ಹಲವು ಜನ್ಮಗಳ ನಂತರ ಬರುವ ಮಾನವಜನ್ಮ ಅತಿ ಅಮೂಲ್ಯ ಎನ್ನುತ್ತಾರೆ ತತ್ತ್ವಜ್ಞಾನಿಗಳು. ಅಂತಹ ಅಮೂಲ್ಯವಾದ ಮಾನವಜನ್ಮವನ್ನು ಅತ್ಯಂತ ಸಮರ್ಪಕವಾಗಿ ದೇಶಕ್ಕೆ ಸಮರ್ಪಿಸಿದ ವಿರಳ ವ್ಯಕ್ತಿಗಳಲ್ಲಿಯೆ ವಿಶಿಷ್ಟರಾದವರು ದಿ. ಮೈ.ಚ. ಜಯದೇವ ಅವರು.
ನನಗೆ ಮೈಸೂರಿನ ಚನ್ನಬಸಪ್ಪ ಜಯದೇವ ಅವರ ಪರಿಚಯವಾದದ್ದು ಈಗ್ಗೆ ಮೂವತ್ತು ವರುಷಗಳ ಹಿಂದೆ, ಅವರು ತಮ್ಮ ರಕ್ತದ ಒತ್ತಡ ಪರೀಕ್ಷೆ ಮಾಡಿಸಿಕೊಳ್ಳಲು ನನ್ನ ಹತ್ತಿರ ಬಂದಾಗ. ಅಂದಿನಿಂದ ಇಂದಿನವರೆಗೂ ಅವರಿಗೆ ನಾನು ವೈದ್ಯಳಾಗಿರುವುದಕ್ಕಿಂತ ಅವರ ಅನುಯಾಯಿ ಆಗಿದ್ದದ್ದೇ ಹೆಚ್ಚು. ಪಿತೃಸಮಾನರಾದ ಅವರಿಂದ ನಾನು ಕಲಿತದ್ದು ಅಪಾರ. ಅಪ್ಪಟ ದೇಶಪ್ರೇಮಿಯಾದ ಅವರ ನಿರ್ಮಲ, ನಿರ್ಮೋಹಿ ವ್ಯಕ್ತಿತ್ವ ಕಂಡು, ಇಂತಹ ಹಸುವಿನಂಥ ಸಾಧುವ್ಯಕ್ತಿಗಳು ಇಂದಿಗೂ ನಮ್ಮಲ್ಲಿದ್ದಾರಲ್ಲ ಎಂದು ಆಶ್ಚರ್ಯಪಟ್ಟಿದ್ದೇನೆ. ಒಬ್ಬ ಚಿಕ್ಕ ಮಗಳು ತಂದೆಯನ್ನು ಮಾತನಾಡಿಸಿದಂತೆ ನಾನು ಅದು-ಇದು ಎಂದು ಹಲವು ವಿಷಯ ಮಾತನಾಡುತ್ತಲೇ ಹೋದರೆ, ಅವರು ಗಮನಕೊಟ್ಟು “ಅಚ್ಛಾ!” ಎಂದು ಉದ್ಗರಿಸಿ, ನನ್ನ ಮಾತಿಗೆ ’ಹಾಹಾಹಾ’ ಎಂದು ಗಹಗಹಸಿ ನಗುತ್ತಿದ್ದರು ಅವರ ಮುಗ್ಧನಗೆ ಕಂಡು ನಾನು ಉತ್ಸಾಹದಿಂದ ಇನ್ನೂ ಹೆಚ್ಚುಹೆಚ್ಚು ಮಾತನಾಡುತ್ತಿದ್ದೆ. ಅವರದ್ದು ’ಮಾತು ಬಂಗಾರ’ವಾದರೆ ನನ್ನದು ’ಮಾತು ಬೆಳ್ಳಿ’ ಆಗಿದ್ದಿತು! ಎರಡು ತಿಂಗಳ ಹಿಂದೆ (ಜನವರಿ ೨೦೧೭) ಅಮೆರಿಕಕ್ಕೆ ಹೋಗುವ ಮೊದಲು ’ಮೊಮ್ಮಗ ಹುಟ್ಟಿದ್ದಾನೆ’ ಎಂದು ಸಿಹಿಸುದ್ದಿಯೊಂದಿಗೆ ಅವರಿಗೆ ಕೈಯಾರೆ ಸಿಹಿ ತಿನಿಸಿ “ಜೀ! ನನಗೆ ಈಗ ನಾಲ್ಕು ಮೊಮ್ಮಕ್ಕಳು. ಎಲ್ಲರೂ ಮೂರು ಮೊಮ್ಮಕ್ಕಳನ್ನಾದರೂ ಮಾಡಿಕೊಳ್ಳಬೇಕು. ಒಂದು ವಿದೇಶಕ್ಕೆ, ಒಂದು ದೇಶಕ್ಕೆ, ಇನ್ನೊಂದು ಮನೆಗೆ” ಎಂದಾಗ ’ಹಾಹಾಹಾ’ ಎಂದು ನಕ್ಕಿದ್ದರು. ನಾನು ಮರಳಿ ಬಂದಾಗ ಅವರು ಮಾತುಕೇಳುವ ಸ್ಥಿತಿಯಲ್ಲಿರಲಿಲ್ಲ. ನನ್ನ ಮೂಕರೋದನ ಹತ್ತಿಕ್ಕಿಕೊಂಡು, ಅವರ ತಲೆ ಸವರಿ ದುಃಖಿಸುತ್ತ ಐಸಿಯುನಿಂದ ಹೊರಬಂದೆ.
ದೂಷಣೆಯಿಂದ ದೂರ
ಕಳೆದ ೩೦ ವರುಷಳಲ್ಲಿ ನಾನು ಎಂದೂ ಜಯದೇವಜೀ ಅವರು ಕೋಪಿಸಿಕೊಂಡು ಇತರರ ಬಗ್ಗೆ ದೂಷಿಸುತ್ತ ಮಾತನಾಡಿದ್ದನ್ನು ಕೇಳಿಯೇ ಇಲ್ಲ. ನಮ್ಮ ಸುತ್ತಲಿನ ಸಮಾಜದ ಮೇಲೆ ಕಣ್ಣುಹಾಯಿಸಿದಾಗ ಎಲ್ಲೆಲ್ಲೂ ಜನರು ಒಬ್ಬರನ್ನೊಬ್ಬರು ದೂಷಿಸುವುದನ್ನು ಕೇಳುತ್ತೇವೆ. ಇನ್ನೊಬ್ಬರ ಬಗ್ಗೆ ಒಂದೇ ಒಂದು ಕೆಟ್ಟ ಮಾತನ್ನೂ ಆಡದಿರುವ ಸದ್ಗುಣವನ್ನು ನಾವು ಜಯದೇವರಿಂದ ಕಲಿಯಬೇಕು.
ಅತ್ಯಂತ ಸುಸಂಸ್ಕೃತರಾದ ಜಯದೇವಜೀ ಸದ್ಗುಣಗಳ ಆಗರವಾಗಿದ್ದರು. ಅವರ ಅಂತರಂಗದ ಅರಮನೆಯಲ್ಲಿ ಸದಾ ಸುಜ್ಞಾನದ ದೀಪ ಉರಿಯುತ್ತಿತ್ತು. ಸಂಸ್ಕಾರವೆಂದರೆ ನಮ್ಮಲ್ಲಿರುವ ಅವಗುಣಗಳನ್ನು ತೆಗೆದು ನಮ್ಮನ್ನು ಸದ್ಗುಣಿಗಳನ್ನಾಗಿಸುವ ಪ್ರಕ್ರಿಯೆ. ಅವರು ಬಹುಶಃ ಹುಟ್ಟು ಸದ್ಗುಣಿಗಳು. ಜೊತೆಗೆ ಉತ್ತಮ ಆಚಾರ-ವಿಚಾರಗಳನ್ನು ಮೈಗೂಡಿಸಿಕೊಂಡ ಮಹಾತ್ಮರು.
ನಮ್ಮಲ್ಲಿ ಎರಡು ತರಹದ ಗುಣಗಳಿರುತ್ತವೆ. ಒಂದು ಹುಟ್ಟುಗುಣ, ಎರಡನೆಯದು ನಾವು ರೂಢಿಮಾಡಿಕೊಂಡ ಗುಣಗಳು. ’ಹುಟ್ಟುಗುಣ ಹುಗಿದರೂ ಹೋಗುವುದಿಲ್ಲ’ ಎನ್ನುತ್ತಾರೆ. ಯಾಕೆಂದರೆ ಹುಟ್ಟುಗುಣಗಳನ್ನು ಬದಲಿಸಿಕೊಳ್ಳುವುದು ಬಲುಕ?. ಇನ್ನು ಕೆಲವರು ಜೀವನದುದ್ದಕ್ಕೂ ದು?ಗುಣಗಳನ್ನು ಬೆಳೆಸಿಕೊಂಡು ದೈತ್ಯರಾಗುತ್ತಾರೆ. ಆದರೆ ಜಯದೇವಜೀ ಅವರು ಹುಟ್ಟಿನಿಂದಲೇ ಮೃದು ಮತ್ತು ಸರಳ ಸಜ್ಜನ ಸ್ವಭಾವದವರು. ಉತ್ತಮಗುಣಗಳನ್ನು ರೂಢಿಸಿಕೊಂಡು ಪ್ರಜ್ವಲಿಸಿ ನಮಗೆಲ್ಲ ದಾರಿದೀಪ ಆದವರು.
ಸಮಯಕ್ಕೆ ಬೆಲೆ
ಅವರ ಸಮಯಪ್ರಜ್ಞೆ ವಿಶೇಷವಾಗಿತ್ತು. ನನ್ನ ಹಲವು ಕಾರ್ಯಕ್ರಮಗಳಿಗೆ ಮುಖ್ಯ ಅತಿಥಿಯಾಗಿ ಬಂದ ಅವರು ಸದಾ ಸಮಯಕ್ಕೆ ಐದುನಿಮಿಷ ಮುಂಚಿತವೇ ಬರುತ್ತಿದ್ದರು. ಒಂದು ಸಲ ನಾವು ’ಓo ಖಿobಚಿಛಿಛಿo ಆಚಿಥಿ’ ಆಚರಿಸಲು ವಿಧಾನಸೌಧದ ಮುಂದಿನಿಂದ ಜಾಥಾ ಪ್ರಾರಂಭಿಸಬೇಕಿತ್ತು. ಸರಿಯಾಗಿ ೯ಕ್ಕೆ ಐದು ನಿಮಿಷ ಇರುತ್ತಿದ್ದಂತೆಯೇ ಜಯದೇವಜೀ ಬರಿಗಾಲಲ್ಲಿ ನಡೆಯುತ್ತ ಬಂದೇಬಿಟ್ಟರು. ನಾವು ಅಂಗಡಿಗೆ ಹೋಗಿ ಗಡಿಯಾರ ಕೊಂಡುಕೊಳ್ಳಬಹುದು. ಆದರೆ ಸಮಯವನ್ನು ಜಗತ್ತಿನಲ್ಲಿ ಯಾವ ಅಂಗಡಿಯಲ್ಲೂ ಕೊಂಡುಕೊಳ್ಳಲು ಆಗುವುದಿಲ್ಲ. ಇಂದು ಒಂದು ಗಂಟೆ, ಎರಡು ಗಂಟೆ ತಡವಾಗಿ ಕಾರ್ಯಕ್ರಮಕ್ಕೆ ಬರುವವರು ಜಯದೇವ್ಜೀ ಅಂಥವರಿಂದ ಸಮಯಪ್ರಜ್ಞೆಯನ್ನು ಕಲಿಯಲೇಬೇಕು.
ಹೀಗೊಂದು ನಿರ್ಧಾರ
ಒಂದು ದಿನ ನಾನು ವಿಷಯ ಪ್ರಸ್ತಾಪಿಸುತ್ತಾ – “ಜೀ, ನನ್ನನ್ನು ತಪ್ಪು ತಿಳಿದುಕೊಳ್ಳಬೇಡಿ…” ಎಂದು ಪೀಠಿಕೆ ಹಾಕಿದೆ. ಅದಕ್ಕೆ ಅಂದು ಅವರು ಆಡಿದ ಮಾತು ನನಗೆ ಒಂದು ದೊಡ್ಡ ಪಾಠವಾಯಿತು: “ನೋಡಿ, ನಾನು ಬದುಕಿನಲ್ಲಿ ಒಂದು ನಿರ್ಧಾರ ಮಾಡಿದ್ದೇನೆ; ಯಾರು ಏನೇ ಮಾಡಿದರೂ, ಆಡಿದರೂ ಅವರನ್ನು ಅರ್ಥಮಾಡಿಕೊಳ್ಳುವ ಪ್ರಯತ್ನ ಮಾಡುತ್ತೇನೆಯೆ, ಹೊರತಾಗಿ ಅದನ್ನು ಅಪಾರ್ಥ ಮಾಡಿಕೊಳ್ಳಬಾರದು ಎಂದು. ಆದ್ದರಿಂದ ಎಂದೂ ನೀವು ಸಂಕೋಚಪಡದೇ ಮಾತನಾಡಿ.” ಜಗತ್ತಿನಲ್ಲಿ ಹಲವು ಸಂದರ್ಭದಲ್ಲಿ ಸಂಬಂಧಗಳು ಹಳಸುತ್ತವೆ, ಅಳಿಸುತ್ತವೆ. ಕಾರಣ ಈ ಅಪಾರ್ಥ, ಅಪನಂಬಿಕೆ. ’ತನ್ನಂತೆ ಪರರ ಬಗೆದೊಡೆ ಕೈಲಾಸ ಬಿನ್ನಣವಕ್ಕು ಸರ್ವಜ್ಞ’ ಎನ್ನುವಂತೆ ಇತರರ ಕ?, ಅವರ ಭಾವನೆ ಅರ್ಥಮಾಡಿಕೊಂಡಾಗ ಸಮಸ್ಯೆಯೂ ಇರುವುದಿಲ್ಲ.
ರಾಜಕೀಯಬಿಕ್ಕಟ್ಟಿಗೆ ಸಿಕ್ಕ ಉತ್ತರ
ಸಮಸ್ಯೆ ಎಂದಾಗ ನನಗೆ ನೆನಪಾಗುವುದು ಒಮ್ಮೆ ರಾಜಕೀಯಬಿಕ್ಕಟ್ಟಿನ ಸಂದರ್ಭದಲ್ಲಿ ಅವರಾಡಿದ ಮಾತು. ಆಗ ರಾಜ್ಯದ ರಾಜಕೀಯದಲ್ಲಿ ಎಂದಿಲ್ಲದ ಬಿಕ್ಕಟ್ಟು ಬಂದೊದಗಿತ್ತು. ನನಗೆ ಯಾಕೆ ಹೀಗೆ ಆಗುತ್ತಿದೆ ಅರ್ಥವಾಗದೆ ದಿಗಿಲಾಗಿ – “ಜೀ! ಇವರು ಯಾಕೆ ಹೀಗಾಡುತ್ತಿದ್ದಾರೆ?” ಎಂದು ಕೇಳಿದಾಗ ಅವರು ಇಡೀ ಸಮಸ್ಯೆಯ ಮೂಲವನ್ನು ಒಂದೇ ಶಬ್ದದಲ್ಲಿ ಹೇಳಿದರು – “ಸ್ವಾರ್ಥ”. ಈ ಸ್ವಾರ್ಥ ಭಯಂಕರ ವಿಷ. ಸರ್ವನಾಶ ಮಾಡುವ ಸ್ವಾರ್ಥ ಇಂದು ವಿಶ್ವವ್ಯಾಪಿಯಾಗಿದೆ. ಅತ್ಯಂತ ನಿಃಸ್ವಾರ್ಥಿ. ನಿರ್ಮಲರಾಗಿದ್ದ ಜಯದೇವಜೀ ಕೇಳದೆಯೇ ಜನರಿಗೆ ಸಹಾಯ ಮಾಡುವಂಥ ಧರ್ಮಿ?ರಾಗಿದ್ದರು. ಧರ್ಮಿಷ್ಠರು ಅಂದರೆ ಸತ್ಯ, ಅಹಿಂಸೆ, ಅಸ್ತೇಯ, ಶೌಚ, ಇಂದ್ರಿಯನಿಗ್ರಹವನ್ನು ಧರಿಸಿದವರು. ಸದಾ ದೇಶಭಕ್ತಿಯಲ್ಲಿ ಮುಳುಗಿ ಸಮಾಜಕ್ಕೆ ಸರ್ವಸ್ವವನ್ನೂ ಅರ್ಪಿಸಿದ ಅವರು ಮಹಾಚೇತನರಾಗಿದ್ದರು. ಸರ್ವಜ್ಞ ಹೇಳಿದಂತೆ – ’ಆ ದೇವ ಈ ದೇವ ಮಹಾದೇವನೆನಬೇಡ. ಭುವನದೊಳ್ ಸಕಲ ಜೀವಾತ್ಮರಿಗಾದವನೇ ಮಹಾದೇವ ಸರ್ವಜ್ಞ.’ ತಮಗಾಗಿ ಏನೂ ಮಾಡಿಕೊಳ್ಳದೆ, ಸದಾ ಇತರರ ಹಿತಕ್ಕಾಗಿ ಬದುಕಿದ ಮೈ. ಚ. ಜಯದೇವ ’ನರತ್ವದಿಂದ ಹರತ್ವ’ ಸಾಧಿಸಿ ಮಹಾತ್ಮರಾದವರು.