ಹೀಗೊಂದು ಕಾಲವಿತ್ತು. ಊರಿನಲ್ಲಿ ಮನೆಯ ಗಂಡಸರನ್ನು ಬೆಳಗ್ಗೆ ಅವರವರ ಕೆಲಸಕಾರ್ಯಗಳಿಗೆ ಕಳಿಸಿಕೊಟ್ಟ ಮೇಲೆ, ಊರಿನ ಹೆಣ್ಣುಮಕ್ಕಳು, ಹೆಂಗಸರು ತೊಳೆಯಲಿರುವ ಬಟ್ಟೆಗಳನ್ನು, ಪಾತ್ರೆಗಳನ್ನು ಬುಟ್ಟಿಯಲ್ಲಿಟ್ಟುಕೊಂಡು ಕೆರೆಯ ಕಡೆಗೆ ದೌಡಾಯಿಸುತ್ತಿದ್ದರು. ಅಲ್ಲಿ ಎಲ್ಲರೂ ಜೊತೆಯಾಗಿ ಕಷ್ಟ-ಸುಖಗಳನ್ನು ಹಂಚಿಕೊಳ್ಳುತ್ತ ಬಟ್ಟೆ ಒಗೆಯುವ, ಪಾತ್ರೆ ತೊಳೆಯುವ, ಸ್ನಾನಮಾಡುವ ತಮ್ಮ ಕಾರ್ಯಕ್ರಮಗಳನ್ನು ನಡೆಸುತ್ತಿದ್ದರು. ಇನ್ನು ಮಧ್ಯಾಹ್ನದ ಹೊತ್ತಿಗೆ, ಸಂಜೆಯ ಹೊತ್ತಿಗೆ ಗಂಡಸರು ಹೊಲ-ಗದ್ದೆಗಳಿಂದ ಬಂದವರು, ಅಥವಾ ತಮ್ಮತಮ್ಮ ಕಸುಬುಗಳನ್ನು ಪೂರೈಸಿ ಬಂದವರು ಅದೇ ಕೆರೆಯಲ್ಲಿ ಸ್ನಾನಮಾಡುವುದು, ಎತ್ತು, ಎಮ್ಮೆ, ದನ-ಕರು, ಕುರಿ ಇತ್ಯಾದಿ ಜಾನುವಾರುಗಳ ಮೈತೊಳೆಯುವುದೂ ಅಲ್ಲಿಯೇ ನಡೆಯುತ್ತಿತ್ತು. ಆಗ ಕಷ್ಟ-ಸುಖಗಳನ್ನು ಹಂಚಿಕೊಳ್ಳುವುದು, ಊರಿನ ಉಸಾಬರಿಕೆ ನಡೆಸುವುದು ಗಂಡಸರ ಸರದಿ. ಇಡೀ ಊರಿಗೆ ಕುಡಿಯುವ ನೀರಿನ ಮೂಲವೂ ಅದೇ ಕೆರೆ.
ಇವೆಲ್ಲ ಅಂದು ಒಂದು ಮಾದರಿ ಊರಿನಲ್ಲಿ ಪ್ರತಿದಿನ ನಡೆಯುವ ಸಹಜ ಸಂಗತಿಗಳಾಗಿದ್ದವು.
ನೋಡುವುದಕ್ಕೆ, ಕೇಳುವುದಕ್ಕೆ ಅಥವಾ ಬರೆಯುವುದಕ್ಕೆ ಇದರಲ್ಲಿ ಅಂಥ ಮಹತ್ತ್ವದ ಸಂಗತಿಯೇನಿದೆ? – ಎಂದು ಅನ್ನಿಸಬಹುದು. ಆದರೆ ಇಲ್ಲೇ ಅಡಗಿರುವುದು ಒಂದು ಊರಿನ ಪರಿಶುದ್ಧ ಸುಪ್ತ ಸತ್ತ್ವ. ಅದೇ ವೇಳೆಗೆ ಅಲ್ಲಿ ಆಪ್ತಸಮಾಲೋಚನೆಗಳು ನಡೆಯುತ್ತಿದ್ದವು. ಊರಿನ ಎಷ್ಟು ಮಹಿಳೆಯರಿಗೆ, ಹೆಣ್ಣುಮಕ್ಕಳಿಗೆ ಅವರವರ ದುಃಖ-ದುಮ್ಮಾನಗಳಿಗೆ ಕೆರೆದಂಡೆಯ ಮೇಲೆ ಸಾಂತ್ವನ, ಸಮಾಧಾನಗಳು ದೊರಕುತ್ತಿದ್ದವು. ಗಂಡಸರಿಗೆ ಎಷ್ಟೆಷ್ಟೋ ಒಳ್ಳೆಯ ಕಾರ್ಯಗಳಿಗೆ ಅಲ್ಲಿಯೆ ಪ್ರೇರಣೆ ದೊರಕುತ್ತಿದ್ದವು. ಊರಿನ ಕುಟುಂಬಗಳಲ್ಲಿ ಪರಸ್ಪರ ಬಾಂಧವ್ಯದ ಬೆಸುಗೆ ಬೆಸೆದುಕೊಳ್ಳುತ್ತಿತ್ತು. ಊರಿಗೆ ಊರೇ ಒಂದೇ ಮನೆಯ ಸದಸ್ಯರಂತೆ ಒಗ್ಗಟ್ಟನಿಂದ ಬಾಳುವುದಕ್ಕೆ ಯಾವತ್ತೂ ಪೂರಕ ವಾತಾವರಣ ನಿರ್ಮಾಣವಾಗುತ್ತಿತ್ತು. ಊರಿನ ಸಂಸ್ಕಾರ-ಸಂಸ್ಕೃತಿ ವೃದ್ಧಿಸುತ್ತಿತ್ತು.
ಗಾದೆಮಾತೇ ಇದೆಯಲ್ಲ – ’ಊರು ಕಟ್ಟುವ ಮೊದಲು ಕೆರೆ ಕಟ್ಟು’ ಎಂದು. ಒಂದು ಊರು ಬೆಳೆಯಬೇಕಾದರೆ, ಸಮೃದ್ಧವಾಗಿರಬೇಕಾದರೆ ಅಲ್ಲಿ ಒಂದು ಕೆರೆ ಇರಲೇ ಬೇಕು. ನದಿ, ಸರೋವರ, ಕೆರೆ ಇತ್ಯಾದಿ ಯಥೇಚ್ಛ ಜಲಮೂಲವಿದ್ದಲ್ಲಿ ಸುತ್ತ ನಾಗರಿಕತೆಗಳು ಬೆಳೆದುನಿಂತವು. ಒಂದು ಊರಿನ ಸಿರಿ ಸಂಪತ್ತನ್ನೂ ಸಮೃದ್ಧಿಯನ್ನೂ ಆ ಊರಿನ ಕೆರೆಗಳಿಂದ ನಿರ್ಧರಿಸುವ ಕಾಲವೂ ಒಂದಿತ್ತೆಂದು ನಾವು ಕೇಳುತ್ತೇವೆ, ಓದುತ್ತೇವೆ.
ಕೆರೆಗಳನ್ನು ಕಟ್ಟಿಸುವುದಕ್ಕೆ ಇರುವ ಪ್ರಮುಖ ಕಾರಣವೆಂದರೆ ನೀರನ್ನು ಸಂಗ್ರಹಿಸಿ ತಮ್ಮ ಅಗತ್ಯಕ್ಕೆ ತಕ್ಕಂತೆ ಬಳಸಿ ವ್ಯವಸಾಯವನ್ನು ಮಾಡುವುದು. ನಮ್ಮ ಪೂರ್ವಜರು ಕೆರೆಗಳನ್ನು ಕಟ್ಟಿಸುವುದು ಪ್ರಜಾಹಿತಾತ್ಮಕ ಕಾರ್ಯವೆಂದೇ ನಂಬಿ ಬದುಕಿದ್ದರು. ಅಂತಹ ಕಾರ್ಯಗಳನ್ನು ಮಾಡಿದವನಿಗೆ ಇಹದಲ್ಲಿಯೂ ಪರದಲ್ಲಿಯೂ ಸದ್ಗತಿಯು ಉಂಟಾಗುವುದೆಂದು ಅವರು ದೃಢವಾಗಿ ನಂಬಿದ್ದರು. ಕೆರೆಯನ್ನು ನಿರ್ಮಿಸುವುದು ಒಂದು ಪುಣ್ಯದ ಕಾರ್ಯ ಎಂದು ಹಿಂದಿನ ಕಾಲದಲ್ಲಿ ಜನಸಾಮಾನ್ಯರ ಮನಸ್ಸಿನಲ್ಲಿ ಬಲವಾಗಿ ಬೇರೂರಿಕೊಂಡಿದ್ದರಿಂದ ಜನರು ಕೆರೆಕಟ್ಟೆ ಕಟ್ಟುವ ಕಾರ್ಯದಲ್ಲಿ ತಮ್ಮನ್ನು ತಾವು ಸಕ್ರಿಯವಾಗಿ ತೊಡಗಿಸಿಕೊಳ್ಳುತ್ತಿದ್ದರು.
ಹೇಗೆ ನಮ್ಮ ಹಿರಿಯರು, ಆಳರಸರು ಜನೋಪಯೋಗಕ್ಕಾಗಿ ಕೆರೆಕುಂಟೆಗಳನ್ನು, ಕಲ್ಯಾಣಿಗಳನ್ನು ನಿರ್ಮಿಸುತ್ತಿದ್ದರೊ ಹಾಗೆ, ಅದೇ ಕಾಲಕ್ಕೆ ಯಾರೊ ಮಹನೀಯರ ಸ್ಮರಣಾರ್ಥಕ್ಕಾಗಿ ಪುಣ್ಯಕಾರ್ಯವಾಗಿಯೂ ಕಲ್ಯಾಣಿಯನ್ನೋ ಕೆರೆಗಳನ್ನೋ ನಿರ್ಮಿಸುತ್ತಿದ್ದರು. ಉದಾಹರಣೆಗೆ – ಈಗ ಬೆಂಗಳೂರಿನ ಕೃ?ರಾಜೇಂದ್ರ ಮಾರುಕಟ್ಟೆ ಇರುವ ಪ್ರದೇಶದಲ್ಲಿ ಹಿಂದೆ ’ಸಿದ್ಧಿಕಟ್ಟೆ’ ಎಂಬ ಒಂದು ಕಲ್ಯಾಣಿ ಇತ್ತೆಂದು ದಾಖಲೆಗಳು ಹೇಳುತ್ತವೆ. ನಾಡಪ್ರಭು ಕೆಂಪೇಗೌಡರು ಅದನ್ನು ತಮ್ಮ ಅರಮನೆಯಲ್ಲಿದ್ದ ಸಿದ್ಧಮ್ಮ ಎಂಬ ದಾಸಿಯೊಬ್ಬಳ ಸ್ಮರಣಾರ್ಥ ನಿರ್ಮಿಸಿದ್ದರೆಂದು ಪ್ರತೀತಿ.
ಹುಟ್ಟಿನ ಕಥೆ
ವಿಶ್ವದಲ್ಲಿರುವ ಸಕಲ ಜೀವರಾಶಿಗಳು ಸಮೃದ್ಧವಾಗಿ ಬದುಕು ಸಾಗಿಸಲು ಅತ್ಯಗತ್ಯವಾಗಿ ಬೇಕಾಗಿರುವ ಸಂಗತಿಗಳಲ್ಲಿ ಗಾಳಿಯ ನಂತರ ನೀರಿಗೆ ಅತಿ ಮಹತ್ತ್ವದ ಸ್ಥಾನವಿದೆ. ನೀರು ಎಲ್ಲ ಜೀವರಾಶಿಗಳಿಗೆ ಜೀವಾಧಾರಕ. ದೈನಂದಿನ ಚಟುವಟಿಕೆಗಳಲ್ಲಿ ಅನಿವಾರ್ಯ. ಅನಾದಿ ಕಾಲದಿಂದಲೂ, ಅಂದರೆ ಈ ಭೂಮಿಯಲ್ಲಿ ಕಾಣಿಸಿಕೊಂಡಂದಿನಿಂದಲೂ ಮಾನವನು ನೀರಿನೊಡನೆ ನಿಕಟ ಸಂಬಂಧವನ್ನು ಹೊಂದಿಯೇ ಇದ್ದಾನೆ. ಅವನ ಎಲ್ಲ ಚಟುವಟಿಕೆಗಳು ನೀರನ್ನೇ ಆಶ್ರಯಿಸಿವೆ. ಅವನು ಒಂದೆಡೆ ನೆಲೆಯಾಗಿ ನಿಂತು ಕೃಷಿಕಜೀವನವನ್ನು ಪ್ರಾರಂಭಿಸಿರುವುದು ನೀರಿನ ಆಶ್ರಯವಿರುವಲ್ಲಿಯೇ. ಮಾನವನು ವ್ಯವಸಾಯವನ್ನು ನಡೆಸಲು ಪ್ರಾರಂಭಿಸಿದ ಮೇಲೆ ಅವನ ಜೀವನದಲ್ಲಿ ಶಿಸ್ತು ಮತ್ತು ಕ್ರಮಬದ್ಧತೆಯು ಬಂತು. ತಾನು ಆರಂಭಿಸಿದ ವ್ಯವಸಾಯಕ್ಕೆ ನೀರು ಅಗತ್ಯವಾದ್ದರಿಂದ ಆತ ಮಳೆ ಮತ್ತು ನದಿಯನ್ನು ಆಶ್ರಯಿಸಿದ. ಮಳೆಯ ವೈಫಲ್ಯವು ಮಾನವನಿಗೆ ಕೃತಕವಾಗಿ ಜಲಸಂಗ್ರಾಹಕಗಳನ್ನು ನಿರ್ಮಿಸಿಕೊಳ್ಳಬೇಕಾದ ಅಗತ್ಯಕ್ಕೆ ಪ್ರಚೋದನೆಯಾಯಿತು. ಇದರಿಂದಾಗಿ ಆತ ನೀರನ್ನು ತನ್ನ ಹತೋಟಿಯಲ್ಲಿ ಇಟ್ಟುಕೊಂಡು ಬೇಕೆಂದಾಗ ಬೇಸಾಯ ಮಾಡಿ ಫಸಲನ್ನು ಬೆಳೆಯಲು ಪ್ರಾರಂಭಿಸಿದ. ಈ ನಿಟ್ಟಿನಲ್ಲಿ ಮಾನವನ ಮೊದಲ ಪ್ರಯತ್ನವು ನಿಸರ್ಗನಿರ್ಮಿತ ಸ್ವಾಭಾವಿಕ ಕೆರೆ-ಕುಂಟೆಗಳ ಸಮೀಪದಲ್ಲಿಯೆ ಇದ್ದುದು ಗಮನಕ್ಕೆ ಬಂದ ಸಂಗತಿ. ಅನಂತರ, ಅಂತಹ ಆಯಕಟ್ಟಿನ ಜಾಗಗಳಲ್ಲಿ ಸಣ್ಣ ಕಟ್ಟೆಗಳನ್ನು ನಿರ್ಮಿಸಿಕೊಂಡು ಮಳೆನೀರನ್ನು ನದೀನೀರನ್ನು ಸಂಗ್ರಹಿಸಿಕೊಳ್ಳುವ ಕಾರ್ಯಕ್ಕೆಳಸಿದ. ಜೊತೆಜೊತೆಗೆ ಅವನ ಸಂತತಿಯೂ ಬೆಳೆಯತೊಡಗಿತು. ಬೆಳೆಯುತ್ತಿರುವ ಜನಸಂಖ್ಯೆಗನುಗುಣವಾಗಿ ಕೃಷಿ ಉತ್ಪಾದನೆಯ ಆವಶ್ಯಕತೆಯೂ ವೃದ್ಧಿಸಿತು. ಕೃತಕ ಜಲಾಶಯಗಳ ಆವಶ್ಯಕತೆಯೂ ಹೆಚ್ಚಿತು. ಇದು ಕೆರೆಯ ಹುಟ್ಟಿನ ಕಥೆ.
ಇತಿಹಾಸ
ಭಾರತದಲ್ಲಿ ದೊರೆತಿರುವ ಪ್ರಾಕ್ತನ ಮಾನವ ನೆಲೆಗಳೆಲ್ಲವೂ ನದಿ ಅಥವಾ ನೀರಿನ ಸಮೃದ್ಧ ಆಶ್ರಯವಿರುವಂಥ ಜಾಗದಲ್ಲೇ ದೊರೆತಿವೆ. ಮಥುರಾ, ನಾಗಾರ್ಜುನಕೊಂಡ, ಕುಮ್ರಹಾರ್ (ಪಟ್ನಾ), ಬೆಸನಗರ್, ಶೃಂಗವೇಲಪುರ್ ಮುಂತಾದವು ಅಂತಹ ನೆಲೆಗಳಾಗಿದ್ದವು.
ಅಂದಿನ ಸಮಕಾಲೀನ ಸಾಹಿತ್ಯಗಳಲ್ಲಿಯೂ ನೀರಾವರಿ ವ್ಯವಸ್ಥೆಯ ವಿಶದಚಿತ್ರಣವು ಬಹಳವಾಗಿ ದೊರೆಯುತ್ತದೆ. ಋಗ್ವೇದ, ಅಥರ್ವಣವೇದಗಳಲ್ಲಿ ಕೆರೆ ನೀರಾವರಿ ಪದ್ಧತಿಯ ಉಲ್ಲೇಖಗಳಿವೆ. ಧರ್ಮಸೂತ್ರ, ಪುರಾಣಗಳು, ಮಹಾಭಾರತ, ರಾಮಾಯಣ, ಅರ್ಥಶಾಸ್ತ್ರಗಳೂ ನೀರಾವರಿ ಪದ್ಧತಿಯನ್ನು ಕುರಿತು ವಿವರಿಸುತ್ತವೆ.
ಐತಿಹಾಸಿಕ ಶಾಸನಗಳಲ್ಲೂ ಕೃಷಿ, ಕೆರೆ-ಕಟ್ಟೆ, ನೀರಾವರಿ ಪದ್ಧತಿಗಳನ್ನು ಕುರಿತ ಅನೇಕ ಮಹತ್ತ್ವದ ಮಾಹಿತಿಗಳನ್ನು ಕಾಣಬಹುದು. ಕ್ರಿ.ಪೂ. ನಾಲ್ಕನೆಯ ಶತಮಾನದಲ್ಲಿ ಚಂದ್ರಗುಪ್ತಮೌರ್ಯನ ಕಾಲದಿಂದಲೂ ಕೆರೆಗಳ ನಿರ್ಮಾಣ ಕಾರ್ಯವು ಇತ್ತೆಂದು ಶಾಸನಗಳ ಆಧಾರದಿಂದ ತಿಳಿದುಬರುತ್ತದೆ. ಕ್ರಿಸ್ತ ಪೂರ್ವದಲ್ಲೇ ಪ್ರಾರಂಭವಾದ ಈ ಪ್ರಕ್ರಿಯೆಯು ಅನಾಹತವಾಗಿ ಸಾಗುತ್ತಲೇ ಬಂದಿದೆ. ನಮ್ಮ ಆಳರಸು ಮನೆತನಗಳವರು ಅದನ್ನು ಸಾಗಿಸುತ್ತಾ ಬಂದಿದ್ದಾರೆ.
ಆಳರಸರ ಕಾಲದಲ್ಲಿ ಕೃಷಿಗೆ ಮತ್ತು ನೀರಾವರಿಗೆ ಬಹಳ ಮಹತ್ತ್ವ ನೀಡಿದ್ದರು ಎಂಬುದಕ್ಕೆ ಸಾಕ್ಷಿಯಾಗಿ ಅವರು ನಿರ್ಮಿಸಿದ ಅನೇಕ ನೀರಾವರಿ ರಚನೆಗಳು ದೊರಕಿವೆ. ಮಾತ್ರವಲ್ಲ, ಅವರ ಕಾಲದ ಶಾಸನಗಳೂ ಈ ಕುರಿತಾಗಿ ಉಲ್ಲೇಖಿಸುತ್ತವೆ. ಕೆರೆಗಳನ್ನು ಕಟ್ಟುವುದಕ್ಕೆ ಇದ್ದ ಪ್ರಮುಖವಾದ ಕಾರಣಗಳಲ್ಲಿ ಒಂದು ಬದಲಾಗುತ್ತಿರುವ ಹವಾಮಾನ ಎಂದು ನಂಬಲಾಗಿದೆ. ಜೊತೆಗೆ ಜನರಲ್ಲಿ ಬೆಳೆದ, ಬೆಳೆಯುತ್ತಿರುವ ಧಾರ್ಮಿಕ ಸಾಮಾಜಿಕ ನಂಬಿಕೆಗಳು ಕೂಡ.
ಆಳರಸರ ಕಾಲದಲ್ಲಿ ಆಡಳಿತವನ್ನು ವಿಕೇಂದ್ರೀಕರಿಸಿ ನೀರಾವರಿ ವ್ಯವಸ್ಥೆಗೆ ಹೆಚ್ಚಿನ ಪ್ರೋತ್ಸಾಹ ನೀಡಿದ್ದರು ಎಂಬುದು ಶಾಸನಗಳಿಂದ ತಿಳಿದುಬರುತ್ತದೆ. ಸ್ಥಳೀಯ ಅಧಿಕಾರಿಗಳು ನೀರಾವರಿ ವ್ಯವಸ್ಥೆಗೆ ಸರಿಸುಮಾರು ಮೂರನೇ ಒಂದು ಭಾಗದ? ಕಾರಣೀಭೂತರಾದರೆ, ಇವರೊಂದಿಗೆ ಜನಸಾಮಾನ್ಯರೂ, ಸಾಮಂತರೂ ಗಣನೀಯವಾಗಿ ತಮ್ಮ ಕೊಡುಗೆಯನ್ನು ನೀಡಿರುವುದು ವ್ಯಕ್ತವಾಗುತ್ತದೆ. ಅಂತಹ ಶಾಸನಗಳು ಕೆರೆಗಳನ್ನು ಹೇಗೆ ಕಟ್ಟಬೇಕು, ಯಾವ ಸ್ಥಳವನ್ನು ಆಯ್ಕೆ ಮಾಡಬೇಕು, ಏನೇನೆಲ್ಲ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ತಿಳಿಸುವುದಲ್ಲದೆ, ಕೆರೆ ನಿರ್ಮಾಣದಲ್ಲಿ ಯಾವ ಸಾಮಗ್ರಿಗಳನ್ನು ಬಳಸಲಾಗಿತ್ತು ಎಂಬುದರ ವಿವರಗಳನ್ನೂ ನೀಡುತ್ತವೆ. ಅಂದರೆ ಕೆರೆ ನಿರ್ಮಾಣಕಾರ್ಯದಲ್ಲಿ ಅವರೆಷ್ಟು ನೈಪುಣ್ಯ ಹೊಂದಿದ್ದರು ಎಂದು ಅರಿವಾಗುತ್ತದೆ.
ಪೂರ್ವಜರ ಆದರ್ಶ
ಕೆರೆಗಳು, ಬಾವಿಗಳು, ಅಣೆಕಟ್ಟುಗಳು ಮುಂತಾದ ನೀರಾವರಿ ರಚನೆಗಳು ನಮ್ಮ ಪೂರ್ವಜರು ಸಾಮಾಜಿಕ, ಧಾರ್ಮಿಕ, ಆರ್ಥಿಕ ಕಾರಣಗಳಿಗಾಗಿ ನಿರ್ಮಿಸಿದ್ದು, ಅವುಗಳ ಪ್ರಯೋಜನವನ್ನು ಅಂದಿನ ಜನರು ಪಡೆದಿರುವುದು ನಿರ್ವಿವಾದ ಸಂಗತಿಯಾಗಿದ್ದು, ಅಂತಹ ಹಲವಾರು ರಚನೆಗಳು ಇಂದಿಗೂ ಬಳಕೆಯಲ್ಲಿವೆ. ನಮ್ಮ ಪೂರ್ವಜರು ನಿಸರ್ಗವನ್ನು ಅಭ್ಯಸಿಸಿ, ಅದಕ್ಕನುಗುಣವಾಗಿ ನೀರಾವರಿ ರಚನೆಗಳನ್ನು ಮಾಡುತ್ತಿದ್ದರು. ಆದರೆ, ಇಂದು ಅವರ ತಂತ್ರಜ್ಞಾನವನ್ನು ನಾವು ಅರಿಯದೇ ಹೊಸದಾದ
ತಂತ್ರಜ್ಞಾನಕ್ಕೆ ಮೊರೆಹೊಕ್ಕು ಪಾರಂಪರಿಕವಾಗಿ ಬಂದಿರುವ ತಂತ್ರಜ್ಞಾನವನ್ನು ಅಲಕ್ಷ್ಯಪಡಿಸಿದ್ದೇವೆಯೇ ಎಂದು ಭಾಸವಾಗುತ್ತದೆ. ಆದುದರಿಂದ ಅಂದಿನ ತಂತ್ರಜ್ಞಾನವನ್ನು ನಾವು ಇಂದಿನ ಜೀವನದಲ್ಲಿ ಅಳವಡಿಸಿಕೊಂಡಿದ್ದೇ ಆದರೆ ನಮ್ಮ ಆರ್ಥಿಕ ಬೊಕ್ಕಸವನ್ನು ಬರಿದುಗೊಳಿಸದೆಯೆ ಅಭಿವೃದ್ಧಿಯನ್ನು ಸಾಧಿಸಬಹುದು ಹಾಗೂ ಪರಿಸರವನ್ನೂ ರಕ್ಷಿಸಿಕೊಳ್ಳಬಹುದು ಎಂದು ದೃಢವಾಗಿ ಹೇಳಬಹುದು.
ಮರಗಿಡಗಳನ್ನು ನೆಡಿಸುವುದು, ಬಾವಿಗಳನ್ನು ತೋಡಿಸುವುದು, ಕೆರೆಕಟ್ಟೆಗಳನ್ನು ನಿರ್ಮಿಸುವುದು, ದೇವಾಲಯಗಳನ್ನು ಕಟ್ಟಿಸುವುದು, ಶಿಕ್ಷಣಕೇಂದ್ರಗಳನ್ನು ಸ್ಥಾಪಿಸುವುದು, ಅನ್ನಛತ್ರಗಳನ್ನು ತೆರೆಯುವುದು ಇತ್ಯಾದಿಗಳು ಭಾರತೀಯರ ಜೀವನಕ್ರಮದಲ್ಲಿ ಔದಾರ್ಯ ಮತ್ತು ದಾನಶೀಲತೆಗಳಿಗೆ ಆದರ್ಶಪ್ರಾಯವಾಗಿದ್ದವು. ಮಾನವನಿಗೆ ಮಾತ್ರವಲ್ಲದೆ ಇತರ ಎಲ್ಲ ಜೀವಜಂತುಗಳಿಗೆ ನೀರುಣಿಸುವುದು ನಮ್ಮ ಜೀವನಕ್ರಮದಲ್ಲಿ ಸಹಜಪ್ರವೃತ್ತಿಯೇ ಆಗಿದೆ. ರೈತರ ಬೆಳೆಗಳಿಗಂತು ಕೆರೆಯ ನೀರು ಪ್ರಾಣದಾಯಕವಾಗಿದೆ. ಆದ್ದರಿಂದಲೆ ಒಂದು ಕೆರೆ ಎಂಬುದು ಹಳ್ಳಿಯ ಅಥವಾ ನಗರದ ಪಾಲಿಗೆ ಕೇವಲ ನೀರು ತುಂಬಿದ ಒಂದು ಜಲಪಾತ್ರವಾಗದೆ ಅವಿಭಾಜ್ಯ ಜೀವಾಂಗವಾಗಿದ್ದವು.
ಆದರೆ ಇಂಥ ಎಷ್ಟೋ ಕೆರೆಕಟ್ಟೆಗಳು ಇಂದು ರಾಜ್ಯಾದ್ಯಂತ ನೆನಪಾಗಿಯ? ಉಳಿದಿರುವುದು ದುರದೃಷ್ಟದ ಸಂಗತಿ. ಒಂದೊಮ್ಮೆ ನಮ್ಮ ಹಳ್ಳಿ ಅಥವಾ ನಗರ ಜೀವನದ ಕೇಂದ್ರಬಿಂದುವಾಗಿದ್ದ, ಹಲವು ಸಾಂಸ್ಕೃತಿಕ ಸಂಗತಿಗಳಿಗೆ ಸ್ಫೂರ್ತಿಸೆಲೆಯಾಗಿದ್ದ ಮತ್ತು ವ್ಯವಸಾಯ ಹಾಗೂ ಕುಡಿಯುವ ನೀರಿನ ಜೀವಸೆಲೆಯಾಗಿದ್ದ ಕೆರೆಗಳು ಇಂದು ಸಂಪೂರ್ಣವಾಗಿ ಅಳಿದುಹೋಗುವಂಥ ಕಾಲಘಟ್ಟದಲ್ಲಿ ನಾವಿದ್ದೇವೆ.
ನಗರೀಕರಣ, ಜಾಗತೀಕರಣ, ಆಧುನಿಕ ತಂತ್ರಜ್ಞಾನ, ಬದಲಾದ ಜೀವನಶೈಲಿ ಮುಂತಾದ ಕಾರಣಗಳಿಂದಾಗಿ ಇಂದು ಜನರೂ ಬದಲಾಗಿದ್ದಾರೆ. ಅವರ ನೈತಿಕತೆಯೂ ಬದಲಾಗಿದೆ. ಜನರ ದುರಾಸೆಗೆ ಕೆರೆಯ ಭಾಗಗಳ ಒತ್ತುವರಿಯಾಗುತ್ತಿದೆ. ಅಭಿವೃದ್ಧಿಯ ಹೆಸರಿನಲ್ಲಿ ನಿರ್ಮಾಣವಾಗುತ್ತಿರುವ ರಸ್ತೆಗಳಿಗೆ ಕೆರೆಗಳು ಕರಗುತ್ತಿವೆ. ವಸತಿಸಮುಚ್ಛಯಗಳಿಗಾಗಿ ಕೆರೆಗಳ ಜಮೀನಿನ ಕಬಳಿಕೆಯಾಗುತ್ತಿದೆ. ಸಮರ್ಪಕ ಯೋಜನೆಗಳಿಲ್ಲದೆ ಕಲುಷಿತ ನೀರು ಕೆರೆಗಳನ್ನು ಸೇರುತ್ತಿದೆ. ನಮ್ಮ ಪೂರ್ವಜರ ಅಂದಿನ ಉದಾತ್ತ ಕನಸುಗಳು ಭಗ್ನಗೊಳ್ಳುತ್ತಿವೆ.
ಬದಲಾದ ಸಂಬಂಧ
ನಮ್ಮ ಪೂರ್ವಜರ ಕಾಲದಲ್ಲಿ ಕೆರೆಗಳ ಜೊತೆಗೆ ಊರ ಜನರಿಗೆ ಒಂದು ಅವಿನಾಭಾವ ಸಂಬಂಧವಿರುತ್ತಿತ್ತು. ’ಇದು ನಮ್ಮೂರಿನ ಕೆರೆ. ಇದು ನಮ್ಮ ಕೆರೆ’ ಎಂಬ ಭಾವನೆಯಿರುತ್ತಿತ್ತು. ಏಕೆಂದರೆ ಅಂದು ಅವರ ಇಡೀ ಜೀವನ ಕೆರೆಯ ನೀರಿನೊಂದಿಗೆ ಹಾಸುಹೊಕ್ಕಾಗಿತ್ತು.
ಆದರೆ ಇಂದು ಕಾಲ ಬದಲಾಗಿದೆ. ಕುಡಿಯಲು ಸಂಸ್ಕರಿಸಿದ ಬಾಟಲು ನೀರಿದೆ. ಪ್ರತಿಯೊಂದು ಮನೆಗೂ ಹರಿದುಬರುವ ಕೊಳಾಯಿ ನೀರಿನ ಸೌಲಭ್ಯವಿದೆ. ನೀರನ್ನು ಸಂಗ್ರಹಿಸಿಡಲು ಸಂಪುಗಳಿವೆ. ಇನ್ನೂ ಬೇಕಾದರೆ ಕೊಳವೆಬಾವಿಗಳಿವೆ. ಹೊಲಗದ್ದೆಗಳಿಗೆ ಹರಿದುಬರುವ ನೀರಿನ ಕಾಲುವೆಗಳಿವೆ. ಯಾರೂ ಕೂಡ ನೇರವಾಗಿ ಕೆರೆಗಳನ್ನು ಅವಲಂಬಿಸಿಲ್ಲ. ಆದ್ದರಿಂದ ಯಾರಿಗೂ ಊರಿನ ಕೆರೆ ’ಇದು ನಮ್ಮದೇ ಕೆರೆ’ ಎಂದೆನಿಸುವುದಿಲ್ಲ. ’ಕೆರೆಯ ಉಸಾಬರಿ ನನಗೇಕೆ?’ ಎಂದುಕೊಳ್ಳುವವರೇ ಎಲ್ಲ.
ರಕ್ಷಣೆ ಮತ್ತು ನಿರ್ವಹಣೆ
ಆಳರಸರ ಕಾಲದಲ್ಲಿ ಕೆರೆ ಕಟ್ಟಿಸುವುದಷ್ಟೇ ಅಲ್ಲ, ಅದರ ರಕ್ಷಣೆ ಮತ್ತು ನಿರ್ವಹಣೆಯ ಬಾಧ್ಯತೆಗಳನ್ನೂ ಅವರು ಬಹಳ ಸಮರ್ಪಕವಾಗಿ ಮಾಡುತ್ತಿದ್ದರು. ತತ್ಸಂಬಂಧಿ ಹಲವಾರು ನೀತಿ ನಿಯಮಗಳನ್ನು ಅವರು ಅಳವಡಿಸಿಕೊಂಡಿದ್ದರು. ಕೆರೆ ಕಟ್ಟುವವನಿಗೆ ವಿಶೇ? ತೆರಿಗೆ ವಿನಾಯ್ತಿಗಳು ಇರುತ್ತಿದ್ದವು. ಕೆರೆಯ ರಕ್ಷಕನಿಗೆ ವಿಶೇಷ ಸವಲತ್ತುಗಳನ್ನು ನೀಡಲಾಗುತ್ತಿತ್ತು. ಕೆರೆಯ ರಕ್ಷಣೆ ಮತ್ತು ನಿರ್ವಹಣೆಯ ಕಾರ್ಯವನ್ನು ವ್ಯಕ್ತಿ, ಸಂಘಸಂಸ್ಥೆಗಳು, ರಾಜ, ರಾಜಪ್ರತಿನಿಧಿಗಳು ಹಾಗೂ ದೇವಾಲಯಗಳು ಸಹ ನಿರ್ವಹಿಸುತ್ತಿದ್ದವು ಎಂಬ ಉಲ್ಲೇಖಗಳು ಶಾಸನಗಳಲ್ಲಿ ದೊರಕುತ್ತವೆ.
ಇಂದಿಗೂ ಕೆರೆಗಳ ರಕ್ಷಣೆಯ ಕಾರ್ಯ ಸರ್ಕಾರದ ಸಾಂವಿಧಾನಿಕ ಹೊಣೆ. ಕೆರೆಗಳನ್ನು ಕಾಯ್ದುಕೊಳ್ಳುವುದು ಸಾರ್ವಜನಿಕರಾದ ನಮ್ಮೆಲ್ಲರ ಜವಾಬ್ದಾರಿ. ಸಂವಿಧಾನದ ೪೮(ಎ) ವಿಧಿಯ ಪ್ರಕಾರ ಪ್ರಾಕೃತಿಕ ಸಂಪತ್ತನ್ನು ಉಳಿಸುವ ಹೊಣೆ ಸರ್ಕಾರದ್ದು. ೫೧(ಜಿ) ವಿಧಿಯಂತೆ ಇದು ಪ್ರತಿಯೊಬ್ಬ ನಾಗರಿಕನ ಜವಾಬ್ದಾರಿಯೂ ಹೌದು. ಸಂವಿಧಾನದ ೨೧ನೇ ವಿಧಿಯ ಪ್ರಕಾರ ಎಲ್ಲರಿಗೂ ಬದುಕುವ ಹಕ್ಕಿದೆ. ಇದು ನೈಸರ್ಗಿಕ ಸಂಪನ್ಮೂಲಕ್ಕೂ ಅನ್ವಯಿಸುತ್ತದೆ.
ಕೆರೆಗಳನ್ನು ಉಳಿಸಬೇಕಾದದ್ದು ಹೇಗೆ ಸರ್ಕಾರದ ಹೊಣೆಯೋ, ಅಂತೆಯೇ ಅದಕ್ಕಾಗಿ ಸಾರ್ವಜನಿಕರೂ ತಮ್ಮ ಜವಾಬ್ದಾರಿಗಳನ್ನು ನಿರ್ವಹಿಸಬೇಕು. ಸರಕಾರವನ್ನು ಆಗಾಗ್ಗೆ ಎಚ್ಚರಿಸಬೇಕು. ಆ ಬಗ್ಗೆ ನಾಗರಿಕರು ಆಸಕ್ತಿ ವಹಿಸಿದರೆ ನಮ್ಮ ಕೆರೆಗಳೂ ಉಳಿಯುತ್ತವೆ, ಪರಿಸರದ ರಕ್ಷಣೆಯೂ ಆಗುತ್ತದೆ.