
ಸುಮಾರು ಇಪ್ಪತ್ತೈದು ವರ್ಷಗಳ ಮುನ್ನ ನನ್ನ ಸಂಗೀತಗುರುಗಳ ಗಾನದ ಧ್ವನಿಮುದ್ರಣಕ್ಕಾಗಿ ಅರವಿಂದ್ ಸ್ಟುಡಿಯೋಗೆ ಹೋಗಿದ್ದಾಗ ಸ್ವಲ್ಪ ಹೊತ್ತಿಗೇ ಅಲ್ಲಿಯ ಸಿಬ್ಬಂದಿಯ ನಡುವೆ ಸಂಭ್ರಮೋತ್ಸಾಹಗಳು ಪುಟಿದೆದ್ದವು. ಏಕೆಂದರೆ ಕೆಲವೇ ನಿಮಿಷಗಳಲ್ಲಿ ಪ್ರಖ್ಯಾತ ನೇಪಥ್ಯಗಾಯಕ ಎಸ್. ಪಿ. ಬಾಲಸುಬ್ರಹ್ಮಣ್ಯಂ ಅವರು ತಮ್ಮ ಹಾಡೊಂದರ ಧ್ವನಿಮುದ್ರಣಕ್ಕೆ ಅಲ್ಲಿ ಬರಲಿದ್ದರು. ಮೊದಲಿನಿಂದಲೂ ಘಂಟಸಾಲ ವೇಂಕಟೇಶ್ವರರಾಯರ ಹಾಗೂ ಪಿ. ಬಿ. ಶ್ರೀನಿವಾಸರ ಗಾನಮಾಧುರ್ಯಕ್ಕೆ ಮಾರುಹೋಗಿದ್ದ ನಾನು ಬಾಲು ಅವರ (ಇದು ಅವರ ಅಶೇಷ ಅಭಿಮಾನಿಗಳು ಆತ್ಮೀಯತೆಯಿಂದ ಕರೆಯುವ ಪರಿ) ಪ್ರತಿಭೆಯನ್ನು ಮೆಚ್ಚಿಕೊಂಡಿದ್ದರೂ ಅದಕ್ಕೆ ಮನಸೋತಿರಲಿಲ್ಲ. […]