`ಉತ್ಥಾನ’ ತನ್ನ ಓದುಗರಿಗಾಗಿ ಏಪ್ರಿಲ್ ೨೦೧೫ರ ಸಂಚಿಕೆಯಿಂದ ಆರಂಭಿಸಿ, ಆರೋಗ್ಯ ಲಾಭಕ್ಕಾಗಿ ಯೋಗಾಭ್ಯಾಸದ ಕೆಲವು ಉಪಯುಕ್ತ ಮಾಹಿತಿಗಳನ್ನು ಚಿತ್ರಗಳೊಡನೆ ನೀಡಲಿದೆ. ಅದಕ್ಕೆ ಪೂರ್ವದಲ್ಲಿ, `ಯೋಗ’ದ ಕುರಿತಾದ ಒಂದು ಕಿರುಪರಿಚಯ ಇಲ್ಲಿದೆ.
ಯೋಗದ ಉಪಯೋಗಗಳು ಇಂದು ಜನಜನಿತ. ಆರೋಗ್ಯಲಾಭವೂ ಅದರಲ್ಲೊಂದು.
ಯೋಗವನ್ನು ಅಭ್ಯಸಿಸಲು ಬಯಸುವ ವ್ಯಕ್ತಿಗೆ ಜಾತಿ, ಧರ್ಮ, ಕುಲ ಅಥವಾ ಮತಗಳು ಅಡ್ಡಿಯಾಗುವುದಿಲ್ಲ. ಯೋಗಾಭ್ಯಾಸಕ್ಕೆ ಅಗತ್ಯವಾಗಿರುವುದು ಕೇವಲ ಅದಮ್ಯ ಉತ್ಸಾಹ, ಅಸೀಮ ಶ್ರದ್ಧೆ ಮತ್ತು ಒಬ್ಬ ಯೋಗಗುರುವಿನ ಮಾರ್ಗದರ್ಶನ ಮಾತ್ರ. ಪ್ರತಿಯೊಂದನ್ನೂ ಪರೀಕ್ಷಿಸಿಯೇ ಒಪ್ಪಿಕೊಳ್ಳುವ ಜಾಯಮಾನದ ಇಂದಿನ ಯುವಜನತೆ ಯಾವುದೇ ವಿಷಯವನ್ನು ಒಪ್ಪಿಕೊಳ್ಳುವ ಹಾಗೂ ಸ್ವೀಕರಿಸುವ ಮುನ್ನ ಅದರ ಪ್ರತಿಯೊಂದು ಆಯಾಮವನ್ನೂ ಚೆನ್ನಾಗಿ ಅರಿಯಲು ಬಯಸುತ್ತಾರೆ. ಆದ್ದರಿಂದ ಪ್ರಾಚೀನ ಜ್ಞಾನವಾದ ಯೋಗದ ಬಗ್ಗೆ ಒಂದಿಷ್ಟು ಗಮನ ಹರಿಸೋಣ.
ಯೋಗದ ಮೂಲ ನಿಖರವಾಗಿ ತಿಳಿದಿಲ್ಲವಾದರೂ, ವೇದಗಳ ಕಾಲದಿಂದಲೂ ಇದು ರೂಢಿಯಲ್ಲಿತ್ತೆಂಬುದು ತಿಳಿದುಬರುತ್ತದೆ. ವೇದಗಳು ಅತ್ಯಂತ ಪುರಾತನವಾಗಿದ್ದು ಅವುಗಳಲ್ಲಿ ಯೋಗದ ಕುರಿತಾದ ಶ್ಲೋಕಗಳು, ಸುಮಾರು ಕ್ರಿ.ಪೂ. ೩೦೦೦ಕ್ಕೂ ಮುನ್ನವೇ, ಉಲ್ಲೇಖವಾಗಿದೆ.
ಬುದ್ಧ ಹಾಗೂ ಶಂಕರಾಚಾರ್ಯರ ಕಾಲದಲ್ಲಿ ಯೋಗ ಹೆಚ್ಚು ಪ್ರಚಾರಕ್ಕೆ ಬಂತೆಂದು ಹೇಳಲಾಗುತ್ತದೆ. ಆ ಕಾಲದಲ್ಲಿ ಶಾಂತಿಯುತವಾಗಿ ಯೋಗಾಭ್ಯಾಸ ಮಾಡುತ್ತಿದ್ದ ಯೋಗಿಗಳಿಂದಾಗಿ ಇದು ಹೆಚ್ಚು ಹೆಚ್ಚು ಜನರನ್ನು ಆಕರ್ಷಿಸತೊಡಗಿತ್ತು. ಎಷ್ಟರಮಟ್ಟಿಗೆಂದರೆ, ಕ್ರಿ.ಪೂ. ೩೫೬-೩೨೩ರ ಸಮಯದಲ್ಲಿ ಜಗತ್ತನ್ನೇ ಗೆಲ್ಲಲು ಹೊರಟಿದ್ದ ಅಲೆಕ್ಸಾಂಡರ್ನಿಗೂ ಇದರ ಬಗೆಗೆ ತೀವ್ರ ಕುತೂಹಲ ಕೆರಳಿತ್ತು.
`ಯೋಗ’ದ ಮೂಲ ಸಿದ್ಧಾಂತಗಳು ಮತ್ತು ವೇದಾಂತಗಳನ್ನು ಪತಂಜಲಿ ಮುನಿ `ಯೋಗಸೂತ್ರ’ಗಳಲ್ಲಿ ಕ್ರಿ.ಶ. ೨೦೦ಕ್ಕಿಂತಲೂ ಮುಂಚೆಯೇ ದಾಖಲಿಸಿಕೊಟ್ಟಿದ್ದಾರೆ.
ಯೋಗವೆಂದರೇನು?
ಪತಂಜಲಿಯ ಯೋಗಸೂತ್ರವು ಯೋಗವನ್ನು `ಯೋಗಃ ಚಿತ್ತವೃತ್ತಿ ನಿರೋಧಃ’ – ಯೋಗವು ಮನಸ್ಸಿನ ಚಾಂಚಲ್ಯವನ್ನು ನಿಗ್ರಹಿಸುವಂತಹದ್ದಾಗಿದೆ – ಎಂದು ವ್ಯಾಖ್ಯಾನಿಸುತ್ತದೆ. ಯೋಗವು ಮೋಕ್ಷಕ್ಕೂ, ಆನಂದಕ್ಕೂ ಇರುವ ಏಕಮೇವ ಮಾರ್ಗವಾಗಿದೆ. ಯೋಗದ ಅರ್ಥವನ್ನು ಬಲ್ಲ ಕೆಲವರು ಅದನ್ನು ಇನ್ನೂ ವಿಭಿನ್ನ ಮಾರ್ಗದಲ್ಲಿ, ಹೆಚ್ಚು ಆನಂದಕರವಾಗಿ, ಆಧ್ಯಾತ್ಮಿಕ ಪ್ರಜ್ಞೆಯನ್ನು ಲೌಕಿಕದಲ್ಲಿ ಗುರ್ತಿಸುವ ಕಾರ್ಯಕ್ಕೆ ಬಳಸಿಕೊಳ್ಳುವ ನಿಟ್ಟಿನಲ್ಲಿ ಯೋಚಿಸಿದ್ದೂ ಇದೆ. ಯೋಗದ ಹಂತಗಳು ಸಾಧಕನಿಗೆ ಆಧ್ಯಾತ್ಮಿಕ ಔನ್ನತ್ಯವನ್ನು ಸಿದ್ಧಿಸುತ್ತವೆ.
ಯೋಗಾಭ್ಯಾಸದ ವಿವಿಧ ಹಂತಗಳು
ಪಾತಂಜಲಪ್ರಣೀತ ಯೋಗಾಭ್ಯಾಸದಲ್ಲಿ ಎಂಟು ಹಂತಗಳಿರುತ್ತವೆ (ಅದಕ್ಕೇ ಪಾತಂಜಲಯೋಗವನ್ನು `ಅಷ್ಟಾಂಗ ಯೋಗ’ ಎಂದೂ ಕರೆಯುತ್ತಾರೆ). ಅವುಗಳೆಂದರೆ –
೧. ಯಮ: ಇದರಲ್ಲಿ ನಾವು ಲೌಕಿಕ ಆಸಕ್ತಿ, ಆಮಿಷ, ಆಕರ್ಷಣೆಗಳನ್ನು ಹತೋಟಿಯಲ್ಲಿರಿಸಿ, ಸತ್ಯ ಹಾಗೂ ದಯಾಶೀಲ ಮಾರ್ಗವನ್ನು ಆಯ್ದುಕೊಳ್ಳುತ್ತೇವೆ.
೨. ನಿಯಮ : ಇದು ನಮಗೆ ಅಂತರ್ದೃಷ್ಟಿ, ನಿಯಂತ್ರಣಗಳನ್ನು ಅಭ್ಯಸಿಸಲು ಹಾಗೂ ವೈಯಕ್ತಿಕ ಜೀವನದಲ್ಲಿ ಪಾವಿತ್ರ್ಯತೆ ಮತ್ತು ಚಾರಿತ್ರ್ಯವನ್ನು ಪಾಲಿಸಲು ಸಹಕರಿಸುತ್ತದೆ.
೩. ಆಸನ : ಇದು ನಮ್ಮ ಮನಸ್ಸನ್ನು ಶಾಂತವಾಗಿಸುವಂತಹ ವಿವಿಧ ಆಧ್ಯಾತ್ಮಿಕ ಭಂಗಿಗಳ ಅಭ್ಯಾಸಕ್ರಮ.
೪. ಪ್ರಾಣಾಯಾಮ : ಇದು ನಮ್ಮ ಉಸಿರಾಟಕ್ರಮವನ್ನು ಸಂಸ್ಕರಿಸುತ್ತದೆ. ಕ್ರಮಬದ್ಧ ಮತ್ತು ನಿಯಂತ್ರಿತ ಉಸಿರಾಟದ ಅಭ್ಯಾಸದಿಂದಾಗಿ ಮನಸ್ಸನ್ನು ಶಾಂತಗೊಳಿಸಬಹುದಾಗಿದೆ.
೫. ಪ್ರತ್ಯಾಹಾರ : ಚಿತ್ತಚಾಂಚಲ್ಯಕ್ಕೆ ಕಾರಣವಾದ ಜ್ಞಾನೇಂದ್ರಿಯಗಳ ನಿಯಂತ್ರಣವನ್ನು ಇದು ತಿಳಿಸುತ್ತದೆ. ಮನಸ್ಸು ಸುತ್ತಣ ಜಗತ್ತಿನತ್ತ ಆಕರ್ಷಿತವಾಗಲು ಜ್ಞಾನೇಂದ್ರಿಯಗಳೇ ಮಾರ್ಗಗಳು. ಅವುಗಳನ್ನು ತನ್ನ ಅಧೀನದಲ್ಲಿರಿಸಿಕೊಳ್ಳುವುದರ ಮೂಲಕ ಮನಸ್ಸು ಏಕಾಗ್ರತೆಯತ್ತ ಸಾಗುತ್ತದೆ.
೬. ಧಾರಣ : ಪ್ರತ್ಯಾಹಾರದಿಂದ ಪಕ್ವಗೊಂಡ ಮನಸ್ಸನ್ನು ನಿರ್ದಿಷ್ಟ ದಿಕ್ಕಿನಲ್ಲಿ, ನಿರ್ದಿಷ್ಟ ವಸ್ತುವಿನ ಮೇಲೆ ಕೇಂದ್ರೀಕರಿಸುವ ಕ್ರಿಯೆ ಇದು. ಈಗಾಗಲೇ ಹಿಂದಿನ ಹಂತಗಳನ್ನು ದಾಟಿ ಬಂದಿರುವ ಮನಸ್ಸು ಈ ಹಂತದಲ್ಲಿ ಸಂಪೂರ್ಣ ಏಕಾಗ್ರತೆಯನ್ನು ಸಾಧಿಸುತ್ತದೆ. ಮುಂದಿನ ಗುರಿಯಾದ ಪರಮಾನಂದದತ್ತ ಸಾಗಲು ಸಿದ್ಧಗೊಳ್ಳುತ್ತದೆ.
೭.. ಧ್ಯಾನ : ಇದು ಸಂಪೂರ್ಣವಾಗಿ ನಮ್ಮನ್ನು ನಾವು ಮರೆತು ಭಗವಂತನ ಧ್ಯಾನದಲ್ಲಿ ತಲ್ಲೀನತೆಯನ್ನು ಹೊಂದುವುದನ್ನು ತಿಳಿಸುತ್ತದೆ.
೮. ಸಮಾಧಿ : ಧ್ಯಾನದ ಅತ್ಯುಚ್ಚಸ್ಥಿತಿ. ಮನಸ್ಸಿಗೂ ಪರಮಾತ್ಮನಿಗೂ ಭೇದವು ಇಲ್ಲವಾಗಿ, ತಾನು ಪರಮಾತ್ಮನಲ್ಲಿ ಲೀನವಾಗುವ ಸ್ಥಿತಿ.
ಇವೆಲ್ಲವನ್ನೂ ಸಾಧಿಸುವುದು ಬಾಯಲ್ಲಿ ಹೇಳುವಷ್ಟು ಸುಲಭವಲ್ಲ. ಇದಕ್ಕೆ ಕಠಿಣ ಪರಿಶ್ರಮ ಅಗತ್ಯ. ಅಸಾಮಾನ್ಯ ಧೈರ್ಯ, ಅಸೀಮ ಧೀಶಕ್ತಿ, ಗುರುಕೃಪೆ, ತ್ಯಾಗ ಮತ್ತು ಏಕಾಗ್ರತೆಯಿಂದ ಪ್ರಯತ್ನಿಸಿದಾಗ ಮಾತ್ರ ಕೈಗೂಡುವಂಥವು.?
ಯೋಗವೆಂದರೆ ಕೈಕಾಲುಗಳನ್ನು ಆಡಿಸುವುದಷ್ಟೇ ಎಂದೂ ಅರ್ಥೈಸುವವರಿದ್ದಾರೆ, ಇಂತಹ ಲೇಖನಗಳು ಒತ್ತಡದ ಬದುಕಿಗೆ ಅತ್ಯವಶ್ಯ.