ಒಂದುಕಾಲದಲ್ಲಿ ಕೆರೆಗಳ ಊರಾಗಿದ್ದ ಬೆಂಗಳೂರು ಆಧುನಿಕತೆಯ ಓಟದಲ್ಲಿ ನೀರಿನ ಮೂಲಗಳನ್ನು ತನ್ನೊಡಲೊಳಗೆ ಸೇರಿಸಿಕೊಳ್ಳುತ್ತಾ ಸ್ಪರ್ಧೆಗೆ ಬಿದ್ದಿತು. ಉತ್ತಮಸ್ಥಿತಿಯಲ್ಲಿರುವ ಕೆರೆಗಳನ್ನು ಕಾಣುವುದೇ ಅಸಾಧ್ಯ ಎನ್ನುವ ಕಾಲಘಟ್ಟಕ್ಕೆ ಬಂದು ನಿಂತಿತು. ಆದರೆ ಪ್ರಕೃತಿ ಎಂದಿಗೂ ಮಾನವನ ಹಾಗೆ ಅಲ್ಲ. ವಿಷವನ್ನುಣಿಸಿದ ಮಾನವನಿಗೆ ಅಮೃತವನ್ನೇ ನೀಡಲು ಪ್ರಯತ್ನಿಸುತ್ತದೆ. ಇದನ್ನು ಅರಿತ ಬೆಂಗಳೂರಿನ ಪುಟ್ಟೇನಹಳ್ಳಿ ಕೆರೆಯ ಸುತ್ತಮುತ್ತಲಿನವರು ಕೆರೆಯನ್ನು ಮತ್ತೆ ಸುಸ್ಥಿತಿಗೆ ತರುವ ಪ್ರಯತ್ನಮಾಡಿ ಗೆಲವನ್ನು ಸಾಧಿಸಿದ್ದಾರೆ. ಕೆರೆಯೊಂದನ್ನು ಪುನಶ್ಚೇತನಗೊಳಿಸಿ ಕಾಪಾಡಿಕೊಂಡು ಬರುತ್ತಿರುವ ಆಸಕ್ತ ಕಾರ್ಯಕರ್ತರ ಸಾಹಸದ ಕುರಿತು ಒಂದು ನುಡಿಚಿತ್ರ ಇಲ್ಲಿದೆ.
ಪುಟ್ಟೇನಹಳ್ಳಿ ಕೆರೆಯ ಪುನಶ್ಚೇತನದ ಕುರಿತಾಗಿ ಲೇಖನವೊಂದನ್ನು ಬರೆಯುವ ಉದ್ದೇಶದಿಂದ ಕೆರೆಯ ಪ್ರತ್ಯಕ್ಷದರ್ಶನ ಮಾಡಲೆಂದು ಹೋದ ನಮ್ಮನ್ನು ಮೊದಲಿಗೆ ಸ್ವಾಗತಿಸಿದ್ದು ಅಲ್ಲಿಯ ಪರಿಸರದಲ್ಲಿ ಹಾರಾಡುತ್ತಿದ್ದ ನೀಲಿಬಕ (ಪರ್ಪಲ್ ಹೆರಾನ್) ಮತ್ತು ನೀರುಕಾಗೆ (ಗ್ರೇಟ್ ಕಾರ್ಮರೆಂಟ್), ಕೆನ್ನೀಲಿನಾಮ ಕೋಳಿ ಹೀಗೆ ಹಲವು ಬಾನಾಡಿಗಳು. ಹಸಿರಿನಿಂದ ತುಂಬಿದ ಕೆರೆಯ ಪರಿಸರಮನಮೋಹಕವಾಗಿತ್ತು. ಬೆಂಗಳೂರಿನಂತಹ ಕಾಂಕ್ರೀಟ್ ಕಾಡಿನಲ್ಲಿ ಇಂತಹ ಪ್ರಶಾಂತ ಸುಂದರ ವಾತಾವರಣ ಕಂಡು ಸಂತಸವಾಗಿದ್ದಂತೂ ಸತ್ಯ. ಆದರೆ ಇಂದು ಸುಸ್ಥಿತಿಗೆ ಬಂದಿರುವ ಈ ಕೆರೆಯ ಹಿಂದೆ ಹಲವರ ಕಾಳಜಿ ಮತ್ತು ಪರಿಶ್ರಮ ಇದೆ. ಅಂದು ಅಲ್ಲಿ ನಮಗೆ ಕೆರೆಯ ಪೂರ್ತಿ ಹಿನ್ನೆಲೆಯನ್ನು ವಿವರವಾಗಿ ತಿಳಿಸಿದವರು ಉಷಾ ರಾಜಗೋಪಾಲನ್. ಅವರ ಸತತ ಪರಿಶ್ರಮಕ್ಕೆ ಪುಟ್ಟೇನಹಳ್ಳಿ ಕೆರೆಯಿಂದು ಸಾಕ್ಷಿಯಾಗಿದೆ.
ಮೊದಲ ದಿನಗಳು
ಬೆಂಗಳೂರು ಎಂದರೆ ಕೆರೆಗಳ ಊರು ಎನ್ನುವ ಕಲ್ಪನೆಯಲ್ಲೇ ಇದ್ದ ಉಷಾ ರಾಜಗೋಪಾಲನ್ ಅವರು ಬೆಂಗಳೂರಿಗೆ ಬಂದು ನೆಲೆಸಿದ್ದು ಜೆ.ಪಿ.ನಗರದ ಏಳನೇ ಫೇಸ್ನಲ್ಲಿರುವ ’ಸೌತ್ ಸಿಟಿ’ ಎನ್ನುವ ಅಪಾರ್ಟ್ಮೆಂಟ್ನಲ್ಲಿ. ಆದರೆ ಅಲ್ಲಿ ಬಂದು ನೆಲೆಸಿದ ಬಳಿಕವೇ ವಾಸ್ತವದ ಅರಿವಾಗಿದ್ದು. ತಮ್ಮ ಅಪಾರ್ಟ್ಮೆಂಟ್ ಬಳಿಯೆ ಇದ್ದ ಪುಟ್ಟೇನಹಳ್ಳಿ ಕೆರೆ ಅದಾಗಲೆ ಹೂಳು ತುಂಬಿ ಮುಚ್ಚಿಕೊಳ್ಳುವ ಹಂತದಲ್ಲಿತ್ತು, ಮತ್ತೊಂದಿಷ್ಟು ಭಾಗ ಆಟದ ಮೈದಾನವಾಗಿ ಬದಲಾಗಿತ್ತು. ಹೇಗಾದರೂ ಸರಿ ಪಟ್ಟಣದ ಮಧ್ಯಭಾಗದಲ್ಲಿರುವ ಈ ಕೆರೆಯನ್ನು ಉಳಿಸಲೇಬೇಕೆನ್ನುವ ಪಣತೊಟ್ಟ ಉಷಾ ತಮ್ಮ ಕಾಂಪ್ಲೆಕ್ಸ್ನಲ್ಲಿರುವ ಎಲ್ಲರಿಗೂ ಈ-ಮೈಲ್ ಮೂಲಕ ವಿಷಯ ತಿಳಿಸಿದರು. ಮೊದಮೊದಲಿಗೆ ಸಿಕ್ಕ ಪ್ರತಿಕ್ರಿಯೆ ನೀರಸವೇ ಆಗಿತ್ತು. ’ಬಿ.ಬಿ.ಎಂ.ಪಿ.ಯಿಂದ ಬೆಂಬಲ ಸಿಗುವುದಿಲ್ಲ’ ಎನ್ನುವುದೇ ಎಲ್ಲರ ಅಭಿಪ್ರಾಯವಾಗಿತ್ತು. “ಬಿ.ಬಿ.ಎಂ.ಪಿ.ಗೆ ಈ ವಿಷಯ ತಿಳಿಸುವುದು, ಅವರ ಮೂಲಕ ಕೆರೆಯನ್ನು ಪುನಶ್ಚೇತನಗೊಳಿಸುವುದು, ಮತ್ತೆ ನನ್ನ ಬರವಣಿಗೆಯ ವೃತ್ತಿಗೆ ತೆರಳುವುದು ಇದು ನನ್ನ ಯೋಚನೆಯಾಗಿತ್ತು” – ಎನ್ನುತ್ತಾರೆ ಉಷಾ. ಆದರೆ ಬಿ.ಬಿ.ಎಂ.ಪಿ. ಅಧಿಕಾರಿಗಳು ಬಂದು ಅಲ್ಪಸ್ವಲ್ಪ ಕೆಲಸವಾಯಿತು. ಅವರು ಹೇಳಿದ್ದೇನೆಂದರೆ – “ಕೆರೆ ಪುನಶ್ಚೇತನ ಆಗಬೇಕೆಂಬುದು ನಿಮ್ಮ ಕನಸಲ್ಲವೇ? ಅಂದಮೇಲೆ ಈಗ ಈ ಕಾರ್ಯವನ್ನು ನೀವೇ ವಹಿಸಿಕೊಳ್ಳಬೇಕು” ಎಂದು. ಅದೇ ಕಾರಣಕ್ಕೆ ಒಂದು ಟ್ರಸ್ಟ್ ಮಾಡಿದೆವು. ಅದುವೇ – ’ಪುಟ್ಟೇನಹಳ್ಳಿ ನೇಬರ್ಹುಡ್ ಲೇಕ್ ಇಂಪ್ರೂವ್ಮೆಂಟ್ ಟ್ರಸ್ಟ್’ (ಪಿ.ಎನ್.ಎಲ್.ಐ.ಟಿ). ಟ್ರಸ್ಟಿನ ಉದ್ದೇಶ ಕೆರೆಯನ್ನಷ್ಟೇ ಪುನಶ್ಚೇತನಗೊಳಿಸುವುದಾಗಿರಲಿಲ್ಲ. ಬದಲಾಗಿ, ಸುತ್ತಮುತ್ತಲಿನ ಪರಿಸರವನ್ನು ಉತ್ತಮಗೊಳಿಸುವುದು ಕೂಡ ಆಗಿತ್ತು.
ಸವಾಲಲ್ಲ ಅವಕಾಶ
“ಅಧಿಕಾರಿಗಳ ಅಂದಿನ ಆ ಮಾತನ್ನು ನಾನು ಸವಾಲಾಗಿ ಸ್ವೀಕರಿಸಲಿಲ್ಲ; ಒಂದು ಅವಕಾಶವಾಗಿ ತೆಗೆದುಕೊಂಡೆ” – ಎನ್ನುತ್ತಾರೆ ಉ? ರಾಜಗೋಪಾಲನ್. ಕೆರೆ ಚೆನ್ನಾಗಿ ಇರಬೇಕೆಂದರೆ ಮೊದಲಿಗೆ ಚರಂಡಿಯ ಕೊಳಚೆನೀರು ಯಾವುದೂ ಕೆರೆಗೆ ಬರಬಾರದು. ಜುಲೈ ೨೦೧೦ರ ಸಮಯ, ಉಷಾ ಅವರು ತಮ್ಮ ಸ್ನೇಹಿತೆಯೊಂದಿಗೆ ಅಧಿಕಾರಿಯನ್ನು ಭೇಟಿ ಮಾಡಿ, ಕೆರೆಗೆ ಬರುತ್ತಿದ್ದ ಚರಂಡಿನೀರನ್ನು ಯು.ಜಿ.ಡಿ.(ಅಂಡರ್ ಗ್ರೌಂಡ್ ಡ್ರೈನೇಜ್)ಗೆ ಸಂಪರ್ಕ ಕೊಡುವಂತೆ ಮನವಿಮಾಡಿದರು. ಫಲವಾಗಿ, ಕೆರೆಗೆ ಬರುತ್ತಿದ್ದ ಕೊಳಚೆನೀರು ಅಂಡರ್ ಗ್ರೌಂಡ್ ಡ್ರೈನೇಜ್ಪೈಪ್ಗೆ ಹೋಗುವ ವ್ಯವಸ್ಥೆಯಾಯಿತು.
ಕೆರೆಗೆ ನೀರು
ಕೊಳಚೆನೀರು ಸೇರುವುದು ನಿಂತಿತ್ತು. ಆದರೆ ಕೆರೆಗೆ ಮಳೆನೀರು ಬಂದು ಸೇರುವ ವ್ಯವಸ್ಥೆ ಇರಲಿಲ್ಲ. ಮೇ ೨೦೧೩ರಲ್ಲಿ, ಖಾಸಗಿ ಸಂಸ್ಥೆಯೊಂದರ ಮೂಲಕ ಸುತ್ತಮುತ್ತಲಿನ ಪರಿಸರದ ಅಧ್ಯಯನ ಮಾಡಿಸಿದ ಬಳಿಕ, ಮಳೆನೀರು ಕೆರೆಗೆ ಬರುವ ವ್ಯವಸ್ಥೆಯನ್ನು ಯಾವ ರೀತಿ, ಯಾವ ದಿಕ್ಕಿನ ಮೂಲಕ ಮಾಡಬೇಕು ಎನ್ನುವುದನ್ನು ನಿರ್ಧರಿಸಲಾಯಿತು. ಇದು ಮಾಡಿದ ವ?ದ ಮುಂಗಾರು ಮಳೆಗೆ ಕೆರೆಯು ಸುಮಾರು ೪೫-೫೦ ಶೇ.ದಷ್ಟು ಮಳೆನೀರಿನಿಂದ ತುಂಬಿಕೊಂಡಿತು. ಆದರೆ ಮಳೆಯ ಮಾದರಿ ಹೇಗಿತ್ತು ಎಂದರೆ, ಒಂದು ವರ್ಷ ಉತ್ತಮ ಮಳೆಯಾದರೆ ಮುಂದಿನ ವರ್ಷ ಮಳೆಯಿಲ್ಲ ಎನ್ನುವಂತಾಗಿತ್ತು. ಪರಿಣಾಮವಾಗಿ ಕೆರೆಗೆ ನೀರಿಲ್ಲ. ಅದಕ್ಕಾಗಿ ಇವರು ಸೇರಿಕೊಂಡು ಮಾಡಿದ ಉಪಾಯ, ಎಸ್.ಟಿ.ಪಿ. (ಸೀವೇಜ್ ವಾಟರ್ ಟ್ರೀಟ್ಮೆಂಟ್) ಮೂಲಕ ಕೆರೆಗೆ ನೀರು ಹಾಯಿಸುವುದು. ’ಸೌತ್ ಸಿಟಿ ಅಪಾರ್ಟ್ಮೆಂಟ್ ಅಸೋಸಿಯೇ?ನ್’ನಿಂದ ಉತ್ತಮವಾಗಿ ನಿರ್ವಹಿಸಲ್ಪಡುವ ಒಂದು ಎಸ್.ಟಿ.ಪಿ. ವ್ಯವಸ್ಥೆಯಿತ್ತು. ಅಲ್ಲಿ ಟ್ರೀಟೆಡ್ ನೀರು ಗಾರ್ಡನ್ಗಳಿಗೆ ಬಳಕೆಯಾಗುತ್ತಿತ್ತು. ಆದ್ದರಿಂದ ನೀರಿನ ಗುಣಮಟ್ಟದ ಬಗ್ಗೆ ಖಾತರಿಯಿತ್ತು. ಮೊದಲಿಗೆ ಅಪಾರ್ಟ್ಮೆಂಟ್ ಅಸೋಸಿಯೇ?ನ್ ಅವರನ್ನು ಸಂಪರ್ಕಿಸಿ, ಅಪಾರ್ಟ್ಮೆಂಟ್ನಲ್ಲಿ ಬಳಸಿ ಹೆಚ್ಚುವರಿಯಾಗುವ ನೀರನ್ನು ಕೆರೆಗೆ ಕೊಡಲು ಸಾಧ್ಯವೇ ಎನ್ನುವ ಒಪ್ಪಿಗೆ ಪಡೆದುಕೊಂಡು ಬಿ.ಬಿ.ಎಂ.ಪಿ. ಅಧಿಕಾರಿಗಳನ್ನು ಸಂಪರ್ಕಿಸಲಾಯಿತು. ಆ ಸಮಯದಲ್ಲಿ ಅಲ್ಲಿ ಒಂದು ದಿನಕ್ಕೆ ಸುಮಾರು ೪-೬ ಲಕ್ಷ ಲೀಟರ್ ನೀರನ್ನು ಟ್ರೀಟ್ ಮಾಡಲಾಗುತ್ತಿತ್ತು. ಈ ನೀರನ್ನು ಕೆರೆಗೆ ಕೊಂಡೊಯ್ಯುವ ವಿಚಾರವಾಗಿ ಬಿ.ಬಿ.ಎಂ.ಪಿ., ಅಸೋಸಿಯೇಷನ್ ಮತ್ತು ಪಿ.ಎನ್.ಎಲ್.ಐ.ಟಿ. ನಡುವೆ ಒಂದು ಒಪ್ಪಂದ ಮಾಡಿಕೊಳ್ಳಲಾಯಿತು. ೨೦೧೫ರ ಮೇ ೧೫ರಂದು ಮೊದಲಬಾರಿಗೆ ಶುದ್ಧೀಕರಿಸಿದ ನೀರನ್ನು ಕೆರೆಗೆ ಬಿಡಲಾಯಿತು. ಈಗ ೧೧ ಲಕ್ಷ ಲೀಟರ್ ನೀರನ್ನು ಶುದ್ಧೀಕರಿಸಲಾಗುತ್ತದೆ, ಅದರಲ್ಲಿ ದಿನಕ್ಕೆ ೬-೮ ಲಕ್ಷ ಲೀಟರ್ ನೀರು ಪ್ರತಿದಿನ ಕೆರೆಗೆ ಸೇರುತ್ತಿದೆ.
ಕೃತಕ ತೇಲುದ್ವೀಪಗಳು
ಶುದ್ಧೀಕರಿಸಿದ ನೀರು, ಮಳೆನೀರು ಇವೆಲ್ಲದರ ಜೊತೆಗೆ ಕೆರೆಯ ನೀರಿನ ಗುಣಮಟ್ಟವನ್ನು ಹೆಚ್ಚಿಸುವುದಕ್ಕೆ ಟ್ರಸ್ಟ್ ಮುಂದಿನ ಹೆಜ್ಜೆಯಾಗಿ ಯಾವ ಸಾಹಸ ಮಾಡಬಹುದು ಎನ್ನುವ ಚಿಂತನೆ ಮಾಡಿತು. ಆಗ ಬಂದ ಆಲೋಚನೆಯೇ ’ಆರ್ಟಿಫೀಷಿಯಲ್ ಫ್ಲೋಟಿಂಗ್ ಐಲ್ಯಾಂಡ್’. ನೀರಿನ ಗುಣಮಟ್ಟವನ್ನು ಪರೀಕ್ಷಿಸಲು ಬಿ.ಎಂ.ಎಸ್. ಇಂಜಿನಿಯರಿಂಗ್ ಕಾಲೇಜಿನ ಜೊತೆಗೆ ಟ್ರಸ್ಟ್ ಒಪ್ಪಂದವನ್ನು ಮಾಡಿಕೊಂಡಿದೆ. ಎಂಟು ಕಡೆಗಳಿಂದ ನೀರನ್ನು ಸಂಗ್ರಹಿಸಿ ಕಾಲೇಜಿಗೆ ಕೊಟ್ಟು – ಫಾಸ್ಫೇಟ್, ನೈಟ್ರೇಟ್, ಡಿಸಾಲ್ವ್ಡ್ ಆಕ್ಸಿಜನ್, ಸಾಲಿಡ್ಸ್, ಪಿ.ಎಚ್. ಹೀಗೆ ವಿವಿಧ ಪ್ಯಾರಾಮೀಟರ್ಗಳ ಮೂಲಕ ನೀರಿನ ಗುಣಮಟ್ಟ ನಿರ್ಧರಿಸಲಾಗುವುದು. ಜೂನ್ ೨೦೧೬ರಲ್ಲಿ ನೀರಿನ ಗುಣಮಟ್ಟ ಹೆಚ್ಚಿಸಲು ತೇಲುದ್ವೀಪಗಳನ್ನು (ಫ್ಲೋಟಿಂಗ್ ಐಲ್ಯಾಂಡ್) ಪ್ರಯೋಗಾರ್ಥವಾಗಿ ಹೈಡ್ರೋಫೋನಿಕ್ಸ್ ಗಿಡಗಳನ್ನು ನೆಡುವ ಮೂಲಕ ಆರಂಭಿಸಲಾಯಿತು. ಅಂದರೆ, ಪಿ.ವಿ.ಸಿ. ಪೈಪ್ಗಳನ್ನು ೧೦ ಫೀಟ್ ಉದ್ದ, ೨ ಫೀಟ್ ಅಗಲಕ್ಕೆ ಆಯತಾಕಾರದಲ್ಲಿ ಜೋಡಿಸಿ, ಎರಡೂ ಕಡೆಯಿಂದ ಬಲೆಯನ್ನು ಹಾಕಿ, ಅದರ ಮೂಲಕ ಗಿಡಗಳನ್ನು ತೇಲಿಬಿಡಲಾಗುತ್ತದೆ. ಇದುವೇ ಕೃತಕ ತೇಲುದ್ವೀಪ. ಮೊದಲಿಗೆ, ಕ್ಯಾನ, ವೆಟ್ಟಿವೆರ ಹುಲ್ಲು (ಲಾವಂಚ) – ಬೇರು ೨ರಿಂದ ೩ ಮೀಟರ್ನ? ಆಳಕ್ಕೆ ಹೋಗಬಲ್ಲ ಸಾಮರ್ಥ್ಯವುಳ್ಳ ಹುಲ್ಲು, ಕೆಸವು ಇವುಗಳನ್ನು ಬೆಳೆಸಲಾಯಿತು. ನೀರಿಗೆ ಮಲಿನವಾಗಿರುವ ವಸ್ತುಗಳು ಈ ಗಿಡಗಳಿಗೆ ಪೋಷಕಗಳಾಗಿ ವರ್ತಿಸುತ್ತವೆ. ಆ ಪೋ?ಕಗಳನ್ನು ಹೀರಿಕೊಂಡು ನೈಸರ್ಗಿಕ ವಿಧಾನದಲ್ಲಿ ನೀರು ಶುದ್ಧೀಕರಣವಾಗತೊಡಗಿತು. ಈ ಕೃತಕ ತೇಲುದ್ವೀಪ ಪ್ರಯೋಗದ ಆರು ತಿಂಗಳ ಬಳಿಕ ನೀರಿನಲ್ಲಿ ಉತ್ತಮವಾದ ಬದಲಾವಣೆ ಕಂಡುಬಂದಿತು.
ನಿರ್ವಹಣೆ
ಆರಂಭದಲ್ಲಿ ಪ್ಲಾಸ್ಟಿಕ್, ದಿಂಬು, ಹಾಸಿಗೆಯೂ ಸೇರಿದಂತೆ ಎಲ್ಲ ಕಸವಸ್ತುಗಳು ಮಳೆನೀರಿನೊಂದಿಗೆ ಬಂದು ಕೆರೆಗೆ ಸೇರುತ್ತಿತ್ತು. ಅದಕ್ಕಾಗಿ ಮಳೆನೀರು ಬಂದು ಸೇರುವಲ್ಲಿ ಇವನ್ನು ಬೇರ್ಪಡಿಸಲು ವ್ಯವಸ್ಥೆ ಮಾಡಲಾಯಿತು. ಕೆರೆಯ ಎರಡು ಕಡೆಯಲ್ಲಿ ಸರಳುಗಳನ್ನು ಹೊಂದಿರುವ ಬಲೆಯ ರೀತಿಯ ರಚನೆಯ ಗ್ರಿಲ್ಗಳನ್ನು ಅಳವಡಿಸಿದ್ದರಿಂದ ಕಸವಸ್ತುಗಳು ನೀರಿಗೆ ಸೇರುವುದು ನಿಂತಿತು. ಸದ್ಯದ ಪರಿಸ್ಥಿತಿಯಲ್ಲಿ ಯಾವುದೇ ಕಡೆಯಿಂದ ಚರಂಡಿ ನೀರು, ಕಸವಸ್ತುಗಳು ಕೆರೆಯನ್ನು ಸೇರುತ್ತಿಲ್ಲ. ಮಾಲಿನ್ಯನಿರ್ವಹಣೆ ಅತ್ಯುತ್ತಮ ಮಟ್ಟದಲ್ಲಿ ನಡೆಯುತ್ತಿದೆ.
ನೀರಿನ ಗುಣಮಟ್ಟ ಹೆಚ್ಚಿರುವುದರಿಂದ ಕಳೆಗಿಡಗಳು ಬೆಳೆಯುವುದು ಬಹಳ ಕಡಮೆಯಾಗಿದೆ. ಸಣ್ಣ ಪ್ರಮಾಣದಲ್ಲಿ ಬೆಳೆಯುತ್ತಿರುವ ಕಳೆಗಿಡಗಳನ್ನು ಕೀಳುವ ಕೆಲಸವನ್ನು ಆಗಾಗ ಮಾಡುತ್ತಿರುತ್ತಾರೆ. ಹೀಗೆ ಸಿಗುವ ಗಿಡ, ಹುಲ್ಲುಗಳನ್ನು ಎಲೆಗೊಬ್ಬರವಾಗಿ ಮಾಡಿ ಮತ್ತೆ ಕೆರೆಯ ಆವರಣದ ಉದ್ಯಾನಕ್ಕೆ ಉಪಯೋಗಿಸುತ್ತಿದ್ದಾರೆ.
ಕೆರೆಯ ಸುತ್ತಲಿನ ಆವರಣದಲ್ಲಿ ವಾಕಿಂಗ್ ಬರುವವರಿಗೆ ಅನುಕೂಲವಾಗುವಂತೆ ಸುಂದರ ಟ್ರ್ಯಾಕ್ ನಿರ್ಮಿಸಿದ್ದಾರೆ. “ಸುತ್ತಲೂ ಹಸಿರಿದೆ. ಹಕ್ಕಿಗಳ ಕಲರವ ಕೇಳುತ್ತದೆ. ಬೆಂಗಳೂರಿನ ಒತ್ತಡದ ಜೀವನದಿಂದ ಹೊರಬಂದು ಜನ ಸ್ವಲ್ಪ ಸಮಯ ಕಿವಿಗೆ ಇಯರ್ ಫೋನ್ ತುರುಕಿಕೊಳ್ಳದೆ ಇಲ್ಲಿ ಸಮಯ ಕಳೆಯಬೇಕೆಂಬುದೇ ನಮ್ಮ ಆಸೆ” – ಎನ್ನುತ್ತಾರೆ ಟ್ರಸ್ಟ್ನ ಇನ್ನೋರ್ವ ಸದಸ್ಯರಾದ ದಿವ್ಯಾ ಶೆಟ್ಟಿ.
ಪರಿಸರದಲ್ಲಾದ ಬದಲಾವಣೆ
ಹೂಳು ತುಂಬಿದ್ದ, ಮತ್ತೊಂದಿಷ್ಟು ಜಾಗ ಆಟದ ಮೈದಾನವಾಗಿದ್ದ ಕೆರೆ ಇಂದು ೧೩ ಎಕರೆಗಳ? ಜಾಗದಲ್ಲಿ ಶುದ್ಧ ನೀರಿನಿಂದ ಅಂದವಾಗಿ ಮೈದುಂಬಿಕೊಂಡಿದೆ. ಕೃತಕ ತೇಲುದ್ವೀಪಗಳಿಂದಾಗಿ ನೀರು ಶುದ್ಧಿಯಾಗಿದ್ದಲ್ಲದೆ, ಪರಿಸರದ ನಾಡಿಯಾದ ಬಾನಾಡಿಗಳು ಮತ್ತೆ ಕಾಣತೊಡಗಿದವು. ಟಿಟ್ಟಿಭ, ಕೆನ್ನೀಲಿನಾಮ ಕೋಳಿ, ಪರ್ಪಲ್ ಹೆರಾನ್, ಜಸಾನ, ಮಾಷ್ ಹಾರಿಯರ್ ಹೀಗೆ ಅಪರೂಪದ ಹಲವು ಪಕ್ಷಿಗಳು ಬರುತ್ತಿವೆ. ಉತ್ತರದ ಚಳಿಯನ್ನು ತಡೆಯಲಾರದೆ ಉತ್ತಮ ವಾತಾವರಣವನ್ನು ಅರಸಿ ಬರುವಂತಹ ಹಲವು ವಲಸಿಗ ಹಕ್ಕಿಗಳೂ ಮತ್ತೆ ಕೆರೆಯತ್ತ ಬರುತ್ತಿವೆ. ೩೫೦ ಗಿಡಗಳನ್ನು ನೆಟ್ಟು ಈಗ ಅವೆಲ್ಲವು ಮರಗಳಾಗಿ ಬೆಳೆದು ನಿಂತಿವೆ. ಗಿಡಗಳ ಆಯ್ಕೆಯಲ್ಲ್ಲಿ ಬಹಳ ಇವರು ಕಾಳಜಿವಹಿಸುತ್ತಿದ್ದಾರೆ. ಪಕ್ಷಿಗಳಿಗೆ, ಚಿಟ್ಟೆಗಳಿಗೆ ಆಸರೆಯಾಗಬಲ್ಲಂತಹ, ಮರವಾಗಿ ಬೆಳೆಯುವಂತಹ ಗಿಡಗಳನ್ನೇ ಆರಿಸುತ್ತಿದ್ದಾರೆ. ಉದಾಹರಣೆಗೆ ಮುತ್ತುಗ, ಕಕ್ಕೆ, ಬೇವು, ಪಾರಿಜಾತ, ಸಿಮರುಬ ಗ್ಲೂಕಾ (ಲಕ್ಷ್ಮಿತರು), ನೆಲ್ಲಿಕಾಯಿ, ಕದಂಬ, ಅತ್ತಿ, ಮಾವು, ಸೀಬೆ, ಅರ್ಜುನ, ಅಶೋಕ – ಹೀಗೆ.
“ಕೆರೆಯ ಇಳಿಜಾರಿನಲ್ಲಿ ಅಂದವನ್ನು ಹೆಚ್ಚಿಸಲು ಮತ್ತು ಚಿಟ್ಟೆಗಳನ್ನು ಆಕರ್ಷಿಸಲೆಂದೇ ವಿಶೇಷ ಮುತುವರ್ಜಿ ವಹಿಸಿ ಹೊಸ ಪ್ರಯೋಗವನ್ನು ಆರಂಭಿಸಿದ್ದೇವೆ” – ಎಂದು ಖುಷಿಯಿಂದ ಹೇಳಿಕೊಳ್ಳುತ್ತಾರೆ ಉಷಾ. ಅದೇನೆಂದರೆ, ಕೆರೆಯ ಇಳಿಜಾರಿನ ಜಾಗದಲ್ಲಿ ಹೂ ಬಿಡುವಂತಹ ಹಲವು ಸಸಿಗಳನ್ನು ತಂದು ನೆಡುವ ಕೆಲಸ ಆರಂಭಿಸಿದ್ದಾರೆ. ಇನ್ನು ಒಂದು ತಿಂಗಳಾದರೆ ಅವೆಲ್ಲಾ ಜೀವತುಂಬಿ ಹೂಬಿಟ್ಟು, ಚಿಟ್ಟೆಗಳನ್ನೂ ತಮ್ಮ ಕೆರೆಯ ಆವರಣಕ್ಕೆ ಸ್ವಾಗತಿಸುತ್ತವೆ ಎನ್ನುವುದು ಮಹತ್ತ್ವಾಕಾಂಕ್ಷೆ.
’ಕೆರೆಯ ನೀರು ಉಪಯೋಗವಾಗುತ್ತಿದೆಯೇ, ಏನಾದರು ಪ್ರಯೋಜನ ಕಂಡುಕೊಂಡಿದ್ದೀರ?’ – ಎನ್ನುವ ಪ್ರಶ್ನೆಗೆ ದಿವ್ಯಾ ಶೆಟ್ಟಿ ಎಂದಿದ್ದು ಹೀಗೆ: “ನಾವು ಕೆರೆಯ ನೀರನ್ನು ನೇರವಾಗಿ ಉಪಯೋಗಿಸುತ್ತಿಲ್ಲ. ಆದರೆ ಋಣವಿದೆ. ಏಕೆಂದರೆ, ಈ ಕೆರೆಯ ಪುನಶ್ಚೇತನವಾದ ಬಳಿಕ ಸುತ್ತಮುತ್ತಲಿನ ಹೆಚ್ಚಿನ ಎಲ್ಲ ಕೊಳವೆಬಾವಿಗಳು ಜೀವಂತವಾಗಿವೆ. ನೀರು ತುಂಬಿವೆ.” ಹೀಗೆ ಪ್ರತಿಯೊಂದರಲ್ಲೂ ಸಕಾರಾತ್ಮಕ ಬದಲಾವಣೆ ಕಂಡುಬರುತ್ತಿದೆ.
ಬೆಂಬಲ
ಇವನ್ನೆಲ್ಲ ಮಾಡಲು ವರ್ಷಕ್ಕೆ ಸರಿಸುಮಾರು ಏಳರಿಂದ ಎಂಟು ಲಕ್ಷ ಖರ್ಚುವೆಚ್ಚವಾಗುತ್ತದೆ. ಕೆರೆಯ ಸುತ್ತಮುತ್ತ ವಾಸಿಸುವ ಜನರಿಂದಲೇ ಹಣಸಂಗ್ರಹಿಸಿ ಟ್ರಸ್ಟ್ ತನ್ನ ಕೆಲಸಕಾರ್ಯಗಳನ್ನು ಮಾಡುತ್ತಿದೆ. ಆರಂಭದ ದಿನಗಳಲ್ಲಿ ಸ್ವಲ್ಪ ತೊಂದರೆ ಅನುಭವಿಸಿದರೂ, ಬಳಿಕ ಜನರಿಂದ ಆತ್ಮೀಯವಾದ ಬೆಂಬಲ ದೊರಕುತ್ತಿದೆ ಎನ್ನುತ್ತಾರೆ ಉಷಾ ರಾಜಗೋಪಾಲನ್. ಜೊತೆಗೆ ತಿಂಗಳಿಗೆ ೨-೩ ಸಲ ಸೇವೆಯ ರೂಪದಲ್ಲಿ ಹಲವು ಖಾಸಗಿಸಂಸ್ಥೆ, ವಿದ್ಯಾಸಂಸ್ಥೆಗಳ ಮತ್ತು ಅಲ್ಲಿಯೇ ಸುತ್ತಮುತ್ತಲಿನ ಜನ ಕಾರ್ಯಕರ್ತರಾಗಿ ಕೆಲಸ ಮಾಡುತ್ತಾರೆ. ಪೈಟಿಂಗ್, ಗಿಡಗಳನ್ನು ನೆಡುವುದು, ಆರೈಕೆ ಮುಂತಾದ ಕೆಲಸಗಳನ್ನು ಮಾಡುತ್ತಾರೆ.
ಒಟ್ಟಿನಲ್ಲಿ ಅಂದು ಕ್ರಿಕೆಟ್ ಆಡುತ್ತಿದ್ದ ಮೈದಾನವಾಗಿದ್ದ ಪುಟ್ಟೇನಹಳ್ಳಿ ಕೆರೆ ಇಂದು ನೀರುತುಂಬಿ ಬಾನಾಡಿಗಳಿಂದ ನಲಿಯುತ್ತಿದೆ. ಕೆರೆಯ ಆವರಣದಲ್ಲಿ ಹಲವು ಮರಗಳು ದಟ್ಟವಾಗಿ ಬೆಳೆದು ಸುಂದರ ನಂದನವನವೊಂದು ಕಾಂಕ್ರೀಟ್ ಕಾಡಿನ ನಡುವೆ ಎದ್ದುನಿಂತಿದೆ. ಹಲವು ವರ್ಷಗಳ ಕಠಿಣ ಪರಿಶ್ರಮಕ್ಕೆ ಫಲ ಸಿಗುತ್ತಿದೆ. ಟ್ರಸ್ಟ್ನ ಸದಸ್ಯರು ದಿನನಿತ್ಯ ಕೆರೆಯ ನಿರ್ವಹಣೆಗಾಗಿ ಹೊಸಹೊಸ ಪ್ರಯೋಗಗಳ ಮೂಲಕ ಅದರ ಅಂದಚಂದವನ್ನು ಹೆಚ್ಚಿಸುತ್ತಿದ್ದಾರೆ. ಇವರೆಲ್ಲರ ಪರಿಶ್ರಮಕ್ಕೊಂದು ಫಲ ಸಿಕ್ಕಿದೆ. ಮನಸ್ಸು ಮಾಡಿದರೆ ಕಾಂಕ್ರೀಟ್ ಕಾಡಿನ ನಡುವೆ ಕೆರೆಯನ್ನು ಅರಳಿಸಲು ಸಾಧ್ಯ ಎನ್ನುವುದಕ್ಕೆ ಪುಟ್ಟೇನಹಳ್ಳಿ ಕೆರೆ ಇಂದು ಸಾಕ್ಷಿಯಾಗಿ ನಿಂತಿದೆ. ನಾಳೆಗಳು ಅಂದವಾಗಿರಲಿ ಆರೋಗ್ಯಕರವಾಗಿರಲಿ ಎಂದು ಇವರೆಲ್ಲರು ವಹಿಸುತ್ತಿರುವ ಕಾಳಜಿ ಮೆಚ್ಚಲೇಬೇಕಾದದ್ದು.