ಸ್ವಾತಂತ್ರ್ಯೋತ್ತರ ಭಾರತದ ಬೌದ್ಧಿಕವಲಯದಲ್ಲಿ ನೈಜ ಭಾರತೀಯಪರಂಪರೆಯನ್ನೂ ಇತಿಹಾಸವನ್ನೂ ಸಂಸ್ಕೃತಿಯನ್ನೂ ಕುರಿತು ಮಾತನಾಡುವವರು ಪ್ರಮುಖವಾಗಿ ಎದುರಿಸಬೇಕಾಗಿ ಬಂದದ್ದು ಎರಡು ವರ್ಗದ ಜನರನ್ನು: ಭಾರತದ ಪ್ರಾಚೀನತೆ, ಜನಜೀವನ, ಸಂಸ್ಕೃತಿ, ನಾಗರಿಕತೆ ಇವೆಲ್ಲವುಗಳನ್ನು ಕುರಿತು ಅಲ್ಪಸ್ವಲ್ಪ ತಿಳಿದಿದ್ದೂ ಉದ್ದೇಶಪೂರ್ವಕವಾಗಿ ಭಾರತೀಯ ಅಸ್ಮಿತೆಯನ್ನು ಕಡೆಗಣಿಸಲು ಪ್ರಯತ್ನಿಸಿದ ಬ್ರಿಟಿಷ್ ಚಿಂತಕರು- ಲೇಖಕರದು ಮೊದಲನೆಯ ವರ್ಗವಾದರೆ; ಈ ಮೊದಲನೆಯ ವರ್ಗದ ಹುನ್ನಾರಗಳನ್ನೂ ದುರುದ್ದೇಶಗಳನ್ನೂ ಅರಿಯದೆ, ಕೇವಲ ಅವರ ಮಿಥ್ಯಾಪ್ರಚಾರಗಳನ್ನೇ ನಿಜವೆಂದು ನಂಬಿ ಇಲ್ಲಿನವರೊಂದಿಗೇ ಸಂಘರ್ಷಕ್ಕಿಳಿದವರದ್ದು ಎರಡನೆಯ ವರ್ಗ. ಕ್ರಮಕ್ರಮೇಣ ಮೊದಲನೆಯ ವರ್ಗದ ಅಪಪ್ರಚಾರಗಳಿಗೆ ಸೂಕ್ತ ಉತ್ತರವನ್ನು ಕೊಡುವಲ್ಲಿ ಭಾರತೀಯ ವಿದ್ವಾಂಸರು ಒಂದುಮಟ್ಟಿಗೆ ಸಫಲರಾದರೂ ಎರಡನೆಯ ವರ್ಗವನ್ನು ಎದುರಿಸುವುದು ಅಷ್ಟು ಸುಲಭದ್ದಾಗಿರಲಿಲ್ಲ.
ಏಕೆಂದರೆ ಈ ಗುಂಪಿನ ತಥಾಕಥಿತ ‘ವಿದ್ವಾಂಸರು’ ವಿವೇಚನೆಯಿಲ್ಲದ, ಅಧ್ಯಯನವಿಲ್ಲದ, ವಿದ್ವತ್ತಾಗಲಿ ಪ್ರತಿಭೆಯಾಗಲಿ ಸಂಶೋಧನಪ್ರವೃತ್ತಿಯಾಗಲಿ ಇಲ್ಲದ ಬಾಯಿಬಡುಕರು; ಅಷ್ಟೇ ಅಲ್ಲ, ಸದಾಕಾಲ ಆಡಳಿತದಲ್ಲಿರುವವರ ನೆರಳಿನಲ್ಲಿಯೇ ಇದ್ದುಕೊಂಡು ತಮ್ಮ ಪಿತೂರಿಗಳನ್ನು ಕಾರ್ಯಗತಗೊಳಿಸಿಕೊಳ್ಳುವ ಧೂರ್ತತೆಯನ್ನೂ ರೂಢಿಸಿಕೊಂಡವರು. ಇಂಥವರನ್ನು ಎದುರಿಸುವುದಕ್ಕೆ ಭಾರತೀಯ ಬೌದ್ಧಿಕ ಕ್ಷೇತ್ರದಲ್ಲಿ ಹೊಸದಾದ ಕ್ಷತ್ರಿಯಪಡೆಯೇ ತಯಾರಾಗಬೇಕಾಯಿತು. ಹಾಗೆ ರೂಪಗೊಂಡ ಬೌದ್ಧಿಕ ಕ್ಷತ್ರಿಯರ ಮೊದಲ ಸಾಲಿಗೆ ಸೇರಿದವರಲ್ಲಿ ಗಣ್ಯರು ಡಾ|| ನವರತ್ನ ಎಸ್. ರಾಜಾರಾಂ (22.09.1943-12.12.2019). ತಮ್ಮ ವ್ಯಾಪಕ ಅಧ್ಯಯನ, ಸಂಶೋಧನೆಗಳ ಮೂಲಕ ಭಾರತೀಯ ಬೌದ್ಧಿಕಕ್ಷೇತ್ರಕ್ಕೆ ರಾಜಾರಾಂ ಅವರು ನೀಡಿದ ಕೊಡುಗೆ ಅನುಪಮವಾದುದು.
ಕೌಟುಂಬಿಕ ಹಿನ್ನೆಲೆ
1943ರ ಸೆಪ್ಟೆಂಬರ್ 22ರಂದು ಮೈಸೂರಿನಲ್ಲಿ ಜನಿಸಿದ ರಾಜಾರಾಂ ಅವರದು ಶ್ರೀಮಂತ ವಾರಸಿಕೆ. ತಂದೆ ಲೆಫ್ಟಿನೆಂಟ್-ಕರ್ನಲ್ ಶ್ರೀನಿವಾಸರಾಯರು ‘ಬ್ರಿಟಿಷ್ ಇಂಡಿಯ’ ಸೇನೆಯಲ್ಲಿ ಸರ್ಜನ್ ಆಗಿದ್ದರು. ಅಜ್ಜ ನವರತ್ನ ರಾಮರಾಯರು ಮೈಸೂರು ಸಂಸ್ಥಾನದಲ್ಲಿ ಗಣ್ಯ ಅಧಿಕಾರಿಯಾಗಿದ್ದವರು; ದಿವಾನರಾಗಿದ್ದ ಸರ್ ಮಿರ್ಜಾ ಇಸ್ಮೆಯಿಲ್ ಅವರೊಂದಿಗೆ ಇಂಗ್ಲೆಂಡಿನಲ್ಲಿ ನಡೆದ ದುಂಡುಮೇಜಿನ ಸಭೆ(1932)ಯಲ್ಲಿ ಭಾಗವಹಿಸಿದ್ದವರು; ಸಾಹಿತ್ಯಕ ಕ್ಷೇತ್ರದಲ್ಲಿಯೂ ಆಸಕ್ತಿ ಹೊಂದಿದ್ದು ಮಾಸ್ತಿ ವೆಂಕಟೇಶ ಅಯ್ಯಂಗಾರ್ಯರ ಕೆಲವು ಬರಹಗಳನ್ನು ಇಂಗ್ಲಿಷ್ ಭಾಷೆಗೆ ಅನುವಾದಿಸಿದ್ದರು.
ರಾಜಾರಾಂ ಅವರ ತಾಯಿ ನಂದಾದೇವಿ, ರಾಮೋಹಳ್ಳಿ ವ್ಯಾಸರಾಯರ ಮಗಳು. ವ್ಯಾಸರಾಯರು ಪ್ರಸಿದ್ಧ ಭೂಗರ್ಭಶಾಸ್ತ್ರಜ್ಞರು, ಮೈಸೂರು ಸಂಸ್ಥಾನವೂ ಸೇರಿದಂತೆ ದೇಶದ ವಿವಿಧ ಭಾಗಗಳಲ್ಲಿ ಅವರು ‘ಜಿಯಾಲಜಿಸ್ಟ್’ ಆಗಿ ಕೆಲಸ ಮಾಡಿದವರು. ಕೊಲ್ಕತಾದಲ್ಲಿದ್ದಾಗ ಬಂಗಾಲಿ ಭಾಷೆಯನ್ನು ಕಲಿತು, ಬಂಕಿಮಚಂದ್ರ ಚಟ್ಟೋಪಾಧ್ಯಾಯರ ‘ಶ್ರೀಕೃಷ್ಣಚರಿತ್ರೆ’ಯೂ ಸೇರಿದಂತೆ ಅನೇಕ ಕೃತಿಗಳನ್ನು ಕನ್ನಡಕ್ಕೆ ಅನುವಾದಿಸಿದ್ದರು.
ಹೀಗೆ ತಂದೆ-ತಾಯಿ – ಎರಡೂ ಕಡೆಗಳಿಂದಲೂ ಬಳುವಳಿಯಾಗಿ ಬಂದ ಸಾಂಸ್ಕøತಿಕ-ಸಾಹಿತ್ಯಕ-ಬೌದ್ಧಿಕ ಶ್ರೀಮಂತಿಕೆ ರಾಜಾರಾಂ ಅವರದ್ದು.
ಶಿಕ್ಷಣ–ಅಧ್ಯಾಪನ–ಸಂಶೋಧನೆ
ರಾಜಾರಾಂ ಅವರ ಪ್ರಾರಂಭಿಕ-ಪ್ರಾಥಮಿಕ ಶಿಕ್ಷಣವೆಲ್ಲ ಮನೆಯಲ್ಲಿಯೇ ನಡೆಯಿತು. ಹತ್ತನೇ ವಯಸ್ಸಿನವರೆಗೂ ಅಧ್ಯಾಪಕರೊಬ್ಬರು ಖಾಸಗಿಯಾಗಿ ಮನೆಗೇ ಬಂದು ಪಾಠಮಾಡುತ್ತಿದ್ದರು. ಅನಂತರ ಪ್ರೌಢಶಾಲಾಭ್ಯಾಸ ಮತ್ತು ಪದವಿಪೂರ್ವ ಶಿಕ್ಷಣ ಬೆಂಗಳೂರಿನ ನ್ಯಾಷನಲ್ ಹೈಸ್ಕೂಲ್ನಲ್ಲಿ ನಡೆಯಿತು. ಬೆಂಗಳೂರಿನ ಬಿ.ಎಂ.ಎಸ್. ಇಂಜಿನಿಯರಿಂಗ್ ಕಾಲೇಜಿನಲ್ಲಿ ‘ಎಲೆಕ್ಟ್ರಿಕಲ್ ಇಂಜಿನಿಯರಿಂಗ್’ ವಿಷಯದಲ್ಲಿ ಪದವಿ ಪಡೆದು ಮುಂಬಯಿಯ ಟಾಟಾ ಪವರ್ ಕಂಪೆನಿಯಲ್ಲಿ ಕೆಲಸಕ್ಕೆ ಸೇರಿದರು. ಈ ಅವಧಿಯಲ್ಲಿ, ಪುಣೆಯ ಸುತ್ತಮುತ್ತಲಿನ ಹಳ್ಳಿಗಳಲ್ಲಿ ಕೃಷಿಕರಿಗಾಗಿ ವಿದ್ಯುಚ್ಛಕ್ತಿ-ಆಧಾರಿತ ನೀರಾವರಿ ಯೋಜನೆಗಳನ್ನು ಕಾರ್ಯಗತಗೊಳಿಸುವ ವಿದ್ಯುಚ್ಛಕ್ತಿ ಪೂರೈಕೆ ಕೇಂದ್ರವೊಂದರ ನಿಯಂತ್ರಣಕೋಷ್ಠದಲ್ಲಿ ಕಾರ್ಯನಿರ್ವಹಿಸಿ ಅವರು ಗಳಿಸಿದ ಅನುಭವ ದಶಕಗಳ ನಂತರ ವಿಶ್ವದ ಪ್ರತಿಷ್ಠಿತ ಸಂಸ್ಥೆ NASAದಲ್ಲಿ ಕೆಲಸಮಾಡುವಾಗ ಅತ್ಯಂತ ಪ್ರಯೋಜನಕಾರಿಯಾಯಿತು.
ಟಾಟಾ ಪವರ್ ಕಂಪೆನಿಗೆ ಸೇರಿ ಐದುವರ್ಷಗಳಾಗುವಷ್ಟರಲ್ಲಿ ರಾಜಾರಾಂ ಕೆಲಸಕ್ಕೆ ರಾಜೀನಾಮೆ ನೀಡಿದರು; ಬಾಲ್ಯದಿಂದಲೂ ಅಚ್ಚುಮೆಚ್ಚಿನ ವಿಷಯಗಳಾಗಿದ್ದ ಗಣಿತ ಮತ್ತು ವಿಜ್ಞಾನಗಳಲ್ಲಿ ಉನ್ನತ ಶಿಕ್ಷಣ ಪಡೆಯುವುದಕ್ಕಾಗಿ ಅಮೆರಿಕೆಗೆ ತೆರಳಿದರು. ಆರು ವರ್ಷಗಳ ಸತತ ಅಧ್ಯಯನ-ಸಂಶೋಧನೆಗಳ ಫಲಿತವಾಗಿ,
1976ರಲ್ಲಿ ಬ್ಲೂಮಿಂಗ್ಟನ್ನಿನ ಇಂಡಿಯಾನಾ ವಿಶ್ವವಿದ್ಯಾಲಯದಿಂದ ಪಿಎಚ್.ಡಿ. ಪದವಿ ಪಡೆದರು. ಈ ಅವಧಿಯಲ್ಲಿ ಅವರು ‘ಸಂಭವನೀಯತಾ ತತ್ತ್ವ’ (Probability
Theory) ಮತ್ತು ‘ಗಣಿತೀಯ ಭೌತಶಾಸ್ತ್ರ’ (Mathematical
Physics) ಕ್ಷೇತ್ರಗಳಲ್ಲಿ ವಿಶೇಷ ತಜ್ಞತೆಯನ್ನು ಸಂಪಾದಿಸಿದ್ದರು. ಮುಂದೆ ನಾಲ್ಕು ವರ್ಷಗಳ ಕಾಲ ಓಹೈಯೊನಲ್ಲಿಯ ‘ಕೆಂಟ್ ಸ್ಟೇಟ್ ಯೂನಿವರ್ಸಿಟಿ’ಯಲ್ಲಿ ಗಣಿತ ಮತ್ತು ಕಂಪ್ಯೂಟರ್ ಸೈನ್ಸ್ ವಿಷಯಗಳನ್ನು ಪಾಠಮಾಡಿದರು. ಅಷ್ಟರಲ್ಲಿ ಸಂಶೋಧನಕ್ಷೇತ್ರ ಅವರನ್ನು ಕೈಬೀಸಿ ಕರೆಯಿತು.
1980ರಲ್ಲಿ ಅಧ್ಯಾಪಕ ವೃತ್ತಿಯನ್ನು ತೊರೆದ ರಾಜಾರಾಂ, ಪ್ರತಿಷ್ಠಿತ ಕಂಪೆನಿ ಲಾಕ್ಹೀಡ್ ಕಾಪೆರ್Çರೇಷನ್ (ಇಂದಿನ ಲಾಕ್ಹೀಡ್-ಮಾರ್ಟಿನ್)ನಲ್ಲಿ ಪ್ರಮುಖ ಸಂಶೋಧಕರಾಗಿ ನಿಯುಕ್ತಿಗೊಂಡರು. ಜಗತ್ತಿನ ವಿವಿಧ ಪ್ರದೇಶಗಳ ಕೃಷಿಸಂಪನ್ಮೂಲಗಳ ಮೌಲ್ಯಮಾಪನದ ಉದ್ದೇಶದಿಂದ NASA ಅದಾಗಲೆ ಅಂತರಿಕ್ಷಕ್ಕೆ ಕಳುಹಿಸಿದ್ದ Landsat ಉಪಗ್ರಹದಿಂದ ಬರುತ್ತಿದ್ದ ಚಿತ್ರಗಳನ್ನು ವಿಶ್ಲೇಷಣೆಗೊಳಪಡಿಸುವುದು ರಾಜಾರಾಂ ಅವರ ಸಂಶೋಧನಾ ವಿಭಾಗದ ಪ್ರಮುಖ ಕಾರ್ಯವಾಗಿತ್ತು. ಕೆಲವೇ ದಿನಗಳಲ್ಲಿ, ಈ ಪ್ರಕ್ರಿಯೆಯಲ್ಲಿನ ನ್ಯೂನತೆಗಳನ್ನೂ ಕೊರತೆಗಳನ್ನೂ ಕಂಡುಕೊಂಡ ರಾಜಾರಾಂ ‘ಕೃತಕ ಬುದ್ಧಿಮತ್ತೆ’ಯನ್ನು ಅಭಿವೃದ್ಧಿಪಡಿಸಬೇಕಾದ ಅಗತ್ಯವನ್ನು ಪ್ರತಿಪಾದಿಸಿ, ಲಾಕ್ಹೀಡ್ ಕಾರ್ಪೋರೇಶನ್ನಿನಲ್ಲಿಯ ಉದ್ಯೋಗಕ್ಕೆ ರಾಜೀನಾಮೆ ನೀಡಿ, ತಮ್ಮದೇ ಆದ ಸ್ವತಂತ್ರ ಸಂಶೋಧನಸಂಸ್ಥೆಯನ್ನು ಪ್ರಾರಂಭಿಸಿದರು; ಹೂಸ್ಟನ್ ವಿಶ್ವವಿದ್ಯಾಲಯದಲ್ಲಿ ಸಹಾಯಕ ಪ್ರಾಧ್ಯಾಪಕರಾಗಿ, ಅಧ್ಯಾಪನಕ್ಷೇತ್ರಕ್ಕೂ ಮರಳಿದರು. ಆ ಸಂದರ್ಭದಲ್ಲಿ ರಾಜಾರಾಂ ಓಂSಂ ಮತ್ತು ಲಾಕ್ಹೀಡ್ ಕಾರ್ಪೋರೇಶನ್ಗಳ ಜತೆಗೂಡಿ ‘ರೊಬೊಟಿಕ್ಸ್ ಮತ್ತು ಎಕ್ಸ್ಪ್ರ್ಟ್ ಸಿಸ್ಟೆಮ್ಸ್’ ಕುರಿತು ಹಲವು ಕಾರ್ಯಾಗಾರಗಳನ್ನೂ ವಿಚಾರಸಂಕಿರಣಗಳನ್ನೂ ನಡೆಸಿದರು.
‘ಕೃತಕ ಬುದ್ಧಿಮತ್ತೆ’ ಕ್ಷೇತ್ರದಲ್ಲಿಯ ಸಂಶೋಧನೆಗಳ ಮುಂದುವರಿದ ಭಾಗವಾಗಿ ರಾಜಾರಾಂ ಕೈಗಾರಿಕೆಗಳಲ್ಲಿಯ ಯಾಂತ್ರೀಕರಣಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ಪರಿಹರಿಸುವ ಕಡೆಗೆ ಗಮನ ಹರಿಸಿದರು. Computer Aided Design (CAD) ªÀÄvÀÄÛ Computer Aided Manufacturing (CAM)ಗಳನ್ನು ಸುಧಾರಿಸುವ ನಿಟ್ಟಿನಲ್ಲಿ ಶ್ರಮಿಸಿದರು. ಕೈಗಾರಿಕಾ ರೊಬೊಟ್ಗಳ ಕಾರ್ಯನಿರ್ವಹಣೆಯನ್ನು AI ಆಧಾರಿತವಾಗಿ ಸರಳೀಕರಿಸಿದರು; ತತ್ಸಂಬಂಧಿತ ತಾಂತ್ರಿಕತೆಯನ್ನೂ ಅಭಿವೃದ್ಧಿಪಡಿಸಿದರು.
ಇವೆಲ್ಲವುಗಳ ಜೊತೆಗೆ ರಾಜಾರಾಂ ಅವರಿಗೆ ವ್ಯಾಪಕ ಪ್ರಸಿದ್ಧಿಯನ್ನು ತಂದುಕೊಟ್ಟ ಇನ್ನೊಂದು ಸಂಶೋಧನೆಯೆಂದರೆ Artificial Neural Network ಕುರಿತಾದದ್ದು. ಇನ್ನೂ ಶೈಶವಾವಸ್ಥೆಯಲ್ಲಿದ್ದ ಈ ಕ್ಷೇತ್ರದಲ್ಲಿ ಕೆಲಸಮಾಡುವುದು ಸುಲಭದ್ದೇನಾಗಿರಲಿಲ್ಲ; ರಾಜಾರಾಂ ಅದನ್ನೊಂದು ಸವಾಲಾಗಿ ಸ್ವೀಕರಿಸಿ, ‘ಒಂದು ಸೂತ್ರದಲ್ಲಿ ಸಂಪರ್ಕಿಸಲ್ಪಟ್ಟ ಖಾಸಗಿ ಕಂಪ್ಯೂಟರ್ಗಳ ಮೂಲಕ, AI ವಿಧಾನಗಳನ್ನು ಬಳಸಿಕೊಂಡು, ಗಣಿತ ಸಂಬಂಧಿತ ವಿಷಯಗಳನ್ನು ಕಲಿಸುವ’ ನೂತನ ವ್ಯವಸ್ಥೆಯನ್ನು ರೂಪಿಸಿದರು.
ತಾಯ್ನೆಲದ ಸೆಳೆತ
ತಮ್ಮ ವೃತ್ತಿಕ್ಷೇತ್ರದಲ್ಲಿ ಸಾಧನೆಯ ಶಿಖರ ಏರಿದ್ದ ರಾಜಾರಾಂ ಅವರನ್ನು ತಾಯ್ನೆಲ ಬಹುವಾಗಿ ಸೆಳೆಯಿತು; ಭಾರತವನ್ನು ಕುರಿತು ಪ್ರಪಂಚದಾದ್ಯಂತ ಚರ್ಚೆಯಲ್ಲಿದ್ದ ಕೆಲವು ಐತಿಹಾಸಿಕ ಸಂಗತಿಗಳ ಮೂಲಚೂಲಗಳನ್ನು ಹುಡುಕಿ ಪರಿಶೋಧಿಸುವ ತುಡಿತ ತೀವ್ರವಾಯಿತು. ರಾಜಾರಾಂ ಧೃತಿಗೆಡಲಿಲ್ಲ; ಯಾವುದೇ ಅಳುಕು-ಅಂಜಿಕೆಗಳಿಲ್ಲದೆ, ಇತಿಹಾಸ ಸಂಶೋಧನೆಯ ಕ್ಷೇತ್ರಕ್ಕೆ ಧುಮುಕಿದರು. ಈ ಆಸಕ್ತಿಯಾದರೋ ಅವರಲ್ಲಿ ಹಿಂದಿನಿಂದ ಇದ್ದದ್ದೇ. 1992ರಲ್ಲಿ ಭಾರತಕ್ಕೆ ಮರಳಿದವರೇ ‘ಆರ್ಯ ಆಕ್ರಮಣ’ ಎಂಬ ಕಟ್ಟುಕಥೆಯ ಬೆನ್ನುಬಿದ್ದರು. ಇದೇ ವಿಷಯವಾಗಿ ಸಂಶೋಧನೆಯಲ್ಲಿ ತೊಡಗಿದ್ದ ಅಮೆರಿಕದ ವೇದವಿದ್ವಾಂಸ ಡೇವಿಡ್ ಫ್ರಾಲೀಯವರೊಂದಿಗೆ ಸೇರಿ, ಮೂರೇ ವರ್ಷಗಳಲ್ಲಿ,
Vedic Aryans and the Origins of Civilization ಎಂಬ ಉದ್ಘ ಸಂಶೋಧನಕೃತಿಯನ್ನು ಪ್ರಕಟಿಸಿದರು. ಏಕಕಾಲದಲ್ಲಿ ಅಮೆರಿಕದಲ್ಲೂ ಭಾರತದಲ್ಲೂ ಪ್ರಕಾಶಗೊಂಡ ಈ ಕೃತಿ, ವಸಾಹತುಶಾಹಿ ಕಾಲದಲ್ಲಿ ಪ್ರಯತ್ನಪೂರ್ವಕವಾಗಿ ಕಟ್ಟಿದ್ದ ಆರ್ಯ ಆಕ್ರಮಣವಾದದ ಹುಸಿ-ಸೌಧವನ್ನು ಬುಡಮಟ್ಟ ಉಚ್ಚಾಟಿಸಿತು. ಜಗತ್ತಿನಾದ್ಯಂತ ಹಲವು ವಿಚಾರಸಂಕಿರಣಗಳಿಗೆ, ಕಾರ್ಯಾಗಾರಗಳಿಗೆ, ಗೋಷ್ಠಿಗಳಿಗೆ ಮೂಲ ಆಕರವಾಯಿತು.
‘ಆರ್ಯ ಆಕ್ರಮಣ’ ವಾದವನ್ನು ಸಾಧಾರವಾಗಿ ನಿರಸ್ತಗೊಳಿಸಿದ ರಾಜಾರಾಂ, ಅನಂತರ ಸಿಂಧೂ ಲಿಪಿಭೇದನ ಕಾರ್ಯಕ್ಕೆ ಕೈಹಾಕಿದರು. ಪ್ರಸಿದ್ಧ ವೈದಿಕ ವಿದ್ವಾಂಸರೂ ಪ್ರಾಚೀನ ಲಿಪಿಶಾಸ್ತ್ರಜ್ಞರೂ ಆಗಿದ್ದ ನಟವರ್ ಝಾ ಅವರೊಂದಿಗೆ ಸೇರಿ ಸಿಂಧೂ ಲಿಪಿಯನ್ನು ಕುರಿತು ಸಂಶೋಧನೆಗಳನ್ನು ನಡೆಸಿದ ರಾಜಾರಾಂ, ಅಂತಿಮವಾಗಿ ‘The Deciphered Indus Script: Methodology, Readings, Interpretation’ ಎಂಬ ಶೋಧಕೃತಿಯನ್ನು ಪ್ರಕಟಿಸಿದರು. ರಾಜಾರಾಂ ಅವರ ಮಂಡನೆಯಲ್ಲಿಯ ಖಚಿತತೆಯನ್ನೂ, ಮಿಥ್ಯಾಪ್ರಚಾರಗಳನ್ನು ಖಂಡಿಸುವಲ್ಲಿನ ಹರಿತತೆಯನ್ನೂ ಪರಿಚಯಿಸಿದ ಈ ಕೃತಿ ಹಲವು ಸಾಕ್ಷ್ಯಗಳ ಮೂಲಕ – ಭಾಷಾಶಾಸ್ತ್ರ, ಲಿಪಿಶಾಸ್ತ್ರಗಳ ಆಧಾರದಲ್ಲಿಯೂ – ಹರಪ್ಪನ್ನರದು ವೈದಿಕಸಂಸ್ಕೃತಿಯೇ ಎಂಬುದನ್ನು ನಿರ್ವಿವಾದವಾಗಿ ಸಿದ್ಧಪಡಿಸಿತು.
ಜಾಗತಿಕ ಸ್ತರದ ಲೇಖಕ
ಈ ಎರಡೂ ಕೃತಿಗಳು ರಾಜಾರಾಂ ಅವರನ್ನು ಇತಿಹಾಸಕ್ಷೇತ್ರದ ಮಹತ್ತ್ವದ ಲೇಖಕರನ್ನಾಗಿ ಜಗತ್ತಿಗೆ ಪರಿಚಯಿಸಿದವು; ಜಗತ್ತಿನ ಅನ್ಯಾನ್ಯ ಪ್ರಕಾಶನಸಂಸ್ಥೆಗಳು ರಾಜಾರಾಂ ಅವರ ಬರಹಗಳ ಪ್ರಕಟಣೆಗೆ ಮುಂದೆಬಂದವು. ಭಾರತದಲ್ಲಂತೂ ಮಧ್ಯಯುಗೀನ ಇತಿಹಾಸಕ್ಕೆ ಸಂಬಂಧಿಸಿದಂತೆ ಮಹತ್ತ್ವದ ಸಂಶೋಧನೆ-ಗ್ರಂಥಪ್ರಕಟಣೆಗಳನ್ನು ನಡೆಸಿದ್ದ ರಾಮ್ಸ್ವರೂಪ್ ಮತ್ತು ಸೀತಾರಾಂ ಗೋಯೆಲ್ರಿಂದ ಪ್ರವರ್ತಿತ ಪ್ರಕಾಶನ ಸಂಸ್ಥೆ ‘ವಾಯ್ಸ್ ಆಫ್ ಇಂಡಿಯಾ’ ರಾಜಾರಾಂ ಅವರ ‘ದಿ ಪಾಲಿಟಿಕ್ಸ್ ಆಫ್ ಹಿಸ್ಟರಿ’ ಮತ್ತು ‘ಪ್ರೋಫೈಲ್ಸ್ ಇನ್ ಡಿಸೆಪ್ಷನ್’ ಕೃತಿಗಳನ್ನು ಪ್ರಕಟಿಸಿತು; ಲಂಡನ್ನಿನ ಮಿನರ್ವಾ ಪ್ರೆಸ್ ‘ಡೆಡ್ ಸೀ ಸ್ಕ್ರಾಲ್ಸ್ ಆ್ಯಂಡ್ ದಿ ಕ್ರೈಸಿಸ್ ಆಫ್ ಕ್ರಿಶ್ಚಿಯಾನಿಟಿ’ ಕೃತಿಯನ್ನು ಪ್ರಕಟಿಸಿತು.
ಸರಸ್ವತಿ ನದಿಯ ಮೂಲ, ಹರಿವು, ಪ್ರಭಾವಗಳನ್ನು ಕುರಿತ ‘ಸರಸ್ವತಿ – ರಿವರ್ ಆ್ಯಂಡ್ ದಿ ವೇದಿಕ್ ಸಿವಿಲೈಜೇಷನ್’; ಖಿಲಾಫತ್ ಆಂದೋಲನದೊಂದಿಗೆ ಸೇರಿ ಕಾಂಗ್ರೆಸ್ ಎಸಗಿದ ಐತಿಹಾಸಿಕ ಪ್ರಮಾದಗಳನ್ನು ಕುರಿತ ‘ಗಾಂಧಿ, ಖಿಲಾಫತ್ ಆ್ಯಂಡ್ ನ್ಯಾಷನಲ್ ಮೂವ್ಮೆಂಟ್’; ಭಾರತೀಯ ಸಂಸ್ಕøತಿ-ನಾಗರಿಕತೆಗಳನ್ನು ಕುರಿತು ಐತಿಹಾಸಿಕ ತಥ್ಯಗಳನ್ನು ತೆರೆದಿಡುವ ‘ಫ್ರಂ ಹರಪ್ಪ ಟು ಅಯೋಧ್ಯಾ’, ‘ಸೆಕ್ಯುಲರಿಸ್ಮ್: ದಿ ನ್ಯೂ ಮಾಸ್ಕ್ ಆಫ್ ಫಂಡಮೆಂಟಲಿಸ್ಮ್’ – ಮೊದಲಾದ ಕೃತಿಗಳು ರಾಜಾರಾಂ ಅವರ ವೈಚಾರಿಕ ಪ್ರಖರತೆಯನ್ನೂ ಸತ್ಯವನ್ನು ನಿರ್ಭಿಡೆಯಾಗಿ ಗಟ್ಟಿಯಾಗಿ ಹೇಳುವ ಕ್ಷಾತ್ರವನ್ನೂ ಅನುಭವಕ್ಕೆ ತರುತ್ತವೆ.
1950ರ ದಶಕದಲ್ಲಿ ತಮ್ಮ ತಾತ-ತಾಯಿಯ ತಂದೆ-ರಾಮೋಹಳ್ಳಿ ವ್ಯಾಸರಾಯರು ಬಂಗಾಲಿಯಿಂದ ಅನುವಾದಿಸಿದ್ದ ‘ಶ್ರೀಕೃಷ್ಣಚರಿತ್ರೆ’ಯನ್ನು ಆಧರಿಸಿದ ‘Search for the Historical Krishna’ ಮತ್ತು ತಮ್ಮ ಇನ್ನೋರ್ವ ತಾತ-ತಂದೆಯ ತಂದೆ-ನವರತ್ನ ರಾಮರಾಯರ ‘ಕೆಲವು ನೆನಪುಗಳು’ಕೃತಿಯ ಇಂಗ್ಲಿಷ್ ಅನುವಾದ (ಸೋದರಿ ರಾಜೇಶ್ವರಿ ರಾವ್ ಅವರೊಂದಿಗೆ) Vanished Raj – ಇವು ರಾಜಾರಾಂ ಅವರ ಸರ್ಜನಶೀಲತೆಗೆ ಮತ್ತಷ್ಟು ಸಾಕ್ಷಿಗಳಾಗಿವೆ.
ಅನೇಕ ವರ್ಷಗಳ ವಿದೇಶವಾಸ, ತಾಂತ್ರಿಕ-ವೈಜ್ಞಾನಿಕ ಕ್ಷೇತ್ರದಲ್ಲಿನ ಕೆಲಸ, ಜಾಗತಿಕಸ್ತರದ ಸಂಶೋಧನೆ-ಸಂಪರ್ಕ – ಇವೆಲ್ಲವುಗಳ ನಡುವೆಯೂ ರಾಜಾರಾಂ ಕನ್ನಡವನ್ನು ಮರೆತವರಲ್ಲ. ಸಂಸ್ಕೃತ, ಪ್ರಾಕೃತ, ಇಂಗ್ಲಿಷ್, ಫ್ರೆಂಚ್, ಜರ್ಮನ್, ಸ್ಪಾನಿಷ್ – ಹೀಗೆ ಹಲವು ಭಾಷೆಗಳಲ್ಲಿ ಪ್ರಭುತ್ವ ಹೊಂದಿದ್ದ ರಾಜಾರಾಂ ‘ಕನ್ನಡತನ’ವನ್ನೂ ಜತನವಾಗಿ ಕಾಪಿಟ್ಟುಕೊಂಡಿದ್ದರು. ಕೊನೆಯವರೆಗೂ ಕನ್ನಡದಲ್ಲಿ ಬರೆಯುವ, ಓದುವ, ವ್ಯವಹರಿಸುವ ಅಭ್ಯಾಸವಿಟ್ಟುಕೊಂಡಿದ್ದ ರಾಜಾರಾಂ 2010ರಷ್ಟು ಈಚೆಗೂ ಸಂಯಕ್ತ ಕರ್ನಾಟಕ ಪತ್ರಿಕೆಗೆ ವರ್ಷಪೂರ್ತಿ ವಿಜ್ಞಾನ ವಿಷಯವಾಗಿ ಕನ್ನಡದಲ್ಲಿಯೇ ಅಂಕಣ ಬರೆದರು. ಅಸೀಮಾ, ಉತ್ಥಾನ, ಕರ್ಮವೀರ ಸೇರಿದಂತೆ ಕನ್ನಡದ ಹಲವು ಪತ್ರಿಕೆ, ನಿಯತಕಾಲಿಕೆಗಳಿಗೆ ರಾಜಾರಾಂ ಅವರ ಕನ್ನಡ ಬರವಣಿಗೆಯ ಲಾಭ ನಿರಂತರವಾಗಿ ಸಂದಿದೆ.
ಸಹೃದಯ–ಸ್ನೇಹಶೀಲ
ವಿಜ್ಞಾನ, ಗಣಿತ, ಇತಿಹಾಸ ಸಂಶೋಧನೆಗಳಷ್ಟೇ ಅಲ್ಲದೆ ಪ್ರವಾಸ, ಫೋಟಾಗ್ರಫಿ, ಸಮಾಜಜಾಗೃತಿಯ ಚಟುವಟಿಕೆಗಳು, ಸೋಲಾರ್ ತಂತ್ರಜ್ಞಾನ, ನೀರಿನ ನಿರ್ವಹಣೆ, ಮಾಧ್ಯಮಕ್ಷೇತ್ರ – ಹೀಗೆ ಹಲವು ಮುಖಗಳಲ್ಲಿ ಕ್ರಿಯಾಶೀಲರಾಗಿದ್ದ ರಾಜಾರಾಂ ಓರ್ವ ಭಾವಜೀವಿ, ಸಹೃದಯ. ತಮ್ಮ ಸುತ್ತಮುತ್ತಲಿನ ಸಣ್ಣಪುಟ್ಟ ಸಂಗತಿಗಳಿಂದ ಹಿಡಿದು ರಾಷ್ಟ್ರ-ಅಂತರರಾಷ್ಟ್ರೀಯ ಆಗುಹೋಗುಗಳಿಗೂ ಅವರು ಸ್ಪಂದಿಸುತ್ತಿದ್ದ ರೀತಿ ಅನೂಹ್ಯವಾದದ್ದು. ಅರಾಷ್ಟ್ರೀಯ ಚಿಂತನೆಗಳಿಗೆ ಪ್ರೋತ್ಸಾಹ ನೀಡುವ ರಾಜಕಾರಣಿಗಳನ್ನೂ ‘ಬುದ್ಧಿಜೀವಿ’ಗಳನ್ನೂ ಕುರಿತು ರಾಜಾರಾಂ ಕಿಡಿಕಿಡಿಯಾಗುತ್ತಿದ್ದರು. ಕ್ರೈಸ್ತ, ಇಸ್ಲಾಂ, ಕಮ್ಯೂನಿಸ್ಟ್ ವಲಯಗಳ ರಾಷ್ಟ್ರವಿರೋಧಿ ಚಟುವಟಿಕೆಗಳನ್ನು ಕುರಿತ ರಾಜಾರಾಂ ಅವರ ವಿರೋಧ-ಪ್ರತಿಭಟನೆ ಕೇವಲ ವೈಚಾರಿಕ ಮಟ್ಟದ್ದಾಗಿರಲಿಲ್ಲ; ಅದಮ್ಯ ಭಾರತಪ್ರೀತಿ ಅವರ ಮಾತು-ಕೃತಿಗಳಲ್ಲಿ ತುಂಬಿತುಳುಕುತ್ತಿತ್ತು.
ರಾಜಾರಾಂ ಅವರ ಪರಿಚಯವಲಯ ವಿಸ್ತಾರವಾದದ್ದು. ಒಮ್ಮೆ ಪರಿಚಯವಾದವರೊಂದಿಗೆ ತಾವಾಗಿಯೇ ಮಾತಿಗಿಳಿಯುತ್ತಿದ್ದ ಪೂರ್ವಭಾಷಿ ಅವರಾಗಿದ್ದರು. ವಯಸ್ಸು, ವೃತ್ತಿ, ಜಾತಿ, ಗೋತ್ರಗಳ ಹಂಗಿಲ್ಲದೆ, ಎಲ್ಲರೊಂದಿಗೆ ಸಮಾನವಾಗಿ ಬೆರೆಯುತ್ತಿದ್ದವರು ಅವರು. ರಾಷ್ಟ್ರೋತ್ಥಾನ ಪರಿಷತ್ತಿನೊಂದಿಗೆ ಮೂರು ದಶಕಗಳ ಒಡನಾಟ ಅವರದಾಗಿತ್ತು. ರಾಷ್ಟ್ರೋತ್ಥಾನ ಸಾಹಿತ್ಯದ ಗೌರವ ಪ್ರಧಾನ ಸಂಪಾದಕರಾದ ಎಸ್.ಆರ್. ರಾಮಸ್ವಾಮಿಯವರೊಂದಿಗೆ ನಿರಂತರ ಒಡನಾಟ ಹೊಂದಿದ್ದ ಅವರು ಪ್ರತಿ ಶನಿವಾರ ರಾಷ್ಟ್ರೋತ್ಥಾನ ಸಾಹಿತ್ಯದ ಕಾರ್ಯಾಲಯಕ್ಕೆ ಆಗಮಿಸುತ್ತಿದ್ದರು. ಪ್ರವಾಸ, ಅನಾರೋಗ್ಯದಂಥ ಅನಿವಾರ್ಯ ಕಾರಣಗಳನ್ನು ಹೊರತುಪಡಿಸಿ, ಎರಡು ದಶಕಗಳಷ್ಟು ದೀರ್ಘಕಾಲ ಈ ‘ಸಾಪ್ತಾಹಿಕ ಮಿಲನ’ನಡೆಯಿತು. ಈಗ್ಗೆ ಎರಡು-ಮೂರು ವರ್ಷಗಳ ಹಿಂದೆ ಅನ್ಯಾನ್ಯ ಕಾರಣಗಳಿಂದ ತಮ್ಮ ವಸತಿಯನ್ನು ಬೆಂಗಳೂರಿನ ಹೊರವಲಯಕ್ಕೆ ಬದಲಾಯಿಸಿದ ಮೇಲೂ – ರಾಜಾರಾಂ ಮೂವತ್ತು ಮೈಲುಗಳಷ್ಟು ದೂರದಿಂದ ಅನೇಕ ಬಾರಿ ಬಂದಿದ್ದರು. ಕೊನೆಕೊನೆಗೆ, ವಯಃಸಹಜ ನಿಶ್ಶಕ್ತಿಯಿಂದಾಗಿ ಪ್ರಯಾಣ ಸಾಧ್ಯವಿಲ್ಲವಾದಾಗ, ಪ್ರತಿ ಶನಿವಾರವೂ ತಪ್ಪದೆ ದೂರವಾಣಿಯಲ್ಲಿ ಸಂಪರ್ಕಿಸಿ, ಕುಶಲೋಪರಿ ವಿಚಾರಿಸುತ್ತಿದ್ದರು.
ಮಿಥಿಕ್ ಸೊಸೈಟಿ ಸಂಸ್ಥೆಯೊಡನೆ ಮೂರು ದಶಕಗಳ ಕಾಲ ಅವರ ನಿಕಟ ಸಂಬಂಧವೂ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುವಿಕೆಯೂ ಇದ್ದಿತು.
ಕೆಲವರೊಂದಿಗೆ ಪ್ರತಿವಾರದ ಭೇಟಿ, ಇನ್ನು ಹಲವರೊಂದಿಗೆ ದಿನಕ್ಕೊಮ್ಮೆ, ಎರಡು ದಿನಕ್ಕೊಮ್ಮೆ, ವಾರಕ್ಕೊಮ್ಮೆ ದೂರವಾಣಿಯಲ್ಲಿ ಮಾತುಕತೆ – ಇದನ್ನು ರಾಜಾರಾಂ ಅವರು ದಶಕಗಳ ಕಾಲ ವ್ರತದಂತೆ ನಡೆಸಿದರು.
ಋಣಮುಕ್ತ ಲೌಕಿಕ
ಅಪಾರ ಸಂಪಾದನೆ, ಜಾಗತಿಕ ಮಟ್ಟದಲ್ಲಿ ಪ್ರಸಿದ್ಧಿ ಗಳಿಸಿದ್ದರೂ ರಾಜಾರಾಂ ಬದುಕಿದ್ದು ಶ್ರೀಸಾಮಾನ್ಯನಂತೆ. ಎಂದೂ ಐಶಾರಾಮದ ಜೀವನಕ್ಕೆ ಬಲಿಬೀಳದ ರಾಜಾರಾಂ ತಮ್ಮೆಲ್ಲ ಚಟುವಟಿಕೆಗಳನ್ನೂ ಕರ್ತವ್ಯಪ್ರಜ್ಞೆಯಿಂದಲೇ ನಡೆಸಿದರು; ಯಾವುದಕ್ಕೂ ಪ್ರತಿಫಲವನ್ನು ಅಪೇಕ್ಷಿಸಲಿಲ್ಲ.
ಮನೆಗೆಲಸದಲ್ಲಿ ಸಹಾಯಕಿಯಾಗಿದ್ದುಕೊಂಡು, ತಮ್ಮ ತಂದೆ-ತಾಯಿಯರ ಸೇವೆ ಮಾಡಿದ ಹೆಣ್ಣುಮಗಳನ್ನು ರಾಜಾರಾಂ ತಮ್ಮ ಒಡಹುಟ್ಟಿದವಳು ಎಂಬಂತೆ ನೋಡಿಕೊಂಡರು; ಕೃತಜ್ಞತಾಸಮರ್ಪಣೆಯ ಸಂಕೇತವಾಗಿ, ತಮ್ಮ ಸ್ವಂತಮನೆಯನ್ನು ಆಕೆಯ ಹೆಸರಿಗೇ ಉಯಿಲು ಮಾಡಿದರು. ತಮ್ಮ ಓಡಾಟಗಳಿಗೆ, ಚಟುವಟಿಕೆಗಳಿಗೆ ಸಹಾಯಕನಾಗಿದ್ದ ಆಕೆಯ ಮಗನಿಗೆ ತಾವೇ ಮುಂದೆ ನಿಂತು ಮದುವೆ ಮಾಡಿಸಿದರು; ಆತನ ಜೀವನೋಪಾಯಕ್ಕಾಗಿ ಎಲ್ಲ ರೀತಿಯ ಸೌಕರ್ಯಗಳನ್ನೂ ಒದಗಿಸಿಕೊಟ್ಟರು; ಆತನಿಗಾಗಿ ದಿನಸಿ-ದಿನಬಳಕೆಯ ವಸ್ತುಗಳ ಅಂಗಡಿಯನ್ನು ಏರ್ಪಡಿಸಿಕೊಟ್ಟರು. ವಾಹನ ಅಪಘಾತವೊಂದರಲ್ಲಿ ಗಾಯಗೊಂಡು, ಹಲವು ತಿಂಗಳ ಕಾಲ ಆತ ಹಾಸಿಗೆ ಹಿಡಿದಾಗ, ಎಲ್ಲ ರೀತಿಯಲ್ಲೂ ಆತನಿಗೆ ಬೆಂಬಲವಾಗಿ ನಿಂತಿದ್ದರು.
ಗಮನಾರ್ಹ ಸಂಗತಿಯೆಂದರೆ, ರಾಜಾರಾಂ ಯಾರಿಂದಲೂ ಏನನ್ನೂ ಅಪೇಕ್ಷಿಸಲಿಲ್ಲ. ಮನೆಗೆಲಸದವರು, ಸಹಾಯಕರು, ಪರಿಚಿತರು, ಕುಟುಂಬದವರು – ಹೀಗೆ ಎಲ್ಲರಿಗೂ ತಮ್ಮಿಂದಾದ ಸಹಾಯ-ಸಹಕಾರ ನೀಡುತ್ತಿದ್ದರೇ ವಿನಾ ತಾವು ಏನನ್ನೂ ಬಯಸಲಿಲ್ಲ. ಆಪ್ತ ವಲಯದಲ್ಲಿ ಮಾತನಾಡುವಾಗಲೂ ಅವರ ಮಾತಿನಲ್ಲಿ ಎಲ್ಲರನ್ನು ಕುರಿತ ಕೃತಜ್ಞತೆಯೇ ತುಳುಕುತ್ತಿತ್ತು. ತಮ್ಮನ್ನು ಕುರಿತು ಕರ್ತವ್ಯ ನಿರ್ವಹಿಸಬೇಕಿದ್ದವರ ವಿಷಯದಲ್ಲೂ ಎಂದೂ ಕೊರತೆಯನ್ನು ಕಾಣದ ಔದಾರ್ಯ ಅವರದಾಗಿತ್ತು. ಆ ಕುರಿತು ಮಾತು ಬಂದಾಗಲೆಲ್ಲ ‘ಹೋಗಲಿ ಬಿಡಿ’ – ಎಂದು ಹೇಳಿ ವಿಷಯಾಂತರ ಮಾಡುತ್ತಿದ್ದರು ರಾಜಾರಾಂ.
ಬ್ರಾಹ್ಮ–ಕ್ಷಾತ್ರಗಳ ಪ್ರತಿನಿಧಿ
ತಮ್ಮ ವ್ಯಾಪಕ ಅಧ್ಯಯನ, ಅಧ್ಯಾಪನ, ಸಂಶೋಧನೆಗಳನ್ನು ನಡೆಸುವಲ್ಲಿಯೂ ಮತ್ತು ಅವುಗಳ ಫಲಿತಾಂಶಗಳನ್ನು ಘಂಟಾಘೋಷವಾಗಿ ಹೇಳುವಲ್ಲಿಯೂ ರಾಜಾರಾಂ ತೋರಿಸಿದ ಶಿಸ್ತು-ಧೈರ್ಯ-ಸಾಹಸಗಳು ಅಪೂರ್ವವಾದವು. ಒಂದು ರೀತಿಯಲ್ಲಿ ಅವರದು ಪ್ರವಾಹದ ವಿರುದ್ಧ ದಿಕ್ಕಿನಲ್ಲಿ ನಡೆಸಿದ ಈಜು. ವೃತ್ತಿಕ್ಷೇತ್ರದ ಸಿದ್ಧಿಯನ್ನೂ ಪ್ರಸಿದ್ಧಿಯನ್ನೂ ಹಿಂದೆಮುಂದೆ ನೋಡದೆ ತೊರೆದು ಬಂದ ಅವರ ಮನೋದಾಢ್ರ್ಯ ಅಕಲ್ಪನೀಯವಾದದ್ದು. ಹಾಗೆ ಬಂದವರೇ ಹಾಲಾಹಲಪ್ರಾಶನಕ್ಕೆ ಕುಳಿತರು. ಭಾರತದ ಪರಂಪರೆ-ಇತಿಹಾಸಕ್ಷೇತ್ರದಲ್ಲಿ ಮಡುಗಟ್ಟಿದ್ದ ಹುಸಿ-ಸಿದ್ಧಾಂತಗಳ ನಂಜನ್ನೆಲ್ಲ ಆಪೋಶನಗೈದು, ಭಾರತೀಯ ಇತಿಹಾಸ ಸಂಶೋಧನಕ್ಷೇತ್ರಕ್ಕೆ ಅಮೃತವನ್ನುಣಿಸಿದರು. ಅದಕ್ಕಾಗಿ ತಥಾಕಥಿತ ಕಮ್ಯೂನಿಸ್ಟ್ ಲೇಖಕರು-ಇತಿಹಾಸಕಾರರಿಂದ ರಾಜಾರಾಂ ಅವರಿಗೆ ದೊರೆತ ಬಿರುದು – ‘ಜಗಳಗಂಟ’!
ಅಡ್ಡಿ-ಆತಂಕಗಳನ್ನೆಲ್ಲ ಅರಗಿಸಿಕೊಂಡು ಸತ್ಯಶೋಧನೆಯನ್ನೇ ಉಸಿರಾಗಿಸಿಕೊಂಡ ಬ್ರಾಹ್ಮ; ಅಡೆತಡೆಗಳನ್ನೆಲ್ಲ ಧ್ವಂಸಮಾಡಿ, ಸತ್ಯಸ್ಥಾಪನೆಯನ್ನೇ ಅಂತಿಮ ಗುರಿಯಾಗಿಸಿಕೊಂಡ ಕ್ಷಾತ್ರ – ಇವೆರಡರ ಪ್ರತಿನಿಧಿಯಾಗಿ ನಿಂತವರು ನವರತ್ನ ಎಸ್. ರಾಜಾರಾಂ. ಭಾರತೀಯ ಇತಿಹಾಸಕ್ಷೇತ್ರದಲ್ಲಿ ಸತ್ಯಶೋಧನೆ ಮತ್ತು ಸತ್ಯಸ್ಥಾಪನೆಯ ಹೊಸ ಮಾರ್ಗವನ್ನು ರೂಪಿಸಿ, ಹಲವರು ಆ ದಾರಿಯಲ್ಲಿ ಮುನ್ನುಗ್ಗಲು ಪ್ರೇರಣೆ ನೀಡಿದವರು ಅವರು. ಅವರ ಸ್ಮರಣೆಗೆ ಶತಶತ ನಮನಗಳು.