ಭಾರತ ಸದ್ಯವೇ ತನ್ನ ಪ್ಲಾಸ್ಟಿಕ್ ತ್ಯಾಜ್ಯವನ್ನು ಉತ್ತಮ ಗುಣಮಟ್ಟದ ಪೆಟ್ರೋಲ್ ಮತ್ತು ಡೀಸೆಲ್ ಆಗಿ ಪರಿವರ್ತಿಸಲಿದೆ. ಡೆಹ್ರಾಡೂನ್ ಮೂಲದ ಭಾರತೀಯ ಪೆಟ್ರೋಲಿಯಂ ಸಂಸ್ಥೆ(ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಪೆಟ್ರೋಲಿಯಮ್) ಯ ಸಂಶೋಧಕರ ಮಹತ್ತ್ವದ ಸಾಧನೆಯಿದು. ಐಐಪಿ ವೈಜ್ಞಾನಿಕ ಮತ್ತು ಕೈಗಾರಿಕಾ ಸಂಶೋಧನಾ ಮಂಡಳಿ(ಕೌನ್ಸಿಲ್ ಆಫ್ ಸೈಂಟಿಫಿಕ್ ಆಂಡ್ ಇಂಡಸ್ಟ್ರಿಯಲ್ ರೀಸರ್ಚ್)ಗೆ ಸೇರಿದ ಒಂದು ಪ್ರಯೋಗಶಾಲೆಯಾಗಿದ್ದು, ದೇಶದಲ್ಲಿ ಮೊದಲ ಬಾರಿಗೆ ಪ್ಲಾಸ್ಟಿಕ್ ತ್ಯಾಜ್ಯವನ್ನೂ ಪೆಟ್ರೋಲಿಯಂ ಉತ್ಪನ್ನಗಳಾಗಿ ಪರಿವರ್ತಿಸುವ ತಂತ್ರಜ್ಞಾನವನ್ನು ಕಂಡುಹಿಡಿದಿದೆ.
ಈ ಹಸಿರು ತಂತ್ರಜ್ಞಾನವು ಇದುವರೆಗೆ ಜರ್ಮನಿ, ಜಪಾನ್ ಮತ್ತು ಅಮೆರಿಕಗಳಲ್ಲಿ ಮಾತ್ರ ಲಭ್ಯವಿದೆ; ಆಸ್ಟ್ರೇಲಿಯ ಮತ್ತು ಇಂಗ್ಲೆಂಡ್ಗಳು ಇನ್ನೂ ಆ ಬಗೆಯ ಸಂಶೋಧನೆಯಲ್ಲೇ ಇವೆ.
ಈ ತಂತ್ರಜ್ಞಾನದ ಪ್ರಕಾರ ಸೂಕ್ತ ವೇಗವರ್ಧಕ (Catalyst)ಗಳ ಸಂಯೋಜನೆಯ ಬಳಕೆಯಿಂದ ಪ್ಲಾಸ್ಟಿಕನ್ನು ಗ್ಯಾಸೊಲಿನ್, ಡೀಸೆಲ್ ಅಥವಾ ಪರಿಮಳ ದ್ರವ್ಯಗಳಾಗಿ ಪರಿವರ್ತಿಸಲಾಗುತ್ತದೆ. ಇದರಿಂದ ಸಾಮಾನ್ಯ ಉಪಉತ್ಪನ್ನವಾಗಿ ದ್ರವೀಕೃತ ಪೆಟ್ರೋಲಿಯಂ ಅನಿಲ (ಎಲ್ಪಿಜಿ) ಉತ್ಪಾದಿತವಾಗುತ್ತದೆ.
ಈ ವಿಧಾನದಿಂದ ಇಲ್ಲಿ ಉತ್ಪಾದಿತವಾದ ಇಂಧನಗಳು (ಗ್ಯಾಸೊಲಿನ್ ಮತ್ತು ಡೀಸೆಲ್) ಯೂರೋ III ಗುಣಮಟ್ಟಕ್ಕೆ ಸಮಾನವಾಗಿವೆ ಮತ್ತು ಅತ್ಯುನ್ನತ ಗುಣಮಟ್ಟದ್ದಾಗಿವೆ ಎಂದು ಐಐಪಿ ನಿರ್ದೇಶಕ ಎಂ.ಓ. ಗರ್ಗ್ ಹೇಳಿದ್ದಾರೆ. ಇಲ್ಲಿ ಉತ್ಪಾದಿತವಾದ ಡೀಸೆಲ್ನಲ್ಲಿ ಗಂಧಕ ಬಹುತೇಕ ಇಲ್ಲವಾದ ಕಾರಣ ಅದು ಉತ್ತಮ ಗುಣಮಟ್ಟದ್ದೆಂದು ಗುರುತಿಸಲಾಗಿದೆ.
ಇದರ ಬಳಕೆಯಿಂದ ಎಂಜಿನ್ಗಳ ಹೊಗೆ ಗಮನಾರ್ಹವಾಗಿ ಕುಸಿಯಲಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಈ ಡೀಸೆಲ್ನಿಂದ ಓಡುವ ವಾಹನವು ಇತರ ಸಾಮಾನ್ಯ ಡೀಸೆಲ್ ಬಳಸುವ ವಾಹನಗಳಿಗಿಂತ ಲೀಟರಿಗೆ ಕನಿಷ್ಠ ೨ ಕಿ.ಮೀ. ಜಾಸ್ತಿ ಓಡಲಿದೆಯಂತೆ.
“ನಾವು ಪೇಟೆಂಟಿಗೆ ಅರ್ಜಿ ಸಲ್ಲಿಸಿದ್ದೇವೆ. ಒಂದು ದಶಕಕ್ಕೂ ಹೆಚ್ಚಿನ ಅವಧಿಯ ತೀವ್ರ ಸಂಶೋಧನೆಯ ಪರಿಣಾಮವಾಗಿ ನಾವು ಇದನ್ನು ಕಂಡುಹಿಡಿದಿದ್ದೇವೆ. ಬೃಹತ್ ಯಂತ್ರಗಳು ಮತ್ತು ಸಂಸ್ಕರಣಗಳ ವಿನ್ಯಾಸವನ್ನು ಕಂಡುಹಿಡಿಯುವ ನಿಟ್ಟಿನಲ್ಲಿ ನಮ್ಮ ಪ್ರಯತ್ನ ಸಾಗಿದೆ. ಅದರ ನಡುವೆ ಈ ತಂತ್ರಜ್ಞಾನವನ್ನು ವಾಣಿಜ್ಯೀಕರಣಗೊಳಿಸುತ್ತಿದ್ದೇವೆ” ಎಂದು ಗರ್ಗ್ ಮಾಧ್ಯಮಕ್ಕೆ ತಿಳಿಸಿದ್ದಾರೆ. ಕಚ್ಚಾ ಹೈಡ್ರೋಕಾರ್ಬನ್ನಿಂದ ಉತ್ಪಾದಿಸಿದ ಪೆಟ್ರೋಲ್ನ ಈಗಿನ ಬೆಲೆ ಸುಮಾರು ಲೀ.ಗೆ ೭೦-೮೦ ರೂ. ಹೊಸ ವಿಧಾನದಲ್ಲಿ ತಯಾರಿಸಿದ ಪೆಟ್ರೋಲ್ ಲೀ.ಗೆ ೩೦-೪೦ ರೂ. ತಗಲಬಹುದು; ಅದರಲ್ಲಿ ಸ್ಥಾವರದ ವೆಚ್ಚ, ತಯಾರಿಕೆ, ಮಜೂರಿ ಮತ್ತು ಜಾಗದ ವೆಚ್ಚ ಕೂಡ ಸೇರಿದೆ. “ದೇಶದಲ್ಲಿ ಭಾರೀ ಪ್ರಮಾಣದ ಘನತ್ಯಾಜ್ಯ ಉತ್ಪಾದಿತವಾಗುತ್ತಿರುವ ಕಾರಣ ಪ್ಲಾಸ್ಟಿಕ್ ಗುಜರಿ ಅತ್ಯಂತ ಕಡಮೆ ಬೆಲೆಗೆ ಸಿಗುತ್ತದೆ” ಎನ್ನುತ್ತಾರೆ ಗರ್ಗ್.
ರಾಜ್ಯ ರಸ್ತೆ ಸಾರಿಗೆ ನಿಗಮಗಳು, ರಕ್ಷಣಾ ಇಲಾಖೆ, ರೈಲ್ವೆ ಮುಂತಾದ ದೊಡ್ಡ ಬಳಕೆದಾರರಿಗೆ ಈ ಇಂಧನ ಅತ್ಯಂತ ಸೂಕ್ತವಾಗಬಹುದೆಂದು ನಂಬಲಾಗಿದೆ.ಅಪಾಯಕಾರಿ ತ್ಯಾಜ್ಯಗಳ (ನಿರ್ವಹಣೆ ಮತ್ತು ನಿಭಾವಣೆ) ನಿಯಮಗಳು – ೧೯೮೯ ಅದರ ಪರಿಣಾಮಕಾರಿ ಅನುಷ್ಠಾನವು ದೇಶದಲ್ಲಿ ಈಗಲೂ ಬಹುದೊಡ್ಡ ಸವಾಲಾಗಿ ಮುಂದುವರಿದಿದೆ.
ಈ ತಂತ್ರಜ್ಞಾನವನ್ನು ವಾಣಿಜ್ಯಾತ್ಮಕವಾಗಿ ಜಾರಿಗೊಳಿಸಿದಲ್ಲಿ ದೇಶದ ಪ್ಲಾಸ್ಟಿಕ್ ತ್ಯಾಜ್ಯದ ಸಮಸ್ಯೆಗೆ ದೊಡ್ಡ ಪರಿಹಾರ ಸಿಕ್ಕಿದಂತಾಗಬಹುದು.?