ದೇಶದ ಜನತೆ ತಮಗೆ ಬೇಕಾದ ಸರ್ಕಾರವನ್ನು ತಾವೇ ಚುನಾಯಿಸಿಕೊಳ್ಳುವ ಹಬ್ಬ, ಜನತಂತ್ರದ ಮಹಾ ಉತ್ಸವ – 2019ರ ಮಹಾಚುನಾವಣೆ ಮುಗಿದಿದೆ. ಫಲಿತಾಂಶವೂ ಬಂದಿದೆ. ‘ಮತ್ತೊಮ್ಮೆ ಮೋದಿ ಸರ್ಕಾರ’ ಎಂಬುದು ಖಾತ್ರಿಗೊಂಡಿದೆ.
ಈಬಾರಿ ಭಾರತೀಯ ಜನತಾಪಕ್ಷ ನೇತೃತ್ವದ ‘ಭಾರತೀಯ ಜನತಾಂತ್ರಿಕ ಒಕ್ಕೂಟ’ (ಎನ್‍ಡಿಎ) ಗೆದ್ದಿರುವುದು 354 ಸ್ಥಾನ. ಕಾಂಗ್ರೆಸ್ ನೇತೃತ್ವದ ‘ಸಂಯುಕ್ತ ಪ್ರಗತಿಪರ ಒಕ್ಕೂಟ’(ಯುಪಿಎ)ಕ್ಕೆ ಲಭ್ಯವಾಗಿರುವುದು 91. ಮಾಯಾವತಿ-ಅಖಿಲೇಶ್ ಯಾದವ್ ಕೂಟದ ‘ಮಹಾಗಠ್‍ಬಂಧನ್’, ‘ತೃಣಮೂಲ ಕಾಂಗ್ರೆಸ್’ ಮುಂತಾಗಿ ಪ್ರಾದೇಶಿಕ ಪಕ್ಷಗಳ ಇತರರು ಗಳಿಸಿದ್ದು ಒಟ್ಟು 97 ಸ್ಥಾನಗಳನ್ನು. ಈ ರೀತಿಯಲ್ಲಿ ದೇಶಕ್ಕೆ ಮತ್ತೊಮ್ಮ ಸ್ಥಿರಸರ್ಕಾರ ನಡೆಸಲು ಅವಕಾಶ ದೊರೆತಂತಾಗಿರುವುದರಿಂದ ಈ ಗೆಲವು ಪ್ರಧಾನಿ ಮೋದಿಯವರು ಹೇಳಿದಂತೆ ನಿಜಕ್ಕೂ 130 ಕೋಟಿ ಭಾರತೀಯರ ಗೆಲವಾಗಿದೆ. ಈ ಐತಿಹಾಸಿಕ ಗೆಲವು ಜನತಂತ್ರದ ಗೆಲವು. ಈ ಮೂಲಕ ಜನತಂತ್ರ ವ್ಯವಸ್ಥೆಯ ಸೌಂದರ್ಯವನ್ನೂ ಆದರ್ಶಗಳನ್ನೂ ವಿಶ್ವದ ಮುಂದೆ ತೆರೆದಿಡಲು ಭಾರತಕ್ಕೆ ಸಾಧ್ಯವಾಗಿದೆ. ಆದ್ದರಿಂದ ಈ ಗೆಲವು ರಾಷ್ಟ್ರೀಯ ಗೆಲವೂ ಹೌದು.
ಜನತಂತ್ರ ವ್ಯವಸ್ಥೆಯ ಯಶಸ್ಸು ನಿಷ್ಪಕ್ಷಪಾತ ಚುನಾವಣೆ ಹಾಗೂ ಜನರ ಉತ್ಸಾಹಪೂರ್ಣ ಭಾಗವಹಿಸುವಿಕೆಯನ್ನು ಅವಲಂಬಿಸಿದೆ. ಈ ಮಾನದಂಡಗಳೆರಡೂ ಈ ಚುನಾವಣೆಯಲ್ಲಿ ಸ್ಪಷ್ಟವಾಗಿ ಬಿಂಬಿತವಾದವು. ದೇಶದ 90 ಕೋಟಿ ಮತದಾರರು ಮತಯಂತ್ರದ ಗುಂಡಿಯನ್ನು ಒತ್ತುವ ಮೂಲಕ ತಮ್ಮ ಹಕ್ಕನ್ನು ಚಲಾಯಿಸಿದ್ದಾರೆ. ಇದರಲ್ಲಿ 18-19 ವರ್ಷ ಪ್ರಾಯದ 1.5 ಕೋಟಿ ಹೊಸ ಮತದಾರರೂ ಸೇರಿದಂತೆ, 8.43 ಕೋಟಿ ಯುವಮತದಾರರು ದೇಶದ ಭವಿಷ್ಯವನ್ನು ನಿರ್ಣಯಿಸುವ ಮಹತ್ತ್ವದ ಕಾರ್ಯದಲ್ಲಿ ಭಾಗಿಗಳಾಗಿರುವುದು ಗಮನಾರ್ಹ ಸಂಗತಿ. ಲೋಕಸಭಾ ಚುನಾವಣೆಯ ಇತಿಹಾಸದಲ್ಲೇ ದಾಖಲೆಪ್ರಮಾಣದಲ್ಲಿ ಅಂದರೆ ಶೇ. 67.11ರಷ್ಟು ಮತಚಲಾವಣೆ ನಡೆದಿರುವುದೂ ಧನಾತ್ಮಕ ಸಂಗತಿಯಾಗಿದೆ.
ಭಾರತೀಯ ಜನತಂತ್ರದ ವಿಶೇಷತೆಯೇನೆಂದರೆ – ಇಲ್ಲಿ ಚುನಾವಣೆಯ ಪ್ರಕ್ರಿಯೆಗಳು ಪಾರದರ್ಶಕವಾಗಿ ನಡೆಯುತ್ತವೆ; ಈ ಪಾರದರ್ಶಕತೆಯ ಮೇಲೆ ಇಲ್ಲಿನ ರಾಜಕೀಯಪಕ್ಷಗಳಿಗೆ ಹಾಗೂ ಮತದಾರರಿಗೆ ಸಂಪೂರ್ಣ ವಿಶ್ವಾಸವಿದೆ ಎಂಬುದು. ಆದರೂ, ಪ್ರತಿ ಚುನಾವಣೆಯಲ್ಲೂ ಇರುವಂತೆ, ವಿರೋಧಪಕ್ಷಗಳು ಈ ಬಾರಿಯೂ ಚುನಾವಣಾ ಆಯೋಗದ ಮೇಲೆ ದೋಷಾರೋಪÀಗಳನ್ನು ಮಾಡುವುದು ಬಿಡಲಿಲ್ಲ. ಅವು ಎಂದಿನಂತೆ ‘ಚುನಾವಣಾ ಆಯೋಗವು ಕೇಂದ್ರಸರ್ಕಾರದ ಕೈಗೊಂಬೆಯಂತೆ ಕೆಲಸ ಮಾಡುತ್ತದೆ’, ‘ಮತಯಂತ್ರ(ಇವಿಎಂ)ದಲ್ಲಿ ದೋಷವಿದೆ’ ಇತ್ಯಾದಿ ಪ್ರವರಗಳನ್ನು ಪಠಿಸಿದ್ದಲ್ಲದೆ ಸರ್ವೋಚ್ಚನ್ಯಾಯಾಲಯದ ಕದವನ್ನು ತಟ್ಟಲೂ ಹಿಂದೆ ಬೀಳಲಿಲ್ಲ. ಈ ನಾಟಕಗಳೆಲ್ಲ ‘ಸೋಲುತ್ತೇವೆ’ ಎಂಬ ಹತಾಶಭಾವದ ಪ್ರಕಟೀಕರಣವಷ್ಟೆ. ಆದರೆ ಚುನಾವಣಾ ಆಯೋಗವು ಮಾತ್ರ ಇವಾವಕ್ಕೂ ಸೊಪ್ಪುಹಾಕದೆ ತನ್ನ ಕರ್ತವ್ಯವನ್ನು ಸಂವಿಧಾನಾತ್ಮಕವಾಗಿ ಯಶಸ್ವಿಯಾಗಿ ಪೂರೈಸಿದೆ.
ಸೂಕ್ಷ್ಮವಾಗಿ ಗಮನಿಸಿದರೆ, ಅಂತರ್ವಾಹಿಯಾಗಿ ಈ ಚುನಾವಣೆಯಲ್ಲಿ ಮುಖಾಮುಖಿಯಾದದ್ದು ಎರಡು ವಿಭಿನ್ನ ವಿಚಾರಧಾರೆಗಳು: ಒಂದು ಸನಾತನ ಭಾರತೀಯ ಸಂಸ್ಕøತಿಯ ಧಾರೆಯಾಗಿರುವ ಏಕಾತ್ಮತೆ, ಸರ್ವಾಂಗೀಣ ಹಾಗೂ ಸರ್ವಸಹಭಾಗಿತ್ವದ ‘ಸಹ ನಾವವತು, ಸಹ ನೌ ಭುನಕ್ತು, ಸಹ ವೀರ್ಯಂ ಕರವಾವಹೈ…” – ಎಂಬ ಚಿಂತನೆ. ಮತ್ತೊಂದು ಭಾರತದ ಸಹಜಗುಣವಾದ ವಿವಿಧತೆಯನ್ನು ಬಂಡವಾಳವಾಗಿಸಿಕೊಂಡು, ತಮ್ಮ ಸ್ವಾರ್ಥಕ್ಕಾಗಿ ಸಮಾಜವನ್ನು ಜಾತಿ, ಮತ, ಪಂಥ, ಭಾಷೆ, ಪ್ರಾಂತಗಳ ಆಧಾರದಲ್ಲಿ ಒಡೆಯುವ ವಿಭಾಜಕ ಚಿಂತನೆ.
ಸ್ವಾತಂತ್ರ್ಯಪ್ರಾಪ್ತಿಯ ಜೊತೆಜೊತೆಗೇ ಈ ವೈಚಾರಿಕ ಸಂಘರ್ಷ ಉದ್ಗಮಗೊಂಡು ಈಗಲೂ ನಡೆದು ಬರುತ್ತಿರುವುದು ವಿದಿತ. ಈ ಸಂಘರ್ಷ ಈಗ ಒಂದು ನಿರ್ಣಾಯಕ ತಿರುವನ್ನು ಪಡೆದುಕೊಳ್ಳುವ ಲಕ್ಷಣಗಳು ಸ್ಪಷ್ಟವಾಗುತ್ತಿವೆ. ಈ ಸಂಘರ್ಷದ ಒಂದು ಮಹತ್ತ್ವಪೂರ್ಣ ಮಜಲಾಗಿ ಈ ಚುನಾವಣೆ ನಡೆದಿದೆ. ಸಮಾಜವು ಸಂಘಟಿತವಾಗತೊಡಗಿದೆ; ಅರ್ಥಾತ್ ಒಡೆದು ಆಳುವ ರಾಜನೀತಿಯ ಬುಡ ಈಗ ಅಲ್ಲಾಡತೊಡಗಿದೆ. ಆದ್ದರಿಂದಲೇ ಸಮಾಜವನ್ನು ಒಡೆದು ಆಳುವ ಎಲ್ಲ ಶಕ್ತಿಗಳೂ ಒಂದುಗೂಡಿವೆ; ಸಮಾಜವನ್ನು ಒಗ್ಗೂಡಿಸುವ ಪ್ರಯಾಸಗಳನ್ನು ವಿರೋಧಿಸುವ ಕಾರ್ಯಗಳನ್ನು ಮಾಡುತ್ತಿವೆ.
ಇದೀಗ, ಈ ವೈಚಾರಿಕ ಸಂಘರ್ಷದಲ್ಲಿ ನಿರ್ಣಾಯಕವೆಂಬಂತೆ, ಭಾರತದ ಪ್ರಜ್ಞಾವಂತ ಬುದ್ಧಿವಂತ ಮತದಾರರು ಸಮಾಜವನ್ನು ಸಂಘಟಿಸುತ್ತಿರುವ, ಎಲ್ಲರನ್ನೂ ಒಗ್ಗೂಡಿಸಿಕೊಂಡು ಅಭಿವೃದ್ಧಿಯ ಕಡೆಗೆ ಮುನ್ನಡೆಸುತ್ತಿರುವ ನರೇಂದ್ರ ಮೋದಿ ಅವರ ನೇತೃತ್ವಕ್ಕೆ ತಮ್ಮ ಸಮರ್ಥನೆಯನ್ನು ನೀಡಿದ್ದಾರೆ. ಮತ್ತೊಮ್ಮೆ ಮೋದಿಯವರಿಗೆ ಬಲಿಷ್ಠ ಸರ್ಕಾರವನ್ನು ನಡೆಸಲು ಸಾಧ್ಯವಾಗುವಂತೆ ಅಭೂತಪೂರ್ವ ಬಹುಮತದ ಅನುಮೋದನೆಯನ್ನು ನೀಡಿದ್ದಾರೆ.
ನೂತನ ಸರ್ಕಾರದ ನೇತಾರ ನರೇಂದ್ರ ಮೋದಿಯವರು – “ಸಬ್ ಕಾ ಸಾಥ್ + ಸಬ್ ಕಾ ವಿಕಾಸ್ + ಸಬ್ ಕಾ ವಿಶ್ವಾಸ್ = ವಿಜಯೀ ಭಾರತ್” ಎಂಬ ತಮ್ಮ ಆಡಳಿತದ ಸುವರ್ಣಸೂತ್ರವನ್ನು ಘೋಷಿಸಿದ್ದಾರೆ. ಹೊಸ ಸರ್ಕಾರ ಜನರ ಆಶೋತ್ತರಗಳನ್ನು ಈಡೇರಿಸುವಲ್ಲಿ ಸಫಲವಾಗಲಿ ಹಾಗೂ ಚುನಾವಣಾ ಪ್ರಚಾರದ ಸಮಯದಲ್ಲಿ ವ್ಯಕ್ತವಾದ ದ್ವೇಷಾಸೂಯೆಯ ಭಾವನೆಗಳೆಲ್ಲ ಅಳಿದು, ಸಮರಸತೆ ಹಾಗೂ ಐಕ್ಯಭಾವವು ಸಮಾಜದಲ್ಲಿ ಏರ್ಪಡಲಿ ಎಂಬುದು ‘ಉತ್ಥಾನ’ದ ಹಾರೈಕೆ.
* * * * * *
ಸಾರ್ವಜನಿಕರಿಗೆ ಬೇಸರ ತರಿಸಿದ ಸಂಗತಿಯೆಂದರೆ ವಿಪಕ್ಷಗಳು ವ್ಯಕ್ತಿ ನಿಂದನೆಯನ್ನೇ ಪ್ರಮುಖ ಪ್ರಚಾರ ಸಾಮಗ್ರಿಯಾಗಿಸಿಕೊಂಡದ್ದು. ಬಹುಶಃ ಹಿಂದಿನ ಯಾವ ಚುನಾವಣೆಯಲ್ಲೂ ಪ್ರಚಾರ ಇಷ್ಟು ಕೀಳುಮಟ್ಟಕ್ಕೆ ಇಳಿದಿರಲಿಲ್ಲ. ಘಟಾನುಘಟಿಗಳ, ಮುತ್ಸದ್ದಿಗಳ ಸೋಲು, ಹೆಚ್ಚಿನೆಡೆಗಳಲ್ಲಿ ಸ್ವಯಂ ಬಿ.ಜೆ.ಪಿ.ಯೇ ನಿರೀಕ್ಷಿಸಿದ್ದುದಕ್ಕಿಂತ ಉತ್ತಮ ಫಲಿತಾಂಶ, ಕಾಂಗ್ರೆಸಿನ ಅಂಗೀಕಾರ್ಯತೆಯಲ್ಲಿ ತೀವ್ರ ಇಳಿತ – ಇವೇ ಮೊದಲಾದ ಹಲವು ದಾಖಲೆಗಳು ಈ ಚುನಾವಣೆಯಲ್ಲಿ ಸೃಷ್ಟಿಯಾದವು. ಈ ‘ದಾಖಲೆ’ಗಳ ಪಟ್ಟಿಗೇ ಬಹುಶಃ ಸೇರಿಸಬಹುದಾದದ್ದು ಅನುಭವಿ ರಾಜಕಾರಣಿಗಳ ಬಾಯಿಗಳಿಂದ ಹೊಮ್ಮಿದ ಜುಗುಪ್ಸೆ ತರುವ ಮಟ್ಟದ ವ್ಯಕ್ತಿನಿಂದನೆಗಳು, ನಿರಾಧಾರ ಆರೋಪಗಳು, ಅಲ್ಪ ಹೊಣೆಗಾರಿಕೆಯೂ ಇಲ್ಲದ ಹಾರಿಕೆಯ ಟೀಕೆಗಳು. ಸಾರ್ವಜನಿಕ ಸಂವಾದದ ಮಟ್ಟದಲ್ಲಿ ಇಷ್ಟುಮಟ್ಟಿನ ಅಧಃಪಾತವನ್ನು ಜನತೆ ಹಿಂದೆ ನೋಡಿರಲಿಲ್ಲ. ವಿಪಕ್ಷಗಳ ಸೋಲಿಗೆ ಈ ಕ್ಷುದ್ರವರ್ತನೆಗಳದೂ ಪರೋಕ್ಷ ಕೊಡುಗೆ ಇದ್ದೀತು! ತಮ್ಮ ರೋಷವನ್ನು ವ್ಯಕ್ತಪಡಿಸಲು ಇದ್ದ ಏಕೈಕ ಮಾಧ್ಯಮವಾದ ಮತದಾನವನ್ನು ಜನರು ಶಕ್ತಿಯುತವಾಗಿ ಬಳಸಿಕೊಂಡಿದ್ದಾರೆಂಬುದನ್ನು ಫಲಿತಾಂಶದಲ್ಲಿ ಕಾಣಬಹುದು.
ವಿಪಕ್ಷಗಳ ಅಪಲಾಪಗಳಲ್ಲಿ ತೀರಾ ಈಚಿನವನ್ನು ದಾಖಲೆಗಾಗಿ ಸ್ಮರಿಸುವುದಾದರೆ:
* “ಚೌಕಿದಾರ್ ಚೋರ್ ಹೈ ಎಂದು ಸರ್ವೋಚ್ಚ ನ್ಯಾಯಾಲಯವೇ ಹೇಳಿದೆ.”
– ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ
* “ನನ್ನ ಜೀವಮಾನದಲ್ಲೇ ಮೋದಿ ಅವರಷ್ಟು ದುರ್ಬಲ ಹಾಗೂ ಹೇಡಿ ಪ್ರಧಾನಿಯನ್ನು ನೋಡಿಲ್ಲ.”
– ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ, 9-5-2019
* “ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪ್ರಜಾಪ್ರಭುತ್ವದಿಂದ ಕಪಾಲಮೋಕ್ಷ ಆಗಬೇಕು.”
– ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, 9-5-2019
* “ಈ ಹಿಂದೆ ಬ್ರಿಟಿಷರನ್ನು ದೇಶದಿಂದ ಕಿತ್ತೆಸೆದ ರೀತಿಯಲ್ಲೇ ಪ್ರಧಾನಿ ಮೋದಿ ಅವರನ್ನು ಸಹ ಕಾಂಗ್ರೆಸ್ ಅಧಿಕಾರದಿಂದ ಕಿತ್ತೆಸೆಯಲಿದೆ.”
– ಕಾಂಗ್ರೆಸ್ ಪ್ರಧಾನ ವಕ್ತಾರ ರಣದೀಪ್ ಸುರ್ಜೇವಾಲಾ, 9-5-2019
* “ಮೋದಿ ಕಪ್ಪುಬಣ್ಣದ ಬ್ರಿಟಿಷ್ ವ್ಯಕ್ತಿ; ಕೆಲಸ ಮಾಡದಿದ್ದರೂ ಬಳೆ ತೊಟ್ಟು ಸದ್ದು ಮಾಡುವ ನವವಧು.”
_ ಪಂಜಾಬಿನ ಹಾಲಿ ಕಾಂಗ್ರೆಸ್ ಸಚಿವ ನವಜೋತ್ ಸಿಂಗ್ ಸಿದ್ದು, 11-5-2019
* “ಜಾತಿ-ಧರ್ಮಗಳ ಆಧಾರದ ಮೇಲೆ ದೇಶವನ್ನು ಒಡೆಯುತ್ತಿರುವ ನರೇಂದ್ರ ಮೋದಿ ನಿಜವಾದ ದೇಶದ್ರೋಹಿ.”
– ಕರ್ನಾಟಕದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, 12-5-2019
* “ಮೋದಿಯವರ ಬಾಗಿಲನ್ನು ಶೇ. 90ರಷ್ಟು ಮಚ್ಚಿದ್ದೇವೆ.”
– ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ, 17-5-2019
* “ಲೋಕಸಭೆಯ ಚುನಾವಣೆಯಲ್ಲಿ ಮುನ್ನೂರು ಸ್ಥಾನ ಗೆಲ್ಲುತ್ತೇವೆ ಎಂದು ನರೇಂದ್ರ ಮೋದಿ ಹೇಳುತ್ತಾರೆ. ಆದರೆ ಬಿ.ಜೆ.ಪಿ.ಗೆ ಬಹುಮತ ಬರುವುದಿಲ್ಲ.”
– ಜೆಡಿಎಸ್ ವರಿಷ್ಠ ಹೆಚ್.ಡಿ. ದೇವೇಗೌಡ, 18-5-2019
* “ಪ್ರಧಾನಿ ಮೋದಿ ಒಬ್ಬ ದೇಶದ್ರೋಹಿ.”
– ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್, 18-5-2019
* “ಮೋದಿ ಅಲೆ ಬಿಂಬಿಸುವಂತೆ ಸಮೀಕ್ಷೆ ಮಾಡಿಸಿದ್ದಾರೆ.”
– ಕರ್ನಾಟಕ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ
* “ಕೇಂದ್ರಸರ್ಕಾರದ ಐದು ವರ್ಷಗಳ ಆಡಳಿತದಲ್ಲಿ ಸಮಸ್ಯೆಗಳು ತಾಂಡವವಾಡುತ್ತಿದ್ದರೂ ಚುನಾವಣೋತ್ತರ ಸಮೀಕ್ಷೆಗಳಲ್ಲಿ ಇಷ್ಟೊಂದು ಸ್ಥಾನ ತೋರಿಸುತ್ತಿರುವುದು ಆಶ್ಚರ್ಯ ತಂದಿದೆ. ಈ ಸಮೀಕ್ಷೆಗಳನ್ನು ಒಪ್ಪಲು ಸಾಧ್ಯವೇ ಇಲ್ಲ.”
– ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್, 20-5-2019
* * * * * *
ಮೇಲಿನ ಪಟ್ಟಿಯನ್ನು ಎಷ್ಟು ಬೇಕಾದರೂ ಬೆಳೆಸಬಹುದು; ಆವಶ್ಯಕತೆಯಿಲ್ಲ. ಈ ಅಸಡ್ಡಾಳ ಹೇಳಿಕೆಗಳಿಗೆಲ್ಲ ಜನತೆಯೇ ಈಗ ಬೀಗ ಹಾಕಿಯಾಗಿದೆ – ಎಂಬುದು ಚುನಾವಣಾ ಫಲಿತಾಂಶದ ಒಂದು ಪರೋಕ್ಷ ಉಪಲಬ್ಧಿ.
ಮೇಲಣ ಆಕಾಂಡತಾಂಡವಗಳೆಲ್ಲಿ, “ಇದು ಜನತಾಜನಾರ್ದನನ ವಿಜಯ”, “ನಾನೊಬ್ಬ ಫಕೀರ. ನನ್ನ ಜೋಳಿಗೆಯನ್ನು ನೀವು ದೇಶದ ಜನರು ಸಮೃದ್ಧವಾಗಿ ತುಂಬಿಸಿದ್ದೀರಿ. ನೀವು ನಮ್ಮಲ್ಲಿರಿಸಿರುವ ವಿಶ್ವಾಸಕ್ಕೆ ನಾವು ದ್ರೋಹ ಬಗೆಯುವುದಿಲ್ಲ. ಚುನಾವಣೆಯ ಅಗಟವಿಗಟಗಳನ್ನು ಮರೆತು ಈಗ ವಿಪಕ್ಷಗಳೂ ಸೇರಿದಂತೆ ಎಲ್ಲರೂ ದೇಶದ ಮುನ್ನಡೆಗೆ ಶ್ರಮಿಸಬೇಕಾಗಿದೆ” ಎಂಬ ನರೇಂದ್ರ ಮೋದಿಯವರ ನಮ್ರತಾಪೂರ್ವಕ ಆವಾಹನೆಯೆಲ್ಲಿ!
ಮೋದಿ ಸರ್ಕಾರವಂತೂ ತನ್ನ ನಿಶ್ಚಿತ ಮಾರ್ಗದಲ್ಲಿ ಶ್ರದ್ಧೆಯಿಂದಲೂ ದಕ್ಷತೆಯಿಂದಲೂ ಮುಂದೆ ಸಾಗುವುದು ಖಚಿತ. ಈ ನವಪರ್ವೋದಯ ಸಂದರ್ಭದಲ್ಲಿ ಸಂಭ್ರಮಿಸೋಣ.
– ಸಂಪಾದಕ