ಇದೀಗ ಭಾರತದ ಕ್ರೀಡಾಪ್ರತಿಭೆಗಳು ಗಮನಾರ್ಹವಾಗಿ ರಾಷ್ಟ್ರೀಯ/ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಿಂಚುತ್ತಿರುವುದು ಗೋಚರಿಸುತ್ತಿದೆ. ಇನ್ನು ರಾಜ್ಯ, ಜಿಲ್ಲೆ, ತಾಲ್ಲೂಕು, ಗ್ರಾಮಾಂತರ ಮಟ್ಟದಲ್ಲಿಯೂ ಅಗಣಿತ ಕ್ರೀಡಾಪ್ರತಿಭೆಗಳಿವೆ. ಆಗಾಗ ಅವರೆಲ್ಲ ಸುದ್ದಿ ಮಾಡುತ್ತಲೇ ಇರುತ್ತಾರೆ. ಅವರಿಗೆಲ್ಲ ಸೂಕ್ತ ತರಬೇತಿ, ಅಗತ್ಯ ಸವಲತ್ತು, ಅವಕಾಶ ಒದಗಿಸಿದಲ್ಲಿ ಭಾರತೀಯ ಕ್ರೀಡಾಕ್ಷಿತಿಜ ಇನ್ನಷ್ಟು ಪ್ರಕಾಶಿಸಿ, ಇಡೀ ಜಗತ್ತು ಭಾರತದತ್ತ ಬೆರಗುಗಣ್ಣಿನಿಂದ ನೋಡುವುದರಲ್ಲಿ ಅಚ್ಚರಿಯೇನಿಲ್ಲ.
ಸ್ವಾಮಿ ವಿವೇಕಾನಂದರ ಒಂದು ಪ್ರಸಿದ್ಧ ಹೇಳಿಕೆ ಸದಾ ಕಾಲಕ್ಕೂ ವಿಚಾರಾರ್ಹ: ‘You will be nearer to heaven through football than through the study of the Bhagavad-Gita’ (Lectures from Colombo to Almora, chapter: The work before us). ಭಗವದ್ಗೀತೆಯ ಅಧ್ಯಯನಕ್ಕಿಂತ ಫುಟ್ಬಾಲ್ ಆಡಿದರೆ ನೀವು ಸ್ವರ್ಗಕ್ಕೆ ಹತ್ತಿರವಾಗಬಹುದೆಂಬುದು ಇದರರ್ಥ. ಆದರೆ ಭಗವದ್ಗೀತೆಯ ಅಧ್ಯಯನ ವ್ಯರ್ಥ, ಬದಲಿಗೆ ಫುಟ್ಬಾಲ್ ಆಡಿ ಎಂದು ಇದರರ್ಥವಲ್ಲ. ಯಾವುದೇ ವಿ?ಯವನ್ನು ಅರ್ಥೈಸಿಕೊಳ್ಳಲು ನಾವು ಸಶಕ್ತರಿರಬೇಕು, ದೃಢಕಾಯರಾಗಿರಬೇಕು. ಆಗ ಮಾತ್ರ ಭಗವದ್ಗೀತೆಯಂತಹ ಗಹನ ವಿ?ಯವನ್ನು ಅರ್ಥೈಸಿಕೊಳ್ಳಲು ಸಾಧ್ಯ. ಹಾಗಾಗಿ ಮೊದಲು ಶಕ್ತಿವಂತರಾಗಿರಿ. ಶಕ್ತಿವಂತರಾಗಲು ಫುಟ್ಬಾಲ್ ಆಡಿ ಎಂಬುದು ಸ್ವಾಮಿಜೀಯವರ ಈ ಪ್ರಸಿದ್ಧ ಮಾತಿನ ಹಿಂದಿನ ಆಶಯವಾಗಿತ್ತು. ಏಕೆಂದರೆ ಅವರ ಅದೇ ಉಪನ್ಯಾಸದ ಮುಂದುವರಿದ ಭಾಗದಲ್ಲಿ ಸ್ವಾಮಿಜಿ, Strength is Life, Weakness is Death (ಶಕ್ತಿಯೇ ಜೀವನ, ದೌರ್ಬಲ್ಯವೇ ಸಾವು) ಎಂದಿದ್ದಾರೆ. ಶಕ್ತಿಯನ್ನು ಆರಾಧಿಸಿ (Worship the Strength – ಬಲಮುಪಾಸ್ವ) ಎಂದೂ ಸಾರಿದ್ದಾರೆ. ವಿವೇಕಾನಂದರು ಜನಿಸಿದ ಪಶ್ಚಿಮ ಬಂಗಾಲ ರಾಜ್ಯದಲ್ಲಿ ಆಗಿನ ಕಾಲದಲ್ಲಿ ಫುಟ್ಬಾಲ್ ಆಟ ಅತ್ಯಂತ ಜನಪ್ರಿಯವಾಗಿತ್ತು. ಬಂಗಾಲಿಗಳು ಫುಟ್ಬಾಲ್ ಆಟದಲ್ಲಿ ಪರಿಣತರಾಗಿದ್ದರು. ಇದರ ಹಿನ್ನೆಲೆಯಲ್ಲೇ ವಿವೇಕಾನಂದರು ಮೇಲಿನ ತಮ್ಮ ಪ್ರಸಿದ್ಧ ಹೇಳಿಕೆಯನ್ನು ವ್ಯಕ್ತಪಡಿಸಿರಬಹುದು.
ಮೊದಲು ಶಕ್ತಿವಂತರಾಗಿ, ದೃಢಕಾಯರಾಗಿ; ಅನಂತರ ಅಧ್ಯಾತ್ಮ, ಧಾರ್ಮಿಕ, ವೈಚಾರಿಕ, ವೈಜ್ಞಾನಿಕ ವಿ?ಯಗಳನ್ನು ತಿಳಿದುಕೊಳ್ಳಿ ಎಂಬ ವಿವೇಕಾನಂದರ ಬೋಧನೆಯನ್ನು ಭಾರತೀಯರು ಸರಿಯಾದ ರೀತಿಯಲ್ಲಿ ಅರ್ಥಮಾಡಿಕೊಂಡಿದ್ದಿದ್ದರೆ, ಅರ್ಥಮಾಡಿಕೊಂಡಿದ್ದನ್ನು ಕೃತಿಗಿಳಿಸಿದ್ದಿದ್ದರೆ ಭಾರತ ಇಂದು ಒಲಿಂಪಿಕ್ಸ್ ಕೂಟಗಳಲ್ಲಿ ಪದಕ ಪಟ್ಟಿಯಲ್ಲಿ ಅಗ್ರಸ್ಥಾನ ಅಲಂಕರಿಸುತ್ತಿತ್ತೇನೋ.
ಇತಿಹಾಸ
ಭಾರತ ಒಲಿಂಪಿಕ್ಸ್ ಕೂಟದಲ್ಲಿ ಮೊಟ್ಟಮೊದಲು ಭಾಗವಹಿಸಿದ್ದು ೧೯೦೦ರಲ್ಲಿ (ಪ್ಯಾರಿಸ್). ಭಾಗವಹಿಸಿದ ಸ್ಪರ್ಧಿ ಮಾತ್ರ ಒಬ್ಬರೇ. ಆ ಸ್ಪರ್ಧಿಯೇ ನಾರ್ಮನ್ ಪ್ರಿಚರ್ಡ್. ತಮಾ?ಯೆಂದರೆ ಏಕೈಕ ಸ್ಪರ್ಧಿ ಪಾಲ್ಗೊಂಡಿದ್ದರೂ ಆತ ಪುರು?ರ ೨೦೦ ಮೀಟರ್ ಓಟದ ಸ್ಪರ್ಧೆಯಲ್ಲಿ ೨ ಬೆಳ್ಳಿ ಪದಕಗಳನ್ನು ಗಳಿಸಿ ಎಲ್ಲರ ಹುಬ್ಬೇರುವಂತೆ ಮಾಡಿದ್ದರು. ೧೯೨೦ರಿಂದ ಒಲಿಂಪಿಕ್ಸ್ಗೆ ಭಾರತದಿಂದ ವಿವಿಧ ಆಟೋಟಗಳಲ್ಲಿ ಪಾಲ್ಗೊಳ್ಳಲು ತಂಡವನ್ನು ಕಳಿಸುವ ಪರಿಪಾಟಿ ಆರಂಭವಾಯಿತು. ೧೯೨೮ರಿಂದ ೧೯೫೨ರವರೆಗೆ ನಡೆದ ಒಲಿಂಪಿಕ್ಸ್ ಕೂಟಗಳಲ್ಲಿ ಭಾರತ ಸತತವಾಗಿ ಹಾಕಿ ಆಟದಲ್ಲಿ ಚಿನ್ನದ ಪದಕ ಗಳಿಸಿದ್ದು ಒಂದು ಸ್ಮರಣೀಯ ಅಧ್ಯಾಯ. ಆ ಬಳಿಕವೂ ಹಾಕಿ ಆಟದಲ್ಲಿ ಚಿನ್ನ ಇಲ್ಲವೇ ಬೆಳ್ಳಿ ಅಥವಾ ಕಂಚಿನ ಪದಕ ಭಾರತಕ್ಕೆ ಇದ್ದೇ ಇರುತ್ತಿತ್ತು. ೧೯೮೦ರ ಮಾಸ್ಕೋ ಒಲಿಂಪಿಕ್ಸ್ನಲ್ಲಿ ಭಾರತ ಹಾಕಿಯಲ್ಲಿ ಚಿನ್ನದ ಪದಕ ಪಡೆದಿದ್ದೇ ಕೊನೆಯ ಬಾರಿ. ಅನಂತರ ಹಾಕಿಯಲ್ಲಿ ಭಾರತಕ್ಕೆ ಇದುವರೆಗೆ ಯಾವುದೇ ಒಲಿಂಪಿಕ್ಸ್ ಕೂಟಗಳಲ್ಲಿ ಪದಕ ಬರದೇ ಇರಲು ಕಾರಣ ಮುಖ್ಯ. ಹಾಕಿ ಆಟದ ಬದಲಾದ ರೀತಿ, ನಿಯಮಗಳು, ಉಳಿದ ದೇಶಗಳು ಹಾಕಿಯಲ್ಲಿ ಪರಿಣತರಾದದ್ದು, ಬದಲಾದ ಆಟದ ಶೈಲಿಗೆ ಭಾರತ ಅ?ಗಿ ಒಗ್ಗಿಕೊಳ್ಳದಿದ್ದುದು.
ಆದರೆ ಟೆನಿಸ್, ಶೂಟಿಂಗ್, ಬಾಕ್ಸಿಂಗ್, ರೆಸ್ಲಿಂಗ್, ಬ್ಯಾಡ್ಮಿಂಟನ್ ಆಟಗಳಲ್ಲಿ ಭಾರತ ೧೯೯೬ರಿಂದ ಒಂದಲ್ಲ ಒಂದು ಒಲಿಂಪಿಕ್ಸ್ ಪದಕ ಗಳಿಸುತ್ತಲೇ ಬಂದಿದೆ. ೧೯೯೬ರ ಅಟ್ಲಾಂಟಾ ಒಲಿಂಪಿಕ್ಸ್ನಲ್ಲಿ ಲಿಯಾಂಡರ್ ಪೇಸ್ಗೆ ಟೆನಿಸ್ನಲ್ಲಿ ಕಂಚಿನ ಪದಕ; ೨೦೦೦ದ ಸಿಡ್ನಿ ಒಲಿಂಪಿಕ್ಸ್ನಲ್ಲಿ ಕರ್ಣಂ ಮಲ್ಲೇಶ್ವರಿಗೆ ವೆಯಿಟ್ ಲಿಫ್ಟಿಂಗ್ನಲ್ಲಿ ಕಂಚು; ೨೦೦೪ರ ಅಥೆನ್ಸ್ ಒಲಿಂಪಿಕ್ಸ್ನಲ್ಲಿ ಶೂಟಿಂಗ್ನಲ್ಲಿ ರಾಜ್ಯವರ್ಧನ ಸಿಂಗ್ ರಾಠೋಡ್ಗೆ ಬೆಳ್ಳಿ; ೨೦೦೮ರ ಬೀಜಿಂಗ್ ಒಲಿಂಪಿಕ್ಸ್ನಲ್ಲಿ ಶೂಟಿಂಗ್ನಲ್ಲಿ ಅಭಿನವ ಬಿಂದ್ರಾಗೆ ಚಿನ್ನ, ಬಾಕ್ಸಿಂಗ್ನಲ್ಲಿ ವಿಜೇಂದರ್ ಸಿಂಗ್ಗೆ ಕಂಚು; ೨೦೧೨ರ ಲಂಡನ್ ಒಲಿಂಪಿಕ್ಸ್ನಲ್ಲಿ ಶೂಟಿಂಗ್ನಲ್ಲಿ ವಿಜಯಕುಮಾರ್ಗೆ ಬೆಳ್ಳಿ, ರೆಸ್ಲಿಂಗ್ನಲ್ಲಿ ಸುನೀಲ್ ಕುಮಾರ್ಗೆ ಬೆಳ್ಳಿ, ಬ್ಯಾಡ್ಮಿಂಟನ್ನಲ್ಲಿ ಸೈನಾ ನೆಹ್ವಾಲ್ಗೆ ಕಂಚು, ಬಾಕ್ಸಿಂಗ್ನಲ್ಲಿ ಮೇರಿಕೋಮ್ಗೆ ಕಂಚು, ೧೦ ಎಂ. ಏರ್ ರೈಫಲ್ ಶೂಟಿಂಗ್ನಲ್ಲಿ ಗಗನ್ ನಾರಂಗ್ಗೆ ಕಂಚು ಹಾಗೂ ಪುರು?ರ ೬೦ ಕೆ.ಜಿ. ಫ್ರೀಸ್ಟೈಲ್ ರೆಸ್ಲಿಂಗ್ನಲ್ಲಿ ಯೋಗೇಶ್ವರ ದತ್ಗೆ ಕಂಚು; ೨೦೧೬ರ ರಿಯೋ ಡಿ ಜನೈರೋ ಒಲಿಂಪಿಕ್ಸ್ನಲ್ಲಿ ಮಹಿಳೆಯರ ಸಿಂಗಲ್ಸ್ನಲ್ಲಿ ಪಿ.ವಿ. ಸಿಂಧುಗೆ ಬೆಳ್ಳಿ ಹಾಗೂ ಮಹಿಳೆಯರ ೫೮ ಕೆ.ಜಿ. ಫ್ರೀಸ್ಟೈಲ್ ರೆಸ್ಲಿಂಗ್ನಲ್ಲಿ ಸಾಕ್ಷಿ ಮಲಿಕ್ಗೆ ಕಂಚು – ಹೀಗೆ ಭಾರತ ಇದುವರೆಗೆ ೯ ಚಿನ್ನ, ೭ ಬೆಳ್ಳಿ ಹಾಗೂ ೧೨ ಕಂಚು ಸೇರಿದಂತೆ ಒಲಿಂಪಿಕ್ಸ್ನಲ್ಲಿ ಒಟ್ಟು ೨೮ ಪದಕಗಳನ್ನು ತನ್ನ ಮುಡಿಗೇರಿಸಿಕೊಂಡಿದೆ. ಈ ಪೈಕಿ ಹಾಕಿಯಲ್ಲೇ ೧೧ ಪದಕ ಗಳಿಸಿದ್ದು ಗಮನಾರ್ಹ.
ಛಲಭರಿತ ಆಟಗಾರ್ತಿ – ಅನಿತಾ ಪಾಲ್ ದೊರೈ
’ಎ’ ಗ್ರೇಡ್ ಎಲೀಟ್ ಬಾಸ್ಕೆಟ್ಬಾಲ್ನ ಕ್ರಮಾಂಕ ಪಟ್ಟಿಯಲ್ಲಿ ಅಗ್ರ ನಾಲ್ಕರೊಳಗೆ ಸ್ಥಾನಗಳಿಸಿದ ದೇಶದ ಮೊದಲ ಆಟಗಾರ್ತಿ – ಅನಿತಾ ಪಾಲ್ ದೊರೈ. ಫಿಬಾ ಏಷ್ಯಾ ೩ ಆನ್ ೩ ಕೂಟದಲ್ಲಿ ಭಾರತಕ್ಕೆ ಮೊದಲ ಚಿನ್ನ ಗೆದ್ದುಕೊಟ್ಟ ಹೆಗ್ಗಳಿಕೆ ಅನಿತಾ ಪಾಲ್ ದೊರೈ ಅವರದ್ದು. ಬಾಲ್ಯದಿಂದಲೇ ಬಾಸ್ಕೆಟ್ಬಾಲ್ನಲ್ಲಿ ಆಸಕ್ತಿ ಹೊಂದಿದ್ದ ಇವರು ಸಬ್ಜೂನಿಯರ್, ಜೂನಿಯರ್ ಮತ್ತು ಯೂತ್ ಚಾಂಪಿಯನ್ಶಿಪ್ಗಳಲ್ಲಿ ಭಾಗವಹಿಸಿ ಸೈ ಎನಿಸಿಕೊಂಡಿದ್ದರು. ಆ ಬಳಿಕ ಸತತ ೧೬ ವರ್ಷಗಳಿಂದ ದೇಶಕ್ಕಾಗಿ ಆಟವಾಡುತ್ತಿದ್ದಾರೆ. ೨೦೧೫ರಲ್ಲಿ ಕ್ರೀಡಾ ಬದುಕಿಗೆ ನಿವೃತ್ತಿ ಹೇಳುವ ಮನಸ್ಸು ಮಾಡಿದ್ದರೂ ಭಾರತ ಬಾಸ್ಕೆಟ್ಬಾಲ್ ತಂಡ ’ಎ’ ಡಿವಿಜನ್ನಿಂದ ’ಬಿ’ ಡಿವಿ?ನ್ಗೆ ಹಿಂಬಡ್ತಿ ಹೊಂದಿದ ಕಾರಣ ತಮ್ಮ ನಿವೃತ್ತಿಯ ನಿರ್ಧಾರವನ್ನು ಕೈಬಿಟ್ಟು ಆಟದಲ್ಲಿ ಮುಂದುವರಿದರು.
೨೦೧೨ರಲ್ಲಿ ಏಷ್ಯನ್ ಬೀಚ್ ಬಾಸ್ಕೆಟ್ಬಾಲ್ ಚಾಂಪಿಯನ್ ಶಿಪ್ನಲ್ಲಿ ಮೊದಲ ಚಿನ್ನದ ಪದಕವನ್ನು ಗೆಲ್ಲುವ ಮೂಲಕ ತಮ್ಮ ಗೆಲವಿನ ದಾರಿಯನ್ನು ತೆರೆದುಕೊಂಡರು. ಚೊಚ್ಚಲ ಮಗುವಿಗೆ ಜನ್ಮ ನೀಡಿದ ಒಂದೇ ತಿಂಗಳಿನಲ್ಲಿ ಅಭ್ಯಾಸ ಆರಂಭಿಸಿ ಎಲ್ಲರ ಹುಬ್ಬೇರುವಂತೆ ಮಾಡಿದ ಸಾಧನೆ ಇವರದ್ದು. ಹೆರಿಗೆಯಾದ ಬಳಿಕ ವೈದ್ಯರ ಸಲಹೆಯನ್ನು ತೆಗೆದುಕೊಂಡು ಮನೆಯವರ ಸಹಕಾರದೊಂದಿಗೆ ಅಭ್ಯಾಸ ಶುರುಮಾಡಿದರು. ಆರು ತಿಂಗಳ ಬಾಣಂತಿಯಾಗಿದ್ದಾಗಲೇ ಮತ್ತೆ ರಾಷ್ಟ್ರೀಯ ತಂಡದಲ್ಲಿ ಆಡುವ ಮೂಲಕ ತಮ್ಮ ವೃತ್ತಿಜೀವನಕ್ಕೆ ಅಮೂಲ್ಯವಾದ ತಿರುವನ್ನು ನೀಡಿದರು. ತಮ್ಮ ೩೨ರ ವಯಸ್ಸಿನಲ್ಲಿಯೂ ಛಲವನ್ನು ಬಿಡದೆ ಆಡುತ್ತಿರುವ ಇವರು – ಭಾರತ ತಂಡವನ್ನು ಮತ್ತೆ ’ಎ’ ಡಿವಿಜನ್ಗೆ ಬಡ್ತಿ ತಂದುಕೊಡದೆ ನಿವೃತ್ತಿ ಹೊಂದುವುದಿಲ್ಲ – ಎನ್ನು ದಿಟ್ಟ ನಿರ್ಧಾರವನ್ನು ತಳೆದಿದ್ದಾರೆ.
ಭಾರತವೇಕೆ ಹೀಗೆ?
ಭಾರತದಂತಹ ೧೨೫ ಕೋಟಿ ಜನಸಂಖ್ಯೆಯಿರುವ ಬೃಹತ್ ದೇಶ ಇದುವರೆಗೆ ಒಲಿಂಪಿಕ್ಸ್ನಲ್ಲಿ ಗಳಿಸಿರುವ ಪದಕಗಳ ಸಂಖ್ಯೆ ಇಷ್ಟೇನಾ ಎಂದು ಹಲವರಿಗೆ ನಿರಾಶೆಯಾಗಬಹುದು. ಬರ್ಮುಡಾ, ಡಿಜಿಚೌಟಿ, ಎರಿಟ್ರಿಯಾ, ಗಯಾನಾ, ಇರಾಕ್, ಐವರಿ ಕೋಸ್ಟ್, ಮಾರಿ?ಸ್, ಪರಗ್ವೆ, ಸೆನೆಗಲ್, ಸೂಡಾನ್, ಟೋಗೋ, ಟೋಂಗಾ, ಯುಎಇ ಮೊದಲಾದ ಭಾರತಕ್ಕೆ ಏನೇನೂ ಸರಿಸಾಟಿಯಾಗದ ದೇಶಗಳು ಒಲಿಂಪಿಕ್ಸ್ ಕೂಟದಲ್ಲಿ ಒಂದಲ್ಲ ಒಂದು ಆಟದಲ್ಲಿ ಚಿನ್ನದ ಪದಕಗಳನ್ನು ಕೊಳ್ಳೆಹೊಡೆದಿರುವಾಗ ಭಾರತವೇಕೆ ಹೀಗೆ? – ಎಂಬ ಪ್ರಶ್ನೆ ಏಳುವುದು ಸಹಜವೇ.
ಕ್ರೀಡಾ ಕ್ಷೇತ್ರದಲ್ಲೀಗ ಮಿಂಚು
ಹಾಗೆಂದ ಮಾತ್ರಕ್ಕೆ ಭಾರತ ಕ್ರೀಡಾಕ್ಷೇತ್ರದಲ್ಲಿ ಅತ್ಯಂತ ಕಳಪೆ ಎಂದು ಭಾವಿಸಬೇಕಾದ ಅಗತ್ಯವಿಲ್ಲ. ಕಬಡ್ಡಿ, ಕ್ರಿಕೆಟ್, ಬ್ಯಾಡ್ಮಿಂಟನ್, ಸ್ನೂಕರ್, ಚೆಸ್, ಟೆನಿಸ್, ಶೂಟಿಂಗ್, ರೆಸ್ಲಿಂಗ್ ಮಂತಾದ ಕ್ರೀಡೆಗಳಲ್ಲಿ ಭಾರತವೀಗ ಜಾಗತಿಕವಾಗಿ ಪ್ರಕಾಶಿಸತೊಡಗಿದೆ. ಜಾಗತಿಕ ಮಟ್ಟದ ಕ್ರೀಡಾಳುಗಳ? ಸಾಮರ್ಥ್ಯ ಪ್ರದರ್ಶಿಸಿ ಹಲವು ದಾಖಲೆಗಳನ್ನೂ ಬರೆದಿದೆ. ಜಡ್ಡುಗಟ್ಟಿ ಹೋಗಿದ್ದ ಕ್ರೀಡಾಪ್ರಾಧಿಕಾರಗಳಿಗೆ, ವಿವಿಧ ಕ್ರೀಡಾ ಸಂಸ್ಥೆಗಳಿಗೆ ೨೦೧೪ರಲ್ಲಿ ಮೋದಿ ಸರ್ಕಾರ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದ ಬಳಿಕ ನವಚೈತನ್ಯ ಸ್ಫುರಿಸತೊಡಗಿದೆ. ಮುರುಟಿ ಮೂಲೆಪಾಲಾಗಬೇಕಿದ್ದ ಹಲವು ಕ್ರೀಡಾಪ್ರತಿಭೆಗಳಿಗೆ ಸೂಕ್ತ ಅವಕಾಶ ದೊರೆತು, ಅವರು ಭಾರತೀಯ ಕ್ರೀಡಾ ಕ್ಷಿತಿಜದಲ್ಲಿ ಮಿಂಚು ಹರಿಸತೊಡಗಿದ್ದಾರೆ.
ನಮ್ಮದಲ್ಲದ, ವಿದೇಶೀ ಆಟವಾಗಿರುವ ಕ್ರಿಕೆಟ್ನಲ್ಲಿ ಜಾಗತಿಕವಾಗಿ ಈಗ ಭಾರತದ್ದೇ ಪಾರುಪತ್ಯ. ಟೆಸ್ಟ್, ಏಕದಿನ ಪಂದ್ಯಗಳಲ್ಲಿ ನಂ.೧ ಸ್ಥಾನಕ್ಕೇರಿರುವ ಭಾರತ ಟ್ವೆಂಟಿ-೨೦ ಕ್ರಿಕೆಟ್ನಲ್ಲೂ ನಂ.೧ ಸ್ಥಾನಕ್ಕೆ ಲಗ್ಗೆಹಾಕಿದೆ. ಒಂದು ಕಾಲದಲ್ಲಿ ಆಸ್ಟ್ರೇಲಿಯಾ, ವೆಸ್ಟ್ಇಂಡೀಸ್, ಇಂಗ್ಲೆಂಡ್ ತಂಡಗಳು ಕ್ರಿಕೆಟ್ನಲ್ಲಿ ಬಲಿ?, ಸೋಲಿಸಲಾಗದ ತಂಡಗಳೆಂಬ ಖ್ಯಾತಿ ಹೊಂದಿದ್ದವು. ಆದರೀಗ ಆ ತಂಡಗಳೆಲ್ಲ ಭಾರತದೆದುರು ಮಂಡಿಯೂರಿವೆ. ಈಚೆಗೆ ಮುಕ್ತಾಯಗೊಂಡ ಏಕದಿನ, ಟ್ವೆಂಟಿ-೨೦ ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಬಲಿ? ಆಸ್ಟ್ರೇಲಿಯಾ ಭಾರತದೆದುರು ಸಂಪೂರ್ಣ ಶರಣಾಗಿದೆ. ಭಾರತದ ತಂಡದಲ್ಲಿ ಈಗಿರುವುದು ಹೆಚ್ಚಾಗಿ ಅನನುಭವಿ, ಆದರೆ ಪ್ರತಿಭಾವಂತ ಆಟಗಾರರು. ಕುಲ್ದೀಪ್ ಯಾದವ್, ಯಜುವೇಂದ್ರ ಜಾಹಲ್ರ ಸ್ಪಿನ್ ಮೋಡಿಗೆ ವಾರ್ನರ್ ಪಿಂಚ್, ಮ್ಯಾಕ್ಸ್ವೆಲ್ರಂತಹ ಆಸೀಸ್ನ ಬಲಿ? ಬ್ಯಾಟ್ಸ್ಮನ್ಗಳು ಬೆಚ್ಚಿಬಿದ್ದಿದ್ದಾರೆ. ಐಪಿಎಲ್ ಕ್ರಿಕೆಟ್ ಸರಣಿಯಿಂದಾಗಿ ಈಗ ಸಮರ್ಥ ಕ್ರಿಕೆಟಿಗರ ದಂಡೇ ತಯಾರಾಗಿಬಿಟ್ಟಿದೆ. ಹಾಗಾಗಿ ಪ್ರತಿಬಾರಿ ತಂಡಕ್ಕೆ ಆಯ್ಕೆ ಪ್ರಕ್ರಿಯೆ ನಡೆಯವಾಗ ದೊಡ್ಡ ಪೈಪೋಟಿಯೇ ಏರ್ಪಟ್ಟು ಆಯ್ಕೆಗಾರರಿಗೆ ಯಾರನ್ನು ಆರಿಸಬೇಕೆಂಬ ತಲೆನೋವು ಬಾಧಿಸತೊಡಗಿದೆ! ಟೆಸ್ಟ್, ಏಕದಿನ, ಟ್ವೆಂಟಿ-೨೦ – ಹೀಗೆ ಮೂರು ಪ್ರಕಾರದ ಕ್ರಿಕೆಟ್ ತಂಡಗಳಿಗೆ ಹೊಸಬರನ್ನು ಆಯ್ಕೆ ಮಾಡಿದ ಬಳಿಕವೂ ಇನ್ನು ಮೂರ್ನಾಲ್ಕು ತಂಡಗಳಾಗುವಷ್ಟು ಅಂತಾರಾಷ್ಟ್ರಿಯ ಮಟ್ಟದ ಕ್ರಿಕೆಟಿಗರು ಅವಕಾಶಗಳಿಗಾಗಿ ಬಾಗಿಲು ಕಾಯುತ್ತಾ ನಿಂತಿದ್ದಾರೆ!
೨೦೧೬ರ ವರ್ಷ ಭಾರತದ ಪಾಲಿಗೆ ಸುವರ್ಣಾಕ್ಷರಗಳಲ್ಲಿ ಬರೆದಿಡುವಂತಹದು. ವರ್ಷದ ಐಸಿಸಿ ಕ್ರಿಕೆಟಿಗ ಹಾಗೂ ಐಸಿಸಿ ಟೆಸ್ಟ್ ಕ್ರಿಕೆಟಿಗರೆಂದು ಆಯ್ಕೆಯಾದ ಆಟಗಾರ ರವಿಚಂದ್ರನ್ ಅಶ್ವಿನ್ ಎಂಬ ಸ್ಪಿನ್ ಮಾಂತ್ರಿಕ. ನಂ.೧ ಬೌಲರ್ ಎಂಬ ಪಟ್ಟವೂ ಅಶ್ವಿನ್ ಪಾಲಾಯಿತು. ಅದೇ ವ? ನಂ.೨ ಬೌಲರ್ ಪಟ್ಟವು ರವೀಂದ್ರ ಜಡೇಜಾಗೆ ದೊರಕಿತು. ೧೯೭೦ರಲ್ಲಿ ಭಾರತ ತಂಡದ ಬಿಷನ್ಸಿಂಗ್ ಬೇಡಿ ಹಾಗೂ ಬಿ.ಎಸ್. ಚಂದ್ರಶೇಖರ್ ಕ್ರಮವಾಗಿ ಜಾಗತಿಕಮಟ್ಟದ ನಂ.೧ ಮತ್ತು ನಂ.೨ ಬೌಲರ್ ಆಗಿ ಖ್ಯಾತಿ ಪಡೆದಿದ್ದರು. ಕರುಣ್ ನಾಯರ್ ತಾನಾಡಿದ ೩ನೇ ಟೆಸ್ಟ್ ಇನ್ನಿಂಗ್ಸ್ನಲ್ಲೇ ಅಜೇಯ ೩೦೩ ರನ್ ಸಿಡಿಸಿ ಲೆನ್ ಹಟನ್ ದಾಖಲೆ ಅಳಿಸಿಹಾಕಿದರು. ಕರುಣ್ ನಾಯರ್ ಇಂತಹ ದಾಖಲೆ ನಿರ್ಮಿಸಿದ್ದು ಚೆನ್ನೈನಲ್ಲಿ ಇಂಗ್ಲೆಂಡ್ ವಿರುದ್ಧದ ನಾಲ್ಕನೇ ಟೆಸ್ಟ್ ಪಂದ್ಯದಲ್ಲಿ. ಅದೇ ಪಂದ್ಯದಲ್ಲಿ ಭಾರತ ೭ ವಿಕೆಟ್ಗೆ ೭೫೯ ರನ್ ಸೇರಿಸಿ ಇನ್ನೊಂದು ದಾಖಲೆ ಬರೆಯಿತು.
ಇಂಗ್ಲೆಂಡ್, ವೆಸ್ಟ್ ಇಂಡೀಸ್, ಶ್ರೀಲಂಕಾ, ಆಸ್ಟೇಲಿಯಾ ತಂಡಗಳ ವಿರುದ್ಧ ಭಾರತ ನಿರಂತರವಾಗಿ ಸರಣಿಗಳನ್ನು ಗೆಲ್ಲುತ್ತಾ ಬಂದಿದ್ದು, ’ಸೋಲಿಲ್ಲದ ಸರದಾರ’ ಎಂಬ ಬಿರುದು ಗಳಿಸಿರುವುದು ಭಾರತದ ಪಾಲಿಗೆ ಹೆಮ್ಮೆಯ ಸಂಗತಿ.
ಮಹಿಳಾ ಕ್ರಿಕೆಟ್ನ ಹೊಸಶಕೆ
ಪುರುಷರ ಕ್ರಿಕೆಟ್ನಷ್ಟು ಭಾರತೀಯ ಮಹಿಳಾ ಕ್ರಿಕೆಟ್ ತಂಡವೂ ಈಗ ಜಾಗತಿಕವಾಗಿ ಸಂಚಲನ ಸೃಷ್ಟಿಸಿರುವುದು ಹೊಸ ಬೆಳವಣಿಗೆ. ೨೦೧೬ರ ಡಿಸೆಂಬರ್ ೪ರಂದು ನಡೆದ ಮಹಿಳೆಯರ ಏ? ಕಪ್ ಫೈನಲ್ ಪಂದ್ಯದಲ್ಲಿ ಭಾರತ ಬರೆದದ್ದು ಗೆಲವಿನ ದಾಖಲೆ. ಹರ್ಮನ್ಕೌರ್ ನೇತೃತ್ವದ ಭಾರತ ವನಿತೆಯರ ತಂಡ ಫೈನಲ್ ಪಂದ್ಯದಲ್ಲಿ ೧೭ ರನ್ ಅಂತರದಲ್ಲಿ ಪಾಕಿಸ್ತಾನ ತಂಡವನ್ನು ಮಣಿಸಿ ಪ್ರಶಸ್ತಿಯ ಮಲ್ಲಿಗೆಯನ್ನು ಮುಡಿಗೇರಿಸಿತ್ತು.
ಅನಂತರ ೨೦೧೭ರ ಜುಲೈನಲ್ಲಿ ಲಂಡನ್ನಲ್ಲಿ ನಡೆದ ಐಸಿಸಿ ಮಹಿಳಾ ಏಕದಿನ ವಿಶ್ವಕಪ್ನಲ್ಲಿ ಸತತ ೪ ಪಂದ್ಯಗಳಲ್ಲಿ ಗೆಲವು ಸಾಧಿಸಿ ಫೈನಲ್ ತಲಪಿದ್ದು ಒಂದು ಅಮೋಘ ಸಾಧನೆ. ಫೈನಲ್ ಪಂದ್ಯದಲ್ಲೂ ಗೆಲವು ಸನಿಹದಲ್ಲೇ ಇತ್ತು. ಆದರೆ ಅಂತ್ಯದಲ್ಲಿ ಒತ್ತಡವನ್ನು ನಿಭಾಯಿಸಲಾಗದೆ ಸೋತು ಕೇವಲ ೯ ರನ್ಗಳಿಂದ ಪ್ರಶಸ್ತಿ ವಂಚಿತರಾಗಬೇಕಾಯಿತು.
ಭಾರತೀಯ ಮಹಿಳೆಯರು ಕೂದಲೆಳೆಯ ಅಂತರದಲ್ಲಿ ವಿಶ್ವಕಪ್ ಪ್ರಶಸ್ತಿ ವಂಚಿತರಾದರೂ ಅವರ ಸಾಧನೆಯನ್ನು ಮಾತ್ರ ಕೊಂಡಾಡದವರೇ ಇಲ್ಲ. ಗೆದ್ದಿದ್ದು ಇಂಗ್ಲೆಂಡ್ ತಂಡವಾದರೂ ಎಲ್ಲರ ಮೆಚ್ಚುಗೆ ಹರಿದದ್ದು ಮಾತ್ರ ಭಾರತೀಯರ ವನಿತೆಯರತ್ತ. ಹಾಲಿ ಚಾಂಪಿಯನ್ ಆಸ್ಟ್ರೇಲಿಯಾವನ್ನು ಸೆಮಿಫೈನಲ್ನಲ್ಲಿ ಸದೆಬಡಿದ ಬಳಿಕ ಇಡೀ ಭಾರತವೇ ಮಹಿಳಾ ಕ್ರಿಕೆಟಿಗರನ್ನು ಅಚ್ಚರಿಯಿಂದ ದಿಟ್ಟಿಸಿತ್ತು.
ತಮಗಿದ್ದ ಹಲವಾರು ಕೊರತೆಗಳ ಹೊರತಾಗಿಯೂ ಭಾರತೀಯ ವನಿತೆಯರು ನೀಡಿದ ನಿರ್ವಹಣೆ ಸಾಮಾನ್ಯದ್ದಲ್ಲ. ಪುರು? ಕ್ರಿಕೆಟಿಗರಿಗೆ ನೀಡುವಷ್ಟೇ ಆದ್ಯತೆ, ಸವಲತ್ತುಗಳನ್ನು ಮಹಿಳೆಯರಿಗೂ ನೀಡಿರುತ್ತಿದ್ದರೆ, ದೇಶೀಯವಾಗಿಯೂ ಅವರಿಗೆ ಹಲವಾರು ಟೂರ್ನಿಗಳನ್ನಾಡುವ ಅವಕಾಶ ಕಲ್ಪಿಸಿದ್ದಿದ್ದರೆ, ಐಪಿಎಲ್ ಮಾದರಿಯ ಸರಣಿ ಏರ್ಪಡಿಸಿದ್ದಿದ್ದರೆ ಅವರೂ ಪ್ರಶಸ್ತಿ ಗೆಲ್ಲುತ್ತಿದ್ದುದು ನಿಸ್ಸಂಶಯ. ವೈಯಕ್ತಿಕ ನೆಲೆಯಲ್ಲಿ ಕೆಲವು ವನಿತಾ ಕ್ರಿಕೆಟಿಗರು ತೋರಿದ ಅಸಾಮಾನ್ಯ ಸಾಧನೆ ಸ್ಮರಣೀಯ. ಮಿಥಾಲಿ ರಾಜ್ (ನಾಯಕಿ) ೬೦೦೦ಕ್ಕಿಂತ ಹೆಚ್ಚು ರನ್ ಗಳಿಸಿದ್ದು, ಜೂಲನ್ ಗೋಸ್ವಾಮಿ ೩೫ರ ವಯಸ್ಸಿನಲ್ಲೂ ಪರಿಣಾಮಕಾರಿ ಬೌಲಿಂಗ್ ಮಾಡಿದ್ದು, ಹರ್ಮನ್ಪ್ರೀತ್ ಕೌರ್ ಅವರ ಸ್ಫೋಟಕ ೧೭೧ ರನ್ಗಳ ಇನ್ನಿಂಗ್ಸ್, ಕರ್ನಾಟಕದ ವೇದಾ ಕೃ?ಮೂರ್ತಿ ಮತ್ತು ರಾಜೇಶ್ವರಿ ಗಾಯಕ್ವಾಡ್ ಬ್ಯಾಟಿಂಗ್ ಮತ್ತು ಬೌಲಿಂಗ್ನಲ್ಲಿ ತೋರಿದ ಸಾಧನೆ ಶ್ಲಾಘನೀಯ. ಒಟ್ಟಾರೆ ಹೊಸ ಶಕೆಯತ್ತ ಭಾರತದ ಮಹಿಳಾ ಕ್ರಿಕೆಟ್ ದಾಪುಗಾಲು ಹಾಕಿರುವುದು ನಿಜ. ತಂಡದ ಸಾಧನೆಗೆ ಪ್ರಧಾನಿ ನರೆಂದ್ರ ಮೋದಿ ಸೇರಿದಂತೆ ಗಣ್ಯಾತಿಗಣ್ಯರೆಲ್ಲ ಅಭಿನಂದನೆ ಸಲ್ಲಿಸಿರುವುದು ಇದಕ್ಕೆ ನಿದರ್ಶನ.
ಕಿರಿಯರ ಪಾರಮ್ಯ
ಹಿರಿಯರ ಕ್ರಿಕೆಟ್ ತಂಡ ಪಾರಮ್ಯ ಮೆರೆದಂತೆ ಕಿರಿಯರ ಕ್ರಿಕೆಟ್ ತಂಡವೂ ಅದೇ ಹಾದಿಯಲ್ಲಿ ತನ್ನ ಹೆಜ್ಜೆಗುರುತುಗಳನ್ನು ಮೂಡಿಸಿರುವುದು ಇನ್ನೊಂದು ಗಮನಾರ್ಹ ಅಂಶ. ಕೊಲಂಬೋದಲ್ಲಿ ೨೦೧೬ರಲ್ಲಿ ಸತತ ಮೂರನೇ ಬಾರಿಗೆ ಕಿರಿಯರ ತಂಡ ಏ? ಚಾಂಪಿಯನ್ ಪಟ್ಟ ಅಲಂಕರಿಸಿ ಹ್ಯಾಟ್ರಿಕ್ ಸಾಧನೆ ಮಾಡಿದೆ. ಈ ಹಿಂದೆ, ೨೦೧೨ರಲ್ಲಿ ಮಲೇ?ದಲ್ಲಿ ನಡೆದ ಪಂದ್ಯಾವಳಿಯ ಚೊಚ್ಚಲ ಆವೃತ್ತಿಯಲ್ಲಿ ಕಿರಿಯರ ತಂಡ ವಿಶ್ವಕಪ್ ಗೆದ್ದಿತ್ತು. ೨೦೧೪ರಲ್ಲಿ ಯುಎಇಯಲ್ಲಿ ನಡೆದ ದ್ವಿತೀಯ ಆವೃತ್ತಿಯಲ್ಲಿ ಚಾಂಪಿಯನ್ ಆಗಿ ಹೊರಹೊಮ್ಮಿತ್ತು. ಕೊಲಂಬೋದಲ್ಲಿ ಒಂದು ಹಂತದಲ್ಲಿ ಪಂದ್ಯ ಶ್ರೀಲಂಕಾ ಪರ ವಾಲಿತ್ತು. ಆದರೆ ನಾಯಕ ಅಭಿಷೇಕ್ ಶರ್ಮಾ ಅವರ ಅಮೋಘ ಬೌಲಿಂಗ್ ಪರಿಣಾಮವಾಗಿ ಶ್ರೀಲಂಕಾ ಭಾರತಕ್ಕೆ ಶರಣಾಗಬೇಕಾಯಿತು. ಕಿರಿಯರ ತಂಡದಲ್ಲಿರುವ ಹಿಮಾಂಶು ರಾಣಾ, ಶುಭಮನ್ ಗಿಲ್ ಮೊದಲಾದ ಯುವಪ್ರತಿಭೆಗಳು ಭವಿಷ್ಯದ ಟೀಂ ಇಂಡಿಯಾದ ಪ್ರತಿಭಾವಂತ ಆಟಗಾರರಾಗಬಲ್ಲರು.
ಹಾಕಿ – ಮತ್ತೆ ಭಾರತದ ಪ್ರಭುತ್ವ
೨೦೧೬ರಲ್ಲಿ ನಡೆದ ಹಾಕಿ ಕಿರಿಯರ ವಿಶ್ವಕಪ್ನಲ್ಲಿ ಭಾರತ ೧೫ ವ?ಗಳ ಬಳಿಕ ಚಾಂಪಿಯನ್ ಆಗಿ ಹೊರಹೊಮ್ಮಿದ್ದು ಹಾಕಿ ಪ್ರೇಮಿಗಳಿಗೆ ಅತಿದೊಡ್ಡ ಸಂತಸದ ಸನ್ನಿವೇಶ. ಇಂತಹದೊಂದು ಸಾಧನೆಯನ್ನು ಪುನರಾವರ್ತಿಸಲು ೧೫ ವರ್ಷಗಳ ದೀರ್ಘಾವಧಿ ಬೇಕಿತ್ತೇ ಎಂದು ಕುಹಕವಾಡುವವರು ಇರಬಹುದು. ಆದರೆ ಅಂತಹದ್ದೊಂದು ಸಾಧನೆ ಕೊನೆಗೂ ಕಿರಿಯರ ಹಾಕಿ ತಂಡದಿಂದ ಸಾಧ್ಯವಾಯಿತಲ್ಲ ಎಂಬುದು ಮಾತ್ರ ಮಹತ್ತ್ವದ್ದು. ಈ ಟೂರ್ನಿಯಲ್ಲಿ ಭಾರತ ಒಂದೇ ಒಂದು ಪಂದ್ಯವನ್ನೂ ಸೋಲಲಿಲ್ಲ ಎಂಬುದು ಇನ್ನೊಂದು ಪ್ಲಸ್ ಪಾಯಿಂಟ್.
ರಿಯೋ ಒಲಿಂಪಿಕ್ಸ್ನಲ್ಲಿ ಭಾರತಕ್ಕೆ ಪದಕ ತಂದುಕೊಡುವ ನೆಚ್ಚಿನ ಕ್ರೀಡೆಗಳಲ್ಲಿ ಹಾಕಿ ಕೂಡ ಒಂದಾಗಿತ್ತು. ಬ್ರೆಜಿಲ್ಗೆ ತೆರಳುವ ಮುನ್ನ ಲಂಡನ್ನಲ್ಲಿ ನಡೆದ ಚಾಂಪಿಯನ್ ಟ್ರೋಫಿ ಟೂರ್ನಿಯಲ್ಲಿ ಐತಿಹಾಸಿಕ ಬೆಳ್ಳಿ ಗೆದ್ದಿದ್ದ ಪಿ.ಆರ್. ಶ್ರೀಜೇಶ್ ಸಾರಥ್ಯದ ಭಾರತ ಹಾಕಿ ತಂಡ ಪದಕದ ಭರವಸೆ ಮೂಡಿಸಿದ್ದು ಸಹಜ. ಪ್ರಚಂಡ ಫಾರ್ಮ್ನಲ್ಲಿದ್ದ ಭಾರತ ತಂಡದ ವಿಶ್ವಾಸ ಕೂಡ ಮೇರೆ ಮೀರಿತ್ತು. ಅದಕ್ಕೆ ತಕ್ಕಂತೆ ಮೊದಮೊದಲು ಯೋಜನಾಬದ್ಧ ಆಟವಾಡಿದ ಭಾರತ ನಾಕೌಟ್ ಹಂತಕ್ಕೆ ಏರಿತ್ತು. ಆದರೆ ಬೆಲ್ಜಿಯಂ ಎದುರು ೧-೩ ಅಂತರದ ಗೋಲುಗಳ ಸೋಲನನ್ನುಭವಿಸಿದ್ದು ಭಾರತೀಯರನ್ನು ನಿರಾಶೆಗೆ ತಳ್ಳಿತ್ತು. ಏಕೆಂದರೆ ೩೬ ವ?ಗಳ ನಂತರ ಭಾರತ ಹಾಕಿಯಲ್ಲಿ ಒಲಿಂಪಿಕ್ಸ್ ಪದಕ ಗೆಲ್ಲುವ ಅತ್ಯುತ್ತಮ ಅವಕಾಶ ಅದಾಗಿತ್ತು.
ಆದರೇನು, ಹಿರಿಯರ ಹಾಕಿ ತಂಡ ಸಾಧಿಸಲಾಗದ್ದನ್ನು ಕಿರಿಯರ ಹಾಕಿ ತಂಡ ಸಾಧಿಸಿದೆ. ೨೧ ವ?ದೊಳಗಿನ ಕಿರಿಯರ ವಿಶ್ವಕಪ್ ಚಾಂಪಿಯನ್ಶಿಪ್ನ ಕೊನೆಯ ಪ್ರಶಸ್ತಿ ಸುತ್ತಿನ ಸೆಣಸಾಟದಲ್ಲಿ ಕಿರಿಯರ ತಂಡ ಮತ್ತೆ ಎದುರಿಸಿದ್ದು ಅದೇ ಬೆಲ್ಜಿಯಂ ತಂಡವನ್ನು. ಆದರೆ ಹರ್ಜೀತ್ಸಿಂಗ್ ಸಾರಥ್ಯದ ಕಿರಿಯರ ಹಾಕಿ ತಂಡ ೨-೧ ಗೋಲುಗಳಿಂದ ಬೆಲ್ಜಿಯಂ ತಂಡವನ್ನು ಮಣಿಸಿ ಚರಿತ್ರೆ ಬರೆಯಿತು. ೨೦೦೧ರ ನಂತರ ಎರಡನೆಯ ಬಾರಿಗೆ ವಿಶ್ವ ಚಾಂಪಿಯನ್ ಕಿರೀಟ ಮುಡಿಗೇರಿಸಿತು.
ಕಳೆದ ೧೫ ವರ್ಷಗಳಲ್ಲಿ ಭಾರತ ಹಾಕಿ ತಂಡದ ಕಳಪೆ ಸಾಧನೆ ಬಗ್ಗೆ ಟೀಕೆ ಮಾಡದವರೇ ಇಲ್ಲವೇನೋ. ತಂಡಕ್ಕೆ ಸ್ಫೂರ್ತಿಯ ಮಾತು ಹೇಳಿದ್ದಕ್ಕಿಂತ ನಿಂದಿಸಿದವರೇ ಅಧಿಕ. ತರಬೇತುದಾರ, ಮಾಜಿ ಆಟಗಾರ ಹರೇಂದರ್ ಸಿಂಗ್ ಅವರನ್ನು ’ಒಲಿಂಪಿಕ್ಸ್ನಲ್ಲಿ ಆಡದ ಆಟಗಾರ. ಹೀಗಿರುವಾಗ ಹಾಕಿಗೆ ಪದಕ ತಂದುಕೊಡುವ ತಂಡವನ್ನು ಕಟ್ಟಲು ಆತನಿಂದ ಸಾಧ್ಯವೇ?’ ಎಂದು ಹಲವರು ಟೀಕಿಸಿದ್ದರು. ಹರೇಂದರ್ ಸಿಂಗ್ ಮಾತ್ರ ತಲೆಕೆಡಿಸಿಕೊಂಡಿರಲಿಲ್ಲ. ’ನಾನು ಒಲಿಂಪಿಕ್ಸ್ನಲ್ಲಿ ಆಡದಿರಬಹುದು. ಆದರೆ ಒಲಿಂಪಿಯನ್ನರನ್ನು ತಯಾರುಮಾಡಿಯೇ ತೀರುತ್ತೇನೆ’ ಎಂಬ ಮಾತನ್ನು ಅವರು ಕೊನೆಗೂ ಉಳಿಸಿಕೊಂಡರು. ಗುರ್ಜಂತ್ಸಿಂಗ್, ಹರ್ಜಿತ್, ಮನ್ದೀಪ್ಸಿಂಗ್ರಂತಹ ಸಶಕ್ತ ಯುವಪಡೆಯೊಂದನ್ನು ಕಟ್ಟಿ ವಿಶ್ವಕಪ್ ಗೆಲ್ಲುವಂತೆ ಮಾಡಿದ್ದು ಕಡಮೆ ಸಾಧನೆಯೇನೂ ಅಲ್ಲ.
ವಿಶ್ವಕಪ್ ಗೆದ್ದ ತಂಡದ ಸಾರಥ್ಯ ವಹಿಸಿದ್ದ ಹರ್ಜೀತ್ಸಿಂಗ್ ಸೇರಿದಂತೆ ತಂಡದಲ್ಲಿದ್ದ ೭ ಮಂದಿ ಆಟಗಾರರು ಬಡಚಾಲಕರ ಮಕ್ಕಳೆಂದರೆ ನಿಮಗೆ ಆಶ್ಚರ್ಯವಾಗಬಹುದು. ಕಡುಬಡತನದ ಬೆಂಕಿಯಲ್ಲೇ ಈ ಯುವ ಆಟಗಾರರು ಅರಳಿದರು. ವಿಶ್ವಚಾಂಪಿಯನ್ನರಾಗುವ?ರ ಮಟ್ಟಿಗೆ ಸಾಮರ್ಥ್ಯ ಪ್ರದರ್ಶಿಸಿದರು. ಭಾರತ ಹಾಕಿಯ ಭವ್ಯ ಭವಿ?ದ ರೂವಾರಿಗಳಾದರು. ಬಲಿ? ಆಸ್ಟ್ರೇಲಿಯಾವನ್ನು ಸೆಮಿಫೈನಲ್ನಲ್ಲಿ ಈ ತಂಡ ಪೆನಾಲ್ಟಿ ಶೂಟೌಟ್ನಲ್ಲಿ ೪-೨ರ ಅಂತರದಲ್ಲಿ ಮಣಿಸಿದ್ದು ಸಣ್ಣ ಸಂಗತಿಯಲ್ಲ. ’ಈ ಹುಡುಗರ ಚುರುಕುತನ, ಪಾದರಸದಂತಹ ಚಲನೆ, ವಿಸ್ಮಯಕಾರಿ ಬಿರುಸಿನ ಆಟ ಮತ್ತು ದೈಹಿಕ ಕ್ಷಮತೆ ನನ್ನನ್ನು ಚಕಿತಗೊಳಿಸಿದೆ’ ಎಂದು ಇಂಗ್ಲೆಂಡ್ ತಂಡದ ತರಬೇತುದಾರ ಜಾನ್ ಬ್ಲೆಬಿ ನಮ್ಮ ತಂಡದ ಬಗ್ಗೆ ಉದ್ಗರಿಸಿದ್ದರು. ಅ?ರಮಟ್ಟಿಗೆ ನಮ್ಮ ತಂಡ ದೃಢವಾಗಿ ರೂಪುಗೊಂಡಿದ್ದಕ್ಕೆ ತೆರೆಮರೆಯಲ್ಲಿ ಸಾಕ? ಹಿರಿಯರು, ತಜ್ಞರು ಶ್ರಮಪಟ್ಟಿದ್ದರೆಂಬುದು ಉಲ್ಲೇಖಾರ್ಹ. ಅಂತೂ ಭಾರತ ಹಾಕಿ ತನ್ನ ಗತವೈಭವದ ದಿನಗಳನ್ನು ಮತ್ತೆ ಕಾಣುವಂತಾಗಿದೆ.
ಸಜ್ಜಾಗುತಿದೆ ಭಾರತ ತಂಡ
ವಿಶ್ವಕಪ್ನಂತಹ ಪ್ರತಿಷ್ಠಿತ ಟೂರ್ನಿಗೆ ಸಜ್ಜಾಗಲು ಭಾರತ ತಂಡ ಒಂದು ವ? ಮೊದಲೇ ಅಭ್ಯಾಸ ಆರಂಭಿಸಿದೆ. ಬೆಂಗಳೂರಿನ ಭಾರತ ಕ್ರೀಡಾ ಪ್ರಾಧಿಕಾರದಲ್ಲಿ ಫಿಟ್ನೆಸ್, ಕೌಶಲಾಭಿವೃದ್ಧಿ, ತಂಡದಲ್ಲಿ ಸಮತೋಲನ ಸಾಧಿಸುವ ಬಗೆ – ಹೀಗೆ ಅನೇಕ ವಿ?ಯಗಳತ್ತ ಗಮನ ಹರಿಸಿದೆ.
‘ಬೌಲ್ಡರಿಂಗ್ ಚಾಂಪಿಯನ್ಶಿಪ್’ಗೆ ಬಿರುಸಿನ ತಯಾರಿ
ಮುಂದಿನ ಒಲಿಂಪಿಕ್ಸ್ಗೆ ’ಬೌಲ್ಡರಿಂಗ್’ ಸ್ಪರ್ಧೆಯನ್ನು ಸೇರಿಸಲಾಗಿದೆ. ಈ ಸ್ಪರ್ಧೆಯಲ್ಲಿ ಪದಕ ಗೆಲ್ಲುವ ಕನಸುಹೊತ್ತು ಭಾರತ ತಯಾರಿಯಲ್ಲಿ ತೊಡಗಿದೆ. ಸಂತಸದ ವಿ?ಯವೆಂದರೆ, ಈ ಕ್ರೀಡೆಯಲ್ಲಿ ಕರ್ನಾಟಕವು ಮುಂಚೂಣಿಯಲ್ಲಿದೆ. ೨೦೧೭ರ ಆಗಸ್ಟ್ ಕೊನೆಯ ವಾರದಲ್ಲಿ ಬೆಂಗಳೂರಿನ ಜನರಲ್ ತಿಮ್ಮಯ್ಯ ರಾಷ್ಟ್ರೀಯ ಸಾಹಸ ಅಕಾಡೆಮಿಯಲ್ಲಿ ನಡೆದ ’ಬೆಂಗಳೂರು ಬೌಲ್ಡರಿಂಗ್ ಚಾಂಪಿಯನ್ಶಿಪ್’ನಲ್ಲಿ ಹತ್ತು ಮೀಟರ್ ಎತ್ತರದ ಗೋಡೆಯ ಶಿಖರವನ್ನು ನೋಡನೋಡುತ್ತಿದ್ದಂತೆಯೇ ಏರುವ ಮೂಲಕ ಸ್ಪರ್ಧಿಗಳು ಮುಂದಿನ ದಿನಗಳಲ್ಲಿ ಭಾರತವು ಬೌಲ್ಡರಿಂಗ್ ಕ್ರೀಡೆಯಲ್ಲಿ ಮುಂಚೂಣಿ ಸ್ಥಾನಕ್ಕೆ ಬರಬಹುದೆಂಬ ಭರವಸೆಯನ್ನು ಮೂಡಿಸಿದರು.
ಬೆಂಗಳೂರಿನ ಪ್ರವೀಣ್, ವತ್ಸಲಾ, ಶಾಂತಿರಾಣಿ ಮೊದಲಾದವರು ರಾಜ್ಯಕ್ಕೆ ಬೌಲ್ಡರಿಂಗ್ ಕ್ರೀಡೆಯಲ್ಲಿ ವಿಶಿ? ಸ್ಥಾನಗಳಿಸಿಕೊಟ್ಟವರು. ಈ ಪೈಕಿ ಅರ್ಚನಾ ಬಿ.ಎಸ್. ಅವರು ೧೯೯೯ರಿಂದ ೨೦೦೬ರವರೆಗೆ ರಾಷ್ಟ್ರೀಯ ಚಾಂಪಿಯನ್ ಮತ್ತು ೨೦೦೪ರಲ್ಲಿ ಏ?ಕಪ್ ಕೂಡ ತಮ್ಮದಾಗಿಸಿಕೊಂಡು, ವಿಶ್ವಕಪ್ನಲ್ಲಿಯೂ ಭಾಗವಹಿಸಿದ್ದಾರೆ. ಈ ಕ್ರೀಡೆಯಲ್ಲಿ ಭಾರತವು ವಿಶ್ವಮಟ್ಟದಲ್ಲಿ ಸಾಧನೆಯನ್ನು ಮೆರೆಯಲು ಇವರು ಭರವಸೆಯ ವ್ಯಕ್ತಿಯಾಗಿದ್ದಾರೆ. ಜೊತೆಗೆ, “ದೇಶದ ಬೌಲ್ಡರಿಂಗ್ ಕ್ರೀಡಾಪಟುಗಳು ಉತ್ತಮ ಸಾಮರ್ಥ್ಯ ತೋರುವ ವಿಶ್ವಾಸವಿದೆ. ಟೋಕಿಯೋದಲ್ಲಿ ಮುಂದೆ ನಡೆಯಲಿರುವ ಒಲಿಂಪಿಕ್ಸ್ನಲ್ಲಿ ಪದಕ ಗೆಲ್ಲುವುದು ಕಠಿಣವಾದರೂ, ೨೦೨೪ರಲ್ಲಿ ಭಾರತಕ್ಕೆ ಪದಕ ಖಚಿತ” – ಎನ್ನುವ ಮೂಲಕ ಕ್ರೀಡೆಗೆ ಭಾರತದಲ್ಲಿ ದೊರೆಯುತ್ತಿರುವ ಬೆಂಬಲ ಹಾಗೂ ಕ್ರೀಡಾಪಟುಗಳು ತೋರುತ್ತಿರುವ ಉತ್ಸಾಹದ ಬಗ್ಗೆ ಅವರು ತಮ್ಮ ಖಚಿತ ಅಭಿಪ್ರಾಯವನ್ನು ವ್ಯಕ್ತಪಡಿಸುತ್ತಾರೆ.
ಗೋಲ್ ಕೀಪರ್ ಶ್ರೀಜೇಶ್, ಫಾರ್ವರ್ಡ್ ಆಟಗಾರರಾದ ಸುನೀಲ್, ಆಕಾಶ್ದೀಪ್ಸಿಂಗ್, ರಮಣ್ದೀಪ್ ಸಿಂಗ್, ನಿಕಿನ್ ತಮ್ಮಯ್ಯ, ಸರ್ದಾರ್ ಸಿಂಗ್, ಎಸ್.ಕೆ. ಉತ್ತಪ್ಪ, ದಾನಿಶ್ ಮಜ್ತಬಾ, ಡಿಫೆಂಡರ್ಸ್ ಕೊತಾಜಿತ್ ಸಿಂಗ್, ರೂಪಿಂದರ್ ಪಾಲ್ ಸಿಂಗ್ ಇರುವ ಈಗಿನ ತಂಡ ಬಲಿಷ್ಠವಾಗಿದೆ. ಆದರೆ ಪ್ರಮುಖ ಟೂರ್ನಿಗಳಲ್ಲಿ ಮಹತ್ತ್ವದ ಘಟ್ಟದಲ್ಲಿ ಫಾರ್ವರ್ಡ್ ಲೈನ್ನಲ್ಲಿ ಮಾಡುತ್ತಿರುವ ಸಣ್ಣಸಣ್ಣ ತಪ್ಪುಗಳಿಗೆ ಭಾರತ ತಂಡ ದೊಡ್ಡ ಬೆಲೆ ತೆರುವಂತಾಗಿದೆ.
ಎಲ್ಲ ವಿಭಾಗಗಳಲ್ಲಿ ಸಮತೋಲನ ಸಾಧಿಸದ ಕಾರಣ ನಮ್ಮವರು ಪದೇಪದೇ ಪ್ರಶಸ್ತಿ ಕೈಚೆಲ್ಲುವಂತಾಗಿದೆ.
ಆದರೆ ಪ್ರತಿ ಸೋಲಿನಿಂದಲೂ ಪಾಠ ಕಲಿತು ಹೊಸ ಅಂಶಗಳನ್ನು ಅರಿತುಕೊಳ್ಳಲು ಭಾರತ ತಂಡ ಈಗ ಹೆಚ್ಚು ಒತ್ತು ನೀಡುತ್ತಿರುವುದು ಆರೋಗ್ಯಕರ ಬೆಳವಣಿಗೆ. ಅದಕ್ಕಾಗಿ ವಿಡಿಯೋ ವಿಶ್ಲೇಷಣೆ, ತಪ್ಪುಗಳ ಕುರಿತು ಮೈದಾನದಲ್ಲೇ ಪಾಠ, ಸರಿಪಡಿಸಿಕೊಳ್ಳುವ ವಿಧಾನ ಹೇಳಿಕೊಟ್ಟು ಕಠಿಣ ಅಭ್ಯಾಸ ನಡೆಸುತ್ತಿದೆ. ವಿಶ್ವಕಪ್ ಆರಂಭವಾಗಲು ಇನ್ನೂ ಒಂದು ವ? ಬಾಕಿ ಇರುವಾಗಲೇ ಅಭ್ಯಾಸ ಆರಂಭಿಸಿರುವ ತಂಡ ದೇಶಕ್ಕೆ ಎರಡನೇ ಟ್ರೋಫಿ ತಂದುಕೊಡಲಿ ಎಂಬುದು ಹಾಕಿ ಪ್ರೇಮಿಗಳ ಸದಾಶಯ.
ಕಳೆಗಟ್ಟಿದ ಕಬಡ್ಡಿ
ಭಾರತದಲ್ಲೀಗ ಕ್ರಿಕೆಟ್ಗಿಂತಲೂ ಜನಪ್ರಿಯ ಆಟವೆಂದರೆ ಕಬಡ್ಡಿ. ಕ್ರಿಕೆಟ್ ಆಟದ ಗುಂಗಿನ ನಡುವೆ ಅಪ್ಪಟ ದೇಸೀ ಕ್ರೀಡೆಯಾಗಿರುವ ಕಬಡ್ಡಿ ಸೋತು ಸೊರಗಿಹೋಗಿತ್ತು. ಅಲ್ಲಲ್ಲಿ ಕಬಡ್ಡಿ ಆಡುವ ಪಡ್ಡೆಹುಡುಗರು ಈ ಆಟವನ್ನು ಜೀವಂತವಾಗಿಡಲು ಪ್ರಯತ್ನಿಸುತ್ತಿದ್ದರಾದರೂ ಅದಕ್ಕೊಂದು ಮಾನ್ಯತೆ ಅ?ಗಿ ದೊರಕಿರಲಿಲ್ಲ. ಕಬಡ್ಡಿ ಕೂಡ ಇ? ಜೋರಾಗಿ ಸದ್ದು ಮಾಡಬಲ್ಲದು ಎಂದು ಯಾರೂ ಊಹಿಸಿರಲಿಲ್ಲ. ಅಸಲಿಗೆ ಕಬಡ್ಡಿ ಆಟಕ್ಕೂ ಒಂದು ಲೀಗ್ ಬರಬಹುದು ಎಂಬ ಆಲೋಚನೆ ಕೂಡ ಕಬಡ್ಡಿ ಪ್ರೇಮಿಗಳ ಮನದಲ್ಲಿ ಸುಳಿದಿರಲಿಲ್ಲ.
ಆದರೀಗ ಕಬಡ್ಡಿಗೆ ಶುಕ್ರದೆಸೆ! ೨೦೧೪ರಿಂದ ಈ ಆಟಕ್ಕೆ ಒದಗಿದೆ ಕಾರ್ಪೊರೇಟ್ ಯೋಗ! ೨೦೧೪ರಲ್ಲಿ ಆರಂಭಗೊಂಡ ’ಪ್ರೊ ಕಬಡ್ಡಿ ಲೀಗ್’ ಪಂದ್ಯಾವಳಿ ಕಬಡ್ಡಿ ಆಟಗಾರರ ಪಾಲಿಗೆ ಅದೃ?ದ ಅಕ್ಷಯಪಾತ್ರೆ ಆಗಿದೆ. ಪ್ರೊ ಕಬಡ್ಡಿ ಲೀಗ್ನ ಮೊದಲ ಆವೃತ್ತಿಯಲ್ಲಿ ೮ ತಂಡಗಳು ಪಾಲ್ಗೊಂಡಿದ್ದವು. ಸ್ಟಾರ್ ಸ್ಪೋರ್ಟ್ಸ್ ವಾಹಿನಿ ಈ ಪಂದ್ಯಾವಳಿಯ ನೇರ ಪ್ರಸಾರ ಮಾಡಿತ್ತು. ಆಗ ಈ ಪಂದ್ಯಾವಳಿಯನ್ನು ವೀಕ್ಷಿಸಿದವರ ಸಂಖ್ಯೆಯೇ ಬರೋಬ್ಬರಿ ೪೩೫ ದಶಲಕ್ಷ. ಫೈನಲ್ ಪಂದ್ಯವನ್ನು ವೀಕ್ಷಿಸಿದವರ ಸಂಖ್ಯೆಯೇ ೮೬.೪ ದಶಲಕ್ಷಕ್ಕೇರಿತ್ತು. ಸ್ಟಾರ್ ಸ್ಪೋರ್ಟ್ಸ್ ಮುಖ್ಯಸ್ಥ ನಿತಿನ್ ಕುಕ್ರೇಜಾ ಅವರು ಆಗ ’೨೦೧೪ರ ಪ್ರೊ ಕಬಡ್ಡಿ ಪಂದ್ಯಾವಳಿ ವೀಕ್ಷಕರ ಸಂಖ್ಯೆ ಯಾವುದೇ ವಿಶ್ವಕಪ್ ಕ್ರಿಕೆಟ್ ಟೂರ್ನಿಗಿಂತಲೂ ಕಡಮೆ ಇರಲಿಲ್ಲ’ ಎಂದು ಉದ್ಗರಿಸಿದ್ದರು. ಅವರ ಈ ಉದ್ಗಾರದಲ್ಲಿ ಯಾವ ಉತ್ಪ್ರೇಕ್ಷೆಯೂ ಇರಲಿಲ್ಲ. ಐಪಿಎಲ್ ಕ್ರಿಕೆಟ್ ಪಂದ್ಯಾವಳಿ ಹೊರತುಪಡಿಸಿದರೆ ಅತಿ ಹೆಚ್ಚು ವೀಕ್ಷಕರ ಸಂಖ್ಯೆ ದಾಖಲಾಗಿದ್ದು ಪ್ರೊ ಕಬಡ್ಡಿಗೇ.
ಇದೀಗ ದೇಶದ ನಾನಾ ಕಡೆಯ ಕ್ರೀಡಾಂಗಣಗಳಲ್ಲಿ ಪ್ರೊ ಕಬಡ್ಡಿಯ ೫ನೇ ಆವೃತ್ತಿಯ ಪಂದ್ಯಗಳು ಮುಕ್ತಾಯದ ಹಂತದಲ್ಲಿದ್ದು, ಈ ಬಾರಿ ಭಾಗವಹಿಸಿರುವ ತಂಡಗಳು ೧೨. ಕಬಡ್ಡಿ ಇದೀಗ ದೇಶದಾದ್ಯಂತ ಹಬ್ಬದ ಸಂಭ್ರಮ ತಂದಿದೆ. ಕಬಡ್ಡಿ ಟೂರ್ನಿಗಳಿಗೆ ಹೈವೋಲ್ಟೇಜ್ ಒದಗಿದೆ. ರಾತ್ರಿ ೮ರಿಂದ ೧೦ ಗಂಟೆವರೆಗೆ ಎಲ್ಲ ಮನೆಯ ಟಿವಿಗಳಿಂದ ಕೇಳಿಬರುವುದು ಅದೇ ಮುಗಿಯದ ಧಾರಾವಾಹಿಯ ಹಳಸಲು ಡೈಲಾಗ್ಗಳಲ್ಲ. ಬದಲಿಗೆ ಅಬ್ಬರದ, ’ಲೇಪಂಗಾ’, ’ಕಬಡ್ಡಿ ಕಬಡ್ಡಿ’ ಎನ್ನುವ ಕಬಡ್ಡಿ ಪಂದ್ಯಾವಳಿಗಳ ದೃಶ್ಯಗಳು.
ಯುವಪೀಳಿಗೆಯ ಬಾಯಲ್ಲಿ ಸಚಿನ್, ದ್ರಾವಿಡ್, ಧೋನಿ, ಕೊಹ್ಲಿ, ಶಿಖರ್ ಧವನ್, ರೋಹಿತ್ ಶರ್ಮ ಮೊದಲಾದ ಕ್ರಿಕೆಟಿಗರ ಹೆಸರೇ ಸಾಮಾನ್ಯವಾಗಿ ಕೇಳಿಬರುತ್ತಿತ್ತು. ಆದರೀಗ ಇದೇ ಯುವಪೀಳಿಗೆಯ ಬಾಯಲ್ಲಿ ಕೇಳಿಬರುತ್ತಿರುವ ಹೆಸರುಗಳು ನಿತಿನ್ ತೋಮಾರ್, ರೋಹಿತ್ ಮಂಜಿತ್ ಚಿಲ್ಲರ್, ಸೆಲ್ವಮಣಿ, ಜೀವ್ಕುಮಾರ್, ಜಸ್ವೀರ್ ಸಿಂಗ್, ಕೌಶಿಲಿಂಗ್ ಅಕ್ಕೆ, ಅಜಯ್ ಠಾಕೂರ್, ಜೋಗಿಂದರ್ ನರ್ವಾಲ್, ಪ್ರಶಾಂತ್ ದೇವಾಡಿಗ ಇತ್ಯಾದಿ. ಎಲ್ಲರ ಬಾಯಲ್ಲೂ ಫೋರ್, ಸಿಕ್ಸ್ ಬದಲು ರೈಡ್, ಅಟ್ಯಾಕ್, ಟ್ಯಾಕಲ್ ಇತ್ಯಾದಿ ಶಬ್ದಗಳು ಮಾರ್ದನಿಸತೊಡಗಿರುವುದು ಪ್ರೊ ಲೀಗ್ ಕಬಡ್ಡಿಯ ಚಮತ್ಕಾರ!
ಪ್ರೊ ಕಬಡ್ಡಿ ಲೀಗ್ಗೆ ವೇದಿಕೆ ಒದಗಿಸಿದ್ದು ಮಾ?ಲ್ ಸ್ಪೋರ್ಟ್ಸ್ ಪ್ರೈ.ಲಿ. ಸಂಸ್ಥೆ. ಸಂಸ್ಥೆಯ ಪಾಲುದಾರರಾದ ರವಿಕೃ?ನ್ ಲೂಥ್ರಾ, ವಿ?ಕುಮಾರ್, ಚಿಮನ್ಲಾಲ್ ಗರ್ಗ್, ನೋಶಿರ್ ರುಸ್ತುಂ ದಸ್ತೂರ್ ಹಾಗೂ ಚಾರುಚಂದ್ರ ಶರ್ಮ ಅವರೇ ಪ್ರೊ ಕಬಡ್ಡಿ ಲೀಗ್ನ ಪ್ರಮುಖ ರೂವಾರಿಗಳು. ಈ ದೇಸೀ ಕ್ರೀಡೆಗೆ ಸಾರ್ವಜನಿಕರನ್ನು ಸೆಳೆಯುವ ಸಾಮರ್ಥ್ಯವಿದೆ ಎಂಬ ಭರವಸೆ ತಂದುಕೊಟ್ಟ ಮಹನೀಯರಿವರು.
ಪ್ರೊ ಕಬಡ್ಡಿ ಪಂದ್ಯಗಳು ಕಬಡ್ಡಿ ಪಟುಗಳ ಪಾಲಿಗೆ ಈಗ ಜೀವಾಮೃತ ಇದ್ದಂತೆ. ಪ್ರೊ ಕಬಡ್ಡಿ ಲೀಗ್ನಿಂದಾಗಿ ಕಬಡ್ಡಿಗೆ ವೃತ್ತಿಪರ ಕ್ರೀಡೆ ಎಂಬ ಹೆಗ್ಗಳಿಕೆಯೂ ಸಂದಿದೆ. ಕಬಡ್ಡಿ ಆಡಿಯೂ ಕುಟುಂಬವನ್ನೂ, ಮನೆಯನ್ನೂ ಮುನ್ನಡೆಸಬಹುದು ಎನ್ನುವ ಮಟ್ಟಿಗೆ ಅದು ಆರ್ಥಿಕ ಭದ್ರತೆ ಒದಗಿಸಿದೆ.
ಕಬಡ್ಡಿಯನ್ನು ೧೯೯೦ರಲ್ಲಿ ನಡೆದ ೧೧ನೇ ಬೀಜಿಂಗ್ ಏ?ನ್ ಗೇಮ್ಸ್ನಲ್ಲಿ ಒಂದು ನಿಯಮಿತ ಆಟವನ್ನಾಗಿ ಸೇರಿಸಲಾಗಿತ್ತು. ಆಗ ಭಾರತ ತಂಡ ಕಬಡ್ಡಿಯಲ್ಲಿ ಚಿನ್ನದ ಪದಕ ಗೆದ್ದಿತ್ತು. ಅನಂತರ ಇದುವರೆಗೆ ನಡೆದ ಎಲ್ಲ ಏ?ನ್ ಗೇಮ್ಸ್ಗಳಲ್ಲಿ ಚಿನ್ನದ ಪದಕ ಭಾರತ ತಂಡವನ್ನು ಬಿಟ್ಟು ಹೋಗಿಲ್ಲ.
೨೦೦೪ರಿಂದ ಇದುವರೆಗೆ ನಡೆದ ಕಬಡ್ಡಿ ವಿಶ್ವಕಪ್ನಲ್ಲೂ ಭಾರತ ಸತತವಾಗಿ ಗೆಲ್ಲುತ್ತಲೇ ಬಂದಿದೆ. ಇರಾನ್, ಪಾಕಿಸ್ತಾನ, ಕೆನಡಾ ತಂಡಗಳು ಫೈನಲ್ ಸುತ್ತಿಗೇರಿದ್ದರೂ ಭಾರತವನ್ನು ಸೋಲಿಸಲು ಅವಕ್ಕೆ ಸಾಧ್ಯವಾಗಿಲ್ಲ. ಎಸ್ಎಎಫ್ ಗೇಮ್ಸ್ನಲ್ಲಿ ಮಾತ್ರ ಒಂದೇ ಒಂದು ಸಲ ಭಾರತಕ್ಕೆ ಚಿನ್ನ ಕೈತಪ್ಪಿದೆ. ಉಳಿದಂತೆ ೭ ಬಾರಿ ಚಿನ್ನದ ಪದಕಕ್ಕೆ ಮುತ್ತಿಕ್ಕಿದೆ.
ಪ್ರೊ ಕಬಡ್ಡಿ ಲೀಗ್ ಪಂದ್ಯಾವಳಿಯ ಪರಿಣಾಮವಾಗಿ ಇನ್ನ? ಹೊಸ ಪ್ರತಿಭೆಗಳ ಉದಯವಾಗಿದೆ. ಜಪಾನ್, ಮಲೇ?, ಪಾಕಿಸ್ತಾನ, ಇರಾನ್, ಕೊರಿಯಾ ಮೊದಲಾದ ತಂಡಗಳು ಪೈಪೋಟಿ ನೀಡುತ್ತಿದ್ದರೂ ಸದ್ಯಕ್ಕಂತೂ ಭಾರತವೇ ಕಬಡ್ಡಿಯ ಕಿಂಗ್.
ಮಹಿಳೆಯರ ಕಬಡ್ಡಿಯಲ್ಲೂ ಭಾರತದ್ದೇ ಪಾರಮ್ಯ. ೨೦೧೨, ೨೦೧೩ ಎರಡು ಬಾರಿ ನಡೆದ ವಿಶ್ವಕಪ್ ಸ್ಪರ್ಧೆಯಲ್ಲೂ ಭಾರತದ ವನಿತೆಯರದ್ದೇ ಮೇಲುಗೈ.
ಒಟ್ಟಾರೆ ಕಬಡ್ಡಿಗೀಗ ಎಲ್ಲಿಲ್ಲದ ಖದರ್. ಎಲ್ಲರಿಗೂ ಕಬಡ್ಡಿ ಎಂದರೆ ಅಭಿಮಾನ.
ಬ್ಯಾಡ್ಮಿಂಟನ್ ಹೊಳಪು
ಬ್ಯಾಡ್ಮಿಂಟನ್ ಬಗೆಗೆ ಯುವಕ-ಯುವತಿಯರಲ್ಲಿ ಈಗೀಗ ಹೆಚ್ಚು ಆಸಕ್ತಿ ಮೂಡತೊಡಗಿದೆ. ಅದಕ್ಕೆ ಕಾರಣ ರಿಯೋ ಒಲಿಂಪಿಕ್ಸ್ನಲ್ಲಿ ಪಿ.ವಿ. ಸಿಂಧು ಎಂಬ ಹೈದರಾಬಾದ್ನ ಆಟಗಾರ್ತಿ ಬೆಳ್ಳಿ ಪದಕ ಗಳಿಸಿದ್ದು. ಚಿನ್ನವನ್ನೇ ಗೆಲ್ಲುತ್ತಿದ್ದಳೇನೋ ಆಕೆ. ಆದರೆ ಅದೃ? ಆಗ ಅವಳ ಕಡೆಗಿರಲಿಲ್ಲ. ಆದರೆ ಒಲಿಂಪಿಕ್ಸ್ ಚಿನ್ನ ಗೆದ್ದ ಸ್ಪೇನ್ನ ಕರೋನಾ ಮರೀನ್ಳ ಹೆಮ್ಮೆ ಹೆಚ್ಚು ದಿನ ಉಳಿಯಲು ಸಿಂಧು ಬಿಡಲಿಲ್ಲ. ಏಳು ತಿಂಗಳ ಹಿಂದೆ ಒಲಿಂಪಿಕ್ಸ್ ಚಿನ್ನ ಗೆಲ್ಲುವ ತನ್ನ ಕನಸನ್ನು ಛಿದ್ರಗೊಳಿಸಿದ್ದ ಆಕೆಯನ್ನು ಸಿಂಧು ಪ್ರತಿಷ್ಠಿತ ಇಂಡಿಯಾ ಓಪನ್ ಸೀರೀಸ್ ಟೂರ್ನಿಯಲ್ಲಿ ನೇರ ಸೆಟ್ಗಳಿಂದ ಸೋಲಿಸಿ ಇತಿಹಾಸ ಬರೆದಳು.
ಇಂಡಿಯಾ ಓಪನ್ ಸೀರೀಸ್ನಲ್ಲಿ ಘಟಾನುಘಟಿ ಆಟಗಾರರದ್ದೇ ಪಾರುಪತ್ಯ. ಭಾರತದವರೇ ಆದ ಸೈನಾ ನೆಹ್ವಾಲ್, ಚೀನಾದ ಸಂಗ್ ಜಿ ಹ್ಯನ್, ಸ್ಪೇನ್ನ ಕರೋಲಿನಾ ಮುಂತಾದವರೆಲ್ಲ ಪಾಲ್ಗೊಂಡಿದ್ದರು. ಇವರೆಲ್ಲ ವಿಶ್ವರ್ಯಾಂಕಿಂಗ್ನ ಮೊದಲ ೧೦ರೊಳಗಿನ ಖ್ಯಾತ ಆಟಗಾರ್ತಿಯರು. ಅಂಥವರನ್ನೆಲ್ಲ ಸದೆಬಡಿದ ಕೀರ್ತಿ ಸಿಂಧು ಎಂಬ ಬ್ಯಾಡ್ಮಿಂಟನ್ ಜಗತ್ತಿನ ರಾಣಿಯದು.
ಸದ್ಯ ೫ನೇ ರ್ಯಾಂಕಿಂಗ್ನಲ್ಲಿದ್ದ ಸಿಂಧು ಈ ಮಹೋನ್ನತ ಗೆಲವಿನಿಂದಾಗಿ ತನ್ನ ಜೀವನಶ್ರೇ? ೨ನೇ ರ್ಯಾಂಕಿಂಗ್ ಪಡೆದುಕೊಂಡಿದ್ದಾಳೆ. ಇದಾದ ಬಳಿಕ ಸಿಂಧು ಮಲೇ? ಓಪನ್ ಸರಣಿಯಲ್ಲೂ ಗೆಲವನ್ನು ತನ್ನದಾಗಿಸಿಕೊಂಡಿದ್ದಾಳೆ. ಈ ವ? ಜರಗಿದ ಸೈಯದ್ ಮೋದಿ ಗ್ರಾಂಡ್ ಪ್ರೀಯಲ್ಲೂ ಪ್ರಶಸ್ತಿ ಸಿಂಧು ಪಾಲಾಗಿತ್ತು.
೨೭ರ ಹರೆಯದ ಬ್ಯಾಡ್ಮಿಂಟನ್ ಆಟಗಾರ್ತಿ ಸೈನಾ ನೆಹ್ವಾಲ್ ಕೂಡ ಒಮ್ಮೆ ವಿಶ್ವಕ್ರಮಾಂಕ ಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದ ಸಾಧನೆ ಮಾಡಿದ್ದರು. ಚೈನಾ, ಥಾಯ್ಲೆಂಡ್, ದಕ್ಷಿಣ ಕೋರಿಯಾ, ಜರ್ಮನಿ, ಮಲೇಶಿಯಾ ಮುಂತಾದ ದೇಶಗಳ ಪ್ರಭಲ ಎದುರಾಳಿಗಳನ್ನು ಸದೆಬಡಿದು ನಂಬರ್ ಒನ್ ಆಟಗಾರ್ತಿಯಾಗಿ ಮೆರೆದಿದ್ದು ಕಡಮೆ ಸಾಧನೆಯಾಗಿರಲಿಲ್ಲ. ಬ್ಯಾಡ್ಮಿಂಟನ್ ರ್ಯಾಂಕಿಂಗ್ನಲ್ಲಿ ಈ ಹಿಂದೆ ಭಾರತದ ಪ್ರಕಾಶ್ ಪಡುಕೋಣೆ ನಂ. ೧ ಸ್ಥಾನಕ್ಕೇರಿದ್ದರು. ಆದರೆ ಮಹಿಳಾ ವಿಭಾಗದಲ್ಲಿ ಈ ಸಾಧನೆ ಮಾಡಿದ ಮೊದಲ ಪಟು ಎಂಬ ಶ್ರೇಯಸ್ಸು ಸೈನಾಳದ್ದು.
ಬ್ಯಾಡ್ಮಿಂಟನ್ ಕ್ಷೇತ್ರದಲ್ಲಿ ಹೊಳೆಯುತ್ತಿರುವ ಇನ್ನೊಂದು ತಾರೆಯೆಂದರೆ ಕಿಡಂಬಿ ಶ್ರೀಕಾಂತ್. ೨೦೧೧ರ ಕಾಮನ್ವೆಲ್ತ್ ಗೇಮ್ಸ್ನ ಮಿಕ್ಸೆಡ್ ಡಬಲ್ಸ್ನಲ್ಲಿ ಬೆಳ್ಳಿ ಪದಕ ಮತ್ತು ಡಬಲ್ಸ್ನಲ್ಲಿ ಕಂಚುಪದಕ. ಪುಣೆಯಲ್ಲಿ ಜರುಗಿದ ಆಲ್ ಇಂಡಿಯಾ ಜೂನಿಯರ್ ಇಂಟರ್ನ್ಯಾಶನಲ್ ಬ್ಯಾಂಡ್ಮಿಂಟನ್ ಚಾಂಪಿಯನ್ಶಿಪ್ನ ಸಿಂಗಲ್ಸ್ ಮತ್ತು ಡಬಲ್ಸ್ ವಿಭಾಗದಲ್ಲಿ ಗೆಲವು. ೨೦೧೨ರ ಮಾಲ್ದೀವ್ಸ್ ಇಂಟರ್ನ್ಯಾಶನಲ್ ಸ್ಪರ್ಧೆಯಲ್ಲಿ ಪುರು?ರ ಸಿಂಗಲ್ಸ್ ಪ್ರಶಸ್ತಿ ವಿಜೇತ. ೨೦೧೩ರ ಥೈಲ್ಯಾಂಡ್ ಓಪನ್ ಗ್ರ್ಯಾಂಡ್ ಪ್ರೀಯ ಪುರು?ರ ಸಿಂಗಲ್ಸ್ ಸ್ಪರ್ಧೆಯಲ್ಲಿ ಚಿನ್ನದ ಪದಕ…. ಹೀಗೆ ಶ್ರೀಕಾಂತ್ ಬ್ಯಾಂಡ್ಮಿಂಟನ್ ಸ್ಪರ್ಧೆಯಲ್ಲಿ ರಾಷ್ಟ್ರೀಯ, ಅಂತಾರಾಷ್ಟ್ರೀಯ ಮಟ್ಟದ ಹಲವು ಸ್ಪರ್ಧೆಗಳಲ್ಲಿ ಗೆಲವಿ ದಾಖಲೆ ಬರೆದು ಭರವಸೆ ಮೂಡಿಸಿದ್ದಾರೆ. ಬ್ಯಾಡ್ಮಿಂಟನ್ ಕ್ಷೇತ್ರಕ್ಕೆ ಪಾದಾರ್ಪಣೆ ಮಾಡಿದಾಗ ಇದ್ದಿದ್ದು ಜಾಗತಿಕಮಟ್ಟದ ೨೪೦ನೇ ರ್ಯಾಂಕಿಂಗ್. ಈಗ ೨೯ನೇ ರ್ಯಾಂಕಿಂಗ್ ಪೀಠದಲ್ಲಿ ಶ್ರೀಕಾಂತ್ ವಿರಾಜಮಾನ.
ದ್ರೋಣಾಚಾರ್ಯ ಗೋಪಿಚಂದ್
ಬ್ಯಾಡ್ಮಿಂಟನ್ ಪ್ರತಿಭೆಗಳಾದ ಪಿ.ವಿ. ಸಿಂಧು, ಸೈನಾ ನೆಹ್ವಾಲ್, ಶ್ರೀಕಾಂತ್ ಕಿಡಂಬಿ, ಪಾರುಪಲ್ಲಿ ಕಶ್ಯಪ್ ಮೊದಲಾದವರನ್ನೆಲ್ಲ ಈ ಮಟ್ಟಕ್ಕೆ ಬೆಳೆಸಿದ ದ್ರೋಣಾಚಾರ್ಯ ಪುಲ್ಲೆಲ ಗೋಪಿಚಂದ್ ಎಂಬ ಒಂದುಕಾಲದ ಭಾರತದ ಅತ್ಯುತ್ತಮ ಬ್ಯಾಡ್ಮಿಂಟನ್ ಆಟಗಾರ. ಇದೀಗ ಆತ ಭಾರತದ ಅತ್ಯುತ್ತಮ ಬ್ಯಾಡ್ಮಿಂಟನ್ ತರಬೇತುದಾರ. ಹೈದರಾಬಾದ್ನಲ್ಲಿ ಗೋಪಿಚಂದ್ ಬ್ಯಾಡ್ಮಿಂಟನ್ ಅಕಾಡೆಮಿ ತೆರೆಯಲು ಆತ ಪಟ್ಟ ಕ? ಅಷ್ಟಿ?ಲ್ಲ. ಅಕಾಡೆಮಿಯ ಸ್ಥಾಪನೆಗಾಗಿ ತನ್ನ ವಾಸದ ಮನೆಯನ್ನೇ ಮೂರುಕೋಟಿ ರೂಪಾಯಿಗಳಿಗೆ ಒತ್ತೆಯಿಟ್ಟ ತ್ಯಾಗಜೀವಿ ಗೋಪಿಚಂದ್. ಗೋಪಿಚಂದ್ ಅಕಾಡೆಮಿಯಲ್ಲಿ ಆಟಗಾರರಿಗೆ ಜಾಗತಿಕ ಮಟ್ಟದ ಸೌಲಭ್ಯ, ತರಬೇತಿ ಒದಗಿಸಲಾಗುತ್ತಿದೆ. ೨೦೦೮ರಲ್ಲಿ ಕೇವಲ ೨೦ ಮಂದಿ ವಿದ್ಯಾರ್ಥಿಗಳೊಂದಿಗೆ ಆರಂಭವಾದ ಈ ಅಕಾಡೆಮಿಯಲ್ಲಿ ಈಗ ೨೦೦ಕ್ಕೂ ಅಧಿಕ ಮಂದಿ ಆಟಗಾರರು ತರಬೇತಿ ಪಡೆಯುತ್ತಿದ್ದಾರೆ. ಯೊನಾಥಾನ್ ದಸುಕಿಯಂತಹ ಮಾಜಿ ಬ್ಯಾಡ್ಮಿಂಟನ್ ಕಲಿ ಇಲ್ಲಿ ತರಬೇತುದಾರರಾಗಿರುವುದು ಆಟಗಾರರ ಪಾಲಿಗೆ ಇನ್ನೊಂದು ಆಶಾಕಿರಣ. ಕಳೆದ ಮಾರ್ಚ್ ತಿಂಗಳಿಂದ ಗ್ರೇಟರ್ ನೊಯ್ಡಾದಲ್ಲಿರುವ ಬ್ಯಾಡ್ಮಿಂಟನ್ ಅಕಾಡೆಮಿ ಕೇಂದ್ರದಲ್ಲೂ ಗೋಪಿಚಂದ್ ಆಟಗಾರರಿಗೆ ತರಬೇತಿ ನೀಡಲು ಮುಂದಾಗಿದ್ದಾರೆ.
ಫುಟ್ಬಾಲ್: ಭರವಸೆಯ ಹೆಜ್ಜೆಗಳು
೧೯೫೦-೬೦ರ ಕಾಲಘಟ್ಟ ಭಾರತೀಯ ಫುಟ್ಬಾಲ್ನ ಸುವರ್ಣ ಕ್ಷಣಗಳಾಗಿತ್ತು. ಆಗ ೨ ಬಾರಿ ಏ?ನ್ ಗೇಮ್ಸ್(೧೯೫೧, ೧೯೬೨)ನಲ್ಲಿ ಚಿನ್ನದ ಪದಕ ಗಳಿಸಿದ ಹೆಮ್ಮೆ ನಮ್ಮ ತಂಡದ್ದು.
೧೯೬೨ರ ಒಂದು ಕುತೂಹಲಕರ ವಿದ್ಯಮಾನ. ಜಕಾರ್ತಾದಲ್ಲಿ ನಡೆಯಲಿರುವ ಏ?ನ್ ಗೇಮ್ಸ್ಗೆ ನಮ್ಮ ತಂಡ ಹೊರಡಲು ಸಿದ್ಧವಾಗಿದ್ದರೂ ಭಾರತ ಸರ್ಕಾರದಿಂದ ಹಸಿರು ನಿಶಾನೆ ಸಿಕ್ಕಿರಲಿಲ್ಲ. ’ನಮ್ಮ ತಂಡ ಸೋತು ಬರಲು ಸರ್ಕಾರ ಹಣ ಪೋಲು ಮಾಡಬೇಕೆ?’ ಎಂದು ಕೇಂದ್ರ ಕ್ರೀಡಾಸಚಿವರು, ಅಧಿಕಾರಿಗಳು ವ್ಯಂಗ್ಯವಾಡಿದ್ದರು. ಕೊನೆಗೆ ವಾಗ್ವಾದ ನಡೆದು, ಸರ್ಕಾರ ಅಂತಿಮವಾಗಿ ಅನುಮತಿ ನೀಡಿತು. ದುರದೃ?ವಶಾತ್ ಟೂರ್ನಿಯ ಎ ಗುಂಪಿನ ಮೊದಲ ಪಂದ್ಯದಲ್ಲೇ ಭಾರತಕ್ಕೆ ದಕ್ಷಿಣ ಕೋರಿಯಾ ತಂಡದೆದುರು ೦-೨ ಗೋಲುಗಳ ಸೋಲು. ಸರ್ಕಾರದ ಕಣ್ಣು ಕೆಂಪಗಾಗಿತ್ತು. ಆದರೆ ಅನಂತರದ ಎಲ್ಲ ಪಂದ್ಯಗಳಲ್ಲಿ ಭಾರತ ಗೆದ್ದಿದ್ದಲ್ಲದೆ ಫೈನಲ್ನಲ್ಲಿ ಮತ್ತೆ ಅದೇ ದ. ಕೋರಿಯಾ ತಂಡವನ್ನು ೨-೧ರಿಂದ ಸೋಲಿಸಿ ಚಿನ್ನದ ಪದಕ ಗಳಿಸಿದ್ದು ಭಾರತ ತಂಡದ ಸಾಮರ್ಥ್ಯಕ್ಕೆ ಸಾಕ್ಷಿಯಾಗಿತ್ತು. ಆ ತಂಡದಲ್ಲಿ ಆಡಿದವರಲ್ಲಿ ಬೆಂಗಳೂರಿನ ಅರುಮೈ ನಾಯಗಂ ಕೂಡ ಒಬ್ಬರು.
ಆದರೆ ೧೯೭೦ರಿಂದ ೨೦೦೦ ಇಸವಿಯವರೆಗೆ ಭಾರತೀಯ ಫುಟ್ಬಾಲ್ಗೆ ಒಂದು ಬಗೆಯ ಮಂಕು ಆವರಿಸಿತ್ತು. ೨೦೦೦ದ ನಂತರ ಮತ್ತೆ ಚೇತರಿಕೆ ಕಂಡಿತು. ೨೦೦೨ರ ಫೀಫಾ ವಿಶ್ವಕಪ್ಗೆ ಅರ್ಹತೆ ಪಡೆದು ಮೊದಲ ಸುತ್ತಿನಲ್ಲೆ ಯುಎಇಯನ್ನು ೧-೦ ಅಂತರದಲ್ಲಿ ಸೋಲಿಸಿ, ಯೆಮೆನ್ ವಿರುದ್ಧ ೧-೧ ಡ್ರಾ ಸಾಧಿಸಿತ್ತು. ೨೦೦೮ರಲ್ಲಿ ಎಎಫ್ಸಿ ಚಾಲೆಂಜ್ ಕಪ್ಗೆ ಮುತ್ತಿಕ್ಕಿತು. ೨೦೦೫, ೨೦೧೧ ಮತ್ತು ೨೦೧೫ರಲ್ಲಿ – ಹೀಗೆ ೩ ಬಾರಿ ಸ್ಯಾಫ್ ಚಾಂಪಿಯನ್ ಪಟ್ಟ ಭಾರತದ್ದೇ. ಅಲ್ಲದೆ ೨೦೦೭, ೨೦೦೯ ಮತ್ತು ೨೦೧೨ರಲ್ಲಿ ನೆಹ್ರೂ ಕಪ್ನಲ್ಲೂ ಜಯದ ದಾಖಲೆ. ಈಚೆಗೆ ಭಾರತದಲ್ಲಿ ನಡೆದ ಅಂಡರ್ – ೧೭ ವಿಶ್ವಕಪ್ನಲ್ಲಿ ಮಾತ್ರ ವೀರೋಚಿತ ಸೋಲು.
ಭಾರತ ಫುಟ್ಬಾಲ್ಗೆ ಹೊಸ ಮೆರುಗು
ಫಿಫಾ ೧೭ ವರ್ಷದೊಳಗಿನವರ ವಿಶ್ವಕಪ್ ಫುಟ್ ಬಾಲ್ ಪಂದ್ಯ ಭಾರತದಲ್ಲಿ ಇದೀಗ ಸಂಪನ್ನಗೊಂಡಿದೆ. ಈ ಪಂದ್ಯಕೂಟವು ಫುಟ್ ಬಾಲ್ ಕ್ಷೇತ್ರದಲ್ಲಿ ಭಾರತಕ್ಕೆ ಭವ್ಯಭವಿಷ್ಯದ ಮುನ್ನುಡಿಯನ್ನು ಬರೆಯುತ್ತಿದೆ. ಇದರ ಕುರಿತಾಗಿ ವಿಶ್ವಶ್ರೇಷ್ಠ ಆಟಗಾರರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ:
ಭಾರತದ ನೆಲದಲ್ಲಿ ವಿಶ್ವಕಪ್ ಮಹಾಕೂಟ ನಡೆಯುತ್ತಿರುವುದು ಅವಿಸ್ಮರಣೀಯ. ದೇಶದ ಎಲ್ಲಾ ಭಾಗಗಳಿಗೂ ಫುಟ್ಬಾಲ್ ಪ್ರೀತಿ ಚಿಗುರೊಡೆಯುತ್ತಿದೆ. ಮುಂದಿನ ದಿನಗಳಲ್ಲಿ ಭಾರತದ ಫುಟ್ಬಾಲ್ಗೆ ಹೊಸ ಮೆರುಗು ಸಿಗಲಿದೆ.
– ಹೆನ್ರಿ ಮೆನೆಜೆಸ್, ಹಿರಿಯ ಗೋಲ್ಕೀಪರ್ಫಿಫಾ ವಿಶ್ವಕಪ್ ಭಾರತದಲ್ಲಿ ಫುಟ್ಬಾಲ್ ಕ್ರಾಂತಿಗೆ ಮುನ್ನುಡಿ ಬರೆದಿದೆ. ಭಾರತ ಈ ಕ್ರೀಡೆಯಲ್ಲಿ ಇನ್ನಷ್ಟು ಎತ್ತರಕ್ಕೆ ಏರಲು ಕೂಟ ಅನುವಾಗಿದೆ.
– ಐ.ಎಂ. ವಿಜಯನ್ , ಹಿರಿಯ ಆಟಗಾರಭಾರತದ ನೆಲದಲ್ಲಿ ವಿಶ್ವಕಪ್ ಮಹಾಕೂಟ ನಡೆಯುತ್ತಿರುವುದು ಅವಿಸ್ಮರಣೀಯ. ದೇಶದ ಎಲ್ಲಾ ಭಾಗಗಳಿಗೂ ಫುಟ್ಬಾಲ್ ಕಂಪು ಪಸರಿಸಲು ಇದು ನೆರವಾಗಲಿದೆ.
– ಎಸ್. ಬ್ರಹ್ಮಾನಂದ, ಅರ್ಜುನ ಪುರಸ್ಕೃತ ಆಟಗಾರ (ಹಿರಿಯ ಗೋಲ್ ಕೀಪರ್)ಭಾರತದಲ್ಲಿ ಫುಟ್ಬಾಲ್ಗೆ ಜನರು ಮಾರುಹೋಗಿದ್ದಾರೆ. ಐ.ಎಸ್.ಎಲ್. (ಇಂಡಿಯನ್ ಸೂಪರ್ ಲೀಗ್) ಆರಂಭವಾದ ನಂತರ ಅತ್ಯಂತ ವೇಗವಾಗಿ ಫುಟ್ಬಾಲ್ ಪ್ರೇಮ ಇಲ್ಲಿ ಬೆಳೆಯುತ್ತಿದೆ.
– ರಾಬರ್ಟ್ ಪಿಯರ್ಸ್ ಮತ್ತು ರಾನಿ ಜಾನ್ಸೆನ್ (ಪ್ರೀಮಿಯರ್ ಲೀಗ್ ಆಯೋಜಕರು)
ಭಾರತದಲ್ಲಿ ಫುಟ್ಬಾಲ್ ಪ್ರತಿಭೆಗಳಿಗೆ ಏನೂ ಕೊರತೆಯಿಲ್ಲ. ಅಂಡರ್ -೧೭ ವಿಶ್ವಕಪ್ನಲ್ಲಿ ಗೋಲ್ ಕೀಪರ್ ಧೀರಜ್ ಸಿಂಗ್ರ ಅಮೋಘ ಆಟ, ಚೊಚ್ಚಲ ಗೋಲು ಬಾರಿಸಿದ ಜಿಕ್ಸನ್ ಸಿಂಗ್, ಕರ್ನಾಟಕದ ಸಂಜೀವ್ ಸ್ಟಾಲಿನ್, ನಾಯಕ ಅಮರೇಶ್ – ಇವರೆಲ್ಲ ಫುಟ್ಬಾಲ್ ಅಭಿಮಾನಿಗಳ ಗಮನ ಸೆಳೆದಿದ್ದಾರೆ.
ಸ್ಟೀಫನ್ ಕಾನ್ಸ್ಟ್ಯಾಂಟಿನ್, ?ಣ್ಮುಗಂ ವೆಂಕಟೇಶ್, ರೋಜೇರಿಯೋ ರಾಮೊಸ್, ಡ್ಯಾನಿ ಡಿಗನ್ ತಂಡದ ತರಬೇತುದಾರರಾಗಿ, ಮಾರ್ಗದರ್ಶಕರಾಗಿ ಭಾರತೀಯ ಫುಟ್ಬಾಲ್ ಪ್ರತಿಭೆಗಳಿಗೆ ನೀರೆರೆದು ಪೋಷಿಸುತ್ತಿದ್ದಾರೆ.
ಭವಿ?ದಲ್ಲಿ ಭಾರತ ತಂಡ ಮತ್ತೊಮ್ಮೆ ಜಾಗತಿಕವಾಗಿ ದಾಖಲೆಗಳನ್ನು ನಿರ್ಮಿಸುವತ್ತ ಭರವಸೆಯ ಹೆಜ್ಜೆಗಳನ್ನು ಹಾಕತೊಡಗಿದೆ. ೧೯೫೦-೬೦ರ ಸುವರ್ಣ ಕ್ಷಣಗಳು ಮರುಕಳಿಸಲೆಂದು ಅಭಿಮಾನಿಗಳ ಹಾರೈಸುತ್ತಿದ್ದಾರೆ.
ಬಿಲಿಯರ್ಡ್ಸ್, ಸ್ನೂಕರ್ ಬಿಲಿಯರ್ಡ್ಸ್, ಸ್ನೂಕರ್ ಎಂದ ಕೂಡಲೇ ತಕ್ಷಣ ಎಲ್ಲರ ನೆನಪಿನಂಗಳಕ್ಕೆ ನುಗ್ಗುವ ಹೆಸರು ಪಂಕಜ್ ಆಡ್ವಾಣಿ ಎಂಬ ಬೆಂಗಳೂರು ಯುವಕನದು. ಬೆಂಗಳೂರು ಮೂಲದ ಪಂಕಜ್ ಆಡ್ವಾಣಿ ೧೮ರ ಹರೆಯದಲ್ಲಿ ಜಾಗತಿಕ ಮಟ್ಟದ ಸ್ನೂಕರ್ ಸ್ಪರ್ಧೆಗೆ ಕಾಲಿಟ್ಟಾಗ ಗೇಲಿ ಮಾಡಿದವರೇ ಹೆಚ್ಚು. ಆದರೆ ೨೦೦೩ರ ಅಕ್ಟೋಬರ್ ೨೫ರಂದು ಚೀನಾದ ಜಿಯಾಂಗ್ಮೆನ್ನಲ್ಲಿ ನಡೆದ ಐಟಿಎಸ್ಎಫ್ ವಿಶ್ವ ಸ್ನೂಕರ್ ಸ್ಪರ್ಧೆಯಲ್ಲಿ ಘಟಾನುಘಟಿಗಳನ್ನು ಸೋಲಿಸಿ ಚಾಂಪಿಯನ್ ಟ್ರೋಫಿ ಮೇಲೆತ್ತಿ ಹಿಡಿದಾಗ ಗೇಲಿ ಮಾಡಿದವರೆಲ್ಲ ತಬ್ಬಿಬ್ಬು. ಅದಾದ ಮೇಲೆ ಪಂಕಜ್ ಆಡ್ವಾಣಿ ಹಿಂತಿರುಗಿ ನೋಡಿದ್ದೇ ಇಲ್ಲ.
ಬಿಲಿಯರ್ಡ್ಸ್ ಮತ್ತು ಸ್ನೂಕರ್ ಎರಡರಲ್ಲೂ ಪರಿಣತಿ ಸಾಧಿಸಿರುವ ಪಂಕಜ್ ೨೦೦೫, ೨೦೦೮ ಮತ್ತು ೨೦೧೨ – ಹೀಗೆ ನಿರಂತರ ೩ ಬಾರಿ ವಿಶ್ವಮಟ್ಟದ ಪ್ರಶಸ್ತಿ ಗಳಿಸಿ ಹ್ಯಾಟ್ರಿಕ್ ಸಾಧಿಸಿದ ಹೆಮ್ಮೆಯ ಕನ್ನಡಿಗ. ಸ್ನೂಕರ್ನ ಎರಡೂ ಫಾರ್ಮ್ಯಾಟ್ ಹಾಗೂ ಇಂಗ್ಲಿ? ಬಿಲಿಯರ್ಡ್ಸ್ನ ಎರಡೂ ಪ್ರಾಕಾರಗಳಲ್ಲಿ ವಿಶ್ವಪ್ರಶಸ್ತಿ ಗಳಿಸಿದ ಏಕೈಕ ಆಟಗಾರ ಆತನೊಬ್ಬನೇ. ೨೦೧೭ರ ಫೆಬ್ರುವರಿಯಲ್ಲಿ ಸ್ಕಾಟ್ಲ್ಯಾಂಡ್ನ ಗ್ಲಾಸ್ಗೋವ್ನಲ್ಲಿ ನಡೆದ ವಿಶ್ವ ತಂಡ ಬಿಲಿಯರ್ಡ್ಸ್ ಚಾಂಪಿಯನ್ಶಿಪ್ನಲ್ಲಿ ರೂತೇಶ್ ಶಹಾ, ದೇವೆಂದ್ರ ಜೋಶಿ ಮತ್ತು ಅಶೋಕ್ ಶಾಂಡಿಲ್ಯ ಅವರೊಂದಿಗೆ ಭಾರತಕ್ಕೆ ಚಾಂಪಿಯನ್ಶಿಪ್ ಪ್ರಶಸ್ತಿ ಗೆದ್ದುಕೊಂಡರು.
ಒಟ್ಟಾರೆ ಪಂಕಜ್ ಆಡ್ವಾಣಿ ಇದುವರೆಗೆ ಗಳಿಸಿದ್ದು: ೧೬ ಜಾಗತಿಕ ಪ್ರಶಸ್ತಿಗಳು, ೬ ಏ? ಪ್ರಶಸ್ತಿಗಳು, ೨ ಏ?ನ್ ಗೇಮ್ಸ್ ಪದಕಗಳು, ೧ ಆಸ್ಟ್ರೇಲಿಯನ್ ಓಪನ್ ಹಾಗೂ ೨೯ ರಾಷ್ಟ್ರೀಯ ಪ್ರಶಸ್ತಿಗಳು. ೫೪ ಚಿನ್ನದ ಪದಕಗಳನ್ನು ಇದುವರೆಗೆ ಅವರು ತಮ್ಮ ಜೋಳಿಗೆಗೆ ಹಾಕಿಕೊಂಡಿದ್ದಾರೆ.
ಚೆಸ್ ಗ್ರ್ಯಾಂಡ್ಮಾಸ್ಟರ್ಸ್
ವಿಶ್ವನಾಥನ್ ಆನಂದ್ ಭಾರತದ ಮೊದಲ ಗ್ರ್ಯಾಂಡ್ಮಾಸ್ಟರ್ (ಜಿ.ಎಂ.) ಪಟ್ಟ ಪಡೆದುಕೊಂಡಿದ್ದು ೧೯೮೮ರಲ್ಲಿ. ೨೦೦೦ ಇಸವಿಯಲ್ಲಿ ಫಿಡೆ ವಿಶ್ವ ಚಾಂಪಿಯನ್, ೨೦೦೭ ಮತ್ತು ೨೦೦೮ರಲ್ಲಿ ವಿಶ್ವ ಚೆಸ್ ಚಾಂಪಿಯನ್. ಆ ಬಳಿಕ ೨೦೧೦, ೨೦೧೨, ೨೦೧೩ ಮತ್ತು ೨೦೧೪ರಲ್ಲಿ ವಿಶ್ವ ಚೆಸ್ ಚಾಂಪಿಯನ್ ಪಟ್ಟವನ್ನು ಬೇರೆಯವರಿಗೆ ಬಿಟ್ಟುಕೊಟ್ಟಿರಲಿಲ್ಲ.
ಇದೀಗ ಕರ್ನಾಟಕದ ತೇಜ್ ಕುಮಾರ್ ಸೇರಿದಂತೆ ದೇಶದಲ್ಲಿ ೪೯ ಚೆಸ್ ಸ್ಪರ್ಧಿಗಳು ಗ್ರ್ಯಾಂಡ್ಮಾಸ್ಟರ್ ಪಟ್ಟ ಅಲಂಕರಿಸಿದ್ದಾರೆ. ಈ ಹಂತ ತಲಪುವುದು ಅಂದುಕೊಂಡ? ಸುಲಭವೇನಲ್ಲ. ಅಪಾರ ತಾಳ್ಮೆ, ವಿಶೇ? ಬುದ್ಧಿವಂತಿಕೆ, ಕೌಶಲ, ಚುರುಕುತನವನ್ನು ಅದು ಬೇಡುತ್ತದೆ. ಗ್ರ್ಯಾಂಡ್ ಮಾಸ್ಟರ್ ಪಟ್ಟಕ್ಕೇರಲು ೨೫೦೦ ಇಎಲ್ಓ ಪಾಯಿಂಟ್ಗಳು ಅಗತ್ಯವಿದೆ. ಅದರ ಜತೆಗೆ ಮೂರು ಜಿ.ಎಂ. ನಾರ್ಮ್ಸ್ಗಳೂ ಬೇಕು. ಪುರು?ರ ವಿಭಾಗದಲ್ಲಿ ಅಭಿಮನ್ಯು ಪುರಾಣಿಕ್, ಆರ್ಸನ್ ಚೋಪ್ರ, ಎಸ್.ಎಲ್. ನಾರಾಯಣನ್, ವಿದಿತ್ ಸಂತೋ? ಗುಜರಾತಿ, ವಿ?ಪ್ರಸನ್ನ, ಗಗಾರೆ ಶಾರ್ದೂಲ್ ಮೊದಲಾದವರು; ಮಹಿಳೆಯರ ವಿಭಾಗದಲ್ಲಿ ಪದ್ಮಿನಿ ರಾವುತ್, ನಾಡಿಗ್ ಕೃತ್ತಿಕಾ, ಮೀನಾಕ್ಷಿ ಸುಬ್ಬರಾಯನ್, ಹಂಪಿ ಕೋನೇರು ಮೊದಲಾದವರು ಗ್ರ್ಯಾಂಡ್ಮಾಸ್ಟರ್ಗಳಾಗಿ ಭಾರತದ ಕೀರ್ತಿ ಪತಾಕೆ ಎತ್ತಿಹಿಡಿದಿದ್ದಾರೆ. ೧೦ರ ಹರೆಯದ ಆರ್. ಪ್ರಜ್ಞಾನಂದ ಅತ್ಯಂತ ಕಿರಿಯ ಅಂತಾರಾಷ್ಟ್ರೀಯ ಚೆಸ್ ಮಾಸ್ಟರ್ ಆಗಿ ಹೊರಹೊಮ್ಮಿದ್ದಾನೆ.
ದೀಪಾ ಕರ್ಮಾಕರ್ ಸಾಧನೆ
ರಿಯೋ ಒಲಿಂಪಿಕ್ಸ್ನಲ್ಲಿ ಮೊಟ್ಟಮೊದಲ ಬಾರಿಗೆ ಭಾರತೀಯ ಮಹಿಳೆಯೊಬ್ಬಳು ಜಿಮ್ನಾಸ್ಟಿಕ್ಸ್ ಕ್ಷೇತ್ರದಲ್ಲಿ ಅರ್ಹತೆ ಪಡೆದು ಅಧಿಕೃತವಾಗಿ ಪಾಲ್ಗೊಂಡಿದ್ದು ಭಾರತದ ಪಾಲಿಗೆ ಹೆಮ್ಮೆಯ ಅಧ್ಯಾಯ. ಆಕೆಯೇ ತ್ರಿಪುರಾ ರಾಜ್ಯದ ಅಗರ್ತಲಾ ಮೂಲದ ೨೩ರ ಹರೆಯದ ದೀಪಾ ಕರ್ಮಾಕರ್.
ಸ್ವಾತಂತ್ರ್ಯಾನಂತರದಲ್ಲಿ ಭಾರತದ ೧೧ (೧೯೫೨ರಲ್ಲಿ ಇಬ್ಬರು, ೧೯೫೬ರಲ್ಲಿ ಮೂವರು ಹಾಗೂ ೧೯೬೪ರಲ್ಲಿ ಆರು ಮಂದಿ) ಪುರು? ಜಿಮ್ನಾಸ್ಟಿಕ್ಸ್ ಪಟುಗಳು ಒಲಿಂಪಿಕ್ಸ್ನಲ್ಲಿ ಭಾಗವಹಿಸಿದ್ದರು. ಆದರೆ ಮಹಿಳಾಪಟುವೊಬ್ಬರು ಒಲಿಂಪಿಕ್ಸ್ಗೆ ಅರ್ಹತೆ ಪಡೆದಿದ್ದು ಇದೇ ಮೊದಲು. ಆಗೆಲ್ಲ ಒಲಿಂಪಿಕ್ಸ್ನಲ್ಲಿ ಪಾಲ್ಗೊಳ್ಳಲು ಅರ್ಹತಾಸುತ್ತಿನ ಸ್ಪರ್ಧೆಗಳೇ ಇರಲಿಲ್ಲ. ಸ್ಪರ್ಧಿಗಳ ಸಂಖ್ಯೆಯೂ ಈಗಿನ? ಇರುತ್ತಿರಲಿಲ್ಲ. ಈಗ ಸ್ಪರ್ಧಿಗಳ ಸಂಖ್ಯೆ ಸಾಕ?. ಪೈಪೋಟಿ ಮೊದಲಿಗಿಂತ ಹೆಚ್ಚು. ಇಂತಹ ಪೈಪೋಟಿಯ ಯುಗದಲ್ಲೂ ದೀಪಾ ಕರ್ಮಾಕರ್ ಜಿಮ್ನಾಸ್ಟಿಕ್ಸ್ ಸ್ಪರ್ಧೆಗೆ ಅರ್ಹತೆ ಪಡೆದು, ಪ್ರೊಡುನೋವಾ ಎಂಬ ಜಿಮ್ನಾಸ್ಟಿಕ್ಸ್ ನೆಗೆತಗಳಲ್ಲೇ ಅತಿ ಕ್ಲಿ?ಕರ ಹಾಗೂ ಕಲಾತ್ಮಕವೆನಿಸಿದ ಮಾದರಿ ವಿಭಾಗದಲ್ಲಿ ಸ್ಪರ್ಧಿಸಿದ್ದಳು. ಕೂದಲೆಳೆ ಅಂತರದಲ್ಲಿ ಕಂಚಿನ ಪದಕವಂಚಿತಳಾದಳು. ಆದರೆ ಸ್ಪರ್ಧಿಸಿದ ಮೊದಲ ಬಾರಿಯೇ ಈ ಪರಿಯ ಆಕೆಯ ಸಾಧನೆ ಭಾರತಕ್ಕೆ ಅಪರಿಮಿತ ಸಂತಸ ಉಂಟುಮಾಡಿತ್ತು. ಪದಕ ಸಿಕ್ಕದಿದ್ದರೂ ಒಲಿಂಪಿಕ್ಸ್ನಿಂದ ಮರಳಿದಾಗ ಆಕೆಗೆ ದೇಶದಾದ್ಯಂತ ಭಾರೀ ಸನ್ಮಾನ, ಪುರಸ್ಕಾರ ದೊರೆಯಿತು. ಬರೋಬ್ಬರಿ ೫೨ ವ?ಗಳ ಬಳಿಕ ಭಾರತ ಜಿಮ್ನಾಸ್ಟಿಕ್ಸ್ ವಲಯದಲ್ಲಿ ಪಾಲ್ಗೊಳ್ಳುತ್ತಿರುವ ದಾಖಲೆಗೆ ದೀಪಾ ಭಾಜನರಾದರು.
ಸೈಕ್ಲಿಂಗ್ನಲ್ಲಿ ವಿಪುಲ ಅವಕಾಶ
ಸೈಕ್ಲಿಂಗ್ನಲ್ಲಿ ಭಾರತಕ್ಕೆ ವಿಪುಲ ಅವಕಾಶಗಳು ತೆರೆದಿವೆ. ಆದರೆ ಇದುವರೆಗಿನ ಸಾಧನೆ ಹೇಳಿಕೊಳ್ಳುವಂತಹದ್ದಲ್ಲ. ದಕ್ಷಿಣ ಕೋರಿಯಾ, ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ), ಕಜಕಿಸ್ತಾನ, ಹಾಂಕಾಂಗ್, ಜಪಾನ್ ದೇಶಗಳಿಗೆ ಹೋಲಿಸಿದರೆ ಭಾರತದ ಸೈಕ್ಲಿಂಗ್ ಸ್ಪರ್ಧಿಗಳದು ಸಾಧಾರಣ ಮಟ್ಟ. ಆ ದೇಶಗಳ ಸ್ಪರ್ಧಿಗಳು ಹೊಂದಿರುವ? ಪ್ರಾವೀಣ್ಯ ಮತ್ತು ವೃತ್ತಿಕೌಶಲ ಭಾರತದ ಸ್ಪರ್ಧಿಗಳಿಗೆ ಇಲ್ಲ. ಆ ದೇಶಗಳಲ್ಲಿ ನಡೆಯುವಷ್ಟು ಸೈಕ್ಲಿಂಗ್ ಟೂರ್ನಿಗಳು, ತರಬೇತಿ ವ್ಯವಸ್ಥೆ, ಆಸಕ್ತರನ್ನು ಗುರುತಿಸಿ ಸೌಲಭ್ಯ ನೀಡುವ ಪರಿಪಾಟಿ ಇಲ್ಲಿಲ್ಲದಿರುವುದೇ ಇದಕ್ಕೆ ಕಾರಣ.
ಆದರೂ ನಿರಾಶೆಯ ಸ್ಥಿತಿ ಇಲ್ಲ. ೨೦೧೬ರಲ್ಲಿ ದೆಹಲಿಯಲ್ಲಿ ನಡೆದ ಏ?ಕಪ್ ಸೈಕ್ಲಿಂಗ್ ಚಾಂಪಿಯನ್ಶಿಪ್ನಲ್ಲಿ ಭಾರತಕ್ಕೆ ೨ನೇ ಸ್ಥಾನ ಲಭಿಸಿತ್ತು. ೫ ಚಿನ್ನ, ೪ ಬೆಳ್ಳಿ ಹಾಗೂ ೭ ಕಂಚು – ಒಟ್ಟು ೧೬ ಪದಕಗಳು ಭಾರತದ ಪಾಲಾಗಿದ್ದವು. ಅದಕ್ಕೂ ಮೊದಲು ಹಾಂಕಾಂಗ್ನಲ್ಲಿ ಏ?ಕಪ್ ಸ್ಪರ್ಧೆಯಲ್ಲಿ ಭಾರತಕ್ಕೆ ದೊರಕಿದ್ದು – ೧೧ ಚಿನ್ನ, ೪ ಬೆಳ್ಳಿ ಮತ್ತು ೩ ಕಂಚು – ಒಟ್ಟು ೧೮ ಪದಕಗಳು. ೨೦೧೬ರಲ್ಲಿ ಡೆಬೊರಾ ಹೆರಾಲ್ಡ್ ೩ ಚಿನ್ನ ಹಾಗೂ ೧ ಬೆಳ್ಳಿ ಪದಕ ಗಳಿಕೆಯೊಂದಿಗೆ ಭಾರತದ ಸೈಕ್ಲಿಂಗ್ ಆಶಾಕಿರಣವಾಗಿ ಹೊಮ್ಮಿದ್ದಳು. ಇನ್ನೊಬ್ಬ ಸಾಧಕಿ ಕೆಝಿಯಾ ವರ್ಗೀಸ್ ಪ್ರಯತ್ನ ಅದ್ಭುತವಾಗಿತ್ತಾದರೂ ಆಕೆ ಪಡೆದಿದ್ದು ನಾಲ್ಕನೇ ಸ್ಥಾನ.
ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಕ್ರೀಡಾಕೂಟಗಳಲ್ಲಿ ತಲಾ ೮ ಪದಕ ಜಯಿಸಿರುವ ಕರ್ನಾಟಕದ ಕೃ? ನಾಯ್ಕೋಡಿ, ಸಂದೇಶ ಉಪ್ಪಾರ, ಸಂತೋ? ಇವರೆಲ್ಲ ಸೈಕ್ಲಿಂಗ್ ಸ್ಪರ್ಧೆಯ ಆಶಾಕಿರಣಗಳು. ಸೈಕ್ಲಿಂಗ್ ಸ್ಪರ್ಧಿಗಳಿಗೆ ಪಟಿಯಾಲಾದಲ್ಲಿರುವ ನ್ಯಾಶನಲ್ ಇನ್ಸ್ಟಿಟ್ಯೂಟ್ ಆಫ್ ಸ್ಪೋರ್ಟ್ಸ್ನಲ್ಲಿ ಗುಣಮಟ್ಟದ ತರಬೇತಿ ದೊರೆತಿರುವುದು ಭಾರತಕ್ಕೆ ಈ ಸ್ಪರ್ಧೆಯಲ್ಲಿ ವಿಪುಲ ಅವಕಾಶಗಳನ್ನು ತೆರೆದಿಟ್ಟಿದೆ.
ಒಲಿಂಪಿಕ್ಸ್ ಕನಸು ನನಸಿಗಾಗಿ ಪೋ?ಕರನ್ನೇ ನೋಡದ ಡೆಬೋರಾ ಒಲಿಂಪಿಕ್ಸ್ ಕೂಟದಲ್ಲಿ ಪದಕ ಗೆಲ್ಲುವ ಆಕಾಂಕ್ಷೆ, ಕನಸು ಯಾರಿಗಿರುವುದಿಲ್ಲ, ಹೇಳಿ. ಪದಕದ ಗೆಲವಿಗಾಗಿ ಕ್ರೀಡಾಪಟುಗಳು ಪಡುವ ಪರಿಶ್ರಮ ಅಂಥಿಂಥದ್ದಲ್ಲ. ಭಾರತದ ಅಗ್ರಮಾನ್ಯ ಮಹಿಳಾ ಸೈಕ್ಲಿಸ್ಟ್ ಡೆಬೋರಾ ಹೆರಾಲ್ಡ್ ತನ್ನ ಒಲಿಂಪಿಕ್ಸ್ ಪದಕದ ಕನಸನ್ನು ನನಸಾಗಿಸಿಕೊಳ್ಳಲು ಕಳೆದ ನಾಲ್ಕು ವ?ಗಳಿಂದ ತನ್ನ ಪೋ?ಕರನ್ನೇ ನೋಡಿಲ್ಲವೆಂದರೆ ನೀವು ನಂಬಲೇಬೇಕು.
ಹೌದು, ೨೦೧೩ರ ಜನವರಿಯಲ್ಲಿ ಮನೆಬಿಟ್ಟು ದೆಹಲಿಯ ಇಂಡಿಯನ್ ಒಳಾಂಗಣ ಕ್ರೀಡಾಂಗಣಕ್ಕೆ ಡೆಬೋರಾ ಸೈಕ್ಲಿಂಗ್ ಅಭ್ಯಾಸಕ್ಕೆ ಬಂದಳು. ಅಂದಿನಿಂದ ಇಂದಿನವರೆಗೂ ಆಕೆಯ ಗಮನವೆಲ್ಲ ಕೇವಲ ಸೈಕ್ಲಿಂಗ್ ಅಭ್ಯಾಸದತ್ತಲೇ ಕೇಂದ್ರೀಕೃತ. ದೂರವಾಣಿಯ ಮೂಲಕ ಮಾತ್ರ ಪೋ?ಕರೊಡನೆ ಆಗಾಗ ಕುಶಲೋಪರಿ. ಮನೆಗೆ ಮಾತ್ರ ಹೋಗಿಲ್ಲ. ೨೦೨೦ರ ವೇಳೆಗೆ ಒಲಿಂಪಿಕ್ಸ್ಗೆ ಅರ್ಹತೆ ಗಿಟ್ಟಿಸುವುದಕ್ಕಾಗಿ ಇ?ಲ್ಲ ಕಸರತ್ತು. ಇನ್ನು ೨-೩ ವ?ಗಳ ಕಾಲ ತನ್ನ ಪೋ?ಕರನ್ನು ಭೇಟಿಮಾಡುವುದಿಲ್ಲ ಎಂಬುದು ಆಕೆಯ ಸಂಕಲ್ಪ.
ಡೆಬೋರಾ ಮೂಲತಃ ಅಂಡಮಾನ್ನ ನಿವಾಸಿ. ೨೦೦೪ರಲ್ಲಿ ಸಂಭವಿಸಿದ ಸುನಾಮಿ ದುರಂತದಲ್ಲಿ ಆಕೆ ಆಶ್ಚರ್ಯಕರ ರೀತಿಯಲ್ಲಿ ಬದುಕಿದ್ದಳು. ಸಮುದ್ರz ಅಲೆಗಳ ಹೊಡೆತಕ್ಕೆ ಸಿಲುಕಿದ್ದ ಡೆಬೋರಾ ಮರವೊಂದನ್ನೇರಿ ಐದು ದಿನಗಳ ಕಾಲ ಬರೀ ಎಲೆಗಳನ್ನೇ ತಿಂದು ಬದುಕಿ ಉಳಿದಿದ್ದಳು. ಅಲೆಗಳ ಹೊಡೆತದ ತೀವ್ರತೆ ಇಳಿದ ಮೇಲೆಯೇ ಡೆಬೋರಾ ಮರದಿಂದ ಕೆಳಗಿಳಿದಿದ್ದಳು.
ಟೆನಿಸ್ ದಿಗ್ಗಜರು
ಮಹಿಳೆಯರ ಡಬಲ್ಸ್ನಲ್ಲಿ ಸಾನಿಯಾ ಮಿರ್ಜಾಗೆ ಈಗಲೂ ವಿಶ್ವದ ರ್ಯಾಂಕಿಂಗ್ನಲ್ಲಿ ನಂ. ೧ನೇ ಸ್ಥಾನ. ಮಾರ್ಟಿನಾ ಹಿಂಗಿಸ್ ಜೊತೆಗೂಡಿ ಆಸ್ಟ್ರೇಲಿಯನ್ ಓಪನ್ ಸರಣಿ ಗೆದ್ದಿರುವುದು, ಇವಾನ್ ಡಾಡಿನ್ ಜೊತೆಗೂಡಿ ಫ್ರೆಂಚ್ ಓಪನ್ ಮಿಕ್ಸೆಡ್ ಡಬಲ್ಸ್ನಲ್ಲಿ ರನ್ನರ್-ಅಪ್ ಆಗಿದ್ದು ಈ ಸಾಲಿನ ಆಕೆಯ ಪ್ರಮುಖ ಸಾಧನೆಗಳು.
೪೩ರ ಹರೆಯದಲ್ಲೂ ಲಿಯಾಂಡರ್ ಪೇಸ್ ಅವರದು ಕುಗ್ಗದ ಉತ್ಸಾಹ. ತಗ್ಗದ ಶಾರೀರಿಕ ದೃಢತೆ. ಈ ಇಳಿವಯಸ್ಸಿನಲ್ಲೂ ಪೇಸ್ ಈ ವ? ಫ್ರೆಂಚ್ ಓಪನ್ ಮಿಶ್ರ ಡಬಲ್ಸ್ನಲ್ಲಿ ಇನ್ನೊಬ್ಬ ಟೆನಿಸ್ ದಂತಕಥೆ ಮಾರ್ಟಿನಾ ಹಿಂಗಿಸ್ ಜೊತೆಗೂಡಿ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿರುವುದು ಆತನ ಸಾಧನೆಗೆ ಹಿಡಿದ ಕನ್ನಡಿ. ಜಾಗತಿಕ ಮಟ್ಟದಲ್ಲಿ ಕಿರಿಯ ಟೆನಿಸ್ ಆಟಗಾರರಿಗೆ ಲಿಯಾಂಡರ್ ಪೇಸ್ ಈಗಲೂ ಒಬ್ಬ ರೋಲ್ ಮಾಡೆಲ್. ಹಲವು ಟೆನಿಸ್ ಪ್ರತಿಭೆಗಳಿಗೆ ಪೇಸ್ ಪ್ರೇರಣಾಸ್ರೋತವಾಗಿದ್ದಾರೆ.
ಗಾಲ್ಫ್: ಮಹಿಳಾ ಪ್ರತಿಭೆ
೧೮ರ ಹರೆಯದ ಅದಿತಿ ಅಶೋಕ್ ೨೦೧೬ರ ಹೀರೋ ವುಮೆನ್ಸ್ ಚಾಂಪಿಯನ್ ಓಪನ್ ಮತ್ತು ಖತಾರ್ ಲೇಡೀಸ್ ಓಪನ್ ಪಂದ್ಯಗಳಲ್ಲಿ ಜಯಿಸಿ ಇತಿಹಾಸ ಬರೆದರು. ರಿಯೋ ಒಲಿಂಪಿಕ್ಸ್ನಲ್ಲಿ ಈಕೆಗೆ ಪದಕ ದೊರಕಲಿಲ್ಲ. ಆದರೇನು, ಈಕೆಯ ನಿರ್ವಹಣೆ ಮಾತ್ರ ಅದ್ಭುತವಾಗಿತ್ತು. ಇದೀಗ ಅದಿತಿ ಎಲ್ಪಿಜಿಎ ಟೂರ್ನಿಯಲ್ಲಿ ಆಡಲು ಅರ್ಹತೆ ಪಡೆದಿರುವುದು ಆಕೆಯ ಪ್ರತಿಭೆಗೆ ಸಾಕ್ಷಿ.
ಕಿಕ್ಬಾಕ್ಸಿಂಗ್ ಕಿಶೋರಿ ಜಮ್ಮು ಮತ್ತು ಕಾಶ್ಮೀರ ಮೂಲದ ತಜಮುಲ್ ಇಸ್ಲಾಂ ಎಂಬ ಕಿಶೋರಿಗೆ ಈಗಿನ್ನೂ ೮ರ ಹರೆಯ. ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದು ಎಂಬ ಲೋಕೋಕ್ತಿಯನ್ನು ಆಕೆ ನಿಜಗೊಳಿಸಿದ್ದಾಳೆ. ಈ ವ? ಇಟಲಿಯಲ್ಲಿ ನಡೆದ ವಿಶ್ವ ಕಿಕ್ಬಾಕ್ಸಿಂಗ್ ಚಾಂಪಿಯನ್ಶಿಪ್ ಪಂದ್ಯದಲ್ಲಿ ತಜಮುಲ್ ಚಾಂಪಿಯನ್ ಆಗಿ ಹೊಮ್ಮಿದ್ದಾಳೆ. ಸ್ಪರ್ಧಾತ್ಮಕ ಕ್ರೀಡೆಯಲ್ಲಿ ಜಮ್ಮು ಮತ್ತು ಕಾಶ್ಮೀರದ ಮಹಿಳೆಯರು ಕಾಣಿಸಿಕೊಳ್ಳುವುದೇ ದುಸ್ಸಾಧ್ಯ. ಹಾಗಿದ್ದರೂ ತಜಮುಲ್ಳ ಈ ಸಾಧನೆ ದೇಶದ ಎಲ್ಲ ಯುವತಿಯರಿಗೆ ಒಂದು ಮೇಲ್ಪಂಕ್ತಿಯಾಗಬಲ್ಲದು. ಗುರಿಯನ್ನು ಬೆಂಬತ್ತಿದರೆ ಮನದೊಳಗೆ ಅಡಗಿರುವ ಕನಸನ್ನು ನನಸುಗೊಳಿಸಲು ಸಾಧ್ಯ ಎಂಬ ಸಂದೇಶವನ್ನು ತಜಮುಲ್ ಇಸ್ಲಾಂ ರವಾನಿಸಿದ್ದಾಳೆ.
ರಿಯೋ ಪ್ಯಾರಾಒಲಿಂಪಿಕ್ಸ್
೨೦೧೬ರಲ್ಲಿ ರಿಯೋ ಡಿ ಜನೈರೋದಲ್ಲಿ ನಡೆದ ಪ್ಯಾರಾಒಲಿಂಪಿಕ್ಸ್ನಲ್ಲಿ ಭಾರತದ ಸಾಧನೆ ಕಡಮೆಯದೇನಲ್ಲ. ಪ್ಯಾರಾ – ಅಥ್ಲೆಟ್ಗಳು ದೇಶದ ಹಿರಿಮೆಯನ್ನು ಎತ್ತರಕ್ಕೆ ಕೊಂಡೊಯ್ದಿದ್ದು ಗಮನಿಸಬೇಕಾದ ಅಂಶ. ಜಾವೇಲಿನ್ ಎಫ್೪೬ ಸ್ಪರ್ಧೆಯಲ್ಲಿ ದೇವೆಂದ್ರ ಝಜಾರಿಯಾ – ಚಿನ್ನ, ಹೈಜಂಪ್ ಟಿ ೪೨ನಲ್ಲಿ ಮರಿಯಪ್ಪನ್ ತಂಗವೇಲು – ಚಿನ್ನ, ಶಾಟ್ಪುಟ್ ಎಫ್ ೫೩ರಲ್ಲಿ ದೀಪಾ ಮಲಿಕ್ – ಬೆಳ್ಳಿ ಹಾಗೂ ಹೈಜಂಪ್ ಟಿ ೪೨ರಲ್ಲಿ ವರುಣ್ ಸಿಂಗ್ ಭಾಟಿಯಾ – ಕಂಚು ಪದಕ ಪಡೆದು ಒಲಿಂಪಿಕ್ಸ್ನಲ್ಲಿ ಕುಗ್ಗಿಹೋಗಿದ್ದ ಭಾರತದ ಮಾನವನ್ನು ಪ್ಯಾರಾ ಒಲಿಂಪಿಕ್ಸ್ನಲ್ಲಿ ಹಿಗ್ಗಿಸಿದರು.
ಕಾಮನ್ವೆಲ್ತ್ ಕ್ರೀಡಾಕೂಟದ ಟಾಪ್ಟೆನ್ ಕ್ರೀಡಾ ಸಾಧಕರು : ಅಭಿನವ ಬಿಂದ್ರಾ, ಗಗನ್ ನಾರಂಗ್, ಓಂಕಾರ್ ಸಿಂಗ್, ವಿಜಯ್ಕುಮಾರ್ (ಇವರೆಲ್ಲರೂ ಶೂಟಿಂಗ್ ಪ್ರತಿಭೆಗಳು); ಯೋಗೇಶ್ವರ ದತ್ತ (ಫ್ರೀಸ್ಟೈಲ್ ರೆಸ್ಲರ್); ಗುರುಪ್ರೀತ್ ಸಿಂಗ್ (ಶೂಟಿಂಗ್); ಶರತ್ ಕಮಲ್ (ಟೇಬಲ್ ಟೆನಿಸ್); ಹರ್ಪ್ರೀತ್ ಸಿಂಗ್ (ಶೂಟಿಂಗ್); ಸುಶೀಲ್ಕುಮಾರ್ (ಫ್ರೀಸ್ಟೈಲ್ ರೆಸ್ಲರ್) ಮತ್ತು ಅಮಿತ್ ಕುಮಾರ್ ದಹಿಯಾ (ಕುಸ್ತಿ ಪಟು).
ಕೊನೆ ಮಾತು:
ರಾಷ್ಟ್ರೀಯ/ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಿಂಚಿದ, ಮಿಂಚುತ್ತಿರುವ ಪ್ರತಿಭೆಗಳು ಇವೆಲ್ಲ. ಇನ್ನು ರಾಜ್ಯ, ಜಿಲ್ಲೆ, ತಾಲ್ಲೂಕು, ಗ್ರಾಮಾಂತರ ಮಟ್ಟದಲ್ಲಿಯೂ ಅಗಣಿತ ಕ್ರೀಡಾ ಪ್ರತಿಭೆಗಳಿವೆ. ಆಗಾಗ ಅವರೆಲ್ಲ ಸುದ್ದಿ ಮಾಡುತ್ತಲೇ ಇರುತ್ತಾರೆ. ಅವರಿಗೆಲ್ಲ ಸೂಕ್ತ ತರಬೇತಿ, ಅಗತ್ಯ ಸವಲತ್ತು, ಅವಕಾಶ ಒದಗಿಸಿದಲ್ಲಿ ಭಾರತೀಯ ಕ್ರೀಡಾ ಕ್ಷಿತಿಜ ಇನ್ನ? ಪ್ರಕಾಶಿಸಿ, ಇಡೀ ಜಗತ್ತು ಭಾರತದತ್ತ ಬೆರಗುಗಣ್ಣಿನಿಂದ ನೋಡುವುದರಲ್ಲಿ ಅಚ್ಚರಿಯೇನಿಲ್ಲ. ’ಫುಟ್ಬಾಲ್ ಆಡಿದರೆ ಸ್ವರ್ಗಕ್ಕೆ ಹತ್ತಿರವಾಗುವಿರಿ’ ಎಂದು ವಿವೇಕಾನಂದರು ಅಂದು ಹೇಳಿದ ಮಾತು ಅರ್ಥಪೂರ್ಣವಾದೀತು.
ಆ ದಿನಗಳಿಗಾಗಿ ಕಾಯೋಣ.