ ಉದಾಹರಣೆಗಳಿವೆ. ಆದ್ದರಿಂದ ನ್ಯಾಯಾಲಯ ದೋಷರಹಿತ ತನಿಖೆ ನಡೆಸುವ ಹಾದಿಯಲ್ಲಿದೆ ಎಂದು ನಂಬಬಹುದು.
ರೋಚಕ ವಿವರಗಳು
ಮುದ್ಗಲ್ ವರದಿ ಏನನ್ನೂ ಸರಿಯಾಗಿ ಹೇಳಿಲ್ಲವೆಂದರೂ ಕೆಲವರ ಬಗ್ಗೆ ಅದು ನೀಡುವ ವಿವರಗಳು ರೋಚಕವಾಗಿವೆ; ಒಂದೆರಡು ಉದಾಹರಣೆಗಳನ್ನು ನೋಡಬಹುದು. “ಗುರುನಾಥ ಮೇಯಪ್ಪನ್ ಎಂಬ ಈ ವ್ಯಕ್ತಿ ಒಂದು ಫ್ರಾಂಚೈಸೀ ತಂಡದ ಅಧಿಕಾರಿ. ಆತ ಆಗಾಗ ವ್ಯಕ್ತಿ-೨ನ್ನು (ಹೆಸರು ತಡೆಹಿಡಿದಿದೆ) ಆತನ ಹೊಟೇಲ್ ರೂಮಿನಲ್ಲಿ ಭೇಟಿ ಮಾಡುತ್ತಿದ್ದ; ಅಂದರೆ ಆತ ವ್ಯಕ್ತಿ-೨ರ ನಿಕಟ ಸಂಪರ್ಕದಲ್ಲಿದ್ದ. ವ್ಯಕ್ತಿ-೨ ಸಿಎಸ್‌ಕೆಯ ಪ್ರಮುಖ ಆಟಗಾರ ಎಂಬುದು ಸ್ಪಷ್ಟ. ಈ ವಿಷಯದಲ್ಲಿ ವ್ಯಕ್ತಿ-೧೩ (ಶ್ರೀನಿವಾಸನ್) ಪರಿಸ್ಥಿತಿಯನ್ನು ಸರಿಪಡಿಸದೆ ತಪ್ಪೆಸಗಿದ್ದಾರೆ. ಶ್ರೀನಿವಾಸನ್ ಮಾಡಿದ ಇನ್ನೊಂದು ದೊಡ್ಡ ತಪ್ಪೆಂದರೆ ತನ್ನ ಅಳಿಯನನ್ನು ರಕ್ಷಿಸಲು ಯತ್ನಿಸಿದ್ದು – ಆತ ಕೇವಲ ಕ್ರಿಕೆಟ್ ಆಸಕ್ತ ಎನ್ನುವ ಮೂಲಕ. ನಿಜವೆಂದರೆ, ಮೇಯಪ್ಪನ್ ಏನೆಂದು ಶ್ರೀನಿವಾಸನ್‌ಗೆ ಗೊತ್ತಿತ್ತು.”
ಇನ್ನೊಂದೆಡೆ “ವ್ಯಕ್ತಿ-೧೧ (ರಾಜ್‌ಕುಂದ್ರಾ) ಬೆಟ್ಟಿಂಗ್ ಬಗ್ಗೆ ಬುಕ್ಕಿಗಳ ಸಂಪರ್ಕದಲ್ಲಿದ್ದರು. ಆ ಮೂಲಕ ಬಿಸಿಸಿಐ/ಐಪಿಎಲ್‌ಗಳ ಭ್ರಷ್ಟಾಚಾರವಿರೋಧಿ ನೀತಿಸಂಹಿತೆಯನ್ನು ಅವರು ಉಲ್ಲಂಘಿಸಿದ್ದಾರೆ. ಇನ್ನಷ್ಟು ಆಘಾತಕಾರಿ ಎಂದರೆ ಈ ವ್ಯಕ್ತಿಯ ಬಗೆಗಿನ ತನಿಖೆಯನ್ನು ಹಠಾತ್ತಾಗಿ ಕಾರಣ ಕೊಡದೆ ನಿಲ್ಲಿಸಲಾಗಿದೆ. ರಾಜಸ್ಥಾನ್ ಪೊಲೀಸರು ದೆಹಲಿ ಪೊಲೀಸರಿಂದ ಕಾಗದಪತ್ರ ಪಡೆದ ಬಳಿಕ ಹೀಗೆ ಮಾಡಿದ್ದಾರೆ – ಎಂಬುದು ಸಮಿತಿಯ ಗಮನಕ್ಕೆ ಬಂದಿದೆ” ಎಂದು ತಿಳಿಸಲಾಗಿದೆ.
“ವ್ಯಕ್ತಿ-೩ ಆಟಗಾರರ ನೀತಿ ಸಂಹಿತೆಯನ್ನು ಉಲ್ಲಂಘಿ ಸುತ್ತಿದ್ದುದು ಶ್ರೀನಿವಾಸನ್ ಹಾಗೂ ಬಿಸಿಸಿಐನ ಇತರ ನಾಲ್ಕು ಅಧಿಕಾರಿಗಳಿಗೆ ಗೊತ್ತಿತ್ತು. ಆದರೆ ಮೇಲೆ ಹೇಳಿದ ಯಾವುದೇ ಅಧಿಕಾರಿಗಳು ವ್ಯಕ್ತಿ-೩ರ ವಿರುದ್ಧ ಕ್ರಮ ಕೈಗೊಳ್ಳಲಿಲ್ಲ”
– ಹೀಗೆ ಕ್ರಮಕೈಗೊಳ್ಳುವುದು ಮತ್ತು ಆ ಮೂಲಕ ಭಾರತೀಯ ಕ್ರಿಕೆಟ್‌ಗೆ ತಗಲಿದ ಕಳಂಕವನ್ನು ತೊಳೆಯಲು ಮುದ್ಗಲ್ ಸಮಿತಿ ಕೆಲವು ಸೂಚನೆಗಳನ್ನು ಪರೋಕ್ಷವಾಗಿಯಾದರೂ ಮುಂದಿಟ್ಟಿದೆ. ಜನರ ನಿರೀಕ್ಷೆ ಮುಖ್ಯವಾಗಿ ನ್ಯಾಯಾಲಯದ ಮೇಲಿದೆ. ರಾಜಕಾರಣಿಗಳಿಂದ ಎಂದಿನಂತೆ ಹೆಚ್ಚು ನಿರೀಕ್ಷಿಸಲಾಗದು. ಈ ಹಗರಣದಲ್ಲಂತೂ ಬಹುತೇಕ ಎಲ್ಲ ಪಕ್ಷಗಳ ರಾಜಕೀಯ ವ್ಯಕ್ತಿಗಳು ಪ್ರತ್ಯಕ್ಷವಾಗಿ ಮತ್ತು ಪರೋಕ್ಷವಾಗಿ ಭಾಗಿ ಆಗಿರುವುದನ್ನು ಗುರುತಿಸಬಹುದು. ?
ಎಚ್. ಮಂಜುನಾಥ ಭಟ್