ಚಿತ್ರಕಲಾ ಸಂಚಯ – ರಾಗಮಾಲಾ ಕೃತಿಗಳು-12
-ಮಹೇಂದ್ರ ಡಿ. [email protected]
ರಾಗಮಾಲಾ ಚಿತ್ರರಚನೆಗಳಲ್ಲಿ ಹಿಂದೂಸ್ತಾನಿ ಗಾಯನದ ಭಾವ ಹಾಗೂ ಕಾವ್ಯದಲ್ಲಿನ ವರ್ಣನೆಗಳನ್ನು ಚಿತ್ತಾರವಾಗಿ ಮನಮೋಹಕಗೊಳಿಸಿ ದೃಶ್ಯರೂಪದಲ್ಲಿ ನಿರೂಪಿಸಿದಂತೆ ಕೆಲವೊಂದು ಜಾತಕಕಥೆಗಳನ್ನು ಹಾಗೂ ಪೌರಾಣಿಕ ಕಥೆಯ ಘಟನೆಗಳ ಕುರಿತು ಸೃಷ್ಟಿಯಾದ ರಾಗಗಳಿಗೂ ಕಲಾವಿದರು ದೃಶ್ಯರೂಪವನ್ನು ನೀಡಿದ್ದಾರೆ. ಆ ಪೈಕಿ ಮಾಧವನಾಲ ಹಾಗೂ ಕಾಮಕಂಡಲರ ಪ್ರೇಮಕಥೆ ಮತ್ತು ಖಂಬಾವತಿ ಪ್ರಸಂಗವು ಮುಖ್ಯವಾದವು.
ಖಂಬಾವತಿ ರಾಗದ ಕುರಿತು ನಾವು ತಿಳಿಯುವ ಮುನ್ನ ಸೃಷ್ಟಿಕರ್ತ ಬ್ರಹ್ಮನ ವಿಚಾರವನ್ನು ಹಾಗೂ ವೇದಕಾಲದ ಜ್ಞಾನ ಸಂಸ್ಕೃತಿಯ ಉಸಿರಾಗಿದ್ದ ಸರಸ್ವತೀ ನದಿಯ ಇತಿಹಾಸವನ್ನು ತಿಳಿದುಕೊಳ್ಳಬೇಕಾಗುತ್ತದೆ.
ಸೃಷ್ಟಿಕರ್ತ ಬ್ರಹ್ಮದೇವನಿಗೂ ಖಂಬಾವತಿ ರಾಗಕ್ಕೂ ಎಲ್ಲಿಯ ಸಂಬಂಧ ಎಂದು ಆಶ್ಚರ್ಯವಾಗಬಹುದು. ಭಾರತೀಯ ಪರಂಪರೆಯೇ ಹಾಗೆ; ಜೀವಸಂಸ್ಕøತಿಗಳ ವಿಸ್ತಾರದಲ್ಲಿ ಆಳ-ಅರಿವುಗಳನ್ನು ಅರ್ಥೈಸಿಕೊಳ್ಳಲು ಮಾನವನ ಒಂದು ಜನ್ಮ ಸಾಲುವುದಿಲ್ಲ. ಅದೇನೇ ಇರಲಿ, ಖಂಬಾವತಿ ರಾಗದ ಕುರಿತು ನೋಡೊಣ.
ಖಂಬಾವತಿ ಅತ್ಯಂತ ಪುರಾತನ ರಾಗ. ಭುವನದೇವಾಚಾರ್ಯ ರಚಿಸಿದ ಸಂಗೀತಗ್ರಂಥ ‘ಅಪರಾಜಿತ ಪ್ರಾಖ’ (ಗ್ರಂಥರಚನೆ ಕಾಲ ಕ್ರಿ.ಶ. 1144-74) ಇದರಲ್ಲಿ ಆರು ಪುರುಷರಾಗಗಳಿಗೆ ಆರು ರಾಗಿಣಿಯರನ್ನು ಕುರಿತು ಉಲ್ಲೇಖಿsಲಾಗಿದೆ. ‘ಸಂಗೀತ ದರ್ಪಣ’ದಲ್ಲಿ ದಾಮೋದರನ ಪ್ರಕಾರ ಖಂಬಾವತಿಯು ಮಾಲವಕೌಶಿಕ (ಮುಂದೆ ಇಬ್ರಾಹಿಂ ಖಿಲ್ಜಿ ಆಕ್ರಮಣದ ನಂತರ ಇದನ್ನು ಮಾಲಕೌಂಸ್ ಎಂದು ಕರೆಯಲಾರಂಭಿಸಿದರು) ರಾಗದ ರಾಗಿಣಿ. ಉಳಿದ ರಾಗಿಣಿಯರು ತೋಡಿ, ಗೌರಿ, ಗುಣಕಾರಿ ಮತ್ತು ಕಾಕುಂಬಾ. ಸಾರಂಗದೇವನು ಈ ರಾಗಿಣಿಯನ್ನು ಮಾಲಕೌಂಸ್ ರಾಗಿಣಿಯಾಗಿ ವರ್ಗೀಕರಿಸಿರುವುದನ್ನು ಕಾಣಬಹುದು. ಆತನ ಪ್ರಕಾರ ಮಾಲಕೌಂಸ್ನ ಐದು ರಾಗಿಣಿಯರು ಗುರ್ಜರಿ, ವಿದ್ಯಾವತಿ, ತೋಡಿ, ಖಂಬಾವತಿ ಹಾಗೂ ಕಾಕುಂಬಾ. ಇದನ್ನೆ ಭರತನೂ ಹೇಳಿದ್ದಾನೆ.
ರಾಗದ ಕಾಲಾವಧಿ ರಾತ್ರಿಯ ಎರಡನೆಯ ಪ್ರಹರ; ರಾತ್ರಿ 9ರಿಂದ 12ರ ವರೆಗೆ. ರಾಗದ ವರ್ಣ ಚಂದನ. ಈ ರಾಗಿಣಿ ಮಾಲಕೌಂಸ್ ರಾಗದ ರಾಗಿಣಿಯಾದ್ದರಿಂದ, ಆ ರಾಗದಲ್ಲಿ ಕಾಣುವ ತನ್ಮಯತೆ ಹಾಗೂ ಭಕ್ತಿಭಾವಗಳು ಇಲ್ಲೂ ಮೇಳೈಸುತ್ತವೆ. ಇದು ಬಹಳ ಪುರಾತನ ರಾಗವಾಗಿದೆ. ಬುಡಕಟ್ಟು ಜನಾಂಗದ ಹಾಡಿನ ಛಾಯೆ ಈ ರಾಗದಲ್ಲಿ ಕಾಣುತ್ತದೆ. ಹೀಗಾಗಿ ಜನ್ಯರಾಗವೆಂದೇ ಕರೆಯುವ ಖಂಬಾವತಿ ರಾಗಿಣಿಯ ಹುಟ್ಟುವಿಕೆ ಕುರಿತು ಪರಶಿವನು ತನ್ನ ಪತ್ನಿ ಉಮೆಗೆ ಹೇಳಿದ ಕಥಾನಕವೊಂದು ಸ್ಕಂದ ಪುರಾಣದಲ್ಲಿದೆ.
ವಜ್ರನಾಭ ಎಂಬ ರಾಕ್ಷಸನ ಉಪಟಳವು ಮೂರು ಲೋಕದಲ್ಲಿ ಮಿತಿಮೀರಿದಾಗ ಬ್ರಹ್ಮನು ಆ ರಾಕ್ಷಸನನ್ನು ತನ್ನ ಕಮಲದಿಂದಲೇ ಸಂಹರಿಸುತ್ತಾನೆ. ಯುದ್ಧಕಾಲದಲ್ಲಿ ಬ್ರಹ್ಮನ ಕಮಲದಿಂದ ಮೂರು ದಳಗಳು ಕೆಳಗೆ ಬಿದ್ದು ಮೂರು ಸರೋವರಗಳು ಸೃಷ್ಟಿಯಾದವು. ಅದರಲ್ಲಿ ಪುಷ್ಕರ ಸರೋವರವನ್ನು ಪುನರುತ್ಥಾನಗೊಳಿಸಿ ಮೂರು ಲೋಕಗಳ ಸುಖಪ್ರಾಪ್ತಿಗಾಗಿ ಬ್ರಹ್ಮದೇವನು ಯಜ್ಞವೊಂದನ್ನು ನಡೆಸಲು ನಿಶ್ಚಯಿಸುತ್ತಾನೆ. ಈ ಮಹಾಸಂಕಲ್ಪಕಾಲದ ಸಂದರ್ಭದಲ್ಲಿ ಸಮಸ್ತ ದೇವತೆಗಳೂ ಭಾಗಿಗಳಾಗಿರಬೇಕೆಂದು ಬ್ರಹ್ಮನು ಆಜ್ಞಾಪಿಸುತ್ತಾನೆ.
ಹಾಗೆ ನಿಗದಿತ ದಿನ ಯಜ್ಞವು ನೆರವೇರುತ್ತದೆ. ಯಜ್ಞವು ಸಂಪನ್ನಗೊಳ್ಳುವುದಕ್ಕೆ ಪೂರ್ಣಾಹುತಿ ನೀಡಲು ಬ್ರಹ್ಮನು ಪತ್ನೀಸಮೇತನಾಗಿ ಇರಬೇಕಾಗಿದ್ದ ಕಾರಣ ಬ್ರಹ್ಮನು ತನ್ನ ಪತ್ನಿ ಸಾವಿತ್ರಿಯನ್ನು ಕರೆತರುವಂತೆ ಹೇಳಿಕಳಿಸುತ್ತಾನೆ. ಸಾವಿತ್ರಿ ತನ್ನ ಅಂತಃಪುರದಲ್ಲಿ ಅಲಂಕಾರದಲ್ಲಿ ನಿರತಳಾಗಿರುತ್ತಾಳೆ. ಕರೆಯಲು ಬಂದವರಿಗೆ ತಾನು ಈಗಷ್ಟೆ ಮಿಂದು ವಸ್ತ್ರಾಲಂಕಾರದಲ್ಲಿ ತೊಡಗಿರುವುದಾಗಿ ಬರಲು ತಡವಾಗುವುದೆಂದೂ, ಅದಕ್ಕಾಗಿ ಸ್ವಲ್ಪ ಹೊತ್ತು ಕಾಯುವಂತೆ ಸಖಿಯ ಮೂಲಕ ಸೂಚಿಸುತ್ತಾಳೆ. (ಮಹಿಳೆಯರು ಸೀರೆ ಉಟ್ಟು ಅಲಂಕಾರಗೊಳ್ಳುವುದಕ್ಕೆ ಎಷ್ಟು ಸಮಯ ಹಿಡಿಯುತ್ತದೆಂದು ನಾವೆಲ್ಲರೂ ಪ್ರತ್ಯಕ್ಷ ಕಂಡಿದ್ದೇವೆ. ದೇವತೆಗಳಾದರೇನು ಸ್ತ್ರೀಯರು ಅಲಂಕಾರ ಪ್ರಿಯರಲ್ಲವೆ!)
ಹೀಗೆ ಖಾಲಿ ಮರಳಿ ಬಂದವರಿಂದ ವಿಷಯ ಅರಿತ ಸಮಸ್ತ ದೇವತೆಗಳು ಕಾಯಲಾರಂಭಿಸುತ್ತಾರೆ. ಬಹಳ ಹೊತ್ತು ಕಳೆದು ರಾತ್ರಿಯಾದರೂ ಸಾವಿತ್ರಿಯ ಸುಳಿವೇ ಇಲ್ಲ! ಕಡೆಗೆ ಬ್ರಹ್ಮನು ಇಂದ್ರನನ್ನು ಕರೆದು ಹೇಗಾದರೂ ಸರಿ ಪತ್ನಿಯನ್ನು ಕರೆತರಬೇಕೆಂದು ಆಜ್ಞಾಪಿಸುತ್ತಾನೆ. ಇಂದ್ರನೋ ಚತುರ, ಅಲ್ಲದೆ ಸ್ತ್ರೀಯರ ಸ್ವಭಾವ ತಿಳಿದವನೇ ಆಗಿದ್ದ. ಹೊರಗೆ ಬಂದವನೆ ಸಾವಿತ್ರಿಯ ಅಂತಃಪುರದತ್ತ ನಡೆಯುತ್ತಿರುವಾಗ ದಾರಿಯಲ್ಲಿ ಗಡಿಗೆ ಹೊತ್ತು ಬೆಣ್ಣೆ ಮಾರುವ ಓರ್ವ ಸುಂದರ ಗೌಳಿಗ ತರುಣಿಯನ್ನು ಕಾಣುತ್ತಾನೆ. ತೇಜೊಮಯವಾದ ಆಕೆಯ ಮುಖ, ಲಾವಣ್ಯಮಯವಾದ ಆಕೆಯ ದೇಹಸೌಂದರ್ಯ, ಸದಾ ನಸುನಗುತ್ತಲೇ ಇರುವ ಆಕೆಯ ಮುಖಭಾವ ಕಂಡು ಬೆರಗಾಗಿ ಆಕೆಯನ್ನು ಒಲಿಸಿ ಯಜ್ಞಮಂಟಪಕ್ಕೆ ಕರೆತರುತ್ತಾನೆ.
ಶಿವ ಮತ್ತು ವಿಷ್ಣು ಇಬ್ಬರೂ ಬ್ರಹ್ಮನ ಬಳಿಗೆ ಬಂದು ಇನ್ನು ಸಾವಿತ್ರಿಗಾಗಿ ಕಾಯುವುದು ವ್ಯರ್ಥವೆಂದೂ, ಈ ಕೂಡಲೇ ಆ ತರುಣಿಯನ್ನು ವಿವಾಹವಾಗಿ ಪತ್ನಿಯಾಗಿ ಸ್ವೀಕರಿಸಿ ಯಜ್ಞ ಪೂರ್ಣಗೊಳಿಸಬೇಕೆಂದೂ ಹೇಳುತ್ತಾರೆ. ಬ್ರಹ್ಮನು ಖಂಬಾವತಿ ಪಟ್ಟಣದ ನಿವಾಸಿಯಾದ ಆ ತರುಣಿಯನ್ನು ಅಲ್ಲಿಯೇ ಮದುವೆಯಾಗಿ ತನ್ನ ಪತ್ನಿಯಾಗಿ ಸ್ವೀಕರಿಸಿ ಪೂರ್ಣಾಹುತಿ ನೀಡುವ ಮೂಲಕ ಯಜ್ಞವನ್ನು ಪೂರ್ಣಗೊಳಿಸುತ್ತಾನೆ. ಯಜ್ಞವು ಮುಗಿದ ಸೂಚನೆಯಾಗಿ ಎಲ್ಲರೂ ಚಪ್ಪಾಳೆ ತಟ್ಟುತ್ತಿರುವಾಗಲೇ ಸರ್ವಾಲಂಕಾರಭೂಷಿತೆಯಾದ ಸಾವಿತ್ರಿಯು ಲಕ್ಷ್ಮಿ, ಪಾರ್ವತಿಯರ ಸಮೇತಳಾಗಿ ಯಜ್ಞಮಂಟಪವನ್ನು ಪ್ರವೇಶಿಸುತ್ತಾಳೆ. ನಡೆದ ವಿದ್ಯಮಾನವೆಲ್ಲ ತಿಳಿದು ತಾನು ಪತ್ನಿಯಾಗಿ ಇರುವಾಗ ಬ್ರಹ್ಮನು ಇನ್ನೋರ್ವಳನ್ನು ಮದುವೆಯಾಗಿದ್ದರ ಬಗ್ಗೆ ಕೋಪೋದ್ರಿಕ್ತಳಾಗಿ ಪ್ರಶ್ನಿಸುತ್ತಾಳೆ. ಬ್ರಹ್ಮನು ಆಕೆಯನ್ನು ಸಮಾಧಾನಗೊಳಿಸಿ ತಾನು ಇನ್ನು ಮೂರನೇ ಮದುವೆಯಾಗುವುದಿಲ್ಲವೆಂದು ವಚನ ನೀಡಿ ಹಾಗೆ ಸಮಸ್ತ ದೇವತೆಗಳನ್ನು ಉದ್ದೇಶಿಸಿ ಇನ್ನು ಮುಂದೆ ಸಮಸ್ತ ವೇದಗಳ ದೇವತೆಯಾಗಿ ಪರಿಗಣಿಸುವಂತೆ ಕೋರುತ್ತಾನೆ. ಹೀಗಾಗಿ ಸಾವಿತ್ರಿಗೆ ಐದು ಮುಖಗಳಾದರೆ, ಗಾಯತ್ರಿಗೆ ಒಂಭತ್ತು ಮುಖಗಳಾಗಿವೆ.
ಈ ಕಥೆಯಲ್ಲಿ ಮೊಸರು ಮಾರುವ ಯುವತಿಯೇ ಗುಜರಾತಿನ ಖಂಬಾವತಿ ಎಂದು ಖಂಬಾ ಪ್ರದೇಶದಲ್ಲಿ ಜಾನಪದ ಕಥೆಯಾಗಿ ಪ್ರಚಲಿತದಲ್ಲಿದೆ. ಹೀಗಾಗಿ ಖಂಬಾವತಿ ಪ್ರದೇಶದಲ್ಲಿ ಹುಟ್ಟಿದ ಈ ರಾಗವು ಬಹುತೇಕ ಬ್ರಹ್ಮನು ಯಜ್ಞಕಾರ್ಯ ಕೈಗೊಂಡು ಪೂರ್ಣಾಹುತಿ ನೀಡುತ್ತಿರುವ ಹಾಗೂ ಪಕ್ಕದಲ್ಲಿ ಯುವತಿ ಆತನ ಪೂಜಾಕಾರ್ಯದಲ್ಲಿ ಜೊತೆಗಿರುವ ಸಂದರ್ಭವನ್ನು ಕುರಿತಾಗಿ ಚಿತ್ರಗಳ ರಚನೆಯಾಗಿವೆ. ಈ ರಾಗಮಾಲಾ ಚಿತ್ರಗಳು ಕೇವಲ ಗುಜರಾತಿನ ಖಂಬಾವತಿ ಪ್ರದೇಶದಲ್ಲಿ ಮಾತ್ರ ಕಂಡುಬರುತ್ತವೆ. ಕಾಂಗ್ರಾ ಶೈಲಿಯಲ್ಲಿ ಈ ರಾಗದ ಕುರಿತ ಚಿತ್ರಗಳು ಭಿನ್ನವಾದ ಕಥಾಪ್ರಸಂಗ ಹೇಳುತ್ತವೆ.
ಚಿತ್ರ 1ರಲ್ಲಿ ಚರ್ತುಮುಖ ಬ್ರಹ್ಮನು ಯಜ್ಞದಲ್ಲಿ ನಿರತನಾಗಿದ್ದಾನೆ. ರಾಗಿಣಿ ಖಂಬಾವತಿ ಮತ್ತು ಬ್ರಹ್ಮ ತುಪ್ಪವನ್ನು ಅಥವಾ ಶ್ರೀಫಲವನ್ನು ಅಗ್ನಿಗೆ ಅರ್ಪಿಸುತ್ತಿರುವ ಚಿತ್ರವಿದೆ. ಆತನ ಎದುರಿಗೆ ಖಂಬಾವತಿ ಕುಳಿತಿದ್ದಾಳೆ. ಹಿಂದೆ ಸಖಿ ಚಾಮರ ಬೀಸುತ್ತಿರುವಂತೆ ಪ್ರಧಾನವಾಗಿ ದೃಶ್ಯದಲ್ಲಿ ಕಾಣುತ್ತದೆ. ಅಗ್ನಿಕುಂಡ ಜ್ವಾಲೆ ಪ್ರಜ್ಜ್ವಲವಾಗಿದ್ದು, ಯಜ್ಞಕ್ಕೆ ತುಪ್ಪವನ್ನು ಬ್ರಹ್ಮನು ಅರ್ಪಿಸುತ್ತಿದ್ದಾನೆ. ಈ ಚಿತ್ರದಲ್ಲಿ ನೆಲವು ದೂರದ ತನಕ ಚಾಚಿಕೊಂಡಿದ್ದು ಅರಮನೆಯ ಹೊರಗಿನ ಭಾಗವಾಗಿಯೂ ತೋರಿಸಿದ್ದು ಅಲ್ಲಿ ಸಮುದ್ರದ ಅಲೆಗಳನ್ನು ಚಿತ್ರಿಸಿದೆ. ರಾತ್ರಿಯ ಹೊತ್ತಿನಲ್ಲಿ ಸಮುದ್ರದ ತೆರೆಗಳು ಹೇಗೆ ಕಾಣುತ್ತವೆ ಎಂಬುದನ್ನು ಕಲಾವಿದ ಇಲ್ಲಿ ಚಿತ್ರಿಸಿರುವ ಬಗೆ ಯಜ್ಞದ ಕಾಲಾವಧಿಯ ಅಂದಾಜು ತಿಳಿಸುತ್ತದೆ. ಇಲ್ಲಿ ಖಂಬಾವತಿಯು ಕನ್ಯೆಯಾದ್ದರಿಂದ ಆಕೆಯ ಮುಖದ ಲಕ್ಷಣಗಳನ್ನು ದುಂಡುದುಂಡಾಗಿ ಚಿತ್ರಿಸಿರುವ ಬಗೆಯನ್ನು ಗಮನಿಸಬಹುದು. ಹಾಗೆ ಕೊಣೆಯೊಳಗೆ ಪಲ್ಲಂಗದ ಮೇಲೆ ತಾಂಬೂಲವನ್ನು ಸಿದ್ಧಪಡಿಸಿ ಇಟ್ಟಿರುವುದು ಶುಭಫಲಗಳನ್ನು ಸೂಚಿಸುತ್ತದೆ.
ಬ್ರಹ್ಮನ ಪೀತಾಂಬರ ಹಳದಿ ಬಣ್ಣದಲ್ಲಿ ರಚಿಸಿದ್ದು, ಉಳಿದ ವಸ್ತ್ರಗಳನ್ನೂ ಹಳದಿ ಬಣ್ಣದಲ್ಲಿ ರೂಪಿಸಿರುವುದಕ್ಕೆ ಕಾರಣ ರಾಗಿಣಿಯ ವರ್ಣದ ಹಾಗೆ ಇಲ್ಲಿ ಸಂಭ್ರಮ, ಸಡಗರಗಳೇ ತುಂಬಿದೆ ಎಂದು ಕಲಾವಿದ ನಿರೂಪಿಸುತ್ತಿದ್ದಾನೆ.
ಯಜ್ಞಮಂಟಪದ ಆವರಣದಲ್ಲಿಯೇ ವಾದನ ಹಿಡಿದು ಗಾಯಕರು ಹಾಡುತ್ತಿದ್ದರೆ. ಈ ರಾಗದ ಮೊದಲ ಮೂರು ಸ್ವರಗಳ ನಂತರ ಮುಂದಿನ ಸ್ವರಗಳಿಗೆ ಹಾಡುಗಾರರು ತಮ್ಮದೇ ವಿಭಿನ್ನಛಾಯೆ ನೀಡಿ ಹಾಡುವ ಕ್ರಮ ಖಂಬಾವತಿಯಲ್ಲಿಯೂ ಇದೆ. ಹೇಗೆ ಮಾಲಕೌಂಸ್ ರಾಗದಲ್ಲಿ ಭಕ್ತಿಯ ನಿರೂಪವಿದೆಯೋ ಹಾಗೆಯೆ ಖಂಬಾವತಿಯಲ್ಲಿಯೂ ಈ ಬಗೆಯ ಭಕ್ತಿಯನ್ನು ಮೀರಿ ಅಚಲ ವಿಶ್ವಾಸದಲ್ಲಿ ದೈವತ್ವದಲ್ಲಿ ಜತೆಗೂಡಿ ಇರುವುದೇ ಖಂಬಾವತಿ ರಾಗದ ಉದ್ದೇಶವಾಗಿದೆ. ಹೀಗಾಗಿ ಇಲ್ಲಿ ಅಚಲ ವಿಶ್ವಾಸ ಹಾಗೂ ಭಾಗಿಯಾಗುವುದರ ಸೂಚಕವೆಂಬಂತೆ ಕಲಾವಿದನು ಖಂಬಾವತಿ ಹಾಗೂ ಸಖಿಯರ ಆಂಗಿಕ ಭಾವಗಳಲ್ಲಿ ಯಾವುದೇ ಬಗೆಯ ಭಕ್ತಿ ಇಲ್ಲವೆ ವಿನಯವನ್ನು ಚಿತ್ರಿಸದೆ ಕೇವಲ ಬ್ರಹ್ಮನ ಎದುರು ಅವರಿಬ್ಬರೂ ಸಹಜ ಸ್ಥಿತಿಯಲ್ಲಿರುವಂತಿದೆ. ಇದೊಂದು ಪರಮೋಚ್ಚ ಭಕ್ತಿರೂಪಕದ ಸ್ಥಿತಿ.
ಇನ್ನು ಚಿತ್ರ ಎರಡು ರಾಜಸ್ಥಾನ ಪ್ರದೇಶದ್ದು. ಇಲ್ಲಿ ಖಂಬಾವತಿ ಹಾಗೂ ಬ್ರಹ್ಮನ ಚಿತ್ರವನ್ನು ಮಾತ್ರ ರಚಿಸಲಾಗಿದೆ. ಹಿನ್ನೆಲೆಯಲ್ಲಿರುವ ಸಭಾಮಂಟಪದೊಳಗೆ ಇಳಿಬಿದ್ದ ಗಂಟೆ ಹಾಗೂ ಕಟ್ಟಡದ ಹೊರಗೆ ಕಾಣುವ ಗೋಪುರ, ಕಳಸ ಹಾಗೂ ಲತಾಮಂಟಪಗಳಿಂದಾಗಿ ಇದೊಂದು ಮಂದಿರವಾಗಿದೆ ಎಂದು ಹೇಳಬಹುದು. ಇಲ್ಲಿ ಬ್ರಹ್ಮನು ಪಠನಮಾಡುತ್ತಾ ಯಜ್ಞಕ್ಕೆ ತುಪ್ಪವನ್ನು ಅರ್ಪಿಸುತ್ತಿದ್ದರೆ, ಆತನ ಎದುರಿಗೆ ಕುಳಿತ ಖಂಬಾವತಿ ತನ್ನ ಹಸ್ತಗಳ ಮೂಲಕ ನೈವೇದ್ಯವನ್ನು ನೀಡುತ್ತಿದ್ದಾಳೆ. ಇಲ್ಲಿನ ವಸ್ತ್ರಾಲಂಕಾರಗಳು ವಿಭಿನ್ನವಾಗಿವೆ. ಯಥೇಚ್ಛವಾದ ಆಭರಣಗಳಿಂದ ಇಬ್ಬರೂ ಅಲಂಕೃತರಾಗಿದ್ದಾರೆ. ಖಂಬಾವತಿಯ ತಲೆಯ ಮೇಲಿನಿಂದ ಇಳಿಬಿದ್ದ ಪಾರದರ್ಶಕ ವಸ್ತ್ರವು ಆಕೆಯ ಸೌಂದರ್ಯವನ್ನು ಇಮ್ಮಡಿಗೊಳಿಸಿದೆ. ಕಲಾವಿದ ಆಕೆಯ ಮೇಲುಹೊದಿಕೆ ಪಾರದರ್ಶಕವಾಗಿರುವಂತೆ ಕಾಣಲು ಆ ಬಟ್ಟೆಗೆ ರೇಷ್ಮೆಯ ಅಂಚನ್ನು ನೀಡಿ ಕೇವಲ ನೆರಿಗೆಗಳನ್ನು ಚಿತ್ರಿಸಿರುವುದು ಆ ಕಲಾವಿದನ ಕೌಶಲವನ್ನು ಎತ್ತಿತೋರಿಸುತ್ತದೆ. ಬ್ರಹ್ಮನು ತನ್ನ ಕಿರೀಟದಲ್ಲಿ ಕಮಲದ ಹೂವಿನ ಮೊಗ್ಗುಗಳಿಂದ ಅಲಂಕೃತಗೊಂಡಿದ್ದು ತ್ರಿಶೂಲಧಾರಿಯಾದ ಆತನ ಮೈಮೇಲೂ ತ್ರಿಶೂಲ ಆಕಾರದಲ್ಲಿ ಗಂಧದ ಲೇಪನವಿದೆ. ಪ್ರದೇಶದಿಂದ ಪ್ರದೇಶಕ್ಕೆ ಆಚರಣೆಗಳು ಹೇಗೆ ಬದಲಾಗುತ್ತವೆ ಎಂಬುದನ್ನು ನಾವು ಈ ಹಿಂದಿನ ರಾಗಗಳಲ್ಲಿಯೂ ಗಮನಿಸಿದ್ದೆವು. ಹಾಗೆಯೆ ಖಂಬಾವತಿಯಲ್ಲಿಯೂ ಈ ಬಗೆಯ ಬದಲಾವಣೆಗಳನ್ನು ಗುರುತಿಸಬಹುದು.
ಇನ್ನು ಇಲ್ಲಿ ಕಲಾವಿದನ ಕ್ರಿಯಾಶೀಲತೆ ಕಾಣುವುದು ರಾತ್ರಿಯ ವೇಳೆಯನ್ನು ಈ ಚಿತ್ರದಲ್ಲಿ ತೋರಿಸಲು ಈ ಹಿಂದಿನಂತೆ ಸಮುದ್ರವನ್ನು ತೋರಿಸಿಲ್ಲ. ಈ ಚಿತ್ರ ರಾಜಸ್ಥಾನ ಪ್ರದೇಶದ್ದಾದ್ದರಿಂದ ರಾತ್ರಿಯ ಕಾಲಾವಧಿಯನ್ನು ತೋರಿಸಲು ಕಟ್ಟಡದ ಹೊರಗಿನ ಮರವನ್ನು ಕಪ್ಪಾಗಿ ಚಿತ್ರಿಸಲಾಗಿದೆ. ಹಾಗೆಯೆ ಲತಾಮಂಟಪದ ಮೇಲೆ ಕುಳಿತ ನವಿಲು ನೈಜವಾದದ್ದೆಂಬುದನ್ನು ಹಾಗೂ ರಾತ್ರಿಯ ವೇಳೆಗೆ ನವಿಲು ಹೇಗೆ ಕಾಣುತ್ತದೆ ಎಂಬುದನ್ನು ಬೂದ ಹಾಗೂ ದಟ್ಟಬಣ್ಣಗಳಿಂದ ನಿರೂಪಿಸಿದ್ದಾನೆ. ಅಲ್ಲದೆ ಧ್ವಜಸ್ತಂಭವನ್ನು ಶಾರ್ದೂಲವು ಕಟ್ಟಡದ ಅಲಂಕಾರಭಾಗವೆಂದು ಬಣ್ಣಗಳ ಮೂಲಕ ನಿರೂಪಿಸಿದ್ದಾನೆ.
ಇನ್ನು ಮೂರನೆಯ ಚಿತ್ರವು 18ನೇ ಶತಮಾನದ ಅಂಚಿನದು. ಕಲಾವಿದಕಲ್ಪನೆಯ ಅದ್ಭುತ ವಿಹಂಗಮವಿದೆ. ಇಲ್ಲಿ ಕಲಾವಿದ ರಾಗದ ವೈಭವವನ್ನು ಇಡೀ ರಾತ್ರಿಯ ಪ್ರಖರ ನಕ್ಷತ್ರಕಾಯಗಳಿಂದ ತುಂಬಿಸಿದ್ದಾನೆ. ಆಕಾಶದ ದೂರದ ಭಾಗವನ್ನು ಖಾಲಿಯಾಗಿ ಇರಿಸಿರುವುದು ಅತಿದೂರಕ್ಕೆ ನಕ್ಷತ್ರಗಳು ಕಾಣುವುದಿಲ್ಲವೆಂಬ ದಿಗ್ಧರ್ಶನ ತೋರಿಸಿದ್ದಾನೆ. ಚಂದ್ರನನ್ನು ತಿದ್ದಿತೀಡಿ ರಚಿಸಿರುವುದು, ಸಭಾಭವನದ ಮುಂಭಾಗದಲ್ಲಿ ಶಾಮಿಯಾನವನ್ನು ಅಳವಡಿಸಿರುವುದು ಮತ್ತು ಮೋಂಬತ್ತಿಗಳನ್ನು ಹಚ್ಚಿಟ್ಟಿರುವ ಬಗೆಗಳನ್ನು ಗಮನಿಸಿದಾಗ ಈ ಚಿತ್ರದ ಮೇಲೆ ಕೊಲೋನಿಯಲ್ ಪ್ರಭಾವ ಇರುವುದು ಸ್ಪಷ್ಟವಾಗುತ್ತದೆ. ಯಜ್ಞದ ವಸ್ತುಗಳು, ಪರಿಕರಗಳು, ಕಿರೀಟಗಳಲ್ಲಿನ ಅಲಂಕಾರ ಮತ್ತು ಕೊಳದಲ್ಲಿರುವ ನೀರಿನ ಚಿಲುಮೆಗಳನ್ನು ಗಮನಿಸಿದಾಗ ಇಸ್ಲಾಂ ಪ್ರಭಾವಗಳು ಈ ಚಿತ್ರದ ಮೇಲೆ ಆಗಿವೆ. ಇಲ್ಲಿ ವಸ್ತ್ರಗಳು ಸಹ ಬಂಗಾರ ವರ್ಣದಲ್ಲಿದ್ದು ಬ್ರಹ್ಮನ ಹಿಂದೆ ನಿಂತಿರುವ ಖಂಬಾವತಿಯು ಹಿಡಿದಿರುವ ನವಿಲುಗರಿಗಳ ಚಾಮರವೂ ಬಂಗಾರದಲ್ಲಿದೆ. ಇದು ರಾಗದಲ್ಲಿ ವ್ಯಕ್ತವಾಗುವ ಭಾವತೀವ್ರತೆಯನ್ನು ಹೇಳುವುದಕ್ಕಿಂತಲೂ ಕಲಾವಿದನು ಚಿತ್ರವೈಭವವನ್ನೇ ಹೆಚ್ಚು ಪ್ರಧಾನಗೊಳಿಸಿದ್ದೇ ಆಗಿದೆ.
ಉಳಿದ ಚಿತ್ರಗಳು ಖಂಬಾವತಿಯ ರೂಪ-ಲಾವಣ್ಯಗಳನ್ನು ವಿವರಿಸುವ ಚಿತ್ರಗಳಾಗಿದ್ದು, ಅವುಗಳಲ್ಲಿ ಅಲಂಕಾರಕ್ಕೆ ಒತ್ತು ನೀಡಲಾಗಿದೆ.
ಖಂಬಾವತಿಯ ಗೀತೆಗಳು ಹೆಚ್ಚು ಖಮಾಜ್ ಥಾಟ್ನಲ್ಲಿವೆ. ‘ಪ್ರಿಯ ಮೊರೆ ಆಯೇ ಮಗರುವಾ ಕರೇ ಸೊಲೆ ಸಿಂಗಾರ್’ ಎಂಬುದು ಹಿಂದೂಸ್ತಾನಿ ಗಾಯಕರು ಹೆಚ್ಚು ಹಾಡುವ ರಚನೆ. ಕನ್ನಡ ಚಲನಚಿತ್ರ ‘ಗೆಳೆಯಾ’ ಚಿತ್ರದ ‘ಈ ಸಂಜೆ ಯಾಕಾಗಿದೆ’ ಹಾಡು ಇದೇ ಥಾಟ್ನಲ್ಲಿದೆ.