
–ಸಂಗೀತಕಲಾರತ್ನ ಎಸ್. ಶಂಕರ್
‘ಮೈಸೂರು’ ಎಂದೊಡನೆ ಪ್ರತಿಯೊಬ್ಬರಿಗೂ ಅವರವರ ವಿಶೇಷ ಅಭಿರುಚಿಗೆ ತಕ್ಕಂತೆ ನೆನಪುಗಳು ಬಂದಾವು: ಪ್ರವಾಸಿಗರಿಗೆ ಅರಮನೆ, ಮಕ್ಕಳಿಗೆ ಪ್ರಾಣಿಸಂಗ್ರಹಾಲಯ, ಯಾತ್ರಿಕರಿಗೆ ಚಾಮುಂಡಿಬೆಟ್ಟ, ಹೆಂಗಳೆಯರಿಗೆ ಮಲ್ಲಿಗೆ, ಭೋಜನಪ್ರಿಯರಿಗೆ ಮೈಸೂರ್ಪಾಕ್ ಮತ್ತು ಅಗಿಯಲು ಚಿಗುರೆಲೆ – ಸಂಗೀತ ರಸಿಕರಿಗೆ ಮೈಸೂರುಶೈಲಿಯ ವೀಣಾ ವಾದನ.
‘ವೀಣೆಯೆಂದರೆ ಶೇಷಣ್ಣ, ಶೇಷಣ್ಣ ಎಂದರೆ ವೀಣೆ’ ಎಂಬುದು ಪ್ರಸಿದ್ಧ ಉಕ್ತಿ. ಇಂತಹ ಶ್ರೇಷ್ಠ ವಂಶದಲ್ಲಿ ಜನಿಸಿದವರು ಮೈಸೂರು ವಿ. ಸುಬ್ರಹ್ಮಣ್ಯ ಅವರು.
ಮೈಸೂರು ವಿ. ಸುಬ್ರಹ್ಮಣ್ಯ ಅವರ ತಂದೆ ವೆಂಕಟನಾರಾಯಣರಾಯರು ಶೇಷಣ್ಣನವರ ಮೊಮ್ಮಕ್ಕಳಾಗಿದ್ದು, ಶ್ರೇಷ್ಠ ವೈಣಿಕರೂ, ಬೋಧಕರೂ, ಬರಹಗಾರರೂ, ವಾಗ್ಮಿಯೂ ಆಗಿದ್ದರು. ಅಪಾರ ಸಂಗೀತಜ್ಞಾನದಿಂದಾಗಿ ಅವರಿಗೆ ಬಾಲ್ಯದಲ್ಲೇ ‘ಸ್ವರಮೂರ್ತಿ’ ಎಂಬ ಬಿರುದು ದೊರಕಿತ್ತು.
ಹೀಗೆ ಪಂಡಿತ ವಂಶಿಕರಾದ ವಿ. ಸುಬ್ರಹ್ಮಣ್ಯ ಅವರು ಗಾಯನ ಮತ್ತು ವೀಣಾವಾದನವನ್ನು ತಂದೆಯವರಿಂದ ಕಲಿಯುವುದರೊಟ್ಟಿಗೆ, ಕನ್ನಡದಲ್ಲಿ ಸ್ನಾತಕೋತ್ತರ ಪದವಿಯನ್ನೂ ಪಡೆದರು. ತಂದೆಯವರು ಆರಂಭಿಸಿದ ‘ವೀಣಾಗಾನ ಮಂದಿರ’ವನ್ನು ಸಹ ಈಗಲೂ ಮುನ್ನಡೆಸುತ್ತಿದ್ದಾರೆ. ಖ್ಯಾತ ವಿಮರ್ಶಕರಾಗಿದ್ದ ಶ್ರೀ ಬಿ.ವಿ.ಕೆ. ಶಾಸ್ತ್ರಿಗಳ ಮಾರ್ಗದರ್ಶನವನ್ನೂ ಕೂಡ ಪಡೆದರು. ಸುಬ್ರಹ್ಮಣ್ಯ ಅವರು ಕಳೆದ ನಾಲ್ಕು ದಶಕಗಳಿಂದ ‘ಪ್ರಜಾವಾಣಿ’ ಮತ್ತು ‘ಡೆಕ್ಕನ್ ಹೆರಾಲ್ಡ್’ ಪತ್ರಿಕೆಗಳಲ್ಲಿ ಕಲಾವಿಮರ್ಶಕರಾಗಿ ಸುಪರಿಚಿತರಾಗಿದ್ದಾರೆ.
ಅರ್ಹ ಯುವಕಲಾವಿದರ ಬೆನ್ನುತಟ್ಟುತ್ತಾ, ಅವರಿಗೆ ವೇದಿಕೆಗಳನಿತ್ತು ಕಲಾಭಿವೃದ್ಧಿಗೆ ಕಾರಣರಾಗಿದ್ದಾರೆ. ಸರಸ-ಸಂಭಾಷಿಗರಾದ ಇವರು ಉತ್ತಮ ವಾಗ್ಮಿಗಳೂ ಹೌದು. ಆಕರ್ಷಕ ವ್ಯಕ್ತಿತ್ವ ಮತ್ತು ಭಾಷಣಕ್ಕೆ ಬೇಕಾದ ಕಂಠಸಿರಿಯನ್ನು ಹೊಂದಿರುವ ಇವರು ತಮ್ಮ ಅಭಿಪ್ರಾಯಗಳನ್ನು ಸಮರ್ಥವಾಗಿ ಶ್ರೋತೃಗಳ ಮನಮುಟ್ಟಿಸುವುದರಲ್ಲಿ ಕುಶಲರು.
ಆಕಾಶವಾಣಿ ಮತ್ತು ದೂರದರ್ಶನದಲ್ಲಿ ಕಲಾವಿದರ ಆಯ್ಕೆಯ ಸಮಿತಿಯಲ್ಲಿ, ಸರ್ಕಾರ ಮತ್ತು ಖಾಸಗಿ ಸಂಸ್ಥೆಗಳು ನೀಡುವ ಅನೇಕ ಪ್ರಶಸ್ತಿಗಳ ಆಯ್ಕೆ ಸಮಿತಿಗಳಲ್ಲಿದ್ದು ಸೇವೆ ಸಲ್ಲಿಸುತ್ತಿದ್ದಾರೆ. ಸಂಘಟಕರಾಗಿ ಮಲ್ಲೇಶ್ವರಂ ಸಂಗೀತಸಭೆ, ಕರ್ನಾಟಕ ಗಾನಕಲಾ ಪರಿಷತ್ತಿನಲ್ಲಿ ಕಾರ್ಯಕಾರಿ ಸಮಿತಿಯ ಸದಸ್ಯರಾಗಿ ಉತ್ತಮ ಕಾರ್ಯಕ್ರಮಗಳನ್ನು ಆಯೋಜಿಸಿ ಜನಮನ್ನಣೆ ಗಳಿಸಿದ್ದಾರೆ.
ಇದಲ್ಲದೆ ಸಂಗೀತ ಸಂಬಂಧವಾದ ರೂಪಕಗಳನ್ನು, ಪ್ರಾತ್ಯಕ್ಷಿಕೆಗಳನ್ನು ದೇಶದ ವಿವಿಧೆಡೆಗಳಲ್ಲಿ ವಿ. ಸುಬ್ರಹ್ಮಣ್ಯ ನೀಡಿದ್ದಾರೆ. ಮೈಸೂರಿನ ಅರಮನೆ ಟ್ರಸ್ಟ್ನ ಟ್ರಸ್ಟೀಯಾಗಿ ಮೈಸೂರು ವಿಶ್ವವಿದ್ಯಾಲಯ ತಂದಿರುವ ‘ಕನ್ನಡ ವಿಶ್ವಕೋಶ – ಲಲಿತ ಕಲೆ’ಯ ಸಂಪಾದಕಮಂಡಳಿಯ ಸದಸ್ಯರೂ ಆಗಿದ್ದಾರೆ. ಉತ್ತಮ ಬರಹಗಾರರಾದ ವಿ. ಸುಬ್ರಹ್ಮಣ್ಯ ಅವರು ಅನೇಕ ಕೃತಿಗಳನ್ನೂ ಹೊರತಂದಿದ್ದಾರೆ.
ಕೇಂದ್ರಸರ್ಕಾರದ ಸಂಸ್ಕೃತಿ ಇಲಾಖೆಯಿಂದ ಫೆಲೋಶಿಪ್ ಪಡೆದಿದ್ದಾರೆ. ಸಂಗೀತ ಇತಿಹಾಸಕಾರರಾಗಿ (archivist) ಅನೇಕ ಕಲಾವಿದರ ಅಪರೂಪದ ಭಾವಚಿತ್ರಗಳನ್ನು ಸಂಗ್ರಹಿಸಿ ಅವುಗಳನ್ನು ದೇಶಾದ್ಯಂತ ನಡೆಯುವ ಸಮ್ಮೇಳನಗಳಲ್ಲಿ ಪ್ರದರ್ಶಿಸಿದ ಹೆಮ್ಮೆ ಇವರದು. ವಿಶೇಷವಾಗಿ ಕರ್ನಾಟಕದ ಅಂಧ ಕಲಾವಿದರ ಏಳಿಗೆಗೂ ಶ್ರಮಿಸಿದ್ದಾರೆ.
ಇವರ ಇಂತಹ ಬಹುಮುಖ ಕಲಾಸೇವೆಗಾಗಿ ಸಂದ ಬಿರುದು ಸಮ್ಮಾನಗಳು ಅನೇಕ. ಅವುಗಳಲ್ಲಿ ಕೆಲವೆಂದರೆ ‘ಸಂಗೀತ ಕಲಾರತ್ನ’, ‘ಸಂಗೀತ ಕಲಾಭೂಷಣ’, ‘ಸಾಹಿತ್ಯ ಕಲಾಶ್ರೀ’, ‘ಆರ್ಯಭಟ-ಕೆಂಪೇಗೌಡ’ ಪ್ರಶಸ್ತಿ, ‘ಅತ್ಯುತ್ತಮ ಆಯೋಜಕ’ ಪ್ರಶಸ್ತಿ, ‘ಜ್ಞಾನ ಸರಸ್ವತೀ ಪೀಠ’ ಪ್ರಶಸ್ತಿ, ಉಡುಪಿ ಶ್ರೀಕೃಷ್ಣ ಮಠದ ‘ಆಸ್ಥಾನ ವಿದ್ವಾನ್’ ಮನ್ನಣೆ, ರಾಜ್ಯ ಮತ್ತು ಕೇಂದ್ರ ಸಂಗೀತ ಅಕಾಡೆಮಿಗಳ ಪ್ರಶಸ್ತಿ, ತುಮಕೂರು ವಿಶ್ವವಿದ್ಯಾಲಯದಿಂದ ‘ಗೌರವ ಪ್ರೊಫೆಸರ್’ ಪಟ್ಟ ಇತ್ಯಾದಿ.
‘ಗಳಿಸಿದ್ದು ಅಪಾರ, ನೀಡಿದ್ದು ಅಮೂಲ್ಯ’
ಮುತ್ತಾತ ವೀಣೆ ಶೇಷಣ್ಣನವರು ನುಡಿಸುತ್ತಿದ್ದ ಪವಿತ್ರವಾದ ವೀಣೆಯು ಅಪಾತ್ರರ ಪಾಲಾಗುವ ಮುಂಚೆ ಮುಂದಾಲೋಚನೆಯಿಂದ ಅದನ್ನು ಧರ್ಮಸ್ಥಳದ ‘ಮಂಜೂಷಾ’ ವಸ್ತು- ಸಂಗ್ರಹಾಲಯದ ವಶಕ್ಕೆ ಒಪ್ಪಿಸಿ ಕೃತಾರ್ಥರಾಗಿದ್ದಾರೆ.
ಇದಲ್ಲದೆ ಪ್ರತಿ ವರ್ಷ ಮುತ್ತಾತ ಶೇಷಣ್ಣ ಮತ್ತು ತಂದೆ ಸ್ವರಮೂರ್ತಿ ವಿ.ಎನ್. ರಾಯರ ಹೆಸರುಗಳಲ್ಲಿ ಕ್ರಮವಾಗಿ ರಾಷ್ತ್ರೀಯ ಮತ್ತು ರಾಜ್ಯಮಟ್ಟದ ಪ್ರಶಸ್ತಿಗಳನ್ನು ಕಲಾವಿದರಿಗೆ ದೊಡ್ಡ ಮೊತ್ತದೊಂದಿಗೆ ನೀಡಿ ಗೌರವಿಸುತ್ತಿರುವ ಪರಿ ಅನುಕರಣೀಯ. ತಮ್ಮ ಪ್ರೀತಿ-ವಿಶ್ವಾಸದ ನಡೆನುಡಿಗಳಿಂದ ಇದಕ್ಕೆ ಬೇಕಾದ ಸಹಾಯಹಸ್ತ ನೀಡುತ್ತಿರುವ ಕೊಡುಗೈ ದಾನಿಗಳ ತಂಡವನ್ನು ಇವರು ಸಂಪಾದಿಸಿದ್ದಾರೆ.
ಇಂತಹ ಅಪೂರ್ವ ಸಾಧಕರಾದ ಮೈಸೂರು ವಿ. ಸುಬ್ರಹ್ಮಣ್ಯ ಅವರ ಕಲಾಸೇವೆ ಚಿರಕಾಲ ನಡೆಯುವಂತೆ ಶ್ರೀಶಾರದೆಯು ಅನುಗ್ರಹಿಸಲೆಂದು ಹಾರೈಸೋಣ.