ದೇವರೆಂದರೆ ಅಂತರಂಗದ ಕತ್ತಲನ್ನು ಓಡಿಸುವ ಬೆಳಕು. ನಾವು ದೇವರನ್ನು ನಂಬಬೇಕಿರುವುದು ನಮ್ಮೊಳಗಿನ ಭಯವನ್ನು ಗೆಲ್ಲುವುದಕ್ಕಾಗಿ, ನಮ್ಮೊಳಗಿನ ಬೆಳಕಿನ ಶಕ್ತಿಯನ್ನು ಅರಿಯುವುದಕ್ಕಾಗಿ ಎಂಬುದನ್ನು ನಮ್ಮ ಮಕ್ಕಳಿಗೆ ಮನವರಿಕೆ ಮಾಡದೇ ಹೋದರೆ ಕೇರಳ ಸ್ಟೋರಿಯ ನಾಯಕಿಯರಂತೆ ನಮ್ಮ ದೇವರ ಬಗ್ಗೆ ಯಾರೋ ಏನೋ ಆಡಿದರೂ ಮಾರುತ್ತರ ಕೊಡಲಾಗದ ಅಸಹಾಯಕ ಸ್ಥಿತಿಗೆ ಅವರನ್ನು ನಾವೇ ನೂಕಿದಂತಾದೀತು.
ದೇವರನ್ನು ಕಣ್ಣಾರೆ ಕಾಣಲಾಗುವುದಿಲ್ಲ ಎಂದ ಅವರನ್ನು ನಂಬುವುದು ಹೇಗೆ, ಯಾಕೆ ಎಂಬ ಪ್ರಶ್ನೆಗಳು ಇಂದು ನಿನ್ನೆಯವಲ್ಲ. ಇದ್ದಾನೆ ಎನ್ನುವವರ ಬಣ, ಇಲ್ಲವೇ ಇಲ್ಲ ಎಂಬುವವರ ಗಣ ಪರಸ್ಪರ ಗುದ್ದಾಡಿಕೊಳ್ಳುವುದೂ ಹೊಸತೇನಲ್ಲ. ಯಾರು ಏನೇ ನಿಲವು ಹೊಂದಿದರೂ ಬೆಳಗುವ ಸೂರ್ಯ ಬೆಳಗುತ್ತಲೇ ಇರುತ್ತಾನೆ, ತಂಗದಿರನಾದ ಚಂದ್ರ ಬೆಳದಿಂಗಳ ಹಾಲುಬೆಳಕನ್ನು ನೀಡುತ್ತಲೇ ಇರುತ್ತಾನೆ. ಅತ್ತ ದೇಗುಲಗಳ ಬ್ರಹ್ಮಕಲಶೋತ್ಸವದ ಸಂದರ್ಭ ಗರುಡ ಬಂದು ಹಾರಾಡಿ ಸಂಭ್ರಮಿಸುವುದೋ, ರಾಮಮಂದಿರ ಲೋಕಾರ್ಪಣೆಯ ದಿನ ಹತ್ತಿರವಾಗುತ್ತಿದ್ದಂತೆ ಜಟಾಯುಗಳ ದಂಡು ಬರುವುದೋ ಎಲ್ಲವೂ ವರ್ಣನಾತೀತ ವಿಸ್ಮಯಗಳಾಗಿ ಉಳಿದುಬಿಡುತ್ತವೆ. ವಿಜ್ಞಾನ ಎಷ್ಟೇ ಮುಂದುವರಿದರೂ ನಮ್ಮ ಸನಾತನ ಧರ್ಮದ ನಂಬಿಕೆ ಆಚಾರ-ವಿಚಾರಗಳು ಸತ್ಯವೆಂಬುದೇ ಸಾಧಿಸಲ್ಪಡುತ್ತಿದೆ ಹೊರತು, ಅದು ಸುಳ್ಳಾಗುವುದಿಲ್ಲ. ಈ ಬಗೆಯ ಧರ್ಮದ ಬೆಳಕು ನಮ್ಮೊಳಗೆ ದಾರಿದೀವಿಗೆಯಾಗಬೇಕೆಂದರೆ ಅದಕ್ಕೆ ಬೇಕಾದ ಬತ್ತಿ, ತೈಲವನ್ನು ಮನೆ, ಪೋಷಕರು ಇಂದಿನ ಮಕ್ಕಳಲ್ಲಿ ತುಂಬಿಕೊಡುವುದು ಅತ್ಯಗತ್ಯವಾಗಿದೆ.
ಇಂದು ಮಕ್ಕಳಿಗೆ ಏನೇ ಹೇಳಹೊರಟರೂ ನನಗೆ ನನ್ನ ಬಾಲ್ಯ ಕಣ್ಣಮುಂದೆ ಬರುತ್ತದೆ. ಅದನ್ನು ಬದಿಗಿರಿಸಿ ಬಹುಶಃ ಯಾರಿಗೂ ಯಾವ ಮೌಲ್ಯಗಳನ್ನೂ ಕಲಿಸಲಾಗುವುದಿಲ್ಲ, ಯಾಕೆಂದರೆ ನನ್ನೊಳಗೆ ನೆಲೆಗೊಂಡಿರುವ ನೀತಿ, ಧರ್ಮ, ಬದುಕಿನ ಸೂತ್ರಗಳೆಲ್ಲವೂ ಬೆಸೆದುಕೊಂಡಿರುವುದು ನನ್ನ ಹೆತ್ತವರು, ನನ್ನ ಅಜ್ಜಿ-ಅಜ್ಜನೊಂದಿಗೆ ನಾನು ಕಳೆದ ದಿನಗಳೊಂದಿಗೆ.
ನಾನು ಚಿಕ್ಕವಳಿದ್ದಾಗ ನಾವಿದ್ದ ಮನೆಯ ದೇವರ ಮನೆಯೆಂದರೆ ಬಹಳ ಕತ್ತಲು. ಅದನ್ನು ದಾಟಿ ಅಡುಗೆಮನೆಗೆ ಹೋಗಬೇಕು. ಆ ಎರಡೂ ಕೋಣೆಗಳಿಗೆ ನಾನು ಹೋಗುತ್ತಿದ್ದುದು ಕಡಮೆ. ಗುಮ್ಮನ ಭಯ. ದೇವರ ಮನೆಯಲ್ಲಿ ಎಲ್ಲಿಯ ಗುಮ್ಮ? ನನ್ನ ಭಯಕ್ಕೆ ಅರ್ಥವೇ ಇರಲಿಲ್ಲ. ‘ಅಲ್ಲೇನೂ ಇರುವುದಿಲ್ಲ, ಹೋಗು’ ಅಂತ ಅಮ್ಮ ಅಂದರೂ ನನಗೆ ಅಲ್ಲಿರಬಹುದಾದ ಜೇಡನನ್ನು ಕಂಡರೆ ಕೈಕಾಲು ನಡುಕ. ಈಗ ಮಗಳು ಜಿರಳೆಯನ್ನು ಕಂಡರೆ ತಕಥೈ ಕುಣಿಯುವಾಗ ನಗು ಬರುತ್ತದೆ. ಉದ್ದಕಾಲಿನ ಜೇಡ ನಡೆದುಬರುವ ರೀತಿಯನ್ನು ಕಂಡರೇ ಒಂದು ಥರಾ ಅನ್ನಿಸುತ್ತಿತ್ತು. ಮಿಗಿಲಾಗಿ ಅಪ್ಪ-ಅಮ್ಮನೂ ಅಲ್ಲಿರುತ್ತಿದ್ದುದು ಕಡಮೆ. ಅಜ್ಜ ಹೊರಜಗುಲಿಯ ಕೊನೆಯಲ್ಲಿನ ಮಂಚಿಟ್ಟೆಯಲ್ಲಿ (ಮಲಗುವ ಕಟ್ಟೆ – ಮಂಚದ ಬದಲು ಮಣ್ಣಿನಲ್ಲೇ ಕಟ್ಟಿರುವುದು) ಮಲಗುತ್ತಿದ್ದುದರಿಂದ ದೇವರ ಮನೆಯಲ್ಲಿನ ಗವ್ವೆನ್ನುನ ಕತ್ತಲು ಭೀಕರವೆನಿಸುತ್ತಿತ್ತು. ಅಮ್ಮ ಅಲ್ಲಿ ಹೇಗೆ ದೀಪವಿಡುವುದಕ್ಕೆ ಹೋಗುತ್ತಿದ್ದಳೋ ಯೋಚನೆಗೇ ನಿಲುಕುವುದಿಲ್ಲ. ಬಹುಶಃ ಕೆಲವೊಮ್ಮೆ ಬೆಳಕಿಗಿಂತಲೂ ಕತ್ತಲೆಯೇ ಆಪ್ಯಾಯಮಾನವಾಗುವುದಿದೆಯಲ್ಲ! ನಮ್ಮ ಆ ಮನೆಯಲ್ಲಿ ಬರಿಯ ಜೇಡವೆಂದಲ್ಲ, ಹಾವುಗಳೂ ಕೆಲವೊಮ್ಮೆ ಇರುವುದಿತ್ತು. ಕೆಲವನ್ನು ಪೆಟ್ಟಾಗದಂತೆ ಓಡಿಸಿ, ಇನ್ನು ಕೆಲವನ್ನು ಬಡಿದು ಕೊಂದು ಎಲ್ಲ ಮಾಡುತ್ತಿದ್ದುದು ನೆನಪು. ಇರಲಿ.
ನಮ್ಮ ಮನೆಯಲ್ಲಿ ದೇವರಪೂಜೆಯೇನೂ ಅದ್ದೂರಿಯಾಗಿ ನಡೆಯುತ್ತಿದ್ದುದಿಲ್ಲ. ದೇವರ ಮನೆಯೆಂಬ ಕತ್ತಲಿನಲ್ಲಿ ಹೊಳೆಯುವ ನಾಲ್ಕಾರು ಫೋಟೋಗಳು, ಸಂಜೆಯ ವೇಳೆಗೆ ಬೆಳಗುವ ಸಣ್ಣದೀಪ. ಅಮ್ಮ ಸಂಜೆ ದೇವರಿಗೆ ನಮಸ್ಕರಿಸುವಾಗ ‘ದೇವರಿಂಗೆ ಹೊಡಾಡು’ (ದೇವರಿಗೆ ನಮಸ್ಕರಿಸು) ಅಂತ ನಮ್ಮನ್ನು ಕರೆಯುತ್ತಿದ್ದರು. ನಾನು ತೀರಾ ಚಿಕ್ಕವಳಿದ್ದಾಗ ಅಮ್ಮನ ಬೆನ್ನಿನ ಮೇಲೆ ಕುಳಿತು ಕೈಮುಗಿಯುತ್ತಿದ್ದೆ. ಬೆನಕ ಬೆನಕ ಏಕದಂತ ಪಚ್ಚೆಕಲ್ಲು ಪಾಣಿಪೀಠ ಮುತ್ತಿನುಂಡೆ, ಹೊನ್ನಗಂಟೆ ಒಪ್ಪುವಂಥ ಗಣಪತಿಗೆ ಇಪ್ಪತ್ತೊಂದು ನಮಸ್ಕಾರಗಳು… ಅದಷ್ಟೇ ನಮ್ಮ ಪ್ರಾರ್ಥನೆ. ನಮಗೆಟುಕಿದ ಸ್ವರ್ಗ ಅದೇ ಆಗಿತ್ತು. ಎಲ್ಲೋ ಮೇಲೆ ಆಕಾಶದಾಚೆಗಿದೆ ಅಂತ ನಂಬುತ್ತೇವೆ ಅನಿಸುತ್ತದೆ. ಅಮ್ಮ ಶಂಖ ಊದಿದ ಬಳಿಕ ‘ನಿನ್ನೊಲುಮೆ ನಮಗಿರಲಿ ತಂದೆ… ಕೈ ಹಿಡಿದು ನೀ ನಡೆಸು ಮುಂದೆ’ ಅಂತ ಮೆಲುಧ್ವನಿಯಲ್ಲಿ ಹಾಡುತ್ತಿದ್ದಳು. ಅಥವಾ ‘ನಿನ್ನು ಕೋರಿಯುನಾನುರಾ ನಿಖಿಲ ಲೋಕನಾಯಕ…’ ಹಾಡುತ್ತಿದ್ದಳು. ಶುಕ್ರವಾರ ಸಂಜೆ ಅಪ್ಪ ಭಜನೆ ಮಾಡಿಸುವುದಿತ್ತು. ನಾವು ಗಜಮುಖನೆ ಗಣಪತಿಯೆ… ಇತ್ಯಾದಿ ಹಾಡುಗಳನ್ನು ಹಾಡುತ್ತಿದ್ದೆವು. ಅದನ್ನು ಹಾಡುವಾಗ ನಮ್ಮೊಳಗೆ ಯಾವ ಭಯವೂ ಇರುತ್ತಿರಲಿಲ್ಲ ಎಂಬುದು ವಾಸ್ತವ. ದೇವರಮನೆಯ ಕತ್ತಲು, ಪುಟ್ಟದೀಪದ ಬೆಳಕಿನೆದುರು ಸೋಲುತ್ತಿತ್ತು. ಅದು ಬೆಳಕಿಗಿರುವ ಶಕ್ತಿ. ದೇವರೆಂದರೆ ಅಂತರಂಗದ ಕತ್ತಲನ್ನು ಓಡಿಸುವ ಬೆಳಕು. ನಾವು ದೇವರನ್ನು ನಂಬಬೇಕಿರುವುದು ನಮ್ಮೊಳಗಿನ ಭಯವನ್ನು ಗೆಲ್ಲುವುದಕ್ಕಾಗಿ. ನಮ್ಮೊಳಗಿನ ಬೆಳಕಿನ ಶಕ್ತಿಯನ್ನು ಅರಿಯುವುದಕ್ಕಾಗಿ ಎಂಬುದನ್ನು ನಮ್ಮ ಮಕ್ಕಳಿಗೆ ಮನವರಿಕೆ ಮಾಡದೇ ಹೋದರೆ ಕೇರಳ ಸ್ಟೋರಿಯ ನಾಯಕಿಯರಂತೆ ನಮ್ಮ ದೇವರ ಬಗ್ಗೆ ಯಾರೋ ಏನೋ ಆಡಿದರೂ ಮಾರುತ್ತರ ಕೊಡಲಾಗದ ಅಸಹಾಯಕ ಸ್ಥಿತಿಗೆ ಅವರನ್ನು ನಾವೇ ನೂಕಿದಂತಾದೀತು.
ಅಷ್ಟಕ್ಕೂ ದೇವರನ್ನು ನಂಬುವುದು ನಮಗಾಗಿಯೇ ಹೊರತು ಬೇರೆಯವರಿಗಾಗಿ ಅಲ್ಲ. ಮಕ್ಕಳು ಚಿಕ್ಕವರಿದ್ದಾಗ ಕೇಳುತ್ತಿದ್ದ ‘ದಿನವು ಬೇಗ ಏಳಬೇಕು, ಎದ್ದು ಹಲ್ಲನುಜ್ಜಬೇಕು, ಉಜ್ಜಿ ಮುಖವ ತೊಳೆಯಬೇಕು, ದೇವರಿಗೆ ನಮಸ್ಕರಿಸಿ ತಿಂಡಿಯನ್ನು ತಿನ್ನಬೇಕು..’ ಎಂಬ ಗೀತೆಯೂ ಹೇಳುವುದು ದಿನವನ್ನು ಪ್ರಾರಂಭಿಸುವ ಮೊದಲು ದೇವರನ್ನು ನೆನೆಯಬೇಕು. ಅದೆಷ್ಟು ಸರಳ ನಮ್ಮ ಬದುಕಿನ ರೀತಿ! ದೇವರಿಗೆ ಹರಕೆ ಹೊತ್ತುಕೊಂಡು ಕೆಲಸದಲ್ಲಿ ತೊಡಗುವವರನ್ನು ತಮಾಷೆ ಮಾಡಿಕೊಂಡು ನಗುವವರಿದ್ದಾರೆ. ದೇವರೇ ಕಣ್ಣೆದುರು ಬಂದು ನಮಗೆ ಸಹಾಯ ಮಾಡುತ್ತಾನೆ ಎಂಬ ಭ್ರಮೆ ನಿಜವಾಗಲಾರದು. ಆದರೆ ದೇವರು ನಮ್ಮ ಅಂತಃಶಕ್ತಿಯನ್ನು ನಮಗೆ ಪರಿಚಯಿಸುತ್ತಾನೆ. ಜೊತೆಗೆ ದೇವರು ಮತ್ತಾರದ್ದೋ ರೂಪದಲ್ಲಿ ಬಂದು ನೆರವಾಗುವುದಿದೆ. ದೇವರೆಂಬ ನಂಬಿಕೆ ನಮ್ಮ ಬದುಕಿನ ಭಾರವನ್ನು ಇಳಿಸುತ್ತದೆ. ಅದರರ್ಥ ನಾವು ಯಾವ ಜವಾಬ್ದಾರಿಯನ್ನೂ ಹೊರಬೇಕಾಗಿಲ್ಲ ಎಂದಲ್ಲ. ದೇವರಲ್ಲಿ ನಾವಿಡುವ ನಂಬಿಕೆ ನಮ್ಮ ತೋಳುಗಳನ್ನು, ನಮ್ಮ ಭುಜವನ್ನೂ ಶಕ್ತಿಯುತವಾಗಿಸುತ್ತದೆ. ಹಾಗಾಗಿ ದೇವರಿದ್ದಾನೋ ಇಲ್ಲವೋ ಎಂಬ ಪ್ರಶ್ನೆಯೇ ಅಪ್ರಸ್ತುತ.
ದಿನವೂ ಬೆಳಗ್ಗೆ ಶಾಲೆಗೆ ಹೊರಡುವ ಮುನ್ನ ಮಿಂದು ಶುಚೀರ್ಭೂತರಾಗಿ ಹಣೆಗೆ ಬೊಟ್ಟನ್ನಿಟ್ಟು, ಕುಂಕುಮವನ್ನಿಟ್ಟು ಹೊರಡುವ ಮಕ್ಕಳನ್ನು ಕಂಡರೆ ಬಹಳ ಖುಷಿಯಾಗುತ್ತದೆ. ಅದೆಷ್ಟು ಲಕ್ಷಣ ಇರುತ್ತದೆ ಮುಖದಲ್ಲಿ! ಅದು ನಮ್ಮ ಕ್ರಮ, ನಮ್ಮ ಸಂಪ್ರದಾಯ ಹೌದಾಗಿರುವುದರಿಂದ ಅದನ್ನು ಪಾಲಿಸಬೇಕು ಅಷ್ಟೇ. ದೇವರ ಭಯವೇ ಜ್ಞಾನದ ಆರಂಭ ಅಂತ ನಮ್ಮ ಶಾಲೆಯ ತರಗತಿ ಕೊಠಡಿಯಲ್ಲಿ ಬರೆದ ಸಾಲು ಸದಾ ನೆನಪಿರುತ್ತದೆ. ಅದರರ್ಥ ದೇವರನ್ನು ಕಂಡರೆ ಭಯ ಇರಬೇಕು ಅಂತಲ್ಲ. ಆ ಭಯ ನಮಗೆ ಕೆಟ್ಟದ್ದೇನು ಎಂಬುದನ್ನು ಎಚ್ಚರಿಸುತ್ತದೆ. ಒಳ್ಳೆಯದರ ಕಡೆಗೆ ನಮ್ಮನ್ನು ಪ್ರೇರೇಪಿಸುತ್ತದೆ. ಜ್ಞಾನವೆಂದರೆ ಒಳಿತು-ಕೆಡುಕುಗಳ ಭಿನ್ನತೆಯನ್ನರಿತು ಅದರ ಪರಿಣಾಮವನ್ನರಿತು ವ್ಯವಹರಿಸುವುದು ತಾನೇ? ನಮ್ಮ ಧರ್ಮದ ಹಿರಿಮೆಯೆಂದರೆ ಓದುವ ಪುಸ್ತಕವನ್ನೂ ದೇವರೆಂದು ಪೂಜಿಸುತ್ತೇವೆ, ಉಣ್ಣುವ ಅನ್ನವನ್ನೂ ಅನ್ನಬ್ರಹ್ಮನೆಂದು ಕಾಣುತ್ತೇವೆ. ಕಾಡಿನಲ್ಲಿರುವ ಕಲ್ಲನ್ನಾದರೂ ಆರಾಧಿಸುತ್ತೇವೆ. ಅದು ನಮಗಿರುವ ಸ್ವಾತಂತ್ರ್ಯ. ನಮ್ಮನ್ನು ಮುನ್ನಡೆಸುವ ಶಕ್ತಿಯೊಂದನ್ನು ಸದಾ ನಂಬುತ್ತಿರಬೇಕು, ದಾರಿಯನ್ನು ಸುಲಭವಾಗಿಸುತ್ತಾ ಮುನ್ನಡೆಯಬೇಕು.
ಬಹುಶಃ ಜಾಗತೀಕರಣದ ನಂತರದ ತಲೆಮಾರಿನವರಿಗೆ ಮನೆಯಲ್ಲಿನ ಧಾರ್ಮಿಕ ಆಚರಣೆಗಳು ಕಡಮೆಯಾಗುತ್ತಾ ಬಂದುದು, ದೊಡ್ಡ ಮೊತ್ತದ ಸಂಬಳವನ್ನು ತರುವ ಕೆಲಸದ ಬೆಂಬತ್ತಿ ಕುಟುಂಬಗಳು ವಿಭಕ್ತವಾಗಿರುವುದು ಎಲ್ಲವೂ ಸೇರಿ ಇಂದಿನ ಯುವಜನಾಂಗದವರ ಬದುಕಿನ ದಾರಿಯನ್ನು ಬದಲಿಸಿವೆ. ಪೂಜೆ ಪುನಸ್ಕಾರಗಳ ನೆಪದಲ್ಲಿ ಒಂದೇ ಮನೆಯಲ್ಲಿ ಸೇರಿದಷ್ಟೂ ಮನಸ್ಸಿಗೊಂದು ಭದ್ರತೆಯಿರುತ್ತದೆ, ನಮ್ಮವರು ಇದ್ದಾರೆ ನಮ್ಮೊಂದಿಗೆ ಎಂಬ ನಂಬಿಕೆ ನಮ್ಮ ಆತ್ಮವಿಶ್ವಾಸವನ್ನೂ ಹೆಚ್ಚಿಸುತ್ತದೆ. ಆರ್ಥಿಕ ಸ್ವಾತಂತ್ರ್ಯದ ನೆಪದಲ್ಲಿ ಹೆಚ್ಚುತ್ತಿರುವ ಹೊಂದಾಣಿಕೆಯ ಸಮಸ್ಯೆ, ತನ್ಮೂಲಕ ಉದ್ಭವಿಸುತ್ತಿರುವ ವಿಚ್ಛೇದನಗಳು ಎಲ್ಲದರ ಹಿಂದೆ ನಮ್ಮ ಧಾರ್ಮಿಕ ಆಚರಣೆಗಳು ಸಡಿಲಗೊಂಡದ್ದು ಕಾರಣವೇನೋ ಎಂದು ಬಹಳಷ್ಟು ಸಲ ಅನ್ನಿಸುತ್ತದೆ.
ಕೃಷ್ಣನೆಂಬ ನಂಬಿಕೆಯ ತಂತು ಪಾಂಡವರನ್ನು ಎಲ್ಲ ಕಷ್ಟಗಳನ್ನೂ ಮೀರಿ ಗೆಲ್ಲುವಷ್ಟು, ಧರ್ಮಸಂಸ್ಥಾಪನೆಗಾಗಿ ದುಷ್ಟರ ದಮನಕ್ಕಾಗಿ ಹೋರಾಡುವಷ್ಟು ಬಲಿಷ್ಠರನ್ನಾಗಿಸಲಿಲ್ಲವೇ? ಅಲ್ಲದೇ ಹೋದರೆ ಹನ್ನೆರಡು ವರ್ಷ ವನವಾಸ, ಒಂದು ವರ್ಷ ಅಜ್ಞಾತವಾಸ ಮಾಡಿದವರಿಗೆ ಶರೀರದಲ್ಲಿ ಕಸುವಿರುವುದಕ್ಕುಂಟೇ!
ನಮ್ಮ ಮನೆಯ ಮಕ್ಕಳು ಭಗವಂತನನ್ನು ನಂಬಲಿ. ಅವರ ಅಂತರಂಗದೊಳಗಿನ ದೇವರು ಅವರನ್ನು ಸದಾ ಪೊರೆಯಲಿ.