ಇಂದು ನಮ್ಮ ಸಮಾಜದಲ್ಲಿ ತಾಂಡವವಾಡುವ ಭ್ರಷ್ಟಾಚಾರ, ಸ್ವಜನಪಕ್ಷಪಾತ, ಆಡಳಿತದ ಅಶಿಸ್ತು, ಅವ್ಯವಸ್ಥೆಗಳಿಂದ ರೋಸಿಹೋದ ಜನ ಇದಕ್ಕಿಂತ ಬ್ರಿಟಿಷರ ಆಳ್ವಿಕೆಯೇ ಒಳ್ಳೆಯದಿತ್ತು ಎಂದು ಆಗಾಗ ಉದ್ಗರಿಸುವುದನ್ನು ನಾವು ಕಾಣುತ್ತೇವೆ. ಸ್ವಾತಂತ್ರ್ಯಕ್ಕೆ ಯಾವುದೂ ಪರ್ಯಾಯವಲ್ಲ ಎಂಬುದು ನಿಜವಾದರೂ ಜನರಾಡುವ ಮೇಲಿನ ಮಾತಿನಲ್ಲಿ ಸತ್ಯಾಂಶವಿರುವುದು ಪರಾಂಬರಿಸಿದಾಗ ಗೋಚರವಾಗುತ್ತದೆ. ದೈನಂದಿನ ಆಡಳಿತದ ಶಿಸ್ತು-ವ್ಯವಸ್ಥೆಗಳ? ಅಲ್ಲ; ನಮ್ಮ ನೈಜಸಂಪತ್ತಾದ ನೆಲ-ಜಲಗಳ ಸಂರಕ್ಷಣೆಯಲ್ಲಿ ಕೂಡ ನಾವು ಬ್ರಿಟಿಷರಿಂದ ಹಿಂದೆ ಬೀಳುತ್ತಿದ್ದೇವೇನೋ ಅನ್ನಿಸಿದರೆ ಆಶ್ಚರ್ಯವಿಲ್ಲ. ಬ್ರಿಟಿಷರು ನಮ್ಮ ಸಂಪತ್ತನ್ನು ಲೂಟಿಮಾಡಿ ಇಂಗ್ಲೆಂಡಿಗೆ ಸಾಗಿಸಿದರೆಂಬುದರಲ್ಲಿ ಯಾವುದೇ ಸಂದೇಹವಿಲ್ಲ. ಆದರೆ ಅವರ ಆಡಳಿತಕ್ಕೆ ಅನುಕೂಲವಾಗಲೆಂದೋ ಅಥವಾ ಪ್ರಜಾಜನಕ್ಕೆ ಆನುಷಂಗಿಕವಾಗಿ ಏನಾದರೂ ಪ್ರಯೋಜನವಾದರೆ ಆಗಲಿ ಎಂದೋ ಅವರು ಕೈಗೊಂಡ ಕೆಲವು ಯೋಜನೆಗಳಿಂದ ಜನರಿಗೆ ಅನುಕೂಲವಾದದ್ದು ಸುಳ್ಳಲ್ಲ. ಸ್ವತಂತ್ರ ಭಾರತದಲ್ಲಿ ಕ್ರಮೇಣ ಅದು ಕೂಡ ಇಲ್ಲ ಎಂಬಂತಾಗಿದೆ.
ಇದೀಗ ಬಕ್ಕಿಂಗ್ಹ್ಯಾಮ್ ಕಾಲುವೆಯ ಪುನರುಜ್ಜೀವನ ಒಂದು ನೆಲೆಯಲ್ಲಿ ಆರಂಭವಾಗಿದೆ. ಭಾರತ ಒಳನಾಡು ಜಲಮಾರ್ಗ ಪ್ರಾಧಿಕಾರದ ಆಶ್ರಯದಲ್ಲಿ ಈ ಯೋಜನೆ ಸೇರಿದ್ದು, ತಮಿಳುನಾಡು ಸರ್ಕಾರ ಕೂಡ ತನ್ನ ಜಲಸಂಪನ್ಮೂಲ ಇಲಾಖೆ ಮತ್ತು ಲೋಕೋಪಯೋಗಿ ಇಲಾಖೆಗಳ ಮೂಲಕ ಹೂಳೆತ್ತುವುದು, ಕಾಲುವೆಯನ್ನು ಅಗಲಗೊಳಿಸುವುದು ಮುಂತಾದ ಕೆಲಸಗಳನ್ನು ಕೈಗೊಳ್ಳುತ್ತಿದೆ.
ಕ್ರಮೇಣ ದೂರದೃಷ್ಟಿ ಮತ್ತು ಸೂಕ್ಷ್ಮತೆ ಇಲ್ಲದವರು ಹೆಚ್ಚುಹೆಚ್ಚಾಗಿ ನಮ್ಮ ಪ್ರತಿನಿಧಿಗಳಾಗಿ ಆಯ್ಕೆಯಾಗುತ್ತಿದ್ದಾರೆ. ದೇಶದ ನೆಲ-ಜಲಗಳ ಬಗೆಗಿನ ಕಾಳಜಿಗಿಂತ ಅವರಿಗೆ ಸ್ವಂತದ್ದಾದ ಧನ-ಕನಕ ಮತ್ತು ಅಧಿಕಾರಗಳು ಮುಖ್ಯವಾಗುತ್ತಿವೆ. ಅಧಿಕಾರ ಬರುವುದು ಚುನಾವಣೆಯ ಮೂಲಕ. ಈಗ
ಚುನಾವಣೆ ಸಮೀಪಿಸಿದಾಗ ಮಾತ್ರ ಅದರ ಮೇಲೆ ಕಣ್ಣಿಡುವುದಲ್ಲ; ಅಧಿಕಾರದ ಐದು ವ?ಗಳ ಎಲ್ಲ
ದಿನ-ಮಾಸಗಳಲ್ಲೂ ಮುಂದಿನ ಚುನಾವಣೆಯೇ ದಾರಿದೀಪವಾಗಿರುತ್ತದೆ. ಅದರಂತೆ ಮತದಾರ ಪ್ರಜೆಗಳ ಓಲೈಕೆ ಅಥವಾ ತಿರಸ್ಕಾರ. ಇರಲಿ; ಬ್ರಿಟಿಷರು ಕಾರ್ಯಗತಗೊಳಿಸಿ ಜನೋಪಯೋಗಿ ಆಗುವಂತೆ ಬಳಸಿಕೊಂಡು, ಸ್ವತಂತ್ರ ಭಾರತದಲ್ಲಿ ಪೂರ್ತಿ ಅವನತಿಯನ್ನು ಕಂಡ ಒಂದು ಯೋಜನೆಯಾಗಿ ಚೆನ್ನೈ ಸೇರಿದಂತೆ ಪೂರ್ವಕರಾವಳಿಯ ೪೨೬ ಕಿ.ಮೀ. ಉದ್ದಕ್ಕೆ ಚಾಚಿಕೊಂಡಿರುವ ಬಕ್ಕಿಂಗ್ಹ್ಯಾಮ್ ಕಾಲುವೆಯನ್ನು ಹೆಸರಿಸಬಹುದು.
ಬ್ರಿಟಿಷರ ಬಳುವಳಿ
ದಕ್ಷಿಣಭಾರತದಲ್ಲಿ ಉತ್ತರದಲ್ಲಿ ಆಂಧ್ರಪ್ರದೇಶದ ಪೂರ್ವಗೋದಾವರಿ ಜಿಲ್ಲೆಯ ಕಾಕಿನಾಡಾದಿಂದ ತಮಿಳುನಾಡಿನ ವಿಳ್ಳುಪುರಂ ಜಿಲ್ಲೆಯ ಮರಕ್ಕಣಂವರೆಗೆ ಕೋರಮಂಡಲ ಕರಾವಳಿಗೆ ಸಮಾನಾಂತರವಾಗಿ ಈ ಕಾಲುವೆ ಹರಿಯುತ್ತಿದೆ. ಈ ಭಾಗದ ಹೆಚ್ಚಿನ ನೈಸರ್ಗಿಕ ಹಿನ್ನೀರುಗಳನ್ನು ಬಕ್ಕಿಂಗ್ಹ್ಯಾಮ್ ಕಾಲುವೆ ಚೆನ್ನೈ ಬಂದರಿಗೆ ಜೋಡಿಸುತ್ತದೆ. ಬ್ರಿಟಿಷ್ ಆಳ್ವಿಕೆಯ ವೇಳೆಯಲ್ಲಿ ಇದನ್ನು ನಿರ್ಮಿಸಲಾಗಿದ್ದು,೧೯ನೇ ಶತಮಾನದ ಕೊನೆಯ ಭಾಗ ಮತ್ತು ೨೦ನೇ ಶತಮಾನದ ಪೂರ್ವಾರ್ಧದಲ್ಲಿ ಇದು ಒಂದು ಪ್ರಮುಖ ಜಲಮಾರ್ಗವಾಗಿತ್ತು.
ಇದು ಸಮುದ್ರದಿಂದ ಸುಮಾರು ಒಂದು ಕಿ.ಮೀ. ಒಳಭಾಗದಲ್ಲಿದ್ದು, ಸಮುದ್ರದ ಅಲೆಗಳಿಂದ ಪ್ರಭಾವಿತ(ಟೈಡಲ್)ವಾಗಿದೆ. ಒಳನಾಡು ಸಾರಿಗೆ ಇದರ ಪ್ರಮುಖ ಉದ್ದೇಶವಾಗಿತ್ತು. ಸಮುದ್ರಕ್ಕೆ ತೆರೆದುಕೊಂಡ ವಿವಿಧ ಕಡೆಗಳಲ್ಲಿ ಫ್ಲಡ್ಗೇಟ್ಗಳಿದ್ದು ಸಮುದ್ರದಿಂದ ಬಂದ ಹೂಳು ತುಂಬದಂತೆ ತಡೆಯುವುದು ಅವುಗಳ ಉದ್ದೇಶವಾಗಿದೆ. ಈ ಫ್ಲಡ್ಗೇಟ್(ಲಾಕ್)ಗಳಿಂದಾಗಿ ನೀರಿನ ಮಟ್ಟ ಒಂದೇ ರೀತಿ ಉಳಿಯುತ್ತದೆ. ಕಾಲುವೆಯಲ್ಲಿ ಸಾಮಾನ್ಯವಾಗಿ ಇರುವುದು ಉಪ್ಪುನೀರು; ಮಳೆಗಾಲದಲ್ಲಿ ಮಳೆನೀರು ತುಂಬಿರುತ್ತದೆ. ಒಟ್ಟು ೪೨೬ ಕಿ.ಮೀ.ನಲ್ಲಿ ದಕ್ಷಿಣದ ೧೧೦ ಕಿ.ಮೀ. ಭಾಗವನ್ನು ದಕ್ಷಿಣ ಬಕ್ಕಿಂಗ್ಹ್ಯಾಮ್ ಕಾಲುವೆ ಎನ್ನುತ್ತಾರೆ. ಅದು ಕೂಡ ಟೈಡಲ್ ಕಾಲುವೆಯಾಗಿದ್ದು ಅದಕ್ಕೆ ಏಳು ಕಡೆ ಸಮುದ್ರದ ಓಪನಿಂಗ್ ಇದೆ. ಒಂದು ಕಾಲದಲ್ಲಿ ಚೆನ್ನೈ (ಅಂದಿನ ಮದ್ರಾಸ್) ಭಾಗದಲ್ಲಿ ಈ ಕಾಲುವೆಗೆ ೫,೬೦೦ ಕ್ಯುಸೆಕ್ಸ್ (ಸೆಕೆಂಡಿಗೆ ಘನ ಅಡಿ) ಸಾಮರ್ಥ್ಯವಿತ್ತು.
ಮೊದಲಿಗೆ ಬ್ರಿಟಿಷ್ ಸರ್ಕಾರ ಚೆನ್ನೈನಿಂದ ಉತ್ತರಕ್ಕೆ ಎನ್ನೋರ್ವರೆಗೆ ೧೮ ಕಿ.ಮೀ. ಉದ್ದದ ಕಾಲುವೆಯನ್ನು ತೋಡಬಯಸಿತೆಂದು ಕ್ರಿ.ಶ. ೧೮೦೧ರ ಮದ್ರಾಸ್ ಗೆಜೆಟ್ ಪ್ರಕಟಣೆ ಹೇಳುತ್ತದೆ. ೧೮೦೬ರಲ್ಲಿ ಪೂರ್ಣಗೊಂಡಾಗ ಅದರ ಹೆಸರು ಕೊಚ್ರೇನ್ ಕಾಲುವೆ ಎಂದಾಗಿತ್ತು. ಅನಂತರ ಸ್ವಲ್ಪ ಸಮಯ ಲಾರ್ಡ್ ಕ್ಲೈವ್ಸ್ ಕೆನಾಲ್ ಎಂದಾಯಿತು. ಅಂತಿಮವಾಗಿ ೧೮೭೮ರಲ್ಲಿ ಅದರ ಹೆಸರು ಬಕ್ಕಿಂಗ್ಹ್ಯಾಮ್ ಕೆನಾಲ್ ಎಂದಾಯಿತು. ಕಾರಣ ಅಂದಿನ ಮದ್ರಾಸ್ ಗವರ್ನರ್ ಬಕ್ಕಿಂಗ್ಹ್ಯಾಮ್ ಮತ್ತು ಚಾಂದೋಸ್ನ ಡ್ಯೂಕ್ನ ಆದೇಶದಂತೆ ಅದನ್ನು ನಿರ್ಮಿಸಲಾಗಿತ್ತು. ಅಂದಿನ ಭೀಕರ ಬರಗಾಲದಿಂದ ಸಂತ್ರಸ್ತರಾದ ಜನತೆಯ ಸಹಾಯಕ್ಕಾಗಿ ಅದನ್ನು ತೋಡಲಾಯಿತು. ಅಂದಿನಿಂದ ಬಕ್ಕಿಂಗ್ಹ್ಯಾಮ್ ಕಾಲುವೆ ಎಂಬ ಹೆಸರು ಶಾಶ್ವತವಾಯಿತು.
ಬ್ರಿಟಿಷರು ಮೊದಲಿಗೆ ಅದನ್ನು ಉತ್ತರದ ನದಿ ಎಂದು ಕರೆದದ್ದು ಕೂಡ ಇದೆ. ಚೆನ್ನೈ ಮತ್ತು ದಕ್ಷಿಣ ಆಂಧ್ರದ ಕರಾವಳಿಗಳನ್ನು ಆಗಾಗ ಅಪ್ಪಳಿಸುವ ಚಂಡಮಾರುತವು ಎಸಗುವ ಹಾನಿಯನ್ನು ಈ ಕಾಲುವೆ ಕಡಮೆಮಾಡಿ ರಕ್ಷಣೆ ನೀಡುತ್ತದೆಂದು ನಂಬಲಾಗಿತ್ತು.
ಹಂತಗಳಲ್ಲಿ ನಿರ್ಮಾಣ
ಉತ್ತರ ಚೆನ್ನೈನಿಂದ ಎನ್ನೋರ್ವರೆಗಿನ ೧೮ ಕಿ.ಮೀ. ಕಾಲುವೆಯನ್ನು ಬಾಸಿಲ್ ಕೊಚ್ರೇನ್ ಎಂಬಾತ ತೋಡಿಸಿದ. ಅದು ಉಪ್ಪುನೀರಿನ ಜಲಮಾರ್ಗವಾಗಿತ್ತು. ಆಂಧ್ರಪ್ರದೇಶದ ನೆಲ್ಲೂರು ಸಮೀಪದ ದುರ್ಗರಾಯಪಟ್ಟಣದವರೆಗೆ ಜಲಮಾರ್ಗವನ್ನು ರಚಿಸುವುದು ಅವನ ಉದ್ದೇಶವಾಗಿತ್ತು. ಮುಂದೆ ಅದನ್ನು ಚೆನ್ನೈನಿಂದ ೪೦ ಕಿ.ಮೀ. ಉತ್ತರದಲ್ಲಿರುವ ಪುಲಿಕಾಟ್ ಕೆರೆವರೆಗೆ ವಿಸ್ತರಿಸಲಾಯಿತು ೧೮೩೭ರಲ್ಲಿ ಮದ್ರಾಸ್ ಪ್ರೆಸಿಡೆನ್ಸಿ ಸರ್ಕಾರ ಈ ಕಾಲುವೆಯನ್ನು ವಹಿಸಿಕೊಂಡಿತು. ಉತ್ತರ, ದಕ್ಷಿಣ – ಎರಡೂ ಕಡೆ ಕಾಲುವೆಯ ವಿಸ್ತರಣೆ ಮುಂದುವರಿದು, ಉತ್ತರದಲ್ಲಿ ಕೃಷ್ಣಾನದಿ ದಂಡೆಯ ವಿಜಯವಾಡದ ತನಕ ೩೧೫ ಕಿ.ಮೀ. ಮತ್ತು ಚೆನ್ನೈನಿಂದ ದಕ್ಷಿಣದಲ್ಲಿ ಮರಕ್ಕಣಂವರೆಗೆ ೧೦೩ ಕಿ.ಮೀ. ಕಾಲುವೆಯ ಕಾಮಗಾರಿ ಪೂರ್ಣಗೊಂಡಿತು. ಕಾಲುವೆಯಲ್ಲಿ ಸಂಚಾರ ಆರಂಭವಾದಾಗ ಮೇಲೆ ಹೇಳಿದಂತೆ ಮೊದಲಿಗೆ ಲಾರ್ಡ್ ಕ್ಲೈವ್ಸ್ ಕೆನಾಲ್ ಎಂದು ಕರೆದು ಮುಂದೆ ಹೆಸರು ಬಕ್ಕಿಂಗ್ಹ್ಯಾಮ್ ಕೆನಾಲ್ಎಂ ದಾಯಿತಾದರೂ, ಆದರೂ ಚೆನ್ನೈ ಭಾಗದ ಕಾಲುವೆಯನ್ನು ೧೯ನೇ ಶತಮಾನದುದ್ದಕ್ಕೂ ಬಹುತೇಕ ಕೊಚ್ರೇನ್ಸ್ ಕೆನಾಲ್ ಎಂದೇ ಕರೆಯುತ್ತಿದ್ದರು.
೧೮೭೭ ಮತ್ತು ೧೮೭೮ರಲ್ಲಿ ಮದ್ರಾಸ್ ಭಾಗದಲ್ಲಿ ಭೀಕರ ಬರಗಾಲ ತಲೆದೋರಿತು; ೬೦ ಲಕ್ಷಕ್ಕೂ ಅಧಿಕ ಜನ ಸಾವಿಗೀಡಾದರು. ಬರಗಾಲ ಪರಿಹಾರ ಕಾಮಗಾರಿಯಾಗಿ ಅಡ್ಯಾರ್ ಮತ್ತು ಕೂವಂ ನದಿಗಳನ್ನು ಜೋಡಿಸುವ ೮ ಕಿ.ಮೀ. ಉದ್ದದ ಕಾಲುವೆ ನಿರ್ಮಾಣವನ್ನು ಕೈಗೊಳ್ಳಲಾಯಿತು; ಆಗ ಬಕ್ಕಿಂಗ್ಹ್ಯಾಮ್ ಮತ್ತು ಚಾಂದೋಸ್ನ ಡ್ಯೂಕ್ ಗವರ್ನರಾಗಿದ್ದು, ಆತನ ಆದೇಶದಂತೆ ೩೦ ಲಕ್ಷ ರೂ. ವೆಚ್ಚದ ಈ ಕಾಮಗಾರಿಯನ್ನು ಪೂರ್ಣಗೊಳಿಸಲಾಯಿತು; ಅದರಲ್ಲಿ ೨೨ ಲಕ್ಷ ರೂ.ಗಳನ್ನು ಜನರ ಕೂಲಿಗೆ ವ್ಯಯಿಸಲಾಗಿತ್ತು. ೧೮೭೮ರಿಂದ ಕಾಲುವೆಗೆ ಬಕ್ಕಿಂಗ್ಹ್ಯಾಮ್ ಕೆನಾಲ್ ಎಂಬ ಹೆಸರು ಬಂತು. ಕಾಲುವೆಯ ಮೂಲಕ ಡ್ಯೂಕ್ ಒರಿಸ್ಸಾದಿಂದ ಮದ್ರಾಸಿಗೆ ಐದು ಲಕ್ಷ ಚೀಲ ಅಕ್ಕಿ ತರಿಸಿದ.
ಕಾಲುವೆಯ ಮೂಲಕ ಉತ್ತರದಿಂದ ಆಹಾರವಸ್ತುಗಳು ಬಂದು ಲಕ್ಷಾಂತರ ಜನರ ಜೀವ ಉಳಿಯಿತೆಂದು ವಿ. ಸುಂದರಂ ಎಂಬವರು ನ್ಯೂಸ್ ಟುಡೇಯ ತಮ್ಮ ಲೇಖನದಲ್ಲಿ ಹೇಳಿದ್ದಾರೆ. ಬ್ರಿಟಿಷರು ಮದ್ರಾಸ್ ಪ್ರೆಸಿಡೆನ್ಸಿಯಲ್ಲಿ ಮಾತ್ರವಲ್ಲ; ಯಮುನಾ, ಗಂಗಾ ಮತ್ತು ಸಿಂಧೂನದೀಬಯಲುಗಳಲ್ಲಿ ಕೂಡ ಈ ರೀತಿಯ ಕಾಲುವೆಗಳನ್ನು ತೋಡಿಸಿದ್ದರು. ೧೮೮೦-೧೯೪೦ರ ಅವಧಿಯಲ್ಲಿ ಬಕ್ಕಿಂಗ್ಹ್ಯಾಮ್ ಕಾಲುವೆ ಉತ್ತಮ ಸಾರಿಗೆ ವ್ಯವಸ್ಥೆಯನ್ನು ಒದಗಿಸಿದ್ದು, ದೋಣಿಗಳಲ್ಲಿ ಜನಸಂಚಾರ ಮತ್ತು ಸರಕು ಸಾಗಾಣಿಕೆಗಳು ವ್ಯಾಪಕವಾಗಿ ನಡೆಯುತ್ತಿದ್ದವು. ೧೮೯೦ರ ಹೊತ್ತಿಗೆ ವ್ಯಾಪಾರ-ವಹಿವಾಟಿಗೆ ಬಕ್ಕಿಂಗ್ಹ್ಯಾಮ್ ಕಾಲುವೆಯಿಂದ ತುಂಬ ಪ್ರಯೋಜನವಾಗುತ್ತಿತ್ತೆಂದು ಪೌಲ್ ಹೈಲ್ಯಾಂಡ್
ಎನ್ನುವ ಲೇಖಕ ತನ್ನ‘Indian Balm’ ಎನ್ನುವ ಪುಸ್ತಕದಲ್ಲಿ ದಾಖಲಿಸಿದ್ದಾನೆ. ತುಂಬ ಮುಖ್ಯವಾದ ಅಂಶವೆಂದರೆ, ಭೀಕರ ಅತಿರೇಕಗಳಾದ ಪ್ರವಾಹ ಮತ್ತು ಬರಗಾಲಗಳನ್ನು ತಡೆಯುವಲ್ಲಿ ಬಕ್ಕಿಂಗ್ಹ್ಯಾಮ್ ಕಾಲುವೆ ಪ್ರಮುಖ ಪಾತ್ರ ವಹಿಸುತ್ತಿತ್ತು ಎಂದು ಕೂಡ ಆ ಪುಸ್ತಕ ಹೇಳಿದೆ.
ಮದ್ರಾಸಿನ ಅಗತ್ಯ
ಮದ್ರಾಸಿಗೆ ಉತ್ತಮ ನೀರು ನಿರ್ವಹಣೆ ಅಗತ್ಯವಾಗಿದ್ದು, ಪ್ರಸ್ತುತ ಕಾಲುವೆ ಅದರಲ್ಲಿ ಸಹಕರಿಸುತ್ತದೆ ಎಂದು ಆರ್ಥರ್ ಕಾಟನ್ ಹೇಳಿದ್ದಾರೆ. ೧೮೧೩ರಿಂದ ೬೪ ವರ್ಷಗಳ ಅಂಕಿ-ಅಂಶಗಳನ್ನು ಉಲ್ಲೇಖಿಸಲಾಗಿದೆ. ಚೆನ್ನೈನಲ್ಲಿ ಮಳೆ ಪ್ರಮಾಣದಲ್ಲಿ ಭಾರೀ ಅಂತರ ಇರುತ್ತದೆ. ಉದಾಹರಣೆಗೆ, ೧೮೨೭ರಲ್ಲಿ ೮೮.೪೧ ಇಂಚು ಮಳೆ ಸುರಿದರೆ ೧೮೩೨ರಲ್ಲಿ ಕೇವಲ ೧೮.೪೫ ಇಂಚು ಮಳೆ ಬಂದಿತ್ತು. ಬಕ್ಕಿಂಗ್ಹ್ಯಾಮ್ ಕಾಲುವೆ ಉತ್ತಮ ನೀರು ನಿರ್ವಹಣೆಯನ್ನೂ ಮಾಡುತ್ತಾ ಬಂದಿತ್ತು.
ಚೆನ್ನೈ ಮಧ್ಯಭಾಗದಲ್ಲಿ ಹರಿಯುವ ಕೂವಮ್ ನದಿಯು ಕಾಲುವೆ ಮತ್ತು ಬಂಗಾಳಕೊಲ್ಲಿಗಳನ್ನು ಜೋಡಿಸುತ್ತದೆ. ಕೂವಮ್ನ ಉತ್ತರದ್ದು ಉತ್ತರ ಬಕ್ಕಿಂಗ್ಹ್ಯಾಮ್ ಕಾಲುವೆಯಾದರೆ ದಕ್ಷಿಣಭಾಗ ದಕ್ಷಿಣ ಬಕ್ಕಿಂಗ್ಹ್ಯಾಮ್ಗೆ ಸೇರಿದೆ. ಕಾಲುವೆಯ ೨೫೭ ಕಿ.ಮೀ. ಆಂಧ್ರಪ್ರದೇಶದಲ್ಲಿದ್ದರೆ ೧೬೩ ಕಿ.ಮೀ. ತಮಿಳುನಾಡಿನಲ್ಲಿದೆ. ಸುಮಾರು ೩೧ ಕಿ.ಮೀ. ಚೆನ್ನೈ ನಗರದೊಳಗಿದೆ.
ಬಕ್ಕಿಂಗ್ಹ್ಯಾಮ್ ಕಾಲುವೆಯ ಮೂಲಕ ವಿಜಯವಾಡ ಮತ್ತು ಚೆನ್ನೈ ನಡುವೆ ಸರಕುಸಾಗಾಟ ದೊಡ್ಡ ಪ್ರಮಾಣದಲ್ಲೇ ನಡೆದಿತ್ತು. ಆದರೆ ಈಗ ಅದೆಲ್ಲವೂ ಗತವೈಭವ. ಕೆರೆ-ಸರೋವರಗಳು ನಿಧಾನವಾಗಿ ಕಾಲುವೆಯೊಂದಿಗೆ ಸಂಪರ್ಕ ಕಳೆದುಕೊಂಡವು. ಇದರಿಂದ ಅಂತರ್ಜಲ ಮತ್ತು ಕೆರೆಗಳ ಪೋಷಣೆಯೂ ಕಡಮೆಯಾಯಿತು. ದಿ ಹಿಂದೂ ದಿನಪತ್ರಿಕೆ ಮೇ ೧೦, ೧೯೦೦ರ ಒಂದು ಲೇಖನದಲ್ಲಿ ಕೆರೆ-ಸರೋವರಗಳು ತುಂಬಾ ಕಡಮೆ ಇವೆ ಮತ್ತು ಆಳವಿಲ್ಲ. ಅವು ಹೆಚ್ಚೇನೂ ನೀರನ್ನು ಹಿಡಿದಿಡಲಾರವು ಎಂದು ಹೇಳಿತ್ತು. ಸ್ವಾತಂತ್ರ್ಯಾನಂತರ ಬಕ್ಕಿಂಗ್ಹ್ಯಾಮ್ ಕಾಲುವೆಯ ಬಳಕೆ ಕ್ರಮೇಣ ಕಡಮೆ ಆಯಿತು. ಅದರ ಒತ್ತುವರಿ ನಡೆಯಿತು; ಕಾಲುವೆ ನೀರಿಗೆ ಕಸಹಾಕುವ ಪ್ರವೃತ್ತಿ ಹೆಚ್ಚಿತು. ಕಾಲುವೆಯ ಸರಿಯಾದ ನಿರ್ವಹಣೆ ನಡೆಯಲಿಲ್ಲ. ೧೯೬೫-೬೬ ಮತ್ತು ೧೯೭೬ರ ಚಂಡಮಾರುತಗಳು ಕಾಲುವೆಗೆ ಬಹಳಷ್ಟು ಹಾನಿ ಎಸಗಿದವು. ಚೆನ್ನೈ ನಗರದೊಳಗೆ ಒಳಚರಂಡಿ ನೀರು ಮತ್ತು ಕೈಗಾರಿಕೆಗಳ ತ್ಯಾಜ್ಯನೀರು ಕಾಲುವೆಗೆ ಸೇರಿ ಅದು ಪೂರ್ತಿ ಮಲಿನವಾಯಿತು. ಹೂಳು ತುಂಬಿ ನೀರು ಮುಂದೆ ಹರಿಯದಾಯಿತು; ಕಾಲುವೆ ಮಲೇರಿಯ ಮುಂತಾದ ರೋಗ ಹರಡುವ ಸೊಳ್ಳೆಗಳ ಆವಾಸಸ್ಥಾನವಾಯಿತು. ಉತ್ತರ ಚೆನ್ನೈ ಉಷ್ಣವಿದ್ಯುತ್ ಸ್ಥಾವರವು (ಎನ್ಸಿಟಿಪಿ) ತನ್ನ ಬಿಸಿನೀರು ಮತ್ತು ಹಾರುಬೂದಿಗಳನ್ನು ಕಾಲುವೆಗೇ ಬಿಡುತ್ತಿದೆ.
ಕೆಲವು ವರ್ಷಗಳ ಹಿಂದೆ ದಕ್ಷಿಣ ಬಕ್ಕಿಂಗ್ಹ್ಯಾಮ್ನ ೧೩ ಕಿ.ಮೀ. ಅಷ್ಟು ಭಾಗವನ್ನು ಜವಾಹರಲಾಲ್ ನೆಹರು ರಾಷ್ಟ್ರೀಯ ನಗರ ನವೀಕರಣ ಆಯೋಗದ ನೆರವಿನೊಂದಿಗೆ ನೂರು ಮೀ. ಅಷ್ಟು ಅಗಲಗೊಳಿಸಲಾಯಿತು. ಆದರೆ ನಿರಂತರವಾದ ಮೇಲ್ತನಿಖೆ ಇಲ್ಲವಾದ ಕಾರಣ ಕಾಲುವೆಗೆ ಕಸ ಸುರಿಯುವುದಾಗಲಿ, ಒಳಚರಂಡಿ ನೀರನ್ನು ಬಿಡುವುದಾಗಲಿ ನಿಲ್ಲಲೇ ಇಲ್ಲ.
ಪ್ರಕಟಣೆ ಮಾತ್ರ
ಜನವರಿ ೧, ೨೦೦೧ರಂದು ಭಾರತ ಸರ್ಕಾರ ಕಾಲುವೆ ಹಾಗೂ ಚೆನ್ನೈನ ಇತರ ಜಲಮಾರ್ಗಗಳಿಗೆ ಒಳಚರಂಡಿ ನೀರು ಬಿಡುವುದನ್ನು ತಡೆಯುವುದು, ಕಾಲುವೆಯ ಹೂಳೆತ್ತಿ ನೀರಿನ ಹರಿವನ್ನು ಸರಿಪಡಿಸುವ ಬಗ್ಗೆ ಯೋಜನೆಯೊಂದನ್ನು ಆರಂಭಿಸಿತು. ನಿಜವೆಂದರೆ, ಈ ಕಾಲುವೆಯ ಪುನರುಜ್ಜೀವನದ ಬಗ್ಗೆ ಯೋಜನೆ ಹಾಗೂ ಪ್ರಕಟಣೆಗಳಿಗೇನೂ ಕೊರತೆಯಿಲ್ಲ. ಆದರೆ ಪರಿಣಾಮಕಾರಿಯಾಗಿ ಏನೂ ಜಾರಿಯಾಗಿಲ್ಲ. ನಗರದ ತ್ಯಾಜ್ಯ ಸಹಿತವಾದ ಒಳಚರಂಡಿ ನೀರು ಸೇರುತ್ತಲೇ ಇದೆ. ದಡಗಳಲ್ಲಿ ಕಸ ಮಾತ್ರವಲ್ಲ; ಪ್ರಾಣಿಗಳ ಶವವನ್ನೂ ಎಸೆಯುತ್ತಾರೆ. ೨೦೦೬ರಲ್ಲಿ ಪ್ರಸ್ತಾವವು ಪ್ರಕಟಗೊಂಡು, ೨೦೦೮ರಲ್ಲಿ ಅಂತಿಮರೂಪ ಪಡೆದ, ರಾಷ್ಟ್ರೀಯ ಜಲಮಾರ್ಗ ಯೋಜನೆಯು ಬಕ್ಕಿಂಗ್ಹ್ಯಾಮ್ ಕಾಲುವೆಯನ್ನು ಇತರ ಕಾಲುವೆಗಳೊಂದಿಗೆ ಜೋಡಿಸುವ ಪ್ರಸ್ತಾವವನ್ನು ಒಳಗೊಂಡಿದೆ; ಆದರೆ ಅದು ಈ ತನಕ ಕಾಗದದ ಮೇಲಷ್ಟೇ ಇದೆ. ೫೦೦ ಕೋಟಿ ರೂ. ವೆಚ್ಚದಲ್ಲಿ ಕಾಲುವೆಯಲ್ಲಿ ೨ ಕಿ.ಮೀ. ಅಷಟ್ಉ ಹೂಳೆತ್ತಿ ಸರಕು ಸಾಗಿಸುವ ಬಾರ್ಜ್ಗಳು ಸರಾಗವಾಗಿ ಸಾಗುವಂತೆ ಮಾಡಬೇಕೆನ್ನುವ ಪ್ರಸ್ತಾವ ೨೦೦೨ರಲ್ಲಿ ಸೇರಿದಂತೆ ಅನೇಕ ಸಲ ಬಂದಿತ್ತು. ಚೆನ್ನೈ ಒಳಗಿನ ಭಾಗಕ್ಕೆ ಸಂಬಂಧಪಟ್ಟಂತೆ ಅದು ಸಾಧ್ಯವೇ ಎಂದು ಕೂಡ ಕೇಳಲಾಗಿತ್ತು.
೧೯೬೦ರ ದಶಕದ ಒಂದು ಭೀಕರ ಚಂಡಮಾರುತದಿಂದ ಕಾಲುವೆಯ ದಂಡೆಗಳಿಗೆ ವಿಪರೀತ ಹಾನಿಯಾಯಿತು; ಅದು ತನಕ ನಗರದ ೮ ಕಿ.ಮೀ. ಭಾಗದಲ್ಲಿ ಕೂಡ ದೋಣಿಗಳು ಸಂಚರಿಸುತ್ತಿದ್ದವು. ಕಾಲುವೆಯ ಅಕ್ಕಪಕ್ಕದಲ್ಲಿ ಕೊಳಗೇರಿ ನಿವಾಸಿಗಳು ಮನೆಮಾಡುತ್ತಲೇ ಇದ್ದರು. ನಗರದ ಒಳಚರಂಡಿಗಳ ಜೋಡಣೆಯಿಂದಾಗಿ ಜಲಮಾರ್ಗ ಕೊಳೆನೀರಿನ ಚರಂಡಿಯಾಗಿ ಮಾರ್ಪಾಟಾಯಿತು. ಕುತೂಹಲದ ಸಂಗತಿಯೆಂದರೆ ಚೆನ್ನೈ ನಗರದ ಹೊರಭಾಗದಲ್ಲಿ ಅನಂತರವೂ ಶುದ್ಧನೀರು ಹರಿಯುವುದನ್ನು ಕಾಣಬಹುದಿತ್ತು.
೧೯೮೦ರ ದಶಕದ ಹೊತ್ತಿಗೆ ಕಾಲುವೆಯ ನಗರದ ಭಾಗದಲ್ಲಿ ನೀರು ಬತ್ತಿಹೋಯಿತು. ಆಗ ಕಾಲುವೆಯ ಮೇಲ್ಭಾಗದಲ್ಲಿ ಸಾಮೂಹಿಕ ಕ್ಷಿಪ್ರ ಸಾರಿಗೆ ವ್ಯವಸ್ಥೆಯ ((Mass Rapid Transport System -ಎಂಆರ್ಟಿಎಸ್) ಮಾರ್ಗವನ್ನು ಅಳವಡಿಸಲು ನಿರ್ಧರಿಸಿದರು. ನಗರದ ರಾಜಕಾಲುವೆಗಳ ಬಗ್ಗೆ ಕಾಳಜಿ ಹೊಂದಿದ್ದವರು ಮಳೆಗಾಲದಲ್ಲಿ ಕಾಲುವೆ ಆ ಕೆಲಸವನ್ನು ಉತ್ತಮವಾಗಿ ನಿರ್ವಹಿಸುತ್ತದೆ; ಎಂಆರ್ಟಿಎಸ್ನಿಂದ ಅದಕ್ಕೆ ತೊಂದರೆ ಆಗಬಹುದು ಎಂದರು. ಆದರೆ ಅದನ್ನೂ ಅಲಕ್ಷಿಸಿ ಕಾಲುವೆಯಲ್ಲಿ ಅದರ ಪಿಲ್ಲರ್ಗಳನ್ನು ಹಾಕಿದರು; ಕೆಲವು ಕಡೆ ಅದರ ನಿಲ್ದಾಣಗಳು ಕೂಡ ಬಂದು ಕಾಲುವೆಯ ಒತ್ತುವರಿ ನಡೆಯಿತು. ಕೆಲವು ಭಾಗಗಳಲ್ಲಿ ಕಾಲುವೆಯ ಅಗಲ ೫೦ ಮೀ.ಗಿಂತ ಕಡಮೆ ಆಯಿತು; ಕಾಲುವೆಯ ಎರಡೂ ಕಡೆ ಪ್ರವಾಹ ಬರಲು ಆರಂಭವಾಯಿತು. ಅದಲ್ಲದೆ ಎಂಆರ್ಟಿಎಸ್ನ ಪಿಲ್ಲರ್ಗಳಿಂದಾಗಿ ಕಾಲುವೆಯ ಪುನರುಜ್ಜೀವನ ಕಷ್ಟವೆನಿಸಿತು. ಬಹಳಷ್ಟು ಕಡೆ ಆ ಮಾರ್ಗ ಜಲಮಾರ್ಗದ ಮೇಲೆಯೇ ಹೋಗುತ್ತದೆ. ಕಾಲುವೆಯ ವಿಸ್ತರಣೆ (ಅಗಲಗೊಳಿಸುವುದು) ಅಥವಾ ಹೂಳೆತ್ತುವುದಕ್ಕೆ ಪಿಲ್ಲರ್ಗಳು ತಡೆಯೊಡ್ಡಿವೆ. ಸರ್ಕಾರದ ವಿವಿಧ ಇಲಾಖೆಗಳು ಪರಸ್ಪರ ಹೊಂದಾಣಿಕೆ
ಇಲ್ಲದೆ ಕೆಲಸ ಮಾಡುವುದಕ್ಕೆ ಅದೊಂದು ಉದಾಹರಣೆಯಾಯಿತು.
ಸದ್ಯದ ಸ್ಥಿತಿಯಲ್ಲಿ ಪ್ರಸ್ತಾವಿತ ರಾಷ್ಟ್ರೀಕರಣ ಮತ್ತು ಅಭಿವೃದ್ಧಿ ಯೋಜನೆಯಿಂದ ಲಾಭವಾಗುವುದು ಚೆನ್ನೈ ಮಹಾನಗರದ ಹೊರಗಿನವರಿಗೆ ಮಾತ್ರ ಎಂದು ಅಭಿಪ್ರಾಯಪಡಲಾಗಿದೆ. ೨೦೦೨ರ ಯೋಜನೆಯಿಂದ ಇದು ಸ್ಪ?ವಾಗಿದೆ. ಕಾಲುವೆಯ ಜಾಲವನ್ನು ರಸ್ತೆವ್ಯವಸ್ಥೆಯೊಂದಿಗೆ ಜೋಡಿಸಬೇಕು ಎಂದರೆ ನಗರದೊಳಗೆ ಅದು ಕಾಲುವೆಯನ್ನು ಮುಟ್ಟುವುದೇ ಇಲ್ಲ. ಒಟ್ಟಿನಲ್ಲಿ ಬಕ್ಕಿಂಗ್ಹ್ಯಾಮ್ ಕಾಲುವೆಯ ಪುನರುಜ್ಜೀವನದ ಆಸೆ ಹೊಂದಿದ್ದವರಿಗೆ ಈಗ ನಿರಾಶೆ ಕವಿದಿದೆ. ೧೯೯೬ರ ಹೊತ್ತಿಗೆ ಎಂಆರ್ಟಿಎಸ್ ಅನ್ನು ತಡೆಯುವ ಪ್ರಯತ್ನವಾಗಿ ನ್ಯಾಯಾಲಯದಲ್ಲಿ ಒಂದು ಸಾರ್ವಜನಿಕ ಹಿತಾಸಕ್ತಿ ದಾವೆಯನ್ನು ಹೂಡಲಾಯಿತು; ಆದರೆ ಕಾಲುವೆಗೆ ಮಾರಕವಾದ ಯೋಜನೆಯನ್ನು ತಡೆಯಲು ಸಾಧ್ಯವಾಗಲಿಲ್ಲ. ಈಗ ಬಕ್ಕಿಂಗ್ಹ್ಯಾಮ್ ಕಾಲುವೆ ಚೆನ್ನೈನ ಅತಿ ಮಲಿನ ನೀರು ಸಾಗುವ ಮೂರು ಪ್ರಮುಖ ಮಾರ್ಗಗಳಲ್ಲಿ ಒಂದಾಗಿದೆ. ನಗರದಲ್ಲಿ ಪ್ರತಿದಿನ ಸುಮಾರು ೫೫೦ ಲಕ್ಷ ಲೀಟರ್ ಸಂಸ್ಕರಿಸದಿರುವ ಒಳಚರಂಡಿ ನೀರು ಹರಿದುಹೋಗುತ್ತದೆಂದು ಅಂದಾಜು ಮಾಡಲಾಗಿದ್ದು, ಅದರಲ್ಲಿ ಸುಮಾರು ಶೇಕಡಾ ೬೦ರಷ್ಟು ಕೊಳೆನೀರಿಗೆ ಇದೇ ಮಾರ್ಗವಾಗಿದೆ; ಈ ನೀರಿನಲ್ಲಿ ಚೆನ್ನೈ ಮಹಾನಗರ ನೀರುಸರಬರಾಜು ಮತ್ತು ಒಳಚರಂಡಿ ಮಂಡಳಿಯು (ಸಿಎಂಡಬ್ಲುಎಸ್ಎಸ್ಬಿ) ಬಿಡುವ ನೀರು ಕೂಡ ಸೇರಿದೆ.
ಸಿಯೋಲ್ ಕಂಡ ಯಶಸ್ಸು
ಕುತೂಹಲಕ್ಕೊಂದು ಹೋಲಿಕೆ ಕೊಡುವುದಾದರೆ, ದಕ್ಷಿಣ ಕೊರಿಯಾದ ಸಿಯೋಲ್ ನಗರ ತನ್ನ ಜಲಮಾರ್ಗವನ್ನು ನಿರ್ವಹಿಸಿದ ಕ್ರಮವನ್ನು ಗಮನಿಸಬಹುದು. ಅಲ್ಲಿ ಕೂಡ ಚೆನ್ನೈ ರೀತಿಯಲ್ಲೇ ನಗರದ ಮಧ್ಯೆ ಚಿಯೋಂಗ್ ಯೆಚೋನ್ ಎನ್ನುವ ಕಾಲುವೆ ಹರಿಯುತ್ತದೆ. ಸಿಯೋಲ್ ಜನಸಂಖ್ಯೆ ಒಂದು ಕೋಟಿಗೂ ಅಧಿಕ. ೧೮ನೇ ಶತಮಾನದ ಕೊನೆಯ ಹೊತ್ತಿಗೇ ಇದ್ದ ಆ ಕಾಲುವೆಯನ್ನು ನಗರದ ಜನಸಂಖ್ಯೆ ಬೆಳೆದಂತೆ ಅಲಕ್ಷಿಸಲಾಗಿತ್ತು. ತೆರೆದ ಒಳಚರಂಡಿಯ ಸ್ವರೂಪ ಪಡೆದ ಅದನ್ನು ಸ್ವಚ್ಛಗೊಳಿಸುವ ಬದಲು ಅಧಿಕಾರಿಗಳು ಕಾಂಕ್ರೀಟ್ ಹಾಸಿನಿಂದ ಮುಚ್ಚಲು ತೀರ್ಮಾನಿಸಿದರು (೧೯೭೭). ಮುಚ್ಚಿದಾಗ ಅದರ ಮೇಲೆ ೬ ಕಿ.ಮೀ. ರಸ್ತೆಯೂ ಆಯಿತು. ಆದರೆ ಅದರಿಂದ ಸಮಸ್ಯೆ ಹೆಚ್ಚಿತು.
೨೦೦೨ರಲ್ಲಿ ಅಧಿಕಾರಕ್ಕೆ ಬಂದ ಸಿಯೋಲ್ನ ಹೊಸ ಮೇಯರ್ ಕಾಲುವೆಯ ಪುನರುಜ್ಜೀವನವನ್ನು ಕೈಗೊಂಡು ಮೇಲಿನ ರಸ್ತೆಯನ್ನು ಒಡೆದರು. ಕಾಂಕ್ರೀಟ್ ಮುಚ್ಚಿಗೆಯನ್ನು ತೆಗೆದಾಗ ಜಲಮಾರ್ಗದ ಪುನರುಜ್ಜೀವನವಾಯಿತು. ಫುಟ್ಪಾತ್ಗಳು ಬಂದವು. ಅದೊಂದು ಸುಂದರ ಸಾರ್ವಜನಿಕ ಸ್ಥಳವಾಗಿ ಪ್ರವಾಸಿಗರನ್ನೂ ಆಕರ್ಷಿಸಿತು. ಪ್ರತಿದಿನ ಸುಮಾರು ೯೦ ಸಾವಿರ ಜನ ಅಲ್ಲಿಗೆ ಭೇಟಿ ಕೊಡುತ್ತಾರಂತೆ. ಒಂದು ಉತ್ತಮ ನಗರಾಭಿವೃದ್ಧಿ ಯೋಜನೆಯಾಗಿ ಅದು ಜಾಗತಿಕ ಶ್ಲಾಘನೆಯನ್ನೂ ಗಳಿಸಿತು. ಅಲ್ಲಿನ ನೈಸರ್ಗಿಕ ನೀರಿನ ಹರಿವನ್ನು ದಕ್ಷ ಒಳಚರಂಡಿ ಜಾಲವಾಗಿ ಅಭಿವೃದ್ಧಿಪಡಿಸಲಾಗಿದೆ.
ಚೆನ್ನೈ ಕಥೆ ಇದಕ್ಕೆ ವಿರುದ್ಧವಾಗಿದೆ. ಬಕ್ಕಿಂಗ್ಹ್ಯಾಮ್ ಕಾಲುವೆ ನಗರದ ಆಚೆಗೂ ಹರಿಯುತ್ತಿದ್ದು, ಹೆಚ್ಚಿನ ಸಾಧ್ಯತೆಯನ್ನು ಒಳಗೊಂಡಿದೆ. ೧೯೬೦-೬೯ರ ನಡುವೆ ಒಮ್ಮೆ ಕಾಲುವೆ ಸುಧಾರಣೆಗೆ ಮನಸ್ಸು ಮಾಡಿ, ದೋಣಿಸಂಚಾರಕ್ಕೆ ಯೋಗ್ಯಗೊಳಿಸಲು ೬೦ ಲಕ್ಷ ರೂ. ಖರ್ಚು ಮಾಡಲಾಯಿತು. ಚಿಂತಾದ್ರಿಪೇಟೆ ಮತ್ತು ಮೈಲಾಪುರಗಳಲ್ಲಿ ವಾಪು (ಕಟ್ಟೆ) ನಿರ್ಮಿಸಿದರು; ದೋಣಿ ನಡೆಸುವವರಿಗೆ ವಿಶ್ರಾಂತಿಕೊಠಡಿಗಳೂ ಆದವು. ೧೯೬೯ರ ಹೊತ್ತಿಗೆ ಜನ ದೋಣಿಸಂಚಾರ ಮತ್ತು ಕಾಲುವೆ ಬದಿಯಲ್ಲಿ ವಾಕಿಂಗ್ ಮಾಡಬಹುದೆಂದು ಯೋಚಿಸುವಾಗ ಸರ್ಕಾರ ತನ್ನ ದಾರಿಯನ್ನು ಬದಲಿಸಿತು. ಲಾರಿಗಳು ಲಭ್ಯವಿರುವ ಕಾರಣ ಜನ ಈಗ ಕಾಲುವೆಯನ್ನು ಬಳಸುವುದಿಲ್ಲ, ಆದ್ದರಿಂದ ಅದರ ಸುಧಾರಣೆ ಬೇಡವೆಂದು ತೀರ್ಮಾನಿಸಿ, ಕಾಲುವೆ ಇರುವಲ್ಲಿ ಎಂಆರ್ಟಿಎಸ್ ರೈಲ್ವೇ ಮಾರ್ಗ ಹಾಕಿದರು.
ಸುನಾಮಿಯಿಂದ ರಕ್ಷಣೆ
ಇದೆಲ್ಲದರ ನಡುವೆ, ೨೦೦೪ರ ಡಿಸೆಂಬರ್ನಲ್ಲಿ ಬಂಗಾಳಕೊಲ್ಲಿ ಕರಾವಳಿಯನ್ನು ಅಪ್ಪಳಿಸಿದ ಸುನಾಮಿಯ ವೇಳೆ ಬಕ್ಕಿಂಗ್ಹ್ಯಾಮ್ ಕಾಲುವೆ ಸಮುದ್ರದ ಅಲೆಗಳ ಕೋಪವನ್ನು ತಣಿಸಿ ಆಂಧ್ರ, ತಮಿಳುನಾಡುಗಳ ಸಾವಿರಾರು ಮೀನುಗಾರರ ಜೀವವನ್ನು ಉಳಿಸಿತು. ಹೈದರಾಬಾದಿನ ರಾಷ್ಟ್ರೀಯ ಭೂಭೌತಿಕ ಸಂಸ್ಥೆಯ ವಿಜ್ಞಾನಿ ಡಾ| ಬಿ. ಬ್ರಹ್ಮಲಿಂಗೇಶ್ವರರಾವ್ ಅವರು ಕರೆಂಟ್ ಸಯನ್ಸ್ ಪತ್ರಿಕೆಯ ಲೇಖನದಲ್ಲಿ ಅದನ್ನು ದಾಖಲಿಸಿದ್ದಾರೆ.
ಕರಾವಳಿ ಪ್ರದೇಶದ ೩೦೦ ಕಿ.ಮೀ.ನ? ಉದ್ದಕ್ಕೆ ಭೇಟಿ ನೀಡಿದ ಅವರು ಕಾಪು ವಲಯವಾಗಿ (buffer zone) ಈ ಕಾಲುವೆ ಕೆಲಸ ಮಾಡಿದ್ದನ್ನು ಗುರುತಿಸಿದರು. ಹಿಂದೂಮಹಾಸಾಗರದಲ್ಲಿ ಸಂಭವಿಸಿದ ಆ ಸುನಾಮಿಯ ವೇಳೆ ಬಕ್ಕಿಂಗ್ಹ್ಯಾಮ್ ಕಾಲುವೆ ಕಾಪು ವಲಯದಂತೆ ಕಾರ್ಯನಿರ್ವಹಿಸಿ ಕರಾವಳಿಯ ಸುಮಾರು ೩೧೦ ಕಿ.ಮೀ. ಉದ್ದಕ್ಕೂ ಸುನಾಮಿ ಅಲೆಗಳನ್ನು ನಿಯಂತ್ರಿಸಿತು (ಪೆದ್ದಗಂಜಾಂನಿಂದ ಚೆನ್ನೈವರೆಗೆ). ಕರಾವಳಿಯ ಉದ್ದಕ್ಕೂ ಕಾಲುವೆಯಲ್ಲಿ ಸುನಾಮಿ ನೀರು ತುಂಬಿದ್ದು, ಕೆಲವು ಕಡೆಗಳಲ್ಲಿ ಉಕ್ಕಿ ಹರಿದದ್ದೂ ಇದೆ; ಆದರೆ ಕೇವಲ ೧೦-೧೫ ನಿಮಿ?ಗಳಲ್ಲಿ ಆ ನೀರು ಸಮುದ್ರಕ್ಕೆ ವಾಪಸು ಹರಿದುಹೋಯಿತೆಂದು ತಮ್ಮ ವರದಿಯಲ್ಲಿ ತಿಳಿಸಿದ ಡಾ| ರಾವ್ ಈ ಕಾರಣದಿಂದ ಆಂಧ್ರ ಕರಾವಳಿ ಮತ್ತು ಚೆನ್ನೈ ಭಾಗದಲ್ಲಿ ಬಹಳಷ್ಟು ಮೀನುಗಾರರ ಜೀವ ಉಳಿಯಿತು ಎಂದಿದ್ದಾರೆ. ಸುನಾಮಿ ಅಲೆಗಳು ತಂದುಹಾಕಿದ ಮಣ್ಣು-ಕೆಸರು ತೆಗೆಯುವುದಕ್ಕೂ ಕಾಲುವೆಯಿಂದ ಸಹಾಯವಾಯಿತು. ಕಾಲುವೆಯ ಎರಡೂ ದಂಡೆಯ ಗಿಡಮರಗಳು ಕೂಡ ಸುನಾಮಿಯ ಅಬ್ಬರವನ್ನು ಕುಗ್ಗಿಸಿದವು; ಅದರಿಂದಾಗಿ ಹಲವು ಊರುಗಳಲ್ಲಿ ಹಾನಿಯು ಕನಿಷ್ಠ ಪ್ರಮಾಣದ್ದಾಗಿತ್ತು ಎಂದ ಡಾ| ಬ್ರಹ್ಮಲಿಂಗೇಶ್ವರ ರಾವ್, ಮುಂದೆ ಸಂಭವಿಸಬಹುದಾದ ಸುನಾಮಿಯಿಂದ ರಕ್ಷಣೆ ಪಡೆಯುವ ಸಲುವಾಗಿ ಈ ಕಾಲುವೆಯನ್ನು ವೇದಾರಣ್ಯಂವರೆಗೆ ಮುಂದುವರಿಸಬೇಕು ಎಂದು ಶಿಫಾರಸು ಮಾಡಿದ್ದಾರೆ. ಸುನಾಮಿ ವೇಳೆ ಸಂಭವಿಸಿದ ಭಾರೀ ಪ್ರಮಾಣದ ಸಾವು-ನೋವುಗಳನ್ನು ನೆನಪಿಸಿಕೊಂಡರೆ ಬಕ್ಕಿಂಗ್ಹ್ಯಾಮ್ ಕಾಲುವೆಯಿಂದ ಆಗಿರಬಹುದಾದ ಪ್ರಯೋಜನ ಮನದಟ್ಟಾಗುತ್ತದೆ.
2015ರ ಪ್ರವಾಹ
೨೦೧೫ರ ನವೆಂಬರ್-ಡಿಸೆಂಬರ್ಗಳಲ್ಲಿ ಚೆನ್ನೈಯನ್ನು ಮುಳುಗಿಸಿದ ಭೀಕರ ಪ್ರವಾಹದ ಸಂಬಂಧವಾಗಿ ಕೂಡ ಬಕ್ಕಿಂಗ್ಹ್ಯಾಮ್ ಕಾಲುವೆಯ ಹೆಸರು ಪ್ರಸ್ತಾವಗೊಂಡಿದೆ. ದಕ್ಷಿಣ ಚೆನ್ನೈ ಭಾಗದಲ್ಲಿ ಕಾಲುವೆಯು ನೀರನ್ನು ಹೊರಹಾಕುತ್ತದೆ. ಬಕ್ಕಿಂಗ್ಹ್ಯಾಮ್ನಿಂದ ನೀರನ್ನು ಹೊರಹಾಕುವ ಒಂದು ವಿಭಾಜಕ ಕಾಲುವೆ ಬಕ್ಕಿಯಮ್ ಮಡುವು ಬಲ್ಲಿಂದ ಸಮುದ್ರದ ಕಡೆಗಿದ್ದರೆ ದಕ್ಷಿಣ ಚೆನ್ನೈಗೆ ನೆರೆಬಾಧೆ ಇರುವುದಿಲ್ಲವೆಂದು ೨೦೧೪ರ ಒಂದು ಸಿಎಜಿ ವರದಿ ಹೇಳಿತ್ತು. ೧೦೦ ಕೋಟಿ ರೂ. ವೆಚ್ಚದ ನರ್ಮ್ (ಎನ್ಯುಆರ್ಎಂ) ಯೋಜನೆಯ ಆ ಕಾಮಗಾರಿಯನ್ನು ಸರ್ಕಾರ ಕೈಬಿಟ್ಟಿತು. ಅದನ್ನು ಮಾಡಿದ್ದಲ್ಲಿ ದಕ್ಷಿಣ ಭಾಗದ ನೀರು ೩,೫೦೦ ಕ್ಯುಸೆಕ್ಸ್ ವೇಗದಲ್ಲಿ ಹೊರಹೋಗಿ ಪ್ರವಾಹ ಉಂಟಾಗುತ್ತಿರಲಿಲ್ಲವೆಂದು ಅಭಿಪ್ರಾಯ ಪಡಲಾಗಿದೆ. ಚೆನ್ನೈ ನಗರದಲ್ಲಿ ನೆರೆ ನಿಯಂತ್ರಣ ಯೋಜನೆ ಸರಿಯಾಗಿಲ್ಲವೆಂದು ಸಿಎಜಿ ವರದಿ ಬೊಟ್ಟುಮಾಡಿದೆ. ಅದಲ್ಲದೆ ಬಕ್ಕಿಂಗ್ಹ್ಯಾಮ್ ಕಾಲುವೆಯ ಒತ್ತುವರಿ ಕೂಡ ಆ ಭೀಕರ ಪ್ರವಾಹಕ್ಕೆ ಕಾರಣವಾಗಿತ್ತು. ಪ್ರಸ್ತುತ ಸುಪ್ರೀಂಕೋರ್ಟಿನ ರಾಷ್ಟ್ರೀಯ ಹಸಿರುಪೀಠದ (National Green Tribunal) ದಕ್ಷಿಣ ವಲಯವು ಬಕ್ಕಿಂಗ್ಹ್ಯಾಮ್ ಕಾಲುವೆಯ ಪುನರುಜ್ಜೀವನ, ಅದರಲ್ಲೂ ಪರಿಸರ ಸಮಸ್ಯೆಯ ಪರಿಹಾರಕ್ಕೆ ಶ್ರಮಿಸುತ್ತಿದೆ. ರಾಜಕಾಲುವೆ, ಅಕ್ರಮ ಒಳಚರಂಡಿ ಸಂಪರ್ಕ, ಕೊಳೆನೀರಿನ ಟ್ಯಾಂಕರ್ ಮುಂತಾಗಿ ಎಲ್ಲ ಕೊಳೆನೀರು ಕಾಲುವೆಗೆ ಸೇರದಂತೆ ತಡೆಯುವುದು ದೊಡ್ಡ ಸವಾಲಾಗಿದೆ. ಕಟ್ಟಡಗಳ (ನಿರ್ಮಾಣ ಮತ್ತು ನಾಶ) ವಿವಿಧತ್ಯಾಜ್ಯಗಳನ್ನು ಕಾಲುವೆ ಬದಿಯಲ್ಲಿ ಸುರಿಯುವುದನ್ನು ತಡೆಯಲು ಪೀಠ ಕ್ರಮಕೈಗೊಳ್ಳುತ್ತಿದೆ. ಕಾಲುವೆ ಗೋಡೆಯಿಂದ ಕೇವಲ ೧೦೦ ಮೀ. ದೂರದಲ್ಲಿ ಪಂಚತಾರಾ ಹೊಟೇಲ್(ತಾರಾಮಣಿ ಬಳಗ)ಗೆ ಅವಕಾಶ ನೀಡಿದ್ದು ಹೇಗೆಂದು ಪೀಠ ಪ್ರಶ್ನಿಸಿದೆ. ಎನ್ಜಿಟಿಯಲ್ಲಿ ದಾವೆ ಹೂಡಿದ ಜವಾಹರ್ಲಾಲ್ ?ಣ್ಮುಗಂ ಅವರು ಈ ಪ್ರಕ್ರಿಯೆ ಒಂದು ಜನಾಂದೋಲನ ಆಗದ ಹೊರತು ಕಾಲುವೆಯ ಸ್ಥಿತಿ ಸುಧಾರಿಸಲಾರದು ಎಂದು ಹೇಳಿದ್ದಾರೆ. ಅಧಿಕಾರಿಗಳು ಯಾವ ಕ್ರಮ ಕೈಗೊಳ್ಳುತ್ತಿದ್ದಾರೆಂದು ಪೀಠ ನಿರಂತರ ನಿಗಾ ಇರಿಸಿದೆ. ಈಚಿನ ಒಂದು ವಿಚಾರಣೆಯಲ್ಲಿ ಅದು ಕಾಲುವೆಗೆ ತ್ಯಾಜ್ಯನೀರು ಬಿಟ್ಟವರ ಮೇಲೆ ಕೈಗೊಂಡ ಕ್ರಮದ ಬಗೆಗಿನ ವಸ್ತುಸ್ಥಿತಿ ವರದಿ ಸಲ್ಲಿಸುವಂತ ಸಿಎಂಡಬ್ಲುಎಸ್ಎಸ್ಬಿಗೆ ಸೂಚಿಸಿತ್ತು.
ಕಾಲುವೆಯ ಒಳಭಾಗದಲ್ಲಿ ನಿರ್ಮಾಣಗೊಂಡಿದ್ದ ೩೦ ಅಡಿ ರಸ್ತೆಯನ್ನು ತೆಗೆಸುವ ಬಗ್ಗೆ ಪೀಠ ಕ್ರಮ ಕೈಗೊಂಡಿದೆ. ರಿಯಲ್ ಎಸ್ಟೇಟಿನವರು ಕಾಲುವೆ ಬಳಿ ಒಂದು ದೊಡ್ಡ ಪ್ರಾಜೆಕ್ಟ್ ಕೈಗೊಂಡಿದ್ದು, ಅದರಿಂದ ನೀರಿನ ಹರಿವಿಗೆ ತಡೆ ಉಂಟಾಗುತ್ತಿತ್ತು. ಅದಕ್ಕೆ ಅನುಮತಿ ನೀಡುವ ಮುನ್ನ ಅಧಿಕಾರಿಗಳು ಸೂಕ್ತ ತಪಾಸಣೆ ನಡೆಸಿರಲಿಲ್ಲ. ಎಲ್ಲ ನಿಯಮ ಉಲ್ಲಂಘಿಸಿದ ಕಾರಣ ಅನುಮತಿಗಳನ್ನು ವಜಾಗೊಳಿಸಬೇಕೆಂದು ಪೀಠದ ಮುಂದೆ ಕೋರಲಾಗಿತ್ತು. ಸುಮಾರು ೨೮ ಎಕ್ರೆ ಜಾಗವನ್ನು ಆಕ್ರಮಿಸಲು ಉದ್ದೇಶಿಸಿದ್ದ ಆ ಪ್ರಾಜೆಕ್ಟ್ ಕಾಲುವೆಯ ಸಮೀಪವೇ ಇತ್ತು. ಅದಕ್ಕೆ ಒಂದೇ ಪ್ರವೇಶ. ಒಟ್ಟಿನಲ್ಲೀಗ ಕಾಲುವೆಗಿರುವ ಏಕೈಕ ಆಶಾಕಿರಣವೆಂದರೆ ಎನ್ಜಿಟಿ ಎಂಬಂತಾಗಿದೆ. ಆಸಕ್ತರು ಅಂತಿಮ ಪರಿಣಾಮವನ್ನು ಎದುರುನೋಡುತ್ತಿದ್ದಾರೆ.
ಸರ್ಕಾರದ ಜಲಮಾರ್ಗ-೪ ಘೋಷಣೆ (ನವೆಂಬರ್ ೨೦೦೮)ಯನ್ವಯ ಬಕ್ಕಿಂಗ್ಹ್ಯಾಮ್ ಕಾಲುವೆಯ ಪುನರುಜ್ಜೀವನ ಒಂದು ನೆಲೆಯಲ್ಲಿ ಆರಂಭವಾಯಿತು. ಭಾರತ ಒಳನಾಡು ಜಲಮಾರ್ಗ ಪ್ರಾಧಿಕಾರ (Waterways Authority of India) ದ ಆಶ್ರಯದಲ್ಲಿ ಈ ಯೋಜನೆ ಸೇರಿದ್ದು, ತಮಿಳುನಾಡು ಸರ್ಕಾರ ಕೂಡ ತನ್ನ ಜಲಸಂಪನ್ಮೂಲ ಇಲಾಖೆ ಮತ್ತು ಲೋಕೋಪಯೋಗಿ ಇಲಾಖೆಗಳ ಮೂಲಕ ಹೂಳೆತ್ತುವುದು, ಕಾಲುವೆಯನ್ನು ಅಗಲಗೊಳಿಸುವುದು ಮುಂತಾದ ಕೆಲಸಗಳನ್ನು ಕೈಗೊಳ್ಳುತ್ತಿದೆ. ರಾಜ್ಯ-ಕೇಂದ್ರ ಸಹಭಾಗಿತ್ವದ ನರ್ಮ್ ಅಡಿಯಲ್ಲಿ ದಕ್ಷಿಣ ಬಕ್ಕಿಂಗ್ಹ್ಯಾಮ್ನ ೧೩.೫ ಕಿ.ಮೀ. ಭಾಗದಲ್ಲಿ ವಿಸ್ತರಣೆ ನಡೆಯುತ್ತಿದೆ. ನರ್ಮ್ ಅಡಿಯಲ್ಲಿ ಜಲಮಾರ್ಗಗಳ ಸಮಗ್ರ ಅಭಿವೃದ್ಧಿಗೆ ೧,೪೪೮ ಕೋಟಿ
ರೂ. ಒದಗಿಸಲಾಗಿದ್ದು, ಅದರಿಂದ ಬಕ್ಕಿಂಗ್ಹ್ಯಾಮ್ ಕಾಲುವೆಗೆ ಸಾಕಷ್ಟು ಹಣ ಸಿಗಬಹುದೆಂದು ನಿರೀಕ್ಷಿಸಲಾಗಿದೆ. ಆದರೆ ಚೆನ್ನೈನ ೭ ಕಿ.ಮೀ. ಭಾಗದಲ್ಲಿ ಜನದಟ್ಟಣೆ, ಒತ್ತುವರಿ, ಎಂಆರ್ಟಿಎಸ್ ಗಳಿಂದಾಗಿ ಏನನ್ನೂ ಮಾಡಲಾಗದ ಸ್ಥಿತಿಯಿದೆ.
ಏನಿದ್ದರೂ ಸಿಯೋಲ್ನಲ್ಲಿ ಯಾವುದು ಸಾಧ್ಯವಾಗಿದೆಯೋ ಅದು ಚೆನ್ನೈಯಲ್ಲಿ ಅನುಷ್ಠಾನಕ್ಕೆ ಬರುವುದು ಕನಸಿನ ಮಾತು. ಅಂದರೆ ಬಕ್ಕಿಂಗ್ಹ್ಯಾಮ್ ಕಾಲುವೆಗೆ ಅದರ ಗತವೈಭವ ಮರಳುವುದು ಅಸಂಭವ ಎಂಬುದೇ ಹೆಚ್ಚು ಸರಿ.