“ನಾನು ನನ್ನ ಸಂಗೀತದ ಅನುಭವವನ್ನು ನನ್ನ ‘ಶ್ರೀಹರಿ ಚರಿತೆ’ಯ (ಮಹಾಕಾವ್ಯ) ಮೂರು ಉಲ್ಲಾಸಗಳಲ್ಲಿ ವರ್ಣಿಸಿದ್ದೇನೆ. ಅದರಲ್ಲಿ ಬಹುಪಾಲು ದೊರೆಸ್ವಾಮಿ ಅಯ್ಯಂಗಾರ್ಯರ ವೀಣೆಯಿಂದ ನಾನು ಪಡೆದಿರುವ ಅನುಭವಗಳು. ಅವರಿಂದ ನನಗೆ ದೊರೆತಿರುವ ಆತ್ಮಾನಂದ ಅಮೋಘವಾದದ್ದು. ಅದು ನನ್ನ ಹೃದಯದ ಸಂತೋಷ ಒಣಗಿಹೋಗದಂತೆ ಕಾಪಾಡುತ್ತದೆ. ಈಗಲೂ ಅಯ್ಯಂಗಾರ್ಯರು ನಮ್ಮ ಮನೆಗೆ ಬಂದು ನನಗೆ ತುಂಬ ಸಂತೋಷವನ್ನು ಕೊಡುತ್ತಿರುತ್ತಾರೆ. ಸಂಗೀತವನ್ನು ಕುರಿತು ಅವರೊಡನೆ ಮಾತನಾಡುತ್ತಿದ್ದರೆ ನಾನು ಉಲ್ಲಸಿತನಾಗುತ್ತೇನೆ. ಕೀರ್ತನಗಳ ಸೌಂದರ್ಯವನ್ನು, ಹಾಡುಗಳಿಗೆ ಲಯದಿಂದ ಬರುವ ಚೆಲುವನ್ನು ಅವರು ಹೇಳಬೇಕು, ನಾನು ಕೇಳಬೇಕು.”
ಇದು ಈಗ ಜನ್ಮಶತಾಬ್ದವನ್ನು ಆಚರಿಸಲಾಗುತ್ತಿರುವ ಮೈಸೂರು ವಿ. ದೊರೆಸ್ವಾಮಿ ಅಯ್ಯಂಗಾರ್ಯರ ಬಗ್ಗೆ ಕನ್ನಡದ ಓರ್ವ ಶ್ರೇಷ್ಠ ಕವಿಯೂ, ಸ್ವಯಂ ಸಂಗೀತ ತಜ್ಞರೂ ಆಗಿದ್ದ ಪು.ತಿ. ನರಸಿಂಹಾಚಾರ್ಯರು ಆಡಿದ್ದ ಮಾತುಗಳು. ಒಂದು ಅಪರೂಪದ ಕೃತಿ ದೊರೆಸ್ವಾಮಿ ಅಯ್ಯಂಗಾರ್ ಅವರ ಆತ್ಮವೃತ್ತ (ನಿರೂಪಣೆ: ಭಾರತೀ ಕಾಸರಗೋಡು) ‘ವೀಣೆಯ ನೆರಳಿನಲ್ಲಿ…’ ಅದರ ‘ನಲ್ನುಡಿ’ ಎಂಬ ಮುನ್ನುಡಿಯಲ್ಲಿ ಪು.ತಿ.ನ. ಈ ಮಾತುಗಳನ್ನು ಹೇಳಿದ್ದಾರೆ. (ಪ್ರ: ಗೀತಾ ಬುಕ್ಹೌಸ್, ಮೈಸೂರು, 1997)
‘ನಲ್ನುಡಿ’ಯಲ್ಲಿ ಪು.ತಿ. ನರಸಿಂಹಾಚಾರ್ ಅವರು ಅಭಿಮಾನ, ಅಂತಃಕರಣಗಳಲ್ಲಿ ಅದ್ದಿತೆಗೆದಂತಿರುವ ಇನ್ನೂ ಬಹಳಷ್ಟು ಮಾತುಗಳನ್ನಾಡಿದ್ದಾರೆ. “ಅವರ ವೀಣಾವಾದನವನ್ನು ಒಮ್ಮೆ ಕೇಳಿದವರಿಗೆ ಅದನ್ನು ಮತ್ತೆ ಮತ್ತೆ ಕೇಳಬೇಕೆಂಬ ಬಯಕೆ ಹೊಮ್ಮುತ್ತದೆ. ಅದು ಕೇವಲ ಮನೋರಂಜನೆಗೆ ಸೀಮಿತವಾಗಿಲ್ಲ. ಅದು ಸ್ವರಲಯಗಳ ಕ್ರೀಡೆ ಮಾತ್ರವಲ್ಲ, ಸುಗಂಧತೈಲವನ್ನು ತಿಕ್ಕಿ ಅಂಗಗಳನ್ನು ತೀಡಿ, ಹಿಸುಕಿ, ಬೆನ್ನನ್ನು ಮೃದುವಾಗಿ ಗುದ್ದಿ, ತಲೆಯನ್ನು ತಟತಟನೆ ತಟ್ಟಿ, ಬಿಸಿನೀರೆರೆದು, ಹಬೆಯಲ್ಲಿ ಕುಳ್ಳಿರಿಸಿ, ಮೈಯನ್ನು ಹಗುರ ಮಾಡಿ ಉಲ್ಲಾಸಗೊಳಿಸುವ ಅಂಗಮರ್ದನ ಕುಶಲರಂತೆ ವರ್ತಿಸಲೂ ಅವರು ಹಿಂಜರಿಯುವುದಿಲ್ಲ. ಅವರ ಕಲೆ ಇಂದಿಗೆ ನಿಲ್ಲುವುದಲ್ಲ. ರಾಗಗಳಿಂದ ವಿವಿಧ ಭಾವಗಳನ್ನು ಪ್ರಕಾಶಗೊಳಿಸಿ ರಸಪ್ರತೀತಿಯನ್ನು ತರುವುದು ಅವರ ಗುರಿ. ಶೇಷಣ್ಣನವರದೂ ಇದೇ! ಇದು ಅವರ ವೈಶಿಷ್ಟ್ಯವೂ ಹೌದು” ಎಂದು ಪು.ತಿ.ನ. ಹೇಳುತ್ತಾರೆ. ವೀಣಾವಾದನಕ್ಕೆ ಸಂಬಂಧಿಸಿ ದಂತಕಥೆಯೇ ಆಗಿರುವ ಶೇಷಣ್ಣ ಅವರೊಂದಿಗೆ ದೊರೆಸ್ವಾಮಿ ಅಯ್ಯಂಗಾರ್ಯರನ್ನು ಹೋಲಿಸಿರುವುದು ಇಲ್ಲಿ ಗಮನಾರ್ಹ. ಶೇಷಣ್ಣನವರ ನೇರ ಶಿಷ್ಯ ವೆಂಕಟಗಿರಿಯಪ್ಪನವರು ಅಯ್ಯಂಗಾರ್ಯರ ಗುರುಗಳು. ಅಂದರೆ ಇದು ಸಾರ್ಥಕವಾದ ಮೂರನೇ ತಲೆಮಾರು.
ಹಳ್ಳಿಯಿಂದ ಪೇಟೆಗೆ
ದೊರೆಸ್ವಾಮಿ ಅಯ್ಯಂಗಾರರ ತಾತ ಜನಾರ್ದನ ಅಯ್ಯಂಗಾರ್ಯರು. ಹಾಸನ ಜಿಲ್ಲೆ ಬೇಲೂರು ತಾಲೂಕಿನ ಮಾದಿಹಳ್ಳಿಯವರು. ಅವರಿಗೆ ಮೂವರು ಗಂಡುಮಕ್ಕಳು. ಜೀವನ ನಿರ್ವಹಣೆಗೆ ಅಲ್ಲಿ ಸ್ವಲ್ಪ ಜಮೀನೇನೋ ಇತ್ತು. ಆದರೆ ಪತ್ನಿ ಬೇಗ ಕಾಲವಾದ್ದರಿಂದ ಮಕ್ಕಳ ಪೂರ್ತಿ ಹೊಣೆಯನ್ನು ಹೊರಬೇಕಾಯಿತು. ಹೆಂಗರುಳಿನ ವ್ಯಕ್ತಿಯಾದ ಅವರು ನಿಷ್ಕಪಟಿ, ಕಷ್ಟಜೀವಿ ಮತ್ತು ಧೈರ್ಯಶಾಲಿ. ದೇವರನಾಮಗಳನ್ನು ರಾಗವಾಗಿ ಹಾಡುವರು. ಕಂಠ ಮಧುರವಾಗಿತ್ತು; ಸಂಗೀತವನ್ನು ಕಲಿಯದಿದ್ದರೂ ಹಾಡು ಶ್ರುತಿಬದ್ಧವಾಗಿರುತ್ತಿತ್ತು.
ಮಗ ವೆಂಕಟೇಶನಿಗೆ (ದೊರೆಸ್ವಾಮಿ ಅಯ್ಯಂಗಾರ್ ಅವರ ತಂದೆ) ಹಾಡುವುದರಲ್ಲಿ ಆಸಕ್ತಿ ಇದ್ದುದನ್ನು ಅವರು ಗಮನಿಸಿದರು. ಅದಕ್ಕೆ ಆ ಹಳ್ಳಿಯಲ್ಲಿ ಅವಕಾಶ ಎಲ್ಲಿಂದ ಬರಬೇಕು! ಆಗ ಅಲ್ಲಿ ಒಳ್ಳೆಯ ಶಾಲೆಯೂ ಇರಲಿಲ್ಲ. ಮಗನಿಗೆ ಸಂಗೀತ ಕಲಿಸಲು ಅಂದಿನ ರಾಜಧಾನಿ ಮೈಸೂರಿಗೆ ಹೋಗುವುದೆಂದು ಜನಾರ್ದನ ಅಯ್ಯಂಗಾರ್ ನಿರ್ಧರಿಸಿದರು. ಜೊತೆಗೆ ಒಳ್ಳೆಯ ಶಿಕ್ಷಣದ ಉದ್ದೇಶದಿಂದ ಕಿರಿಯ ಮಗ ವರದಾಚಾರ್ನನ್ನೂ ಕರೆದುಕೊಂಡರು; ಹಿರಿಯ ಮಗನನ್ನು ಊರಿನಲ್ಲಿ ಬಿಟ್ಟರು. ಮೈಸೂರಿನ ಪರಕಾಲಮಠದಲ್ಲಿ ತಾತ್ಕಾಲಿಕವಾಗಿ ಆಶ್ರಯವನ್ನು ಪಡೆದು, ಉಚಿತವಾಗಿ ಸಂಗೀತ ಕಲಿಸುವವರಿಗಾಗಿ ಮೈಸೂರಿನಲ್ಲಿ ಹುಡುಕಾಟ ನಡೆಸಿದರು. ಆಗ ಸಿಕ್ಕಿದವರು ವೀಣಾವಾದಕ ಚಿಕ್ಕಸುಬ್ಬರಾಯರು. ಬಾಲಕ ವೆಂಕಟೇಶನನ್ನು ಶಿಷ್ಯನಾಗಿ ಸ್ವೀಕರಿಸಿದರು. ವೆಂಕಟೇಶ ಅಯ್ಯಂಗಾರ್ ವೀಣೆಯಲ್ಲಿ ಬಹುಬೇಗ ನೈಪುಣ್ಯ ಸಂಪಾದಿಸಿದರು.
ವೀಣೆ ಜೊತೆಗೆ ಕೊಳಲು
ವೆಂಕಟಗಿರಿಯಪ್ಪ ಕೂಡ ವೆಂಕಟೇಶ ಅಯ್ಯಂಗಾರ್ಯರಿಗೆ ವೀಣಾಪಾಠಗಳನ್ನು ಮಾಡಿದರು. ವೆಂಕಟಗಿರಿಯಪ್ಪ ಶೇಷಣ್ಣ ಅವರಿಂದ ಬಹಳ ಕಾಲ ಕಲಿತು ಅನೇಕ ತಂತ್ರಕೌಶಲಗಳನ್ನು ಕರಗತ ಮಾಡಿಕೊಂಡಿದ್ದರು. ವೆಂಕಟಗಿರಿಯಪ್ಪ ಚಿಕ್ಕಸುಬ್ಬರಾಯರ ಸೋದರಳಿಯ.
ವೆಂಕಟೇಶ ಅಯ್ಯಂಗಾರರಿಗೆ ಮೈಸೂರಿನ ಸರ್ಕಾರಿ ಶಾಲೆಯಲ್ಲಿ ಸಂಗೀತ ಶಿಕ್ಷಕನ ಕೆಲಸ. ಮತ್ತೆ ಪಾಠದ ಮನೆಗಳೂ ಇದ್ದವು. ತಂದೆ ಮಾದಿಹಳ್ಳಿ ಪಕ್ಕದ ದೊಡ್ಡಗದ್ದವಳ್ಳಿಯ ಶೃಂಗಾರಮ್ಮನೊಂದಿಗೆ (ದೊರೆಸ್ವಾಮಿ ಅವರ ತಾಯಿ) ಅವರ ಮದುವೆಯನ್ನು ನೆರವೇರಿಸಿದರು. ಒಂಬತ್ತು ವರ್ಷದ ಬಾಲಕಿ ಸೊಸೆಯಾಗಿ ಬಂದಳು.
ವೆಂಕಟೇಶ ಅಯ್ಯಂಗಾರ್ ಸ್ವಂತ ಪರಿಶ್ರಮದಿಂದ ಕೊಳಲನ್ನೂ ಕಲಿತಿದ್ದರು. ವೆಂಕಟಗಿರಿಯಪ್ಪನವರು ಅವರನ್ನು ಆಸ್ಥಾನ ವಿದ್ವಾಂಸರಾಗಿ ಅರಮನೆಗೆ ಸೇರಿಸಿದರು. ಸಂಗೀತದಲ್ಲಿ ಅತ್ಯುತ್ತಮ ಅಭಿರುಚಿಯನ್ನು ಹೊಂದಿದ್ದ ನಾಲ್ವಡಿಯವರಿಗೆ ತಮ್ಮ ಕೊಳಲು ವಾದನವನ್ನು ಇನ್ನಷ್ಟು ಸುಧಾರಿಸಿಕೊಳ್ಳಬೇಕೆಂದು ಅನ್ನಿಸಿದಾಗ ಅವರಿಗೆ ಕಲಿಸುವ ಅವಕಾಶ ವೆಂಕಟೇಶ ಅಯ್ಯಂಗಾರ್ಯರಿಗೇ ದೊರೆಯಿತು. ಅರಮನೆಯಲ್ಲಿ ಅವರ ಸ್ಥಾನಮಾನಗಳು ಬೆಳೆದವು.
‘ನಾನೊಂದು ವೀಣೆ ಕಂಡೆ’
ಮೈಸೂರಿನ ಮನೆಯಲ್ಲಿ ಸಹಜವಾಗಿಯೇ ಯಾವಾಗಲೂ ವೀಣೆಯ ನಾದ ತುಂಬಿಕೊಂಡಿರುತ್ತಿತ್ತು. ಅಲ್ಲಿ ಬೆಳೆದ ಬಾಲಕ ದೊರೆಸ್ವಾಮಿಗೆ ಶಾಸ್ತ್ರೀಯ ಸಂಗೀತದ ಬಗ್ಗೆ ವಿಚಿತ್ರ ಸೆಳೆತ. ತಂದೆ ನುಡಿಸುವುದನ್ನು ಕೇಳುತ್ತಿದ್ದ ಪುಟ್ಟ ಬಾಲಕ ಕೀರ್ತನೆಯ ತುಣುಕುಗಳನ್ನು ತನ್ನಷ್ಟಕ್ಕೆ ಹಾಡಿಕೊಳ್ಳುತ್ತಿದ್ದ. ಒಮ್ಮೆ ತಂದೆ ಬಾಲಕ ದೊರೆಸ್ವಾಮಿಯನ್ನು ಶೇಷಣ್ಣನವರ ಕಚೇರಿಗೆ
ಕರೆದೊಯ್ದರು. ಆ ಬಗ್ಗೆ ದೊರೆಸ್ವಾಮಿ ಅಯ್ಯಂಗಾರ್ ಹೀಗೆ ಹೇಳಿದ್ದಾರೆ: “ಬಾಲಕನಾಗಿದ್ದರೂ ನನ್ನ ಮನಸ್ಸಿನಲ್ಲಿ ಮೂಡಿ ನಿಂತ ಶೇಷಣ್ಣನವರ ಧೀಮಂತ ವ್ಯಕ್ತಿಚಿತ್ರ ಇಂದಿಗೂ ಅಚ್ಚಳಿಯದೆ ಉಳಿದುಕೊಂಡಿದೆ. ಶೇಷಣ್ಣ ನನಗೆ ರಸಋಷಿಯಂತೆ ಕಂಡರು. ಅವರ ಶರೀರ ಒಳ್ಳೆಯ ಗುಲಾಬಿ ಬಣ್ಣದ್ದು. ಭಾವಪೂರಿತ ಕಣ್ಣುಗಳು, ಸ್ಫುರದ್ರೂಪದ ನಿಲವು. ಅವರನ್ನು ಕಂಡ ಯಾರಿಗೇ ಆಗಲಿ, ‘ಇವರು ಅಸಾಧಾರಣ ವ್ಯಕ್ತಿ’ ಅನ್ನುವುದು ಥಟ್ಟನೆ ಗೋಚರಿಸಿಬಿಡುತ್ತಿತ್ತು. ನಾನಂತೂ ಪುಟ್ಟ ಹುಡುಗ. ಶೇಷಣ್ಣನವರ ವರ್ಚಸ್ಸಿಗೆ ಕಚೇರಿಯ ಸೊಗಸಿಗೆ ಮರುಳಾಗಿ ಬಿಟ್ಟೆ. ಎಷ್ಟು ಚೆನ್ನಾಗಿದ್ದಾರೆ, ಎಷ್ಟು ಚೆನ್ನಾಗಿ ವೀಣೆ ನುಡಿಸುತ್ತಾರೆ ಅಂದುಕೊಂಡೆ. ಅವರ ನುಡಿಸಾಣಿಕೆಯನ್ನು ಅರ್ಥಮಾಡಿಕೊಳ್ಳುವಷ್ಟು ಶಕ್ತಿಯಾಗಲಿ ಜ್ಞಾನವಾಗಲಿ ಇಲ್ಲದೆಹೋದರೂ ಅವರ ವೀಣೆಯ ಇಂಪನ್ನು ಕೇಳುತ್ತ ಕೇಳುತ್ತ ಆ ಸಣ್ಣ ವಯಸ್ಸಿನಲ್ಲಿಯೇ ಅಲೌಕಿಕವಾದ ಒಂದು ಆನಂದದಲ್ಲಿ ನಾನು ಮುಳುಗಿಹೋದದ್ದಂತೂ ಸತ್ಯ. ಕಚೇರಿಯಲ್ಲಿ ನನ್ನ ಸುತ್ತ ಕುಳಿತುಕೊಂಡಿದ್ದವರು ಸಂತೋಷವನ್ನು ತಡೆದುಕೊಳ್ಳಲು ಸಾಧ್ಯವಾಗದೆ ಆಗಾಗ ಕಣ್ಣೀರನ್ನು ಒರೆಸಿಕೊಳ್ಳುತ್ತಿದ್ದರು; ಆನಂದದ ಉದ್ಗಾರಗಳನ್ನು ಹೊರಡಿಸುತ್ತಿದ್ದರು.
“ಆ ದಿನದ ಕಚೇರಿಯಲ್ಲಿ ಅವರು ನುಡಿಸಿದ, ಇನ್ನೂ ನನಗೆ ಚೆನ್ನಾಗಿ ನೆನಪಿವಿರುವ ಒಂದು ಕೃತಿ ಆನಯ್ಯ ಅವರ ಕೇದಾರ ರಾಗದ ‘ಭಜನ ಸೇಯರಾದ’. ಆ ಕೃತಿ ನನಗೆ ಗೊತ್ತಿತ್ತು. ಯಾಕೆಂದರೆ ನನ್ನ ತಂದೆ ಮನೆಯಲ್ಲಿ ಅದನ್ನು ನುಡಿಸುತ್ತಿದ್ದರು. ಶೇಷಣ್ಣನವರು ಕೃತಿಯ ಒಂದೆರಡು ಪಂಕ್ತಿಗಳನ್ನು ಹಾಡಿ ತೋರಿಸಿ, ಆನಂತರ ವೀಣೆಯಲ್ಲಿ ನಿರೂಪಿಸಿದ್ದರು. ಅವರು ತಮ್ಮ ಕಚೇರಿಗಳಲ್ಲಿ ಆಗಾಗ ಹೀಗೆ ಹಾಡುತ್ತಿದ್ದರಂತೆ. ತಮ್ಮ ಶಿಷ್ಯರಿಗೆ ಕೂಡ ‘ವೀಣೆ ಕಚೇರಿನೇ ಆದ್ರೂ ಮಧ್ಯೆ ಮಧ್ಯೆ ಸ್ವಲ್ಪನಾದ್ರೂ ಹಾಡ್ಬೇಕ್ರಯ್ಯ…ಇಲ್ಲದಿದ್ದರೆ ಅದು ಮೂಕಸಂಗೀತ ಆಗಿಬಿಡುತ್ತೆ’ ಎನ್ನುತ್ತಿದ್ದರಂತೆ. ನಮ್ಮ ಮನೆಯಲ್ಲಿ ಮೊಳೆತ ನನ್ನ ವೀಣೆಯ ಆಸೆ ಶೇಷಣ್ಣನವರ ಕಚೇರಿಯನ್ನು ಕೇಳಿದ ಮೇಲೆ ಗಾಢವಾಯಿತು. ತಂದೆಯ ವೀಣಾವಾದನದ ಕಡೆಗೆ ನಾನು ಹೆಚ್ಚಾಗಿ ಕಿವಿಗೊಡತೊಡಗಿದೆ. ಶೇಷಣ್ಣನವರ ಕಚೇರಿಯ ಗುಂಗು ನನ್ನಲ್ಲಿ ಬಹಳ ಕಾಲ ಉಳಿದಿತ್ತು. ಇನ್ನೊಂದು ಅಂತಹ ಕಚೇರಿಯನ್ನು ಯಾವಾಗ ಕೇಳಿಯೇನೋ ಎಂದು ನಾನು ಹಂಬಲಿಸುತ್ತಿರುವಾಗಲೇ ಶೇಷಣ್ಣನವರು ನಿಧನರಾಗಿಬಿಟ್ಟರು. ಅವರ ಸಾವಿನ ವಾರ್ತೆಯನ್ನು ಕೇಳಿ ತುಂಬ ನೋವಾಯಿತು. ಆ ನೋವು ಇಂದಿಗೂ ಉಳಿದುಕೊಂಡಿದೆ” ಎಂದು ದೊರೆಸ್ವಾಮಿ ಅಯ್ಯಂಗಾರ್ ಸುಮಾರು 70 ವರ್ಷಗಳ ಅನಂತರ ತೋಡಿಕೊಂಡಿದ್ದಾರೆ. ನಾಲ್ಕು ವರ್ಷದ ಪುಟ್ಟ ಮಗುವಿನ ಮನಸ್ಸಿನ ಆಳದಲ್ಲಿ ಉಳಿದ ನೆನಪು ಎಂಥದ್ದು! ಮುಂದೆ ಹಲವರು ಹೇಳಿದಂತೆ ಅಯ್ಯಂಗಾರ್ ಅವರು ವೀಣೆಗಾಗಿಯೇ ಹುಟ್ಟಿಬಂದವರು ಇರಬೇಕಲ್ಲವೇ?
ಏಳೆಂಟು ವರ್ಷದವರಿದ್ದಾಗಲೇ ದೊರೆಸ್ವಾಮಿಗೆ ಸಂಗೀತಪಾಠ ಆರಂಭವಾಯಿತು. ತಂದೆಯೇ ಮೊದಲ ಗುರು. ಇವರು ವೀಣೆಯ ಮುಂದೆ ಕುಳಿತರೆ ಇವರ ಪ್ರಾಯದ ಇತರ ಮಕ್ಕಳು ಹೊರಗೆ ಆಡಿಕೊಳ್ಳುತ್ತಿದ್ದರು. ಬಹಳ ಬೇಗ ಸ್ವತಃ ವೆಂಕಟಗಿರಿಯಪ್ಪನವರೇ ಪಾಠ ಆರಂಭಿಸಿದರು. ಬೆಳಗ್ಗೆ ಎಂಟರಿಂದ ಹತ್ತು, ಹತ್ತೂವರೆ ಗಂಟೆಯವರೆಗೆ ಪಾಠ; ಮತ್ತೆ ಶಾಲೆಗೆ ಓಟ. “ಗುರುಗಳನ್ನು ನೋಡುವುದಕ್ಕೂ ಭಯ. ನನ್ನ ಧ್ಯಾನ ವೀಣೆಯ ಮೆಟ್ಟಿಲುಗಳ ಮೇಲೆ ಮಾತ್ರ” ಎಂದು ಆ ದಿನಗಳನ್ನು ಅಯ್ಯಂಗಾರ್ಯರು ನೆನಪಿಸಿಕೊಂಡಿದ್ದಾರೆ. ಆಟಕ್ಕೆ ಸಂಚಕಾರವಾದರೂ ಬೈಗುಳಕ್ಕೆ ಕೊರತೆಯಿಲ್ಲ. “ಮೂರುಹೊತ್ತೂ ಆ ಪೆÇೀಲಿ ಹುಡುಗರ ಜೊತೆ ಗೋಲಿ ಆಡ್ತಾ ನಿಂತ್ಕೋತಾನೆ! ಬೆರಳುಗಳೆಲ್ಲ ಹಾಳಾಗಿಹೋಗದೆ ಇನ್ನೇನಾಗುತ್ತೆ?” ಮುಂತಾಗಿ ವೆಂಕಟಗಿರಿಯಪ್ಪನವರೇ ಬೈಯುತ್ತಿದ್ದರು.
ವೀಣೆಯ ಧ್ಯಾನ
ಮಾಮೂಲು ಪಠ್ಯಕ್ರಮವಲ್ಲದೆ ಅಪರೂಪದ ಗೀತೆಗಳನ್ನೂ ಕಲಿಸುತ್ತಿದ್ದರು. “ಅಂದು ಪಾಠ ಮಾಡಿದ ಕ್ಲಿಷ್ಟವಾದ ಮತ್ತು ತ್ರಿಸ್ಥಾಯಿ ಸಂಚಾರವಿರುವ ಸ್ವರಜತಿಯನ್ನು ನಾನು ಈಗಲೂ ಅಭ್ಯಾಸ ಮಾಡಿಕೊಳ್ಳುತ್ತ ಇರುತ್ತೇನೆ” ಎಂದು ಮುಂದೆ ಅವರು ಹೇಳಿದ್ದಿದೆ. “ನಮ್ಮ ಸಾಧನೆಯ ಬಗ್ಗೆ ಪ್ರಶ್ನೆ ಅಥವಾ ಉಪೇಕ್ಷೆ ಎಂದಿಗೂ ಸಲ್ಲದು. ಸಾಧನೆಯೂ ನಾವೂ ಜೊತೆಜೊತೆಯಾಗಿಯೇ ಸಾಗಬೇಕಾದದ್ದು ಅನಿವಾರ್ಯ. ಗುರುಗಳು ಅನೇಕ ಸ್ವರಜತಿ, ಅಪರೂಪದ ವರ್ಣಗಳನ್ನು ಕಲಿಸಿ, ನನ್ನ ಸಂಗೀತದ ಬುನಾದಿಯನ್ನು ಅಚ್ಚುಕಟ್ಟಾಗಿ ಸಿದ್ಧಪಡಿಸಿದರು. ಮನೆಯಲ್ಲಿ ನಾನು ಉರುಹೊಡೆದುಕೊಂಡು ಹೋದದ್ದನ್ನು ತಪ್ಪಿಲ್ಲದೆ ನುಡಿಸಿಬಿಟ್ಟ ಮಾತ್ರಕ್ಕೆ ಗುರುಗಳು ಸಂತುಷ್ಟರಾಗುತ್ತಿರಲಿಲ್ಲ. ನಾನು ನುಡಿಸುವ ವೀಣೆಯ
ನಾದ ಅವರು ನಿರೀಕ್ಷಿಸಿದಷ್ಟು ಮಧುರವಾಗಿ ಕೇಳಬೇಕಾಗಿತ್ತು. ತಪ್ಪಿಲ್ಲದೆ ನುಡಿಸುವುದು ಬೇರೆ; ತಪ್ಪಿಲ್ಲದ ನುಡಿಸಾಣಿಕೆಯು ಕೇಳುವವರ ಮನಸ್ಸನ್ನು ಆಹ್ಲಾದಗೊಳಿಸುವ ಹಾಗೆ ನುಡಿಸುವುದೇ ಬೇರೆ. ಇಂತಹ ಉತ್ತಮ ವಿನಿಕೆಯು ನಮ್ಮದಾಗಬೇಕಾದರೆ ಒಳ್ಳೆಯ ಪಾಠ ರೀತಿ, ಸಂಸ್ಕಾರವಂತ ಮನೋಧರ್ಮ ಮತ್ತು ಕಠಿಣ ಸಾಧನೆಗಳು ಅತ್ಯಗತ್ಯ. ಗುರು ಬೈಯುತ್ತಾರೆಂದು ವಿಪರೀತ ಸಾಧನೆ ಮಾಡುತ್ತಿದ್ದೆ. ಬೆಳಗ್ಗೆ ವೀಣೆಯ ಪಾಠ, ಅನಂತರ ಶಾಲೆ ಎಂಬ ಶಿಕ್ಷೆ, ಸಾಯಂಕಾಲ (ಇತರ ಮಕ್ಕಳು ಆಡುವ ಹೊತ್ತಿಗೆ) ವೀಣೆಯ ಅಭ್ಯಾಸ, ರಾತ್ರಿ ಶಾಲೆಯ ಹೋಂವರ್ಕ್; ಅಂತೂ ವಿದ್ಯಾರ್ಥಿಗೆ ಸುಖ ಎಲ್ಲಿ?” ಎಂದು ಅಯ್ಯಂಗಾರ್ ಆರ್ತರಾಗಿ ಕೇಳುತ್ತಾರೆ.
ಹಾಡಿ ನುಡಿಸಬೇಕು
ಸಂಗತಿಗಳು ಸುಲಿದ ಬಾಳೆಹಣ್ಣಿನಷ್ಟು ಸುಲಭ ಆಗುತ್ತಿದ್ದವು. ಪ್ರತಿಯೊಂದು ಅಂಶವೂ ಆಗಲೇ ಹೃದ್ಗತ ಆಗುವಂತೆ ಗುರುಗಳು ಕಲಿಸುತ್ತಿದ್ದರು. ವೀಣೆಯಲ್ಲಿ ನುಡಿಸುವ ಮೊದಲು ಹಾಡಬೇಕು; ಇಲ್ಲವಾದರೆ ತಾಳ ನಿಲ್ಲುವುದಿಲ್ಲ ಎಂಬುದು ಗುರುಗಳ ಸೂಚನೆ. ಪಾಠವನ್ನು ಹೊರತುಪಡಿಸಿದರೆ ಶಿಷ್ಯನ ಮೇಲೆ ಗುರು ವೆಂಕಟಗಿರಿಯಪ್ಪನವರಿಗೆ ಅಪಾರಪ್ರೀತಿ. ಅವರು ಬೈದದ್ದು ಜಾಸ್ತಿ ಆಯಿತು ಅನ್ನಿಸಿದರೆ ಪತ್ನಿ ಇವರ ಪರವಾಗಿ ನಿಂತು ಪತಿಗೇ ಬೈಯುತ್ತಿದ್ದರು; ತಿಂಡಿ ಕೊಟ್ಟು ಖುಷಿಪಡಿಸುತ್ತಿದ್ದರು. ಇನ್ನು ತಾತ ಜನಾರ್ದನ ಅಯ್ಯಂಗಾರ್ ಆಗಾಗ ಊರಿನಿಂದ ಬಂದು ಸಾಧನೆಗೆ ಪ್ರಚೋದನೆ ನೀಡುತ್ತಿದ್ದರು. ಎದೆಗೆ ಅವಚಿಕೊಂಡು ಕಣ್ಣೀರು ಸುರಿಸುತ್ತಿದ್ದರು; ದೊಡ್ಡ ವೈಣಿಕನಾಗಬೇಕೆಂದು ಗದ್ಗದ ಕಂಠದಿಂದ ಹರಸುತ್ತಿದ್ದರು.
ವೀಣೆಯ ವ್ಯಾಮೋಹ
13-14 ವರ್ಷ ಆಗುವಾಗ ದೊರೆಸ್ವಾಮಿ ಅವರಲ್ಲಿ ವೀಣೆಯ ಕುರಿತು ಒಂದು ಬಗೆಯ ವ್ಯಾಮೋಹ ಕಂಡುಬಂತು. ಅದು ಸದಾ ತನ್ನ ಜೊತೆಯಾಗಿರಬೇಕು ಎನ್ನುವ ಆಶೆ. ಇದರಿಂದ ಅವರ ತಾಯಿ-ತಂದೆಯರಿಗೆ ಸಮಾಧಾನವಾಯಿತು; ಗುರುಗಳು ಸಂತೃಪ್ತರಾದರು. ಇದೇ ಸಂದರ್ಭದಲ್ಲಿ ಅರಮನೆಯ ವಿದ್ವಾಂಸರ ವಾದ್ಯಗೋಷ್ಠಿಗೆ ವೀಣೆಯ ಕಲಾವಿದನಾಗಿ ನೇಮಕಗೊಂಡರು. 14 ವರ್ಷದ ಒಬ್ಬ ಬಾಲಕ ಆ ಹುದ್ದೆಗೆ ನೇಮಕವಾದದ್ದು ಅದೇ ಮೊದಲು. ಪ್ರತಿದಿನ ಐದಾರು ಗಂಟೆ ವೀಣೆಯ ಅಭ್ಯಾಸ ನಡೆಯುತ್ತಿತ್ತು. ಗುರು ವೆಂಕಟಗಿರಿಯಪ್ಪನವರು, “ದೊರೆಸ್ವಾಮಿ, ನೀನು ಹುಟ್ಟಿರೋದು ವೀಣೆಗೆ ಕಣೋ. ಅದನ್ನು ಚೆನ್ನಾಗಿ ಅರ್ಥಮಾಡಿಕೊಂಡುಬಿಡು ಸಾಕು. ಮಿಕ್ಕ ಯಾವುದೇ ವಿಷಯ ತಲೆಗೆ ಹಾಕ್ಕೋಬೇಡ” ಎನ್ನುತ್ತಿದ್ದರು.
ಅದನ್ನವರು ಅಕ್ಷರಶಃ ಪಾಲಿಸಿದರೋ ಎಂಬಂತೆ ಶಾಲೆಯಲ್ಲಿ ಆಗಾಗ ಫೇಲ್ ಆಗುತ್ತಿದ್ದರು. “ನನಗೆ ದ್ವೇಷವಿದ್ದದ್ದು ಸ್ಕೂಲನ್ನು ಕಂಡರೆ ಮಾತ್ರ. ವೀಣೆಯನ್ನು ಒಲಿಸಿಕೊಳ್ಳುವುದು, ಗುರುಗಳ ಮನೆಯಲ್ಲಿ ಗಂಟೆಗಟ್ಟಲೆ ಪಾಠ ಹೇಳಿಸಿಕೊಳ್ಳುವುದು – ಇವೆಲ್ಲ ಸಂತೋಷದ ಕೆಲಸಗಳೇ ಆಗಿದ್ದವು. ಆಗ ಸಾಕಷ್ಟು ಪಾಠ ಆಗಿತ್ತು;
ಆದರೆ ಸಾಧಿಸಿಕೊಳ್ಳುವುದು ಮುಂದೆ ಬೆಟ್ಟದಷ್ಟಿತ್ತು” ಎನ್ನುತ್ತಿದ್ದ ಅಯ್ಯಂಗಾರ್, 70 ವರ್ಷ ದಾಟಿದ ಮೇಲೂ ‘ಈಗಲೂ ಇದೆ’ ಎನ್ನುತ್ತಾರೆ! ಇದು ಅವರ ವಿನಯ, ವಿದ್ಯಾಕಾಂಕ್ಷೆ! “ಗುರುಗಳಿಗೆ ಇಷ್ಟವಾಯಿತು; ಬೈಗುಳ ನಿಂತುಹೋಯಿತು. ಅರಮನೆಯಿಂದ ಬಂದವರು ‘ಇಂದು ಪಾಠ ಬೇಡ; ಏನಾದರೂ ನುಡಿಸು’ ಎನ್ನುವರು. ನುಡಿಸಿದಾಗ ಸಂತೋಷಪಟ್ಟು ‘ಇನ್ನೂ ಪಕ್ವ ಆಗಬೇಕು ಕಣೋ’ ಎನ್ನುವರು. ಸಂಗೀತದಲ್ಲಿ ಕೂಡ ಪಕ್ವತೆ ಎನ್ನುವುದಿದೆ ಎಂಬುದನ್ನು ನಾನು ಗ್ರಹಿಸುತ್ತಿದ್ದೆ; ಆ ಮಾತು ಇಂದಿಗೂ ನನಗೆ ಮಾರ್ಗದರ್ಶಕವಾಗಿದೆ” ಎನ್ನುವ ಅಯ್ಯಂಗಾರ್ ಮುಂದುವರಿದು, ಸಾಕಷ್ಟು ವರ್ಷಗಳ ಅನುಭವದ ಆಧಾರದಿಂದ ಇನ್ನೊಂದು ಮಾತು ಹೇಳುವುದಾಗಿ ಹೇಳುತ್ತಾರೆ: “ಪಕ್ವತೆಗಾಗಿ ಶ್ರಮಿಸುವುದು ಸರಿ. ಆದರೆ ಸಂಗೀತದ ವಿಷಯದಲ್ಲಿ ನೂರಕ್ಕೆ ನೂರು ಪರಿಪೂರ್ಣತೆ ಎನ್ನುವುದು ಕೇವಲ ಭ್ರಮೆ. ತಪ್ಪನ್ನು ಮಾಡದವರು ಯಾರೂ ಇಲ್ಲ. ಆದರೆ ಅನುಭವಿಗೆ ತನ್ನ ತಪ್ಪು ಕೂಡಲೇ ಗೊತ್ತಾಗಿಬಿಡಬೇಕು. ಮತ್ತೆಂದೂ ಆ ತಪ್ಪು ತನ್ನಿಂದ ಆಗದಂತೆ ನೋಡಿಕೊಳ್ಳಲು ಆತ ಸಮರ್ಥನಾಗಬೇಕು. ಒಬ್ಬ ಅನುಭವಿ ಕಲಾವಿದನಿಗೂ ಅನನುಭವಿ ಕಲಾವಿದನಿಗೂ ಇರುವ ವ್ಯತ್ಯಾಸ ಇದೇ.” ಅವರ ಅನುಭವದ ನೈಜತೆಗೆ ಬೇರೆ ಪುರಾವೆ ಬೇಡ, ಅಲ್ಲವೇ?
ದೊಡ್ಡವರ ಸಾನ್ನಿಧ್ಯ
ಅರಮನೆ ವಿದ್ವಾಂಸರ ವಾದ್ಯಗೋಷ್ಠಿಯಲ್ಲಿ ನೇಮಕಗೊಂಡ ಕಾರಣ ಬಹಳ ಸಣ್ಣ ವಯಸ್ಸಿನಲ್ಲೇ ಅವರಿಗೆ ದೊಡ್ಡ ದೊಡ್ಡ ಸಂಗೀತಗಾರರ ಸಾನ್ನಿಧ್ಯ ದೊರೆಯಿತು. “ಸಾಧನೆಯಲ್ಲದೆ ಸಭ್ಯತೆ, ಶಿಷ್ಟಾಚಾರ, ಸಭಾಮರ್ಯಾದೆ ಮುಂತಾದ ಸದ್ಗುಣಗಳನ್ನು ಅರಮನೆಯ ವಾತಾವರಣ ನನಗೆ ಕಲಿಸಿಕೊಟ್ಟಿತು. ದೊಡ್ಡವರ ನಡುವಣ ಚರ್ಚೆಯಿಂದ ಬೇಕಾದಷ್ಟು ವಿಷಯಗಳನ್ನು ಕಲಿತೆ. ಒಟ್ಟಿನಲ್ಲಿ ಅರಮನೆಯ ವಾತಾವರಣ ಮತ್ತು ವಿದ್ವಾಂಸರ ಸಾನ್ನಿಧ್ಯದಿಂದ ನನ್ನ ಜೀವನದ ಗುರಿ ನನಗೆ ಸ್ಪಷ್ಟವಾಯಿತು” ಎಂದವರು ದಾಖಲಿಸಿದ್ದಾರೆ.
ಅದಲ್ಲದೆ ತಂದೆ ಮೈಸೂರಿನಲ್ಲಿ ನಡೆಯುವ ಕಚೇರಿಗಳಿಗೆ ಇವರನ್ನು ಕರೆದೊಯ್ಯುತ್ತಿದ್ದರು. ಕ್ರಮೇಣ ಮನೋಧರ್ಮ ಸಂಗೀತವು ಬಹಳವಾಗಿ ರುಚಿಸತೊಡಗಿತು. ಆಗ ಕೇಳಿದ ಅರಿಯಾಕುಡಿ ರಾಮಾನುಜ ಅಯ್ಯಂಗಾರರ ಒಂದು ಕಚೇರಿ ಕೂಡ ಮರೆಯಲಾಗದ ಕಚೇರಿ ಎನಿಸಿತು. ಒಳ್ಳೆಯ ಕೇಳ್ಮೆ ಅವರ ಪಾಠಕ್ರಮದ ಒಂದು ಅಂಗವೇ ಆಗಿತ್ತು. ಆ ಮಟ್ಟಕ್ಕೆ ಬಂದಾಗ ಕಚೇರಿ ಮಾಡಲು ಗುರುಗಳು ಅನುಮತಿ ನೀಡಿದರು. ತಮ್ಮ ಕಚೇರಿಗಳಿಗೆ ಸಹವಾದಕನಾಗಿ ಕರೆದುಕೊಂಡು ಹೋಗುತ್ತಿದ್ದರು; ಜನ ಗುರುತಿಸತೊಡಗಿದರು. ‘ಈ ಹುಡುಗ ಇಂಥವರ ಶಿಷ್ಯ, ಇಂಥವರ ಮಗ’ ಎಂದು ಅಭಿಮಾನದಿಂದ ಇವರ ಕಡೆಗೆ ತೋರಿಸುತ್ತಿದ್ದರು. ಚಿಕ್ಕವಯಸ್ಸಿನಲ್ಲೇ ಜನರಿಂದ ದೊರೆತ ಇಂತಹ ಪ್ರೋತ್ಸಾಹ ಅವರ ನೆನಪಿನಲ್ಲಿ ಚಿರಸ್ಥಾಯಿಯಾಯಿತು. ಕ್ರಮೇಣ ಕಚೇರಿಗಳ ಸಂಖ್ಯೆ ಜಾಸ್ತಿಯಾಯಿತು. ಆಗ ಗುರು ವೆಂಕಟಗಿರಿಯಪ್ಪನವರು, “ಎಲ್ಲ ಕಚೇರಿ ಒಪ್ಪಿಕೊಂಡು ಅವನನ್ನು ದಣಿಸಬೇಡ” ಎಂದು ತಂದೆಗೆ ತಾಕೀತು ಮಾಡಿದರಂತೆ!
ರಾಜರ ದೃಷ್ಟಿ ಬಿತ್ತು!
ದೊರೆಸ್ವಾಮಿ ಅಯ್ಯಂಗಾರ್ ಅವರು ಅರಮನೆ ವಾದ್ಯವೃಂದಕ್ಕೆ ನೇಮಕಗೊಂಡದ್ದಕ್ಕೆ ಪೂರ್ವಭಾವಿ ಘಟನೆಗಳು ಕುತೂಹಲಕಾರಿಯಾಗಿಯೇ ಇವೆ. ಸಂಗೀತಕ್ಕೆ ಸಂಬಂಧಿಸಿದ ಎಲ್ಲ ವಿಷಯಗಳನ್ನು ಸೂಕ್ಷ್ಮವಾಗಿ ಗಮನಿಸಿದ್ದ ನಾಲ್ವಡಿಯವರಿಗೆ ಒಮ್ಮೆ ವೆಂಕಟಗಿರಿಯಪ್ಪನವರು ಕಲಿಸುತ್ತಿದ್ದ ವಿದ್ಯಾರ್ಥಿ-ವಿದ್ಯಾರ್ಥಿನಿಯರು ಹೇಗೆ ತಯಾರಾಗುತ್ತಿದ್ದಾರೆಂದು ನೋಡುವ ಆಸಕ್ತಿ ಬಂತು. ಎರಡನೇ ತಲೆಮಾರಿನವರು ತಯಾರಾಗಿ ಮೈಸೂರು ವೀಣೆಯ ಪರಂಪರೆ ಸಮರ್ಥವಾಗಿ ಬೆಳೆದುಕೊಂಡು ಹೋಗಬೇಕೆನ್ನುವುದು ಅವರ ಆಶಯ.
ಪ್ರಭುಗಳ ಅಪೇಕ್ಷೆಯ ಮೇರೆಗೆ ಗುರುಗಳು ಹೆಣ್ಣುಮಕ್ಕಳ ಪೈಕಿ ರಂಗನಾಯಕಿ ಮತ್ತು ರಾಜಲಕ್ಷ್ಮಿ ಎಂಬವರನ್ನು ಹಾಗೂ ಹುಡುಗರ ಪೈಕಿ ದೊರೆಸ್ವಾಮಿಯನ್ನು ಆರಿಸಿ ಸಿದ್ಧಪಡಿಸಿದರು. ನಿಗದಿತ ದಿನ ಅರಮನೆಯಲ್ಲಿ ಪ್ರಭುಗಳ ಮುಂದೆ ಈ ಮೂವರು ವೀಣೆ ನುಡಿಸಿದರು. “ಮಕ್ಕಳನ್ನು ಚೆನ್ನಾಗಿ ತಯಾರುಮಾಡಿದ್ದೀರಿ. ವೆಂಕಟಗಿರಿಯಪ್ಪನೋರೇ” ಎಂದ ಮಹಾರಾಜರು ಆಮೇಲೆ ಇವರತ್ತ ತಿರುಗಿ ‘ಈ ಹುಡುಗ ಯಾರು?’ ಎಂದು ಕೇಳಿದರು. ಯಾರೆಂದು ಸಂಕ್ಷಿಪ್ತವಾಗಿ ತಿಳಿಸಲಾಗಿ ಮುಗುಳ್ನಗುತ್ತ, ‘ಈ ಹುಡುಗನನ್ನು ಮುಂದೆ ತನ್ನಿ’ ಎಂದರು.
ಆದರೆ ವೆಂಕಟಗಿರಿಯಪ್ಪನವರಿಗೆ ಬೇರೆಯದೇ ಚಿಂತೆ. ಶಿಷ್ಯನನ್ನು ಅದೇ ಸಾಯಂಕಾಲ ಆಂಜನೇಯನ ಗುಡಿಗೆ ಕರೆದುಕೊಂಡು ಹೋಗಿ ಪೂಜೆ ಮಾಡಿಸಿ ಕಡೆಯಲ್ಲಿ ಅರ್ಚಕರಿಗೆ ಹೇಳಿ ದೃಷ್ಟಿ ತೆಗೆಸಿದರು. “ಹುಡುಗನ ಮೇಲೆ ಬಿದ್ದಿರೋದು ಸಾಮಾನ್ಯ ದೃಷ್ಟಿ ಅಲ್ಲ ಕಣೋ ವೆಂಕಟೇಶ! ಹೇಳಿಕೇಳಿ ಅದು ರಾಜದೃಷ್ಟಿ!” ಎಂಬುದು ಅವರ ವಿವರಣೆ. ಏನಿದ್ದರೂ ದೊರೆಸ್ವಾಮಿ ಅವರಿಗೆ ಈ ರಾಜದೃಷ್ಟಿಯಿಂದ ಒಳ್ಳೆಯದೇ ಆಯಿತು; ಮುಂದಿನ ಸಾಧನೆಗಳಿಗೆ ಒಂದು ರೀತಿಯ ನಾಂದಿಯಾಗಿ ಪರಿಣಮಿಸಿತು. ಎರಡು ತಿಂಗಳಲ್ಲಿ ಮಹಾರಾಜರ ವರ್ಧಂತಿ ಉತ್ಸವ ಬಂತು. ಅರಮನೆ ವಿದ್ವಾಂಸರ ವಾದ್ಯಗೋಷ್ಠಿ ನಡೆಯುತ್ತಿತ್ತು. ಒಂದು ದಿನ ಶಾಲೆಗೆ ಹೋಗಿದ್ದ ದೊರೆಸ್ವಾಮಿಯನ್ನು ತುರ್ತಾಗಿ ಕರೆಸಿ, ವಿದ್ವಾಂಸರ ವಾದ್ಯಗೋಷ್ಠಿಯಲ್ಲಿ ವೀಣೆ ನುಡಿಸುವುದಕ್ಕೆ ಸೇರಿಸಿಕೊಂಡರು; ಅದು ಮಹಾರಾಜರ ಅಪ್ಪಣೆಯಾಗಿತ್ತು.
ರಾಳ್ಳಪಲ್ಲಿ ಸಲಹೆ
ಬೆಳೆಯುವ ಕಾಲದಲ್ಲಿ ದೊರೆಸ್ವಾಮಿ ಅಯ್ಯಂಗಾರ್ ಅವರಿಗೆ ಕರ್ನಾಟಕ ಸಂಗೀತಕ್ಷೇತ್ರದ ಬಹಳಷ್ಟು ಮಹೋನ್ನತ ವ್ಯಕ್ತಿಗಳೊಂದಿಗೆ ಮುಖಾಮುಖಿ ಉಂಟಾಯಿತು; ಅದರಿಂದ ಅವರು ತುಂಬ ಪ್ರಯೋಜನವನ್ನೂ ಪಡೆದುಕೊಂಡರು. ಸಾಹಿತ್ಯ, ಸಂಗೀತ ಎರಡೂ ಕ್ಷೇತ್ರಗಳ ಮಹಾನ್ ವಿದ್ವಾಂಸರಾಗಿದ್ದ ರಾಳ್ಳಪಲ್ಲಿ ಅನಂತಕೃಷ್ಣ ಶರ್ಮರು ಮಹಾರಾಜ ಕಾಲೇಜಿನಲ್ಲಿ ತೆಲುಗು ಪ್ರಾಧ್ಯಾಪಕರು. ಪ್ರತಿ ಶುಕ್ರವಾರ ಅವರ ಮನೆಯಲ್ಲಿ ಏನಾದರೊಂದು ಸಾಂಸ್ಕøತಿಕ ಕಾರ್ಯಕ್ರಮ ಇರುತ್ತಿತ್ತು. ಆಗ ವೀಣೆ ನುಡಿಸಲು ದೊರೆಸ್ವಾಮಿಯನ್ನು ಆಹ್ವಾನಿಸುತ್ತಿದ್ದರು. ಉತ್ತಮ ವಿಮರ್ಶಕರಾದ ಅವರು ನುಡಿಸಾಣಿಕೆಯಲ್ಲಿ ಕುಂದುಕೊರತೆ ಕಂಡರೆ ಅದನ್ನು ಇವರಿಗೆ ನೇರವಾಗಿಯೇ ತಿಳಿಸುತ್ತಿದ್ದರು. ಆ ಹೊತ್ತಿಗೆ ಅನೇಕ ಸಾರಿ ಅಯ್ಯಂಗಾರರ ರಾಗಾಲಾಪನೆ ವಿಸ್ತಾರವಾಗಿರುತ್ತಿತ್ತು; ಆದರೆ ಕೀರ್ತನೆ ಚುಟುಕಾಗಿರುತ್ತಿತ್ತು. ಆಗ ಶರ್ಮರು ಎಚ್ಚರಿಸಿದ್ದು ಹೀಗೆ: “ಅಷ್ಟು ದೊಡ್ಡ ರಾಗಾಲಾಪನೆಗೆ ನೀನು ನುಡಿಸಿದ ಕೀರ್ತನೆ ಚಿಕ್ಕದಾಯಿತಲ್ಲಯ್ಯಾ… ರಾಗದ ವಿಸ್ತಾರಕ್ಕೆ ತಕ್ಕ ಹಾಗೆ ದೊಡ್ಡ ಕೃತಿಯನ್ನು ನೀನು ಆರಿಸಿಕೊಳ್ಳಬೇಕು. ಆಗಲೇ ನಿನ್ನ ನಿರ್ವಹಣೆ ಸ್ವಾರಸ್ಯ ಅನ್ನಿಸೋದು, ಪ್ರಮಾಣಬದ್ಧ ಆಗೋದು.” ಅದೇ ರೀತಿ ವೇಗದ ವಿಷಯದಲ್ಲೂ ಶರ್ಮರು ಬ್ರೇಕ್ಹಾಕಿದ್ದರು – “ಚಿಕ್ಕವಯಸ್ಸಿನಲ್ಲೆ ನನಗೆ ಸ್ವಲ್ಪ ವೇಗದ ಹುಚ್ಚಿತ್ತು. ಎಲ್ಲವನ್ನೂ ಧಾವಂತವಾಗಿ ನುಡಿಸಿ ಮುಗಿಸಿಬಿಡುತ್ತಿದ್ದೆ.” ಈ ಅಂಶದ ಬಗ್ಗೆ ಅನಂತಕೃಷ್ಣ ಶರ್ಮರು, “ಅನಗತ್ಯ ವೇಗ ಯಾಕೆ? ನೀನು ವಿಳಂಬದ ಕಡೆ ಸ್ವಲ್ಪ ಗಮನ ಕೊಡು. ಓಟವು ನಾದದ ಅಂದವನ್ನು ಹಾಳುಮಾಡುತ್ತದೆ” ಎಂದಿದ್ದರು.
ದ್ವಾರಂ ಅಭಿಮಾನ
ಬಹುಶಃ ಮದರಾಸು ಆಕಾಶವಾಣಿಯಲ್ಲಿ ದೊರೆಸ್ವಾಮಿ ಅಯ್ಯಂಗಾರ್ ಅವರ ವೀಣಾವಾದನವನ್ನು ಕೇಳಿದ ಪ್ರಸಿದ್ಧ ಪಿಟೀಲು ವಿದ್ವಾಂಸ ದ್ವಾರಂ ವೆಂಕಟಸ್ವಾಮಿ ನಾಯ್ಡು ಅವರು ಅನಂತಕೃಷ್ಣ ಶರ್ಮರನ್ನು ಒಮ್ಮೆ ಭೇಟಿಯಾದಾಗ ಅದು ಯಾರೆಂದು ಕೇಳಿದರು. “ಅವನು ನಮ್ಮ ವೆಂಕಟಗಿರಿಯಪ್ಪನವರ ಶಿಷ್ಯ. ಇನ್ನೂ ಚಿಕ್ಕವನು. ಕಾಲೇಜಿನಲ್ಲಿ ಓದ್ತಾ ಇದ್ದಾನೆ” ಎಂದಾಗ ದ್ವಾರಂ ಅವರಿಗೆ ಆಶ್ಚರ್ಯ ಆಯಿತಂತೆ. ಹುಡುಗ ಎಂದು ತಿಳಿದಾಗ ತಮ್ಮ ಸಲಹೆಯನ್ನು ಮುಕ್ತಮನಸ್ಸಿನಿಂದ ಶರ್ಮರಲ್ಲಿ ತಿಳಿಸಿದರು: “ದೊರೆಸ್ವಾಮಿ ವಾದನ ನನಗೆ ಹಿಡಿಸಿದೆ. ಅವನು ಮುಂದೆ ಬರುತ್ತಾನೆ. ಆತನ ನುಡಿಸಾಣಿಕೆ ಬಗ್ಗೆ ಒಂದು ಮಾತನ್ನು ಹೇಳಬೇಕೆಂದು ನನಗೆ ತೋರುತ್ತದೆ. ಈ ಹುಡುಗ ರಾಗಾಲಾಪನೆ ಮಾಡುವಾಗ ಸಂಗತಿ-ಸಂಗತಿಯ ನಡುವೆ ಸ್ವಲ್ಪ ವಿರಾಮ ಇಟ್ಟುಕೊಳ್ಳಲಿ.
ಇದರಿಂದ ರಾಗಭಾವವನ್ನು ಗ್ರಹಿಸಲು ಅವಕಾಶವಾಗುತ್ತದೆ. ಇನ್ನೊಂದು ಮಾತು; ದೊರೆಸ್ವಾಮಿ ಮಂದ್ರಸ್ಥಾಯಿಯಲ್ಲಿ ಇನ್ನೂ ಸ್ವಲ್ಪ ದೀರ್ಘವಾಗಿ ನುಡಿಸಲಿ. ಮಂದ್ರದಲ್ಲಿ ಸಾಧನೆ ಮಾಡುವುದರಿಂದ ಪ್ರಬುದ್ಧತೆ ಬರುತ್ತದೆ. ಕಲಾವಿದನ ಕ್ಷಮತೆ ಹೆಚ್ಚುತ್ತದೆ” ಎಂದರಂತೆ. ಅದನ್ನೆಲ್ಲ ಶರ್ಮರು ದೊರೆಸ್ವಾಮಿಗೆ ತಿಳಿಸಿದರು. ತಾನು ಗೌರವಿಸುವ ಪ್ರಬುದ್ಧ ವಿದ್ವಾಂಸರಿಂದ ಇಂತಹ ಅಭಿಮಾನದ ಮಾತು ಬಂದದ್ದು ತುಂಬ ಸಂತೋಷ ನೀಡಿತು.
ವಾದ್ಯಗಳ ರಾಣಿ
ವೀಣೆ ವಾದ್ಯಗಳ ರಾಣಿ ಎನ್ನುವುದು ದೊರೆಸ್ವಾಮಿ ಅಯ್ಯಂಗಾರ್ ಅವರ ಅಭಿಪ್ರಾಯ. ಅದರ ಸ್ವರಗಳಲ್ಲಿ ಪರಿಶುದ್ಧತೆ, ಶ್ರೀಮಂತಿಕೆ ಮತ್ತು ವೈಭವಗಳಿವೆ ಎನ್ನುವ ಅವರು ಮಾನವಸ್ವರದ ಎಲ್ಲ ಸೂಕ್ಷ್ಮಗಳನ್ನು ಅದರಲ್ಲಿ ತರುತ್ತಿದ್ದರು. 16 ವರ್ಷಕ್ಕೇ ಅವರು ಮೈಸೂರಿನ ಆಸ್ಥಾನವಿದ್ವಾನ್ ಆದರು. ಪ್ರಸಿದ್ಧ ಪಿಟೀಲುವಾದಕ ಚೌಡಯ್ಯ ತಮ್ಮ ಸೋಲೋ ಕಚೇರಿಗಳಿಗೆ ಯುವಕ ದೊರೆಸ್ವಾಮಿಯನ್ನು ಜೊತೆಗೆ ಸೇರಿಸಿಕೊಂಡರು. ಅಲ್ಲಿ ಕ್ರಮೇಣ ಎಂತಹ ಒಂದು ಬದಲಾವಣೆ ಉಂಟಾಯಿತೆಂದರೆ, ವೇದಿಕೆಯ ಮಧ್ಯದಿಂದ ತಾವು (ಪಕ್ಕವಾದ್ಯದಂತೆ) ಅಷ್ಟಷ್ಟೇ ಬದಿಗೆ ಸರಿದರು ಮತ್ತು ಮಧ್ಯಭಾಗವನ್ನು ದೊರೆಸ್ವಾಮಿ ಅಯ್ಯಂಗಾರ್ಯರಿಗೆ ನೀಡಿದರು. ಇದರ ಬಗ್ಗೆ ಪ್ರಸಿದ್ಧ ಇಂಗ್ಲಿಷ್ ಕಾದಂಬರಿಕಾರ ಆರ್.ಕೆ. ನಾರಾಯಣ್ ಅವರು ನೀಡಿದ ವಿವರಣೆ ಸ್ವಲ್ಪ ಕಟುವಾಗಿಯೇ ಇದೆ ಎಂದರೆ ತಪ್ಪಲ್ಲ: “ಚೌಡಯ್ಯ ಏನು ಮಾಡಿದರು ಗೊತ್ತೆ? ಆ ಹೊತ್ತಿಗೆ ಅವರಿಗೆ ಹೆಚ್ಚು ಕಚೇರಿಗಳು ಸಿಗುತ್ತಿರಲಿಲ್ಲ. ಅದಕ್ಕಾಗಿ ದೊರೆಸ್ವಾಮಿಯನ್ನು ಜೊತೆಗೆ ಹಾಕಿಕೊಂಡರು!” ಅದೇನೇ ಇರಲಿ, ಈ ಒಂದು ಸಂಬಂಧದಿಂದ ಇಬ್ಬರಿಗೂ ಪ್ರಯೋಜನವಾಯಿತೆಂದು ಧಾರಾಳವಾಗಿ ಹೇಳಬಹುದು.
ಆರ್.ಕೆ. ನಾರಾಯಣ್ ಸಹವಾಸ
ಅಂದ ಹಾಗೆ ಆಗ ಮೈಸೂರು ನಿವಾಸಿಯಾಗಿದ್ದ ಆರ್.ಕೆ. ನಾರಾಯಣ್ ಮತ್ತು ದೊರೆಸ್ವಾಮಿ ಅಯ್ಯಂಗಾರರ ನಡುವೆ ಗಾಢ ಸಂಬಂಧವೇ ಇತ್ತು. “ನಾನು ದೊರೆಸ್ವಾಮಿಯ ಕಡೆಗೆ ಆಕರ್ಷಿತನಾಗಲು ಅವರ ವೀಣೆಯ ಸ್ವರ ನಾಗಸ್ವರದಂತೆ, ರಾಜರತ್ನಂಪಿಳ್ಳೆ ಅವರ ತೋಡಿ, ಭೈರವಿಗಳಂತೆ ಕಂಡದ್ದೇ ಕಾರಣ. ಒಮ್ಮೆ ತಂತಿ ಮೀಟಿದರೆ ಆತ 3-4 ಸ್ವರಗಳನ್ನು ತರಬಲ್ಲರು; ಅಲ್ಲಿ ಅನಗತ್ಯ ಮೀಟು ಇಲ್ಲ” ಎಂದ ನಾರಾಯಣ್, ಮಗಳು ಹೇಮಾ ರೀತಿಯಲ್ಲೇ ದೊರೆಸ್ವಾಮಿ ಅವರಿಂದ ವೀಣೆ ಕಲಿಯುತ್ತಿದ್ದರು. ಪ್ರತಿಯಾಗಿ ದೊರೆಸ್ವಾಮಿಗೆ ಇಂಗ್ಲಿಷ್ ಪಾಠ ಮಾಡುತ್ತಿದ್ದರು. ಅಯ್ಯಂಗಾರ್ ಅವರು ಬೆಂಗಳೂರಿಗೆ ಹೋಗುವವರೆಗೆ ಸುಮಾರು ಹತ್ತು ವರ್ಷ ಪ್ರತಿದಿನವೆಂಬಂತೆ ಅವರು ಭೇಟಿಯಾಗುತ್ತಿದ್ದರು.
ಜುಗಲ್ಬಂದಿ
ಜುಗಲ್ಬಂದಿ ಎಂದರೆ ಬಿಸಿತುಪ್ಪದ ಅನುಭವ ಎಂಬುದು ದೊರೆಸ್ವಾಮಿ ಅಯ್ಯಂಗಾರ್ ಅವರ ಅಭಿಪ್ರಾಯವಾದರೂ ಆ ಕಾಲದ ಕೆಲವು ಶ್ರೇಷ್ಠರೊಂದಿಗೆ ಅವರ ಜುಗಲ್ಬಂದಿ ಕಚೇರಿಗಳು ನಡೆದವು. ಲಾಲ್ಗುಡಿ ಜಯರಾಮನ್, ಎಂ.ಎಸ್. ಗೋಪಾಲಕೃಷ್ಣನ್, ಟಿ.ಎನ್. ಕೃಷ್ಣನ್, ಬಾಲಮುರಳಿಕೃಷ್ಣ, ಕೆ.ವಿ. ನಾರಾಯಣಸ್ವಾಮಿ ಅವರಲ್ಲದೆ ಹಿಂದೂಸ್ತಾನಿ ಸಂಗೀತದ ಮಲ್ಲಿಕಾರ್ಜುನ ಮನ್ಸೂರ್, ಅಲಿ ಅಕ್ಬರ್ ಖಾನ್, ಅಹಮದ್ ಅಲಿ ಖಾನ್ ಜೊತೆಗೂ ಜುಗಲ್ಬಂದಿಗಳನ್ನು ನಡೆಸಿದರು.
ಕೆ.ವಿ. ನಾರಾಯಣಸ್ವಾಮಿ ಅವರು ಹೀಗೆ ಹೇಳಿದ್ದಾರೆ: “ದೊರೆಸ್ವಾಮಿ ಅವರ ನಾದಶುದ್ಧಿ ಮತ್ತು ಲಯದ ಮೇಲಿನ ಹಿಡಿತ ಅದ್ಭುತವಾದದ್ದು. ಆಲಾಪನೆ ಸವಿಸ್ತಾರ; ಸ್ವರಪ್ರಸಾರ ತುಂಬ ಆಕರ್ಷಕ. ತಾನ ಉತ್ಕೃಷ್ಟ. ತುಕಡಾ ಕೂಡ ಘನತೆಯಿಂದ ಕೂಡಿದ್ದು, ಅವರ ಸಂಗೀತದಲ್ಲಿ ಯಾವ ದೋಷವೂ ಕಾಣದು” ಎಂದಿದ್ದಾರೆ. ಲಾಲ್ಗುಡಿ ಅವರು ಈ ಕುರಿತು ಹೇಳುತ್ತ, “ನಾವೆಷ್ಟು ನಿಕಟವಾದೆವೆಂದರೆ, ಅವರು ನನ್ನ ಸೋದರನಂತಿದ್ದರು. ನಾವು ಸಮಾನರಾಗಿ ಹಲವು ಸಲ ನುಡಿಸಿದ್ದೇವೆ. ಪರಸ್ಪರ ಉತ್ತಮ ತಿಳಿವಳಿಕೆ, ಗೌರವ ಇತ್ತು. ಯಾವುದೇ ಸ್ಪರ್ಧೆ ಇಲ್ಲದೆ ಶ್ರೋತೃಗಳಿಗೆ ನಮ್ಮ ಶ್ರೇಷ್ಠವಾದುದನ್ನು ನೀಡಲು ಶ್ರಮಿಸುತ್ತಿದ್ದೆವು” ಎಂದಿದ್ದಾರೆ. “ಹಿಂದೂಸ್ತಾನಿ ಕಲಾವಿದರೊಡನೆ ಜುಗಲ್ಬಂದಿಯಲ್ಲಿ ಭಾಗವಹಿಸುವಾಗ ಕರ್ನಾಟಕ ಸಂಗೀತದ ಮಡಿವಂತಿಕೆಯನ್ನು ನಾನು ಸಡಿಲುಗೊಳಿಸುತ್ತಿರಲಿಲ್ಲ” ಎಂದು ಅಯ್ಯಂಗಾರ್ ಹೇಳಿದ್ದಾರೆ.
ಬೆಂಗಳೂರಿನತ್ತ
ಶ್ರೀಕೃಷ್ಣನ ‘ಗೋಕುಲ ನಿರ್ಗಮನ’ದಂತಹ ಒಂದು ತಿರುವು ದೊರೆಸ್ವಾಮಿ ಅಯ್ಯಂಗಾರ್ ಅವರ ಜೀವನಕ್ಕೂ ಪ್ರಾಪ್ತವಾಯಿತು; ಅದು ಆಕಾಶವಾಣಿಯ ಸೇವೆಗೆ ಸೇರಿದ್ದು ಮತ್ತು ಅದಕ್ಕಾಗಿ ಬೆಂಗಳೂರಿಗೆ ಸ್ಥಳಾಂತರ. ಅವರು ಸಾಕಷ್ಟು ಹಿಂದೆಯೇ ಆಕಾಶವಾಣಿಯ ಸಂಪರ್ಕಕ್ಕೆ ಬಂದಿದ್ದರು. ಅವರು ಇಂಟರ್ಮೀಡಿಯೆಟ್ಗೆ (ಇಂದಿನ ಪಿಯುಸಿ) ಸೇರಿಕೊಳ್ಳುವ ಹೊತ್ತಿಗೇ ತಿರುಚಿ ಮತ್ತು ಮದರಾಸು ಆಕಾಶವಾಣಿ ಕೇಂದ್ರಗಳಿಂದ ಅವರ ವೀಣಾವಾದನ ಪ್ರಸಾರವಾಗಿ ಜನರ ಪ್ರೋತ್ಸಾಹವನ್ನು ಗಳಿಸಿಕೊಂಡಿತ್ತು (1939). 1944ರ ಹೊತ್ತಿಗೆ ಒಂದು ಗಂಟೆಯ ಪ್ರಮುಖ (ಮೇಜರ್ ಚಂಕ್) ಕಾರ್ಯಕ್ರಮ ಸಿಗುತ್ತಿತ್ತು. ಆಕಾಶವಾಣಿಯ ರಾಷ್ಟ್ರೀಯ ಕಾರ್ಯಕ್ರಮ ರೂಪಗೊಂಡಾಗ ಎರಡು ಪ್ರಥಮಗಳು ಇವರ ಪಾಲಿಗೆ ಬಂದವು. ಅವೆಂದರೆ – ಕರ್ನಾಟಕದಿಂದ (ಅಂದಿನ ಮೈಸೂರು ರಾಜ್ಯ) ರಾಷ್ಟ್ರೀಯ ಕಾರ್ಯಕ್ರಮ ನೀಡಿದ ಮೊದಲಿಗ ಹಾಗೂ ರಾಷ್ಟ್ರೀಯ ಸಂಗೀತ ಕಾರ್ಯಕ್ರಮ ಸರಣಿಯ ಮೊದಲ ವೀಣಾವಾದನ ನಡೆಸಿದ್ದು.
ಕೇಸ್ಕರ್ ಆಹ್ವಾನ
ಒಂದು ರಾಷ್ಟ್ರೀಯ ಕಾರ್ಯಕ್ರಮದ ಸಂಬಂಧ ದೆಹಲಿಗೆ ಹೋದಾಗ ನೆಹರು ಸಂಪುಟದ ವಾರ್ತಾ-ಪ್ರಸಾರ ಸಚಿವ ಬಿ.ವಿ. ಕೇಸ್ಕರ್ ಅವರೇ ಇವರ ಸಂಗೀತವನ್ನು ಕೇಳಿ ಮೆಚ್ಚಿ ಆಕಾಶವಾಣಿ ಸೇವೆಗೆ ಬರುವಂತೆ ಆಹ್ವಾನಿಸಿದರಂತೆ. ಆದರೂ ಅಯ್ಯಂಗಾರರಿಗೆ ಅನುಮಾನ. ಕಾರಣ – ಒಂದು ಮೈಸೂರನ್ನು ಬಿಟ್ಟು ಬೆಂಗಳೂರಿಗೆ ಹೋಗಬೇಕಾಗುತ್ತದೆ ಎನ್ನುವುದು, ಇನ್ನೊಂದು – ಯಾವುದೋ ಆಫೀಸಿನ ಕೆಲಸ ಕಾರ್ಯಗಳಲ್ಲಿ ತೊಡಗುವ ಮೂಲಕ ಅಷ್ಟರಮಟ್ಟಿಗೆ ವೀಣೆಯ ಸಾಹಚರ್ಯದಿಂದ ದೂರವಾಗಬೇಕಾಗುತ್ತದೆ ಎನ್ನುವುದು.
ದೊರೆಸ್ವಾಮಿ ಅಯ್ಯಂಗಾರರು 1955ರಲ್ಲಿ ಬೆಂಗಳೂರು ಆಕಾಶವಾಣಿಯ ಸಂಗೀತದ ಪ್ರೊಡ್ಯೂಸರ್ ಹುದ್ದೆಗೆ ಸೇರಿದರು. ಅದೇ ರೀತಿ ಸಾಹಿತ್ಯ ಮತ್ತು ನಾಟಕದ ಪ್ರೊಡ್ಯೂಸರ್ ಹುದ್ದೆಗಳೂ ಇದ್ದವು. ಸೇರಿದರೂ ಕೂಡ ಅದರಲ್ಲಿ ಹೆಚ್ಚು ಕಾಲ ನಿಲ್ಲುವ ಉದ್ದೇಶ ಅವರಿಗೆ ಇರಲಿಲ್ಲ; ಅದಕ್ಕಾಗಿ ಕುಟುಂಬವನ್ನು ಸ್ಥಳಾಂತರಿಸಲಿಲ್ಲ. ಮೊದಲಿಗೆ ನೀರಿನಿಂದ ಹೊರಗೆಬಿದ್ದ ಮೀನಿನಂತಾದರೂ ಕೂಡ ನಿಲಯದ ಸಂಗೀತ ನಿರ್ದೇಶಕನಾಗಿ ವಿವಿಧ ಕಾರ್ಯಕ್ರಮಗಳನ್ನು ತಯಾರಿಸಲು ಆರಂಭಿಸಿದರು. ಅದರಂತೆ ತಿಂಗಳಿಗೊಂದು ‘ರಾಗಲೋಕ’ ಎನ್ನುವ ಕಾರ್ಯಕ್ರಮವಿದ್ದು, ಅದರಲ್ಲಿ ಒಂದು ರಾಗವನ್ನು ಸಮಗ್ರವಾಗಿ ಪರಿಚಯಿಸುತ್ತಿದ್ದರು. ಅದರಲ್ಲಿ ಹೆಚ್ಚಾಗಿ ಪ್ರಸಿದ್ಧ ಗಾಯಕ ಆರ್.ಕೆ. ಶ್ರೀಕಂಠನ್ ಮತ್ತು ಸೆಲ್ವಪಿಳ್ಳೆ ಅಯ್ಯಂಗಾರ್ ಅವರು ಹಾಡುತ್ತಿದ್ದರು. ‘ಸಂಗೀತ ಸಂಚಿಕೆ’ ಎನ್ನುವ ಇನ್ನೊಂದು ಕಾರ್ಯಕ್ರಮವನ್ನು ರೂಪಿಸಿ ಅದರಲ್ಲಿ ಸಂಗೀತಶಾಸ್ತ್ರಜ್ಞರ ಭಾಷಣ, ವಾದ್ಯಗೋಷ್ಠಿ ಮತ್ತು ರೂಪಕಗಳನ್ನು ಸಿದ್ಧಪಡಿಸುತ್ತಿದ್ದರು. ಬೆಳಕಿಗೆ ಬಾರದ ರಚನೆಗಳನ್ನು ಹಾಡಿಸಿ, ಕೇಳಿದವರಿಗೆ ಅವುಗಳ ಸ್ವರಪ್ರಸ್ತಾರದ ಪ್ರತಿಯನ್ನು ಕೊಡುವ ವ್ಯವಸ್ಥೆಯನ್ನೂ ಮಾಡಿದ್ದರು. ಅದು ಆಕಾಶವಾಣಿಯ ಸುವರ್ಣಯುಗ; ದೂರದರ್ಶನ ಇನ್ನೂ ಬಂದಿರಲಿಲ್ಲ; ಮತ್ತು ದೇಶದಲ್ಲಿ ಶಾಸ್ತ್ರೀಯ ಸಂಗೀತಕ್ಕೆ ಆಕಾಶವಾಣಿ ಮಹತ್ತ್ವದ ಕೊಡುಗೆ ನೀಡಿದ್ದು, ಅದರಲ್ಲಿ ದೊರೆಸ್ವಾಮಿ ಅಯ್ಯಂಗಾರ್ ಅಂಥವರ ಪಾತ್ರ ಇದ್ದೇ ಇದೆ.
‘ನನ್ನ ಲೋಕ ಇದಲ್ಲ’
ಆದರೂ ಅಯ್ಯಂಗಾರರಿಗೆ ‘ನನ್ನ ಲೋಕ ಇದಲ್ಲ’ ಎಂಬ ವ್ಯಥೆ ಕಾಡುತ್ತಲೇ ಇತ್ತಂತೆ. “ವೀಣೆಯನ್ನು ಸಾಧಿಸಿಕೊಳ್ಳಬೇಕಾದ ನನ್ನ ಅಮೂಲ್ಯ ಸಮಯ ನನ್ನ ಪ್ರವೃತ್ತಿಯಲ್ಲದ ಇಂತಹ ಕರ್ತವ್ಯಗಳಿಗೆ ವಿನಿಯೋಗ ಆಗುತ್ತಿದೆ; ಮತ್ತು ಆಕಾಶವಾಣಿಯ ವಾತಾವರಣಕ್ಕೆ ನಾನು ಸಲ್ಲತಕ್ಕವನಲ್ಲ ಎನ್ನುವ ಅಸಂತೋಷ ಬಾಧಿಸುತ್ತಿತ್ತು.” ಜೊತೆಗೆ ಅವರಿಗೆ ಉದ್ದಕ್ಕೂ ಸ್ಥಳೀಯ ಆಡಿಶನ್ ಬೋರ್ಡ್ನ ಅಧ್ಯಕ್ಷತೆಯ ಕಿರಿಕಿರಿ ಕೂಡ ಇತ್ತು. ಆಕಾಶವಾಣಿ ಕಾರ್ಯಕ್ರಮಗಳಲ್ಲಿ ಅವಕಾಶ ಬೇಕೆಂದು ಬರುವವರು ಎಷ್ಟೋ ಜನ; ಎಲ್ಲರಿಗೂ ಅವಕಾಶ ನೀಡಲು ಸಾಧ್ಯವೆ? ಅವಕಾಶ ಸಿಗದವರಿಗೆ ಅಯ್ಯಂಗಾರರ ಮೇಲೆ ಸಿಟ್ಟು; ಕೊಟ್ಟರೆ ಇವರ ಗಂಟೇನು ಹೋಗುತ್ತದೆ ಎಂಬ ಆಕ್ರೋಶ. ಅತ್ತು ಕರೆಯುವುದು, ಲಂಚ ಕೊಡಲು ಬರುವುದು, ಮಂತ್ರಿಗಳು ಸೇರಿದಂತೆ ಪ್ರಭಾವಿಗಳ ಮೂಲಕ ಒತ್ತಡ ತರುವುದು, ಬೆದರಿಕೆ ಹಾಕುವುದು – ಇವೆಲ್ಲ ನಡೆದೇ ಇದ್ದವು. ಆದರೂ ಈ ತತ್ತ್ವನಿಷ್ಠ ಕಲಾವಿದ ಜಗ್ಗಿದವರಲ್ಲ; ತಮ್ಮ ಗುಣಮಟ್ಟವನ್ನು ಕಾಪಾಡಿಕೊಂಡವರು. 1980ರಲ್ಲಿ ನಿವೃತ್ತರಾದ ಅವರು ಕೊನೆಯವರೆಗೆ ಇಂತಹ ದೃಢತೆಯನ್ನು ಉಳಿಸಿಕೊಂಡರೆಂದರೆ ಅದು ದೊಡ್ಡದೇ.
ಶೆಮ್ಮಂಗುಡಿ ಸೂಚನೆ
ಶಾಶ್ವತ ಅಗ್ರಿಮೆಂಟಿಗೆ ಸಹಿಹಾಕದೆ ಅತಂತ್ರಸ್ಥಿತಿಯಲ್ಲೇ ಮುಂದುವರಿಯುತ್ತಿದ್ದ ಅಯ್ಯಂಗಾರ್ ಅವರನ್ನು ಒಂದು ನೆಲೆಗೆ ತಂದವರು ರಾಷ್ಟ್ರಮಟ್ಟದಲ್ಲಿ ಸಂಗೀತ ವಿಭಾಗದ ಮುಖ್ಯ ನಿರ್ಮಾಪಕರಾದ ಶೆಮ್ಮಂಗುಡಿ ಶ್ರೀನಿವಾಸ ಅಯ್ಯರ್ ಅವರು. ಹಿರಿಯ ಸಂಗೀತಗಾರರಾದ ಅವರ ಮಾತನ್ನು ಮೀರಲು ದೊರೆಸ್ವಾಮಿ ಅವರಿಗೆ ಸಾಧ್ಯವಾಗಲಿಲ್ಲ. ಶಾಶ್ವತ ಅಗ್ರಿಮೆಂಟಿಗೆ ಸಹಿ ಹಾಕಿದರು.
ಕಚೇರಿ ತಯಾರಿ ಇಲ್ಲ
ಅವರು ಮನೆಯಲ್ಲಿ ಯವಾಗಲೂ ವೀಣೆ ನುಡಿಸುತ್ತ ಇರುತ್ತಿದ್ದರು. ಇದು ಕಚೇರಿಗೆ ತಯಾರಿಯೆ ಎಂದು ಕೇಳಿದರೆ, “ಇಲ್ಲ. ಅವರು ಕಚೇರಿಗಳಿಗೆ ತಯಾರು ಮಾಡುತ್ತಿರಲಿಲ್ಲ. ಪ್ರತಿದಿನವೂ ನುಡಿಸುವರು. ಅದೇ ಕೆಲಸ ಅವರಿಗೆ. ಮನೆಯಲ್ಲಿ ಪ್ರತಿದಿನ ನುಡಿಸುವಂತೆ ಕಚೇರಿಯಲ್ಲೂ ನುಡಿಸುವರು, ಅಷ್ಟೆ. ಮನೆಯಲ್ಲೂ ಕಚೇರಿ ಥರವೇ ನುಡಿಸುತ್ತಿದ್ದರು. ಕಚೇರಿಗೆ ಹೋದವರು ಅಲ್ಲಿ ಕುಳಿತು ಸಭೆಯನ್ನು ಒಮ್ಮೆ ನೋಡಿದರೆಂದರೆ ಏನು ನುಡಿಸಬೇಕೆಂದು ಅಲ್ಲೇ ತೀರ್ಮಾನವಾಗುತ್ತದೆ. ಸಭೆಯನ್ನು ನೋಡದೆಯೇ, ‘ಹಿಂಗ್ ಮಾಡ್ತೀನಿ ಈವತ್ತು; ಹಿಂಗ್ ಮಾಡಿಬಿಡ್ತೀನಿ’ ಎಂದು ಹೋಗುತ್ತಿರಲಿಲ್ಲ. ಸಭೆಗೆ ಹೋಗಿ ಐದು ನಿಮಿಷದೊಳಗೆ ಆ ಜನರಿಗೆ ಏನು ಕೊಡಬೇಕೆಂದು ಅವರಿಗೆ ಗೊತ್ತಾಗಿಬಿಡುತ್ತಿತ್ತು.” ಎಂದು ದೊರೆಸ್ವಾಮಿ ಅವರ ಪುತ್ರ ಡಿ. ಬಾಲಕೃಷ್ಣ ಹೇಳುತ್ತಾರೆ.
ಆಕಾಶವಾಣಿಯಲ್ಲಿ ತಮ್ಮ ದೀರ್ಘಕಾಲದ ಸಹೋದ್ಯೋಗಿ ಎಸ್. ಕೃಷ್ಣಮೂರ್ತಿ ಅವರಿಗೆ ನೀಡಿದ ಒಂದು ಸಂದರ್ಶನದಲ್ಲಿ ಅಯ್ಯಂಗಾರ್ ಅವರು, “ಸಂಗೀತದ ವ್ಯಾಪ್ತಿ ಹೆಚ್ಚಿದ ಈ ಕಾಲದಲ್ಲಿ ಕೇಳುಗರಲ್ಲಿ ವಿವಿಧ ವರ್ಗದ, ವಿವಿಧ ಮನೋಧರ್ಮದ ಜನರಿರುತ್ತಾರೆ. ಸಭೆ ಯಾವುದನ್ನು ಗ್ರಹಿಸಬಲ್ಲದು ಎಂಬುದನ್ನು ಅರಿತು ಅದಕ್ಕೆ ಅನುಗುಣವಾದ ಸಂಗೀತವನ್ನು ನಿರೂಪಿಸಬೇಕು. ಸಾವಿರಾರು ಜನ ನೆರೆದ ಸಾಮಾನ್ಯ ಶ್ರೋತೃಗಳ ಸಭೆಯಲ್ಲಿ ಗಂಟೆಗಟ್ಟಲೆಯ ರಾಗವಿಸ್ತಾರ, ಲಯವಿನ್ಯಾಸ, ಚಮತ್ಕಾರ ಮತ್ತು ಲೆಕ್ಕಾಚಾರದಿಂದ ಕೂಡಿದ ಲಯವಿನ್ಯಾಸ ಅನಗತ್ಯ. ಅದು ಅವರ ಊಹೆಗೆ ಮೀರಿದ್ದು, ಬೇಸರ ತರುವಂಥದ್ದು. ಅಂಥ ಸಭೆಗೆ ಸುಶ್ರಾವ್ಯವಾದ, ಮಧುರ ಮತ್ತು ಸುಲಲಿತವಾದ ಸಂಗೀತ ಉಚಿತ. ರಾಗ-ಲಯಗಳ ಪ್ರೌಢಿಮೆಯು ವಿದ್ವಾಂಸರ ಮತ್ತು ಜ್ಞಾನಸ್ಥರಾದ ರಸಿಕರ ಸಭೆಗೆ ಯೋಗ್ಯ. ರೇಡಿಯೋ ಸಂಗೀತದಲ್ಲಿ ಪ್ರೌಢಿಮೆಯ ಪ್ರದರ್ಶನಕ್ಕಿಂತ ಹಿತಮಿತವಾದ ಸಂಗೀತಕ್ಕೆ ಆದ್ಯತೆ. ಹೀಗೆ ಸಂದರ್ಭಾನುಸಾರ ಕಾರ್ಯಕ್ರಮವನ್ನು ನಿರೂಪಿಸಬಲ್ಲ ಕಲಾವಿದ ಯಶಸ್ವಿಯಾಗುತ್ತಾನೆ” ಎಂದು ಹೇಳಿದ್ದರು.
ತರುಣರಿಗೆ ದಾರಿ
ಕಚೇರಿ ನಡೆಸುವ ತರುಣ ಕಲಾವಿದರು ಈ ಕೆಲವು ಅಂಶಗಳನ್ನು ಮನಸ್ಸಿನಲ್ಲಿ ಇಟ್ಟುಕೊಳ್ಳಬೇಕೆಂದು ದೊರೆಸ್ವಾಮಿ ಅಯ್ಯಂಗಾರ್ ಸಲಹೆ ಮಾಡಿದ್ದಿದೆ:
1) ನಾದ ಮತ್ತು ಶ್ರುತಿ ಶುದ್ಧತೆಗೆ ಪ್ರಾಧಾನ್ಯ
2) ಅತಿ ವಿಳಂಬವೂ ಅಲ್ಲದ ಅತಿ ತ್ವರಿತವೂ ಅಲ್ಲದ ಮಧ್ಯಲಯ ಪ್ರಧಾನವಾದ ಕಾಲಪ್ರಮಾಣ
3) ವಿವಿಧ ಕಾಲಪ್ರಮಾಣಗಳಲ್ಲಿ ಕೃತಿಗಳ ನಿರೂಪಣೆ
4) ರಕ್ತಿ ಮತ್ತು ಅಪರೂಪದ ರಾಗಗಳ ಯುಕ್ತ ಪ್ರಮಾಣ
5) ಹಿತಮಿತವಾದ ರಾಗಾಲಾಪನೆ
6) ತಾಳವಾದ್ಯಗಳನ್ನೇ ಅವಲಂಬಿಸದಿರುವ ಸ್ವತಂತ್ರ ಸ್ವರಕಲ್ಪನೆ
7) ಭಾವ ಮತ್ತು ಮನೋರಂಜನೆಯೇ ಮುಖ್ಯವಾಗಿರುವ ರಾಗ-ತಾನ-ಪಲ್ಲವಿ
8) ಎರಡು ಅಥವಾ ಎರಡೂವರೆ ಗಂಟೆಗಳಿಗೆ ಮೀರದಿರುವ, ಅನಾವಶ್ಯಕ ಅಂಶಗಳಿಲ್ಲದ ಕಚೇರಿ
9) ಪಲ್ಲವಿಯ ನಂತರ ರಸಿಕರ ಹೃದಯಗಳನ್ನು ನೇರವಾಗಿ ಮುಟ್ಟುವ ಭಕ್ತಿಪ್ರಧಾನ ರಚನೆಗಳು
10) ಸಂದರ್ಭಕ್ಕೆ ತಕ್ಕಂತೆ ಕಾರ್ಯಕ್ರಮವನ್ನು ರೂಪಿಸಿಕೊಳ್ಳುವ ತಿಳಿವಳಿಕೆ.
ವಿದೇಶ ಯಾತ್ರೆ
ದೊರೆಸ್ವಾಮಿ ಅಯ್ಯಂಗಾರರ ವಿದೇಶಯಾತ್ರೆಗಳು ಸಾಕಷ್ಟು ತಡವಾಗಿ ಆರಂಭವಾದವು. ಅದರಲ್ಲಿ ಕೂಡ ಅವರ ಹಿಂಜರಿಕೆ ಇದ್ದೇ ಇತ್ತು. ಅದಕ್ಕೆ ಮುಖ್ಯ ಕಾರಣ ಅವರು ಪ್ರಾಣಕ್ಕಿಂತಲೂ ಹೆಚ್ಚಾಗಿ ಪ್ರೀತಿಸುತ್ತಿದ್ದ ವೀಣೆಗೆ ಎಲ್ಲಾದರೂ ಪೆಟ್ಟಾಗುವುದೋ ಎನ್ನುವ ಆತಂಕ. ಆದರೆ ಅದರಿಂದ ತಪ್ಪಿಸಿಕೊಳ್ಳಲು ಅವರಿಗೆ ಸಾಧ್ಯವಿರಲಿಲ್ಲ. ಮುಖ್ಯವಾಗಿ ಆಕಾಶವಾಣಿ ಹುದ್ದೆಯಿಂದ ನಿವೃತ್ತರಾದ ಮೇಲೆ ಹಲವು ದೇಶಗಳಿಗೆ ತೆರಳಿ ಅಲ್ಲಿ ತಮ್ಮ ವೀಣೆಯ ನಾದವನ್ನು ಅಲ್ಲಿಯವರಿಗೆ ಲಭ್ಯವಾಗಿಸಬೇಕಾಯಿತು. ಆ ರೀತಿಯಲ್ಲಿ ಅಮೆರಿಕ, ಇಂಗ್ಲೆಂಡ್, ರಷ್ಯಾ, ಜರ್ಮನಿ ಮುಂತಾದ ದೇಶಗಳಿಗೆ ಭೇಟಿಕೊಟ್ಟರು. ಬಹಳಷ್ಟು ಸಲ ಅದು ಅಂತಾರಾಷ್ಟ್ರೀಯ ಸಂಗೀತೋತ್ಸವ ಅಥವಾ ಭಾರತ ಉತ್ಸವದಂತಹ ಕಾರ್ಯಕ್ರಮ ಆಗಿರುತ್ತಿತ್ತು.
ಪ್ರಶಸ್ತಿ-ಪುರಸ್ಕಾರಗಳು
ಕೇಂದ್ರ ಸಂಗೀತ-ನಾಟಕ ಅಕಾಡೆಮಿ ಪ್ರಶಸ್ತಿ (1971), ಕರ್ನಾಟಕ ನೃತ್ಯ ಅಕಾಡೆಮಿ ಪ್ರಶಸ್ತಿ (1971), ಬೆಂಗಳೂರು ಗಾಯನ ಸಮಾಜದ ‘ಸಂಗೀತ ಕಲಾರತ್ನ’ (1976), ಪದ್ಮಭೂಷಣ (1983), ಮದ್ರಾಸ್ ಮ್ಯೂಸಿಕ್ ಅಕಾಡೆಮಿಯ ‘ಸಂಗೀತ ಕಳಾನಿಧಿ’ (1984), ಚೌಡಯ್ಯ ರಾಷ್ಟ್ರೀಯ ಸ್ಮಾರಕ ಪ್ರಶಸ್ತಿ (1985), ಹಾಫಿಜ್ ಅಲಿ ಖಾನ್ ಪ್ರಶಸ್ತಿ ಹಾಗೂ ಇಂಡಿಯನ್ ಫೈನ್ ಆಟ್ರ್ಸ್ ಸೊಸೈಟಿಯ ‘ಸಂಗೀತಕಲಾ ಶಿಖಾಮಣಿ’ ಪ್ರಶಸ್ತಿಗಳು (1994) ದೊರೆಸ್ವಾಮಿ ಅಯ್ಯಂಗಾರ್ಯರನ್ನು ಅರಸಿಕೊಂಡು ಬಂದ ಪ್ರಮುಖ ಪ್ರಶಸ್ತಿಗಳು. ಇದಕ್ಕಿಂತ ಮಿಗಿಲಾದದ್ದು ಸಂಗೀತ ರಸಿಕರಿಂದ ಅವರಿಗೆ ದೊರೆತ ಆನಂದಬಾಷ್ಪ ಎನ್ನಬಹುದು.
ಜನ್ಮಶತಾಬ್ದ
ಇದೀಗ ಅಯ್ಯಂಗಾರ್ ಅವರ ಜನ್ಮಶತಾಬ್ದದ ಸಂಬಂಧವಾಗಿ ವಿವಿಧ ಕಾರ್ಯಕ್ರಮಗಳು ನಡೆಯುತ್ತಿವೆ. “ನಮ್ಮ ಕಡೆಯಿಂದ ಹಲವು ಕಾರ್ಯಕ್ರಮಗಳನ್ನು ನಡೆಸುತ್ತಿದ್ದೇವೆ. ಬೆಂಗಳೂರಿನಲ್ಲಿ ಸುಮಾರು 50 ಸಂಗೀತ ಕಚೇರಿಗಳನ್ನು ನಡೆಸಲಾಗುತ್ತಿದೆ. ವೀಣೆಯಲ್ಲದೆ ಗಾಯನ, ಬೇರೆ ವಾದ್ಯಗಳು – ಎಲ್ಲ ಕಚೇರಿಗಳು ನಡೆಯುತ್ತಿವೆ. ವೀಣಾವಾದನದ ಸ್ಪರ್ಧೆ ನಡೆಸಿದ್ದೇವೆ” ಎಂದು ಪುತ್ರ ಬಾಲಕೃಷ್ಣ ತಿಳಿಸಿದರು.
“ದೊರೆಸ್ವಾಮಿ ರಾಮಾಯಣದ ಆಂಜನೇಯನಂತೆ. ಅವನೊಳಗೆ ಅಷ್ಟೊಂದು ಬಂಗಾರವಿದೆ ಎಂಬುದು ಅವನಿಗೇ ಗೊತ್ತಿಲ್ಲ. ಅವನಲ್ಲಿರುವ ಸುಪ್ತ ಪ್ರತಿಭೆಯನ್ನು ಯಾರಾದರೂ ಹೊರಗೆ ತರಬೇಕಾಗುತ್ತದೆ” ಎಂದವರು ಚೌಡಯ್ಯ. “ಪ್ರಸಿದ್ಧರಾದ ಮೇಲೂ ಅಯ್ಯಂಗಾರರು ತಮ್ಮ ಉಡುಗೆ-ತೊಡುಗೆ ಬಗ್ಗೆ ಹೆಚ್ಚು ಗಮನಕೊಡಲಿಲ್ಲ. ಕೈಯಲ್ಲಿ ಉಂಗುರವಿಲ್ಲ. ಕೊರಳಲ್ಲಿ ಚಿನ್ನದ ಸರವಿಲ್ಲ. ವೀಣೆ ಹಿಡಿದು ಅಭ್ಯಾಸಕ್ಕೆ ಕುಳಿತರೆ ಗಂಟೆ ನೋಡುವವರಲ್ಲ. ಅವರ ಜೀವ ಇದ್ದದ್ದು ವೀಣೆಯಲ್ಲಿ” ಎಂದು ಎಸ್. ಕೃಷ್ಣಮೂರ್ತಿ ತಮ್ಮ ಗೆಳೆಯನನ್ನು ಚಿತ್ರಿಸಿದ್ದಾರೆ. ಯಾರ ಮನಸ್ಸಿಗೂ ನೋವಾಗಬಾರದು ಎಂಬುದು ಅವರ ಧ್ಯೇಯ. ಹಿರಿಯರ ಬಗೆಗೆ ಯಾರಾದರೂ ಕೆಟ್ಟ ಮಾತು ಆಡಿದರೆ ಇವರು ಅವರ ಪ್ಲಸ್ ಪಾಯಿಂಟ್ಗಳನ್ನು ಹೇಳುತ್ತಾ ಹೋಗುವರು.
“ಬದಲಾವಣೆ ಮಾಡುವ ಮೊದಲು ಪರಂಪರೆಯನ್ನು ಚೆನ್ನಾಗಿ ತಿಳಿದುಕೊಳ್ಳಿ” ಎನ್ನುವುದು ಶಿಷ್ಯರಿಗೆ ಅಯ್ಯಂಗಾರ್ಯರ ಸಲಹೆ. “ಅವರು ಹಣಕ್ಕಾಗಿ ಕಲಿಸಲಿಲ್ಲ. ಕಚೇರಿಯ ಸಂಭಾವನೆ ಬಗೆಗೆ ಕಟ್ಟುನಿಟ್ಟಿಲ್ಲ” ಎಂದು ನಿಕಟವರ್ತಿಗಳು ಹೇಳಿದ್ದಾರೆ. ಮಗಳು ವಿಜಯಾ ತಮ್ಮ ತಂದೆಯನ್ನು ಕಂಡದ್ದು ಹೀಗೆ: “ಅವರಿಗೆ ಒಳ್ಳೆಯ ಬಟ್ಟೆ ಇಷ್ಟ; ಆದರೆ ಅದನ್ನು ಎಲ್ಲಿ ಖರೀದಿಸಬೇಕೆಂಬುದು ಗೊತ್ತಿಲ್ಲ.” ಪತ್ನಿ ಶಾರದಮ್ಮ ಮನೆಯ ದೈನಂದಿನ ಜವಾಬ್ದಾರಿಗಳನ್ನೆಲ್ಲ ವಹಿಸಿಕೊಂಡು ತಮ್ಮನ್ನು ಸಂಗೀತಕ್ಕೆ ಬಿಟ್ಟರೆಂದು ದೊರೆಸ್ವಾಮಿ ಅಯ್ಯಂಗಾರ್ ತುಂಬ ಕೃತಜ್ಞರಾಗಿದ್ದರು.
ಅವರು ನಿಧನ ಹೊಂದಿ 23 ವರ್ಷಗಳಾದರೂ ಅವರ ನೆನಪು ಹಸಿರಾಗಿರುವುದರಲ್ಲೇ ಅವರ ಕಲಾಜೀವನದ ಸಾರ್ಥಕತೆ ಇದೆ ಎನಿಸುತ್ತದೆ.