ಬಹುಮುಖ ಪ್ರತಿಭಾವಂತರಾಗಿದ್ದ ಮಹಾರಾಜರನ್ನು ಹೆಚ್ಚು ಸೆಳೆದದ್ದು ಅಧ್ಯಾತ್ಮ ಮತ್ತು ತತ್ತ್ವಸಾಹಿತ್ಯ. ತಾವು ಕೆಲಸ ಮಾಡುವ ಜಾಗಗಳಲ್ಲೆಲ್ಲ ಅಧ್ಯಾತ್ಮಪ್ರಿಯರನ್ನೆಲ್ಲ ಸೇರಿಸಿಕೊಂಡು ಪ್ರವಚನ ಮತ್ತು ಹಲವು ದಾರ್ಶನಿಕರ ಪ್ರೇರಕ ಪ್ರಸಂಗಗಳನ್ನು ರಸವತ್ತಾಗಿ ಹೇಳುತ್ತಿದ್ದರು. ಆ ನಡುವೆಯೂ ಕಾಯಕನಿಷ್ಠೆಯನ್ನು ಮಾತ್ರ ಯಾವತ್ತೂ ಮರೆಯುತ್ತಿರಲಿಲ್ಲ.
ನೈತಿಕ ಮತ್ತು ಆಧ್ಯಾತ್ಮಿಕ ಉತ್ಕರ್ಷಕ್ಕಾಗಿ ಶರಣರು, ಸಂತರು, ದಾಸರು, ತತ್ತ್ವಪದ ರಚನಕಾರರು ತಮ್ಮ ಜೀವಿತಾವಧಿಯನ್ನೆಲ್ಲ ಮುಡಿಪಾಗಿಟ್ಟ ಉದಾಹರಣೆಗಳು ನಮ್ಮ ನಾಡಿನಲ್ಲಿ ಹೇರಳವಾಗಿ ಸಿಗುತ್ತವೆ. ಸರ್ವಜ್ಞ, ಪುರಂದರದಾಸ, ಕನಕದಾಸ, ಶಿಶುನಾಳ ಶರೀಫ, ದೇವರ ದಾಸಿಮಯ್ಯ, ಅಂಬಿಗರಚೌಡಯ್ಯ, ಬಸವಣ್ಣ, ಅಲ್ಲಮ, ಅಕ್ಕಮಹಾದೇವಿ, ನಿಜಗುಣ ಶಿವಯೋಗಿ, ಕಡಕೋಳ ಮಡಿವಾಳಪ್ಪ ಅಂಥವರಲ್ಲಿ ಅಗ್ರಗಣ್ಯರು. ಗೃಹಸ್ಥಾಶ್ರಮ ಸ್ವೀಕರಿಸಿ, ಉದಾತ್ತಕಾಯಕದೊಂದಿಗೆ ಅಧ್ಯಾತ್ಮನಿಷ್ಠವಾದ ಪರಂಪರೆಯೊಂದನ್ನು ಹುಟ್ಟುಹಾಕಿ ಅದಕ್ಕಾಗಿ ಅಹರ್ನಿಶಿ ಪರಿಶ್ರಮಿಸಿ ಪ್ರಚಾರದಿಂದ ವಿಮುಖರಾದ ಸಂತರೂ ಹಲವರಿದ್ದಾರೆ. ಅಂಥವರಲ್ಲಿ ವಿಜಾಪುರ ಜಿಲ್ಲೆಯ ಸಿಂಧಗಿ ತಾಲೂಕಿನ ಬೋರಗಿ ಗ್ರಾಮದ ಶ್ರೀ ಸದ್ಗುರು ಸಮರ್ಥ ಭೀಮಾಶಂಕರ ಮಹಾರಾಜರೂ (೧೮೯೫-೧೯೮೨) ಒಬ್ಬರು.
ವಿಶ್ವಕರ್ಮ ಮನೆತನದ ಮೌನೇಶ ಮತ್ತು ಲಕ್ಷ್ಮೀಬಾಯಿ ದಂಪತಿಗಳ ಪುತ್ರನಾಗಿ ೧೮೯೫ರ ಮಾರ್ಚ್ ೫ರಂದು ಜನಿಸಿದ ಮಹಾರಾಜರು, ತಾವೊಬ್ಬ ದೈವಾಂಶಸಂಭೂತರೆಂದು ಬಾಲ್ಯದ ದಿನಗಳಲ್ಲಿಯೇ ತೋರಿಸಿಕೊಟ್ಟಿದ್ದರು. ಚಿಕ್ಕವಯಸ್ಸಿನಲ್ಲಿಯೇ ತಂದೆಯನ್ನು ಕಳೆದುಕೊಂಡು ಸೋದರಮಾವ ಯಡ್ರಾಮಿಯ ಮೋನಪ್ಪನವರ ಆಶ್ರಯದಲ್ಲಿ ಬೆಳೆದ ಭೀಮಾಶಂಕರರಿಗೆ ಮಾವನ ಮನೆಯೇ ಪಾಠಶಾಲೆಯಾಗಿತ್ತು. ಮಗನನ್ನು ಚೆನ್ನಾಗಿ ಓದಿಸಬೇಕೆಂಬ ಆಸೆ ತಾಯಿಗೆ ಇತ್ತಾದರೂ ಅದು ಫಲಿಸಲಿಲ್ಲ. ಶಾಲೆಗೆ ಸೇರಿದ ಮೊದಲ ದಿನವೇ ಶಿಕ್ಷಕರು ಕೇಳಿದ ಎಲ್ಲಾ ಜಟಿಲ ಪ್ರಶ್ನೆಗಳಿಗೆ ಬಾಲಕ ಭೀಮಾಶಂಕರ ನಿರರ್ಗಳವಾಗಿ ಉತ್ತರಿಸಿಬಿಟ್ಟಿದ್ದ. ಆತನಿಗೆ ಕೈಮುಗಿದ ಶಿಕ್ಷಕರು ‘ಅಯ್ಯಾ, ನಿನಗೆ ಲೌಕಿಕಶಾಲೆಯ ಶಿಕ್ಷಣದ ಅಗತ್ಯವಿಲ.’ ಎಂದು ಹೇಳಿ ಮನೆಗೆ ಕಳಿಸಿಬಿಟ್ಟರಂತೆ.
ಪ್ರಾಯಕ್ಕೆ ಬಂದ ಮೇಲೆ ಭೀಮಾಶಂಕರ ಮಹಾರಾಜರು ಕೈಯಾಡಿಸದ ಕ್ಷೇತ್ರಗಳೇ ಉಳಿಯಲಿಲ್ಲ. ಯಡ್ರಾಮಿಯ ಸೋದರಮಾವನ ಮಾರ್ಗದರ್ಶನದಲ್ಲಿ ಕಾಷ್ಠಶಿಲ್ಪವನ್ನು ಕಲಿತರು. ಹಾರ್ಮೋನಿಯಂ, ಪಿಟೀಲು, ತಬಲಾ ಮುಂತಾದ ವಾದ್ಯಗಳನ್ನು ಯಾವುದೇ ಗುರುವಿನ ಸಹಾಯವಿಲ್ಲದೆ ನುಡಿಸುವುದನ್ನು ಕಲಿತರು. ಭಜನಾಪದ್ಯಗಳನ್ನು ಸ್ವತಃ ರಚಿಸಿ, ರಾಗಸಂಯೋಜಿಸಿ ಹಾಡುವುದನ್ನು ಅಭ್ಯಾಸ ಮಾಡಿಕೊಂಡರು. ಮರಗೆತ್ತನೆಯ ಕೌಶಲ ಹೇಗಿತ್ತೆಂದರೆ, ಮನೆ, ದೇವಸ್ಥಾನ, ಶರಣರಿಗೆ ತಯಾರಿಸಿಕೊಟ್ಟ ಬಾಗಿಲು, ತೇರು, ಮೂರ್ತಿ, ಸಿಂಹಾಸನಗಳಿಗೆ ಕೆತ್ತಿದ ಹೂ, ಬಳ್ಳಿ, ಗಿಳಿ, ಹಂಸಗಳ ಸುಳುವು, ಚಿತ್ತಾರಗಳು ತುಂಬಾ ಸಹಜತೆಯಿಂದ ಹಾಗೂ ಕಲಾತ್ಮಕತೆಯಿಂದ ಕೂಡಿರುತ್ತಿದ್ದವು. ಇಂಥ ಕಲಾವೈಭವವನ್ನು ನೋಡಲು ಉತ್ತರಕರ್ನಾಟಕದ ಬಹುತೇಕ ಜಿಲ್ಲೆಗಳ ಜನ ತಂಡತಂಡವಾಗಿ ಹರಿದುಬರುತ್ತಿದ್ದರು. ತಮ್ಮ ಮನೆಗಳಿಗೆ ಅಳವಡಿಸಲು ಮಹಾರಾಜರಿಂದ ತಯಾರಿಸಿಕೊಂಡ ಕಲಾತ್ಮಕ ಬಾಗಿಲು ತೋಳುಗಳನ್ನು ಮನೆಗೆ ಅಳವಡಿಸದೆಯೆ ಹಬ್ಬ, ಹರಿದಿನ, ಜಾತ್ರೆಗಳಲ್ಲಿ ಸಾರ್ವಜನಿಕರ ವೀಕ್ಷಣೆಗೆ ಪ್ರದರ್ಶನಕ್ಕಿಡುತ್ತಿದ್ದರು. ಸುತ್ತ-ಮುತ್ತ ಗ್ರಾಮಗಳಲ್ಲಿ ಯಾವುದೇ ಬಯಲಾಟ ನಡೆದರೂ ಆ ಬಯಲಾಟಕ್ಕೆ ಮಹಾರಾಜರ ಪಿಟೀಲುವಾದನ ಬೇಕೇ ಬೇಕಾಗಿತ್ತು.
ಬಹುಮುಖ ಪ್ರತಿಭಾವಂತರಾಗಿದ್ದ ಮಹಾರಾಜರನ್ನು ಹೆಚ್ಚು ಸೆಳೆದದ್ದು ಅಧ್ಯಾತ್ಮ ಮತ್ತು ತತ್ತ್ವಸಾಹಿತ್ಯ. ತಾವು ಕೆಲಸ ಮಾಡುವ ಜಾಗಗಳಲ್ಲೆಲ್ಲ ಅಧ್ಯಾತ್ಮಪ್ರಿಯರನ್ನೆಲ್ಲ ಸೇರಿಸಿಕೊಂಡು ಪ್ರವಚನ ಮತ್ತು ಹಲವು ದಾರ್ಶನಿಕರ ಪ್ರೇರಕ ಪ್ರಸಂಗಗಳನ್ನು ರಸವತ್ತಾಗಿ ಹೇಳುತ್ತಿದ್ದರು. ಆ ನಡುವೆಯೂ ಕಾಯಕನಿಷ್ಠೆಯನ್ನು ಮಾತ್ರ ಯಾವತ್ತೂ ಮರೆಯುತ್ತಿರಲಿಲ್ಲ. ಬಹಳಷ್ಟು ಸಂದರ್ಭಗಳಲ್ಲಿ ಮರಗೆಲಸ ಮಾಡುತ್ತಲೇ ಪ್ರವಚನ ಹೇಳುತ್ತಿದ್ದದ್ದುಂಟು. ಉತ್ತಮ ವಾಗ್ಮಿಯಾಗಿದ್ದ iಹಾರಾಜರನ್ನು ಸುತ್ತಮುತ್ತಲಿನ ಜಿಲ್ಲೆಗಳಲ್ಲಿ ಆಗಾಗ ನಡೆಯುತ್ತಿದ್ದ ‘ಧರ್ಮಸಭೆ’ಗಳಿಗೆ ವಿಶೇಷ ಉಪನ್ಯಾಸಕರನ್ನಾಗಿ ಕರೆಯಿಸುತ್ತಿದ್ದರು. ಕಾಶೀಯಲ್ಲಿ ಸಂಸ್ಕೃತ, ವೇದಾಧ್ಯಯನ ಮಾಡಿ ‘ಕಾಶೀಘನಪಂಡಿತ’ ಎಂದೇ ಖ್ಯಾತರಾಗಿದ್ದ ಗಂವಾರ ತೋಪಕಟ್ಟಿ ಹಿರೇಮಠದ ಶ್ರೀ ಸದ್ಗುರು ವಿಶ್ವಾರಾಧ್ಯರಿಂದ ಗುರುದೀಕ್ಷೆ ಪಡೆದುಕೊಂಡಿದ್ದರಿಂದ, ಗುರುಮುಖೇನ ಹಲವು ಬ್ರಹ್ಮವಿದ್ಯೆಗಳ ಕೃಪೆಯಾದದ್ದರಿಂದ ಸಹಜವಾಗಿ ಎಲ್ಲ ವಿಷಯಗಳ ಬಗ್ಗೆಯೂ ಮಹಾರಾಜರು ಆಳವಾದ ಜ್ಞಾನವನ್ನು ಹೊಂದಿದ್ದರು.
ಸ್ವಗ್ರಾಮವಾದ ಬೋರಗಿಗೆ ತೆರಳಿದ ನಂತರ ಅಲ್ಲಿ ಸ್ವಂತ ದ್ದೊಂದು ಮನೆ ಕಟ್ಟಿಕೊಂಡು ಕಾಯಕನಿರತರಾದ ಭೀಮಾಶಂಕರ ಮಹಾರಾಜರಿಗೆ ಗ್ರಾಮದ ಹಿರಿಯರೆಲ್ಲ ಸೇರಿ ಸಾಧ್ವಿಮಣಿ ಸಾವಿತ್ರಿಯೊಂದಿಗೆ ಮದುವೆ ಮಾಡಿಸಿದರು. ತತ್ಪರಿಣಾಮವಾಗಿ ೪ ಗಂಡು ೨ ಹೆಣ್ಣು ಮಕ್ಕಳಾದರು. ಸಾಂಸಾರಿಕ ಜೀವನದ ನಡುವೆಯೂ ಮಹಾರಾಜರು ಪಾರಮಾರ್ಥದ ಚಿಂತನವನ್ನು ತಮ್ಮ ಜೀವನದ ಅವಿಭಾಜ್ಯ ಅಂಗವನ್ನಾಗಿ ಮಾಡಿಕೊಂಡಿದ್ದರು. ಮಕ್ಕಳಿಗೆಲ್ಲ ಮದುವೆ ಮಾಡಿಸಿ, ಅವರಿಗೆ ಒಂದು ನೆಲೆ ಕಲ್ಪಿಸಿಕೊಟ್ಟು, ಮನೆ ತೊರೆದು, ಊರಿನಿಂದ ೧ ಕಿ.ಮೀ. ದೂರದಲ್ಲಿ (ಬೋರಗಿ ಮತ್ತು ಪುರದಾಳ ನಡುವೆ) ‘ಶ್ರೀ ಸದ್ಗುರು ವಿಶ್ವಾರಾಧ್ಯ ಬ್ರಹ್ಮವಿದ್ಯಾಶ್ರಮ’ ಸ್ಥಾಪಿಸಿ ಅಲ್ಲಿಯೇ ಇರತೊಡಗಿದರು.
ಅಗಾಧವಾದ ಪರಿಸರಪ್ರೀತಿಯನ್ನು ಹೊಂದಿದ್ದ ಮಹಾರಾಜರು ಆಶ್ರಮದ ಸುತ್ತಮುತ್ತ ವಿಧ ವಿಧ ಸಸಿಗಳನ್ನು ನೆಟ್ಟು, ಆಶ್ರಮದ ಒಂದು ಮೂಲೆಯಲ್ಲಿ ಭಕ್ತರೊಡಗೂಡಿ ಬಾವಿಯನ್ನು ತೋಡಿ ಪ್ರತಿದಿನ ಆ ಬಾವಿಯ ಒಳಗಿಳಿದು ನೀರು ಹೊತ್ತುಕೊಂಡು ಬಂದು ಸಸಿಗಳಿಗೆ ನೀರುಣಿಸುತ್ತಿದ್ದರು. ಅವರ ಅಂದಿನ ಶ್ರಮದ ಫಲವಾಗಿ ಇಂದು ಆಶ್ರಮದ ಪರಿಸರವು ನಂದನವನದಂತೆ ಕಂಗೊಳಿಸುತ್ತಿದೆ. ಸಾಕಷ್ಟು ವಿನೋದಪ್ರಜ್ಞೆಯನ್ನು ಬೆಳೆಸಿಕೊಂಡಿದ್ದ iಹಾರಾಜರ ಮಾತುಗಳನ್ನು ಕೇಳಲೆಂದೇ ನೂರಾರು ಜನ ಅವರ ಸುತ್ತ ಸದಾ ಇರುತ್ತಿದ್ದರು. ಎಂಥ ಜಟಿಲ ಸಮಸ್ಯೆಯಿದ್ದರೂ ತಮ್ಮ ವಿನೋದಭರಿತ ಮಾತುಗಳಿಂದ ಅದನ್ನು ತಿಳಿಗೊಳಿಸುತ್ತಿದ್ದರು. ಕೌಟುಂಬಿಕ ಕಲಹ, ಸಮಸ್ಯೆಗಳೇನೇ ಇದ್ದರೂ ಮಹಾರಾಜರ ಒಂದು ದಿವ್ಯವಾಣಿಯಿಂದ ಎಲ್ಲವೂ ದೂರವಾಗುತ್ತಿದ್ದವು. ಅವರ ಜೀವಿತಕಾಲದಲ್ಲಿ ಆಡಿದ ಮಾತುಗಳು, ಹೇಳಿದ ಪ್ರೇರಕ ಪ್ರಸಂಗಗಳು, ಎದುರಿಸಿದ ಸವಾಲುಗಳು ದಂತಕಥೆಗಳಾಗಿ ಈಗಲೂ ಜಿಲ್ಲೆಯಾದ್ಯಂತ ಹಾಸುಹೊಕ್ಕಾಗಿವೆ.
ಅಚ್ಚರಿಯ ಸಂಗತಿಯೆಂದರೆ, ೩ನೇ ತರಗತಿಯನ್ನೂ ಸರಿಯಾಗಿ ಓದಿರದಿದ್ದ ಭೀಮಾಶಂಕರರು ಭಾರತದ ಹಲವು ದಾರ್ಶನಿಕರ ಜೀವನಗಾಥೆ ಮತ್ತು ವಿಚಾರಧಾರೆಯನ್ನು ಓದಿ ತಿಳಿದುಕೊಂಡಿದ್ದರು. ಶಾಸ್ತ್ರ, ಪುರಾಣ, ಪ್ರವಚನದ ವಿಷಯದಲ್ಲಿಯಂತೂ ಎತ್ತಿದಕೈ. ಮಹಾರಾಜರ ಮೇಲೆ ತುಂಬಾ ಪ್ರಭಾವ ಬೀರಿದವರೆಂದರೆ, ಶ್ರೀಮನ್ನಿಜಗುಣ ಶಿವಯೋಗಿಗಳು. ನಿಜಗುಣರು ರಚಿಸಿದ ‘ಕೈವಲ್ಯ ಪದ್ಧತಿ’ ಗ್ರಂಥವನ್ನು ಸದಾ ತಮ್ಮೊಂದಿಗೆ ಇಟ್ಟುಕೊಂಡಿರುತ್ತಿದ್ದರು. ಆಶ್ರಮಕ್ಕೆ ಬರುವ ಭಕ್ತರಿಗೆ ನಿಜಗುಣರ ವಿಚಾರಧಾರೆಯನ್ನು ಸ್ಥೂಲವಾಗಿ ವಿಶದೀಕರಿಸುತ್ತಿದ್ದರು. ವೃದ್ಧಾಪ್ಯಕಾಲದಲ್ಲಿ ಭೀಮಾಶಂಕರ ಮಹಾರಾಜರು ರಚಿಸಿದ ನೂರಾರು ತತ್ತ್ವಪದಗಳಲ್ಲಿ ನಿಜಗುಣರ ಪ್ರಭಾವ ಎದ್ದು ಕಾಣುತ್ತದೆ. ಕೆಲವು ಪದ್ಯಗಳು ಸರಳವಾಗಿದ್ದರೆ, ಹಲವು ಪದ್ಯಗಳು ವ್ಯಾಕರಣಶುದ್ಧತೆ, ಪ್ರಾಸ, ಛಂದಸ್ಸು, ಅಲಂಕಾರಗಳಿಂದ ಕೂಡಿವೆ. ಈ ಎಲ್ಲ ತತ್ತ್ವಪದಗಳು ಪುಸ್ತಕರೂಪದಲ್ಲಿ ಪ್ರಕಟವಾಗಿವೆಯಾದರೂ ಅವುಗಳ ಕುರಿತಾದ ಅಧ್ಯಯನ, ಸಂಶೋಧನೆ, ಉಪನ್ಯಾಸಗಳು ಈವರೆಗೂ ಸಾಹಿತ್ಯಕವಲಯದಲ್ಲಿ ಗಂಭೀರವಾಗಿ ನಡೆದಿಲ್ಲ.
ಶ್ರೀ ಭೀಮಾಶಂಕರ ಮಹಾರಾಜರು ಸ್ಥಾಪಿಸಿದ ‘ಶ್ರೀ ವಿಶ್ವಾರಾಧ್ಯ ಬ್ರಹ್ಮವಿದ್ಯಾಶ್ರಮ’ದಲ್ಲಿ ಈಗಲೂ ಧಾರ್ಮಿಕ, ಸಾಹಿತ್ಯಕ, ವೈಚಾರಿಕ, ಸಂಗೀತ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯುತ್ತವೆ. ಪ್ರತಿವರ್ಷ ಶಿವರಾತ್ರಿ ಅಮಾವಾಸ್ಯೆಯಾದ ೮ ದಿನಕ್ಕೆ ‘ಶ್ರೀ ವಿಶ್ವಾರಾಧ್ಯ ಜಾತ್ರಾ ಮಹೋತ್ಸವ’ ನಡೆಯುತ್ತದೆ. ಈ ಸಂದರ್ಭದಲ್ಲಿ ಪುರಾಣ, ಪ್ರವಚನ, ಸಂಗೀತ, ನಾಟಕ, ಧರ್ಮಸಭೆ, ರಥೋತ್ಸವ ಅತ್ಯಂತ ವಿಜೃಂಭಣೆಯಿಂದ ಜರುಗುತ್ತವೆ. ಪ್ರತೀ ವಿಜಯದಶಮಿಗೊಮ್ಮೆ ಶ್ರೀ ಭೀಮಾಶಂಕರ ಮಹಾರಾಜರ ಪುಣ್ಯಾರಾಧನೆಯೂ ಜರುಗುತ್ತದೆ. ನಾಡಿನಾದ್ಯಂತ ಇರುವ ಮಹಾರಾಜರ ಶಿಷ್ಯರು, ಭಕ್ತರು, ಸಮಕಾಲೀನರು, ಅನುಯಾಯಿಗಳು ಸಾವಿರಾರು ಸಂಖ್ಯೆಯಲ್ಲಿ ಸೇರಿ ಮಹಾರಾಜರ ದಿವ್ಯಚೇತನಕ್ಕೆ ನಮನ ಸಲ್ಲಿಸಿ ಕೃತಾರ್ಥರಾಗುತ್ತಾರೆ.?
ಗುರುನಾಥ ಬೋರಗಿ
ಬಹಳಷ್ಟು ಖುಷಿ ಆಯಿತು ಅಣ್ಣಾ…ಯಜಮಾನರು ಎಂದು ಖ್ಯಾತಿ ಪಡೆದಿದ್ದ ಸದ್ಗುರು ಭೀಮಾಶಂಕರ ಮಹಾರಾಜರ ತತ್ವಪದಗಳು ಜನಮಾನಸಕ್ಕೆ ಬೆಳಕಾಗಿವೆ.ಸರಳ ಹಾಗೂ ಸುಂದರವಾಗಿ ಬರೆದಿದ್ದಿರಿ.ಧನ್ಯವಾದಗಳು ತಮಗೆ.