ಹತ್ತಾರು ವರ್ಷಗಳ ಕಾಲ `ಉತ್ಥಾನ’ದ ಕಲಾವಿದರೂ ವಿನ್ಯಾಸಕರ್ತರೂ ಆಗಿದ್ದ ಕಮಲೇಶ್ ನಿಧನರಾಗಿ ಏಳು ವರ್ಷ ಗತಿಸಿವೆ (2014).
ಆದರೆ ಅವರು ಉಳಿಸಿ ಹೋದದ್ದು ಮಾಸದಿರುವ ನೆನಪುಗಳನ್ನು.
ಕೆಲವು ವ್ಯಕ್ತಿಗಳ ಪರಿಚಯವನ್ನು ಯಾವುದೋ ಸಂದರ್ಭಗಳಲ್ಲಿ ಮಾಡುವಾಗ ಅವರ ಒಂದೋ ಎರಡೋ ಕಾರ್ಯಕ್ಷೇತ್ರಗಳನ್ನು ಹೆಸರಿಸಲಾಗುತ್ತದೆ. ಇಂತಹ ಪರಿಚಯ ಈ ಸಂದರ್ಭಕ್ಕೆ ಪರ್ಯಾಪ್ತವೆನಿಸಬಹುದು. ಆದರೆ ಅದನ್ನು ಸಮಗ್ರವೆಂದು ಪರಿಗಣಿಸಲಾಗದು. ಸಾಮಾನ್ಯವಾಗಿ ಸರ್ಜನಶೀಲ ವ್ಯಕ್ತಿಗಳ ಅಂತರಂಗದ್ರವ್ಯಕ್ಕೆ ಹಲವಾರು ಆಯಾಮಗಳು ಇರುತ್ತವೆ. ಅಂತಹವರನ್ನು ಅವರ ಪ್ರಧಾನ ಕಾರ್ಯಕ್ಷೇತ್ರವನ್ನು ಲಕ್ಷಿಸಿ ಹಾಗೆ ಅವರ ಪರಿಚಯ ಮಾಡುವುದು ಸ್ವಾಭಾವಿಕವಾದರೂ ಅದು ಅಪರ್ಯಾಪ್ತವೆನಿಸುತ್ತದೆ.
ರಸಿಕತೆ; ಆಸಕ್ತಿವೈವಿಧ್ಯ
ಈ ಭಾವನೆ ಮನಸ್ಸಿನಲ್ಲಿ ಉದಿಸಿದುದಕ್ಕೆ ಕಾರಣವಾದುದು ಕಲಾವಿದ ಕಮಲೇಶ್ ಅವರ ವ್ಯಕ್ತಿತ್ವ, ಸುಮಾರು ನಾಲ್ಕೂವರೆ ದಶಕಗಳಷ್ಟು ದೀರ್ಘವಾದ ಅವರ ಮತ್ತು ನನ್ನ ಒಡನಾಟವನ್ನು ಮೆಲುಕುಹಾಕುವಾಗ ನನ್ನ ಮನಸ್ಸಿನಲ್ಲಿ ಹಾದುಹೋಗುವ ಹಲವು ಮುದ್ರಿಕೆಗಳಲ್ಲಿ ಅವರು ಉತ್ತಮ ಕಲಾವಿದರಾಗಿದ್ದರೆಂಬುದು ಒಂದು ಮಾತ್ರ. ಅವರು ಒಳ್ಳೆಯ ಕಲಾವಿದರಾಗಿದ್ದರೆಂಬುದು ನಿರ್ವಿವಾದ; ಅದು ಅಸಂದಿಗ್ಧವಾಗಿ ದಾಖಲೆಗೊಂಡಿರುವ ಸಂಗತಿ. ಅವರೊಡನೆ ನನ್ನನ್ನು ಬೆಸೆಯುವುದಕ್ಕೆ ಅವರ ಕಲೆಗಾರಿಕೆಯು ನಿಮಿತ್ತವನ್ನು ಒದಗಿಸಿತ್ತೆಂಬುದನ್ನೂ ಅಲ್ಲಗಳೆಯಲಾರೆ. ಆದರೆ ಅವರೂ ಅವರ ಪತ್ನಿ ವಿಜಯಾ ಅವರೂ ನಾನೂ ಸೇರಿದಾಗ ನಮ್ಮ ಸಲ್ಲಾಪಗಳಿಗೆ ಒದಗುತ್ತಿದ್ದ ಸಾಮಗ್ರಿಗಳಲ್ಲಿ ಕಲಾಸಂಬಂಧಿಯಾದದ್ದು ಒಂದು ಸಣ್ಣ ಭಾಗಮಾತ್ರವಾಗಿರುತ್ತಿತ್ತು. ಆಗಾಗಿನ ಸಾಹಿತ್ಯಕ್ಷೇತ್ರ ವಿದ್ಯಮಾನಗಳಿಂದ ಹಿಡಿದು ನಗರದಲ್ಲಿ ನಡೆಯುತ್ತಿದ್ದ ಪ್ರಮುಖ ಘಟನಾವಳಿಗಳು, ಸಂಗೀತಾದಿ ಕಲಾಪಗಳು, ಯಾವ ಹೊಟೇಲಿನಲ್ಲಿ ದೋಸೆಯೋ ಮತ್ತೊಂದೋ ಉತ್ಕøಷ್ಟವಾಗಿರುತ್ತದೆಂಬ ವಿಮರ್ಶೆ, ಹೊಸದಾಗಿ ಅಸ್ತಿತ್ವಕ್ಕೆ ಬಂದಿದ್ದ ಹೊಟೇಲುಗಳ ಮೌಲ್ಯಮಾಪನ, ಸುದ್ದಿ ಮಾಡಿದ್ದ ಸಿನೆಮಾಗಳು ಮತ್ತು ನಾಟಕಗಳು ; – ಹೀಗೆ ನಮ್ಮ ಸಲ್ಲಾಪದ ಸಂಚಾರ ತುಂಬಾ ವಿಶಾಲವಾಗಿರುತ್ತಿತ್ತು. ಗಡಿಗಳು ಇರಲಿಲ್ಲ. ಒಮ್ಮೊಮ್ಮೆ ಅವರ ಮತ್ತು ಪುತ್ರಿ ಲಾವಣ್ಯಳ ಗುರುಗಳೂ ನನಗೆ ದೀರ್ಘಕಾಲದ ಆತ್ಮೀಯ ಹಿರಿಯರೂ ಆಗಿದ್ದ ಗವಾಯಿ ಶೇಷಾದ್ರಿಗಳೊಡನೆ ಗಪ್ಪಗೋಷ್ಠಿಯಲ್ಲಿ ತೊಡಗಿದಾಗಲೂ ಸಂಗೀತ ಕ್ಷೇತ್ರದ ಪ್ರಸಿದ್ಧರಿಗೆ ಸಂಬಂಧಿಸಿದ ಘಟನೆಗಳು, ಸ್ವಭಾವವೈಚಿತ್ರ್ಯಗಳು, ಹಲವೊಮ್ಮೆ ಘಟಿಸಿದ್ದ ಎಡವಟ್ಟುಗಳು; – ಇಂತಹ ಸಂಗತಿಗಳನ್ನು ಹಂಚಿಕೊಳ್ಳುವುದರಲ್ಲಿ ಗಂಟೆಗಳೇ ಕಳೆದುಹೋಗುತ್ತಿದ್ದವು. ಕಮಲೇಶ್ ಸೇರಿದಂತೆ ಅವರ ಪರಿವಾರದವರೆಲ್ಲರೂ ಶಾಸ್ತ್ರೀಯ ಸಂಗೀತ ಅಭ್ಯಾಸ ಮಾಡಿದ್ದವರೇ. ಕಮಲೇಶ್ ಅವರದೇ ಗಾಯನ ಕಛೇರಿಯನ್ನು ಅವರ ಗುರುಗಳಾದ ಶೇಷಾದ್ರಿ ಗವಾಯಿಗಳು ಏರ್ಪಡಿಸಿದ್ದುದರ ನೆನಪು ಹಸಿರಾಗಿದೆ. ಕಮಲೇಶ್ ರಾಗ ಬಾಗೇಶ್ರೀ ಹಾಡಿದ್ದರು. ಲಾವಣ್ಯಳು ಉನ್ನತಮಟ್ಟ ಸಾಧಿಸಿದ್ದಾಳೆ; ಅವಳ ಹಲವು ಧ್ವನಿಮುದ್ರಿಕೆಗಳೂ ಹೊರಬಿದ್ದಿವೆ.
ಮೇಲಣ ವಿವರಗಳನ್ನು ಇಲ್ಲಿ ಪ್ರಸ್ತಾವಿಸಿದುದರ ಉದ್ದೇಶವೆಂದರೆ ಕಮಲೇಶ್ ಅವರ ಎಲ್ಲವನ್ನೂ ಆಸ್ವಾದಿಸಬಲ್ಲ ರಸಿಕ ಸ್ವಭಾವವೂ ನನ್ನನ್ನೂ ಇತರ ಹಲವರನ್ನೂ ಅವರೊಡನೆ ಗಾಢವಾಗಿ ಬೆಸೆಯಲು ಅಸ್ತಿಭಾರವನ್ನು ಒದಗಿಸಿತ್ತು – ಎಂದು ಸೂಚಿಸುವುದು.
ಸ್ವಭಾವಮಾಧುರ್ಯ
ಕಮಲೇಶ್ ಅವರ ಕಲೆಗಾರಿಕೆಯ ನೆರವನ್ನು ಪಡೆದುಕೊಳ್ಳುತ್ತಿದ್ದ ಹಾಗೂ ಅನ್ಯ ಪರಿಚಿತರೆಲ್ಲರ ಅನುಭವವೂ ಇದೇ ಆಗಿತ್ತು. ವ್ಯಾವಹಾರಿಕತೆಗಿಂತ ಮಿಗಿಲಾಗಿ ಸ್ವಭಾವಮಾಧುರ್ಯದ ಕಾರಣದಿಂದ ನಮಗೆಲ್ಲ ಅವರು ಆತ್ಮೀಯರಾಗಿದ್ದರು. ನಾವು ಕೋರಿದಾಗಲೆಲ್ಲ ಎಂದೂ ಇಲ್ಲವೆನ್ನದೆ ಅವರು ಒದಗಿಸುತ್ತಿದ್ದ ಕಲಾಸಂಬಂಧಿತ ನೆರವು ಅವರ ಸ್ನೇಹಸ್ವಭಾವದ ವಿಸ್ತರಣೆಯಷ್ಟೆ ಆಗಿದ್ದಿತು. ಇದು ಹಲವೊಮ್ಮೆ ಒಂದಷ್ಟು ವಿನೋದಕ್ಕೂ ಕಾರಣವಾಗುತ್ತಿತ್ತು. ಆಗ ಅವರು ಎನ್ನುತ್ತಿದ್ದುದು – “ಸಂಸ್ಥೆಯವರು ಕೇಳಿದರೆ ನನಗೆ ಪುರಸೊತ್ತಿಲ್ಲ ಎನ್ನಬಹುದೇನೋ.
ಆದರೆ ರಾಮಸ್ವಾಮಿಗಳು ಕೇಳಿದಾಗ ಹಾಗೆ ನಿರಾಕರಿಸಲು ಆಗುವುದಿಲ್ಲವಲ್ಲ!” ಎಂದು. ಹೆಚ್ಚು ವ್ಯಾಖ್ಯಾನದ ಆವಶ್ಯಕತೆ ಇಲ್ಲ. ‘ಉತ್ಥಾನ’ದ ಸಜ್ಜಿಕೆಯ ಹೊಣೆ ಅವರಿಗೆ ಇರದಿದ್ದಾಗಲೂ ಆಗಿಂದಾಗ “ಆ ಕಡೆ ಸ್ವಲ್ಪ ಕೆಲಸವಿದೆ, ಮುಗಿಸಿ ಒಂದು ಗಂಟೆಯ ಹೊತ್ತಿಗೆ ನಿಮ್ಮ ಆಫೀಸಿಗೆ ಬರುತ್ತೇನೆ. ಒಟ್ಟಿಗೇ ಎಲ್ಲಿಯಾದರೂ ಊಟ ಮಾಡೋಣ” ಎಂದು ನೋಟೀಸ್ ಕೊಟ್ಟು ಬರುತ್ತಿದ್ದರು. ಈ ಆತ್ಮೀಯತೆ ದಶಕಗಳುದ್ದಕ್ಕೂ ಮುಂದುವರಿದಿತ್ತು. ಇನ್ನು ಯಾವುದೇ ನೆರವಿನ ಬಗೆಗೆ ಸಂಭಾವನೆ ಕುರಿತು ಮಾತನಾಡುವ ಸಂದರ್ಭವೇ ಎಂದೂ ಬರಲಿಲ್ಲ. ಸಾಕೇತಿಕವೆಂದೇ ಹೇಳಬೇಕಾದ ಸಂಭಾವನೆಯನ್ನು ಅವರು ಸಂತೋಷದಿಂದ ಒಪ್ಪಿಕೊಂಡು ತಾವೇ ಉಪಕೃತರೆಂಬಂತೆ ವರ್ತಿಸುತ್ತಿದ್ದರು. ಅದನ್ನೆಲ್ಲ ನೆನೆಯುವಾಗ ಈಗಲೂ ನನ್ನ ಮನಸ್ಸು ಆದ್ರ್ರವಾಗುತ್ತದೆ.
ಬಹುಮುಖ ಕೌಶಲ
ಹಲವು ಕಲಾವಿದರು ಇರುತ್ತಾರೆ. ಅವರು (ಆವಶ್ಯಕತೆಯಿಂದಲೋ ಅಥವಾ ಪ್ರವೃತ್ತಿಯಿಂದಲೋ) ಕಲೆಯ ಯಾವುದೋ ಒಂದು ಆಯಾಮದಲ್ಲಿ ವಿಶೇಷ ಅಭಿನಿವೇಶ ಬೆಳೆಸಿಕೊಂಡಿರುತ್ತಾರೆ, ಆದಷ್ಟೂ ಅದರಲ್ಲಿ ನಿರತರಾಗಿರಲು ಇಚ್ಛಿಸುತ್ತಾರೆ.
ಆದರೆ ಕಮಲೇಶ್ ಕಲೆಯ ಎಲ್ಲ ಪ್ರಕಾರಗಳಲ್ಲಿಯೂ ಸಮಾನ ಪ್ರಭುತ್ವ ಸಾಧಿಸಿದ್ದರು. ತೈಲವರ್ಣಚಿತ್ರಣ, ಜಲವರ್ಣಚಿತ್ರಣ, ಟೆಂಪೆರಾ, ಗೆರೆ-ಆಧಾರಿತ ಕಪ್ಪು-ಬಿಳುಪು ಚಿತ್ರಣ, ಸಾಂಪ್ರದಾಯಿಕ ಶೈಲಿ, ಆಧುನಿಕ ಶೈಲಿ; – ಎಲ್ಲವೂ ಅವರಿಗೆ ಕರಗತ. ಹೀಗಾಗಿ ಅವರಲ್ಲಿ ಶೇಖರಗೊಂಡಿದ್ದ ಅನುಭವವು ವಿಶಾಲವೂ ವಿಸ್ಮಯಕಾರಿಯೂ ಆಗಿತ್ತು. ಯಾವುದೇ ಆವಶ್ಯಕತೆಗಾದರೂ ನನ್ನಂತಹವರು ಅವರನ್ನು ಆಶ್ರಯಿಸಬಹುದಾಗಿತ್ತು.
ಮುಖ್ಯ ಸಂಗತಿಯೆಂದರೆ – ಸದಾ ತನ್ನಿಂದ ಸಮಾಜಕ್ಕೆ ಯಾವ ಬಗೆಯದಾದರೂ ಸೇವೆ ಸಲ್ಲುತ್ತಿರಬೇಕು ಎಂಬ ಶ್ರದ್ಧೆ ಅವರಲ್ಲಿ ಗಾಢವಾಗಿದ್ದುದು ಮತ್ತು ಅವರಿಂದ ನಮಗೆ ಅವಶ್ಯವಿರುವ ನೆರವು ನಿಶ್ಚಿತವಾಗಿ ದೊರೆಯುತ್ತದೆ ಎಂದು ಖಾತರಿ ಇದ್ದ ವ್ಯಕ್ತಿಗಳೂ ಬಹುಸಂಖ್ಯೆಯಲ್ಲಿ ಇದ್ದುದು. ಕಮಲೇಶ್ ಅವರಿಗೆ ಎಂದೂ ಬಿಡುವು ಇರುತ್ತಿರಲಿಲ್ಲ. ಪ್ರತಿದಿನ ಸ್ನಾನ ಮುಗಿಸಿ ಕುಂಚ ಹಿಡಿದರೆ ಎದುರಿಗಿರುವ ನಾಲ್ಕೈದು ಕೆಲಸಗಳಲ್ಲಿ ಯಾವುದಕ್ಕೆ ಆದ್ಯತೆ ನೀಡಬೇಕು ಎಂದು ಯೋಚಿಸಿ ‘ತುರ್ತು’ ನಿರ್ಣಯಿಸಬೇಕಾಗುತ್ತಿತ್ತು.
‘ಸಿದ್ಧಹಸ್ತ’
ಇದನ್ನೆಲ್ಲ ಮೆಲುಕುಹಾಕುವಾಗ ಪದೇಪದೇ ನೆನಪಾಗುವುದೆಂದರೆ ಕಮಲೇಶ್ ಅವರ ಕುಂಚಗಾರಿಕೆಯಲ್ಲಿದ್ದ ಪ್ರಭುತ್ವ ಮತ್ತು ವೇಗ. ಅವಿರತವಾಗಿ ವರ್ಷಗಳುದ್ದಕ್ಕೂ ಕೆಲಸ ಮಾಡಿ ಅವರು ‘ಸಿದ್ಧಹಸ್ತ’ರಾಗಿಬಿಟ್ಟಿದ್ದರು. ‘ಪೂರ್ವತಯಾರಿ’ಯಲ್ಲಿ ಸಾಕಷ್ಟು ಸಮಯವನ್ನೂ ಶ್ರಮವನ್ನೂ ತೊಡಗಿಸುವ ಕಲಾವಿದರನ್ನೂ ನಾನು ಕಂಡಿದ್ದೇನೆ. ಆದರೆ ಕಮಲೇಶ್ ಅವರು ಕಲ್ಪಿಸಿಕೊಂಡದ್ದು ಕ್ಷಣಾರ್ಧದಲ್ಲಿ ಕಾಗದದ ಮೇಲೆ ಮೂಡಿಬಿಡುತ್ತಿತ್ತು. ಒಮ್ಮೆ ರಚಿಸಿದುದನ್ನು ನೇರ್ಪಡಿಸುವ ಆವಶ್ಯಕತೆ ಅವರಿಗೆ ಬೀಳುತ್ತಿದ್ದುದು ಇಲ್ಲವೇ ಇಲ್ಲವೆಂಬಷ್ಟು ವಿರಳ. ಚಿತ್ರಗಾರಿಕೆಯಾಗಲಿ ಅಕ್ಷರಗಾರಿಕೆಯಾಗಲಿ ವರ್ಣಸಂಯೋಜನೆಯಾಗಲಿ ಕಮಲೇಶ್ ಅವರ ಒಳಗಿನ ಒತ್ತಡವನ್ನು ಭರಿಸಲಾರದೆ ಹೊರಕ್ಕೆ ಚಿಮ್ಮಿ ಬರುತ್ತಿರುವಂತೆ ಅನ್ನಿಸುತ್ತಿತ್ತು. ಇತರರಿಗೆ ಹಲವು ಗಂಟೆಗಳಷ್ಟಾದರೂ ಹಿಡಿಯಬಹುದಾದ ರಚನೆಯನ್ನು ಅವರು ಲೀಲಾಜಾಲವಾಗಿ ನೀವು ಕುಳಿತು ನೋಡುತ್ತಿರುವಂತೆಯೇ ಹಲವೇ ನಿಮಿಷಗಳಲ್ಲಿ ಹೊಮ್ಮಿಸಿಬಿಡುತ್ತಿದ್ದರು. ಈ ವಿಸ್ಮಯವನ್ನು ನಾನು ಅದೆಷ್ಟು ಸಲ ಕಂಡು ಆಶ್ಚರ್ಯಪಟ್ಟಿದ್ದೆನೋ ಅದು ಎಣಿಕೆಗೆ ಸಿಗುವಂತಿಲ್ಲ.
***
ಆರಂಭದ ದಿನಗಳು
ಕಮಲೇಶ್ (ಜನನ 1943) ಮೈಸೂರಿನ ಚಾಮರಾಜೇಂದ್ರ ಟೆಕ್ನಿಕಲ್ ಇನ್ಸ್ಟಿಟ್ಯೂಟ್ ಕಲಾಶಾಲೆಯಲ್ಲಿ ಪದವಿಯನ್ನು ಪಡೆದ (1962) ಅಲ್ಪಕಾಲದಲ್ಲಿಯೆ ಅವರ ಪ್ರತಿಭೆ-ನೈಪುಣ್ಯಗಳು ಗಮನ ಸೆಳೆದಿದ್ದವು. ಹೀಗಾಗಿ ಸರ್ಕಾರೀ ಪ್ರಾಚ್ಯವಸ್ತು ಸಂಗ್ರಹಾಲಯದಲ್ಲಿ ಅವರಿಗೆ ಉದ್ಯೋಗ ದೊರೆಯುವುದು ಕಷ್ಟವಾಗಲಿಲ್ಲ. ಸರ್ಕಾರೀ ಉದ್ಯೋಗವೆಂದರೆ ಎಂತಹವರಿಗಾದರೂ ಆಕರ್ಷಣೆ ಇರುತ್ತದೆ – ಅದರಲ್ಲಿ ಇರುವ ಭದ್ರತೆಯ ಕಾರಣದಿಂದ. (ಇದು ಈಗ್ಗೆ ಐವತ್ತು ವರ್ಷ ಹಿಂದಿನ ಮಾತು. ಈಗ ಸನ್ನಿವೇಶ ಬದಲಾಗಿದೆ.) ಉದ್ಯೋಗದ ಆರಂಭದ ಕಾಲದಲ್ಲಿ ಎಲ್ಲವೂ ಸವ್ಯವಾಗಿಯೆ ಇದ್ದಿತು.
ಹತ್ತಿರಹತ್ತಿರ ಒಂದು ದಶಕದಷ್ಟು ಕಾಲ ಆ ವ್ಯವಸ್ಥೆಯಲ್ಲಿ ಮುಂದುವರಿಯುವುದು ಸಾಧ್ಯವಾಯಿತು. ಆದರೆ ದಿನಗಳು ಕಳೆದಂತೆ ಯಾವುದೇ ಸರ್ಕಾರೀ ವ್ಯವಸ್ಥೆಯಲ್ಲಿ ಸಹಜವಾದ ಇರುಸುಮುರುಸುಗಳು ತಲೆದೋರಿದವು. ಒಂದುಕಡೆ ಯಾಂತ್ರಿಕತೆಯಾದರೆ ಇನ್ನೊಂದುಕಡೆ ಮಾನವಸಹಜ ಸಂಕುಚಿತ ನಡೆಗಳು. ಇವೆಲ್ಲ ಅಸಾಮಾನ್ಯವೇನಲ್ಲ. ಕೇವಲ ಉದ್ಯೋಗಾಸಕ್ತರಿಗೆ ಅಂತಹ ಆವರಣಕ್ಕೆ ಹೊಂದಿಕೊಳ್ಳುವುದು ಕಷ್ಟವೆನಿಸದು. ಆದರೆ ಕಮಲೇಶ್ ಬಯಸುತ್ತಿದ್ದುದು ತಮ್ಮ ಪ್ರತಿಭೆಯನ್ನು ಗುರುತಿಸಿ ಅದರ ವಿಕಾಸಕ್ಕೆ ಬಾಧೆ ತರದ ಸನ್ನಿವೇಶವನ್ನು. ಕೆಲಸದಮಟ್ಟಿಗೆ ಅವರ ಕಾರ್ಯವಂತಿಕೆ ಮೇಲ್ಮಟ್ಟದ್ದಾಗಿಯೆ ಇದ್ದಿತೆಂಬುದು ಸಿದ್ಧಪಟ್ಟಿತ್ತು. ಆದರೂ ಬರುಬರುತ್ತ ಬಿರುಕು ತಪ್ಪಲಿಲ್ಲ. ಇದಕ್ಕೆ ಯಾರನ್ನೂ ದೂಷಿಸಿ ಪ್ರಯೋಜನವಿಲ್ಲ. ಬಹುಮಟ್ಟಿಗೆ ಎಲ್ಲಕಡೆಯೂ ಕಾಣುವುದು ಇದೇ ಸ್ಥಿತಿಯಷ್ಟೆ.
ಕಮಲೇಶ್ ಅವರ ಮನಸ್ಸಿನಲ್ಲಿನ ಸಂವೇದನಶೀಲತೆಯ ದಟ್ಟಣೆಯಿಂದಾಗಿ ಅವರ ಅಸಂತೃಪ್ತಿ ಹೆಚ್ಚುತ್ತಹೋಯಿತು. ಈ ವೇಳೆಗೆ ಅವರ ಕೌಶಲ ಬಹುಮಂದಿಯ ಗಮನಕ್ಕೆ ಬಂದಿತ್ತು. ಹೀಗಾಗಿ ತಾವು ಇದ್ದ ಉದ್ಯೋಗವು ಜೀವಿಕೆಗೆ ಅನಿವಾರ್ಯವಲ್ಲವೆಂದೂ ತಾವು ಸ್ವತಂತ್ರವಾಗಿ ಬದುಕನ್ನು ಸಾಗಿಸಬಲ್ಲೆನೆಂದೂ ಅವರಿಗೆ ಅನಿಸತೊಡಗಿತು. ಏತನ್ಮಧ್ಯೆ ಅವರ ವಿವಾಹವೂ ನಡೆದು ಪತ್ನಿ ವಿಜಯಾ ಅವರು ಉದ್ಯೋಗಸ್ಥರಾಗಿದ್ದುದೂ ಅವರಿಗೆ ಸ್ಥೈರ್ಯ ನೀಡುವ ಅಂಶವಾಗಿತ್ತು. ಅವರು ಸ್ವತಂತ್ರವಾಗಿರಲು ನಿರ್ಧರಿಸಿದರು.
ಪ್ರವೃತ್ತಿಯೇ ವೃತ್ತಿಯಾಯಿತು
ಆ ವೇಳೆಗಾಗಲೇ ಸ್ವಲ್ಪಮಟ್ಟಿನ ‘ಫ್ರೀಲಾನ್ಸ್’ ಕೆಲಸಗಳನ್ನು ಅವರು ಬಿಡುವಿನ ಸಮಯದಲ್ಲಿ ಮಾಡಿಕೊಡುತ್ತಿದ್ದರು. ಅದಕ್ಕೆ ಬೇಡಿಕೆಯೂ ಹೆಚ್ಚಾಗಿಯೇ ಇದ್ದಿತು. ಏಕೆಂದರೆ ಪತ್ರಿಕೆಗಳ ಹಲವು ಅಂಗಗಳು, ಗ್ರಂಥಗಳ ಒಳಚಿತ್ರಗಳು ಹಾಗೂ ರಕ್ಷಾಪುಟ ವಿನ್ಯಾಸ, ವಿಶೇಷ ಸಂದರ್ಭಗಳ ವಿವಿಧ ಮಾಧ್ಯಮಗಳ ಸ್ಮಾರಿಕೆಗಳ ನಿರ್ಮಾಣ, ಮುದ್ರಣವಿನ್ಯಾಸ ಯೋಜನೆ, ವರ್ಣಸಂಯೋಜನೆ, ವಿಶೇಷ ಸಮಾರಂಭಗಳ ಪರಿಕರಗಳ ಸಜ್ಜಿಕೆ – ಹೀಗೆ ಯಾವುದೇ ಕಲಾಸಂಬಂಧಿತ ಸೇವೆಯನ್ನು ಕ್ಷಿಪ್ರವಾಗಿಯೂ ಉಚ್ಚ ಮಟ್ಟದಲ್ಲಿಯೂ ಒದಗಿಸಬಲ್ಲ ಕಲಾವಿದರು ಹೆಚ್ಚು ಮಂದಿ ಇರಲಿಲ್ಲ. ಒಂದು ದೃಷ್ಟಿಯಿಂದ ನೋಡಿದರೆ ಸರ್ಕಾರೀ ಉದ್ಯೋಗದಿಂದ ಮುಕ್ತರಾದ ಮೇಲೆ ಕಮಲೇಶ್ ಅವರ ಕೆಲಸಗಳ ಒತ್ತಡ ಹೆಚ್ಚಿತೆಂದೇ ಅನಿಸುತ್ತಿತ್ತು.
ಕರ್ನಾಟಕ ಚಿತ್ರಕಲಾ ಪರಿಷತ್ತಿನೊಡನೆ ಕಮಲೇಶ್ ಅವರ ಬಾಂಧವ್ಯ ಗಾಢವಾಗಿತ್ತು. ಅಲ್ಲಿಯ ಎಲ್ಲ ಕಲಾಪಗಳಲ್ಲಿಯೂ ಅವರು ಪಾಲ್ಗೊಳ್ಳುತ್ತಿದ್ದರು.
ದಶಕಗಳುದ್ದಕ್ಕೂ ಕಮಲೇಶ್ ಅವರ ಸೇವೆಯನ್ನು ಬಳಸಿಕೊಂಡವು ಹಲವಾರು ಸಂಸ್ಥೆಗಳು.
‘ಉತ್ಥಾನ’ ಮಾಸಪತ್ರಿಕೆಯನ್ನು ದಶಕಗಳುದ್ದಕ್ಕೂ (ಪತ್ರಿಕೆಯು ಪೂರ್ಣ ಯಾಂತ್ರೀಕರಣಗೊಳ್ಳುವವರೆಗೆ) ವಿನ್ಯಾಸಗೊಳಿಸಿದವರು ಕಮಲೇಶ್. ‘ರಾಷ್ಟ್ರೋತ್ಥಾನ ಸಾಹಿತ್ಯ’ ಮಾಲೆಯ ಹತ್ತಾರು ಕೃತಿಗಳನ್ನೂ ಅವರು ವಿನ್ಯಾಸಗೊಳಿಸಿದರು. ಈಗಲೂ ಬಳಕೆಗೊಳ್ಳುತ್ತಿರುವ ‘ಉತ್ಥಾನ’ ಪತ್ರಿಕೆಯ ‘ಮಾಸ್ಟ್ಹೆಡ್’ ಅವರು ನಲವತ್ತು ವರ್ಷ ಹಿಂದೆ ವಿನ್ಯಾಸಗೊಳಿಸಿದ್ದುದೇ.
ಪ್ರಕಾಶಕರ ಮತ್ತು ಪತ್ರಿಕೆಗಳ ಆವಶ್ಯಕತೆಗಳನ್ನು ಸತತವಾಗಿ ಪೂರೈಸುವುದರ ಜೊತೆಗೆ ಹಿಂದಿನಿಂದ ಅವರ ವಿಶೇಷ ಆಸಕ್ತಿಯ ಕ್ಷೇತ್ರವಾಗಿದ್ದ ಕರ್ನಾಟಕದಲ್ಲಿನ ಹಾಗೂ ಇತರ ದೇಶಭಾಗಗಳ ಐತಿಹಾಸಿಕ ಸ್ಮಾರಕಗಳ ರೇಖಾರೂಪ ಚಿತ್ರಣಕ್ಕೂ ಅದು ಅಪೇಕ್ಷಿಸಿದ ಪ್ರವಾಸಗಳಿಗೂ ಅವರು ಸರ್ಕಾರೀ ಉದ್ಯೋಗ ತೊರೆದ ಮೇಲೆ ಹೆಚ್ಚು ಅವಕಾಶ ಒದಗಿತ್ತು.
‘ಕಮಲೇಶ್ ಲಿಪಿ’
ಇದಕ್ಕೂ ಮುಂಚೆಯೇ ಕಮಲೇಶ್ ಅವರಿಂದ ಆಗಿದ್ದ ಒಂದು ವಿಶಿಷ್ಟ ಸಾಧನೆಯನ್ನು ಸ್ಮರಿಸಬೇಕು. ಅದು ಹೊಸದಾಗಿ ಒಂದು ಅಕ್ಷರರೂಪ ವಿನ್ಯಾಸದ ನಿರ್ಮಾಣ. ಈಗ್ಗೆ ಅರವತ್ತು ವರ್ಷ ಹಿಂದೆ ರಕ್ಷಾಪುಟಗಳಲ್ಲಿಯೂ ಶೀರ್ಷಿಕೆಗಳಲ್ಲಿಯೂ ಸಾಂದರ್ಭಿಕ ಸ್ಮರಣಿಕೆಗಳಲ್ಲಿಯೂ ಬಳಕೆಯಾಗುತ್ತಿದ್ದ ಅಕ್ಷರ-ಆಕೃತಿಯಲ್ಲಿ ವೈವಿಧ್ಯದ ಕೊರತೆ ಇತ್ತು. ಎಲ್ಲೆಡೆ ಬಹುತೇಕ ಬಳಕೆಯಾಗುತ್ತಿದ್ದುದು ಕನ್ನಡದಲ್ಲಿ ಆಗ ಲಭ್ಯವಿದ್ದ ಕೇವಲ ಮೂರು-ನಾಲ್ಕು-ಅಕ್ಷರ ಆಕೃತಿಗಳ ಅನುಕರಣವಷ್ಟೆ. ಹೀಗೆ ಅಕ್ಷರಗಳಲ್ಲಿ ಏಕತಾನತೆ ಉಂಟಾಗಿತ್ತು. ಇಂಗ್ಲಿಷಿನಲ್ಲಾದರೋ ಬಗೆಬಗೆಯ ‘ಫಾಂಟ್’ಗಳು ಲಭ್ಯವಿದ್ದವು. ಕನ್ನಡದಲ್ಲಿ ಇನ್ನೂ ಯಾಂತ್ರಿಕ ಸೆಟ್ಟಿಂಗ್ ಕೂಡಾ ಬಂದಿರಲಿಲ್ಲ. ಮುದ್ರಣಾಲಯಗಳಲ್ಲಿ ಎಲ್ಲೆಡೆ ಬಳಕೆಯಲ್ಲಿದ್ದವು ಕನ್ನಡದಲ್ಲಿ ಹಿಂದಿನಿಂದ ರೂಢಿಯಲ್ಲಿದ್ದ ಒಂದೆರಡು ವಿನ್ಯಾಸಗಳು ಮಾತ್ರ. ವೈವಿಧ್ಯದ ಕೊರತೆ ಎಷ್ಟು ಇದ್ದಿತೆಂದರೆ 1950ರ ವರ್ಷಗಳಲ್ಲಿ ಉತ್ಸಾಹಿಗಳಾರೋ ವಿನ್ಯಾಸಗೊಳಿಸಿದ ಒಂದು ತೀರಾ ಕಳಪೆ ಗುಣಮಟ್ಟದ ಹೊಸ ಕನ್ನಡ ಫಾಂಟ್ ಎಲ್ಲೆಡೆ ಪ್ರಚುರಗೊಂಡುಬಿಟ್ಟಿತು. ಅದರ ಎಷ್ಟೋ ಅಕ್ಷರರೂಪಗಳು ತೀರಾ ಅಸಮರ್ಪಕವಾಗಿದ್ದವು. ಆದರೂ ಕನ್ನಡ ಫಾಂಟ್ಗಳಲ್ಲಿ ಏನಾದರೂ ಬದಲಾವಣೆ ಬರಬೇಕೆಂಬ ಆತುರ ಮುದ್ರಣಕಾರರಲ್ಲಿ ಎಷ್ಟು ತೀವ್ರವಾಗಿದ್ದಿತೆಂದರೆ ಎಲ್ಲರೂ ಈ ಹೊಸ ಫಾಂಟನ್ನು ಬಳಸತೊಡಗಿದರು. ಅದರದು ಬೇರೆ ಕಥೆ.
ಇಲ್ಲಿ ನಾನು ಹೇಳಹೊರಟದ್ದು ಏನೆಂದರೆ – ಕಮಲೇಶ್ ತಮ್ಮ ವೃತ್ತಿಯ ದಿನಗಳಲ್ಲಿಯೆ ಈ ಕೊರತೆಯನ್ನು ಮನಗಂಡು ಅದಕ್ಕೆ ಗಮನವಿತ್ತು ತಮ್ಮದೇ ಆದ ಕನ್ನಡ ಲಿಪಿಯೊಂದನ್ನು ಆವಿಷ್ಕರಿಸಿ ಬಳಸತೊಡಗಿದರು. ಇದು ಎಲ್ಲರನ್ನೂ ಆಕರ್ಷಿಸಿತು. ಇದರೊಡಗೂಡಿಯೆ ಇದಕ್ಕೆ ಹೊಂದಿಕೆಯಾಗುವಂತಹ ಮತ್ತು ಇದರದೇ ಲಕ್ಷಣಗಳನ್ನು ಅಳವಡಿಸಿಕೊಂಡ ಇಂಗ್ಲಿಷ್ ಅಕ್ಷರರೂಪಗಳನ್ನೂ ನಿರ್ಮಿಸಿದರು. ಕಮಲೇಶ್ ತಮ್ಮ ಎಲ್ಲ ಕಾರ್ಯದಲ್ಲಿಯೂ ಈ ಸ್ವರಚಿತ ಲಿಪಿಯನ್ನೇ ಬಳಸಿದರು. ಈ ಅಕ್ಷರವಿನ್ಯಾಸವು ಎಷ್ಟು ಅನನ್ಯವಾಗಿತ್ತೆಂದರೆ ಎಲ್ಲೆಡೆ ಇದು ‘ಕಮಲೇಶ್ ಲಿಪಿ’ ಎಂದೇ ಹೆಸರಾಯಿತು. ದಿನಗಳು ಕಳೆದಂತೆ ಅನೇಕ ಅನ್ಯ ಕಲಾವಿದರೂ ಇದೇ ಲಿಪಿವಿನ್ಯಾಸವನ್ನು ಅಳವಡಿಸಿಕೊಂಡರು.
ಇದನ್ನು ಕನ್ನಡ ಮುದ್ರಣ ಮತ್ತು ಪ್ರಕಾಶನ ಕ್ಷೇತ್ರಗಳಿಗೆ ಕಮಲೇಶ್ ನೀಡಿದ ಒಂದು ವಿಶಿಷ್ಟ ಕೊಡುಗೆ ಎಂದು ಗುರುತಿಸಲೇಬೇಕಾಗಿದೆ.
***
ಕಲಾಕೃತಿ ಪ್ರದರ್ಶನಗಳು
1970ರ ದಶಕದ ಆರಂಭದ ದಿನಗಳಲ್ಲಿ ಆತ್ಮೀಯ ಮಿತ್ರರೂ ‘ಸುಧಾ’ ಪತ್ರಿಕೆಯ ಆಗಿನ ಸಹ-ಸಂಪಾದಕರೂ ಆಗಿದ್ದ ಎಂ.ಬಿ. ಸಿಂಗ್ ಅವರೂ ನಾನೂ ಕಮಲೇಶ್ ಅವರನ್ನು ಆಗಾಗ ಕೇಳುತ್ತಿದ್ದೆವು: “ನೀವು ಇಷ್ಟೊಂದು ವೈವಿಧ್ಯಮಯವಾದ ರಾಶಿರಾಶಿ ರಚನೆಗಳನ್ನು ಮಾಡಿದ್ದೀರಿ. ಆದರೆ ನಿಮ್ಮದೇ ಕೃತಿಗಳ ಪ್ರತ್ಯೇಕ ಪ್ರದರ್ಶನ ಆಗಿಯೇ ಇಲ್ಲವಲ್ಲ? ಇದುವರೆಗೆ ಸಾಮೂಹಿಕ ಪ್ರದರ್ಶನಗಳ ಭಾಗವಾಗಿಯಷ್ಟೆ ನಿಮ್ಮ ಕೃತಿಗಳು ಪ್ರದರ್ಶನಗೊಂಡಿವೆ.”
“ಯಾವುದಕ್ಕೂ ಸಮಯ ಬರಬೇಕಷ್ಟೆ!’ ಎಂದು ಸುಮ್ಮನಾದರು ಕಮಲೇಶ್.
ಕಮಲೇಶ್ ಅವರದೇ ಕೃತಿಗಳ ಪ್ರತ್ಯೇಕ ಪ್ರದರ್ಶನ ಮೊತ್ತಮೊದಲಿಗೆ ಆದದ್ದು ನನಗೆ ನೆನಪಿರುವ ಮಟ್ಟಿಗೆ 1978ರ ಸುಮಾರಿನಲ್ಲಿ – ಮ್ಯಾಕ್ಸ್ಮುಲ್ಲರ್ ಭವನದಲ್ಲಿ. ಅಲ್ಲಿ ಇದ್ದ ಸ್ಥಳಾವಕಾಶ ಕಡಮೆಯೇ. ಹಾಗಾಗಿ ಕಮಲೇಶ್ ಅವರ ಸುಮಾರು 30-35 ಚಿತ್ರಗಳು ಅಲ್ಲಿ ಪ್ರದರ್ಶನಗೊಂಡಿದ್ದವು. ಬಹುತೇಕ ಪ್ರಸಿದ್ಧ ಐತಿಹಾಸಿಕ ಸ್ಮಾರಕಗಳ ರೇಖಾಚಿತ್ರಗಳು ಇದ್ದ ಆ ಪ್ರದರ್ಶನ ಎಲ್ಲರ ಪ್ರಶಂಸೆಗೆ ಪಾತ್ರವಾಯಿತು.
ತೈಲವರ್ಣ, ಜಲವರ್ಣ ಮೊದಲಾದ ಪ್ರಕಾರಗಳಲ್ಲಿಯೂ ಕಮಲೇಶ್ ಅವರ ನಿರ್ಮಿತಿಗಳು ಗಣನೀಯ ಪ್ರಮಾಣದಲ್ಲಿ ಇದ್ದವು. ಆದರೆ ಕ್ರಮೇಣ ಅವರು ಹೆಚ್ಚಿನ ಒಲವನ್ನು ಬೆಳೆಸಿಕೊಂಡದ್ದು ಸ್ಮಾರಕಗಳ ಕಪ್ಪು-ಬಿಳುಪು ರೇಖಾಚಿತ್ರಣದ ಬಗೆಗೆ. ಇದು ಅವರಿಗೆ ತುಂಬಾ ಆನಂದವನ್ನು ನೀಡಿತ್ತು; ಮತ್ತು ಅದೊಂದು ಅತಿಶಯ ರೀತಿಯ ಸಾಧನೆಯೂ ಆಗಿತ್ತು.
ಅನನ್ಯ ರೇಖಾಚಿತ್ರಣ
ವಿಶೇಷವೆಂದರೆ ಕಪ್ಪು-ಬಿಳುಪಿನಲ್ಲಿದ್ದರೂ ಕಮಲೇಶ್ ಅವರ ರೇಖಾಚಿತ್ರಗಳು ಛಾಯಾಚಿತ್ರಗಳಿಗಿಂತ ಹೆಚ್ಚು ಪರಿಣಾಮಕಾರಿಯಾಗಿ ಇರುವುದು. ಕನಿಷ್ಠಪ್ರಮಾಣದ ಗೆರೆಗಳನ್ನು ಬಳಸಿ ಅವರು ನಿರ್ಮಿಸಿದ ಈ ಚಿತ್ರಗಳು ಮೂಲಸ್ಮಾರಕದ ಯಥಾವತ್ ಅನುಕೃತಿಯಾಗಿರುವುದು ಮಾತ್ರವಲ್ಲದೆ ಪ್ರತಿಯೊಂದು ಸ್ಮಾರಕದ ವಿಶೇಷತೆಯನ್ನೂ ಎತ್ತಿ ಕಾಣಿಸುತ್ತಿದ್ದರು.
ದೊಡ್ಡ ವಿಸ್ಮಯವೆಂದರೆ ಕಮಲೇಶ್ ಕೆಲವೇ ನಿಮಿಷಗಳಲ್ಲಿ – ಒಂದು ಚಿತ್ತಾಗಲಿ ತಿದ್ದಾವಣೆಯಾಗಲಿ ಇಲ್ಲದೆ – ಸ್ಮಾರಕವೊಂದರ ಪ್ರತಿಕೃತಿಯನ್ನು ಕಾಗದದ ಮೇಲೆ ಮೂಡಿಸುತ್ತಿದ್ದುದು. ಅದು ಸ್ಮಾರಕದ ಹೊರ-ಆಕೃತಿಯ ರೇಖನ ಪ್ರಯತ್ನವಷ್ಟೆ ಆಗಿರುತ್ತಿರಲಿಲ್ಲ. ಪ್ರತಿಯಾಗಿ ಸ್ಮಾರಕದ ರೂಪವು ಅವರ ಮನಸ್ಸಿನಲ್ಲಿ ಮುದ್ರಿತಗೊಂಡು ಅನಂತರ ಬೆರಳುಗಳ ಮೂಲಕ ಕಪ್ಪು ಶಾಯಿಯಲ್ಲಿ ಕಾಗದಕ್ಕೆ ವರ್ಗಾವಣೆಯಾಗುತ್ತಿತ್ತು.
ಕಮಲೇಶ್ ಮೂಲತಃ ವರ್ಣಚಿತ್ರಕಾರರೂ ಆಗಿದ್ದುದರಿಂದ ಸ್ಮಾರಕಗಳ ಚಿತ್ರಣದಲ್ಲಿ ಪ್ರಮಾಣಬದ್ಧತೆ, ಹಿನ್ನೆಲೆ-ಮುನ್ನೆಲೆಗಳ ಸಂಯೋಜನೆ ಮೊದಲಾದ ಸೂಕ್ಷ್ಮ ಅಂಶಗಳ ನಿರ್ವಹಣೆ ಅವರಿಗೆ ರಕ್ತಗತವೇ ಆಗಿಬಿಟ್ಟಿತ್ತು. ಹೀಗೆ ಎದುರಿನಿಂದ ಈ ಚಿತ್ರಗಳನ್ನು ನೋಡಿದವರಿಗೆ ಅವನ್ನು ಮೂರು-ಆಯಾಮಗಳಲ್ಲಿ ನೋಡಿದ ಅನುಭವವಾಗುತ್ತಿತ್ತು.
ಮೊದಲಿಗೆ ಕಮಲೇಶ್ ರೇಖಾಚಿತ್ರಣಕ್ಕೆ ಆರಿಸಿಕೊಂಡವು ದೆಹಲಿಯ ಮತ್ತು ಆಸುಪಾಸಿನ ಪ್ರಾಂತಗಳಲ್ಲಿ ವಿಪುಲವಾಗಿರುವ ಸ್ಮಾರಕಗಳನ್ನು. ಅಲ್ಲಿಯ ಸ್ಮಾರಕಗಳಲ್ಲಿ ಕಮಲೇಶ್ ಚಿತ್ರಿಸದಿರುವವು ಇಲ್ಲವೆಂದೇ ಹೇಳಬಹುದು.
ಇಂತಹ ಸುಮಾರು ನೂರರಷ್ಟು ಚಿತ್ರಗಳ ಒಂದು ಪ್ರದರ್ಶನವನ್ನು ಕರ್ನಾಟಕ ಚಿತ್ರಕಲಾ ಪರಿಷತ್ 1981ರ ನಡುಭಾಗದಲ್ಲಿ ಏರ್ಪಡಿಸಿತು. ಆ ಪ್ರದರ್ಶನವನ್ನು ಉದ್ಘಾಟಿಸಿದವರು ಆಗಿನ ರಾಜ್ಯಪಾಲ ಗೋವಿಂದ ನಾರಾಯಣ್. ಆ ಪ್ರದರ್ಶನವು ಕಮಲೇಶ್ ಅವರ ಕಲಾಯಾತ್ರೆಯಲ್ಲಿ ಒಂದು ಮೈಲಿಗಲ್ಲು ಎನ್ನಬಹುದು.
ಅಲ್ಲಿಂದೀಚೆಗೆ ಬೆಂಗಳೂರಿನ ಹಾಗೂ ರಾಜ್ಯದ ಬೇರೆಡೆಗಳ ಪ್ರಮುಖ ಸ್ಮಾರಕಗಳನ್ನು ಕಮಲೇಶ್ ಚಿತ್ರಿಸುತ್ತಹೋದರು. ಹಲವಾರು ಪ್ರದರ್ಶನಗಳು ಆದವು.
ಕಮಲೇಶ್ ರಚಿಸಿದ ಬೆಂಗಳೂರಿನ ಹಾಗೂ ಇತರ ಸ್ಮಾರಕಗಳ ಚಿತ್ರಣಗಳು ಹಲವು ಪ್ರತಿಷ್ಠಿತ ‘ಟೇಬಲ್ ಟಾಪ್’ಗ್ರಂಥಗಳಲ್ಲಿ ಬಳಕೆಯಾಗಿ ಆ ಗ್ರಂಥಗಳನ್ನು ವಿಶಿಷ್ಟವಾಗಿಸಿದವು.
‘ಸಿಂಫೊನಿ ಇನ್ ಲೈನ್ಸ್’
ಕಮಲೇಶ್ ಅವರೊಡನೆ ಆನಂದವನ್ನು ಹಂಚಿಕೊಳ್ಳುವ ಕೊನೆಯ ಅವಕಾಶ ನನಗೆ ಪ್ರಾಪ್ತವಾದದ್ದು 2014ರ ಆರಂಭದಲ್ಲಿ ಚಿತ್ರಕಲಾ ಪರಿಷತ್ತಿನಲ್ಲಿ ಆಯೋಚಿತವಾಗಿದ್ದ ಅವರ ನಿರ್ಮಿತಿಗಳ ವಿಶಾಲ ಪ್ರದರ್ಶನ ಮತ್ತು ಅದರೊಡಗೂಡಿ ಅವರ ಆಯ್ದ ಚಿತ್ರಗಳ ಸಂಗ್ರಹವನ್ನೊಳಗೊಂಡ ‘ಸಿಂಫೊನಿ ಇನ್ ಲೈನ್ಸ್’ ಶೀರ್ಷಿಕೆಯ ಗ್ರಂಥದ ಲೋಕಾರ್ಪಣೆಯ ಸಂದರ್ಭದಲ್ಲಿ. ಅದು ಕಮಲೇಶ್ ಅವರ ದೀರ್ಘಕಾಲದ ಒಡನಾಡಿಗಳಾಗಿದ್ದ ನಮಗೆಲ್ಲ ತುಂಬಾ ಸಂಭ್ರಮದ ಸಂದರ್ಭವಾಯಿತು. ಅದೇ ನಮ್ಮ ಕಟ್ಟಕಡೆಯ ಭೇಟಿ ಆದದ್ದು ದೈವದುರ್ವಿಪಾಕ. ಆ ಸಮಾರಂಭವಾದ ಮೇಲೆ ಅವರು ಜೀವಿಸಿದ್ದುದು ನಾಲ್ಕೂವರೆ ತಿಂಗಳು ಮಾತ್ರ. (ನಿಧನ: 30 ಜೂನ್ 2014).
ಕಮಲೇಶ್ ಅವರಲ್ಲದೆ ಪತ್ನಿ ವಿಜಯಾ, ಪುತ್ರಿ ಲಾವಣ್ಯ, ಪುತ್ರ ಅರ್ಜುನ, ಕಮಲೇಶ್ ಅವರ ಸೋದರ ಲಘುಸಂಗೀತದಲ್ಲಿ ಹೆಸರು ಮಾಡಿರುವ ಕೆ.ಸಿ. ರಮೇಶ್ – ಎಲ್ಲರ ನಿರಂತರ ಪ್ರೀತಿ ದೊರೆತದ್ದು ನನ್ನ ಪಾಲಿಗೆ ಒಂದು ಮರೆಯಲಾಗದ ರಸಾನುಭವವಾಗಿ ಉಳಿದಿದೆ. ಎಂಬತ್ನಾಲ್ಕರ ಇಳಿವಯಸ್ಸಿನಲ್ಲಿ ಮನಸ್ಸಿಗೆ ಊರುಗೋಲುಗಳಾಗಬಲ್ಲವು ಇಂತಹ ನೆನಪುಗಳಲ್ಲದೆ ಬೇರೆ ಏನಿದ್ದಾವು?