ಆ ಕರಾಳ ಘಟನೆ ನಡೆದದ್ದು ಇಂದಿಗೆ ನೂರು ವ? ಹಿಂದೆ – ೧೩ ಏಪ್ರಿಲ್ ೧೯೧೯ರಂದು. ಆ ಅತ್ಯಂತ ಭಯಾನಕ ಮಾರಣಹೋಮ ನಡೆಸಿದ ಜನರಲ್ ಡೈಯರ್ ಭಾವಿಸಿದುದು ತಾನು ಬ್ರಿಟಿ? ಸಾಮ್ರಾಜ್ಯವನ್ನು ಅವಸಾನದಿಂದ ಉಳಿಸಿದೆನೆಂದು. ಆದರೆ ಪರಿಣಾಮ ಅದಕ್ಕೆ ವಿರುದ್ಧವೇ ಆಯಿತು. ಭಾರತದ ಸ್ವಾತಂತ್ರ್ಯಸಂಗ್ರಾಮದ ಒಂದು ಶೋಧಪೂರ್ವಕ ಗ್ರಂಥ ಬರೆದ ಖ್ಯಾತ ಆಂಗ್ಲ ಇತಿಹಾಸಕಾರರಾದ ಆಂಥೊನಿ ರೀಡ್ ಮತ್ತು ಡೇವಿಡ್ ಫಿಶರ್ [‘The Longest Day’, 1998] ನೀಡಿರುವ ವಿಶ್ಲೇಷಣೆ ಇದು: “In fact he [General Dyer] had signed its [the Empire’s] death warrant….. In those ten minutes Dyer had destroyed the trust in British justice and fair play that had been built up over one and a half centuries…. ….From that moment, for Indian nationalists, the only question was how soon could they get rid of their British rulers.”
ಅಕಲ್ಪನೀಯ ಘಟನೆ
ಅದೊಂದು ವಿಚಿತ್ರ ಘಟನೆ: ಊಹಾಶಕ್ತಿಗೂ ಮೀರಿದ ಘಟನೆ. ಅದು ವಾಸ್ತವವಾಗಿ ನಡೆಯಿತೆಂದು ಸವಿವರವಾಗಿ ದಾಖಲೆಗೊಂಡಿರದಿದ್ದರೆ ಅದನ್ನು ಕಟ್ಟುಕತೆಯೆಂದು ಜನ ತಳ್ಳಿಹಾಕುತ್ತಿದ್ದರೇನೋ. ಏಕೆಂದರೆ ಅಷ್ಟು ಘೋರ ಕ್ರೌರ್ಯವನ್ನು ಈ ನಾಗರಿಕ ಯುಗದಲ್ಲಿ ಯಾರಾದರೂ ಎಸಗಿಯಾರೆಂಬುದು ಸಾಮಾನ್ಯ ಮನುಷ್ಯಕಲ್ಪನೆಯ ಪರಿಧಿಗೆ ಮೀರಿದುದು.
ಆ ಚಿತ್ರವನ್ನು ಮನಸ್ಸಿಗೆ ತಂದುಕೊಳ್ಳಲು ಯತ್ನಿಸಿ: ಅದೇನೂ ಯುದ್ಧಸಂದರ್ಭವಾಗಿರಲಿಲ್ಲ; ಯುದ್ಧದಲ್ಲಾದರೆ ಎರಡು ಬಣಗಳವರೂ ಸನ್ನದ್ಧರಾಗಿ ಸಾವಿಗೆ ಸಿದ್ಧರಾಗಿಯೇ ಇರುತ್ತಾರೆ. ಇಲ್ಲಿಯಾದರೋ ನೆರೆದಿದ್ದವರು ಇಪ್ಪತ್ತು-ಇಪ್ಪತ್ತೈದು ಸಾವಿರಕ್ಕೆ ಕಡಮೆಯಿಲ್ಲದ ನಿಃಶಸ್ತ್ರ ಜನಸಾಮಾನ್ಯರು. ಅವರು ಸೇರಿದ್ದುದು ಸುತ್ತಲೂ ಎತ್ತರದ ಗೋಡೆಗಳಿದ್ದು ಒಂದೇ ಕಡೆ ಪ್ರವೇಶ – ನಿರ್ಗಮನಗಳಿಗಾಗಿ ಇದ್ದ ಐದಡಿಯ ತೆರಪಿನ ಜಾಗವಿದ್ದ ಆಯತಾಕಾರದ ಮೈದಾನದಲ್ಲಿ.
ಇದ್ದಕ್ಕಿದ್ದಂತೆ ಅಲ್ಲಿಗೆರಗಿದ ಅಧಿಕಾರಿ ಆಜ್ಞೆ ಮಾಡುತ್ತಾನೆ – ’ಫೈರ್!’ ಎಂದು. ಸುತ್ತಲಿದ್ದ ಗೋಡೆಗಳ ಮೇಲೂ ಅಂಚುಗಳಲ್ಲಿಯೂ ಸ್ಥಾಪಿತರಾಗಿದ್ದ ಐವತ್ತರವತ್ತು ಸೈನಿಕರ ಕೈಗಳಲ್ಲಿದ್ದ ಬಂದೂಕುಗಳು ಗುಂಡಿನ ಪ್ರವಾಹವನ್ನೇ ಉಗುಳತೊಡಗುತ್ತವೆ. ಜನರು ಎಷ್ಟ ಒತ್ತೊತ್ತಾಗಿ ಸೇರಿದ್ದರೆಂದರೆ ದೂರ ಹೋಗುವುದಿರಲಿ, ಕೈಕಾಲಾಡಿಸಲೂ ಕಷ್ಟವಾಗಿದ್ದಂತಹ ಜನಸಂಮರ್ದ ಅಲ್ಲಿದ್ದುದು.
ಕೆಲವೇ ಕ್ಷಣಗಳಲ್ಲಿ ಅಲ್ಲಿ ಕಂಡಿದ್ದುದು ನೂರಾರು ಹೆಣಗಳ ಮತ್ತು ಗಾಯಾಳುಗಳ ರಾಶಿ; ಕೇಳಿದ್ದು ಉಚ್ಚ ಆಕ್ರಂದನ.
ಹಲವು ನೂರು ಜನರನ್ನು ಏಕಾಏಕಿ ಆಹುತಿ ತೆಗೆದುಕೊಂಡ ಆ ಹತ್ಯಾಕಾಂಡಕ್ಕೆ ತಗುಲಿದುದು ಹತ್ತು-ಹದಿನೈದು ನಿಮಿಷಗಳಷ್ಟು . ಪ್ರಳಯತಾಂಡವಕ್ಕೆ ಅಷ್ಟು ಸಾಕಾಯಿತು.
ದಾಳಿಗೆ ಆಜ್ಞೆ ಮಾಡಿದವನ ಕಣ್ಣಿಗೆ ಅಲ್ಲಿದ್ದ ಹೆಂಗಸರು ಮಕ್ಕಳು ವೃದ್ಧರು ಸೇರಿದ ಸಾವಿರಾರು ಮಂದಿ ’ರಾಜದ್ರೋಹಿ’ಗಳಾಗಿ ಕಂಡಿದ್ದರು: ಎಷ್ಟರಮಟ್ಟಿಗೆ ಎಂದರೆ ಸಾಮಾನ್ಯವಾಗಿ ಗೋಲಿಬಾರ್ ಪ್ರಸಂಗಗಳಲ್ಲಿ ಅನುಸರಿಸಬೇಕಾದ ಮುನ್ನೆಚ್ಚರಿಕೆಯ ಪ್ರಸಾರ ಮೊದಲಾದ ಕ್ರಮಗಳೂ ಅನಾವಶ್ಯಕವೆಂದು ಆತ ಭಾವಿಸಿದಂತಿತ್ತು.
ರಾಜಕೀಯ ಹಿನ್ನೆಲೆ ಏನೇ ಇರಲಿ. ಆ ಹತ್ಯಾಕಾಂಡವನ್ನು ನಡೆಸಿದ ಅಸಾಮಾನ್ಯ ರೀತಿಯು ಅದನ್ನು ಅಮಾನು?ತೆಯ ಪರಾಕಾ?ಯೆಂದು ಇತಿಹಾಸದಲ್ಲಿ ಅಂಕಿತಗೊಳಿಸಿತು. ದಾಳಿಗೆ ಆಜ್ಞೆ ನೀಡಿ ಆ ಅಸೀಮ ದೌರ್ಜನ್ಯದ ರೂವಾರಿಯೆನಿಸಿದವನು ಆಗಿನ ಜಲಂಧರ್ ತುಕಡಿಯ ನಾಯಕನಾಗಿದ್ದ ಬ್ರಿಗೇಡಿಯರ್-ಜನರಲ್ ರೆಜಿನಾಲ್ಡ್ ಎಡ್ವರ್ಡ್ ಹ್ಯಾರಿ ಡೈಯರ್.
ರೌಲೆಟ್ ಕಾಯ್ದೆಯ ದಮನಧೋರಣೆಗೆ ಪ್ರತಿಭಟನೆ ಸೂಚಿಸುವ ಜನಾಭಿಪ್ರಾಯದ ಠರಾವನ್ನು ಓದುತ್ತ ವೇದಿಕೆಯಲ್ಲಿದ್ದ ನಾಯಕರು ಜನರನ್ನು ಕುರಿತು ಸೈನಿಕರು ಬಂದಿದ್ದಾರೆಂದು ಹೆದರಬೇಡಿ. ಸಕ್ರಮವಾದ ಪೂರ್ವಘೋಷಿತ ಆದೇಶವಿಲ್ಲದೆ ಅವರು ಗೋಲಿಬಾರ್ ನಡೆಸುವಂತಿಲ್ಲ ಎಂದು ಭರವಸೆ ನೀಡುತ್ತಿದ್ದಂತೆಯೇ ಡೈಯರ್ನ ಸೈನಿಕಪಡೆ ಧುತ್ತೆಂದು ಗುಂಡಿನ ದಾಳಿಯನ್ನು ಆರಂಭಿಸಿ ಎಲ್ಲರನ್ನೂ ದಿಗ್ಭಮೆಗೊಳಿಸಿತ್ತು. ಕೆಲವೇ ಕ್ಷಣಗಳಲ್ಲಿ ಭೀಕರ ರಕ್ತಪಾತವೇ ನಡೆದುಹೋಗಿತ್ತು.
ಇತಿಹಾಸಕ್ಕೆ ತಿರುವು
ಇತಿಹಾಸಕ್ಕೆ ನಿರ್ಣಾಯಕ ತಿರುವನ್ನು ಕೊಟ್ಟವು ಎಂದೂ ಆ ಒಂದು ಕಾಲಖಂಡದ ಪ್ರಾತಿನಿಧಿಕ ಘಟನೆಗಳೆಂದೂ ಗುರುತಿಸಲ್ಪಡುವ ಹಲವು ವಿರಳ ವಿದ್ಯಮಾನಗಳು ಅಂಕಿತಗೊಂಡಿರುತ್ತದೆ. ಭಾರತದ ಈಚಿನ ಇತಿಹಾಸಪ್ರವಾಹದಲ್ಲಿ ೧೯೧೯ರ ಏಪ್ರಿಲ್ ತಿಂಗಳ ೧೩ರಂದು ಘಟಿಸಿದ ಜಲಿಯನ್ವಾಲಾಬಾಗ್ ಹತ್ಯಾಕಾಂಡ ಅಂತಹ ಒಂದು ಪರ್ವವೆಂಬುದು ಅಸಂದಿಗ್ಧವಾಗಿದೆ. ಆಗ ನಡೆದಂತಹ ಭೀಕರತೆಗೆ ಭಾರತದ ಜನತೆ ಹಿಂದೆ ತುತ್ತಾಗಿರಲಿಲ್ಲ. ಎರಡನೆಯದಾಗಿ ರೌಲೆಟ್ ಕಾಯ್ದೆಗೆ ಪ್ರತಿಕ್ರಿಯೆ, ಸುತರಾಂ ಅತಾರ್ಕಿಕವೂ ಆಧಾರರಹಿತವೂ ಆಗಿದ್ದ ಖಿಲಾಫತ್ ಆಂದೋಲನದ
ಉದ್ಗಮ ಮತ್ತು ದುಷ್ಪರಿಣಾಮಸರಣಿ, ಮೊದಲ ಮಹಾಯುದ್ಧದ ಪರಿಣಾಮಸ್ವರೂಪ ಆಯಾಮಗಳು – ಈ ಹಲವು ಕಾರಣಗಳಿಂದ ಜನತೆಯಲ್ಲಿ ರಾಜಕೀಯ ಜಾಗೃತಿ ತೀಕ್ಷ್ಣಗೊಳ್ಳತೊಡಗಿತ್ತು. ಮೂರನೆಯದಾಗಿ ಜಲಿಯನ್ವಾಲಾಬಾಗ್ ಹತ್ಯಾಕಾಂಡದ ನೇರ ಫಲಿತವಾಗಿ ಆಂಗ್ಲಸಾಮ್ರಾಜ್ಯದ ಬಗೆಗೆ ಹಲವು ದೇಶೀಯ ಜನವರ್ಗಗಳಲ್ಲಿದ್ದ ಅಷ್ಟಿಷ್ಟು ಸದ್ಭಾವನೆ ಕೊಚ್ಚಿಹೋಗಿ ಆಂಗ್ಲ ಆಡಳಿತದಿಂದ ಮುಕ್ತಗೊಂಡು ಸ್ವಾಧೀನತೆ ಏರ್ಪಡಬೇಕಾದುದರ ಅನಿವಾರ್ಯತೆಯೂ ತೀವ್ರತೆಯೂ ಪರಿಸ್ಫುಟಗೊಂಡಿತ್ತು. ಅದಕ್ಕೆ ಅನುಸ್ಯೂತವಾಗಿ ಭಾರತದಲ್ಲಿ ಅಸಹಕಾರಾದಿ ಆಂದೋಲನಗಳು ಮೈತಳೆದು ಸ್ವಾತಂತ್ರ್ಯ ಸಾಧನೆಯನ್ನು ಸಮೀಪಗತಗೊಳಿಸಿದುದು ಏಷ್ಯಾಖಂಡದ ಇತರೆಡೆಗಳಲ್ಲಿಯೂ ಸಾಮ್ರಾಜ್ಯಶಾಹಿವಿರೋಧಿ ಪ್ರಯಾಸಗಳಿಗೆ ರಭಸವನ್ನು ತಂದಿತು.
ಅದೇ ಕಾಲಖಂಡದಲ್ಲಿ ತರ್ಕಹೀನ ಗುರಿಗಳ ಬೆನ್ನುಹತ್ತಿ ನಡೆದ ಖಿಲಾಫತ್ ಆಂದೋಲನ ಮೊದಲಾದ ಅಡ್ಡಪರಿಣಾಮಗಳು ಆದುದುಂಟು. ಅದು ಏನೇ ಇರಲಿ; ಜಲಿಯನ್ವಾಲಾಬಾಗ್ ಹತ್ಯಾಕಾಂಡಕ್ಕೆ ಹೊಮ್ಮಿದ ದೇಶವ್ಯಾಪಿ ಪ್ರತಿಕ್ರಿಯೆಯಂತೂ ಭಾರತದ ಇತಿಹಾಸದಲ್ಲಿ ತನ್ನ ಪದಚಿಹ್ನೆಯನ್ನು ಮೂಡಿಸಿತೆಂಬುದು ಸಂದೇಹಾತೀತವಾಗಿದೆ. ಖ್ಯಾತ ಆಂಗ್ಲ ಇತಿಹಾಸಕಾರ ಎ.ಜೆ.ಪಿ. ಟೇಲರ್ ಆನಂತರದ ಕಾಲದಲ್ಲಿ ವಿಶ್ಲೇಷಿಸಿದಂತೆ ಆಂಗ್ಲಪ್ರಭುತ್ವದ ಸಂಪರ್ಕದಿಂದ ಭಾರತೀಯರನ್ನು ದೂರಗೊಳಿಸಿದ ನಿರ್ಣಾಯಕ ಕ್ಷಣ ಎಂದರೆ ಅಮೃತಸರದ ಜಲಿಯನ್ವಾಲಾಬಾಗ್ ದುರಂತ. ಅಲ್ಲಿಂದಾಚೆಗೆ ಭಾರತವನ್ನು ಕುರಿತ ಆಂಗ್ಲಪ್ರಭುತ್ವದ ದೃಷ್ಟಿಯೂ ನಡಾವಳಿಗಳೂ ಒಂದ?ಮಟ್ಟಿಗೆ ಬದಲಾದುದೂ ಹೌದು. ಹತ್ಯಾಕಾಂಡಕ್ಕೆ ಕಾರಣನಾದ ಜನರಲ್ ಡೈಯರ್ನನ್ನು ಆಂಗ್ಲಸರ್ಕಾರ ನಿವೃತ್ತಗೊಳಿಸಲು ಸಜ್ಜಾದುದನ್ನು ಗಮನಿಸಿ ಅವನೇ ರಾಜೀನಾಮೆ ನೀಡಿದ.
ಭಗತ್ಸಿಂಗ್, ಚಂದ್ರಶೇಖರ ಆಜಾದ್, ರಾಮಪ್ರಸಾದ್ ಬಿಸ್ಮಿಲ್ ಮೊದಲಾದ ಭೂಗತ ಕಾರ್ಯಕರ್ತರಿಗೆ ಒಂದು ಪ್ರಮುಖ ಪ್ರೇರಣೆ ನೀಡಿದುದೂ ಜಲಿಯನ್ವಾಲಾಬಾಗ್ ಹತ್ಯಾಕಾಂಡವೇ – ಎಂಬುದು ಸ್ಪಷ್ಟವೇ ಆಗಿದೆ.
೧೯೧೨ರ ಅಂತ್ಯದಲ್ಲಿ ವೈಸರಾಯ್ ಹತ್ಯೆಯ ಯತ್ನ, ೧೯೧೪ರ ಕೊಮಗಾತಮಾರು ದುರಂತ, ೧೯೧೫ರ ಆರಂಭದ ಗದರ್ ಚಳವಳಿ ಮತ್ತು ಅದರ ಹಿಂದುಗೂಡಿ ಸಿಂಗಾಪುರದಲ್ಲಿ ಬಂಡಾಯ ನಡೆಸಿದವರಲ್ಲಿ ನಲವತ್ತೇಳು ಮಂದಿಗೆ ಗುಂಡಿಟ್ಟು ಕೊಂದದ್ದು ಮೊದಲಾದ ಘಟನೆಗಳು ನಡೆದಿದ್ದವು. ಆ ಹಿನ್ನೆಲೆಯಲ್ಲಿ ೧೯೧೫ರಲ್ಲಿ ’ಡಿಫೆನ್ಸ್ ಆಫ್ ಇಂಡಿಯಾ ಆಕ್ಟ್’ ಜಾರಿಯಾಗಿತ್ತು. ೧೯೧೭ರ ನಡುಭಾಗದಲ್ಲಿ ಘೋಷಿತವಾದ ’ಮಾಂಟೆಗೂ-ಚೆಮ್ಸ್ಫರ್ಡ್ ಸುಧಾರಣೆ’ ಹೆಚ್ಚಿನ ಭಾರತೀಯರ ದೃಷ್ಟಿಯಲ್ಲಿ ’ಒಂದು ಹೆಜ್ಜೆ ಮುಂದಕ್ಕೆ, ಎರಡು ಹೆಜ್ಜೆ ಹಿಂದಕ್ಕೆ’ ಎಂಬಂತೆ ಆಗಿತ್ತು. ಒಟ್ಟಿನ ಮೇಲೆ ಬ್ರಿಟಿ? ಪ್ರಭುತ್ವದ ದಮನಶಾಹಿ ಕೊನೆಗೊಳ್ಳುವ ಲಕ್ಷಣಗಳೇನಿರಲಿಲ್ಲ.
ಈ ಸಂಧಿಯಲ್ಲಿ ಗಾಯದ ಮೇಲೆ ಬರೆ ಎಳೆದಂತೆ ನಡೆದದ್ದು ಜಲಿಯನ್ವಾಲಾಬಾಗ್ ಹತ್ಯಾಕಾಂಡ.
ಒಂದು ವಿಧಿವೈಕಟ್ಯ
೧೯೧೯ರ ಪೂರ್ವಭಾಗದಲ್ಲಿ ನಡೆದ ಆ ದು?ರ್ವದಲ್ಲಿ ಒಂದು ವಿಧಿವೈಕಟ್ಯವೂ ಇದೆ. ಅದು ನಡೆದದ್ದು ಮೊದಲ ಮಹಾಯುದ್ಧ ಸಮಾಪ್ತಗೊಂಡ ಅಲ್ಪಕಾಲದಲ್ಲಿ. ಮೊದಲ ಮಹಾಯುದ್ಧಕ್ಕೂ ಭಾರತಕ್ಕೂ ನೇರ ಸಂಬಂಧವೇನಿರಲಿಲ್ಲವಾದರೂ ದೊಡ್ಡ ಸಂಖ್ಯೆಯಲ್ಲಿ ಭಾರತೀಯ ಸೈನಿಕರು ಭಾಗವಹಿಸಬೇಕೆಂಬ ಬ್ರಿಟಿಷ್ ಪ್ರಭುತ್ವದ ನಿರ್ದೇಶನಕ್ಕೆ ಭಾರತದೊಳಗಿನ ಹಲವು ವಲಯಗಳು ಸಮ್ಮತಿಸಿದುದರ ಹಿಂದೆ ಇದ್ದ ಚಿಂತನೆ, ಅಲ್ಲಿಂದ ಆಚೆಗಾದರೂ ಬ್ರಿಟಿ? ಸರ್ಕಾರವು ಭಾರತದ ಸ್ವಾತಂತ್ರ್ಯಾಕಾಂಕ್ಷೆಗೆ ಹೆಚ್ಚು ಸುಮುಖವಾದೀತು ಎಂಬ ನಿರೀಕ್ಷೆ. ಯುದ್ಧದಲ್ಲಿ ಸೇವೆ ಸಲ್ಲಿಸಿದ ಸುಮಾರು ಹದಿನಾಲ್ಕೂವರೆ ಲಕ್ಷ ಭಾರತೀಯ ಸೈನಿಕರಲ್ಲಿ ಸುಮಾರು ಮೂರರಲ್ಲೊಂದು ಭಾಗದ? ಸೈನಿಕರು ಪಂಜಾಬ್ ಮೂಲದವರೇ ಆಗಿದ್ದರು. ಮೊದಲ ಮಹಾಯುದ್ಧದಲ್ಲಿ ಭಾರತೀಯ ಸೈನಿಕರಿಂದ ಸಂದ ದೊಡ್ಡ ಕೊಡುಗೆಯ ಸ್ಮಾರಕವಾಗಿಯೇ ರಾಜಧಾನಿ ದೆಹಲಿಯಲ್ಲಿ ಆಮೇಲಿನ ಕಾಲದಲ್ಲಿ ’ಇಂಡಿಯಾ ಗೇಟ್’ ನಿರ್ಮಾಣಗೊಂಡದ್ದು.
ಆದರೆ ಯುದ್ಧಾನಂತರ ಭಾರತದ ಜನತೆ ನಿರೀಕ್ಷಿಸಿಕೊಂಡಿದ್ದಂತೆ ಆಗಲಿಲ್ಲ. ಮಾತ್ರವಲ್ಲ; ಭಾರತಕ್ಕೆ ತೀರಾ ಪ್ರತಿಕೂಲವೇ ಆದ ಉಗ್ರಕ್ರಮಗಳನ್ನು ಸರ್ಕಾರವು ಕೈಗೊಂಡಿತು. ಇದೊಂದು ವಿಧಿವೈಪರೀತ್ಯವೆಂದೇ ಅನಿಸಿತು. ಏಕೆಂದರೆ ಮಹಾಯುದ್ಧದಲ್ಲಿ ಬ್ರಿಟಿ?ರದು ಮೇಲುಗೈಯಾಗುವುದರಲ್ಲಿ ಭಾರತೀಯ ಸೈನಿಕ ದಳಗಳ ಪಾತ್ರ ಗಣನೀಯವಾಗಿ ಇದ್ದಿತೆಂಬುದನ್ನು ಇಂಗ್ಲೆಂಡ್ ಸೇರಿದಂತೆ ಯೂರೋಪಿನ ದೇಶಗಳು ಸ್ಪ?ವಾಗಿಯೇ ಗುರುತಿಸಿದ್ದವು. ಮುಂದೆ ವಿಶ್ವಸಂಸ್ಥೆಯಾಗಿ ವಿಕಾಸಗೊಂಡ ಸಂಘಟನೆಯ ಬೀಜಾರೋಪವಾದ ಜೂನ್ ೧೯೧೯ರಲ್ಲಿ ಫ್ರಾನ್ಸಿನ ವರ್ಸೇಲ್ಸ್ ಅರಮನೆಯಲ್ಲಿ ನಡೆದ ಶಾಂತಿಸಮ್ಮೇಳನದಲ್ಲಿ ಭಾಗವಹಿಸಲು ಬಿಕಾನೇರಿನ ಮಹಾರಾಜ ಗಂಗಾಸಿಂಗ್ ಆಮಂತ್ರಿತ ರಾಗಿದ್ದುದು ಒಂದು ಉಲ್ಲೇಖನೀಯ ಸಂದರ್ಭ. ಐತಿಹಾಸಿಕ ವರ್ಸೇಲ್ಸ್ ಒಪ್ಪಂದಕ್ಕೆ ಸಹಿ ಹಾಕಿದವರಲ್ಲಿ (ಆಗಿನ ಭಾರತ ಸರ್ಕಾರದ ಭಾಗವಾಗಿರದಿದ್ದರೂ) ಗಂಗಾಸಿಂಗ್ ಅವರಿದ್ದರು. ಈ ಯಾದೃಚ್ಛಿಕ ಘಟನೆಯಿಂದಾಗಿ ಭಾರತವು ವಿಶ್ವರಾ?ಸಂಘಟನೆಯ ಭಾಗವಾಗಿ ಪರಿಗಣಿತವಾಗುವಂತಾಯಿತು.
ಹಾಗೆ ನೋಡಿದರೆ ಆಗ ಅಧೀನರಾ?ವಾಗಿದ್ದ ಭಾರತಕ್ಕೆ ಪ್ರತಿನಿಧಿಯಾಗಿ ಅಂತರರಾಷ್ಟ್ರೀಯ ಸಂಘಟನೆಯಲ್ಲಿ ಭಾಗವಹಿಸುವ ಅಧಿಕೃತತೆಯೇನಿರಲಿಲ್ಲ. ಭಾರತ ಆಗ ’ವಸಾಹತು’ ಮಾತ್ರವಾಗಿದ್ದಿತು. ಹೀಗೆ ಭಾರತವು ರಾಜಕೀಯ ಸ್ವಾತಂತ್ರ್ಯ ಗಳಿಸಿಕೊಳ್ಳುವುದಕ್ಕೆ ಮೂರು ದಶಕಗಳ? ಹಿಂದೆಯೇ ಬಲಿ? ರಾ?ಗಳ ಪಂಕ್ತಿಯಲ್ಲಿ ಸ್ಥಾನವನ್ನು ಪಡೆದುಕೊಂಡಂತಾಗಿದ್ದುದು ಒಂದು ಸ್ಮರಣೀಯ ಸನ್ನಿವೇಶ.
ರೌಲೆಟ್ ಕಾಯ್ದೆ
ಮೊದಲ ಮಹಾಯುದ್ಧದ ಕಾಲಾವಧಿಯಲ್ಲಿ ಹಾಗೂ ಅದಕ್ಕೆ ಈ?ತ್ ಪೂರ್ವದ ಅವಧಿಯಲ್ಲಿ ಭಾರತದಲ್ಲಿ ನಡೆದಿದ್ದ ‘ಕ್ರಾಂತಿಕಾರಿ’ ಎಂದರೆ ಸ್ವಾತಂತ್ರ್ಯಪರವಾದ ಭೂಗತ ಚಟುವಟಿಕೆಗಳ ನಿಯಂತ್ರಣಕ್ಕೆ ಅವಶ್ಯವೆನಿಸಿದ ಕ್ರಮಗಳನ್ನು ಕುರಿತು ಸಲಹೆ ನೀಡುವಂತೆ ಇಂಗ್ಲೆಂಡಿನಲ್ಲಿದ್ದ ನ್ಯಾಯಾಧೀಶ ಸಿಡ್ನಿ ರೌಲೆಟ್ನ ಅಧ್ಯಕ್ಷತೆಯಲ್ಲಿ ಸಮಿತಿಯನ್ನು ಬ್ರಿಟಿಷ್ ಪ್ರಭುತ್ವ ನೇಮಿಸಿತ್ತು. ಆ ಸಮಿತಿಯ ಸಲಹಾವಳಿಯೇ ರೌಲೆಟ್ ಕಾಯ್ದೆಯಾಗಿ ಅಮಲುಗೊಂಡಿತ್ತು. ಭೂಗತ ಕ್ರಾಂತಿಕಾರಿಗಳಿಗೆ ರ?ದ ಮತ್ತು ಜರ್ಮನಿಯ ಹಲವು ತೀವ್ರವಾದಿ ವಲಯಗಳೊಡನೆ ಸಂಪರ್ಕವಿದ್ದಿತು ಮೊದಲಾದ ಹಲವು ಉತ್ಪ್ರೇಕ್ಷಿತ ಕಲ್ಪನೆಗಳನ್ನು ರೌಲೆಟ್ ವರದಿಯು ಆಧರಿಸಿತ್ತು. ಅದು ಹೇಗೇ ಇದ್ದರೂ, ಭಾರತದಲ್ಲಿ ಭೂಗತ ಕ್ರಾಂತಿಕಾರಿ ಚಟುವಟಿಕೆಗಳು ಪ್ರಚಲಿತವಿದ್ದುದಂತೂ ಹೌದು. ಮಾರ್ಚ್ ೧೯೧೯ರಲ್ಲಿ ಜಾರಿಗೆ ಬಂದ ರೌಲೆಟ್ ಕಾಯ್ದೆ ಒಂದು ದೃಷ್ಟಿಯಿಂದ ೧೯೧೫ರ ’ಡಿಫೆನ್ಸ್ ಆಫ್ ಇಂಡಿಯಾ ಆಕ್ಟ್’ನ ಮುಂದುವರಿದ ಭಾಗದಂತೆಯೆ ಇದ್ದಿತು; ಹಿಂದೆಯೆ ಅಧಿಕಾರಿಗಳಿಗೆ ನೀಡಿದ್ದವಕ್ಕಿಂತ ಹೆಚ್ಚಿನ ನಿಯಂತ್ರಣಾಧಿಕಾರವನ್ನು ಅಧಿಕಾರಿಗಳಿಗೆ ನೀಡಲಾಗಿತ್ತು.
ಹೊಸ ಕಾಯ್ದೆಯಡಿಯಲ್ಲಿ ಸರ್ಕಾರವು ಶಂಕಿಸಿದ ಯಾವುದೇ ವ್ಯಕ್ತಿಯನ್ನು ಮುನ್ಸೂಚನೆ ಇಲ್ಲದೆಯೆ ಬಂಧಿಸಬಹುದಾಗಿತ್ತು – ತನಿಖೆ ಅಥವಾ ವಿಚಾರಣೆಯೇ ಇಲ್ಲದೆ. ಆಪಾದನೆಗೆ ಸಂಬಂಧಿಸಿದಂತೆ ಸಾಕ್ಷಿಗಳನ್ನು ಕರೆಯಬೇಕಾಗಿರಲಿಲ್ಲ; ಅವರು ನೀಡಿದ ಸ್ಪಷ್ಟೀಕರಣಗಳನ್ನು ಸರ್ಕಾರವು ಪರಿಶೀಲಿಸಬೇಕಾದದ್ದಿಲ್ಲ ಎಂದೇ ರೌಲೆಟ್ ಕಾಯ್ದೆಯಲ್ಲಿ ಘೋಷಿಸಲಾಗಿತ್ತು. ಹೀಗೆ ೧೯೧೪ಕ್ಕೆ ಹಿಂದೆ ಇದ್ದ ಅಲ್ಪಸ್ವಲ್ಪ ಜನಾಧಿಕಾರಗಳನ್ನೂ ಈಗ ಮೊಟಕುಗೊಳಿಸಲಾಗಿತ್ತು.
ವಂಗವಿಭಜನೆಯ ಮತ್ತು ಅದರ ಹಿಂದುಗೂಡಿದ ಬೆಳವಣಿಗೆಗಳಿಂದ ಆಗಲೇ ಉದ್ವಿಗ್ನವಾಗಿದ್ದ ಭಾರತದ ಆಕ್ರೋಶಕ್ಕೆ ರೌಲೆಟ್ ಕಾಯ್ದೆ ಇನ್ನ? ಆಜ್ಯ ಸುರಿದಂತಾಯಿತು. ಅದೊಂದು ಕರಾಳ ಶಾಸನವೆಂದು ದೇಶದೆಲ್ಲೆಡೆ ಅಸಮಾಧಾನ ಭುಗಿಲೆದ್ದಿತು. ಬ್ರಿಟಿಷ್ ಪ್ರಭುತ್ವವು ನ್ಯಾಯಪಕ್ಷಪಾತಿ ಎಂದು ಕೆಲವು ಉದಾರವಾದಿ ವಲಯಗಳಲ್ಲಾದರೂ ಹಿಂದೆ ಇದ್ದ ವಿಶ್ವಾಸವು ರೌಲೆಟ್ ಕಾಯ್ದೆ ಜಾರಿಯಾದ ಮೇಲೆ ಶಾಶ್ವತವಾಗಿ ಅಸ್ತಂಗತವಾಯಿತು. ಮಾಂಟೆಗೂ- ಚೆಮ್ಸ್ಫರ್ಡ್ ಸುಧಾರಣೆಗಳಲ್ಲಿ ಧ್ವನಿತವಾಗಿದ್ದ ರಾಜ್ಯಾಂಗಸುಧಾರಣೆಯ ಅಲ್ಪ ಭರವಸೆಯೂ ಮರೆಯಾಯಿತು.
ಈ ಹಿನ್ನೆಲೆಯಲ್ಲಿ ನಡೆದದ್ದು – ವಿಶ್ವವನ್ನೇ ಚಕಿತಗೊಳಿಸಿದ ಜಲಿಯನ್ವಾಲಾಬಾಗ್ ದುರಂತ.
ದುಃಶಾಸನ
ಪಂಜಾಬಿನ ಗವರ್ನರ್ ಮೈಕೆಲ್ ಓಡ್ವಯರನ ಜನವಿರೋಧಿ ಪ್ರವೃತ್ತಿಯು ಹಿಂದಿನಿಂದಲೇ ಪುರಾವೆಗೊಂಡಿತ್ತು. ಅವನು ಪಂಜಾಬಿನ ಲೆಫ್ಟಿನೆಂಟ್-ಗವರ್ನರ್ ಆಗಿ ನಿಯುಕ್ತಗೊಂಡ ಸಂದರ್ಭದಲ್ಲಿಯೆ ವೈಸ್ರಾಯ್ ಹಾರ್ಡಿಂಗ್ ಪಂಜಾಬ್ ಸೂಕ್ಷ್ಮಪ್ರದೇಶವೆಂದೂ ಅಲ್ಲಿ ಯಾವುದೇ ಸಂಘ?ಗಳಿಗೆ ಆಸ್ಪದವಾಗದಂತೆ ಸನ್ನಿವೇಶವನ್ನು ನಿರ್ವಹಿಸಬೇಕೆಂದೂ ಎಚ್ಚರಿಸಿದ್ದ. ಆದರೆ ಅಲ್ಪಕಾಲದಲ್ಲಿ ಓಡ್ವಯರನ ಮೂಲ ಪಾಶವೀ ಸ್ವಭಾವದ್ದೇ ಮೇಲುಗೈಯಾಯಿತು. ಮಹಾಯುದ್ಧಕ್ಕಾಗಿ ಧನಸಂಗ್ರಹ ಮಾಡುವಲ್ಲಿ ಕಡುಬಡವರ ಬಗೆಗೂ ಅತ್ಯಂತ ಕ್ರೌರ್ಯದಿಂದ ವರ್ತಿಸಿದ್ದ. ದೊಡ್ಡ ಸಂಖ್ಯೆಯ ತರುಣರನ್ನು ಬಲಾತ್ಕಾರದಿಂದ ಸೇನೆಗೆ ಸೇರ್ಪಡೆಗೊಳಿಸಿದ್ದ. ನಾಲ್ಕು ವ?ಗಳ ಅವಧಿಯ ಮಹಾಯುದ್ಧದಲ್ಲಿ ಪಂಜಾಬ್ ಪ್ರಾಂತದಿಂದ ದಾಖಲಾದ ಸೈನಿಕರ ಸಂಖ್ಯೆಯೇ ಗಣನೀಯ ಭಾಗದ? ಇದ್ದಿತು. ಸಾಮಾಜಿಕವಾಗಿಯಂತೂ ಓಡ್ವಯರನದು ದಬ್ಬಾಳಿಕೆಗೆ ಅಡ್ಡಹೆಸರೇ ಆಗಿಬಿಟ್ಟಿತ್ತು. ಲೋಕಮಾನ್ಯರಂತಹ ಮಹಾನಾಯಕರು ಪಂಜಾಬನ್ನು ಪ್ರವೇಶಿಸದಂತೆ ಓಡ್ವಯರನು ನಿ?ಧ ಹೇರಿದ್ದ. ಪತ್ರಿಕಾ ನಿರ್ಬಂಧವಂತೂ ಅತ್ಯಂತ ಬಿಗಿಯಾಗಿತ್ತು.
ಒಂದು ಕಡೆ ಇಂತಹ ದುರಾಡಳಿತ, ಇನ್ನೊಂದು ಕಡೆ ದೈನಂದಿನ ಜೀವಿಕೆಗೆ ಬೇಕಾದ ಕನಿ? ಆಹಾರಸಾಮಗ್ರಿಗಳಿಗೂ ತತ್ವಾರ – ಹೀಗೆ ಜನಸಾಮಾನ್ಯರ ಬದುಕು ನರಕಪ್ರಾಯವಾಗಿತ್ತು. ಯಾವುದೇ ಸಣ್ಣ ಸಭೆಯಲ್ಲಿ ಭಾಗವಹಿಸಿದ ಜನಸಾಮಾನ್ಯರೂ ಕೂಡಲೇ ದಂಡನೆಗೆ ಒಳಗಾಗುತ್ತಿದ್ದರು. ಅತ್ಯಂತ ಜನಪ್ರಿಯ ನಾಯಕರನ್ನು ಓಡ್ವಯರನು ತುಚ್ಛ ರೀತಿಯಲ್ಲಿ ಅವಮಾನಿಸುತ್ತಿದ್ದ. ಈ ಎಲ್ಲ ಹಿನ್ನೆಲೆಯಲ್ಲಿ ಅತ್ಯಂತ ಜನವಿರೋಧಿ ಅಧಿಕಾರಿ ಎಂಬ ಪಟ್ಟಕ್ಕೆ ಓಡ್ವಯರನು ಪಾತ್ರನಾಗಿದ್ದ. ಅವನು ಬೇರೆಲ್ಲಿಗಾದರೂ ವರ್ಗವಾಗಿ ತೊಲಗಲಿ – ಎಂದು ಪಂಜಾಬಿನ ಜನತೆ ಪ್ರತೀಕ್ಷಿಸುತ್ತಿದ್ದರು.
ಆದರೆ ಓಡ್ವಯರನ ಪಾಪದ ಕುಂಭ ತುಂಬಲು ಜಲಿಯನ್ವಾಲಾಬಾಗ್ ಮಾರಣಹೋಮವೇ ನಡೆಯಬೇಕಾಯಿತು. ಆ ದು?ರ್ವದ ಜ್ವಾಲೆಗೆ ಕಿಡಿಯಾದದ್ದು ರೌಲೆಟ್ ಕಾಯ್ದೆಗೆ ಹೊಮ್ಮಿದ್ದ ವ್ಯಾಪಕ ಪ್ರತಿಭಟನೆ. ಪಂಜಾಬ್ ಭಾಗದಲ್ಲಿ ಆ ಪ್ರತಿಭಟನೆಯ ಮುಂಚೂಣಿಯಲ್ಲಿದ್ದವರು ಡಾ. ಸೈಫುದ್ದೀನ್ ಕಿಚ್ಲೂ ಮತ್ತು ಡಾ. ಸತ್ಯಪಾಲ್. ಕಿಚ್ಲೂ ಅವರಿಗೆ ವಿದ್ವಾಂಸರೆಂದೂ ನಿಃಸ್ಪೃಹ ಸಮಾಜಸೇವಕರೆಂದೂ ದೊಡ್ಡ ಹೆಸರಿತ್ತು; ಸತ್ಯಪಾಲ್ ಮಹಾಯುದ್ಧದ ಸಂದರ್ಭದಲ್ಲಿ ಸೇನೆಯ ವೈದ್ಯಕೀಯ ವಿಭಾಗಕ್ಕೆ ಸಲ್ಲಿಸಿದ ಉನ್ನತ ಸೇವೆಯಿಂದಾಗಿ ಜನಪ್ರಿಯತೆಗೆ ಪಾತ್ರರಾಗಿದ್ದರು. ರೌಲೆಟ್ ಕಾಯ್ದೆಗೆ ಪಂಜಾಬಿನ ವಿವಿಧ ಭಾಗಗಳಲ್ಲಿ ವಿರೋಧವನ್ನು ಸಂಘಟಿಸುತ್ತಿದ್ದವರು ಈ ಇಬ್ಬರು ಅಗ್ರಣಿಗಳು. ಅವರ ಮತ್ತು ದೊಡ್ಡ ಸಹಕಾರಿ ತಂಡದ ಪ್ರಂiiತ್ನದಿಂದಾಗಿ ಮಾರ್ಚ್ ೩೦ರಂದೂ ಏಪ್ರಿಲ್ ೬ರಂದೂ ನಡೆದ ರೌಲೆಟ್ ವಿರೋಧಿ ಸತ್ಯಾಗ್ರಹಕ್ಕೆ ಅಭೂತಪೂರ್ವ ಜನಸ್ಪಂದನ ಸಿಕ್ಕಿತ್ತು.
ಲಷ್ಕರೀ ಆಡಳಿತ
ವಾಸ್ತವವೆಂದರೆ ಜನಾಂದೋಲನವು ಹಿಂಸೆಯ ಮಾರ್ಗಕ್ಕೆ ತಿರುಗದಂತೆ ನಿವಾರಿಸಿದ್ದುದು ಕಿಚ್ಲೂ ಮತ್ತು ಸತ್ಯಪಾಲ್ ಅವರ ನೇತೃತ್ವವೇ. ಈ ಸೂಕ್ಷ್ಮವನ್ನು ಗ್ರಹಿಸದ ಸರ್ಕಾರವು ಓಡ್ವಯರನ ದುರ್ಮಂತ್ರಣದಂತೆ ಈ ಇಬ್ಬರು ನಾಯಕರನ್ನು ಬಂಧಿಸಿ ಗಡೀಪಾರು ಮಾಡುವ ಕ್ರಮಕೈಗೊಂಡಿತು. ಅವರನ್ನು ಸಾಮಾನ್ಯ ಕೈದಿಗಳಂತೆ ಅತ್ಯಂತ ಹೀನಾಯವಾಗಿ ನಡೆಸಿಕೊಂಡದ್ದಲ್ಲದೆ ದೂರದ ಲಾಹೋರಿಗೆ ಕಳಿಸಿ ಅಲ್ಲಿಯ ಕಾರಾಗೃಹದಲ್ಲಿರಿಸಲಾಯಿತು. ಹೀಗಾದುದರಿಂದ ಅಮೃತಸರದಲ್ಲಿ ಒಂದೇ ವಾರದಲ್ಲಿ ನಡೆದ ಕುಪ್ರಸಿದ್ಧ ಹತ್ಯಾಕಾಂಡದ ವಿವರಗಳು ಅವರಿಗೆ ತಿಳಿದದ್ದು ಎಷ್ಟು ತಿಂಗಳಾದ ಮೇಲೆ. ಪಂಜಾಬಿನಲ್ಲಿ ಸುದ್ದಿ-ನಿಯಂತ್ರಣ ಎಷ್ಟು ಕಠಿಣವಾಗಿತ್ತೆಂದರೆ ಅನ್ಯ ಪ್ರಾಂತಗಳಿಗೆ ಆ ಸುದ್ದಿ ತಲಪಲೂ ಬಹಳ ಸಮಯ ಹಿಡಿಯಿತು.
ಭಾರತೀಯರು ಎಂದಿಗೂ ಮರೆಯಲಾಗದ ಮತ್ತು ಇತಿಹಾಸದಲ್ಲಿಯೂ ಬ್ರಿಟಿ? ಸಾಮ್ರಾಜ್ಯಶಾಹಿಯ ಅಧೋಬಿಂದುವೆಂದು ಪರಿಗಣಿಸಬೇಕಾದ ಜಲಿಯನ್ವಾಲಾಬಾಗ್ ದುರ್ಘಟನೆಗೆ ಹೋಲಿಸಬಹುದಾದ ದೌರ್ಜನ್ಯವೆಂದರೆ ಅಂದಿನಿಂದ ಎರಡು ದಶಕಗಳಾದ ಮೇಲೆ ಯೂರೋಪಿನಲ್ಲಿ ಅಡಾಲ್ಫ್ ಹಿಟ್ಲರನು ಯಹೂದ್ಯರನ್ನು ಗುರಿಯಾಗಿಸಿಕೊಂಡು ಮೃತ್ಯುಕೂಪಗಳನ್ನು ಏರ್ಪಡಿಸಿ ನಡೆಸಿದ ನರಮೇಧ. ಇತಿಹಾಸದ ಅಭ್ಯಾಸಿಗಳಿಗೆ ಸುವಿದಿತವೇ ಆಗಿದ್ದರೂ ಜಲಿಯನ್ವಾಲಾಬಾಗ್ನಂತಹ ದುಃಸ್ವಪ್ನ- ಸದೃಶ ಘಟನೆಯ ಸ್ವರೂಪವನ್ನು ಅತ್ಯಂತ ಸಂಕ್ಷಿಪ್ತವಾಗಿಯಾದರೂ ಮೆಲುಕುಹಾಕಬೇಕಾದ ಸಂದರ್ಭ – ಅದರ ನೂರನೇ ವ?ದ ಸ್ಮರಣೆ. ಆ ಘಟನೆ ನಡೆದದ್ದು ೧೯೧೯ ಏಪ್ರಿಲ್ ೧೩ ಭಾನುವಾರದಂದು.
ಜಲಿಯನ್ವಾಲಾಬಾಗ್ ಇರುವುದು ಪಂಜಾಬಿನ ಅಮೃತಸರದಲ್ಲಿ. ಪ್ರಸಿದ್ಧ ಸ್ವರ್ಣಮಂದಿರದ ಈಶಾನ್ಯದಿಕ್ಕಿನಲ್ಲಿ ಕೇವಲ ೩೦೦ ಮೀಟರ್ ದೂರದಲ್ಲಿರುವುದು. ಹಿಂದೆ ಒಂದು ತೋಟವಾಗಿದ್ದ ಆ ನಿವೇಶನವನ್ನು ೧೯೧೯ರ ವೇಳೆಗೆ ಸಾರ್ವಜನಿಕ ಸಭೆಗಳಿಗೆ ಮೈದಾನವಾಗಿ ಬಳಸಲಾಗುತ್ತಿತ್ತು. ಆ ಮೈದಾನದ ವಿಸ್ತೀರ್ಣ ೨೨೫x೧೮೦ ಮೀಟರ್ನ? ಮಾತ್ರ. ಆಯತಾಕಾರದ ಆ ಮೈದಾನವನ್ನು ಸುತ್ತುವರಿದ ಮನೆಗಳ ಹಿಂಭಾಗದ ಗೋಡೆಗಳೇ ಮೈದಾನದ ಆವರಣದ ಗಡಿಗಳು. ಆ ಮೈದಾನಕ್ಕೆ ಇದ್ದ ಏಕೈಕ ಪ್ರವೇಶದ್ವಾರ ಒಂದು ತುದಿಯಲ್ಲಿದ್ದು ಐದು ಅಡಿ ಅಗಲದ?ರದು ಮಾತ್ರವಾಗಿತ್ತು. ಅಂಚಿಗೆ ಒಂದು ಪಾಳುಬಾವಿ ಇದ್ದಿತು. ದೇಶದೆಲ್ಲೆಡೆ ಕಾಣಬಹುದಾದಂತಹ ಆ ಸ್ಥಳ ಭಾರತದ ದೇಶಭಕ್ತರಿಗೆ ಈಗ ಒಂದು ತೀರ್ಥಕ್ಷೇತ್ರ.
ನೂರುವ? ಹಿಂದಿನ ಆ ದುರ್ದಿನದಂದು ಏನು ನಡೆಯಿತೆಂಬುದರ ಸ್ಮರಣೆ ಈಗಲೂ ಹೃದಯದ್ರಾವಕವಾದುದು. ಅಲ್ಲಿ ನೆರೆದಿದ್ದವರು ಬ್ರಿಟಿಷ್ ಪ್ರಭುತ್ವದ ಆಗಿನ ದಮನಧೋರಣೆಗಳಿಗೆ ಪ್ರತಿಭಟಿಸಲು ಶಾಂತಿಯುತವಾಗಿ ಸೇರಿದ ಇಪ್ಪತ್ತು- ಇಪ್ಪತೈದು ಸಾವಿರದ? ಮಂದಿ ನಿಃಶಸ್ತ್ರ ದೇಶಭಕ್ತರು. ಆ ಜಂಗುಳಿಯಲ್ಲಿ ಮಹಿಳೆಯರು, ಮಕ್ಕಳು, ವೃದ್ಧರು ಕೂಡಾ ಗಣನೀಯ ಸಂಖ್ಯೆಯಲ್ಲಿ ಇದ್ದರು. ಆ ಜನಸಮೂಹದ ಮೇಲೆ ಸಂಜೆ ಐದುಗಂಟೆ ದಾಟುತ್ತಿದ್ದಂತೆ ಗುಂಡಿನ ಸುರಿಮಳೆಯಾಗತೊಡಗಿತು. ಮೈದಾನದ ಅಂಚಿನಲ್ಲಿ ನಿಂತಿದ್ದ ಸುಮಾರು ಐವತ್ತರವತ್ತು ಸೈನಿಕರ ಬಂದೂಕುಗಳಿಂದ ಸತತವಾಗಿ ಹತ್ತು-ಹದಿನೈದು ನಿಮಿಷಗಳ ಕಾಲ ಗುಂಡಿನದಾಳಿ ನಡೆಯಿತು.
ನೋಡನೋಡುತ್ತಿದ್ದಂತೆ ಇಡೀ ಮೈದಾನ ರಕ್ತಸಿಕ್ತವಾಯಿತು. ಗುಂಡುಗಳಿಗೆ ತುತ್ತಾದವರು ಹಲವು ನೂರು ಮಂದಿಯಾದರೆ ಗಾಯಗೊಂಡವರೂ, ಜನಸಂದೋಹದ ಕಾಲ್ತುಳಿತಕ್ಕೆ ಸಿಕ್ಕಿದವರೂ, ರಕ್ತಸ್ರಾವಕ್ಕೆ ಒಳಗಾದವರೂ ಇನ್ನೂ ಹಲವು ನೂರು ಮಂದಿ. ಗುಂಡುಗಳಿಂದ ಕ್ಷಣದಲ್ಲಿಯೇ ಅಲ್ಲಿ ಮೃತರಾದವರು ನಾಲ್ಕು ನೂರಕ್ಕೂ ಹೆಚ್ಚುಮಂದಿ ಎಂದು ಒಂದು ಅಂದಾಜು.
ಬ್ರಿಟಿಷ್ ಸರ್ಕಾರದ ಪ್ರತಿನಿಧಿಗಳಾಗಿ ಈ ಅಮಾನುಷ ಹತ್ಯಾಕಾಂಡವನ್ನು ನಡೆಸಿದವರು ಪಂಜಾಬಿನ ಗವರ್ನರ್-ಜನರಲ್ ಮೈಕೆಲ್ ಓಡ್ವಯರ್ ಮತ್ತು ಬ್ರಿಗೇಡಿಯರ್-ಜನರಲ್ ಆರ್.ಇ.ಎಚ್. ಡೈಯರ್.
ಹತ್ಯಾಕಾಂಡದ ಅಲ್ಪಸ್ವಲ್ಪ ವಿವರಗಳು ಸೋರಿ ಹೊರಭಾಗಗಳಿಗೆ ತಲಪತೊಡಗಿದಾಗ ಗುಜ್ರನ್ವಾಲಾ, ಲಾಹೋರ್, ಲಾಹೋರ್ ಸಮೀಪದ ಕಸೂರ್ ಮೊದಲಾದೆಡೆಗಳಲ್ಲಿಯೂ ಪ್ರತಿಭಟನೆಗಳೂ ದಮನಕಾರ್ಯಗಳೂ ಮುಂದುವರಿದವು.
ಪೂರ್ವಪೀಠಿಕೆ
೧೯೧೯ ಏಪ್ರಿಲ್ ತಿಂಗಳ ಹತ್ಯಾಕಾಂಡ ನಡೆಯುವುದಕ್ಕೆ ಹಲವಾರು ವಷ್ ಹಿಂದಿನಿಂದಲೇ ಬ್ರಿಟಿಷ ಪ್ರಭುತ್ವದ ದಮನಶಾಹಿ ಧೋರಣೆಗಳು ಭಾರತದ ಜನರ ಉಸಿರುಗಟ್ಟಿಸುವ ರೀತಿಯಲ್ಲಿ ಇದ್ದವು. ದಮನ-ಧೋರಣೆ ಪರಾಕಾ? ಸ್ಥಿತಿ ತಲಪಿದ್ದು ೧೯೧೯ರ ಆರಂಭದ ವೇಳೆಗೆ. ಹಿಂದಿನಿಂದಲೇ ಜಾರಿಯಲ್ಲಿದ್ದ ಜನವಿರೋಧಿ ಕಾಯ್ದೆಗಳು ಸಾಲದೆಂಬಂತೆ ವೈಸರಾಯ್ ಚೆಮ್ಸ್ಫರ್ಡ್ನ ಹಯಾಮಿನಲ್ಲಿ ಒಂದು ವಿಶೇಷ ’ಸೆಡಿ?ನ್ ಕಮಿಟಿ’ (ರಾಜದ್ರೋಹ ಪ್ರಕರಣಗಳ ತನಿಖಾ ಸಮಿತಿ) ರಚಿತಗೊಂಡಿತ್ತು. ಹೀಗೆ ಸ್ವಾತಂತ್ರ್ಯ ಹೋರಾಟಗಾರರೆಲ್ಲ ಏಕಾಏಕಿ ’ಅಪರಾಧಿ’ಗಳು, ’ಗೂಂಡಾ’ಗಳು, ’ಹಿಂಸೆಯಲ್ಲಿ ತೊಡಗುವವರು’ ಎನಿಸಿಬಿಟ್ಟರು. ಆ ಪ್ರಕ್ರಿಯೆಯನ್ನು ಇನ್ನ? ಬಲಿ?ಗೊಳಿಸಲು ಹೊರಟದ್ದು ೧೯೧೯ ಜನವರಿ ತಿಂಗಳಲ್ಲಿ ಯೋಜನೆಗೊಂಡ ರೌಲೆಟ್ ಮಸೂದೆ. ಈ ಶಾಸನ ನೀಡಿದ ಅಧಿಕಾರದಿಂದ ಸರ್ಕಾರವು ಯಾವುದೇ ಟೀಕಾಕಾರರನ್ನು ವಿಚಾರಣೆ ಇಲ್ಲದೆಯೇ ಬಂಧಿಸಿ ಎರಡು ವ? ಜೈಲುಶಿಕ್ಷೆ ನೀಡಬಹುದಾಗಿತ್ತು.
ಸಹಜವಾಗಿ ಲೋಕಮಾನ್ಯ ತಿಲಕ್ ಮೊದಲಾದ ಅಗ್ರನಾಯಕರೆಲ್ಲ ಪ್ರತಿಭಟಿಸಿದರು. ಅದಕ್ಕೆ ಹಿಂದೆ ಬ್ರಿಟಿ?ರು ನ್ಯಾಯಪರರೆಂದು ವ?ಗಳುದ್ದಕ್ಕೂ ಹೇಳುತ್ತಬಂದಿದ್ದ ಗಾಂಧಿಯವರೂ ತಮ್ಮ ನಿಲವನ್ನು ಬದಲಾಯಿಸುವುದು ಅನಿವಾರ್ಯಗೊಂಡಿತು. ರೌಲೆಟ್ ಕಾಯ್ದೆಯ ವಿರುದ್ದ ಇಡೀ ದೇಶದಲ್ಲಿ ಪ್ರಮುಖ ಸ್ಥಾನಗಳಲ್ಲಿ ಪ್ರತಿಭಟನೆಗಳೂ ಮೆರವಣಿಗೆಗಳೂ ಸಭೆಗಳೂ ನಡೆಯತೊಡಗಿದವು. ಅತ್ಯಂತ ತೀವ್ರಸ್ವರೂಪದ ಪ್ರತಿಭಟನೆ ನಡೆಯತೊಡಗಿದುದು ಪಂಜಾಬ್ ಪ್ರಾಂತದಲ್ಲಿ. ೧೯೧೯ರ ಮಾರ್ಚ್ ಅಂತ್ಯದಿಂದಾಚೆಗೆ ಪಂಜಾಬಿನಲ್ಲಿ ಹಲವಾರೆಡೆ ಪ್ರತಿಭಟನೆಯ ಸಭೆಗಳು ನಡೆಯತೊಡಗಿದವು. ಒಂದೊಂದು ಸಭೆಯಲ್ಲಿಯೂ ಹತ್ತಾರು ಸಾವಿರ ಸಾರ್ವಜನಿಕರು ಪಾಲ್ಗೊಳ್ಳುತ್ತಿದ್ದರು.
ಇಡೀ ದೇಶದ ಜನತೆಗೆ ಆಕ್ರೋಶ ತಂದ ಸಂಗತಿ ಪಂಜಾಬಿನ ಗೌರವಾನ್ವಿತ ಜನನಾಯಕರಾದ ಡಾ. ಸತ್ಯಪಾಲ್ ಹಾಗೂ ಡಾ. ಕಿಚ್ಲೂ ಅವರನ್ನು ಸರ್ಕಾರವು ಬಂಧಿಸಿ ದೂರದ ಕಾಡಿಗೆ ರವಾನಿಸಿದುದು. ಈ ನಾಯಕರನ್ನು ಒಡನೆಯೇ ಬಿಡುಗಡೆ ಮಾಡಬೇಕೆಂದು ಆಗ್ರಹಿಸಿ ಅಮೃತಸರದಲ್ಲಿ ನಡೆದ ಮೆರವಣಿಗೆಯ ಮೇಲೆ ಸರ್ಕಾರವು ಗುಂಡಿನ ದಾಳಿ ನಡೆಸಿದಾಗ ಇಪ್ಪತ್ತು ಜನರು ಮರಣಹೊಂದಿದರು. ’ಮೃತರಾದವರ ಅಂತ್ಯಸಂಸ್ಕಾರದಲ್ಲಿ ಎಂಟು ಜನರಿಗೆ ಮೀರಿ ಭಾಗವಹಿಸುವಂತಿಲ್ಲ’ ಎಂದೂ ಸರ್ಕಾರವು ಫರ್ಮಾನು ಹೊರಡಿಸಿತು. ಪ್ರತಿಭಟನೆಯನ್ನು ತೀವ್ರಗೊಳಿಸುವುದರ ಹೊರತು ಜನರಿಗೆ ಗತ್ಯಂತರ ಕಾಣಲಿಲ್ಲ.
’ಬೈಸಾಖಿ ಪುಣ್ಯಪರ್ವದಂದೇ…!’
ಏಪ್ರಿಲ್ ೧೩ ಬೈಸಾಖಿ ಪುಣ್ಯಪರ್ವವಾಗಿತ್ತು. ದಿನಗಳು. ಸಿಖ್ಖರಿಗಂತೂ ಅತ್ಯಂತ ಪವಿತ್ರ ದಿವಸ. ಅದು ಖಾಲ್ಸಾ ಪಂಥದ ಸ್ಥಾಪನೆಯ ದಿನ; ಹೀಗಾಗಿ ಎಲ್ಲೆಡೆಗಳಿಂದ ಸಾವಿರಾರು ಮಂದಿ ಭಕ್ತರು ಪ್ರವಾಹದಂತೆ ಅಮೃತಸರದೆಡೆಗೆ ಬರತೊಡಗಿದರು. ಮೆರವಣಿಗೆಗಳನ್ನು ನಿ?ಧಿಸಿ ಜನರಲ್ ಡೈಯರ್ ಡಂಗುರ ಹೊಡೆಸಿದ. ಸರ್ಕಾರದ ಘೋಷಣೆಗಳನ್ನು ಜನರು ಕೇಳಿಸಿಕೊಳ್ಳುವ ಪರಿಸ್ಥಿತಿಯಾದರೂ ಎಲ್ಲಿತ್ತು?
ಮಾ?ಲ್ ಲಾದಂತೆ ಪ್ರವೇಶ ನಿ?ಧಿಸಿದ್ದ ರಸ್ತೆಗಳಲ್ಲಿ ಅನಿವಾರ್ಯವಾಗಿ ಸಂಚರಿಸಬೇಕಾಗಿದ್ದ ಜನರನ್ನು ಛಡಿಯೇಟುಗಳಿಂದ ದಂಡಿಸುವುದಕ್ಕಾಗಿ ಏಟು ಬಾರಿಸುವ ಕೇಂದ್ರವನ್ನೇ ಡೈಯರ್ ಏರ್ಪಡಿಸಿದ್ದ – ’ಫ್ಲಾಗಿಂಗ್ ಬೂತ್’ ಎಂದು.
ರೌಲೆಟ್ ಕಾಯ್ದೆಯನ್ನು ವಿರೋಧಿಸುತ್ತಿದ್ದ ಹತ್ತಾರು ವಕೀಲರಿಗೂ ಡೈಯರ್ ದಂಡನೆ ವಿಧಿಸಿದ್ದ. ವಕೀಲರೂ ನಜರ್ಬಂದಿಯಲ್ಲಿ ಇರುವಂತೆ ಕಟ್ಟಳೆ ಮಾಡಿದ್ದ.
ಜಲಿಯನ್ವಾಲಾಬಾಗ್ ಮೈದಾನದಲ್ಲಿ ಸಂಜೆ ೪.೩೦ ಗಂಟೆಗೆ ಕರೆಯಲಾಗಿದ್ದ ಸಾರ್ವಜನಿಕ ಸಭೆಗೆ ಮಧ್ಯಾಹ್ನ ೩ ಗಂಟೆಯಿಂದಲೇ ಜನರು ತಂಡೋಪತಂಡವಾಗಿ ಸೇರತೊಡಗಿದ್ದರು. ಸಭೆ ಆರಂಭಗೊಳ್ಳಬೇಕಾದ ವೇಳೆಗೆ ನೆರೆದವರ ಸಂಖ್ಯೆ ೨೦,೦೦೦ ದಾಟಿತ್ತು. ಜನರೆಲ್ಲ ನಿಃಶಸ್ತ್ರರು. ಅಶಾಂತಿಗೆ ಆಸ್ಪದ ಕೊಡುವ ಉದ್ದೇಶ ಯಾರಿಗೂ ಇರಲಿಲ್ಲ.
ಸಭೆಯಲ್ಲಿ ನೆರೆದಿದ್ದವರ ಸಂಖ್ಯೆ ೨೦,೦೦೦ಕ್ಕೂ ಮಿಗಿಲಾಗಿತ್ತೆಂಬುದು ನಿಶ್ಚಯಗೊಂಡಿದ್ದರೂ ಆ ಸಂಖ್ಯೆ ಖಚಿತವಾಗಿ ಎ?ಂಬುದು ಊಹೆಯ ವಿ?ಯ. ಸುಮಾರು ೪೦,೦೦೦ ಅಥವಾ ಅದಕ್ಕೂ ಹೆಚ್ಚು ಇದ್ದಿರಬಹುದು ಎಂಬ ಅಂದಾಜುಗಳೂ ಇವೆ.
ಮಾರಣಹೋಮ
ಸಂಜೆ ೫ ಗಂಟೆಯಾಗುತ್ತಿದ್ದಂತೆ ಜನರಲ್ ಡೈಯರ್ ಅಲ್ಲಿಗೆ ಬಂದಿಳಿದ. ಮೈದಾನದ ಸುತ್ತಲ ಎತ್ತರ ಪ್ರದೇಶಗಳಲ್ಲಿಯೂ ಸೈನಿಕರ ಜಮಾವಣೆ ಆಗಿತ್ತು. ಶಾಂತವಾಗಿ ನಾಯಕರ ಭಾ?ಣ ಕೇಳುತ್ತಿದ್ದ ಜನಸ್ತೋಮವನ್ನು ದಿಗ್ಭ್ರಾಂತಗೊಳಿಸುವಂತೆ ಇದ್ದಕ್ಕಿದ್ದಂತೆ ಗುಂಡಿನ ಸುರಿಮಳೆ ಆರಂಭವಾಯಿತು.
ಅನಿರೀಕ್ಷಿತ ದಾಳಿಯಿಂದ ವಿಚಲಿತರಾಗಿ ಜನರು ಅಲ್ಲಿಂದ ತೆರಳಲು ಯತ್ನಿಸತೊಡಗಿದರು. ಆದರೆ ಹೋಗುವುದಾದರೂ ಎಲ್ಲಿಗೆ? ಹೇಗೆ? ನಿಂತವರು, ನಡೆಯುತ್ತಿದ್ದವರು, ಎಲ್ಲರೂ ಧರಾಶಾಯಿಗಳಾದರು. ಗುಂಡಿನ ದಾಳಿ ಹದಿನೈದಿಪ್ಪತ್ತು ನಿಮಿಷಗಳವರೆಗೆ ಮುಂದುವರಿಯಿತು. ಅದು ನಿಂತದ್ದು ಬಂದೂಕುಗಳು ಖಾಲಿಯಾದಾಗಲ?.
ಹಲವರು ಸೈನಿಕರು ರೂಢಿಯಂತೆ ಜನರನ್ನು ಚೆದರಿಸಲು ಎಲ್ಲೆಲ್ಲಿಗೋ ಗುಂಡು ಹಾರಿಸುತ್ತಿದ್ದುದನ್ನು ಗಮನಿಸಿ ಡೈಯರನು ನೇರವಾಗಿ ಜನರನ್ನೇ ಗುರಿಮಾಡಿ ಗುಂಡು ಹಾರಿಸಬೇಕೆಂದು ಉಚ್ಚಸ್ವರದಲ್ಲಿ ಗರ್ಜಿಸಿದ.
ವೇದಿಕೆಯ ಹಿಂಭಾಗದಲ್ಲಿ ಬಾವಿಯೊಂದಿತ್ತು. ಬಾವಿಗೆ ಹಾರಿಕೊಂಡಾದರೂ ಗುಂಡುಗಳಿಂದ ಪಾರಾಗಲಾದೀತೇನೋ ಎಂಬ ಯೋಚನೆಯಿಂದ ಆ ತೆರೆದ ಬಾವಿ ತುಂಬುವ? ಜನ ಧಾವಿಸಿ ಬಾವಿಗೆ ಹಾರಿದರು. ಎ? ಜನರಿಗೆ ಅಲ್ಲಿದ್ದುದು ಬಾವಿ ಎಂಬುದೂ ತಿಳಿದಿರಲಿಲ್ಲ. ಹತ್ಯಾಕಾಂಡ ಮುಗಿದ ಮೇಲೆ ಆ ಬಾವಿಯಿಂದ ಹೊರಕ್ಕೆ ತೆಗೆದ ಶವಗಳೇ ನೂರಿಪ್ಪತ್ತು ಇದ್ದವೆಂದು ವರದಿಯಾಗಿತ್ತು.
ಆನಂತರದ ಕಾಲದಲ್ಲಿ ನಡೆದ ವಿಚಾರಣೆಯಲ್ಲಿ ಜನರಲ್ ಡೈಯರನ ಬಾಯಿಂದ ಬಂದ ಮುಕ್ತಕ: ಇನ್ನ? ಗುಂಡುಗಳು ಲಭ್ಯವಿದ್ದಿದ್ದರೆ ಕಾರ್ಯಾಚರಣೆಯನ್ನು ನಾನು ಇನ್ನೂ ಮುಂದುವರಿಸುತ್ತಿದ್ದೆ.
ಕೆಲವೇ ನಿಮಿ?ಗಳ ಆ ಕೊಲೆಪಾತಕ ಕೃತ್ಯ ಮುಗಿದೊಡನೆ ಏನೂ ನಡೆದಿಲ್ಲವೆಂಬಂತೆ ನಿರ್ಭಾವುಕನಾಗಿ ಡೈಯರ್ ಸೈನಿಕ ತುಕಡಿಯೊಡನೆ ಅಲ್ಲಿಂದ ನಿ?ಮಿಸಿದ.
ಸತ್ತವರ ಅಂತ್ಯಸಂಸ್ಕಾರಗಳ ಬಗೆಗೆ ಯೋಚಿಸುವವರೂ ಯಾರೂ ಅಲ್ಲಿ ಉಳಿದಿರಲಿಲ್ಲ. ಅಲ್ಲಿದ್ದವೆಲ್ಲ ಅನಾಥ ಶವಗಳು, ಪ್ರಜ್ಞಾಹೀನ ಗಾಯಾಳುಗಳು, ನೋವಿನಿಂದ ನರಳುತ್ತಿದ್ದವರು, ನೀರಿಗಾಗಿ ಹಾಹಾಕಾರ ಮಾಡುತ್ತಿದ್ದವರು. ಮೈದಾನದ ತುಂಬಾ ಮೃತರ ದೇಹಭಾಗಗಳು ಹರಡಿ ಅದೊಂದು ಭೀಕರ ದೃಶ್ಯವಾಗಿತ್ತು.
ಶವಗಳಿಗೂ ಗಾಯಾಳುಗಳಿಗೂ ವ್ಯವಸ್ಥೆ ಮಾಡಲು ಸಾರ್ವಜನಿಕರು ಬರತೊಡಗಿದುದು ಮರುದಿನವ?.
ಸಮಗ್ರವಲ್ಲದಿದ್ದರೂ ಹತ್ಯಾಕಾಂಡದ ಬಗೆಗೆ ಸ್ವಲ್ಪ ವಿಸ್ತೃತ ವರದಿ ಶಿಮ್ಲಾದಿಂದ ಲಾಹೋರಿಗೆ ಅದೇತಾನೆ ಮರಳಿದ್ದ ಮೈಕೆಲ್ ಓಡ್ವಯರನಿಗೆ ತಲಪಿದುದು ಮರುದಿನ ಬೆಳಗಿನ ಜಾವ ೪ ಗಂಟೆಗ?. ಓಡ್ವಯರನಾದರೋ ’ನೀನು ಕೈಗೊಂಡ ಕ್ರಮ ಸರಿಯಾಗಿದೆ, ಶುಭಾಶಯಗಳು’ ಎಂದು ಡೈಯರನಿಗೆ ಪ್ರಶಂಸಾಪತ್ರ ಕಳುಹಿಸಿದ.
ಗುಂಡುಗಳಿಗೆ ಬಲಿಯಾಗಿ ಸ್ಥಳದಲ್ಲಿಯೇ ತತ್ಕ್ಷಣವೇ ಸತ್ತವರು ನಾಲ್ಕುನೂರು ಮಂದಿಯಾದರೆ ಆನಂತರ ಪ್ರಾಣಾಂತಕ ಗಾಯಗಳಿಂದ ನರಳಿ ಸತ್ತವರು ಮತ್ತ? ಮಂದಿ. ಒಟ್ಟು ಅಸುನೀಗಿದವರು ಸುಮಾರು ಎರಡು ಸಾವಿರ ಎಂದು ಆಮೇಲಿನ ತಪಾಸಣೆಯಿಂದ ಹೊರಪಟ್ಟಿತು.
ಇದಿ? ಆ ಕರಾಳ ದಿನದಂದು ಜಲಿಯನ್ವಾಲಾಬಾಗಿನಲ್ಲಿ ನಡೆದುದರ ಅತಿಸಂಕ್ಷಿಪ್ತ ಚಿತ್ರಣ.
ದುರ್ಘಟನೆಯ ಸುದ್ದಿ ಬಾಯಿಂದ ಬಾಯಿಗೆ ಹರಡುತ್ತಿದ್ದಂತೆ ತೀಕ್ಷ್ಣ ಪ್ರತಿಕ್ರಿಯೆ ಹೊಮ್ಮಿತು. ಆ ಪಾಶವೀ ವರ್ತನೆಗೆ ಪ್ರತಿಭಟಿಸಿ ಗುರುದೇವ ರವೀಂದ್ರನಾಥ್ ಠಾಕೂರರು ತಮಗೆ ಬ್ರಿಟಿ? ಸರ್ಕಾರ ನೀಡಿದ್ದ ನೈಟ್ಹುಡ್ (’ಸರ್’) ಪದವಿಯನ್ನು ತ್ಯಾಗ ಮಾಡಿದರು. ವಿನ್ಸ್ಟನ್ ಚರ್ಚಿಲ್ ಮೊದಲಾದ ಇಂಗ್ಲೆಂಡಿನ ಪ್ರಮುಖರೇ ಡೈಯರನ ದೌರ್ಜನ್ಯವನ್ನು ತೀಕ್ಷ್ಣವಾಗಿ ಖಂಡಿಸಿದರು. ಬ್ರಿಟಿಷರದೇ ಪತ್ರಿಕೆ ’ಡೈಲಿ ಹೆರಾಲ್ಡ್’ ಹೀಗೆಂದಿತು: ದಯೆಯನ್ನು ಬೋಧಿಸುವ ಕ್ರೈಸ್ತಮತದ ಪರಂಪರೆಗೇ ಇದು ದೊಡ್ಡ ಕಳಂಕ.
ಕಾಂಗ್ರೆಸ್ ಸಮಿತಿ
ಆ ಹತ್ಯಾಕಾಂಡದಂತಹ ಪ್ರಮುಖ ದುರ್ಘಟನೆ ಆದಮೇಲೂ ಅದರ ಬಗೆಗೆ ಸಮಗ್ರ ತನಿಖೆ ನಡೆಸುವುದಕ್ಕೆ ಬ್ರಿಟಿ? ಆಡಳಿತ ಆಸಕ್ತಿ ತೋರಲಿಲ್ಲ. ಘಟನಾವಳಿಯನ್ನು ಕುರಿತ ಮೊದಲ ತನಿಖಾ ಸಮಿತಿಯನ್ನು ಏರ್ಪಡಿಸಿದುದು ಕಾಂಗ್ರೆಸ್ ಸಂಸ್ಥೆ. ಪಂಡಿತ್ ಮದನ ಮೋಹನ ಮಾಳವೀಯ, ಪಂಡಿತ್ ಮೋತಿಲಾಲ್ ನೆಹರು, ಬ್ಯಾರಿಸ್ಟರ್ ಗಾಂಧಿ, ಬ್ಯಾ. ಚಿತ್ತರಂಜನ್ ದಾಸ್, ಬ್ಯಾ. ಅಬ್ಬಾಸ್ ಎಸ್. ತಯ್ಯಬ್ಜೀ, ಬ್ಯಾ. ಎಂ.ಆರ್. ಜಯಕರ್, ಬ್ಯಾ. ಕೆ. ಸಂತಾನಂ – ಇವರನ್ನು ಒಳಗೊಂಡ ಸಮಿತಿಯು ೧೯೧೯ರ ನವೆಂಬರ್ ೩ನೇ ವಾರದಲ್ಲಿ ಮಾಹಿತಿ ಸಂಗ್ರಹಕ್ಕೆ ತೊಡಗಿತು. ಸುಮಾರು ೧೭೦೦ ಸಾಕ್ಷಿಗಳ ವಿಚಾರಣೆ ನಡೆದು ಅವುಗಳಲ್ಲಿ ೬೫೦ ಹೇಳಿಕೆಗಳನ್ನು ಸಂಕಲನದಲ್ಲಿ ಸೇರ್ಪಡೆ ಮಾಡಿತು. ವರದಿಯು ಸಿದ್ಧಗೊಂಡದ್ದು ೧೯೨೦ರ ಫೆಬ್ರುವರಿ ಅಂತ್ಯದಲ್ಲಿ. ಹೊರಜಗತ್ತಿಗೆ ಹತ್ಯಾಕಾಂಡದ ಹೃದಯದ್ರಾವಕ ವಿವರಗಳು ತಿಳಿದುಬಂದದ್ದು ಈ ವರದಿಯು ಪ್ರಕಟವಾದ ಮೇಲೆ.
೧೯೧೯ರ ಡಿಸೆಂಬರ್ ತಿಂಗಳಲ್ಲಿ ಪೂರ್ವಯೋಜಿತವಾಗಿದ್ದಂತೆ ಕಾಂಗ್ರೆಸಿನ ವಾರ್ಷಿಕ ಅಧಿವೇಶನ ಅಮೃತಸರದಲ್ಲಿಯೇ ನಡೆಯಿತು. ಅದಕ್ಕೆ ಬ್ರಿಟಿಷ್ ಪ್ರಭುತ್ವದ ತೀವ್ರ ವಿರೋಧ ಇದ್ದಿತಾದರೂ, ಸಾರ್ವಜನಿಕ ಒತ್ತಾಯ ಎ? ಪ್ರಬಲವಾಗಿತ್ತೆಂದರೆ ಸರ್ಕಾರವು ಅರೆಮನಸ್ಸಿನಿಂದಲಾದರೂ ಅಧಿವೇಶನಕ್ಕೆ ಅನುಮತಿ ನೀಡಬೇಕಾಯಿತು. ಹಲವು ಕಾರಣಗಳಿಂದ ಆ ಅಧಿವೇಶನ ಐತಿಹಾಸಿಕವೆನಿಸಿತು. ಲೋಕಮಾನ್ಯ ತಿಲಕರು ಪಾಲ್ಗೊಂಡ ಕೊನೆಯ ಅಧಿವೇಶನ ಅದು (ಮರುವ? ಅವರ ಸ್ವರ್ಗವಾಸವಾಯಿತು). ಗಾಂಧಿಯವರು ಪ್ರತಿನಿಧಿಯಾಗಿ ಪಾಲ್ಗೊಂಡ ಮೊದಲ ಕಾಂಗ್ರೆಸ್ ಅಧಿವೇಶನ ಅದೇ. ಗಾಂಧಿಯವರು ಓರ್ವ ಪ್ರಮುಖ ನಾಯಕನಾಗಿ ಹೊರಹೊಮ್ಮಿದುದು ಅಲ್ಲಿಂದಾಚೆಗೇ.
ಅಧಿವೇಶನದಲ್ಲಿ ಡೈಯರನನ್ನು ಪದಚ್ಯುತಗೊಳಿಸಬೇಕೆಂದೂ, ಓಡ್ವಯರ್ ಮತ್ತು ವೈಸ್ರಾಯ್ ಚೆಮ್ಸ್ಫರ್ಡ್ರನ್ನು ಇಂಗ್ಲೆಂಡಿಗೆ ಹಿಂದಕ್ಕೆ ಕರೆಯಿಸಿಕೊಳ್ಳಬೇಕೆಂದೂ, ಜಲಿಯನ್ವಾಲಾಬಾಗಿನಲ್ಲಿ ರಾಷ್ಟ್ರೀಯ ಸ್ಮಾರಕ ಏರ್ಪಡಬೇಕೆಂದೂ ಆಗ್ರಹಿಸಿ ಠರಾವುಗಳನ್ನು ಕೈಗೊಳ್ಳಲಾಯಿತು.
ತೀವ್ರವಾಗಿ ಗಾಯಗೊಂಡು ಹೇಗೋ ಜೀವಂತ ಉಳಿದಿದ್ದ ಹತ್ತಾರು ಮಂದಿಯೂ ಕಾಂಗ್ರೆಸ್ ಸಮಿತಿಯ ಮುಂದೆ ಸಾಕ್ಷ್ಯ ನೀಡಿದರು.
ಆ ದಿನಗಳಲ್ಲಿ ಅಮೆರಿಕ ಪ್ರವಾಸದಲ್ಲಿದ್ದ ಲಾಲಾ ಲಜಪತ್ರಾಯ್ ೧೯೨೦ರ ಆರಂಭದಲ್ಲಿ ಭಾರತಕ್ಕೆ ಮರಳಿದೊಡನೆ ಅವರೂ ಹತ್ಯಾಕಾಂಡದ ಬಗೆಗೆ ವಿವರಗಳನ್ನು ಸಂಗ್ರಹಿಸಿ ಇಡೀ ಹತ್ಯಾಕಾಂಡಕ್ಕೂ ಮಾ?ಲ್ ಲಾ ದೌರ್ಜನ್ಯಗಳಿಗೂ ಹೊಣೆಗಾರನಾಗಿದ್ದವನು ಮೈಕೆಲ್ ಓಡ್ವಯರ್ ಎಂಬುದನ್ನು ಅಸಂದಿಗ್ದವಾಗಿ ಸ್ಥಿರೀಕರಿಸಿ ಹೇಳಿಕೆ ನೀಡಿದರು.
ಹಂಟರ್ ವರದಿ
ಎಲ್ಲೆಡೆಗಳಿಂದ ತೀಕ್ಷ್ಣ ಒತ್ತಡ ಬರತೊಡಗಿದಾಗ ಹೆಸರಿಗಾದರೂ ಒಂದು ತನಿಖಾ ಸಮಿತಿಯನ್ನು ಏರ್ಪಡಿಸುವುದು ಬ್ರಿಟಿ? ಸರ್ಕಾರಕ್ಕೆ ಅನಿವಾರ್ಯವಾಯಿತು. ಹಾಗೆ ಏರ್ಪಟ್ಟದ್ದು ವಿಲಿಯಂ ಹಂಟರ್ ಸಮಿತಿ. ಹಂಟರ್ ವಕೀಲನಾಗಿ ಉತ್ತರೋತ್ತರ ನ್ಯಾಯಾಧೀಶನಾಗಿ ಇಂಗ್ಲೆಂಡಿನಲ್ಲಿ ಹೆಸರು ಮಾಡಿದ್ದವನು.
ಹಂಟರ್ ಸಮಿತಿಯು ನಿ?ಕ್ಷವಾಗಿ ತನಿಖೆ ಮಾಡುವುದಕ್ಕೆ ಬದಲಾಗಿ ಸರ್ಕಾರದ ಮೂಗಿನ ನೇರಕ್ಕೇ ವಿಚಾರಣೆ ನಡೆಯುವಂತೆ ಏರ್ಪಾಡಾಗಿದ್ದ ಕಾರಣ ಸಹಜವಾಗಿ ಹಂಟರ್ ಸಮಿತಿಯನ್ನು ಕಾಂಗ್ರೆಸ್ ಬಹಿ?ರಿಸಿತು.
ಹಂಟರ್ ಸಮಿತಿಯ ವರದಿ ಕೇವಲ ದಸ್ತಾವೇಜುಗಳಲ್ಲಿ ಸೇರಿಹೋಗಲಿ ಎಂಬ ದೃಷ್ಟಿಯಿಂದಲೇ, ಉದ್ದಕ್ಕೂ ಬ್ರಿಟಿ? ಪ್ರಭುತ್ವದ ಧೋರಣೆಗಳ ಪರವಾಗಿಯೇ ಸಿದ್ಧಗೊಳ್ಳಬೇಕೆಂಬ ರೀತಿಯಲ್ಲಿಯೇ ಇದ್ದಿತಾದರೂ ಲಬ್ಧವಿದ್ದ ಅಲ್ಪ ಅವಕಾಶವನ್ನು ಬಳಸಿಕೊಂಡು ಸಮಿತಿಯ ಮೂವರು ಭಾರತೀಯ ಸದಸ್ಯರು (ಶಾಸಕ ಹಾಗೂ ಉಪಕುಲಪತಿ ಪಂಡಿತ್ ಜಗತ್ ನಾರಾಯಣ್, ಮುಂಬಯಿ ನ್ಯಾಯಾಧೀಶ ಚಿಮನ್ಲಾಲ್ ಸೆಟಲ್ವಾಡ್, ಗ್ವಾಲಿಯರ್ ರಾಜ್ಯದ ಸಚಿವ ಅಹಮದ್ಖಾನ್) ಡೈಯರನನ್ನು ತೀಕ್ಷ್ಣವಾಗಿ ಪ್ರಶ್ನಿಸದಿರಲಿಲ್ಲ.
ಯಾವುದೇ ಸರ್ಕಾರೇತರ ಪರಾಮರ್ಶನೆಗಳನ್ನು ಅಧ್ಯಕ್ಷ ಹಂಟರ್ ಉದ್ದಕ್ಕೂ ನಿವಾರಿಸುತ್ತಲೇ ಬಂದದ್ದು ದಾಖಲೆಯಾಗಿದೆ.
೧೯೨೦ರ ಮಾರ್ಚ್ ತಿಂಗಳ ಆರಂಭದಲ್ಲಿ ಹಂಟರ್ ಸಮಿತಿಯು ವರದಿಯನ್ನು ಸರ್ಕಾರಕ್ಕೆ ಸಲ್ಲಿಸಿತು. ಡೈಯರ್ ತುಕಡಿಯು ಗುಂಡಿನ ದಾಳಿಯ ಅವಧಿಯನ್ನು ಕಡಮೆ ಮಾಡಬಹುದಿತ್ತು ಎಂಬಂತಹ ಕೆಲವು ವಾಕ್ಯಗಳನ್ನು ಒಳಗೊಂಡಿದ್ದರೂ ಹಂಟರ್ ವರದಿ ಮಾ?ಲ್ ಲಾ ಕಾಯ್ದೆಯನ್ನು ಸಮರ್ಥಿಸಿಕೊಂಡಿದ್ದಲ್ಲದೆ ’ಗಾಯಾಳುಗಳಿಗೆ ಹೆಚ್ಚಿನ ತೊಂದರೆಯಾಯಿತೆನ್ನಲು ಸಾಕ್ಷ್ಯಗಳಿಲ್ಲ’ ಎಂಬಂತಹ ನಿರ್ಣಯಗಳನ್ನು ಒಳಗೊಂಡಿತ್ತು.
ವರದಿಯೊಡಗೂಡಿ ನೀಡಲಾದ ಭಾರತೀಯ ಸದಸ್ಯರ ಭಿನ್ನಾಭಿಪ್ರಾಯ ಮಂಡನೆಯಲ್ಲಿ (ಮೈನಾರಿಟಿ ರಿಪೋರ್ಟ್) ಸಹಜವಾಗಿ ತಥ್ಯಕಥನವಿದ್ದಿತು.
ಮೇಲೆ ಹೇಳಿದಂತೆ ಹಂಟರ್ ಆಯೋಗದ ಕಲಾಪಗಳು ಆರಂಭದಿಂದ ಬ್ರಿಟಿ? ಪ್ರಭುತ್ವದ ಪರವಾಗಿಯೇ ನಡೆದಿತ್ತು. ಹೀಗಿದ್ದರೂ ಗಮನಿಸಬಹುದಾದ ಒಂದೆರಡು ಅಂಶಗಳು ೧೯೨೦ರ ಮೇ ೨೬ರಂದು ಅಂತಿಮರೂಪ ಪಡೆದು ಪ್ರಕಟಗೊಂಡ ಆ ವರದಿಯಲ್ಲಿ ಅನಿವಾರ್ಯವಾಗಿ ಬಿಂಬಿತವಾಗಿದ್ದವು. ನಿದರ್ಶನಕ್ಕೆ: ೧೯೧೯ ಏಪ್ರಿಲ್ ೧೩ರಂದು ಜಲಿಯನ್ವಾಲಾಬಾಗಿನಲ್ಲಿ ಸೇರಿದ್ದ ಜನಸ್ತೋಮಕ್ಕೆ ಯಾವುದೇ ಬಂಡಾಯದ ಅಥವಾ ಹಿಂಸಾಚರಣೆಯ ಉದ್ದೇಶವಿರಲಿಲ್ಲ – ಎಂದು ವರದಿಯು ಒಪ್ಪಿತ್ತು. ಜನಸಾಮಾನ್ಯರ ಮನಸ್ಸಿನಲ್ಲಿ ಭೀತಿಯನ್ನು ಮೂಡಿಸುವ ದಿಶೆಯ ಸರ್ಕಾರೀ ಆಚರಣೆಗಳು, ಗುಂಡಿನ ದಾಳಿಗೆ ಮುಂಚೆ ಎಚ್ಚರಿಕೆ ನೀಡದಿದ್ದುದು, ದಾಳಿಯಾದ ಮೇಲೆ ಗಾಯಾಳುಗಳನ್ನು ಪೂರ್ತಿ ನಿರ್ಲಕ್ಷಿಸಿದುದು, ನಿ?ರಣವಾಗಿ ಗುಂಡಿನ
ದಾಳಿಯನ್ನು ಮುಂದುವರಿಸಿದುದು – ಮೊದಲಾದವೆಲ್ಲ ದೊಡ್ಡ ಲೋಪಗಳೆಂದು ತನಿಖಾಸಮಿತಿಯ ಸರ್ಕಾರೀ ಸದಸ್ಯರೂ ಸೇರಿದಂತೆ ಎಲ್ಲರೂ ಅಂಗೀಕರಿಸಿದ್ದರು.
ಬ್ರಿಟಿಷ್ ಸಂಸತ್ತಿನಲ್ಲಿ
ಅದಾದ ಸುಮಾರು ಎರಡು ತಿಂಗಳ ತರುವಾಯ ಲಂಡನ್ನಿನಲ್ಲಿ ನಡೆದ ಬ್ರಿಟಿ? ಸಂಸತ್ತಿನ ಸಭೆಯಲ್ಲಿ ಔಪಚಾರಿಕವಾಗಿ ಡೈಯರನಿಂದಾಗಿದ್ದ ನಡವಳಿಯನ್ನು ಸಮರ್ಥಿಸಲಾಯಿತಾದರೂ, ಮೇಲೆ ಉಲ್ಲೇಖಿಸಿದವೂ ಸೇರಿದಂತೆ ಡೈಯರ್ನಿಂದ ನಡೆದಿದ್ದ ಲೋಪಗಳ ಹಿನ್ನೆಲೆಯಲ್ಲಿ ಅವನನ್ನು ಪದಚ್ಯುತಗೊಳಿಸಬೇಕೆಂದೂ ಸೂಚಿಸಲಾಗಿತ್ತು.
ಬ್ರಿಟಿಷ್ ಸರ್ಕಾರದ ಅಧಿಕೃತ ಆಯೋಗವೇ ಡೈಯರನ ಪಾಶವೀ ನಡವಳಿಯ ದಂಡನಾರ್ಹತೆಯನ್ನು ಪರಿಶೀಲಿಸಿ ಅವನನ್ನು ಪದಚ್ಯುತಗೊಳಿಸಲು ಮುಂದಾಗಿದ್ದುದು ಹೌದಾದರೂ, ಡೈಯರನಲ್ಲಿಯೂ ಒಂದು ಗಣನೀಯ ಪ್ರಮುಖ ಆಂಗ್ಲ ವಲಯದಲ್ಲಿಯೂ ಹತ್ಯಾಕಾಂಡದ ಬಗೆಗೆ ಪಶ್ಚಾತ್ತಾಪದ ಸುಳುಹೇ ಕಾಣಲಿಲ್ಲವೆಂಬುದು ಗಮನಾರ್ಹ. ಪ್ರತಿಯಾಗಿ, ಸಾಮ್ರಾಜ್ಯದ ಪ್ರತಿನಿಧಿಯಾಗಿ ಡೈಯರನು ಕೈಗೊಂಡಿದ್ದ ಕ್ರಮವನ್ನು ಭಾರತದೊಳಗಿನ ಮತ್ತು ಇಂಗ್ಲೆಂಡಿನಲ್ಲಿನ ಒಂದು ಪ್ರಭಾವೀವಲಯ ಸಮರ್ಥಿಸಿತೆಂಬುದು ಆಗಿನ ಆಂಗ್ಲ ಮಾನಸಿಕತೆಯ ದ್ಯೋತಕವಾಗಿದೆ. ಡೈಯರನು ಇಂಗ್ಲೆಂಡಿಗೆ ಹಿಂದಿರುಗಿದಾಗ ಅವನಿಗೆ ದೊಡ್ಡ ಸ್ವಾಗತ ಸಮಾರಂಭವನ್ನು ಏರ್ಪಡಿಸಲಾಯಿತು. ಡೈಯರನನ್ನು ಸಮರ್ಥಿಸುವ ಜಾಡಿನ ಗೊತ್ತುವಳಿಯೊಂದು ಬ್ರಿಟಿ? ಸಂಸತ್ತಿನಲ್ಲಿ ಮಂಡಿತವಾಯಿತಾದರೂ ಅದು ಅಂಗೀಕಾರ ಪಡೆಯಲಿಲ್ಲ. ಡೈಯರನ ಪರವಾದ ಧ್ವನಿಗಳು ಗಣನೀಯ ಪ್ರಮಾಣದಲ್ಲಿ ಇದ್ದವೆಂಬುದು ಬ್ರಿಟಿ? ರಾಜಕೀಯ ಪರಂಪರೆಯು ಪ್ರಜಾಸ್ವಾತಂತ್ರ್ಯದ ಪರವಾಗಿ ಇದ್ದಿತೆಂಬ ಪ್ರಥೆಗೆ ಕುಂದು ತಂದಿತೆಂಬುದನ್ನು ಅಲ್ಲಗಳೆಯಲಾಗದು. ಒಂದು ಸ್ವಾರಸ್ಯಕರ ಸಂಗತಿಯೆಂದರೆ – ಡೈಯರನ ವರ್ತನೆಯನ್ನು ಅಸಂದಿಗ್ಧವಾಗಿ ಖಂಡಿಸಿದವರಲ್ಲಿ ಪ್ರಮುಖನಾಗಿದ್ದವನು ಭಾರತದ್ವೇಷಿಯೆಂದೇ ಕುಖ್ಯಾತನಾಗಿರುವ ವಿನ್ಸ್ಟನ್ ಚರ್ಚಿಲ್! ಡೈಯರನ ವರ್ತನೆಯು ಬ್ರಿಟಿಷ್ ಪರಂಪರೆಗೆ ಪೂರ್ಣ ವ್ಯತಿರಿಕ್ತವಾಗಿತ್ತೆಂದು ಚರ್ಚಿಲ್ ಅವಧಾರಣಪೂರ್ವಕ ಹೇಳಿದ; ಡೈಯರನ ವರ್ತನೆ ‘Absolutely foreign to the British way of doing things ಎಂದ. ಬ್ರಿಟಿಷ್ ಸಂಸತ್ತಿನ ಮೇಲ್ಮನೆಯಲ್ಲಿ (ಹೌಸ್ ಆಫ್ ಲಾರ್ಡ್ಸ್) ಡೈಯರನ ವರ್ತನೆಯು ಅಧೀನರಾ?ದಲ್ಲಿ ಸುವ್ಯವಸ್ಥೆ ತರುವ ದಿಕ್ಕಿನ ಪ್ರಯತ್ನಗಳಿಗೆ ಹಿನ್ನಡೆಯನ್ನು ಉಂಟುಮಾಡಿದೆ – ಎಂದು ಅಭಿಮತ ಹೊಮ್ಮಿತು. ಹೀಗೆ ಅಭಿಪ್ರಾಯ ತಳೆದವರ ಆಕ್ರೋಶಕ್ಕೆ ವಿಶೇಷ ಕಾರಣವಾದ ಒಂದು ಅಂಶವೆಂದರೆ ಡೈಯರನಿಗೆ ಹಮ್ಮಿಣಿ ಅರ್ಪಿಸಲು ಧನಸಂಗ್ರಹ ಹಲವು ವಲಯಗಳಲ್ಲಿ ಆರಂಭಗೊಂಡಿದ್ದುದು. ಡೈಯರನಿಗೆ ನೀಡುವ ಉದ್ದೇಶದಿಂದ ಸಂಗ್ರಹಗೊಂಡ ಸುಮಾರು ೨೫,೦೦೦ ಪೌಂಡುಗಳ? ದೊಡ್ಡ ಮೊತ್ತದಲ್ಲಿ ಅಧಿಕಭಾಗದ ದೇಣಿಗೆ ನೀಡಿದ್ದವರು ಭಾರತದೊಳಗಿನ ಬ್ರಿಟಿ? ಸಮುದಾಯವರು.
ಲಜ್ಜಾಸ್ಪದ ನಡಾವಳಿ
ತೋರಿಕೆಯ ಉದಾರವಾದಕ್ಕೂ ಆಚರಣೆಯ ವಾಸ್ತವಕ್ಕೂ ಎ? ಅಂತರ ಇದ್ದಿತೆಂಬುದಕ್ಕೆ ಇದೊಂದು ಪುರಾವೆಯೂ ಸಾಕು.
ಮತಗಣನೆಯ ಆಧಾರದ ಮೇಲೆ ಬ್ರಿಟಿ? ಸಂಸತ್ತು ಓಡ್ವಯರನನ್ನೂ ಡೈಯರನನ್ನೂ ಕುರಿತು ನಿರಪರಾಧಿಗಳೆಂಬ ನಿಲವನ್ನು ತಳೆಯಿತಾದರೂ, ಅದೇ ದಿನಗಳಲ್ಲಿ ನಡೆದ ಬ್ರಿಟಿಷ್ ಲೇಬರ್ ಪಕ್ಷ ಸಮಾವೇಶ ಮೊದಲಾದ ವೇದಿಕೆಗಳಲ್ಲಿ ಜಲಿಯ್ವಾಲಾಬಾಗ್ನಲ್ಲಿ ಬ್ರಿಟಿಷ್ ಪ್ರಭುತ್ವದ ಪ್ರತಿನಿಧಿಗಳು ಎಸಗಿದ ಭೀಕರ ದೌರ್ಜನ್ಯಗಳನ್ನು ಖಂಡಿಸಿ ವೈಸರಾಯ್ ಚೆಮ್ಸ್ಫರ್ಡ್, ಓಡ್ವಯರ್, ಡೈಯರ್ – ಮೂವರನ್ನೂ ದಂಡನೆಗೆ ಒಳಪಡಿಸಬೇಕೆಂದು ಠರಾವು ಮಾಡಲಾಯಿತು ಈ ಒತ್ತಾಯಗಳ ಫಲವಾಗಿಯೇ ಓಡ್ವಯರನನ್ನು ಪದಚ್ಯುತಗೊಳಿಸಲಾದದ್ದು.
ಬ್ರಿಟಿಷ್ ಸಂಸತ್ತಿನ ಮೇಲ್ಮನೆಯಲ್ಲಿ ಸರ್ಕಾರವು ಅಧಿಕೃತವಾಗಿ ಡೈಯರನನ್ನು ಸಮರ್ಥಿಸಿದುದು ಇಂಗ್ಲೆಂಡಿನ ಸಾರ್ವಜನಿಕ ವಲಯಗಳಲ್ಲಿಯೆ ಲಜ್ಜಾಸ್ಪದವೆನಿಸಿತು.
ಭಾರತದಿಂದ ಹಿಂದಿರುಗಿದ ಮೇಲೆ ಡೈಯರನ ದೇಹಸ್ಥಿತಿ ಕ್ಷೀಣಿಸುತ್ತಹೋಗಿತ್ತು. ೧೯೨೧ರ ಅಂತ್ಯದ ವೇಳೆಗೆ ಡೈಯರ್ ಅಪಸ್ಮಾರ ಕಾಯಿಲೆಗೆ ತುತ್ತಾಗಿದ್ದ. ನಾಲ್ಕೈದು ವರ್ಷ ಯಾತನೆಯನ್ನು ಅನುಭವಿಸಿದ. ಬಗೆಬಗೆಯ ಚಿಕಿತ್ಸೆಗಳ ನಡುವೆ ಬಹುಮಟ್ಟಿಗೆ ನಿಷ್ಕ್ರಿಯನಾಗಿದ್ದು ೧೯೨೭ರ ಜುಲೈ ೨೩ರಂದು ಕೊನೆಯುಸಿರೆಳೆದ.
ಫಲಶ್ರುತಿ
ಜಲಿಯನ್ವಾಲಾಬಾಗ್ ದುರ್ಘಟನೆಯ ಒಂದು ’ಫಲ’ಶ್ರುತಿ ಪ್ರಸಿದ್ಧವೇ ಆಗಿದೆ: ಸೇಡಿಗಾಗಿ ದೀರ್ಘಕಾಲ ಕಾಯುತ್ತಿದ್ದ ಸರ್ದಾರ್ ಉಧಮ್ಸಿಂಗ್ ೧೯೪೦ರ ಮಾರ್ಚ್ ೧೩ರಂದು ಲಂಡನ್ನಿನಲ್ಲಿ ಲೆಫ್ಟಿನೆಂಟ್-ಗವರ್ನರ್
ಮೈಕೆಲ್ ಓಡ್ವಯರನನ್ನು ಅವನ ಸಂಮಾನಾರ್ಥ ಏರ್ಪಟ್ಟಿದ್ದ ಸಭೆಯಲ್ಲಿಯೆ ಸಂಹಾರ ಮಾಡಿದುದು; ಅದಾದ ನಾಲ್ಕೂವರೆ ತಿಂಗಳ ತರುವಾಯ ಗಲ್ಲುಶಿಕ್ಷೆಗೆ ಗುರಿಯಾಗಿ ಅಮರನಾದದ್ದು.
ಜಲಿಯನ್ವಾಲಾಬಾಗಿನ ಹತ್ಯಾಕಾಂಡದ ಪ್ರಮುಖ ರೂವಾರಿಗಳು ಇಬ್ಬರು : ಒಬ್ಬನು ಆಗ ಪಂಜಾಬ್ ಪ್ರಾಂತದ ಲೆಫ್ಟಿನೆಂಟ್-ಗವರ್ನರ್ ಆಗಿದ್ದ ಮೈಕೆಲ್ ಓಡ್ವಯರ್; ಇನ್ನೊಬ್ಬ ಬ್ರಿಗೇಡಿಯರ್-ಜನರಲ್ ರೆಜಿನಾಲ್ಡ್ ಡೈಯರ್. ೧೯೧೯ಕ್ಕೆ ನಾಲ್ಕು ವ? ಹಿಂದಿನಿಂದಲೇ ಇಡೀ ಪಂಜಾಬ್ ಪ್ರಾಂತವನ್ನು ನರಕಸದೃಶವಾಗಿಸಿದ್ದವನು ಓಡ್ವಯರ್. ಅವನ ಕ್ರೌರ್ಯಪ್ರವೃತ್ತಿಗೆ (ಸ್ಯಾಡಿಸಂ) ಮಿತಿಯೇ ಇರಲಿಲ್ಲ. ಎ?ಮಟ್ಟಿಗೆ ಎಂದರೆ – ಒಂದೆಡೆ ಆಂಗ್ಲ ಮಹಿಳೆಯೊಬ್ಬಳನ್ನು ಅವಮಾನಿಸಲಾಗಿದ್ದಿತೆಂಬ ವ್ಯಾಜವನ್ನು ಹೂಡಿ ಆಗ ನಡೆದಿದ್ದ ಲ?ರೀ ಶಾಸನವನ್ನು ಬಳಸಿಕೊಂಡು ಅಮೃತಸರದ ಪ್ರಮುಖ ರಸ್ತೆಯೊಂದರಲ್ಲಿ ಭಾರತೀಯರಾರೂ ಚಲಿಸಬಾರದು, ಅನಿವಾರ್ಯವಾಗಿ ಹೋಗಲೇಬೇಕಿದ್ದಲ್ಲಿ ಮಲಗಿಕೊಂಡು ಪ್ರಾಣಿಯಂತೆ ತೆವಳಿಕೊಂಡು ಹೋಗಬೇಕು – ಎಂದು ಆಜ್ಞೆ ಮಾಡಿದ್ದ. ಇಂತಹವು ಇನ್ನೂ ಎ?. ಓಡ್ವಯರನ ದುಃಶಾಸನವನ್ನು ಕಾರ್ಯಗತಗೊಳಿಸಲು ಅವನ? ಕ್ರೂರಿಯೂ ಅಮಾನು?ನೂ ಆಗಿದ್ದ ರೆಜಿನೆಲ್ಡ್ ಡೈಯರ್ ಕಟಿಬದ್ಧನಾಗಿದ್ದ.
ಜಲಿಯನ್ವಾಲಾಬಾಗಿನಲ್ಲಿ ಎದುರಿಗಿದ್ದವರು ಸಾಮಾನ್ಯ ಮುಗ್ಧ ನಾಗರಿಕರೆಂಬುದನ್ನೂ ಲೆಕ್ಕಿಸದೆ, ಎ?ಜನ ಸಾಯುತ್ತಾರೆ ಎಂಬುದನ್ನೂ ಚಿಂತಿಸದೆ, ನಿರ್ದಯವಾಗಿ ’ಫೈರ್!’ ಎಂದು ಆದೇಶ ನೀಡಿದ್ದವನು ಡೈಯರ್. ಅಂದು ಸಿಖ್ಖರಿಗೆ ಅತ್ಯಂತ ಪವಿತ್ರವಾದ ಖಾಲ್ಸಾ ಧರ್ಮಸ್ಥಾಪನೆಯ ವಾರ್ಷಿಕ ಆಚರಣೆಯ ಪರ್ವವಾಗಿತ್ತೆಂಬುದನ್ನೂ ಅವನು ಲೆಕ್ಕಿಸಲಿಲ್ಲ. ಆಮೇಲಿನ ದಿನಗಳಲ್ಲಿ ಎಲ್ಲ ವಲಯಗಳಲ್ಲಿಯೂ ಡೈಯರನು ’ಕಿಲ್ಲರ್ ಆಫ್ ಅಮೃತಸರ್’ ಎಂಬ ಬಿರುದಿನಿಂದಲೇ ವ್ಯವಹೃತನಾಗುತ್ತಿದ್ದುದುಂಟು.
ಎಂದಾದರೊಂದು ದಿನ ಹತ್ಯಾಕಾಂಡದ ರೂವಾರಿಗಳನ್ನು ಬಲಿ ತೆಗೆದುಕೊಳ್ಳುತ್ತೇನೆ ಎಂದು ಶಪಥ ಮಾಡಿದ್ದ ಉಧಮ್ಸಿಂಹನ ಕಣ್ಣೆದುರಿಗಿದ್ದದ್ದು ಪ್ರಮುಖವಾಗಿ ಈ ಇಬ್ಬರು ಎಂಬುದು ಸಹಜ. ಅದಕ್ಕೆ ಸಮಯ ಕೂಡಿಬಂದದ್ದು ಹತ್ಯಾಕಾಂಡವಾದ ೨೧ ವರ್ಷಗಳ ತರುವಾಯ – ೧೯೪೦ರ ಮಾರ್ಚ್ ೧೩ರಂದು. ಅಂದಿಗೆ ಹಲವು ವರ್ಷ ಹಿಂದೆಯೇ (೧೯೨೭) ಡೈಯರನು ಮೃತನಾಗಿದ್ದ. ಹೀಗಾಗಿ ಉಧಮ್ಸಿಂಹನ ಗುರಿಗೆ ಉಳಿದಿದ್ದವನು ಓಡ್ವಯರ್. ಲಂಡನ್ನಿನ ಕಾಕ್ಸ್ಟನ್ ಸಭಾಭವನದಲ್ಲಿ ರಾಯಲ್ ಸೆಂಟ್ರಲ್ ಏ?ನ್ ಸೊಸೈಟಿ ಮತ್ತು ಈಸ್ಟ್ ಇಂಡಿಯಾ ಅಸೋಸಿಯೇ?ನ್ ಸಂಸ್ಥೆಗಳು ಏರ್ಪಡಿಸಿದ್ದ ಸಾರ್ವಜನಿಕ ಸಮಾರಂಭದಲ್ಲಿ ನೆರೆದಿದ್ದವರೆಲ್ಲ ನೋಡುತ್ತಿದ್ದಂತೆಯೇ ಉಧಮ್ಸಿಂಹನು ಓಡ್ವಯರನಿಗೆ ಗುಂಡಿಟ್ಟು ಅವನನ್ನು ಸಂಹರಿಸಿ ತನ್ನ ದೀರ್ಘಕಾಲದ ಶಪಥವನ್ನು ಕೈಗೂಡಿಸಿಕೊಂಡ. ಸಂತೃಪ್ತಿಯಿಂದ ನಗುಮುಖದಿಂದಲೇ ಬಂಧಿತನಾದ. ಪೆಂಟನ್ವಿಲ್ ಸೆರೆಯಲ್ಲಿದ್ದು ವಿಚಾರಣೆಯ ಪ್ರಹಸನದ ಹಿಂದುಗೂಡಿ ಜುಲೈ ಕಡೆಯ ದಿನದಂದು ಪ್ರಶಾಂತವಾಗಿ ನೇಣುಗಂಬವನ್ನೇರಿ ಹುತಾತ್ಮನೆನಿಸಿದುದು ಈಗ ಇತಿಹಾಸ. ೧೯೧೯ ಏಪ್ರಿಲ್ ೧೩ರಂದು ಹಾಗೆ ಜಲಿಯನ್ವಾಲಾಬಾಗ್ ಪ್ರಕರಣದ ’ಉಪಸಂಹಾರ’ವಾದದ್ದು ೨೧ ವರ್ಷಗಳಾದ ಮೇಲೆ ನಡೆದ ಓಡ್ವಯರನ ’ಸಂಹಾರ’ದೊಡನೆ.
೧೯೪೦ರ ಜುಲೈ ೩೧ರಂದು ಪೆಂಟನ್ವಿಲ್ ಜೈಲಿನ ಆವರಣದಲ್ಲಿಯೆ ಉಧಮ್ಸಿಂಹನನ್ನು ಗಲ್ಲಿಗೇರಿಸಲಾಯಿತ?. ತನ್ನ ಅಸ್ಥಿಗಳನ್ನು ಅಂತ್ಯಸಂಸ್ಕಾರಕ್ಕಾಗಿ ಭಾರತಕ್ಕೆ ಕಳಿಸಬೇಕೆಂಬ ಉಧಮ್ಸಿಂಹನ ಬೇಡಿಕೆಯನ್ನು ನಿರಾಕರಿಸಲಾಯಿತು. ಆದಾದ ೩೪ ವ?ಗಳೇ ಕಳೆದ ಮೇಲೆ ೧೯೭೪ರಲ್ಲಿ ಭಾರತಸರ್ಕಾರದ ಕೋರಿಕೆಯಂತೆ ಉಧಮ್ಸಿಂಹನ ಅಸ್ಥಿಗಳನ್ನು ಭಾರತಕ್ಕೆ ಕಳಿಸಲಾಯಿತು. ಅಸ್ಥಿಸಂಪುಟಕ್ಕೆ ದೆಹಲಿ ವಿಮಾನನಿಲ್ದಾಣದಲ್ಲಿ ಭವ್ಯವಾದ ಸ್ವಾಗತ ಸಲ್ಲಿಸಲಾಯಿತು. ಅಂದಿನ ಪ್ರಧಾನಿ ಇಂದಿರಾಗಾಂಧಿ ಸೇರಿದಂತೆ ಗಣ್ಯರನೇಕರು ನಮನ ಸಲ್ಲಿಸಿದರು. ಅವಶೇ?ದ ಒಂದು ಭಾಗವನ್ನು ಗಂಗಾನದಿಯಲ್ಲಿ ಸಾಂಪ್ರದಾಯಿಕವಾಗಿ ವಿಸರ್ಜಿಸಲಾಯಿತು. ಉಳಿದ ಅವಶೇ? ಅಮೃತಸರ ಸೇರಿತು.
ಒಂದು ವಿಕಟತೆಯೆಂದರೆ ಉಧಮ್ಸಿಂಹನ ಬಲಿದಾನವಾದ ೭೯ ವರ್ಷಗಳ ತರುವಾಯವೂ ಅವನಿಗೆ ಸಂಬಂಧಿಸಿದ ಸಾವಿರಾರು ದಾಖಲೆಗಳು ಹೊರಜಗತ್ತಿಗೆ ಲಭ್ಯವಾಗದೆ ಇನ್ನೂ (೨೦೧೯ರಲ್ಲಿಯೂ) ಗುಪ್ತವಾಗಿಯೇ ಉಳಿದುಕೊಂಡಿವೆ. ಹಿಂದಿನ ಹಳೆಯ (೧೯೩೯ರ) ಕಾನೂನಿನಂತೆ ಆ ದಾಖಲೆಗಳು ಬಹಿರಂಗಗೊಳ್ಳಬಹುದಾದದ್ದು ಇನ್ನು ೨೦ ವರ್ಷಗಳು ಕಳೆದ ಮೇಲೆ – ೨೦೪೧ರಲ್ಲಿ.
ಉಧಮ್ಸಿಂಹನ ಅಂತಿಮ ಹೇಳಿಕೆ ಬೆಳಕುಕಂಡದ್ದು ಕೂಡಾ ಈಗ್ಗೆ ೨೨ ವ? ಹಿಂದೆಯ? (೧೯೯೬).
ಉಧಮ್ಸಿಂಹನ ಹೌತಾತ್ಮ್ಯವಾಗಿ ೮೦ ವರ್ಷ ಕಳೆದ ಮೇಲೂ ಅವನಿಗೆ ಸಂಬಂಧಿಸಿದ ದಾಖಲೆಗಳ ಗೋಪ್ಯತೆಯಿಂದ ಯಾರಿಗೆ ಪ್ರಯೋಜನವಾದೀತೆಂದು ಸೋಜಿಗವಾಗುತ್ತದೆ.
*********
ಜಲಿಯನ್ವಾಲಾಬಾಗ್ ಹತ್ಯಾಕಾಂಡ ನಡೆದ ತಾಣದಲ್ಲಿ ಒಂದು ಭವ್ಯ ಸ್ಮಾರಕ ಏರ್ಪಡಿಸಬೇಕೆಂದು ೧೯೧೯ರ? ಹಿಂದಿನಿಂದಲೇ ದೇಶದ ಜನತೆಯ ಆಕಾಂಕ್ಷೆ ಇದ್ದಿತಾದರೂ, ಅದಕ್ಕೆ ಕಾರ್ಯರೂಪ ಬರಲು ಅಲ್ಲಿಂದಾಚೆಗೆ ನಾಲ್ಕು ದಶಕಗಳೇ ಹಿಡಿಯಿತು. ಸ್ಮಾರಕವನ್ನು ೧೯೬೧ರ ಏಪ್ರಿಲ್ ೧೩ರಂದು ಲೋಕಾರ್ಪಣೆ ಮಾಡಿದವರು ಆಗಿನ ರಾ?ಪತಿ ಬಾಬು ರಾಜೇಂದ್ರಪ್ರಸಾದ್. ಎಲ್ಲ ಹುತಾತ್ಮರ ನಾಮಾಂಕನ ಹಾಗೂ ಭಾವಚಿತ್ರಗಳ ಸಂಕಲಿತ ಪ್ರದರ್ಶನ ಮೊದಲಾದ ಅಪೇಕ್ಷಣೀಯ ಸ್ಮಾರಿಕೆಗಳು ಏರ್ಪಡದೆ ನೂರು ವ?ಗಳ ತರುವಾಯವೂ ಬಾಕಿ ಉಳಿದಿವೆ.
ಭಾರತದ ಇತಿಹಾಸದಲ್ಲಿಯೆ ವಿಶಿ?ವೂ ಅನನ್ಯವೂ ಆದ ಮತ್ತು ಸ್ವಾತಂತ್ರ್ಯೋದ್ಯಮಕ್ಕೆ ನಿರ್ಣಾಯಕ ತಿರುವನ್ನು ನೀಡಿದ ಆ ಘಟನಾವಳಿಯ ಔಚಿತ್ಯಪೂರ್ಣ ಸ್ಮರಣೆಗೆ ನೂರು ವರ್ಷಗಳು ಕಳೆದಿರುವ ಈಗಲಾದರೂ ನ್ಯಾಯ ದೊರೆಯಲಿ.