ಕಳೆದ ತಿಂಗಳು ಶ್ರೀಹರ್ಷ ಒಂದು ಮದುವೆಗೆ ಹೋಗಿದ್ದರು. ಅಲ್ಲಿ ಅವರ ಜೊತೆಗೆ ಅವರಿಗೆ ಪರಿಚಯವಿದ್ದ ಒಬ್ಬರು ಊಟಕ್ಕೆ ಕುಳಿತರು. ಸುಮಾರು 60ರ ವಯಸ್ಸು ಅವರಿಗೆ. ಸ್ವೀಟ್ ಬಂದಾಗ ಕೈಯಲ್ಲಿ ತೆಗೆದುಕೊಂಡು, “ನಮ್ಮಲ್ಲಿ ಒಂದು ಸಣ್ಣ ಮಗು ಇದೆ. ಕಾರ್ಯಕ್ರಮ ಮುಗಿಸಿ ಮನೆಗೆ ಹೋದ ಕೂಡಲೇ ಎಲ್ಲಿಗೆ ಹೋಗಿದ್ದೆ, ಏನು ಕಾರ್ಯಕ್ರಮ ಇತ್ತು, ಏನು ಸ್ವೀಟ್ ಇತ್ತು ಎಂದೆಲ್ಲ ಕೇಳುತ್ತದೆ. ಅದಕ್ಕೆ ಎಲ್ಲಿಗೆ ಊಟಕ್ಕೆ ಹೋದರೂ, ಈ ಥರ ಸ್ವೀಟ್ ತೆಗೆದುಕೊಂಡು ಆ ಮಗುವಿಗೆ ಕೊಡುತ್ತೇನೆ. ವಯಸ್ಸು ಜಾಸ್ತಿ ಏನಿಲ್ಲ, ಬರೀ 95 ವರ್ಷ ಅಷ್ಟೇ. ನಮ್ಮಮ್ಮ ಕಣ್ರೀ” ಎಂದು ಹೇಳಿ ನಕ್ಕರಂತೆ. ಅದಕ್ಕೆ ಹರ್ಷ – “ಸರಿಯಿದೆ ಬಿಡಿ. ನಾವು ಸಣ್ಣವರಿದ್ದಾಗ ಅವರು ನಮಗೆ ಹೀಗೇ ತಂದು ಕೊಡುತ್ತಿದ್ದರು. ಈಗ ನಾವು ದೊಡ್ಡವರಾಗಿದ್ದೇವೆ, ಅವರು ಮಕ್ಕಳಾಗಿದ್ದಾರೆ. ನಾವು ತೆಗೆದುಕೊಂಡು ಹೋಗಿ ಕೊಟ್ಟರಾಯಿತು” ಎಂದು ಹೇಳಿದರಂತೆ.
ಇನ್ನೊಂದು ಘಟನೆ ನಾನು ಕಳೆದ ವಾರ ಊರಿಗೆ ಹೋಗುತ್ತಿದ್ದಾಗ ನಡೆದದ್ದು. ಹೆಬ್ರಿಯಿಂದ ಕಾರ್ಕಳಕ್ಕೆ ಹೋಗುತ್ತಿದ್ದೆ. ಪಕ್ಕದಲ್ಲಿ ಒಬ್ಬರು ಕುಳಿತಿದ್ದರು. ಟಿಕೆಟ್ಗಾಗಿ ಚಿಲ್ಲರೆಗೆ ಸಂಬಂಧಿಸಿದ ವಿಷಯದಿಂದ ನಮ್ಮ ಮಾತು ಶುರುವಾಯಿತು. ಹಾಗೇ ಪರಿಚಯ ಮಾಡಿಕೊಂಡೆವು. 5 ನಿಮಿಷದ ನಂತರ ಅವರಿಗೆ ಅವರ ಪತ್ನಿಯಿಂದ ಫೋನ್ ಬಂತು. “ಅವಳಿಗೆ ಕೊಡು” ಎಂದು ಹೇಳಿ ಪುಟ್ಟ ಮಗುವನ್ನು ಮಾತಾಡಿಸುವಂತೆ ಮಾತಾಡಿಸುವುದಕ್ಕೆ ಶುರು ಮಾಡಿದರು. “ಜಾಣೆ ಅಲ್ವಾ ನೀನು. ಊಟ ಮಾಡಿದರೆ ನಾನು ಬರುವಾಗ ಚಾಕಲೇಟ್ ತರುತ್ತೇನೆ” ಎನ್ನುವ ಅನುನಯಿಸುವ ಮಾತುಗಳನ್ನಾಡಿ ಫೆÇೀನ್ ಇಟ್ಟರು. ನನಗೆ ಆಗಲೇ ಅವರ ಪರಿಚಯ ಆಗಿದ್ದರಿಂದ “ಮೊಮ್ಮಗಳಾ?” ಎಂದು ಕೇಳಿದೆ. ಅದಕ್ಕೆ ಅವರು “ಒಂದು ಥರ ಹಾಗೇ ಅಂದುಕೊಳ್ಳಿ. ನನ್ನ ಅಮ್ಮ. ವಯಸ್ಸು 90. 6 ತಿಂಗಳ ಹಿಂದೆ ಕುಳಿತಲ್ಲೇ ಜೋಲಿಹೊಡೆದು ಪಕ್ಕಕ್ಕೆ ಬಿದ್ದರು. ಕುರ್ಚಿಯ ತುದಿ ಸಣ್ಣಕ್ಕೆ ತಲೆಗೆ ಹೊಡೆಯಿತು. 1 ವಾರ ಆಸ್ಪತ್ರೆಯಲ್ಲಿ ಇದ್ದರು. ಅದರ ನಂತರ 2-3, 5-6 ದಿನಕ್ಕೆ 1-2 ಸಲ ನನ್ನ ಮತ್ತು ನನ್ನ ಹೆಂಡತಿಯನ್ನು ಅವರ ಅಪ್ಪ ಅಮ್ಮ ಎಂದು ಭ್ರಮಿಸುತ್ತಿದ್ದಾರೆ. ನಾವೂ ಅವರನ್ನು ಪುಟ್ಟ ಮಗುವಿನ ಥರ ನೋಡಿಕೊಳ್ಳುತ್ತೇವೆ. ಅವರೂ ಖುಶಿ ಪಡುತ್ತಾರೆ. ಅವರ ಬಾಲ್ಯ ತುಂಬಾ ಕೆಟ್ಟದ್ದಾಗಿತ್ತು. ಅವರು ಅವರ ತಂದೆ ತಾಯಿಗೆ ಎಂಟನೆಯ ಮಗು. ಅವರು ಹುಟ್ಟಿದಾಗ ಅವರ ತಾಯಿ ತೀರಿಕೊಂಡರು. ಕೆಲವೇ ದಿನಗಳಲ್ಲಿ ಅವರ ಮೊದಲ ಅಣ್ಣ ಅನಾರೋಗ್ಯದಿಂದ ತೀರಿಕೊಂಡ. ಮಗನ ಮೇಲೆ ತುಂಬಾ ಪ್ರೀತಿ ಇಟ್ಟುಕೊಂಡಿದ್ದ ತಂದೆ ಇವರ ಕೆಟ್ಟ ಕಾಲ್ಗುಣದಿಂದ ತನ್ನ ಪತ್ನಿ ಮತ್ತು ಮಗ ಸತ್ತರು ಎಂದು ಇವರನ್ನು ತುಂಬಾ ಕಡೆಗಣಿಸಿದರು. ಆ ನೋವು ಮನದಲ್ಲಿ ಸುಪ್ತವಾಗಿದ್ದು ಈಗ ಆ ಪ್ರೀತಿ ಬಯಸುತ್ತಿದ್ದಾರೆ. ನೀವು ಅವರು ಬಯಸಿದಂತೆ ನೋಡಿಕೊಂಡರೆ ಬೇಗ ಗುಣಮುಖರಾಗುತ್ತಾರೆ ಎಂದು ವೈದ್ಯರು ಹೇಳಿದರು. ಅದೇ ಈಗ ಊಟ ಬೇಡ, ಮಾತ್ರೆ ತೆಗೆದುಕೊಳ್ಳುವುದಿಲ್ಲ ಎಂದು ಮಗು ಥರ ಹಟಮಾಡುತ್ತಿದ್ದಾರೆ ಎಂದು ನನ್ನ ಹೆಂಡತಿ ಫೋನ್ ಮಾಡಿದಳು” ಎಂದರು. ಏನೂ ಹೇಳುವುದಕ್ಕೂ ತೋಚಲಿಲ್ಲ. ಸುಮ್ಮನೆ ಕುಳಿತುಬಿಟ್ಟೆ. ಆ ವ್ಯಕ್ತಿಯ ಬಗ್ಗೆ ಗೌರವದಿಂದ ತಲೆಬಾಗಿತು. ಕಾರ್ಕಳದಲ್ಲಿ ಇಬ್ಬರೂ ಇಳಿದು ಬೇರೆ ಬೇರೆ ಬಸ್ನ್ನು ಹತ್ತಿದೆವು.
ಬದುಕಿನಲ್ಲಿ ತುಂಬಾ ವಿಷಯಗಳಿಗೆ ವಿವರಣೆಯ ಅಗತ್ಯವಿರುವುದಿಲ್ಲ. ಮೌನವಾಗಿ ಅನುಭವಿಸಿದರೇ ಚಂದ. ಪದಗಳಿಗೆ ನಿಲುಕದ ಬರಹಕ್ಕೆ ಸಿಗದ ಅದ್ಭುತ ಭಾವಗಳು ಇವು.