ನಮ್ಮಮ್ಮನಿಗೆ ಅತ್ಯಂತ ಅಕ್ಕರೆಯ ವಸ್ತುವೆಂದರೆ ಅವರ ಹೊಲಿಗೆ ಮಷೀನು. ಬಹುಶಃ ಈಗ ಅದಕ್ಕೆ 45 ವರ್ಷ ದಾಟಿರಬಹುದು. 75ನೇ ಇಸವಿಯಲ್ಲಿ ಅದನ್ನು ಕೊಂಡುದಾಗಿ ಅಮ್ಮ ಹೇಳಿದ ನೆನಪು. ಛಲದಿಂದಲೇ ಏಕಲವ್ಯನಂತೆ ಹಲವು ಬಗೆಯ
ಡಿಸೈನು ಫ್ರಾಕುಗಳನ್ನು, ಇನ್ನಿತರ ಲಂಗ, ರವಕೆ, ಶರ್ಟು, ಚೂಡಿದಾರಗಳನ್ನು ಹೊಲಿಯಲು ಕಲಿತವರು ಅಮ್ಮ. ಯಾವ ಹೊಸಬಗೆಯ ಡಿಸೈನು ಕಣ್ಣಿಗೆಬಿದ್ದರೂ ಅದನ್ನು ಹಾಗೆಯೆ ಮನಸ್ಸಿಗೆ ತುಂಬಿಕೊಂಡು ಪ್ರಯೋಗ ಮಾಡಬಲ್ಲ ಅಪ್ಪಟ ಕ್ರಿಯಾಶೀಲ ಪ್ರತಿಭೆ. ಅಮ್ಮನ ಎಲ್ಲ ಪ್ರಯೋಗಗಳನ್ನೂ ನಮಗಿಂತ ಮೊದಲೇ ಅರ್ಥಮಾಡಿಕೊಳ್ಳುವುದು ಅದೇ ಮಷೀನು. ಹೆಚ್ಚು ಹಟಮಾಡದೆ, ಗೋಳಾಡಿಸದೆ ಅಮ್ಮನ ಮನಸ್ಸು ಓಡಿದಂತೆ ತಾನೂ ಓಡುವುದೆಂದರೆ ಅದಕ್ಕೂ ಸಂಭ್ರಮವೇ. ಅಮ್ಮ ಎಂದೂ ಅದರ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಿಲ್ಲ. ಹೊಲಿಗೆ ಸರಿಯಾಗಿ ಬೀಳದಿದ್ದರೆ ಎಣ್ಣೆ ಹಾಕಿ, ಸಂದುಗೊಂದುಗಳಲ್ಲಿ ಸಿಕ್ಕಿಕೊಂಡಿರಬಹುದಾದ ನೂಲಿನ ತುಂಡುಗಳನ್ನು ಮೆಲ್ಲನೆ ಹೊರಗೆಳೆದು ಮಷೀನನ್ನು ಸಮಾಧಾನಿಸಿಯಾರು. ನಮಗೋ ಸಣ್ಣ ಹೊಟ್ಟೆನೋವು, ಅಮ್ಮ ನಮಗಿಂತ ಅದನ್ನೇ ಹೆಚ್ಚು ಕಾಳಜಿಮಾಡುವ ಬಗೆಗೆ.
ನಾವು ಸಣ್ಣವರಿರುವಾಗ ಅಮ್ಮ ಹೊಲಿಯುತ್ತಿರಬೇಕಾದರೆ ನಾವೂ ಎದುರಿಗೆ ನಿಂತುಕೊಂಡು ಅಮ್ಮನಿಗೆ ಹೊಲಿಯಲು ಸಹಾಯ ಮಾಡುವವರಂತೆ ಮುಂದುಗಡೆಯಿಂದ ತುಳಿಯುವುದಿತ್ತು. ‘ದೂರ ನಿಂತು ನೋಡಿ, ಕಾಲಿಗೆ ತಾಗೀತು’ ಎಂದರೂ ಕೇಳುವವರು ನಾವಲ್ಲ. ಆಗೆಲ್ಲ ಅಮ್ಮ ನಗುವುದಿತ್ತು – ಈ ಮಷೀನಿನ ಮೇಲೆ ಆಧಿಪತ್ಯ ಸಾಧಿಸುವವರು ಅದೆಷ್ಟು ಮಕ್ಕಳು ಎಂಬುದಾಗಿ.
ಏಕೆಂದರೆ ಯಾವ ನೆಂಟರು ಬಂದರೂ ಅವರ ಮಕ್ಕಳು ಒಮ್ಮೆಯಾದರೂ ಮಷೀನು ತುಳಿಯದೇ ಇರುತ್ತಿರಲಿಲ್ಲ. ಆಗೀಗ ಅಮ್ಮನಿಗೆ ಉಪದ್ರವ ಕೊಡುವುದಕ್ಕೆಂದೇ ಬೆಲ್ಟು ಕಳಚಿಬಿಡುವುದೊ, ಅಥವಾ ಅಮ್ಮ ಕಷ್ಟಪಟ್ಟು ಹಾಕಿದ ನೂಲನ್ನು ಮೆಲ್ಲನೆ ತೆಗೆದುಬಿಡುವುದೊ ಆಗುತ್ತಿತ್ತು. ಅಮ್ಮ ಎಂದೂ ರೇಗಿದವಳಲ್ಲ. ಅಮ್ಮನ ಅನುಪಸ್ಥಿತಿಯಲ್ಲಿ ಮಷೀನಿಗೆ ನಾವು ಅದೆಷ್ಟು ಪೀಕಲಾಟ ಕೊಡುತ್ತಿದ್ದೆವೊ! ಕೆಲವೊಮ್ಮೆ ಹೊಲಿಯುತ್ತಿದ್ದುದನ್ನು ಅರ್ಧಕ್ಕೆ ನಿಲ್ಲಿಸಿ, ಹಾಸಿಗೆ ಹಿಡಿದಿದ್ದ ಅಜ್ಜನಿಗೆ ಕಾಫಿ ತಿಂಡಿ ಕೊಡುವುದಕ್ಕೊ, ಊಟ ಕೊಡುವುದಕ್ಕೊ ಅಮ್ಮ ಹೋದರೆ ನಾವೂ ಹೊಲಿಯಲಾದೀತೊ ನೋಡುವಾ ಎಂದುಕೊಳ್ಳುತ್ತಿದ್ದೆವು. ನಮ್ಮೆಲ್ಲ ಪೀಕಲಾಟಗಳನ್ನೂ ಮಷೀನು ಸುಮ್ಮನೇ ಸಹಿಸಿಕೊಳ್ಳುತ್ತಿತ್ತು – ಥೇಟು ಅರ್ಥ ಮಾಡಿಕೊಳ್ಳುವ ಅಮ್ಮನಂತೆ.
ಅಮ್ಮನಿಗೆ ಸಿಗುತ್ತಿದ್ದ ಬಿಡುವಿನ ಸಮಯ ಇಷ್ಟೇ ಎಂದಿತ್ತು. ಹಗಲಿಡೀ ಮನೆಗೆಲಸ. ಹಸುಗಳ ಚಾಕರಿ. ಕರೆಂಟಿಲ್ಲದ, ಅಡಿಕೆಯ ಸೋಗೆ ಹೊದಿಸಿದ ಮಾಡಿನ, ಗುಡಿಸಲು ಎನ್ನಬಹುದಾದ ಮನೆ. ಸುತ್ತ ಗೋಡೆಗಳಿಲ್ಲ. ಅಡಿಕೆ ಸಲಾಕೆಯ ಭದ್ರತೆ ಅಷ್ಟೇ. ಬಾವಿಯಿಂದ ನೀರು ಸೇದುವುದರಿಂದ ತೊಡಗಿ ಎಲ್ಲ ಕೆಲಸಕ್ಕೂ ದೈಹಿಕಶ್ರಮ ಬೇಕೇಬೇಕು. ಅದೆಲ್ಲದರ ಜೊತೆಗೆ ಅಮ್ಮನ ಹೊಲಿಗೆ. ಅಮ್ಮ ಹೊಲಿದೇ ಹೊಲಿದರು, ಕತ್ತಲಾದರೆ ಸೀಮೆಎಣ್ಣೆಯ ಗೂಡುದೀಪ ಇಟ್ಟುಕೊಂಡಾದರೂ.
ನಮ್ಮ ಊರಿನ ಹೆಣ್ಣುಮಕ್ಕಳು ಜಾತಿಮತದ ಅಂತರವಿಲ್ಲದಂತೆ ಅಮ್ಮನಲ್ಲಿ ರವಕೆ ಹೊಲಿಯುವುದಕ್ಕೆ ಕೊಡುವುದಿತ್ತು. ನನಗೆ ನೆನಪಿದ್ದಂತೆ ಆಗ ಒಂದು ರವಕೆ ಹೊಲಿದರೆ ಅಮ್ಮನಿಗೆ ಐದು ರೂಪಾಯಿ ಸಿಗುತ್ತಿತ್ತು. ಇದು ನಿಧಾನಕ್ಕೆ ಏರಿ ಮೂವತ್ತೈದು ರೂಪಾಯಿ ತಲಪುವವರೆಗೂ ಅಮ್ಮ ಹೊಲಿಯುತ್ತಿದ್ದರು. ಮನೆಯ ವ್ಯವಸ್ಥೆಗಳು ಕೊಂಚ ಬದಲಾದವು. ನಮ್ಮ ಶಾಲೆಯ ಸಮವಸ್ತ್ರ ಹೊಲಿಯುವ ಜವಾಬ್ದಾರಿಯೂ ಅಮ್ಮನಿಗೆ ಸಿಕ್ಕಿತು. ಅಮ್ಮನ ದುಡಿಮೆಯೆಲ್ಲ ನಮಗೆ ಬಣ್ಣಬಣ್ಣದ ಅಂಗಿ ಹೊಲಿಯುವುದಕ್ಕೆ. ಅಪ್ಪನ ದುಡಿಮೆ ಮನೆಯ ಇತರ ಖರ್ಚುಗಳಿಗಾದರೆ ನಮ್ಮ ಕನಸಿನ ಬಣ್ಣಗಳಿಗೆ ಭಾವ ತುಂಬುವುದಕ್ಕೆ ಅಮ್ಮನ ಶ್ರಮ. ಅಮ್ಮನ ದಣಿವು ಕಡೆಗೂ ಹೊಟ್ಟೆ ನೋವಾಗಿ ಕಾಡಿ ‘ಹೆಚ್ಚು ಹೊಲಿಯುವುದು ಉಚಿತವಲ್ಲ’ ಎಂದು ವೈದ್ಯರು ಹೇಳಿದರೂ ಅಮ್ಮ ಪೂರ್ತಿ ನಿಲ್ಲಿಸಲಿಲ್ಲ. ಮನೆಮಂದಿಯ ಬಟ್ಟೆಗಳನ್ನು ತಾನೇ ಹೊಲಿಯುವ ಛಲ ಅವರಲ್ಲಿ ಇನ್ನೂ ಹಸಿರಾಗಿದೆ ಎಂಬುದೇ ಸಂತೋಷ.
ಅಪ್ಪನಿಗೆ ಮಾತ್ರ ಮಷೀನು ಕಂಡರೆ ಸಿಟ್ಟು. ಶಾಲಾಶಿಕ್ಷಕರಾಗಿದ್ದ ಅಪ್ಪ, ಮನೆಯಿಂದ ಆರು ಮೈಲು ದೂರದ ಶಾಲೆಗೆ ನಡೆದೇ ಹೋಗುತ್ತಿದ್ದವರು. ಸೈಕಲ್ ಆಗಲಿ ಸ್ಕೂಟರ್ ಆಗಲಿ ಕಲಿಯುವ ವಯಸ್ಸಿಗೆ ಕೊಂಡುಕೊಳ್ಳಲು ಅಪ್ಪನಿಗೆ ಅನುಕೂಲವಿರಲಿಲ್ಲ. ಕೊಂಚ ಅನುಕೂಲ ಆದಾಗ ಬದುಕಿನ ಜವಾಬ್ದಾರಿಗಳು ಅಪ್ಪನಲ್ಲಿ ಭಯ ಉಂಟುಮಾಡಿದ್ದವೇನೊ! ನಡೆದು ಹೋಗುವುದರಷ್ಟು ಸೌಖ್ಯ ಬೇರಾವುದರಲ್ಲೂ ಇಲ್ಲ ಎಂದೇ ನಂಬಿದವರು ಅವರು. (ಎಪ್ಪತ್ತೈದು ವರ್ಷಗಳ ಈ ಪ್ರಾಯದಲ್ಲೂ ಪ್ರತಿ ದಿನ ನಾಲ್ಕು ಕಿಲೋಮೀಟರ್ ಆದರೂ ನಡೆದರೆಯೆ ಅಪ್ಪನಿಗೆ ಸಮಾಧಾನ.) ಅಂತೂ ನಡಿಗೆಯ ದಣಿವು, ಶಾಲೆಯಲ್ಲಿ ಮಕ್ಕಳಿಗೆ ಪಾಠ ಹೇಳುವುದು, ಇತರ ಜವಾಬ್ದಾರಿಗಳನ್ನು ನಿಭಾಯಿಸುವುದು, ಹಲವು ಬಾರಿ ಮಧ್ಯಾಹ್ನದ ಊಟವೂ ಮಾಡದೆ ಸುಸ್ತು ಸಂಕಟ ಎಲ್ಲವನ್ನು ಅನುಭವಿಸುತ್ತಿದ್ದರು ಅಪ್ಪ.
ಅಪ್ಪ ಬಂದ ಕೂಡಲೆ ಕಾಫಿತಿಂಡಿ ಉಪಚಾರ ಆದ ಮೇಲೆ ಅಮ್ಮ ಹೊಲಿಯಲು ಕುಳಿತುಕೊಳ್ಳುತ್ತಿದ್ದರು. ಅದಕ್ಕೂ ಒಂದು ಲಹರಿ ಎಂಬುದಿದೆಯಲ್ಲ, ನಮ್ಮ ಬರವಣಿಗೆಯ ಹಾಗೆ! ಅಮ್ಮ ಇನ್ನೇನು ಮಷೀನು ಸರಿಹೊಂದಿಸಿಕೊಂಡು ಹೊಲಿಯಬೇಕು ಎನ್ನುವಷ್ಟರಲ್ಲಿ ಅಪ್ಪ ‘ಇದಾ ಕೇಳಿತ್ತಾ, ಎನಗೊಂದು ದೂದ್ಪಾನೀ ಕೊಡು’ ಎಂದಾರು. ಅಪ್ಪನ ಈ ಪದಪುಂಜದ ಬಗ್ಗೆ ನನಗೊಂದು ಕುತೂಹಲ. ಅಪ್ಪನೇನೂ ಹಿಂದೀ ಶಿಕ್ಷಕರಲ್ಲ. ಅಂದರೂ ಹಾಲುಕಷಾಯಕ್ಕೆ ದೂದ್ಪಾನೀ ಎಂಬ ಹೆಸರು! ಅದನ್ನು ಕೊಟ್ಟು ಇನ್ನೊಂದಿಪ್ಪತ್ತು ನಿಮಿಷ ಕಳೆಯುವಷ್ಟರಲ್ಲಿ ‘ಇದಾ, ಎನಗೊಂದು ಗ್ಲಾಸ್ ಮಜ್ಜಿಗೆ ಕೊಡು’ ಎಂದಾರು. ಸರಿ, ಅದಾಗಿ ಇನ್ನೊಂದಿಷ್ಟು ಹೊತ್ತು ಕಳೆಯುವಾಗ ನೀರು ಬೇಕು ಅಂದಾರು! ‘ನಿಮ್ಮ ಹೊಟ್ಟೆ ಎಂಥದಕ್ಕಾದೀತು?’ ಎಂದು ಕೇಳುತ್ತಲೇ ಅಮ್ಮ ಎಲ್ಲವನ್ನೂ ಪೂರೈಸುತ್ತಿದ್ದರು. ‘ನನಗೆಷ್ಟು ದಣಿವಾಗುತ್ತಿದೆ ಎಂದು ಈ ಮನೆಯಲ್ಲಿ ಒಬ್ಬರಿಗೂ ಅರ್ಥವಾಗುವುದಿಲ್ಲ’ – ಅಪ್ಪ ಗೊಣಗುತ್ತಿದ್ದರು. ಆ ಗೊಣಗಾಟದ ಹಿಂದೆ ಬಹುಶಃ ಅಮ್ಮ ಸ್ವಲ್ಪ ಹೊತ್ತು ತನ್ನ ಜತೆ ಕುಳಿತು ಮಾತನಾಡಲಿ ಎಂಬ ಅಪೇಕ್ಷೆಯೂ ಇದ್ದೀತೇ ಎಂದು ನನಗೆ ಈಗ ಅನ್ನಿಸುವುದಿದೆ. ಆದರೆ ಅಪ್ಪನೇನೂ ಬಿಡುವಾಗಿ ಕುಳ್ಳಿರುತ್ತಿರಲಿಲ್ಲ, ಅಮ್ಮನೊಂದಿಗೆ ಕುಳಿತು ದಿನದ ಕತೆಗಳನ್ನು ಮಾತನಾಡುವುದಕ್ಕೆ. ಯಾವುದಾದರೂ ಕಡತಗಳನ್ನು ನೋಡುವುದೋ, ಓದುವುದೋ ಮಾಡುತ್ತಲೇ ಇರುತ್ತಿದ್ದರು. ಅಂತೂ ಈ ನಡುವೆ ಅಮ್ಮನ ಹೊಲಿಯುವ ಮೂಡ್ ಆಫ್ ಆಗಿ ಮಾತಾಡದೇ ಎಲ್ಲವನ್ನೂ ಎತ್ತಿಟ್ಟು ಬೇರೆ ಕೆಲಸ ಮಾಡಲು ಅಣಿಯಾಗುತ್ತಿದ್ದರು.
ಅಪ್ಪ ನಿವೃತ್ತರಾಗಿ, ದೊಡ್ಡಕ್ಕನಿಗೆ ಮದುವೆಯಾಗಿ, ಮೊಮ್ಮಗು ಬಂದ ಮೇಲೆ ಅಪ್ಪ ಅಮ್ಮ ಇಬ್ಬರೂ ಬದಲಾದರು – ಅಮ್ಮ ಹೊಲಿಯುತ್ತಿದ್ದರೆ ಅಪ್ಪ ತಾನೇ ಎದ್ದುಹೋಗಿ ಚಹಾ ಮಾಡಿಕೊಳ್ಳುವವರೆಗೆ! ಅಮ್ಮನೂ ‘ಸ್ವಲ್ಪ ಇರಿ. ಇದೊಂದು ಹಂತಕ್ಕೆ ತಂದು ನಿಲ್ಲಿಸಿಕೊಳ್ಳುವೆ. ಪದೇಪದೇ ಎದ್ದರೆ ಹೇಗೆ ಹೊಲಿಯುವುದು ಎಂದುಕೊಂಡಿದ್ದೆ ಎಂದೇ ಮರೆತುಹೋಗುತ್ತದೆ’ ಎನ್ನುವುದನ್ನು ಕಲಿಯುವವರೆಗೆ.
ಸರಿ, ಮನೆಗೆಲಸ ಎಲ್ಲ ಮುಗಿದು ರಾತ್ರಿ ಹೊಲಿಯೋಣವೆಂದರೆ ಆಗ ಮಾತ್ರ ಎಲ್ಲರಿಗೂ ಮಷೀನಿನ ಸದ್ದಿನ ತೊಂದರೆ. ‘ಶುರುವಾಯಿತು ಇದರ ಕಟಕಟ’ ಎಂಬ ಉದ್ಗಾರ ಎಲ್ಲರದ್ದೂ. ಹಾಗಾಗಿ ಆ ಸಹವಾಸವೇ ಬೇಡ ಎಂದು ಅಮ್ಮ ಹುಕ್ಸ್ ಅಥವಾ ಗುಂಡಿ ಹೊಲಿಯುವ, ಕೈಹೊಲಿಗೆ ಹಾಕುವ ಕೆಲಸಗಳನ್ನಷ್ಟೇ ರಾತ್ರಿ ಮಾಡುತ್ತಿದ್ದರು. ಅದರಿಂದ ಯಾರಿಗೂ ತೊಂದರೆಯಿಲ್ಲವಲ್ಲ.
ಇಂತಿರ್ಪ ಅಮ್ಮನಿಗೆ ನಾಲ್ಕು ವರ್ಷಗಳ ಹಿಂದೆ ಪಾಶ್ರ್ವವಾಯು ತಗಲಿತು. ಪದಗಳ ಉಚ್ಚಾರಣೆ ತೊದಲಿತು. ಬಲದ ಕೈಕಾಲುಗಳು ಅಮ್ಮನ ಮನಸ್ಸಿಗನುಗುಣವಾಗಿ ಚಲಿಸದೆ ಹೋದವು. ಆಸ್ಪತ್ರೆಯಲ್ಲಿ ಮೂರನೆಯ ದಿನ ಅಮ್ಮ ಮಲಗಿದಲ್ಲಿಂದಲೆ ಬಲಗೈ ಬೆರಳುಗಳನ್ನು ಶ್ರಮಪಟ್ಟು ಆಡಿಸುತ್ತಾ, ಎಡದ ಕೈಯ ಸಹಾಯದಿಂದ ಬಲದ ಕೈಯನ್ನು ತನ್ನ ನಿಯಂತ್ರಣಕ್ಕೆ ತಂದುಕೊಳ್ಳುತ್ತ ಏನೇನೋ ಅಭಿನಯ ಮಾಡುತ್ತಿದ್ದರು. ‘ಎಂತ ಮಾಡ್ತಿದ್ದೆ ಅಮ್ಮಾ’ ಎಂದರೆ ಅರ್ಧಂಬರ್ಧ ತೊದಲಿಕೊಂಡೇ ‘ನನಗಿನ್ನು ಕತ್ತರಿಸಲು ಹೊಲಿಯಲು ಆದೀತೇ ಎಂದು ನೋಡುತ್ತಿದ್ದೆ…. ಅದರ ಲೆಕ್ಕಾಚಾರ ಯಾವುದೂ ಮರೆತಿಲ್ಲ’ ಎಂದರು ನಗುನಗುತ್ತ. ವರ್ಷಾನುಗಟ್ಟಲೆಯಿಂದ ಓದುತ್ತಿದ್ದ ದೇವರ ಸ್ತೋತ್ರಗಳು ಮರೆತಿದ್ದವು. ‘ಆದೀತು. ಮನೆಗೆ ಹೋದ ಕೂಡಲೆ ಮೊದಲು ನನ್ನದೇ ರವಿಕೆಗಳನ್ನು ಹೊಲಿ. ನಿನ್ನ ಹತ್ತಿರ ಕೊಟ್ಟು ಒಂದು ವರ್ಷ ಆಯಿತೇನೋ…. ಸೀರೆ ಹಳತಾಗುವ ಮೊದಲು ಹೊಲಿದು ಕೊಡು’ ಎಂದು ಮೊದಲಿನ ಹಾಗೆಯೆ ಅವಳಿಗೆ ರೇಗಿಸಿದ್ದೆ. ಆ ಸ್ಥಿತಿಯಲ್ಲಿ ಅಮ್ಮನಿಗೆ ಹೀಗಾಯಿತಲ್ಲಾ ಎಂದು ಅಳುವಂತೆಯೇ ಇರಲಿಲ್ಲ. ಅಮ್ಮನೆದುರು ಅಳಬೇಡ ಎಂದು ಅಕ್ಕ ಕಟ್ಟಪ್ಪಣೆ ಮಾಡಿದ್ದಳು. ಅದಕ್ಕಿಂತ ಹೆಚ್ಚಾಗಿ ಅಮ್ಮನ ಮುಖದಲ್ಲಿ ಗೆಲವಿನ ನಗೆ ಮಾಸಿರಲಿಲ್ಲ. ಅಮ್ಮ ದೇವರನ್ನು ಶಪಿಸಲಿಲ್ಲ, ನನಗೇಕೆ ಈ ಅವಸ್ಥೆ ತಂದಿಟ್ಟೆ ಎಂದು ಗೋಳಾಡಲಿಲ್ಲ. ಮೂರನೇ ದಿನಕ್ಕೆ ಬೆಡ್ಪ್ಯಾನನ್ನೂ ಒಲ್ಲೆನೆಂದು ಬಾತ್ ರೂಮಿಗೇ ಕರೆದೊಯ್ಯುವಂತೆ ಆಜ್ಞೆ ಮಾಡಿದಳು. ಅಮ್ಮ ಗೆದ್ದಳು. ಹೆದರಿಸ ಬಂದ ಖಾಯಿಲೆ ಸೋತಿತ್ತು. ಅಮ್ಮನ ವೈದ್ಯರೂ ಶಹಭಾಶ್ ಎಂದು ನಕ್ಕಿದ್ದರು. ಅವಳ ಆರೈಕೆಯಲ್ಲಿದ್ದ ಡ್ಯೂಟಿ ಡಾಕ್ಟರ್ ಕನ್ನಡ ಬರದ ಹುಡುಗಿ, ‘ಲೀಲಮ್ಮಾ… ಯೂ ಸ್ಟಾರ್ಟೆಡ್ ವಾಕಿಂಗ್!’ ಎಂದು ಉದ್ಗರಿಸಿ ಅಮ್ಮನನ್ನು ತಬ್ಬಿಕೊಂಡು ಮುತ್ತಿಟ್ಟುಬಿಟ್ಟಿದ್ದಳು. ಮನೆಯಲ್ಲಿ ಅಮ್ಮನ ಹೊಲಿಗೆ ಮಷೀನು ಸಮಾಧಾನದ ನಗೆ ನಕ್ಕಿರಬಹುದು.
ಅಂತೂ ವ್ಯವಸ್ಥೆಗಳಿಲ್ಲದ ಹಳ್ಳಿಯಲ್ಲಿ ಅಮ್ಮನನ್ನು ಮತ್ತೆ ಬಿಡಲು ಧೈರ್ಯ ಬಾರದೆ ಅಕ್ಕ ಬೆಂಗಳೂರಿಗೆ ಕರೆತಂದಳು. ಜತೆಯಲ್ಲಿ ಹೊಲಿಗೆ ಮಷೀನು ಕೂಡಾ ಬಂತು. ‘ಕೈಕಾಲು ಗಟ್ಟಿ ಇರುವವರೆಗೂ ನಾನು ಎಲ್ಲಿಗೂ ಬರುವುದಿಲ್ಲ. ಅಮ್ಮನನ್ನು ಕರೆದುಕೊಂಡು ಹೋಗಿ. ನಾನು ಆಗಾಗ ಬರುತ್ತೇನೆ’ ಎಂದ ಅಪ್ಪ ಮಾತ್ರ ಊರಲ್ಲಿಯೆ ಉಳಿದುಬಿಟ್ಟರು, ಕಾರಲ್ಲಿ ಜಾಗವಿದ್ದರೂ. ಈಗ ಅಪ್ಪನೊಂದಿಗೆ ಮಷೀನಿನ ಕಾಲು, ಮೇಜು ಉಳಿದುಕೊಂಡಿದೆ ಹಳ್ಳಿಯಲ್ಲಿ; ಇಷ್ಟೂ ವರ್ಷ ಬದುಕನ್ನು ಆಧರಿಸಿದ ಸಮಾಧಾನದೊಂದಿಗೆ ಮತ್ತು ಕಳೆದುಹೋಗದ ಬದುಕಿನ ಭರವಸೆಯೊಂದಿಗೆ.