ಬೆಂಗಳೂರಿನ ಕೈಕೊಂಡ್ರನಹಳ್ಳಿ ಕೆರೆ ಪುನಶ್ಚೇತನಗೊಂಡ ಕಥೆ
ನಗರೀಕರಣದ ಧಾವಂತದಲ್ಲಿ ಅನೇಕ ಕೆರೆಗಳು ಕುಖ್ಯಾತಿಯನ್ನೂ ತಂದುಕೊಟ್ಟಿವೆ. ಇವೆಲ್ಲವುಗಳ ನಡುವೆ ಪರಿಸರದ ಬಗ್ಗೆ ಕಾಳಜಿಯುಳ್ಳ ಒಂದಿಷ್ಟು ನಾಗರಿಕರ ಪ್ರಯತ್ನದಿಂದ ಕಸ ಕೊಳಚೆಯ ತೊಟ್ಟಿಗಳಾಗಿದ್ದ ಕೆರೆಗಳು ಪುನಃ ’ಕೆರೆ’ಗಳಾಗಿ ಪುನಶ್ಚೇತನಗೊಂಡ ಉದಾಹರಣೆಗಳೂ ಇವೆ.
ಉದ್ಯಾನನಗರಿಯೆಂದು ಹೆಸರಾದ ಬೆಂಗಳೂರು ಕೆರೆಗಳ ನಗರಿಯೂ ಹೌದು. ಬೇಸಾಯ, ನಾಗರಿಕರ ಬಳಕೆ ಹಾಗೆಯೇ ನಗರದ ಸೌಂದರ್ಯಕ್ಕಾಗಿ ಜಲಮೂಲಗಳ ಸಂರಕ್ಷಣೆಯ ಅಗತ್ಯವನ್ನು ಮನಗಂಡಿದ್ದ ಬೆಂಗಳೂರಿನ ನಿರ್ಮಾತೃ ಕೆಂಪೇಗೌಡರು ಅನೇಕ ಕೆರೆಗಳನ್ನು ಮತ್ತು ಹರಿಯುವ ನೀರನ್ನು ಹಿಡಿದಿಡಲು ಒಡ್ಡುಗಳನ್ನು ನಿರ್ಮಿಸಿದ್ದರು. ೧೯೬೦ರ ದಾಖಲೆಗಳ ಪ್ರಕಾರ ಒಟ್ಟು ೨೬೨ ಕೆರೆಗಳು ಬೆಂಗಳೂರಿನ ಸುತ್ತಮುತ್ತಲಿದ್ದವು. ಇವುಗಳಲ್ಲಿ ಹೆಚ್ಚಿನವು ಹದಿನಾರನೇ ಶತಮಾನದಲ್ಲಿ ನಿರ್ಮಾಣಗೊಂಡವು. ಮತ್ತು ಈ ಕೆರೆಗಳು ಒಂದಕ್ಕೊಂದು ಜೋಡಿಕೊಂಡಿದ್ದು ಬೆಂಗಳೂರಿನಲ್ಲಿ ಒಟ್ಟು ಆರು ಕೆರೆಸರಪಳಿ ವ್ಯವಸ್ಥೆ ವೈಜ್ಞಾನಿಕವಾಗಿ ರೂಪುಗೊಂಡಿತ್ತು. ಇಂದು ಇವುಗಳ ಪೈಕಿ ೮೧ ಕೆರೆಗಳು ಮಾತ್ರ ಉಳಿದಿವೆ, ಅವುಗಳಲ್ಲಿ ಕೇವಲ ೩೪ ಕೆರೆಗಳು ಮಾತ್ರ ಜೀವಂತವಾಗಿವೆ. ನಗರೀಕರಣದ ಧಾವಂತದಲ್ಲಿ ಅನೇಕ ಕೆರೆಗಳು ಹೂತು ಬಸ್ಸ್ಟ್ಯಾಂಡ್, ಕ್ರೀಡಾಂಗಣ, ರಸ್ತೆ, ಅಪಾರ್ಟ್ಮೆಂಟ್ಗಳಾಗಿವೆ. ಹಾಗೆಯೇ ಹೆಚ್ಚುತ್ತಿರುವ ಜನಸಂಖ್ಯೆ ಮತ್ತು ಆರ್ಥಿಕ ಚಟುವಟಿಕೆಗಳಿಂದ ಉತ್ಪಾದನೆಯಾಗುತ್ತಿರುವ ಕೊಳಚೆ ನೀರಿನ ನಾಲೆಗಳು ಬಹುತೇಕ ಕೆರೆಗಳನ್ನೇ ಸೇರಿ ಕಲುಷಿತಗೊಳಿಸುತ್ತಿದ್ದು, ನಗರದ ಅತಿದೊಡ್ಡ ಜಲಾಶಯವಾದ ಬೆಳ್ಳಂದೂರು ಹಾಗೂ ವರ್ತೂರು ಕೆರೆಗಳಿಗೆ ಕುಖ್ಯಾತಿಯನ್ನೂ ತಂದುಕೊಟ್ಟಿವೆ. ಇವೆಲ್ಲವುಗಳ ನಡುವೆ ಪರಿಸರದ ಬಗ್ಗೆ ಕಾಳಜಿಯುಳ್ಳ ಒಂದಿಷ್ಟು ನಾಗರಿಕರ ಪ್ರಯತ್ನದಿಂದ ಕಸ ಕೊಳಚೆಯ ತೊಟ್ಟಿಗಳಾಗಿದ್ದ ಕೆರೆಗಳು ಪುನಃ ’ಕೆರೆ’ಗಳಾಗಿ ಪುನಶ್ಚೇತನಗೊಂಡ
ಉದಾಹರಣೆಗಳೂ ಇವೆ. ಅವುಗಳಲ್ಲಿ ಮಾದರಿ ಎನ್ನಬಹುದಾದದ್ದು ಐಟಿ ಕಂಪನಿಗಳ ಕಾರಿಡಾರ್ ಹಾಗೂ ಗಗನಚುಂಬಿ ಅಪಾರ್ಟ್ಮೆಂಟ್ಗಳ ಮಧ್ಯದಲ್ಲಿ ಸರ್ಜಾಪುರ ರಸ್ತೆಯಲ್ಲಿರುವ ಕೈಕೊಂಡ್ರನಹಳ್ಳಿಯ ಪುನಶ್ಚೇತನಗೊಂಡ ಕೆರೆ.
ಪುರಾತನ ಕೆರೆ ಕೊಳಚೆ ಗುಂಡಿಯಾಗಿತ್ತು
ಬೆಳ್ಳಂದೂರು, ವರ್ತೂರು, ಅಗರ, ಕಸವನಹಳ್ಳಿ, ಹರಲೂರು ಮತ್ತಿತರ ಕೆರೆಗಳು ಸೇರಿರುವ ವರ್ತೂರು ಕೆರೆಸರಪಳಿಯ ಪ್ರಮುಖ ಜಲಾಶಯ ಕೈಕೊಂಡ್ರನಹಳ್ಳಿ ಕೆರೆ. ನಾನೂರು ವರ್ಷಗಳ ಇತಿಹಾಸವುಳ್ಳ ಈ ಕೆರೆ ಈಗ್ಗೆ ಎಂಟು ವರ್ಷಗಳ ಹಿಂದೆ (೨೦೦೮-೦೯) ಪುನಶ್ಚೇತನ ಕೆಲಸ ಆರಂಭವಾಗುವ ಮೊದಲು ಅಕ್ಷರಶಃ ಕೊಳಚೆಗುಂಡಿಯಾಗಿತ್ತು, ಕಸದ ತೊಟ್ಟಿಯಾಗಿತ್ತು. ಬೆಳೆಯುತ್ತಿರುವ ನಗರದ ಚರಂಡಿಯ ನೀರು ಕೆರೆಗೆ ಸೇರುತ್ತಿತ್ತು. ಒತ್ತುವರಿಯಂತೂ ಎಲ್ಲ ಕಡೆಗಳಿಂದಲೂ ನಡೆದಿತ್ತು. ಸುತ್ತಲಿಂದ ಕಸ ತಂದು ಇಲ್ಲೇ ಸುರಿಯಲಾಗುತ್ತಿತ್ತು. ಅಪಾರ ಪ್ರಮಾಣದ ಹೂಳು ತುಂಬಿಕೊಂಡಿತ್ತು. ೪೮ ಎಕರೆ ವಿಸ್ತೀರ್ಣದ ಕೆರೆಂiiಲ್ಲಿ ನೀರಿದ್ದ ಜಾಗ ಕೇವಲ ೨ ಎಕರೆ ಮಾತ್ರ, ಅದೂ ಕಲುಷಿತಗೊಂಡಿತ್ತು. ಅರಣ್ಯ ಇಲಾಖೆಯ ಕೆರೆ ಅಭಿವೃದ್ಧಿ ಪ್ರಾಧಿಕಾರಕ್ಕೆ ಸೇರಿದ್ದ ಈ ಕೆರೆಯ ಗಡಿಗಳನ್ನು ಗುರುತಿಸಿ ಒಂದಿಷ್ಟು ಸಸಿಗಳನ್ನು ನೆಡಲು ಪ್ರಯತ್ನ ನಡೆಯಿತಾದರೂ, ಒತ್ತುವರಿ ಮಾಡಿದ್ದ ಪಟ್ಟಭದ್ರ ಹಿತಾಸಕ್ತಿಗಳ ವಿರೋಧದಿಂದ ಅದೂ ಸಾಧ್ಯವಾಗಲಿಲ್ಲ.
ಕೆಲಸ ಆರಂಭಗೊಂಡಿದ್ದು
೨೦೦೯-೧೦ರ ಸಮಯದಲ್ಲಿ ಅಂದಿನ ಸರ್ಕಾರ ಬೆಂಗಳೂರಿನ ಸುತ್ತಮುತ್ತಲಿನ ಕೆಲವು ಕೆರೆಗಳನ್ನು ಅಭಿವೃದ್ಧಿಪಡಿಸಬೇಕೆಂದು ಯೋಜನೆ ಪ್ರಕಟಿಸಿದಾಗ ಮೊದಲ ಪಟ್ಟಿಯಲ್ಲಿ ಕೈಕೊಂಡ್ರನಹಳ್ಳಿ ಕೆರೆಯೂ ಸೇರಿತ್ತು. ಹಾಗೆಯೇ ೨೦೦೯ರಲ್ಲಿ ಅರಣ್ಯ ಇಲಾಖೆ ಬೆಂಗಳೂರಿನ ೧೭ ಕೆರೆಗಳ ನಿರ್ವಹಣೆಯ ಭಾರವನ್ನು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಗೆ ಹಸ್ತಾಂತರಿಸಿತು, ಅದರಲ್ಲಿ ಈ ಕೆರೆಯೂ ಒಂದು. ಈ ನಡುವೆ ಪರಿಸರವಾದಿ ಹಾಗೂ ಸ್ವತಃ ಎನ್ವಿರಾನ್ಮೆಂಟ್ ಇಂಜಿನಿಯರ್ ಆಗಿರುವ ರಮೇಶ್ ಶಿವರಾಮ್ ಹಾಗೂ ಅವರ ಸ್ನೇಹಿತ ಪಕ್ಕದ ಹರಲೂರಿನವರಾದ ಮುರಲಿಯವರು ಕೆರೆ ಹಾಳಾಗುತ್ತಿರುವುದು, ಒತ್ತುವರಿಯಾಗುತ್ತಿರುವುದನ್ನು ಕಂಡು ಏನಾದರೂ ಮಾಡಬೇಕು ಎಂದು ಯೋಚಿಸತೊಡಗಿದರು.
ತಾವು ಕೈಕೊಂಡ್ರನಹಳ್ಳಿ ಕೆರೆ ಪುನಶ್ಚೇತನ ಕಾರ್ಯಕ್ಕೆ ತೊಡಗಿದ್ದು ಹಾಗೂ ಸಮುದಾಯವನ್ನು ಸೇರಿಸಿಕೊಂಡು ಬಿಬಿಎಂಪಿ ಕೆರೆ ಅಭಿವೃದ್ಧಿಯನ್ನು ಆರಂಭಿಸಿದ್ದು ಒಂದು ಆಸಕ್ತಿಕರ ಕಥೆ ಎಂದು ರಮೇಶ ವಿವರಿಸುತ್ತಾರೆ. “ಬಿಬಿಎಂಪಿ ಈ ಕೆರೆಯನ್ನು ಅಭಿವೃದ್ಧಿಪಡಿಸುವ ಯೋಜನೆ ಹಾಕಿಕೊಂಡಿರುವುದು ನಮ್ಮ ಗಮನಕ್ಕೆ ಬಂತು. ಈ ವಿಷಯಕ್ಕೆ ಸಂಬಂಧಿಸಿದಂತೆ ಸ್ಥಳೀಯ ಶಾಸಕರಾದ ಅರವಿಂದ ಲಿಂಬಾವಳಿಯವರನ್ನು ಸಮೀಪಿಸಿದೆವು. ಆಗಲೇ ಯೋಜನೆಯ ನೀಲನಕ್ಷೆ ಸಿದ್ಧವಾಗುತ್ತಿತ್ತು. ವಿಸ್ತೃತ ಯೋಜನಾವರದಿಯನ್ನು ತರಿಸಿಕೊಂಡ ಶಾಸಕರು ಒಂದು ಸಭೆಯನ್ನು ಕರೆದರು. ಅದರಲ್ಲಿ ಬಿಬಿಎಂಪಿ ಅಧಿಕಾರಿಗಳು, ಬೆಂಗಳೂರಿನ ಅಭಿವೃದ್ಧಿಗಾಗಿ ಘಟಿಸಲಾದ ಅಬೈಡ್ ಸಮಿತಿಯ ಸದಸ್ಯರಿದ್ದರು. ನಾವು ಒಂದಷ್ಟು ಆಸಕ್ತ ಸ್ಥಳೀಯರನ್ನು ಸೇರಿಸಿಕೊಂಡು ಸಭೆಗೆ ಹೋದೆವು. ಒಟ್ಟೂ ೯ ಕೋಟಿ ರೂಪಾಯಿಗಳ ಯೋಜನೆ ಸಿದ್ಧವಾಗಿತ್ತು. ಅ?ಂದು ಅಗತ್ಯವಿಲ್ಲ ಎಂದು ನಮಗೆ ಅನಿಸಿತು. ಯೋಜನಾವರದಿಯನ್ನು ಇಟ್ಟುಕೊಂಡು ವೆಚ್ಚವನ್ನು ಕಡಿತಗೊಳಿಸುವ ಕೆಲಸಕ್ಕೆ ಕುಳಿತೆವು. ೯ ಕೋಟಿಯಿಂದ ೧.೮ ಕೋಟಿಗೆ ಯೋಜನಾವೆಚ್ಚವನ್ನು ಇಳಿಸಿದೆವು. ನಮ್ಮ ಆಸಕ್ತಿಯನ್ನು ಗಮನಿಸಿದ ಶಾಸಕರು ಇವರನ್ನು ಸೇರಿಸಿಕೊಂಡೇ ಕೆರೆ ಪುನಶ್ಚೇತನ ಯೋಜನೆಯನ್ನು ಮಾಡಬೇಕು ಎಂದು ಸೂಚನೆ ನೀಡಿದರು. ಬಿಬಿಎಂಪಿಯಲ್ಲಿಯೂ ಒಂದು ಸಮರ್ಥ ಇಂಜಿನಿಯರ್ಗಳ ತಂಡ ತಯಾರಾಗಿತ್ತು.” ಹೀಗೆ ಕೈಕೊಂಡ್ರನಹಳ್ಳಿ ಕೆರೆ ಪುನಶ್ಚೇತನಕ್ಕಾಗಿ ಸರ್ಕಾರ (ಬಿಬಿಎಂಪಿ) ಮತ್ತು ಸಮುದಾಯ ಸಹಯೋಗದ ಜಂಟಿ ಕ್ರಿಯಾಯೋಜನೆ ಆರಂಭಗೊಂಡಿತು. ಇನ್ನೂ ಕೆಲವು ಕೆರೆ ಬಗ್ಗೆ ಆಸಕ್ತಿ ಉಳ್ಳ ನಾಗರಿಕರು, ಸ್ಥಳೀಯರು, ಪರಿಸರವಾದಿಗಳು, ಆರ್ಕಿಟೆಕ್ಟ್, ಪಕ್ಷಿತಜ್ಞರು ಹೀಗೆ ಬೇರೆಬೇರೆಯವರು ಸೇರಿಕೊಳ್ಳುತ್ತ ಹೋದರು, ತಂಡ ದೊಡ್ಡದಾಯಿತು.
ಕೆರೆ ಸಂರಕ್ಷಣೆ ಕೇವಲ ಭಾವನಾತ್ಮಕ ವಿಷಯವಲ್ಲ
ಸವಾಲುಗಳು ಹಲವು
ಹೀಗೆ ಎಂಟು ವರ್ಷಗಳ ಹಿಂದೆ ಆರಂಭಗೊಂಡ ಕೆರೆಯ ಪುನಶ್ಚೇತನ ಕೆಲಸವೇನೂ ಸುಲಭದ್ದಾಗಿರಲಿಲ್ಲ. ಸುತ್ತಲಿಂದ ಬಂದು ಸೇರುತ್ತಿರುವ ನಾಲೆಗಳ ಸಮಸ್ಯೆ ಒಂದಾದರೆ, ಒತ್ತುವರಿಯನ್ನು ಬಿಡಿಸಿ ಕೆರೆಯ ಗಡಿಗಳನ್ನು ಗುರುತು ಮಾಡಿ ಬೇಲಿಹಾಕುವುದು ಇನ್ನೂ ದೊಡ್ಡ ಸವಾಲಾಗಿತ್ತು. ಒತ್ತುವರಿ ಮಾಡಿಕೊಂಡ ಪಟ್ಟಭದ್ರರಿಂದ ಸಾಕಷ್ಟು ವಿರೋಧ ವ್ಯಕ್ತವಾಯಿತು. “ನನಗೆ ಬೆದರಿಕೆಗಳು ಬಂದವು, ಇಲ್ಲಿ ಬರಲು ನೀವು ಯಾರು? ಎಂದು ಕೇಳಿದರು, ಒಂದಿಷ್ಟು ಏಟುಗಳೂ ಬಿದ್ದವು” ಎಂದು ರಮೇಶ್ ಆ ದಿನಗಳನ್ನು ನೆನೆಸಿಕೊಳ್ಳುತ್ತಾರೆ. ಒತ್ತುವರಿ ತೆರವುಗೊಳಿಸುವುದು ಸರ್ಕಾರದ ಕೆಲಸ. ಕಂದಾಯ ಇಲಾಖೆಯ ಸಹಾಯದಿಂದ ಕೆರೆಯ ಗಡಿಗಳನ್ನು ಗುರುತಿಸಿ ಮೀಸಲು ಪೊಲೀಸ್ ಪಡೆಯ ರಕ್ಷಣೆ ಪಡೆದು ರಾತ್ರೋರಾತ್ರಿ ಬೇಲಿ ಹಾಕಲಾಯಿತು. ಸುತ್ತಲೂ ನಡೆಯತ್ತಿರುವ ಅಪಾರ್ಟ್ಮೆಂಟ್ ನಿರ್ಮಾಣ ಕೆಲಸಗಳಿಗೆ ಬಂದ ಸಾವಿರಾರು ಕಾರ್ಮಿಕ ಕುಟುಂಬಗಳು ಕೆರೆಯ ಪಕ್ಕದಲ್ಲೇ ಟೆಂಟ್ ಹಾಕಿ ವಾಸಿಸುತ್ತಿದ್ದರು. ಅಲ್ಲಿಂದ ಹೊರಬರುವ ಕೊಳಚೆ ನೇರವಾಗಿ ಕೆರೆಗೇ ಸೇರುತ್ತಿತ್ತು. ಅದನ್ನು ನಿಲ್ಲಿಸುವುದೂ ದೊಡ್ಡ ಸವಾಲಿನ ಕೆಲಸವಾಗಿತ್ತು. ಮುಂದೆ ಕೈಗೆತ್ತಿಕೊಂಡ ಪ್ರಮುಖ ಕೆಲಸ ಸುತ್ತಲಿಂದ ನುಗ್ಗುತ್ತಿರುವ ಕೊಳಚೆ ನಾಲೆಗಳ ದಿಕ್ಕು ಬದಲಾಯಿಸುವುದು. ಕೆರೆ ಕಲುಷಿತಗೊಳ್ಳಲು ಕೊಳಚೆ ನೀರಿನ ಒಳಹರಿವೇ ಪ್ರಮುಖ ಕಾರಣವಾಗಿದ್ದರಿಂದ ಈ ನಾಲೆಗಳನ್ನು ಪೈಪ್ಲೈನ್ ಮೂಲಕ ದಿಕ್ಕು ಬದಲಿಸಲಾಯಿತು. ಅನಂತರ ಅಪಾರಪ್ರಮಾಣದಲ್ಲಿ ಬೆಳೆದಿದ್ದ ಕಳೆಯನ್ನು ತೆಗೆಯುವುದು, ಕಸದ ರಾಶಿಯನ್ನು ತೆಗೆಯುವುದು, ಹೂಳೆತ್ತುವುದು ಮೊದಲಾದ ಕೆಲಸಗಳನ್ನು ಕೈಗೆತ್ತಿಕೊಳ್ಳಲಾಯಿತು. ವಲಸೆ ಹಕ್ಕಿಗಳ ಬ್ರೀಡಿಂಗ್ ಹಾಗೂ ಇತರೆ ಜೀವಿಗಳಿಗೆ ಆಶ್ರಯವಾಗುವ ನಿಟ್ಟಿನಲ್ಲಿ ಮಧ್ಯಭಾಗದಲ್ಲಿ ಒಂದು ಎಕರೆಯಷ್ಟು ಜಾಗದಲ್ಲಿ ಪುಟ್ಟ ದ್ವೀಪವನ್ನು ನಿರ್ಮಿಸಿ, ಗಿಡಗಳನ್ನು, ವಿಶೇಷವಾಗಿ ಬಿದಿರನ್ನು ನೆಡಲಾಯಿತು. ೨೦೦೯ರಲ್ಲಿ ಆರಂಭಗೊಂಡ ಮೊದಲಹಂತದ ಕಾರ್ಯ ೨೦೧೧ರವೇಳೆಗೆ ಮುಕ್ತಾಯಗೊಂಡಿತು. ಆದರೂ ಇದ್ದ ಒಂದು ಪ್ರಮುಖ ಸಮಸ್ಯೆಯೆಂದರೆ, ಈ ಕೆರೆಗೆ ಮಳೆಯ ನೀರೇ ಪ್ರಮುಖ ಮೂಲವಾದ್ದರಿಂದ ಮಳೆ ಬರದೇ ಕೆರೆ ತುಂಬುವುದು ಸಾಧ್ಯವಿರಲಿಲ್ಲ. ಮುಂದಿನ ಮಳೆಗಾಲದಲ್ಲಿ ಮಳೆಯ ನೀರು ಒಳಹರಿದು ಕೆರೆ ತುಂಬಿತು.
ಈಗ ಹೀಗಿದೆ
ಒಟ್ಟು ೪೮ ಎಕರೆ ಪ್ರದೇಶ, ಅದರಲ್ಲಿ ೪೦ ಎಕರೆ ನೀರು ತುಂಬಿರುವ ಕೆರೆ ಇಂದು ನಗರದ ಒಂದು ಆಕರ್ಷಣೆಯಾಗಿದೆ. ಸರಾಸರಿ ೨.೫ ಮೀಟರ್ ಆಳವಿರುವ ಈ ಕೆರೆ ಇಂದು ೨.೮೫ ಲಕ್ಷ ಘನಮೀಟರ್ ನೀರು ಹಿಡಿದಿಟ್ಟುಕೊಳ್ಳಬಲ್ಲ ಸಾಮರ್ಥ್ಯ ಹೊಂದಿದೆ. ಬದುವಿನಲ್ಲಿ ಸುಮಾರು ಮೂರುಸಾವಿರ ವಿವಿಧ ಜಾತಿಯ ಮರಗಳಿವೆ. ಮಧ್ಯದಲ್ಲಿರುವ ದ್ವೀಪದಲ್ಲಿ ಬಿದಿರು ಹುಲುಸಾಗಿ ಬೆಳೆದಿದ್ದು, ಅನೇಕ ಪಕ್ಷಿಗಳಿಗೆ ಆಶ್ರಯ ನೀಡಿದೆ. ಕೆರೆಯ ಸುತ್ತಲೂ ೨.೫ ಕಿ.ಮಿ. ವಾಕಿಂಗ್ ಟ್ರ್ಯಾಕ್ ನಿರ್ಮಿಸಲಾಗಿದೆ. ಕೆರೆಯ ಏರಿಯ ಮೇಲೆ ಇರುವ ಶಾಲಾಮಕ್ಕಳಿಗೆ ಆಟದ ಅಂಗಳವಿದೆ. ಪಕ್ಕದಲ್ಲೇ ಕಲ್ಯಾಣಿಯೊಂದನ್ನು ನಿರ್ಮಿಸಲಾಗಿದ್ದು, ಗಣೇಶೋತ್ಸವ, ದುರ್ಗಾಪೂಜೆಯ ಸಮಯದಲ್ಲಿ ಮೂರ್ತಿವಿಸರ್ಜನೆಗೆ ಬಳಕೆಯಾಗುತ್ತದೆ; ಹಾಗಾಗಿ ಕೆರೆಯಲ್ಲಿ ಮೂರ್ತಿವಿಸರ್ಜನೆಯಿಂದಾಗಬಲ್ಲ ಪ್ರದೂಷಣೆ, ಹೂಳು ತುಂಬುವುದು ತಪ್ಪುತ್ತಿದೆ. ಇನ್ನೊಂದು ಮೂಲೆಯಲ್ಲಿ ಒಂದು ಬಯಲು ರಂಗಮಂದಿರವನ್ನು ನಿರ್ಮಿಸಲಾಗಿದ್ದು, ಸಣ್ಣಪುಟ್ಟ ಕಾರ್ಯಕ್ರಮಗಳು ಆಗಾಗ ನಡೆಯುತ್ತವೆ. ಕೆರೆಯ ನಿರ್ವಹಣೆಗಾಗಿ ಸಾರ್ವಜನಿಕರನ್ನು ಸೇರಿಸಿ ಮಾಪ್ಸಾಸ್ (ಮಹದೇವಪುರ ಪರಿಸರ ಸಂರಕ್ಷಣೆ ಮತ್ತು ಅಭಿವೃದ್ಧಿ ಸಂಸ್ಥೆ) ಎನ್ನುವ ಸಮಿತಿಯನ್ನು ಘಟಿಸಲಾಗಿದ್ದು, ಕೆರೆಯ ನಿರ್ವಹಣೆ ಒಂದು ಸಾಂಸ್ಥಿಕ ರೂಪ ಪಡೆದುಕೊಂಡಿದೆ.
ಏನು ಲಾಭ?
ಇಷ್ಟೆಲ್ಲ ಮಾಡಿ ಈ ಕೆರೆಯಿಂದ ಏನು ಲಾಭ? ಎನ್ನುವ ಪ್ರಶ್ನೆ ಏಳುವುದು ಸಹಜ. ಕೈಕೊಂಡ್ರನಹಳ್ಳಿಯ ಸುತ್ತಲಿನ ಪ್ರದೇಶದ ಜನಸಂಖ್ಯೆ ವಿಪರೀತ ಬೆಳೆಯುತ್ತಿದೆ. ನೂರಾರು ಅಪಾರ್ಟ್ಮೆಂಟ್ಗಳು ತಲೆಯೆತ್ತಿವೆ. ಆದರೆ ಜಲಮಂಡಳಿಯ ನೀರಿನ ಸಂಪರ್ಕ ಇರದ ಕಾರಣ ಬೋರವೆಲ್ಗಳೇ ನೀರಿನ ಪ್ರಮುಖ ಮೂಲ. ಹೀಗಿದ್ದೂ ಸುತ್ತಲಿನ ಪ್ರದೇಶದಲ್ಲಿ ಇದುವರೆಗೆ ಜಲಕ್ಷಾಮ ಬಂದಿಲ್ಲ, ಅಂತರ್ಜಲಮಟ್ಟ ಕಾಯ್ದುಕೊಂಡಿದೆ.
ಈ ಕೆರೆಯ ಪರಿಸರದಲ್ಲಿ ೬೦ಕ್ಕೂ ಹೆಚ್ಚು ಜಾತಿಯ ಹಕ್ಕಿಗಳು ಆಶ್ರಯ ಪಡೆದಿವೆ. ಪ್ರತಿವ? ಬ್ರೀಡಿಂಗ್ ಋತುವಿನಲ್ಲಿ ಸಾವಿರಾರು ಹಕ್ಕಿಗಳು ವಲಸೆ ಬರುತ್ತವೆ. ಮರಗಳಲ್ಲಿ ನೂರಾರು ಹಕ್ಕಿಗಳ ಗೂಡನ್ನು ಕಾಣಬಹುದು. ಉರಗಗಳು, ವಿವಿಧ ಜಾತಿ ಕೀಟಗಳು, ಚಿಟ್ಟೆಗಳು, ಮುಂಗುಸಿ ಮೊದಲಾದವು ಇಲ್ಲಿ ಮನೆ ಮಾಡಿವೆ. ಪಕ್ಷಿವೀಕ್ಷಕರು, ಛಾಯಾಚಿತ್ರಗ್ರಾಹಕರು, ಉರಗ-ಕೀಟ ತಜ್ಞರಿಗೂ ಇದು ಒಳ್ಳೆಯ ತಾಣ. ಒಟ್ಟಾರೆಯಾಗಿ ಪುನಶ್ಚೇತನಗೊಂಡ ಕೆರೆಯ ಪರಿಸರದಲ್ಲಿ ಜೀವವೈವಿಧ್ಯ ಮರುಕಳಿಸಿದೆ (Restoration of biodiversity). ಕಾಂಕ್ರೀಟ್ ಕಾಡಿನ ಮಧ್ಯೆ ಇದೊಂದು ಗಣನೀಯ ಸಾಧನೆ. ನಿತ್ಯ ಎರಡು ಸಾವಿರಕ್ಕೂ ಹೆಚ್ಚು ಜನರು ಕೆರೆಯ ದಂಡೆಯ ಮೇಲೆ ನಡಿಗೆ, ಜಾಗಿಂಗ್ಗಾಗಿ ಬರುತ್ತಾರೆ. ಇಲ್ಲಿನ ನಾಗರಿಕರಿಗೆ ಇದೊಂದು ’ಲಂಗ್ ಸ್ಪೇಸ್’ ಒದಗಿಸಿದೆ. ಮರಗಳೂ ಸಾಕಷ್ಟು ದಟ್ಟವಾಗಿ ಬೆಳೆದಿದ್ದು ವಾಯುಮಾಲಿನ್ಯ ನಿಯಂತ್ರಣ, ವಾತಾವರಣದ ಉಷ್ಣತೆ ಕಡಮೆ ಮಾಡಲು ಹಾಗೂ ಮಳೆ ಸುರಿಸುವಲ್ಲಿ ತಮ್ಮದೇ ಆದ ಕೊಡುಗೆ ನೀಡುತ್ತಿವೆ. ಕೆರೆಯಲ್ಲಿ ಮೀನುಗಾರಿಕೆಯೂ ನಡೆಯುತ್ತದೆ.
“ಕೆರೆ ಹಾಳಾಗ್ತಿದೆ ಸರಿಯಾಗಬೇಕು ಎಂದು ಅನೇಕರಿಗೆ ಅನಿಸಿರುತ್ತದೆ. ಒಳ್ಳೆಯ ಕೆಲಸ ಆಗಬೇಕು ಅಂದಾಗ ಸುಮಾರು ವಿ?ಯಗಳು ಒಂದೇ ಜಾಗದಲ್ಲಿ ಬಂದು ಸೇರಿಕೊಳ್ಳಬೇಕು. ಸರ್ಕಾರದ ಇಚ್ಛೆ, ತಜ್ಞ ಅಧಿಕಾರಿಗಳ ಒಂದು ತಂಡ ಹಾಗೂ ನಮಗೂ ಒಂದಿಷ್ಟು ಕಾಳಜಿ ಇವೆಲ್ಲ ಒಟ್ಟಿಗೆ ಬಂದಾಗ ಅಭಿವೃದ್ಧಿ ಆಗುತ್ತದೆ” ಎನ್ನುತ್ತಾರೆ ಪರಿಸರವಾದಿ ಹಾಗೂ ಫಾರ್ವರ್ಡ್ ಫೌಂಡೇಶನ್ ಸಂಸ್ಥೆಯ ಕಾರ್ಯಕರ್ತ ರಮೇಶ್ ಶಿವರಾಮ್. ಎನ್ವಿರಾನ್ಮೆಂಟ್ ಇಂಜಿನಿಯರಿಂಗ್ನಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ರಮೇಶ್ ಈ ಕೆರೆ ಪುನಶ್ಚೇತನ ಕೆಲಸದಿಂದ ಕಲಿತಿದ್ದನ್ನು ಪ್ರಾಯೋಗಿಕವಾಗಿ ಬಳಸುವ ವೈಯಕ್ತಿಕ ಲಾಭವೂ ತನಗೆ ಆಯಿತು ಎಂದು ಹೇಳುತ್ತಾರೆ. “ಸಿವಿಲ್ ಇಂಜಿನಿಯರ್ ಆಗಿರುವ ಸ್ನೇಹಿತ ಮುರಲಿಯವರ ತಂದೆ ಹರಲೂರಿನ ಪಂಚಾಯತಿಯ ಉಪಾಧ್ಯಕ್ಷರಾಗಿದ್ದರು. ಅವರು ಪರಿಸರ, ಜಲಮೂಲ, ಕೆರೆಗಳ ಬಗ್ಗೆ ಅತೀವ ಕಾಳಜಿ ಉಳ್ಳವರಾಗಿದ್ದರು. ಅವರಂತೆಯೇ ಮುರಲಿ ಸಹ ಈ ವಿಷಯಗಳಲ್ಲಿ ಆಸಕ್ತರು. ಹಾಗೆಯೇ ನಮ್ಮ ತಂದೆ ಕೂಡ ಪರಿಸರ ಸಂರಕ್ಷಣೆ, ಗಿಡ ನೆಡುವುದು, ನಗರ ಕಾಡುಗಳನ್ನು ಬೆಳೆಸುವುದು ಮೊದಲಾದ ಕಾರ್ಯದಲ್ಲಿ ೩೦-೪೦ವ?ಗಳಿಂದ ನಡೆಸಿಕೊಂಡು ಬಂದವರು. ಅವರಿಂದಾಗಿ ನನಗೂ ಪರಿಸರ ವಿಷಯದಲ್ಲಿ ಆಸಕ್ತಿ ಮತ್ತು ಏನಾದರೂ ಮಾಡಬೇಕೆಂಬ ಪ್ರೇರಣೆ ದೊರಕಿತು. ಮನೆಯಲ್ಲಿ ಹಿರಿಯರು ಯಾರಾದರೂ ಪರಿಸರದ ಬಗ್ಗೆ ಕಾಳಜಿ ಇದ್ದವರು ಇದ್ದರೆ ಕಿರಿಯರಲ್ಲೂ ಆಸಕ್ತಿ ಮೂಡುತ್ತದೆ” ಎಂದು ಅಭಿಪ್ರಾಯಪಡುತ್ತಾರೆ.
ಆದರೂ ಸವಾಲುಗಳಿವೆ ನೂರಾರು
ಪುನಶ್ಚೇತನಗೊಂಡ ಕೆರೆ ಮೈತುಂಬಿಸಿಕೊಂಡು ನಿಂತಿದೆ ನಿಜ. ಆದರೂ ಈಗಲೂ ಇರುವ ಸವಾಲುಗಳು ಅನೇಕ. ಪ್ರಮುಖವಾಗಿ ಕೆರೆಗೆ ನಾಲೆಗಳಿಂದ ಬರುವ ಕೊಳಚೆ ನೀರನ್ನು ದಿಕ್ಕುಬದಲಿಸಿದೆಯಾದರೂ, ಕೆಲಸ ಇನ್ನೂ ಬಾಕಿ ಇದೆ. ಅಲ್ಲಲ್ಲಿ ಕೊಳಚೆನೀರು ಕೆರೆಗೆ ಒಸರುತ್ತದೆ. ಕಟ್ಟಡ ನಿರ್ಮಾಣಗಳಿಂದಾಗಿ ಭೂಪ್ರದೇಶ ಸಮತಟ್ಟಿನ ವಿನ್ಯಾಸ ಬದಲಾಗುವುದರಿಂದ ಕೊಳಚೆ ನೀರು ಸಹಜವಾಗಿ ತಗ್ಗಿರುವ ಕೆರೆಯ ಕಡೆ ನುಗ್ಗುತ್ತದೆ. ಜಲ ಮತ್ತು ಒಳಚರಂಡಿ ಮಂಡಳಿಯ ವಿಫಲತೆಯೂ ಪ್ರಮುಖ ಕಾರಣಗಳಲ್ಲೊಂದು.
’ರಾಷ್ಟ್ರೀಯ ಹಸಿರುಪೀಠ’ ಕೆರೆಯಿಂದ ೭೫ ಮೀಟರ್ ಬಫರ್ ಪ್ರದೇಶದಲ್ಲಿ ಯಾವುದೇ ನಿರ್ಮಾಣ ಕಾರ್ಯ ಮಾಡಬಾರದು ಎಂದು ಹೇಳಿದ್ದಾಗ್ಯೂ, ಬಫರ್ ಝೋನ್ನಲ್ಲಿ ಕಟ್ಟಡ ನಿರ್ಮಾಣ ಕೈಗೆತ್ತಿಕೊಳ್ಳಲಾಗುತ್ತಿದೆ. ಬಫರ್ ಝೋನ್ನಲ್ಲೆ ಕಸಗಳನ್ನೂ ತಂದು ಗುಡ್ಡೆ ಹಾಕಲಾಗುತ್ತಿದೆ. ಅಲ್ಲೇ ಓರ್ವ ಮಹನೀಯ ಹಂದಿ ಸಾಕಾಣಿಕೆಯನ್ನೂ ಮಾಡುತ್ತಿದ್ದಾನೆ.
ಒತ್ತುವರಿ ಪ್ರಯತ್ನವೂ ಸಂಪೂರ್ಣ ನಿಂತಿದೆ ಎನ್ನಲಾಗದು. ಒಂದಿಷ್ಟು ಮಂದಿ ಸ್ವಾರ್ಥ ಹಿತಾಸಕ್ತಿಯುಳ್ಳವರು ಬಂದು ಕೆರೆಯ ದಂಡೆಯ ಮೇಲೆ ದೇವಸ್ಥಾನ ನಿರ್ಮಿಸುತ್ತೇವೆ ಎಂದು ಕ್ಯಾತೆ ತೆಗೆಯುತ್ತಿದ್ದಾರೆ.
ನಿರ್ವಹಣೆಗಾಗಿ ಮಾಪ್ಸಾಸ್ ಹೆಸರಿನಲ್ಲಿ ಟ್ರಸ್ಟ್ ಇದೆಯಾದರೂ, ಅದರ ಕೆಲಸ ಸಮರ್ಪಕವಾಗಿದೆ ಎಂದು ಹೇಳುವ ಹಾಗಿಲ್ಲ. ಹಾಗೆಯೇ ಕೆರೆ ಬಿಬಿಎಂಪಿಯ ವ್ಯಾಪ್ತಿಗೆ ಸೇರಿದ್ದರೂ, ಇದರಲ್ಲಿ ಅನೇಕ ಸರ್ಕಾರಿ ಇಲಾಖೆಗಳು ಸಂಬಂಧಿಸಿರುವ ಕಾರಣ ಒಂದಕ್ಕೊಂದು ಹೊಂದಾಣಿಕೆಯಾಗದೇ ಕೆಲಸ ಕುಂಟುತ್ತಿದೆ. ಉದಾಹರಣೆಗೆ ಕೆರೆ ನಿರ್ವಹಣೆಗೆ ಮಾಪ್ಸಾಸ್ ವೆಚ್ಚ ಹೊಂದಿಸುವುದಾದರೂ, ದೊಡ್ಡ ವೆಚ್ಚದ ಕೆಲಸಗಳಿಗೆ ಬಿಬಿಎಂಪಿಯಿಂದ ಹಣ ಸಂದಾಯವಾಗಬೇಕು. ಕೆರೆಯ ಸುತ್ತಲಿನ ಕೊಳಚೆನಾಲೆಗಳ ದಿಕ್ಕುಬದಲಿಸುವ ಪೈಪ್ಲೈನ್ ನಿರ್ಮಾಣಕ್ಕೆ ಬಿಬಿಎಂಪಿಯಿಂದ ಬಿಲ್ ಪಾಸ್ ಆಗದ ಕಾರಣ ಅದು ಅರ್ಧಕ್ಕೇ ನಿಂತಿದೆ. ಕೆರೆಯಲ್ಲಿ ಮೀನುಗಾರಿಕೆ ನಡೆಯುತ್ತದೆ, ಆದರೆ ಅದರಿಂದ ಬರುವ ಆದಾಯ ಮೀನುಗಾರಿಕೆ ಇಲಾಖೆಗೆ ಸೇರುತ್ತದೆಯೆ, ಹೊರತು ಕೆರೆ ಅಭಿವೃದ್ಧಿ ನಿರ್ವಹಣೆಯ ವೆಚ್ಚಕ್ಕಲ್ಲ.