ಮೊಟ್ಟಮೊದಲು ಮನುಷ್ಯ ತನ್ನ ಶ್ರಮ ಉಳಿಸಿಕೊಳ್ಳಲು ಯಂತ್ರಗಳನ್ನು ಶೋಧಿಸಿದ. ಅದೇ ಯಂತ್ರಗಳು ಮಾನವಕುಲಕ್ಕೆ ಕೊಡಲಿಪೆಟ್ಟಾಗಬಹುದೆಂಬ ಕಲ್ಪ್ಪನೆಯೂ ಅವನಿಗಿರಲಿಲ್ಲ. ಇಂದು ಯಂತ್ರಶಕ್ತಿ ಅಪಾರವಾಗಿ, ಅದ್ಭುತವಾಗಿ ಬೆಳೆದು ತನ್ನನ್ನು ಹುಟ್ಟಿಸಿದ ಮನುಷ್ಯನ ತಲೆಯನ್ನೇ ಮೆಟ್ಟಲು ಹೊರಟಿದೆ.
ಗಾಂಧಿಯವರು ಯಂತ್ರಗಳ ಉಪಯೋಗದ ಬಗ್ಗೆ ಸ್ಪಷ್ಟವಾದ ಕಲ್ಪನೆಯನ್ನು ಹೊಂದಿದ್ದರು. ಯಾವುದೇ ಕಾರಣಕ್ಕೂ, ಯಾವುದೇ ಸಂದರ್ಭದಲ್ಲೂ ಯಂತ್ರಗಳ ಬಗೆಗೆ ಅವರು ತಮ್ಮ ಅಭಿಪ್ರಾಯವನ್ನು ಬದಲಿಸಲಿಲ್ಲ. ಸಮಯ ಕಳೆದಂತೆ ಅವರ ನಿಲವು ಇನ್ನಷ್ಟು ಗಟ್ಟಿಯಾಗತೊಡಗಿತು. ಸಾಮಾನ್ಯ ಭಾರತೀಯರ ಬಡತನ ಮತ್ತು ನಿರುದ್ಯೋಗ ನಿವಾರಣೆ ಆಗಬೇಕಾದರೆ ಯಂತ್ರಗಳ ಉಪಯೋಗವನ್ನು ಆದಷ್ಟು ಕಡಮೆಮಾಡಿ ಕೊನೆಯಲ್ಲಿ ಅವುಗಳನ್ನು ಆದಷ್ಟು ತ್ಯಜಿಸಬೇಕೆಂದರು. ಭಾರತದ ಗ್ರಾಮೀಣ ಆರ್ಥಿಕವ್ಯವಸ್ಥೆ ಸುಧಾರಿಸಿ, ಬಲಶಾಲಿಯಾಗಿ, ತ್ವರಿತಗತಿಯಲ್ಲಿ ಅಭಿವೃದ್ಧಿ ಹೊಂದಿ ಸಮೃದ್ಧಶಾಲಿ ರಾಷ್ಟ್ರವಾಗಬೇಕಾದರೆ ‘ಯಂತ್ರಶಕ್ತಿ’ಯ ಉಪಯೋಗವನ್ನು ಕಡಿತಗೊಳಿಸಿ ನಮ್ಮಲ್ಲಿರುವ ಅಧಿಕ ಪ್ರಮಾಣದ ’ಮಾನವ ಶಕ್ತಿ’ಯನ್ನು ರಚನಾತ್ಮಕ ರೀತಿಯಲ್ಲಿ ಆರ್ಥಿಕ ಪ್ರಗತಿಗಾಗಿ ಉಪಯೋಗಿಸಬೇಕೆಂದು ಅವರು ಸದಾ ಹೇಳುತ್ತಿದ್ದರು. ಹೀಗೆ ಹೇಳಿದಾಕ್ಷಣ
ಗಾಂಧಿಯವರನ್ನು ’ಯಂತ್ರಗಳ ವಿರೋಧಿ’ ಎಂದು ಕರೆಯುವುದು ತಪ್ಪಾಗುತ್ತದೆ. ಯಂತ್ರಗಳ ಬಗ್ಗೆ ಗಾಂಧಿಯವರಿಗೆ ಎಂದೂ ಸಹ ದ್ವೇಷ ಮತ್ತು ವಿರೋಧವಿರಲಿಲ್ಲ. ಯಂತ್ರ-ಸಂಸ್ಕೃತಿ ಪಶ್ಚಿಮ ಮೂಲದ್ದಾಗಿರುವ ಬಗ್ಗೆ ಗಾಂಧಿ ಯಾವ ಆಕ್ಷೇಪವನ್ನೂ ಮಾಡಲಿಲ್ಲ. ಅವರು ಆಕ್ಷೇಪಿಸಿರುವುದು ಅದರ ಆರ್ಥಿಕ ಮತ್ತು ಸಾಮಾಜಿಕ ಪ್ರಭಾವ ಮತ್ತು ಪರಿಣಾಮಗಳಿಗೆ ಮಾತ್ರ. ಭಾರತದಂತಹ ಬಹುದೊಡ್ಡ ಹಾಗೂ ಗ್ರಾಮೀಣ ಆರ್ಥಿಕವ್ಯವಸ್ಥೆಯನ್ನು ಹೊಂದಿದ ದೇಶದಲ್ಲಿ ಯಂತ್ರಗಳನ್ನು ಉಪಯೋಗ ಮಾಡುತ್ತಿರುವ ರೀತಿ ಮತ್ತು ಉದ್ದೇಶಗಳ ಬಗ್ಗೆ ಅವರ ವಿರೋಧವಿತ್ತು. ಅವರ ಪ್ರಕಾರ ಯಂತ್ರಗಳ ಉಪಯೋಗ ಪ್ರತಿಯೊಂದು ದೇಶದ ಆರ್ಥಿಕ ಪರಿಸ್ಥಿತಿ, ಸಂದರ್ಭ, ಮಾನವಸಂಪನ್ಮೂಲಗಳ ದೊರಕುವಿಕೆ, ಅದರ ಸದ್ಬಳಕೆ ಮತ್ತು ಉದ್ದೇಶಗಳು ಇತ್ಯಾದಿಯನ್ನು ಅವಲಂಬಿಸಿರುತ್ತದೆ. ಅದರಿಂದ ಒಂದು ದೇಶ ಯಾವ ಪ್ರಮಾಣದಲ್ಲಿ ಯಾವಯಾವ ಕ್ಷೇತ್ರಗಳಲ್ಲಿ ಯಂತ್ರಗಳನ್ನು ಉಪಯೋಗಿಸಬೇಕೆಂಬುದು ನಿರ್ಭರವಾಗಬೇಕು ಎಂದರು. ಈ ಹಿನ್ನೆಲೆಯಲ್ಲಿ ಯಂತ್ರಗಳ ಬಳಕೆಯ ಬಗ್ಗೆ ಅವರ ವಿಚಾರಧಾರೆಯನ್ನು ಸರಿಯಾದ ರೀತಿಯಲ್ಲಿ ಅರ್ಥಮಾಡಿಕೊಳ್ಳುವುದು ಉಚಿತ. ಬದಲಾಗಿ ನಾವು ತಪ್ಪಾಗಿ ಅರ್ಥೈಸಿದರೆ ಅವರಿಗೆ ಅಪಚಾರ ಮಾಡಿದಂತೆ ಆದೀತು.
ಯಂತ್ರ ಎಂದರೇನು?
ಯಂತ್ರ ಎಂದರೇನು, ಯಂತ್ರದ ಗುರಿ ಏನು? – ಎನ್ನುವುದೇ ಬಹಳ ದೊಡ್ಡ ಪ್ರಶ್ನೆ. ’ಯಾವುದಾದರೂ ನಿರ್ದಿಷ್ಟ ಉದ್ದೇಶಕ್ಕಾಗಿ, ಶಕ್ತಿ ಅಥವಾ ಚೇತನವನ್ನು ಕೇಂದ್ರೀಕರಿಸಿ ವಿನಿಯೋಗಿಸಲು ಸಹಾಯಕವಾದ ಸಾಧನ ಅಥವಾ ಯುಕ್ತಿಗೆ ಯಂತ್ರ’ ಎಂದು ಕರೆಯುತ್ತಾರೆ; ವಿಶ್ವಕೋಶದ ಪ್ರಕಾರ “ಇಂದ್ರಿಯಶಕ್ತಿ ವೃದ್ಧಿಮಾಡಿಸುವ ಬಾಹ್ಯಚೇತನ ಸಾಧನಗಳೆಲ್ಲ ಯಂತ್ರ” ಎನ್ನುತ್ತಾನೆ ಸ್ಟುವರ್ಟ್ ಜೇಸ್. ಮಾನವಶಕ್ತಿಗೆ ಹೊರತಾಗಿ ಇದ್ದಿಲು, ನೀರು, ಎಣ್ಣೆ, ವಿದ್ಯುತ್, ವಾಯು ಮೊದಲಾದ ಶಕ್ತಿಯನ್ನು ವಿನಿಯೋಗಿಸಿ ಕಾರ್ಯಮಾಡುವುದು ’ಯಂತ್ರ’ ಎಂದೂ, ಬಾಹ್ಯಶಕ್ತಿಯ ಸಹಾಯವಿಲ್ಲದೆ ಮಾನವಶಕ್ತಿಯ ಮಾರ್ಪಾಟು ಮಾಡುವುದನ್ನು ‘ಉಪಕರಣ’ ಎಂದೂ ಹೇಳುತ್ತಾರೆ.
ಗಾಂಧಿಯವರ ಕಲ್ಪನೆಯಲ್ಲಿ ನಮ್ಮ ಈ ದೇಹವೇ ಒಂದು ಅತಿ ಸೂಕ್ಷ್ಮ ಮತ್ತು ಅದ್ಭುತವಾದ ಯಂತ್ರ. ತಿಂದ ಆಹಾರವನ್ನು ಜೀರ್ಣಮಾಡಿ ಅದನ್ನು ರಕ್ತಗತ ಮಾಡುವ ಶಕ್ತಿ ಈ ಯಂತ್ರಕ್ಕೆ ಮಾತ್ರ ಇದೆ. ಆದರೆ ಮನುಷ್ಯನಿರ್ಮಿತ ಯಂತ್ರಕ್ಕೆ ಈ ಶಕ್ತಿ ಇಲ್ಲ. ಹುಲ್ಲು ಮೇದು ಹಸು ಹಾಲನ್ನು ಕೊಡುತ್ತದೆ. ಆದರೆ ಹುಲ್ಲಿನಿಂದ ಹಾಲು ಮಾಡುವ ಯಂತ್ರ ಇನ್ನೂ ನಿರ್ಮಾಣವಾಗಿಲ್ಲ. ಹಲ್ಲಿನ ಸಂದಿಯಲ್ಲಿ ಸೇರಿರುವ ಕಸ ತೆಗೆಯುವ ಹುಲ್ಲುಕಡ್ಡಿಯೂ ಒಂದು ಯಂತ್ರ. ಚರಕವೂ ಒಂದು ಯಂತ್ರ, ಕಲೆಯ ಒಂದು ಸುಂದರವಾದ ಕೃತಿ. ದೇಹಯಂತ್ರ ದೈವ ನಿರ್ಮಿತ; ಆದರೆ ಉಳಿದ ಯಂತ್ರಗಳು ಮಾನವನಿರ್ಮಿತವಾದವುಗಳು.
ಉದ್ದೇಶ
ಮಾನವ ತನ್ನ ಶಾರೀರಿಕ ಶ್ರಮವನ್ನು ಹಗುರ ಮತ್ತು ಕಡಮೆಮಾಡುವ ಉದ್ದೇಶದಿಂದ ಯಂತ್ರಗಳನ್ನು ನಿರ್ಮಿಸಿದ. ವ್ಯಕ್ತಿಯ ದುಡಿತ ಕಡಮೆಮಾಡುವುದು ಮೂಲಉದ್ದೇಶವಾಗಿತ್ತು. ಮಾನವಕಲ್ಯಾಣವೇ ಯಂತ್ರೋಪಯೋಗದ ಮುಖ್ಯ ಗುರಿಯಾಗಬೇಕು. ಅವುಗಳು ಮಾನವನ ಮೇಲೆ ಸವಾರಿಮಾಡಿ ತಮ್ಮ ಪ್ರಭುತ್ವವನ್ನು ಸ್ಥಾಪಿಸಬಾರದು. ಮಾನವನು ಯಂತ್ರಗಳ ದಾಸನಾಗಬಾರದು. ಸಮಾಜಸೇವೆಗಾಗಿ ಯಂತ್ರಗಳು ಸಮಾಜಸೇವಕನಂತಿರಲಿ.
ಗಾಂಧಿಯವರ ದೃಷ್ಟಿಯಲ್ಲಿ, ಎಂದು ಯಂತ್ರಗಳು ಮಾನವನ ವ್ಯಕ್ತಿತ್ವವನ್ನು ತುಳಿಯಲು ಪ್ರಾರಂಭಿಸುತ್ತವೆಯೋ ಅಂದೇ ಅವು ಅವನ ಕಡುವೈರಿ, ತ್ಯಾಜ್ಯಯೋಗ್ಯ. ಮನುಷ್ಯನ ವ್ಯಕ್ತಿತ್ವಕ್ಕೆ ಅಡ್ಡಿ ಬಂದರೆ ಯಂತ್ರಗಳು ಅಲ್ಲಿಗೇ ಕಡೆ. ಮನುಷ್ಯನಿಗೆ ನೆರವಾಗುವುದನ್ನು ಬಿಟ್ಟು ಅವನ ಸಂಗಡ ಕುಸ್ತಿಗೆ ನಿಂತರೆ ಯಂತ್ರಗಳಿಗದು ಕೊನೆ. “ಯಂತ್ರಗಳು ಮಾನವನ ಶಕ್ತಿಯನ್ನು ಕುಂದಿಸಿ ಅವನು ಯಂತ್ರಗಳ ಗುಲಾಮನಾಗುವುದನ್ನು ನಾನು ಸಮರ್ಥಿಸುವುದಿಲ್ಲ, ಮೊದಲು ಮನುಷ್ಯನಿಗೆ ಗೌರವದ ಸ್ಥಾನ. ವ್ಯಕ್ತಿಗೇ ಪರಮ ಲಕ್ಷ್ಯ. ಯಂತ್ರಗಳು ಮಾನವನ ಕೈಕಾಲುಗಳನ್ನು ಕಟ್ಟಿಹಾಕಿ ಅವನ ಅವಯವಗಳನ್ನು ನಿಷ್ಪ್ರಯೋಜಕಗೊಳಿಸಬಾರದು” (Collected Works of Mahatma Gandhi, Vol. 25, p. 251).
ಒಬ್ಬ ಶ್ರಮಿಕನ ಶ್ರಮ ಉಳಿತಾಯ ಮಾಡುವುದು ಹಾಗೂ ಪ್ರಾಮಾಣಿಕ ಮಾನವೀಯತೆಯ ಪರಿಗಣನೆ ಯಂತ್ರಗಳ ಮುಖ್ಯ ಉದ್ದೇಶವಾಗಬೇಕು. ದುರಾಸೆ ಉದ್ದೇಶವಾಗಬಾರದು. ಪ್ರೀತಿಯಿಂದ ದುರಾಸೆಯನ್ನು ದೂರಮಾಡಿದಾಗ ಎಲ್ಲವೂ ಸರಿಹೋಗುವುದು (Ibid, p. 252).
ಎಂತಹ ಯಂತ್ರಗಳ ಆವಶ್ಯಕತೆ – ಸಮರ್ಥನೆ
ಗಾಂಧಿಯವರು “ಯಾವ ಯಂತ್ರಗಳು ಎಲ್ಲರಿಗೂ ಉಪಯೋಗಕರವಾಗುತ್ತವೆಯೋ ಅವು ನ್ಯಾಯಯುತವಾಗಿರುತ್ತವೆ. ಯಂತ್ರಗಳಿರುವುದು ಮಾನವನ ಉಪಯೋಗಕ್ಕೆ. ಮಾನವನು ಯಂತ್ರಗಳಿಗಾಗಿ ಅಲ್ಲ. ಯಾವ ಯಂತ್ರಗಳು ಮಾನವನ ಶ್ರಮವನ್ನು ಹೆಚ್ಚು ಉಪಯೋಗವಾಗುವಂತೆ ಮಾಡುತ್ತವೆಯೋ, ಅವನ ಕಾರ್ಯಕ್ಷಮತೆ ಹಾಗೂ ಕರ್ತೃತ್ವಶಕ್ತಿಯನ್ನು ಹೆಚ್ಚಿಸಲು ಸಹಕಾರಿಯಾಗುತ್ತವೆಯೋ, ಹೆಚ್ಚಿನ ಉದ್ಯೋಗಗಳನ್ನು ನಿರ್ಮಿಸಲು ಸಹಕಾರಿಯಾಗುತ್ತವೆಯೋ, ಮಾನವನನ್ನು ಯಂತ್ರಗಳ ಒಡೆಯನನ್ನಾಗಿ ಮಾಡುತ್ತವೆಯೋ ಅಂತಹ ಯಂತ್ರಗಳನ್ನು ನಾನು ಹಾರ್ದಿಕವಾಗಿ ಸ್ವಾಗತಿಸುತ್ತೇನೆ. ಭಾರತದ ದಟ್ಟದಾರಿದ್ರ್ಯ ಮತ್ತು ನಿರುದ್ಯೋಗದ ಸಮಸ್ಯೆಗಳನ್ನು ಯಂತ್ರಗಳು ಹೋಗಲಾಡಿಸುವ ಹಾಗಿದ್ದರೆ ಅತ್ಯಂತ ದೃಢವಾಗಿ ನಾನು ಯಂತ್ರಗಳನ್ನು ಸಮರ್ಥಿಸಲು ಸಿದ್ಧನಿದ್ದೇನೆ” (ಯಂಗ್ ಇಂಡಿಯಾ, ೩.೧೧. ೧೯೨೧) ಎಂದರು.
ಮೊಟ್ಟಮೊದಲು ಮನು? ತನ್ನ ಶ್ರಮ ಉಳಿಸಿಕೊಳ್ಳಲು ಯಂತ್ರಗಳನ್ನು ಶೋಧಿಸಿದ. ಅದೇ ಯಂತ್ರಗಳು ಮಾನವಕುಲಕ್ಕೆ ಕೊಡಲಿಪೆಟ್ಟಾಗಬಹುದೆಂಬ ಕಲ್ಪನೆಯೂ ಅವನಿಗಿರಲಿಲ್ಲ. ಇಂದು ಯಂತ್ರಶಕ್ತಿ ಅಪಾರವಾಗಿ, ಅದ್ಭುತವಾಗಿ ಬೆಳೆದು ತನ್ನನ್ನು ಹುಟ್ಟಿಸಿದ ಮನುಷ್ಯನ ತಲೆಯನ್ನೇ ಮೆಟ್ಟಲು ಹೊರಟಿದೆ. ಇದರಿಂದಾಗಿ ಆರ್ಥಿಕ ವಿಷಮತೆ ಜಗತ್ತಿನಲ್ಲಿ ತಾಂಡವವಾಡುತ್ತಿದ್ದು, ಅದರ ದುಷ್ಪರಿಣಾಮ ಭಾರತದ ಮೇಲೂ ಆಗಿದೆ. ಇದನ್ನು ಕಂಡ ಗಾಂಧಿ ಈ ಅನಾಹುತವನ್ನು ತಪ್ಪಿಸಲು ವಿಧವಿಧವಾದ ಹಂಚಿಕೆಹೂಡಿ ಅದನ್ನು ತೊಲಗಿಸಲು ತಮ್ಮ ಆಯುಷ್ಯಪೂರ್ತಿ ಆಗ್ರಹಿಸಿದರು. ಮನುಷ್ಯಬಲದಿಂದ ಉದ್ಯೋಗ ಸಾಧ್ಯವಾಗುವ ಕಡೆಯಲ್ಲೆಲ್ಲ ಯಂತ್ರಗಳ ಬಳಕೆ ಬೇಡ; ಆದರೆ ಮನುಷ್ಯಕಲ್ಯಾಣವನ್ನು ಬಯಸುವ ಮಾನವಕುಲಕ್ಕೆ ಅನಿವಾರ್ಯವಾದ ಕಡೆಗಳಲ್ಲಿ ಮಿತಿ ಅರಿತು ಯಂತ್ರಗಳನ್ನು ಬಳಸಬಹುದು – ಎಂದರು. ಯಂತ್ರಗಳ ಉಪಯೋಗಕ್ಕೆ ಮಾನದಂಡವೆಂದರೆ ಅವು ಮಾನವನ ಶ್ರಮಭಾರ ಕಡಮೆ ಮಾಡಬೇಕು, ಉತ್ಪಾದನೆ ಹೆಚ್ಚಿಸಬೇಕು ಹಾಗೂ ಅವುಗಳಿಂದ ಯಾರೂ ಸಹ ನಿರುದ್ಯೋಗಿಗಳಾಗಬಾರದು (Atma Jnana and Vijnana, 1964, p. 140).
ಒಂದು ಕಾಲದಲ್ಲಿ ಯಂತ್ರಗಳು ಮಾನವನಿಗೆ ಸಹಕಾರಿಗಳಾಗಿದ್ದುವು. ಆದರೆ ಇಂದಿನ ರೋಬೋ ಯುಗದಲ್ಲಿ ಯಂತ್ರಗಳು ಮಾನವನ ಸ್ಥಾನವನ್ನೇ ಕಸಿದುಕೊಳ್ಳುತ್ತಿವೆ. “ನಾನು ಅತ್ಯಂತ ಸ್ಪಷ್ಟವಾಗಿ ಹೇಳುವುದೇನೆಂದರೆ ಇಂದಿನ ಯಂತ್ರಯುಗವು ಮಾನವನನ್ನು ಯಂತ್ರಗಳನ್ನಾಗಿ ಪರಿವರ್ತನೆ ಮಾಡುವ ಉದ್ದೇಶವನ್ನು ಹೊಂದಿದೆ. ಆದರೆ ನಾನು ಯಂತ್ರಪರಿವರ್ತಿತ ಮನು?ನನ್ನು ಅವನ ಮೊದಲಿನ ಸ್ಥಾನದಲ್ಲಿ ಪ್ರತಿಷ್ಠಾಪಿಸಲು ಪುನಃಪ್ರಯತ್ನ ಮಾಡುತ್ತಿರುವೆ” (Collected Works of Mahatma
Gandhi, Vol. – 12, p. 142).
“ನಮ್ಮ ದೇಶದಲ್ಲಿರುವ ೩೦ ಲಕ್ಷ ಶ್ರಮಿಕರು ಆಲಸಿಗಳೂ, ನಿರುದ್ಯೋಗಿಗಳೂ ಆಗದೆ ಕೇವಲ ೩೦,೦೦೦ ಶ್ರಮಿಕರು ಎಲ್ಲ ಭಾರತೀಯರ ಅಗತ್ಯಗಳನ್ನು ಪೂರೈಸುವ ವಸ್ತುಗಳ ಉತ್ಪಾದನೆ ಮಾಡಲು ಸಾಧ್ಯವಾದರೆ ಆಗ ಯಂತ್ರಗಳ ಬಳಕೆಗೆ ನನ್ನದೇನೂ ವಿರೋಧವಿಲ್ಲ” (ಹರಿಜನ, ೧೯೩೮).
“ವಿವೇಚನೆ ಇಲ್ಲದೆ ಯಂತ್ರಗಳ ಸಂಖ್ಯೆಯನ್ನು ಗುಣಿಸುವುದಕ್ಕೆ ನನ್ನ ವಿರೋಧವಿದೆ. ಕಣ್ಣುಕುಕ್ಕುವಂತಹ ಅವುಗಳ ಕೆಲಸಕ್ಕೆ ನನ್ನ ಸಹಮತವಿಲ್ಲ. ನಾನು ಯಾವ ಹೊಂದಾಣಿಕೆಯನ್ನೂ ಮಾಡದೆ ಎಲ್ಲ ರೀತಿಯ ವಿನಾಶಕಾರಿ ಯಂತ್ರಗಳನ್ನು ವಿರೋಧಿಸುತ್ತೇನೆ. ಆದರೆ ಯಾವ ಸರಳ, ಸುಲಭ ಸಾಧನ ಸಲಕರಣೆಗಳು ಒಬ್ಬ ಮನುಷ್ಯನ ಶ್ರಮ ಮತ್ತು ಲಕ್ಷಾಂತರ ಮನೆಗಳ ಭಾರವನ್ನು ಕಡಮೆ ಮಾಡುತ್ತವೆಯೋ ಅಂತಹ ಯಂತ್ರಗಳನ್ನು ನಾನು ಸ್ವಾಗತಿಸುತ್ತೇನೆ” (ಯಂಗ್ ಇಂಡಿಯಾ, ೧೭.೬.೧೯೨೬, ಪು. ೨೧೮).
ವಿಜ್ಞಾನದ ಸತ್ಯಸೂತ್ರಗಳು ಮತ್ತು ಸಂಶೋಧನೆಗಳು ಮಾನವನ ಲೋಭದ ಸಾಧನಗಳಾಗಬಾರದು. ಮೊದಲು ಇದು ನಿಲ್ಲಬೇಕು. ಆಗ ಶ್ರಮಿಕರು ಅಗತ್ಯಕ್ಕಿಂತ ಹೆಚ್ಚು ದುಡಿಯುವ ಅಗತ್ಯವಿರುವುದಿಲ್ಲ. ಯಂತ್ರಗಳು ಆಗ ಅವರ ಕೆಲಸದಲ್ಲಿ ಅಡಚಣೆಯಾಗದೆ ಸಹಾಯಕವಾದೀತು. “ನಾನು ಎಲ್ಲ ರೀತಿಯ ಯಂತ್ರಗಳನ್ನು ನಿರ್ಮೂಲ ಮಾಡಿ ಎಂದು ಹೇಳುವುದಿಲ್ಲ. ಆದರೆ ಅವುಗಳ ಉಪಯೋಗಕ್ಕೆ ಒಂದು ಮಿತಿ ಇರಲಿ ಎಂದಷ್ಟೇ ಹೇಳುತ್ತೇನೆ. ನಾವು ತರ್ಕಬದ್ಧವಾಗಿ ಯೋಚಿಸಿದರೆ ನಮ್ಮ ಕೆಲಸಗಳಲ್ಲಿ ತೊಡಕನ್ನುಂಟುಮಾಡುವ ಎಲ್ಲ ರೀತಿಯ ಯಂತ್ರಗಳ ಉಪಯೋಗವನ್ನು ನಿಲ್ಲಿಸಬೇಕು ಅಷ್ಟೆ.”
ಗಾಂಧಿಯವರ ದೃಷ್ಟಿಯಲ್ಲಿ ಪರಮ ಪ್ರಧಾನವಾದುದು – ಮಾನವಜೀವನ; ಯಂತ್ರಗಳು ಅವನಿಗೆ ಸಹಾಯಕವಾಗಿ ಅವನ ಜೀವನದ ಉದ್ದೇಶಗಳನ್ನು ಪೂರೈಸಲು ಸಹಕಾರಿಯಾಬೇಕು. ಅವುಗಳು ಮನುಷ್ಯನ ಕೈಕಾಲುಗಳನ್ನು ಕ್ಷೀಣಿಸುವಂತೆ ಮಾಡತಕ್ಕದ್ದಲ್ಲ. ಮಾನವನ ಪ್ರಾಥಮಿಕ ಆವಶ್ಯಕತೆಗಳನ್ನು ಪೂರೈಸುವ ಯಂತ್ರಗಳ ಅಗತ್ಯವಿದೆ. ಉದಾಹರಣೆಗೆ ಸೂಜಿ. ನಮ್ಮ ಬಾಳಿನಲ್ಲಿ ಅದರ ಅಗತ್ಯ ಅನಿವಾರ್ಯ. ಅದೇ ರೀತಿ ಮಾನವನ ಬದುಕಿಗೆ ದಾರಿ ತೋರುವ ರೈಲುಗಾಡಿ, ದೂರವಾಣಿ, ಗಡಿಯಾರ, ಬೆರಳಚ್ಚುಯಂತ್ರ, ಬೈಸಿಕಲ್ಲು ಇತ್ಯಾದಿಗಳನ್ನು ಗಾಂಧಿಯವರು ಸಮರ್ಥಿಸುತ್ತಿದ್ದರು. ಬಟ್ಟೆ ಹೊಲಿಯುವ ಸಿಂಗರ್ಯಂತ್ರ ಇದೆಯಲ್ಲ. ಮನುಷ್ಯ ಕಂಡುಹಿಡಿದ ಅನೇಕ ವಸ್ತುಗಳಲ್ಲಿ ಇದರಷ್ಟು ಉಪಯುಕ್ತವಾದುದು ಕೆಲವೇ. ಈ ಯಂತ್ರದ ಹುಟ್ಟಿನ ಬಗೆಗೆ ಒಂದು ರೋಮಾಂಚಕಾರಿ ಕಥೆ ಇದೆ. ತನ್ನ ಹೆಂಡತಿ ಅತಿಪ್ರಯಾಸದಿಂದ ಬಟ್ಟೆಯನ್ನು ಕತ್ತರಿಸಿ, ಜೋಡಿಸಿ ಹೊಲಿಯುತ್ತಿದ್ದುದನ್ನು ಕಂಡು ಅವಳ ಅನವಶ್ಯ ಶ್ರಮವನ್ನು ಉಳಿತಾಯ ಮಾಡುವ ಸಲುವಾಗಿ ಆಕೆಯ ಮೇಲಿನ ಪ್ರೀತಿಯಿಂದ ಸಿಂಗರ್ ಹೊಲಿಗೆಯಂತ್ರವನ್ನು ಕಂಡುಹಿಡಿದ. ಕೇವಲ ಅವಳೊಬ್ಬಳಿಗೆ ಮಾತ್ರವಲ್ಲದೆ, ಆ ಯಂತ್ರವನ್ನು ಖರೀದಿ ಮಾಡಿದ ಎಲ್ಲರ ಶ್ರಮವನ್ನು ಕಡಮೆ ಮಾಡಿದ. ಗಾಂಧಿಯವರು ಈ ಹೊಲಿಗೆ ಯಂತ್ರದ ಬಗ್ಗೆ ಈ ರೀತಿ ಹೇಳುತ್ತಾರೆ – ’ಇದರಲ್ಲಿ ಮಾನವಕೋಟಿಯ ಕಲ್ಯಾಣವಿದೆ. ಇದು ಕೇವಲ ಯಂತ್ರವಲ್ಲ, ಮಾನವನಿಗೆ ಜೀವನೋಪಾಯ ಕಲ್ಪಿಸುವ ಕಾಮಧೇನು.’
“ಸರ್ಕಾರದ ಅಧೀನದಲ್ಲಿ ಇಂತಹ ಜೀವನೋಪಾಯ ಕಲ್ಪಿಸುವ ಯಂತ್ರಗಳನ್ನು ತಯಾರಿಸುವ ಕಾರ್ಖಾನೆಗಳು ಹೆಚ್ಚಾಗಿ ಬೆಳೆಯಲಿ ಎನ್ನುವಷ್ಟರ ಮಟ್ಟಿಗೆ ನಾನು ಸಮಾಜವಾದಿ” ಎಂದರು ಗಾಂಧಿ. ಸರ್ಕಾರೀ ಕ್ಷೇತ್ರದಲ್ಲಿ ಆದರ್ಶ ರೀತಿಯಲ್ಲಿ ಆಕರ್ಷಕವಾಗಿ ಇದನ್ನು ನಡೆಸಬೇಕು. ಅದರ ಮೂಲಸೂತ್ರ ಲಾಭದ ದುರಾಸೆಯಲ್ಲ, ಮಾನವಕಲ್ಯಾಣವಾಗಬೇಕು. ಲೋಭದ ಜಾಗವನ್ನು ಪ್ರೇಮ ತುಂಬಬೇಕು. “ಶ್ರಮಿಕರು ಕೆಲಸ ಮಾಡುವ ಪರಿಸರ ಸುಧಾರಿಸಬೇಕು. ನಾಗಾಲೋಟದಲ್ಲಿ ಧನಸಂಗ್ರಹ ಮಾಡುವ ಹುಚ್ಚು ನಿಲ್ಲಬೇಕು. ಕೂಲಿಕಾರನಿಗೆ ಬಾಳಗೂಲಿ ಸಿಗುವುದಷ್ಟೇ ಅಲ್ಲ, ದಿನನಿತ್ಯದ ಅವನ ಕೆಲಸ ಬೇಸರವಾಗಿ ಹೊರೆಯಾಗಬಾರದು. ಹೀಗಾದರೆ ಕೂಲಿಕಾರನಿಗೂ, ಯಂತ್ರದ ಒಡೆಯನಿಗೂ ಮತ್ತು ರಾಷ್ಟ್ರಕ್ಕೂ ಒಳಿತು ಆದೀತು. ಈಗಿನ ಹುಚ್ಚು ಆವೇಗ ನಿಂತು ಕೂಲಿಕಾರರು ನನ್ನ ಅಭಿಪ್ರಾಯದಂತೆ ಆಕರ್ಷಕ, ಆದರ್ಶ ಪರಿಸ್ಥಿತಿಯಲ್ಲಿ ಕೆಲಸ ಮಾಡಿಯಾರು. ಹೊಲಿಗೆಯಂತ್ರದ ಆವಿಷ್ಕಾರದ ಹಿಂದೆ ಪ್ರೀತಿ ಇತ್ತು. ಮಾನವನ ದುರಾಸೆ ಮತ್ತು ಲೋಭದ ಬದಲು ವ್ಯಕ್ತಿಯ ದುಡಿತದ ಶ್ರಮ ಕಡಮೆ ಮಾಡುವುದೇ ಯಂತ್ರಗಳ ಉದ್ದೇಶವಾಗಿರಬೇಕು. ಉದಾಹರಣೆಗೆ ವಕ್ರವಾಗಿರುವ ಕದಿರುಕಂಬಿ (ನೂಲು ತಿರುಪುವ ಮತ್ತು ಸುತ್ತುವ ಸಲಕರಣೆ)ಗಳನ್ನು ನೇರ ಮಾಡುವಂತಹ ಯಂತ್ರಗಳು ಬಂದರೆ ನನಗೆ ಸಂತೋಷ. ಕಮ್ಮಾರರು ಕದಿರುಕಂಬಿಗಳನ್ನು ಮಾಡಲಿ. ಯಾವಾಗ ಅದು ಕೆಟ್ಟುನಿಂತು ತಮ್ಮ ಕೆಲಸ ನಿಲ್ಲಿಸಿಬಿಡುತ್ತದೆಯೋ ಆಗ ಪ್ರತಿ ಕದಿರುಕಂಬಿಗಳನ್ನು ನೇರ ಮಾಡುವಂತಹ ಯಂತ್ರಗಳು ಬರಲಿ. ಆಗ ಕೆಲಸ ಸಲೀಸಾದೀತು. ದುರಾಶೆಯ ಬದಲು ಪ್ರೀತಿ ಇರಲಿ. ಆಗ ಎಲ್ಲವೂ ಸರಿಯಾದೀತು” (ಯಂಗ್ ಇಂಡಿಯಾ, ೧೩-೧೧-೧೯೨೪, ಪು. ೩೭೮).
ಜೀವನಾವಶ್ಯಕ ವಸ್ತುಗಳನ್ನು ಉತ್ಪಾದನೆ ಮಾಡಲು ಜನ-ಬಾಹುಳ್ಯ ತಂತ್ರಜ್ಞಾನವನ್ನು ಬಳಸಬೇಕೆಂದು ಗಾಂಧಿಯವರು ಆಗ್ರಹಿಸುತ್ತಿದ್ದರು. ನಿಜ, ಯಂತ್ರಗಳು ಮಾನವರ ಶ್ರಮ ಮತ್ತು ಸಮಯವನ್ನು ಉಳಿತಾಯ ಮಾಡುತ್ತವೆ. ಎಂತಹ ಯಂತ್ರಗಳನ್ನು ನಾವು ಉಪಯೋಗಿಸಬೇಕೆಂದರೆ ಅವುಗಳು ಸರಳವಾಗಿದ್ದು ಸ್ಥಳೀಯವಾಗಿ ಅವುಗಳನ್ನು ದುರಸ್ತಿ ಮಾಡುವಂತಿರಬೇಕು. ಯಾವುದೇ ಕಾರಣಕ್ಕೂ ಯಂತ್ರಗಳು ಸಂಪತ್ತನ್ನು ಕೆಲವೇ ವ್ಯಕ್ತಿಗಳ ಕೈಯಲ್ಲಿ ಶೇಖರಣೆ ಆಗಲು ಸಹಾಯ ಮಾಡುವಂತಿರಬಾರದು ಮತ್ತು ಕಾರ್ಮಿಕರ ಶೋ?ಣೆಗೆ ಎಡೆ ಮಾಡಿಕೊಡುವಂತಿರಬಾರದು. ಯಂತ್ರಗಳ ಬಳಕೆ ಆಯಾ ದೇಶಗಳ ಸಾಂಸ್ಕೃತಿಕ ಮತ್ತು ಆರ್ಥಿಕ ವ್ಯವಸ್ಥೆಗೆ ತಕ್ಕಂತೆ ಇರಬೇಕು. ಸತ್ಯ ಮತ್ತು ಅಹಿಂಸೆಗಳ ತತ್ತ್ವವನ್ನು ಪೋಷಿಸುವಂತಿರಬೇಕು. ಅನವಶ್ಯ ಉತ್ಪಾದನೆ ಮತ್ತು ಕೃತಕ ಬೇಡಿಕೆಗಳ ನಿರ್ಮಿತಿಯಿಂದ ಕೊಳ್ಳುಬಾಕಸಂಸ್ಕೃತಿಯ ಉದಯವಾಗಿರುವುದರಿಂದ ಯಂತ್ರಗಳು ಅದಕ್ಕೆ ಪೂರಕವಾಗಿರಬಾರದು. ಎಲ್ಲ ರೀತಿಯ ಸಂಶೋಧನೆಗಳ ಉದ್ದೇಶ ಮಾನವಕಲ್ಯಾಣ. ಆದ್ದರಿಂದ ಯಂತ್ರಗಳ ಬಳಕೆ ಪರಿಸರವನ್ನು ಕಲುಷಿತಗೊಳಿಸಬಾರದು.
ಗಾಂಧಿಯವರು ಎಂದೂ ಎಲ್ಲೂ ಯಂತ್ರಗಳನ್ನು ಬಳಸಬಾರದು ಎಂದು ಹೇಳಲಿಲ್ಲ. ಆದರೆ ಯಂತ್ರಗಳ ಉಪಯೋಗದ ಬಗ್ಗೆ ಜನ ಗಳಿಸಿರುವ ಭ್ರಾಂತಿ ಹೋಗಬೇಕೆನ್ನುವುದು ಅವರ ಅಭಿಪ್ರಾಯವಾಗಿತ್ತು. ಎಲ್ಲ ಯೋಜನೆಗಳ ಮುಖ್ಯ ಉದ್ದೇಶ ಜನಕಲ್ಯಾಣ. ಆದ್ದರಿಂದ ಅಲ್ಲಿ ಮನುಷ್ಯರು ಕಾರಣಕರ್ತರಾಗಿರಬೇಕು ಮತ್ತು ಅವರೇ ಅವುಗಳಿಂದ ಉಪಯೋಗ ಪಡೆಯುವಂತಿರಬೇಕು. ಶಾಂತ ಹಾಗೂ ಅಹಿಂಸಾತ್ಮಕ ಸಮಾಜವನ್ನು ನಿರ್ಮಿಸಬೇಕಾದರೆ ಜನಹಿತಕಾರಿ ತಂತ್ರಜ್ಞಾನವನ್ನು ಬಳಸಬೇಕೆಂದು ಅವರು ನುಡಿದರು.
ನಾವು ನಿರ್ಧರಿಸುವ ತಾಂತ್ರಿಕತೆ ವಿಕೇಂದ್ರೀಕೃತ ರಾಜಕೀಯ ಮತ್ತು ಆರ್ಥಿಕ ವ್ಯವಸ್ಥೆಯನ್ನು ಸಂರಕ್ಷಿಸುವಂತಿರಬೇಕು. ವಿವಿಧ ಸಂಶೋಧನೆಗಳ ಮೂಲಕ ಪ್ರಗತಿಯನ್ನು ಸಾಧಿಸುವಂತಿರಬೇಕು. ಒಂದು ವೃತ್ತದ ಗಾತ್ರ ಅದರ ಸುತ್ತಳತೆಯ ಮೇಲೆ ಇರುವಂತೆ ಒಂದು ಸಮಾಜದ ಪ್ರಗತಿ ಅಲ್ಲಿನ ತಾಂತ್ರಿಕತೆಯನ್ನು ಅವಲಂಬಿಸಿರುತ್ತದೆ. ನಾವು ಉಪಯೋಗಿಸುವ ಯಂತ್ರಗಳು ನಾವು ನಂಬಿ ಸಮರ್ಥನೆ ಮಾಡುವ ವಿಚಾರಗಳ ಮೇಲೆ ನಿಂತಿರಬೇಕು.
ಒಬ್ಬ ಶ್ರಮಿಕ ಕಾರ್ಖಾನೆಯಲ್ಲಿ, ಬಯಲಿನಲ್ಲಿ ಅಥವಾ ಇನ್ನೆಲ್ಲಾದರೂ ಗುಲಾಮನಂತೆ ಕೆಲಸ ಮಾಡಬಾರದು. ಮನುಷ್ಯನು ಮಾಡುವ ಯಾವುದೇ ಕೆಲಸಕ್ಕೆ ಯಂತ್ರಗಳು ಪೂರಕವಾಗಿರಬೇಕು. ಯಾವುದೇ ಆರ್ಥಿಕ ಕಾರ್ಯನೀತಿಯನ್ನು ಮಾಡುವಂತಹವರು ಈ ಎಲ್ಲ ಅಂಶಗಳನ್ನು ಪರಿಗಣಿಸಬೇಕು. ನಮ್ಮ ವಿಚಾರ ಮತ್ತು ಯೋಜನೆಗಳು ಯಾವ ರೀತಿ ಇರಬೇಕೆಂದರೆ ಮಾನವಸಂಪನ್ಮೂಲಗಳನ್ನು ಪೂರ್ಣವಾಗಿ ಉಪಯೋಗಿಸುವಂತಿರಬೇಕು. ಅದೇ ನಮ್ಮ ಬಂಡವಾಳ. ಆದಕಾರಣ ಅದರ ಸದುಪಯೋಗ ನಿರುದ್ಯೋಗ ಮತ್ತು ಅರೆನಿರುದ್ಯೋಗಗಳನ್ನು ಸಂಪೂರ್ಣವಾಗಿ ಅಲ್ಪಾವಧಿ ಕಾಲದಲ್ಲಿ ದೂರಮಾಡುವಂತಿರಬೇಕು (ಹಿಂದ್ ಸ್ವರಾಜ್, ೧೯೩೮).
ಯಂತ್ರಗಳ ವಿರೋಧ ಏಕೆ?
ಗಾಂಧಿಯವರು ಕೇವಲ ಯಂತ್ರಗಳ ಅಗತ್ಯತೆ, ಅತಿಯಾದ ಬಳಕೆ ಮತ್ತು ದುರುಪಯೋಗದ ಬಗ್ಗೆ ಮಾತ್ರ ತಮ್ಮ ವಿರೋಧ ವ್ಯಕ್ತಪಡಿಸಿದ್ದರು. ವಿರೋಧಕ್ಕಾಗಿ ವಿರೋಧ ಅಥವಾ ಅವು ಪಾಶ್ಚಿಮಾತ್ಯ ಸಂಸ್ಕೃತಿಯ ಪ್ರತೀಕವಾದ ಕಾರಣ ಅವರು ತಮ್ಮ ವಿರೋಧವನ್ನು ವ್ಯಕ್ತಪಡಿಸಲಿಲ್ಲ. “ನಾನು ವಿರೋಧಿಸುತ್ತಿರುವುದು ಯಂತ್ರಗಳನ್ನಲ್ಲ. ಯಂತ್ರಗಳ ಉಪಯೋಗದ ಬಗೆಗಿರುವ ಭ್ರಾಂತಿ ಮತ್ತು ಮೋಹಗಳನ್ನು. ಜನ ಇದನ್ನು ಶ್ರಮಉಳಿತಾಯ ಯಂತ್ರಗಳೆಂದು ಕರೆಯುತ್ತಾರೆ. ಈ ಯಂತ್ರಗಳಿಂದ ಸಾವಿರಾರು ಮಂದಿ ಕಾರ್ಮಿಕರು ಕೆಲಸ ಕಳೆದುಕೊಂಡು ತಿನ್ನಲು ಅನ್ನವಿಲ್ಲದೆ ರಸ್ತೆಯಲ್ಲಿ ಸಾಯುವ ಪರಿಸ್ಥಿತಿ ನಿರ್ಮಾಣವಾಗುತ್ತದೆ. ಹತ್ತಾರು ಜನರಿಗೆ ಮಾತ್ರ ದುಡಿತ ಕಡಮೆ ಮಾಡುವುದು ನನ್ನ ಉದ್ದೇಶವಲ್ಲ. ಇಡೀ ಮಾನವಕೋಟಿಗೇ ಕಡಮೆ ಮಾಡಬಯಸುತ್ತೇನೆ. ಸಂಪತ್ತು ಕೇವಲ ಕೆಲವು ಶ್ರೀಮಂತರ ಸ್ವತ್ತಾಗದೆ ಎಲ್ಲರಿಗೂ ಸೇರಬೇಕು. ಇಂದು ಯಂತ್ರಗಳು ಸಾವಿರಾರು ಜನರ ಹೊಟ್ಟೆಯ ಮೇಲೆ ಹೊಡೆದು ಕೇವಲ ಕೆಲವರು ಮಾತ್ರ ಶ್ರೀಮಂತರಾಗಲು ಸಹಾಯ ಮಾಡುತ್ತಿವೆ. ಯಂತ್ರಗಳಿಂದಾಗಿ ಕೋಟಿಗಟ್ಟಲೆ ಜನರ ಬೆನ್ನಿನ ಮೇಲೆ ಒಂದು ಹಿಡಿಯ? ಜನ ಸವಾರಿ ಮಾಡುವ ಹಾಗಾಗಿದೆ. ಇದರ ಹಿಂದಿನ ಉದ್ದೇಶ ದುಡಿತ ಕಡಮೆ ಮಾಡುವ ಔದಾರ್ಯವಲ್ಲ. ಬದಲಿಗೆ ಶ್ರೀಮಂತರಾಗುವ ದುರಾಸೆ, ಲೋಭ. ಇದನ್ನು ನಾನು ಸಹಿಸಲಾರೆ. ಆದ್ದರಿಂದ ಇದರ ವಿರುದ್ಧ ನನ್ನ ಸರ್ವಶಕ್ತಿಯನ್ನು ಉಪಯೋಗಿಸಿ ಹೋರಾಡುತ್ತೇನೆ” (ಯಂಗ್ ಇಂಡಿಯಾ, ೧೩-೧೧-೧೯೨೯).
“ಯಂತ್ರಗಳು ಭಾರತವನ್ನು ಬಡತನದ ಅಂಚಿಗೆ ತಳ್ಳಿವೆ” ಎಂದು ಗಾಂಧಿಯವರು ಸ್ಪಷ್ಟವಾಗಿ ನುಡಿದಿದ್ದರು. ಯಂತ್ರಗಳ ಕಾರಣದಿಂದ ಭಾರತದ ಗೃಹಕೈಗಾರಿಕೆಗಳು ನಾಶವಾದವು. ಅವು ಮನುಷ್ಯನನ್ನು ಗುಲಾಮನನ್ನಾಗಿ ಮಾಡಿ ಅವನು ಕೆಲಸ ಮಾಡುವ ಪರಿಸರದಲ್ಲಿ ಭೀಕರ ಅಮಾನವೀಯ ಪರಿಸ್ಥಿತಿಯನ್ನು ನಿರ್ಮಿಸುತ್ತವೆ. ಗಾಂಧಿಯವರ ದೃಷ್ಟಿಯಲ್ಲಿ ಶಕ್ತಿ-ಚಾಲಿತ ಯಂತ್ರಗಳ ಉಪಯೋಗದಿಂದ ಮಾನವನ ಶ್ರಮ ಪಲ್ಲಟಗೊಳಿಸುವುದು ಅಪರಾಧವಾಗುತ್ತದೆ. ಯಂತ್ರಗಳು ಮಾನವನ ಶ್ರಮವನ್ನು ಉಳಿತಾಯಮಾಡುತ್ತವೆ ಎಂಬ ಕಲ್ಪನೆ ತಪ್ಪು. ಯಂತ್ರಗಳು ಕೇವಲ ಕೆಲವು ವ್ಯಕ್ತಿಗಳ ಜೀವನವನ್ನು ಸುಖಮಯಮಾಡುತ್ತವೆ, ಜೊತೆಗೆ ಸಾಮಾನ್ಯ ಜನರನ್ನು ಶೋಷಿಸಿ, ಅವರನ್ನು ನಿರುದ್ಯೋಗಿಗಳನ್ನಾಗಿ ಮಾಡಿ ಅವರ ಜೀವನಮಟ್ಟವನ್ನು ಕುಸಿಯುವಂತೆ ಮಾಡುತ್ತವೆ. ಸಣ್ಣಪ್ರಮಾಣದ ಗೃಹಕೈಗಾರಿಕೆಗಳು ಬೃಹತ್ ಕೈಗಾರಿಕೆಗಳಿಗಿಂತ ಉತ್ಪಾದನೆ ಮತ್ತು ಉದ್ಯೋಗಪ್ರಮಾಣ ಹೆಚ್ಚಿಸಲು ಸಹಕಾರಿಯಾಗುತ್ತವೆ. ಬೃಹತ್ ಕೈಗಾರಿಕೆಗಳಲ್ಲಿ ಯಾವಾಗಲೂ ಉದ್ಯೋಗದ ಪ್ರಮಾಣ ಕಡಮೆ ಇರುವ ಕಾರಣ ಗಾಂಧಿಯವರು ಅವನ್ನು ವಿರೋಧಿಸಿದರು.
ಸಂಪತ್ತಿನ ಕೇಂದ್ರೀಕರಣ
ಯಂತ್ರಗಳ ಬಳಕೆಯಿಂದ ಉತ್ಪಾದನೆ ಮತ್ತು ವಿತರಣೆ ಕೇವಲ ಕೆಲವೇ ವ್ಯಕ್ತಿಗಳ ಕೈಯಲ್ಲಿ ಕೇಂದ್ರೀಕೃತವಾಗಿ ಏಕಸ್ವಾಮಿತ್ವ ಮತ್ತು ವಿಶೇಷ ಅಧಿಕಾರಗಳ ಉದಯವಾಗುತ್ತದೆ. “ಯಾವ ವ್ಯವಸ್ಥೆಯಿಂದ ಎಲ್ಲರಿಗೂ ತಮ್ಮ ಪಾಲು ಸಿಗುವುದಿಲ್ಲವೋ ಅಂತಹ ವ್ಯವಸ್ಥೆಯನ್ನು ನಿ?ಧ ಮಾಡಬೇಕೆಂದು ನಾನು ಹೇಳುವೆ” (ಹರಿಜನ, ೨-೧೧-೧೯೩೪).
ಪಾಶ್ಚಿಮಾತ್ಯ ಯಂತ್ರಗಳನ್ನು ಸ್ಥಳಾಂತರ ಮಾಡಿ ಅದರ ಜಾಗದಲ್ಲಿ ನೂಲುವ ಯಂತ್ರಗಳ ಸಂಘಟನೆ ಮಾಡುವ ಉದ್ದೇಶ ಅವುಗಳಿಗೆ ತಮ್ಮದೇ ಆದ ಸ್ಥಾನಮಾನಗಳನ್ನು ಕಲ್ಪಿಸಿ ಶೋ?ಣಾಮುಕ್ತ ವ್ಯವಸ್ಥೆಯನ್ನು ಮತ್ತೆ ಸ್ಥಾಪಿಸುವುದು. ಗಾಂಧಿಯವರ ಯೋಚನೆಯ ಪ್ರಕಾರ ಯಂತ್ರಗಳ ಮೇಲ್ವಿಚಾರಕರು ತಮ್ಮ ಬಗ್ಗೆಯಾಗಲಿ ತಾವು ಯಾವ ದೇಶಕ್ಕೆ ಸೇರಿದವರೆಂದಾಗಲಿ ಯೋಚಿಸದೆ ಇಡೀ ಮಾನವಜನಾಂಗಕ್ಕೆ ಸೇರಿದವರು ಎಂದು ಯೋಚಿಸಬೇಕು (ಯಂಗ್ ಇಂಡಿಯಾ, ೧೭.೯.೧೯೨೫, ಪು. ೩೨೧). ಭಾರತದ ೭ ಲಕ್ಷ ಹಳ್ಳಿಗಳಲ್ಲಿ ಹರಡಿಕೊಂಡಿರುವ, ಗ್ರಾಮವಾಸಿಗಳ ಪ್ರತಿನಿಧಿರೂಪದಲ್ಲಿರುವ, ಜೀವಂತ ಯಂತ್ರಗಳನ್ನು ನಿರ್ಜೀವಯಂತ್ರಗಳು ಯಾವ ಕಾರಣಕ್ಕೂ ಪಲ್ಲಟಗೊಳಿಸಬಾರದು. ಯಂತ್ರಗಳು ತಮ್ಮ ಕೆಲಸವನ್ನು ಸರಿಯಾಗಿ ಮಾಡಬೇಕಾದರೆ ಅದು ಮಾನವನ ಪ್ರಯತ್ನವನ್ನು ಸರಳೀಕರಿಸಲು ಸಹಾಯಮಾಡಬೇಕು. ಇಂದು ಯಂತ್ರಗಳ ಉಪಯೋಗದಿಂದ ಕೆಲವೇ ವ್ಯಕ್ತಿಗಳ ಕೈಯಲ್ಲಿ ಸಂಪತ್ತು ಕೇಂದ್ರೀಕೃತಗೊಂಡು ಲಕ್ಷಾಂತರ ಪುರುಷ ಮತ್ತು ಮಹಿಳೆಯರ ಹಿತವನ್ನು ಕಡೆಗಣಿಸಿ ಅವರ ಆದಾಯವನ್ನು ಕೀಳುವ ಪ್ರಯತ್ನ ಸಾಗಿದೆ (ಹರಿಜನ, ೧೪.೪.೧೯೩೫, ಪು. ೨೪೪). ಯಂತ್ರಗಳ ಬಳಕೆಯ ಭ್ರಾಂತಿ ಇದೇ ವೇಗದಲ್ಲಿ ಮುಂದುವರಿದರೆ ನಾವು ದೇವರು ಕೊಟ್ಟಂತಹ ಜೀವಂತ ಯಂತ್ರಗಳ ಉಪಯೋಗ ಮಾಡುವುದನ್ನು ಮರತೇ ಹೋಗುತ್ತೇವೆ ಎಂದು ನಮಗೆ ನಾವೇ ಶಾಪ ಹಾಕಿಕೊಳ್ಳುವ ದಿನ ಮುಂದೆ ಬರಬಹುದೆಂದು ನನಗೆ ಅನ್ನಿಸುತ್ತಿದೆ” (Man vs Machine, M.K. Gandhi, p. 48).
ಭಗವದ್ಗೀತೆಯಲ್ಲಿ ಹೇಳಿದಂತೆ ಕಲಿಯುಗದಲ್ಲಿ ದುರಾಸೆ ಒಂದು ಮುಖ್ಯವಾದ ಸಮಸ್ಯೆಯಾಗಿ ಕಾಡುವುದು. ಯಂತ್ರಗಳು ಅಂತಹ ದುರಾಸೆಯನ್ನು ಇನ್ನೂ ಹೆಚ್ಚಿಸಲು ಸಹಕಾರಿಗಳಾಗುತ್ತವೆ.
ಹಸಿವಿನಿಂದ ನರಳುವ ಲಕ್ಷಾಂತರ ಮಂದಿ ಭಾರತೀಯರ ಬಗ್ಗೆ ಗಾಂಧಿಯವರು ಸದಾ ಚಿಂತಿಸುತ್ತಿದ್ದರು: ಕೋಟ್ಯಂತರ ಜೀವಂತ ಯಂತ್ರಗಳಿರುವ ಭಾರತದಂತಹ ದೇಶದಲ್ಲಿ ಹೇಗೆ ನಿರ್ಜೀವ ಯಂತ್ರಗಳು ಅವರ ಕೆಲಸವನ್ನು ಪಲ್ಲಟಗೊಳಿಸದಿರಲು ಸಾಧ್ಯ? ಖಂಡಿತಾ ಅವುಗಳು ನಿರುದ್ಯೋಗ ಸಮಸ್ಯೆಯನ್ನು ಹೆಚ್ಚಿಸಿ ಕಾರ್ಮಿಕರ ಜೀವನವನ್ನು ನಾಶಪಡಿಸುತ್ತವೆ (Ibid, p. 7) ಭಾರತದ ಮೇಲೆ ಪಾಶ್ಚಿಮಾತ್ಯ ಯಂತ್ರಗಳ ದಾಳಿ ಯಾವ ರೀತಿ ಆಗುತ್ತಿದೆ ಎಂದರೆ ಅದನ್ನು ಯಶಸ್ವಿಯಾಗಿ ಸಹಿಸಿಕೊಳ್ಳಬೇಕಾದರೆ ಏನಾದರೊಂದು ಚಮತ್ಕಾರವೇ ನಡೆಯಬೇಕಾಗುತ್ತದೆ (ಹರಿಜನ, ೧೭.೧೧.೧೯೪೬, ಪು. ೪೦೫). ಲಕ್ಷಾಂತರ ಜನರನ್ನು ತುಳಿದು ಅವರ ಶೋಷಣೆ ಮಾಡಲು ಯಂತ್ರಗಳು ಅತ್ಯಂತ ಉಪಯುಕ್ತ ಸಾಧನಗಳಾಗಿವೆ. ಆದರೆ ಸಮಾನತೆಯನ್ನು ಎತ್ತಿಹಿಡಿಯುವ ಸಾಮಾಜಿಕ ಸಾಧನವಾಗಿ ಮನು?ನ ಆರ್ಥಿಕ ವ್ಯವಸ್ಥೆಯಲ್ಲಿ ಯಂತ್ರಗಳಿಗೆ ಜಾಗವಿಲ್ಲ (Ibid, cover page).
ಅಮೆರಿಕದ ಒಬ್ಬ ವರ್ಣಚಿತ್ರಕಾರ ತನ್ನ ’ಮಾನವನ ಹಸ್ತ’ (The Hand of Man) ಎನ್ನುವ ಲೇಖನದಲ್ಲಿ ಪಾಶ್ಚಿಮಾತ್ಯ ದೇಶಗಳಲ್ಲಿ ಸರ್ವವ್ಯಾಪಕವಾಗುತ್ತಿರುವ ಅಮಾನವೀಯ ’ಯಾಂತ್ರೀಕರಣದ ಆದರ್ಶ’ ಹೇಗೆ ಗಾಂಧಿಯವರ ’ಮಾನವ ಆದರ್ಶ’ ಎಂಬ ಕಲ್ಪನೆಗೆ ವಿರುದ್ಧವಾಗಿದೆ ಎಂಬುದನ್ನು ತಿಳಿಸುವ ಪ್ರಯತ್ನ ಮಾಡಿದ್ದಾನೆ. ಈ ಲೇಖನದ ಬಗ್ಗೆ ಗಾಂಧಿಯವರು ಈ ರೀತಿ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ – ’ಯಂತ್ರಯುಗದ ಸಿಹಿ ಮತ್ತು ಕಹಿಗಳನ್ನು ಅನುಭವಿಸಿದ ಒಬ್ಬ ಪಾಶ್ಚಾತ್ಯವ್ಯಕ್ತಿ ಯಂತ್ರಗಳನ್ನು ಆರಾಧಿಸುವುದರ ವಿರುದ್ಧ ವ್ಯಕ್ತಪಡಿಸಿದ ಮಾತುಗಳನ್ನು ನಮ್ಮ ದೇಶದ ಓದುಗರು ಸರಿಯಾಗಿ ಅರ್ಥಮಾಡಿಕೊಂಡಿದ್ದಾರೆ ಎಂಬ ನಂಬಿಕೆಯನ್ನು ವ್ಯಕ್ತಪಡಿಸುವುದಲ್ಲದೆ ಬೇರೆ ಏನನ್ನೂ ಹೇಳಲು ಇಚ್ಛಿಸುವುದಿಲ್ಲ. ಈ ಲೇಖಕರಾಗಲಿ, ನಾನಾಗಲಿ ಯಂತ್ರಗಳು ಎನ್ನುವ ಕಾರಣಕ್ಕೆ ಯಂತ್ರಗಳ ನಿಂದನೆ ಮಾಡುತ್ತಿಲ್ಲ. ಮಾನವ ಮಾಡುವ ಕೆಲಸಗಳನ್ನು ಯಂತ್ರಗಳು ಕಿತ್ತುಕೊಂಡು ಅವನನ್ನು ತಮ್ಮ ಗುಲಾಮನನ್ನಾಗಿ ಮಾಡುತ್ತಿರುವುದಕ್ಕಷ್ಟೇ ನಮ್ಮ ವಿರೋಧವನ್ನು ವ್ಯಕ್ತಪಡಿಸುತ್ತಿದ್ದೇವೆ’ (ಯಂಗ್ ಇಂಡಿಯಾ, ೨೧.೩.೧೯೨೯).
ಯಾವ ತಿಳಿಗೇಡಿಯೂ ಯಂತ್ರಗಳ ಬಳಕೆ ಮಾನವನ ಕೈಗಳಿಗಿಂತ ಹೆಚ್ಚು ಮಹತ್ತ್ವವಾದದ್ದು ಎಂದು ಹೇಳಿಲ್ಲ. ಮಾನವನ ಕೈಗಳ ಬದಲು ಯಂತ್ರಗಳು ಮಾಡುವ ಎಲ್ಲ ಕೆಲಸಗಳೂ ಶ್ರೇಷ್ಠ ಎಂಬುದನ್ನು ಮತ್ತು ಕಷ್ಟದ ಕೆಲಸಕ್ಕಿಂತ ಸುಲಭದ ಕೆಲಸ ಒಳ್ಳೆಯದು ಎಂಬುದನ್ನು ನಾವು ಇನ್ನೂ ಪ್ರಮಾಣೀಕರಿಸಬೇಕಾಗಿದೆ. ಪ್ರತಿಯೊಂದು ಬದಲಾವಣೆ ಒಳ್ಳೆಯದು ಮತ್ತು ಹಳೆಯದಾದುದೆಲ್ಲವನ್ನೂ ತ್ಯಜಿಸಬೇಕೆಂದು ಹೇಳುವುದನ್ನು ಇನ್ನೂ ಪ್ರಮಾಣಪಡಿಸಲು ಸಾಧ್ಯವಾಗಿಲ್ಲ (Superstitions
Die Hard ಎನ್ನುವ ಪತ್ರದಲ್ಲಿ. ಯಂಗ್ ಇಂಡಿಯಾ, ೭.೨.೧೯೩೧).
ಗಾಂಧಿಯವರಿಗೆ ನಮ್ಮ ದೇಶದಲ್ಲಿ ತಾಂಡವವಾಡುತ್ತಿರುವ ನಿರುದ್ಯೋಗ ಸಮಸ್ಯೆಯ ಸಂಪೂರ್ಣ ಅರಿವಿತ್ತು. ಅದರ ನಿವಾರಣೆಗೆ ಅವರು ಸದಾ ಚಿಂತಿಸುತ್ತಿದ್ದರು. ಯಾವಾಗ ಮಿಲಿಯಗಟ್ಟಲೆ ಹಸ್ತಗಳು ಕೆಲಸವಿಲ್ಲದೆ ಇರುತ್ತವೆಯೋ ಆಗ ಯಂತ್ರಗಳ ಬಳಕೆ ಬಹಳ ತೊಂದರೆದಾಯಕವಾದದ್ದು. ಅಧಿಕಶ್ರಮದ ಉಪಯೋಗಕ್ಕೆ ’ಶ್ರಮ ಬಾಹುಳ್ಯ ತಂತ್ರಜ್ಞಾನ’ವನ್ನು ಅಳವಡಿಸಬೇಕು. ಹಿಡಿದ ಕೆಲಸ ಮುಗಿಸಲು ಅಗತ್ಯವಿರುವ ಕೈಗಳ ಸಂಖ್ಯೆ ಬಹಳ ಕಡಮೆ ಇರುವಾಗ ಯಾಂತ್ರೀಕರಣ ಒಳ್ಳೆಯದು; ಆದರೆ ಭಾರತದಲ್ಲಿರುವಂತೆ ಕೆಲಸಕ್ಕೆ ಅಗತ್ಯವಿರುವುದಕ್ಕಿಂತಲೂ ಅಧಿಕ ಕೈಗಳಿರುವಾಗ ಯಂತ್ರಗಳ ಬಳಕೆ ಕೆಟ್ಟದ್ದು- ಎಂದರು. ಯಂತ್ರಗಳ ಬಳಕೆ ಆಯಾ ದೇಶಗಳ ಸಂದರ್ಭವನ್ನು ಅವಲಂಬಿಸಿರುತ್ತದೆ. ಯಾವ ದೇಶಗಳಲ್ಲಿ ಶ್ರಮದ ಕೊರತೆ ಇದೆಯೋ ಅಂತಹ ದೇಶಗಳಲ್ಲಿ ಯಂತ್ರಗಳ ಉಪಯೋಗ ವರಪ್ರದ. ಆದರೆ ಶ್ರಮಶಕ್ತಿ ಹೆಚ್ಚು ಇರುವ ದೇಶಗಳಲ್ಲಿ ಅದು ಶಾಪ. ಕೆಲಸವಿಲ್ಲದೆ ನಿರುದ್ಯೋಗಿಗಳಾಗಿ ಸಾವಿರಗಟ್ಟಲೆ ಜನ ಬೀದಿಪಾಲಾಗುವಾಗ ಯಂತ್ರಗಳ ಬಳಕೆ ನಿಷಿದ್ಧ.
೧೯೩೧ರ ಆಗಸ್ಟ್ ತಿಂಗಳಲ್ಲಿ ಲ್ಯಾಂಕ?ರ್ ನಗರದ ನಿರುದ್ಯೋಗಿಗಳನ್ನು ಉದ್ದೇಶಿಸಿ ಭಾ?ಣ ಮಾಡಿದ ಸಂದರ್ಭದಲ್ಲಿ ಗಾಂಧಿಯವರು ಈ ರೀತಿ ಹೇಳುತ್ತಾರೆ: “ನಿಮ್ಮಲ್ಲಿ ೩ ಮಿಲಿಯನ್ ನಿರುದ್ಯೋಗಿಗಳಿದ್ದಾರೆ. ಆದರೆ ನಮ್ಮಲ್ಲಿ ೩೦೦ ಮಿಲಿಯನ್ ಮಂದಿ ಕೆಲಸವಿಲ್ಲದೆ ಕುಳಿತಿದ್ದಾರೆ. ಕೆಲವರಿಗೇನೊ ವ?ದಲ್ಲಿ ೬ ತಿಂಗಳುಗಳವರೆಗೆ ಕೆಲಸವಿದೆ. ಬಹಳ ಜನಕ್ಕೆ ಅದೂ ಲಭ್ಯವಿಲ್ಲ. ನಿಮಗೆ ಇಲ್ಲಿ ನಿರುದ್ಯೋಗ ಭತ್ಯೆಯಾದರೂ ಸಿಗುತ್ತದೆ. ನನ್ನ ಜನಕ್ಕೆ ಅದೂ ಇಲ್ಲ. ಅವರ ಸರಾಸರಿ ಆದಾಯವೇ ೭ ಶಿಲ್ಲಿಂಗ್ಗಳು. ಇಷ್ಟು ಜನ ಕೆಲಸವಿಲ್ಲದೆ ಕಾಲ ಕಳೆಯುವುದನ್ನು ನೀವು ಊಹಿಸಿಕೊಳ್ಳಿ. ಅವರಲ್ಲಿ ಅನೇಕ ಮಿಲಿಯನ್ ಮಂದಿ ಬದುಕಿನಲ್ಲಿ ಪ್ರತಿದಿನ ಭರವಸೆ ಕಳೆದುಕೊಳ್ಳುತ್ತಿದ್ದಾರೆ. ನಿರುದ್ಯೋಗದಿಂದಾಗಿ ಅವರ ಆತ್ಮವಿಶ್ವಾಸ ಮತ್ತು ದೇವರ ಮೇಲಿನ ನಂಬಿಕೆಗಳು ನಶಿಸುತ್ತಿವೆ. ಅವರ ಮುಂದೆ ದೇವರ ಬಗ್ಗೆ ಮಾತನಾಡಲು ನನಗೆ ಸ್ವಲ್ಪವೂ ಧೈರ್ಯವಿಲ್ಲ. ಅವರಿಗೆಲ್ಲ ದುಡಿಮೆಯ ಮಾರ್ಗ ತೋರಿದ ಮೇಲೆ ಮಾತ್ರ ನಾನು ಅವರಲ್ಲಿ ದೇವರ ಬಗ್ಗೆ ಮಾತನಾಡಬಲ್ಲೆ. ಬೆಳಗಿನ ಉಪಾಹಾರ ಮುಗಿಸಿ ಮಧ್ಯಾಹ್ನದ ಊಟಕ್ಕೆ ಕಾಯುತ್ತಾ ನಾವಿಲ್ಲಿ ದೇವರ ಬಗ್ಗೆ ಮಾತನಾಡುವುದು ಸುಂದರವಾಗಿ ಕಾಣುತ್ತದೆ. ಆದರೆ ಎರಡು ಹೊತ್ತು ಕೂಳಿಗೂ ಗತಿಯಿಲ್ಲದ ಮಿಲಿಯಗಟ್ಟಲೆ ಜನರ ಮುಂದೆ ದೇವರ ಬಗ್ಗೆ ನಾನು ಹೇಗಾದರೂ ಪ್ರಸ್ತಾಪಿಸಲಿ? ಅವರಿಗೆ ಅನ್ನ ಮತ್ತು ರೊಟ್ಟಿಯೇ ದೇವರು.”
ಯಂತ್ರಗಳ ಮಿತಿಗಳು
’ಯಂತ್ರಗಳು ಆಧುನಿಕ ನಾಗರಿಕತೆಯ ಮುಖ್ಯ ಸಂಕೇತ. ಅವು ಪಾಪವನ್ನು ಪ್ರತಿನಿಧಿಸುತ್ತವೆ. ಯಂತ್ರಗಳ ಬಗ್ಗೆ ಒಳ್ಳೆಯ ಅಂಶವನ್ನು ಹೇಳಲು ನನಗೆ ಒಂದೂ ಸಿಗುವುದಿಲ. ಅದರ ಮಿತಿಗಳ ಬಗ್ಗೆ ಪುಸ್ತಕಗಳನ್ನೇ ಬರೆಯಬಹುದು. ಯಂತ್ರಗಳು ನಿಜವಾಗಿಯೂ ಕೆಟ್ಟದಾದವು. ಅವುಗಳಿಂದ ನಾವು ಆದ? ಬೇಗ ಮುಕ್ತರಾಗಬೇಕು. ಯಂತ್ರಗಳು ಹಾವಿನ ಹುತ್ತ ಇದ್ದ ಹಾಗೆ. ಅದರಲ್ಲಿ ಒಂದು ಅಥವಾ ಅನೇಕ ಹಾವುಗಳು ಇರಬಹುದು. ಅದೇ ರೀತಿಯಲ್ಲಿ ಯಂತ್ರಗಳ ಉಪಯೋಗದಿಂದ ನಗರ ನಿರ್ಮಾಣ, ಅವುಗಳಿಂದ ಮೋಟಾರು ವಾಹನ ಮತ್ತು ರೈಲುಮಾರ್ಗಗಳ ಬೆಳವಣಿಗೆ, ಜೊತೆಗೆ ವಿದ್ಯುದ್ದೀಪಗಳು. ಪ್ರಾಮಾಣಿಕ ಭೌತಶಾಸ್ತ್ರಜ್ಞರ ಪ್ರಕಾರ ಎಲ್ಲಿ ಕೃತಕ ವಾಹನಸಂಚಾರ ಹೆಚ್ಚಾಗಿದೆಯೋ ಅಲ್ಲಿ ಜನರ ಆರೋಗ್ಯ ಕ್ಷೀಣವಾಗುತ್ತದೆ. ನನಗೆ ಜ್ಞಾಪಕವಿರುವಂತೆ ಒಂದು ಪಾಶ್ಚಿಮಾತ್ಯ ನಗರದಲ್ಲಿ ಹಣದ ಚಲಾವಣೆ ಕಡಮೆಯಾಗಿ ಅಲ್ಲಿನ ವಕೀಲರ, ವೈದ್ಯರ ಮತ್ತು ಮೋಟಾರುವಾಹನ ಮಾಲೀಕರ ಆದಾಯ ಕಡಮೆ ಆಗಿ ಜನರ ಅರೋಗ್ಯ ಸುಧಾರಿಸಿತು. ಆದ್ದರಿಂದ ಯಂತ್ರಗಳಿಂದ ಯಾವುದೇ ರೀತಿಯ ಅನುಕೂಲಗಳು ಇವೆ ಎಂದು ನನಗೆ ಅನ್ನಿಸುತ್ತಿಲ್ಲ’ ಎಂದು ಗಾಂಧಿಯವರು ಹೇಳಿದ್ದಿದೆ (ಹಿಂದ್ ಸ್ವರಾಜ್, ಪು. ೯೬).
ಯಂತ್ರಗಳ ಪದ್ಧತಿಯಿಂದ ಮಾಡುವ ಕೆಲಸ ಲಕ್ಷಾಂತರ ಕೈಗಳಿಂದ ಮಾಡುವ ಕೆಲಸಕ್ಕಿಂತ ಹಾನಿಕರ. ೧೯೦೦ ಮೈಲಿಗಳ? ಉದ್ದ ೧೫೦೦ ಮೈಲಿಗಳ? ಅಗಲವಾದ ಈ ದೇಶದ ೭ ಲಕ್ಷ ಹಳ್ಳಿಗಳಲ್ಲಿ ಹರಡಿರುವ ದೇಶವಾಸಿಗಳು ದಿನನಿತ್ಯ ತಮ್ಮ ಆಹಾರವನ್ನು ಸಿದ್ಧಪಡಿಸುವ ರೀತಿಯಲ್ಲಿ ನಮ್ಮ ಹಳ್ಳಿಗಳಲ್ಲಿ ಬಟ್ಟೆಯನ್ನು ತಯಾರಿಸುವುದು ಒಳ್ಳೆಯದು ಮತ್ತು ಕ್ಷೇಮಕರ – ಎಂಬುದು ಗಂಧಿಯವರ ಭಾವನೆಯಾಗಿತ್ತು. ಬಹಳ ಮುಖ್ಯವಾದ ಜೀವನಾವಶ್ಯಕ ವಸ್ತುಗಳನ್ನು ತಮ್ಮ ಹಳ್ಳಿಗಳಲ್ಲೇ ಉತ್ಪಾದನೆ ಮಾಡುವಂತಹ ವ್ಯವಸ್ಥೆಯ ಮೇಲೆ ನಮ್ಮ ಹಿಡಿತ ಸಾಧಿಸಿಕೊಂಡಾಗ ಮಾತ್ರ ಅನೇಕ ಶತಮಾನಗಳ ಹೋರಾಟದ ನಂತರ ಗಳಿಸಿದ ಸ್ವಾತಂತ್ರ್ಯವನ್ನು ನಾವು ಉಳಿಸಿಕೊಳ್ಳಲು ಸಾಧ್ಯವಾದೀತು (ಯಂಗ್ ಇಂಡಿಯಾ, ೨.೭.೧೯೩೧, ಪು. ೧೬೧).
ಯಾಂತ್ರಿಕ ವಿಧಾನ ನಿಜವಾಗಿಯೂ ಸುಲಭವಾದದ್ದೇ. ಆದರೆ ಅದೊಂದೇ ಕಾರಣಕ್ಕಾಗಿ ಅದನ್ನು ಶ್ರೇಯಸ್ಕರ ಎಂದು ಹೇಳಲು ಬರುವುದಿಲ್ಲ. ಕೆಲವು ಸ್ಥಳಗಳಲ್ಲಿ ಅದರ ಕೆಲಸ ಸುಲಭವಾದರೂ ಪರಿಣಾಮ ಬಹಳ ಆಘಾತಕಾರಿ. ಕೈಗಳ ಮೂಲಕ ಮಾಡುವ ಕೆಲಸ ಕಠಿಣವಾದರೂ ಅದು ಶ್ರೇಯಸ್ಕರ. ಯಂತ್ರಗಳ ಬಳಕೆಯ ಹುಚ್ಚು ಇದೇ ರೀತಿ ಮುಂದುವರಿದರೆ ದೇವರು ಕರುಣಿಸಿದ ಜೀವಂತ ಯಂತ್ರಗಳ ಉಪಯೋಗ ಮಾಡುವುದನ್ನು ಮರೆಯುವ ಕಾರಣ ನಾವು ಅಸಮರ್ಥ ಮತ್ತು ದುರ್ಬಲರಾಗಿ ನಮಗೆ ನಾವೇ ಶಾಪ ಹಾಕಿಕೊಳ್ಳುವ ದಿನ ಬರಬಹುದು. ಲಕ್ಷಾಂತರ ಜನರು ಗರಡಿ ಸಾಧನೆ ಮತ್ತು ಆಟಗಳ ಮೂಲಕ ತಮ್ಮ ಶರೀರವನ್ನು ಸುಸ್ಥಿತಿಯಲ್ಲಿಡಲು ಸಾಧ್ಯವಿಲ್ಲ. ಯಾವ ಕಾರಣಕ್ಕ್ಕಾಗಿ ಅವರು ತಮ್ಮ ಅತ್ಯಂತ ಉಪಯೋಗಿ, ಉತ್ಪಾದಕ ಮತ್ತು ದೃಢವಾದ ಉದ್ಯೋಗಗಳನ್ನು ಬಿಟ್ಟು ಉಪಯೋಗವಿಲ್ಲದ, ಅನುತ್ಪಾದಕ ಹಾಗೂ ದುಬಾರಿಯಾದ ಆಟಗಳನ್ನು ಮತ್ತು ಶಾರೀರಿಕ ವ್ಯಾಯಾಮಗಳನ್ನು ಮಾಡುವ ಆವಶ್ಯಕತೆ ಇದೆ? ಅವೆಲ್ಲ ಕೇವಲ ಬದಲಾವಣೆಗಾಗಿ ಮತ್ತು ಮನರಂಜನೆಗಾಗಿ ಇರುವಂಥವು. ಅವುಗಳು ಏನಾದರೂ ನಮ್ಮ ದಿನನಿತ್ಯದ ಉದ್ಯೋಗವಾದರೆ, ನಾವು ತಿನ್ನುವ ಆಹಾರದ ಉತ್ಪಾದನೆಯಲ್ಲಿ ನಮ್ಮ ಕೈಗಳ ಪಾತ್ರವಿಲ್ಲದೆ ಹೋದರೆ, ಅದನ್ನು ತಿನ್ನುವ ಹಸಿವು ಉಂಟಾಗದೆ ಕೇವಲ ಕಿರಿಕಿರಿಯನ್ನುಂಟುಮಾಡುತ್ತದೆ.
ಹಳೆಯದೆಲ್ಲವೂ ಕೆಟ್ಟದ್ದು ಎನ್ನುವ ನಂಬಿಕೆ ಗಾಂಧಿಯವರದ್ದಾಗಿರಲಿಲ್ಲ. ಸತ್ಯ ಪುರಾತನ ಹಾಗೂ ಕಷ್ಟಕರವಾದದ್ದು. ಸುಳ್ಳು ಅನೇಕ ಆಕರ್ಷಣೆಗಳಿಂದ ಕೂಡಿರುತ್ತದೆ. ತಾನು ಅತ್ಯಂತ ಪುರಾತನ ತತ್ತ್ವ್ತವಾದ ಸತ್ಯದ ಕಡೆಗೆ ಮರಳುತ್ತಿದ್ದೇನೆ ಎಂಬುದು ಅವರ ನಂಬಿಕೆಯಾಗಿತ್ತು.
ಸರ್ವೋದಯ ತತ್ತ್ವದ ಪ್ರತಿಪಾದಕರಾಗಿ ಗಾಂಧಿಯವರು ವಾಸ್ತವಿಕತೆಯ ಮೂರು ದೃಷ್ಟಿಕೋನಗಳ ಪೂಜಕರಾಗಿದ್ದರು. ಅವುಗಳೆಂದರೆ ಸತ್ಯ, ಸೌಂದರ್ಯ ಮತ್ತು ಜನಗಳ ಒಳಿತು. ಸತ್ಯ ಜಗತ್ತಿಗೆ ಆಧಾರ. ಇಲ್ಲಿ ಎಲ್ಲರೂ ಸಂತೋ?ದಿಂದ ಬದುಕಬೇಕು. ಅಂತಹ ಸುಂದರವಾದ ಜಗತ್ತು ವಿವಿಧ ರೀತಿಯ ಕಲ್ಪನೆಗಳನ್ನೂ, ಕನಸುಗಳನ್ನೂ ಹುಟ್ಟುಹಾಕುವ ಬುದ್ಧಿಯಿಂದ ಕೂಡಿರಬೇಕೇ ವಿನಾ ಏಕತಾನತೆಯನ್ನು ನಿರ್ಮಿಸುವ ಯಂತ್ರಗಳಿಂದಲ್ಲ. ಕೈಗಳಿಂದ ತಯಾರಿಸಿದ ವಸ್ತುಗಳಲ್ಲಿ ಗಾಂಧಿಯವರು ಸೌಂದರ್ಯವನ್ನು ಕಂಡರು. ಕಾರಣ ಮನು? ತನ್ನ ವ್ಯಕ್ತಿತ್ವವನ್ನು ವಸ್ತುಗಳ ನಿರ್ಮಿತಿಯಲ್ಲಿ ತೋರಿಸುತ್ತಾನೆ (Ibid, p. 40)
ಮನುಷ್ಯತನ್ನ ಅನುಭವಗಳನ್ನು ಮಾತಿನ ಮೂಲಕ ಅಭಿವ್ಯಕ್ತಗೊಳಿಸುವುದು ಪ್ರಪಂಚದಲ್ಲಿ ಒಂದು ಸುಂದರವಾದ ಕಲೆ. ತದ್ವಿರುದ್ಧವಾಗಿ ಯಂತ್ರ ಸತ್ತ ಕೈಗಳನ್ನು ಪ್ರತಿನಿಧಿಸುತ್ತದೆ ಮತ್ತು ಅದರ ಕೆಲಸ ಸಾವನ್ನು ಸೂಚಿಸುತ್ತದೆ. ಯಂತ್ರಗಳ ನಡುವಿನ ಜೀವನ ಸತ್ತ ಜಗತ್ತಿನ ಮಧ್ಯೆ ಜೀವಿಸಿದಂತೆ. ಕೈಗಳಿಂದ ಮಾಡುವ ಕೆಲಸವನ್ನು ಬಿಟ್ಟು ಯಂತ್ರಗಳು ಮಾಡುವ ಕೆಲಸವನ್ನು ಒಪ್ಪಿದರೆ ನಾವೇ ನಮ್ಮ ಬದುಕಿನ ಗೌರವವನ್ನು ಹಾಗೂ ಪ್ರಭಾವವನ್ನು ನಿರಾಕರಿಸಿದಂತಾಗುತ್ತದೆ (Ibid).
ವೈಯಕ್ತಿಕವಾಗಿ ಗಾಂಧಿಯವರಿಗೆ ದೊಡ್ಡದೊಡ್ಡ ಕೂಡು ಸಂಸ್ಥೆಗಳ (Trust) ಮತ್ತು ಯಂತ್ರಕೇಂದ್ರಿತವಾದ ಕೈಗಾರಿಕೆಗಳ ಬೆಳವಣಿಗೆಯ ಬಗೆಗೆ ವಿರೋಧವಿತ್ತು. ’ಭಾರತಕ್ಕೆ ಅಗತ್ಯವಿರುವ ಆಧುನಿಕ ಯಂತ್ರಗಳ ಬಳಕೆಯನ್ನು ಖಾದಿ ಉದ್ಯಮದ ಮೂಲಕ ಮಾಡಿ ತನ್ಮೂಲಕ ಮೂಲಭೂತ ಅಗತ್ಯಗಳ ಅಭಿವೃದ್ಧಿ ಮತ್ತು ಶ್ರಮ ಉಳಿತಾಯ ಮಾಡಿದಾಗ ನಾನು ಯಂತ್ರಗಳ ಬಗ್ಗೆ ನನಗಿರುವ ನಂಬಿಕೆಯನ್ನು ಕಳೆದುಕೊಳ್ಳುವುದಿಲ್ಲ’ (ಯಂಗ್ ಇಂಡಿಯಾ, ೨೪.೭.೧೯೨೪ ಪು. ೨೪೬) ಎಂದಿದ್ದರವರು.
ಯಾವ ಪ್ರಕೃತಿಯ ಜೊತೆ ಮೊದಲಿನಿಂದಲೂ ಮಾನವನ ಬದುಕಿ ಬಾಳಿದ್ದಾನೆಯೋ ಅಂತಹ ಪ್ರಕೃತಿಯಿಂದ ಯಂತ್ರಗಳು ಮಾನವನನ್ನು ದೂರಮಾಡಿವೆ. ಪ್ರಕೃತಿ ಕರುಣಿಸಿದ ಚಿಂತನಾಶಕ್ತಿಯನ್ನು ಮಾನವ ಕಳೆದುಕೊಳ್ಳುತ್ತಿದ್ದಾನೆ. ಎಲ್ಲಿ ಅತಿ ಹೆಚ್ಚಿನ ಯಂತ್ರಗಳಿವೆಯೋ ಅಲ್ಲಿ ಸಾಕ? ಸಂಖ್ಯೆಯ ಮೂರ್ಖರಿರುತ್ತಾರೆ.
ಒಂದು ಕಾರ್ಖಾನೆ ನೂರಾರು ಜನರಿಗೆ ಉದ್ಯೋಗ ಕೊಟ್ಟು ಸಾವಿರಾರು ಜನರು ನಿರುದ್ಯೋಗಿಗಳಾಗುವಂತೆ ಮಾಡುತ್ತದೆ. ಒಂದು ಕಾರ್ಖಾನೆಯಲ್ಲಿ ಟನ್ನುಗಟ್ಟಲೆ ಎಣ್ಣೆಯನ್ನು ಉತ್ಪಾದನೆ ಮಾಡಬಹುದು. ಆದರೆ ಅದು ಸಾವಿರಾರು ಮಂದಿ ಎಣ್ಣೆಗಾಣಿಗರನ್ನು ನಿರುದ್ಯೋಗಿಗಳನ್ನಾಗಿ ಮಾಡುತ್ತದೆ. ಆದ್ದರಿಂದ ಅದನ್ನು ಗಾಂಧಿಯವರು ವಿನಾಶಕಾರಿ ಶಕ್ತಿ ಎಂದು ಕರೆದರು. ಲಕ್ಷಾಂತರ ಜನರ ಕೈಗಳಿಂದ ಉತ್ಪಾದಿಸಿದ ಎಣ್ಣೆ ರಚನಾತ್ಮಕವಾದದ್ದು ಮತ್ತು ಹಿತಕಾರಿಯಾದದ್ದು. ಸರ್ಕಾರಿಸ್ವಾಮ್ಯದ ಶಕ್ತಿ – ಸಂಚಾಲಿತ ಯಂತ್ರಗಳ ಮೂಲಕ ಸಾಮೂಹಿಕ ಎಣ್ಣೆ ಉತ್ಪಾದನೆ ಮಾಡಿದರೂ ಏನೂ ಪ್ರಯೋಜನವಿಲ್ಲ (ಹರಿಜನ, ೧೬.೫.೧೯೩೬ ಪು. ೧೧೧).
ಎಲ್ಲಿ ಜನಸಂಖ್ಯೆ ಕಡಮೆ ಇರುತ್ತದೆಯೋ ಮತ್ತು ಎಲ್ಲಿ ಕೆಲಸ ಮಾಡಲು ಜನರ ಕೊರತೆ ಇರುತ್ತದೆಯೋ ಅಲ್ಲಿ ಯಂತ್ರಗಳ ಬಳಕೆ ಯೋಗ್ಯವಾದದ್ದು. ಆದರೆ ಅಪಾರ ಸಂಖ್ಯೆಯಲ್ಲಿ ಜನ ಕೆಲಸವಿಲ್ಲದೆ ಕುಳಿತಿರುವ ಭಾರತದಲ್ಲಿ ಭಾರೀ ಯಂತ್ರಗಳನ್ನು ಸ್ಥಾಪಿಸುವುದು ಮೂರ್ಖತನವಷ್ಟೇ ಅಲ್ಲ; ವರ್ಷದಲ್ಲಿ ಸುಮಾರು ೬ ತಿಂಗಳಷ್ಟೇ ಕೆಲಸದ ದಿನಗಳನ್ನು ವ್ಯರ್ಥವಾಗಿ ಕಳೆಯುವ ಹಳ್ಳಿಗರನ್ನು ಹೇಗೆ ದುಡಿಮೆಗೆ ಹಚ್ಚುವುದು ಎನ್ನುವುದು ಇಲ್ಲಿರುವ ಸಮಸ್ಯೆ. ಭಾರತದ ಲಕ್ಷಾಂತರ ಹಳ್ಳಿಗಳಲ್ಲಿ ವಾಸಿಸುವ ಜನರಿಗೆ ಹೇಗೆ ಬಿಡುವು ಕೊಡುವುದು ಎಂಬುದಲ್ಲ, ನಿಜವಾದ ಸಮಸ್ಯೆ ಇರುವುದು ಹೇಗೆ ವ?ದಲ್ಲಿನ ೬ ತಿಂಗಳ ಕಾಲದ ಅವರ ಬಿಡುವಿನ ಸಮಯವನ್ನು ಸದುಪಯೋಗ ಮಾಡುವುದು ಎನ್ನುವುದು (ಹರಿಜನ. ೧೬.೧೧.೧೯೩೪. ಪು. ೩೧೬). ಯಂತ್ರಗಳ ಸಹಾಯದಿಂದ ಕಾರ್ಮಿಕರ ಶ್ರಮವನ್ನು ಕಡಮೆಮಾಡಿ ಅವರು ತಮ್ಮ ಬಿಡುವಿನ ವೇಳೆಯನ್ನು ತಮ್ಮ ಬೌದ್ಧಿಕ ಶಕ್ತಿಯನ್ನು ಬೆಳೆಸಿಕೊಳ್ಳಲು ಏಕೆ ಅವಕಾಶ ಕಲ್ಪಿಸಬಾರದು – ಎನ್ನುವ ಪ್ರಶ್ನೆಗೆ ಗಾಂಧಿಯವರ ಉತ್ತರ ಇದಾಗಿತ್ತು. ನಿಜ, ಬಿಡುವು ಒಂದು ಹಂತದವರೆಗೆ ಮಾತ್ರ ಆವಶ್ಯಕ ಮತ್ತು ಒಳ್ಳೆಯದು. ದೇವರು ಮನುಷ್ಯನನ್ನು ಸೃಷ್ಟಿ ಮಾಡಿರುವುದು ಅವನು ತನ್ನ ಬೆವರಿನ ದುಡಿಮೆಯ ಮೂಲಕ ಸಂಪಾದಿಸಿ ಜೀವನ ನಡೆಸುವ ಸಲುವಾಗಿ. ಗಾರುಡಿಗನ ಟೋಪಿಯಿಂದ ಹಿಡಿದು ನಮಗೆ ಬೇಕಾಗಿರುವುದೆಲ್ಲವನ್ನೂ ಮಂತ್ರವಾದಿಯ ದಂಡದಿಂದ ನಾವೇ ಉತ್ಪಾದಿಸಲು ಸಾಧ್ಯವೇ? ಎಂಬ ಪ್ರಶ್ನೆ ಗಾಂಧಿಯವರನ್ನು ಅನೇಕ ಬಾರಿ ಕಾಡಿದ್ದಿತ್ತು.
(ಫೆಬ್ರುವರಿ ೨೦೧೮ರ ಸಂಚಿಕೆಯಲ್ಲಿ ಮುಂದುವರಿಯುತ್ತದೆ)