ಕೊರೋನಾ ವೈರಸ್ ಇಡೀ ಜಗತ್ತನ್ನು ನಿಶ್ಚೇಷ್ಟಿತಗೊಳಿಸಿದ ಸಂದರ್ಭವನ್ನು ನಾವು ಗಮನಿಸಿದೆವು; ಮುಂದೆ ಯಾವ ದಿಕ್ಕಿನಲ್ಲಿ ಸಾಗಬೇಕೆಂದು ಇಡೀ ಜಗತ್ತು ಈಗ ಚಿಂತಿತವಾಗಿದೆ ಎಂದರೆ ತಪ್ಪಲ್ಲ. ಇಂತಹ ಸನ್ನಿವೇಶದಲ್ಲಿ ಭಾರತವು ಒಂದು ಹೆಜ್ಜೆ ಮುಂದಿಟ್ಟು ಜಗತ್ತಿಗೆ ಸಾಂತ್ವನ ಮತ್ತು ಭರವಸೆಗಳನ್ನು ನೀಡಬಹುದೆ? ‘ಹೌದು’ ಎನ್ನುವುದೇ ಇದಕ್ಕೆ ಉತ್ತರ.
ಕೊರೋನಾ ವೈರಸ್ ತಂದ ಆಪತ್ತಿನಿಂದಾಗಿ ಭೂಮಿ ತಿರುಗುವುದನ್ನು ಬಿಟ್ಟು ಉಳಿದೆಲ್ಲವೂ ನಿಶ್ಚೇಷ್ಟಿತಗೊಂಡವು. ತಲೆಯ ಮೇಲೆ ಕರ್ಕಶ ಸದ್ದಿನೊಂದಿಗೆ ಜೆಟ್ ವಿಮಾನಗಳ ಹಾರಾಟ ಇರಲಿಲ್ಲ. ರೈಲುಗಳು ತಮ್ಮ ನಿರಂತರ ಓಡಾಟವನ್ನು ನಿಲ್ಲಿಸಿದ್ದವು. ದೇಹದ ರಕ್ತನಾಳಗಳಂತಹ ಜಾಲವಾದ ರಸ್ತೆಗಳ ಮೇಲೆ ಕಾರು ಮತ್ತಿತರ ವಾಹನಗಳು ಸಂಚರಿಸುತ್ತಿರಲಿಲ್ಲ; ಜನರು ಮನೆಯ ಹೊರಗೆ ಜಾಗಿಂಗ್ ಅಥವಾ ಓಡುವುದು ಬಿಡಿ, ನಡೆಯುವುದನ್ನು ಕೂಡ ನಿಲ್ಲಿಸಿಬಿಟ್ಟಿದ್ದರು. ಭೂಮಿಯ ಮೇಲಿನ ಗಾಳಿ ಶುದ್ಧವೂ ಆರೋಗ್ಯಪೂರ್ಣವೂ ಆಗಿತ್ತು. ಮಾಲಿನ್ಯವು ಬಹುತೇಕ ಇಲ್ಲವಾಗಿತ್ತು; ಮತ್ತು ನಿರಂತರವಾದ ಹೊಗೆಯ ಹಿಂದೆ ಅಡಗಿದ್ದ ಶುದ್ಧಗಾಳಿಯು ಬಿಡುಗಡೆಗೊಂಡು ಹರಿದುಬರುತ್ತಿತ್ತು. ದೇಶದ ನದಿಗಳ ನೀರು ಶುದ್ಧವಾಗಿತ್ತು;
ಪ್ರಾಣಿ-ಪಕ್ಷಿಗಳು ಈ ಸೃಷ್ಟಿಯಲ್ಲಿ ತಮಗಿರುವ ಹಕ್ಕಿನ ಸ್ಥಾನವನ್ನು ಪಡೆಯಲು ಸಮರ್ಥವಾಗಿದ್ದವು; ನಿಸರ್ಗವು ತನ್ನ ಪೂರ್ಣ ವೈಭವವನ್ನು ಪುನಃ ಗಳಿಸಿಕೊಂಡಿತು. ಅದಕ್ಕೆ ಪುರಾವೆಯೆಂದರೆ ಹಿಮಾಲಯದ ಹಿಮಾಚ್ಛಾದಿತ ಶಿಖರಗಳು ದೂರದ ಪಂಜಾಬಿನ ಜಲಂಧರ್ನಿಂದ ಸ್ಪಷ್ಟವಾಗಿ ಗೋಚರಿಸುತ್ತಿದ್ದವು. ಈ ದೃಶ್ಯವು ಕಣ್ಮರೆಯಾಗಿ ದಶಕಗಳೇ ಕಳೆದಿದ್ದವು.
ಇದು ಕೇವಲ ಅಲ್ಪಾವಧಿಯ ಒಂದು ಸನ್ನಿವೇಶವೇ ಇರಬಹುದಾದರೂ ಇದು ಮಾನವನ ಇತಿಹಾಸದ ಒಂದು ನಿರ್ಣಾಯಕ ಕ್ಷಣ ಎನ್ನಿಸದೆ ಇರುವುದಿಲ್ಲ; ಮತ್ತದರ ನೆನಪು ಚಿರಸ್ಥಾಯಿಯಾಗದೆ ಇರುವುದಿಲ್ಲ. ಮಾನವನ ವಿವಿಧ ಚಟುವಟಿಕೆ ಮತ್ತು ಉದ್ಯಮಗಳ ಬೃಹದ್ ಯಂತ್ರವು ಒಮ್ಮೆ ನಿಲುಗಡೆಯಾದರೆ ಏನೆಲ್ಲ ಆಗಬಹುದು ಎನ್ನುವ ಒಂದು ಕಿರುನೋಟ ನಮಗೆಲ್ಲ ಮೊದಲಬಾರಿಗೆ ಒಮ್ಮೆ ಲಭ್ಯವಾಯಿತು. ಆದರೆ ಅಭಿವೃದ್ಧಿಯ ಚಕ್ರವನ್ನು ನಿಲ್ಲಿಸಿದುದರ ಪರಿಣಾಮಪರಂಪರೆ ಏನೆಲ್ಲ ಆಗಬಹುದೆಂದು ನಿಜವಾಗಿ ತಿಳಿಯಬೇಕಿದ್ದರೆ ನಾವು ಹೇಳುತ್ತಿರುವ ‘ಅಭಿವೃದ್ಧಿ’ ಯಾವುದು, ಅದು ಯಾವೆಲ್ಲ ಪರಿಣಾಮಗಳನ್ನು ಬೀರುತ್ತಿರುತ್ತದೆ ಎಂಬುದನ್ನು ಅರ್ಥೈಸಿಕೊಳ್ಳಬೇಕು.
ದುರ್ಬಲಗೊಳ್ಳುತ್ತಿರುವ ನೈತಿಕತೆ
ಎಸ್.ಕೆ. ಚಕ್ರವರ್ತಿ ಅವರು ತಮ್ಮ ‘Rising technology and falling ethics’ (ತಂತ್ರಜ್ಞಾನದ ಆರೋಹಣ ಮತ್ತು ನೈತಿಕತೆಯ ಅವರೋಹಣ) ಎನ್ನುವ ಲೇಖನದಲ್ಲಿ ಹೀಗೆ ಬರೆಯುತ್ತಾರೆ: “ಆಧುನಿಕ ವಿಜ್ಞಾನ ಮತ್ತು ತಂತ್ರಜ್ಞಾನದಿಂದ ಉಂಟಾದ ನಡೆ ಮತ್ತು ಯುಗವು, ಭೂಮಿ ಮತ್ತು ನಿಸರ್ಗದೊಂದಿಗೆ ಮಾನವನು ವೈಯಕ್ತಿಕ ಸಂಬಂಧ ಮತ್ತು ಭಾವನೆಗಳನ್ನು ಕಡಿದುಕೊಳ್ಳುತ್ತಿರುವುದಕ್ಕೆ ಸಮಾನವಾಗಿದೆ. ಸುಧಾರಿತ ವಸ್ತುನಿಷ್ಠತೆ ಎಂದರೆ ಎಲ್ಲ ರೂಪಕ, ಆಚರಣೆ ಮತ್ತು ಪುರಾಣಗಳನ್ನು ದೂರ ಮಾಡುವುದು ಮತ್ತು ಮಾನವ-ನಿಸರ್ಗ ಸಂಬಂಧವನ್ನು ಮೂಢನಂಬಿಕೆ ಎಂದು ವ್ಯಾಖ್ಯಾನಿಸುವುದಾಗಿದೆ. ಲೆಕ್ಕಾಚಾರದಿಂದ ಕೂಡಿದ ಭವಿಷ್ಯದ ನಿಯಂತ್ರಣವಿಧಾನವನ್ನು ಪ್ರಗತಿಪರ ಮತ್ತು ಉದಾರ ಮನೋಭಾವ ಎಂದು ತಿಳಿಯಲಾಗುತ್ತದೆ. ಈ ಹಂತದಲ್ಲಿ ನಿಜವಾದ ಬಿಕ್ಕಟ್ಟು ಉಂಟಾಗಿದೆ. ಸಂಬಂಧವಿಲ್ಲದ ಯಾವುದೇ ವಿಷಯದ ಬಗ್ಗೆ ಕ್ರಮ ಸರಿಯೇ ಅಥವಾ ತಪ್ಪೇ ಎಂಬುದನ್ನು ನೋಡಲು ಒಂದು ಕ್ಷಣವೂ ನಿಲ್ಲಬೇಕಿಲ್ಲ. ಮಾನವವ್ಯವಹಾರ ಮತ್ತು ನಿಸರ್ಗದ ನಡುವಣ ನೈತಿಕತೆಗೆ ಹೊರತಾದ ಅತ್ಯಂತ ಮೂಲಭೂತ ವಿವರಣೆಯು ಈ ಉನ್ನತ ಪ್ರಜ್ಞೆಯ ಬೆಳವಣಿಗೆ ಎನಿಸುತ್ತದೆ. ವಸ್ತು, ಗಾಳಿ, ನೀರು, ಸಮಯ, ದೂರ ಮುಂತಾದವುಗಳ ನಿಯಂತ್ರಣ ಮತ್ತು ಪಳಗಿಸುವಿಕೆಯ ಮೂಲಕ ವಿಜ್ಞಾನ-ತಂತ್ರಜ್ಞಾನಗಳು ಬಾಹ್ಯ ಭೌತಿಕಜೀವನದ ಹಲವು ವಿಷಯಗಳಿಗೆ ತುಂಬ ಅನುಕೂಲ ಉಂಟುಮಾಡಿರುವುದರಲ್ಲಿ ಯಾವುದೇ ಅನುಮಾನವಿಲ್ಲ. ಆದರೂ ನಾವಿಂದು ಕಾಣುವ ಮುಖ್ಯ ಲಕ್ಷಣವೆಂದರೆ, ಸಾಮರಸ್ಯದಿಂದ ದಬ್ಬಾಳಿಕೆಯ ಕಡೆಗೆ ಮತ್ತು ಭಯ-ಭಕ್ತಿಯಿಂದ ದರ್ಪ-ಉದ್ಧಟತನಗಳತ್ತ ಚಲಿಸಿರುವುದೇ ಆಗಿದೆ.
“ಪರಿಸರ ಮತ್ತು ವಾತಾವರಣದ ಕಡೆಗಿನ ಅನೈತಿಕತೆಗೆ ಮನುಷ್ಯನು ನಿಸರ್ಗದಿಂದ ಪರಕೀಯನಾಗಿರುವುದೇ ಮುಖ್ಯ ಕಾರಣ ಎಂದಾದರೆ, ಅದೇ ಪರಕೀಯತೆಯು ಮಾನವ ಸಮಾಜದ ಎಲ್ಲ ಆಯಾಮಗಳನ್ನು ಸಡಿಲಗೊಳಿಸುತ್ತಿದೆ ಎಂದು ಕೂಡ ಹೇಳಬಹುದು. ರಾಷ್ಟ್ರದಿಂದ ರಾಷ್ಟ್ರಕ್ಕೆ, ಸಂಸ್ಥೆಯಿಂದ ಸಂಸ್ಥೆಗೆ, ಮನುಷ್ಯನಿಂದ ಮನುಷ್ಯನಿಗೆ ಮತ್ತು ಅದೇ ರೀತಿಯ ಸಂಬಂಧದ ಜಾಲಗಳು, ವಿಜ್ಞಾನ-ತಂತ್ರಜ್ಞಾನದ ಯಂತ್ರದಿಂದ ಶಕ್ತಿ ಪಡೆದ ವಸ್ತುನಿಷ್ಠ ಶ್ರೀಮಂತಿಕೆಯ ಅತ್ಯುನ್ನತ ಗುರಿಗೆ ಕ್ರಮೇಣ ಅತ್ಯಂತ ನಿರ್ಣಾಯಕವಾಗುತ್ತಿವೆ. ಆದ್ದರಿಂದ ಅಂತಾರಾಷ್ಟ್ರೀಯ ಮ್ಯಾನೇಜ್ಮೆಂಟ್ ವ್ಯವಸ್ಥಾಜಾಲವು ಇಂದು ಮನಸ್ಸುಗಳು ಪರಸ್ಪರ ಒಂದಾಗುವುದನ್ನು ಪ್ರೋತ್ಸಾಹಿಸುತ್ತಿಲ್ಲ. ರಹಸ್ಯ ರಾಜಕೀಯ ಮತ್ತು ಭೌತಿಕಕಾರ್ಯಸೂಚಿಗಳು ಒಳಗಿನಿಂದಲೇ ಕೆಲಸ ಮಾಡುತ್ತವೆ; ಅವೆಲ್ಲವುಗಳ ಗುರಿ ವಿಜ್ಞಾನ-ತಂತ್ರಜ್ಞಾನಗಳ ಓಟದ ವೇಗವನ್ನು ಇನ್ನಷ್ಟು ಹೆಚ್ಚಿಸುವುದಾಗಿರುತ್ತದೆ. ಈ ಪ್ರಕ್ರಿಯೆಯ ಫಲವಾಗಿ ನೈತಿಕತೆಯ ಭಾವನೆಗಳು ದುರ್ಬಲವಾಗುತ್ತಹೋಗುತ್ತವೆ; ಆ ಭಾವನೆಗಳು ಮೃದು ಮತ್ತು ಅಪ್ರಯೋಜಕ ಎಂಬಂತೆ ತಿಳಿಯಲಾಗುತ್ತದೆ. ನಿಸರ್ಗವನ್ನು ಒಂದು ಸಂಪನ್ಮೂಲ ಹಾಗೂ ಸಲಕರಣೆ ಎಂದು ತಿಳಿಯುವುದಷ್ಟೇ ಅಲ್ಲ; ಮನುಷ್ಯನು ಕ್ರಮೇಣ ಈ ಚಾಣಾಕ್ಷವಾದ ತಾಂತ್ರಿಕಕೇಂದ್ರಿತ ದೃಷ್ಟಿಕೋನದ ಅಧಿಪತಿಯಾಗಿ ರೂಪುಗೊಳ್ಳುತ್ತಾನೆ.
“ಒಂದು ಉಪಕರಣ ಎನ್ನುವ ಹಂತದಿಂದ ಇದು ಯಂತ್ರದ ಮಟ್ಟಕ್ಕೇರುತ್ತದೆ; ಅಲ್ಲಿಂದ ಗಣಕೀಕರಣ (ಕಂಪ್ಯೂಟರ್) ಹಾಗೂ ಚಿಪ್ – ಹೀಗೆ ಮುಂದುವರಿಯುತ್ತದೆ ಮತ್ತು ಈ ಬೆಳವಣಿಗೆಯು ಕ್ರಮೇಣ ಮಾನವಜನಾಂಗದ ಮಾನವೀಯತೆಯನ್ನೇ ಕಸಿಯುತ್ತಹೋಗುತ್ತದೆ.”
ಅಭಿವೃದ್ಧಿ ಮತ್ತು ಕೊಳ್ಳುಬಾಕತನಗಳ ವೇಗದ ವಿವೇಚನಾರಹಿತ ಏರಿಕೆಯಿಂದಾಗಿ ಈ ಪರಿಸ್ಥಿತಿ ಉದ್ಭವಿಸಿದೆ.
ಕೊರೋನಾ ವೈರಸ್ನ ಹಾವಳಿಯಿಂದಾಗಿ ಈ ವೇಗಕ್ಕೆ ಸ್ವಲ್ಪ ತಡೆ ಬಿತ್ತು. ನದಿಯ ನೀರು ಮತ್ತು ಗಾಳಿ ಶುದ್ಧವಾದವು; ಮನುಷ್ಯ ತನ್ನ ಮನೆಯವರು ಮತ್ತು ಪ್ರೀತಿಪಾತ್ರರ ನಡುವೆ ಹೆಚ್ಚು ಸಮಯವನ್ನು ಕಳೆಯುವುದು ಸಾಧ್ಯವಾಯಿತು. ಬೆಚ್ಚನೆಯ ನಿಕಟ ಸಂಬಂಧಗಳು ಮತ್ತು ಕೇವಲ ಮೂಲಭೂತ ಆವಶ್ಯಕತೆಗಳ ಮೂಲಕ ಹಲವು ದಿನಗಳನ್ನು ಕಳೆದ ಪರಿಣಾಮವಾಗಿ ಕೊಳ್ಳುಬಾಕತನವೇ ಮುಖ್ಯವಾದ ಜೀವನ ಅಲ್ಲದೆಯೂ ಬದುಕಲು ಸಾಧ್ಯ ಎನ್ನುವುದು ಜನರ ಗಮನಕ್ಕೆ ಬಂದಿದೆ. ಈಗ ಸಾಮಾಜಿಕ ಮಾಧ್ಯಮದ ನಡುವೆ ಚಲಾವಣೆಯಲ್ಲಿರುವ ಒಂದು ಮಾತು ಹೀಗಿದೆ: “ನಿನಗೆ ಹೊರಗಡೆ (ಬಾಹ್ಯ ಪ್ರಪಂಚಕ್ಕೆ) ಹೋಗಲು ಸಾಧ್ಯವಿಲ್ಲದಾಗ ನೀನು ಒಳಗಡೆ (ಅಂತರಂಗದ ಜೀವನಕ್ಕೆ) ಹೋಗುತ್ತೀ.” ಇದು ಭಾರತೀಯ ಚಿಂತನೆಯ ಸಾರವಾದ ಈ ಅಂಶವನ್ನು ನಮಗೆ ನೆನಪಿಸುತ್ತದೆ: “ಕೇವಲ ಹೊರಗಡೆ ಸುತ್ತುತ್ತ ಇರುವುದಲ್ಲ; ಒಳಗಿನ ಪ್ರಯಾಣವನ್ನು ಕೂಡ ನಡೆಸು.”
ಕರಾಳ ಮುಖಗಳ ಅನಾವರಣ
ಜಗತ್ತು ಸ್ಥಗಿತಗೊಂಡ ಈಚಿನ ಸ್ಥಿತಿಗೆ ಅವರೋಹಣವನ್ನು ಸೂಚಿಸುವ ಇನ್ನೊಂದು ಮುಖ ಕೂಡ ಇದ್ದಿರಬಹುದು. ಜಗತ್ತಿನ ಆರ್ಥಿಕತೆಯ ಚಕ್ರ ನಿಂತುಹೋಯಿತು. ಉದ್ಯೋಗಗಳು ನಷ್ಟವಾದವು; ಹಲವರಿಗೆ ಸಂಬಳವೇ ಬಾಕಿ ಆಯಿತು; ಸಾಲದ ಹೊರೆ ಬೆಳೆಯಿತು. ಜನ ತಮ್ಮ ತುತ್ತನ್ನು ಕಂಡುಕೊಂಡಿದ್ದ ನಗರಗಳನ್ನು ತೊರೆದು ತಮ್ಮ ಹಳ್ಳಿಗಳಿಗೆ ವಾಪಸಾಗಬೇಕಾಯಿತು. ಇಂತಹ ಸನ್ನಿವೇಶದಿಂದ ಇನ್ನಷ್ಟು ಸಮಸ್ಯೆಗಳು ಎದುರಾಗುವುದು ನಿಜ; ಮತ್ತು ಭಾರತದಂತಹ ವೈವಿಧ್ಯಮಯ ಹಾಗೂ ದೊಡ್ಡ ದೇಶವನ್ನು ಅವು ಬಾಧಿಸದೆ ಇರುವುದಿಲ್ಲ.
ಲೇಖಕ ಚಿಲ್ಲಿ ಲಿಮ್ ತನ್ನ ಪುಸ್ತಕ ‘Dare to Fail’ನಲ್ಲಿ ಒಂದು ಮುಖ್ಯವಾದ ಒಳನೋಟವನ್ನು ನೀಡುತ್ತಾರೆ. ಅಲ್ಲಿ ಅವರ ಮಾತು ಹೀಗಿದೆ: “ಒಂದು ಸಮಸ್ಯೆಯನ್ನು ಎದುರಿಸುವಾಗ ಅಲ್ಲಿ ನೀವು ಅದರಿಂದ ದೂರ ಸರಿದರೆ ಅಲ್ಲೊಂದು ಕಷ್ಟದ ಪರಿಸ್ಥಿತಿ ನಿರ್ಮಾಣವಾಗುತ್ತದೆ. ಆ ಸವಾಲನ್ನು ಎದುರಿಸಲು ನಿಮ್ಮ ಬಳಿ ಇರುವ ಸಂಪನ್ಮೂಲಗಳ ಬಗ್ಗೆ ಯೋಚಿಸಿದಾಗ ಅದೊಂದು ಅವಕಾಶವಾಗುತ್ತದೆ.”
ಭಾರತದ ಪಾರಂಪರಿಕ ಶಿಕ್ಷಣಪದ್ಧತಿಯು ಯಾವಾಗಲೂ ಹೊಸತರ ಹುಡುಕಾಟ ಮತ್ತು ಪ್ರಶ್ನಿಸುವ ಮನೋಭಾವವನ್ನು ಪ್ರೋತ್ಸಾಹಿಸುತ್ತ ಬಂದಿತ್ತು. ಗುರುಗಳು ವಿದ್ಯಾರ್ಥಿಗಳಿಗೆ ಹೇಗೆ ಕಲಿಯಬೇಕು ಎಂಬುದನ್ನು ಹೇಳಿಕೊಡುತ್ತಿದ್ದರು. ಮತ್ತು ತಮ್ಮ ನಡತೆ ಮತ್ತು ಉದಾಹರಣೆಯ ಮೂಲಕ ಜೀವನವನ್ನು ಹೇಗೆ ನಡೆಸಬೇಕೆಂದು ಕಲಿಸುತ್ತಿದ್ದರು. ಆದರೆ ಈಗ ಶಿಕ್ಷಣವು ಒಂದು ವಾಣಿಜ್ಯೋದ್ಯಮದ ಸ್ವರೂಪವನ್ನು ಪಡೆದುಕೊಂಡಿದೆ. ಹೇಗೆ ಹಣ ಮಾಡಬೇಕು ಮತ್ತು ಇಂದಿನ ಕೊಳ್ಳುಬಾಕ ಸಂಸ್ಕೃತಿಯಲ್ಲಿ ಹೇಗೆ ಹೊಂದಿಕೊಳ್ಳಬೇಕೆಂಬುದನ್ನು ವಿದ್ಯಾರ್ಥಿಗಳಿಗೆ ಕಲಿಸುವುದೇ ಶಿಕ್ಷಣದ ಉದ್ದೇಶವಾದಂತಿದೆ. ಪರಿಣಾಮವಾಗಿ ನಾವು ಸ್ವಕೇಂದ್ರಿತ (ಸ್ವಾರ್ಥಿ) ಮತ್ತು ಭೌತಿಕವಾದ ತಲೆಮಾರುಗಳನ್ನು ತಯಾರಿಸಲಾಗುತ್ತಿದೆ.
ಅಭಿವೃದ್ಧಿ ಮತ್ತದರ ದಿಕ್ಕನ್ನು ಅಳೆಯುವ ಮಾನದಂಡವು ನಗರಕೇಂದ್ರಿತವಾಗಿರುವುದರಿಂದ ರಸ್ತೆ, ಆರೋಗ್ಯಸೇವೆ, ಶಿಕ್ಷಣ, ಉದ್ಯೋಗ ಮುಂತಾದ ಎಲ್ಲ ಮೂಲಭೂತ ಸವಲತ್ತುಗಳು ನಗರಕೇಂದ್ರಿತವಾಗಿಬಿಟ್ಟಿವೆ. ಪರಿಣಾಮವಾಗಿ ಭಾರತದ ಪ್ರತಿಭೆ ಮತ್ತು ಬುದ್ಧಿಶಕ್ತಿಗಳು ಹಳ್ಳಿಗಳಿಂದ ನಗರಗಳತ್ತ ವಲಸೆಹೋದವು; ನಗರಗಳಿಂದ ಮಹಾನಗರಗಳ ಕಡೆಗೆ ಮತ್ತು ಮಹಾನಗರ(ಮೆಟ್ರೋ)ಗಳಿಂದ ವಿದೇಶಗಳತ್ತ ಮುಖಮಾಡಿದವು. ಅದರಿಂದಾಗಿ ಒಂದೆಡೆ ಹಳ್ಳಿಗಳು ಖಾಲಿಯಾದರೆ ಇನ್ನೊಂದೆಡೆ ನಗರಗಳಲ್ಲಿ ಜನದಟ್ಟಣೆ ಹೆಚ್ಚಾಗಿದೆ. ನಗರದ ಜೀವನ ಅನುಕೂಲಕರವಾಗಿರಬಹುದು; ಆದರೆ ಗಿರಣಿಯ ಓಟದಂತಿದೆ; ವಾಸ್ತವದಿಂದ ಕಡಿದುಕೊಂಡು ಕೃತಕವಾಗುತ್ತಿದೆ; ಮತ್ತು ಅಂತಿಮವಾಗಿ ಟೊಳ್ಳು (hollow) ಎನಿಸುತ್ತಿದೆ. ಈಗ ನಮ್ಮ ಮುಂದಿರುವ ಅಭಿವೃದ್ಧಿಯ ಮಾದರಿಯಲ್ಲಿ ಪರ್ಯಾಯ ಮಾರ್ಗಗಳೇ ಇಲ್ಲ. ಹಿಂದುಳಿದ ಮತ್ತು ಅಭಿವೃದ್ಧಿಯ ಹಾದಿಯಲ್ಲಿದ್ದ ದೇಶಗಳ ಮೇಲೆ ಹೇರಲಾದ ಜಾಗತೀಕರಣವು ಈಗ ತನ್ನ ಕರಾಳಮುಖಗಳನ್ನು ತೋರಿಸುತ್ತಿದೆ. ಈಗ ಆಚರಣೆಗೆ ಬಂದಿರುವ ಜಾಗತೀಕರಣವು ಹಿಂದೆ ಇದ್ದ ವಸಾಹತುಶಾಹಿಯ ಹೊಸ ಅವತಾರವಲ್ಲದೆ ಬೇರೇನೂ ಅಲ್ಲ ಎನ್ನುವುದು ಈಗ ಇಡೀ ಜಗತ್ತಿಗೆ ಅರ್ಥವಾಗುತ್ತಿದೆ; ಪುಟ್ಟ ಬದಲಾವಣೆಯೆಂದರೆ ಈಗ ಹಿಂದುಳಿದ ಮತ್ತು ಅಭಿವೃದ್ಧಿಶೀಲ ದೇಶಗಳನ್ನು ಚಾಣಾಕ್ಷತನದಿಂದ ಅವರ ಗಮನಕ್ಕೆ ಬಾರದಂತೆ ಶೋಷಿಸಲಾಗುತ್ತಿದೆ. ಎಲ್ಲರೂ ಈ ವಿಷಮ ವೃತ್ತದಿಂದ ಹೊರಬರುವ ವಿಧಾನದ ಬಗ್ಗೆ ಯೋಚಿಸುತ್ತಿದ್ದಾರೆ.
ಅದ್ವಿತೀಯ ಭಾರತ
ಆದ್ದರಿಂದ ಇಡೀ ಜಗತ್ತೇ ಒಂದು ನಿಲುಗಡೆಗೆ ಬಂದು ‘ಮುಂದೇನು? ಇನ್ನು ಎತ್ತ ಸಾಗಬೇಕು? – ಎಂದು ಯೋಚಿಸುತ್ತಿರುವಾಗ ಭಾರತ ಒಂದು ಹೆಜ್ಜೆ ಮುಂದಿಟ್ಟು ಜಗತ್ತಿಗೆ ಸಾಂತ್ವನ-ಭರವಸೆಗಳನ್ನು ನೀಡಬಹುದೆ?
‘ಹೌದು’ ಎನ್ನುವುದೇ ಇದಕ್ಕೆ ಉತ್ತರ; ಭಾರತ ಮತ್ತು ಭಾರತ ಮಾತ್ರ ಇದನ್ನು ಮಾಡಬಲ್ಲದು. ಏಕೆಂದರೆ ಇದಕ್ಕೆ ಬೇಕಾದ ಮೂರು ಗುಣಗಳು ಭಾರತದ ಬಳಿ ಮಾತ್ರ ಇವೆ. ಒಂದು, ಸಾಮಾಜಿಕ ಮತ್ತು ರಾಷ್ಟ್ರೀಯ ಜೀವನದಲ್ಲಿ ಸುಮಾರು ಹತ್ತು ಸಾವಿರ ವರ್ಷಗಳಿಗೂ ಅಧಿಕ ಅನುಭವವನ್ನು ಈ ದೇಶ ಹೊಂದಿದೆ. ಎರಡನೆಯದಾಗಿ ಭಾರತವು ಪರಿಪೂರ್ಣ ಮತ್ತು ಸಮಗ್ರ ಜೀವನದೃಷ್ಟಿಯನ್ನು ಆಧರಿಸಿದ ಅದ್ವಿತೀಯವಾದ ಆಧ್ಯಾತ್ಮಿಕತೆ ಹಾಗೂ ಈ ವೈಶ್ವಿಕ ದೃಷ್ಟಿಯ ಜೀವನಾನುಭವವನ್ನು ಹೊಂದಿದೆ. ಆಧುನಿಕ ವಿಜ್ಞಾನ-ತಂತ್ರಜ್ಞಾನದ ಸಂಶೋಧನೆಗಳು ಜಗತ್ತನ್ನು ಕಿರಿದುಗೊಳಿಸಿವೆ; ಹೀಗಿರುವಾಗ ಮಾನವಜನಾಂಗವು ತನ್ನ ವೈವಿಧ್ಯಮಯವಾದ ಜನಾಂಗ, ಮತ ಮತ್ತು ಭಾಷೆಗಳೊಂದಿಗೆ ಒಟ್ಟಾಗಿ ಜೀವಿಸಬೇಕಿದ್ದರೆ ಭಾರತದ ಉದಾಹರಣೆಯನ್ನು ನೋಡಲೇಬೇಕು; ಏಕೆಂದರೆ ವಿವಿಧತೆಯಲ್ಲಿ ಏಕತೆ ಎಂಬುದು ನಮ್ಮ ರಕ್ತದಲ್ಲೇ ಇದೆ; ವಿವಿಧತೆಯನ್ನು ನಾವು ಅನಾದಿಕಾಲದಿಂದ ಪೋಷಿಸಿಕೊಂಡು ಬಂದಿದ್ದೇವೆ; ಮಾನವಜೀವನದ ಎಲ್ಲ ಅಂಶಗಳನ್ನು ಗಮನಿಸುತ್ತ ನಮ್ಮ ಬಯಕೆಗಳನ್ನು ನಿಯಂತ್ರಣದಲ್ಲಿರಿಸಿಕೊಂಡು ನಾವು ಬದುಕಿದ್ದೇವೆ. ಇದು ಸುದೀರ್ಘಕಾಲದಿಂದ ಜಗತ್ತಿನ ಗಮನಕ್ಕೂ ಬಂದಿದೆ; ಅನುಭವಕ್ಕೂ ಬಂದಿದೆ.
ಭೌತಿಕಸಂಪತ್ತಿನ ಅತ್ಯುನ್ನತ ಸ್ಥಿತಿಯನ್ನು ಭಾರತ ಅನುಭವಿಸಿದೆ; ಆರಂಭದಿಂದ ಕ್ರಿ.ಶ. 1700ರವರೆಗೆ ಜಾಗತಿಕ ವಹಿವಾಟಿನ ಅತಿದೊಡ್ಡ ಪಾಲು ಭಾರತದ್ದಾಗಿತ್ತು. ಸಾವಿರಾರು ವರ್ಷಗಳ ಕಾಲ ಭಾರತದ ಜನ ವ್ಯಾಪಾರಕ್ಕಾಗಿ ಜಗತ್ತಿನ ಬೇರೆ ಬೇರೆ ದೇಶಗಳಿಗೆ ಹೋಗಿದ್ದಾರೆ ಎಂಬುದನ್ನು ಇತಿಹಾಸ ದಾಖಲಿಸಿದೆ. ಆದರೆ ಈ ವಿದೇಶೀ ನೆಲಗಳಲ್ಲಿ ತಮ್ಮ ವಸಾಹತುಗಳನ್ನು ಸ್ಥಾಪಿಸುವುದು, ಅಲ್ಲಿನ ಜನರನ್ನು ಶೋಷಿಸುವುದು, ಅವರನ್ನು ಗುಲಾಮರನ್ನಾಗಿ ಮಾಡಿಕೊಳ್ಳುವುದು ಹಾಗೂ ಅವರನ್ನು ಮತಾಂತರಗೊಳಿಸುವುದು ಮುಂತಾದ ಕೆಲಸಗಳನ್ನು ಭಾರತೀಯರು ಮಾಡಲಿಲ್ಲ. ಬದಲಾಗಿ ತಮ್ಮ ಸಂಸ್ಕೃತಿಯನ್ನು ನೀಡಿದರು; ತಮ್ಮ ಸ್ವಂತ ಉದಾಹರಣೆಯ ಮೂಲಕ ಉತ್ತಮ ಸುಸಂಸ್ಕೃತ ಜೀವನವಿಧಾನವನ್ನು ಆ ದೇಶಗಳ ಜನರ ಮುಂದಿಟ್ಟರು; ತಾವು ಹೋದಕಡೆಗಳಲ್ಲೂ ಇದನ್ನೇ ಮಾಡಿದರು. ಆಧ್ಯಾತ್ಮಿಕತೆಯನ್ನು ಆಧರಿಸಿದ ನಮ್ಮ ಜೀವನದೃಷ್ಟಿಯ ಮೂಲಕ ಇದು ಸಾಧ್ಯವಾಯಿತು. ಇದು ನಮಗೆ ಇಡೀ ಜಗತ್ತನ್ನು ನಮ್ಮ ಸ್ವಂತ ಕುಟುಂಬದಂತೆ ನೋಡಲು ಕಲಿಸಿದೆ (ವಸುಧೈವ ಕುಟುಂಬಕಮ್). ನಾವು ಯಾವ ಕಡೆಗೆಲ್ಲ ಹೋಗಿದ್ದೇವೋ ಅಲ್ಲೆಲ್ಲ ಸಂಪತ್ತು ಮತ್ತು ಸಮೃದ್ಧಿಗಳನ್ನು ಹಬ್ಬಿಸಿದ್ದೇವೆ.
ಭಾರತಕ್ಕೆ ಒಂದು ದರ್ಶನ (ಮುನ್ನೋಟ), ತಜ್ಞತೆ ಮತ್ತು ಜೀವನಾನುಭವಗಳು ಇವೆ ಎಂಬುದನ್ನು ಇದು ತೋರಿಸುತ್ತದೆ.
ಮೇಲೆ ಕೇಳಿದ್ದನ್ನು ಸಾಧಿಸುವುದು ಹೇಗೆ ಎಂಬುದನ್ನೀಗ ಪರಿಶೀಲಿಸಬಹುದು.
ಕೊರೋನಾ ವೈರಸ್ ತಂದಿಟ್ಟ ಅನಾಹುತದ ಪರಿಣಾಮಗಳನ್ನು ಪರಿಶೀಲಿಸಿದ ಬಳಿಕ ತನ್ನ ವಿಶಾಲ ಅನುಭವ, ಮಾನವನ ಇತಿಹಾಸದಲ್ಲಿ ಸ್ಥಾಪಿಸಿರುವ ಅಸ್ತಿತ್ವಗಳ ಹಿನ್ನೆಲೆಯಲ್ಲಿ ಭಾರತವು ಹೊಸ ಜಾಗತಿಕ ವ್ಯವಸ್ಥೆಯನ್ನು ತರುವಂತಹ ಪ್ರಸ್ತುತ ಹೊಣೆಗಾರಿಕೆಯನ್ನು ನಿರ್ವಹಿಸಬಲ್ಲದೆ ಎಂಬುದನ್ನು ನೋಡಬಹುದು.
ಭಾರತವು ಯಾವಾಗಲೂ ತನ್ನ ಸ್ವಂತ ಹಿತಾಸಕ್ತಿಗಳ ಆಚೆಗೆ ನೋಡುತ್ತ ಬಂದಿದೆ. ಇಡೀ ಜಗತ್ತಿನ ಕಲ್ಯಾಣದ ಕಡೆಗೆ ಅದು ತನ್ನ ದೃಷ್ಟಿಯನ್ನು ನೆಟ್ಟಿದೆ. ‘ಆತ್ಮನೋ ಮೋಕ್ಷಾರ್ಥಂ ಜಗತ್ ಹಿತಾಯ ಚ’ (ತನ್ನ ಮೋಕ್ಷ ಮತ್ತು ಜಗತ್ತಿನ ಹಿತಕ್ಕಾಗಿ) ಎನ್ನುವ ಮಾತಿನಲ್ಲಿ ಅದನ್ನು ಕಾಣಬಹುದು.
ಆಧಾರ ಸ್ತಂಭಗಳು
‘ಸ್ವದೇಶ್, ಸಮಾಜ್, ಗುರುವರ್ಯ’ ಎನ್ನುವ ತಮ್ಮ ಪ್ರಬಂಧದಲ್ಲಿ ರಬೀಂದ್ರನಾಥ ಠಾಕೂರ್ ಹೀಗೆ ಹೇಳುತ್ತಾರೆ: “ಮೊದಲನೆಯದಾಗಿ, ನಾವು ಏನಾಗಿದ್ದೇವೋ ಅದು ಆಗಬೇಕು.” ಇಲ್ಲಿ ‘ನಾವು’ ಎಂದರೆ ನಮ್ಮ ಅಸ್ಮಿತೆ ಅಥÀವಾ ಅನನ್ಯತೆ. ಆಧ್ಯಾತ್ಮಿಕತೆಯನ್ನು ಆಧರಿಸಿದ ಸಮಗ್ರ ಮತ್ತು ಪರಿಪೂರ್ಣ ಜೀವನದೃಷ್ಟಿಯಲ್ಲಿ ಅದನ್ನು ಗುರುತಿಸಬಹುದು. ಉತ್ತರದ ಹಿಮಾಲಯದಿಂದ ದಕ್ಷಿಣದ ಅಂಡಮಾನ್ ದ್ವೀಪದವರೆಗೆ ಹಬ್ಬಿರುವ ಭೂಪ್ರದೇಶದಲ್ಲಿ ವಾಸಿಸುತ್ತಿರುವ, ಹಲವು ಭಾಷೆಗಳನ್ನು ಮಾತನಾಡುತ್ತಿರುವ, ವಿವಿಧ ಜಾತಿಗಳಿಗೆ ಸೇರಿದ, ವಿಭಿನ್ನ ದೇವತೆಗಳನ್ನು ಪೂಜಿಸುತ್ತಿರುವ ಈ ಜನ ಪ್ರಸ್ತುತ ಅಸ್ಮಿತೆಯನ್ನು ತಮ್ಮದೆಂದು ಒಪ್ಪಿಕೊಳ್ಳುತ್ತಾರೆ. ಈ ಅಸ್ಮಿತೆಯನ್ನು ಜನ ಹಲವು ಬಗೆಯಲ್ಲಿ ಬಣ್ಣಿಸಿದ್ದಾರೆ; ಆದರೆ ಅದು ಮುಖ್ಯವಾಗಿ ನಾಲ್ಕು ಕಂಬಗಳ ಮೇಲೆ ನಿಂತಿದೆ.
ಮೊದಲನೆಯದಾಗಿ, ‘ಏಕಂ ಸತ್ ವಿಪ್ರಾಃ ಬಹುಧಾ ವದಂತಿ, (ಇರುವುದೊಂದೇ ಸತ್ಯ. ಅದನ್ನು ಜ್ಞಾನಿಗಳು ಬೇರೆ ಬೇರೆ ಹೆಸರುಗಳಿಂದ ಕರೆಯುತ್ತಾರೆ; ಹಲವು ಮಾರ್ಗಗಳಿಂದ ಆ ಸತ್ಯ ಅಥವಾ ವಸ್ತುವನ್ನು ತಲಪಬಹುದು). ಎರಡನೆಯದಾಗಿ, ವಿವಿಧತೆಯನ್ನು ವ್ಯತ್ಯಾಸ ಎಂದು ನೋಡುವುದಲ್ಲ, ಬದಲಾಗಿ ವಿವಿಧತೆಯಲ್ಲಿ ಏಕತೆಯನ್ನು ಮತ್ತು ಅದೇ ಒಗ್ಗಟ್ಟಿನ ಮೂಲ ಎಂಬುದನ್ನು ಕಾಣಬೇಕು. ಮೂರನೆಯ ಅಂಶವೆಂದರೆ, ಪ್ರತಿಯೊಂದು ಆತ್ಮವೂ ಪರಮಾತ್ಮನ ಒಂದು ಭಾಗ; ಮತ್ತು ತನ್ನ ಒಳಗಿರುವ ಪರಮಾತ್ಮನನ್ನು ಕಂಡು ಅದರಲ್ಲಿ ಒಂದಾಗುವುದು ಮಾನವ ಜೀವಿತದ ಗುರಿ ಎಂದು ತಿಳಿಯುವುದು. ಇನ್ನು ಕೊನೆಯದಾಗಿ, ಪರಮಾತ್ಮನೊಂದಿಗೆ ಸೇರುವ ಪ್ರತಿಯೊಬ್ಬ ವ್ಯಕ್ತಿಯ ಮಾರ್ಗ ಒಂದೇ ಆಗಬೇಕಿಲ್ಲ; ಬೇರೆ ಬೇರೆ ಆಗಿರಬಹುದು. ಆಯಾ ವ್ಯಕ್ತಿಯ ಆಸಕ್ತಿ, ಸಾಮಥ್ರ್ಯ ಮತ್ತು ಸ್ವಭಾವಗಳಿಗೆ ಅನುಗುಣವಾಗಿ ಅದು ಬದಲಾಗುತ್ತದೆ. ಪರಮಾತ್ಮನನ್ನು ಸೇರುವ ಎಲ್ಲರ ದಾರಿಗಳು ವಿಭಿನ್ನವಾಗಿದ್ದರೂ, ಆ ಪರಮೋಚ್ಚ ಶಕ್ತಿಯಲ್ಲಿ ಒಂದಾಗುವುದು ಎಲ್ಲ ಜೀವಿಗಳ ಅಂತಿಮ ಗುರಿಯಾಗಿರುತ್ತದೆ, ಆಗಿರಬೇಕು. ಮೇಲೆ ಹೇಳಿದ ನಾಲ್ಕು ಸ್ತಂಭಗಳನ್ನು ಆಧರಿಸಿದ ಅಸ್ಮಿತೆಯು ಎಲ್ಲ ಭಾರತವಾಸಿಗಳ ಜೀವನದಲ್ಲಿ ಆಧರಿಸಿದ ಅಸ್ಮಿತೆಯು ಪ್ರಕಟಗೊಳ್ಳಬೇಕು.
ಈಗಲೂ ಶೇಕಡಾ 60ಕ್ಕಿಂತಲೂ ಹೆಚ್ಚಿನ ಭಾರತೀಯ ಬದುಕು ಹಳ್ಳಿಗಳಲ್ಲಿದೆ. ಹಿಂತಿರುಗಿ ನೋಡಿದರೆ ಈ ಹಳ್ಳಿಗಳ ಸ್ಥಿತಿ ಉತ್ತಮವಾಗೇನೂ ಇರಲಿಲ್ಲ. ರಸ್ತೆಗಳಿಲ್ಲ; ಗುಣಮಟ್ಟ ಶಿಕ್ಷಣಕ್ಕೆ ಅವಕಾಶವಿಲ್ಲ; ಒಳ್ಳೆಯ ಆರೋಗ್ಯ ಸವಲತ್ತಿಲ್ಲ; ಹಾಗೂ ಯುವಜನರಿಗೆ ಉದ್ಯೋಗಾವಕಾಶಗಳೂ ಇಲ್ಲ. ಈ ಹಳ್ಳಿಗಳಲ್ಲಿ ವಾಸಿಸುವುದೆಂದರೆ ಹಿಂದುಳಿದವರು ಆಗಿರುವುದೆಂದೇ ಅರ್ಥ. ಆದ್ದರಿಂದ ಶಿಕ್ಷಣ ಮತ್ತು ಆರೋಗ್ಯ ಸೇವೆಗಾಗಿ, ಜೀವನೋಪಾಯವನ್ನು ಕಂಡುಕೊಳ್ಳುವುದಕ್ಕಾಗಿ ಪ್ರತಿಭಾವಂತರು ಹಾಗೂ ಬದುಕಿನಲ್ಲಿ ಆಕಾಂಕ್ಷೆ ಇದ್ದವರು ಹಳ್ಳಿಯಿಂದ ಪಟ್ಟಣಕ್ಕೆ ವಲಸೆ ಹೋಗುವುದನ್ನು ಇಷ್ಟಪಡುತ್ತಿದ್ದರು.
ನಿಚ್ಚಳಗೊಳ್ಳುತ್ತಿರುವ ಅವಕಾಶಗಳು ಆದರೆ ಕಳೆದ ಕೆಲವು ಸಮಯದಿಂದ ಪರಿಸ್ಥಿತಿ ಬದಲಾಗುತ್ತಿದೆ. ಈ ಬದಲಾವಣೆ ಇಂದಿನ ಅಗತ್ಯ ಕೂಡ ಆಗಿದೆ. ಇಂದಿನ ಹಳ್ಳಿಗಳು ರಸ್ತೆಯ ಸಂಪರ್ಕವನ್ನು ಹೊಂದಿವೆ; ಅಲ್ಲಿಗೆ ವಿದ್ಯುತ್ ಪೂರೈಕೆಯಾಗುತ್ತಿದೆ. ಇಂಟರ್ನೆಟ್ ಮತ್ತು ಮೊಬೈಲ್ ಫೋನುಗಳು ನಮ್ಮ ಹಳ್ಳಿಗಳನ್ನು ಹೊರಜಗತ್ತಿನೊಂದಿಗೆ ಜೋಡಿಸಿವೆ; ಸಂಚಾರ ಸೌಕರ್ಯಗಳು ಕೂಡ ಎಲ್ಲೆಡೆ ಲಭ್ಯವಾಗಿವೆ. ಇದರೊಂದಿಗೆ ಒಳ್ಳೆಯ ಆರೋಗ್ಯ ಸೇವೆ ಮತ್ತು ಗುಣಮಟ್ಟದ ಶಿಕ್ಷಣವನ್ನು ಒದಗಿಸಿದರೆ ಜನ ಹಳ್ಳಿಯಲ್ಲೇ ಇರುವುದನ್ನು ಇಷ್ಟಪಡಬಹುದು. ವಿಕೇಂದ್ರೀಕೃತ ಆರ್ಥಿಕತೆ ಮತ್ತು ಸಣ್ಣ ಪಟ್ಟಣಗಳನ್ನು ಕೇಂದ್ರೀಕರಿಸಿದ ಕೈಗಾರಿಕೆಗಳ ಸಾಧ್ಯತೆ ಈಗ ಹೆಚ್ಚಿದೆ. ಕೊರೋನಾ ವೈರಸ್ನ ಕಾರಣದಿಂದ ಸಾಕಷ್ಟು ಜನ ನಗರಗಳನ್ನು ತೊರೆದು ತಮ್ಮ ಹಳ್ಳಿಗಳಿಗೆ ಧಾವಿಸುತ್ತಿದ್ದಾರೆ; ತಮ್ಮ ಮನೆಯವರನ್ನು ಮತ್ತು ತಮ್ಮ ಸ್ವಂತ ಊರನ್ನು ಸೇರಿಕೊಳ್ಳುತ್ತಿದ್ದಾರೆ. ಹೀಗೆ ಮರಳಿದವರಲ್ಲಿ ಸಾಕಷ್ಟು ಜನ ವಿದ್ಯಾವಂತ ವರ್ಗದವರಾಗಿದ್ದಾರೆ. ಅವರಿಗೆ ಅವರ ಜನ್ಮಸ್ಥಳದಲ್ಲಿ ಉದ್ಯೋಗಾವಕಾಶಗಳನ್ನು ಒದಗಿಸಿದರೆ ಅಥವಾ ಅಲ್ಲಿನ ಅಭಿವೃದ್ಧಿಕಾರ್ಯದಲ್ಲಿ ಅವರನ್ನು ಸೇರಿಸಿಕೊಂಡರೆ ಆ ರೀತಿ ಮರಳಿದವರಲ್ಲಿ ಶೇ.40ರಷ್ಟಾದರೂ ಜನ ಅಲ್ಲೇ ನಿಲ್ಲಬಹುದೆಂದು ಅಂದಾಜಿಸಲಾಗಿದೆ.
ಇಂದಿನ ವಿದ್ಯಾವಂತ ವರ್ಗದಲ್ಲಿ ಹೊಸತರ ಹುಡುಕಾಟ (ಸಂಶೋಧನೆ) ಮತ್ತು ಸೃಷ್ಟಿಶೀಲತೆಗಳ ಕೊರತೆ ಎದ್ದುಕಾಣಿಸುತ್ತದೆ. ದೇಶದಲ್ಲಿ ಸಂಶೋಧನೆಗೆ ಅನುಕೂಲಕರವಾದ ವಾತಾವರಣವನ್ನು ಉಂಟುಮಾಡುವ ಮೂಲಕ ಈ ಪರಿಸ್ಥಿತಿಯನ್ನು ಸುಧಾರಿಸಬಹುದು. ಹೊಸ ಸಂಶೋಧಕರಿಗೆ ತಮ್ಮ ಉತ್ಪನ್ನಗಳನ್ನು ಸಮಾಜದ ಮುಂದಿಡಲು ಅವಕಾಶ ಕಲ್ಪಿಸುವುದು, ಕಾರ್ಯಾಗಾರ, ಪ್ರದರ್ಶನ-ಮಾರಾಟ, ತರಬೇತಿ ಮುಂತಾಗಿ ವಿವಿಧ ಕಾರ್ಯಕ್ರಮಗಳನ್ನು ಹಾಕಿಕೊಳ್ಳುವ ಮೂಲಕ ಅದನ್ನು ಸಾಧಿಸಬಹುದು. ಗ್ರಾಮೀಣ ವಲಯದಲ್ಲಿ ಹಲವು ಸಣ್ಣಪ್ರಮಾಣದ ಹೊಸ ಕೈಗಾರಿಕೆಗಳನ್ನು ಹಾಗೂ ಕೃಷಿ-ಗ್ರಾಮೀಣ ಉದ್ಯಮಗಳನ್ನು ಆರಂಭಿಸಬಹುದು. ಗ್ರಾಮೀಣ ಪ್ರದೇಶದಲ್ಲಿ ಪರಸ್ಪರ ಪೂರಕವಾದ ಸರಣಿ ಕೈಗಾರಿಕೆಗಳನ್ನು ಆರಂಭಿಸುವುದಕ್ಕೆ ಸಾಮುದಾಯಿಕ (ಕ್ಲಸ್ಟರ್) ಗ್ರಾಮವ್ಯವಸ್ಥೆಯು ಸಹಕಾರಿಯಾಗಬಲ್ಲದು. ಅವರು ತಂತ್ರಜ್ಞಾನ ಬೆಂಬಲಿತ ವಿಧಾನಗಳನ್ನು ಅನುಸರಿಸಿದಲ್ಲಿ ಮಧ್ಯವರ್ತಿಗಳ ಹಸ್ತಕ್ಷೇಪವಿಲ್ಲದೆ ತಮ್ಮ ಉತ್ಪನ್ನಗಳ ಗ್ರಾಹಕರನ್ನು ಅಥವಾ ಚಿಲ್ಲರೆ ವ್ಯಾಪಾರಿಗಳನ್ನು ನೇರವಾಗಿ ತಲಪಲು ಸಾಧ್ಯ. ಈ ವಿಧಾನದಿಂದ ಯುವಜನರಿಗೆ ಹೆಚ್ಚಿನ ಉದ್ಯೋಗಾವಕಾಶ ಒದಗಿಸಲು ಕೂಡ ಸಾಧ್ಯ. ಉದಾಹರಣೆಗೆ, ಉಬರ್ ಮತ್ತು ಓಲಾದಂತಹ ಟ್ಯಾಕ್ಸಿ ಆಪರೇಟರ್ಗಳು ಅಡೆತಡೆಯಿಲ್ಲದ ಅನುಕೂಲಕರ ಸಾರಿಗೆ ವ್ಯವಸ್ಥೆಯನ್ನು ಒದಗಿಸುವ ಮೂಲಕ ಸಾರಿಗೆ ಸೇವೆಯ ಚಿತ್ರಣವನ್ನೇ ಬದಲಿಸಿದ್ದಾರೆ; ಅದಲ್ಲದೆ ಅವರು ಉದ್ಯೋಗಾವಕಾಶವನ್ನು ಕೂಡ ಬೆಳೆಸಿದ್ದಾರೆ. ಇದೆಲ್ಲವೂ ಸಾಧ್ಯವಾದದ್ದು ತಂತ್ರಜ್ಞಾನದಿಂದ.
ಸಾವಯವ ಆಹಾರಪದಾರ್ಥಗಳ ಮಾರುಕಟ್ಟೆ ಈಗ ಬಲವಾಗಿ ಬೆಳೆಯುತ್ತಿದೆ; ಆದಕ್ಕೆ ಪ್ರಮುಖ ಕಾರಣ ಜನರಲ್ಲಿ ಆರೋಗ್ಯದ ಬಗ್ಗೆ ಹೆಚ್ಚುತ್ತಿರುವ ಜಾಗೃತಿ ಎನ್ನಬಹುದು. ವಿಶೇಷವಾಗಿ ಭಾರತೀಯ ಬಳಕೆದಾರರು ತಾವು ಸೇವಿಸುವ ಆಹಾರದ ಪೌಷ್ಟಿಕಾಂಶಗಳು ಮತ್ತು ಆಹಾರಪದಾರ್ಥಗಳ ಗುಣಮಟ್ಟದ ಬಗ್ಗೆ ಹೆಚ್ಚಿನ ಗಮನಕೊಡುತ್ತಿದ್ದಾರೆ.
ಆದ್ದರಿಂದ ಆಸಕ್ತರಾದ ಯುವಜನರು ಸಾವಯವ ಆಹಾರದ ವ್ಯವಹಾರದಲ್ಲಿ ತಮ್ಮನ್ನು ತೊಡಗಿಸಿಕೊಳ್ಳಬಹುದು; ಮತ್ತು ಈ ಉದ್ಯಮಕ್ಕೆ ಗ್ರಾಮೀಣ ಪ್ರದೇಶವನ್ನು ಆರಿಸಿಕೊಳ್ಳಬಹುದು. ಸಂಘಟಿತವಾದ ಬೇಡಿಕೆ-ಪೂರೈಕೆ ಸರಪಳಿಯನ್ನು ರೂಪಿಸಿ, ಆ ಮೂಲಕ ಪರಸ್ಪರ ಎರಡೂ ಕಡೆಯವರಿಗೆ ಅನುಕೂಲವೆಸಗಬಹುದು; ಮತ್ತು ಸಮತೋಲಿತ ಆರ್ಥಿಕ ವ್ಯವಸ್ಥೆಯನ್ನು ರೂಪಿಸಬಹುದು. ಸಾವಯವ ಪದಾರ್ಥಗಳನ್ನು ಮನೆಮನೆಗೆ ನೇರವಾಗಿ ಒದಗಿಸುವ ವ್ಯವಸ್ಥೆಯನ್ನು ರೂಪಿಸಿದಲ್ಲಿ, ಕೃಷಿಕನ ಅಂಗಳದಿಂದ ಪದಾರ್ಥಗಳು ನೇರವಾಗಿ ಗ್ರಾಹಕರಿಗೆ ಸಿಗಲು ಸಾಧ್ಯ. ಅದರಿಂದ ಬಹಳಷ್ಟು ಉದ್ಯೋಗಾವಕಾಶ ನಿರ್ಮಾಣವಾಗುತ್ತದೆ; ಮತ್ತು ಅದು ಗ್ರಾಹಕಸ್ನೇಹಿಯೂ ಆಗಿರುತ್ತದೆ. ವಿಸ್ತಾರವಾದ ಕೃಷಿಭೂಮಿ ಇರುವ ಕಾರಣ ಭಾರತವು ಜಗತ್ತಿನ ಅಂತಹ ಬೇಡಿಕೆಯನ್ನು ಪೂರೈಸಬಲ್ಲದು. ದೇಸೀ ಹಾಲು ಮತ್ತು ಹಾಲಿನ ಉತ್ಪನ್ನಗಳ ಬಗ್ಗೆ ಜನರಲ್ಲಿ ಜಾಗೃತಿ ಮತ್ತು ಬೇಡಿಕೆಯು ಬೆಳೆಯುತ್ತಿದೆ; ಭಾರತದ ದೇಸೀ ತಳಿಯ ದನಗಳ ಹಾಲು ಔಷಧೀಯ ಗುಣಗಳನ್ನು ಹೊಂದಿದೆ ಎಂಬುದು ಜನರ ಗಮನಕ್ಕೆ ಬರುತ್ತಿದೆ. ನಗರದ ಬಳಕೆದಾರರಿಗೆ ಹಳ್ಳಿಯ ದೇಸೀ ಹಾಲನ್ನು ಒದಗಿಸುವ ಮೂಲಕ ಬೇಡಿಕೆ-ಪೂರೈಕೆಯ ಒಂದು ಮಾರುಕಟ್ಟೆಯನ್ನು ರೂಪಿಸಬಹುದು. ಇದರಿಂದ ಕೂಡ ಸಾಕಷ್ಟು ಉದ್ಯೋಗಾವಕಾಶಗಳನ್ನು ಸೃಷ್ಟಿಸಲು ಸಾಧ್ಯ.
ದೇಶದ ನಿರುದ್ಯೋಗ ಸಮಸ್ಯೆಗೆ ಪರಿಹಾರ ಮುಖ್ಯವಾಗಿ ಸಣ್ಣ ಮತ್ತು ಮಧ್ಯಮ ಮಟ್ಟದ ಕೈಗಾರಿಕೆಗಳ (ಎಂಎಸ್ಎಂಇ) ಬೆಳವಣಿಗೆಯಲ್ಲಿದೆ ಎಂದು ಈಗಾಗಲೇ ಕಂಡುಕೊಳ್ಳಲಾಗಿದೆ. ಅವುಗಳಲ್ಲಿ ಕಾರ್ಮಿಕರಿಗೆ ಹೆಚ್ಚಿನ ಮಹತ್ತ್ವವಿರುತ್ತದೆ; ಇತರ ಉದ್ಯಮಗಳಿಗೆ ಹೋಲಿಸಿದರೆ ಇಲ್ಲಿ ಕಡಮೆ ಬಂಡವಾಳದಿಂದ ಹೆಚ್ಚು ಉದ್ಯೋಗಾವಕಾಶವನ್ನು ಸೃಷ್ಟಿಸಬಹುದು. ಅಂದರೆ ಇಲ್ಲಿ ಉದ್ಯೋಗಾವಕಾಶ ಜಾಸ್ತಿಯಿರುತ್ತದೆ. ನಿರಂತರ ವಿದ್ಯುತ್ ಪೂರೈಕೆ, ಕಡಮೆ ದರದ ಬಡ್ಡಿಯಲ್ಲಿ ಸಾಲ, ತೆರಿಗೆ ರಿಯಾಯಿತಿ ಮತ್ತಿತರ ಸವಲತ್ತುಗಳನ್ನು ಒದಗಿಸಿದಲ್ಲಿ ಸಣ್ಣ ಮತ್ತು ಮಧ್ಯಮ ಗಾತ್ರದ ಕೈಗಾರಿಕೆಗಳು ಜನರ ಉದ್ಯಮಶೀಲತೆಯನ್ನು ಚೆನ್ನಾಗಿ ಬೆಳೆಸಬಲ್ಲವು.
ಕುಸಿಯುತ್ತಿರುವ ಚೀಣಾ ಪ್ರಭಾವ
ಭಾರತದ ಆರ್ಥಿಕತೆಯ ಮೇಲೆ ಚೀಣಾದ ಪ್ರಭಾವ ತೀವ್ರವಾಗಿದೆ. ಕೊರೋನಾ ವೈರಸ್ನ ಪಿಡುಗು ಮತ್ತದರ ನಿಯಂತ್ರಣದ ಪ್ರಯತ್ನಗಳ ನಡುವೆ ಚೀಣಾದ ಸರಕುಗಳ ಮೇಲಿನ ಜಗತ್ತಿನ ಹಸಿವು ತೀವ್ರವಾಗಿ ಕಡಿತಕ್ಕೊಳಗಾಗಿದೆ; ಜಗತ್ತಿನಾದ್ಯಂತ ಅಂತಹ ಒಂದು ಬೆಳವಣಿಗೆ ಕಾಣಿಸುತ್ತಿದೆ. ಚೀಣಾದ ಸರಕುಗಳನ್ನು ನಿಷೇಧಿಸಬೇಕು ಎನ್ನುವ ಕರೆ ಈಗ ಯಾರಿಂದಲಾದರೂ ಬಂದಲ್ಲಿ ಅದಕ್ಕೆ ಉತ್ತಮ ಪ್ರತಿಕ್ರಿಯೆ ಸಿಗುವುದರಲ್ಲಿ ಯಾವುದೇ ಸಂಶಯವಿಲ್ಲ. ಆದರೆ ಅದಕ್ಕೆ ಮುನ್ನ ನಾವು ಬಲಿಷ್ಠವಾದ ಒಂದು ಉತ್ಪಾದನಾ ವ್ಯವಸ್ಥೆಯನ್ನು ರೂಪಿಸುವುದು ಅವಶ್ಯ; ಸ್ಪರ್ಧಾತ್ಮಕವಾದ ಬೆಲೆಯಲ್ಲಿ ಪೂರೈಕೆ ಮಾಡಿದರೆ ನಮ್ಮ ದೇಶದಲ್ಲೇ ದೊಡ್ಡ ಮಾರುಕಟ್ಟೆಯಿದೆ; ಚೀಣಾದ ವಸ್ತುಗಳಿಗೆ ಉತ್ತಮ ಬೇಡಿಕೆ ಇರುವುದಕ್ಕೆ ಮುಖ್ಯ ಕಾರಣ ಅವು ಕಡಮೆ ಬೆಲೆಯಲ್ಲಿ ಸಿಗುವುದೇ. ಒಂದು ರೀತಿಯಲ್ಲಿ ಹೇಳುವುದಾದರೆ, ಇದೊಂದು ಆರ್ಥಿಕ ಸಮರ.
ಭಾರತದಲ್ಲೇ ಉತ್ಪಾದನೆ ನಡೆದರೆ ಉದ್ಯೋಗಾವಕಾಶ ಹೆಚ್ಚುತ್ತದೆ; ಹೊಸ ಉದ್ಯೋಗಗಳು ಸೃಷ್ಟಿಯಾಗುತ್ತವೆ. ಜಗತ್ತಿನ ಹಲವು ದೇಶಗಳು ಚೀಣಾ ಜೊತೆಗಿನ ವಾಣಿಜ್ಯ ಸಂಬಂಧಗಳನ್ನು ಕಡಿದುಕೊಳ್ಳಲು ಹವಣಿಸುತ್ತಿವೆ ಎಂದು ಮಾಧ್ಯಮಗಳಲ್ಲಿ ಕೇಳಿಬರುತ್ತಿದೆ. ಅದು ನಿಜವಾದರೆ, ಚೀಣಾದಂಥದೇ ದೊಡ್ಡ ಜನಸಂಖ್ಯೆಯಿರುವ ಭಾರತವು ಆ ದೇಶಗಳಿಗೆ ಬದಲಿ ಪೂರೈಕೆದಾರನಾಗಬಹುದು. ಅದಕ್ಕಾಗಿ ನಾವು ಉತ್ತಮ ಗುಣಮಟ್ಟದ ವಸ್ತುಗಳನ್ನು ಸಾಕಷ್ಟು ಕಡಮೆ ಬೆಲೆಗೆ ರಫ್ತು ಮಾಡಬೇಕಾಗುತ್ತದೆ. ಈ ಅವಕಾಶವನ್ನು ನಾವು ಬಳಸಿಕೊಂಡಲ್ಲಿ ದೇಶದಲ್ಲಿ ಉದ್ಯೋಗಾವಕಾಶ ಹೆಚ್ಚುತ್ತದೆ; ದೇಶದ ರಫ್ತು ಹೆಚ್ಚುತ್ತದೆ; ಆ ಮೂಲಕ ನಮ್ಮ ಆರ್ಥಿಕತೆ ಬಲಶಾಲಿಯಾಗುತ್ತದೆ. ಅದಕ್ಕಾಗಿ ಸರ್ಕಾರ ರಫ್ತು ಮಾಡುವುದನ್ನು ಪ್ರೋತ್ಸಾಹಿಸಬೇಕು. ಉತ್ಪಾದನೆ ಮತ್ತು ರಫ್ತಿಗೆ ಉತ್ತೇಜಕಗಳನ್ನು ನೀಡಬೇಕು. ಭಾರತದ ಜನ ಈ ಸವಾಲನ್ನು ಸ್ವೀಕರಿಸಲು ಸಮರ್ಥರಿದ್ದಾರೆ.
ಸ್ಥಳೀಯ ಉದ್ಯೋಗದ ಬೇಡಿಕೆಯನ್ನು ಪೂರೈಸುವ ರೀತಿಯಲ್ಲಿ ಯೋಜನೆಗಳನ್ನು ರೂಪಿಸಬೇಕು. ಏಕೆಂದರೆ ಪ್ರತಿಯೊಂದು ರಾಷ್ಟ್ರಕ್ಕೆ ಉತ್ಪಾದನೆ ಮತ್ತು ಸ್ವದೇಶೀ ಉತ್ಪನ್ನಗಳ ಪ್ರೋತ್ಸಾಹ ಅತ್ಯವಶ್ಯ. ‘ಒಂದು ಗಾತ್ರ ಎಲ್ಲರಿಗೂ ಹೊಂದಿಕೆಯಾಗುತ್ತದೆ’ ಎನ್ನುವ ಜಾಗತೀಕರಣದ ಧೋರಣೆಯು ಎಲ್ಲರಿಗೂ ಅನ್ವಯವಾಗುವುದಿಲ್ಲ. ಏಕೆಂದರೆ ವ್ಯಾಪಾರವು ಸಂಸ್ಕೃತಿ, ಆದ್ಯತೆಗಳು, ಕಾನೂನು ಮತ್ತು ನಿಯಮಗಳಿಗೆ ಅನುಸಾರವಾಗಿ ಬದಲಾಗುತ್ತ ಹೋಗುತ್ತದೆ; ಕಾರಣ ಇದರಲ್ಲಿ ಹೇರಿಕೆ ಸಾಧ್ಯವಾಗುವುದಿಲ್ಲ. ದೇಶಗಳ ನಡುವೆ ಪರಸ್ಪರ ಸ್ವೀಕೃತವೂ ಪೂರಕವೂ ಸಹಕಾರಿಯೂ ಆದ ಆರ್ಥಿಕ ಒಪ್ಪಂದಗಳಿದ್ದಾಗ ವ್ಯಾಪಾರಕ್ಕೆ ಅನುಕೂಲವಾಗುತ್ತದೆ. ಗ್ರಾಮೀಣ ಪ್ರದೇಶದಲ್ಲಿ ಉತ್ಪಾದನಾ ಗುರಿಯನ್ನು ಸಾಧಿಸಲು ಅನುಕೂಲವಾಗುವಂತೆ ಕೈಗಾರಿಕಾ ವಲಯಗಳನ್ನು ಸ್ಥಾಪಿಸಬೇಕು; ಅದರಿಂದ ಉತ್ಪಾದನಾ ವೆಚ್ಚ ಕಡಮೆಯಾಗುತ್ತದೆ; ಏಕೆಂದರೆ ಹಳ್ಳಿಯಲ್ಲಿ ಜೀವನನಿರ್ವಹಣೆಯ ವೆಚ್ಚ ನಗರಗಳಿಗಿಂತ ಕಡಮೆ. ಅದಲ್ಲದೆ ಹಳ್ಳಿಯಲ್ಲಿ ಉತ್ತಮ ಗುಣಮಟ್ಟದ ಜೀವನವು ಸಾಧ್ಯ. ಹೀಗೆ ಕೈಗಾರಿಕಾ ವಲಯಗಳನ್ನು ನಿರ್ಮಿಸಿದಾಗ ಹಳ್ಳಿಯಿಂದ ನಗರಕ್ಕೆ ವಲಸೆ ಕಡಮೆಯಾಗುತ್ತದೆ; ಮತ್ತು ಜನ ತಮ್ಮವರೊಂದಿಗೆ ಜೀವಿಸಲು ಸಾಧ್ಯವಾಗುತ್ತದೆ.
‘ಸ್ವದೇಶೀ ಸಮಾಜ’
ಇದೆಲ್ಲ ಕೇವಲ ಸರ್ಕಾರದ ಮೇಲೆ ಆಧಾರಿತವಾಗಿರಬಾರದು. ಸಮಾಜದ ಪ್ರಯತ್ನಕ್ಕೆ ಸರ್ಕಾರದ ಬೆಂಬಲ ದೊರೆತಾಗ ದೂರಗಾಮಿ ಫಲಿತಾಂಶ ಬರಲು ಸಾಧ್ಯ. ಇದಕ್ಕೆ ಒಂದು ಪೂರ್ಣವೂ ಸಮಗ್ರವೂ ಆದ ಯೋಜನೆಯನ್ನು ರೂಪಿಸಬೇಕು. ಇಂತಹ ಯೋಜನೆಗಳು ಸರ್ಕಾರದ ಮೇಲೆ ಅವಲಂಬಿತವಾಗುವುದನ್ನು ನಿಧಾನವಾಗಿ ಕಡಮೆ ಮಾಡಬೇಕು ಮತ್ತು ಅವುಗಳನ್ನು ಮುನ್ನಡೆಸಲು ಸಮಾಜವು ಶಕ್ತವಾಗಬೇಕು. ಆ ರೀತಿಯಲ್ಲಿ ಸಮಾಜ ಸ್ವಾವಲಂಬಿಯಾಗಬೇಕು. ರವೀಂದ್ರನಾಥ ಠಾಕೂರರ ಪರಿಕಲ್ಪನೆಯ ಸ್ವದೇಶೀ ಸಮಾಜ ಎಂದರೆ ಇದೇ. ಸರ್ಕಾರದ ಶಕ್ತಿಯ ಮೇಲೆ ಅತ್ಯಂತ ಕಡಮೆ ಅವಲಂಬಿತವಾದ ಸಮಾಜವೇ ‘ಸ್ವದೇಶೀ ಸಮಾಜ’ವಾಗಿದ್ದು, ಶತಮಾನಗಳಿಂದ ಅದು ಭಾರತದ ಪರಂಪರೆಯಾಗಿತ್ತು ಎಂದು ಅವರು ಅಭಿಪ್ರಾಯಪಟ್ಟಿದ್ದರು.
ಭಾರತದಲ್ಲೀಗ ಹೊಸ ಶಿಕ್ಷಣನೀತಿಯು ಸಿದ್ಧಗೊಳ್ಳುತ್ತಿದೆ. ವಿಚಾರವಿನಿಮಯದ ಪ್ರಕ್ರಿಯೆಯ ಮೂಲಕ ಸರ್ಕಾರ ಅದನ್ನು ರೂಪಿಸಲು ಮುಂದಾಗಿದೆ. ಎಲ್ಲವನ್ನೂ ಒಳಗೊಳ್ಳುವುದು, ಮುಖ್ಯವಾಗಿ ಪೂರ್ಣರೂಪದ ದೃಷ್ಟಿಕೋನವು ಅದರಲ್ಲಿದ್ದು, ಸರ್ಕಾರದ ಪರಿಶೀಲನೆಯ ಬಳಿಕ ಬಹುಬೇಗ ಅದರ ಅನುಷ್ಠಾನವಾಗುವ ನಿರೀಕ್ಷೆಯಿದೆ. ಅದು ಅನುಷ್ಠಾನಗೊಂಡಾಗ ಸ್ವಾವಲಂಬಿ ಮತ್ತು ಸ್ವತಂತ್ರ ವ್ಯಕ್ತಿಗಳ ಒಂದು ತಲೆಮಾರು ರೂಪಗೊಳ್ಳಲಿದೆ. ದೇಶದ ಸಂಸ್ಕೃತಿ ಮತ್ತು ಚಿಂತನೆಯಲ್ಲಿ ಆಳವಾಗಿ ಬೇರೂರಿರುವ ಆ ತಲೆಮಾರು ಭಾರತೀಯ ಮೌಲ್ಯಗಳಿಗೆ ಅನುಗುಣವಾಗಿ ತನ್ನ ಜೀವನವನ್ನು ನಡೆಸಲಿದೆ; ಅಂತಹ ಜನ ಸಮುದಾಯವು ನಮ್ಮ ಶ್ರಮಿಕವರ್ಗವಾಗಿ ಮುಂದೆ ಬಂದಾಗ ಪೂರ್ಣರೂಪದ ಅಭಿವೃದ್ಧಿಗೆ ನಾವು ಇಂದಿಗಿಂತ ಹತ್ತಿರ ಆಗಲಿದ್ದೇವೆ.
ಭಾರತೀಯ ದೃಷ್ಟಿಕೋನ
ಭೌತಿಕಸಂಪತ್ತಿನಲ್ಲಿ ಸಮೃದ್ಧಿ ಮತ್ತು ಸಮಾನಹಂಚಿಕೆ ಹಾಗೂ ಅದೇ ಹೊತ್ತಿಗೆ ಸರ್ವವ್ಯಾಪಿಯಾದ ದೈವಿಕಶಕ್ತಿಯನ್ನು ಅರ್ಥೈಸಿಕೊಂಡು ನಮ್ಮದಾಗಿಸಿಕೊಳ್ಳುವಂತೆ ನಮ್ಮ ಮನಸ್ಸಿಗೆ ತರಬೇತಿ ನೀಡುವುದು ಯಶಸ್ಸಿನ ಹೆಗ್ಗುರುತು ಮತ್ತು ಮಾನವ ಜೀವನದ ಪರಿಪೂರ್ಣತೆ ಎನ್ನುವುದು ಅನಾದಿಕಾಲದಿಂದಲೂ ಭಾರತದ ದೃಷ್ಟಿಕೋನವಾಗಿದೆ. ಧರ್ಮದ (ಮತ ಅಲ್ಲ) ಒಂದು ಪ್ರಸಿದ್ಧ ವ್ಯಾಖ್ಯಾನವು ಅದನ್ನೇ ಹೇಳುತ್ತದೆ: ‘ಯತೋ„ಭ್ಯುದಯ ನಿಃಶ್ರೇಯಸಸಿದ್ಧಿಃ ಸ ಧರ್ಮಃ’ (ವ್ಯಕ್ತಿಯು ಭೌತಿಕಸಂಪತ್ತನ್ನು ಹೊಂದುವುದರೊಂದಿಗೆ ಆತ್ಮಜ್ಞಾನವನ್ನು ಹೊಂದುವುದೇ ನಿಜವಾದ ಧರ್ಮ) ಎಂಬುದಾಗಿ. ಪ್ರತಿಯೊಬ್ಬ ಮಾನವಜೀವಿಯೂ ಅಂತಹ ಪರಿಪೂರ್ಣ ಜೀವನವನ್ನು ತನ್ನದಾಗಿಸಿಕೊಳ್ಳಬೇಕು.
ಸಮಾಜದ ಎಲ್ಲ ವ್ಯಕ್ತಿಗಳಲ್ಲಿ ಈ ಆಧ್ಯಾತ್ಮಿಕ ಅರಿವು ಮೂಡಿದಾಗ ಇಡೀ ಸಮಾಜದ ಕಲ್ಯಾಣವು ತಮ್ಮ ಕರ್ತವ್ಯ ಅಥವಾ ಧರ್ಮ ಎಂದುಕೊಂಡು ಅವರು ಸ್ವಂತ ಇಚ್ಛೆಯಿಂದ ಅದಕ್ಕೆ ತಮ್ಮ ಕೊಡುಗೆಯನ್ನು ನೀಡಲು ಮುಂದೆ ಬರುತ್ತಾರೆ. ಇದೇ ಸಮಾಜದ ಒಟ್ಟು ಬಂಡವಾಳ ಅಥವಾ ಧರ್ಮವಾಗಿದ್ದು, ಪ್ರತಿಯೊಬ್ಬ ವ್ಯಕ್ತಿಯ ಉನ್ನತಿಯ ಬಗೆಗೂ ಅದು ಎಚ್ಚರ ವಹಿಸುತ್ತದೆ ಮತ್ತು ಸಮಾಜದ ಸಮೃದ್ಧಿಯಲ್ಲಿ ಆತನಿಗೆ ಆತನ ಪಾಲು ದೊರೆಯುವಂತೆ ನೋಡಿಕೊಳ್ಳುತ್ತದೆ.
ಸ್ವಾಮಿ ವಿವೇಕಾನಂದರ ವಿದೇಶೀ ಮೂಲದ ಶಿಷ್ಯೆ ಸೋದರಿ ನಿವೇದಿತಾ ಹೀಗೆ ಹೇಳಿದ್ದಾರೆ: “ಒಂದು ಸಮಾಜದಲ್ಲಿನ ಜನ ತಮ್ಮ ಕೆಲಸಕ್ಕೆ ಬಂದ ಸಂಬಳವನ್ನು ತಾವೇ ಇಟ್ಟುಕೊಳ್ಳುವ ಬದಲು ಸಮಾಜಕ್ಕೆ ನೀಡಿದಲ್ಲಿ ಅದರಿಂದ ಸಂಗ್ರಹವಾದ ಹಣವೇ ಬಂಡವಾಳವಾಗಿ ಸಮಾಜವು ಶ್ರೀಮಂತವೂ ಸಮೃದ್ಧವೂ ಆಗುತ್ತದೆ; ಆ ಸಮಾಜದಲ್ಲಿರುವ ಪ್ರತಿಯೊಬ್ಬ ವ್ಯಕ್ತಿಯೂ ಶ್ರೀಮಂತನೂ ಸಮೃದ್ಧನೂ ಆಗುತ್ತಾನೆ; ಅಂತಿಮವಾಗಿ ಒಟ್ಟು ಸಮಾಜದ ಚಿತ್ರವೇ ಉತ್ತಮಗೊಳ್ಳುತ್ತದೆ. ಇದಕ್ಕೆ ಬದಲಾಗಿ ಜನ ತಾವು ಗಳಿಸಿದ ಸಂಬಳವನ್ನು ಸಮಾಜಕ್ಕೆ ಕೊಡದೆ ಪೂರ್ತಿ ಸ್ವಂತಕ್ಕೆ ಇಟ್ಟುಕೊಂಡರೆ ಸಮಾಜದ ಕೇವಲ ಬೆರಳೆಣಿಕೆಯ ಜನ ಶ್ರೀಮಂತರು ಹಾಗೂ ಸಮೃದ್ಧರಾಗಬಹುದು; ಆದರೆ ಸಮಾಜ ಬಡತನದಲ್ಲಿಯೇ ಉಳಿಯುತ್ತದೆ.”
ಹೀಗೆ ಭಾರತದಲ್ಲಿ ಇಡೀ ಸಮಾಜವನ್ನು ತನ್ನದೆಂದು ತಿಳಿದು, ಎಲ್ಲರೂ ಸ್ವಾವಲಂಬಿಗಳೆಂದು ಪರಿಭಾವಿಸಿ, ತನ್ನ ಗಳಿಕೆಯ ಒಂದು ಭಾಗವನ್ನು ಸಮಾಜಕ್ಕೆ ಮರಳಿಸುವ ಒಂದು ವಿಧಾನವನ್ನು ಅನುಸರಿಸಲಾಗುತ್ತದೆ; ಅದನ್ನು ‘ಧರ್ಮಕಾರ್ಯ’ ಎಂದು ಕರೆಯುತ್ತಾರೆ.
ಪಾರಂಪರಿಕವಾಗಿ, ಒಂದು ಸಮಾಜವಾಗಿ ನಾವು ಎಂದೂ ಸರ್ಕಾರದ ಮೇಲೆ ಅವಲಂಬಿತವಾದ ಸಮಾಜವಾಗಿರಲಿಲ್ಲ. ಹೆಚ್ಚಿನ ಸಾಮಾಜಿಕ ವ್ಯವಸ್ಥೆಗಳು ಒಟ್ಟುಮಾಡಿದ ಸಾಮಾಜಿಕ ಬಂಡವಾಳದ ಮೂಲಕ ಕಾರ್ಯನಿರ್ವಹಿಸುತ್ತಿದ್ದವು; ಆ ಮೂಲಕ ಧರ್ಮವು ಇಡೀ ಸಮಾಜವನ್ನು ಶ್ರೀಮಂತ ಮತ್ತು ಸಮೃದ್ಧವಾಗಿ ಇರಿಸುತ್ತಿತ್ತು.
ಸಮಾಜದಲ್ಲಿ ಶ್ರೇಷ್ಠರಾದ ವ್ಯಕ್ತಿಗಳು ಯಾವ ರೀತಿ ನಡೆದುಕೊಳ್ಳುತ್ತಾರೋ ಇತರರು ಅದನ್ನು ಅನುಸರಿಸುತ್ತಾರೆ. ಅವರು ಉದಾಹರಣೆಯಾಗಿ ಸಮಾಜದ ಮುಂದೆ ಏನನ್ನು ಇರಿಸುತ್ತಾರೋ ಸಾಮಾನ್ಯ ಜನ ಅದೇ ರೀತಿ ನಡೆದುಕೊಳ್ಳುತ್ತಾರೆಂದು ಭಗವದ್ಗೀತೆ ಹೇಳುತ್ತದೆ. ಆ ಮಾತು ಹೀಗಿದೆ:
ಯದ್ಯದಾಚರತಿ ಶ್ರೇಷ್ಠಃ ತತ್ತದೇವೇತರೋ ಜನಃ |
ಸ ಯತ್ಪ್ರಮಾಣಂ ಕುರುತೇ ಲೋಕಸ್ತದನುವರ್ತತೇ||
ಇದುವರೆಗೆ ಚರ್ಚಿಸಲಾದ ಪ್ರಚಂಡ ಸಾಧ್ಯತೆಯ ಹಿನ್ನೆಲೆಯಲ್ಲಿ ಒಂದು ಬಹು-ಆಯಾಮದ ಮತ್ತು ಸಮಗ್ರವಾದ ಬೃಹದ್ ಯೋಜನೆಯನ್ನು ದೇಶದ ಭವಿಷ್ಯದ ದೃಷ್ಟಿಯಿಂದ ರಚಿಸಬೇಕಾಗಿದೆ. ಕೊರೋನಾ ವೈರಸ್ ತಂದ ಸಂಕಷ್ಟವು ನಮ್ಮ ಪಾಲಿಗೆ ಇಂತಹ ಒಂದು ಅವಕಾಶವನ್ನು ಕೂಡ ತೆರೆದಿಟ್ಟಿದೆ; ಇದನ್ನು ಬಳಸಿಕೊಳ್ಳುವುದು ನಮಗೆ ಸೇರಿದ್ದು.
ಅನು: ಎಚ್. ಮಂಜುನಾಥ ಭಟ್