ಬೆಂಗಳೂರು ನಗರದ ಕೋಟೆಯಲ್ಲಿರುವ ಟಿಪ್ಪುಸುಲ್ತಾನ್ ಅರಮನೆಯಲ್ಲಿ 1921ರಲ್ಲಿ ಪ್ರಾರಂಭವಾದ, ಸ್ಕೌಟ್ ಸಂಸ್ಥೆಯವರು ಆರಂಭಿಸಿದ ಅನೇಕ ಸಾಹಸಕ್ರೀಡೆಗಳಲ್ಲಿ ಈಜುವುದೂ ಒಂದು. ಆ ಕ್ರೀಡೆಗಾಗಿ ‘ಡಾಲ್ಫಿನ್ ಸ್ವಿಮ್ಮಿಂಗ್ಕ್ಲಬ್’ ಎಂದು ಹೆಸರಿಟ್ಟು, ಈಜು ಕಲಿಸುವುದಕ್ಕೆ ಸನಿಹದಲ್ಲೇ ಇದ್ದ ಕೆಂಪಾಂಬುಧಿ ಕೆರೆಯನ್ನು ಆಯ್ಕೆ ಮಾಡಿಕೊಂಡರು.
ಪ್ರಾರಂಭದಲ್ಲಿ ವಯಸ್ಸು, ಜಾತಿ, ಲಿಂಗ ಭೇದವಿಲ್ಲದೆ ಎಲ್ಲರಿಗೂ ಮುಂಜಾನೆ ಆರರಿಂದ ಎಂಟು ಗಂಟೆಯವರೆಗೆ ಮತ್ತು ಸಂಜೆ ನಾಲ್ಕರಿಂದ ಐದು ಗಂಟೆಯವರಿಗೆ ಈಜು ತರಬೇತಿ ನೀಡಲಾಗುತ್ತಿತ್ತು. ಟಿ. ಶಾಮರಾಯರು, ಆನಂತರ ಬಿ.ಆರ್. ಶ್ರೀನಿವಾಸರಾವ್ ಮುಂತಾದವರು ಈಜುಶಿಕ್ಷಕರಾಗಿದ್ದರು.
1925-26ರ ವೇಳೆಗೆ ಈ ಕ್ಲಬ್ನಲ್ಲಿ ಸುಮಾರು 250 ಜನ ಈಜು ಕಲಿಯುತ್ತಿದ್ದು, ಇವರಲ್ಲಿ ಏಳೆಂಟು ವರ್ಷ ವಯಸ್ಸಿನÀ ಐದಾರು ಜನ ಬಾಲಕಿಯರೂ ಇದ್ದರು. ಅಕಸ್ಮಾತ್ತಾಗಿ ಕೆರೆ, ಬಾವಿಯಲ್ಲಿ ಬಿದ್ದು ಮುಳುಗುತ್ತಿದ್ದವರನ್ನು ಪ್ರಾಣಾಪಾಯದಿಂದ ಉಳಿಸುವ ಸುಲಭೋಪಾಯದ ಕ್ರಮಗಳನ್ನು ಆ ಕ್ಲಬ್ನವರು ಹೇಳಿಕೊಡುತ್ತಿದ್ದ ಕಾರಣ, 50 ಜನ ಪೊಲೀಸರೂ ಸಹ ಈಜು ತರಬೇತಿ ಪಡೆದಿದ್ದರು.
ಡಾಲ್ಫಿನ್ ಸ್ವಿಮ್ಮಿಂಗ್ಕ್ಲಬ್ನವರು ಈ ಕೆರೆಯ ಕಟ್ಟೆಯಲ್ಲಿ ನೀರು ಆಳವಾಗಿರುವ ಕಡೆ ಮೇಲಿನಿಂದ ಜಿಗಿಯಲು ಅನುಕೂಲವಾಗುವ ಹಾಗೆ ಎರಡು ಕಬ್ಬಿಣದ ಗರ್ಡರ್ಗಳನ್ನು ಅಳವಡಿಸಿದರು. ಆನಂತರ ಅಲ್ಲಿಯೇ ಪಕ್ಕದಲ್ಲಿ ಪುರುಷರು ಮತ್ತು ಮಹಿಳೆಯರು ಬಟ್ಟೆ ಬದಲಾಯಿಸಿಕೊಳ್ಳುವುದಕ್ಕಾಗಿ ವೇದಿಕೆಯುಳ್ಳ ಎರಡು ಕೊಠಡಿಗಳ ಕಲ್ಲಿನ ಕಟ್ಟಡವನ್ನು ನಿರ್ಮಿಸಿದರು (ಈಗಲೂ ಗರ್ಡರ್ ಮತ್ತು ಕಟ್ಟಡವನ್ನು ಕಾಣಬಹುದು). ಆಗಾಗ್ಗೆ ಈಜುವ ಸ್ಪರ್ಧೆಗಳು ನಡೆಯಲು ಪ್ರಾರಂಭವಾಯಿತು.
ಈ ಕ್ಲಬ್ಗೆ ಸೇರಿ ಬಹಳ ಶ್ರದ್ಧೆಯಿಂದ ಈಜು ಕಲಿಯುತ್ತಿದ್ದ ಒಂಬತ್ತು ವರ್ಷ ವಯಸ್ಸಿನ ಬೈರಮ್ಮ ಎಂಬ ಬಾಲಕಿ 1934ರ ವೇಳೆಗೆ ದೀರ್ಘಕಾಲ ಈಜುವ ಹಾಗೂ ತೇಲುವ ಸಾಹಸದಲ್ಲಿ ಪರಿಣತೆಯಾಗಿದ್ದಳು. ಆಕೆಯ ಜೊತೆಯಲ್ಲಿ ಈಜು ಕಲಿಯುತ್ತಿದ್ದವರೆಲ್ಲರೂ ಆಕೆಯ ಸಾಹಸವನ್ನು ಕಂಡು ಬೆರಗಾದರು.
12 ಗಂಟೆ ಈಜುವ ಸಂಕಲ್ಪ
ನೀರಿನಲ್ಲಿ ಈಜುತ್ತಾ ತೇಲುತ್ತಾ ಗಂಟೆಗಟ್ಟಲೆ ನೀರಿನಲ್ಲಿ ಇರುವುದನ್ನು ಮೈಗೂಡಿಸಿಕೊಂಡಿದ್ದ ಆಕೆ 1934ರ ಏಪ್ರಿಲ್ 22ರ ಭಾನುವಾರದಂದು ಸತತ 12 ಗಂಟೆಗಳ ಕಾಲ ಈಜಲು ಸಂಕಲ್ಪಿಸಿದಳು. ಕ್ಲಬ್ನವರು ಈ ಸಾಹಸ ಪ್ರದರ್ಶನಕ್ಕೆ ಸಕಲ ಏರ್ಪಾಟನ್ನು ಮಾಡಿದರು. ಈಜುವ ವೇಳೆ ಮುಂಜಾನೆ ಆರು ಗಂಟೆಯಿಂದ ಸಂಜೆ ಆರು ಗಂಟೆಯವರೆಗೆ ಎಂದು ನಿರ್ಧರಿಸಿ ಪ್ರಚಾರ ಮಾಡಲಾಯಿತು. ಅಂದು ಬಾಲಕಿಯ ಸಾಹಸವನ್ನು ಕಾಣಲು ಬೆಳಗಿನ ಜಾವದಿಂದಲೇ ನೂರಾರು ಜನ ಕೆರೆಯ ಏರಿಯ ಮೇಲೆ ಬಂದು ಸೇರತೊಡಗಿದರು. ನಗರದ ಗಣ್ಯವ್ಯಕ್ತಿಗಳನೇಕರು ಅಂದು ಮುಖ್ಯ ವೀಕ್ಷಕರಾಗಿದ್ದರು.
ಬೆಳಗ್ಗೆ ಆರು ಗಂಟೆ ಐದು ನಿಮಿಷಕ್ಕೆ ಸರಿಯಾಗಿ ಬೈರಮ್ಮ ನೀರಿಗಿಳಿದಳು. ಸಾವಿರಾರು ಜನ ಬೈರಮ್ಮನ ಸಾಹಸ ಕಾಣಲು ಒಂದೇಸಮನೆ ಬರಲು ಪ್ರಾರಂಭಿಸಿದರು. ಕೆರೆಯ ಏರಿಯು ಜಾತ್ರಾಸ್ಥಳದಂತಾಯಿತು. ಆಕೆಯ ರಕ್ಷಣೆಗೆ ಸಂಸ್ಥೆಯ ಹಲವಾರು ನುರಿತ ಈಜುಗಾರರು ಹಾಜರಿದ್ದು, ಎರಡು ಗಂಟೆಗೊಮ್ಮೆ ದೋಣಿಯಲ್ಲಿ ಬೈರಮ್ಮನ ಸಮೀಪ ಹೋಗಿ ಆಕೆಯನ್ನು ಮುಟ್ಟದೆ, ಒಂದು ಕೋಲಿಗೆ ಲೋಟವನ್ನು ಸಿಕ್ಕಿಸಿ, ಅದರಲ್ಲಿ ಬಾದಾಮಿ ಹಾಲು ಮತ್ತು ಟೊಮೊಟೋ ರಸವನ್ನು ಆಹಾರವಾಗಿ ಕೊಡುತ್ತಿದ್ದರು. ಸಂಜೆ ಆರು ಗಂಟೆ ಐದು ನಿಮಿಷಕ್ಕೆ ಸರಿಯಾಗಿ ಬೈರಮ್ಮ ದಡ ಸೇರುತ್ತಿದ್ದಂತೆಯೇ ಅಲ್ಲಿ ಸೇರಿದ್ದವರೆಲ್ಲರೂ ಕರತಾಡನ ಮಾಡಿ ಹಾರ ತುರಾಯಿಗಳನ್ನು ಮತ್ತು ಉಡುಗೊರೆಗಳನ್ನು ಅರ್ಪಿಸಿದರು. ಸಾರ್ವಜನಿಕರು ಬಾಲಕಿಯ ಸಾಹಸವನ್ನು ಕೊಂಡಾಡಿದರು.
18 ಗಂಟೆ ಈಜುವ ಸಂಕಲ್ಪ
ಮೂರು ವಾರಗಳ ನಂತರ ಬಾಲಕಿ ಬೈರಮ್ಮ 18 ಗಂಟೆಗಳ ಕಾಲ ಈಜುವ ಸಂಕಲ್ಪ ಮಾಡಿದಳು. ಅದಕ್ಕಾಗಿ 1934ರ ಮೇ 19 ಶನಿವಾರ ಮಧ್ಯರಾತ್ರಿ 12 ಗಂಟೆಯಿಂದ 20ನೇ ತಾರೀಖು ಭಾನುವಾರ ಸಂಜೆ ಆರು ಗಂಟೆವರೆಗಿನ ವೇಳೆಯನ್ನು ನಿಗದಿಪಡಿಸಿದರು. ಹಿಂದಿನ ರೀತಿಯಲ್ಲಿಯೇ ಎಲ್ಲ ಸಿದ್ಧತೆಗಳನ್ನು ಏರ್ಪಡಿಸಿದರು. ಕಾರ್ಯಕ್ರಮದ ಉಸ್ತುವಾರಿಯನ್ನು ಚಾಮರಾಜಪೇಟೆ ಪೊಲೀಸ್ಠಾಣೆಯ ಸಬ್ಇನ್ಸ್ಪೆಕ್ಟರ್ ವಹಿಸಿಕೊಂಡರು. 19ರಂದು ಮಧ್ಯರಾತ್ರಿ 12 ಗಂಟೆಯಾಗುತ್ತಿದ್ದಂತೆಯೇ ಹಲವಾರು ಪೆಟ್ರೋಮಾಕ್ಸ್ ದೀಪಗಳನ್ನು ಕೆರೆಯಬಳಿ ವಾಸಿಸುತ್ತಿದ್ದ ಸಾರ್ವಜನಿಕರು ತಾವಾಗಿಯೇ ಆಗಮಿಸಿ ವ್ಯವಸ್ಥೆ ಮಾಡಿದರು. ವೇಳೆಗೆ ಸರಿಯಾಗಿ ಬೈರಮ್ಮ ಕೆರೆಗಿಳಿದಳು. ರಾತ್ರಿಯೆಲ್ಲಾ ಈಕೆಯನ್ನು ಗಮನಿಸಲು ತೀರ್ಪುಗಾರರನ್ನು ನೇಮಿಸಿದರು. ಮರುದಿನ ಹಿಂದಿನ ಪ್ರದರ್ಶನ ನೋಡಲು ಬಂದವರಿಗಿಂತ ಹೆಚ್ಚು ಜನ ಬರತೊಡಗಿದರು. ಕೆರೆ ಬಳಿ ಇದ್ದ ದೋಭಿಘಾಟ್ನ ಅಗಸರೆಲ್ಲರೂ ಸಂತೋಷದಿಂದ ಸ್ವಯಂಸೇವಕರಾಗಿ ಅಂದಿನ ಜನಸಂದಣಿಯನ್ನು ನಿಯಂತ್ರಿಸಿದರು. ಆಗಿನ ದಿವಾನರಾಗಿದ್ದ ಮಿರ್ಜಾ ಇಸ್ಮಾಯಿಲ್ ಅವರೂ ಬೈರಮ್ಮನ ಸಾಹಸವನ್ನು ವೀಕ್ಷಿಸಲು ಆಗಮಿಸಿದ್ದರು. ಸಂಜೆ ಆರುಗಂಟೆ 13 ನಿಮಿಷಕ್ಕೆ ಸರಿಯಾಗಿ ವೀರಕನ್ಯೆ ಬ್ಯೆರಮ್ಮ ದಡ ಸೇರಿದಳು. ನಗರದ ಪತ್ರಿಕೆಗಳಲ್ಲಿ ಚಿತ್ರಸಮೇತ ವರದಿಯಾಯಿತು. ಕೇವಲ ಒಂಬತ್ತು ವರ್ಷದ ಬಾಲಕಿ ಬೈರಮ್ಮನ ಈ ದಾಖಲೆ ವಿಶ್ವದಾಖಲೆಯಾಯಿತು. ಇಂಗ್ಲೆಂಡಿನ ಪತ್ರಿಕೆಗಳಲ್ಲಿಯೂ ಸಹ ಈಕೆಯ ಸಾಹಸ ವರದಿಯಾಯಿತು.
ಈ ಪ್ರದರ್ಶನ ನಡೆದ ಇಪ್ಪತ್ತು ದಿನಗಳ ನಂತರ ನಗರದ ಪುರಸಭೆಯವರು ಕೆ.ಪಿ. ಪುಟ್ಟಣ್ಣಶೆಟ್ಟಿಯವರ ಅಧ್ಯಕ್ಷತೆಯಲ್ಲಿ ಮೆಜೆಸ್ಟಿಕ್ ಚಿತ್ರಮಂದಿರದಲ್ಲಿ ಸಾರ್ವಜನಿಕ ಸಮಾರಂಭವನ್ನು ಏರ್ಪಡಿಸಿ ಚಿನ್ನದ ಪದಕವೂ ಸೇರಿದಂತೆ ಸುಮಾರು 30 ಪದಕ ಹಾಗೂ ಸುಮಾರು 30 ಬೆಳ್ಳಿಯ ಬಟ್ಟಲುಗಳನ್ನು ಬೈರಮ್ಮನಿಗೆ ನೀಡಿ ಸತ್ಕರಿಸಿದರು.
ಬೈರಮ್ಮ ತನ್ನ ಗುರುಗಳಾಗಿದ್ದ ಬಿ.ಆರ್. ಶ್ರೀನಿವಾಸಯ್ಯ ಅವರೊಂದಿಗೆ ಆರ್ಕಾಟ್ ಶ್ರೀನಿವಾಸಾಚಾರ್ ರಸ್ತೆಯಲ್ಲಿದ್ದ ಬಿ. ಕೇಸರ್ಸಿಂಗ್ ಅವರ ಠಾಗೂರ್ ಆರ್ಟ್ ಸ್ಟುಡಿಯೋಗೆ ಹೋಗಿ ಈಜುಡುಗೆಯೊಂದಿಗೆ ಫೋಟೋ ತೆಗೆಸಿಕೊಂಡರು.
1939ರವರೆಗೂ ಡಾಲ್ಫಿನ್ ಸ್ವಿಮ್ಮಿಂಗ್ಕ್ಲಬ್ ಕಾರ್ಯನಿರ್ವಹಿಸುತ್ತಿದ್ದು, ಆನಂತರ ಇಲ್ಲಿನ ಎಲ್ಲ ಈಜುಗಾರರು 1940ರಲ್ಲಿ ಕಾರ್ಪೋರೇಶನ್ ಕಛೇರಿ ಬಳಿ ಆಧುನಿಕವಾಗಿ ನಿರ್ಮಾಣಗೊಂಡ ಕಾರ್ಪೋರೇಶನ್ ಸ್ವಿಮ್ಮಿಂಗ್ಪೂಲ್ಗೆ ಹೋಗತೊಡಗಿದರು.