ಕೆರೆಗಳನ್ನು ಕಟ್ಟಿಸುವುದು, ಬೇಸಾಯಕ್ಕೆ ನೀರೊದಗಿಸುವುದು ಇಹಪರಗಳಲ್ಲಿ ಒಳ್ಳೆಯ ಸ್ಥಾನ, ಸದ್ಗತಿಗಳನ್ನು ನೀಡುವ ಕಾರ್ಯ ಎಂದು ನಮ್ಮ ಪೂರ್ವಿಕರು ನಂಬಿದ್ದರಿಂದ ಕರ್ನಾಟಕದಲ್ಲಿ ಅತ್ಯಧಿಕ ಸಂಖ್ಯೆಯಲ್ಲಿ ಪುರಾತನವಾದ ಕೆರೆಗಳು ಕಂಡುಬರುತ್ತವೆ. ವಿಜಯನಗರ ರಾಜರ ಆಳ್ವಿಕೆಯ ಕಾಲದಲ್ಲಿ ಬೆಳೆಯುತ್ತಿದ್ದ ಜನಸಂಖ್ಯೆ, ಹೆಚ್ಚಾಗುತ್ತಿದ್ದ ಕೃಷಿಭೂಮಿಗೆ ಅನುಗುಣವಾಗಿ ಕೆರೆ, ಕುಂಟೆ ಇತ್ಯಾದಿ ಜಲಸಂಗ್ರಾಹಕಗಳನ್ನು, ಕಾಲುವೆಗಳನ್ನು ಅಧಿಕ ಸಂಖ್ಯೆಯಲ್ಲಿ ನಿರ್ಮಿಸಲಾಯಿತು.
ಮಾನವ ಜಗತ್ತಿನ ಅತಿ ಮುಖ್ಯ ಮತ್ತು ಅನಿವಾರ್ಯ ಚಟುವಟಿಕೆ ಕೃಷಿ ಕಾರ್ಯ. ಕೋಟಿ ವಿದ್ಯೆಗಳಲ್ಲಿ ಮೇಟಿ ವಿದ್ಯೆಯೇ ಮೇಲು ಎಂಬುದು ಜನಜನಿತ ನುಡಿ. ಬಹುಶಃ ಮಳೆಯನ್ನೇ ನಂಬಿ ವ್ಯವಸಾಯವನ್ನು ಪೂರ್ವಕಾಲದಲ್ಲಿ ನಡೆಸುತ್ತಿದ್ದಿರಬಹುದು. ವಿಪುಲವಾಗಿ ನೀರು ಸಿಗುವ ನದಿ, ಪ್ರಾಕೃತಿಕ ಸರೋವರಗಳು ಕೃಷಿಕರಿಗೆ ಆಶ್ರಯಗಳಾಗಿದ್ದವೆಂದು ಭಾವಿಸಬಹುದು. ಆದರೆ ಅಕಾಲಿಕ ಮಳೆ, ಬರ ಇತ್ಯಾದಿ ಪ್ರಕೃತಿ ವೈಚಿತ್ರ್ಯಗಳು ಮತ್ತು ನಿರಂತರವಾಗಿ ಸುಧಾರಣೆ, ಬದಲಾವಣೆ ಕಾಣುತ್ತಿದ್ದ ಉಳುಮೆಯ ಪದ್ಧತಿಗಳು ಅವನನ್ನು ನೀರನ್ನು ಸಂಗ್ರಹಿಸಲೇಬೇಕಾದ ಅನಿವಾರ್ಯತೆಗೆ ದೂಡಿದವು. ನಗರಗಳ ನಿರ್ಮಾಣವೂ ಕುಡಿಯುವ ನೀರಿಗೆ ಬಾವಿ, ನದಿಗಳಿಂದ ಹೊರತಾದ ಜಲಮೂಲವೊಂದನ್ನು ಕಂಡುಕೊಳ್ಳುವ ಆವಶ್ಯಕತೆಯನ್ನು ಸೃಷ್ಟಿಸಿದವು. ಕೆರೆಗಳ ಕಟ್ಟುವಿಕೆಗೆ ಇದು ಮುಖ್ಯ ಕಾರಣವಾಯಿತು. ಸಹಜವಾಗಿಯೇ ಇವು ಬೃಹತ್ಕಾರ್ಯಗಳಾಗಿದ್ದರಿಂದ, ಇವುಗಳ ನಿರ್ಮಾಣದಲ್ಲಿ ಪ್ರಭುತ್ವವೂ ಹೊಣೆಹೊರಬೇಕಾಯಿತು.
ನೀರಾವರಿ – ಪುರಾತನ ವ್ಯವಸ್ಥೆ
ಅತ್ಯಂತ ಪ್ರಾಚೀನ ಸಾಹಿತ್ಯವಾದ ವೇದಗಳಲ್ಲಿ ಸಹ ಕೆರೆಗಳ ಉಲ್ಲೇಖ ಮತ್ತು ಆ ಮೂಲಕ ಬೇಸಾಯಕ್ಕೆ ನೀರಿನ ಬಳಕೆಯ ಉಲ್ಲೇಖಗಳಿವೆ. ಕೂಪ, ಸರಸ್ ಮತ್ತು ಕೃತ್ರಿಮ ನದಿಯಾ ಎಂದು ವೇದಗಳಲ್ಲಿ ಇವುಗಳನ್ನು ಉಲ್ಲೇಖಿಸುತ್ತಾರೆ. ಹಾಗೆಯೇ ಕೌಶಿಕಸೂತ್ರ, ಬೋಧಾಯನ ಧರ್ಮಸೂತ್ರ, ಧರ್ಮಪದ ಇತ್ಯಾದಿ ಕೃತಿಗಳು ನೀರನ್ನು ನಾಲೆಗಳ ಮೂಲಕ ಹರಿಸುವುದರ ಕುರಿತು ವಿವರಿಸುತ್ತವೆ.
ಮನು ತನ್ನ ಸ್ಮೃತಿಯಲ್ಲಿ ಇಂತಹ ನೀರಿನ ವ್ಯವಸ್ಥೆಗಳಿಗೆ ಯಾವುದೇ ವಿಧವಾದ ಧಕ್ಕೆ ಉಂಟುಮಾಡಿದರೆ ಅಂತಹವರಿಗೆ ಮರಣದಂಡನೆಯೇ ಶಿಕ್ಷೆ ಎಂದು ಬರೆದಿದ್ದಾನೆ.
ಎಲ್ಲರಿಗೂ ಪರಿಚಿತವಿರುವ ರಾಮಾಯಣ ಮತ್ತು ಮಹಾಭಾರತ ಗ್ರಂಥಗಳಲ್ಲಿಯಂತೂ ಕೆರೆ, ನಾಲೆಗಳನ್ನು ಕಟ್ಟಿಸುವುದು ಮಹಾರಾಜನು ಕೈಗೊಳ್ಳಬೇಕಾದ ಕಾರ್ಯಗಳಲ್ಲಿ ಪ್ರಮುಖವಾದವೆಂದು ಹೇಳಲಾಗಿದೆ. ಮಹಾಭಾರತದ ಸಭಾಪರ್ವದಲ್ಲಿ “ಮಳೆಯನ್ನೇ ನೆಚ್ಚಿಕೊಂಡು ಬೇಸಾಯಕ್ಕೆ ತೊಡಗಬಾರದು ಹಾಗೂ ಕೆರೆ ಮತ್ತು ಸರೋವರಗಳನ್ನು ನಿರ್ಮಿಸಿಕೊಂಡು ಬೇಸಾಯಕ್ಕೆ ತೊಡಗಬೇಕು” – ಎಂದು ನಾರದರು ಧರ್ಮರಾಜನಿಗೆ ಉಪದೇಶಿಸುತ್ತಾರೆ.
ಚಾಣಕ್ಯನು ತನ್ನ ಅರ್ಥಶಾಸ್ತ್ರ ಗ್ರಂಥದಲ್ಲಿ ಮಗಧ ರಾಜ್ಯದಲ್ಲಿ ವಾರ್ಷಿಕವಾಗಿ ಆಗುತ್ತಿದ್ದ ಮಳೆಯ ಪ್ರಮಾಣ, ಅಕಾಲಿಕ ಮಳೆ, ಅದಕ್ಕನುಗುಣವಾಗಿ ಅನುಸರಿಸಬೇಕಾದ ಬೇಸಾಯ ಪದ್ಧತಿ ಮತ್ತು ಕೃತಕ ನೀರಾವರಿ ವ್ಯವಸ್ಥೆಗಳ ಕುರಿತು ಸ್ಪಷ್ಟವಾಗಿ ವಿವರಿಸಿದ್ದಾನೆ. ಅಲ್ಲದೆ ಆ ರಾಜ್ಯದಲ್ಲಿ ಎಷ್ಟು ಕೆರೆ ಮತ್ತು ಸರೋವರಗಳಿವೆ, ಎಷ್ಟು ಸುಸ್ಥಿತಿಯಲ್ಲಿವೆ, ಹಳೆಯವು ಎಷ್ಟು, ದುರಸ್ತಿಗೊಳ್ಳಬೇಕಾದ ಕೆರೆಗಳೆಷ್ಟು, ಮಾತ್ರವಲ್ಲ ಪ್ರತಿ ಗ್ರಾಮದಲ್ಲಿರುವ ಕೆರೆಗಳ ಸಂಖ್ಯೆ ತನಗೆ ಗೊತ್ತೆಂದು ಉಲ್ಲೇಖಿಸುತ್ತಾನೆ. ಜೊತೆಯಲ್ಲಿ ಕೆರೆಯ ತೂಬುಗಳನ್ನು ಕಾಲಕಾಲಕ್ಕೆ ಪರೀಕ್ಷಿಸಿ ಅವುಗಳನ್ನು ಸುಸ್ಥಿತಿಯಲ್ಲಿಡುವುದು, ನೀರನ್ನು ಸಮರ್ಪಕವಾಗಿ ಹಂಚುವುದು ಇನ್ನಿತರ ಕರ್ತವ್ಯಗಳ ಬಗ್ಗೆ ಹಾಗೂ ಅದನ್ನು ನಿರ್ವಹಿಸಬೇಕಾದ ವ್ಯಕ್ತಿಗಳ ಕುರಿತಾಗಿಯೂ ವಿವರಣೆಯಿದೆ. ಎಲ್ಲದಕ್ಕೂ ಮುಖ್ಯವಾಗಿ ರಾಜನು ಹೊಸ ಗ್ರಾಮವೊಂದನ್ನು ನಿರ್ಮಿಸುವುದಕ್ಕೆ ಮುಂಚೆ ಕೆರೆಯನ್ನು ನಿರ್ಮಿಸಬೇಕೆಂದು ಮತ್ತು ಆ ಕೆರೆಯ ನಿರ್ಮಾಣದಲ್ಲಿ ಪಾಲ್ಗೊಂಡ ಜನರಿಗೆ ತೆರಿಗೆಯಲ್ಲಿ ವಿನಾಯಿತಿ ಕೊಡಬೇಕೆಂದು ಸಹ ತಿಳಿಸುತ್ತಾನೆ.
ವಿಜಯನಗರ ಕಾಲದಲ್ಲಿ (೧೬೫೬ರ ಆಸುಪಾಸಿನಲ್ಲಿ) ಅಪ್ಪಕವಿಯಿಂದ ರಚಿತವಾದ ’ಕವಿಜನಾಶ್ರಯಮು’ ಎನ್ನುವ ತೆಲುಗು ಕೃತಿಯಲ್ಲಿ ತಟಾಕ (ಕೆರೆ), ವನ ಮತ್ತು ದೇವಸ್ಥಾನಗಳ ನಿರ್ಮಾಣಗಳನ್ನು ಸಪ್ತಸಂತಾನಗಳಲ್ಲಿ ಪ್ರಮುಖವೆಂದು ಹೇಳಲಾಗಿದೆ.
ಅಂದರೆ ಭಾರತ ದೇಶದ ಪರಂಪರೆಯಲ್ಲಿ ನೀರಾವರಿ ವ್ಯವಸ್ಥೆ ಮಾಡುವುದು, ಕೆರೆಗಳನ್ನು ಕಟ್ಟಿಸುವುದು ಮತ್ತು ಬಾವಿಗಳನ್ನು ತೋಡಿಸುವುದು ರಾಜರ, ಮಂತ್ರಿಗಳ ಆದ್ಯತೆಯ ಕೆಲಸವಾಗಿತ್ತು ಎಂಬುದು ಸ್ಪಷ್ಟವಾಗುತ್ತದೆ. ಇದಕ್ಕೆ ಪೂರಕವಾಗಿ ಪುರಾತನ ಕಾಲದಿಂದ ಉಳಿದುಕೊಂಡು ಬಂದಿರುವ ವಿವಿಧ ರೀತಿಯ ಜಲಸಂಗ್ರಹಣಾಗಾರಗಳ ಕುರುಹುಗಳನ್ನು ದೇಶಾದ್ಯಂತ ಕಾಣಬಹುದು.
ಸಿಂಧೂ ನದಿ/ಸರಸ್ವತಿ ನದಿ ನಾಗರಿಕತೆಯ ಜನರು ಮಾಡಿಕೊಂಡಿದ್ದ ನೀರಿನ ವ್ಯವಸ್ಥೆಗಳ ಕುರಿತಾಗಿ ಅಪಾರ ಅಧ್ಯಯನಗಳಾಗಿವೆ. ಪುರಾವೆಗಳು ಸಹ ದೊರೆತಿವೆ. ರಾಜಸ್ತಾನದ ಗಂಗಾನಗರ್ ಮತ್ತು ಗುಜರಾತಿನಲ್ಲಿರುವ ದೋಲವೀರಾ ಎಂಬ ಗ್ರಾಮದಲ್ಲಿ ನಡೆಸಿರುವ ಉತ್ಖನನದಲ್ಲಿ ದೊರೆತ ಇದೇ ಕಾಲಘಟ್ಟಕ್ಕೆ ಸೇರಿದ ರಚನೆಗಳು ಅತ್ಯಂತ ಸಮರ್ಪಕವಾದ ನೀರು ಸರಬರಾಜು ವ್ಯವಸ್ಥೆ ಇತ್ತೆಂಬುದಕ್ಕೆ ಸಾಕ್ಷಿಗಳಾಗಿವೆ.
ಕ್ರಿ.ಪೂ. ೮೦೦ರ ಕಾಲಕ್ಕೆ ಸೇರಿದ ಮಳೆನೀರು ಸಂಗ್ರಹಕ್ಕಾಗಿ ಬಳಸುತ್ತಿದ್ದ ಅನೇಕ ತಗ್ಗಿನ ಪ್ರದೇಶಗಳು ಉತ್ತರ ತಮಿಳುನಾಡಿನಲ್ಲಿ ಕಂಡುಬರುತ್ತವೆ.
ಚಂದ್ರಗುಪ್ತ ಮೌರ್ಯ, ಅಶೋಕನ ಕಾಲದ ಅನೇಕ ಕೆರೆ-ಕಟ್ಟೆ ಜಲಾಶಯಗಳ ಉಲ್ಲೇಖ ಪ್ರಾಚೀನ ಸಾಹಿತ್ಯಗಳಲ್ಲಿದೆ. ಮೆಗಾಸ್ತನೀಸ್ನಂತಹ ವಿದೇಶಿ ಯಾತ್ರಿಕರು ಸಹ ಈ ಬಗ್ಗೆ ಸವಿವರವಾಗಿ ದಾಖಲಿಸಿದ್ದಾರೆ.
ಕರ್ನಾಟಕದಲ್ಲಿ ಕೆರೆಗಳು
ಪ್ರಜಾಹಿತವೇ ಪ್ರಮುಖವೆಂದು ಆಚರಣೆಯಲ್ಲಿ ಪಾಲಿಸುತ್ತಿದ್ದ ಕರ್ನಾಟಕದ ಬಹುಪಾಲು ರಾಜವಂಶಗಳ ಆಡಳಿತ ಕಾಲದಲ್ಲಿ ಅನೇಕ ಕೆರೆಕಟ್ಟೆಗಳು, ಕಾಲುವೆ, ಅಣೆಕಟ್ಟುಗಳನ್ನು ನಿರ್ಮಿಸಲಾಗಿದೆ. ಕದಂಬರು, ಗಂಗರು, ಚಾಲುಕ್ಯರು, ಹೊಯ್ಸಳರಾದಿಯಾಗಿ ಕನ್ನಂಬಾಡಿಯನ್ನು ನಿರ್ಮಿಸಿದ ಯದುಕುಲದವರವರೆಗೆ ಪ್ರಜಾಹಿತಕ್ಕಾಗಿ ಕುಡಿಯುವ ನೀರಿನ ಸೌಲಭ್ಯದ ಜೊತೆಗೆ ಬೇಸಾಯಕ್ಕೆ ಸಹಾಯಕವಾಗುವಂತೆ ನೀರಾವರಿ ವ್ಯವಸ್ಥೆಗಳನ್ನು ಮಾಡಿರುವ ರಾಜರು ನಮಗೆ ಕಾಣಲು ಸಿಗುತ್ತಾರೆ.
ಕರ್ನಾಟಕದ ಅತ್ಯಂತ ಪ್ರಾಚೀನ ಕೆರೆಗಳಲ್ಲಿ ಪ್ರಮುಖವಾಗಿರುವುದು ನಾಲ್ಕನೆ ಶತಮಾನದಲ್ಲಿ ಅಸ್ತಿತ್ವಕ್ಕೆ ಬಂದ ಚಿತ್ರದುರ್ಗ ಜಿಲ್ಲೆಯ ಚಂದ್ರವಳ್ಳಿಯ ಕೆರೆ. ಕದಂಬರಾಜ ಮಯೂರವರ್ಮನು ನಿರ್ಮಿಸಿರುವ ಈ ಕೆರೆ ಎರಡು ಬೆಟ್ಟಗಳ ನಡುವಿನ ಕಣಿವೆಯಲ್ಲಿದೆ.
ಚಾಲುಕ್ಯ ವಂಶದ ದೊರೆಗಳು ನಿರ್ಮಿಸಿದ ಕೆರೆಗಳು ಬಾದಾಮಿ, ಕಲ್ಯಾಣ ಇತ್ಯಾದಿ ಕಡೆಗಳಲ್ಲಿ ಕಂಡುಬರುತ್ತವೆ. ಮೂರನೇ ಸೋಮೇಶ್ವರ ಎಂಬ ಚಾಲುಕ್ಯರ ದೊರೆ (ಕ್ರಿ.ಶ. ೧೨ನೇ ಶತಮಾನ) ತನ್ನ ಮಾನಸೋಲ್ಲಾಸ ಕೃತಿಯಲ್ಲಿ ಕೆರೆ, ಕುಂಟೆ, ಬಾವಿಗಳನ್ನು ನಿರ್ಮಿಸಬೇಕಾದ ಸ್ಥಳ, ವಿಧಾನಗಳನ್ನು ವಿವರಿಸಿದ್ದಾನೆ.
ಹಾಗೆಯೇ ವಿಕ್ರಮಾದಿತ್ಯನ ಶಾಸನವೊಂದು ತುಂಗಭದ್ರಾ ನದಿಗೆ ಅಡ್ಡಲಾಗಿ ಅಣೆಕಟ್ಟನ್ನು ನಿರ್ಮಿಸಿ ಕಾಲುವೆಗಳನ್ನು ಮತ್ತು ಉಪಕಾಲುವೆಗಳನ್ನು ತೋಡಲಾಗಿತ್ತು ಎಂದು ತಿಳಿಸುತ್ತದೆ. ಕಲ್ಯಾಣ ಚಾಲುಕ್ಯರ ಆಳ್ವಿಕೆಯ ಕಾಲವನ್ನು ’ಕೆರೆಗಳ ಸುವರ್ಣಯುಗ’ ಎಂದೇ ಕರೆಯಲಾಗಿದೆ.
ಮತ್ತೊಂದು ಪ್ರಮುಖ ರಾಜವಂಶವಾದ ಹೊಯ್ಸಳರು ಕಟ್ಟಿಸಿದ ಕೆರೆಗಳನ್ನು ಹಳೇಬೀಡು, ಬೇಲೂರುಗಳಲ್ಲಿ ಈಗಲೂ ಕಾಣಬಹುದು. ಹಂಪೆಕಟ್ಟೆ ಎಂಬುದು ವಿಜಯನಗರ ಸಾಮ್ರಾಜ್ಯಕ್ಕೂ ಪೂರ್ವದಲ್ಲಿಯೇ ನಿರ್ಮಿಸಲ್ಪಟ್ಟಿದ್ದ ಅಣೆಕಟ್ಟಾಗಿದೆ.
ಕೆರೆಯಂ ಕಟ್ಟಿಸು
ಯತಿವರೇಣ್ಯ ವಿದ್ಯಾರಣ್ಯರ ಮಾರ್ಗದರ್ಶನ, ಅದಕ್ಕೂ ಪೂರ್ವದಲ್ಲಿ ವೀರ ಕಂಪಿಲರಾಯ ಮತ್ತು ಹೊಯ್ಸಳ ದೊರೆ ಮುಮ್ಮಡಿ ವೀರ ಬಲ್ಲಾಳನ ದೂರದರ್ಶಿತ್ವ, ಬಲಿದಾನಗಳ ಅಸ್ತಿಭಾರದ ಮೇಲೆ ಸಂಗಮ ವಂಶದ ಹಕ್ಕ ಬುಕ್ಕ ಸಹೋದರರು ಸ್ಥಾಪಿಸಿದ ವಿಜಯನಗರ ಸಾಮ್ರಾಜ್ಯವು ಭಾರತದ ಇತಿಹಾಸದಲ್ಲಿ ಶಾಶ್ವತ ಸ್ಥಾನವನ್ನು ಗಳಿಸಿದೆ. ದೇಶೀಯ ಸಭ್ಯತೆ, ಧರ್ಮ, ಸಂಸ್ಕೃತಿ, ಸಾಹಿತ್ಯ, ಕಲೆ ಇವುಗಳ ರಕ್ಷಣೆಗೆ ಈ ರಾಜಪರಂಪರೆ ದೃಢವಾಗಿ ನಿಂತದ್ದು ಗೊತ್ತಿರುವ ಸಂಗತಿಯೇ ಆಗಿದೆ. ಇದರೊಟ್ಟಿಗೆ ದಾಳಿಕೋರ ಬಹುಮನಿ ಸುಲ್ತಾನರುಗಳಿಂದ ಸುತ್ತುವರಿದು ಸದಾ ಸಂಘರ್ಷಗಳನ್ನು ನಡೆಸುತ್ತಿದ್ದರೂ, ರೈತಾಪಿಗಳ ಕೃಷಿಯೂ ಸೇರಿದಂತೆ ನಗರಕೇಂದ್ರಿತ ಸಮಾಜದ ಆವಶ್ಯಕತೆಗಳಿಗೆ ತಕ್ಕಂತೆ ನೀರಾವರಿಯ ವ್ಯವಸ್ಥೆಗಳನ್ನು ಕಲ್ಪಿಸುವಲ್ಲಿ ಈ ಸಾಮ್ರಾಜ್ಯದ ದೊರೆಗಳು ಹಿಂದೆ ಬೀಳಲಿಲ್ಲ. ಆಯಕಟ್ಟಿನ ಪ್ರದೇಶವಾದ ತುಂಗಭದ್ರಾ-ಕೃಷ್ಣಾ ನದಿಗಳ ನಡುತೊರೆಯ ನಾಡು ದೈವದತ್ತವಾಗಿಯೇ ಇವರಿಗೆ ಒಲಿದಿತ್ತು.
ಹಂಪೆಯ ಕಡಲೆಕಾಳು ಗಣೇಶನ ಗುಡಿಯ ಮುಂದಿನ ಶಾಸನದಲ್ಲಿ ’ಕೆರೆಯಂ ಕಟ್ಟಿಸು ಬಾವಿಯಂ ಸವೆಸು ದೇವಾಗಾರಮಂ ಮಾಡಿಸು| ಎಂದು ಲಕ್ಷ್ಮೀಧರನು ಹಸುಗೂಸಾಗಿದ್ದಾಗ ಆತನ ತಾಯಿ ಮೊಲೆಯೂಡಿಸುತ್ತಾ ಹಾಡುತ್ತಿದ್ದಳು’ ಎಂದು ಕೆತ್ತಲಾಗಿದೆ. ಲಕ್ಷ್ಮೀಧರನು ಕ್ರಿ.ಶ. ೧೪೦೬ರಿಂದ ೧೪೨೨ರವರೆಗೆ ವಿಜಯನಗರವನ್ನು ಆಳಿದ ಪ್ರೌಢಪ್ರತಾಪ ದೇವರಾಯನ ಮಂತ್ರಿಯಾಗಿದ್ದವನು. ಹಾಗೆಯೇ ದೇವರಾಯನ ಮಂತ್ರಿಗಳಾಗಿದ್ದ ಮಾದರಸ ಮತ್ತು ಸಾಯಣ್ಣರ ಕಾರ್ಯದ ಕುರಿತು ಸಹ ’ತೋಡದ ಬಾವಿಯಿಲ್ಲ ಮರಕಟ್ಟದ ಪೇರ್ಗ್ಗರೆಯಿಲ್ಲ ಲೀಲೆಯಂ ಮಾಡದ ದೇವತಾಭವನಮಿಲ್ಲೊಲವಿಂ ಬಿಡದಗ್ಗ್ರಹಾರಮಿ |’ ಎಂದು ಇದೇ ಶಾಸನವು ಮೆಚ್ಚುಗೆ ಸೂಚಿಸುತ್ತದೆ.
ಕೆರೆಗಳ ಬೀಡು – ಕನ್ನಡ ನಾಡು
ಕೆರೆಗಳನ್ನು ಕಟ್ಟಿಸುವುದು, ಬೇಸಾಯಕ್ಕೆ ನೀರೊದಗಿಸುವುದು ಇಹಪರಗಳಲ್ಲಿ ಒಳ್ಳೆಯ ಸ್ಥಾನ, ಸದ್ಗತಿಗಳನ್ನು ನೀಡುವ ಕಾರ್ಯ ಎಂದು ನಮ್ಮ ಪೂರ್ವಿಕರು ನಂಬಿದ್ದರಿಂದ ಕರ್ನಾಟಕದಲ್ಲಿ ಅತ್ಯಧಿಕ ಸಂಖ್ಯೆಯಲ್ಲಿ ಪುರಾತನವಾದ ಕೆರೆಗಳು ಕಂಡುಬರುತ್ತವೆ. ವಿಜಯನಗರ ರಾಜರ ಆಳ್ವಿಕೆಯ ಕಾಲದಲ್ಲಿ ಬೆಳೆಯುತ್ತಿದ್ದ ಜನಸಂಖ್ಯೆ, ಹೆಚ್ಚಾಗುತ್ತಿದ್ದ ಕೃಷಿಭೂಮಿಗೆ ಅನುಗುಣವಾಗಿ ಕೆರೆ, ಕುಂಟೆ ಇತ್ಯಾದಿ ಜಲಸಂಗ್ರಾಹಕಗಳನ್ನು, ಕಾಲುವೆಗಳನ್ನು ಅಧಿಕಸಂಖ್ಯೆಯಲ್ಲಿ ನಿರ್ಮಿಸಲಾಯಿತು. ಇವುಗಳಲ್ಲಿ ಮಳೆಯ ನೀರನ್ನು ಆಶ್ರಯಿಸಿದ ಕೆರೆಗಳು ಮತ್ತು ನದಿಯ ನೀರನ್ನು ಆಶ್ರಯಿಸಿದ ಕೆರೆಗಳು ಹೀಗೆ ಎರಡೂ ರೀತಿಯ ಕೆರೆಗಳ ನಿರ್ಮಾಣವಾಯಿತು. ಬಳ್ಳಾರಿಯ ಕಮಲಾಪುರದ ಕೆರೆ, ಅಳ್ಳಿ ಕೆರೆ, ದರೋಜಿ ಕೆರೆ ಮುಂತಾದುವು ನದಿಯ ನೀರನ್ನು ಅವಲಂಬಿಸಿವೆ. ಹಾಗೆಯೇ ದಣ್ಣನಾಯಕನ ಕೆರೆ, ಜಂಭಯ್ಯನ ಕೆರೆ, ಹುಲಿಕುಂಟೆ ಕೆರೆ ಇತ್ಯಾದಿಗಳು ಮಳೆನೀರಿನ ಕೆರೆಗಳಿಗೆ ಉದಾಹರಣೆಗಳು.
ವಿಜಯನಗರ ಕಾಲದ ಕೆರೆ ಕಟ್ಟುವಿಕೆಯಲ್ಲಿ ಅತ್ಯಂತ ವೈಜ್ಞಾನಿಕತೆಯನ್ನು ಗಮನಿಸಬಹುದು. ಈ ಜಿಲ್ಲೆಯ ಮಳೆಯ ವೈಪರೀತ್ಯವನ್ನು ಗಮನದಲ್ಲಿಟ್ಟುಕೊಂಡು ಕೇವಲ ಒಂದು ಕೆರೆಯನ್ನು ಕಟ್ಟಿಸದೇ ಎರಡು ಅಥವಾ ಮೂರು ಕೆರೆಗಳ ಸರಣಿಗಳನ್ನು ನಿರ್ಮಿಸಿರುವುದನ್ನು ಕಾಣಬಹುದು. ಅಂದರೆ ನಿಸರ್ಗದ ಭೌಗೋಳಿಕ ಲಕ್ಷಣ, ಅತಿವೃಷ್ಟಿ ಮತ್ತು ಅನಾವೃಷ್ಟಿಗಳನ್ನು ಲೆಕ್ಕಹಾಕಿ ಒಂದು ಕೆರೆಯ ನೀರು ತುಂಬಿದರೆ ಅದು ಕೋಡಿ ಹರಿದು ಮತ್ತೊಂದು ಕೆರೆ ತುಂಬುವಂತೆ ವಿವಿಧ ಭೂಮಟ್ಟಗಳಲ್ಲಿ ಕೆರೆಗಳನ್ನು ಕಟ್ಟಲಾಗಿದೆ. ಇದರಿಂದಾಗಿ ತುಂಬಿದ ಕೆರೆಯ ಕಟ್ಟೆ ಒಡೆದು ಹಾನಿಯಾಗುವ, ನೀರು ಪೋಲಾಗುವ ಸಂಭವನೀಯತೆಗಳನ್ನು ತಪ್ಪಿಸಲಾಗಿದೆ. ಈಗಲೂ ಕಾಣಸಿಗುವ ಹೊಸಪೇಟೆ ತಾಲ್ಲೂಕಿನ ತಿಮ್ಮಲಾಪುರ ಗ್ರಾಮದ ಕೆರೆಗಳು ಇದೇ ರೀತಿಯ ಕೆರೆಗಳ ಸಮೂಹವೇ ಆಗಿದೆ.
ಕೆರೆ ಕಟ್ಟುವವರಾರು?
ಕೆರೆ ಕಟ್ಟುವ ಕಾರ್ಯ ಪಾಳೇಗಾರರಿಂದ ಹಿಡಿದು ರಾಜನವರೆಗೆ ಎಲ್ಲರ ಮುಂದಾಳತ್ವ ಹಾಗೂ ಪಾಲ್ಗೊಳ್ಳುವಿಕೆಯಿಂದ ನಡೆಯುತ್ತಿತ್ತು. ಶ್ರೀಸಾಮಾನ್ಯರು, ದೊಡ್ಡದೊಡ್ಡ ವ್ಯಾಪಾರಿಗಳು ಮುಂದೆ ನಿಂತು ಕೆರೆ ಕಟ್ಟಿಸಿದ ಉದಾಹರಣೆಗಳೂ ಇವೆ. ಕೆರೆ ಕಟ್ಟುವಂತಹ ಬೃಹತ್ ಕಾರ್ಯಗಳು ಸಕಲ ಜನರ ತೊಡಗುವಿಕೆಯಿಂದ ಆಗುತ್ತಿದ್ದರೂ ಸಹ ಪ್ರಮುಖವಾಗಿ ಉಪ್ಪಾರ ಜನಾಂಗದವರು ಈ ಕಾಯಕದಲ್ಲಿ ಮುಂದಿದ್ದರು ಎಂಬುದು ಆಗಿನ ಕಾಲದ ಶಾಸನಗಳಲ್ಲಿ ಕಂಡುಬರುವ ಸಂಗತಿ. ಹಾಗೆಯೇ ಕಟ್ಟಿಗರು, ಒಡ್ಡರು ಎಂಬ ಜನಾಂಗದವರೂ ಸಹ ಕೆರೆ ಕಟ್ಟುವ ಕಾಯಕದಲ್ಲಿ ತೊಡಗಿಕೊಂಡವರೇ.
ವಿಜಯನಗರದ ಆಳ್ವಿಕೆಯ ಕಾಲದ ಒಟ್ಟು ಕೆರೆಗಳ ನಿರ್ಮಾಣ ಮತ್ತು ಅದನ್ನು ಮುಂದೆ ನಿಂತು ಕಟ್ಟಿದವರ ಶೇಕಡಾವಾರು ಅಂಕಿ-ಅಂಶಗಳನ್ನು ಜೋಡಿಸಿದರೆ ಅತ್ಯಂತ ಕುತೂಹಲಕರ ಅಂಶ ಕಾಣಸಿಗುತ್ತದೆ. ಅದೆಂದರೆ ರಾಜರಿಗಿಂತ ಹೆಚ್ಚು ಕೆಳಹಂತದ ಅಧಿಕಾರಿ, ಸಾಮಂತ ಮತ್ತು ಸಾಮಾನ್ಯರುಗಳೇ ಅಧಿಕಸಂಖ್ಯೆಯ ಕೆರೆಗಳನ್ನು ನಿರ್ಮಿಸಿದ್ದು ಕಂಡುಬರುತ್ತದೆ.
ಇದರ ಬಗ್ಗೆ ಆಳವಾಗಿ ಅಧ್ಯಯನ ಮಾಡಿ ’ಹಂಪಿ ಪರಿಸರದ ಕೆರೆಗಳು’ ಎಂಬ ಪುಸ್ತಕವನ್ನೇ ಬರೆದಿರುವ ಸಿ.ಎಸ್. ವಾಸುದೇವನ್ ಅವರು ಹೀಗೊಂದು ಕೋ?ಕವನ್ನು ಕೊಟ್ಟಿದ್ದಾರೆ:
ಕೆರೆ ಕಟ್ಟಿಸಿದವರು ಶೇಕಡಾವಾರು
ರಾಜರು ೫.೭೨
ಮಂತ್ರಿಗಳು ೭.೯
ರಾಜೋದ್ಯೋಗಿಗಳು ೫.೭೨
ಮಾಂಡಲೀಕರು ೩.೬೬
ಸ್ಥಳೀಯ ಅಧಿಕಾರಿಗಳು ೨೯.೯
ಸಾಮಂತರು ೨೦.೫೪
ಸಾಮಾನ್ಯರು (ವ್ಯಾಪಾರಿ ಇತ್ಯಾದಿ) ೨೬.೫೬
ವಿಜಯನಗರ ಕಾಲದಲ್ಲಿ ಆಡಳಿತವು ವಿಕೇಂದ್ರಿತಗೊಂಡು ವಿವಿಧಹಂತಗಳಲ್ಲಿ ಜನರ ಮುಂದಾಳತ್ವ, ಪಾಲ್ಗೊಳ್ಳುವಿಕೆ ಇದ್ದುದರಿಂದ ಈ ರೀತಿಯ ಜನೋಪಯೋಗಿ ಕಾರ್ಯಗಳು ಹೆಚ್ಚಾಗಿ ಆಗಿವೆ ಎಂಬುದು ಇಲ್ಲಿ ಸ್ಪ?ವಾಗುತ್ತದೆ. ಅಲ್ಲದೆ ಪ್ರತಿಯೊಂದು ಕೆರೆಯ ಕುರಿತೂ ಶಾಸನಗಳನ್ನು ಆಯಾ ಪ್ರದೇಶಗಳಲ್ಲಿಯೇ ನಿಲ್ಲಿಸಿರುವುದರಿಂದ ನಿಖರ ಮಾಹಿತಿಯೂ ಲಭ್ಯವಾಗಿದೆ. ಉದಾಹರಣೆಗೆ ಕ್ರಿ.ಶ. ೧೩೬೯ರಲ್ಲಿ ಬುಕ್ಕರಾಯನ ಕಾಲದಲ್ಲಿ ಕಟ್ಟಲಾದ ಈಗ ಆಂಧ್ರಕ್ಕೆ ಸೇರಿರುವ ಕಡಪ ಜಿಲ್ಲೆಯ ಪೊರುಮಾಮಿಲ್ಲ ಗ್ರಾಮದ ಕೆರೆಯ ದಂಡೆಯ ಮೇಲಿನ ಶಾಸನವು ಈ ಕೆರೆಯನ್ನು ಯುವರಾಜನಾದ ಭಾಸ್ಕರನು ಕಟ್ಟಿಸಿದ ಮತ್ತು ಇದಕ್ಕೆ ’ಅನಂತರಾಜ ಸಾಗರ’ವೆಂದು ಹೆಸರಿಟ್ಟಿರುವುದನ್ನು ಹೇಳುತ್ತದೆ.
ಅನೇಕ ಸಂಸ್ಕೃತ ಗ್ರಂಥಗಳನ್ನು ರಚಿಸಿರುವ ವಿರೂಪಾಕ್ಷಪಂಡಿತ ಮತ್ತು ವಿನಾಯಕಪಂಡಿತರೆಂಬ ಸೋದರರು ಹಂಪೆಯಲ್ಲಿ ದೇವಾಲಯ ಮತ್ತು ಕೆರೆಯನ್ನು ನಿರ್ಮಿಸಿದರು ಎಂದು ಶಾಸನವೊಂದು ತಿಳಿಸುತ್ತದೆ.
ಹೀಗೊಂದು ಒಪ್ಪಂದ
ಕರ್ನಾಟಕದ ಚರಿತ್ರೆಯಲ್ಲಿ ರಾಜವಂಶಗಳ ಮಹಿಳೆಯರು ಸಹ ಪ್ರಮುಖ ಪಾತ್ರ ವಹಿಸುತ್ತಿದ್ದುದು, ಅವರ ನಿರ್ಣಯಗಳಿಗೂ ಆಡಳಿತದಲ್ಲಿ ಸ್ಥಾನವಿದ್ದದ್ದೂ ತಿಳಿದ ಸಂಗತಿಗಳೇ ಆಗಿವೆ. ಅನೇಕ ಸಂಸ್ಥಾನಗಳನ್ನು ರಾಣಿಯರೇ ಆಳ್ವಿಕೆ ನಡೆಸಿದ್ದೂ ಇದೆ. ವಿಜಯನಗರ ಕಾಲದಲ್ಲಿಯೂ ಕೆರೆ-ಕಟ್ಟೆಗಳ ನಿರ್ಮಾಣದಲ್ಲಿ ಮಹಿಳೆಯರು ತೊಡಗಿಸಿಕೊಂಡ ಅನೇಕ ಪ್ರಸಂಗಗಳಿವೆ. ಅದಕ್ಕೆ ಸಾಕ್ಷಿಯಾಗಿ ಶಾಸನದಲ್ಲಿ ಕಂಡುಬರುವ ಕುತೂಹಲಕಾರಿ ಪಂಥವೊಂದರ ಉಲ್ಲೇಖ ಇಲ್ಲಿ ಉಚಿತವೇ ಆದೀತು.
ಪೆನುಗೊಂಡೆ ರಾಜ್ಯದ ಯುವರಾಣಿ ಜೊಮ್ಮದೇವಿಯು ಬುಕ್ಕರಾಯನ ಮಗಳು. ತಿಣಿಯೂರು ಗ್ರಾಮದ ಜನತೆಯ ಉಪಯೋಗಕ್ಕೆಂದು ಅಲ್ಲಿನ ಕೆರೆಗೆ ನೀರು ಹರಿಸಲು ಕಾಲುವೆ ತೆಗೆಸಬೇಕೆಂದು ಆಕೆ ಆಶಿಸುತ್ತಾಳೆ. ತನ್ನ ಮಂತ್ರಿಗಳಾದ ನಾಗರಾಜ ಮತ್ತು ಮಾಯಾನಯನಿಗಳಿಗೆ ಈ ಜವಾಬ್ದಾರಿಯನ್ನಾಕೆ ಹೊರಿಸುತ್ತಾಳೆ. ಅದರಂತೆ ಪೆದ್ದ ಬಯಿರಾವೋಜ ಮತ್ತು ಪಿನ ಬಯಿರಾವೋಜ ಎಂಬ ಇಬ್ಬರು ಕುಶಲಕರ್ಮಿಗಳಿಗೆ ಕೆಲಸ ಕೊಡಲಾಗುತ್ತದೆ. ಶಾಸನದಲ್ಲಿ ತಿಳಿಸಿರುವಂತೆ “ಕೆರೆಯ ನೀರು ಸರಿಯಾಗಿ ಹರಿದು ಬಂದ ಪಕ್ಷದಲ್ಲಿ ಮಾತ್ರ ೧೩೦ ಸ್ವರ್ಣ ನಾಣ್ಯಗಳು, ಭೂಮಿ, ಕೆರೆಯ ತೂಬಿನ ಹತ್ತಿರ ಮನೆ ಮತ್ತು ಬಂಗಾರದ ಕಡಗಗಳನ್ನು ನೀಡುವುದಾಗಿ ಮತ್ತು ಕೆಲಸ ಅಸಮರ್ಪಕವಾಗಿದ್ದರೆ ಅವುಗಳನ್ನು ನೀಡಲಾಗುವುದಿಲ್ಲ” ಎಂಬಷ್ಟು ರತ್ತನ್ನು ವಿಧಿಸಲಾಗಿರುತ್ತದೆ. ಅದರಂತೆ ಆ ಕೆರೆಯನ್ನು ಅತ್ಯಂತ ಸಮರ್ಪಕವಾಗಿ ಕಟ್ಟಿ ಆ ಬಹುಮಾನವನ್ನು ಅವರು ಪಡೆದರು ಎಂದು ಶಾಸನ ತಿಳಿಸುತ್ತದೆ. ಪ್ರತಿಯೊಂದು ಕೆರೆಯನ್ನು ವಿಧಿವತ್ತಾದ ಧಾರ್ಮಿಕ ಆಚರಣೆಗಳನ್ನು ಪೂರೈಸಿದ ನಂತರವೇ ಬಳಸಿಕೊಳ್ಳಲಾಗುತ್ತಿದ್ದ ಸಂಗತಿಯನ್ನೂ ಸಹ ಕ್ರಿ.ಶ. ೧೩೯೭ರ ಈ ಶಾಸನವು ತಿಳಿಸುತ್ತದೆ.
ವಿಜಯನಗರ ಕಾಲದಲ್ಲಿ ಕೆರೆ ನಿರ್ಮಿಸಿ ಹೆಸರಾದ ಮತ್ತೊಬ್ಬ ಮಹಿಳೆ ಸಂತೆಬೆನ್ನೂರಿನ ಹನುಮಪ್ಪ ನಾಯಕನ ಹೆಂಡತಿ ಹಿರಿಯವ್ವ ನಾಗತಿ. ಈಕೆ ೧೪೯೦ರಲ್ಲಿ ಕಂಚುಗಾರನ ಹಳ್ಳಿಯಲ್ಲಿ ಕೆರೆಯನ್ನು ನಿರ್ಮಿಸಿದಳು. ಈಗಲೂ ಈ ಕೆರೆಯನ್ನು ಹಿರಿಯವ್ವ ನಾಗತಿ ಕೆರೆ ಎಂದೇ ಕರೆಯಲಾಗುತ್ತದೆ.
ಖಾಸಗಿ ಕೆರೆಗಳೂ ಇತ್ತೆ?
ಸಾಮಾನ್ಯವಾಗಿ ಕೆರೆಯನ್ನು ಕಟ್ಟಿಸಿದ ನಂತರ ಆ ಕೆರೆ ನಾಡಿನ ಜನರ ಸ್ವತ್ತಾಗಿರುತ್ತಿತ್ತು. ಆದರೆ ಆ ಕೆರೆಯನ್ನು ಕಟ್ಟಿಸಿದವರಿಗೆ ಉಳುಮೆಗಾಗಿ ಭೂಮಿಯನ್ನು ಅದೇ ಆಯಕಟ್ಟಿನ ಪ್ರದೇಶದಲ್ಲಿ ನೀಡಲಾಗುತ್ತಿತ್ತು. ಮೂರನೆ ಒಂದು ಭಾಗದವರೆಗೆ ಈ ಪಾಲು ಇರುತ್ತಿತ್ತು.
ಇದಕ್ಕೆ ವ್ಯತಿರಿಕ್ತವೆಂಬಂತೆ ಕೆರೆಗಳನ್ನು ಕಟ್ಟಿಸಿದ ನಂತರ ಅದನ್ನು ಮಾರುವ ಹಕ್ಕು ಇದೆಯೆಂದು ಸಾರುವ ಕೆಲವು ಪ್ರಸಂಗಗಳು ನಡೆದಿವೆ. ಆಂಧ್ರಪ್ರದೇಶದ ನೆಲ್ಲೂರು ಜಿಲ್ಲೆಯ ವೆಂಕಟಾಪುರ ಕೆರೆಯ ಶಾಸನವು ಇಂತಹ ಕ್ರಯ (ಮಾರಾಟ) ಶಾಸನವೇ ಆಗಿದೆ. ಅದರಂತೆ ಬೋಯವೀಡು ಮತ್ತು ಕುಚಿಲಪಾಡು ಎಂಬ ಗ್ರಾಮದಲ್ಲಿ ದಸವಂದದ ಪ್ರಕಾರ (ಕೆರೆ ಕಟ್ಟಿದವನಿಗೆ ಅದರ ಮೇಲೆ ಇರುವ ಹಕ್ಕು) ಆ ಕೆರೆಗೆ ಸಂಬಂಧಿಸಿದ ಎಲ್ಲ ಸ್ವಾಮ್ಯವನ್ನು ಒಳಗೊಂಡು ಬಯಿಚಿನ ಬೋಯಡು ಎಂಬುವವನಿಗೆ ಮಾರುತ್ತಾನೆಂದು ತಿಳಿಸಲಾಗಿದೆ. ಇದು ಕ್ರಿ.ಶ. ೧೪೨೯ರ ಕಾಲದ ಪ್ರಸಂಗ.
ಹಂಪೆಯ ಕೆರೆಗಳು
ವಿಜಯನಗರದ ರಾಜಧಾನಿಯಾಗಿದ್ದ ಹಂಪೆಯ ಸಮೀಪದಲ್ಲೇ ಇದ್ದಂಥ ಹಲವು ಕೆರೆಗಳು ಜನರ ನೀರಿನ ಅಗತ್ಯವನ್ನು ಪೂರೈಸುತ್ತಿದ್ದವು. ಚಿಕ್ಕರಾಯ ಕೆರೆ ಮತ್ತು ಚಿಕ್ಕ ಹಂಸನ ಕೆರೆಗಳು ವಿಜಯನಗರ ಪಟ್ಟಣದ ಒಳಗೇ ಇದ್ದವು. ಕವಕಿಯ ಕಟ್ಟೆ, ಭೂಪತಿಯ ಕೆರೆ, ಗವರಜೀಯ ಕೆರೆ ಇತ್ಯಾದಿ ಅನೇಕ ಕೆರೆಗಳು ರಾಜಧಾನಿಯ ಹೊರವಲಯಗಳಲ್ಲಿದ್ದವು. ವಿಶೇ?ವೆಂದರೆ ವಿಜಯನಗರದ ಮಂತ್ರಿಯಾಗಿದ್ದ ಲಕ್ಷ್ಮೀಧರನು ಕಟ್ಟಿಸಿದ ಕೆರೆ ಅತ್ಯಂತ ಸುಂದರವಾಗಿ ಮತ್ತು ಅದರ ನೀರು ಅತ್ಯಂತ ತಿಳಿಯಾಗಿ ಇದ್ದುದರಿಂದ ಅದನ್ನು ’ಕನ್ನಡಿ ಕೆರೆ’ ಎಂದೇ ಕರೆಯಲಾಗುತ್ತಿತ್ತು. ಈಗ ಇದು ಕಾಣಲು ಲಭ್ಯವಿಲ್ಲದುದಾಗಿದೆ.
ಹಾಗೆಯೇ ಕಾಲಾನುಕ್ರಮದಲ್ಲಿ ಅನೇಕ ಚಿಕ್ಕ ಕೆರೆಗಳನ್ನು ವಿಸ್ತರಿಸುವ, ನಾಲೆಗಳನ್ನು ದುರಸ್ತಿಪಡಿಸುವ ಕೆಲಸಗಳು ಆಗುತ್ತಿದ್ದವು. ಸಂಡೂರು ಪ್ರದೇಶದ ತಳೂರು ಗ್ರಾಮದ ಕುಂಟೆಯು ಪ್ರವಾಹದಿಂದ ಧ್ವಂಸಗೊಂಡಾಗ ಮಹಾಮಂಡಲೇಶ್ವರನಾದ ಚಿಕ್ಕತಿಮ್ಮಯ್ಯದೇವನ ಮಗ ತಮ್ಮರಾಜರಸು ಅದನ್ನು ದುರಸ್ತಿಗೊಳಿಸಿದ್ದು ಮಾತ್ರವಲ್ಲದೇ, ಅದರ ವಿಸ್ತಾರವನ್ನು ಹೆಚ್ಚಿಸಿದ ಎಂಬುದಕ್ಕೆ ದಾಖಲೆಗಳಿವೆ.
ವೈಜ್ಞಾನಿಕ ಕೆರೆಕಟ್ಟುವಿಕೆ
ವಿಜಯನಗರ ಕಾಲದಲ್ಲಿ ಅತ್ಯಂತ ವೈಜ್ಞಾನಿಕತಂತ್ರಗಳನ್ನು ಉಪಯೋಗಿಸಿ ಕೆರೆ ಕಟ್ಟಲಾಗುತ್ತಿತ್ತು ಎಂಬುದು ಆಶ್ಚರ್ಯ ಹುಟ್ಟಿಸುವ ಸಂಗತಿಯಾಗಿದೆ. ಹೀಗಾಗಿ ಆಗಿನ ಕಾಲದ ಅನೇಕ ಕೆರೆಗಳು ಇಂದಿಗೂ ಸಮೃದ್ಧ ಜಲಮೂಲಗಳಾಗಿ ಉಳಿದಿರುವುದನ್ನು ಕಾಣಬಹುದು. ಉದಾಹರಣೆಗೆ ಹೊಸಪೇಟೆ ತಾಲ್ಲೂಕಿನಲ್ಲಿ ಈಗಿರುವ ಸುಮಾರು ೬೦ಕ್ಕೂ ಹೆಚ್ಚು ಕೆರೆಗಳಲ್ಲಿ ಸುಮಾರು ೫೫ಕ್ಕೂ ಹೆಚ್ಚು ಕೆರೆಗಳು ವಿಜಯನಗರ ಸಾಮ್ರಾಜ್ಯ ಅಥವಾ ಅದಕ್ಕೂ ಮುಂಚೆಯೇ ಇದ್ದ ಕೆರೆಗಳೇ ಆಗಿವೆ. ಈ ಕೆರೆಗಳ ನಿರ್ಮಾಣದಲ್ಲಿಯೇ ವಿಶೇಷತೆಯಿದೆ.
ತುಂಗಭದ್ರಾ ನದಿಯು ಸಮುದ್ರಮಟ್ಟದಿಂದ ೫೦೦ ಮೀಟರ್ ಎತ್ತರದಲ್ಲಿ ಹರಿಯುತ್ತದೆ. ವಿಜಯನಗರದ ಬಹುತೇಕ ಕೆರೆಗಳನ್ನು ಸಹ ಸಮುದ್ರಮಟ್ಟದಿಂದ ೫೦೦ ಮೀಟರ್ ಎತ್ತರದ ಪ್ರದೇಶಗಳಲ್ಲಿಯೇ ಕಟ್ಟಲಾಗಿದೆ. ಇವು ಬೇರೆಬೇರೆ ಕಾಲಘಟ್ಟಗಳಲ್ಲಿ ನಿರ್ಮಾಣವಾಗಿದ್ದರೂ ಸಹ, ತಾಂತ್ರಿಕ ನೈಪುಣ್ಯತೆ ಏಕಪ್ರಕಾರವಾಗಿ ಹರಿದು ಬಂದಿದೆ, ಮತ್ತು ಎಲ್ಲ ಕೆರೆಗಳ ಏರಿಗಳು ಸಹ ಬಹುತೇಕ ಉತ್ತರದಿಕ್ಕಿನೆಡೆಗಿವೆ. ಏಕೆಂದರೆ ಇಡೀ ತಾಲ್ಲೂಕಿನ ದಕ್ಷಿಣ ಭಾಗವು ಎತ್ತರವಾಗಿರುವುದರಿಂದ ಈ ಪ್ರದೇಶದಲ್ಲಿ ಬೀಳುವ ಮಳೆಯು ಉತ್ತರಭಾಗಕ್ಕೆ ಸಣ್ಣ ತೊರೆಗಳಾಗಿ ಹರಿದು ತುಂಗಭದ್ರಾ ನದಿಯನ್ನು ಸೇರುತ್ತವೆ. ಅಂತಹ ತೊರೆಗಳ ಸಹಾಯದಿಂದ ಕೆರೆಗಳಿಗೆ ನೀರನ್ನು ಹಾಯಿಸಲು ಕಾಲುವೆಗಳನ್ನು ನಿರ್ಮಿಸಿದ್ದಾರೆ. ಅಂದರೆ ಕೆರೆಯ ಜಲಾನಯನ ಪ್ರದೇಶದ (ಕ್ಯಾಚ್ಮೆಂಟ್ ಏರಿಯಾ) ಸರಿಯಾದ ಗಣನೆ ಆಗಿನವರಿಗಿತ್ತು.
ಭೌಗೋಳಿಕ ಪರಿಸರಕ್ಕೆ ಅನುಗುಣವಾಗಿ ವೃತ್ತಾಕಾರ, ಚತು?ನ, ಅರ್ಧಚಂದ್ರಾಕೃತಿ ಹೀಗೆ ವಿವಿಧ ಆಕಾರಗಳಲ್ಲಿ ಕೆರೆಗಳನ್ನು ನಿರ್ಮಿಸುತ್ತಿದ್ದರು. ’ಹಾವಿನ ಕುಂಟೆ’ ಎಂಬುದು ಸರ್ಪಾಕೃತಿಯಲ್ಲಿದ್ದ ಕೆರೆಗಿದ್ದ ಹೆಸರು. ಆ ಪ್ರದೇಶಕ್ಕೆ ಸಂಬಂಧಿಸಿದ ಅನೇಕ ಅಂಶಗಳನ್ನು ಗಣನೆಗೆ ತೆಗೆದುಕೊಂಡಿದ್ದರಿಂದ ಉತ್ತಮ ಜಲಮೂಲಗಳು ಆಗ ರೂಪುಗೊಂಡವು. ನೀರಿನ ಒತ್ತಡದಿಂದ ಕೆರೆಯ ಕಟ್ಟೆ ಒಡೆದು ಹೋಗುವ ಸುದ್ದಿಗಳನ್ನು ನಾವು ಈಗಲೂ ಕೇಳುತ್ತೇವೆ. ಆದರೆ ವಿಜಯನಗರ ಕಾಲದಲ್ಲಿ ಕೆರೆಯ ಏರಿಯು ಧೀರ್ಘಕಾಲ ಬಾಳಿಕೆ ಬರಬೇಕೆಂದು ಏರಿಯನ್ನು ಅಂಕುಡೊಂಕಾಗಿ ನಿರ್ಮಿಸುತ್ತಿದ್ದರು. ಇದರಿಂದ ನೀರಿನ ಒತ್ತಡವು ಕೆರೆಯ ವಿವಿಧ ಭಾಗಗಳಲ್ಲಿ ಹಂಚಿ ಹೋಗುತ್ತಿತ್ತು. ಒಂದು ವೇಳೆ ಹೆಚ್ಚಿದ ಒತ್ತಡದಿಂದ ಕಟ್ಟೆ ಒಡೆದು ಹೋದರೂ, ಏರಿಯ ಸಣ್ಣ ಭಾಗ ಮಾತ್ರ ಧ್ವಂಸಗೊಳ್ಳುತ್ತಿತ್ತು. ಸುಲಭವಾಗಿ ದುರಸ್ತಿಗೊಳಿಸಬಹುದಿತ್ತು.
ಕಲ್ಲು, ಇಟ್ಟಿಗೆ, ಸುಣ್ಣ ಮತ್ತು ಗಾರೆಯ ಸಾಮಾಗ್ರಿಗಳನ್ನು ಬಳಸಿ ಅತ್ಯಂತ ಸುಭದ್ರವಾಗಿರುವಂತೆ ಕಟ್ಟೆಗಳನ್ನು ಕಟ್ಟುತ್ತಿದ್ದರು. ವಿವಿಧ ಎತ್ತರದ ಕಟ್ಟೆಗಳು ಕಂಡುಬಂದರೂ ಕೆರೆಯಲ್ಲಿ ನೀರು ಒಬ್ಬ ವ್ಯಕ್ತಿಯ ಎತ್ತರದ? ಇರಬೇಕು ಮತ್ತು ಅದಕ್ಕಿಂತ ಹೆಚ್ಚು ನೀರು ತುಂಬಿದರೆ ಆ ನೀರು ಕೋಡಿಯ ಮೂಲಕ ಹರಿದು ಹೋಗಬೇಕು ಎಂದು ಶಾಸನವೊಂದು ದಾಖಲಿಸಿದೆ.
ಕಾಲುವೆಗಳು
ಸಿಂಗಯ್ಯ ಭಟ್ಟ ಎಂಬವನು ಕೆರೆಗಳ ನಿರ್ಮಾಣದಲ್ಲಿ ಅತ್ಯಂತ ಪ್ರಾವೀಣ್ಯ ಗಳಿಸಿದ್ದನು. ಅವನನ್ನು ದಶವಿದ್ಯಾ ಚಕ್ರವರ್ತಿ ಎಂದೇ ಕರೆಯಲಾಗುತ್ತಿತ್ತು. ಈತ ೧೩೮೯ರಲ್ಲಿ ಸಿವುರೆ ಕೆರೆಗೆ ಕಾಲುವೆಯೊಂದನ್ನು ನಿರ್ಮಿಸಿ ಅದಕ್ಕೆ ’ಪ್ರತಾಪ ಬುಕ್ಕರಾಯ ಮಂಡಲ ಕಾಲುವೆ’ ಎಂದು ಹೆಸರಿಟ್ಟನೆಂದು ತಿಳಿದು ಬರುತ್ತದೆ.
ವಿಜಯನಗರ ಕಾಲದ ಕಾಲುವೆಗಳನ್ನು ಅತ್ಯಂತ ಯೋಜಿತವಾಗಿ ಮತ್ತು ಕಲಾತ್ಮಕವಾಗಿ ನಿರ್ಮಿಸುತ್ತಿದ್ದರು. ಸಾಮಾನ್ಯವಾಗಿ ಕೆರೆಗಳಿಗೆ ಎರಡು ರೀತಿಯ ಕಾಲುವೆಗಳಿರುತ್ತವೆ. ಮೊದಲನೆಯದು ನೀರಿನ ಒಳಹರಿವಿಗಾಗಿ (Iಟಿಟeಣ ಅhಚಿಟಿಟಿeಟ), ಎರಡನೆಯ ರೀತಿಯದು ನೀರನ್ನು ಆಯಕಟ್ಟಿನ ಸ್ಥಳಕ್ಕೆ (ಬೇಸಾಯಕ್ಕೆ) ಹರಿಸುವುದಕ್ಕೆಂದು (ಔuಣಟeಣ ಅhಚಿಟಿಟಿeಟ). ನೀರನ್ನು ಕೆರೆಯ ಏರಿಯ ಕೆಳಭಾಗದಿಂದ ಕಾಲುವೆಗಳ ಮೂಲಕ ಹಾಯಿಸುತ್ತಿದ್ದರು. ಇವುಗಳಿಗೆ ತೂಬನ್ನು ಇರಿಸಿ ಕೆರೆಯ ನೀರು ಪೋಲಾಗದಂತೆ ನಿರ್ವಹಿಸುತ್ತಿದ್ದರು. ದೇವಾಲಯ ಇತ್ಯಾದಿ ತೀರಾ ಸಮೀಪದ ಸ್ಥಳಗಳಿಗೆ ನೀರು ಹಾಯಿಸುವುದಕ್ಕೆಂದು ಮರದ ನಾಲೆಗಳನ್ನು ಬಳಸಿದ ಉದಾಹರಣೆಗಳೂ ಇವೆ. ಕೆಲವು ಕೆರೆಗಳಿಗೆ ಒಂದಕ್ಕಿಂತ ಹೆಚ್ಚು ಕಾಲುವೆಗಳನ್ನು ನಿರ್ಮಿಸಲಾಗಿರುತ್ತಿತ್ತು. ನಾಲ್ಕು ಕಾಲುವೆಗಳಿದ್ದ ಕೆರೆಗಳು ಸಹ ಇದ್ದವು. ಈ ಕಾಲುವೆಗಳು ವಿವಿಧ ಎತ್ತರಗಳಲ್ಲಿದ್ದು, ಕೆರೆಯಲ್ಲಿ ಸಂಗ್ರಹಗೊಂಡಿದ್ದ ನೀರಿನ ಪ್ರಮಾಣಕ್ಕನುಗುಣವಾಗಿ ಕಾಲುವೆಗಳ ಮೂಲಕ ನೀರನ್ನು ಹರಿಸಲಾಗುತ್ತಿತ್ತು. (ಈ ವಾಡಿಕೆ ಇಂದಿಗೂ ಕಾಣಬಹುದು).
ತೂಬುಗಳು
ಕ್ರಿ.ಶ. ೧೪೯೭ರ ಕಾಲದ ಶಾಸನವು ಗುಂಡನಹಳ್ಳಿಯ ಕನ್ಯಾಕೆರೆಯನ್ನು ಕುರಿತದ್ದಾಗಿದೆ. ಈ ಕೆರೆಯನ್ನು ತನ್ನ ಸ್ವಂತ ಖರ್ಚಿನಲ್ಲಿ ಕಟ್ಟಿಸಿದ ನರಸಿಂಹದೇವನೆಂಬವನು ಕೆರೆಗೆ ಉಪಯೋಗಿಸಲಾದ ಪ್ರತಿಯೊಂದು ವಸ್ತುವಿನ ಗುಣಮಟ್ಟವನ್ನು ಪರೀಕ್ಷಿಸಿ ಬಳಸಿದ್ದಾನೆಂದು ತಿಳಿಸುತ್ತದೆ. ತೂಬನ್ನು ಕಟ್ಟಲು ಅತ್ಯಂತ ಒಳ್ಳೆಯ ಕಲ್ಲುಗಳನ್ನು ಬಳಸಿ ಇಟ್ಟಿಗೆ, ಗಚ್ಚುಗಾರೆಯಿಂದ ಅದನ್ನು ಮತ್ತಷ್ಟು ಭದ್ರಗೊಳಿಸಿದನೆಂದು ಹೇಳುತ್ತದೆ. ಇದು ಕೆರೆಯ ಪ್ರತಿಯೊಂದು ಭಾಗದ ಭದ್ರತೆಗಾಗಿ ಅಂದಿನವರು ವಹಿಸುತ್ತಿದ್ದ ಶ್ರಮದ ಸಂಕೇತವಾಗಿದೆ. ಏಕೆಂದರೆ ತೂಬುಗಳು ಸಹ ಕೆರೆಯ ಅನಿವಾರ್ಯ ಭಾಗವೇ ಆಗಿದೆ. ಇಂದಿನ ನಲ್ಲಿಗಳಂತೆ ನಮಗೆ ಬೇಕಾದಾಗ ಕೆರೆಯ ನೀರನ್ನು ಹೊರಬಿಡುವ ಅಥವಾ ಹಿಡಿದಿಡುವ ಕಾರ್ಯವನ್ನು ಇವು ಮಾಡುತ್ತವೆ. ಸಾಮಾನ್ಯವಾಗಿ ಎರಡು ಅಥವಾ ನಾಲ್ಕು ಕಲ್ಲಿನ ಕಂಬಗಳನ್ನು ನಿಲ್ಲಿಸಿ ತೂಬನ್ನು ಕಟ್ಟುತ್ತಿದ್ದರು. ಎರಡು ಕಂಬಗಳ ಮಧ್ಯೆ ಅಡ್ಡಲಾಗಿ ಕಲ್ಲೊಂದನ್ನು ಇಡಲಾಗುತ್ತದೆ. ಅನಂತರ ಲಂಬವಾಗಿ ನಿಂತ ಕಂಬಗಳ ಮೇಲೆಯು ಅಡ್ಡಕಲ್ಲನ್ನು ಹಾಸಲಾಗುತ್ತದೆ. ಈ ಎರಡೂ ಕಲ್ಲುಗಳ ಮಧ್ಯೆ ಸುಮಾರು ೨೫ ಸೆ.ಮೀ. ವ್ಯಾಸದ ರಂಧ್ರವಿರುತ್ತದೆ. ಇದರ ಮೂಲಕ ನೀರು ಹೊರಹೊಗುತ್ತದೆ. ಇದೇ ವ್ಯಾಸದ ಮರದ ದಿಮ್ಮಿಯನ್ನು ಇದರೊಳಗೆ ತೂರಿಸಿ ನೀರನ್ನು ಬಂದ್ ಮಾಡಲಾಗುತ್ತದೆ. ವಿಶೇಷವೆಂದರೆ ಈ ಮರವು ನೀರಿನಲ್ಲಿ ನೆನೆದು ಹಿಗ್ಗಿ ಇನ್ನಷ್ಟು ಗಟ್ಟಿಯಾಗಿ ತೂಬನ್ನು ಹಿಡಿದುಕೊಂಡು ನೀರಿ ಸೋರಿಕೆಯನ್ನು ತಡೆಯುತ್ತಿತ್ತು. (ಇತ್ತೀಚಿನ ದಿನಗಳಲ್ಲಿ ಲೋಹದ ಗೇಟ್ಗಳನ್ನು ಬಳಕೆ ಮಾಡುತ್ತಿದ್ದಾರೆ). ತೂಬುಗಳ ಮೇಲೆ ಗಜಲಕ್ಷ್ಮಿಯ ಚಿತ್ರಗಳನ್ನು ಕೆತ್ತಿರುವುದನ್ನು ಬಹುಪಾಲು ವಿಜಯನಗರ ಕಾಲದಲ್ಲಿ ನಿರ್ಮಾಣಗೊಂಡ ಎಲ್ಲ ಕೆರೆಗಳಲ್ಲೂ ಕಾಣಬಹುದು. ಇದು ಸುಭಿಕ್ಷೆಯ ಸಂಕೇತವಿದ್ದಂತೆ ತೋರುತ್ತದೆ.
ಕೆರೆಯ ಕಾಲುವೆಗಳಿಗನುಗುಣವಾಗಿ ವಿವಿಧ ಎತ್ತರಗಳಲ್ಲಿ ತೂಬುಗಳನ್ನು ಅಳವಡಿಸಲಾಗುವುದರ ಜೊತೆಗೆ ವೃತ್ತಾಕಾರದ ಬದಲು ಗಡಿಗೆಯಾಕಾರದ ’ಗಡಿಗತೂಬು’ಗಳನ್ನು ಕೆಲವೆಡೆ ಅಳವಡಿಸಲಾಗಿದೆ. ಜಂಭಯ್ಯನ ಕೆರೆ ಇದಕ್ಕೊಂದು ಉದಾಹರಣೆ. ಈಗಿನ ಅನೇಕ ಕೆರೆಗಳಲ್ಲಿ ತೂಬುಗಳನ್ನು ಕೆರೆಯ ಏರಿಯಲ್ಲಿಯೇ ಅಳವಡಿಸಿರುವುದನ್ನು ಕಾಣಬಹುದು. ಆದರೆ ವಿಜಯನಗರ ಸಾಮ್ರಾಜ್ಯದ ಕಾಲದಲ್ಲಿ ಕಾಲುವೆ, ಏರಿಗಳಿಗೆ ಯಾವುದೇ ರೀತಿಯ ಹಾನಿಯಾಗಬಾರದೆಂದು ತೂಬುಗಳು ಏರಿಯಿಂದ ಕೆರೆಯ ಒಳಭಾಗಕ್ಕೆ ಸುಮಾರು ೧೫ ಅಡಿಗಳ? ದೂರದಲ್ಲಿ ಇರುತ್ತಿದ್ದವು ನೀರುಗಂಟಿಗಳು ತುಂಬಿದ ಕೆರೆಯಲ್ಲಿ ಈಜಿಕೊಂಡು ಹೋಗಿ ನೀರು ಬಿಡುವ ಮತ್ತು ನಿಲ್ಲಿಸುವ ಕಾರ್ಯ ಮಾಡುತ್ತಿದ್ದರು. ಹೊರಬಿಡಬೇಕಾದ ನೀರಿನ ಪ್ರಮಾಣದ ಲೆಕ್ಕವೂ ನಿಖರವಾಗಿರುತ್ತಿತ್ತು. ’ಸಲುಕ್ಕಿ’ ಎಂಬುದು ನೀರು ಹಾಯಿಸುವ ಒಂದು ಪ್ರಮಾಣವಾಗಿತ್ತು.
ಕೆರೆಪ್ರೇಮಿ – ಬಯಕಾರ ರಾಮಪ್ಪ
ವಿಜಯನಗರದ ಕಾಲದ ಕೆರೆಗಳನ್ನು ಲೆಕ್ಕಹಾಕುವಾಗ ಪ್ರಮುಖವಾಗಿ ಉಲ್ಲೇಖವಾಗುವುದು ಬಯಕಾರ ರಾಮಪ್ಪನ ಹೆಸರು. ವಿಜಯನಗರದ ಅಚ್ಯುತದೇವರಾಯನ (ಕ್ರಿ.ಶ. ೧೫೨೯ರಿಂದ ೧೫೪೨) ಕಾಲದಲ್ಲಿ ಅದರ ಸಾಮಂತರಾಜ್ಯವಾದ ಕೊಂಡವೀಡು ರಾಜ್ಯದ ಅಧಿಪತಿ ಇವನಾಗಿದ್ದನು. ಆದರೂ ರಾಜ್ಯದ ರಾಜಧಾನಿಯಾಗಿದ್ದ ಮತ್ತು ದೈವಕ್ಷೇತ್ರವಾಗಿ ರೂಪುಗೊಂಡಿದ್ದ ಹಂಪಿಯ ಸುತ್ತಮುತ್ತಲಲ್ಲೇ ಅನೇಕ ನಿರ್ಮಾಣಕಾರ್ಯಗಳನ್ನು ಆತ ನಿರ್ವಹಿಸಿದ್ದಾನೆ. ಈತ ತನ್ನ ರಕ್ತಸಂಬಂಧಿಗಳಿಗೆ ಒಳಿತಾಗಲೆಂದು ಅವರ ಹೆಸರಿನಲ್ಲಿ ಒಟ್ಟು ಹದಿನಾರು ಕೆರೆಗಳನ್ನು ಕಟ್ಟಿಸಿದ್ದಾನೆ. ಈತ ಕಟ್ಟಿಸಿದ ಅನೇಕ ಕೆರೆಗಳು ಈಗಲೂ ಮೂಲ ಹೆಸರಿನಿಂದಲೇ ಗುರುತಿಸಲ್ಪಟ್ಟಿವೆ ಮತ್ತು ಸುಸ್ಥಿತಿಯಲ್ಲಿವೆ. ಬಾಚಸಮುದ್ರಂ, ರಾಮಸಮುದ್ರಂ, ಅಕ್ಕ ಸಮುದ್ರಂ, ಕಾಮ ಸಮುದ್ರಂ, ಅಮ್ಮ ಸಮುದ್ರಂ, ವೀರ ಸಮುದ್ರಂ, ಅಚ್ಯುತೇಂದ್ರ ಸಮುದ್ರಂ, ವೆಂಕಟೇಂದ್ರ ಸಮುದ್ರಂ, ಪಿನಲಕ್ಕ ಸಮುದ್ರಂ, ಚಿನತಿಪ್ಪ ಸಮುದ್ರಂ, ಪೇದಲಕ್ಕ ಸಮುದ್ರಂ, ಅಚ್ಯುತಮ್ಮ ಸಮುದ್ರಂ, ಲಿಂಗಾಲಯ್ಯ ತಟಾಕಂ, ವೆಂಕಟಯ್ಯ ತಟಾಕಂ, ಪೆದ್ದತಿಮ್ಮ ಸಮುದ್ರಂ ಮತ್ತು ಚಿನಬಾಚ ಸಮುದ್ರಂ ಇವು ಈತ ಕಟ್ಟಿಸಿದ ಕೆರೆಗಳು. ಕೆರೆಗಳ ಹೆಸರುಗಳಲ್ಲಿಯೇ ಕೌಟುಂಬಿಕ ಸಂಬಂಧಗಳನ್ನು ಸೂಚಿಸುವ ತೆಲುಗು ಭಾ?ಯ ಪದಗಳು ಮತ್ತು ವ್ಯಕ್ತಿಗಳ ಹೆಸರುಗಳಿರುವುದನ್ನು ಇಲ್ಲಿ ಗಮನಿಸಬಹುದು. ಮನೆತನದ ಹೆಸರನ್ನು ಶಾಶ್ವತವಾಗಿ ಉಳಿಸುವ ಇಂತಹ ಉದಾತ್ತ ಕಾರ್ಯಗಳು ನಮ್ಮ ಪೂರ್ವಜರ ರಕ್ತಗತ ಗುಣ..
33 ಕಂಬದ ಕೋಡಿಗಳು
ಕೆರೆ ಕೋಡಿ ಬಿದ್ದಿದೆ ಎಂಬುದು ಸಾಮಾನ್ಯವಾಗಿ ಕೇಳಿಬರುವ ಮಾತು. ಅಂದರೆ ಕೆರೆಯ ನೀರು ಗರಿ?ಮಟ್ಟ ತಲಪಿದೆ ಎಂದರ್ಥ. ಕೆರೆಯ ಏರಿಯ ದಿಕ್ಕನ್ನು ಹೊರತು ಪಡಿಸಿ ಬೇರೆಡೆ ಕೋಡಿಗಳನ್ನು ಕಟ್ಟಲಾಗುತ್ತಿತ್ತು. ಕೋಡಿಗೆ ಸೂಕ್ತಸ್ಥಳವನ್ನು ಆಯ್ಕೆ ಮಾಡುವುದರಲ್ಲಿಯೂ ತಜ್ಞತೆ ಬೇಕಾಗುತ್ತದೆ. ಏಕೆಂದರೆ ಕೆರೆಯ ಏರಿಗೆ ನೀರಿನ ಅಧಿಕ ಒತ್ತಡವನ್ನು ಕಡಮೆಗೊಳಿಸುವುದು ಈ ಕೋಡಿಯೇ. ಕೆಲವು ಕೆರೆಗಳು ಕೋಡಿಬಿದ್ದಾಗ ಆ ನೀರು ಹರಿದು ಇನ್ನೊಂದು ಕೆರೆಯನ್ನು ತುಂಬುವಂತೆ ಕೆರೆಕೋಡಿಗಳನ್ನು ನಿರ್ಮಿಸಿದ್ದುದನ್ನೂ ಕಾಣಬಹುದು. ದೊಡ್ಡ ಕೆರೆಗಳಲ್ಲಿ ಎರಡು ಕೋಡಿಗಳನ್ನು ಮಾಡಿದ್ದೂ ಇದೆ.
ವೆಂಕಟಪತಿರಾಯನ ಕಾಲದಲ್ಲಿ (ಕ್ರಿ.ಶ. ೧೫೮೫- ೧೬೧೪) ರುದ್ರಪ್ಪನಾಯಿಡು ಎಂಬಾತ ಕೋಡಿ ಕಟ್ಟುವಿಕೆಯಲ್ಲಿ ಪರಿಣತನಾಗಿದ್ದ. ಅವನು ಕೊಲ್ಲೂರು ಕೆರೆಗೆ ೩೩ ಕಂಬಗಳಿರುವ ಕೋಡಿಯನ್ನು ನಿರ್ಮಿಸಿದ್ದ. ಹಾಗೆಯೇ ಆಂಧ್ರದ ನೆಲ್ಲೂರಿನಲ್ಲಿ ಮುಚ್ಚಿನಟ್ಲು ರಂಗಪ್ಪನಾಯನಿಯ ಮಗಳು ರಘುಪತಿ ಅಮ್ಮಗಾರು ೩೩ ಕಂಬಗಳಿರುವ ಕೋಡಿಯನ್ನು ನಿರ್ಮಿಸುತ್ತಾಳೆ ಎಂದು ಶಾಸನವೊಂದಿದೆ. ಏಕೆ ೩೩ ಕಂಬಗಳನ್ನು ಉಪಯೋಗಿಸುತ್ತಿದ್ದರು, ಅದರ ಹಿನ್ನೆಲೆ ಏನು? ಕೆರೆಯ ಭದ್ರತೆಗೋ ಅಥವಾ ನಂಬಿಕೆಯೋ ಎನ್ನುವುದು ಇನ್ನೂ ತಿಳಿದುಬಂದಿಲ್ಲ.
ಅಣೆಕಟ್ಟು – ನದಿ ನೀರಿಗೊಂದು ತಡೆ
ವಿಜಯನಗರದ ನೀರಾವರಿ ತಜ್ಞರು ನದಿ ಮತ್ತು ತೊರೆಗಳಿಗೆ ಕಟ್ಟೆಗಳನ್ನು ಕಟ್ಟುವುದರಲ್ಲಿಯೂ ಅದ್ವಿತೀಯವಾದ ನೈಪುಣ್ಯತೆ ಹೊಂದಿದ್ದರು. ವ್ಯವಸಾಯಕ್ಕೆ ನೀರನ್ನು ಒದಗಿಸುವುದರಲ್ಲಿ ಇವುಗಳ ಪಾತ್ರವೂ ಅತಿ ಮುಖ್ಯವಾಗಿತ್ತು. ಈಗಿನ ಹೊಸಪೇಟೆ ತಾಲ್ಲೂಕೊಂದರಲ್ಲೇ ತುಂಗಭದ್ರಾ ನದಿಗೆ ಅಡ್ಡಲಾಗಿ ೧೨ ಅಣೆಕಟ್ಟುಗಳನ್ನು ಕಟ್ಟಿರುವುದು ಕಂಡುಬರುತ್ತದೆ. ಕಟ್ಟೆಗಳನ್ನು ಕಟ್ಟುವ ಸ್ಥಳಗಳನ್ನು ಆಯ್ಕೆ ಮಾಡುವಲ್ಲಿ ಮತ್ತು ಕಟ್ಟಿರುವ ವಿಧಾನಗಳನ್ನು ಗಮನಿಸಿದರೆ ನೀರಿನ ಹರಿವು, ತಿರುವು, ಸೆಳೆತ, ಪ್ರವಾಹಗಳ ಕುರಿತು ಇದ್ದ ಉನ್ನತಮಟ್ಟದ ಜ್ಞಾನದ ಅರಿವಾಗುತ್ತದೆ.
ನದಿಯ ಪಾತ್ರದಲ್ಲಿರುವ ಕಲ್ಲುಗಳನ್ನೇ ಅಡಿಪಾಯವಾಗಿ ಉಪಯೋಗಿಸಿಕೊಂಡು ಅತ್ಯಂತ ಕಡಮೆ ಖರ್ಚಿನಲ್ಲಿ ಅಣೆಕಟ್ಟುಗಳನ್ನು ಕಟ್ಟಿರುವುದು ವಿಸ್ಮಯ ಮೂಡಿಸುತ್ತದೆ. ಅಲ್ಲದೆ ಬಂಡೆಗಲ್ಲು ಮತ್ತು ಆಯತಾಕಾರ ಅಥವಾ ಚೌಕಾಕಾರದ ಕೆತ್ತಿದ ಕಲ್ಲುಗಳನ್ನು ಬಳಸಿಕೊಂಡು ನದಿ ತಿರುವುಗಳಲ್ಲಿ ಕಟ್ಟನ್ನು ನಿರ್ಮಿಸುತ್ತಿದ್ದರು. ಈ ರೀತಿ ಗೋಡೆಯಂತೆ ಪೇರಿಸಿದ ಕಲ್ಲುಗಳಿಗೆ ಯಾವುದೇ ವಿಧವಾದ ಗಚ್ಚು ಗಾರೆಗಳನ್ನು ಬಳಸಿ ಬಂಧವೇರ್ಪಡಿಸುತ್ತಿರಲಿಲ್ಲ. ಅತ್ಯಂತ ಜಾಗರೂಕತೆಯಿಂದ ಕಲ್ಲುಗಳ ಜೋಡಣೆ ಮಾಡುತ್ತಿದ್ದುದರಿಂದ ಯಾವುದೇ ರೀತಿಯ ಜೋಡಣಾ ಸಾಮಾಗ್ರಿಗಳ ಅಗತ್ಯವಿರಲಿಲ್ಲ ಎಂಬುದು ಇದಕ್ಕೆ ಒಂದು ಕಾರಣ. ಮತ್ತೊಂದು ನದಿಯ ಹರಿವು ಹೊತ್ತು ತರುವ ಮಣ್ಣು ಇತ್ಯಾದಿ ಕಲ್ಮಶಗಳು ಜೋಡಣೆಗೊಂಡಿರುವ ಬಂಡೆಗಲ್ಲಿನ ಸಂದುಗಳಲ್ಲಿ ಸೇರಿಕೊಂಡು ಕಲ್ಲುಗೋಡೆಯನ್ನು ಭದ್ರಗೊಳಿಸುತ್ತಿದ್ದವು. ಇಂತಹ ಸಂದುಗಳಿಂದ ನೀರು ಸದಾ ಕಾಲ ಸೋರುತ್ತಿದ್ದರೂ, ಅದು ವ್ಯರ್ಥವಾಗದೇ ಜನಸಾಮಾನ್ಯರು ಹಾಗೂ ಪಶುಪಕ್ಷಿಗಳ ಉಪಯೋಗಕ್ಕೆ ಬರುತ್ತಿತ್ತು. ಅಣೆಕಟ್ಟೆಗೆ ಹೆಚ್ಚಾಗಿ ಬಂದ ನೀರು ಸಂದುಗಳಲ್ಲಿ ಹರಿದು ಹೋಗಿ ಕಟ್ಟೆಗಳಲ್ಲಿ ನೀರಿನ ಪ್ರಮಾಣ ಒಂದೇ ಮಟ್ಟದಲ್ಲಿರುತ್ತಿತ್ತು.
ಒಂದು ಕೆರೆಯನ್ನು ಕಟ್ಟಬೇಕಾದರೆ ತೆಗೆದುಕೊಳ್ಳಬೇಕಾದ ಮುನ್ನೆಚ್ಚರಿಕೆಯ ಕ್ರಮಗಳನ್ನು ವಿಜಯನಗರದ ಶಾಸನವೊಂದು ಹೀಗೆ ಸ್ಪಷ್ಟಪಡಿಸುತ್ತದೆ:
- ಕೆರೆಯಿಂದ ನೀರು ಸೋರಿಹೋಗಬಾರದು.
- ಕೆರೆಯ ತಳ (ಟ್ಯಾಂಕ್ ಬೆಡ್) ಉಪ್ಪಿನಂಶವಿರುವ ಮಣ್ಣನ್ನು ಹೊಂದಿರಬಾರದು.
- ಎರಡು ರಾಜ್ಯಗಳ ನಡುವಿನ ಗಡಿಪ್ರದೇಶ ಆಗಿರಬಾರದು.
- ಕೆರೆಯ ಮಧ್ಯ ಪ್ರದೇಶ (ಕೂರ್ಮ ಪ್ರದೇಶ) ಎತ್ತರ ಅಥವಾ ಉಬ್ಬಾಗಿರಬಾರದು.
- ನೀರು ಅತಿ ಕಡಮೆ ಬರುವ ಪ್ರದೇಶ ಅಥವಾ ಅತಿ ಹೆಚ್ಚು ಆಯಕಟ್ಟು ಇರುವ ಜಾಗವನ್ನು ಆರಿಸಬಾರದು.
- ಅಧಿಕ ನೀರು ಬರುವಂತಹ ಆದರೆ ಕಡಮೆ ಜಮೀನು ಇರುವಂತಹ ಸ್ಥಳವನ್ನೂ ಸಹ ಆಯ್ಕೆ ಮಾಡಬಾರದು.
ಆ ಕಾಲದ ಕಟ್ಟೆಗಳ ಇನ್ನೊಂದು ವಿಶೇ?ವೆಂದರೆ ಕಟ್ಟೆ ಗೋಡೆಯ ಮತ್ತೊಂದು ಬದಿಗೆ ಕೆಲವು ಸಣ್ಣಪುಟ್ಟ ಗುಂಡಿಗಳನ್ನು ಉಂಟುಮಾಡಲಾಗಿತ್ತು. ಒಂದುವೇಳೆ ಪ್ರವಾಹ ಬಂದರೆ ಕೊಚ್ಚಿಹೋದ ಗೋಡೆಯ ಕಲ್ಲುಗಳು ಈ ಕುಳಿಗಳಲ್ಲಿ ಸಂಗ್ರಹಗೊಳ್ಳುತ್ತಿತ್ತು. ಕಲ್ಲುಗಳು ಪ್ರವಾಹದೊಟ್ಟಿಗೆ ಹರಿದು ಉಂಟುಮಾಡುವ ಅಪಾಯದ ಸಾಧ್ಯತೆಯನ್ನು ಕನಿಷ್ಠಗೊಳಿಸಲಾಗಿತ್ತು. ಕೆಲವು ಕಟ್ಟೆಗಳಲ್ಲಿ ಕಲ್ಲುಗಳನ್ನು ಜೋಡಿಸಲು ಕಬ್ಬಿಣದ ಕೊಂಡಿ, ಹಿಡಿಕೆಗಳನ್ನು ಬಳಸಿದ್ದೂ ಕಾಣಸಿಗುತ್ತದೆ. ಈ ಕಾಲದ ಅಣೆಕಟ್ಟುಗಳು ಅಂಕುಡೊಂಕಾಗಿ ಅಥವಾ ಅರ್ಧವೃತ್ತಾಕಾರವಾಗಿ ಇರುತ್ತಿದ್ದುದರಿಂದ, ನೀರಿನ ಒತ್ತಡ ಹಂಚಿಹೋಗಿ ಕಟ್ಟೆಯ ಗೋಡೆಯ ಬಾಳಿಕೆ ಹೆಚ್ಚು ಮತ್ತು ಅಪಾಯದ ಸಾಧ್ಯತೆ ಕಡಮೆಯಾಗಿರುತ್ತಿತ್ತು. ಹೀಗಾಗಿ ಇಂದಿಗೂ ಸುಭದ್ರವಾದ ಪುರಾತನ ಅಣೆಕಟ್ಟುಗಳು ನಮಗೆ ಕಾಣಸಿಗುತ್ತವೆ. ಸ್ಥಳೀಯ ಆವಶ್ಯಕತೆಗಳಿಗನುಣವಾಗಿ ಕೆಲವೊಮ್ಮೆ ನದಿಗೆ ಅಡ್ಡಲಾಗಿ ಸ್ವಲ್ಪವೇ ದೂರ, ಕೆಲವೆಡೆ ನದಿಯ ಮಧ್ಯಭಾಗದವರೆಗೂ ಕಟ್ಟೆಗಳನ್ನು ಕಟ್ಟಿದ್ದ ಉದಾಹರಣೆಗಳಿವೆ.
ಸುಸ್ಥಿತಿಯಲ್ಲಿರುವ ತುರ್ತು ಅಣೆಕಟ್ಟು
ಚಿಂತಕಯ್ಯ ದೇವಣ್ಣನೆಂಬವನು ೧೫೨೪ಕ್ಕೂ ಮುಂಚೆಯೇ ನಿರ್ಮಿಸಿದ್ದ ಅಣೆಕಟ್ಟೊಂದು ಸುಸ್ಥಿತಿಯಲ್ಲಿರುವುದನ್ನು ಇಂದಿಗೂ ಹಂಪಿಯಲ್ಲಿ ಕಾಣಬಹುದು. ’ತುರ್ತು ಅಣೆಕಟ್ಟು’ ಎಂದೇ ಹೆಸರಾಗಿರುವ ಇದರ ನಿರ್ಮಾಣದ ನೇತೃತ್ವವನ್ನು ಬೊಮ್ಮೋಜ ಎಂಬವನು ವಹಿಸಿದ್ದನು. ನೈಸರ್ಗಿಕ ಕಲ್ಲು ಬಂಡೆ ಮತ್ತು ನದೀಪಾತ್ರದ ಕಲ್ಲುಗಳನ್ನು ಬಳಸಿಕೊಂಡು ಅಂಕುಡೊಂಕಾಗಿ ಕಟ್ಟಲಾಗಿರುವ ಈ ಕಟ್ಟೆಯು ೧೧೦೦ ಅಡಿಗಳಷ್ಟು ಉದ್ದವಿದೆ. ಕಟ್ಟೆಯ ಗೋಡೆಯ ಭಾಗವಾಗಿಯೇ ಮಧ್ಯೆ ಬೃಹತ್ ಬಂಡೆಗಳಿರುವುದರಿಂದ, ಒಂದುಕಡೆಯಿಂದ ಇದನ್ನು ಪೂರ್ತಿ ಕಾಣಲು ಸಾಧ್ಯವಿಲ್ಲ.
ಈ ಕಟ್ಟೆಯಿಂದ ಹೊರಟ ನೀರಿನ ನಾಲೆಗೆ ತುರ್ತು ಕಾಲುವೆಯೆಂದೇ ಹೆಸರಿಸಿದ್ದು, ಸುಮಾರು ೨೭ ಕಿ.ಮೀ. ಗಳ? ದೀರ್ಘವಾಗಿ ಸಾಗಿದೆ. ಈ ಕಾಲುವೆಯು ರಾಜಧಾನಿ ಹಂಪಿಗೆ ನೀರನ್ನು ಸರಬರಾಜು ಮಾಡುತ್ತಿತ್ತು. ತುಂಗಭದ್ರೆ ನದಿಯನ್ನು ಸೇರುವ ಮುನ್ನ ಈಗಿನ ಹೊಸಪೇಟೆ, ಕಮಲಾಪುರ ಮತ್ತು ಹಂಪೆಯ ನೂರಾರು ಎಕರೆ ಕೃಷಿಭೂಮಿಗೆ ಈಗಲೂ ನೀರನ್ನು ಉಣಿಸುತ್ತಿದೆ. ಅದಕ್ಕೆಂದೇ ಈ ಕಾಲುವೆಗೆ ಅಲ್ಲಲ್ಲಿ ಅನೇಕ ತೂಬುಗಳನ್ನು ಜೋಡಿಸಲಾಗಿದೆ. ಈಗ ಲೋಕೋಪಯೋಗಿ ಇಲಾಖೆಯ ಉಸ್ತುವಾರಿಯಲ್ಲಿ ೫೦೦ ವರ್ಷಗಳ? ಹಳೆಯದಾದ ಈ ಕಟ್ಟೆ ಮತ್ತು ಕಾಲುವೆಗಳು ಸುಸ್ಥಿತಿಯಲ್ಲಿ ಕಾರ್ಯನಿರ್ವಹಿಸುತ್ತಿವೆ.
ಕೆರೆಗೆ ಹಾರ
ಕನ್ನಡದ ಪ್ರಸಿದ್ಧ ಜನಪದ ಗೀತೆಯಂತೆ ಕಲ್ಲನಕೇರಿಯ ಮಲ್ಲನಗೌಡ ಕಟ್ಟಿಸುತ್ತಿದ್ದ ಕೆರೆಯ ಏರಿ ಪದೇಪದೇ ಒಡೆದು ಹೋಗುತ್ತಿದ್ದುದರಿಂದ ಜ್ಯೋತಿಷಿಗಳು ನರಬಲಿ ನೀಡಲು ಸೂಚಿಸುತ್ತಾರೆ. ಆಗ ಜನಹಿತಕ್ಕಾಗಿ ಮಲ್ಲನಗೌಡನ ಕಿರಿಯ ಸೊಸೆ ಭಾಗೀರಥಿ ತಾನಾಗಿಯೇ ಮುಂದೆ ಬಂದು ಕೆರೆಗೆ ಆಹುತಿಯಾಗುತ್ತಾಳೆ. ಅನಂತರ ಕೆರೆಯ ಏರಿ ಭದ್ರವಾಗಿ ನಿಲ್ಲುತ್ತದೆ ಎಂಬುದಾಗಿ ಕಥೆಯಿದೆ.
ಹೀಗೊಂದು ಪ್ರಕರಣ
ವಿಜಯನಗರದ ಭಾಗವಾಗಿದ್ದ ತಮಿಳುನಾಡಿನ ಉಕ್ಕಲ್ ಗ್ರಾಮಸಭೆಗೆ ಸೇರಿದ ಕೆರೆಯೊಂದರ ತೂಬುಗಳು ಹಾಳಾಗಿ ಕೆರೆಯು ನಿರುಪಯುಕ್ತವಾಗಿದ್ದಿತು. ಅದನ್ನು ಸರಿಪಡಿಸಲು ಹಣವು ಸಾಲದೇ ಪಿಡಾರಿತಾಂಗಲ್ ಎನ್ನುವ ಗ್ರಾಮವನ್ನು ೨೦೦ ಸುವರ್ಣ ನಾಣ್ಯಗಳಿಗೆ ಮಾರಿ, ಆ ಹಣದಿಂದ ಕೆರೆಯ ಜೀರ್ಣೋದ್ಧಾರ ಮಾಡಿದ ಪ್ರಕರಣವಿದೆ.
ಇದೇ ರೀತಿಯ ಕಥೆಗಳು ವಿಜಯನಗರ ಕಾಲದ ಹಲವು ಕೆರೆಗಳ ಕುರಿತು ಪ್ರಚಲಿತದಲ್ಲಿವೆ. ಹಣಸಿಯ ಕೆರೆಯ ಸಮೀಪ ಒಂದು ಚಿಕ್ಕ ಗುಡಿಯನ್ನು ಕನ್ಯಾವೀರಮ್ಮನ ಗುಡಿ ಎಂದು ಕರೆಯಲಾಗಿದೆ. ಕನ್ಯೆಯಾಗಿದ್ದ ಈಕೆ ಕೆರೆಯ ಉಳಿವಿಗೆ ತನ್ನ ಪ್ರಾಣಾರ್ಪಣೆ ಮಾಡಿದಳೆಂದು ಪ್ರತೀತಿ. ಪ್ರತಿವ? ಅಲ್ಲಿ ಉತ್ಸವವನ್ನೂ ಏರ್ಪಡಿಸಲಾಗುತ್ತದೆ. ಹೊಸಪೇಟೆಯ ದಣ್ಣಾಯಕನ ಕೆರೆಯನ್ನು ಕುರಿತು ಸಹ ಇದೇ ರೀತಿಯ ಐತಿಹ್ಯವಿದೆ. ಕೆರೆಯ ಸಮೀಪದಲ್ಲಿ ಚಿಕ್ಕ ಗುಡಿಯಿದ್ದು, ಇದನ್ನು ಕನ್ನೇರಮ್ಮ ಎಂದು ಪೂಜಿಸಲಾಗುತ್ತದೆ. ಕನ್ನೇರಮ್ಮನ ವಂಶದವರೇ ಇಂದಿಗೂ ವಾರ್ಷಿಕ ಉತ್ಸವವನ್ನು ಆಚರಿಸುತ್ತಾರೆ. ಇ? ಮಾತ್ರವಲ್ಲ ಕೆರೆಯನ್ನು ಕಟ್ಟಿಸಿದ ದಣ್ಣಾಯಕನು ತೀರಿಕೊಂಡಾಗ, ಆತನ ಕೋರಿಕೆಯಂತೆ ಅವನ ಮೃತದೇಹವನ್ನು ರಾಯರ ಕೆರೆಯ ಏರಿಯಲ್ಲಿ ಹೂಳಲಾಗಿದೆ ಎಂದು ಜನಪದ ನಂಬಿಕೆಗಳು ತಿಳಿಸುತ್ತವೆ. ಕೆರೆಗಳ ಕುರಿತಾಗಿ ನಮ್ಮ ಪೂರ್ವಿಕರು ಹೊಂದಿದ್ದ ಪ್ರೇಮ, ಅದಕ್ಕಾಗಿ ಮಾಡುತ್ತಿದ್ದ ತ್ಯಾಗಗಳನ್ನು ಇವು ನೆನಪಿಸುತ್ತವೆ. ಅನೇಕ ಪ್ರವಾಸಿಗಳು ತಮ್ಮ ದಿನಚರಿಗಳಲ್ಲಿ ವಿವಿಧ ಕೆರೆಗಳ ನಿರ್ಮಾಣಕ್ಕಾಗಿ ಪ್ರಾಣಿಬಲಿ, ನರಬಲಿಯನ್ನು ನೀಡುತ್ತಿದ್ದುದಾಗಿ ಉಲ್ಲೇಖಿಸಿದ್ದಾರೆ.
ಕೆರೆಗೊಂದು ಕಥೆ
ಪುರಾತನ ಕಾಲದ ಕೆರೆಗಳು ನಿರ್ಮಾಣ, ವಿನ್ಯಾಸಗಳಲ್ಲಿ ಮನಸೆಳೆಯುವಂತೆ ಅದರ ಜೊತೆಜೊತೆಗೆ ಹರಿದು ಬಂದಿರುವ ಚಾರಿತ್ರಿಕ ಹಾಗೂ ಜನಪದ ಸಂಗತಿಗಳಿಂದಲೂ ಕೂಡ ಅ? ಕುತೂಹಲಕರ. ಕದಡಿದರೆ ಪ್ರತಿ ಕೆರೆಯೊಳಗೂ ಅನೇಕ ಕಥೆಗಳು ಸಿಕ್ಕೀತು. ಕೆರೆಗಳು ಪ್ರದೇಶವೊಂದರ ಜಲಮೂಲವಾಗಿ, ಅವರ ಬದುಕಿನ ಜೀವನಾಡಿಯಾಗಿ ಪ್ರಮುಖ ಪಾತ್ರ ವಹಿಸಿರುವುದು ಸ್ಪ?ವೇ ಆಗಿದೆ. ಕೆರೆಗಳು ಜನರ ಜೀವನದ ನಂಬಿಕೆ, ನಡವಳಿಕೆಯ ಭಾಗವಾಗಿ, ಊರು-ಹಳ್ಳಿ-ಗ್ರಾಮಗಳ ಇತಿಹಾಸವನ್ನು ಒಡಲಲ್ಲಿ ಇಟ್ಟುಕೊಂಡಿರುವ ಅದ್ಭುತ ತಾಣವಾಗಿಯೂ ಗೋಚರಗೊಳ್ಳುತ್ತದೆ. ನೀರಿಲ್ಲದ ಕೆರೆ ನಮಗೀಗ ದೊರೆಯಬಹುದು ಆದರೆ ಕಥೆಯಿಲ್ಲದ ಕೆರೆ ದೊರಕುವುದು ಅಪರೂಪ. ದಾಖಲೆಗಳಲ್ಲಿ ಅಲ್ಲದಿದ್ದರೂ ಜನರ ನುಡಿಯಲ್ಲಿ ಪರಂಪರೆಯಿಂದ ಹರಿದು ಬಂದಿರುವ ಮಾಹಿತಿಯ ಸಮುದ್ರವೇ ನಮಗೆ ಕೇಳಸಿಗುತ್ತದೆ. ಪ್ರಾಚೀನ ವಿಜಯನಗರ ಭಾಗವಾದ ಹಂಪಿಯ ಆಸುಪಾಸಿನ ಕೆಲವು ಪ್ರಮುಖ ಕೆರೆಗಳಾದ ಇಂದಿಗೂ ಉಪಯೋಗಿಸಲ್ಪಡುತ್ತಿರುವ ರಾಯರಕೆರೆ, ದಣ್ಣಾಯಕನ ಕೆರೆ, ದರೋಜಿ ಕೆರೆ, ಕಮಲಾಪುರ ಕೆರೆ, ಅಳ್ಳಿಕೆರೆ ಮುಂತಾದವುಗಳು ಇದಕ್ಕೆ ಉದಾಹರಣೆಗಳು ಮಾತ್ರ.
ಅಳ್ಳಿಪುರ ಕೆರೆ
ಶ್ರೀಕೃಷ್ಣದೇವರಾಯನ ಆಳ್ವಿಕೆಯ ಕಾಲದಲ್ಲಿ ವಿಜಯನಗರಕ್ಕೆ ಭೇಟಿ ಇತ್ತಿದ್ದ ಡೊಮಿಂಗೋ ಪಯಾಸ್ ನವರಾತ್ರಿಯ ದಿನಗಳ ವರ್ಣನೆಯನ್ನು ತನ್ನ ದಿನಚರಿಯಲ್ಲಿ ಮಾಡುತ್ತಾನೆ. “ನವರಾತ್ರಿಯ ಹತ್ತನೆ ದಿನದಂದು ರಾಜನು ಆನೆಯ ಮೇಲೆ ಅಂಬಾರಿಯಲ್ಲಿ ಕೋಟೆಯಿಂದ ಸುಮಾರು ಒಂದು ಲೀಗ್ನ? (೪.೨೪ ಕಿ.ಮೀ.) ದೂರ ಪೂರ್ವ ದಿಕ್ಕಿಗೆ ಬರುತ್ತಾನೆ. ಇಲ್ಲಿನ ಒಂದು ವಿಶೇಷ ಗುಡಾರದಲ್ಲಿ ದೇವತೆಯ ಪೂಜೆ ಮಾಡುತ್ತಾನೆ. ಹೀಗೆ ಬರುವಾಗ ಆತ ಕೆರೆಯೊಂದರ ಮೂಲಕ ಹಾದುಹೋಗುತ್ತಾನೆ” ಎಂದು ಬರೆದಿದ್ದಾನೆ. ಇದು ಈಗಿನ ಕಮಲಾಪುರದ ಅಳ್ಳಿಕೆರೆಯೇ ಆಗಿದೆ. ಆತ ಹೇಳಿದ ಕಲ್ಲಿನ ಮಂಟಪ ಈಗಲೂ ಕಾಣಸಿಗುತ್ತದೆ. ಉತ್ಸವಕ್ಕೆಂದು ಬಣ್ಣಬಣ್ಣದ ಬಟ್ಟೆಯ ಹಾಸುಗಳನ್ನು ಹೊದಿಸಿದ್ದರಿಂದ ಪಯಾಸ್ ಇದನ್ನು ಗುಡಾರವೆಂದು ಕರೆದಿರಬಹುದು. ಇತ್ತೀಚೆಗೆ ಸಿಕ್ಕ ಶಾಸನವೊಂದರ ಪ್ರಕಾರ ಇದು ಕೃ?ದೇವರಾಯನ ಕಾಲದಲ್ಲೇ ನಿರ್ಮಿತವಾಗಿದೆ. ಹೀಗೆ ಅನೇಕ ದಾಖಲೆಗಳನ್ನು ಅಧ್ಯಯನ ಮಾಡುವುದರ ಮೂಲಕ ಇತಿಹಾಸದ ಮಾರ್ಗಗಳ ಪುನರ್ಸೃಷ್ಟಿ ಸಾಧ್ಯ.
ಕಮಲಾಪುರ ಕೆರೆ
ಅನೇಕ ಪುರಾತನ ದಾಖಲೆಗಳಲ್ಲಿ ಉಲ್ಲೇಖಗೊಂಡಿರುವ ಕಮಲಾಪುರ ಗ್ರಾಮ ಮತ್ತು ಕೆರೆಗಳು ಹಂಪೆಯ? ಹಳೆಯದು. ಮೂರು ಕಿ.ಮೀ.ನ? ಉದ್ದ ಇರುವ ಏರಿಯನ್ನು ಹೊಂದಿರುವ ಈ ಕೆರೆಯೂ ಕಾಲಕಾಲದಲ್ಲಿ ವಿಸ್ತಾರಗೊಂಡದ್ದು ಎಂದು ಹೇಳಬಹುದಾಗಿದೆ. ವಿಜಯನಗರದ ದೊರೆ ಪ್ರೌಢದೇವರಾಯ (೧೪೨೫-೧೪೪೬) ನಿರ್ಮಿಸಿದ ಕೆರೆ ಇದು. ತುಂಗಭದ್ರಾ ನದಿಯಿಂದ ಕಾಲುವೆಗಳ ಮೂಲಕ ನೀರನ್ನು ಪಡೆದುಕೊಳ್ಳುವ ಕೆರೆ ಇದಾಗಿದೆ. ಬಸವಣ್ಣ ಕಾಲುವೆ ಮತ್ತು ರಾಯ ಕಾಲುವೆ ಎಂದು ಇವುಗಳನ್ನು ಕರೆಯಲಾಗುತ್ತದೆ.
ದರೋಜಿ ಕೆರೆ
ಇದು ಹೊಸಪೇಟೆ-ಬಳ್ಳಾರಿ ರಸ್ತೆಯಲ್ಲಿರುವ ಸಂಡೂರು ತಾಲ್ಲೂಕಿನ ದರೋಜಿ ಗ್ರಾಮದಲ್ಲಿರುವ ಕೆರೆ. ಪ್ರಾಚೀನವೇ ಆದರೂ ವಿಜಯನಗರ ಸ್ಥಾಪನೆಗೂ ಪೂರ್ವದಲ್ಲಿ ಮುಸಲ್ಮಾನ ಸುಲ್ತಾನ ಕಟ್ಟಿಸಿದ ಎಂಬ ಉಲ್ಲೇಖವಿದೆ. ಕಮ್ಮಟದುರ್ಗದ ದೊರೆ ಕಂಪಿಲರಾಯನ ಮಗನಾದ ಮಹಾವೀರ ಕುಮಾರರಾಮನನ್ನು ಅಪಾರ ಸೈನ್ಯದೊಂದಿಗೆ ಬಂದ ಮುಸಲ್ಮಾನರು ಹತ್ಯೆಗೈದು ತಮ್ಮ ರಾಜ್ಯಕ್ಕೆ ಹಿಂತಿರುಗುವಾಗ ಗೆದ್ದ ರಾಜ್ಯದಲ್ಲಿ ಅವರ ಗುರುತು ಇರಬೇಕೆಂದು ಸರದಾರರನ್ನು ಕರೆಸಿ ಸಮುದ್ರವನ್ನು ಹೋಲುವಂತಹ ವಿಶಾಲ ಕೆರೆಗಳನ್ನು ಕಟ್ಟಬೇಕೆಂದು ಆಜ್ಞಾಪಿಸುತ್ತಾರಂತೆ. ಹಾಗೆ ಕಟ್ಟಿದ ಮೂರು ಕೆರೆಗಳಲ್ಲಿ ಬಾಹಾಳ ಸರದಾರ ಕಟ್ಟಿಸಿದ ’ದರಿಯಾ ತಲಾಬು’ ಕೂಡ ಒಂದು. ಪರ್ಷಿಯನ್ ಭಾ?ಯಲ್ಲಿ ಈ ಹೆಸರಿಗೆ ’ನೀರಿರುವ ಕೆರೆ’ ಎಂಬ ಅರ್ಥವಿದೆ. ಕಾಲಾಂತರದಲ್ಲಿ ಇದು ದರೋಜಿಯಾಯಿತು ಎಂದು ಸ್ಥಳೀಯ ಕೈಫಿಯತ್ತು ತಿಳಿಸಿದೆ (ಆದರೆ ವಿಧ್ವಂಸಕ್ಕೆಂದೇ ಬಂದಿದ್ದ ಆ ಮುಸಲ್ಮಾನ ಸೇನೆ ಇಂತಹ ನಿರ್ಮಾಣ ಕಾರ್ಯದಲ್ಲಿ ತೊಡಗಿತೆ? – ಎನ್ನುವ ಪ್ರಶ್ನೆಯೂ ಇದೆ). ಏನೇ ಆದರೂ ಈ ಕೆರೆಯು ಅತ್ಯಂತ ವಿಶಾಲವಾಗಿರುವುದು ಸ್ಪ?. ಒಮ್ಮೆ ಈ ಕೆರೆಯು ಒಡೆದಾಗ ಇಡೀ ಗ್ರಾಮವೇ ಸರ್ವನಾಶವಾಯಿತಂತೆ. ಅನಂತರ ಕೋಡಿಯ ಎತ್ತರವನ್ನು ತಗ್ಗಿಸಿ ಪುನರ್ನಿರ್ಮಿಸಲಾಯಿತು. ದರೋಜಿ ಕೆರೆಯ ಆಗಿನ ಮೂರು ತೂಬುಗಳು ಈಗಲೂ ಕಾರ್ಯನಿರ್ವಹಿಸುತ್ತಿವೆ.
ಈ ಕೆರೆ ಎ? ದೊಡ್ಡದಿತ್ತು ಎಂಬುದಕ್ಕೂ ಒಂದು ಘಟನೆಯಿದೆ. ಟಿಪ್ಪುವಿನ ಕಾಲದಲ್ಲಿ ಮರಾಠರೊಂದಿಗೆ ಯುದ್ಧ ಮಾಡುವಾಗ ಸುಮಾರು ಮುವ್ವತ್ತು ಸಾವಿರ ಸೈನಿಕರು ಆಗ ನೀರಿಲ್ಲದೇ ಬತ್ತಿ ಹೋಗಿದ್ದ ಈ ಕೆರೆಯಲ್ಲಿ ಅಡಗಿಕೊಂಡಿದ್ದರು ಎಂದು ಜನರು ಹೇಳುತ್ತಾರೆ. ಈ ಕೆರೆಯ ಏರಿ ಸುಮಾರು ೩.೫ ಕಿ.ಮೀ. ಉದ್ದ ಮತ್ತು ೪೫ ಅಡಿಗಳ? ಎತ್ತರವಿರುವುದು ಸಹ ಈ ನಂಬಿಕೆಗೆ ಪುಷ್ಟಿ ನೀಡುತ್ತದೆ. ಸುಮಾರು ೨೦೦೦ಕ್ಕೂ ಹೆಚ್ಚು ಎಕರೆ ಕೃಷಿಪ್ರದೇಶವು ಈ ಕೆರೆಯ ನೀರಿನ ಮೇಲೆ ಆಶ್ರಿತವಾಗಿದೆ.
ದಣ್ಣಾಯಕನ ಕೆರೆ
ಮುದ್ದಾ ಎಂಬ ಕುರುಬರ ಹುಡುಗನು ಬಹು ದೊಡ್ಡ ಜ್ಯೋತಿಷಿಯಾಗಿದ್ದಂತಹ ಒಬ್ಬ ಬ್ರಾಹ್ಮಣನ ಆಶ್ರಯದಲ್ಲಿ ಬೆಳೆಯುತ್ತಿದ್ದ. ಒಮ್ಮೆ ಈ ಬಾಲಕ ಮಲಗಿದ್ದಾಗ ಸರ್ಪವೊಂದು ಹೆಡೆಯೆತ್ತಿ ಈತನಿಗೆ ನೆರಳು ನೀಡುತ್ತಿದ್ದುದನ್ನು ಕಂಡು ಈ ಬಾಲಕ ಮುಂದೆ ಬಹುದೊಡ್ಡ ಪ್ರಜಾಹಿತಕಾರ್ಯಗಳನ್ನು ಮಾಡುತ್ತಾನೆ ಎಂದು ಊರಜನರಿಗೆ ಆ ಬ್ರಾಹ್ಮಣನು ಹೇಳುತ್ತಾನಂತೆ. ಈ ಮುದ್ದನೆ ಮುಂದೆ ದೊಡ್ಡವನಾಗಿ ವಿಜಯನಗರದ ಸೈನ್ಯದಲ್ಲಿ ದಂಡನಾಯಕನಾದ (ದಣ್ಣಾಯಕ). ಈತ ಕಟ್ಟಿಸಿದ ಕೆರೆ ಇಂದಿಗೂ ದಣ್ಣಾಯಕನ ಕೆರೆಯೆಂದು ಹೆಸರಾಗಿದೆ. ಸುಮಾರು ೧೫೦೦ಕ್ಕೂ ಹೆಚ್ಚು ಎಕರೆ ಪ್ರದೇಶಕ್ಕೆ ನೀರುಣಿಸುವ ಈ ಕೆರೆಗೆ ೨.೧ ಕಿ.ಮೀ. ಉದ್ದದ ಎರಡು ನಾಲೆಗಳಿವೆ. ವಿವಿಧ ಎತ್ತರಗಳಲ್ಲಿ ಸುಮಾರು ಇಪ್ಪತ್ತು ಮೀಟರ್ ಅಂತರದಲ್ಲಿ ಪಿಸ್ಟನ್ ಮಾದರಿಯ ಎರಡು ತೂಬುಗಳಿವೆ. ತೂಬುಗಳನ್ನು ಹೊರಭಾಗದ ಇಳಿಜಾರಿನಲ್ಲಿ ಕಾಲುವೆಗೆ ಸೇರಿಸಿರುವುದರಿಂದ ನೀರು ಸಮರ್ಪಕವಾಗಿ ಆಯಕಟ್ಟು ಪ್ರದೇಶಕ್ಕೆ ಹರಿದು ಹೋಗುತ್ತದೆ. ಈ ಹಿಂದೆ ಉಲ್ಲೇಖಿಸಿದ್ದಂತೆ ದಣ್ಣಾಯಕನ ಇಚ್ಚೆಯಂತೆಯೇ ಅವನ ಸಮಾಧಿಯನ್ನು ರಾಯರ ಕೆರೆ ಏರಿಯಲ್ಲಿ ಮಾಡಲಾಯಿತು.
ಮಾಸೂರು ಕೆರೆ
ಹಿರೇಕೆರೂರು ತಾಲ್ಲೂಕಿನಲ್ಲಿರುವ ಮಾಸೂರು ಕೆರೆಯು ವಿಜಯನಗರ ಅರಸರ ಕಾಲದ್ದು. ವಿಶೇ?ವೆಂದರೆ ಈ ಕೆರೆಯ ಕಟ್ಟೆಯ ಎತ್ತರ ಸುಮಾರು ನೂರು ಅಡಿಗಳಿಗೂ ಹೆಚ್ಚು. ಇ? ಎತ್ತರದ ಹಳೆಯ ಕೆರೆ ಮತ್ತೊಂದಿಲ್ಲ. ಈ ಕೆರೆಗಳ ಕಟ್ಟೆಯ ಇಳಿಜಾರಿನಲ್ಲಿ ಜೋಡಿಸಿರುವ ಕಲ್ಲುಗಳ ಗಾತ್ರ ಅಗಾಧವಾದುದು (ಮೂರು ಅಥವಾ ನಾಲ್ಕು ಅಡಿಗಳಿಗೂ ಹೆಚ್ಚು). ಇವುಗಳನ್ನು ಇ? ಎತ್ತರದ ಕಟ್ಟೆಗೆ ಜೋಡಿಸಲು ಬಹುಶಃ ನೂರಾರು ಆನೆಗಳು, ಸಾವಿರಾರು ಜನರು ಶ್ರಮ ಪಟ್ಟಿರಬೇಕು. ಈ ಕೆರೆಯ ತೂಬಿಗೆ ನಿರ್ಮಿಸಿರುವ ಸುರಂಗ (ನೀರು ಕಾಲುವೆ) ೮೦೦ ಅಡಿ ಉದ್ದವಿದ್ದು ಎಂಟು ಅಡಿ ಎತ್ತರ ಮತ್ತು ಮೂರಡಿ ಅಗಲವಿದೆ. ಸುರಕ್ಷತೆಯ ದೃಷ್ಟಿಯಿಂದ ಇದು ನೇರವಾಗಿರದೆ ಅಂಕುಡೊಂಕಾಗಿದೆ. ನೀರಿನ ಭಾರಿ ಒತ್ತಡದ ಕಾರಣ ಕಟ್ಟೆಯು ಒಡೆದು ಕೆರೆ ನಿರುಪಯುಕ್ತವಾಗಿದ್ದುದು ೧೮೬೨ರಲ್ಲಿ ಆಂಗ್ಲರ ನೇತೃತ್ವದಲ್ಲಿ ದುರಸ್ತಿಯಾಯಿತು. ಹೊಸ ಸುರಂಗ ನಿರ್ಮಾಣವಾದರೂ ಹಳೆಯ ಸುರಂಗವನ್ನು ಈಗಲೂ ಕಾಣಬಹುದು.
ರಾಯರ ಕೆರೆ
ಈಗಲೂ ಉಪಯೋಗಿಸಲ್ಪಡುತ್ತಿರುವ ಮತ್ತೊಂದು ಪ್ರಮುಖ ಕೆರೆ ಎಂದರೆ ರಾಯರ ಕೆರೆ. ಕೃ?ದೇವರಾಯನೇ ಇದನ್ನು ಕಟ್ಟಿಸಿದ. ಎರಡು ಬೆಟ್ಟಗಳ ನಡುವೆ ಇರುವ ಈ ಬೃಹತ್ ಕೆರೆಯ ಕುರಿತು ಅನೇಕ ಕುತೂಹಲಕರ ಸಂಗತಿಗಳು ಡಾಮಿಂಗೊ ಪಾಯಸ್ (Damingo Paes) ಎಂಬ ಪ್ರವಾಸಿಗನ ದಿನಚರಿಯಿಂದ ದೊರಕುತ್ತದೆ. ಜೊ ಡಿ ಲ ಪೋಂಟೆ (Jao de la
Ponte) ಎಂಬ ಗೋವೆಯಲ್ಲಿದ್ದ ಪೋರ್ಚುಗೀಸ್ ತಜ್ಞನನ್ನು ಕರೆಸಿ ಇದನ್ನು ನಿರ್ಮಿಸಲಾಯಿತು ಎಂಬುದು ಅದರಲ್ಲಿ ಪ್ರಮುಖವಾದುದು. ಸುಮಾರು ಮೂರು ಲೀಗ್ಗಳಷ್ಟು (ಅಂದಾಜು ೧೩ ಕಿ.ಮೀ.) ದೂರದಿಂದ ನಾಲೆಗಳ ಮೂಲಕ ಬೆಟ್ಟಪ್ರದೇಶಗಳಲ್ಲಿ ಬೀಳುವ ನೀರನ್ನು ಇಲ್ಲಿಗೆ ಹರಿಸಲಾಗುತ್ತಿತ್ತು ಎಂಬುದು ತಿಳಿದುಬರುತ್ತದೆ. ’ರಾಜನು ಒಂದು ಬೆಟ್ಟವನ್ನು ಒಡೆದು ಹಾಕಿ ಕೆರೆಯನ್ನು ಕಟ್ಟಿಸಿದನು. ಸುಮಾರು ಇಪ್ಪತ್ತು ಸಾವಿರ ಜನರು ಇರುವೆಗಳಂತೆ ಕೆಲಸ ಮಾಡುತ್ತಿದ್ದರು. ಅವರ ಮೇಲ್ವಿಚಾರಣೆಯನ್ನು ನೊಡಿಕೊಳ್ಳುವುದಕ್ಕಾಗಿ ಅನೇಕ ಮಂದಿ ಉದ್ಯೋಗಸ್ಥರನ್ನು ರಾಜನು ನೇಮಕ ಮಾಡಿದ್ದನು’ ಎಂದು ಆತ ಬರೆಯುತ್ತಾನೆ. ಫೆರ್ನಾವೊ ನ್ಯೂಜಿಜ್ (Fernao Nuniz) ಎಂಬ ಮತ್ತೊಬ್ಬ ಪ್ರವಾಸಿಗನು ವಿಜಯನಗರದ ಮಹಾರಾಜನು ರಾಣಿಯರ ಗೌರವಾರ್ಥ ನಾಗಲಾಪುರವೆಂಬ ಪುರವನ್ನು ನಿರ್ಮಿಸಿ ಈ ಕೆರೆಯನ್ನು ಕಟ್ಟಿಸಿದನು ಎಂದು ದಾಖಲಿಸುತ್ತಾನೆ. ಹಾಗೆಯೇ ಒಂಭತ್ತು ವ?ಗಳ ಕಾಲ ಈ ಕೆರೆಯ ನಾಲೆಯಿಂದ ನೀರನ್ನು ಪಡೆದು ಕೃಷಿ ಮಾಡುತ್ತಿದ್ದ ರೈತರಿಗೆ ತೆರಿಗೆಯಿಂದ ವಿನಾಯಿತಿ ನೀಡಿದ್ದ ಎಂಬುದನ್ನೂ ತಿಳಿಸುತ್ತಾನೆ.
ಕೆರೆ ಸಂರಕ್ಷಣೆ ಮತ್ತು ತೆರಿಗೆಗಳು
ಆ ಕಾಲದಲ್ಲಿ ಕೆರೆಗಳನ್ನು ಕೆಲವರು ಕಟ್ಟಿಸಿದರೆ, ಅದರ ರಕ್ಷಣೆಯ ಜವಾಬ್ದಾರಿಯನ್ನೂ ಕೆಲವರು ಹೊರುತ್ತಿದ್ದರು. ಕೆರೆಯ ರಕ್ಷಣೆಯ ಪಾತ್ರ ನಿರ್ವಹಿಸುವವರಿಗೆ ಧನ, ಧಾನ್ಯ, ಭೂಮಿ, ದಾನ, ದತ್ತಿಗಳು ಹೀಗೆ ಅನೇಕ ರೀತಿಯ ಕೊಡುಗೆಗಳನ್ನು ನೀಡಲಾಗುತ್ತಿತ್ತು. ಇದರ ಮೂಲಕ ಪ್ರಜೆಗಳು ಕೆರೆಯ ರಕ್ಷಣೆಯಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುವಂತಹ ವ್ಯವಸ್ಥೆಯಿತ್ತು. ಇಂತಹವರು ಕಾಲಕಾಲಕ್ಕೆ ಕೆರೆಯ ಏರಿ, ನಾಲೆ, ತೂಬು, ಕೋಡಿ ಮತ್ತು ಕಟ್ಟೆಗೋಡೆಗಳನ್ನು ಗಮನಿಸುತ್ತಾ ಕಾಲಕಾಲಕ್ಕೆ ದುರಸ್ತಿ ಮಾಡಿ ಸುಸ್ಥಿತಿಯಲ್ಲಿಡುತ್ತಿದ್ದರು.
ಇದರೊಂದಿಗೆ ರಾಜ, ಮಾಂಡಲಿಕರು, ಆಡಳಿತ ಪ್ರತಿನಿಧಿಗಳು ಕೆರೆಯ ರಕ್ಷಣೆಯಲ್ಲಿ ತೊಡಗಿದ್ದವರಿಗೆ ತೆರಿಗೆಗಳಿಂದ ವಿನಾಯಿತಿಯನ್ನು ನೀಡುತ್ತಿದ್ದರು. ಕೆಲವೊಮ್ಮೆ ರಾಜರು ಪ್ರಭುತ್ವಕ್ಕೆ ಸಲ್ಲಿಸಬೇಕಾಗಿದ್ದ ತೆರಿಗೆಯನ್ನು ಮನ್ನಾ ಮಾಡಿ ಆ ಹಣವನ್ನು ಕೆರೆಯ ಪುನರ್ನಿರ್ಮಾಣ ಕಾರ್ಯದಲ್ಲಿ ತೊಡಗಿಸಿಕೊಳ್ಳಲು ಅನುಕೂಲ ಮಾಡಿಕೊಡುತ್ತಿದ್ದರು.
ಹರಿಹರ ಮಹಾರಾಯನ ಪ್ರಧಾನಿ ಬಸವಪ್ಪ ಡಣ್ಣಾಯಕ ಜನರ ಕ?ಸುಖ ತಿಳಿಯಲು ಸಂಚಾರ ಹೊರಟಿದ್ದಾಗ ಸೂಳೆಕೆರೆಯು ಶಿಥಿಲಗೊಂಡಿರುವುದು ಕಾಣುತ್ತದೆ. ಪ್ರಧಾನಿಯು ಕೂಡಲೇ ಶಾನುಭೋಗ ಬೊಮ್ಮರಸಯ್ಯನನ್ನು ಕರೆಸಿ ವಿಚಾರಿಸಿದಾಗ ’ಹರಿದ್ರಾ ನದಿಯ ಪ್ರವಾಹದಿಂದಾಗಿ ಕೆರೆಯ ಕೋಡಿಯಲ್ಲಿ ಹಳ್ಳವಾಗಿರುವುದರಿಂದ ನೀರು ಸಂಗ್ರಹವಾಗುತ್ತಿಲ್ಲ’ ಎಂದು ಮನವರಿಕೆ ಮಾಡಿಕೊಡುತ್ತಾನೆ. ಕೂಡಲೇ ಬಸವಪ್ಪ ಡಣ್ಣಾಯಕನು ಕೋಟೆಯ ಬಳಿಯ ಮಡುಕಟ್ಟೆಯಲ್ಲಿ ಹೊಸದಾಗಿ ಕೋಡಿ ಮಾಡಿಸಿ ಅದಕ್ಕೆ ’ಬಸವನ ತೂಬು’ ಎಂದು ಹೆಸರಿಸುತ್ತಾನೆ.
ಆಗಿನ ಕಾಲದಲ್ಲಿ ಕೆರೆಯನ್ನು ನಾಶಮಾಡುವಂತಹ ಕಾರ್ಯ ಮಾಡುವವರಿಗೆ ಕಠಿಣ ಶಿಕ್ಷೆಯನ್ನು ವಿಧಿಸಲಾಗುತ್ತಿತ್ತು. (ಕೌಟಿಲ್ಯನು ಕೆರೆಕಟ್ಟೆಗಳನ್ನು ನಾಶ ಮಾಡುವವರನ್ನು ನೀರೊಳಗೆ ಮುಳುಗಿಸಬೇಕು ಎಂದೇ ಹೇಳಿದ್ದಾನೆ). ಭಾರಿ ಮಳೆ, ಪ್ರವಾಹ ಇತ್ಯಾದಿ ಪ್ರಾಕೃತಿಕ ಕಾರಣಗಳಿಂದ ಕೆರೆ ನಾಶಗೊಂಡರೆ ಇಡೀ ಜನರೇ ಮುಂದೆ ನಿಂತು ಸಂಘಟಿತರಾಗಿ ಕೈಲಾದ ರಕ್ಷಣೆಯ ಕಾರ್ಯವನ್ನು ಮಾಡುತ್ತಿದ್ದರು. ಶಾಸನವೊಂದು ತಿಳಿಸುವಂತೆ ತಿರುಮಡಿಹಳ್ಳಿಯಲ್ಲಿನ ಕೆರೆಯಲ್ಲಿನ ಮೂರು ಬಿರುಕುಗಳನ್ನು ಸರಿಮಾಡಿದ ವ್ಯಕ್ತಿಗೆ ಕಟ್ಟುಕೊಡುಗೆಯಾಗಿ ಒಂದು ಖಂಡುಗದ? ಭೂಮಿಯನ್ನು ನೀಡಲಾಯಿತು. ಹಾಗೆಯೇ ೧೫೪೮ರಲ್ಲಿ ಪಳ್ಳಿಪಾಡು ಎಂಬ ಗ್ರಾಮದ ಕೆರೆಯನ್ನು ಜೀರ್ಣೋದ್ಧಾರ ಮಾಡಿದ ಗುಡ್ಡದ ಗಿರಿಗೌಡ ಎಂಬವನಿಗೆ ಕಟ್ಟುಕೊಡುಗೆಯನ್ನು ನೀಡಲಾಯಿತು ಎಂದು ತಿಳಿಯುತ್ತದೆ.
ಕೋಲಾರ ಜಿಲ್ಲೆಯ ಕುರುಬರ ಹಳ್ಳಿಯಲ್ಲಿ ದೊರೆತ ಪ್ರಾಚೀನ ಶಾಸನವು ಕೆರೆಯ ರಕ್ಷಣೆಗೆ ಬಿಟ್ಟುಕೊಟ್ಟಂತಹ ಭೂಮಿಯನ್ನು ಕಾಯ್ದು ರಕ್ಷಿಸುವವನಿಗೆ ಅಶ್ವಮೇಧ ಯಾಗವನ್ನು ಮಾಡಿದ ಪುಣ್ಯವು ಲಭಿಸುವುದು ಎಂದು ತಿಳಿಸುತ್ತದೆ.
ದೇವರೊಂದಿಗೆ ಒಪ್ಪಂದ
ಕ್ರಿ.ಶ. ೧೪೧೦ರಲ್ಲಿ ವಿಜಯನಗರದ ದೊರೆ ದೇವರಾಯನು ಹರಿಹರದ ಅಧಿದೇವತೆಯಾದ ಹರಿಹರ ದೇವರು ಮತ್ತು ಆ ಕ್ಷೇತ್ರದ ಜನತೆಯೊಂದಿಗೆ ಒಪ್ಪಂದವೊಂದನ್ನು ಮಾಡಿಕೊಂಡಿದ್ದನು. ಇದರ ಪ್ರಕಾರ ಹರಿದ್ರಾ ನದಿಗೆ ಕಟ್ಟೆಯನ್ನು ಕಟ್ಟಿ ಅದರ ಕಾಲುವೆಯಿಂದ ನೀರು ಹರಿದ ಭೂಮಿಯಲ್ಲಿ ಹರಿಹರ ದೇವರಿಗೆ ಎರಡು ಭಾಗ ಮತ್ತು ತಮ್ಮ ವೆಚ್ಚದಲ್ಲೇ ಸೇತುವೆಯನ್ನು ಕಟ್ಟಿದ ಮಹಾಜನರಿಗೆ ತೆರಿಗೆಯನ್ನು ಮಾಫಿ ಮಾಡಿದ್ದಲ್ಲದೆ, ಮಿಕ್ಕ ಮೂರನೇ ಒಂದು ಭಾಗ ಸಲ್ಲತಕ್ಕದೆಂದು ನಿಯಮ ಮಾಡಿ ಶಾಸನ ಮಾಡಿಸಿದ್ದನು. ಜಲಾಶಯದ ದುರಸ್ತಿಗೂ ದೇವಾಲಯವು (ಹರಿಹರ ದೇವರು) ಮೂರನೇ ಎರಡರ? ಭಾಗ ಖರ್ಚು ವಹಿಸಿಕೊಳ್ಳಬೇಕೆಂದು ಕಟ್ಟು ಮಾಡಲಾಗಿತ್ತು.
ದೇವಾಲಯ ಮತ್ತು ಕೆರೆಗಳು
ದೇವಸ್ಥಾನಗಳು ಸಮಾಜದ ಎಲ್ಲ ಆಗುಹೋಗುಗಳನ್ನು ಸರಿದಾರಿಯಲ್ಲಿರಿಸುವ ಮಾರ್ಗದರ್ಶಿ ವ್ಯವಸ್ಥೆಗಳಾಗಿಯೂ ಹಿಂದೆ ಪಾತ್ರವನ್ನು ನಿರ್ವಹಿಸುತ್ತಿದ್ದವು. ಕೆಲವೊಮ್ಮೆ ಕೆರೆಗಳನ್ನು ದೇವಸ್ಥಾನದ ಉಸ್ತುವಾರಿಗೆ ಒಳಪಡಿಸಲಾಗುತ್ತಿತ್ತು. ಆಗ ಆ ಭಾಗದ ಉತ್ಪನ್ನಗಳು ಸಹ ದೇವಾಲಯಕ್ಕೆ ಸೇರುತ್ತಿತ್ತು. ತ್ರಯಂಬಕಪುರದ ತ್ರಯಂಬಕೇಶ್ವರ ದೇವರ ಸೇವೆಗೆ ಈ ರೀತಿ ಹದಿನೆಂಟು ಕೆರೆಗಳ ಉತ್ಪನ್ನಗಳು ಮುಡಿಪಾಗಿದ್ದವು. ಮಾಲೂರು ಕೆರೆ, ಅರಕೊಠಾರದ ಕೆರೆ (ಇಂದಿನ ಚಾಮರಾಜನಗರ), ನರಸಮಂಗಲದ ಕೆರೆ, ಕೋಡಿಹಳ್ಳಿ ಕೆರೆ, ಕುಂತನೂರು ಕೆರೆ ಇತ್ಯಾದಿಯಾಗಿ ಶಾಸನವು ಆ ಕೆರೆಗಳ ಹೆಸರನ್ನೂ ತಿಳಿಸುತ್ತದೆ.
ಕೆರೆಯ ನಿರ್ಮಾಣದಷ್ಟು ಅಗತ್ಯವಾಗಿ ರಾಜಪ್ರಭುತ್ವ, ಸ್ಥಳೀಯಾಡಳಿತ ಮತ್ತು ಜನತೆಯ ಗಮನವೂ ಅದರ ನಿರ್ವಹಣೆಯ ಕುರಿತು ಇರುತ್ತಿತ್ತು. ಕೆರೆಯ ಪಾಲನೆಯ ಧರ್ಮವನ್ನು ಪಾಲಿಸದಿರುವುದು ಪಾಪವೆಂದು ಪರಿಗಣಿಸಲಾಗುತ್ತಿತ್ತು. ಕೆರೆಗಳನ್ನು ನಿರ್ಮಿಸಿ ಅದರ ನಿರ್ವಹಣೆಗೆಂದು ಸಮೀಪದಲ್ಲೇ ದೇವಾಲಯಗಳನ್ನು ನಿರ್ಮಿಸುತ್ತಿದ್ದರು. ಕ್ರಿ.ಶ. ೧೩೬೦ರಲ್ಲಿ ಇಬ್ಬೆನಾಯಕನು ತನ್ನ ತಂದೆಯ ಹೆಸರಿನಲ್ಲಿ ಭುವಸಮುದ್ರವೆಂಬ ಕೆರೆಯನ್ನು ನಿರ್ಮಿಸಿ ಅದರ ಪಕ್ಕದಲ್ಲಿ ಭುವನೇಶ್ವರ ದೇವಾಲಯವನ್ನು ಸ್ಥಾಪಿಸಿದನು. ಆ ದೇವಾಲಯಕ್ಕೆ ಭೂಮಿಯನ್ನು ದತ್ತಿ ನೀಡಿದನು ಎಂಬುದೊಂದು ಇದಕ್ಕೆ ಉದಾಹರಣೆ.
ಅನೇಕ ದೇವಾಲಯಗಳಿಗೆ ಕೆರೆಯ ಸಂರಕ್ಷಣೆಯ ಜವಾಬ್ದಾರಿಯನ್ನು ನೀಡಲಾಗಿತ್ತು. ದೇವಾಲಯಕ್ಕೆ ಬರುತ್ತಿದ್ದ ಆದಾಯವನ್ನು ಕೆರೆಯ ರಕ್ಷಣೆಗೆ ತೊಡಗಿಸಿ, ಕೆರೆಯ ಆಯಕಟ್ಟಿನಿಂದ ಬರುವ ಕೃಷಿ ಆದಾಯವನ್ನು ದೇವಾಲಯದ ಆಡಳಿತ, ನಿರ್ವಹಣೆಗಳಿಗೆ ಉಪಯೋಗಿಸಲಾಗುತ್ತಿತ್ತು. ಆಂಧ್ರಪ್ರದೇಶದ ಚಿತ್ತೂರು ಜಿಲ್ಲೆಯ ತಿರುಪತಿ ಶ್ರೀ ವೆಂಕಟೇಶ್ವರ ದೇವಾಲಯಕ್ಕೆ ಬರುತ್ತಿದ್ದ ಧನರೂಪದ ಆದಾಯವನ್ನು ಕೆರೆ ಮತ್ತು ನಾಲೆಗಳನ್ನು ದುರಸ್ತಿ ಮಾಡಲು ಖರ್ಚು ಮಾಡಲಾಗುತ್ತಿತ್ತು. ಹಾಗೆಯೇ ದೇವಾಲಯದ ಭೂಮಿಯನ್ನು ಮಾರಿ ಬಂದ ಹಣದಿಂದ ಕೆರೆಯನ್ನು ದುರಸ್ತಿಗೊಳಿಸಿದ ಉಲ್ಲೇಖವೂ ವಿರೂಪಾಕ್ಷನ ಕಾಲದ, ಕ್ರಿ.ಶ. ೧೩೮೧ರ ಕಾಲದ ಶಾಸನ ತಿಳಿಸುತ್ತದೆ.
ಕೆರೆಬಂಡಿ ಮತ್ತು ಮೀನು ದೋಣಿ
ಕೆರೆಗಳಿಗೆ ಮಳೆಗಾಲದಲ್ಲಿ ಹರಿದು ಬರುವ ನೀರು ಮಣ್ಣು ಇತ್ಯಾದಿ ಕಲ್ಮಶವನ್ನು ಹೊತ್ತು ತಂದು ಹೂಳನ್ನು ಹೆಚ್ಚಿಸುತ್ತದೆ. ಇದರಿಂದಾಗಿ ಕಾಲುವೆಗಳ ತೂಬಿನ ರಂಧ್ರಗಳು ಮುಚ್ಚಿಕೊಳ್ಳುವುದರ ಜೊತೆಗೆ ಜಲ ಸಂಗ್ರಣೆಯ ಪ್ರಮಾಣ ಕಡಮೆಯಾಗುವುದು, ಏರಿಗೆ ಹಾನಿಯಾಗುವುದು. ಆದ್ದರಿಂದ ಕಾಲಕಾಲಕ್ಕೆ ಆ ಮಣ್ಣನ್ನು ತೆಗೆದು ನಾಲೆ, ಕೆರೆಗಳನ್ನು ಸುಸ್ಥಿತಿಯಲ್ಲಿಡಲು ಎತ್ತಿನ ಗಾಡಿಗಳನ್ನು ಬಳಸುತ್ತಿದ್ದರು. ಇದಕ್ಕೆ ಕೆರೆಬಂಡಿಗಳೆಂದೇ ಕರೆಯಲಾಗುತ್ತಿತ್ತು. ಈ ಕಾರ್ಯ ನಿರ್ವಹಿಸುವವರಿಗೆ ರಾಜನಿಂದ, ಗ್ರಾಮಗಳಿಂದ ದಾನ, ಮಾನ್ಯಗಳನ್ನು ನೀಡಲಾಗುತ್ತಿತ್ತು. ಹೆಬ್ಬಾಳೆಯ ಹಿರಿಯ ಕೆರೆಯನ್ನು ಸಂರಕ್ಷಿಸಲು ಗ್ರಾಮಗಳ ತೆರಿಗೆ ಹಣವನ್ನು ಬಳಸಿ ಕೆರೆ ಬಂಡಿಗಳು ಮತ್ತು ಅವುಗಳಿಗೆ ಬೇಕಾದ ಕಿರಮತ್ತು, ಕಬ್ಬಿಣದ ಸಲಾಕೆಗಳು, ಎಣ್ಣೆ ಮುಂತಾದ ಸಾಮಗ್ರಿಗಳನ್ನು ಒದಗಿಸಲಾಗುತ್ತಿತ್ತು ಎಂದು ಹಾಸನ ಜಿಲ್ಲೆಯ ಬೋಲಕ್ಯಾತನಹಳ್ಳಿಯಲ್ಲಿ ದೊರೆತ ಶಾಸನ ಹೇಳುತ್ತದೆ.
ಇದೇ ರೀತಿ ಕೆರೆಗಳನ್ನು ಸಕ್ರಮವಾಗಿಟ್ಟುಕೊಳ್ಳುವಲ್ಲಿ ಮೀನುಗಾರರ ಸಣ್ಣ ದೋಣಿಗಳ ಪಾತ್ರವೂ ಇತ್ತು. ಇವರುಗಳು ಕೆರೆಯಲ್ಲಿ ಇದ್ದ ಹೂಳು, ಜೊಂಡು ಮತ್ತಿತರ ಕಲ್ಮಶಗಳನ್ನು ದೋಣಿಗಳ ಮೂಲಕ ದಡಕ್ಕೆ ಸಾಗಿಸುತ್ತಿದ್ದರು. ಮೀನು ಗುತ್ತಿಗೆ ಪಡೆದ ಮೀನುಗಾರರು ಹೂಳೆತ್ತುವ ಕಾರ್ಯದಲ್ಲಿ ತೊಡಗಿಸಿಕೊಳ್ಳಬೇಕಾಗಿತ್ತು. ಗ್ರಾಮಸಭೆಗಳು ಕೆರೆಯ ಮೀನು ಗುತ್ತಿಗೆಯನ್ನು ನೀಡಿ ಅದರ ಹಣವನ್ನು ಕೆರೆಯ ಸಂರಕ್ಷಣೆಗೆ ಬಳಸಿಕೊಳ್ಳುತ್ತಿದ್ದ ಸಂದರ್ಭಗಳು ಇವೆ.
ವಿಜಯನಗರ ಕಾಲದ ಈ ಪದ್ಧತಿಗಳು ಸಾರ್ವಜನಿಕ ಸೇವೆಯಲ್ಲಿ ತೊಡಗಿಸಿಕೊಳ್ಳುವ ವ್ಯಕ್ತಿಗಳನ್ನು ಗುರುತಿಸಿ ಗೌರವಿಸುವುದರ ಜೊತೆಗೆ ಇಂತಹ ಸಮುದಾಯ ಹಿತದ ಕಾರ್ಯಗಳಲ್ಲಿ, ಪ್ರಜಾಸಮೂಹದ ಸಂಪತ್ತಿನ ಸಂರಕ್ಷಣೆಯಲ್ಲಿ ಜನರ ಪಾಲ್ಗೊಳ್ಳುವಿಕೆಯನ್ನು ಪ್ರೋತ್ಸಾಹಿಸುತ್ತಿದ್ದವೆಂಬುದು ಸ್ಪಷ್ಟವಾಗುತ್ತದೆ.
ಉಳಿಸಿಕೊಳ್ಳಬೇಕಿದೆ ಇತಿಹಾಸ ಪ್ರಜ್ಞೆ
ಈಗೀಗ ಪರಂಪರೆಯ ರಕ್ಷಣೆ ಎನ್ನುವ ಹೆಸರಿನಲ್ಲಿ ಅನೇಕ ಅಧ್ವಾನಗಳಾಗುತ್ತಿವೆ. ಕೆರೆಗಳ ಸಂರಕ್ಷಣೆಯು ಅವುಗಳಲ್ಲೊಂದು. ಹಳೆಯ ಕಾಲದ ಕೆರೆಗಳ ಪುನರುತ್ಥಾನ ಮಾಡುವ ಮೊದಲು, ಅವುಗಳನ್ನು ಕಟ್ಟಿದ ರೀತಿಯನ್ನು ನಾವು ಅಭ್ಯಾಸ ಮಾಡಬೇಕಾಗಿದೆ. ಇಂದಿಗೂ ಹೊಳೆಯದ ಅನೇಕ ಸುಲಭ, ಸುರಕ್ಷಿತ ತಂತ್ರಜ್ಞಾನಗಳನ್ನು ಪ್ರಾಚೀನರು ಉಪಯೋಗಿಸಿದ್ದ ಸಾಧ್ಯತೆಗಳಿವೆ. ಪಾಂಡ್ಯರ ಕಾಲದ ಕಾಲುವೆಯನ್ನು ದುರಸ್ತಿಗೊಳಿಸಲು ಹೊರಟ ಹಾರ್ಸ್ಲಿ ಎಂಬ ಬ್ರಿಟಿಷ್ ಇಂಜಿನಿಯರ್ ಹಿಂದಿನವರು ಕಟ್ಟಿದ ರೀತಿಯನ್ನೇ ಅನುಸರಿಸುವುದರಲ್ಲಿ ತನಗೆ ಬಹಳ ಸಂತೋಷವಾಯಿತೆಂದು ಹೇಳಿದ್ದಾನೆ. ಇದಕ್ಕೆ ಪೂರಕವೆನ್ನುವಂತೆ ಹಳೆಯ ಮೈಸೂರಿನ ಮುಖ್ಯ ಇಂಜಿನಿಯರ್ ಆಗಿದ್ದ ಸ್ಯಾಂಕಿ (Sankey)) ಎಂಬಾತ ಆಗಿನ ಕಾಲದ ಕೆರೆಗಳನ್ನು ಶಾಸ್ತ್ರೀಯವಾಗಿ ಅಧ್ಯಯನ ಮಾಡಿ “ಇಲ್ಲಿನ ಪೂರ್ವಜರು ಎಲ್ಲೆಲ್ಲಿ ಕೆರೆಗಳನ್ನು ಕಟ್ಟಲು ಸಾಧ್ಯವೋ ಅಲ್ಲೆಲ್ಲಾ ಕೆರೆಗಳನ್ನು ಕಟ್ಟಿಬಿಟ್ಟಿದ್ದಾರೆ. ಹೊಸಕೆರೆಗಳಿಗೆ ಸ್ಥಳಗಳನ್ನು ಹುಡುಕುವುದು ದುಸ್ತರ. ಒಂದು ವೇಳೆ ಸ್ಥಳವಿದೆಯೆಂದು ಹೊಸ ಕೆರೆಯನ್ನು ಕಟ್ಟಿದರೆ, ಅದು ಈಗಿರುವ ಕೆರೆಗಳಲ್ಲಿ ನೀರು ಸೇರುವುದಕ್ಕೆ ತಡೆಯುಂಟಾಗುತ್ತದೆ” ಎಂದು ಹೇಳಿದ್ದಾನೆ. ಕೆರೆ ನಿರ್ಮಾಣದಲ್ಲಿ ನಮ್ಮ ಪೂರ್ವಜರು ಹೊಂದಿದ್ದ ತಜ್ಞತೆಗೆ ಇದಕ್ಕಿಂತ ಹೆಚ್ಚಿನ ಪ್ರಶಂಸೆ ಬೇಕೆ? (ಸ್ಯಾಂಕಿಯ ಹೆಸರಿನಲ್ಲಿ ಬೆಂಗಳೂರಿನಲ್ಲಿ ಒಂದು ಕೆರೆಯೂ ಇದೆ.) ಗುಡಿಬಂಡೆ ಸಮೀಪದ ವಾಟದ ಹೊಸಹಳ್ಳಿಯಲ್ಲಿನ ಕಟ್ಟೆಯ ಕಲ್ಲಿನ ಜೋಡಣೆ, ಅದರ ನಿಪುಣತೆಯನ್ನು ನೋಡಿ ಇಂತಹ ಕಲ್ಲಿನ ಕಟ್ಟೆಯನ್ನು ತಾನು ಇನ್ನೆಲ್ಲೂ ನೋಡಿಲ್ಲ ಎಂದು ಸ್ಯಾಂಕಿ ಹೇಳಿದ್ದಾನೆ. ಇಂದಿಗೂ ತನ್ನ ಅಂದ ಮತ್ತು ಭದ್ರತೆಯನ್ನು ಈ ಕಟ್ಟೆ ಉಳಿಸಿಕೊಂಡಿದೆ.
ಮುಸಲ್ಮಾನ ಅಧಿಕಾರಿಯ ಕೆರೆ ಶಾಸನ
ದಾವಣಗೆರೆಯ ಬಸವಾಪಟ್ಟಣದಲ್ಲಿ ದೊರೆತ ೧೪೨೪ರ ಶಾಸನವು ಕೆರೆಯ ರಕ್ಷಣೆಯ ಕುರಿತ ಅಪಾರ ಕಾಳಜಿಯನ್ನು ವ್ಯಕ್ತಪಡಿಸುತ್ತದೆ. ಬಿಜಾಪುರದ ಮಹಮದ್ ಷಾನ ಅಧಿಕಾರಿಯಾಗಿದ್ದ ಮಲ್ಲಿಕ್ ಇಬ್ನೆ ಅರ್ಬನ್ ಎಂಬವನು ಬಸವಾಪಟ್ಟಣದಲ್ಲಿ ಕೆರೆಯನ್ನು ಕಟ್ಟಿಸಿ ಹೊರಡಿಸಿರುವ ಶಾಸನದಂತೆ ಕೆರೆಯನ್ನು ಹಿಂದುವಾಗಲಿ, ಮುಸಲ್ಮಾನನಾಗಲಿ ಚೆನ್ನಾಗಿ ನೋಡಿಕೊಂಡು ಬಂದರೆ ಆಚಂದ್ರಾರ್ಕವಾಗಿ ಧನ, ಕನಕ, ಕೀರ್ತಿ ಬರಲಿ ಎಂದು ಹೇಳಿ, ಈ ಮಾತಿಗೆ ತಪ್ಪಿ ನಡೆದರೆ ಹಿಂದುವಾದರೆ ಕಾಶಿಯಲ್ಲಿ ಗೋವು ಕೊಂದ ಪಾಪ ಬರಲಿ, ಮುಸಲ್ಮಾನನಾದರೆ ಮಸೀದಿಯಲ್ಲಿ ಹಂದಿಯನ್ನು ಕೊಂದ ಪಾಪ ಬರಲಿ, ಮತ್ತು ಇದನ್ನು ಪಾಲಿಸಿದರೆ ಹಿಂದುವಿಗೆ ಕಾಶಿಗೆ ಹೋಗಿ ಬಂದ ಫಲ, ಪರಮಾಯುಷ್ಯ ಲಭಿಸಲಿ ಮತ್ತು ಮುಸಲ್ಮಾನನಾದರೆ ಮೆಕ್ಕಾಗೆ ಹೋಗಿ ಬಂದ ಫಲವು ಬರಲಿ ಎಂದು ಹಾರೈಸಲಾಗಿದೆ. ಈಗ ಈ ಕೆರೆ ಇಲ್ಲವಾದರೂ, ಅಂದಿನ ಶಾಸನ ಕೆರೆಗಳ ಕುರಿತ ಕಾಳಜಿಗೆ ಸಾಕ್ಷಿಯಾಗಿ ಉಳಿದಿದೆ.
ವಿಜಯನಗರ ಕಾಲದ ದೊರೆಗಳು ಮತ್ತು ಪ್ರಜೆಗಳಿಗೆ ಕೆರೆಗಳ ನಿರ್ಮಾಣ ಧಾರ್ಮಿಕ ಕಾರ್ಯವೂ ಆಗಿತ್ತು. ಇದರ ನಿರ್ವಹಣೆ ಪುಣ್ಯದ ಕಾರ್ಯ ಎಂಬ ನಂಬಿಕೆಯೂ ಇತ್ತು. ಹಳೇಕಾಲದ ಬೆಂಗಳೂರು ಸೇರಿದಂತೆ ವಿಜಯನಗರ, ಮೈಸೂರು, ಚಿತ್ರದುರ್ಗ ಇತ್ಯಾದಿ ಬ್ರಿಟಿಷ್ ಪೂರ್ವಕಾಲದಲ್ಲಿ ನಿರ್ಮಾಣಗೊಂಡ ಅಥವಾ ಜನವಸತಿಯನ್ನು ಹೊಂದಿದ್ದಂತಹ ಅನೇಕ ನಗರಗಳನ್ನು ಗಮನಿಸಿದರೆ, ಅತ್ಯಂತ ವೈಜ್ಞಾನಿಕವಾಗಿ ನೀರಾವರಿ ವ್ಯವಸ್ಥೆ ರೂಪುಗೊಂಡ ಹಾಗೆ ಕಾಣಬರುತ್ತದೆ. ಆಗ ಕಟ್ಟಲ್ಪಟ್ಟ ಕೆರೆಗಳು ನಮ್ಮ ಪುರಾತನರ ಸಂಪ್ರದಾಯದಂತೆ ಹಲವು ಕೆರೆಗಳ ಜಾಲವೇ ಆಗಿದ್ದು, ನಗರಗಳ ಜನತೆಗೆ ಬೇಕಾದ ಕುಡಿಯುವ ಶುದ್ಧನೀರು ಮತ್ತು ಬೇಸಾಯದ ನೀರಿಗೆ ಕೊರತೆಯಾಗದಂತೆ ನಿರ್ಮಿಸಲಾಗಿದೆ. ಮಳೆಯಾಶ್ರಿತ ಬೇಸಾಯ ಮಾತ್ರವೇ ಅಲ್ಲದೆ ಕೃಷಿಕಾರ್ಯಗಳಿಗೆ ನಿರಂತರ ಜಲಪೂರೈಕೆಗೆ ಅಗತ್ಯವಾಗಿರುವ ವ್ಯವಸ್ಥೆಯನ್ನು ರಾಜರು ಮುತುವರ್ಜಿಯಿಂದ ಮಾಡುತ್ತಿದ್ದರು ಎಂಬುದು ನಿಜ. ಇದರೊಟ್ಟಿಗೆ ಜನಪದವೂ ಕೆರೆಗಳ ಬಗ್ಗೆ ತಮ್ಮದೆನ್ನುವ ಆತ್ಮೀಯಭಾವ ಹಾಗು ತಮ್ಮನ್ನು ಪೋಷಿಸುತ್ತಿದೆಯೆಂಬ ಪೂಜ್ಯ ಭಾವನೆಗಳನ್ನು ಬೆಳೆಸಿಕೊಂಡಿದ್ದು ಕಂಡುಬರುತ್ತಿದೆ. ಹೀಗಾಗಿ ಇವುಗಳ ಸಂರಕ್ಷಣೆ ಹಾಗೂ ನಿರ್ವಹಣೆಯು ಸಮುದಾಯದ ಹೊಣೆಯಾಗಿತ್ತು. ಸಕಲಕಾರ್ಯಕ್ಕೂ ಸರ್ಕಾರದೆಡೆಗೆ ಮುಖಮಾಡುವ ಪ್ರಜಾಪ್ರಭುತ್ವದ ಅನಪೇಕ್ಷಿತ ಸ್ವಭಾವದ ಬೆಳವಣಿಗೆಯ ಫಲವಾಗಿ ಇಂದು ಕೆರೆಗಳು ಬರಿದಾಗುತ್ತಿವೆ. ಕಟ್ಟೆಗಳು ಹೂಳುತುಂಬಿ ಹಾಳಾಗುತ್ತಿವೆ. ನೀರಿನ ನಾಲೆಗಳು, ಕುಂಟೆಗಳು ಒಣಗಿ ಹೋಗಿವೆ, ನಗರ ಪ್ರದೇಶದ ಕೆರೆಗಳು ಪಾರ್ಕು, ಮೈದಾನ, ಲೇಔಟ್ಗಳಾಗಿಬಿಟ್ಟಿವೆ.
ಇದು ಬದಲಾಗಿ ಕೆರೆಗಳು ಮತ್ತೊಮ್ಮೆ ಜಲಕೇಂದ್ರಗಳಾಗಿ ಹಿಂದಿನ ವೈಭವವನ್ನು ಕಾಣಬೇಕೆಂದರೆ ಮತ್ತೊಮ್ಮೆ ಇವುಗಳ ನಿರ್ವಹಣೆಯಲ್ಲಿ ಜನಸಮುದಾಯವನ್ನು ತೊಡಗಿಸಬೇಕಿದೆ. ಕನಿ?ಪಕ್ಷ ಸಣ್ಣಪುಟ್ಟ ಕೆರೆಗಳ ವಿಷಯದಿಂದಲಾದರೂ ಇದನ್ನು ಶುರು ಮಾಡಬಹುದು. ಸರ್ಕಾರವೆಂಬ ಬೃಹತ್ ವ್ಯವಸ್ಥೆ ಪ್ರತಿಯೊಂದರ ನಿರ್ವಹಣೆಗೂ ತಲೆಹಾಕಿದರೆ ಅಧಿಕಾರ, ಕಾನೂನು, ಕಛೇರಿ, ನಿಯಮ, ವೇತನದ ಸಿಬ್ಬಂದಿ ಇತ್ಯಾದಿಗಳ ಅಡಿಯಲ್ಲಿ ಕಾರ್ಯ ಕುಲಗೆಟ್ಟು ಹೋಗುವುದೇ ಹೆಚ್ಚು. ಕೆರೆಗಳ ವಿಷಯದಲ್ಲಿಯಂತೂ ಇದು ಸತ್ಯವೇ ಆಗಿದೆ. ಮೈಸೂರಿನ ದಿವಾನರಾಗಿದ್ದ ಸರ್ ಶೇ?ದ್ರಿ ಅಯ್ಯರ್ ಅವರು ೧೮೮೪ರಲ್ಲೇ ಇದನ್ನು ಗುರುತಿಸಿದ್ದರು: “Any reform in our tank system must start with a clear ecognition of the fact that it is beyond the ability of Government to undertake the repairs and maintenance of all tanks in our province.” ಇದು ಅವರದೇ ವಾಕ್ಯಗಳು.
ಆದರೆ ನಮ್ಮ ಸ್ವಾತಂತ್ರ್ಯ ಪೂರ್ವದ ಗ್ರಾಮ ಪಂಚಾಯಿತಿಗಳು, ಗ್ರಾಮದ ಆಂತರಿಕ ಆಡಳಿತ ವ್ಯವಸ್ಥೆಗಳು ಮತ್ತು ಪರಂಪರೆಯಿಂದ ಬಂದಿದ್ದ ಸಮುದಾಯದ ನಂಬಿಕೆ, ನಡವಳಿಕೆಗಳು ನೂರಾರು ವರ್ಷಗಳಿಂದ ಕೆರೆಗಳನ್ನು ಸಂರಕ್ಷಿಸಿದ್ದು ಮಾತ್ರವಲ್ಲದೇ, ಸುಸ್ಥಿತಿಯಲ್ಲಿಟ್ಟುಕೊಂಡಿದ್ದರೆಂಬುದು ನಮಗೆ ಕೈಗಂಬವಾಗಬೇಕಿದೆ. ಇದರಿಂದ ಮತ್ತೊಮ್ಮೆ ನಮ್ಮ ನಾಡಿನ ಕೆರೆಗಳು ಉಚ್ಛ್ರಾಯ ಸ್ಥಿತಿಗೆ ಬರುವುದನ್ನು ಕಾಣಬಹುದು. ಆಗ ಮಾತ್ರ ಹನಿ ನೀರಿಗಾಗಿ ನೂರಾರು ಕಿ.ಮೀ. ದೂರ ಅಥವಾ ಸಾವಿರಾರು ಮೀಟರ್ ಆಳದವರೆಗೆ ಪೈಪುಗಳನ್ನು ಬಳಸುವ ದುರಂತದಿಂದ ಹೊರ ಬರಲು ಸಾಧ್ಯ.