ಒಂದು ಸಂದರ್ಭ ನೆನಪಾಗುತ್ತಿದೆ, ಬಹುಶಃ ಜಯದೇವ ಅವರ ೬೦ನೇ ವರುಷದ ಜನ್ಮದಿನ ಅಭಿನಂದನ ಕಾರ್ಯಕ್ರಮ ಸಣ್ಣದಾಗಿ ಏರ್ಪಾಡಾಗಿತ್ತು. ಆ ಕಾರ್ಯಕ್ರಮದಲ್ಲಿ ನ. ಕೃಷ್ಣಪ್ಪನವರು ಅಭಿನಂದನ ಭಾಷಣ ಮಾಡಿದರು. ಅವರು ತಮ್ಮ ಮಾತನ್ನು ಆರಂಭಿಸಿದ್ದು ಹೀಗೆ: “ನಮ್ಮ, ಅಂದರೆ ಸಂಘದ ವಲಯದಲ್ಲಿ ಯಾವುದಾದರೂ ತುಂಬಾ ಜಟಿಲವಾದ ಕ್ಲಿಷ್ಟತೆಗಳು ತುಂಬಿದ ಸಮಸ್ಯೆ ಎದುರಾದಾಗ ಅದನ್ನು ಪರಿಹಾರಕ್ಕಾಗಿ ಜಯದೇವ ಅವರಿಗೆ ವಹಿಸೋಣ, ಅವರು ನಿರ್ವಹಿಸಬಲ್ಲರು – ಹೀಗೆ ಒಂದು ಪದ್ಧತಿ ಬೆಳೆದುಬಂದಿದೆ.” ನ. ಕೃಷ್ಣಪ್ಪನವರ ಆ ಮಾತುಎಷ್ಟು ಯಥಾರ್ಥ ಎಂದು ಇಲ್ಲಿರುವವರ ಅನೇಕರ ಅನುಭವದಲ್ಲಿ ಇದೆ. ಅದೇ ಸಂದರ್ಭದಲ್ಲಿ ಜಯದೇವ ಅವರು ಮಾತನಾಡುತ್ತಾ, ತಮ್ಮ ಮನಸ್ಸಿನಲ್ಲಿದ್ದ ಧ್ಯೇಯವನ್ನು ಸ್ಮರಣೆ ಮಾಡಿದರು. ಅವರ ಹಿರಿಯರೊಬ್ಬರು ಹೇಳಿದ್ದ ಮಾತು: ‘One Life One Mission.’ ಆ ಸೂತ್ರವನ್ನು ತಾನು ಜೀವನದಲ್ಲಿ ಸಾಗಿಸುತ್ತಾ ಬಂದಿದ್ದೇನೆ ಎಂದರು.
“ಸಂಸ್ಥೆ ಎಂದರೆ ಕಟ್ಟಡಗಳಲ್ಲ, ಬ್ಯಾಂಕ್ ಬ್ಯಾಲೆನ್ಸ್ ಅಲ್ಲ, ನಿಜಾರ್ಥದಲ್ಲಿ ನಮ್ಮ ಕಾರ್ಯಪ್ರಗತಿಯ ಸೂಚಕ ಎಂದರೆ ಜನಸಮುದಾಯದಲ್ಲಿ ನಮ್ಮ ಬಗ್ಗೆ ನಿರ್ಮಾಣವಾಗಿರುವ Goodwill. ಹೊರಗಿನ ಸಂರಚನೆಗಳು ಎಷ್ಟು ದೊಡ್ಡ ಪ್ರಮಾಣದ್ದಾಗಿದ್ದರೂ ಅದಕ್ಕೆ ಜೀವತುಂಬುವವರು ವ್ಯಕ್ತಿಗಳು, ಎಂದರೆ ಕಾರ್ಯಕರ್ತರು, ಸಹಕಾರಿಗಳು, ಹಿತೈಷಿಗಳು ಮತ್ತು ವಿಶಾಲವಾದ ಸಮಾಜ.”
– ಮೈ.ಚ. ಜಯದೇವ
‘Crisis Management Expert’ ಎಂಬ ಪ್ರಥೆ ಜಯದೇವ ಅವರಿಗೆ ಅನೇಕ ದಶಕಗಳ ಹಿಂದಿನಿಂದ ಬಂದಿದೆ. ಅದನ್ನೇ ಇನ್ನೊಂದು ರೀತಿಯಲ್ಲಿ ನೆನಪಿಸಿಕೊಳ್ಳಬಹುದಾದರೆ: ಯಾವುದೇ ವಿಷಯಕ್ಕೆ ಎರಡು ಆಯಾಮಗಳು ಇರುತ್ತವೆ: ಒಂದು ಭಾವನಾತ್ಮಕ, ಇನ್ನೊಂದು ವ್ಯವಸ್ಥಾತ್ಮಕ. ಭಾವನಾತ್ಮಕ ಸಂವೇದನೆ ತೋರುವುದರಲ್ಲಿ ನಾವೆಲ್ಲಾ ಬಹಳ ಗಟ್ಟಿಗರು. ನಾವು ಸೋಲುವುದೆಲ್ಲೆಂದರೆ ಈ ವ್ಯವಸ್ಥಾತ್ಮಕ ಆವಶ್ಯಕತೆಗಳನ್ನು ಪರಿಷ್ಕಾರಗೊಳಿಸುವುದರಲ್ಲಿ. ಭಾವನಾತ್ಮಕ, ವ್ಯವಸ್ಥಾತ್ಮಕ – ಈ ಎರಡೂ ಆಯಾಮಗಳ ನಡುವೆ ಸಮನ್ವಯ ಮಾಡುವುದನ್ನು ಜಯದೇವ ಒಂದು ಕುಶಲಕಲೆಯ ಮಟ್ಟಕ್ಕೆ ಏರಿಸಿದ್ದರು. ಅವರು ಸದಾ ಆಗ್ರಹಪೂರ್ವಕ ಒತ್ತಿಹೇಳುತ್ತಿದ್ದುದು ವ್ಯಾವಹಾರಿಕ ವ್ಯವಸ್ಥೆಗಳು ಸಮರ್ಪಕವಾಗಿರಬೇಕೆಂದು ಮತ್ತು ಇದಕ್ಕೆ ಯಾವುದೇ ಹೊಸ ಚಟುವಟಿಕೆಯ ಆರಂಭದಿಂದಲೇ ಸಾಕಷ್ಟು ಗಮನ ಕೊಡುವುದು ಆವಶ್ಯಕ ಎಂದು. ಅನೇಕ ಸಂದರ್ಭಗಳಲ್ಲಿ ಏನಾದರೂ ಎಡವಟ್ಟು ಆದ ಮೇಲೆಯೇ ವ್ಯವಸ್ಥೆಯ ಬಗ್ಗೆ ಯೋಚಿಸಲು ಆರಂಭಿಸುತ್ತೇವೆ. ಜಯದೇವ ಅವರು ಈ ಧಾಟಿಯಲ್ಲಿ ಮಾತನಾಡುತ್ತಿದ್ದುದರಿಂದ ಆರಂಭದ ದಿನಗಳಲ್ಲಿ ಅವರನ್ನು ’ಮಿಲಿಟರಿ ಕಮಾಂಡರ್’ ಎಂದು ಕೆಲವರು ಹಾಸ್ಯ ಮಾಡುತ್ತಿದ್ದುದುಂಟು. ಆದರೆ ಈ ರೀತಿಯ ಮಾರ್ಗದರ್ಶನದಿಂದ ಸಂಘದ ಅಸಂಖ್ಯ ಪ್ರಕಲ್ಪಗಳಿಗೆ ಎಷ್ಟು ಅಗಾಧ ಪ್ರಮಾಣದ ಲಾಭವಾಗಿದೆ ಎನ್ನುವುದು ಈಗ ಇತಿಹಾಸ. ಹಾಗೆ ನೋಡಿದರೆ ಜಯದೇವ ಅವರು ಭಾವತೀವ್ರತೆ ಇಲ್ಲದವರೇನೂ ಅಲ್ಲ, ಪ್ರತಿಯಾಗಿ ಅವರ ಭಾವಸ್ಪಂದನ ನಮ್ಮೆಲ್ಲರಿಗಿಂತ ತೀಕ್ಷ್ಣವಾಗಿಯೇ ಇರುತ್ತಿತ್ತು. ಆದರೆ ಭಾವನೆಗಳಿಗೆ ಕಾರ್ಯರೂಪ ಕೊಡುವುದರಲ್ಲಿ ನಮಗಿಂತ ಮುಂದೆ ಇರುತ್ತಿದ್ದರು.
ಜಯದೇವ ಅವರ ಶ್ರದ್ಧಾಂಜಲಿಯ ಸಂದರ್ಭದಲ್ಲಿ ಅವರು ಬೆಳೆಸಿರುವ ರಾಷ್ಟ್ರೋತ್ಥಾನ ಪರಿಷತ್ ಬಗ್ಗೆಯೇ ಮಾತನಾಡಬೇಕಾದ ಆವಶ್ಯಕತೆಯೇನಿಲ್ಲ. ಆದರೂ ರಾಷ್ಟ್ರೋತ್ಥಾನ ಪರಿಷತ್ ನಡೆದು ಬಂದಿರುವ ದಾರಿಯ ಕೆಲವು ಝಲಕುಗಳನ್ನು ಮೆಲುಕುಹಾಕಿದರೂ ಜಯದೇವ ಅವರ ಸಾಧನೆಯ ಅನನ್ಯತೆ ಪ್ರಕಾಶಗೊಳ್ಳುತ್ತದೆ ಅನ್ನುವ ಹಿನ್ನೆಲೆಯಲ್ಲಿ ಒಂದೆರಡು ಸಂಗತಿಗಳನ್ನು ಪ್ರಸ್ತಾವ ಮಾಡುತ್ತೇನೆ.
ವ್ಯಕ್ತಿತ್ವದ ಹೊಳಹುಗಳು
ಚಿತ್ರ ೧: ಆರಂಭಕಾಲದ ರಾಷ್ಟ್ರೋತ್ಥಾನ ಪರಿಷತ್ತಿನ ಮೊದಲ ಹೆಜ್ಜೆ ಎಂದರೆ ’ಉತ್ಥಾನ’ ಮಾಸಪತ್ರಿಕೆ. ಆಗ ಲೇಖನಗಳ ಸಜ್ಜಿಕೆ, ಮುದ್ರಣ ಎಲ್ಲವೂ ಬಹಳ ದೊಡ್ಡ ಸವಾಲಾಗಿರುತ್ತಿತ್ತು. ಆದರೆ ಇಡೀ ತಿಂಗಳಿನಲ್ಲಿ ಅತ್ಯಂತ ಕ್ಲಿಷ್ಟವಾದ ಸಂದರ್ಭವೆಂದರೆ ಮುದ್ರಿತ ’ಉತ್ಥಾನ’ದ ಪ್ರತಿಗಳ ರವಾನೆ. ಆ ಪ್ರತಿಗಳ ರವಾನೆಗೆ ಅವಶ್ಯವಿದ್ದ ಅಂಚೆಖರ್ಚನ್ನು ಹೊಂದಿಸುವುದು ಬಹಳ ಕಷ್ಟವಾಗುತ್ತಿತ್ತು. ಅದಕ್ಕಾಗಿ ಜಯದೇವ ತಮ್ಮ ಸಾಹಸವಂತಿಕೆಯಷ್ಟನ್ನೂ ತೊಡಗಿಸಬೇಕಾಗುತ್ತಿತ್ತು ಆ ಹಂತದಲ್ಲಿ.
ಚಿತ್ರ ೨: ೧೯೮೩ ಜೂನ್ ತಿಂಗಳಲ್ಲಿ ಕೇಶವಶಿಲ್ಪ ಸಭಾಂಗಣದ ಉದ್ಘಾಟನೆಯಾಯಿತು. ಆ ಸಂದರ್ಭಕ್ಕೆ ಪರಿಷತ್ತಿನ ಆವರೆಗಿನ ಸಾಧನೆಗಳನ್ನು ದಾಖಲೆ ಮಾಡಿ ಒಂದು ಪ್ರಕಟಣೆ ಸಿದ್ಧಮಾಡಬೇಕೆಂದು ಜಯದೇವ ಅವರ ಮನಸ್ಸಿಗೆ ಬಂತು. ಅದಕ್ಕೆ ಸಿದ್ಧತೆ ಮಾಡಿ ಎಂದು ನಮಗೆ ಹೇಳಿದರು. ಆ ದಿನಗಳಲ್ಲಿ ಪರಿಷತ್ ನಡೆಸುತ್ತಿದ್ದದ್ದು ಒಂದೇ ಶಾಲೆ, ಹಗರಿಬೊಮ್ಮನಹಳ್ಳಿಯ ಶಾಲೆ. ಇನ್ನು ರಾಷ್ಟ್ರೋತ್ಥಾನ ಸಾಹಿತ್ಯ, ಭಾರತ-ಭಾರತಿ ಪುಸ್ತಕಮಾಲೆ, ಅಲ್ಲಿಯವರೆಗೆ ನಡೆದಿದ್ದ ಕೆಲವು ಉಪನ್ಯಾಸಮಾಲೆಗಳು, ಶಾರೀರಿಕ ಶಿಕ್ಷಣ ಕೇಂದ್ರ, ಆಗತಾನೇ ಶುರುವಾಗಿದ್ದ ರಾಷ್ಟ್ರೋತ್ಥಾನ ಬಳಗಗಳು…. ಹೀಗೆ ನಮ್ಮ ಹತ್ತಿರ ಇದ್ದ ಅಷ್ಟು ಸರಕನ್ನು ಶ್ರಮಪಟ್ಟು ಒಟ್ಟುಮಾಡಿದಾಗ ಒಂದು ಹದಿನಾಲ್ಕು ಪುಟಗಳ ಸೂವನಿರ್ ಸಿದ್ಧವಾಯಿತು. ಅದಕ್ಕೆ ಹೋಲಿಸಿ: ಕಳೆದವರು? ಅಂದರೆ ೨೦೧೫-೧೬ರಲ್ಲಿ ಪರಿಷತ್ತಿನ ಬೇರೆ ಬೇರೆ ಭಾಗದ ವರದಿಗಳನ್ನು ಆದಷ್ಟು ಒಂದು-ಎರಡು ವಾಕ್ಯಕ್ಕೆ ಸಂಗ್ರಹಮಾಡಿ ಅನಿವಾರ್ಯವಾದ ಸಂಗತಿಗಳನ್ನು ಮಾತ್ರ ಉಲ್ಲೇಖ ಮಾಡಿ ತಯಾರುಮಾಡಿದ ಅಸಮಗ್ರ ವರದಿಯೇ ಎಂಬತ್ತು ಪುಟ ದಾಟಿತ್ತು. ಈಗ ನಮ್ಮ full-fledged ಶಾಲೆಗಳ ಸಂಖ್ಯೆಯೇ ೩೦ ದಾಟಿದೆ, ಶಿಶುಮಂದಿರಗಳು ೨೬ ಇವೆ, ಅನೌಪಚಾರಿಕ ಶಿಕ್ಷಣಕೇಂದ್ರಗಳು ೨೧೦ ಇವೆ, ಇನ್ನು 24×7 ಕೆಲಸಮಾಡುತ್ತಿರುವ ನಮ್ಮ ಆರೋಗ್ಯಸೇವಾ ಚಟುವಟಿಕೆಗಳು ದಿನದಿಂದ ದಿನಕ್ಕೆ ವಿಸ್ತಾರವಾಗುತ್ತಿವೆ. ನಾವು ಎಂದಾದರೂ ಮಾಡಿಯೇವು ಎನ್ನುವ ಕಲ್ಪನೆಯೇ ಐದಾರು ವರುಷಗಳ ಹಿಂದೆ ಇರದಿದ್ದ, ದೊಡ್ಡ ಪ್ರಮಾಣದ, ದೇಸೀತಳಿಗಳ ಐನೂರು ಗೋವುಗಳು ಇರುವ ದೊಡ್ಡ ಗೋಶಾಲೆ, ಪ್ರತಿಭಾವಂತರಾಗಿದ್ದರೂ ಆರ್ಥಿಕವಾಗಿ ಹಿಂದುಳಿದಿರುವ ಗ್ರಾಮೀಣಮೂಲದ ವಿದ್ಯಾರ್ಥಿಗಳಿಗೆ ನಿಃಶುಲ್ಕ ಶಿಕ್ಷಣ ಕೊಡುತ್ತಿರುವ ’ತಪಸ್’ ಪ್ರಕಲ್ಪ, ರಾಜ್ಯದಲ್ಲೇ ಅನನ್ಯ ಎನ್ನಿಸಿಕೊಂಡಿರುವ ರಕ್ತನಿಧಿ, ’ತಲಸ್ಸೇಮಿಯಾ’ ಮಕ್ಕಳ ಚಿಕಿತ್ಸೆ ಮತ್ತು ಆರೈಕೆ ಕೇಂದ್ರ – ಹೀಗೆ ಎಲ್ಲಾ ಮುಖಗಳಲ್ಲಿ ಪರಿ?ತ್ತಿನ ಚಟುವಟಿಕೆಗಳು ನಿರಂತರ ವಿಸ್ತರಿಸುತ್ತಿರುವುದು ತಮಗೆಲ್ಲರಿಗೂ ತಿಳಿದೇ ಇದೆ.
ಜಯದೇವ ಅವರು ಆಗಿಂದಾಗ ಹೇಳುತ್ತಿದ್ದ ಒಂದು ಮಾತು: “ಸಂಸ್ಥೆ ಎಂದರೆ ಕಟ್ಟಡಗಳಲ್ಲ, ಬ್ಯಾಂಕ್ ಬ್ಯಾಲೆನ್ಸ್ ಅಲ್ಲ, ನಿಜಾರ್ಥದಲ್ಲಿ ನಮ್ಮ ಕಾರ್ಯಪ್ರಗತಿಯ ಸೂಚಕ ಎಂದರೆ ಜನಸಮುದಾಯದಲ್ಲಿ ನಮ್ಮ ಬಗ್ಗೆ ನಿರ್ಮಾಣವಾಗಿರುವ Goodwill. ಹೊರಗಿನ ಸಂರಚನೆಗಳು ಎಷ್ಟು ದೊಡ್ಡ ಪ್ರಮಾಣದ್ದಾಗಿದ್ದರೂ ಅದಕ್ಕೆ ಜೀವತುಂಬುವವರು ವ್ಯಕ್ತಿಗಳು, ಎಂದರೆ ಕಾರ್ಯಕರ್ತರು, ಸಹಕಾರಿಗಳು, ಹಿತೈಷಿಗಳು ಮತ್ತು ವಿಶಾಲವಾದ ಸಮಾಜ.” ಇಂತಹ ದೃಷ್ಟಿಯನ್ನೂ ಕಾರ್ಯಪದ್ಧತಿಯನ್ನೂ ಕಾರ್ಯಕರ್ತರ ತಂಡಗಳನ್ನೂ ನಿರ್ಮಾಣ ಮಾಡಿದವರು ಜಯದೇವ ಅವರು.
ಇನ್ನೊಂದು ಉದಾಹರಣೆಯನ್ನು ಸ್ಮರಿಸಬಹುದಾದರೆ, ಈಗ ಒಂದೂವರೆ ವರ್ಷ ಹಿಂದೆ ‘ಅಂತಾರಾಷ್ಟ್ರೀಯ ಯೋಗ ದಿನ’ ನಿಮಿತ್ತ ದೊಡ್ಡ ಕಾರ್ಯಕ್ರಮವನ್ನು ಮಾಡಿದೆವು. ಆರಂಭದಲ್ಲಿ ಅದನ್ನೊಂದು ಸರಳ ಕಾರ್ಯಕ್ರಮವಾಗಿ ಮಾಡುವುದೆಂದು ಅಂದುಕೊಂಡಿದ್ದೆವು; ಆದರೆ ಅದಕ್ಕೆ ಕೈಯಿಟ್ಟ ಮೇಲೆ ದೈತ್ಯಾಕಾರ ಬರಲು ಪ್ರಾರಂಭವಾಯಿತು. ೫೦ ಯೋಗಶಿಬಿರಗಳು ಎಂದುಕೊಂಡಿದ್ದೆವು ನಗರದಲ್ಲಿ. ಐವತ್ತು ನೂರಾಯಿತು, ನೂರು ಇನ್ನೂರಾಯಿತು, ಇನ್ನೂರೈವತ್ತು ಶಿಬಿರಗಳನ್ನೂ ದಾಟಿತ್ತು. ಅದೆಷ್ಟು ದೊಡ್ಡ ಕಾರ್ಯಕ್ರಮವಾಯಿತೆಂದರೆ ಬಹುಶಃ ಕರ್ನಾಟಕದಮಟ್ಟಿಗೆ ಅ? ದೊಡ್ಡ ಯೋಗದಿನ ಆಚರಣೆ ಬೇರೆಲ್ಲಿಯೂ ನಡೆದ ಬಗ್ಗೆ ನಮಗೆ ಮಾಹಿತಿಯಿಲ್ಲ. ಅದರಲ್ಲಿ ಭಾಗವಹಿಸಿದವರ ಸಂಖ್ಯೆ ಹನ್ನೆರಡು ಸಾವಿರದಷ್ಟಾಯಿತು. ಮಾಧ್ಯಮಮಿತ್ರರೂ ದೂರದರ್ಶನದವರೂ ನಮ್ಮನ್ನು ಕೇಳಿದರು – ’ಇವರೆಲ್ಲಾ ನಿಮ್ಮ ಯೋಗಕೇಂದ್ರಗಳಲ್ಲಿ ಅಭ್ಯಾಸ ಮಾಡುವವರಾ?’ ಎಂದು. ಅದಕ್ಕೆ ನಾವು ಹೇಳಿದೆವು – ’ಇಲ್ಲ ಸ್ವಾಮಿ, ಇವರಲ್ಲಿ ಒಂದೆರಡು ಸಾವಿರದಷ್ಟು ಮಾತ್ರ ನಮ್ಮಲ್ಲಿ ಅಭ್ಯಾಸ ಮಾಡುವವರು. ಉಳಿದ ಹತ್ತುಸಾವಿರ ಜನರನ್ನು ನಾವು ಬೇರೆ ಬೇರೆ ಬಡಾವಣೆಗಳಲ್ಲಿ ಕೇಂದ್ರಗಳಲ್ಲಿ ಸಂಸ್ಥೆಗಳನ್ನು ಸಂಪರ್ಕಮಾಡಿ, ಹೊಸದಾಗಿ ಅವರನ್ನು ಪರಿಚಯ ಮಾಡಿಕೊಂಡು, ಯೋಗಾಭ್ಯಾಸದಲ್ಲಿ ತೊಡಗಿಸಿ, ಒಂದು ತಿಂಗಳು ಅವರಿಗೆ ಶಿಕ್ಷಣ ಕೊಡಿಸಿ, ಅವರನ್ನು ಇಲ್ಲಿಗೆ ಕರೆದುಕೊಂಡು ಬಂದಿದ್ದೇವೆ’ ಎಂದಾಗ ಮಾಧ್ಯಮದವರೆಲ್ಲ ಆಶ್ಚರ್ಯಪಟ್ಟರು. ಅದರ ಭಾಗಲಬ್ಧ ಅಂದರೆ ನಮ್ಮ ಅಂತಃಶಕ್ತಿಯ ಪ್ರಮಾಣ ನಮಗೇ ಗೋಚರವಾಗುವಂತಾಯಿತು.
ರಾಷ್ಟ್ರೋತ್ಥಾನ ಸಂಸ್ಥಾಸಮೂಹದ ಆಗಿರುವ ಮತ್ತು ಆಗುತ್ತಿರುವ ಕೆಲಸ ಅದರ ಗಾತ್ರಕ್ಕಿಂತ ಬಹುಪಾಲು ಹೆಚ್ಚು ಮಹತ್ತ್ವದ್ದು ಎನ್ನುವುದನ್ನು ಸೂಚನೆ ಮಾಡುವ ದೃಷ್ಟಿಯಿಂದ ಮಾತ್ರ ಈ ಒಂದೆರಡು ವಿವರಗಳನ್ನು ನಾನು ಸ್ಪರ್ಶ ಮಾಡಿದೆ.
ಕಲಿಯುವುದನ್ನು ಕಲಿಸಿಕೊಟ್ಟರು
ಜಯದೇವ ಅವರು ನಮಗೆ ಕಲಿಯುವುದನ್ನು ಕಲಿಸಿಕೊಟ್ಟರು. ಅವರ ಕಾರ್ಯರೀತಿಯನ್ನು ನೋಡಿಯೇ ನಾವೆಲ್ಲಾ ವರುಷಗಳುದ್ದಕ್ಕೂ ಬೆಳೆದಿದ್ದೇವೆ. ಅವರು ಆರಂಭದಿಂದ ಒತ್ತಿಹೇಳುತ್ತಿದ್ದ ಸಂಗತಿಗಳು ನಾಲ್ಕು: ಮೊದಲನೆಯದು, ಹೊರಗಿನ ಆಕಾರಕ್ಕಿಂತ ಒಳಗಿನ ಸತ್ತ್ವ ಮಹತ್ತ್ವದ್ದು. ಎರಡನೆಯದು, ವಹಿವಾಟಿಗಿಂತ ಮಹತ್ತ್ವದ್ದು ಮೌಲ್ಯಗಳ ಅನುಸಂಧಾನ. ಮೂರನೇ ಸಂಗತಿ, ಸಾಧನೆಯಷ್ಟೇ ಅದರ ಪ್ರಕ್ರಿಯೆಯೂ ಮುಖ್ಯ. ನಾವು ಯಾರಿಗೂ ಪ್ರತಿಸ್ಪರ್ಧಿಗಳಲ್ಲ ಎನ್ನುವುದು ನಾಲ್ಕನೆಯದು. ಈ ನಾಲ್ಕು ಅಂಶಗಳನ್ನು ಪದೇ ಪದೇ ಒತ್ತಿಹೇಳುತ್ತಿದ್ದರು. ರಾ?ತ್ಥಾನ ಸಂಸ್ಥೆಯ ಬೆಳವಣಿಗೆಯಲ್ಲಿ ರಹಸ್ಯ ಎಂದೇನಾದರೂ ಇದ್ದರೆ ಅದು ಜಯದೇವ ಅವರು ಪದೇ ಪದೇ ಒತ್ತಿಹೇಳುತ್ತಿದ್ದ ಈ ನಾಲ್ಕು ಮೂಲಕಲ್ಪನೆಗಳೇ.
ಒಟ್ಟಿನಲ್ಲಿ ಹೇಳುವುದಾದರೆ, ನಮ್ಮದು ಹಲವು ಪ್ರಕಲ್ಪಗಳ ಒಟ್ಟಿಲು ಮಾತ್ರವಲ್ಲ, ನಮ್ಮದೊಂದು ಮಿಷನ್. ಇದೊಂದು ಧ್ಯೇಯಪ್ರೇರಿತವಾದ ಮೌಲ್ಯಾನುಸಂಧಾನ. ಇದು ಜಯದೇವ ಅವರು ಪದೇ ಪದೇ ನೆನಪು ಮಾಡಿಕೊಡುತ್ತಿದ್ದ ಆಧಾರಸಂಗತಿ. ಇದುವರೆಗೆ ನಮ್ಮಿಂದ ಆಗಿರುವ ಸಾಧನೆ ಕಡಮೆಯದೇನಲ್ಲ. ಆದರೆ ಜಯದೇವ ಅವರು ಪ್ರತಿ ಸಂದರ್ಭದಲ್ಲೂ ಒತ್ತಿಹೇಳುತ್ತಿದ್ದುದು ’ನಾವು ಆರಿಸಿಕೊಂಡಿರುವ ಲಕ್ಷ್ಯ ಹೇಗಿದೆಯೆಂದರೆ, ನಾವು ಏನೋ ಸಂಕಲ್ಪ ಮಾಡಿದೆವು, ಮುಗಿಸಿದೆವು ಅನ್ನುವ ಸಂತೃಪ್ತ ಸ್ಥಿತಿ ಯಾವಾಗಲೂ ಬರದಿರಲಿ’ ಎಂದು. ಮತ್ತು ಅದರ ಸತ್ಯತೆ ದಿನದಿಂದ ದಿನಕ್ಕೆ ಅರಿವಾಗುತ್ತಿದೆ. ನಾವು ಅನಾಥಮಕ್ಕಳಿಗಾಗಿ ನಡೆಸುವ ’ನಂದಗೋಕುಲ’ ಆಸುಪಾಸಿನವರ ಪ್ರೀತಿಗೆ ಪಾತ್ರವಾಗಿದ್ದು ಮಾತ್ರವಲ್ಲದೆ, ಅಲ್ಲಿರುವ ಮಕ್ಕಳು ಶಾಲೆಗಳ ಸ್ಪರ್ಧೆಗಳಲ್ಲಿ ಬಹುಮಾನ ಪಡೆಯುತ್ತಿರುವುದು, ನಮ್ಮ ತಲಸ್ಸೇಮಿಯಾ ಆರೈಕೆ ಕೇಂದ್ರದ ಮಕ್ಕಳು ಉತ್ಸಾಹದ ಚಿಲುಮೆಗಳಾಗಿ ಲವಲವಿಕೆಯಿಂದ ತಮ್ಮ ದೈನಂದಿನ ಓದಿನಲ್ಲೂ ಪ್ರಗತಿ ಸಾಧಿಸುತ್ತಿರುವುದು, ಇದನ್ನೆಲ್ಲಾ ನೋಡುವಾಗ ನಮಗೇನನಿಸುತ್ತದೆ ಎಂದರೆ: ನಾವು ಕೆಲವು ವಿಧಿಬದ್ಧವಾದ ಔಪಚಾರಿಕ ಸಂಸ್ಥೆಗಳನ್ನು ನಡೆಸುತ್ತಿದ್ದರೂ, ಅದಕ್ಕೆ ನಮ್ಮಿಂದ ಸಾಂಸ್ಕೃತಿಕ value addition ಏನು ಆಗುತ್ತಿದೆ, ಅದು ಮಹತ್ತ್ವದ್ದು. ಅದು ಯಾವುದೇ ವರದಿ ಮಾಹಿತಿಗಳಲ್ಲಿ ಪ್ರತಿಬಿಂಬಿತವಾಗಲಾರದು.
ಬಿಟ್ಟುಹೋದ ವಾರಸಿಕೆ
ನಮ್ಮ ಕಾರ್ಯವೈಖರಿಯ ವಿಶಿಷ್ಟತೆಯನ್ನು ಇಲ್ಲಿರುವ ಉಭಯ ಶ್ರೀಗಳೂ ಸೇರಿದಂತೆ ಅನೇಕ ಧರ್ಮಪೀಠದವರೂ ಕೂಡ ಆಶೀರ್ವದಿಸಿ ಹರಸುತ್ತಾ ಬಂದಿದ್ದಾರೆ. ಜಯದೇವ ಅವರ ಅನುಪಮವಾದ ನೇತೃತ್ವದಲ್ಲಿ ಲಕ್ಷ್ಯದ ಸ್ಪಷ್ಟತೆ ಮತ್ತು ಸಮಾಜದಲ್ಲಿ ಭರವಸೆ – ಈ ಅಮೂರ್ತ ಬಂಡವಾಳದಿಂದ ಎ? ದೊಡ್ಡ ಸೇವಾಸಾಮ್ರಾಜ್ಯ ಸೃಷ್ಟಿಯಾಗಿದೆ ಎಂಬುದನ್ನು ನಾವೆಲ್ಲಾ ಕಣ್ಣಿನಿಂದ ನೋಡಿರುವುದರಿಂದ ನಂಬಬೇಕಾಗಿದೆ. ಜಗತ್ತಿನಲ್ಲಿ ಎರಡು ವಿಧವಾದ ಶಕ್ತಿಗಳಿರುತ್ತವೆ. ಒಂದು hard power, ಇನ್ನೊಂದ soft power. ಅಪಾರವಾದ ಹಣ, ರಾಜಕೀಯ ಪ್ರಭಾವ ಇವೆಲ್ಲಾ ಹಾರ್ಡ್ಪವರ್. ಇವನ್ನು ಅವಲಂಬಿಸಿ ಎಷ್ಟು ಒಳ್ಳೆಯ ಚಟುವಟಿಕೆಗಳು ಸಮಾಜದಲ್ಲಿ ನಡೆಯುತ್ತವೆ. ಆದರೆ ಸಾಫ್ಟ್ಪವರ್ ಹೀಗಲ್ಲ. ಅದರಲ್ಲಿ ಪ್ರೇರಣೆ, ಧ್ಯೇಯನಿಷ್ಠೆ, ಪರಿಶ್ರಮ, ಸಮಾಜದೊಡನೆ ತಾದಾತ್ಮ್ಯ – ಈ ಅಂಶಗಳು ದೊಡ್ಡ ಪಾತ್ರ ವಹಿಸುತ್ತವೆ. ಹಾರ್ಡ್ಪವರ್ನಿಂದ ಅದರಲ್ಲಿ ಎಷ್ಟು ಬಂಡವಾಳ ತೊಡಗಿಸುತ್ತೇವೋ ಅಷ್ಟು ಪ್ರಯೋಜನ ಲಭಿಸುತ್ತದೆ. ಆದರೆ ಸಾಫ್ಟ್ಪವರ್ ತೊಡಗಿಸುವುದರಿಂದ ನಾವು ಎಷ್ಟು ಬಂಡವಾಳ ತೊಡಗಿಸುತ್ತೇವೋ ಅದರ ಹತ್ತುಪಟ್ಟು ನೂರುಪಟ್ಟು ಉಪಲಬ್ಧಿ ನಮಗೆ ಸಿಗುತ್ತದೆ. ಈ ಮನವರಿಕೆ ಜಯದೇವ ಅವರು ನಮಗಾಗಿ ಬಿಟ್ಟುಹೋಗಿರುವ ಪ್ರಧಾನವಾದ ಒಂದು ವಾರಸಿಕೆ ಎಂದು ನಾನು ಭಾವಿಸಿದ್ದೇನೆ.
ಸಂಘಪ್ರೇರಿತವಾದ ಹತ್ತಾರು ಸಂಘಟನೆಗಳಲ್ಲಿ, ಸಂಸ್ಥೆಗಳಲ್ಲಿ ಜಯದೇವ ನಿವೇಶಗೊಳಿಸಿದ ವ್ಯವಸ್ಥಾನಿಬದ್ಧತೆ ತುಂಬಾ ದೊಡ್ಡ ಕೊಡುಗೆ ಎಂದು ಸ್ಮರಿಸಬೇಕಾಗಿದೆ. ಅಸ್ಖಲಿತವಾದ ಧ್ಯೇಯ ಒಂದು ಬದಿ; ಅದರ ಇನ್ನೊಂದು ಬದಿಯೆಂದರೆ ವ್ಯವಸ್ಥಾನಿಬದ್ಧತೆ. ವ್ಯವಸ್ಥಾನಿಬದ್ಧತೆಗೆ ಇನ್ನೊಂದು ಹೆಸರು ಎಂದರೆ ಮಾನ್ಯ ಮೈ.ಚ. ಜಯದೇವ ಅವರು. ಅವರ ಈ ದೀರ್ಘಕಾಲದ ಸೇವೆಯ ನೆನಪು ನಮ್ಮ ಎರಡು ಪೀಳಿಗೆಗಳ ಹಿತೈಷಿಗಳ ಮತ್ತು ಇಡೀ ಸಮಾಜದ ಮನಃಪಟಲದಲ್ಲಿ ಚಿರಕಾಲ ಉಳಿಯುತ್ತದೆ ಎಂದು ಹೇಳುತ್ತಾ ಜಯದೇವ ಅವರಿಗೆ ರಾಷ್ಟ್ರೋತ್ಥಾನ ಪರಿಷತ್ತಿನ ಪರವಾಗಿ ನುಡಿನಮನಗಳನ್ನು ಸಲ್ಲಿಸುತ್ತೇನೆ.
(ಫೆಬ್ರುವರಿ ೨೫, ೨೦೧೭ರಂದು ಬೆಂಗಳೂರಿನ ನ್ಯಾಶನಲ್ ಹೈಸ್ಕೂಲ್ ಮೈದಾನದಲ್ಲಿ ನಡೆದ ‘ಶ್ರದ್ಧಾಂಜಲಿ ಸಭೆ’ಯಲ್ಲಿ, ಜಯದೇವ ಅವರ ಕಾರ್ಯಕ್ಷೇತ್ರವಾಗಿದ್ದ ರಾಷ್ಟ್ರೋತ್ಥಾನ ಪರಿಷತ್ ’ನ ಅಧ್ಯಕ್ಷರಾಗಿರುವ ಎಸ್.ಆರ್. ರಾಮಸ್ವಾಮಿ ಅವರು ಮಾಡಿದ ಭಾಷಣದ ಪೂರ್ಣ ಪಾಠ.)