ಸ್ವದೇಶೀ, ಪರಿಸರಸ್ವಾಸ್ಥ್ಯ, ಸರಳಜೀವನ – ಈ ವಿಷಯಗಳ ಬಗೆಗೆ ಐವತ್ತರವತ್ತು ವರ್ಷದಿಂದ ಮಾತನಾಡಿದ್ದೇನೆ, ಬರೆದಿದ್ದೇನೆ. ಈಗಲೂ ಇವುಗಳ ಬಗೆಗೆ ನಾಲ್ಕು ಮಾತುಗಳನ್ನಾಡಬೇಕೆಂದು ಸೂಚಿಸಿದ್ದಾರೆ, ಇರಲಿ. ಈ ಅವಧಿಯಲ್ಲಿ ಉಸಿರು ಸಹಕರಿಸುವಷ್ಟು ಸಮಯದಲ್ಲಿ ನಾನು ಸ್ವದೇಶೀ, ಪರಿಸರ – ಇವುಗಳನ್ನು ಕುರಿತ ನಮ್ಮ ಚಿಂತನೆಯ ಹಿನ್ನೆಲೆಯ ತಾತ್ತ್ವಿಕತೆ ಏನು ಎಂದು ಸಂಕ್ಷಿಪ್ತವಾಗಿ ತಿಳಿಸಲು ಯತ್ನಿಸುತ್ತೇನೆ. ಆ ದರ್ಶನವನ್ನು ಗ್ರಹಿಸಿದರೆ ನಿಮ್ಮ ನಿಮ್ಮ ಚಿಂತನೆಯನ್ನು ನೀವೇ ರೂಪಿಸಿಕೊಳ್ಳಬಹುದು. ನಾನು ’ಇದು ಸ್ವದೇಶೀ’, ’ಇದು ಸ್ವದೇಶೀ ಅಲ್ಲ’ ಎಂದು ಪಟ್ಟಿಮಾಡುವುದು ಪ್ರಯೋಜನಕರವಾಗುವುದಿಲ್ಲ. ನಿನ್ನೆ ’ಸ್ವದೇಶೀ ಕಂಪೆನಿ’, ’ಸ್ವದೇಶೀ ಸರಕು’ ಎಂದು ಇದ್ದದ್ದು ಇವತ್ತು ವಿದೇಶೀ ಆಗಿಬಿಟ್ಟಿರುತ್ತದೆ. ೧೯೯೨-೯೩ರ ಪಟ್ಟಿ ಕೆಲವೇ ವರ್ಷಗಳಲ್ಲಿ ವ್ಯತ್ಯಾಸವಾಯ್ತು. ಆದ್ದರಿಂದ ನಾನು ಹೇಳಲು ಬಯಸುವುದು – ಸ್ವದೇಶೀ ಎಂಬುದು ಒಂದು ಜೀವನದೃಷ್ಟಿ ಎಂಬುದನ್ನು. ಅದು ಒಂದಷ್ಟು ಮನಸ್ಸಿನೊಳಕ್ಕೆ ಇಳಿದರೆ, ಬೇರೆ ಬೇರೆ ಸನ್ನಿವೇಶಗಳಲ್ಲಿ ಯಾವುದು ಆರೋಗ್ಯಕರ ವರ್ತನೆ ಎನ್ನುವುದು ಸಹಜವಾಗಿ ಅರ್ಥವಾಗುವುದು. ಹಿಂದಿನ ಸ್ವದೇಶೀ ಚಳವಳಿಗಳಲ್ಲಿ ಅಲ್ಪಪ್ರಮಾಣದ ಯಶಸ್ಸಷ್ಟೇ ಸಿಕ್ಕಿದುದಕ್ಕೆ ಕಾರಣ ಅವುಗಳ ಪ್ರವರ್ತಕರು ಬಾಹ್ಯಜೀವನದ ಮಟ್ಟದಲ್ಲಿ ಆo’s ಚಿಟಿಜ ಜoಟಿ’ಣs ಪ್ರಚಾರ ಮಾಡಿದುದು – ಚರಖಾದಲ್ಲಿ ನೂತದ್ದು ಸ್ವದೇಶೀ, ಹಳ್ಳಿಮೂಲೆಯಲ್ಲಿ ತಯಾರಾದದ್ದು ಸ್ವದೇಶೀ – ಎಂಬ ರೀತಿಯಲ್ಲಿ. ಅವೆಲ್ಲ ಉಪಯುಕ್ತವೇ. ಆದರೆ ಪರಿಮಿತ ಪ್ರಯೋಜನಕರವಾದವು. ಕಾರಣವೆಂದರೆ – ಯಾವುದೇ ಅಭಿಯಾನದಲ್ಲಿ ಹೆಚ್ಚಿನ ಸಫಲತೆ ಸಿಗಬೇಕಾದರೆ ಅದರ ತಾತ್ತ್ವಿಕ ಹಿನ್ನೆಲೆ ಮನಸ್ಸಿನೊಳಕ್ಕೆ, Sub-ಛಿoಟಿsಛಿious ಸ್ತರಕ್ಕೆ ಇಳಿಯುವುದು ಅವಶ್ಯ. ಅದರ ತಾತ್ತ್ವಿಕ ನೆಲೆಗಟ್ಟು ಜನರ ಅಂತರಂಗಕ್ಕೆ ಬೋಧವಾಗಬೇಕು. ಅದು ಆಗದಿದ್ದರೆ ಎಷ್ಟೇ ಸೂತ್ರರೂಪದ ಪ್ರಚಾರ ಮಾಡಿದರೂ ಪ್ರಯೋಜನ ಪರಿಮಿತವೇ ಆಗಿರುತ್ತದೆ.
ಸ್ವದೇಶೀ, ಪರಿಸರ ಸ್ವಾಸ್ಥ್ಯ, ಸರಳಜೀವನ ಮೊದಲಾದ ವಿಷಯಗಳು – ವಾಸ್ತವವಾಗಿ ಇವೆಲ್ಲ ಬೇರೆಬೇರೆ ಪ್ರತ್ಯೇಕ ವಿಷಯಗಳೇನಲ್ಲ. ವಿಶ್ಲೇಷಣೆಯ ಸೌಲಭ್ಯಕ್ಕೋಸ್ಕರ ಅವನ್ನು ಬೇರೆಬೇರೆಯಾಗಿ ಪರಿಶೀಲಿಸುತ್ತೇವಷ್ಟೆ. ಇವೆಲ್ಲದರ ಬುಡದಲ್ಲಿರುವ ಸಮಸ್ಯೆ ಒಂದೇ.
ಹಲವು ಕಾರಣಗಳಿಂದ ಮನುಷ್ಯ ಪ್ರಕೃತಿಯೊಡನೆ ತನಗಿದ್ದ ನಂಟನ್ನು ಕಳಚಿಕೊಂಡಿದ್ದಾನೆ. ಆ ಕೊಂಡಿಯನ್ನು ಮರಳಿ ಸ್ಥಾಪಿಸುವುದು ಹೇಗೆ ಎಂಬುದೇ ಇಂದಿನ ಪ್ರಮಖ ಸವಾಲಾಗಿದೆ. ಪ್ರಕೃತಿಯಿಂದ ದೂರಸರಿದು ನಾವು ತಪ ಮಾಡಿದ್ದೇವೆಂಬ ಅರಿವು ಇಂದು ಎಲ್ಲರಲ್ಲಿಯೂ ಮೂಡಿದೆ. ಆದರೆ ಆ ಅಂತರವನ್ನು ಕಡಮೆ ಮಾಡುವ ಧೃತಿಯೂ ಸ್ಥೈರ್ಯವೂ ಇಲ್ಲವಾಗಿದೆ.
ಹಿಂದೆ ತನ್ನ ಅಗತ್ಯಗಳೇನೆಂಬ ಬಗ್ಗೆ ಮನುಷ್ಯನಿಗೆ ಸ್ಪಷ್ಟ ಕಲ್ಪನೆ ಇತ್ತು. ಇಂದಾದರೋ ಮನುಷ್ಯನ ಅಗತ್ಯಗಳೇನೆಂಬುದನ್ನು ಹೊರಗಿನ ಶಕ್ತಿಗಳೂ ಪ್ರಭಾವಗಳೂ ನಿರ್ಣಯಿಸುತ್ತಿವೆ. ಅಷ್ಟೇ ಅಲ್ಲ, ಸುಖದ ಕಲ್ಪನೆ ಕೂಡ ವ್ಯತ್ಯಾಸವಾಗಿದೆ. ಯಾವ ಪ್ರಮಾಣದಲ್ಲಿ ಏನೇನೋ ಉತ್ಪನ್ನಗಳನ್ನು ಬಳಸುತ್ತಿದ್ದೇವೆಂಬುದೇ ಸುಖದ ಮಾನದಂಡವೆನಿಸಿದೆ. ಈ ಪ್ರವೃತ್ತಿಯಿಂದಾಗಿ ಮಾನಸಿಕ ಮತ್ತು ಬೌದ್ಧಿಕ ಶಿಥಿಲತೆಯೂ ಉಂಟಾಗಿದೆ.
ನಮ್ಮ ಸುತ್ತಲಿನ ಪರಿಸರವನ್ನು ನಮ್ಮ ಭೋಗದ ಸಾಧನವೆಂದು ಪರಿಗಣಿಸುತ್ತಿರುವುದೂ ಆ ಅಂತರಿಕ ಶಿಥಿಲತೆಯ ಸೂಚಕ. ಇದಕ್ಕೆ ಪರಿಹಾರವೆಂದರೆ – ನಷ್ಟವಾಗಿರುವ ಸಹಜ ದೃಷ್ಟಿಯನ್ನು ಮರಳಿ ಪಡೆಯುವುದು. ಪ್ರಕೃತಿಯನ್ನು ಗೌರವಿಸುವುದು ಎಂದರೆ ವಿಶ್ವಸೃಷ್ಟಿಯ ಶಾಶ್ವತ ನಿಯಮಗಳನ್ನು ಗೌರವಿಸುವುದು – ಎಂಬ ತಿಳಿವಳಿಕೆಯನ್ನು ನಾವು ರೂಢಿಸಿಕೊಳ್ಳಬೇಕಾಗಿದೆ. ವಿಜ್ಞಾನ-ತಂತ್ರಜ್ಞಾನಗಳ ಆವೇಶದ ಉರುಬಿನಲ್ಲಿ ಈ ಮೂಲತತ್ತ್ವ ಮಸಕಾಗಿದೆ. ಸೃಷ್ಟಿಯನ್ನು ಸಮಗ್ರವಾಗಿ ನೋಡುವುದಕ್ಕೆ ಬದಲಾಗಿ ಆಂಶಿಕವಾಗಿ ಚೂರುಚೂರಾಗಿ ನೋಡತೊಡಗಿದ್ದೇವೆ. ಈ ಅಸಮಗ್ರತೆ ಜೀವನದ ಎಲ್ಲ ಸ್ತರಗಳಲ್ಲಿಯೂ ಹಬ್ಬಿದೆ. ಒಂದೊಂದು ಚಟುವಟಿಕೆಯನ್ನೂ ಅದೇ ಪ್ರತ್ಯೇಕವೆಂಬಂತೆ ಪರಿಗಣಿಸುತ್ತಿದ್ದೇವೆ. ಪಾರಂಪರಿಕ ಜೀವನದೃಷ್ಟಿ ಇದರಿಂದ ಭಿನ್ನವಾದದ್ದು. ಒಂದೊಂದು ಕ್ರಿಯೆಯನ್ನೂ ಅದರ ವೈಶ್ವಿಕ ಹಿನ್ನೆಲೆಯಲ್ಲಿಯೇ ಅರ್ಥೈಸುವುದು ಪಾರಂಪರಿಕ ಚಿಂತನಕ್ರಮ.
ನೈಜ ಅಗತ್ಯಗಳ ಸ್ಥಾನವನ್ನು ಲಾಲಸೆ ಆಕ್ರಮಿಸಿದ್ದೇ ಇಂದಿನ ವಿಕೃತಿಗಳ ಮೂಲ. ಅದು ಎಷ್ಟು ದೂರ ಮುಂದುವರಿದಿದೆಯೆಂದರೆ – ಈಗ ನಾಗರಿಕತೆಗೇ, ಮನುಷ್ಯನ ಅಸ್ತಿತ್ವಕ್ಕೇ ಸವಾಲಾಗಿದೆ.
ಈ ಅಂಶವನ್ನು ನಾವಿಲ್ಲಿ ಒತ್ತಿ ಹೇಳಲು ಇನ್ನೊಂದು ಪ್ರಬಲ ಕಾರಣ ಇದೆ: ಇಂದು ಪರಿಸರಸ್ವಾಸ್ಥ್ಯದ ಪರವಾಗಿ ದನಿಯೆಬ್ಬಿಸುವವರಲ್ಲಿಯೂ ಹೆಚ್ಚು ಮಂದಿ ’ಜಗತ್ತು ಇರುವುದೇ ನಮ್ಮ ಬಳಕೆಗಾಗಿ’ ಎಂಬ ವಿಕೃತ ದೃಷ್ಟಿಯಿಂದ ಮುಕ್ತರಾಗಿಲ್ಲ. ಪ್ರಕೃತಿಧ್ವಂಸದಿಂದ ವ್ಯಕ್ತಿಸುಖಕ್ಕೆ ಬಾಧೆಯೊದಗುತ್ತದೆಂಬುದೇ ಅವರ ಚಿಂತೆಗೆ ಪ್ರೇರಣೆ ಒದಗಿಸಿದೆ; ಪ್ರಾಕೃತಿಕ ಸಂಪನ್ಮೂಲಗಳ ಶೋಷಣೆಯಿಂದ ಉತ್ಪಾದನೆಗೆ ಧಕ್ಕೆ ತಗಲುತ್ತದೆ, ನೀರಿನ ಮಾಲಿನ್ಯದಿಂದ ಕಾಯಿಲೆಗಳು ಹರಡುತ್ತವೆ, ರಾಸಾಯನಿಕಗಳಿಂದ ಭೂಮಿಯ ಉತ್ಪಾದಕತೆ ನಾಶವಾಗುತ್ತದೆ, ಅರಣ್ಯನಾಶದಿಂದ ಬರ ಉಂಟಾಗುತ್ತದೆ, ಭೂಮಿಯ ತಾಪಮಾನ ಹೆಚ್ಚಾಗುತ್ತದೆ, ಓಜೋನ್ ವಲಯದಲ್ಲಿ ರಂಧ್ರಗಳೇರ್ಪಡುತ್ತವೆ, ಇತ್ಯಾದಿ. ಈ ಸಂಗತಿಗಳೆಲ್ಲ ನಿಜವೇ. ಆದರೆ ಈ ಬೇರೆ ಬೇರೆ ಸಮಸ್ಯೆಗಳೆಲ್ಲದರ ಮೂಲದಲ್ಲಿರುವ ಪ್ರಮುಖ ಸಮಸ್ಯೆ ಜೀವನದೃಷ್ಟಿಯದು. ಆ ಮೂಲಸಮಸ್ಯೆಗೆ ಪರಿಹಾರ ಕಂಡುಕೊಂಡ ಹೊರತು ಈ ಯಾವುದೇ ಪ್ರತ್ಯೇಕ ಸಮಸ್ಯೆ ನೀಗುವ ಸಾಧ್ಯತೆಯಿಲ್ಲ.
ಈ ಸಮಸ್ಯೆಗಳನ್ನು ಬೇರೆ ಬೇರೆ ಸಮಸ್ಯೆಗಳೆಂದು ನೋಡುವುದೂ ಇಂದಿನ ಮನೋವಿಕೃತಿಯ ದ್ಯೋತಕವೇ. ಪ್ರಕೃತಿಯೆಂದರೆ ನೆಲ ನೀರು ಕಾಡು ಬೆಟ್ಟಗಳ ಒಟ್ಟಿಲು ಮಾತ್ರವಲ್ಲ. ಈ ಎಲ್ಲದರ ನಡುವಣ ಜಟಿಲ ಸಂಬಂಧಗಳಿಗೇ ಪರಿಸರ ಅಥವಾ ಪ್ರಕೃತಿ ಎಂಬ ಹೆಸರು ಸಲ್ಲುವುದು. ಭೂಮಿಯ ಪದರಗಳಲ್ಲಿ ನಿಬಿಡವಾಗಿರುವ ಸೂಕ್ಷ್ಮಜೀವಿಗಳ ಕ್ರಿಯೆಯನ್ನೂ ಜಟಿಲ ಅಂತಸ್ಸಂಬಂಧಗಳನ್ನೂ ಸಮಗ್ರವಾಗಿ ಅರಿತುಕೊಳ್ಳಲು ವಿಜ್ಞಾನಕ್ಕೆ ಎಂದಾದರೂ ಸಾಧ್ಯವಾದೀತೆಂಬ ಊಹೆಗೇ ಆಧಾರವಿಲ್ಲ.
ಈ ದಿಕ್ಕಿನಲ್ಲಿ ಯೋಚಿಸುವಾಗ ಹೊರಪಡುವ ಸಂಗತಿ- ಇಂದಿನ ಮುಖ್ಯ ಸಂಘರ್ಷವಿರುವುದು ಎರಡು ಭಿನ್ನ ಜೀವನದೃಷ್ಟಿಗಳ ನಡುವೆ ಎಂಬುದು: ಒಂದು ದೃಷ್ಟಿ ಪ್ರಕೃತಿಯೊಡನೆ ಸಾಮರಸ್ಯದಿಂದ ಬಾಳುವುದರಲ್ಲಿಯೇ ನಮ್ಮ ಹಿತವಿದೆ ಎಂಬುದು; ಇನ್ನೊಂದು ದೃಷ್ಟಿ ಪ್ರಕೃತಿಯ ಮೇಲೆ ಹೆಚ್ಚು ಹೆಚ್ಚು ಪ್ರಭುತ್ವ ಸ್ಥಾಪಿಸುತ್ತ ಹೋಗೋಣ ಎಂಬುದು.
ನಮ್ಮ ಜೀವನಕ್ಕೆ ಒಂದು ಸಹಜ ಲಯ ಇರುತ್ತದೆ. ನಮ್ಮ ಹೊರಗಿನ ಚಟುವಟಿಕೆಗಳು ಆ ಸಹಜ ಲಯಕ್ಕೆ ಹೊಂದುವಂತೆ ಇರಬೇಕಾಗುತ್ತದೆ. ಇದು ಒಂದು ನಿಸರ್ಗನಿಯಮ. ನಮ್ಮ ಸಹಜ ಜೀವನ ಲಯವನ್ನು ಗಣನೆಗೆ ತೆಗೆದುಕೊಳ್ಳದೆ ಹೊರಗಿನ ಚಟುವಟಿಕೆಗಳನ್ನೂ ವೇಗವನ್ನೂ ಹೆಚ್ಚಿಸುತ್ತ ಹೋದರೆ ಧಾವಂತವಾಗುತ್ತದೆ, ಅಶಾಂತಿ ಉಂಟಾಗುತ್ತದೆ.
ನಮ್ಮ ಸಹಜ ಲಯದ ವೇಗದಲ್ಲಿ ನಾವು ಚಲಿಸುತ್ತಿದ್ದರೆ ನಿಸರ್ಗದೊಡನೆ ಇತರರೊಡನೆ ಮತ್ತು ಜೀವರಾಶಿಗಳೊಡನೆ ನಮ್ಮ ಸಂಬಂಧ ಸಾಮರಸ್ಯದ್ದು ಆಗಿರುತ್ತದೆ. ಬಾಹ್ಯಜೀವನದ ವೇಗವು ಮಿತಿಮೀರಿದಾಗ ಈ ಸಾಮರಸ್ಯಕ್ಕೆ ಬಾಧೆಯೊದಗುತ್ತದೆ, ವಿರಸ ಉಂಟಾಗುತ್ತದೆ.
ನೆಮ್ಮದಿ ಮತ್ತು ನಿಧಾನಗತಿಗಳು ಕೂಡ ಜೀವನದ ಅನಿವಾರ್ಯ ಅಂಗಗಳೇ. ಜೀವನದ ತೀವ್ರಗತಿ ಪಾಶ್ಚಾತ್ಯ ದೇಶಗಳವರಿಗೆ ಸಹಜವಾಗಿರಬಹುದು. ನಮಗೆ ಹಾಗಿಲ್ಲ.
ಸ್ವದೇಶೀ ಕುರಿತಂತೆ ನಾವು ಮೊಟ್ಟಮೊದಲು ಗ್ರಹಿಸಬೇಕಾದ ಸಂಗತಿ ಎಂದರೆ – ಅದೊಂದು ವ್ಯಾಪಕ ಜೀವನದೃಷ್ಟಿಯೇ ಹೊರತು ಯಾವುದೋ ಕೆಲವು ಸೂತ್ರೀಕರಣಗಳ ಸಮೂಹವಲ್ಲವೆಂಬುದು.
ಭಾರತೀಯರಾದ ನಾವು ನಮ್ಮ ಪರಂಪರೆಗೂ ಸ್ವಭಾವಕ್ಕೂ ಅನುಗುಣವಾದ ವ್ಯವಸ್ಥೆಗಳನ್ನು ಯೋಜಿಸಿದರೆ ಮಾತ್ರ ಏಳ್ಗೆ ಹೊಂದಲಾಗುತ್ತದೆ. ಇದು ಇತಿಹಾಸಸಿದ್ಧವಾಗಿರುವ ಪಾಠ.
ಇರುವ ಸಂಪನ್ಮೂಲಗಳನ್ನು ದಕ್ಷವಾಗಿ ಬಳಸುವುದು, ಪ್ರತಿಯೊಬ್ಬ ವ್ಯಕ್ತಿ ತನಗೆ ಅಗತ್ಯವಾದಷ್ಟನ್ನು ಮಾತ್ರ ಬಳಸುವುದು – ಈ ದಿಕ್ಕಿನದು ಸ್ವದೇಶೀ ಚಿಂತನೆ.
ತನ್ನ ಅಗತ್ಯಕ್ಕೆ ಮೀರಿ ಬಳಸುವುದನ್ನು ಕಳ್ಳತನ ಎಂದೇ ನಮ್ಮ ಪರಂಪರೆ ಕರೆದಿದೆ. ಜನಗಳಲ್ಲಿ ನನಗೆ ಇದು ಬೇಕು, ಇನ್ನೊಂದು ಬೇಕು, ಮತ್ತೊಂದು ಬೇಕು ಎಂಬ ಅಪರಿಮಿತ ಆಕಾಂಕ್ಷೆಗಳನ್ನು ಪಾಶ್ಚಾತ್ಯ ನಾಗರಿಕತೆ ಸೃಷ್ಟಿಮಾಡಿದೆ. ಹೀಗೆ ಬಗೆಬಗೆಯ ಅನಗತ್ಯ ಆಕಾಂಕ್ಷೆಗಳಿಗೆ ನಾವು ದಾಸರಾಗಿಬಿಟ್ಟಿದ್ದೇವೆ. ಇದು ಮಾನಸಿಕ ಗುಲಾಮಿತನ. ಒಂದು ಪದಾರ್ಥ ಬೇಕು ಎಂಬ ಆತುರ ಉಂಟಾದರೆ ಅದನ್ನು ಹೇಗಾದರೂ ಪಡೆಯುವುದಕ್ಕಾಗಿ ಶಕ್ತಿಮೀರಿ ಪ್ರಯಾಸ ನಡೆಸುತ್ತೇವೆ. ಮಿತಿಮೀರಿದ ಬಯಕೆ ನಮ್ಮನ್ನು ದೀನರನ್ನಾಗಿ ಮಾಡಿಬಿಡುತ್ತದೆ. ಬೇಕಾದ್ದು ದೊರೆತ ಮೇಲೂ ಸುಖ ದೂರವೇ ಉಳಿಯುತ್ತದೆ.
ನಮ್ಮ ಚಿಂತನೆ ಆರಂಭವಾಗಬೇಕಾದ್ದು – ನಾನು ಏನೇನು ಶೇಖರಿಸಲಿ? ಎಂಬುದರಿಂದಲ್ಲ; ಪ್ರತಿಯಾಗಿ ನನಗೆ ಏನು ಬೇಕು, ಎಷ್ಟು ಬೇಕು? ಎಂಬುದರಿಂದ.
ಹಾಗೆ ಮಾಡದಿದ್ದರೆ, ಗಾಳಿ ಬೀಸಿದ ಕಡೆಗೆ ನಮ್ಮ ಜೀವನ ತರಗೆಲೆಯಂತೆ ಅಲೆಯುತ್ತಾ ಹೋಗುತ್ತದೆ.
ಕಪಿಲ್ದೇವ್ ಅಥವಾ ಏಕ್-ದೋ-ತೀನ್ ಮಾಧುರಿ ದೀಕ್ಷಿತ್ ದೂರದರ್ಶನದಲ್ಲಿ ಹೇಳಿದ ಮಾತ್ರಕ್ಕೆ ನಾವು ಸೋಪನ್ನೋ ಬೂಸ್ಟನ್ನೋ ಏಕೆ ಕೊಂಡುಕೊಳ್ಳಬೇಕು? ಅವುಗಳ ಗುಣಗಳನ್ನು ಶಿಫಾರಸು ಮಾಡುವುದಕ್ಕೆ ಮಾಧುರಿ ದೀಕ್ಷಿತ್ ಆಗಲಿ ಕಪಿಲ್ದೇವ್ ಆಗಲಿ ಕೆಮಿಕಲ್ ಇಂಜಿನಿಯರುಗಳೇನಲ್ಲವಲ್ಲ!
ನಮಗೆ ಸ್ವ-ನಿಯಂತ್ರಣ ಮತ್ತು ವಿವೇಕಪ್ರಜ್ಞೆ ಇರಬೇಕಾದದ್ದು ಜೀವನದ ಸುವ್ಯವಸ್ಥೆಯ ದೃಷ್ಟ್ಟಿಯಿಂದಲೇ ಅನಿವಾರ್ಯವಾಗಿದೆ. ನೆಪೆಲಿಯನ್ ಒಮ್ಮೆ ಹೇಳಿದ್ದ ‘The
only conquest which are permanent and leave no regrets, are our conquests over ourselves – ಎಂದು.
ಬೇರೆ ದೇಶಗಳವರು ಅವರ ದೃಷ್ಟಿಯ ಸ್ವದೇಶೀ ಆಚರಣೆಗಳನ್ನು ನಿರ್ಭಿಡೆಯಾಗಿ ನಡೆಸುತ್ತಾರೆ. ಅಮೆರಿಕದ ಹಲವಾರು ಪ್ರಾಂತಗಳಲ್ಲಿ buಥಿ ಟoಛಿಚಿಟ ಶಾಸನಗಳಿವೆ. ಆ ಪ್ರಾಂತಗಳಲ್ಲೆಲ್ಲ ಕಟ್ಟಡಕೆಲಸಗಳಿಗೆ ಸ್ಥಳೀಯವಾಗಿ ಅಮೆರಿಕದೊಳಗಡೆ ಉತ್ಪಾದನೆಯಾದ ಉಕ್ಕನ್ನೇ ಬಳಸಬೇಕೆಂಬ ಕಡ್ಡಾಯ ನಿಯಮವಿದೆ.
ನಾವು ಮಾತ್ರ ಪಾಶ್ಚಾತ್ಯ ದೇಶಗಳ ಎಲ್ಲ ದಬಾವಣೆಗಳಿಗೂ ಹೂಂಗುಟ್ಟುತ್ತಿದ್ದೇವೆ.
ಸ್ವಾಭಿಮಾನವನ್ನು ಉಳಿಸಿಕೊಂಡ ದೇಶ ಮಾತ್ರ ಈ ಜಗತ್ತಿನಲ್ಲಿ ತೇರ್ಗಡೆಯಾಗಬಲ್ಲದು.
ಜರ್ಮನಿಯ ಕ್ರುಪ್ ಎಸ್ಟಾಟ್ ಕಾರ್ಖಾನೆ ಜಗತ್ಪ್ರಸಿದ್ಧವಾದ್ದು. ಹಿಂದೆ ಅದು ತೋಫ, ಯುದ್ಧ ಸಾಮಗ್ರಿಗಳ ತಯಾರಿಕೆಯಲ್ಲಿ ಅಗ್ರಪಂಕ್ತಿಯಲ್ಲಿತ್ತು. ಆ ಸಂಸ್ಥೆಯ ಸ್ಥಾಪಕ ಫ್ರೆಡರಿಕ್ ಕ್ರುಪ್ನ ಮಗ ಆಲ್ಫ್ರೆಡ್ ಕ್ರುಪ್. ಇವನು ೧೮೫೫ರಲ್ಲಿ ಮೊಟ್ಟಮೊದಲಿಗೆ ತಾನು ತಯಾರಿಸಿದ ಯುದ್ಧತೋಫಗಳ ಪ್ರದರ್ಶನ ನಡೆಸಿದಾಗ ಯೂರೋಪಿನ ತಂತ್ರಜ್ಞಾನಿಗಳೆಲ್ಲ ಬೆರಗಾಗಿದ್ದರು. ಅಂಥ ತೋಫಗಳಿಗೆ ಇಡೀ ಯುರೋಪಿನಲ್ಲಿ ಅಪಾರ ಬೇಡಿಕೆ ಇದ್ದಿತು. ಅದಕ್ಕಾಗಿ ಮೊದಮೊದಲು ಬೇಡಿಕೆ ಕಳಿಸಿದವನು, ಮೂರನೇ ನೆಪೋಲಿಯನ್.
ಆಲ್ಫ್ರೆಡ್ ಆ ದಿನಗಳಲ್ಲಿ ತುಂಬಾ ಹಣದ ಮುಗ್ಗಟ್ಟಿನಲ್ಲಿದ್ದ. ಆಗ ಫ್ರಾನ್ಸ್-ಜರ್ಮನಿಗಳ ಪರಸ್ಪರ ಸಂಬಂಧ ಚೆನ್ನಾಗಿರಲಿಲ್ಲ. ಆಲ್ಫ್ರೆಡ್ ಯಾವುದೇ ಆರ್ಡರನ್ನು ನಿರಾಕರಿಸುವ ಸ್ಥಿತಿಯಲ್ಲಿ ಇರಲಿಲ್ಲ. ಆದರೆ ಅವನಿಗೆ ತಾನು ಮಾರುವ ತೋಫುಗಳು ತನ್ನ ದೇಶದ ಮೇಲೆಯೇ ಪ್ರಯೋಗವಾಗಬಹುದೆಂಬ ಅನುಮಾನ ಬಂದಿತು. ಆದ್ದರಿಂದ ಅವನು ಕೂಡಲೇ ಫ್ರಾನ್ಸಿನ ದೊರೆಗೆ ಪತ್ರ ಬರೆದ:
ನಾನೊಬ್ಬ ವ್ಯಾಪಾರಿ ಎಂಬುದೇನೋ ನಿಜ. ಆದರೆ ಅದಕ್ಕೂ ಮೊದಲು ನಾನೊಬ್ಬ ಜರ್ಮನ್. ಆದ್ದರಿಂದ ನಿಮ್ಮ ಬೇಡಿಕೆಯನ್ನು ನಾನು ಪರೈಸಲಾರೆ, ಕ್ಷಮಿಸಿ ಅಂತ.
ಸ್ವದೇಶೀ ದೃಷ್ಟಿ ಇದ್ದವರು ಯೋಚಿಸಬೇಕಾದ್ದು ಹೀಗೆ.
ಅಮೆರಿಕದ ಕಂಪೆನಿಯೊಂದು ಈಗ್ಗೆ ಐವತ್ತು ವರ್ಷ ಹಿಂದೆ ಜಪಾನಿನಲ್ಲಿ ತನ್ನ ಕಾರ್ಯ ಪ್ರಾರಂಭಿಸಿತ್ತು. ಆ ಕಾರ್ಯಾಲಯದಲ್ಲಿ ಕೆಲಸಕ್ಕಾಗಿ ಜಪಾನೀಯರನ್ನೇ ನೇಮಿಸಿಕೊಂಡಿತ್ತು. ಅಮೆರಿಕದಲ್ಲಿ ಸಾಮಾನ್ಯವಾಗಿ ವಾರದಲ್ಲಿ ಐದೇ ದಿವಸ ಕೆಲಸ ಮಾಡುವ ರೂಢಿ ಇದೆ – ಅನ್ನೋದು ನಿಮಗೆಲ್ಲ ಗೊತ್ತು. ಅಮೆರಿಕನ್ ಕಂಪೆನಿ ಜಪಾನಿನಲ್ಲೂ ಇದೇ ನಿಯಮ ಜಾರಿ ಮಾಡಲು ಬಯಸಿತು. ಆದರೆ ಇದಕ್ಕೆ ಜಪಾನೀ ಕಾರ್ಮಿಕರು ವಿರೋಧ ಮಾಡಿದರು: ನಮಗೆ ವಾರದಲ್ಲಿ ಒಂದೇ ದಿನ ರಜೆ ಸಾಕು. ಹೆಚ್ಚು ರಜೆ ಕೊಟ್ಟರೆ ನಾವು ಸೋಮಾರಿಗಳಾಗಬಹುದು. ಇದಕ್ಕಿಂತ ಹೆಚ್ಚಿನ ಹಾನಿಯೆಂದರೆ ರಜೆಯಲ್ಲಿ ನಮಗೆ ವಿಲಾಸಿ ಜೀವನ ಅಭ್ಯಾಸವಾಗಿ ಬಿಡಬಹುದು. ಹೀಗೆ ಖರ್ಚು ಹೆಚ್ಚಬಹುದು. ನಮ್ಮನ್ನು ಆಲಸಿಗಳನ್ನಾಗಿ ಮಾಡುವ ಮತ್ತು ನಮ್ಮ ಖರ್ಚನ್ನು ಅನಾವಶ್ಯಕ ಹೆಚ್ಚಿಸುವ ರಜೆ ನಮಗೆ ಬೇಡ.
ಜನರಲ್ಲಿ ಈ ದೃಷ್ಟಿ ಇದ್ದದ್ದರಿಂದಲೇ ಜಪಾನ್ ದೇಶ ಏಳ್ಗೆಯಾದದ್ದು.
ಇಂಥ ಮನೋಧರ್ಮವೇ ಸ್ವದೇಶೀಪ್ರಸ್ಥಾನದ ಹೃದಯ.
ನಾವು ಯಾವುದೇ ವೃತ್ತ್ತಿಯಲ್ಲಿರಲಿ – ರೈತ, ಕಮ್ಮಾರ, ಬಡಗಿ, ಮೋಚಿ, ಏನೇ ಅಗಿರಲಿ – ಪ್ರಾಮಾಣಿಕ ಕಾಯಕ ನಡೆಸಲೇಬೇಕು. ಆದರೆ ಇದರಿಂದ ದೊರೆಯುವ ಸಮಾಧಾನ ಮತ್ತು ಆನಂದದ ಮೂಲ ಇರುವುದು ಆ ಗಳಿಕೆಯಲ್ಲಿ ಮಾತ್ರ ಅಲ್ಲ, ಅದರಲ್ಲಿ ಸಂಗತವಾಗುವ ಮಾನವಸಂಬಂಧ ವರ್ಧನೆಯಲ್ಲಿ. ಆನಂದ ಉಂಟಾಗುವುದು ಜೀವನವನ್ನು ಹಂಚಿಕೊಳ್ಳುವುದರಿಂದಲೇ ಹೊರತು ರೂಪಾಯಿಗಳ ಮತ್ತು ವಸ್ತುಗಳ ಶೇಖರಣೆಯಿಂದ ಅಲ್ಲ.
ಇದು ಸ್ವದೇಶೀ ದರ್ಶನ: ನಿಜವಾದ ತಾತ್ತ್ವಿಕ ಪ್ರಜ್ಞೆಯ ಲಕ್ಷಣವೆಂದರೆ- ಒಬ್ಬ ವ್ಯಕ್ತಿ ಈಗಿನ ನಿಕಟವರ್ತಿಗಳೊಡನೆ ಮಾತ್ರವಲ್ಲದೆ ತನ್ನ ಪರ್ವಿಕರೊಡನೆ, ತನ್ನ ಸುತ್ತಲ ಸಮಾಜದೊಡನೆ ನಿರಂತರವೂ ಆತ್ಮೀಯವೂ ಆದ ಸಂಬಂಧವನ್ನು ಹೊಂದಿರುತ್ತಾನೆ. ಹೀಗೆ ಸದಾ ಭೂತ ವರ್ತಮಾನ ಭವಿಷ್ಯ ಈ ಮೂರು ಕಾಲಗಳಲ್ಲೂ ನಮ್ಮ ಜನರ ಜೀವನ ನಡೆಯುತ್ತಿರುತ್ತದೆ. ಒಬೊಬ್ಬ ರೈತನೂ ಒಕ್ಕಲುತನ ಮಾಡುವುದು ಅದರಿಂದ ಬರುವ ಫಸಲಿಗೋಸ್ಕರ ಮಾತ್ರ ಅಲ್ಲ. ಅವನ ಪಾಲಿಗೆ ಅವನ ಗೇಣುದ್ದದ ಅಥವಾ ಮಾರುದ್ದದ ಜಮೀನು ಸೃಷ್ಟಿಯೊಡನೆ, ಸಮಾಜದೊಡನೆ, ತನ್ನ ಪರ್ವಿಕರೊಡನೆ ಮತ್ತು ದೇವತೆಗಳೊಡನೆ ತನಗಿರುವ ಗಾಢವಾದ ಸಂಬಂಧದ ಪ್ರತೀಕ. ಭೂಮಿಯ ಮೂಲಕ ರೈತ ಪಜಿಸುವುದು ಈ ಚಿರಂತನ ಸಂಬಂಧಗಳನ್ನು. ಇದೇ ಸ್ವದೇಶೀ ದೃಷ್ಟಿ. ಪ್ರಚಲಿತ ಪಾಶ್ಚಾತ್ಯಜನಿತ ವ್ಯವಸ್ಥೆಯಲ್ಲಿ ಇಷ್ಟು ಖರ್ಚಿಗೆ ಇಷ್ಟು ಫಸಲು ಬಂದಿತು ಎಂಬ ಲೆಕ್ಕಾಚಾರ ಮಾತ್ರ ಇರುತ್ತದೆ. ಈ ಸಂಕುಚಿತ ದೃಷ್ಟಿಯಿಂದಾಗಿ ಮಾನವನು ತನ್ನ ನಿಜವಾದ ವ್ಯಕ್ತಿತ್ವವನ್ನೇ ಕಳೆದುಕೊಳ್ಳುತ್ತಿದ್ದಾನೆ.
ಬದಲಾವಣೆಗಳನ್ನಾಗಲಿ ಸಮೃದ್ಧಿಯನ್ನಾಗಲಿ ಸ್ವದೇಶೀ ದರ್ಶನ ತಿರಸ್ಕರಿಸುವುದಿಲ್ಲ. ಆದರೆ ಯಾವುದೇ ಯೋಜನೆಗಳು ಈ ದೇಶದ ಸಹಜ ಸಂಸ್ಕೃತಿಗೆ ಪರಕವಾಗಿ ಇರಬೇಕು ಎನ್ನುವುದು ಸ್ವದೇಶೀ ದೃಷ್ಟಿಯ ಆಗ್ರಹ.
ಸಂಸ್ಕೃತಿ, ಸಾತ್ತ್ವಿಕ ಜೀವನ ವಿಧಾನ – ಮೊದಲಾದ ಅಂಶಗಳನ್ನು ನಾವು ಮೇಲಿಂದ ಮೇಲೆ ಒತ್ತಿಹೇಳುತ್ತೇವೆ. ಇದಕ್ಕೆ ಪ್ರಬಲ ಕಾರಣವಿದೆ. ಇಂದಿನ ಹಲವಾರು ಆರ್ಥಿಕ-ಸಾಮಾಜಿಕ ವಿಕೃತಿಗಳ ಮೂಲದಲ್ಲಿರುವುದು ಸಾಂಸ್ಕೃತಿಕ ಪ್ರಜ್ಞೆಯ ಅಭಾವವೇ. ಇಂದಿನ ನಮ್ಮ ಎಲ್ಲಕ್ಕಿಂತ ಹೆಚ್ಚಿನ ದೌರ್ಬಲ್ಯವೆಂದರೆ, – ನಮ್ಮೆಲ್ಲ ಚಿಂತನೆಯೂ ಪಾಶ್ಚಾತ್ಯಾಭಿಮುಖವಾಗಿರುವುದು.
ತಂತ್ರಜ್ಞಾನ ಎಂಬುದು – ವಿಜ್ಞಾನದಂತೆ – ಪಕ್ಷಪಾತಾತೀತವಾಗಿದ್ದ ಕಾಲ ಹಿಂದೆ ಇತ್ತೋ ಏನೋ. ಇಂದಂತೂ ವಿಜ್ಞಾನ-ತಂತ್ರಜ್ಞಾನಗಳು ಶೋಷಣೆಯ ಸಾಧನಗಳಾಗಿವೆ, ಅಪಾರ ಲಾಭಗಳಿಸುವ ಸಾಧನಗಳಷ್ಟೇ ಆಗಿವೆ.
ಪಾಶ್ಚಾತ್ಯ ದೇಶಗಳ ಸ್ಥಿತಿಯನ್ನು ಪ್ರಗತಿಯ ಪರಾಕಾಷ್ಠೆ ಎಂದು ಭಾವಿಸಿದುದಕ್ಕೆ ಬಡರಾಷ್ಟ್ರಗಳು ತೆರುತ್ತಿರುವ ಬೆಲೆ ಹೆಚ್ಚು ಹೆಚ್ಚು ದುಬಾರಿಯಗುತ್ತಿದೆ. ಎಲ್ಲ ಸಾಮಗ್ರಿಗಳ ಉತ್ಪಾದನೆಯೂ ಬಳಕೆಯೂ ನಿರಂತರ ಹೆಚ್ಚುತ್ತಲೇ ಹೋಗಬೇಕು – ಎಂಬ ಪಾಶ್ಚಾತ್ಯ ಪ್ರವರ್ತಿತ ಪ್ರಗತಿಸೂತ್ರವು ಅತಾರ್ಕಿಕ. ಆ ಸೂತ್ರವೇ ಮುಂದುವರಿದಲ್ಲಿ ಇನ್ನು ನೂರು ವರ್ಷಗಳಲ್ಲಿ ಜಗತ್ತಿನ ಪ್ರತಿಯೊಬ್ಬ ವ್ಯಕ್ತಿಯೂ ಈಗ ಬಳಸುತ್ತಿರುವುದರ ೧೬ಪಟ್ಟು ಹೆಚ್ಚಾಗಿ ಬಳಸುತ್ತಾನೆ. ಇಷ್ಟೊಂದು ಅಧಿಕ ಭಾರವನ್ನು ಭೂಮಿ ತಡೆಯಲಾರದು ಎಂಬುದು ಒತ್ತಟ್ಟಿಗಿರಲಿ. ಹಾಗೆ ಬಳಕೆಯನ್ನು ಹೆಚ್ಚಿಸಿಕೊಳ್ಳುವುದರಿಂದ ದೊರೆಯುವ ಪರುಷಾರ್ಥವಾದರೂ ಏನು?
ಪಾಶ್ಚಾತ್ಯಮೂಲದ ತಂತ್ರಜ್ಞಾನಾಧಾರಿತ ’ಆಧನಿಕತೆ’ಯು ಉಧ್ವಸ್ತಗೊಳಿಸುತ್ತಿರುವುದು ಉಳಿದ ಜಗತ್ತಿನ ಬಾಹ್ಯ ಹಾಗೂ ಬೌದ್ಧಿಕ ಸಂಪನ್ಮೂಲಗಳನ್ನು ಮಾತ್ರವಲ್ಲ; ವಿಕೇಂದ್ರೀಕೃತ ವ್ಯವಸ್ಥೆಗಳು, ಸಮಾಜದಲ್ಲಿ ಒಬ್ಬರಿಗೊಬ್ಬರು ಪರಕವಾಗಿ ವರ್ತಿಸುವುದು, ತ್ಯಾಗಮನೋಭಾವ ಮೊದಲಾದ ಸಮಾಜಸ್ವಾಸ್ಥ್ಯಪೋಷಕ ಏರ್ಪಾಡುಗಳನ್ನು ನಾಶಪಡಿಸಲಾಗುತ್ತಿದೆ. ಸಾಮುದಾಯಿಕ ಜೀವನದ ಕಲ್ಪನೆಯೇ ಮರೆಯಾಗಿ ಒಬ್ಬೊಬ್ಬ ವ್ಯಕ್ತಿಯೇ ಸೃಷ್ಟಿಯ ಪ್ರತ್ಯೇಕ ಘಟಕವೆಂಬ ಕಲ್ಪನೆ ಬಲಿಯುತ್ತಲಿದೆ. ಸಹಕಾರದ ಸ್ಥಾನವನ್ನು ಸ್ಪರ್ಧೆ ಆಕ್ರಮಿಸುತ್ತಿದೆ.
ಈ ಪ್ರವೃತ್ತಿಯನ್ನು ಒಂದು ಘೋರ ವಿಕೃತಿ ಎಂದು ಪರಿಗಣಿಸುವುದಕ್ಕೆ ಬದಲಾಗಿ ಇದನ್ನು ಪಾಶ್ಚಾತ್ಯ ಪ್ರವರ್ತಿತ ’ಆಧುನಿಕತೆ’ಗೆ ಸಮರ್ಥನೆಯನ್ನಾಗಿ ಬಳಸಲಾಗುತ್ತಿದೆ. ಜೀವನಕ್ಕೆ ದೇಶ-ಕಾಲ-ಸನ್ನಿವೇಶ ಪರಿಮಿತಿಗಳೇ ಇಲ್ಲ – ಎಂಬ ಭ್ರಮೆಯನ್ನು ಮೂಡಿಸಲಾಗಿದೆ. ಹೀಗೆ ಇಂದಿನ ಜಗದ್ವ್ಯವಹಾರವೆಲ್ಲ ಅರ್ಧಸತ್ಯಗಳ ಆಧಾರದ ಮೇಲೆಯೇ ಮುಂದುವರಿದಿದೆ.
ವಸ್ತುಸ್ಥಿತಿಯೆಂದರೆ – ಕಳೆದ ಹಲವು ನೂರುವರ್ಷಗಳಲ್ಲಿ ಪ್ರಚಲಿತಗೊಂಡಿರುವುದು ನಿಜವಾದ ಅರ್ಥದ ನಾಗರಿಕತೆಯ ಹಿನ್ನಡೆಯೇ. ಐರೋಪ್ಯರ ಸಾಮ್ರಾಜ್ಯವಿಸ್ತರಣೆ, ವಸಾಹತೀಕರಣ, ಅದಕ್ಕೆ ಅನುಗುಣವಾದ ಬಂಡವಾಳಶಾಹಿ ಅರ್ಥವ್ಯವಸ್ಥೆ, ವಾಣಿಜ್ಯದ ಜಾಗತೀಕರಣ – ಇವೆಲ್ಲ ಜೂಡಿಯೋ-ಕ್ರಿಶ್ಚಿಯನ್ ವಾರಸಿಕೆಯ ಕೂಸುಗಳೇ.
ಈ ವಿಕೃತಿಯ ಪ್ರವಾಹದ ಸೆಳೆತದಿಂದ ಮುಕ್ತಗೊಳಿಸುವುದನ್ನು ಮಾತ್ರ ಪ್ರಗತಿಯೆಂದೋ ಅಭಿವೃದ್ಧಿಯೆಂದೋ ಏಳ್ಗೆಯೆಂದೋ ಕರೆಯುವುದು ಸಮಂಜಸವಾಗುತ್ತದೆ. ಈಗಿನ ಜಗತ್ಸನ್ನಿವೇಶದಲ್ಲಿ ’ಪ್ರಗತಿ’ಗೆ ನೀಡಬಹುದಾದ ಪ್ರಾಥಮಿಕ ವಿವರಣೆಯೆಂದರೆ ವಿಕೃತಿಗಳನ್ನು ನಿವಾರಿಸಿಕೊಂಡು ಸಹಜ ಸ್ವಾಸ್ಥ್ಯವನ್ನು ಮತ್ತೆ ಪಡೆದುಕೊಳ್ಳುವುದು (’ಡೆವಲಪ್’ ಎಂಬ ಶಬ್ದದ ಯೌಗಿಕಾರ್ಥವೇ ’ಅನಾವರಣ’ ಎಂದು.) ಇದು ಸಾಧ್ಯವಾಗಬೇಕಾದರೆ ಕೇವಲ ಆರ್ಥಿಕ ಪ್ರಾಕಾರದಲ್ಲಿ ಯೋಚಿಸದೆ ಸಮಗ್ರ ದೃಷ್ಟಿಯನ್ನು ತಳೆಯಬೇಕಾಗುತ್ತದೆ. ಈ ದೃಷ್ಟಿಯು ಲಭ್ಯವಿರುವುದು ಪಾಶ್ಚಾತ್ಯೇತರ ಪಾರಂಪರಿಕ ತಾತ್ತ್ವಿಕ ವಾರಸಿಕೆಯಲ್ಲಿ ಮಾತ್ರ. ಈ ವಿಶಾಲ ಜೀವನದರ್ಶನವನ್ನು ಅಧಿಕರಿಸಿದ ಹೊರತು ಆರ್ಥಿಕ ವಿಷಯಗಳಿಗಾಗಲಿ ಪರಿಸರ ವಿನಾಶಕ್ಕಾಗಲಿ ನೀಡಲಾಗುವ ಪರಿಹಾರಗಳು ಅಲ್ಪವ್ಯಾಪ್ತಿಯದಷ್ಟೆ ಆಗುತ್ತವೆ.
ಈಗ ರಾಷ್ಟ್ರೀಯ ಸರ್ಕಾರಗಳಿಗೆ ತಮ್ಮ ಧೋರಣೆಗಳ ಮೇಲೆ ಯಾವ ಹತೋಟಿಯೂ ಉಳಿದಿಲ್ಲ. ಆ ಧೋರಣೆಗಳನ್ನು ನಿರ್ದೇಶಿಸುತ್ತಿರುವವು ರಾಷ್ಟ್ರೋತ್ತರ ಬಾಹ್ಯ ಶಕ್ತಿಗಳು. ದೀರ್ಘಕಾಲದಿಂದ ರೂಢವಾಗಿದ್ದ ರಾಜಕೀಯ-ಆರ್ಥಿಕ ವ್ಯವಸ್ಥೆಗಳೂ ಕಟ್ಟಳೆಗಳೂ ಸಮಯಾಚಾರಗಳೂ ಈಗ ಧೂಳೀಪಟವಾಗಿವೆ. ಜಾಗತಿಕ ಹಣಕಾಸು ಸಂಸ್ಥೆಗಳ ಪ್ರತಿನಿಧಿಗಳೂ ದೇಶೀಯ ನೇತಾರರೂ ಕೂಡಿಕೊಂಡು ಹೊಸದೊಂದು ಅಧಿಕಾರಸ್ಥಾನ ಜಗತ್ತಿನಲ್ಲಿ ಈಗ ಅಸ್ತಿತ್ತ್ವಕ್ಕೆ ಬಂದಿದೆ.
ಭಾರತದ ವಾಸ್ತವ ಸನ್ನಿವೇಶವನ್ನು ಆಧಾರವಾಗಿರಿಸಿಕೊಂಡು ಸುಧಾರಣೆಗಳನ್ನು ಯೋಚಿಸಬೇಕು – ಎಂದು ಯಾರಿಗೂ ಅನ್ನಿಸುತ್ತಲೇ ಇಲ್ಲ. ಈಗಿನ ಆರ್ಥಿಕ ಬೆಳವಣಿಗೆಗಳಿಂದ ಆಭಾಸಗಳನ್ನು ಗಮನಿಸುವ ’ತಜ್ಞ’ರೂ ಇವುಗಳ ಬಗ್ಗೆ ಸ್ಪಷ್ಟವಾಗಿ ಮಾತನಾಡಿದಲ್ಲಿ ನಮ್ಮನ್ನೂ ಸುಧಾರಣಾವಿರೋಧಿಗಳೆಂದಾರು ಎಂದು ಗಾಬರಿಗೊಂಡು ಮೌನಭಾವ ತಳೆಯುತ್ತಾರೆ.
ಶತಮಾನಗಳುದ್ದಕ್ಕೂ ವಿದೇಶೀ ಪ್ರಭುತ್ವಗಳಿಗೆ ಒಳಪಟ್ಟಿದ್ದುದರ ಕಾರಣದಿಂದಲೊ ಏನೊ- ಗುಲಾಮೀ ಬುದ್ಧಿವೃತ್ತಿಯನ್ನು ಕೊಡವಿಕೊಳ್ಳಲು ನಮಗೆ ಇಷ್ಟವಾಗುತ್ತಲೇ ಇಲ್ಲ! ಆಂಗ್ಲರು ನಿರ್ಗಮಿಸಿ ಅರವತ್ತು ವರ್ಷ ದಾಟಿದ್ದರೂ ಮಾನಸಿಕ ದಾಸ್ಯ ಮುಂದುವರಿದಿದೆ. ನ್ಯಾಯವಾಗಿ ಅಮೆರಿಕಕ್ಕೆ ಸವಾಲಾಗುವ ಶಕ್ತಿಯನ್ನು ಹೊಂದಿದ್ದರೂ ನಮ್ಮ ಶಕ್ತಿಯ ಬಗ್ಗೆ ನಮಗೇ ವಿಶ್ವಾಸವಿಲ್ಲ.
ಹಲವರು ಭಾರತೀಯ ಉದ್ಯಮಪತಿಗಳೇ ಬಹುರಾಷ್ಟ್ರೀಯ ಕಂಪೆನಿಗಳ ಪರವಾಗಿ ಮಾತನಾಡುವುದು ಏಕೆ? ಇದು ಸೋಲನ್ನು ತಾವಾಗಿ ಒಪ್ಪಿಕೊಂಡಂತೆಯೇ ಆಗುತ್ತದೆ, ಅಲ್ಲವೇ? ಇದು ಆತ್ಮವಿಶ್ವಾಸದ ಕೊರತೆಯನ್ನೂ ಕೀಳರಿಮೆಯನ್ನೂ ಸೂಚಿಸುತ್ತದೆ. ದೇಶದ ಹಿತದ ದೃಷ್ಟಿಯಿಂದ ಈ ಪ್ರವೃತ್ತಿ ಆರೋಗ್ಯಕರವಲ್ಲ. ವಿದೇಶೀ ಕಂಪೆನಿಗಳ ನಂಟಸ್ತಿಕೆಯಿಂದ ಬೆರಳೆಣಿಕೆಯಷ್ಟು ಸಂಸ್ಥೆಗಳಿಗೆ ಲಾಭವಾದರೂ ಅಧಿಕ ಸಂಖ್ಯೆಯ ದೇಶೀಯ ಕಂಪೆನಿಗಳು ಕುಸಿಯುವುದು ನಿಶ್ಚಿತ. ಸಮಗ್ರ ದೇಶದ ಕ್ಷೇಮದ ಹೊಣೆ ಹೊತ್ತ ಸರ್ಕಾರ ಇದಕ್ಕೆ ಅವಕಾಶ ನೀಡುವುದು ಅಕ್ಷಮ್ಯ.
ವಿಜ್ಞಾನ, ತಂತ್ರಜ್ಞಾನ, ಗಣಕಯಂತ್ರ ಆವಿಷ್ಕರಣ ಮೊದಲಾದ ಹಲವು ಕ್ಷೇತ್ರಗಳಲ್ಲಿ ಇತ್ತೀಚೆಗೆ ಭಾರತೀಯರ ಸಾಧನೆ ಜಗತ್ತನ್ನೆ ಬೆರಗುಗೊಳಿಸಿದೆ. ಇದು ಸಂತೋಷವೇ. ಆದರೆ, ನಮ್ಮ ವಿಜ್ಞಾನಿತಂಡಗಳಿಗೆ ಈ ಪ್ರತಿಭಾಪ್ರದರ್ಶನಕ್ಕೆ ಅವಕಾಶವಾದದ್ದು ವಿದೇಶೀಯರು ತಿರಸ್ಕರಿಸಿ ಅಸಡ್ಡೆ ತೋರಿ ಕಿರುಕುಳ ಕೊಟ್ಟಾದ ಮೇಲೆಯೇ. ಅಲ್ಲಿಯವರೆಗೆ ಕಾಯುವ ಬದಲು ಮೊದಲೇ ಈ ಅವಕಾಶಗಳನ್ನು ನಮ್ಮ ವಿಜ್ಞಾನಿಗಳಿಗೆ ಕೊಟ್ಟು ಸರ್ಕಾರವು ಪೆತ್ಸಾಹಿಸಬಹುದಿತ್ತಲ್ಲ?
ಇವೆಲ್ಲ ಮಾನಸಿಕ ಜಡತೆಯ ದ್ಯೋತಕಗಳು.
ಹಲವಾರು ವೈಚಾರಿಕ ಭ್ರಮೆಗಳಿಂದ ನಾವು ದೂರಸರಿಯಬೇಕಾಗಿದೆ. ಇದು ಈಗಿನ ಸಂಗ್ರಾಮದ ಮೊದಲ ಹೆಜ್ಜೆ.
ಇಲ್ಲಿ ನಮಗೆ ಶತ್ರುಸ್ಥಾನದಲ್ಲಿರುವುದು ಯಾವುದೋ ಕೆಲವು ರಾಷ್ಟ್ರಗಳಾಗಲಿ ವ್ಯಕ್ತಿಗಳಾಗಲಿ ಜನವರ್ಗಗಳಾಗಲಿ ಮಾತ್ರವಲ್ಲ, ಮುನ್ನೂರು ವರ್ಷಗಳಿಂದ ಬೆಳೆದುಬಂದಿರುವ ಕೆಲವು ಜೀವನ ಸಿದ್ಧಾಂತಗಳೂ ಅವುಗಳ ಹಿಂದಿರುವ ಮಾನಸಿಕತೆಯೂ ನಮ್ಮ ನಿಜವಾದ ಶತ್ರುಗಳು. ಅಂಥ ಮಾನಸಿಕತೆ ಸ್ವಲ್ಪಮಟ್ಟಿಗೆ ನಮ್ಮ ಒಳಗಡೆಯೂ ಮನೆಮಾಡಿಕೊಂಡಿದೆ. ಆದ್ದರಿಂದ ನಾವು ನಮ್ಮ ಮೇಲೂ ವಿಜಯ ಸಾಧಿಸಬೇಕಾಗಿದೆ.
ಈಗ ’ಡಿಕೊಲೊನೈಸೇಷನ್’ ಅಥವಾ ಸ್ವದೇಶೀಕರಣ ಆಗಬೇಕಾದರೆ, ಇದರ ಚರ್ಚೆಯೂ ನಮ್ಮ ದೇಶೀಯ ಪರಿಭಾಷೆಯಲ್ಲಿಯೇ ನಡೆಯಬೇಕಾಗುತ್ತದೆ. ನಾವು ಎಲೀಟ್ ಪರಿಭಾಷೆಯನ್ನು ಬಿಸಾಡಬೇಕಾಗುತ್ತದೆ. ಪರಿಭಾಷೆಯೆಂದರೆ ಸಂವಾದದ ನುಡಿಗಟ್ಟು. ಎಲ್ಲಿಯವರೆಗೆ ನಾವು ಎಲೀಟ್ ಪರಿಭಾಷೆಗೆ ಅಂಟಿಕೊಂಡಿರುತ್ತೇವೋ ಅಲ್ಲಿಯವರೆಗೆ ’ಡೀಕೊಲೊನೈಸೇಷನ್’ ಸಾಧ್ಯವಾಗದು.
ಈಗ ನಮ್ಮಲ್ಲಿ ಮನೆಮಾಡಿರುವ ಮಾನಸಿಕ ಗುಲಾಮಿತನದಲ್ಲಿ ಹೀಗೆ ಹಲವು ಎಳೆಗಳಿವೆ. ಮಾನಸಿಕ ದಾಸ್ಯದಿಂದ ನಾವು ಹೊರಬರಲಾರೆವಾದರೆ ಈಗ ಎರಗಿರುವ ವಿದೇಶೀ ಆಕ್ರಮಣ, ಸಾಂಸ್ಕೃತಿಕ ಆಕ್ರಮಣ – ಎರಡನ್ನೂ ಎದುರಿಸಲಾಗುವುದಿಲ್ಲ; ವಿದೇಶೀ ಸರಕಾರಗಳನ್ನೂ ಕಂಪೆನಿಗಳನ್ನೂ ಎಷ್ಟು ಉಚ್ಚಸ್ವರದಲ್ಲಿ ನಿಂದಿಸಿದರೂ ಪ್ರಯೋಜನ ಕಡಮೆಯೇ.
ಈಗ ನಡೆದಿರುವ ಆರ್ಥಿಕ ಆಕ್ರಮಣಕ್ಕಿಂತ ಬಹುಪಾಲು ಹೆಚ್ಚು ಹಾನಿಕರವಾದದ್ದು ಈಗ ನಡೆದಿರುವ ಸಾಂಸ್ಕೃತಿಕ ಆಕ್ರಮಣ. ನಮ್ಮ ವಿಶಿಷ್ಟ ಸಾಮಾಜಿಕ ಹಿನ್ನೆಲೆಯನ್ನೂ ನಮ್ಮ ಪ್ರಮುಖ ಶಕ್ತಿ ಸಾಮರ್ಥ್ಯ ಸಂಪನ್ಮೂಲಗಳನ್ನೂ ನಮ್ಮ ದೇಶದ ಆದ್ಯತೆಗಳನ್ನೂ ಉದಾಸೀನ ಮಾಡಿ ಯಾರಾರೋ ನೀಡಿದ ಬೋಧೆಗಳನ್ನು ಕೇಳುತ್ತ ಬಂದಿರುವುದಕ್ಕೆ ನಾವೀಗ ಅಪಾರ ಬೆಲೆ ತೆರುತ್ತಿದ್ದೇವೆ.
ಈ ಸ್ಥಿತಿಯನ್ನು ಅನೇಕ ನವಭಾರತ ನಿರ್ಮಾಪಕರು ನಿರೀಕ್ಷಿಸಿಯೂ ಇದ್ದರು. ಸ್ವಾತಂತ್ರ್ಯವನ್ನೇನೊ ಪಡೆದುಕೊಳ್ಳಲಾದೀತು. ಆದರೆ ಅದನ್ನು ನೀವು ಜೀರ್ಣಿಸಿಕೊಳ್ಳಬಲ್ಲಿರಾ? ಆ ಶಕ್ತಿಯನ್ನು ಬೆಳೆಸಿಕೊಂಡಿದ್ದೀರಾ? ಎಂದು ಸ್ವಾಮಿ ವಿವೇಕಾನಂದರು ಕೇಳುತ್ತಿದ್ದರು. ೧೯೨೫ರಷ್ಟು ಹಿಂದೆಯೇ ಸ್ವಾಮಿ ಶ್ರದ್ಧಾನಂದರು ಅನ್ನುತ್ತಿದ್ದ ಮಾತು ಇದು: ಅಂಗ್ರೇಜ್ ಲೋಗೋಂ ತೋ ಇಧರ್ ಸೇ ಚಲೇಜಾತೇ ಹೈ. ಲೇಕಿನ್ ಅಂಗ್ರೇಜಿಯತ್ ಇಧರ್ ರಹಜಾಯೇಗೀ. ಆ ಮಾತುಗಳು ಒಂಬತ್ತು ದಶಕಗಳು ಕಳೆದ ಮೇಲೂ ಈಗಲೂ ಯಥಾರ್ಥವೇ ಎನಿಸಿವೆ.
ನಮ್ಮ ಪ್ರಬಲ ಶತ್ರು ಪಾಕಿಸ್ತಾನವೋ ಬೇರೊಂದು ದೇಶವೋ ಅಲ್ಲ: ನಾವು ಬೆಳೆಸಿಕೊಂಡಿರುವ ಕೊಳ್ಳುಬಾಕ ಸಂಸ್ಕೃತಿ, ಅದನ್ನೊಡಗೂಡಿ ಆಗುತ್ತಿರುವ ನೈತಿಕ ಕುಸಿತ.
ಇದೆಲ್ಲ ಕೇವಲ ವ್ಯಾಪಾರದ ವಿಷಯವಲ್ಲ. ಇಂಥ ವಿಚಾರಶೂನ್ಯ ವರ್ತನೆಯ ಮೂಲಕ ನಾವು ನಮ್ಮ ಸಂಸ್ಕೃತಿಯನ್ನೂ ದೇಶದ ಸ್ವಾಯತ್ತತೆಯನ್ನೂ ಒಟ್ಟಿಗೇ ಬಲಿಗೊಡುತ್ತಿದ್ದೇವೆ – ಎಂಬುದೇ ಸಾರತತ್ತ್ವ. ಇನ್ನೂರು ವರ್ಷಗಳ ಶ್ರಮದಿಂದ ಗಳಿಸಿದ ಸ್ವಾತಂತ್ರ್ಯವೂ ಹಲವು ಸಾವಿರ ವರ್ಷಗಳ ಸಂಸ್ಕೃತಿಯೂ ಉಧ್ವಸ್ತಗೊಳ್ಳಲು ನೆರವಾದವರು ಎಂದು ಈ ಪೀಳಿಗೆಯ ಬಗ್ಗೆ ಮುಂದಿನವರು ಉಲ್ಲೇಖ ಮಾಡುವಂತಾಗಬಾರದು. ಸ್ವಾತಂತ್ರ್ಯವನ್ನೂ ಸಂಸ್ಕೃತಿಯನ್ನೂ ಕಳೆಯುವುದು ಸುಲಭ; ಪಡೆಯುವುದೂ ಊರ್ಜಿತವಾಗಿರಿಸುವುದೂ ಕಷ್ಟ. ಒಮ್ಮೆ ಕಳೆದುಕೊಂಡೆವೆಂದರೆ ಅವನ್ನು ಮತ್ತೆ ಗಳಿಸಲು ದೀರ್ಘಕಾಲದ ಅಪಾರ ಶ್ರಮ ಹಿಡಿಯುತ್ತದೆ.
ಸ್ವರಾಜ್ಯಪ್ರಾಪ್ತಿ ಪರ್ಣಗೊಳ್ಳುವುದು ಸ್ವದೇಶೀ ಆಚರಣೆಯಿಂದ ಎಂದಿದ್ದರು, ಮಹಾತ್ಮಗಾಂಧಿ.
ಸ್ವಧರ್ಮ, ಸ್ವರಾಷ್ಟ್ರ, ಸ್ವರಾಜ್ಯ – ಈ ಕಲ್ಪನೆಗಳಂತೆ ಸ್ವದೇಶೀ ಕಲ್ಪನೆಯೂ ನಮಗೆ ಪರಂಪರಾಗತ. ರಾಷ್ಟ್ರೀಯ ಜೀವನದ ಸಾಂಸ್ಕೃತಿಕ, ರಾಜಕೀಯ ಹಾಗೂ ಆರ್ಥಿಕ ಮುಖಗಳೆಲ್ಲವನ್ನೂ ಒಳಗೊಂಡದ್ದು ಸ್ವದೇಶೀ ಎಂದಿದ್ದರು ಗಾಂಧಿ. ಇದನ್ನೇ ಪರುಷಾರ್ಥಚತುಷ್ಟಯದ ಆಧಾರದ ಮೇಲೆ ಪಂಡಿತ್ ದೀನದಯಾಳ ಉಪಾಧ್ಯಾಯ ಅವರು ’ಏಕಾತ್ಮಮಾನವದರ್ಶನ’ವೆಂದು ಸೂತ್ರಿಸಿದರು. ಮಹರ್ಷಿ ಅರವಿಂದರು ಸ್ವದೇಶೀ ಎಂಬುದೇ ಭಾರತೀಯ ಜೀವನಕ್ರಮದ ಸಹಜಸ್ಥಿತಿ; ಉಳಿದವೆಲ್ಲ ವಿಕೃತಿಗಳು ಎಂದಿದ್ದರು.
ಸ್ವಾತಂತ್ರ್ಯ ಸಂಘರ್ಷದ ದಿನಗಳಲ್ಲಿಯೂ ಸ್ವಾತಂತ್ರ್ಯೋತ್ತರ ಆರಂಭದ ವರ್ಷಗಳಲ್ಲಿಯೂ ಗಾಂಧಿ, ವಿನೋಬಾ ಭಾವೆ, ಜಯಪ್ರಕಾಶ ನಾರಾಯಣ್, ಶ್ರೀಗುರೂಜಿ ಮೊದಲಾದ ಭಿನ್ನಧಾರೆಗಳ ಚಿಂತಕರೆಲ್ಲರೂ ಇಂಥ ವ್ಯಾಪಕ ಸ್ವದೇಶೀ ಪ್ರಸ್ಥಾನವನ್ನೇ ಎತ್ತಿಹಿಡಿದಿದ್ದರು. ಅದರ ಬಗ್ಗೆ ಬಹುಮಟ್ಟಿಗೆ ಆಗ ಒಮ್ಮತ ಇದ್ದಿತು.
ಇವತ್ತು ನಡೆಯುತ್ತಿರುವ ಸಂಘರ್ಷ ಸ್ಥಳೀಯ ಸಂಸ್ಕೃತಿ ಮತ್ತು ವಿಶ್ವಮಾರುಕಟ್ಟೆಗಳ ನಡುವೆ. ನಮ್ಮ ವಿರೋಧ ಇರುವುದು ಜಾಗತೀಕರಣಕ್ಕೆ ಅಲ್ಲ; ಜಾಗತೀಕರಣದ ಹೆಸರಲ್ಲಿ ಇಡೀ ಮನುಷ್ಯಜೀವನವನ್ನು ವಾಣಿಜ್ಯ ವ್ಯವಹಾರದ ಸೀಮಿತ ಚೌಕಟ್ಟಿಗೆ ಅಳವಡಿಸುವ ಪ್ರಯತ್ನವನ್ನು ನಾವು ವಿರೋಧಿಸಬೇಕಾಗಿದೆ.
ನಮ್ಮ ಚರಿತ್ರೆಯನ್ನು ಅವಲೋಕಿಸಿದಾಗ ನಮಗೆ ತೋರುವ ವೈಶಿಷ್ಟ್ಯವೆಂದರೆ – ಭಾರತದಲ್ಲಿ ನಾಗರಿಕತೆ ಮತ್ತು ರಾಜಕೀಯ ಆರ್ಥಿಕ ಅಗತ್ಯಗಳು – ಇವುಗಳ ನಡುವೆ ಸೂತ್ರಬದ್ಧತೆ ಇದ್ದಿತು. ನಮ್ಮ ಸಮಾಜ ಕ್ರಿಯಾಶೀಲವಾಗಿದ್ದುದಕ್ಕೆ ಮುಖ್ಯಕಾರಣ ಈ ಸೂತ್ರಬದ್ಧತೆ -internal cohesion. ಅದನ್ನೇ ನಾವು ಈಗಿನ ಭಾಷೆಯಲ್ಲಿ ಸ್ವದೇಶೀ ಪ್ರಣಾಳಿ ಎಂದು ಕರೆಯುವುದು. ಸ್ವದೇಶೀ ವರ್ತನೆ ಎಂದರೆ ಹೊಸದೇನನ್ನೋ ಮಾಡುವುದು ಎಂದಲ್ಲ; ಸಮಾಜವು ತನ್ನ ಸಹಜಸ್ಥಿತಿಗೆ ಹಿಂದಿರುಗಿ ಬರುವುದು ಎಂದು ಅರ್ಥ, ಅಷ್ಟೆ.
ಪಾಶ್ಚಾತ್ಯ ಸಮಾಜಗಳ ಜೀವನವಷ್ಟೂ ಹೊರಗಿನ ಕೃತಕ ವ್ಯವಸ್ಥೆಗಳನ್ನು ಅವಲಂಬಿಸಿರುತ್ತದೆ. ಆ ದೇಶಗಳಲ್ಲಿ ಸರ್ಕಾರದ ಹೆಗಲ ಮೇಲಿರುವ ಹತ್ತಾರು ದೈನಂದಿನ ಹೊಣೆಗಾರಿಕೆಗಳನ್ನು ಭಾರತದಲ್ಲಿ ಕೌಟುಂಬಿಕ ವ್ಯವಸ್ಥೆಯೇ ಸಹಜವಾಗಿ ನಿಭಾಯಿಸುತ್ತಿದೆ.
ಇದೀಗ ತಿರುಪತಿಯಲ್ಲಿಯೊ ಧರ್ಮಸ್ಥಳದಲ್ಲಿಯೊ ಅದೆಷ್ಟು ಸಾವಿರ ಜನರಿಗೆ ಪ್ರತಿದಿನ ಅನ್ನದಾನ ನಡೆಯುತ್ತಿದೆ! ಇಂಥ ಕೆಲಸಗಳನ್ನು ಯಾವುದೇ ಸರ್ಕಾರ ಎಂದಿಗೂ ಮಾಡಲಾಗುವುದಿಲ್ಲ. ಇಂಥ ವ್ಯವಹಾರಗಳಾವುದೂ ಫೆಬ್ರುವರಿ ತಿಂಗಳಲ್ಲಿ ಮಂಡಿತವಾಗುವ ಸರ್ಕಾರಿ ಬಜೆಟಿನಲ್ಲಿ ಉಲ್ಲೇಖಗೊಳ್ಳುವುದಿಲ್ಲ.
ಸರ್ಕಾರ ತಾನು ಹಿಂದಿನಿಂದ ವಹಿಸಿಕೊಂಡಿದ್ದ ಕೆಲಸಗಳನ್ನೇ ನಿರ್ವಹಿಸಲಾಗದೆ ಕುಸಿಯುತ್ತಿದೆ. ಇದಕ್ಕೆ ಪ್ರತಿಯಾಗಿ, ಶಿಕ್ಷಣ, ಅರೋಗ್ಯ, ನೀರಾವರಿ ಮೊದಲಾದ ಮುಖ್ಯ ವ್ಯಾವಹಾರಿಕ ಅಗತ್ಯಗಳನ್ನೆಲ್ಲ ಸಮಾಜ ತಾನೇ ನಿರ್ವಹಿಸಿಕೊಳ್ಳುವ ದೀರ್ಘಕಾಲದ ಪರಂಪರೆಯೇ ಭಾರತದಲ್ಲಿ ಇದೆ. ಇದಕ್ಕೆ ಹೊರಗಿನಿಂದ ಬರುವ ಉಪದ್ರವಗಳನ್ನು ಸರ್ಕಾರ ನಿವಾರಿಸಿದರೆ ಸಾಕು, ಇನ್ನೇನೂ ಬೇಡ.
ಆಧುನಿಕತೆಯನ್ನು ವಿರೋಧಿಸಬೇಕು ಎಂಬುದು ನಮ್ಮ ದೃಷ್ಟಿಯಲ್ಲ. ಈಗ ಆಗಿರುವುದೆಂದರೆ – ವಿದೇಶೀಯರು ವಿಧಿಸಿದ ರೀತಿಯಲ್ಲಿಯೇ ನಾವು ಯೋಚನೆ ಮಾಡುವ ಅಭ್ಯಾಸ ಮಾಡಿಕೊಂಡಿದ್ದೇವೆ. ಈ ಪ್ರಕ್ರಿಯೆಯಲ್ಲಿ ಗೆಲ್ಲುವವರು ವಿದೇಶೀಯರೇ. ಏಕೆಂದರೆ Rules of the game ಮಾಡಿಟ್ಟಿರುವವರು ಅವರೇ. ಅವನ್ನು ಬದಲಾಯಿಸಲು ನಾವು ಇದುವರೆಗೆ ಪ್ರಯತ್ನಿಸಲೇ ಇಲ್ಲ. ಕೀಳರಿಮೆಯ ಒಂದು ಲಕ್ಷಣವೆಂದರೆ – ನಮ್ಮನ್ನು ದಮನ ಮಾಡುತ್ತಿರುವವರನ್ನೇ ನಾವು ಅನುಕರಣೆ ಮಾಡಲು ಹೋಗುವುದು. ನಮ್ಮ ಅನುಕರಣೆ ಸಫಲವಾದರೆ ಪಾಶ್ಚಾತ್ಯರು ನಮ್ಮನ್ನು ಮಾನ್ಯ ಮಾಡುತ್ತಾರೆ – ಎಂಬ ಭ್ರಮೆಯಲ್ಲಿ ನಾವು ಇದ್ದೇವೆ. ಆದರೆ ವಾಸ್ತವ ಅನುಭವ ಇದಕ್ಕೆ ವಿರುದ್ಧವೇ ಆಗಿದೆ.
ಸ್ವಾಭಿಮಾನ ಉಳಿಸಿಕೊಂಡವರು ಎಂಥ ಆಘಾತಗಳಿಂದಲೂ ಪಾರಾಗುತ್ತಾರೆ. ಸ್ವಾಭಿಮಾನ ಕಳೆದುಕೊಂಡವರು ನಾಶವಾಗಲು ಒಂದು ಸಣ್ಣ ಬಿರುಗಾಳಿಯೂ ಸಾಕಾಗುತ್ತದೆ.
ಪಾಶ್ಚಾತ್ಯರ ಆಕ್ರಮಣಶೀಲತೆಯನ್ನು ಟೀಕಿಸಿ ಗೋಳಾಡಿ ಪ್ರಯೋಜನವಿಲ್ಲ. ಅವರು ಇರುವುದೇ ಹಾಗೆ. ನಾವು ನಮ್ಮ ದೌರ್ಬಲ್ಯಗಳನ್ನು ಗುರುತಿಸಿಕೊಂಡು ನಮ್ಮ ನೈತಿಕ-ಸಾಂಸ್ಕೃತಿಕ ಉತ್ಥಾನಕ್ಕೆ ಗಮನ ಕೊಡುವುದು ಹೆಚ್ಚು ಲಭಕರ – ಎಂಬುದೇ ಸ್ವದೇಶೀ ಸಂದೇಶ.
ಸರ್ಕಾರಗಳ ಮೂಲಕ ಅಭ್ಯುದಯ ಸಾಧ್ಯ ಎನ್ನುವುದು ಭ್ರಮೆ. ಪಾಶ್ಚಾತ್ಯ ಸಮಾಜಗಳು ವ್ಯಕ್ತಿಕೇಂದ್ರಿತ. ಅಲ್ಲಿ ವ್ಯಕ್ತಿ, ಸರ್ಕಾರ – ಈ ಎರಡೇ ಅಂಗಗಳು ಪ್ರಮುಖವಾಗಿ ಕೆಲಸ ಮಾಡುತ್ತವೆ. ಆದರೆ ಭಾರತದಲ್ಲಿ ಕುಟುಂಬ, ಸಮಾಜ ಮೊದಲಾದ ಇತರ ಅಂಗಗಳು ಪ್ರಧಾನವಾದವು. ಇಲ್ಲಿ ಒಬ್ಬ ತೀರಾ ಬಡವ್ಯಕ್ತಿಯೂ ವರ್ಷಾನುಗಟ್ಟಲೆ ಶ್ರಮಪಟ್ಟು ತನ್ನ ತಂಗಿಯ ಮದುವೆ ಮಾಡುತ್ತಾನೆ. ಇವೆಲ್ಲ ನಡೆಯುವುದು ಸ್ವಪ್ರೇರಣೆಯಿಂದಲೇ ಹೊರತು ಕಾನೂನು ವ್ಯವಸ್ಥೆಗಳಿಂದಲ್ಲ.
ಜೀವನದ ಅನೇಕ ಸನ್ನಿವೇಶಗಳಲ್ಲಿ ಹೊರಕ್ಕೆ ಕಾಣುವ ಅಂಶಗಳಿಗಿಂತ ಕಾಣದ ಒಳಗಿನ ಅಂಶಗಳೇ ಮಹತ್ತ್ವದ್ದಾಗಿರುತ್ತವೆ. ಸಂಸ್ಕೃತಿಯೂ ಅಂಥ ಒಂದು ಅಂಶ. ಹೊರಗಿನ ವ್ಯವಹಾರಗಳನ್ನು ಅರ್ಥವಂತವಾಗಿಸುವುದು, ಸೌಹಾರ್ದಮಯಗೊಳಿಸುವುದು, ಉಲ್ಲಾಸಮಯಗೊಳಿಸುವುದು ಒಳಗಿನ ಸಂಸ್ಕೃತಿ. ಹೋಟೆಲ್ ಊಟಕ್ಕೂ ಮನೆಯಲ್ಲಿ ತಾಯಿ ಬಡಿಸುವ ಊಟಕ್ಕೂ ವ್ಯತ್ಯಾಸ ಇರುವುದು ಸಾಮಗ್ರಿಯಲ್ಲಲ್ಲ, ಅದರ ಹಿಂದಿನ ಮಾನಸಿಕತೆಯಲ್ಲಿ, ಪ್ರೀತಿಯಲ್ಲಿ. ಕೇವಲ ವ್ಯಾವಹರಿಕ ದೃಷ್ಟಿಯಿಂದಲೇ ನೋಡಿದರೂ, ಸುಸಂಸ್ಕೃತಿ ಇದ್ದಲ್ಲಿ ಹೊರಗಿನ ವ್ಯವಹಾರವೂ ಸಮರ್ಪಕವಾಗಿ ನಡೆಯುತ್ತದೆ, ಸುಗಮವಾಗಿ ನಡೆಯುತ್ತದೆ.
ಮಾರುಕಟ್ಟೆಯ ಪ್ರಾಧಾನ್ಯವೂ ಕೊಳ್ಳುಬಾಕ ಪ್ರವೃತ್ತಿಯೂ ಸರ್ವವ್ಯಾಪಿಯಾದಾಗ ಇಂಥ ಸೂಕ್ಷ್ಮಾಂಶಗಳೆಲ್ಲ ಜೀವನದಿಂದ ಮರೆಯಾಗುತ್ತವೆ. ಹೀಗೆ ಜೀವನ ಬರಡಾಗುತ್ತದೆ.
ಒಂದು ರಾಷ್ಟ್ರದ ನಿಜವಾದ ಶಕ್ತಿ ಇರುವುದು ಅದರ ಸ್ವಾಲಂಬನೆಯಲ್ಲಿಯೇ ಹೊರತು ಬೇರೆ ಯಾವುದೇ ಆಡಂಬರಗಳಲ್ಲಲ್ಲ. ಜಗತ್ತು ಗೌರವಿಸುವುದು ಅಂತಿಮವಾಗಿ ಇದನ್ನೇ. ಒಂದು ರಾಷ್ಟ್ರದ ಸ್ವಾತಂತ್ರ್ಯಕ್ಕೆ ಬುನಾದಿಯಾಗಿ ಇರಬಲ್ಲದ್ದು ಸ್ವಾವಲಂಬನ ಪ್ರವೃತ್ತಿ. ಸ್ವಾತಂತ್ರ್ಯವನ್ನೇ ನಾವು ಅಗ್ಗಗೊಳಿಸಿಬಿಟ್ಟರೆ ನಮ್ಮ ದೇಶಕ್ಕೆ ಜಗತ್ತಿನಲ್ಲಿ ಕವಡೆಯಷ್ಟೂ ಬೆಲೆ ಉಳಿಯುವುದಿಲ್ಲ.
ಬಿಪಿನ್ಚಂದ್ರಪಾಲ್ರಂಥ ದೊಡ್ಡ ವ್ಯಕ್ತಿ ಅಮೆರಿಕದಲ್ಲಿ ಭಾಷಣ ಮಾಡುತ್ತಿದ್ದಾಗ ಅಲ್ಲಿಯ ಯಃಕಶ್ಚಿತ ವ್ಯಕ್ತಿಯೊಬ್ಬ ವ್ಯಂಗ್ಯವಾಗಿ ಹೇಳಿದ್ದ: ‘Let your country achieve independence first. Then come and talk to us about your religion and philosophy. Then we shall listen to you’ – ಎಂದು.
ಮೋಕ್ಷಗುಂಡಂ ವಿಶ್ವೇಶ್ವರಯ್ಯನವರು ೧೯೧೯ರಲ್ಲಿ ಅಮೆರಿಕಕ್ಕೆ ಭೇಟಿ ನೀಡಿ, ಬ್ಯಾಂಕಿಂಗ್ ಉದ್ಯಮಕ್ಕೆ ಸಂಬಂಧಿಸಿದಂತೆ ಸಲಹೆ ಕೋರಿದಾಗ ವಾಷಿಂಗ್ಟನ್ನಿನ ಫೆಡರಲ್ ರಿಜರ್ವ್ ಬೋರ್ಡಿನ ಗವರ್ನರ್ ಅವರಿಗೆ ಹೇಳಿದ: ‘No useful purpose would be served in tendering advice to a man from a country which was not free’ – ಎಂದು.
ಕಡೆಯದಾಗಿ: ನಾವೆಲ್ಲ ಆಯ್ದುಕೊಂಡಿರುವ ಸೇವಾಜೀವನದ ಬಗೆಗೆ ಎರಡು ಮಾತು.
ಇಂದು ಹೆಚ್ಚಿನ ರಾಜಕೀಯ – ಆರ್ಥಿಕ ವ್ಯವಸ್ಥೆಗಳು ಕುಸಿಯುತ್ತಿರುವುದನ್ನು ಕಾಣುತ್ತಿದೇವೆ. ಬಡತನ, ನಿರಕ್ಷರತೆ, ಅನಾರೋಗ್ಯ ಮೊದಲಾದ ಸಮಸ್ಯೆಗಳಿಗೆ ಹೊರಗಿನಿಂದ ಯಾಂತ್ರಿಕ ಪರಿಹಾರ ಒದಗಿಸುವ ಪ್ರಯತ್ನಗಳು ನಿರೀಕ್ಷಿತ ಸಫಲತೆಯನ್ನು ನೀಡಿಲ್ಲ. ಏಕೆಂದರೆ ಹೆಚ್ಚಿನ ಸಮಸ್ಯೆಗಳ ಮೂಲ ಆಂತರಿಕ ಸ್ತರದಲ್ಲಿ ಇರುತ್ತದೆ. ಆದ್ದರಿಂದ ಆಗಲೇ ಹೇಳಿದ ಹಾಗೆ ಮಾನಸಿಕ – ಬೌದ್ಧಿಕ ಪರಿಸರ ಉತ್ತಮಗೊಂಡ ಹೊರತು ಕೇವಲ ಬಾಹ್ಯನಿಷ್ಠ ಅಭ್ಯುದಯ ಯೋಜನೆಗಳು ಸಫಲವಾಗುವುದು ದುಷ್ಕರ.
ಜೀವನವನ್ನು ಅರ್ಥಪೂರ್ಣಗೊಳಿಸುವ ಭಾವನೆಗಳು ನೈತಿಕವಾದುವು, ಧಾರ್ಮಿಕವಾದುವು, ಆಧ್ಯಾತ್ಮಿಕವಾದುವು. ಈ ಅಸ್ತಿಭಾರ ದೃಢವೂ ಚೈತನ್ಯಪರ್ಣವೂ ವಿಶಾಲವೂ ಆದಲ್ಲಿ ಅತ್ಯಲ್ಪ ಬಾಹ್ಯ ಪ್ರಯತ್ನದಿಂದಲೂ ಗಣನೀಯ ಸಮಾಜಾಭ್ಯುದಯವನ್ನು ಸಾಧಿಸಲಾದೀತು. ಆರೋಗ್ಯವಂತ ಜೀವನದೃಷ್ಟಿಯೂ ಧಾರ್ಮಿಕ ಮನೋವೃತ್ತಿಯೂ ವ್ಯಕ್ತಿಯ ಆತ್ಮಗೌರವವೂ ದುರ್ಬಲಗೊಂಡಿರುವುದೇ ಮಿಕ್ಕೆಲ್ಲ ಸಮಸ್ಯೆಗಳ ಮೂಲ. ಈ ಆಂತರಂಗಿಕ ಶಕ್ತಿಗಳನ್ನು ಜಾಗೃತಗೊಳಿಸುವುದು ಸಾಮಾಜಿಕ ಸ್ವಾಸ್ಥ್ಯ ಸಾಧಿಸಲು ಆಗಬೇಕಾದ ಮೊದಲಕ್ರಮ.
ಕಳೆದ ಐವತ್ತು ವರ್ಷಗಳಲ್ಲಿ ಔದ್ಯಮಿಕ ಮೊದಲಾದ ಹಲವಾರು ಕ್ಷೇತ್ರಗಳಲ್ಲಿ ಎಷ್ಟೋ ಬೃಹತ್ ಯೋಜನೆಗಳು ನಡೆದುಬಂದಿವೆ. ಆದರೆ ಇಂಥ ಪ್ರಯಾಸಗಳಿಂದ ನಾವು ನಿರ್ಮಿಸಹೊರಟಿರುವ ಮನುಷ್ಯ ಎಂಥವನು ಎಂಬುದರ ಬಗೆಗೆ ಸ್ಪಷ್ಟ ಕಲ್ಪನೆ ಇರದಿದ್ದಲ್ಲಿ ತುಂಬ ಹೆಚ್ಚಿನ ಸಾಧನೆಯೇನೂ ಆಗದು.
ನಾವು ಜಗತ್ತಿನಲ್ಲಿ ಮೂರು ವಿಧದ ಸಮನ್ವಯಗಳನ್ನು ಸಾಧಿಸಬೇಕು – ಎಂದಿದ್ದಾನೆ ಖ್ಯಾತ ಚಿಂತಕ ಬರ್ಟ್ರೆಂಡ್ ರಸೆಲ್ : (೧) ಮನುಷ್ಯನಿಗೂ ಪ್ರಕೃತಿಗೂ ನಡುವೆ ಹೊಂದಾಣಿಕೆ; (೨) ವ್ಯಕ್ತಿಗೂ ಸಮಾಜಕ್ಕೂ ನಡುವೆ ಹೊಂದಾಣಿಕೆ; ಮತ್ತು (೩) ನಮ್ಮ ಅಂತರಂಗದಲ್ಲಿಯೇಇರುವ ಬೇರೆ ಬೇರೆ ಶಕ್ತಿ – ಪ್ರವೃತ್ತಿಗಳ ನಡುವೆ ಹೊಂದಾಣಿಕೆ.
ಬಾಹ್ಯ ಹಾಗೂ ಆಂತರಿಕ ಅಗತ್ಯಗಳ ನಡುವೆ ಸಮನ್ವಯ ಸಾಧಿಸಿದ್ದುದೇ ನಮ್ಮ ಪರಂಪರೆಯ ವೈಶಿಷ್ಟ್ಯ. ಈ ಮೂಲಭೂತ ತತ್ತ್ವದ ಹಿನ್ನೆಲೆಯಲ್ಲಿ ನೋಡಿದಾಗ ’ಸೇವೆ’ ಎಂಬುದು ವ್ಯಕ್ತಿ-ವ್ಯಕ್ತಿಗಳ ನಡುವಣ ಅತ್ಯಂತ ಉದಾತ್ತವಾದ ಸಂಬಂಧ – ಎಂಬುದು ಮನವರಿಕೆಯಾಗುತ್ತದೆ. ಜನರಲ್ಲಿ ಪರಸ್ಪರ ಸಹಕಾರ ಇದ್ದರೆ ಮಾತ್ರ ಒಟ್ಟು ಸಮಾಜದ ಮುನ್ನಡೆ ಶಕ್ಯವಾಗುತ್ತದೆ.
ಇದಿಷ್ಟು ತಾತ್ತ್ವಿಕ ಚಿಂತನೆಯಾಯಿತು. ಕೇವಲ ವ್ಯಾವಹಾರಿಕ ದೃಷ್ಟಿಯಿಂದಲೇ ನೋಡಿದರೂ ಸಮಾಜದ ಸುಸ್ಥಿತಿಗೆ ಸೇವಾಕಾರ್ಯಗಳು ಅನಿವಾರ್ಯವೆನಿಸುತ್ತವೆ. ಏಕೆಂದರೆ ರಾಜಕೀಯ, ಆರ್ಥಿಕ, ಆಡಳಿತ ಸಂರಚನೆಗಳ ಕ್ಷೇತ್ರವೂ ವ್ಯಾಪ್ತಿಯೂ ಸೀಮಿತವಾದುದು. ಜನರಲ್ಲಿ ಸಹಕಾರ ಪ್ರವೃತ್ತಿಯೂ ಸೇವಾ ಮನೋಧರ್ಮವೂ ವ್ಯಾಪಕವಾಗಿ ಹರಡಿದಲ್ಲಿ ಮಾತ್ರ ರಾಜಕೀಯ ವ್ಯವಸ್ಥೆಗೂ ಸಮಾಜಕ್ಕೂ ನಡುವೆ ಈಗ ಉಂಟಾಗಿರುವ ಬಿರುಕು ಕಡಮೆಯಾಗಬಹುದು.
ಸಮಾಜದಲ್ಲಿ ಸಾತ್ತ್ವಿಕತೆ ತಾಮಸಿಕತೆ ಸುಧಾರಣಪ್ರಿಯತೆ – ಇವೆಲ್ಲ ಒಟ್ಟೊಟ್ಟಿಗೆ ನಿರಂತರವಾಗಿ ಮುಂದುವರಿದಿರುತ್ತದೆ. ಇದು ನಿಸರ್ಗಮಯ. ಸಮಾಜವನ್ನು ಸಹಜಸ್ಥಿತಿಗೆ ಹಿಂದಿರುಗಿಸಲು ನಡೆಸುವ ಪ್ರಯತ್ನಗಳನ್ನೇ ನಾವು ’ಸೇವೆ’ ಎಂದು ಪಾರಿಭಾಷಿಕವಾಗಿ ಕರೆದಿರುವುದು.
ಇಂತ ಲೋಕಹಿತದೃಷ್ಟಿಯು ಪರಿಪಕ್ವ ವ್ಯಕ್ತಿತ್ವದ ಲಕ್ಷಣ.
ಸೇವಾ ಮನೋವೃತ್ತಿ ಆಧ್ಯಾತ್ಮಿಕ ಪಯಣವನ್ನು ಸುಗಮಗೊಳಿಸುವ ಸಾಧನವೂ ಹೌದು. ನಮ್ಮ ಪರಂಪರೆಯ ಸುಧಾರಕರಲ್ಲನೇಕರು ಆಧ್ಯಾತ್ಮಿಕ ಸಾಧಕರಾಗಿದ್ದಂತೆ ಶ್ರೇಷ್ಠ ಸಮಾಜಸೇವಕರೂ ಆಗಿದ್ದರು. ಭಗವಾನ್ ಬುದ್ಧ, ಶ್ರೀ ಶಂಕರಾಚಾರ್ಯರು, ಶ್ರೀ ಬಸವೇಶ್ವರರು, ಶ್ರೀಸಮರ್ಥ ರಾಮದಾಸರು – ಇಂಥವರ ಸಾಧನೆಯಲ್ಲಿ ಈ ಎರಡೂ ಅಯಾಮಗಳನ್ನು ನಿಚ್ಚಳವಾಗಿ ಕಾಣಬಹುದು. ಕೇವಲ ಆಧ್ಯಾತ್ಮಿಕ ಸಿದ್ಧಿಯಷ್ಟೆ ಅವರ ಗುರಿಯಾಗಿದ್ದಿದ್ದಲ್ಲಿ ಅವರು ಯಾವುದೋ ಕಾಡುಗಳ ಅಂತರಾಳದಲ್ಲಿ ಇರುತ್ತಿದ್ದರು. ಆದರೆ ಅವರು ಪ್ರತ್ಯಙ್ಮುಖರಾಗಿ ಉಳಿಯದೆ ಸಮಾಜಾಭಿಮುಖವಾಗಿ ದೇಶವನ್ನೆಲ್ಲ ಸಂಚರಿಸಿದರು. ಇಡೀ ಸಮಾಜವನ್ನು ಸಚೇತನಗೊಳಿಸಿದರು.
ಈ ದಿಕ್ಕಿನ ಪ್ರಯತ್ನಗಳಿಂದ ಜೀವನ ಸುಗವಾಗುತ್ತದೆ – ಎಂಬುದು ವ್ಯಾವಹಾರಿಕ ದೃಷ್ಟಿ. ಆದರೆ ನಮ್ಮ ಪಾರಂಪರಿಕ ಚಿಂತನೆ ಇನ್ನೂ ಒಂದು ಹೆಜ್ಜೆ ಮುಂದಿನದು. ವಿಶ್ವಾತ್ಮದೃಷ್ಟಿಗೆ ಹೊಂದುವಂಥ ಸಹಬಾಳ್ವೆ ಅವಶ್ಯ ಮಾತ್ರವಲ್ಲ, ಅದು ಅನಂದದಾಯಕವೂ ಆಗಿದೆ – ಎಂಬುದು ನಮ್ಮ ಹಿಂದಿನವರ ಚಿಂತನೆಯ ಆಶಯ.
ಕೆಲವು ವರ್ಷದ ಹಿಂದೆ ಮದರಾಸಿನ ಕಣ್ಣಾಸ್ಪತ್ರೆಗೆ ಒಬ್ಬ ವಯಸ್ಸಾದ ಮುದುಕರು ಬಂದು ಅಲ್ಲಿಯ ಸಿಬ್ಬಂದಿಗೆ ಹೇಳಿದರು: ಇಲ್ಲಿ ನಾಲ್ಕಾರು ಸಣ್ಣ ಕೆಲಸಗಳು ಇರಬಹುದು. ಅವುಗಳಲ್ಲಿ ನನ್ನಿಂದ ಆಗುವಂಥವನ್ನು ನಾನು ಮಾಡುತ್ತೇನೆ. ಇದಕ್ಕಾಗಿ ನನಗೆ ಸಂಬಳವೇನೂ ಕೊಡಬೇಕಾಗಿಲ್ಲ ಎಂದು. ಆಸ್ಪತ್ರೆಯ ಸಿಬ್ಬಂದಿಗೆ ಸಂತೋಷವೇ ಆಯಿತು ಅಲ್ಲಿಂದಾಚೆಗೆ ಪ್ರತಿದಿನ ಒಂದಷ್ಟು ಹೊತ್ತು ಆತ ಬಂದು ಹೊಸ ರೋಗಿಗಳ ದಾಖಲಾತಿಗೆ ನೆರವಾಗುವುದು, ವಾರ್ಡಿನಲ್ಲಿ ರೋಗಿಗಳಿಗೆ ಬೇಕಾದ ಶುಶ್ರೂಷೆ ಮಾಡುವುದು, ರೋಗಿಗಳ ಬಳಿ ಕುಳಿತು ಸಾಂತ್ವನದ ಮಾತುಗಳನ್ನಾಡುವುದು – ಹೀಗೆ ಹಲವು ವಿಧಗಳಲ್ಲಿ ನೆರವಾಗುತ್ತಿದ್ದರು.
ಆತ ಒಬ್ಬ ನಿವೃತ್ತ ಅಧಿಕಾರಿ, ಕೆಲ ಸಮಯದ ಹಿಂದೆ ಪತ್ನಿಯನ್ನು ಕಳೆದುಕೊಂಡಿದ್ದ. ಹೀಗೆ ಉಂಟಾದ ಬಿಡುವನ್ನು ಯಾವುದಾದರೂ ಸಮಾಜಹಿತಕಾರಕ ಕೆಲಸಗಳಲ್ಲಿ ವಿನಿಯೋಗಿಸಬೇಕೆಂದು ಆತ ಮನಸ್ಸು ಮಾಡಿದ್ದ. ಹೀಗೆ ಒಂದು ಕಡೆ ಇತರರಿಗೆ ನೆರವಾಗುತ್ತಿದ್ದಂತೆ, ಇನ್ನೊಂದು ಕಡೆ ತನ್ನ ಅಂತರಂಗದ ನೆಮ್ಮದಿಯನ್ನು ಪಡೆದುಕೊಳ್ಳಲು ಆತ ಈ ಶ್ರೇಷ್ಠ ಮಾರ್ಗವನ್ನು ಗುರುತಿಸಿಕೊಂಡಿದ್ದ. ಸೇವೆಯ ಆನಂದ ಇಂಥದು.
ಹೊರನೋಟಕ್ಕೆ ಇದು ಅಗಾಧವಾದ ಕಾರ್ಯವೆನಿಸಿದರೂ ಅದರಿಂದ ಗಾಬರಿಪಡುವ ಅಗತ್ಯವಿಲ್ಲ. ಜನರಲ್ಲಿ ಸುಪ್ತವಾಗಿರುವ ಶಕ್ತಿಗೆ ಚೇತರಿಕೆಯುಂಟಾದರೆ ಅಲ್ಪ ಶ್ರಮದಿಂದ ಅತಿಶಯ ಸಾಧನೆ ಶಕ್ಯವಾಗುತ್ತದೆ. ಹಾಗೆ ನೋಡಿದರೆ ಇಂದು ದೇಶದ ಆಡಳಿತ ಸೂತ್ರಗಳನ್ನು ಹಿಡಿದವರ ಸಂಖ್ಯೆ ಎಷ್ಟಿದ್ದೀತು? ಕೆಲವು ಲಕ್ಷಗಳಷ್ಟೆ. ಆದರೆ ಸಮಾಜಕ್ಕೆ ತಮ್ಮತಮ್ಮ ರೀತಿಯಲ್ಲಿ ಶಕ್ಯವಿದ್ದಷ್ಟು ಸೇವೆ ಮಾಡಬಲ್ಲವರು ಕೋಟ್ಯಂತರ ಜನ ಇದ್ದಾರಲ್ಲ. ಇದರಿಂದ ಕೀರ್ತಿ ಬಂದೀತೊ ಇಲ್ಲವೊ. ಆದರೆ ಆನಂದವಂತೂ ನಿಶ್ಚಿತವಾಗಿ ದೊರೆಯುತ್ತದೆ.
ಹೆಸರು ಹೆಸರೆಂಬುದೇಂ? ಕಸರು ಬೀಸುವ ಗಾಳಿ,
ಹಸೆಯೊಂದು ನಿನಗೇಕೆ ಬ್ರಹ್ಮಪರಿಯೊಳಗೆ?
ಶಿಶುವಾಗು ನೀಂ ಮನದಿ, ಹಸುವಾಗು, ಸಸಿಯಾಗು,
ಕಸಬೊರಕೆಯಾಗಿಳೆಗೆ – ಮಂಕುತಿಮ್ಮ. [ಕಸರು=ಕೊಳೆ]
ಸಮಾಜದಲ್ಲಿ ಇರುವ ’ಪೆರಕೆ’ಯಂತೆ ನಮ್ರರಾದಾಗ, ಅಂಥ ಸಮಾಜದಲ್ಲಿ ಕಸ ಎಂದರೆ ದೀನತೆ – ದುಷ್ಟತನಗಳು ನೀಗಿ ಸೌರಭ ಹರಡುತ್ತದೆ.
ಲೋಕಾಭಿಮುಖ ಕರ್ಮ, ಭಗವದಭಿಮುಖ ಜಾಗೃತಿ – ಇವುಗಳ ನಡುವೆ ಸಮನ್ವಯವನ್ನು ಸಾಧಿಸಿದವರ ವ್ಯಾವಹಾರಿಕ ಜೀವನವೂ ದಕ್ಷತೆ – ನೆಮ್ಮದಿಗಳಿಂದ ಕೂಡಿರುತ್ತದೆ – ಎಂಬುದು ಲೋಕಾನುಭವ.
ಅಮೆರಿಕದ ಖ್ಯಾತ ತಾತ್ತ್ವಿಕ ಹೆನ್ರಿ ಡೇವಿಡ್ ಥೋರೋ ಮರಣಶಯ್ಯೆಯಲ್ಲಿದ್ದ. ಆಗ ಪಾದರಿಯೊಬ್ಬ ಬಂದು ಅವನನ್ನು ಕೇಳಿದ – ‘Have you made peace with your God ? ’ – ನಿನ್ನ ದೇವರೊಡನೆ ನೀನು ಶಾಂತಿ-ಸಮಾಧಾನದಿಂದಿರುವೆ ತಾನೆ?. ಅದಕ್ಕೆ ಥೋರೋ ಉತ್ತರಿಸಿದ – ನಾನು ನನ್ನ ದೇವರೊಂದಿಗೆ ಎಂದೂ ಜಗಳವಾಡಿಯೇ ಇಲ್ಲ (I never quarrelled with my God).
ಅಂತರ್ಬಾಹ್ಯ ಸಮನ್ವಯ ಸಾಧಿಸಿದವರ ದಾರಿ ಅದು. ಈ ಸ್ವಯಮನುಶಾಸನಕ್ಕೆ ಸಾಹಿತ್ಯ, ಸತ್ಸಂಗ ಮೊದಲಾದವೆಲ್ಲ ಸಹಾಯ ಮಾಡುತ್ತವೆ.