ಕಳೆದ ಸುಮಾರು ಇಪ್ಪತ್ತೈದು ವರ್ಷಗಳಿಂದ ನನ್ನದು ಮುಖ್ಯವಾಗಿ ನೀರು, ಮಣ್ಣು ಮತ್ತು ಅವುಗಳ ರಾಸಾಯನಿಕ ಗುಣಲಕ್ಷಣಗಳ ಬಗೆಗೆ ಅಧ್ಯಯನ. ನನ್ನ ಸಂಶೋಧನೆಯು ಮುಖ್ಯವಾಗಿ ನೀರಿನ ಲಭ್ಯತೆ, ಅದರ ಗುಣಲಕ್ಷಣಗಳು ಮತ್ತು ಮಾಲಿನ್ಯವನ್ನು ಕುರಿತದ್ದಾಗಿದೆ. ಕೇಂದ್ರಸರ್ಕಾರದ ಮೂರು ಸಂಸ್ಥೆಗಳು ನನ್ನ ಸಂಶೋಧನೆಗಳಿಗೆ ಅನುದಾನವನ್ನು ನೀಡಿವೆ. ಅವುಗಳೆಂದರೆ, ‘ಕೇಂದ್ರ ಪರಿಸರ ಮತ್ತು ಅರಣ್ಯ ಇಲಾಖೆ’, ‘ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಇಲಾಖೆ’ ಹಾಗೂ ಅಣುಶಕ್ತಿ ಇಲಾಖೆಗೆ ಸೇರಿದ ‘ಅಣುವಿಜ್ಞಾನ ಸಂಶೋಧನಾ ಮಂಡಳಿ’ (ಬೋರ್ಡ್ ಆಫ್ ರಿಸರ್ಚ್ ಇನ್ ನ್ಯೂಕ್ಲಿಯರ್ ಸೈನ್ಸ್) ಮುಂಬಯಿ. ಇವುಗಳಲ್ಲದೆ ಅಂತರ್ಜಲ ಮತ್ತು ನದಿಗಳ ಬಗ್ಗೆ ಅಧ್ಯಯನ ಮಾಡಲು ಭೂವಿಜ್ಞಾನ ಸಚಿವಾಲಯ ಕೂಡ ಅನುದಾನ ನೀಡಿದೆ.
ಅಧ್ಯಯನ – ರಹದಾರಿ
ಅಣುವಿಜ್ಞಾನ ಸಂಶೋಧನಾ ಮಂಡಳಿಯವರು ಈ ವಿಷಯದಲ್ಲಿ ಆಸಕ್ತಿ ವಹಿಸುವುದಕ್ಕೊಂದು ಹಿನ್ನೆಲೆ ಇದೆ. ನಾವು ಸೋಪುಮತ್ತು ಡಿಟರ್ಜೆಂಟ್ ಬಳಸುವುದಕ್ಕೂ ಕೆರೆಗಳಲ್ಲಿ ನೊರೆ ಬರುವುದಕ್ಕೂ ಸಂಬಂಧವಿದೆ. ಸೋಪಿನ ನೊರೆಯಲ್ಲಿ ಒಂದು ಬಗೆಯ ಆ್ಯಂಟಿಬಯೋಟಿಕ್ ಇದೆ; ಯಾವುದೋ ಒಂದು ಕ್ರಿಮಿನಾಶಕ ಇರುತ್ತದೆ. ಅದು ನೀರಿಗೆ ಸೇರಿದಾಗ ನೀರಿನಲ್ಲಿರುವ ಮೀನುಗಳು ಅದನ್ನು ಸೇವಿಸಿ ಅವು ಸಾಯಬಹುದು ಅಥವಾ ಅವುಗಳ ಸಂತಾನೋತ್ಪತ್ತಿ ಕಮ್ಮಿ ಆಗಬಹುದು. ಸಂತತಿನಿಯಂತ್ರಣಕ್ಕೆ ಸಂಬಂಧಿಸಿದ ಒಂದು ಮಾತ್ರೆಯನ್ನು ಮನುಷ್ಯರು ಸೇವಿಸಿದಾಗ ಅದರ ಅಂಶ ಮೂತ್ರದ ಮುಖಾಂತರ ಹೊಳೆಗೆ ಹೋದರೆ ಅದನ್ನು ಸೇವಿಸಿದ ಮೀನಿನ ಸಂತಾನಶಕ್ತಿಯಲ್ಲಿ ಇಳಿಕೆ ಉಂಟಾಗುತ್ತದೆ. ಅದೇ ರೀತಿ ಕೆಲವು ಔಷಧಿಗಳು ನೀರಿಗೆ ಸೇರುತ್ತಲೇ ಇವೆ. ಹಾಗೆ ಸೇರುವುದರಿಂದ ಮೀನು ಅಥವಾ ನೀರಿನಲ್ಲಿರುವ ಬೇರೆ ಜೀವಿಗಳಿಗೆ ಹಾನಿ ಆಗುತ್ತಿದೆಯೆ? ಎಷ್ಟು ಪ್ರಮಾಣದಲ್ಲಿ ಹಾನಿಯಾಗಿದೆ? – ಎಂಬುದರ ಬಗ್ಗೆ ನಾನು ಅಧ್ಯಯನ ಮಾಡುತ್ತಿದ್ದೇನೆ. ಅದೇ ನನ್ನನ್ನು ಅಂಟಾರ್ಟಿಕಾಕ್ಕೆ ಕರೆದುಕೊಂಡು ಹೋಯಿತು.
ಔಷಧೀಯ ವಸ್ತುಗಳು, ಸೋಪು, ಕ್ರೀಮು, ಬೇರೆಬೇರೆ ಮುಖದ ಪೌಡರ್ ಇವನ್ನೆಲ್ಲ ನಾವು ಬಳಸುತ್ತೇವೆ. ಸ್ನಾನ ಮಾಡಿದ ಕೂಡಲೆ ಅವೆಲ್ಲ ಬಚ್ಚಲಿನ ಮುಖಾಂತರ ಹೋಗಿ ಹೊಳೆಗೆ ಸೇರುತ್ತವೆ. ಅದರಲ್ಲಿರುವ ಕ್ರಿಮಿನಾಶಕಗಳು ಹೊಳೆಯ ಕ್ರಿಮಿಗಳನ್ನು ಕೊಲ್ಲುತ್ತಿವೆ. ಅದು ಎಷ್ಟು ಪ್ರಮಾಣದಲ್ಲಿದೆ? ಇನ್ನು ಆ್ಯಂಟಿಬಯೋಟಿಕ್ಗಳು.
ಡಾಕ್ಟರ್ ನಮಗೆ ಆ್ಯಂಟಿಬಯೋಟಿಕ್ ಕೊಡುತ್ತಾರೆ. ಐದು ದಿನಗಳಿಗೆ ಕೊಟ್ಟರೆ ನಾವು ಪೂರ್ತಿ ತಿನ್ನಲೇಬೇಕು. ಕಾಯಿಲೆ ಗುಣವಾಯಿತು ಎಂದು ನಾವು ಎರಡು ಅಥವಾ ಮೂರು ದಿನಕ್ಕೆ ಮಾತ್ರೆ ಸೇವಿಸುವುದನ್ನು ನಿಲ್ಲಿಸಿದರೆ ನಮ್ಮೊಳಗೆ ಆ ಕ್ರಿಮಿ ಉಳಿದುಕೊಂಡಿರುತ್ತದೆ. ಇದರಿಂದ ನಾವು ಅದಕ್ಕೆ ಆ್ಯಂಟಿಬಯೋಟಿಕ್ ವಿರುದ್ಧ ಹೋರಾಡಿ ಜಯಿಸಲು ಅವಕಾಶ ಮಾಡಿಕೊಟ್ಟಂತಾಗುತ್ತದೆ. ಆ ಕ್ರಿಮಿ ನಮ್ಮ ಮಲದ ಮೂಲಕ ಹೊಳೆಗೆ ಹೋದರೆ ಅಲ್ಲಿಯ ಎಲ್ಲ ನೀರನ್ನು ಮಲಿನಮಾಡುತ್ತದೆ. ಆ ನೀರನ್ನು ಕುಡಿದವರಿಗೆ ಜ್ವರ ಬಂದಲ್ಲಿ ಆ್ಯಂಟಿಬಯೋಟಿಕ್ ಕೊಟ್ಟರೆ ಗುಣ ಆಗುವುದಿಲ್ಲ. ಆಗ ಅದಕ್ಕಿಂತ ಬಲವಾದ ಆ್ಯಂಟಿಬಯೋಟಿಕ್ ಕೊಡಬೇಕಾಗುತ್ತದೆ. ಪ್ರಸ್ತುತ ಆ್ಯಂಟಿಬಯೋಟಿಕ್ ಪ್ರತಿರೋಧದ (ರೆಸಿಸ್ಟೆನ್ಸ್) ಬಗ್ಗೆ ಪ್ರತ್ಯೇಕ ಅಧ್ಯಯನ ನಡೆಯುತ್ತಿದೆ.
ಆ್ಯಂಟಿಬಯೋಟಿಕ್ ಸಮಸ್ಯೆ
ಪ್ರಸ್ತುತ ಮಾಲಿನ್ಯವು ಆಗದಂತೆ ತಡೆಯಲು ಸಾಧ್ಯವೆ? ರೇಡಿಯೇಶನ್ ಮೂಲಕ ಹತ್ತಿಗೆ ರೇಡಿಯೇಷನ್ ಸಂಸ್ಕರಣೆ ಕೊಟ್ಟು ಫಿಲ್ಟರ್ನ ಹಾಗೆ ಮಾಡಿ ಅದನ್ನು ತ್ಯಾಜ್ಯ ನೀರು ಸಂಸ್ಕರಣ ಕೇಂದ್ರಗಳಲ್ಲಿ ಅಳವಡಿಸಬಹುದೆ? ಆ ರೀತಿ ಆ್ಯಂಟಿಬಯೋಟಿಕ್ ಎಲ್ಲವನ್ನೂ ಹೀರಿಕೊಳ್ಳುವ ಶಕ್ತಿಯನ್ನು ಅಭಿವೃದ್ಧಿಪಡಿಸಲು ಸಾಧ್ಯವೆ? – ಎನ್ನುವ ಕುರಿತು ಅಧ್ಯಯನ ಮಾಡಲು ಅಣುವಿಜ್ಞಾನ ಸಂಶೋಧನ ಮಂಡಳಿಯವರು ನಮಗೆ ಈ ಕೆಲಸವನ್ನು ವಹಿಸಿದ್ದಾರೆ. ಈಗ ಇರುವ ತ್ಯಾಜ್ಯ ಸಂಸ್ಕರಣ ಘಟಕಗಳಿಗೆ ಆ್ಯಂಟಿಬಯೋಟಿಕ್ ಸಂಸ್ಕರಣ ಮಾಡಲು ಸಾಧ್ಯವಿಲ್ಲ; ಅದಕ್ಕೆ ಹೊರತಾದ ಮಲಮೂತ್ರವನ್ನು ಮಾತ್ರ ಅವು ಸಂಸ್ಕರಿಸುತ್ತವೆ. ಅದನ್ನು ಹಾಗೆಯೆ ಹೊಳೆಗೆ ಬಿಟ್ಟುಬಿಡುತ್ತಾರೆ. ಅದಲ್ಲದೆ ಸೋಪು ಮುಂತಾದವುಗಳಲ್ಲಿರುವ ಔಷಧೀಯ (ರಾಸಾಯನಿಕ) ವಸ್ತುಗಳು ಕೂಡ ನದಿನೀರಿಗೆ ಸೇರಿ ಕಾಲುಷ್ಯ ಉಂಟುಮಾಡುತ್ತವೆ. ಟ್ರೈಕ್ಲೋಸಾರ್ ಎನ್ನುವ ಒಂದು ಔಷಧೀಯ ವಸ್ತುವನ್ನು ಸೋಪಿನಲ್ಲಿ ಪತ್ತೆಹಚ್ಚಿದ್ದಾರೆ. ಅದು ನಮ್ಮ ಚರ್ಮಕ್ಕೆ ಒಳ್ಳೆಯದಿರಬಹುದು; ಆದರೆ ಕೆರೆನೀರಿನಲ್ಲಿರುವ ಜೀವಸಂಕುಲಕ್ಕೆ ಅದು ಹಾನಿಕರ. ಇದ್ದ ಬ್ಯಾಕ್ಟೀರಿಯಾಗಳೆಲ್ಲ ಸತ್ತುಹೋಗಿದ್ದು, ಅವನ್ನು ತಿನ್ನುವಂತಹ ಬ್ಯಾಕ್ಟೀರಿಯಾ ಇಲ್ಲ ಅನ್ನಿಸುತ್ತದೆ. ಅದಕ್ಕಾಗಿ ಈ ಸಂಶೋಧನೆಯನ್ನು ನಡೆಸಲಾಗುತ್ತಿದೆ. ಅಂಟಾರ್ಟಿಕಾದಲ್ಲಿ ಚರ್ಮದ ಸಂರಕ್ಷಣೆಗಾಗಿ ಈ ವಸ್ತುಗಳನ್ನು ಹೆಚ್ಚಾಗಿ ಉಪಯೋಗಿಸುತ್ತಾರೆ.
ಅಂಟಾರ್ಟಿಕಾದಲ್ಲಿ ವಿಜ್ಞಾನಿಗಳು ಮಾತ್ರ ಇರುತ್ತಾರೆ. ಭಾರತದಿಂದ ಅಲ್ಲಿಗೆ ಯಾವುದೇ ಟೂರಿಸ್ಟ್ಗಳನ್ನು ಕಳುಹಿಸುತ್ತಿಲ್ಲ. ಆದರೆ ಕೆಲವು ಅಂತಾರಾಷ್ಟ್ರೀಯ ಪ್ರವಾಸ ಸಂಸ್ಥೆಗಳು ಅಂಟಾರ್ಟಿಕಾದ ಪ್ರವಾಸವನ್ನು ಹಮ್ಮಿಕೊಳ್ಳುತ್ತಿವೆ. ದಕ್ಷಿಣ ಅಮೆರಿಕದ ಆರ್ಜೆಂಟೀನಾದಿಂದ ಸಮೀಪವಿರುವ ಪಶ್ಚಿಮ ಅಂಟಾರ್ಟಿಕಾ ಹತ್ತಿರದ ಪರ್ಯಾಯದ್ವೀಪಕ್ಕೆ 4-5 ಲಕ್ಷ ರೂ. ವೆಚ್ಚದಲ್ಲಿ ಹಡಗಿನಲ್ಲಿ ಪ್ರವಾಸಿಗರನ್ನು
ಕರೆದುಕೊಂಡು ಹೋಗಿ ಇಳಿಸುತ್ತಾರೆ; ಮತ್ತೆ ಪುನಃ ಹಡಗಿನಲ್ಲಿ ಬರಬೇಕು. (ಹೀಗೆ ಹೋಗುವವರ ಸಂಖ್ಯೆ ಹೆಚ್ಚುತ್ತಿದ್ದು ಮಾಲಿನ್ಯದ ಕೂಗೆದ್ದಿದೆ).
ಐದನೇ ಖಂಡ
ವಿಜ್ಞಾನಿಗಳಿಗೆ ಅಂಟಾರ್ಟಿಕಾದಲ್ಲಿ ನೆಲೆಗಳಿವೆ. ಒಂದೆರಡು ತಿಂಗಳು ಅಥವಾ ಒಂದು ವರ್ಷದವರೆಗೂ ಅಲ್ಲಿ ನಿಲ್ಲಬಹುದು. ಭೂಗೋಳದ ದಕ್ಷಿಣ ತುದಿಯಲ್ಲಿರುವ ಅಂಟಾರ್ಟಿಕಾ ಐದನೇ ದೊಡ್ಡ ಖಂಡವಾಗಿದೆ; ಸುಮಾರು ಆಸ್ಟ್ರೇಲಿಯಾದಷ್ಟು ದೊಡ್ಡದಿದೆ. ಅದು ಯಾವುದೇ ಜನವಸತಿ ಇಲ್ಲದಿರುವ ಖಂಡ. ಪ್ರತಿವರ್ಷ ಸುಮಾರು 4,000 ವಿಜ್ಞಾನಿಗಳು ಅಲ್ಲಿ ಇರುತ್ತಾರೆ; 55 ದೇಶಗಳು ಅಲ್ಲಿ ನೆಲೆಗಳನ್ನು (ಸ್ಟೇಷನ್) ಹೊಂದಿವೆ. ಅಲ್ಲಿ ಯಾವುದೇ ಸಮಾನ ಆಡಳಿತವಿಲ್ಲ. ಆಯಾ ದೇಶಗಳವರು ಅವರವರ ಸ್ಟೇಷನ್ಗಳಲ್ಲಿ ಇರುತ್ತಾರೆ. ಯಾವುದೇ ಕೇಂದ್ರಕ್ಕೆ ಯಾರೂ ಭೇಟಿ ಕೊಡಬಹುದು. ಭಾರತ ಅಲ್ಲಿ ‘ಮೈತ್ರಿ’ ಮತ್ತು ‘ಭಾರತಿ’ ಎನ್ನುವ ಎರಡು ಸ್ಟೇಷನ್ಗಳನ್ನು ಹೊಂದಿದೆ. ‘ಮೈತ್ರಿ’ 1987ರಲ್ಲಿ ನಿರ್ಮಾಣಗೊಂಡಿದ್ದರೆ ‘ಭಾರತಿ’ 2012ರಷ್ಟು ಈಚೆಗೆ ನಿರ್ಮಾಣಗೊಂಡಿದೆ. ಅವುಗಳ ನಡುವಿನ ಅಂತರ ಸುಮಾರು 3,000 ಕಿ.ಮೀ. (ಕಾಶ್ಮೀರ-ಕನ್ಯಾಕುಮಾರಿ ನಡುವಿನಷ್ಟು).
ಪ್ರತಿ ವರ್ಷ ಸರ್ಕಾರ ‘ಯಾರಾದರೂ ವಿಜ್ಞಾನಿಗಳಿಗೆ ಅಂಟಾರ್ಟಿಕಾಗೆ ಹೋಗಬೇಕಾ? ಅಲ್ಲಿ ಏನು ಸಂಶೋಧನೆ ಮಾಡುತ್ತೀರಿ?’ – ಎನ್ನುವ ಒಂದು ಪ್ರಸ್ತಾವನೆಯನ್ನು (ಪ್ರಪೋಸಲ್) ಕೇಳುತ್ತದೆ. ಅದರಲ್ಲಿ ನಾವು ನಮಗೆ ಇಂತಿಂತಹ ಕೆಲಸ ಮಾಡಬೇಕು ಎಂದು ಬರೆದು ತಿಳಿಸಬೇಕು. ನಾನು ನನ್ನ ಪ್ರಪೋಸಲ್ ಹೀಗೆ ಸಲ್ಲಿಸಿದ್ದೆ: ಅಂಟಾರ್ಟಿಕಾದಲ್ಲಿ ಸೂರ್ಯನ ಕಿರಣಗಳು, ಅದರಲ್ಲಿ ಅಲ್ಟ್ರಾವಯೋಲೆಟ್ ಕಿರಣಗಳ ಪ್ರಭಾವ ಜಾಸ್ತಿ ಇರುವ ಕಾರಣ ಹೊರಗೆ ಹೋಗುವ ವಿಜ್ಞಾನಿಗಳು ತುಂಬಾ ಕ್ರೀಮ್ ಬಳಸುತ್ತಾರೆ. ಅದರಲ್ಲಿ ಬಹಳಷ್ಟು ಆ್ಯಂಟಿಬಯೋಟಿಕ್ ಇದೆ. ಪ್ರತಿ ಕೇಂದ್ರದ ಸುತ್ತ ಪ್ರಕ್ರಿಯೆ ನಡೆಯುತ್ತಿದ್ದು, ಇದರ ಪ್ರಭಾವ ಎಷ್ಟು, ಅದರಿಂದ ಎಷ್ಟು ಮಾಲಿನ್ಯ ಆಗುತ್ತಿದೆ – ಎಂಬುದನ್ನು ನಾನು ಅಧ್ಯಯನ ಮಾಡಬೇಕಾಗಿದೆಯೆಂದು ಬರೆದು ಸರ್ಕಾರಕ್ಕೆ
ತಿಳಿಸಿದೆ. ಇಂತಹ ಒಂದು ಸಂಶೋಧನೆಯನ್ನು ಈವರೆಗೆ ಯಾರೂ ಮಾಡಿಲ್ಲ; ದಯವಿಟ್ಟು ಇದಕ್ಕೆ ಅವಕಾಶ ಕೊಡಿ ಎಂದು ಕೂಡ ತಿಳಿಸಿದೆ. ನೀವು ಹೋಗಬಹುದೆಂದು ಅದಕ್ಕೆ ಶಿಫಾರಸು ಆಯಿತು. ಹೋಗುವ ಮುನ್ನ ವೈದ್ಯಕೀಯ ಪರೀಕ್ಷೆಗೆ ಒಳಪಡಬೇಕು; ಹೋಗುವ ವಿಜ್ಞಾನಿ ಸದೃಢವಾಗಿರಬೇಕು. ಅಲ್ಲಿ ಹೆಚ್ಚಿನ ವೈದ್ಯಕೀಯ ಸೇವೆ ಇಲ್ಲ; ಕೂಡಲೆ ವಾಪಸ್ಸು ಬರುವುದಕ್ಕೂ ವ್ಯವಸ್ಥೆ ಇಲ್ಲ. ಯಾವುದೇ ರಸ್ತೆ, ಬಸ್ಸು, ರೈಲುಗಳು ಇಲ್ಲ. ಹೋದವರು ಎರಡು ಮೂರು ತಿಂಗಳುಗಳಾದರೂ ಅಲ್ಲಿ ಇರಬೇಕು. ಹಲ್ಲುನೋವು, ಎದೆನೋವು ಇತ್ಯಾದಿ ಕಾಣಿಸಿಕೊಂಡರೆ ಕಷ್ಟ. ಅಲ್ಲಿ ಮೃತಪಟ್ಟರೆ ಶವವನ್ನು ತೆಗೆದುಕೊಂಡು ಬರುವುದಕ್ಕೆ ವ್ಯವಸ್ಥೆಯಿಲ್ಲ. ಅಲ್ಲಿಯೆ ದಫನ ಮಾಡಬೇಕಷ್ಟೆ. ತೀವ್ರ ವೈದ್ಯಕೀಯ ತಪಾಸಣೆಯಲ್ಲದೆ ದೈಹಿಕ ಕ್ಷಮತೆಯನ್ನೂ ನೋಡುತ್ತಾರೆ. ಮಿಲಿಟರಿಯವರ ಜೊತೆಗೆ ಉತ್ತರಾಖಂಡದ ಜಾಲಿ ಎಂಬಲ್ಲಿ 15 ದಿನಗಳ ತರಬೇತಿಗೆ ಒಳಪಡಬೇಕು. ಟ್ರೆಕಿಂಗ್ ಮೂಲಕ ಹಿಮಾಲಯದ ಬೆಟ್ಟ ಏರುವುದು, ಬಳ್ಳಿ ಹಿಡಿದುಕೊಂಡು ಮೇಲೆ ಏರುವುದು, ಕೆಳಗಿಳಿಯುವುದು ಇದನ್ನೆಲ್ಲ ಮಾಡಿಸುತ್ತಾರೆ. ಅದರಲ್ಲಿ ಉತ್ತೀರ್ಣರಾದರೆ ಮಾತ್ರ ಅಂಟಾರ್ಟಿಕಾಗೆ ಹೋಗಬಹುದು, ನಾನು ತೇರ್ಗಡೆಯಾದೆ.
ವಿಶೇಷ ಪ್ರಯಾಣ
2017ರ ನವೆಂಬರ್ ಆರಂಭದಲ್ಲಿ ಗೋವಾದಿಂದ ವಿಮಾನದಲ್ಲಿ ದಕ್ಷಿಣ ಆಫ್ರಿಕಾದ ಭೂಶಿರವಾದ ಕೇಪ್ಟೌನಿಗೆ ಹೊರಟೆ. ಅಲ್ಲಿಂದ ಅಂಟಾರ್ಟಿಕಾಗೆ ಮತ್ತೆ ಸುಮಾರು 3,000 ಕಿಲೋಮೀಟರ್ ಇದೆ. ಅದೊಂದು ಪ್ರತ್ಯೇಕಿತ ಖಂಡ. ಎಲ್ಲ ಕಡೆಯಿಂದ ಸಾವಿರಾರು ಕಿ.ಮೀ. ದೂರ. ಆಸ್ಟ್ರೇಲಿಯದಿಂದ ಮೂರು-ಮೂರೂವರೆ ಸಾವಿರ ಕಿ.ಮೀ. ಇದ್ದರೆ, ನ್ಯೂಜಿóೀಲೆಂಡಿನಿಂದ 2,500 ಕಿ.ಮೀ., ದಕ್ಷಿಣ ಅಮೆರಿಕದ ತುದಿಯಿಂದ ಸುಮಾರು 1,000 ಕಿ.ಮೀ.
ಕೇಪ್ಟೌನಿನಿಂದ ಅಂಟಾರ್ಟಿಕಾದ ನೋವಾ ನೆಲೆಗೆ ಸುಮಾರು 6 ಗಂಟೆಗಳ ಪ್ರಯಾಣ. ಅದಕ್ಕೆ ವಿಶೇಷ ವಿಮಾನವೇ ಆಗಬೇಕು. ಅಲ್ಲಿ ವಿಮಾನನಿಲ್ದಾಣ ಇಲ್ಲ; ಹಿಮದ ಮೇಲೆಯೇ ಇಳಿಯಬೇಕು. ಅದಕ್ಕೆ ವಾತಾವರಣ ಅನುಕೂಲಕರವಾಗಿರಬೇಕು. ಅಲ್ಲಿ ಈಗ ಬಿಸಿಲಿದ್ದರೆ ಇನ್ನೊಂದು ಗಂಟೆಯಲ್ಲಿ ಹಿಮಪಾತ ಶುರುವಾಗಬಹುದು. ಎಷ್ಟು ಹಿಮ ಬೀಳುತ್ತದೆಂದರೆ ಮೂರು ಅಡಿ ಅಂತರದಲ್ಲಿರುವ ಇಬ್ಬರು ಪರಸ್ಪರ ಕಾಣದಷ್ಟು. ಕಣ್ಣಿಗೆ ಬಿಳಿಬಟ್ಟೆ ಕಟ್ಟಿದಂತಾಗುತ್ತದೆ. ಅಲ್ಲಿ ವಾತಾವರಣ ಸರಿ ಇದ್ದರೆ ಮಾತ್ರ ವಿಮಾನ ಹಾರಲು ಅನುಮತಿ ಕೊಡುತ್ತಾರೆ. ಕೇಪ್ಟೌನಿನಿಂದ ಮೂರನೇ ದಿನ ಹೊರಡುವುದೆಂದು ನಮ್ಮ ಯೋಚನೆಯಿತ್ತು; ಆದರೆ ಏಳು ದಿನ ನಾವು ಅಲ್ಲಿ ನಿಲ್ಲಬೇಕಾಯಿತು. ಈ ಸಲ ಅಂಟಾರ್ಟಿಕಾ ಪ್ರಯಾಣ ಇಲ್ಲ; ವಾಪಸ್ಸು ಬರುವುದೇನೋ ಎಂಬಷ್ಟಾಯಿತು. ದೇವರ ದಯೆಯಿಂದ ಆಮೇಲೆ ನವೆಂಬರ್ 17ರಂದು ಪ್ರಯಾಣಕ್ಕೆ ಹಸಿರು ನಿಶಾನೆ ಸಿಕ್ಕಿತು.
40 ಪ್ರಯಾಣಿಕರಿದ್ದ ವಿಶೇಷ ವಿಮಾನ ಅಂಟಾರ್ಟಿಕಾದ ನೋವಾ ನೆಲೆಯ ಕಡೆಗೆ ಹೊರಟಿತು. ಆ ವಿಮಾನಕ್ಕೆ ಯಾವುದೇ ಕಿಟಕಿ ಇಲ್ಲ; ಎದುರುಬದುರು ಬೆಂಚುಗಳನ್ನು ಹಾಕಿದ್ದರು. ಮಧ್ಯದಲ್ಲಿ ಅಲ್ಲಿನ ವಿವಿಧ ದೇಶಗಳ ಕೇಂದ್ರಗಳಿಗೆ ಬೇಕಾದ ಸರಂಜಾಮನ್ನು ಪೇರಿಸಿ ಇಟ್ಟಿದ್ದರು. ವಿಮಾನ ಇಳಿಯಲು ಅರ್ಧಗಂಟೆ ಇದ್ದಾಗ ವಿಮಾನದ ಸಿಬ್ಬಂದಿ ಚಳಿಗೆ ಬೇಕಾದ ಉಡುಪುಗಳನ್ನು ತೊಡಲು ಸೂಚಿಸಿದರು. ಶರ್ಟು, ಪ್ಯಾಂಟ್ಗಳ ಮೇಲೆ ನಾಲ್ಕು ಪದರದ ಬಟ್ಟೆ, ತಲೆಗೊಂದು ಟೊಪ್ಪಿ, ಕಣ್ಣಿಗೆ ಕಪ್ಪು ಕನ್ನಡಕ ಹಾಕಿಕೊಳ್ಳಬೇಕು. ಅಲ್ಲಿ ಹೊರಗೆ ಹೋಗುವಾಗ ಕಪ್ಪು ಕನ್ನಡಕ ಕಡ್ಡಾಯ. ಬರಿಗಣ್ಣಿನಲ್ಲಿ ಹೊರಟರೆ ಆ ಮಂಜುಗಡ್ಡೆಗೆ ಹೊಡೆದ ಬಿಸಿಲು ನಮ್ಮ ಕಣ್ಣಿಗೆ ತಾಗಿದರೆ ಕಣ್ಣುಗಳು ತಾತ್ಕಾಲಿಕವಾಗಿ ಕುರುಡಾಗುತ್ತವೆ. ಸೂಚನೆಯಂತೆ ಕೈಗಳಿಗೆ ಗ್ಲೌಸ್, ಕಾಲಿಗೆ ದಪ್ಪ ಸಾಕ್ಸ್ ಮತ್ತು ಶೂ ಎಲ್ಲ ಧರಿಸಿ ಸಿದ್ಧವಾದೆವು. ವಿಮಾನ ಅಂಟಾರ್ಟಿಕಾದ ಬೃಹತ್ ಹಿಮಗಲ್ಲಿನ ಮೇಲೆ ಭೂಸ್ಪರ್ಶ ಮಾಡಿತು.
ಎರಡೇ ಬಣ್ಣ!
ವಿಮಾನದಿಂದ ಕೆಳಗಿಳಿಯುತ್ತಿದ್ದಂತೆ ಅದೊಂದು ಅದ್ಭುತ ಅನುಭವವಾಗಿಬಿಟ್ಟಿತು. ವಿಮಾನವು ಸಮತಟ್ಟಾದ ಹಿಮದ ಹಾಳೆಯ ಮೇಲೆ ಇಳಿದಿತ್ತು. ಕಿ.ಮೀ.ಗಟ್ಟಲೆ ಬರಿಯ ಬಿಳಿಬಣ್ಣ ಬಿಟ್ಟರೆ ಮತ್ತೇನೂ ಕಾಣಲೊಲ್ಲದು. ಅಲ್ಲಲ್ಲಿ ದಾರಿ ಮತ್ತು ಬೆಟ್ಟಗಳ ತುದಿಗಳು ಕಂಡವು. ತಾಪಮಾನ 7 ಡಿಗ್ರಿ ಸೆಲ್ಸಿಯಸ್. ಅಲ್ಲಿ ಎರಡೇ ಬಣ್ಣಗಳನ್ನು ನೋಡಿ ನನಗೆ ಆಶ್ಚರ್ಯವಾಯಿತು: ಕಪ್ಪು ಮತ್ತು ಬಿಳಿ. ಬಿಳಿಯಾದ ಹಿಮಗಡ್ಡೆಗಳು ಮತ್ತು ಕಪ್ಪು ಕಲ್ಲುಗಳು. ಭಾರತದ ನೆಲೆ ‘ಮೈತ್ರಿ’ಗೆ ಅಲ್ಲಿಂದ ಸುಮಾರು 10 ಕಿ.ಮೀ. ದೂರ ಹಿಮಪರ್ವತದ ಕಣಿವೆಯಲ್ಲಿ ಅದನ್ನು ನಿರ್ಮಿಸಲಾಗಿದೆ. ನಮ್ಮನ್ನು ಕರೆದೊಯ್ಯಲು 12 ಜನರನ್ನು ಸಾಗಿಸಬಲ್ಲ ಪಿಸ್ಟೆನ್ಬುಲ್ಲಿ (ಸೈನ್ಯ ಹಿಮಗಾಡಿ) ಬಂದಿತ್ತು. ಡೀಸೆಲ್ನಿಂದ ಓಡುವ ಆ ವಾಹನ ಸೈನ್ಯದ ಯುದ್ಧ ನೌಕೆಯಂತೆ ಇರುತ್ತದೆ. ಲೋಹ ಹೊದಿಸಿದ ರಕ್ಷಾಕವಚ ಇರುವ ಅದರ ಚಕ್ರಗಳ ಸುತ್ತ ಲೋಹ ಹೊದಿಸಿದ ರಕ್ಷಾಪಟ್ಟಿಗಳು ಇರುತ್ತವೆ. ವಿಮಾನನಿಲ್ದಾಣದ ಬಳಿ ರಷ್ಯಾದ ಒಂದು ನೆಲೆಯಿದೆ; ವಿಮಾನ ನಿಲ್ದಾಣವನ್ನು ರಷ್ಯಾದವರೇ ನೋಡಿಕೊಳ್ಳುತ್ತಾರೆ.
ಒಂದು ಗಂಟೆಯ ಪ್ರಯಾಣದಿಂದ ‘ಮೈತ್ರಿ’ ತಲಪಿದೆವು. ಆ ಹೊತ್ತಿಗೇ ನಮ್ಮ ಮನೆಗೆ ಹೋದಂತಹ ಅನುಭವವಾಯಿತು. ಈ ಕೇಂದ್ರದಲ್ಲಿ ಕಳೆದ ವರ್ಷದಿಂದ ಇದ್ದ ಸುಮಾರು 25 ಜನ ಸಿಬ್ಬಂದಿಗಳು ನಮ್ಮನ್ನು ಎದುರುಗೊಂಡು ನಮಗೆ ಬಿಸಿ ಬಿಸಿ ಹಾಲು, ಹಣ್ಣು ಮತ್ತು ಭೋಜನವನ್ನು ನೀಡಿದರು. ಕೇಂದ್ರದ ಒಳಗೆ ಬೆಚ್ಚನೆಯ ವಾತಾವರಣ. ಜನರೇಟರ್ ಮೂಲಕ ವಿದ್ಯುತ್ಶಕ್ತಿ ತಯಾರಿಸಿ, ಒಳಗೆ ಸುಮಾರು 25 ಡಿಗ್ರಿ ಸೆಲ್ಸಿಯಸ್ನಷ್ಟು ತಾಪಮಾನವನ್ನು
ಕಾಯ್ದುಕೊಂಡಿರುತ್ತಾರೆ. ಈ ಕೇಂದ್ರವು ಸರಕು ಸಾಗಾಣಿಕೆಗೆ ಬಳಸುವ ಲೋಹದ ಪೆಟ್ಟಿಗೆ(ಕಂಟೈನರ್)ಗಳನ್ನು ಜೋಡಿಸಿ ಕೊಠಡಿಗಳಾಗಿ ರೂಪಿಸಿದ ದೊಡ್ಡಮನೆಯಂತಿದೆ.
ನಾನು ಹೋದಾಗ ಅಲ್ಲಿ ರಾತ್ರಿ ಆಗುತ್ತಲೇ ಇರಲಿಲ್ಲ; ಪೂರ್ತಿ ಹಗಲೇ; ಬಿಸಿಲೇ – ಆದರೂ ತಣ್ಣಗೆ! ಏಕೆಂದರೆ ಆ ಬಿಸಿಲಿಗೆ ತಾಪವೇನೂ ಇಲ್ಲ. ಬೆಳಕು ಮಾತ್ರ ಇದೆಯಷ್ಟೆ. ಸೂರ್ಯ ನಮಗೆ ದಿಗಂತದಲ್ಲಿ ಮಾತ್ರ ಕಾಣಿಸುತ್ತಾನೆ; ಅಲ್ಲೇ ಆಚೆ ಈಚೆ ಹೋಗುತ್ತಾನೆ. ತಲೆಯ ಮೇಲೆ ಬರುವುದಿಲ್ಲ. 24 ಗಂಟೆಯೂ ಹಾಗೆಯೆ.
‘ಮೈತ್ರಿ’ ನೆಲೆಯಲ್ಲಿ
ನಾವು ‘ಮೈತ್ರಿ’ ನೆಲೆಯನ್ನು ತಲಪಿದಾಕ್ಷಣ ವಾತಾವರಣ ಬಿಗಡಾಯಿಸಿತು. ವಿಪರೀತ ಗಾಳಿ ಹಾಗೂ ನೆಲದ ಮೇಲೆ ಬಿದ್ದ ಹಿಮವನ್ನು ಮೇಲಕ್ಕೆತ್ತಿ ಬಿರುಸಾದ ಹಿಮಮಳೆಯನ್ನು ಸೃಷ್ಟಿಸಿತು. ಹೀಗೆ 3-4 ದಿನ ಒಂದೇ ರೀತಿಯ ವಾತಾವರಣ ಮುಂದುವರಿಯಿತು. ನನ್ನ ಸಂಶೋಧನಾ ಕಾರ್ಯಕ್ಷೇತ್ರ ಇದ್ದದ್ದು 3,000 ಕಿ.ಮೀ. ದೂರದ ‘ಭಾರತಿ’ ನೆಲೆಯಲ್ಲಿ. ಅಲ್ಲಿ ದೊಡ್ಡ ವಿಮಾನಗಳು ಇಳಿಯುವುದಿಲ್ಲ. 15-18 ಜನರನ್ನು ಹೊತ್ತೊಯ್ಯಬಲ್ಲ ಸಣ್ಣ ವಿಮಾನಗಳೇ ಗತಿ. ಕೇಪ್ಟೌನಿನಿಂದ ನೇರವಾಗಿ ‘ಭಾರತಿ’ ಸೇರಲು ವಿಮಾನ ಸಂಪರ್ಕವಿಲ್ಲ. “ಸದ್ಯಕ್ಕೆ ‘ಮೈತ್ರಿ’ಯಲ್ಲಿ ಉಳಿದುಕೊಳ್ಳಿ; ವಾತಾವರಣ ಸರಿಯಾಗಿ ವಿಮಾನ ಸಿದ್ಧವಾದಾಗ ನಿಮ್ಮನ್ನು ಕರೆಯುತ್ತೇವೆ” ಎಂದು ಹೇಳಿದರು. ಅಲ್ಲಿ 4-5 ದಿನ ಇದ್ದೆವು.
ನಾವು ತಂಗಿದ್ದ ‘ಮೈತ್ರಿ’ಯ ಹಂಗಾಮಿ ವಸತಿಗಳು ಮುಖ್ಯ ಕೇಂದ್ರದಿಂದ ಸುಮಾರು 100 ಮೀಟರ್ ದೂರದಲ್ಲಿದ್ದು ತಿಂಡಿ-ತೀರ್ಥಗಳಿಗೆ ಮುಖ್ಯಕೇಂದ್ರಕ್ಕೆ ಬರಬೇಕು. ಹಿಮಮಳೆಯಲ್ಲಿ ಎದುರಿನ ದಾರಿ ಸುತರಾಂ ಕಾಣಲೊಲ್ಲದು. ಮಧ್ಯದಾರಿಯಲ್ಲಿ ಸಿಕ್ಕಿಹಾಕಿಕೊಂಡರೆ ಕಣ್ಣಿಗೆ ಪರದೆ ಬಿಗಿದು ಹೋದಷ್ಟೇ ಫಲ.
ದಾರಿಯೇ ಸಿಗದೆ ಗಂಟೆಗಟ್ಟಲೆ ಚಳಿಯಲ್ಲಿ ಒದ್ದಾಡಿ ಬಳಲಿದವರಿದ್ದಾರೆ. ಹಾಗಾಗಿ ಮುಖ್ಯಕೇಂದ್ರದಿಂದ ನಮ್ಮ ಹಂಗಾಮಿ ವಸತಿಗೆ ಉದ್ದನೆಯ ಬಳ್ಳಿಯನ್ನು ಕಟ್ಟಿದ್ದಾರೆ. ಜೋರಾದ ಹಿಮಮಳೆಯ ಸಂದರ್ಭ ಈ ಬಳ್ಳಿಯನ್ನು ಹಿಡಿದುಕೊಂಡು ಮುಖ್ಯಕೇಂದ್ರವನ್ನು ಸುಲಭವಾಗಿ ತಲಪಬಹುದು.
ಇಲ್ಲಿ ಶೌಚಪದ್ಧತಿ ವಿಚಿತ್ರ. ನಾವು ತಂಗಿದ್ದ ವಸತಿಯಿಂದ ಸುಮಾರು 50 ಮೀ. ದೂರದಲ್ಲಿ ಶೌಚಾಲಯಗಳಿವೆ. ಅಲ್ಲಿಗೆ 10 ಡಿಗ್ರಿ ಸೆ. ಚಳಿಯಲ್ಲಿ ಹೋಗಬೇಕು. ಶೌಚಕ್ಕೆ ಹೋಗುವಾಗ ಎಲ್ಲ ಚಳಿ ಉಡುಪುಗಳೊಂದಿಗೆ ಸಿದ್ಧವಾಗಬೇಕು. ಶೌಚಾಲಯದಲ್ಲಿ ಕಮೋಡ್ ಪದ್ಧತಿಯನ್ನು ಅಳವಡಿಸಿದೆ. ಈ ಕಮೋಡ್ನಲ್ಲಿ ನೀರು ಬಳಸುವುದು ನಿಷಿದ್ಧ. ಮಲವಿಸರ್ಜನೆಯ ಮೊದಲು ಕಮೋಡ್ ಒಳಗೆ ಜಿಡ್ಡು ಕಾಗದವನ್ನು ಹೊದಿಸಿ ಕಕ್ಕಸು ಮಾಡಬೇಕು. ಮೂತ್ರವನ್ನು ಮಾತ್ರ ಪ್ರತ್ಯೇಕವಾದ ಬಾಟಲಿಗೆ ಹೊಯ್ಯಬೇಕು. ಈ ಕ್ರಮ ಏಕೆಂದರೆ ಮಲವನ್ನು ಪ್ರತಿದಿನ ಬೆಂಕಿಯಿಂದ (ಇನ್ಸಿನರೇಟರ್) ಸುಟ್ಟು ಬಿಡುತ್ತಾರೆ. ಅದಕ್ಕೆ ಅನುಕೂಲವಾಗಬೇಕಾದರೆ ಯಾವುದೇ ದ್ರವಪದಾರ್ಥ ಮಿಶ್ರಣವಾಗಿರಬಾರದು; ಮೂತ್ರವನ್ನು ಸಂಸ್ಕರಿಸಿ ಹೊರಗೆ ಬಿಡಲಾಗುತ್ತದೆ. ಸ್ನಾನ ವಾರಕ್ಕೊಮ್ಮೆ ಮಾತ್ರ. ಚಳಿಯಿರುವ ಕಾರಣ ಮೈ ಬೆವರುವುದಿಲ್ಲ. ಅದಲ್ಲದೆ ನೀರಿನ ಹೆಚ್ಚು ಬಳಕೆ ನಿಷಿದ್ಧ; ಮತ್ತು ಬಳಸಿದ ನೀರನ್ನು ಸಂಸ್ಕರಿಸುವ ಯಂತ್ರಗಳಿಗೆ ಹೆಚ್ಚಿನ ಒತ್ತಡ ಬೀಳದಂತೆ ನೋಡಿಕೊಳ್ಳುತ್ತಾರೆ.
ಅಂತೂ ಐದು ದಿನದಲ್ಲಿ ವಾತಾವರಣ ಹಗುರವಾಯಿತು. ಸಣ್ಣ ವಿಮಾನ 15 ಮಂದಿಯನ್ನು ‘ಭಾರತಿ’ ಕೇಂದ್ರಕ್ಕೆ ಕರೆದೊಯ್ಯಲು ಸಜ್ಜಾಯಿತು. 3,000 ಕಿ.ಮೀ.ಗಳನ್ನು ಸುಮಾರು ಎಂಟು ಗಂಟೆಗಳಲ್ಲಿ ಕ್ರಮಿಸುತ್ತದೆ. ಮಾರ್ಗಮಧ್ಯದಲ್ಲಿ ಒಂದು ಸಲ ತೈಲ ತುಂಬಿಸುವ ಸಲುವಾಗಿ ಜಪಾನಿನ ನೆಲೆಯಲ್ಲಿ ಇಳಿಯುತ್ತದೆ. ವಿಚಿತ್ರವೆಂದರೆ, ಈ ವಿಮಾನದಲ್ಲಿ ಶೌಚಾಲಯವಿಲ್ಲ. ಮೂತ್ರ ಶಂಕೆಗೆ ಬಾಟಲಿಗಳೇ ಗತಿ. ಮಹಿಳೆಯರಿಗೆ ಇನ್ನೂ ಕಷ್ಟ. ಎದುರಿಗೆ ಆರೆಂಟು ದ್ವೀಪಗಳು ಸ್ತಬ್ಧ ಸಮುದ್ರದ ನಡುವೆ ನಿಂತಿವೆ.
ಚಳಿಗೆ ಮರೆವು?
ವಿಮಾನ ಹೊರಡುವಾಗ ನನಗೆ ಸ್ವಲ್ಪ ಇರುಸು ಮುರುಸಾಯಿತು. ‘ಭಾರತಿ’ಗೆ ಹೋಗಲು ವಿಮಾನನಿಲ್ದಾಣಕ್ಕೆ ನನ್ನ ಬ್ಯಾಗ್ ಹಿಡಿದುಕೊಂಡು ಬಂದಿದ್ದೆ. ವಿಮಾನದೊಳಗೆ ಕುಳಿತು ನೋಡುತ್ತೇನೆ – ನನ್ನ ಒಂದು ಬ್ಯಾಗು ಕಾಣಿಸುವುದಿಲ್ಲ! ಹತ್ತು ಕಿ.ಮೀ. ದೂರ ಬಂದಾಗಿತ್ತು. ಇನ್ನೊಬ್ಬರು ಕೂಡ ಬ್ಯಾಗ್ ಬಿಟ್ಟು ಬಂದಿದ್ದರು. ಆ ಕಡೆ 3,000 ಕಿ.ಮೀ. ಹೋದರೆ ಮತ್ತೆ ವಾಪಸ್ ಬರುವ ಪ್ರಶ್ನೆಯಿಲ್ಲ. ಬ್ಯಾಗ್ನಲ್ಲಿ ಎಲ್ಲ ವಸ್ತ್ರಗಳಿವೆ. “ಅಯ್ಯೋ, ನನಗೆ ಮರೆತು ಹೋಯಿತು. ಬ್ಯಾಗ್ ‘ಮೈತ್ರಿ’ಯಲ್ಲೇ ಬಿಟ್ಟು ಬಂದಿದ್ದೇನೆ” ಎಂದು ನಮ್ಮ ಲೀಡರ್ ಹತ್ತಿರ ದಮ್ಮಯ್ಯ ಹಾಕಿದೆ. ‘ಛೇ, ಹೌದಾ’ ಎಂದ ಅವರು ಕೂಡಲೇ ವಾಕಿಟಾಕಿ ಮೂಲಕ ಸಂಪರ್ಕ ಮಾಡಿದರು. ಮತ್ತೆ ಇಬ್ಬರೂ ಅಲ್ಲಿಗೆ ಹೋದರು. ಇನ್ನೊಬ್ಬರ ಬ್ಯಾಗ್ ಪತ್ತೆ ಆಯಿತು. ನನ್ನದು ಇಲ್ಲ. “ಇಲ್ಲಿಲ್ಲ; ಅಲ್ಲೇ ಸರಿಯಾಗಿ ನೋಡಿ” ಎಂದರು. ಮತ್ತೆ ನೋಡಿದರೂ ಇಲ್ಲ. ಆಗ ಯಾರೋ ಹೇಳಿದರು, “ನೀವು ಕಪ್ಪುಕನ್ನಡಕ ಹಾಕಿದ್ದೀರಿ. ವಿಮಾನದೊಳಗೆ ಆ ಕನ್ನಡಕ ತೆಗೆಯಿರಿ” ಎಂದರು. ತೆಗೆದು ನೋಡುವಾಗ ಬ್ಯಾಗ್ ಅಲ್ಲೇ ಇತ್ತು. ಎಲ್ಲವೂ ಕಪ್ಪಾಗಿ ಕಂಡ ಕಾರಣ ನನ್ನ ನೀಲಿ ಬ್ಯಾಗ್ ಸಹ ಕಪ್ಪಾಗಿ ಕಂಡಿತ್ತು. ಕನ್ನಡಕ ತೆಗೆಯುವುದು ಮರೆತುಹೋಗಿತ್ತು. ಅಲ್ಲಿ ಮರೆವು ಜಾಸ್ತಿ ಆಗುತ್ತದೆಂದು ಬೇರೆಯವರು ಹೇಳಿದ್ದರು. ಚಳಿಗೆ ಇರಬಹುದು. ನಮಗೆ ಅಲ್ಲಿ ಏಕಾಗ್ರತೆ ಕಷ್ಟವಾಗುತ್ತದೆ.
ನವೆಂಬರ್ 21ರ ಬೆಳಗಿನ 9 ಗಂಟೆಗೆ ಹೊರಟವರು ‘ಭಾರತಿ’ ಕೇಂದ್ರಕ್ಕೆ ತಲಪುವಾಗ ಮಧ್ಯರಾತ್ರಿಯ ಸಮೀಪ. ಈ ಎರಡು ಕೇಂದ್ರಗಳು ವಿಭಿನ್ನ ಕಾಲಮಾನಗಳಿಗೆ ತಮ್ಮತಮ್ಮ ಗಡಿಯಾರಗಳನ್ನು ಜೋಡಿಸಿಕೊಂಡಿವೆ. ‘ಭಾರತಿ’ ಕೇಂದ್ರವು ಭಾರತೀಯ ಕಾಲಮಾನಕ್ಕಿಂತ ಅರ್ಧಗಂಟೆ ಹಿಂದಿದ್ದರೆ ‘ಮೈತ್ರಿ’ ಐದೂವರೆ ಗಂಟೆ ಹಿಂದಿದೆ.
ದೇವಭೂಮಿ
‘ಭಾರತಿ’ ಕೇಂದ್ರದ ಹೊರಾಂಗಣ ಅದ್ಭುತ. ಈ ಕೇಂದ್ರವು ಒಂದು ಪರ್ಯಾಯದ್ವೀಪದಲ್ಲಿದೆ. ಸುತ್ತಲೂ ಸ್ತಬ್ಧ ಸಮುದ್ರ. ಕೇಂದ್ರ ಇರುವ ಎತ್ತರದ ಬೆಟ್ಟದ ಸುತ್ತ ಹಲವು ಸ್ತಬ್ಧ ಹಾಗೂ ಸ್ವಲ್ಪ ಕರಗಿದ ಸರೋವರಗಳು. ಎದುರಿಗೆ ಆರೆಂಟು ದ್ವೀಪಗಳು ಸ್ತಬ್ಧ ಸಮುದ್ರದ ನಡುವೆ ನಿಂತಿವೆ. ಸಂಪೂರ್ಣ ಶಾಂತ ವಾತಾವರಣ; ನೋಡುವಾಗ ದೇವಭೂಮಿಗೆ ಬಂದೆವೋ ಎನಿಸಿತು. ಅಲ್ಲಿ ಮನೆ ಎಂದು ಶಾಶ್ವತ ನಿರ್ಮಾಣ ಯಾವುದೂ ಇಲ್ಲ. ಈ ಕೇಂದ್ರವನ್ನು 2012ರಲ್ಲಿ ಜರ್ಮನ್ ಗುತ್ತಿಗೆದಾರರು ಕಟ್ಟಿದರು. ಆಗಲೇ ತಿಳಿಸಿದ ಹಾಗೆ, ಹಡಗಿನ ದೊಡ್ಡದಾದ ಕಂಟೈನರ್ಗಳನ್ನು ಬಳಸಿ ಕಟ್ಟಿದ್ದಾರೆ. ಸುಮಾರು 150 ಕಂಟೈನರ್ಗಳನ್ನು ಒಟ್ಟಿಗೆ ಸೇರಿಸಿ ಒಂದು ದೊಡ್ಡ ಮನೆಯ ಹಾಗೆ ಮಾಡಿದ್ದಾರೆ. 46 ಜನರಿಗೆ ತಂಗಲು 24 ವಾಸದ ಕೊಠಡಿಗಳು. ಒಂದೊಂದು ಕೋಣೆಯಲ್ಲಿ ಇಬ್ಬರು. ಅತ್ಯಾಧುನಿಕ ಸವಲತ್ತುಗಳು ಇಲ್ಲಿವೆ. ಸುಸಜ್ಜಿತ ಅಡುಗೆಮನೆ; ಶೌಚಾಲಯ ಸಮೂಹ, ಮನೋರಂಜನಾ ಕೇಂದ್ರ, ಗ್ರಂಥಾಲಯ, ಚಿಕಿತ್ಸೆಯ ಕೋಣೆ, ಪ್ರಯೋಗಾಲಯಗಳು, ವ್ಯಾಯಾಮಶಾಲೆ, ನಡೆದಾಡಲು ಸುಮಾರು 50 ಮೀಟರ್ ಉದ್ದದ ಚಾವಡಿ – ಇವೆಲ್ಲ ಒಂದೇ ಸೂರಿನಡಿ. ಸುಮಾರು 27 ಸಾವಿರ ಚದರ ಅಡಿ ಜಾಗ.
ಊಟೋಪಚಾರ
ಅಂಟಾರ್ಟಿಕಾದಿಂದ ಬಂದೊಡನೆ ಹೆಚ್ಚಿನವರು ನನಗೆ ಕೇಳಿದ ಪ್ರಶ್ನೆ – ಅಲ್ಲಿ ಊಟ ತಿಂಡಿ ಹೇಗಾಯಿತು ಎನ್ನುವ ಬಗ್ಗೆ ಇತ್ತು. ಆಶ್ಚರ್ಯವೆಂದರೆ, ಕರ್ನಾಟಕದ ನಾವು ಮನೆಯಲ್ಲಿ ತಿನ್ನುವ ಎಲ್ಲ ತಿಂಡಿ-ತಿನಿಸುಗಳು ಅಲ್ಲಿ ಲಭ್ಯ ಇದ್ದವು – ಇಡ್ಲಿ, ದೋಸೆ, ಪೂರಿ, ಉಪ್ಪಿಟ್ಟು, ಪಲಾವು ಇತ್ಯಾದಿ. ಭಾರತ ಸರ್ಕಾರ ಪ್ರತಿವರ್ಷ ಇಬ್ಬರು ಅಡುಗೆಯವರನ್ನು ಈ ಕೇಂದ್ರದಲ್ಲಿ ನೇಮಿಸುತ್ತದೆ. ಇವರು ದೇಶದ ಹೊಟೇಲ್ ಮ್ಯಾನೇಜ್ಮೆಂಟ್ ಶಾಲೆಗಳ ಡಿಪೆÇ್ಲಮಾ ಪಡೆದವರಿರುತ್ತಾರೆ. ವರ್ಷಕ್ಕೆ ಒಂದು ಸಲ ಆಹಾರಪದಾರ್ಥ ಅಲ್ಲಿಗೆ ಹೋಗುತ್ತದೆ. ತರಕಾರಿ, ಹಣ್ಣು-ಹಂಪಲುಗಳು ಹಡಗಿನಲ್ಲಿ ಬಂದ ಎರಡು ತಿಂಗಳಲ್ಲೇ ಖಾಲಿಯಾಗುತ್ತವೆ. ಉಳಿದ 9-10 ತಿಂಗಳು ಶೀತಲೀಕರಿಸಿದ ಆಹಾರಪದಾರ್ಥಗಳನ್ನು ಬಿಸಿಮಾಡಿ ಅಡುಗೆ ಮಾಡುತ್ತಾರೆ. ಮತ್ತೆ ಅಲ್ಲಿ ಒಂದು ವರ್ಷ ಇರುವ ನಮ್ಮ ಲೀಡರ್ ಸ್ವಲ್ಪ ತ್ವಂಚಾಹಂಚ ಮಾಡುತ್ತಾರೆ. “ನೀವು 2-3 ತಿಂಗಳಷ್ಟೆ ಇದ್ದು ಹೋಗುತ್ತೀರಿ. ನಾವು ಒಂದು ವರ್ಷ ಇರಬೇಕು” ಎನ್ನುತ್ತಾರೆ. ಸೇಬಿನಂತಹ ಹಣ್ಣುಗಳನ್ನು ಅಡಗಿಸಿ ಇಡುವುದೂ ಇದೆ. ಹೊಸ ಹಣ್ಣು-ಹಂಪಲು ಬಂದರೆ ಕೂಡಲೆ ಸಿಗುವುದಿಲ್ಲ. ಏನಿದ್ದರೂ ಅಲ್ಲಿ ಶೀತಲೀಕೃತ (ಫ್ರೋಜನ್) ಆಹಾರ. ಎಲ್ಲ ತರಕಾರಿಗಳು ಫ್ರೋಜನ್ ಇರುತ್ತವೆ. ಮತ್ತೆ ಅಲ್ಲಿನ ವಿಶೇಷವೆಂದರೆ ಫ್ರಿಜ್ ಬೇಕಾಗಿಲ್ಲ. ಸಾಮಾನು ತೆಗೆದು ಹೊರಗೆ ಇಟ್ಟರಾಯಿತು; ನೈಸರ್ಗಿಕ ಫ್ರಿಜ್! ಅಡುಗೆ ಕೋಣೆಗೆ ಗ್ಯಾಸ್ ವ್ಯವಸ್ಥೆ ಇದೆ. ಪಾತ್ರೆಪಗಡೆಗಳಿವೆ. ಅದರಲ್ಲಿ ಅಡುಗೆ ಮಾಡಿ ಬಡಿಸುತ್ತಾರೆ. ರುಚಿಗೆ ಮೋಸವಿಲ್ಲ. ಇನ್ನು ನಾವು ಅಲ್ಲಿಗೆ ಹೋಗುವುದು ಸಂಶೋಧನೆ ಮಾಡಲಿಕ್ಕೆ; ಹೊತ್ತು ಹೊತ್ತಿಗೆ ಊಟ ತಿಂಡಿಯ ವ್ಯವಸ್ಥೆ ಇರುವ ಕಾರಣ ವಿಜ್ಞಾನಿಗಳು ನಿಶ್ಚಿಂತೆಯಿಂದ ತಮ್ಮ ಸಂಶೋಧನೆಯಲ್ಲಿ ನಿರತರಾಗಬಹುದು.
ಹಗಲೇ ಹಗಲು!
ನಾವು ಹೋದ ಸಂದರ್ಭದಲ್ಲಿ ಅಲ್ಲಿ 24 ಗಂಟೆಯೂ ಹಗಲು. ರಾತ್ರಿ 11ರ ಸಮಯ ಕಿಟಕಿಗಳನ್ನು ಸಂಪೂರ್ಣವಾಗಿ ಮುಚ್ಚಿ ಮಲಗುತ್ತೇವೆ. ಕಿಟಕಿ ಮುಚ್ಚಿದಾಕ್ಷಣ ಕೋಣೆಯಲ್ಲಿ ಕತ್ತಲೆಯಾಗಿ ರಾತ್ರಿಯ ವಾತಾವರಣ ಸೃಷ್ಟಿಯಾಗುತ್ತದೆ. ಬೆಳಗ್ಗೆ 7 ಗಂಟೆಗೆ ಎದ್ದು ಅಂದಿನ ಹೊರಾಂಗಣದ ಕಾರ್ಯಕ್ಕೆ ಬೇಕಾದ ಸಾಮಗ್ರಿಗಳನ್ನು ಜೋಡಿಸಿಕೊಳ್ಳುತ್ತೇವೆ. 7-45ರಿಂದ ಉಪಾಹಾರ. 9 ಗಂಟೆಗೆ ಕೇಂದ್ರದ ಲೀಡರ್ ಸಭೆ ಕರೆದು ಅಂದಿನ ಕಾರ್ಯಚಟುವಟಿಕೆಗಳನ್ನು ವಿವರಿಸುತ್ತಾನೆ. ವಿಜ್ಞಾನಿಗಳು ತಮಗೆ ಎಲ್ಲಿಗೆ ಹೋಗಬೇಕಾಗಿದೆಯೆಂದು ಆಗ ಹೇಳಬೇಕು; ಅವರೊಡನೆ ಓರ್ವ ಸಹಾಯಕನನ್ನು ಕೊಡುತ್ತಾರೆ.
ಹಡಗು ‘ಭಾರತಿ’ ಸ್ಟೇಷನ್ನಿನ ಹತ್ತಿರದ ವರೆಗೂ ಹೋಗುತ್ತದೆ; ಅದು ಸಮುದ್ರದ ದಂಡೆಯಲ್ಲೇ ಇದೆ. ಸಮುದ್ರದ ಮೇಲೆ ನಡೆದುಕೊಂಡು ಹೋಗಬಹುದು. 4-5 ಅಡಿ ಮಾತ್ರ ಗಟ್ಟಿಯಾಗಿದ್ದು, ನಡುವೆ ನೀರು, ಪ್ರಪಾತ ಇರುತ್ತವೆ; ಮತ್ತು ತಿಮಿಂಗಿಲಗಳು ಓಡಾಡುತ್ತಿರುತ್ತವೆ. ಅವು ಹಿಮವನ್ನು ಕೊರೆದು, ಹಿಮಗಟ್ಟಿದ ನೀರಿನ ದಂಡೆಯ ಮೇಲೆ ಬಂದು ಮಲಗಿಕೊಳ್ಳುತ್ತವೆ; ಇನ್ನು ಸೀಲ್ಗಳು ಕೂಡ ಕಾಣಲು ಸಿಗುತ್ತವೆ. ಪೆಂಗ್ವಿನ್ ತೀರಾ ಅಪರೂಪ. ಏನಿದ್ದರೂ ಆ ಸ್ತಬ್ಧಸಮುದ್ರದ ಮೇಲೆ ನಡೆದುಕೊಂಡು ಹೋಗುವಾಗ ಜಾಗ್ರತೆ ವಹಿಸಬೇಕು.
ನನ್ನ ಸಂಶೋಧನೆ ಅಲ್ಲಿಯ ಸಮುದ್ರದ ನೀರನ್ನು ಕಲೆಹಾಕಿ ಅದರ ಗುಣಲಕ್ಷಣಗಳ ಅಧ್ಯಯನ ಮಾಡುವುದಾಗಿತ್ತು. ಆದರೆ ಆ ಹೊತ್ತಿಗೆ ಸಮುದ್ರವಿನ್ನೂ ಕರಗಿರಲಿಲ್ಲ. ಹಾಗಾಗಿ ನೀರಿನ ಮಾದರಿಗಳು ನನಗೆ ಸಿಗದಿರುವ ಸಾಧ್ಯತೆ ಬಹಳ ಇತ್ತು. 15-20 ಕಿ.ಮೀ. ಹೋದರೂ ಸಮುದ್ರ ಹೆಪ್ಪುಗಟ್ಟಿದೆ. ಆದರೆ ನನಗೋರ್ವ ಮಾಜಿ ಸೈನಿಕ, ಹುಕುಂಸಿಂಗ್ ಎಂಬವರು ಸಹಾಯಕರಾಗಿ ಸಿಕ್ಕಿದ್ದರಿಂದ
ಬಹಳ ಉಪಕಾರವಾಯಿತು. ಅವರು ಹಿಂದೆ ನಾಲ್ಕು ಬಾರಿ ಅಂಟಾರ್ಟಿಕಾಕ್ಕೆ ಹೋಗಿ ವರ್ಷಗಳ ಕಾಲ ಅಲ್ಲಿದ್ದರು. ಅವರಿಗೆ ಸಮುದ್ರದ ಹಿಮದ ತೆಳು ಜಾಗ ಎಲ್ಲಿ ಎಂಬುದೆಲ್ಲ ಗೊತ್ತಿತ್ತು. ಅವರು ತಮ್ಮ ಹಿಮಸ್ಕೂಟರಿನಲ್ಲಿ ಕುಳ್ಳಿರಿಸಿ ಸ್ತಬ್ಧಸಮುದ್ರದ ಮೇಲೆ
ಕರೆದುಕೊಂಡು ಹೋಗಿ, ಅಲ್ಲಿ ಉಂಟಾದ ಬಿರುಕುಗಳನ್ನು ಹುಡುಕಿ ತೆಗೆದು, ಉಳಿಯಿಂದ ಹೊಡೆದು ಒಂದು ಅಡಿಯೆಲ್ಲ ಅಗೆದು ಕೆಳಗಿನ ನೀರನ್ನು ತೆಗೆದು ಕೊಡುತ್ತಿದ್ದರು. ಸಮುದ್ರದ ನೀರೆಲ್ಲ ಹೆಪ್ಪುಗಟ್ಟಿತ್ತಲ್ಲ. ಆ ಮಂಜುಗಡ್ಡೆಯನ್ನೇ ತೆಗೆದು ನೀರು ಮಾಡಿದ್ದೂ ಇದೆ. ಸಮುದ್ರದ ನೀರಾಗಲಿ, ಅಲ್ಲಿನ ಹೆಪ್ಪುಗಟ್ಟಿದ ಐಸಾಗಲಿ, ಅವುಗಳ ಗುಣಲಕ್ಷಣ ಒಂದೇ. ಇದನ್ನು ಬಾಟಲಿಯಲ್ಲಿ ತೆಗೆದುಕೊಂಡು ಬಂದದ್ದೂ ಇದೆ. ಕೆಲವು ಸಲ ನಮ್ಮ ಸಮಯ ಸಂಜೆಯವರೆಗೂ ಹೊರಾಂಗಣದಲ್ಲೇ ಕಳೆದುಹೋಗುತ್ತಿತ್ತು. ಅಂತಹ ಸಂದರ್ಭಗಳಲ್ಲಿ ಬುತ್ತಿಯನ್ನು ಕಟ್ಟಿಕೊಂಡು ಹೋಗುತ್ತಿದ್ದೆವು.
ಮಧ್ಯಾಹ್ನದ ನಂತರ ನೀರಿನ ಮಾದರಿಗಳನ್ನು ಕೇಂದ್ರದ ಪ್ರಯೋಗಾಲಯದಲ್ಲಿ ಪರೀಕ್ಷೆ, ಸಂಸ್ಕರಣೆ ಮಾಡುತ್ತಿದ್ದೆ. ಆ ಕೆಲಸ ರಾತ್ರಿ 8 ಗಂಟೆಯ ವರೆಗೂ ಮುಂದುವರಿಯುತ್ತಿತ್ತು. ನಡುವೆ ಸಂಜೆಯ ಚಹಾಪಾನ. ಸ್ವಲ್ಪ ಸಮಯವನ್ನು ಕೇಂದ್ರದ ಒಳಾಂಗಣ ಕ್ರೀಡಾಕೊಠಡಿಯಲ್ಲಿ ಟೇಬಲ್ ಟೆನಿಸ್ ಆಡುತ್ತಿದ್ದೆ. ರಾತ್ರಿ ಭೋಜನ 8ರಿಂದ ಆರಂಭ. ಕೆಲವೊಮ್ಮೆ ಕೇಂದ್ರದ ಸದಸ್ಯರ ಹುಟ್ಟುಹಬ್ಬ ಇರುತ್ತಿತ್ತು. ಆಗ ವಿಶೇಷ ಭೋಜನದ ಏರ್ಪಾಡಾಗುತ್ತದೆ.
ನಿಯಮದಲ್ಲಿ ದ್ವಂದ್ವ
ನಮ್ಮ ಹತ್ತಿರ, ಅಂದರೆ ಐದಾರು ಕಿ.ಮೀ. ದೂರದಲ್ಲಿ ಚೀಣಾದ ಕೇಂದ್ರವಿತ್ತು. ಅವರು ಕೆಲವು ತ್ಯಾಜ್ಯಗಳನ್ನು ನೀರಿಗೆ ಮತ್ತು ಗಾಳಿಗೂ ಬಿಡುತ್ತಿದ್ದರು. ಅವರು 1980ರ ದಶಕದಲ್ಲೇ ಸ್ಟೇಷನ್ ಸ್ಥಾಪಿಸಿರುವುದರಿಂದ ಕೆಲವು ನಿಯಮ-ನಿಬಂಧನೆಗಳಿಗೆ ಅವರು ಒಳಪಟ್ಟಿಲ್ಲ. ಈ ದ್ವಂದ್ವನೀತಿ ಸರಿಯಲ್ಲ. ಅವರಿಗೆ ಗೊತ್ತಿಲ್ಲದ ಹಾಗೆ ನಾವು ಅವರ ಕೆಲವು ಸ್ಯಾಂಪಲ್ಗಳನ್ನು ತೆಗೆದುಕೊಂಡೆವು. ಶೌಚಾಲಯ ಮುಂತಾದವುಗಳ ತ್ಯಾಜ್ಯವನ್ನು ಸಂಸ್ಕರಣೆ ಮಾಡಿಯೋ ಮಾಡದೆಯೋ ಒಟ್ಟಿನಲ್ಲಿ ಸಮುದ್ರಕ್ಕೆ ಬಿಡುತ್ತಾರೆ. ಅವೆಲ್ಲ ಸಮುದ್ರದಲ್ಲಿ ಹೆಪ್ಪುಗಟ್ಟಿ ಹಾಗೇ ಇರುತ್ತವೆ. ನಮಗೆ ಸಿಕ್ಕಿದ ಕೆಲವು ಮಾದರಿಗಳಲ್ಲಿ ತ್ಯಾಜ್ಯದ ಅಂಶಗಳು ದೊರಕಿವೆ. ಆ ಬಗ್ಗೆ ನಾನೊಂದು ಸಂಶೋಧನ ಪ್ರಬಂಧವನ್ನು ಬರೆಯುತ್ತಿದ್ದು, ಅದನ್ನು ವೈಜ್ಞಾನಿಕ ನಿಯತಕಾಲಿಕೆಗಳಿಗೆ ಕೊಡುವ ಯೋಚನೆ ಇದೆ.
ಭಾರತದ ಕೇಂದ್ರಗಳ ತ್ಯಾಜ್ಯವನ್ನು ಸಂಸ್ಕರಿಸಿಯೇ ಬಿಡುತ್ತಿದ್ದರೂ ಅದು ಪೂರ್ತಿ ಫಲಕಾರಿ ಆಗುವುದಿಲ್ಲ. ಆ್ಯಂಟಿಬಯೋಟಿಕ್ಗಳು ಹೋಗಿಯೇ ಹೋಗುತ್ತವೆ, ಸಣ್ಣಪ್ರಮಾಣದ ಮಾಲಿನ್ಯ ಆಗಿಯೇ ಆಗುತ್ತದೆ.
ಅದರಿಂದ ಮೀನು ಮುಂತಾದ ಜೀವಿಗಳಿಗೆ ಏನಾದರೂ ಹಾನಿಯಾಗಿದೆಯೇ ಎಂಬ ಬಗ್ಗೆ ಮತ್ಸ್ಯತಜ್ಞರು ಹೋಗಿ ಸಂಶೋಧನೆ ನಡೆಸಬೇಕು. ನಾನು ಸುಮಾರು 100 ಸ್ಯಾಂಪಲ್ಗಳನ್ನು ಸಂಗ್ರಹಿಸಿ ತಂದಿದ್ದೇನೆ; ನಮ್ಮ ಕೇಂದ್ರಗಳಿಂದ ಸಂಸ್ಕರಣೆ ಮಾಡಿ ಹೊರಗೆ ಬಿಟ್ಟ ನೀರಿನ ಮಾದರಿಗಳನ್ನು ಕೂಡ ತೆಗೆದುಕೊಂಡಿದ್ದೇವೆ. ಕೆಲವೆಲ್ಲ ಫಾರ್ಮಾಸ್ಯುಟಿಕಲ್ಸ್ ಬಗ್ಗೆ ಕೇಂದ್ರ ಸರ್ಕಾರಕ್ಕೆ ವರದಿ ಕೊಟ್ಟಿದ್ದೇನೆ. ಸ್ವಲ್ಪವೂ ಮಾಲಿನ್ಯವನ್ನು ಹೊರಗೆ ಬಿಡದ ಹಾಗೆ ಹೇಗೆ ಸಂಸ್ಕರಣೆ ಮಾಡಬಹುದೆಂದು ಪರಿಶೀಲನೆ ನಡೆಸುತ್ತಿದ್ದಾರೆ. ಮಾಲಿನ್ಯ ಆಗುತ್ತಿದೆಯೆ? ಎಷ್ಟು ಪ್ರಮಾಣದಲ್ಲಿ ಆಗುತ್ತಿದೆ? – ಎಂಬ ಬಗ್ಗೆ ಸರ್ಕಾರಕ್ಕೆ ಮಾಹಿತಿ ಬೇಕಾಗಿತ್ತು.
ಕೆರೆನೀರಿನ ನಿರ್ಬಂಧ
‘ಭಾರತಿ’ ಕೇಂದ್ರದ ಸುತ್ತಮುತ್ತ ಕುಡಿಯುವ ನೀರಿನ ಕೆರೆಗಳಿವೆ; ಆದರೆ ಎಲ್ಲವೂ ಮಂಜುಗಡ್ಡೆಯಾಗಿದೆ. ನೀರಿನ ಒಂದು ವಿಶೇಷ ಗುಣವೆಂದರೆ, ಮೇಲೆ ಐಸಿದ್ದರೂ 4-5 ಅಡಿ ಕೆಳಗೆ ನೀರು ಇರುತ್ತದೆ. ಅದನ್ನು ಮೇಲೆತ್ತಲು ಸಾಧ್ಯ. ಆದರೆ ‘ಭಾರತಿ’ ಹೊಸ ಸ್ಟೇಷನ್ ಆದಕಾರಣ ಪುನಃ ನಿಬಂಧನೆಗಳು ಅಡ್ಡಬರುತ್ತವೆ;
ಕೆರೆಯ ನೀರನ್ನು ತೆಗೆದುಕೊಳ್ಳಲಿಕ್ಕೆ ಇಲ್ಲ. ಸಮುದ್ರದ ಉಪ್ಪುನೀರನ್ನು ಸಂಸ್ಕರಣೆ ಮಾಡಿ ಬಳಸಿಕೊಳ್ಳಬೇಕು. ಚೀಣಾದ ಕೇಂದ್ರಕ್ಕೆ ಆ ನಿಬಂಧನೆ ಇಲ್ಲ; ಅವರು
ಕೆರೆಯ ನೀರನ್ನು ತೆಗೆದುಕೊಳ್ಳುತ್ತಾರೆ. ಉಪ್ಪುನೀರನ್ನು ಸಂಸ್ಕರಣೆ ಮಾಡಿದಾಗ ಅದರಲ್ಲಿ ಕೆಲವು ಕೊರತೆಗಳು ಉಂಟಾಗುತ್ತವೆ. ಸೋಡಿಯಂ, ಪೆÇಟ್ಯಾಶಿಯಂ, ಕ್ಯಾಲ್ಸಿಯಂಗಳು ಕಮ್ಮಿ ಇರುತ್ತವೆ; ಅವುಗಳನ್ನು ಪುನಃ ಸೇರಿಸಬೇಕು. ನೀರಿನಲ್ಲಿ ಅವೆಲ್ಲ ಇರುವ ಕಾರಣ ಪ್ರತಿದಿನ ಸ್ನಾನಕ್ಕೆ ಅವಕಾಶ ಇಲ್ಲ. ವಾರದಲ್ಲಿ ಒಮ್ಮೆ ಅಥವಾ ಎರಡು ಸರ್ತಿ ಮಾಡಬಹುದು.
ಅಲ್ಲಿ ಅಗತ್ಯವಾದ ವಿದ್ಯುತ್ತನ್ನು ಡೀಸೆಲ್ ಜನರೇಟರ್ಗಳ ಮೂಲಕ ಉತ್ಪಾದಿಸಲಾಗುತ್ತದೆ. ಏಕೆಂದರೆ ಅಲ್ಲಿ ಸೌರವಿದ್ಯುತ್ ಉತ್ಪಾದನೆ ಅಸಾಧ್ಯ. ವರ್ಷದಲ್ಲಿ ಆರು ತಿಂಗಳು ಕತ್ತಲೆ (ರಾತ್ರಿ) ಇರುತ್ತದೆ. ಸೂರ್ಯ ಕಾಣುತ್ತಿದ್ದರೂ ಅವನ ಶಾಖ ಪ್ರಭಾವಶಾಲಿಯಾಗಿ ಇಲ್ಲ. ಗಾಳಿಯಿಂದ ವಿದ್ಯುತ್ ಉತ್ಪಾದಿಸಲು ಪ್ರಯತ್ನಿಸಿದ್ದಾರೆ. ಆದರೆ ಅದು ಯಶಸ್ವಿ ಆದಂತಿಲ್ಲ. ಜನರೇಟರ್ನಲ್ಲಿ ಉತ್ಪತ್ತಿಯಾದ ಶಾಖವನ್ನು ಮನೆಯೊಳಗೆ ಹರಿಯಬಿಡುತ್ತಾರೆ; ಹಾಗಾಗಿ ಚಳಿ ಇಲ್ಲ. ಸುಮಾರು 25 ಡಿಗ್ರಿ ಸೆಲ್ಸಿಯಸ್ ವರೆಗೆ ಉಷ್ಣಾಂಶವನ್ನು ಕಾಯ್ದುಕೊಳ್ಳಲು ಸಾಧ್ಯವಾಗುತ್ತದೆ. ಆ ಶಾಖದ ಮರುಬಳಕೆ ಮಾಡುತ್ತಾರೆ. ಅದು ಕಂಬೈನ್ಡ್ ಹೀಟ್ ಆ್ಯಂಡ್ ಪವರ್ ಟೆಕ್ನಾಲಜಿ. ಜನರೇಟರ್ನ ಹೊಗೆ ಹೊರಗೆ ಹೋಗುವುದಿಲ್ಲ. ಅಂತಹ ಸುಧಾರಿತ ಜನರೇಟರ್. ಅದಕ್ಕೆ ಇಂಧನ ದುಬಾರಿ ಬೆಲೆಯ ನಾಫ್ತಾ. ಪೆಟ್ರೋಲ್, ಡೀಸೆಲ್ಗಳು ಗಟ್ಟಿ ಆಗಬಹುದು; ನಾಫ್ತಾ ಬಹುಶಃ ಗಟ್ಟಿಯಾಗುವುದಿಲ್ಲ.
ತ್ಯಾಜ್ಯ ನಿರ್ವಹಣೆ
ತ್ಯಾಜ್ಯದ ನಿರ್ವಹಣೆ ಅಲ್ಲಿ ದೊಡ್ಡ ಸಮಸ್ಯೆಯೇ. ನೀರನ್ನು ಸಂಸ್ಕರಣೆ ಮಾಡಿ ಬಿಡಬಹುದು. ಆದರೆ ಊಟದ ಉಳಿಕೆ, ಮಲ, ಕಾಗದ, ಪ್ಲಾಸ್ಟಿಕ್ – ಎಲ್ಲವನ್ನೂ ಡ್ರಮ್ಗಳಿಗೆ ತುಂಬಿಸಿ ಹಡಗಿಗೆ ಹಾಕಿ ಕೇಪ್ಟೌನ್ ಅಥವಾ ಭಾರತಕ್ಕೆ ಕಳುಹಿಸಲಾಗುತ್ತದೆ. ತರಕಾರಿಸಿಪ್ಪೆ ಸೇರಿದಂತೆ ಯಾವುದನ್ನೂ ಅಲ್ಲಿ ಬಿಸಾಡುವ ಹಾಗಿಲ್ಲ. ಕೇಪ್ಟೌನಿನಲ್ಲಿ ಬೇರೆಲ್ಲ ತ್ಯಾಜ್ಯ ತೆಗೆದುಕೊಳ್ಳುತ್ತಾರೆ; ಮಲದ ತ್ಯಾಜ್ಯಕ್ಕೆ ಅಲ್ಲಿ ಹತ್ತುಪಟ್ಟು ಜಾಸ್ತಿ ಹಣ ಕೊಡಬೇಕು. ಆದ್ದರಿಂದ ಅದು ಗೋವಾಕ್ಕೆ ಬಂದು ಬೀಳುತ್ತದೆ. ಮಲವನ್ನು ಪೈಪ್ಲೈನ್ ಮೂಲಕ ಡ್ರಮ್ಗೆ ತುಂಬಿಸುತ್ತಾರೆ. ನೀರನ್ನೆಲ್ಲ ತೆಗೆಯುತ್ತಾರೋ ಅಥವಾ ನೇರವಾಗಿ ಹಾಗೆಯೆ ಹಾಕುತ್ತಾರೋ ಗೊತ್ತಿಲ್ಲ. ತಣ್ಣಗಿರುವ ಕಾರಣ ಸಾಂದ್ರೀಕೃತ ಆಗಿರುತ್ತದೆ; ಏನೂ ಆಗುವುದಿಲ್ಲ. ‘ಮೈತ್ರಿ’ ಸ್ಟೇಶನ್ನವರು ಇತರ ತ್ಯಾಜ್ಯಗಳನ್ನು ಕಳುಹಿಸುತ್ತಾರೆ; ಮಲವನ್ನು ಅಲ್ಲೇ ಇನ್ಸಿನರೇಟ್ (ಬೂದಿ) ಮಾಡುತ್ತಾರೆ.
ಅಂಟಾರ್ಟಿಕಾದಲ್ಲಿ ಟಿವಿ ಸಿಗುವುದಿಲ್ಲ. ವೀಡಿಯೋ, ಸಿಡಿ ನೋಡಬಹುದು. ‘ಭಾರತಿ’ ಸ್ಟೇಷನ್ನಲ್ಲಿ ಇಂಟರ್ನೆಟ್ ಸಿಗುತ್ತದೆ. ನನಗೆ ಮನೆಗೆ (ಮಣಿಪಾಲ ಸಮೀಪದ ಪರ್ಕಳ) ವಾಟ್ಸ್ ಆ್ಯಪ್ ಮೂಲಕ ಸಂಪರ್ಕಿಸಲು ಸಾಧ್ಯವಾಗುತ್ತಿತ್ತು. ಅಂಟಾರ್ಟಿಕಾದಲ್ಲಿ ‘ಭಾರತೀಯ ಬಾಹ್ಯಾಕಾಶ ಸಂಸ್ಥೆ’ಯ (ಇಸ್ರೋ) ಒಂದು ಖಾಯಂ ನೆಲೆ ಇದೆ. ಅಲ್ಲಿ ಅವರಿಗೊಂದು ವಿಶೇಷ ಅನುಕೂಲವಿದೆ. ಭಾರತದ ಹಲವು ಉಪಗ್ರಹಗಳು ರಿಮೋಟ್ ಸೆನ್ಸಿಂಗ್ ಉಪಗ್ರಹಗಳಾಗಿದ್ದು, ಉತ್ತರಧ್ರುವ ಮತ್ತು ದಕ್ಷಿಣಧ್ರುವಗಳ ನಡುವೆ ಹಾರಾಡುತ್ತಿರುತ್ತವೆ. ಭಾರತದಲ್ಲೊಂದು ವೀಕ್ಷಣಾಲಯವಿದ್ದರೆ ಅವರಿಗೆ ಅಂತಹ ಉಪಗ್ರಹವನ್ನು ದಿನಕ್ಕೆ ಒಂದು ಸಲ ನೋಡಲು ಸಾಧ್ಯ. ಅಂಟಾರ್ಟಿಕಾದಲ್ಲಾದರೆ ದಿನಕ್ಕೆ ಹತ್ತು ಸಲ ನೋಡಬಹುದು. ಏಕೆಂದರೆ ಎಲ್ಲ ಬರುವುದು ಅಲ್ಲಿಗೇ. ಇಸ್ರೋದ ಖಾಯಂ ನೆಲೆ ಇರುವುದರಿಂದ ಇಂಟರ್ನೆಟ್ ಇತ್ಯಾದಿ ಸಿಗಲು ಅನುಕೂಲವಾಗಿದೆ.
ಅಂಟಾರ್ಟಿಕಾದಲ್ಲಿ 60 ದಿನ ಮುಗಿಸಿ ನಾನು ಭಾರತಕ್ಕೆ ಮರಳುವುದೆಂದು ಇತ್ತು. ಹಾಗೆ ‘ಭಾರತಿ’ಯಿಂದ ‘ಮೈತ್ರಿ’ಗೆ ನಾನು ಹಡಗಿನಲ್ಲಿ ಬರುವುದೆಂದು ನಿರ್ಧಾರವಾಯಿತು. ಆದರೆ ಹಡಗು ಹತ್ತು ದಿನ ತಡವಾಗಿ ಬಂದಿತು. ಸಾಗರದ ಮೇಲ್ಮೈಯ ಹಿಮದ ಹಾಳೆಗಳು ಸಾಕಷ್ಟು ದಪ್ಪ ಹಾಗೂ ಗಟ್ಟಿ ಇದ್ದುದರಿಂದ ದಿನಕ್ಕೆ 3-4 ಕಿ.ಮೀ.ಗಿಂತ ಹೆಚ್ಚು ಕ್ರಮಿಸಲು ಸಾಧ್ಯವಾಗುವುದಿಲ್ಲ. ಹಡಗು ಹಿಮದ ಹಾಳೆಗಳನ್ನು ಸೀಳಿ ಸಾಗುವಾಗ ಹಲವು ತಿಮಿಂಗಿಲಗಳ ದರ್ಶನವಾಯಿತು. ಹಡಗು ಹಿಮದ ಹಾಳೆಗಳನ್ನು ಸೀಳುವಾಗ ಸಮುದ್ರದ ನೀರು ಕೆಳಗಿನಿಂದ ಮೇಲಕ್ಕೆದ್ದು ಬರುತ್ತದೆ. ಅದರೊಂದಿಗೆ 2-3 ದೊಡ್ಡ ಮೀನುಗಳು ಮೇಲಕ್ಕೆದ್ದು ಬುಸ್ ಎಂದು ನೀರನ್ನು ಉಗುಳಿ ಮರಳಿ ನೀರಿನೊಳಗೆ ಮರೆಯಾಗುತ್ತಿದ್ದವು.
ಹಡಗಿಗೆ ಅಪಘಾತ
ಅದು ಸುಮಾರು 25 ವರ್ಷ ಹಳೆಯ 166 ಮೀಟರ್ ಉದ್ದದ ಸರಕು ಹಡಗು. ಫೆಬ್ರುವರಿ 5ರಂದು (2018) ರಾತ್ರಿ 9ರ ವೇಳೆಗೆ ನಾವು 30 ಜನರ ತಂಡ ಆ ಭಾರತೀಯ ಹಡಗನ್ನು ಹತ್ತಿದೆವು. ಇತರ ಭಾರತೀಯ ಸದಸ್ಯರಿಗೆ ವಿದಾಯ ಹೇಳಿ ಬಂದಾಗಿತ್ತು. ರಾತ್ರಿ 11ರ ಸಮಯ ಸೂರ್ಯ ದಿಗಂತದಲ್ಲಿದ್ದ ಕಾರಣ ಮುಸ್ಸಂಜೆಯಂತೆ ತೋರುತ್ತಿತ್ತು. ಹಡಗು ಚಲನೆಯಲ್ಲಿದ್ದಂತೆ ಒಂದೆಡೆಗೆ ವಾಲಿದ ಅನುಭವ. ಸ್ಫೋಟದಂತಹ ಶಬ್ದವೂ ಕೇಳಿಸಿತು. ನಾನಿದ್ದ ಕೋಣೆಯ ಕಪಾಟಿನಲ್ಲಿ ಜೋಡಿಸಿಟ್ಟಿದ್ದ ವಸ್ತುಗಳೆಲ್ಲ ನೆಲಕ್ಕುರುಳಿದವು; ಗಾಜಿನ ಬಾಗಿಲುಗಳು ಹುಡಿಯಾದವು. 20-25 ಡಿಗ್ರಿಯಷ್ಟು ವಾಲಿದ ಹಡಗು ಪುನಃ ನೇರವಾಯಿತು. ಇದೇನೋ ಹಡಗಿನಲ್ಲಿನ ಸಾಮಾನ್ಯ ವಿದ್ಯಮಾನವಿರಬಹುದೆಂದು ತಿಳಿದು ನಿದ್ರೆಹೋದೆ. ಮರುದಿನ ಬೆಳಗ್ಗೆ ನಿದ್ದೆಯಿಂದ ಎದ್ದು ಸುತ್ತ ಕಣ್ಣು ಹಾಯಿಸಿದರೆ ಹಡಗು ಇನ್ನೂ ಇದ್ದ ಜಾಗದಲ್ಲೇ ಇದೆ. ದೂರದಲ್ಲಿ ‘ಭಾರತಿ’ ನೆಲೆಯು ಗೋಚರಿಸುತ್ತಿತ್ತು. ಏನೆಂದು ವಿಚಾರಿಸಿದರೆ ಹಡಗಿಗೆ ಒಂದು ಸಣ್ಣ ಅಪಘಾತವಾಗಿದೆ ಎಂದಷ್ಟೆ ಹೇಳಿದರು. ರಿಪೇರಿಯಾಗುತ್ತದೆ; ಮತ್ತೆ ಮುಂದೆ ಹೋಗುತ್ತದೆ ಎಂದರು. ಆದರೆ ಮಧ್ಯಾಹ್ನವಾದರೂ ರಿಪೇರಿ ಕಾಣಲಿಲ್ಲ. ಹಡಗು ಮತ್ತೆ ‘ಭಾರತಿ’ಗೇ ಮರಳುತ್ತದೆಂದು ತಿಳಿಯಿತು. ಮತ್ತೊಂದು ಗಂಟೆಯಲ್ಲಿ ‘ಭಾರತಿ’ಗೆ ತಲಪಿದೆವು. ಕೆಲವರನ್ನು ಹಡಗಿನಲ್ಲೇ ಇದ್ದ ಹ್ಯಾಲುಸಿನೇಶನ್ನಲ್ಲಿ ಸ್ಥಳಾಂತರಿಸಿದರೆ ಉಳಿದವರು ಹೆಪ್ಪುಗಟ್ಟಿದ ಸಮುದ್ರದ ಮೇಲೆ ನಡೆದೇ ‘ಭಾರತಿ’ಗೆ ಬಂದೆವು. ಮತ್ತೆ ಗೊತ್ತಾಯ್ತು; ಹಡಗು ಸಮುದ್ರದ 20-30 ಮೀ. ಆಳದಲ್ಲಿದ್ದ ಶಿಲಾಸಮೂಹಕ್ಕೆ ಡಿಕ್ಕಿಹೊಡೆದು 2-3 ಅಡಿಯಷ್ಟು ಉದ್ದಕ್ಕೆ ಅದರ ಹೊರಮೈ ಕಿತ್ತುಹೋಗಿತ್ತು. ನೀರು ಹಡಗಿನ ಒಳಗೆ ನುಗ್ಗಿದ್ದು ಮುಳುಗಡೆಯಾಗುವ ಅಪಾಯ ಕೂಡ ಇತ್ತು. ದೇವರ ದಯೆಯಿಂದ ಸಮುದ್ರದ ಮಧ್ಯೆ ಹಾಗೆ ಆಗಲಿಲ್ಲ. ರಷ್ಯಾದ ಒಂದು ಹಡಗು ಸಮೀಪದಲ್ಲಿದ್ದ ಕಾರಣ ನಮ್ಮ ಹಡಗಿನ ಒಳಗೆ ತುಂಬಿದ ನೀರನ್ನು ಆ ಹಡಗಿನ ನೆರವಿನಿಂದ ಹೊರಗೆ ಹಾಕಲಾಯಿತು.
ವಾಪಸು ಬಂದ ನಮಗೆ ಮತ್ತೆ ಕೂಡಲೆ ಬರುವುದಕ್ಕೆ ವ್ಯವಸ್ಥೆ ಇಲ್ಲ. ಮತ್ತೆ 16 ದಿನ ‘ಭಾರತಿ’ಯಲ್ಲಿ ಉಳಿಯಬೇಕಾಯಿತು. ಸರ್ಕಾರದವರು ವಿಶೇಷ ವಿಮಾನ ಏರ್ಪಡಿಸಿ, ಫೆಬ್ರುವರಿ 22ರಂದು ಅಲ್ಲಿಂದ ‘ಮೈತ್ರಿ’ಗೆ ಮತ್ತೆ ಕೇಪ್ಟೌನಿಗೆ ಕರೆದುಕೊಂಡು ಬಂದರು. ಫೆಬ್ರುವರಿ 27ರಂದು ಮನೆಗೆ ಮರಳಿದೆ. ಹಾಗೆ 60 ದಿನ ಅಲ್ಲಿ ಇರಬೇಕಾದವನು 98 ದಿನ ಇರಬೇಕಾಗಿ ಬಂತು. ಆ ಹೆಚ್ಚಿನ ಅವಧಿಯಲ್ಲೂ ನನ್ನ ಸಂಶೋಧನೆಗಳು ಮುಂದುವರಿದವು. ನೀರಿನ ಇನ್ನಷ್ಟು ಮಾದರಿಗಳನ್ನು ನಾನು ಸಂಗ್ರಹಿಸಿದೆ.
ಒಂದು ದುರಂತ
ಊರಿಗೆ ವಾಪಸಾದ ತಿಂಗಳೊಳಗೆ ‘ಮೈತ್ರಿ’ ನೆಲೆಯಿಂದ ಇನ್ನೊಂದು ಆಘಾತಕಾರಿ ಸುದ್ದಿ ಬಂತು. ಭುವನೇಶ್ವರದ ಐಐಟಿಯಲ್ಲಿ ಎಂ.ಎಸ್ಸಿ. ಅಧ್ಯಯನ ಮುಗಿಸಿದ ಒಬ್ಬ ಪ್ರತಿಭಾವಂತ ಬಂಗಾಳಿ ಯುವಕ ಅಂಟಾರ್ಟಿಕಾದ ಶಿಲಾಸಮೂಹದ ಬಗ್ಗೆ ಅಧ್ಯಯನ ಮಾಡಲೆಂದು ನಮ್ಮೊಂದಿಗೆ ಬಂದಿದ್ದ. ‘ಮೈತ್ರಿ’ಯಲ್ಲಿದ್ದ 8-10 ದಿನ ನಾವು ಜೊತೆಗಿದ್ದೆವು. ಮಾರ್ಚ್ 28ರಂದು ಆತ ಭಾರತಕ್ಕೆ ಮರಳುವವನಿದ್ದ. ಮಾರ್ಚ್ 25ರಂದು ಹಳೆಯ ಹಡಗು ಅಪಘಾತವಾದ ಕಾರಣ ರಷ್ಯಾ ದೇಶದ ಇನ್ನೊಂದು ಹಡಗನ್ನು ಕೇಪ್ಟೌನಿನಿಂದ ‘ಮೈತ್ರಿ’ ನೆಲೆಗೆ ತರಿಸಲಾಗಿತ್ತು. ಹಡಗಿನಿಂದ ಆಹಾರ ವಸ್ತು ಹಾಗೂ ಸರಕನ್ನು ಇಳಿಸಿ ಪಿಸ್ಟೆನ್ಬುಲ್ಲಿಯ ಸಹಾಯದಿಂದ ನೂರು ಕಿ.ಮೀ. ದೂರದ ‘ಮೈತ್ರಿ’ಗೆ ಸಾಗಿಸಲಾಗುತ್ತಿತ್ತು. ಅಲ್ಲಿ ನಾನು ಪೆÇ್ರಫೆಸರ್, ನಾನು ವಿಜ್ಞಾನಿ, ನಾನು ಅಟೆಂಡರ್, ನಾನು ಕ್ಲರ್ಕ್ ಎಂಬುದೆಲ್ಲ ಇಲ್ಲ. ಎಲ್ಲರೂ ಎಲ್ಲ ಕೆಲಸವನ್ನೂ ಮಾಡಬೇಕು. ಪಾಯಿಖಾನೆ ಸ್ವಚ್ಛಗೊಳಿಸುವ ಪಾಳಿ ಕೂಡ ಬರುತ್ತದೆ. ತಡವಾದ ಕಾರಣ ಎಲ್ಲರಿಗೂ ಗಡಿಬಿಡಿ. ಈತ ಪಿಸ್ಟೆನ್ಬುಲ್ಲಿಗೆ ಸಾಮಾನಿನ ಟ್ರಸ್ಟರ್ ಜೋಡಿಸುತ್ತಿದ್ದಾಗ ಚಾಲಕನ ಅಚಾತುರ್ಯದಿಂದ ಬುಲ್ಲಿ ಅಕಸ್ಮಾತ್ ಚಲಿಸಿದ ಕಾರಣ ಈತ ಚಕ್ರದಡಿಗೆ ಸಿಲುಕಿ ಅಸುನೀಗಿದ. ಇದೊಂದು ಬೇಸರದ ಸಂಗತಿಯಾಯಿತು.
ಭಾರತದ ಅಂಟಾರ್ಟಿಕಾದ 38 ವರ್ಷಗಳ ಇತಿಹಾಸದಲ್ಲಿ ಏಳೆಂಟು ಜನ ಸಾವಿಗೀಡಾಗಿದ್ದಾರೆ. ಹಿಂದೆ ‘ಜಿಯೊಲಾಜಿಕಲ್ ಸರ್ವೇ ಆಫ್ ಇಂಡಿಯಾ’ದ ನಾಲ್ವರು ವಿಜ್ಞಾನಿಗಳು ಒಂದೇ ಸಲ ಮೃತಪಟ್ಟ ಒಂದು ಘಟನೆ 1997ರಲ್ಲಿ ಸಂಭವಿಸಿತ್ತು. ಕ್ಷೇತ್ರಪ್ರವಾಸಕ್ಕೆ ಹೋದ ಅವರು ಟೆಂಟ್ ಹಾಕಿ ಮಲಗಿದ್ದರು. ಬೆಚ್ಚಗಿರಲೆಂದು ಜನರೇಟರ್ ಒಳಗೇ ಇತ್ತು. ಪೂರ್ತಿ ನಿರ್ವಾತ ವ್ಯವಸ್ಥೆ ಮಾಡಿಕೊಂಡಿದ್ದರು. ‘ಸ್ವೀಟ್ಗ್ಯಾಸ್’ ಎನ್ನುವ ಹೆಸರಿರುವ ಕಾರ್ಬನ್ ಮೋನಾಕ್ಸೈಡ್ ಒಳ್ಳೆಯ ನಿದ್ದೆಯೊಂದಿಗೆ ಚಿರನಿದ್ದೆಯನ್ನೇ ತರಿಸಿತ್ತು.
ನನಗೆ ಹೋಗುವಾಗ ಒಂದು ತರಹ ಅನುಮಾನವಿತ್ತು. ಕೆಲವರು “ನೀವು ಎಣಿಸಿದಷ್ಟೆಲ್ಲ ಆಗುವುದಿಲ್ಲ. ಇಲ್ಲಿ ಹೇಳಿದಷ್ಟು ಅಲ್ಲಿ ಸುಲಭವಿಲ್ಲ. ಅಲ್ಲಿನ ಪರಿಸ್ಥಿತಿ ಬೇರೆಯೇ ಇದೆ” ಎಂದೆಲ್ಲ ಹೇಳಿದ್ದರು. ಅಲ್ಲಿ ನಾವು ನಮ್ಮ ಲೀಡರನ್ನು ಎಷ್ಟು ಕನ್ವಿನ್ಸ್ ಮಾಡುತ್ತೇವೆ ಎಂಬುದರ ಮೇಲೆ ನಮ್ಮ ಕೆಲಸ ನಡೆಯುತ್ತದೆ. ಅವನಿಗೆ ನಮ್ಮ ಕೆಲಸದ ಮೇಲೆ ಭರವಸೆ ಬಂದರೆ ಜನ ಕೊಡುತ್ತಾನೆ. ಅದು ಮುಖ್ಯ. ಅಲ್ಲಿ ಎರಡು ವಾಹನಗಳಿವೆ: ಒಂದು ರಿಕ್ಷಾ ರೀತಿಯದ್ದು, ಇನ್ನೊಂದು ಟ್ರಕ್ನ ಹಾಗೆ. ಆ ರಿಕ್ಷಾ ನಮಗೆ ಕೊಡುತ್ತಾರೆ; ಅದರಲ್ಲಿ ಮೂರು ಜನ ಹೋಗಬಹುದು. ಅದರಲ್ಲಿ ಒಬ್ಬ ಅರೆಸೈನಿಕ ಅಥವಾ ಮಾಜಿಸೈನಿಕ. ಜನ ಲೆಕ್ಕದ್ದೇ ಇರುವುದು. ಆದ್ಯತೆ ನೋಡಿ ಕೊಡುತ್ತಾರೆ. ಉದಾ – ಭೂವೈಜ್ಞಾನಿಕ ಸಮೀಕ್ಷೆಯವರಿಗೆ ಆದ್ಯತೆ. ನಮ್ಮಂತಹ ವಿಶ್ವವಿದ್ಯಾಲಯದವರಿಗೆ ಆದ್ಯತೆಯಲ್ಲಿ ಎರಡನೇ ಸ್ಥಾನ. ಲೀಡರ್ ಮತ್ತು ಜೊತೆಗಿದ್ದ ಮಾಜಿ ಸೈನಿಕನಿಂದ ಉತ್ತಮ ಸಹಕಾರ ಸಿಕ್ಕಿತು.
ಅಂತಾರಾಷ್ಟ್ರೀಯ ವೇದಿಕೆಗೆ ಮತ್ತೆ
ಸಮುದ್ರದ ಹಿಮಗಡ್ಡೆ ಕರಗಿ ನೀರಾದ ಮೇಲೆ ನೀರನ್ನು ಸಂಗ್ರಹಿಸೋಣವೆಂದರೆ ನಮಗೆ ಹೋಗಲು ಆಗುವುದಿಲ್ಲ. ಆಗ ಹಡಗಿನಲ್ಲಿ ಹೆಲಿಕಾಪ್ಟರ್ ಬಂತು. ಅದು ತಮಗೆ ಬೇಕೆಂದು ಎಲ್ಲರೂ ಮುಗಿಬಿದ್ದರು. ನನಗೆ ಎರಡು ಸರ್ತಿಯಾದರೂ ಅದರಲ್ಲಿ ಹೋಗಬೇಕೆಂದು ನಾನು ಹಡಗಿನ ಲೀಡರನ್ನು ಒಪ್ಪಿಸಿದೆ. ಹೆಲಿಕಾಪ್ಟರ್ ಸಿಕ್ಕಿತು. ಅದರ ಮೂಲಕವೂ ಸ್ಯಾಂಪಲ್ ಸಂಗ್ರಹಿಸಿದೆ. ಹೀಗಾಗಿ ನನ್ನ ಕೆಲಸ ಎಣಿಸಿದ್ದಕ್ಕಿಂತ ಅಧಿಕವಾಗಿಯೇ ಆಯಿತು.
ಸದ್ಯದ ಪ್ರಗತಿ
ಈಗ ಫಲಿತಾಂಶಗಳು ಬಂದಿವೆ; ಪ್ರಕಟಣೆಯೂ ಆಗಿದೆ. ಇನ್ನೊಂದು ಫಲಿತಾಂಶ ಬರಲಿಕ್ಕಿದೆ. ಭೂವೈಜ್ಞಾನಿಕ ಕೆಲಸಗಳನ್ನು ಅಥವಾ ಹಿಮಗಡ್ಡೆ (ನೀರ್ಗಲ್ಲು) ಕರಗುವುದರ ಬಗ್ಗೆ ಅಧ್ಯಯನ ಮಾಡುವ ಬೇರೆ ವಿಜ್ಞಾನಿಗಳು ಅಲ್ಲಿದ್ದರು. ನಾನು ಭೂ-ರಸಾಯನಶಾಸ್ತ್ರವನ್ನು ತೆಗೆದುಕೊಂಡೆ. ಕೆಲವು ವರದಿಗಳನ್ನು ಇನ್ನೂ ಸಿದ್ಧ ಮಾಡುತ್ತಿದ್ದೇನೆ. ಎರಡು ಅಂತಾರಾಷ್ಟ್ರೀಯ ಕಾನ್ಫರೆನ್ಸ್ಗಳಲ್ಲಿ ಅಂಟಾರ್ಟಿಕಾದಲ್ಲಿ ಪರಿಸರ ಮಾಲಿನ್ಯವಾಗುತ್ತಿದೆ ಎನ್ನುವ ವಿಷಯವನ್ನು ಮಂಡಿಸಿದ್ದೇನೆ (ಚೀಣಾ ಮತ್ತು ಪೆÇೀಲೆಂಡ್). ಹೆಚ್ಚಿನ ಸ್ಯಾಂಪಲ್ಗಳ ಸಂಸ್ಕರಣ, ಪರೀಕ್ಷೆ ಮುಗಿಯಿತು; ಉಳಿದುದನ್ನು ಮಾಡುತ್ತಿದ್ದೇನೆ. ಇದರ ಕಾರ್ಯವಿಧಾನ ರೂಪಿಸುವುದಕ್ಕೇ (ಮೆಥಡ್ ಡೆವಲಪ್ಮೆಂಟ್) ಸುಮಾರು ಸಮಯ ಹಿಡಿಯಿತು. ಭಾರತೀಯ ಮೂಲದವರಾದ ನನ್ನ ಒಬ್ಬ ಆಸ್ಟ್ರೇಲಿಯನ್ ಸ್ನೇಹಿತರು ಕೆಲವು ಸ್ಯಾಂಪಲ್ಗಳ ಪರೀಕ್ಷೆ ಮಾಡಿಕೊಟ್ಟು ಸಹಕರಿಸಿದರು.
ಈ ವರ್ಷ ನನ್ನ ಓರ್ವ ಸಹೋದ್ಯೋಗಿ ಮಣಿಪಾಲ್ ಫಾರ್ಮಸಿ ಕಾಲೇಜಿನ ಕೃಷ್ಣಮೂರ್ತಿಭಟ್ಟರು ಅಂಟಾರ್ಟಿಕಾಕ್ಕೆ ಹೋಗಿದ್ದಾರೆ. ನನ್ನ ಇನ್ನೋರ್ವ ಸಹೋದ್ಯೋಗಿ ಅನೀಶ್ ವಾರಿಯರ್ ಈಗ ‘ಮೈತ್ರಿ’ ಸ್ಟೇಷನ್ನಲ್ಲಿದ್ದಾರೆ. ಅವರು ಅಲ್ಲಿನ ಕೆರೆಗಳ ತಳಭಾಗದ ಮಡ್ಡಿಯನ್ನು ತೆಗೆದು 500-1000 ವರ್ಷಗಳ ಇತಿಹಾಸದ ಶೋಧ ನಡೆಸುತ್ತಿದ್ದಾರೆ; ಭೂಮಿಯ ತಾಪಮಾನ ಹೇಗೆ ಬದಲಾಗುತ್ತ ಬಂದಿದೆ, ಹಿಂದಿನ ವಾತಾವರಣ ಹೇಗಿತ್ತು ಮುಂತಾದ ಅಧ್ಯಯನ ನಡೆಸುತ್ತಿದ್ದಾರೆ. ನಾನು ಹೋದಾಗ ಎನ್ಸಿಓಆರ್ನ ವಿಜ್ಞಾನಿಗಳು ಹಿಮಪದರಗಳ ಮೇಲಿನಿಂದ ಹತ್ತಾರು ಮೀಟರ್ ಉದ್ದದ ಹಿಮದ ದಿಂಡನ್ನು ಬಗೆದು ತೆಗೆದು ಭೂಮಿಯ ಸಾವಿರಾರು ವರ್ಷಗಳ ಹಿಂದಿನ ವಾತಾವರಣ ಹೇಗಿದ್ದಿರಬಹುದು ಎಂದು ಅಧ್ಯಯನ ಮಾಡುತ್ತಿದ್ದರು. ‘ಭಾರತೀಯ ಭೂ ಸರ್ವೇಕ್ಷಣ ಇಲಾಖೆ’ಯವರು ಅಂಟಾರ್ಟಿಕಾದ ಹಿಮನದಿಗಳ (ನೀರ್ಗಲ್ಲು) ಚಲನೆ ಹೇಗಿದೆ? ನೀರ್ಗಲ್ಲುಗಳು ಕರಗುವಲ್ಲಿ ಜಾಗತಿಕ ತಾಪಮಾನದ ಪ್ರಭಾವ ಎಷ್ಟು? ಅದರಿಂದ ಸಮುದ್ರದ ನೀರಿನ ಮಟ್ಟ ಏರುತ್ತಿದೆಯೆ? – ಎನ್ನುವ ಕುರಿತು ವಿಶ್ಲೇಷಣೆ ನಡೆಸುತ್ತಿದ್ದರು. ಸುಮಾರು 25 ಕೋಟಿ ವರ್ಷಗಳ ಹಿಂದೆ ಭಾರತವು ಅಂಟಾರ್ಟಿಕಾ ಖಂಡದೊಂದಿಗೆ ಜೋಡಿಸಿಕೊಂಡಿತ್ತಂತೆ. ವಿಜ್ಞಾನಿಗಳು ಅಲ್ಲಿನ ಹಾಗೂ ಭಾರತದ ಪಳಯುಳಿಕೆಗಳ ಸಾಮ್ಯದ ಕುರಿತು ಅಧ್ಯಯನ ಮಾಡುತ್ತಿದ್ದರು.
ಇಸ್ರೋದವರು ಅಲ್ಲಿ ಉಪಗ್ರಹಗಳ ವೀಕ್ಷಣೆ ಮಾಡುತ್ತಾರೆ. ಅಲ್ಲಿ ಅವರಿಗೆ ಡೇಟಾ ಡೌನ್ಲೋಡ್ ಮಾಡಲು ಕೂಡ ಆಗುತ್ತದೆ. ನಾನು ಅಲ್ಲಿಗೆ ಹೋದ ವೇಳೆ ‘ಭಾರತೀಯ ವನ್ಯಜೀವಿ ಸಂಸ್ಥೆ’ಯವರು ಅಲ್ಲಿನ ಪೆಂಗ್ವಿನ್ ಹಾಗೂ ಸೀಲ್(ನೀರು ನಾಯಿ)ಗಳ ಲೆಕ್ಕ ಹಾಕುತ್ತಿದ್ದರು. ಕೆಲವರು ಅಲ್ಲಿನ ಸ್ವಾಲ್ಪೆಟ್ರಲ್ ಸಕುರಾ ಪಕ್ಷಿಗಳಲ್ಲಿರುವ ಜೊಲ್ಲು ತೆಗೆದು ವೈರಾಣುಗಳ ಅಧ್ಯಯನ ಮಾಡುತ್ತಿದ್ದರು. ಭಾರತೀಯ ಹವಾಮಾನ ಇಲಾಖೆಯವರು ಓಜೋನ್ ಪದರದ ವಿಸ್ತಾರ ಕಡಮೆಯಾಗುತ್ತಿದೆಯೆ ಅಥವಾ ತೆಳು ಆಗುತ್ತಿದೆಯೆ ಎನ್ನುವ ಪರೀಕ್ಷೆ ನಡೆಸುತ್ತಿದ್ದರು. 15 ದಿನಗಳಿಗೊಮ್ಮೆ ಬೆಲೂನ್ ಹಾರಿಸುತ್ತಿದ್ದರು. ಅದರಲ್ಲಿ ಸೆನ್ಸರ್ ಅಳವಡಿಸಿದ್ದು ಬೆಲೂನ್ ಮೇಲೆ ಹೋದಂತೆ ಇಲ್ಲಿ ರೆಕಾರ್ಡಿಂಗ್ ಸಿಗುತ್ತದೆ. ಸದ್ಯಕ್ಕೆ ಹೆಚ್ಚಿನ ತೊಂದರೆ ಇಲ್ಲ; ಆದರೆ ಬೇಸಿಗೆ ಆರಂಭವಾಗುವಾಗ ಸೇರಿದಂತೆ ಕೆಲವು ಸಲ ತುಂಬಾ ಕಮ್ಮಿ ಆಗುತ್ತದೆ ಎಂದವರು ಹೇಳುತ್ತಾರೆ. ಕೆಲವು ವಿಜ್ಞಾನಿಗಳು ಭೂಮಿಯ ಇತಿಹಾಸ ಮತ್ತು ಅದರ ಚಲನೆಯ ಬಗ್ಗೆ ಅಧ್ಯಯನ ಮಾಡಿದರೆ, ಪಕ್ಷಿಗಳ ವಂಶಾಭಿವೃದ್ಧಿಯ ಬಗ್ಗೆ ಸಂಶೋಧನೆ ನಡೆಸುವವರು ಕೂಡ ನಮ್ಮೊಂದಿಗಿದ್ದರು. ದಾರಿಯಲ್ಲಿ ವಾಪಸು ಬರುವಾಗ ಸಮುದ್ರದಲ್ಲಿ ಆಗುವಂತಹ ಕೆಲವು ರಾಸಾಯನಿಕ ಬದಲಾವಣೆಗಳ ಬಗ್ಗೆ ಅಧ್ಯಯನ ಮಾಡುವ ಓಷಿಯನೋಗ್ರಫಿ ವಿಜ್ಞಾನಿಗಳನ್ನು ನೋಡಿದೆ. ಜಾಗತಿಕ ತಾಪಮಾನದಿಂದ ಧ್ರುವಪ್ರದೇಶದ ನೀರ್ಗಲ್ಲುಗಳು ಕರಗಿ ಸಮುದ್ರದ ನೀರಿನ ಮಟ್ಟ ಏರುವುದೂ ನಾವಿದ್ದ ಕಡೆ ಅಷ್ಟಾಗಿ ಕಾಣಲಿಲ್ಲ. ಆದರೆ ದಕ್ಷಿಣ ಅಮೆರಿಕಕ್ಕೆ ಸಮೀಪದ ಪಶ್ಚಿಮ ಅಂಟಾರ್ಟಿಕಾದಲ್ಲಿ ನೀರಿನ ಮಟ್ಟ ಏರುತ್ತಿದೆಯಂತೆ.
ಒಟ್ಟಿನಲ್ಲಿ ಅಲ್ಲಿ ಬೇರೆ ಬೇರೆ ದೇಶಗಳವರ ತರಹೇವಾರಿ ಶೋಧನಾ ಕೆಲಸ ನಡೆಯುತ್ತಿದೆ. ವೈದ್ಯರು ವಾರಕ್ಕೊಮ್ಮೆ ನಮ್ಮ ರಕ್ತದೊತ್ತಡ (ಬಿಪಿ), ತೂಕ, ಸೊಂಟದ ಸುತ್ತಳತೆ ಎಲ್ಲ ನೋಡಿ ಬದಲಾವಣೆಗಳನ್ನು ಗಮನಿಸುತ್ತಿದ್ದರು. ಆದರೆ ಅಲ್ಲಿ ನೆಗಡಿ, ಶೀತ, ಕೆಮ್ಮು, ಜ್ವರದಂತಹ ಯಾವುದೇ ಬಾಧೆ ಇಲ್ಲ. ನಮ್ಮೊಂದಿಗೆ ಓರ್ವ ಯೋಗಶಿಕ್ಷಕರಿದ್ದು ಅಲ್ಲಿ ಯೋಗ ಮಾಡಿದರೆ ಆಗುವ ಪರಿಣಾಮವನ್ನವರು ಗಮನಿಸುತ್ತಿದ್ದರು. ವೈರಾಣುಗಳು ಅಲ್ಲಿ ಬಹಳ ಕಡಮೆ; ಇದ್ದರೂ ಅವು ಶೀತದ ಬಾಧೆಯನ್ನು ತರುವಷ್ಟು ಶಕ್ತಿಶಾಲಿಯಾಗಿ ಇಲ್ಲ.
ಬೆಳಗಿದ ಅರೋರಾ
ನಾನು ಬರುವುದಕ್ಕೆ 4-5 ದಿನ ಇರುವಾಗ ಒಂದು ದಿನ ಮುಸ್ಸಂಜೆ ಹೊತ್ತಿಗೆ ಐದಾರು ಗಂಟೆ ಕತ್ತಲು ಆವರಿಸಿತು. ಒಂದೇ ಸಮನೆ ಆಕಾಶದಲ್ಲಿ ಭಾರಿ ದೊಡ್ಡ ಒಂದು ಬೆಳಕಿನ ಪುಂಜ ಮೇಲೆ ಮೇಲೆ ಹೋಗುವಂತೆ ಕಂಡಿತು. ಯಾವುದೋ ಸಿಡಿಮದ್ದು ಬಿಟ್ಟಂತೆ ಬಣ್ಣಗಳು ಮೇಲೆ ಮೇಲೆ ಹೋಗುತ್ತಿದ್ದವು. ನಮಗೆ ವಿಷಯ ಗೊತ್ತಿದ್ದುದರಿಂದ ನಾವು ಅದಕ್ಕಾಗಿಯೆ ಕಾಯುತ್ತಿದ್ದೆವು. ಅದಕ್ಕೆ ಅರೋರಾ ಅಥವಾ ಅರೋರಾ ಆಸ್ಟ್ರಾಲಿಸ್ ಎನ್ನುತ್ತಾರೆ. ಅದು ಧ್ರುವ ಪ್ರದೇಶದಲ್ಲಿ ಮಾತ್ರ ಕಾಣುವಂಥದ್ದು; ಚಳಿಗಾಲ ಶುರುವಾಗುವಾಗ ಎರಡೂ ಧ್ರುವಗಳಲ್ಲಿ ಕಾಣಿಸುತ್ತದೆ. ಅದನ್ನು ಸೋಲಾರ್ ವಿಂಡ್ ಎನ್ನುತ್ತಾರೆ; ಸೂರ್ಯ ಹೊರಸೂಸುವ ಕಣಗಳು ಭೂಮಿಯ ಸಮೀಪ ಬಂದಾಗ ವಾತಾವರಣದ ಗಾಳಿಯೊಂದಿಗೆ ಘರ್ಷಣೆಯುಂಟಾಗಿ ಹೊತ್ತಿಕೊಳ್ಳುವುದೇ ಅದಕ್ಕೆ ಕಾರಣ. ಅದು ನೋಡಲು ಸಿಕ್ಕಿದ್ದು ಒಂದು ಸುಯೋಗ ಎನ್ನಬೇಕು.
ಉತ್ತರಧ್ರುವ ಪ್ರದೇಶದ ಆರ್ಕ್ಟಿಕ್ನಲ್ಲಿ ‘ಹಿಮಾದ್ರಿ’ ಎನ್ನುವ ನಮ್ಮ ಕೇಂದ್ರವಿದೆ. ನಮ್ಮ ಓರ್ವ ವಿದ್ಯಾರ್ಥಿ ಈಗ ಅಲ್ಲಿಗೆ ಹೋಗುತ್ತಿದ್ದಾರೆ. ಅಲ್ಲೂ ನಮ್ಮ ಸಂಶೋಧನೆಯನ್ನು ಆರಂಭಿಸಲಾಗಿದೆ. ಭಾರತದ ಕೆಲಸಗಳು ಅಲ್ಲಿ ಹಲವು ವರ್ಷಗಳಿಂದಲೂ ನಡೆಯುತ್ತಿವೆ. ಮಣಿಪಾಲದಿಂದ ಉತ್ತರಧ್ರುವಕ್ಕೆ ಲಗ್ಗೆ ಇಡಬೇಕು; ಸಂಶೋಧನೆ ನಡೆಸಬೇಕೆಂದು ನಾನು ಮತ್ತು ಇನ್ನೋರ್ವ ವಿಜ್ಞಾನಿ (ನನ್ನ ವಿದ್ಯಾರ್ಥಿ) ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸುತ್ತಿದ್ದೇವೆ. ಒಪ್ಪಿಗೆ ದೊರೆತರೆ ನಮ್ಮ ಮುಂದಿನ ಪಯಣ ಆರ್ಕ್ಟಿಕ್ಗೆ.
(ನಿರೂಪಣೆ: ಎಚ್. ಮಂಜುನಾಥ ಭಟ್)