3. ಸರ್ವೋದಯ ಆರ್ಥಿಕವ್ಯವಸ್ಥೆ
ಸರ್ವೋದಯ ಆರ್ಥಿಕವ್ಯವಸ್ಥೆಯ ಮೂಲಪುರುಷ ಮೋಹನದಾಸ ಕರಮಚಂದ ಗಾಂಧಿ (1869-1948). ಅಕ್ಟೋಬರ್ 2, 1869ರಲ್ಲಿ ಗುಜರಾತಿನ ಪೋರಬಂದರಿನಲ್ಲಿ ಜನ್ಮತಳೆದರು. ವೃತ್ತಿಯಲ್ಲಿ ವಕೀಲರಾಗಿದ್ದರು. ಅರ್ಥಶಾಸ್ತ್ರವನ್ನು ವಿಶೇಷ ವಿಷಯವಾಗಿ ಓದಿದ ಅವರು ಆ ವಿಷಯದಲ್ಲಿ ಯಾವುದೇ ಪದವಿಯನ್ನು ಪಡೆಯದೇ ಇದ್ದರೂ, ವಾಸ್ತವದಲ್ಲಿ ಓರ್ವ ಆರ್ಥಿಕತಜ್ಞರೂ ಚಿಂತಕರೂ ಆಗಿ ರೂಪುಗೊಂಡರು. ಪ್ರಸಿದ್ಧ ಜರ್ಮನ್ ಅರ್ಥಶಾಸ್ತ್ರಜ್ಞ ಡಾ. ಷೂಮ್ಯಾಕರ್ ಪ್ರಕಾರ “20ನೇ ಶತಮಾನದ ಅತ್ಯಂತ ಜನಪ್ರಿಯ ಹಾಗೂ ಪ್ರಭಾವಶಾಲಿ ಆರ್ಥಿಕತಜ್ಞರಾದ ಇಂಗ್ಲೆಂಡಿನ ಲಾರ್ಡ್ ಕೀನ್ಸ್ ಅವರಿಗಿಂತಲೂ ಗಾಂಧಿಯವರು ಹೆಚ್ಚು ಪ್ರತಿಭಾನ್ವಿತ, ಪ್ರಭಾವಶಾಲಿ ಅರ್ಥಶಾಸ್ತ್ರಜ್ಞರಾಗಿದ್ದರು. ವಿಶೇಷವೇನೆಂದರೆ ಅವರು ಜನಸಾಮಾನ್ಯರ ಅತಿದೊಡ್ಡ ಅರ್ಥಶಾಸ್ತ್ರಜ್ಞರಾಗಿದ್ದುದು.”
ಜಗತ್ತಿನ ಎಲ್ಲ ‘ಇಸಂ’ಗಳು ಮತ್ತು ‘ಆರ್ಥಿಕ ವ್ಯವಸ್ಥೆ’ಗಳು ಮಾನವನ ಮೂಲಭೂತ ಆರ್ಥಿಕ ಸಮಸ್ಯೆಗಳನ್ನು ಪರಿಹರಿಸಲು ವಿಫಲವಾಗಿವೆ ಹಾಗೂ ಜನಸಾಮಾನ್ಯರ ಜೀವನವನ್ನು ಸುಧಾರಿಸುವಲ್ಲಿಯೂ ಸಂಪೂರ್ಣವಾಗಿ ಸೋತಿವೆ ಎಂಬುದನ್ನು ತಮ್ಮ ಆಳವಾದ ಅನುಭವ ಮತ್ತು ಚಿಂತನೆಗಳಿಂದ ಮನಗಂಡು ಗಾಂಧಿಯವರು 20ನೇ ಶತಮಾನದ ಮಧ್ಯಭಾಗದಲ್ಲಿ ಇನ್ನೊಂದು ನವೀನ ಹಾಗೂ ಪರ್ಯಾಯ ಆರ್ಥಿಕ ಮಾದರಿಯನ್ನು ಹುಟ್ಟುಹಾಕಿದರು. ಇದನ್ನು ನಾವು ‘ಸರ್ವೋದಯ ಆರ್ಥಿಕ ಮಾದರಿ’ಎಂದು ಕರೆಯುತ್ತೇವೆ. ಈ ಆರ್ಥಿಕ ಮಾದರಿ ಯಾವುದೇ ಪಾಶ್ಚಾತ್ಯ ಸಿದ್ಧಾಂತ ಅಥವಾ ಆರ್ಥಿಕ ಮಾದರಿಗಳ ನಕಲು ಆಗಿರದೆ ಗಾಂಧಿಯವರ Original Economic Model ಆಗಿದೆ. ಇದು ನೂರಕ್ಕೆ ನೂರರಷ್ಟು ಭಾರತೀಯ ಮೂಲದ್ದಾಗಿದೆ. ಈ ನೂತನ ಆರ್ಥಿಕ ಮಾದರಿ ಅನೇಕ ಶತಮಾನಗಳ ಗುಲಾಮಗಿರಿಯಿಂದ ಜರ್ಝರಿತವಾದ ಭಾರತದ ಆರ್ಥಿಕ ಸಮಸ್ಯೆಗಳನ್ನು ಪರಿಹರಿಸಲು ಸಮರ್ಥ ಸಾಧನವಾಗುತ್ತದೆ ಎನ್ನುವ ವಿಶ್ವಾಸ ಅವರದಾಗಿತ್ತು.
ಈ ನೂತನ ಆರ್ಥಿಕ ಮಾದರಿ ಜನರ ಆರ್ಥಿಕ ಜೀವನಮಟ್ಟವನ್ನು ಸುಧಾರಿಸುವುದರ ಜೊತೆಜೊತೆಗೆ ಅವರ ಆಧ್ಯಾತ್ಮಿಕ ಮತ್ತು ನೈತಿಕ ಉತ್ಕರ್ಷದೆಡೆಗೂ ಹೆಚ್ಚಿನ ಗಮನ ನೀಡಿರುವುದು ವಿಶೇಷ. ಹೆಸರೇ ಸೂಚಿಸುವಂತೆ ಸರ್ವೋದಯ ಎಂದರೆ ಸರ್ವರ ಉದಯ ಹಾಗೂ ಕಲ್ಯಾಣ; ಎಲ್ಲರ ಸರ್ವಾಂಗೀಣ ಮತ್ತು ಸರ್ವತೋಮುಖ ಬೆಳವಣಿಗೆ. ಮಾನವರ ವಿವಿಧ ಚಟುವಟಿಕೆಗಳಾದ ಶಾರೀರಿಕ, ಮಾನಸಿಕ, ಬೌದ್ಧಿಕ, ಆಧ್ಯಾತ್ಮಿಕ, ನೈತಿಕ, ಸಾಮಾಜಿಕ, ರಾಜಕೀಯ ಹಾಗೂ ಆರ್ಥಿಕ ಕ್ಷೇತ್ರಗಳ ಅಭಿವೃದ್ಧಿಯಿಂದ ಸರ್ವೋದಯವಾಗುವುದು. ಆದ್ದರಿಂದ ಸಕಲವ್ಯಕ್ತಿಗಳ ಆರ್ಥಿಕ, ಸಾಮಾಜಿಕ, ಸಾಂಸ್ಕೃತಿಕ ಮುನ್ನಡೆಯೇ ಸರ್ವೋದಯದ ಗುರಿ.
ಗಮನಿಸಬೇಕಾದ ಅಂಶವೆಂದರೆ ಗಾಂಧಿಯವರ ಈ ಆರ್ಥಿಕ ಮಾದರಿ ವಿಶೇಷವಾಗಿ ಭಾರತ ಮತ್ತು ಇತ್ತೀಚೆಗೆ ಬೆಳವಣಿಗೆ ಹೊಂದುತ್ತಿರುವ ಇತರ ದೇಶಗಳ ಆರ್ಥಿಕ ಪ್ರಗತಿಗೆ ಹೆಚ್ಚು ಸೂಕ್ತವಾಗಿದೆ ಎಂಬುದು ಬಹುಜನರ ಅಭಿಪ್ರಾಯ. ಕೈಗಾರಿಕೀಕರಣಗೊಂಡ ದೇಶಗಳಿಗಿಂತ ಕೃಷಿ ಆಧಾರಿತ ಮತ್ತು ಕ್ಷಿಪ್ರಗತಿಯಲ್ಲಿ ಬೆಳವಣಿಗೆ ಹೊಂದುತ್ತಿರುವ ದೇಶಗಳಿಗೆ ಈ ಮಾದರಿ ಹೆಚ್ಚು ಪ್ರಯೋಜನಕಾರಿಯಾಗಿದೆ.
ಗಾಂಧಿಯವರ ಸರ್ವೋದಯ ಮಾದರಿ, ಬಂಡವಾಳಶಾಹಿ ಆರ್ಥಿಕವ್ಯವಸ್ಥೆ ಮತ್ತು ಸಮತಾವಾದಿ ಆರ್ಥಿಕವ್ಯವಸ್ಥೆಗಳಿಗಿಂತ ಭಿನ್ನವಾಗಿದ್ದುಕೊಂಡು ಇಂದಿಗೂ ಹೇಗೆ ಪ್ರಸ್ತುತವಾಗಿದೆ – ಎಂಬುದನ್ನು ನೋಡೋಣ.
1. ಆರ್ಥಿಕವ್ಯವಸ್ಥೆಗಳ ಉದ್ದೇಶಗಳು
ಬಂಡವಾಳಶಾಹಿ ಆರ್ಥಿಕ ವ್ಯವಸ್ಥೆಯ ಮುಖ್ಯ ಉದ್ದೇಶ ಲಾಭದ ಗಳಿಕೆ. ವಿವಿಧ ಆರ್ಥಿಕ ಚಟುವಟಿಕೆಗಳಿಗೆ ಇದೇ ಮೂಲ ಪ್ರೇರಣೆ ಹಾಗೂ ಸ್ಫೂರ್ತಿಯ ಕೇಂದ್ರಬಿಂದು; ಗರಿಷ್ಟ ತೃಪ್ತಿಯನ್ನು (Maximum Satisfaction) ಪಡೆಯುವುದು ಅನುಭೋಗಿಗಳ ಉದ್ದೇಶ. ಕನಿಷ್ಠ ಉತ್ಪಾದನಾ ವೆಚ್ಚದಿಂದ ಅತ್ಯಧಿಕ ಉತ್ಪಾದನೆ ಮಾಡುವುದು (Maximum Production with Minimum Cost) ಉತ್ಪಾದಕರ ಗುರಿಯಾದರೆ ಗರಿಷ್ಠ ಲಾಭ ಗಳಿಕೆ (Maximum Profit) ವ್ಯಾಪಾರಿಗಳೆಲ್ಲರ ಉದ್ದೇಶ; ‘ಕನಿಷ್ಠ ಕೆಲಸ, ಗರಿಷ್ಠ ವೇತನ’ (Maximum wage with minimum work) ಇದು ಶ್ರಮಿಕರ ಗುರಿಯಾಗಿದೆ. ಹೀಗೆ ಎಲ್ಲ ರೀತಿಯ ಆರ್ಥಿಕ ಚಟುವಟಿಕೆಗಳ ಮೂಲ ಉದ್ದೇಶ ಗರಿಷ್ಠ ಪ್ರಯೋಜನ ಅಥವಾ ಫಲವನ್ನು (Maximum Benifit) ಪಡೆಯುವುದೇ ಆಗಿದೆ. ವ್ಯಕ್ತಿಯ ವೈಯಕ್ತಿಕ ಹಿತಾಸಕ್ತಿಯ ವೈಭವೀಕರಣಕ್ಕೆ ಇಲ್ಲಿ ಹೆಚ್ಚಿನ ಮಹತ್ತ್ವ ನೀಡಿರುವುದನ್ನು ಗಮನಿಸಬಹುದು.
ಸಮತಾವಾದಿ ಆರ್ಥಿಕ ವ್ಯವಸ್ಥೆಯ ಮುಖ್ಯ ಉದ್ದೇಶ ಗರಿಷ್ಠ ಸಾಮಾಜಿಕ ಕಲ್ಯಾಣ (Maximum Social Welfare).. ಶೋಷಣಮುಕ್ತ ಸಮಾಜದಲ್ಲಿ ಆರ್ಥಿಕ ಸಮಾನತೆಯ ಮೂಲಕ ಭೌತಿಕ ಪ್ರಗತಿಯನ್ನು ಸಾಧಿಸುವ ಉದ್ದೇಶ ಇಲ್ಲಿದೆ. ಕಾರ್ಮಿಕರ ಸರ್ವಾಧಿಕಾರದ ಆಡಳಿತಮಾರ್ಗದಿಂದ ಯಾಂತ್ರೀಕೃತ ಹಾಗೂ ಕೈಗಾರಿಕಾ ಸಮಾಜದ ಸ್ಥಾಪನೆ ಅದರ ಉದ್ದೇಶ. ಹೀಗೆ ಸಾಮೂಹಿಕ ಭೌತಿಕ ಕಲ್ಯಾಣಕ್ಕೆ ಇಲ್ಲಿ ಹೆಚ್ಚಿನ ಒತ್ತು ನೀಡಿರುವುದನ್ನು ನಾವು ಗಮನಿಸಬಹುದು. ಸಮತಾವಾದಿಗಳ ಪ್ರಕಾರ ‘ಧರ್ಮ ಮತ್ತು ತತ್ತ್ವಶಾಸ್ತ್ರ ಬಡವರಿಗೆ ಮತ್ತುಬರಿಸುವ ಅಫೀಮಿನಂತೆ’; ‘ನೈತಿಕ ಮತ್ತು ಆಧ್ಯಾತ್ಮಿಕ ಮೌಲ್ಯಗಳು ಕೇವಲ ಅತ್ಯದ್ಭುತ ಕಲ್ಪನೆಗಳು ಮಾತ್ರ’. ಆದ್ದರಿಂದ ಅವುಗಳನ್ನು ಮೈಗೂಡಿಸಿಕೊಳ್ಳುವ ಅವಕಾಶಗಳು ಇರುವುದಿಲ್ಲ – ಎನ್ನುವುದು ಅವರ ಪ್ರತಿಪಾದನೆ.
ಗಾಂಧಿಯವರ ಆರ್ಥಿಕ ಮಾದರಿಯ ಉದ್ದೇಶವು ಮೇಲಿನ ಎರಡೂ ಆರ್ಥಿಕ ವ್ಯವಸ್ಥೆಗಳ ಉದ್ದೇಶಕ್ಕಿಂತ ತೀರಾ ಭಿನ್ನವಾಗಿರುವುದನ್ನು ನಾವು ಗಮನಿಸಬಹುದು. ಅವರ ಮಾತುಗಳಲ್ಲೇ ಹೇಳುವುದಾದರೆ – “ಯಾವುದೇ ಆರ್ಥಿಕ ವ್ಯವಸ್ಥೆ ಆ ದೇಶದ ಜನರಿಗೆ ಕನಿಷ್ಠತಮ ಆರ್ಥಿಕ ಅಗತ್ಯಗಳನ್ನು ಒದಗಿಸಬೇಕು. ಪ್ರತಿವ್ಯಕ್ತಿಗೂ ಸಮತೋಲಿತ ಆಹಾರ, ಅಗತ್ಯ ಪ್ರಮಾಣದ ಬಟ್ಟೆ, ವಾಸಕ್ಕೆ ಯೋಗ್ಯವಾದ ಮನೆ, ಮಕ್ಕಳಿಗೆ ಅಗತ್ಯ ಶಿಕ್ಷಣ, ಎಲ್ಲರಿಗೂ ಆವಶ್ಯಕ ವೈದ್ಯಕೀಯ ಸೇವೆಗಳು ದೊರಕಬೇಕು. ಇವು ಎಲ್ಲರಿಗೂ ಬೇಕಾದಂತಹ ಜೀವನಾವಶ್ಯಕಗಳು. ಪ್ರತಿಯೊಬ್ಬ ವ್ಯಕ್ತಿಯೂ ದುಡಿದು ತನ್ನ ಜೀವನದ ಕನಿಷ್ಠ ಅಗತ್ಯಗಳನ್ನು ಪೂರೈಸಿಕೊಳ್ಳಲು ಸಹಕಾರಿಯಾಗಬೇಕು. ಮನುಷ್ಯ ಸ್ವಾವಲಂಬಿಯಾಗಿ ದಿನನಿತ್ಯದ ಜೀವನನಿರ್ವಹಣೆ ಮಾಡಲು ಪೆÇ್ರೀತ್ಸಾಹ ನೀಡಬೇಕು. ದೇಶದ ಸಂಪನ್ಮೂಲಗಳನ್ನು ಪೂರ್ಣಪ್ರಮಾಣದಲ್ಲಿ ಉಪಯೋಗಿಸಿ ಪ್ರತಿ ವ್ಯಕ್ತಿಯ ಹಾಗೂ ಇಡೀ ಸಮಾಜದ ಅಭಿವೃದ್ಧಿಯನ್ನು ಸಾಧಿಸಲು ನೆರವಾಗಬೇಕು.”
ಈ ಆರ್ಥಿಕ ಮಾದರಿ ಮಾನವನ ಸುಖ-ಸಂತೋಷ ಆಧಾರಿತ ಬೌದ್ಧಿಕ ಜೀವನಮಟ್ಟವನ್ನು ಹೆಚ್ಚಿಸುವುದರ ಜೊತೆ ಜೊತೆಯಲ್ಲಿಯೇ ಆಧ್ಯಾತ್ಮಿಕ ಮತ್ತು ನೈತಿಕ ಜೀವನಮೌಲ್ಯಗಳ ವೃದ್ಧಿಯ ಕಡೆಗೂ ಗಮನಹರಿಸುತ್ತದೆ; ಆದರ್ಶ ಜೀವನನಿರ್ವಹಣೆಗೆ ಒತ್ತುನೀಡುತ್ತದೆ. ಆದ್ದರಿಂದ ಸರ್ವೋದಯ = ಭೌತಿಕಪ್ರಗತಿ + ಆಧ್ಯಾತ್ಮಿಕ ಮತ್ತು ನೈತಿಕ ಪ್ರಗತಿ. ಹೀಗೆ ಗಾಂಧಿಯವರು ಮೊತ್ತಮೊದಲಬಾರಿಗೆ ಒಂದು ನಾಗರಿಕ ಹಾಗೂ ಸುಸಂಸ್ಕೃತ ಸಮಾಜಕ್ಕೆ ಅತಿ ಅಗತ್ಯವಾದ ಸಾರ್ವಕಾಲಿಕ ನೈತಿಕಮೌಲ್ಯಗಳ ಅಗತ್ಯತೆಯನ್ನು ಎತ್ತಿಹಿಡಿದರು. ಗಮನಿಸಬೇಕಾದ ಸಂಗತಿಯೆಂದರೆ ಇನ್ನಾವ ಆರ್ಥಿಕ ವ್ಯವಸ್ಥೆಗಳೂ ಈ ಮೂಲಭೂತ ಅಂಶವನ್ನು ಮಾನ್ಯಮಾಡಲಿಲ್ಲ. ಭೌತಿಕ ಪ್ರಗತಿಯೊಂದಿಗೆ ನೈತಿಕ-ಅಧ್ಯಾತ್ಮಿಕ ಪ್ರಗತಿಯನ್ನು ಪ್ರಮುಖವೆಂದು ಪ್ರತಿಪಾದಿಸಿರುವುದು ಗಾಂಧೀಯ ಆರ್ಥಿಕ ಮಾದರಿಯ ಪ್ರಮುಖ ಕೊಡುಗೆ ಎಂದರೆ ತಪ್ಪಾಗಲಾರದು.
2. ವಿವಿಧ ಆರ್ಥಿಕವ್ಯವಸ್ಥೆಗಳ ಗುರಿಮುಟ್ಟಲು ಸಾಧನದ ಆಯ್ಕೆ
ವಿವಿಧ ಆರ್ಥಿಕವ್ಯವಸ್ಥೆಗಳು ತಮ್ಮ ಗುರಿಯನ್ನು ಮುಟ್ಟಲು ವಿವಿಧ ರೀತಿಯ ಸಾಧನಗಳನ್ನು ಆಯ್ಕೆ ಮಾಡಿಕೊಂಡಿವೆ. ನಾವು ಗಮನಿಸಬಹುದು. ಬಂಡವಾಳಶಾಹಿ ವ್ಯವಸ್ಥೆಯಲ್ಲಿ ಸಾಂಪ್ರದಾಯಿಕವಾದ ಲಾಭಗಳಿಕೆಯ ಉದ್ದೇಶ, ಪೈಪೆÇೀಟಿ, ಏಕಸ್ವಾಮ್ಯತೆ, ಕಿರಿಜನ ಸ್ವಾಮ್ಯತೆ, ಸಂಪತ್ತಿನ ಖಾಸಗಿ ಒಡೆತನ, ಆರ್ಥಿಕಸ್ವಾತಂತ್ರ್ಯ, ಸ್ವಯಂಚಾಲಿತ ಆರ್ಥಿಕವ್ಯವಸ್ಥೆ, ಬೆಲೆಯಂತ್ರದ ಬಳಕೆ, ಆರ್ಥಿಕ ಅಸಮಾನತೆ, ವರ್ಗಸಂಘರ್ಷ, ಶೋಷಣೆ ಇತ್ಯಾದಿಗಳ ಮೂಲಕ ವ್ಯಕ್ತಿಗತ ಶ್ರೇಯಸ್ಸಿಗಾಗಿ, ವ್ಯಕ್ತಿಯ ಉನ್ನತಿಗಾಗಿ ಸಂಪತ್ತಿನ ಗಳಿಕೆ, ಶೇಖರಣೆ ಮತ್ತು ಸಂಪೂರ್ಣ ಉಪಯೋಗ ನಡೆಯುವುದರಿಂದ ‘ಬಹುಜನ ಹಿತ’ ಕಣ್ಮರೆಯಾಗಿ ‘ಅಲ್ಪ ಜನಹಿತ’ ಸಾಧನೆಯಾಗಿರುವುದನ್ನು ಕಾಣುತ್ತೇವೆ. ಹೀಗಾಗಿ ಸಮೃದ್ಧಿಯ ನಡುವೆ ಅತೃಪ್ತಿಯ ಅಗಾಧತೆಯನ್ನೂ ಸ್ಪಷ್ಟವಾಗಿಯೇ ಗುರುತಿಸಬಹುದು. ಸಮತೋಲಿತ, ಸಮಗ್ರ ಹಾಗೂ ಸರ್ವಾಂಗೀಣ ಬೆಳವಣಿಗೆಯನ್ನು ಸಾಧಿಸುವಲ್ಲಿ ಈ ವ್ಯವಸ್ಥೆ ವಿಫಲವಾಗಿರುವುದು ನಮಗೆಲ್ಲರಿಗೂ ಅನುಭವವೇದ್ಯ.
ಸಮತಾವಾದ ತನ್ನ ಗುರಿಯನ್ನು ಮುಟ್ಟಲು ನ್ಯಾಯೋಚಿತವಲ್ಲದ, ಸಮರ್ಥನೀಯವಲ್ಲದ ಅಡ್ಡದಾರಿಯನ್ನು ಹಿಡಿದಿರುವುದು ಎಲ್ಲರಿಗೂ ಗೊತ್ತಿರುವ ಸಂಗತಿ. ಅಧಿಕಾರ ಗಳಿಕೆಗಾಗಿ ನಡೆಸುವ ಹಿಂಸೆ, ಕ್ರೌರ್ಯ, ದರ್ಪ, ಕೊಲೆ, ಸುಲಿಗೆ, ದೌರ್ಜನ್ಯ, ದಬ್ಬಾಳಿಕೆ, ಬಲಪ್ರಯೋಗ, ಶೋಷಣೆ, ರಕ್ತಕ್ರಾಂತಿ ಮೊದಲಾದವುಗಳನ್ನು ಅದು ಸಮರ್ಥಿಸುತ್ತದೆ. ಈ ವಾಮಮಾರ್ಗಗಳು ಅಲ್ಪಾವಧಿಯಲ್ಲಿ ಫಲನೀಡಿದರೂ ದೀರ್ಘಾವಧಿಯಲ್ಲಿ ನಿಶ್ಚಿತ ಗುರಿಯನ್ನು ಸಾಧಿಸಲು ವಿಫಲವಾಗುತ್ತದೆ ಎಂಬುದನ್ನು ಚರಿತ್ರೆಯು ಸಾರಿಸಾರಿ ಹೇಳುತ್ತಿದೆ. ಆದ್ದರಿಂದ ಅನೀತಿ ಮತ್ತು ಅಧರ್ಮದ ಮಾರ್ಗಗಳಿಂದ ಎಂದೂ ನಮ್ಮ ಗುರಿಯನ್ನು ತಲಪಲು ಸಾಧ್ಯವಿಲ್ಲ ಎಂಬುದನ್ನು ನಾವು ಗಮನಿಸಬೇಕು.
ಸರ್ವೋದಯದ ಅಡಿಪಾಯವೇ ಸತ್ಯ, ಅಹಿಂಸೆ, ಪ್ರೀತಿ, ಪ್ರೇಮ, ಬಂಧುತ್ವ ಹಾಗೂ ಅಪರಿಗ್ರಹ. ಗಾಂಧಿಯವರು ಪರಿಶುದ್ಧ ಸಾಧನಗಳಿಂದ ಮಾತ್ರ ಪರಿಶುದ್ಧ ಗುರಿಯನ್ನು ಮುಟ್ಟಲು ಸಾಧ್ಯ ಎಂದು ಸ್ಪಷ್ಟಪಡಿಸುತ್ತಾರೆ. ಆದಕಾರಣ ಅವರು ಸರ್ವರ ಕಲ್ಯಾಣವನ್ನು ಸಾಧಿಸಲು ಆಯ್ಕೆಮಾಡಿದ ಸಾಧನ ಸರ್ವಕಾಲಕ್ಕೂ ಸಮರ್ಥನೀಯವಾದದ್ದು. ಅದೇ ಶಾಂತಿಯುತ ಅಹಿಂಸಾತ್ಮಕ ಹೋರಾಟದ ಮಾರ್ಗ. ಸತ್ಯಾಗ್ರಹ, ಅಸಹಕಾರ, ಪೌರ ಅವಿಧೇಯತೆ, ಉಪವಾಸ, ಮೌನ ಇತ್ಯಾದಿಗಳೇ ಗಾಂಧಿಯವರು ಉಪಯೋಗಿಸಿದ ಸಾಧನಗಳು, ಅಸ್ತ್ರ ಶಸ್ತ್ರಗಳು. ರಕ್ತಕ್ರಾಂತಿಯ ಬದಲು ರಕ್ತರಹಿತ ನಿಶ್ಶಬ್ದ ಕ್ರಾಂತಿಯ ಮಾರ್ಗವನ್ನು ಅವರು ಹಿಡಿದರು. ಮನುಷ್ಯನ ನಾಶದ ಬದಲು ಅವನ ಹೃದಯಪರಿವರ್ತನೆಗೆ ಹೆಚ್ಚಿನ ಮಹತ್ತ್ವ ನೀಡಿದರು. ಹೀಗೆ ಗಾಂಧಿಯವರು ‘Ends Justify the Mean’ ಎನ್ನುವ ಪಾಶ್ಚಾತ್ಯಮಾರ್ಗದಿಂದ ದೂರಸರಿದು ‘Means Justify the End’ ಎನ್ನುವ ಭಾರತೀಯ ಆದರ್ಶದ ಮಾರ್ಗವನ್ನು ಎತ್ತಿಹಿಡಿದರು. ಗಮನಿಸಬೇಕಾದ ಸಂಗತಿಯೆಂದರೆ ಗಾಂಧಿಯವರು ‘ಗುರಿಸಾಧನೆಗೆ ಬಳಸುವ ಸಾಧನಗಳೂ ಗುರಿಯಷ್ಟೇ ಮುಖ್ಯವಾದವು’ ಎಂದು ತಮ್ಮ ಆರ್ಥಿಕ ಮಾದರಿಯಲ್ಲಿ ಸ್ಪಷ್ಟಪಡಿಸಿದ್ದಾರೆ. ಶ್ರೇಷ್ಠ ಗುರಿಯನ್ನು ನಿರ್ಧರಿಸಿ, ಅದನ್ನು ಕಾರ್ಯರೂಪಕ್ಕೆ ತರಲು ಶ್ರೇಷ್ಠ ಸಾಧನಗಳನ್ನು ಬಳಸಿದಾಗ ಮಾತ್ರ ನಮಗೆ ಯಶಸ್ಸು ದೊರೆಯುವುದು’ ಎಂಬುದನ್ನು ಗಾಂಧಿಯವರು ಮತ್ತೆ ಮತ್ತೆ ಹೇಳಿದ್ದಾರೆ.
ವಿನೋಬಾ ಅವರ ಪ್ರಕಾರ ‘ಬಂಡವಾಳಶಾಹಿ ವ್ಯವಸ್ಥೆಯಲ್ಲಿ ನಾಲ್ಕು ಪ್ರಮುಖ ಅಂಶಗಳಿವೆ: ಕೇಂದ್ರೀಕರಣ, ಯಾಂತ್ರೀಕರಣ, ಯುದ್ಧಸಾಮಗ್ರಿಗಳು ಮತ್ತು ಶೋಷಣೆ.’ ಸಮತಾವಾದವು ಇವುಗಳಲ್ಲಿ ಮೊದಲ ಮೂರು ಅಂಶಗಳನ್ನು ಹಾಗೆಯೇ ಉಳಿಸಿಕೊಂಡು ಕೊನೆಯ ಅಂಶವನ್ನು ನಿರ್ಮೂಲನಗೊಳಿಸಿದೆ. ಹಾಗಾಗಿ ಸಮತಾವಾದವು ಬಂಡವಾಳಶಾಹಿಗಿಂತ ಸ್ವಲ್ಪ ಸುಧಾರಿತ ವ್ಯವಸ್ಥೆಯಾಗಿದೆ. ಸಮತಾವಾದಿಗಳು ಬಡವರ ಹಾಗೂ ಶೋಷಿತ ವರ್ಗಗಳ ಹಿತರಕ್ಷಣೆಮಾಡಿ, ಅವರು ದೇಶದ ಆರ್ಥಿಕ ಪ್ರಗತಿಯಲ್ಲಿ ತಮ್ಮ ಪಾಲನ್ನು ಸಮನಾಗಿ ಪಡೆಯುವಂತಹ ಒಂದು ಹೊಸ ಸಮಾಜವನ್ನು ನಿರ್ಮಿಸಿದರು ಎಂಬುದು ಅಷ್ಟರಮಟ್ಟಿಗೆ ಮೆಚ್ಚಲೇಬೇಕಾದ ಸಂಗತಿ.
ಗಾಂಧಿಯವರ ಸರ್ವೋದಯವು ಇದೇ ಉದ್ದೇಶವನ್ನು ಕಾರ್ಯಗತಗೊಳಿಸಲು ತನ್ನದೇ ಆದರೆ ವಿಭಿನ್ನ ಮಾರ್ಗವನ್ನು ಕಂಡುಕೊಂಡಿದೆ. ಮೇಲೆ ತಿಳಿಸಿದ ನಾಲ್ಕು ಅಂಶಗಳ ಬದಲಿಗೆ ವಿಕೇಂದ್ರೀಕರಣ, ಅನ್ನಕಾಯಕ, ಅಪರಿಗ್ರಹ ಹಾಗೂ ಧರ್ಮದರ್ಶಿ ತತ್ತ್ವಗಳ ಆಧಾರದ ಮೇಲೆ ಹೊಸ ಸಮಾಜವನ್ನು ನಿರ್ಮಿಸುವ ಸಂಕಲ್ಪ ಇಲ್ಲಿದೆ.
3. ವಿವಿಧ ಆರ್ಥಿಕವ್ಯವಸ್ಥೆಗಳಲ್ಲಿ ರಾಷ್ಟ್ರೀಯ ಸಂಪತ್ತಿನ ಕಲ್ಪನೆ
ಬಂಡವಾಳಶಾಹಿ ಹಾಗೂ ಸಮತಾವಾದಿ ವ್ಯವಸ್ಥೆಗಳನ್ನು ಸಮರ್ಥಿಸುವ ಪಾಶ್ಚಾತ್ಯ ಚಿಂತಕರ ಪ್ರಕಾರ “ಒಂದು ದೇಶದ ಸಂಪತ್ತು ಆ ದೇಶ ಉತ್ಪಾದನೆ ಮಾಡುವ ‘ಒಟ್ಟು ವಸ್ತುಗಳ ಪ್ರಮಾಣ’ವನ್ನು ಆಧರಿಸಿರುತ್ತದೆ. ಒಟ್ಟು ಸರಕು-ಸೇವೆಗಳ ಮತ್ತು ಅವುಗಳ ಅನುಭೋಗದ ಪ್ರಮಾಣ ಜನರ ಆರ್ಥಿಕ ಜೀವನಮಟ್ಟವನ್ನು (living standards of the people) ತಿಳಿಸುತ್ತದೆ ಹಾಗೂ ಇವೆರಡರ ನಡುವೆ ನೇರ ಸಂಬಂಧವಿದೆ. ಎರಡೂ ಆರ್ಥಿಕವ್ಯವಸ್ಥೆಗಳು ಜನರ ಜೀವನಮಟ್ಟವನ್ನು ನಿರಂತರವಾಗಿ ಸುಧಾರಿಸುವ ಸಲುವಾಗಿ ರಾಷ್ಟ್ರೀಯ ಉತ್ಪಾದನೆಯನ್ನು ಹೆಚ್ಚಿಸುವ ಪ್ರಯತ್ನಕ್ಕೆ ಒತ್ತು ನೀಡಿವೆ.
ಸರ್ವೋದಯವನ್ನು ಪ್ರತಿಪಾದಿಸಿದ ಗಾಂಧಿಯವರ ಪ್ರಕಾರ “ಒಂದು ದೇಶದ ಸಂಪತ್ತು ಎಂದರೆ ಚಿನ್ನ, ಬೆಳ್ಳಿ ಹಾಗೂ ಭೌತಿಕ ವಸ್ತುಗಳ ಒಟ್ಟು ಸಂಗ್ರಹವಲ್ಲ. ಬದಲಿಗೆ ಅದನ್ನು ಉತ್ಪಾದಿಸಿದ ‘ಜನರೇ’ ಆ ದೇಶದ ಸಂಪತ್ತು, ನಿಜವಾದ ಆಸ್ತಿ.” ಸಭ್ಯ, ಸುಸಂಸ್ಕೃತ, ಸಂಸ್ಕಾರಯುಕ್ತ ಹಾಗೂ ಜನಸೇವಾ ಭಾವನೆಯುಳ್ಳ ಜನರ ಸಂಖ್ಯೆಯೇ ಆ ದೇಶದ ಸಂಪತ್ತನ್ನು ನಿರ್ಧರಿಸುವುದು. ಆದ್ದರಿಂದ
ನಮ್ಮ ಗಮನ ‘ಭೌತಿಕ ಸಂಪತ್ತಿ’ನ ಹೆಚ್ಚಳಕ್ಕಿಂತ ‘ಮಾನವ ಸಂಪತ್ತಿ’ನ ನಿರ್ಮಾಣದ ಕಡೆಗೆ ಇರಬೇಕೆಂದು ಅವರು ಬಯಸಿದರು. ಎಂಥ ವಾಸ್ತವ ವಿಶ್ಲೇಷಣೆ! ಈ ಕಾರಣಕ್ಕಾಗಿ ಗಾಂಧೀಯ ಅರ್ಥಶಾಸ್ತ್ರದ ಮಹತ್ತ್ವ ಉಳಿದೆಲ್ಲವುಗಳಿಗಿಂತ ಅಧಿಕವಾದುದು – ಎಂಬುದನ್ನು ನಾವು ಮರೆಯಬಾರದು.
4. ವಿವಿಧ ಆರ್ಥಿಕ ವ್ಯವಸ್ಥೆಗಳಲ್ಲಿ ಆರ್ಥಿಕ ನಿರ್ಧಾರಗಳು
ಬಂಡವಾಳಶಾಹಿ ಪದ್ಧತಿಯಲ್ಲಿ ಎಲ್ಲ ಆರ್ಥಿಕ ನಿರ್ಧಾರಗಳನ್ನು ‘ವ್ಯಕ್ತಿಗಳೇ’ ತೆಗೆದುಕೊಳ್ಳುವರು. ಅವರಿಗೆ ಎಲ್ಲ ರೀತಿಯ ಆರ್ಥಿಕ ಸ್ವಾತಂತ್ರ್ಯವೂ ಇರುತ್ತದೆ. ಅನುಭೋಗಿ ಹಾಗೂ ಉತ್ಪಾದಕ ಇಬ್ಬರೂ ತಮ್ಮ ತಮ್ಮ ಕ್ಷೇತ್ರಗಳಲ್ಲಿ ಸಾರ್ವಭೌಮರು; ಅವರು ಯಾರ ಪ್ರಭಾವಕ್ಕೂ ಒಳಗಾಗದೆ ತಮ್ಮ ಸ್ವಂತ ನಿರ್ಧಾರಗಳನ್ನು ತೆಗೆದುಕೊಳ್ಳಲು ಅವಕಾಶವಿರುತ್ತದೆ. ಗಮನಿಸಬೇಕಾದ ಅಂಶವೆಂದರೆ ಈ ಸಂಪೂರ್ಣ ಸ್ವಾತಂತ್ರ್ಯದ ಮುಖ್ಯ ಉದ್ದೇಶ ವ್ಯಕ್ತಿಯ ಸ್ವ-ಹಿತಸಾಧನೆ, ಗರಿಷ್ಠ ತುಷ್ಟೀಕರಣ ಮತ್ತು ಗರಿಷ್ಠ ಲಾಭಗಳಿಕೆಯಾಗಿದೆ.
ಸಮತಾವಾದಿ ವ್ಯವಸ್ಥೆಯಲ್ಲಿ ‘ವ್ಯಕ್ತಿ’ಗೆ ಅಸ್ತಿತ್ವವೇ ಇರುವುದಿಲ್ಲ. ಏನಿದ್ದರೂ ಅವನು ಸರ್ಕಾರದ ಸೇವಕ. ಸರ್ಕಾರದ ಆದೇಶಗಳನ್ನು ಕಾರ್ಯಗತಗೊಳಿಸುವ ನಿಷ್ಠಾವಂತ ಗುಲಾಮ. ಇಲ್ಲಿ ವ್ಯಕ್ತಿಯ ಗರಿಷ್ಠ ತುಷ್ಟೀಕರಣ, ಗರಿಷ್ಠ ಲಾಭಗಳಿಕೆ ಮತ್ತು ಸ್ವ-ಹಿತಕ್ಕೆ ಯಾವ ಆಸ್ಪದವೂ ಇಲ್ಲ; ವ್ಯಕ್ತಿಗೆ ಯಾವುದೇ ರೀತಿಯ ಆರ್ಥಿಕ ಸ್ವಾತಂತ್ರ್ಯವೂ ಇರುವುದಿಲ್ಲ. ಸರ್ಕಾರ ಉತ್ಪಾದಿಸಿದ ಸರಕು-ಸೇವೆಗಳ ಅನುಭೋಗ ಮಾಡಬೇಕು; ಸರ್ಕಾರ ಸಿದ್ಧಪಡಿಸಿದ ಉತ್ಪಾದನಾ ಯೋಜನೆಗಳನ್ನು ಯಾವ ಪ್ರಶ್ನೆಯನ್ನೂ ಕೇಳದೆ ಕಾರ್ಯಗತಗೊಳಿಸಬೇಕು, ಅಷ್ಟೇ. ವ್ಯಕ್ತಿಗಳ ಪರವಾಗಿ ಸರ್ಕಾರವೇ ಎಲ್ಲ ರೀತಿಯ ಆರ್ಥಿಕ ನಿರ್ಧಾರಗಳನ್ನೂ ತೆಗೆದುಕೊಳ್ಳುವುದರಿಂದ ವ್ಯಕ್ತಿಗಳಿಗೆ ಸ್ವಂತ ನಿರ್ಧಾರದ ಅವಕಾಶಗಳಿರುವುದಿಲ್ಲ. ವ್ಯಕ್ತಿಯ ಲಾಭಕ್ಕಿಂತ ಸಮುದಾಯದ ಆರ್ಥಿಕ ಹಿತವೇ ಇಲ್ಲಿ ಮುಖ್ಯವಾದುದು.
ಗಾಂಧೀಯ ವ್ಯವಸ್ಥೆಯಲ್ಲಿ ‘ವ್ಯಕ್ತಿ’ ಸಾರ್ವಭೌಮ ಸ್ಥಾನವನ್ನು ಪಡೆದಿದ್ದಾನೆ. ವ್ಯಕ್ತಿಯ ಸಮಗ್ರ ಹಾಗೂ ಸರ್ವಾಂಗೀಣ ಪ್ರಗತಿ ಅದರ ಮುಖ್ಯ ಗುರಿಯಾಗಿರುವುದರಿಂದ ಅದರಲ್ಲಿ ಎಲ್ಲ ರೀತಿಯ ರಾಜಕೀಯ ಹಾಗೂ ಆರ್ಥಿಕ ಸ್ವಾತಂತ್ರ್ಯಗಳನ್ನೂ ಕಲ್ಪಿಸಲಾಗಿದೆ. ವ್ಯಕ್ತಿಯ ನಿರ್ಧಾರಗಳಿಗೆ ಅವನೇ ಮಾಲೀಕ. ಇಲ್ಲಿ ವ್ಯಕ್ತಿಯ ನಿರ್ಧಾರಗಳು, ನಿರ್ಣಯಗಳು ಸ್ವಾರ್ಥಪ್ರೇರಿತವಾದುವಲ್ಲ; ವೈಯಕ್ತಿಕ ಲಾಭ ಹಾಗೂ ತುಷ್ಟಿಗುಣ ಗರಿಷ್ಠಗೊಳಿಸುವುದಕ್ಕಾಗಿಯೂ ಅಲ್ಲ. ಬದಲಿಗೆ ವ್ಯಕ್ತಿಯು ತನ್ನ ಹಾಗೂ ಸಮಾಜದ ಹಿತದೃಷ್ಟಿಯಿಂದ ವೈಯಕ್ತಿಕ ಆಸೆಗಳಿಗೆ ಕಡಿವಾಣ ಹಾಕಿಕೊಂಡು, ತ್ಯಾಗ ಮತ್ತು ಸಮರ್ಪಣೆಯ ಭಾವನೆಯಿಂದ ಸ್ವತಃ – ಯಾರ ಒತ್ತಾಯವೂ, ಬಲಾತ್ಕಾರವೂ ಇಲ್ಲದೆ – ಸರಳ ಜೀವನ, ಉನ್ನತ ಚಿಂತನೆಯ ಮಂತ್ರವನ್ನು ತನ್ನ ಜೀವನದಲ್ಲಿ ಅನುಷ್ಠಾನಕ್ಕೆ ತಂದು, ವೈಯಕ್ತಿಕ ಹಾಗೂ ಸಾಮೂಹಿಕ ಉನ್ನತಿಗೆ ಕಾರ್ಯಪ್ರವೃತ್ತನಾಗುತ್ತಾನೆ. ಭೌತಿಕ ಸುಖ-ಸಂತೋಷದ ಅಭಿವೃದ್ಧಿಯ ಜೊತೆಜೊತೆಗೆ ಅವನ ನೈತಿಕ ಹಾಗೂ ಆಧ್ಯಾತ್ಮಿಕ ಉತ್ಕರ್ಷಕ್ಕೆ ಇಲ್ಲಿ ಹೆಚ್ಚಿನ ಮಹತ್ತ್ವ ನೀಡಿರುವುದನ್ನು ನಾವು ಗಮನಿಸಬೇಕಾಗಿದೆ.
5. ವಿವಿಧ ಮಾದರಿಗಳಲ್ಲಿ ಆರ್ಥಿಕಯೋಜನೆಗಳ ಮಹತ್ತ್ವ
ಬಂಡವಾಳಶಾಹಿ ವ್ಯವಸ್ಥೆ ಒಂದು ‘ಯೋಜನಾ ರಹಿತ’ ವ್ಯವಸ್ಥೆ. ಅದು ಸ್ವಯಂಚಾಲಿತವಾಗಿ ನಡೆಯುತ್ತದೆ. ಲಕ್ಷಾಂತರ ಮಂದಿ ಉತ್ಪಾದಕರು ಅಲ್ಲಿ ತಮ್ಮದೇ ಆದ ಸ್ವತಂತ್ರ ನಿರ್ಧಾರ ತೆಗೆದುಕೊಳ್ಳುವರು. ಆದ್ದರಿಂದ ರಾಷ್ಟ್ರೀಯ ಉತ್ಪಾದನೆಯಲ್ಲಿ ಯಾವ ಸಮನ್ವಯವೂ ಕಂಡುಬರುವುದಿಲ್ಲ. ಇದರ ಪರಿಣಾಮವೆಂದರೆ ಬೇಡಿಕೆ
ಮತ್ತು ಪೂರೈಕೆಗಳಲ್ಲಿ ಅಸಮತೋಲನ. ಇದು ಆರ್ಥಿಕ ಆವರ್ತನ ಮತ್ತು ಆರ್ಥಿಕ ಅಸ್ಥಿರತೆಗೆ ದಾರಿಮಾಡಿಕೊಡುತ್ತದೆ. ಇದರಿಂದ ಜನಸಾಮಾನ್ಯರಿಗೆ, ಅನುಭೋಗಿಗಳಿಗೆ, ಉತ್ಪಾದಕರಿಗೆ, ಹೂಡಿಕೆದಾರರಿಗೆ ಮತ್ತು ಇಡೀ ವ್ಯವಸ್ಥೆಗೆ ಆರ್ಥಿಕ ಸಂಕಷ್ಟ ಉಂಟಾಗುತ್ತದೆ. ವ್ಯಕ್ತಿಕೇಂದ್ರಿತ ಯೋಜನೆ ಇಲ್ಲಿ ಪ್ರಾಮುಖ್ಯ ಪಡೆದಿದೆ.
ಸಮತಾವಾದಿ ವ್ಯವಸ್ಥೆ ಇದಕ್ಕೆ ತದ್ವಿರುದ್ಧವಾದದ್ದು. ಅದು ಸಂಪೂರ್ಣ ‘ಯೋಜನಾಬದ್ಧ ವ್ಯವಸ್ಥೆ’. ಕೇಂದ್ರೀಯ ಯೋಜನಾ ಆಯೋಗ ಇಡೀ ದೇಶಕ್ಕೆ ಸೂಕ್ತವಾದ ಆರ್ಥಿಕ ಯೋಜನೆಯನ್ನು ಸಿದ್ಧಪಡಿಸುತ್ತದೆ. ಇದು ಆರ್ಥಿಕ ಕೇಂದ್ರೀಕರಣಕ್ಕೆ ದಾರಿಮಾಡಿಕೊಡುತ್ತದೆ. ಪರಿಣಾಮವಾಗಿ ಸರ್ಕಾರಿ ನಿಯಂತ್ರಣ, ಬಲಪ್ರಯೋಗ, ಏಕಸ್ವಾಮಿತ್ವ, ಕಿರಿಜನಾಧಿಪತ್ಯದ ಉದಯವಾಗಿ ತನ್ಮೂಲಕ ವ್ಯಕ್ತಿಯ ಉತ್ಸಾಹ ತಗ್ಗಿ, ಸ್ವಾತಂತ್ರ್ಯಹರಣವಾಗಿ, ವ್ಯಕ್ತಿತ್ವ ಮಸುಕಾಗಿ, ಅವನ ಸರ್ವಾಂಗೀಣ ಉನ್ನತಿಗೆ ಮಾರಕವಾಗುತ್ತದೆ. ಕೇಂದ್ರೀಕೃತ ಉತ್ಪಾದನೆಯಿಂದ ಉದ್ಯೋಗ ಸಮಸ್ಯೆ ಬಗೆಹರಿದಿಲ್ಲ. ಏರುತ್ತಿರುವ ಶ್ರಮಿಕರ ಸಂಖ್ಯೆಯನ್ನು ಧಾರಣೆ ಮಾಡಿಕೊಳ್ಳಲು ಸಾಧ್ಯವಾಗಿಲ್ಲ. ಸರ್ಕಾರ ಉತ್ಪಾದನೆ ಮಾಡಿದ ವಸ್ತುಗಳನ್ನು ಅನುಭೋಗಿಗಳು ಉಪಯೋಗಿಸಬೇಕಾಗಿರುವುದರಿಂದ ಅವರ ಆರ್ಥಿಕ ಸ್ವಾತಂತ್ರ್ಯ ನಿರ್ಭಂಧಿಸಲ್ಪಡುತ್ತದೆ. ಉತ್ಪಾದಕ-ಅನುಭೋಗಿಗಳ ನೇರ ಸಂಬಂಧವಿಲ್ಲದೆ ಉತ್ಪಾದನೆಯ ಅತಿವೃಷ್ಟಿ, ಅನಾವೃಷ್ಟಿಗಳಾಗುವ ಸಂಭವವಿರುತ್ತದೆ. ಇದು ಸುತ್ತಿಬಳಸಿ ಆದಾಯ ವಿತರಣೆ ಮಾಡುವ ವ್ಯವಸ್ಥೆ. ಇಲ್ಲಿ ‘ಸಾಮುದಾಯಿಕ ಯೋಜನೆ’ಗೆ ಹೆಚ್ಚು ಪ್ರಾಶಸ್ತ್ಯ ನೀಡಲಾಗಿದೆ.
ಗಾಂಧೀಯ ಅರ್ಥವ್ಯವಸ್ಥೆ ಪೂರ್ಣಪ್ರಮಾಣದಲ್ಲಿ ವಿಕೇಂದ್ರೀಕೃತ ಗ್ರಾಮ-ಅರ್ಥವ್ಯವಸ್ಥೆ; ಕೇಂದ್ರೀಕೃತ ಯೋಜನಾ ವ್ಯವಸ್ಥೆಗೆ ಪರ್ಯಾಯವಾದದ್ದು. ಗ್ರಾಮಪಂಚಾಯಿತಿಗಳು ಗ್ರಾಮಮಟ್ಟದಲ್ಲಿ ಗ್ರಾಮಾಭಿವೃದ್ಧಿಯ ಕಾರ್ಯಕ್ರಮಗಳನ್ನು ಸಿದ್ಧಪಡಿಸಿ ಕಾರ್ಯಗತಗೊಳಿಸುತ್ತವೆ. ಇಲ್ಲಿ ಉತ್ಪಾದನೆ ಮತ್ತು ವಿತರಣೆ ಜನರ ಅಗತ್ಯಕ್ಕೆ ತಕ್ಕಂತೆ ಸ್ಥಳೀಯವಾಗಿಯೇ ನಡೆಯುತ್ತದೆ. ಜನಸಮೂಹವೇ ಯೋಜನೆಗಳನ್ನು ಸಿದ್ಧಪಡಿಸುವ ಕಾರಣ ಜೀವನಾವಶ್ಯಕಗಳ ಅಗತ್ಯಪ್ರಮಾಣದ ಉತ್ಪಾದನೆ, ವಿತರಣೆ ಮತ್ತು ಅನುಭೋಗ ಸಾಧ್ಯವಾಗುತ್ತದೆ; ಇದೊಂದು ಶೋಷಣೆರಹಿತ ವ್ಯವಸ್ಥೆಯಾಗಿ ಹೊರಹೊಮ್ಮುತ್ತದೆ. ಇಲ್ಲಿ ಆರ್ಥಿಕ ಯೋಜನೆಗಳಿದ್ದು ಸರ್ವರಿಂದಲೂ ಸಂಪೂರ್ಣವಾಗಿ ಬೆಂಬಲಿತವಾಗಿರುತ್ತದೆ. ಆದಕಾರಣ ಇಲ್ಲಿ ‘ಕೇಂದ್ರೀಕೃತ ನಿರ್ದೇಶಿತ ಯೋಜನೆ’ಗೆ ಬದಲಾಗಿ ‘ವಿಕೇಂದ್ರೀಕೃತ ಸಹಭಾಗಿತ್ವ ಯೋಜನೆ’ ಇರುತ್ತದೆ. ಕೆಲವೇ ಶಕ್ತಿಶಾಲಿ ವ್ಯಕ್ತಿಗಳ ಅಥವಾ ಸರಕಾರದ ಕೈಯಲ್ಲಿ ಕೇಂದ್ರೀಕೃತವಾದ ‘ಬೃಹತ್ ಪ್ರಮಾಣದ ಉತ್ಪಾದನೆ’ಗೆ ಬದಲಾಗಿ ಲಕ್ಷಾಂತರ ಸಣ್ಣ ಪ್ರಮಾಣದ ಗ್ರಾಮೀಣ ಹಾಗೂ ಗುಡಿಕೈಗಾರಿಕೆಗಳಿಂದ ‘ಜನಸಮೂಹದ ಉತ್ಪಾದನೆ’ ನಡೆಯುತ್ತದೆ. ಅತಿ ಸಣ್ಣ ಸಣ್ಣ ಉತ್ಪಾದನಾ ಘಟಕಗಳ ಮೂಲಕ ಉತ್ಪಾದನೆಯನ್ನು ವೈವಿಧ್ಯಮಯಗೊಳಿಸಿದಾಗ ಹೊಸದೊಂದು ಆರ್ಥಿಕವ್ಯವಸ್ಥೆ ಮೂಡಿಬರುವುದು. ಪಟ್ಟಣ ಹಾಗೂ ನಗರಗಳು, ಹಳ್ಳಿಗಳು ಉತ್ಪಾದಿಸಿದ ಸರಕು-ಸೇವೆಗಳ ‘ವಿತರಣಾ ಕೇಂದ್ರ’ ಅಥವಾ ‘ಮಾರಾಟ ಕೇಂದ್ರ’ಗಳಾಗಬೇಕು ಎಂಬುದು ಗಾಂಧಿಯವರ ಆಶಯ. ಸಮಗ್ರ ಆರ್ಥಿಕ ದೃಷ್ಟಿಯಿಂದ ಯೋಚಿಸಿದಾಗ ಎಲ್ಲ ಗ್ರಾಮಪಂಚಾಯಿತಿಗಳ ಒಟ್ಟು ಆರ್ಥಿಕ ಯೋಜನೆಗಳು ರಾಷ್ಟ್ರೀಯ ಆರ್ಥಿಕ ಯೋಜನೆಯಾಗಿ ಹೊರಹೊಮ್ಮುತ್ತವೆ. ಸರ್ವೋದಯ ಸಮಾಜದಲ್ಲಿ ‘ಗ್ರಾಮಕೇಂದ್ರಿತ ಯೋಜನೆ’ಗಳಿಗೆ ಹೆಚ್ಚಿನ ಮಹತ್ತ್ವ ನೀಡಲಾಗಿದೆ. ಇದು ಗಾಂಧೀಯ ವ್ಯವಸ್ಥೆಯ ವೈಶಿಷ್ಟ್ಯ.
6. ವಿವಿಧ ಆರ್ಥಿಕವ್ಯವಸ್ಥೆಗಳಲ್ಲಿ ಬೆಲೆ ನಿರ್ಧಾರದ ಮಾದರಿ
ಸರಕು-ಸೇವೆಗಳ ಬೆಲೆ ನಿರ್ಧಾರದಲ್ಲಿ ಹಾಗೂ ಸಂಪನ್ಮೂಲಗಳನ್ನು ವಿವಿಧ ಉಪಯೋಗಗಳಿಗಾಗಿ ಹಂಚಿಕೆ ಮಾಡುವಾಗ ಬೇರೆ ಬೇರೆ ಆರ್ಥಿಕ ವ್ಯವಸ್ಥೆಗಳು ಬೇರೆ ಬೇರೆ ಮಾರ್ಗಗಳನ್ನು ಅನುಸರಿಸುವುದು ಸಹಜ. ಬಂಡವಾಳಶಾಹಿ ಆರ್ಥಿಕ ವ್ಯವಸ್ಥೆಯಲ್ಲಿ ‘ಬೆಲೆಯಂತ್ರ’ (Price Mechanism) ಅತ್ಯಂತ ಪ್ರಮುಖ ಪಾತ್ರವನ್ನು ವಹಿಸುತ್ತದೆ; ಸಮತಾವಾದಿ ಆರ್ಥಿಕ ವ್ಯವಸ್ಥೆಯಲ್ಲಿ ಬೆಲೆಯಂತ್ರ ಎರಡನೇ ದರ್ಜೆಯ ಸ್ಥಾನವನ್ನೂ ಮತ್ತು ಸರ್ಕಾರೀ ನಿರ್ದೇಶನಗಳು ಪ್ರಥಮ ಸ್ಥಾನವನ್ನೂ ಪಡೆಯುತ್ತವೆ (Government Direction).
ಗಾಂಧಿಯವರು ಬೆಲೆ ನಿರ್ಧಾರ ಮಾಡುವುದರ ಬಗೆಗಾಗಲಿ ಅಥವಾ ಸಂಪನ್ಮೂಲಗಳ ಹಂಚಿಕೆ ಮಾಡುವ ತಂತ್ರದ ಬಗೆಗಾಗಲಿ ಎಲ್ಲೂ ಸ್ಪಷ್ಟವಾದ ಅಭಿಪ್ರಾಯವನ್ನು ವ್ಯಕ್ತಪಡಿಸಿದಂತೆ ಕಾಣುವುದಿಲ್ಲ. ಆದರೆ ಅವರ ಚಿಂತನೆಗಳನ್ನು ಮೆಲುಕುಹಾಕಿದರೆ ನಮಗೆ ತಿಳಿಯುವುದೇನೆಂದರೆ ಸರಕು-ಸೇವೆಗಳ ಉತ್ಪಾದನೆ, ಅವುಗಳ ಪೂರೈಕೆ ಮತ್ತು ನಿಯಂತ್ರಣ ಬೆಲೆಗಳ ಚಲನವಲನದ ಮೇಲೆ ಅವಲಂಬಿತವಾಗಿದೆ. ಅವುಗಳ ಬೇಡಿಕೆಯ ಪ್ರಮಾಣ ಅನುಭೋಗಿಗಳ ಆಯ್ಕೆ ಮತ್ತು ನಿರ್ಧಾರ ಹಾಗೂ ಖಾಸಗಿ ಆಸ್ತಿ-ಸಂಪತ್ತಿನ ಒಡೆತನ ಮತ್ತು ಧರ್ಮದರ್ಶಿ ತತ್ತ್ವದ ಹಿನ್ನೆಲೆಯಲ್ಲಿ ನಿರ್ಧಾರಿತವಾಗುತ್ತದೆ. ಗಾಂಧೀಯ ಅರ್ಥವ್ಯವಸ್ಥೆಯಲ್ಲಿ ಸಂಪೂರ್ಣವಾಗಿ ಬೆಲೆಯಂತ್ರವಾಗಲಿ (ಬಂಡವಾಳಶಾಹಿ ವ್ಯವಸ್ಥೆಯಲ್ಲಿರುವಂತೆ) ಸರ್ಕಾರಿ ನಿರ್ದೇಶನವಾಗಲಿ (ಸಮತಾವಾದಿ ವ್ಯವಸ್ಥೆಯಲ್ಲಿರುವಂತೆ) ಮಾರುಕಟ್ಟೆಯ ಸರಕು-ಸೇವೆಗಳ ಬೆಲೆಯನ್ನು ನಿರ್ಧರಿಸುವುದಿಲ್ಲ; ಬದಲಿಗೆ ಗ್ರಾಮಮಟ್ಟದಲ್ಲಿ ನಿರ್ಧಾರಿತವಾಗುತ್ತದೆ. ಜನಸಮುದಾಯದ ಮುಕ್ತ ಚರ್ಚೆಯ ಮೂಲಕ ನ್ಯಾಯೋಚಿತ, ವಿವೇಕಯುಕ್ತ ಹಾಗೂ ನಿಷ್ಪಕ್ಷಪಾತ ಬೆಲೆ ವಿರ್ಧಾರಿತವಾಗುತ್ತದೆ. ಇದಕ್ಕೆ ‘ಒಟ್ಟು ಅಭಿಪ್ರಾಯ ಬೆಲೆಗಳು’ (Consensus Prices) ಎಂದು ಕರೆಯಲಾಗುವುದು. ಮಾರುಕಟ್ಟೆಯಲ್ಲಿ ದೊರೆಯುವ ಸಂಪೂರ್ಣ ಮಾಹಿತಿಯ ಆಧಾರದ ಮೇಲೆ ಅವುಗಳನ್ನು ನಿರ್ಧರಿಸಲಾಗುವುದು; ಸಾಮಾಜಿಕ ಪ್ರಾಶಸ್ತ್ಯ ಮತ್ತು ಸಂಪನ್ಮೂಲಗಳ ಸಾಮಾಜಿಕ ಉತ್ಪಾದಕತೆಯ ಮೇಲೆ ಆಧಾರಿತವಾಗಿರುತ್ತದೆ. ಹೀಗಾಗಿ ಈ ಒಟ್ಟು ಅಭಿಪ್ರಾಯ ಬೆಲೆ ಬೇಡಿಕೆ-ಪೂರೈಕೆ ಶಕ್ತಿಗಳಿಂದ ನಿರ್ಧಾರಿತವಾದ ಬೆಲೆಗಿಂತ ಭಿನ್ನವಾಗಿರುತ್ತದೆ.
7. ವಿವಿಧ ಆರ್ಥಿಕವ್ಯವಸ್ಥೆಗಳಲ್ಲಿ ಆರ್ಥಿಕ ಸಮಾನತೆ ಸಾಧಿಸುವ ಮಾರ್ಗಗಳು
ಬಂಡವಾಳಶಾಹಿ ಸಮಾಜದಲ್ಲಿ ದೇಶದ ಸಂಪತ್ತು ಕೇವಲ ಕೆಲವೇ ಶಕ್ತಿಶಾಲಿ ವ್ಯಕ್ತಿಗಳ ಕೈಯಲ್ಲಿ ಕೇಂದ್ರೀಕೃತವಾಗಿ ಶ್ರೀಮಂತರು ಮತ್ತು ಬಡವರು ಎಂಬ ಎರಡು ಪರಸ್ಪರ ವಿರೋಧಿ ಗುಂಪುಗಳು ನಿರ್ಮಾಣವಾಗುವುದು ಎಲ್ಲರಿಗೂ ತಿಳಿದ ವಿಷಯ. ಶ್ರೀಮಂತರು ಎಲ್ಲಾ ಮಾರ್ಗಗಳಿಂದ ಬಡವರ ಶೋಷಣೆ ಮಾಡಿ ತಮ್ಮ ಸಂಪತ್ತನ್ನು ಇನ್ನಷ್ಟು ಹೆಚ್ಚಿಸಿಕೊಳ್ಳುತ್ತಾರೆ. ಹೀಗಾಗಿ ಅಲ್ಲಿ ಸಂಪತ್ತಿನ ನ್ಯಾಯೋಚಿತ ವಿತರಣೆ ಸಾಧ್ಯವಾಗದೆ ವಿಷಮ ಆರ್ಥಿಕ ಅಸಮಾನತೆಗೆ ಕಾರಣವಾಗುತ್ತದೆ. ಇದು ವರ್ಗಸಂಘರ್ಷ ಹಾಗೂ ರಕ್ತಕ್ರಾಂತಿಗೆ ನಾಂದಿಯಾಗುತ್ತದೆ.
ಸಮತಾವಾದದ ಬಹುಮುಖ್ಯ ಉದ್ದೇಶ ಆರ್ಥಿಕ ಸಮಾನತೆ. ಬಲಪ್ರಯೋಗ, ಕ್ರಾಂತಿ ಮತ್ತು ಹಿಂಸೆಯ ಮೂಲಕ ಆರ್ಥಿಕ ಸ್ವಾತಂತ್ರ್ಯವನ್ನು ಹತ್ತಿಕ್ಕಿ ಶ್ರೀಮಂತವರ್ಗದ ನಿರ್ಮೂಲನ ಮಾಡಲಾಗುತ್ತದೆ. ಆದ್ದರಿಂದ ಅಲ್ಲಿ ಕೇವಲ ಒಂದೇ ವರ್ಗ – ಕಾರ್ಮಿಕವರ್ಗ ಅಸ್ತಿತ್ವದಲ್ಲಿರುತ್ತದೆ. ಯಾರೂ ಸಹ ದುಡಿಯದೇ ಹಣ ಗಳಿಸುವಂತಿಲ್ಲ. ಕಾರ್ಲ್ ಮಾಕ್ರ್ಸ್ನ ವಿತರಣತತ್ತ್ವದ ಆಧಾರದ ಮೇಲೆ ಆದಾಯದ ಹಂಚಿಕೆಯಾಗುವ ಕಾರಣ ಅಲ್ಲಿ ಆರ್ಥಿಕ ಸಮಾನತೆಯನ್ನು ಸಾಧಿಸುವ ಪ್ರಯತ್ನ ನಡೆಯುತ್ತದೆ.
ಗಾಂಧಿಯವರ ಆರ್ಥಿಕ ವ್ಯವಸ್ಥೆಯಲ್ಲಿ ಆರ್ಥಿಕ ಸಮಾನತೆಗೆ ಹೆಚ್ಚಿನ ಮಹತ್ತ್ವ ನೀಡಲಾಗಿದೆ. ಗಮನಿಸಬೇಕಾದ ಸಂಗತಿಯೆಂದರೆ ಅವರು ಆರ್ಥಿಕ ಸಮಾನತೆಗೆ ಬೇರೆಯದೇ ಆದ ವಿವರಣೆಯನ್ನೂ ಅದನ್ನು ಸಾಧಿಸಲು ವಿನೂತನ ಮಾರ್ಗವನ್ನೂ ಸೂಚಿಸಿದ್ದಾರೆ. ಆರ್ಥಿಕ ಸಮಾನತೆ ಎಂದರೆ ಪ್ರತಿ ವ್ಯಕ್ತಿಯ ಆದಾಯ ಮತ್ತು ಸಂಪತ್ತು ಸರಿಸಮಾನವಾಗಿ ಇರಬೇಕು ಎಂದು ಮಾತ್ರ ಅರ್ಥವಲ್ಲ. ಅಂಥ ಪರಿಪೂರ್ಣ ಸಮಾನತೆ ಕಾರ್ಯಸಾಧುವೂ ಅಲ್ಲ ಮತ್ತು ಅದರ ಆವಶ್ಯಕತೆಯೂ ಇಲ್ಲ. ಸಮಾಜದ ಪ್ರತಿ ವ್ಯಕ್ತಿಗೂ ತನ್ನ ಜೀವನಾವಶ್ಯಕಗಳನ್ನು ಪಡೆಯಲು ಸಾಕಷ್ಟು ಪ್ರಮಾಣದ ಹಣವಿದ್ದು ಸಭ್ಯ ಹಾಗೂ ಸಂತೋಷಕರವಾದ ಜೀವನ ನಡೆಸಲು ಸಾಧ್ಯವಾಗಬೇಕು. ಸಂತೃಪ್ತ ಭೌತಿಕಜೀವನ ಪಡೆಯುವುದು ಪ್ರತಿಯೊಬ್ಬರ ಹಕ್ಕು ಎಂದು ಗಾಂಧಿಯವರು ಹೇಳಿದರು.
ಆರ್ಥಿಕ ಸಮಾನತೆಯನ್ನು ಸಾಧಿಸಲು ಅವರು ಸೂಚಿಸಿದ ಮಾರ್ಗ ಇತರ ಆರ್ಥಿಕ ತಜ್ಞರ ಚಿಂತನೆಗಿಂತ ಭಿನ್ನವಾಗಿರುವುದನ್ನು ನಾವು ಕಾಣಬಹುದು. ಸ್ಥೂಲವಾಗಿ ಅದನ್ನು ಎರಡು ಭಾಗಗಳಾಗಿ ವಿಂಗಡಿಸಬಹುದು. ಅವುಗಳೆಂದರೆ –
I. ಶ್ರೀಮಂತರ ಆದಾಯ ಮತ್ತು ಸಂಪತ್ತನ್ನು ಕಡಮೆ ಮಾಡುವ ಮಾರ್ಗ ಅಥವಾ ಸಂಪತ್ತಿನ ಪುನರ್ವಿತರಣೆ ಮಾರ್ಗ (Levelling down the income and wealth of the poor or Equality by distribution of wealth).
II. ಬಡವರ ಆದಾಯ ಮತ್ತು ಸಂಪತ್ತಿನ ಪ್ರಮಾಣವನ್ನು ಹೆಚ್ಚಿಸುವ ಮಾರ್ಗ ಅಥವಾ ಬಡವರ ಸಂಪತ್ತಿನ ಹೆಚ್ಚಳದ ಮೂಲಕ ಸಮಾನತೆ ಸಾಧಿಸುವ ಮಾರ್ಗ. (Levelling up the income and wealth of the poor or Equality through increasing the wealth.)
(ಮುಂದುವರಿಯುವುದು)