ಕೆರೆಗಳು ಅತ್ಯಂತ ಹಳೆಯದಾದ ಮಾನವನಿರ್ಮಿತ ರಚನೆ. ಕೆರೆಅಂಗಳ, ಹಳ್ಳಗಳು, ತೂಬು, ಕೋಡಿ, ಕಾಲುವೆಗಳು, ಅಚ್ಚುಕಟ್ಟು ಮುಂತಾದ ಅನೇಕ ಅಂಗಗಳನ್ನೊಳಗೊಂಡ ಕೆರೆವ್ಯವಸ್ಥೆ ಬಹೋಪಯೋಗಿ. ಮುಖ್ಯವಾಗಿ ನೀರಾವರಿ, ಕುಡಿಯುವ ನೀರು, ಅಂತರ್ಜಲಮಟ್ಟ ಕಾಪಾಡುವಿಕೆ, ಮೀನುಗಾರಿಕೆ, ಫಲವತ್ತಾದ ಹೂಳು, ಮರಳು, ಇಟ್ಟಿಗೆ ಹಾಕಲು ಮಣ್ಣು….. ಮುಂತಾದ ಹತ್ತು-ಹಲವು ರೀತಿಯಲ್ಲಿ ಕೆರೆಗಳು ಉಪಯುಕ್ತವಾಗಿವೆ. ಆದುದರಿಂದಲೇ ನಮ್ಮ ಪೂರ್ವಿಕರು ಕೆರೆಗಳ ನಿರ್ಮಾಣ ಮತ್ತು ನಿರ್ವಹಣೆಗೆ ಹೆಚ್ಚಿನ ಮಹತ್ತ್ವ ನೀಡಿದ್ದರು. ಗ್ರಾಮೀಣ ಪ್ರದೇಶದಲ್ಲಿ ಎಲ್ಲ ಕೃಷಿಆಧಾರಿತ ಜೀವನಾಧಾರಗಳ ಕೇಂದ್ರಬಿಂದುಗಳು ಕೆರೆಗಳೇ ಆಗಿದ್ದು, ಇವು ಸಮುದಾಯದ ಆಸ್ತಿಗಳು.
ಭಾರತದಲ್ಲಿ ಒಟ್ಟು ೨ ಲಕ್ಷ ೮ ಸಾವಿರ ಕೆರೆಗಳಿವೆ. ಅದರಲ್ಲಿ ದಕ್ಷಿಣಭಾರತದಲ್ಲಿಯೇ ಒಂದು ಲಕ್ಷ ೩೭ ಸಾವಿರ ಕೆರೆಗಳಿದ್ದವು. ಇದಕ್ಕೆ ಕಾರಣ ಈ ಭಾಗದ ಭೂಪ್ರದೇಶವು ಕೆರೆಗಳ ನಿರ್ಮಾಣಕ್ಕೆ ಪೂರಕವಾಗಿರುವುದು. ಜೊತೆಗೆ ಇಲ್ಲಿ ಆಳ್ವಿಕೆ ಮಾಡಿದ ರಾಜ-ಮಹಾರಾಜರ, ಪಾಳೇಗಾರರ ಮತ್ತು ಹಿರಿಯರ ಕಳಕಳಿಯಿಂದ ಹೆಚ್ಚಿನದಾಗಿ ನಿರ್ಮಾಣವಾಗಿವೆ ಎನ್ನಬಹುದು. ಕೆರೆಗಳು ನಮ್ಮ ಇತಿಹಾಸವನ್ನು ತಿಳಿಸುವ ಕುರುಹುಗಳೂ ಆಗಿವೆ. ಕೆರೆಯ ತೂಬಿನ ಕಲ್ಲಿನಲ್ಲಿ ಅದನ್ನು ಕಟ್ಟಿಸಿದ ರಾಜರ ಲಾಂಛನ ಇದ್ದು, ಆ ಭಾಗವನ್ನು ಯಾರು ಆಳ್ವಿಕೆ ಮಾಡಿದ್ದರೆಂಬುದು ಇದರಿಂದ ಸುಲಭವಾಗಿ ತಿಳಿಯುತ್ತದೆ.
ಇನ್ನು ನಮ್ಮ ರಾಜ್ಯಕ್ಕೆ ಬಂದರೆ, ೨೦೦೦ನೇ ಇಸವಿಯ ಸಮೀಕ್ಷೆ ಪ್ರಕಾರ ರಾಜ್ಯದಲ್ಲಿ ೩೬೬೯೬ ಕೆರೆಗಳಿವೆ. ಇವುಗಳಲ್ಲಿ ಶೇ. ೯೨ರಷ್ಟು ೪೦ ಹೆಕ್ಟೇರ್ಗಿಂತ ಕಡಮೆ ಅಚ್ಚುಕಟ್ಟಿರುವ ಕೆರೆಗಳಾದರೆ, ಶೇ. ೮ರಷ್ಟು ೪೦ ಹೆಕ್ಟೇರ್ಗಿಂತಲೂ ಹೆಚ್ಚು ಅಚ್ಚುಕಟ್ಟಿರುವ ಕೆರೆಗಳು. ಈ ಎರಡೂ ವರ್ಗದ ಕೆರೆಗಳಿಂದ ಒಟ್ಟು ೬.೮೫ ಲಕ್ಷ ಹೆಕ್ಟೇರು ಪ್ರದೇಶ ನೀರಾವರಿಗೊಳಪಟ್ಟಿತ್ತು. ರಾಜ್ಯದ ಕೆರೆಗಳಿಗೆ ಸುಮಾರು ೧೫೦೦ ವರ್ಷಗಳ ಇತಿಹಾಸವಿದೆ.
ಗಂಗ, ಚಾಲುಕ್ಯ, ವಿಜಯನಗರ ಸಾಮ್ರಾಜ್ಯಗಳ ಆಡಳಿತದಲ್ಲಿ ಕೆರೆಗಳ ನಿರ್ಮಾಣಕ್ಕೆ ವಿಶೇ? ಆದ್ಯತೆ ಇದ್ದಿತು. ಹಿಂದೆ ಸ್ಥಳೀಯ ನಿರ್ವಹಣಾ ವ್ಯವಸ್ಥೆಯಡಿ ಹಳ್ಳಿಯ ಪಂಚಾಯ್ತಿಯಿಂದಲೇ ಪರಿಣಾಮಕಾರಿಯಾಗಿ ಕೆರೆಗಳ ಉಸ್ತುವಾರಿ ಮಾಡಲಾಗುತ್ತಿತ್ತು, ನೀರುಗಂಟಿ, ವಾರದ ಕೆಲಸ, ಸೋಮವಾರದ ಕೆಲಸ ಇತ್ಯಾದಿ ಸಾಂಪ್ರದಾಯಿಕ ಪದ್ಧತಿಗಳು ಶತಮಾನಗಳ ಕಾಲ ಕೆರೆಗಳಿಗೆ ಸಂರಕ್ಷಣೆ ಒದಗಿಸಿದ್ದ ಉದಾಹರಣೆಗಳಿವೆ.
ತುಮಕೂರು ಜಿಲ್ಲೆಯ ಕೆರೆಗಳ ಇತಿಹಾಸ
ತೆಂಗು, ಶೇಂಗಾ ಬೆಳೆಗೆ ಖ್ಯಾತಿ ಪಡೆದ ತುಮಕೂರು ಜಿಲ್ಲೆಯಲ್ಲಿ ಒಟ್ಟು ೧೦ ತಾಲ್ಲೂಕುಗಳಿವೆ. ಯಾವುದೇ ಜೀವನದಿ, ಬೃಹತ್ ಅಣೆಕಟ್ಟುಗಳಿಲ್ಲದ ಈ ಜಿಲ್ಲೆಗೆ ಕೆರೆಗಳೇ ಪ್ರಮುಖ ನೀರಿನಾಧಾರ. ೨೦೦೦ನೇ ಇಸವಿಯ ಸಮೀಕ್ಷೆ ಪ್ರಕಾರ ಜಿಲ್ಲೆಯಲ್ಲಿನ ಒಟ್ಟು ಕೆರೆಗಳ ಸಂಖ್ಯೆ ೨೦೨೨. ಸರಣಿ ಕೆರೆಗಳು ಜಿಲ್ಲೆಯ ವೈಶಿಷ್ಟ್ಯ. ಚೋಳರು, ಮೈಸೂರು ಒಡೆಯರು, ಪಾಳೇಗಾರರು, ಸಾಮಂತರು, ಪಟ್ಟದರಸಿಯರು, ಸೂಳೆಯರು, ಅಕ್ಕ-ತಂಗಿಯರು, ಶಾನುಭೋಗರು, ಜಮೀನುದಾರರು ಜಿಲ್ಲೆಯ ಕೆರೆಗಳನ್ನು ಕಟ್ಟಿಸಿದವರಲ್ಲಿ ಪ್ರಮುಖರು. ೧೯೭೦-೮೦ರ ದಶಕದ ಬರಗಾಲದಲ್ಲಿ ಸರ್ಕಾರದ ವತಿಯಿಂದಲೂ ಹಲವಾರು ಕೆರೆಗಳನ್ನು ನಿರ್ಮಿಸಲಾಗಿದೆ.
ಕೆಲವು ಕೆರೆಗಳ ಪೌರಾಣಿಕ ಮತ್ತು ಐತಿಹಾಸಿಕ ಹಿನ್ನೆಲೆ
’ಮೂಡಲ್ ಕುಣಿಗಲ್ ಕೆರೆ ನೋಡೋಕೊಂದೈಭೋಗ…..’ ಎಂಬ ಪ್ರಸಿದ್ಧ ಜನಪದ ಗೀತೆ ಕುಣಿಗಲ್ ದೊಡ್ಡಕೆರೆಯನ್ನು ಕುರಿತಾಗಿದೆ. ವಿಶಿಷ್ಟ ಹಿನ್ನೆಲೆಯುಳ್ಳ ಕೆಲವು ಕೆರೆಗಳ ಮಾಹಿತಿ ಹೀಗಿದೆ:
- ದೊಡ್ಡಬಾಣಗೆರೆ-ಚಿಕ್ಕಬಾಣಗೆರೆ ಕೆರೆ: ಶಿರಾ ತಾಲ್ಲೂಕಿನಲ್ಲಿ ದೊಡ್ಡಬಾಣಗೆರೆ, ಚಿಕ್ಕಬಾಣಗೆರೆ ಊರುಗಳಿವೆ; ಎರಡೂ ಗ್ರಾಮಗಳಲ್ಲೂ ಒಂದೊಂದು ಕೆರೆಗಳಿವೆ. ಈ ಕೆರೆಗಳ ವಿಶೇ?ವೆಂದರೆ ಅಕ್ಕ-ಪಕ್ಕ ಇದ್ದು ಎರಡಕ್ಕೂ ಒಂದೇ ಏರಿ ಇದೆ. ಸರಿಯಾಗಿ ಅರ್ಧಕೆರೆಗೆ ಅಡ್ಡ ಏರಿಯೊಂದು ಇಲ್ಲವಾದರೆ ಒಂದೇ ಕೆರೆಯಂತೆ ಭಾಸವಾಗುತ್ತದೆ. ಬಹುಶಃ ಕಟ್ಟುವಾಗ ಒಂದೇ ಆಗಿದ್ದು, ಅನಂತರದಲ್ಲಿ ಅಡ್ಡ ಏರಿ ಹಾಕಿ ಎರಡು ಕೆರೆಗಳನ್ನಾಗಿ ವಿಭಾಗಿಸಿರಬಹುದು. ಇವುಗಳ ನಿರ್ಮಾಣಕ್ಕೆ ಒಂದು ಕತೆಯೇ ಇದೆ. ತುಂಬಾ ಹಿಂದೆ ಈ ಊರಿನಲ್ಲಿ ದೊಡ್ಡ ಬಾಳಮ್ಮ ಚಿಕ್ಕಬಾಳಮ್ಮ (ದೊಡ್ಡಬಾಣಕ್ಕ-ಚಿಕ್ಕಬಾಣಕ್ಕ ಎಂದೂ ಕರೆಯುತ್ತಾರೆ) ಎಂಬ ಅಕ್ಕ-ತಂಗಿಯರಿದ್ದರು. ಅಕ್ಕ ಊರಿನಲ್ಲಿ ಕೆರೆಯನ್ನು ಕಟ್ಟಿಸಲು ಪ್ರಾರಂಭಿಸಿದಳು. ತಂಗಿಯೂ ಸಹ ಸಹಾಯ ಮಾಡುತ್ತಿದ್ದಳು. ಹೀಗಿರುವಾಗ ಒಂದು ದಿನ ಕೆರೆ ಕಟ್ಟುವ ಕೆಲಸವನ್ನು ನೋಡುತ್ತಿದ್ದ ತಂಗಿಯು ಈ ಕೆರೆ ಕಟ್ಟಿಸಿದ್ದರಿಂದ ಅಕ್ಕನಿಗೆ ಮಾತ್ರ ಹೆಸರು ಬರುತ್ತದೆ, ನನಗೆ ಮಾತ್ರ ಏನೂ ಬರುವುದಿಲ್ಲ ಎಂದುಕೊಂಡಳು. ನನಗೂ ಸಹ ಹೆಸರು ಬರುವಂತಾಗಲು ನಾನೂ ಒಂದು ಕೆರೆ ಕಟ್ಟಿಸಬೇಕೆಂದುಕೊಂಡವಳು ಅಕ್ಕ ಕಟ್ಟಿಸುತ್ತಿದ್ದ ಕೆರೆಯ ಮಧ್ಯಕ್ಕೆ ಸರಿಯಾಗಿ ಒಂದು ಏರಿ ಹಾಕಿಸಿದಳು. ವಾಪಸು ಬಂದ ಅಕ್ಕ ಇದನ್ನು ನೋಡಿದರೂ ಬೇಸರ ಮಾಡಿಕೊಳ್ಳಲಿಲ್ಲ. ಆಗಿನಿಂದ ಕೆರೆಯ ಒಂದು ಭಾಗಕ್ಕೆ ದೊಡ್ಡಬಾಳಮ್ಮನ ಕೆರೆ ಎಂದು, ಮತ್ತೊಂದು ಭಾಗಕ್ಕೆ ಚಿಕ್ಕಬಾಳಮ್ಮನ ಕೆರೆ ಎಂಬ ಹೆಸರೂ ಉಳಿದುಕೊಂಡವು. ಬಾಳಮ್ಮ ಎಂಬುದು ಕ್ರಮೇಣ ಜನರ ಬಾಯಲ್ಲಿ ಬಾಣಮ್ಮ ಆಗಿದೆ. ಈ ಜೋಡಿ ಕೆರೆಗಳ ವಿಶೇ?ವೆಂದರೆ ಒಂದು ಕೆರೆ ತುಂಬಿದ ನಂತರ ಹೆಚ್ಚುವರಿ ನೀರು ಪಕ್ಕದ ಕೆರೆಗೆ ಹರಿಯುತ್ತದೆ; ಎರಡೂ ತುಂಬಿದ ನಂತರವೇ ಕೋಡಿ ಬೀಳುತ್ತದೆ.
- ಶಿರಾ ತಾಲ್ಲೂಕಿನ ನವಣೆಬೋರನಹಳ್ಳಿಯಲ್ಲಿ ಹಿಂದೆ ನವಣೆಯೊಂದನ್ನೇ ಬೆಳೆಯುತ್ತಿದ್ದರಂತೆ. ಹಬ್ಬ-ಹುಣ್ಣಿಮೆ ಸಂದರ್ಭದಲ್ಲಿ ಅಕ್ಕ-ಪಕ್ಕದ ಹಳ್ಳಿಗಳಿಂದ ನೆಲ್ಲಕ್ಕಿಯನ್ನು ಬೇಡಿ ತರುತ್ತಿದ್ದರಂತೆ. ಇದರಿಂದ ಬೇಸತ್ತ ಗ್ರಾಮದ ಹಿರಿಯ ಬೋರೇಗೌಡರು ತಮ್ಮೂರಿನಲ್ಲೇ ಕೆರೆಕಟ್ಟಿ ಭತ್ತ ಬೆಳೆಯಲು ಶ್ರಮಪಟ್ಟರಂತೆ; ಆದರೆ ಅವರ ಆಸೆ ಕೈಗೂಡಲಿಲ್ಲ. ಇತ್ತೀಚೆಗೆ ಈ ಗ್ರಾಮದಲ್ಲಿ ಕೆರೆ ನಿರ್ಮಾಣವಾಗಿದೆ.
- ಪೊನ್ನಸಮುದ್ರದ ನಾಗರಬಾವಿ ಕೆರೆ: ಪಾವಗಡ ತಾಲ್ಲೂಕಿನ ಪೊನ್ನಸಮುದ್ರಕ್ಕೆ ಸಾವಿರ ವರ್ಷಗಳ ಇತಿಹಾಸವಿದೆ ಎನ್ನುತ್ತಾರೆ. ಹಿಂದೆ ಈ ಊರಿನಲ್ಲಿದ್ದ ಆಳವಳ್ಳಿ ಎಂಬ ಹೆಸರಿನ ಶ್ರೀಮಂತ ಕುಟುಂಬದವರು ಕೂಲಿಯವರಿಗೆ ಹೊನ್ನನ್ನೇ ಕೊಡುತ್ತಿದ್ದರಂತೆ. ಹಾಗಾಗಿಯೇ ಗ್ರಾಮಕ್ಕೆ ಹೊನ್ನಸಮುದ್ರ ಎಂದು ಹೆಸರು. ಕ್ರಮೇಣ ಅದು ಪೊನ್ನಸಮುದ್ರವಾಯಿತು. ಅಳವಳ್ಳಿ ವಂಶದವರು ತಾವು ನಿತ್ಯ ಪೂಜಿಸುತ್ತಿದ್ದ ನಾಗರಕಟ್ಟೆಯ ಪಕ್ಕದಲ್ಲಿ ಕೆರೆಯೊಂದನ್ನು ನಿರ್ಮಿಸಿದರು. ಅದು ನಾಗರಬಾವಿ ಕೆರೆ ಎನಿಸಿತು.
- ಅಕ್ಕಮ್ಮನಕೆರೆ: ಪಾವಗಡ ತಾಲ್ಲೂಕಿನ ಕಡಪಲಕೆರೆ ಗ್ರಾಮದಲ್ಲಿ ಹಿಂದೆ ಆಳ್ವಿಕೆ ಮಾಡುತ್ತಿದ್ದ ಪಲ್ಲವರಾಯನು ತನ್ನ ಆಸ್ಥಾನದಲ್ಲಿದ್ದ ಅಕ್ಕಮ್ಮ ಎಂಬವರ ಜ್ಞಾಪಕಾರ್ಥ ಕಟ್ಟಿಸಿದ ಕೆರೆ.
- ಪಾವಗಡ ತಾಲ್ಲೂಕಿನ ವದನಕಲ್ಲು ಕೆರೆಯದು ಕುತೂಹಲಕರ ಹಿನ್ನೆಲೆ. ಹಿಂದೆ ಇಲ್ಲಿ ವಾಸಿಸುತ್ತಿದ್ದ ರೆಡ್ಡಪ್ಪ ತನ್ನ ಪ್ರೀತಿಯ ಹೆಂಡತಿ ನಾಗಮ್ಮನ ಜ್ಞಾಪಕಾರ್ಥ ಒಂದು ಕೆರೆ ಕಟ್ಟುತ್ತಾನೆ. ಅದಕ್ಕೆ ರೆಡ್ಡಪ್ಪ-ನಾಗಮ್ಮನ ಕೆರೆ ಎಂಬ ಹೆಸರಿದೆ.
- ಇದೇ ತಾಲ್ಲೂಕಿನ ಯರ್ರಮ್ಮನಹಳ್ಳಿಯಲ್ಲಿ ಹಿಂದೆ ವಾಸಿಸುತ್ತಿದ್ದ ಜಂಗಾಲರು ತಮ್ಮ ದನ-ಕರುಗಳ ಅನುಕೂಲಕ್ಕಾಗಿ ಕೆರೆ ನಿರ್ಮಿಸಿದರು. ಅದು ಜಂಜಾಲ ಕೆರೆಯೆಂದೇ ಇಂದಿಗೂ ಪ್ರಸಿದ್ಧ.
- ಪಾವಗಡ ತಾಲ್ಲೂಕಿನ ಕಾಮೇಗೌಡನಹಳ್ಳಿಯಲ್ಲಿ ಸುಮಾರು ನೂರು ವ?ಗಳ ಹಿಂದೆ ವಾಸಿಸುತ್ತಿದ್ದರೆನ್ನಲಾದ ಕುಂಬಾರರು ಮಣ್ಣು ಹದ ಮಾಡುವುದಕ್ಕೋಸ್ಕರ ನೀರು ಸಂಗ್ರಹಿಸಲು ಕುಂಟೆಯೊಂದನ್ನು ನಿರ್ಮಿಸುತ್ತಾರೆ. ಕ್ರಮೇಣ ಕುಂಟೆ ವಿಸ್ತಾರಗೊಂಡು ಕೆರೆಯಾಗುತ್ತದೆ. ಆದರೂ ಅದಕ್ಕೆ ಕುಂಬಾರಕಟ್ಟೆ ಎಂದೇ ಹೆಸರಿದೆ.
- ಹಿಂದೆ ಟಿಪ್ಪುಸುಲ್ತಾನರ ಆಡಳಿತದಲ್ಲಿ ಪೆನುಗೊಂಡದಿಂದ ಮೈಸೂರುವರೆಗೂ ಸೈನಿಕರು ಚಲಿಸುವ ಮಾರ್ಗದಲ್ಲಿ ಅಲ್ಲಲ್ಲಿ ಕೆರೆಗಳನ್ನು ನಿರ್ಮಿಸುತ್ತಾರೆ ಅಥವಾ ಇದ್ದ ಕುಂಟೆಗಳನ್ನೇ ವಿಸ್ತರಿಸುತ್ತಾರೆ. ಹೀಗೆ ಪಾವಗಡ ತಾಲ್ಲೂಕು ರ್ಯಾಪ್ಟೆಯಲ್ಲಿ ನಿರ್ಮಿಸಿದ ಕೆರೆಗೆ ಮಾರ್ಗದಕೆರೆ ಎಂದೇ ಹೆಸರು.
- ಕೊರಟಗೆರೆ ತಾಲ್ಲೂಕು ಚನ್ನರಾಯನದುರ್ಗದಲ್ಲಿ ಸಾಮಂತರಾಗಿದ್ದ ಚಿನ್ನಪ್ಪನಾಯಕ ಒಂದು ಕಲ್ಯಾಣಿಯನ್ನು ನಿರ್ಮಿಸಲು ಮುಂದಾದಾಗ, ಅಲ್ಲಿ ನೀರಿನ ಮಹಾಪೂರವೇ ಬಂದಿದಂತೆ. ಆಗ ಕಲ್ಯಾಣಿಯ ಬದಲು ಕೆರೆಯನ್ನು ನಿರ್ಮಿಸಲಾಗುತ್ತದೆ. ಅದೇ ಇಂದಿನ ಚನ್ನರಾಯನದುರ್ಗದ ಕೆರೆ. ಬೆಟ್ಟದ ಬುಡದಲ್ಲೇ ಇರುವ ಕೆರೆ ಆಯಕಟ್ಟಿನ ಜಾಗದಲ್ಲಿದ್ದು, ನೋಡಲು ಆಕರ್ಷಕವಾಗಿದೆ.
- ಇದೇ ತಾಲ್ಲೂಕಿನ ದೊಡ್ಡಪಾಲನಹಳ್ಳಿಯಲ್ಲಿ ಡಕ್ಕನಾಯಕ ಮತ್ತು ಪಕ್ಕದ ಜಕ್ಕೇನಹಳ್ಳಿಯಲ್ಲಿ ಜಕ್ಕನಾಯಕ ಎಂಬ ಪಾಳೇಗಾರರಿದ್ದರು. ಡಕ್ಕನಾಯಕ ಕೆರೆ ನಿರ್ಮಿಸಲು ಮುಂದಾದಾಗ ಜಕ್ಕನಾಯಕ ಅಡ್ಡಿಪಡಿಸಿದ. ಇವನ ಕಾಟದಿಂದ ರೋಸಿ ಹೋದ ಡಕ್ಕನಾಯಕ ಡಂಗೂರ ಹೊಡೆಸಿ ಜಕ್ಕನಾಯಕನ ತಲೆ ತಂದವರಿಗೆ ಬಹುಮಾನ ಕೊಡುವುದಾಗಿ ಸಾರಿದ. ಕುಂಟ ಎಂಬವನು ಜಕ್ಕನಾಯಕನ ತಲೆ ತಂದು ಒಪ್ಪಿಸಿದ. ಆಗ ಡಕ್ಕನಾಯಕ ನಿರಾತಂಕವಾಗಿ ಕೆರೆ ಕಟ್ಟಿಸಿದ್ದಲ್ಲದೆ, ಕುಂಟನಿಗೆ ಒಂದು ಗ್ರಾಮವನ್ನೇ ಬಳುವಳಿ ನೀಡಿದ ಎಂದು ಐತಿಹ್ಯ.
- ಚಿಕ್ಕಸಂಜೀವೇಗೌಡನಪಾಳ್ಯದ ಸೂಳೆಕೆರೆ: ಇದು ಪ್ರಾಚೀನವಾದ ಕೆರೆ. ಅದರ ಹೆದ್ದಾರಿಯ? ಅಗಲದ ಏರಿ, ಮೆಟ್ಟಿಲಿನಾಕಾರದ ಸದೃಢ ಕಲ್ಕಟ್ಟಣೆ, ಬೃಹತ್ ತೂಬು ಮುಂತಾದುವುಗಳನ್ನು ನೋಡಿದರೆ ಮೊದಲನೋಟಕ್ಕೇ ಇದೊಂದು ಪ್ರಾಚೀನಕೆರೆ ಎಂಬುದು ಮನದಟ್ಟಾಗುತ್ತದೆ. ಕೆರೆಯ ಕುರಿತಾಗಿ ಹಲವಾರು ಜಾನಪದಕಥೆಗಳು ಬಳಕೆಯಲ್ಲಿರುವುದೂ ಸಹ ಈ ಅಭಿಪ್ರಾಯಕ್ಕೆ ಇಂಬು ನೀಡುತ್ತದೆ. ಅದ್ಭುತ ಕೆತ್ತನೆಗಳಿಂದ ಕೂಡಿದ ಬೃಹತ್ ತೂಬು ಈ ಕೆರೆಯ ಶಿಖರಪ್ರಾಯವಾದ ಭಾಗ. ನೂರಾರು ವರ್ಷ ಕಳೆದರೂ ಸಹ ಈಗಲೂ ಒಂದಿಂಚೂ ಮುಕ್ಕಾಗದ, ಬಿರುಕು ಬಿಡದ ಕಲ್ಕಟ್ಟಣೆ ಕೆರೆಯ ಮತ್ತೊಂದು ಆಕ?ಣೆ. ಈ ಕೆರೆಗಿರುವ ಬೃಹತ್ಆಕಾರದ ತೂಬು ಎಲ್ಲಿಯೂ ಇದ್ದಂತಿಲ್ಲ. ಮೇಲುಕೋಟೆಯ ರಾಯಗೋಪುರದ ಕಂಬಗಳ ಹಾಗೆ ಬಾಚಿ ತಬ್ಬಿದರೂ ಕೈಗೆ ನಿಲುಕದ ಗಾತ್ರ. ತಿದ್ದಿ ತೀಡಿದ ಎರಡು ಕಲ್ಲು ಕಂಬಗಳ ಮೇಲೆ ಅಂದದ ಕೆತ್ತನೆ ನೋಡಲು ಮನಮೋಹಕ. ತೂಬಿನ ಬಳಿಗೆ ತಲಪಲು ನಿರ್ಮಿಸಿರುವ ಸೋಪಾನಗಳ ಉದ್ದ ಸುಮಾರು ೨೦ರಿಂದ ೨೫ ಅಡಿಗಳು. ಒಂದೇ ಕಲ್ಲನ್ನು ಒಪ್ಪವಾಗಿ ಜೋಡಿಸಲಾಗಿದೆ. ಸೋಪಾನಗಳ ಎರಡೂ ಬದಿಗಳಲ್ಲಿ ಆನೆ ಸೊಂಡಿಲಿನಾಕಾರದ ಇಳಿಗಲ್ಲುಗಳಿವೆ. ಗಿಡಮೂಲಿಕೆಗಳಿಗೆ ಪ್ರಸಿದ್ಧವಾಗಿರುವ ಸಿದ್ದರಬೆಟ್ಟದ ತಪ್ಪಲಿನಲ್ಲಿರುವ ಈ ಕೆರೆಯ ನಿರ್ಮಾಣದ ಬಗ್ಗೆ ಕುತೂಹಲಕಾರಿ ಕಥೆಯನ್ನು ಊರವರು ಹೇಳುತ್ತಾರೆ. ಸರಿಸುಮಾರು ಆರೇಳು ಶತಮಾನಗಳ ಹಿಂದೆ ವೇಶ್ಯಾವೃತ್ತಿಯ ಮಹಿಳೆಯೊಬ್ಬಳು ಊರಿನ ನೀರ ನೆಮ್ಮದಿಗಾಗಿ ನಿರ್ಮಿಸಿರುವ ಕೆರೆಯಿದು. ಸಿದ್ದರಬೆಟ್ಟದ ಆಗಿನ ಪಾಳೆಯಗಾರ ತುರಂಗನಾಯಕನ ಆಸ್ಥಾನದಲ್ಲಿದ್ದ ಈ ಮಹಿಳೆಯ ಸಾಮಾಜಿಕಸೇವೆಯ ಫಲವೇ ಈ ಕೆರೆ. ಸ್ಥಳೀಯರ ಪ್ರಕಾರ ಆಕೆ ತನ್ನ ಬೆಂಡೋಲೆಯನ್ನು ಮಾರಿ ಒಂದೇ ರಾತ್ರಿಯಲ್ಲಿ ಕೆರೆ ಕಟ್ಟಿಸಿದಳೆಂದು ಪ್ರತೀತಿ. ಅದಕ್ಕೆಂದೇ ಇದರ ಹೆಸರು ಕೂಡಾ ಸೂಳೇಕೆರೆ. ಕೆರೆ ನಿರ್ಮಾಣದ ಹಂತದಲ್ಲಿದ್ದಾಗ ಆಕೆ ಹತ್ತಿರದ ಸಿದ್ದರಬೆಟ್ಟದ ಮೇಲೆ ಕುಳಿತು ಎಲೆಯಡಿಕೆ ಹಾಕಿಕೊಳ್ಳುತ್ತ ಕೆರೆ ಕಟ್ಟುವವರಿಗೆ ನಿರ್ದೇಶನ ನೀಡುತ್ತಿದ್ದಳಂತೆ. ಅವಳು ಎಲೆಯಡಿಕೆ ಉಗಿದಿರುವ ಗುರುತು ಈಗಲೂ ಇದೆ ಎಂದು ಕೆಂಪುಬಣ್ಣ ಲೇಪಿತವಾದಂತೆ ಕಾಣುವ ಬೃಹತ್ಬಂಡೆಯೊಂದನ್ನು ತೋರಿಸುತ್ತಾರೆ. ಚನ್ನಗಿರಿ ಬಳಿಯಿರುವ ಸೂಳೆಕೆರೆಯನ್ನು ಬಹುಮಂದಿ ಬಲ್ಲರು. ಆದರೆ ಈ ಸೂಳೆಕೆರೆ ಅಜ್ಞಾತಸ್ಥಿತಿಯಲ್ಲಿದ್ದು, ಅಸಡ್ಡೆಗೊಳಗಾಗಿದೆ.
- ತುಮಕೂರು ಜಿಲ್ಲೆಯ ಕೆರೆಗಳ ವಿಶೇಷತೆ ಎಂದರೆ ಪಾವಗಡ, ಮಧುಗಿರಿ, ಶಿರಾ, ಕೊರಟಗೆರೆ ತಾಲ್ಲೂಕಿನ ಬಹುತೇಕ ಕೆರೆಗಳಲ್ಲಿ ತಲಪರಿಗೆಗಳಿವೆ. ಕೆರೆಯಲ್ಲಿ ನೀರಿಲ್ಲದಾಗ ಈ ತಲಪರಿಗೆಗಳು ನೀರೊದಗಿಸುತ್ತವೆ.
- ಒಂದು ಬಾರಿ ಕೋಡಿ ಬಿದ್ದರೆ ಮುಂದಿನ ಎರಡು ವ? ಬೇಸಾಯಕ್ಕೆ, ದನ-ಕರುಗಳಿಗೆ ಯಾವುದೇ ತೊಂದರೆಯಿಲ್ಲ ಎಂಬುದು ಜಿಲ್ಲೆಯ ಹಳ್ಳಿಗರ ಸಾಮಾನ್ಯ ಅನಿಸಿಕೆ. ಇದು ಜಿಲ್ಲೆಯಲ್ಲಿ ಕೆರೆಗಳು ಎ? ಪ್ರಾಮುಖ್ಯತೆ ಪಡೆದಿವೆ ಎಂಬುದನ್ನು ಸೂಚಿಸುತ್ತದೆ.
ನೀರಗಂಟಿಗಳ ಪಾತ್ರ
ಕೆರೆ ನೀರಿನ ಸಮರ್ಪಕ ಹಂಚಿಕೆಯ ಸಲುವಾಗಿ ನಮ್ಮ ಹಿರಿಯರು ಮಾಡಿಕೊಂಡಿದ್ದ ವ್ಯವಸ್ಥೆ. ಒಂದು ಕೆರೆಗೆ ಒಬ್ಬ ನೀರಗಂಟಿ ಇರುವುದು ರೂಢಿ. ಕೆರೆ ವಿಸ್ತಾರವಾಗಿದ್ದರೆ ಹೆಚ್ಚಿನಸಂಖ್ಯೆಯ ನೀರಗಂಟಿಗಳು ಇರುವುದೂ ಉಂಟು. ಹಿಂದೆ ಗ್ರಾಮಾಡಳಿತ ವ್ಯವಸ್ಥೆಯಲ್ಲಿ ಗೌಡ, ಶಾನುಭೋಗ, ತೋಟಿ, ತಳವಾರರು ಎಷ್ಟು ಪ್ರಮುಖರೋ ನೀರಗಂಟಿಗಳಿಗೂ ಅಷ್ಟೇ ಪ್ರಮುಖ ಸ್ಥಾನವಿತ್ತು.
ನೀರಗಂಟಿ ಕೆಲಸವು ಪರಂಪರಾಗತವಾದುದಾಗಿದ್ದು, ಒಂದೇ ಕುಟುಂಬದವರು ನಿರ್ವಹಿಸುವುದು ಪದ್ಧತಿ. ಬಹುತೇಕ ಪರಿಶಿಷ್ಟಜಾತಿ ಮತ್ತು ಪಂಗಡದವರೇ ನೀರಗಂಟಿಗಳಾಗಿರುತ್ತಾರೆ. ಇವರಿಗೆ ಸಾಮಾನ್ಯವಾಗಿ ಹೆಚ್ಚಿನ ಜಮೀನು ಇರುವುದಿಲ್ಲ. ಮಹಿಳೆಯರೂ ಸಹ ನೀರಗಂಟಿಗಳಾಗಿ ಕಾರ್ಯನಿರ್ವಹಿಸಿದ ಉದಾಹರಣೆಗಳಿವೆ. ನೀರಗಂಟಿಗಳ ಕೆಲಸಕ್ಕೆ ಪ್ರತಿಯಾಗಿ ದವಸ-ಧಾನ್ಯಗಳನ್ನು ಕೊಡುವುದು ರೂಢಿ. ಎಕರೆಗೆ ಇಷ್ಟು ಸೇರು ಅಥವಾ ಹೊರೆಯನ್ನು ನೀಡುತ್ತಾರೆ. ಅಲ್ಲದೆ ಹಳ್ಳಿಯಲ್ಲಿ ಮರಿಕಡಿದಾಗ, ಬೇಟೆ ಆಡಿದಾಗ ಅದರ ಒಂದು ಪಾಲು ನೀರಗಂಟಿಗಳಿಗೆ ಕಡ್ಡಾಯವಾಗಿ ಕೊಡಬೇಕು. ಕೆರೆ ಕೋಡಿ ಬಿದ್ದಾಗ ಪೂಜೆ ಮಾಡಿ ಕೊಡುವ ಮೊದಲ ಬಲಿಯು ನೀರಗಂಟಿಗಳಿಗೆ ಸೇರುತ್ತದೆ.
ಆದರೆ ಈಚಿನ ದಿನಗಳಲ್ಲಿ ಈ ವ್ಯವಸ್ಥೆ ಬಹುತೇಕ ನಿಂತು ಹೋಗಿದೆ ಎಂದೇ ಹೇಳಬಹುದು. ನೀರಿನ ಅಭಾವ, ಬದಲಾದ ಬೆಳೆ ಪದ್ಧತಿ, ಸಾಮಾಜಿಕ ಪಲ್ಲಟ, ಮುಂತಾದವು ಇದಕ್ಕೆ ಕಾರಣ.
ಇಂದಿನ ಸ್ಥಿತಿ
ಇಂದು ಜಿಲ್ಲೆಯ ಕೆರೆಗಳ ಸ್ಥಿತಿ ಚಿಂತಾಜನಕ. ಒತ್ತುವರಿ ಮತ್ತು ಹೂಳು ತುಂಬುವಿಕೆಯಿಂದಾಗಿ ಕೆರೆಗಳ ನೀರುಶೇಖರಣಾ ಸಾಮರ್ಥ್ಯ ಕುಂಠಿತಗೊಂಡಿದೆ. ಅಲ್ಲದೆ ಏರಿ, ತೂಬು, ಕೋಡಿ, ಕಾಲುವೆಗಳು ಶಿಥಿಲಾವಸ್ಥೆಗೆ ತಲಪಿವೆ.
ಕೆರೆ ವ್ಯವಸ್ಥೆ ಅವನತಿಗೆ ಕಾರಣಗಳು
- ಮಳೆ ಕೊರತೆ ಅಥವಾ ಸಕಾಲಕ್ಕೆ ಮಳೆ ಬಾರದೆ ಕೆರೆಗಳು ಹಲವು ವ?ಗಳ ಕಾಲ ತುಂಬದೇ ಇರುವುದು
- ಕೆರೆಗಳಿಗೆ ನೀರು ಬರುವ ಹಳ್ಳಗಳನ್ನು ನಾಶ ಪಡಿಸಿದ್ದು
- ಸಮುದಾಯಗಳಿಂದ ಅವುಗಳ ನಿರ್ವಹಣೆ ನಿಯಂತ್ರಣವನ್ನು ಬೇರ್ಪಡಿಸಿದ್ದು
- ಖಾಸಗಿ ನೀರಾವರಿ ಮೂಲಗಳ ಅವಲಂಬನೆ
- ಖಾಸಗಿ ವ್ಯಕ್ತಿಗಳ ನಿಯಂತ್ರಣದಲ್ಲಿ ನೀರಿನ ಸಂಪನ್ಮೂಲಗಳು
- ಕೆರೆಗಳ ನಿರ್ವಹಣೆಗೆ ಸೂಕ್ತ ಬಂಡವಾಳ ಒದಗಿಸದೇ ಇರುವುದು
- ಕೆರೆಗಳು ಹಾಗೂ ಸ್ಥಳೀಯ ಸಂಪನ್ಮೂಲಗಳ ಬಗ್ಗೆ ಕಾಳಜಿ, ಜವಾಬ್ದಾರಿ ಕಳೆದುಕೊಂಡ ಸಮುದಾಯ.
ಮರಳು ಗಣಿಗಾರಿಕೆ
ಕೆರೆಗಳ ವಿನಾಶಕ್ಕೆ ನೇರ ಕಾರಣಗಳನ್ನು ಹುಡುಕುವಾಗ ಗಣಿಗಾರಿಕೆಯ ದುಷ್ಪರಿಣಾಮಗಳು ಸ್ಪಷ್ಟ ಗೋಚರಿಸುತ್ತವೆ. ಅಂತರ್ಜಲ ಕುಸಿತಕ್ಕೆ ಮರಳು ಗಣಿಗಾರಿಕೆ ಕಾರಣವಾಗಿದೆ. ಕೆರೆಗೆ ನೀರು ಹರಿದು ಬರುವ ಹಳ್ಳಗಳು ಮತ್ತು ಕೆರೆ ಅಂಗಳದಲ್ಲಿ ಬೇಕಾಬಿಟ್ಟಿ ಮರಳು ತೆಗೆದ ಪರಿಣಾಮ ಕೆರೆಗಳು ವಿದ್ರೂಪಗೊಂಡಿವೆ. ಆಳದ ಗುಂಡಿಗಳನ್ನು ತೆಗೆದಿರುವುದರಿಂದ ಎ? ಕೆರೆಗಳಲ್ಲಿ ಸೋರಿಕೆಯ ಸಮಸ್ಯೆ ಕಾಡತೊಡಗಿದೆ.
ಒತ್ತುವರಿ
ಮತ್ತೊಂದು ಪ್ರಮುಖ ಕಾರಣ ಕೆರೆಗಳ ಒತ್ತುವರಿ. ಕೆಲವೆಡೆ ಹಳ್ಳಗಳು ಒತ್ತುವರಿಯಾಗಿ ಆಳ-ಅಗಲ, ಗಾತ್ರದಲ್ಲಿ ಕಿರಿದಾಗಿವೆ ಅಥವಾ ಪೂರ್ತಿ ಮುಚ್ಚಿಯೇ ಹೋಗಿವೆ. ಅಂಗಳದ ಆಸುಪಾಸಿನ ವ್ಯಕ್ತಿಗಳು ಕೃಷಿ ಚಟುವಟಿಕೆಗಾಗಿ ಒತ್ತುವರಿ ಮಾಡಿಕೊಂಡಿದ್ದಾರೆ. ಹಣ, ಜಾತಿ, ಅಧಿಕಾರದ ಪ್ರಭಾವದಿಂದ ಬಲಿ?ರಾದವರು ಒಂದಿಡೀ ಸಮುದಾಯದ ಬಳಕೆಗೆ ಇರಬೇಕಾದ ಕೆರೆಗಳನ್ನು ಸ್ವಾರ್ಥಕ್ಕೆ ಬಳಸಿಕೊಂಡ ಅನೇಕ ಉದಾಹರಣೆಗಳಿವೆ. ಈ ವಿ?ಯದಲ್ಲಿ ಹಲವುಕಡೆ ಸಮಸ್ಯೆ ಇತ್ಯರ್ಥಕ್ಕಾಗಿ ಕೋರ್ಟು ಮೆಟ್ಟಿಲೇರಿರುವ ಉದಾಹರಣೆಗಳೂ ಉಂಟು.
ಪುನಶ್ಚೇತನ ಪ್ರಯತ್ನಗಳು
ಕೆರೆಗಳ ಉಳಿವಿಗಾಗಿ ಹಲವು ಪ್ರಯತ್ನಗಳು ನಡೆಯುತ್ತಿವೆ. ಸರ್ಕಾರದ ಮಟ್ಟದಲ್ಲಿ ಕಾಯ್ದೆ, ಕಾನೂನು, ಪ್ರಾಧಿಕಾರಗಳನ್ನು ರಚಿಸಲಾಗಿದೆ. ಜಲಸಂವರ್ಧನೆ, ಕೆರೆ ಸಂಜೀವಿನಿ ಮುಂತಾದ ವಿವಿಧ ಯೋಜನೆಗಳನ್ನು ಜಾರಿಗೊಳಿಸಲಾಗುತ್ತಿದೆ. ನದಿ ಮತ್ತು ಅಣೆಕಟ್ಟುಗಳ ನೀರನ್ನು ಕೆರೆಗಳಿಗೆ ತುಂಬಿಸುವ ಕಾರ್ಯವೂ ಅಲ್ಲಲ್ಲಿ ಯಶಸ್ವಿಯಾಗಿ ಅನುಷ್ಠಾನಗೊಳ್ಳುತ್ತಿದೆ.
ಸಂಘ-ಸಂಸ್ಥೆಗಳು, ಧಾರ್ಮಿಕ ಕೇಂದ್ರಗಳು, ನಟರು ಹಾಗೂ ಸಮುದಾಯ ಸಂಘಟನೆಗಳೂ ಸಹ ಈ ಕಾರ್ಯಕ್ಕೆ ಮುಂದಾಗಿವೆ. ಈ ವರ್ಷದ ಆರಂಭದಲ್ಲಿ ಚಿತ್ರನಟ ಯಶ್ ಕೊಪ್ಪಳ ಜಿಲ್ಲೆಯ ತಲ್ಲೂರು ಕೆರೆಯನ್ನು ಅಭಿವೃದ್ಧಿಪಡಿಸಿದ್ದು ಮಾಧ್ಯಮಗಳಲ್ಲಿ ದೊಡ್ಡ ಸುದ್ದಿಯಾಗಿದ್ದನ್ನು ಗಮನಿಸಬಹುದು. ಧರ್ಮಸ್ಥಳದ ಗ್ರಾಮಾಭಿವೃದ್ಧಿ ಯೋಜನೆಯಡಿ ನೂರಕ್ಕೂ ಅಧಿಕ ಕೆರೆಗಳ ಹೂಳು ತೆಗೆಯಲಾಗಿದೆ. ತುಮಕೂರು ಜಿಲ್ಲೆಯಲ್ಲಿಯೂ ಸಹ ಐದಾರು ಕೆರೆಗಳು ಈ ಯೋಜನೆಯಡಿ ಹೊಸ ರೂಪ ಪಡೆದಿವೆ. ಶಿರಸಿ ಜೀವಜಲ ಕಾರ್ಯಪಡೆ, ಹಾಸನದ ಹಸಿರು ಪ್ರತಿ?ನ ಮುಂತಾದ ಹಲವು ಗುಂಪುಗಳು ಈ ಕೆಲಸಕ್ಕೆ ಕೈಹಾಕಿರುವುದು ಆಶಾದಾಯಕ.
ಆದರೂ ಪ್ರಯತ್ನಗಳು ಸಾಲದು. ಇನ್ನಷ್ಟು ಕೈಗಳು ಜೊತೆಯಾಗಬೇಕು. ಈಗ ನಡೆಯುತ್ತಿರುವುದು ಬಹುತೇಕ ಕೆರೆ ಹೂಳೆತ್ತುವ ಕಾರ್ಯ. ಆದರೆ ಕೆರೆಗಳಿಗೆ ಕಂಟಕವಾಗಿರುವುದು ನೀರು ಬರುವ ಹಳ್ಳಗಳ ಒತ್ತುವರಿ ಮತ್ತು ನಾಶ. ಅದನ್ನು ಸರಿಪಡಿಸದೆ ಸಮಸ್ಯೆ ಸಂಪೂರ್ಣ ಬಗೆಹರಿಯದು.